ಇನ್ನೇನು ಮುಂದೆಯೇ ಇದೆ—ಸರ್ವೋರ್ವೂತ್ತಮ ಸಮಯಗಳು!
ಬೈಬಲಿಗನುಸಾರ, ಭೂವ್ಯಾಪಕವಾದ ಪ್ರಮೋದವನವೊಂದರಲ್ಲಿ ಮಾನವ ಕುಲವು ಸದಾಕಾಲ ಜೀವಿಸಬೇಕೆಂದು ದೇವರು ಉದ್ದೇಶಿಸಿದನು. (ಆದಿಕಾಂಡ 1:28; 2:8, 9) ನಿಸ್ಸಂಶಯವಾಗಿ, ನಾವು ದೇವರ ಮೂಲ ಉದ್ದೇಶದಿಂದ ದೂರಕ್ಕೆ ದಿಕ್ಕನ್ನು ಬದಲಾಯಿಸಿದ್ದೇವೆ. ಏನು ಸಂಭವಿಸಿತು?
ಪ್ರಥಮ ಮಾನವ ದಂಪತಿಗಳು ದೇವರಿಗೆ ಅವಿಧೇಯರಾದರು. ಇದು ಸ್ವತಃ ಅವರಿಗೆ ಮತ್ತು ಅವರ ಸಂತತಿಗೆ ಅಪರಿಪೂರ್ಣತೆ ಹಾಗೂ ಮರಣದಲ್ಲಿ ಫಲಿಸಿತು. (ಆದಿಕಾಂಡ 2:16, 17; 3:6, 7, 17-19; ರೋಮಾಪುರ 6:23) ಬೈಬಲ್ ವಿವರಿಸುವುದು: “ಒಬ್ಬ ಮನುಷ್ಯನಿಂದ ಪಾಪವು ಲೋಕದೊಳಗೆ ಬಂತು, ಮತ್ತು ಅವನ ಪಾಪವು ಅದರೊಂದಿಗೆ ಮರಣವನ್ನು ತಂದಿತು. ಫಲಿತಾಂಶವಾಗಿ ಪ್ರತಿಯೊಬ್ಬರು ಪಾಪ ಮಾಡಿದ್ದರಿಂದ ಮರಣವು ಇಡೀ ಮಾನವ ಕುಲಕ್ಕೆ ವ್ಯಾಪಿಸಿದೆ.”—ರೋಮಾಪುರ 5:12, ಟುಡೇಸ್ ಇಂಗ್ಲಿಷ್ ವರ್ಷನ್.
ಈ ಪರಿಸ್ಥಿತಿಯಿದ್ದಾಗ್ಯೂ, ದೇವರ ಉದ್ದೇಶವು ಬದಲಾಗದೆ ಉಳಿದಿದೆ. “ನನ್ನ ಮಾತು, ಭೂಮಿಗೆ ನೀರು ಹಾಯಿಸಲಿಕ್ಕಾಗಿ ಆಕಾಶದಿಂದ ಬೀಳುವ ಹಿಮ ಮತ್ತು ಮಳೆಯಂತೆ ಇದೆ. ಅವು ಬೆಳೆಗಳನ್ನು ಬೆಳೆಯುವಂತೆ ಮಾಡುತ್ತವೆ ಮತ್ತು ಬಿತ್ತಲಿಕ್ಕಾಗಿ ಬೀಜವನ್ನೂ ತಿನ್ನಲಿಕ್ಕಾಗಿ ಆಹಾರವನ್ನೂ ಒದಗಿಸುತ್ತವೆ. ನಾನು ಆಡುವ ಮಾತು ಸಹ ಹಾಗೆಯೇ . . . ಅದು ಮಾಡುವಂತೆ ನಾನು ಕಳುಹಿಸುವ ಸಕಲವನ್ನೂ ಅದು ಮಾಡುವುದು.” (ಯೆಶಾಯ 55:10, 11, ಟುಡೇಸ್ ಇಂಗ್ಲಿಷ್ ವರ್ಷನ್.) ನಮಗಾಗಿ ಏನು ಮಾಡುವಂತೆ ದೇವರು ವಾಗ್ದಾನಿಸುತ್ತಾನೆ?
ದೇವರ ರಾಜ್ಯದ ಕೆಳಗೆ ಆಶೀರ್ವಾದಗಳು
ನಿತ್ಯ ಜೀವ
“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
“ಇನ್ನು ಮರಣವಿರುವದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4.
ಭದ್ರತೆ
“ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.”—ಕೀರ್ತನೆ 37:10.
ತೃಪ್ತಿಕರವಾದ ಕೆಲಸ
“ಜನರು ಮನೆಗಳನ್ನು ಕಟ್ಟುವರು ಮತ್ತು ಅವುಗಳಲ್ಲಿ ವಾಸಿಸುವರು—ಅವು ಬೇರೆ ಯಾರಾದರೊಬ್ಬರಿಂದ ಉಪಯೋಗಿಸಲ್ಪಡುವುದಿಲ್ಲ. ಅವರು ದ್ರಾಕ್ಷಿಯ ತೋಟಗಳನ್ನು ಬೆಳೆಸುವರು ಹಾಗೂ ದ್ರಾಕ್ಷಾರಸವನ್ನು ಅನುಭೋಗಿಸುವರು—ಅದು ಇತರರಿಂದ ಕುಡಿಯಲ್ಪಡುವುದಿಲ್ಲ. ವೃಕ್ಷಗಳಂತೆ, ನನ್ನ ಜನರು ದೀರ್ಘವಾದ ಜೀವಿತಗಳನ್ನು ಜೀವಿಸುವರು. ತಾವು ಕೆಲಸ ಮಾಡಿರುವ ವಿಷಯಗಳನ್ನು ಅವರು ಸಂಪೂರ್ಣವಾಗಿ ಅನುಭವಿಸುವರು.”—ಯೆಶಾಯ 65:21, 22, TEV.
ಆರೋಗ್ಯ
“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.”—ಯೆಶಾಯ 33:24.
ದೌರ್ಬಲ್ಯಗಳಿರುವುದಿಲ್ಲ
“ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”—ಯೆಶಾಯ 35:5, 6.
ಆಹಾರ ಸಮೃದ್ಧಿ
“ಭೂಮಿಯ ಮೇಲೆ ಹೇರಳವಾಗಿ ಧಾನ್ಯವು ದೊರೆಯುವುದು; ಬೆಟ್ಟಗಳ ಮೇಲೆಲ್ಲಾ ಬೆಳೆಯು ತುಂಬಿ ಹರಿಯುವುದು.”—ಕೀರ್ತನೆ 72:16, NW.
ಶಾಂತಿ
“ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ಪ್ರಳಯವನ್ನು ನಡಿಸಿದ್ದಾನೆ. ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.”—ಕೀರ್ತನೆ 46:8, 9.
ನೀವು ಮಾಡಬೇಕಾದ ವಿಷಯ
ದೇವರು ವಾಗ್ದಾನಿಸಿರುವ ಈ ಆಶೀರ್ವಾದಗಳನ್ನು ಅನುಭವಿಸಲಿಕ್ಕಾಗಿ ನೀವೇನು ಮಾಡಬೇಕು? ಯೋಹಾನ 17:3ರಲ್ಲಿ ಬೈಬಲು ಉತ್ತರಿಸುತ್ತದೆ: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” ಹೌದು, ದೇವರು, ಆತನ ನಾಮ, ಆತನ ಉದ್ದೇಶ, ಮತ್ತು ಆತನ ನಿಯಮಗಳ ಕುರಿತು ಕಲಿಯುವುದರ ಮೂಲಕ, ಮಾರ್ಗದರ್ಶನದ ಪರಿಜ್ಞಾನವನ್ನು ನಾವು ಪಡೆಯುತ್ತೇವೆ. ಇಷ್ಟೇ ಅಲ್ಲದೆ, ಯೇಸು, ಭೂಮಿಯ ಮೇಲಿನ ಆತನ ಜೀವನ, ನಮ್ಮ ಪಾಪಗಳಿಗಾಗಿ ಆತನ ಪ್ರಾಯಶ್ಚಿತ್ತ ಯಜ್ಞ, ದೇವರ ರಾಜ್ಯದ ಅರಸನೋಪಾದಿ ಆತನ ಸ್ಥಾನದ ಕುರಿತು ಕಲಿಯುವುದರ ಮೂಲಕ, ದೇವರ ಉದ್ದೇಶವು ನೆರವೇರಲಿದೆ ಎಂಬ ದೃಢವಿಶ್ವಾಸವನ್ನು ನಾವು ಹೊಂದಿರಬಲ್ಲೆವು.
ಅಪರಿಚಿತ ಕ್ಷೇತ್ರದಲ್ಲಿರುವ ಪ್ರಯಾಣಿಕನೋಪಾದಿ ಮಾನವನು, ತನ್ನ ಸ್ವಂತ ಹೆಜ್ಜೆಗಳನ್ನು ಮಾರ್ಗದರ್ಶಿಸಲಾರನು ಎಂಬುದನ್ನು ಯಾವುದೇ ಸಂದೇಹವನ್ನು ಉಳಿಸದೆ ಪ್ರದರ್ಶಿಸಲಿಕ್ಕಾಗಿ, ದುಷ್ಟತನದ ಕುರಿತಾದ ದೇವರ ಸೈರಣೆಯು ಕಾರ್ಯನಡಿಸಿದೆ. (ಯೆರೆಮೀಯ 10:23) ವಾಸ್ತವವಾಗಿ, ನಿರಂಕುಶಪ್ರಭುತ್ವಗಳಿಂದ ಪ್ರಜಾಪ್ರಭುತ್ವಗಳ ವರೆಗೆ, ಅನೇಕ ಸರಕಾರಗಳ ಮೂಲಕ ಮಾನವನು ಊಹಿಸಬಹುದಾದ ಪ್ರತಿಯೊಂದು ಮಾರ್ಗವನ್ನು ಪ್ರಯತ್ನಿಸಿದ್ದಾನೆ. ಆದರೂ, ಅವನ ಯಶಸ್ಸು ಬಹುತೇಕವಾಗಿ ಮಿತಗೊಳಿಸಲ್ಪಟ್ಟಿದೆ.
“ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,” ಎಂಬುದಾಗಿ ಲಕ್ಷಾಂತರ ಮಂದಿಯಿಂದ ಉಚ್ಚರಿಸಲ್ಪಡುವ ಪ್ರಾರ್ಥನೆಗೆ ದೇವರ ರಾಜ್ಯವು ಉತ್ತರಿಸಲಿರುವುದರಿಂದ ನಾವೆಷ್ಟು ಆಭಾರಿಗಳಾಗಿರಸಾಧ್ಯವಿದೆ. (ಮತ್ತಾಯ 6:10) ಎಲ್ಲ ಮಾನವ ಸರಕಾರಗಳನ್ನು ದೇವರ ರಾಜ್ಯವು ಬೇಗನೆ ಸ್ಥಾನಪಲ್ಲಟಗೊಳಿಸುವಾಗ, ಅದರ ಆಶೀರ್ವಾದಗಳು ಅನುಭವಿಸಲ್ಪಡುವವು. ಬೈಬಲ್ ವಾಗ್ದಾನಿಸುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಅದು ಎಂತಹ ಮಹತ್ವದ ಒಂದು ಸಮಯವಾಗಿರುವುದು! ಬೈಬಲಿನ ಕುರಿತಾದ ಜ್ಞಾನವು, ನಮ್ಮನ್ನು ನಿರೀಕ್ಷೆಯಿಂದ ತುಂಬಿಸಬಲ್ಲದು ನಿಜ. ಹೌದು, ಇವು ತೊಂದರೆಯುಕ್ತ ಸಮಯಗಳಾಗಿವೆ, ಮತ್ತು ಇನ್ನೂ ಹೆಚ್ಚು ಕೆಡುತ್ತಿವೆ. ಆದರೆ ಈ ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ತಾನೇ ಅದು ರುಜುಪಡಿಸುತ್ತದೆ. ಬೇಗನೇ, ದೇವರ ರಾಜ್ಯದ ಕೆಳಗೆ ಸರ್ವೋತ್ತಮ ಸಮಯಗಳ ಮೂಲಕ ಈ ಅತಿ ಕೆಟ್ಟ ಸಮಯಗಳು ಸ್ಥಾನಚ್ಯುತಿಮಾಡಲ್ಪಡುವವು.