ಮಾರ್ಚ್ 30–ಏಪ್ರಿಲ್ 5, 2026
ಗೀತೆ 76 ಹೇಗನಿಸುತ್ತದೆ?
ಸತ್ಯವನ್ನ ಮಧುರವಾಗಿ, ಮೃದುವಾಗಿ ಹೇಳಿ
‘ ಯೆಹೋವನೇ, ಸತ್ಯ ದೇವರು.’—ಕೀರ್ತ. 31:5.
ಈ ಲೇಖನದಲ್ಲಿ ಏನಿದೆ?
ಪ್ರಾಮಾಣಿಕವಾಗಿ ಮಾತಾಡೋಕೆ ಮತ್ತು ಸಿಹಿಸುದ್ದಿಯನ್ನ ಚೆನ್ನಾಗಿ ಸಾರೋಕೆ ಏನು ಮಾಡಬೇಕು ಅಂತ ನೋಡೋಣ.
1. ನಾವು ಯೆಹೋವನ ಕುಟುಂಬದಲ್ಲಿ ಒಬ್ಬರಾಗಬೇಕಾದ್ರೆ ಏನು ಮಾಡಬೇಕು?
ನೀವು ಯಾವುದೇ ಯೆಹೋವನ ಸಾಕ್ಷಿಗಳನ್ನ ಮಾತಾಡಿಸಿದಾಗ ಮೊದಲು ಕೇಳೋ ಕೆಲವು ಪ್ರಶ್ನೆಗಳಲ್ಲಿ ಒಂದು, “ನೀವು ಸತ್ಯಕ್ಕೆ ಯಾವಾಗ ಬಂದ್ರಿ?” ಅಂತ. ಅದಕ್ಕೆ ಕೆಲವರು “ನಾನು ಸತ್ಯದಲ್ಲೇ ಬೆಳೆದೆ” ಅಂತಾರೆ. ಇನ್ನು ಕೆಲವರು ‘ನಾನು ಇತ್ತೀಚೆಗಷ್ಟೇ ಸತ್ಯಕ್ಕೆ ಬಂದೆ’ ಅಂತಾರೆ. ಯಾಕೆ? ಯಾಕಂದ್ರೆ ನಾವು ಬೈಬಲ್ ಪ್ರಕಾರ ಜೀವನ ಮಾಡಿದಾಗ ಮಾತ್ರನೇ ಸತ್ಯದ ಪ್ರಕಾರ ನಡಿತಾ ಇದ್ದೀವಿ ಅಂತ ಹೇಳೋಕಾಗುತ್ತೆ. ನಾವು ಸತ್ಯವನ್ನ ಪ್ರೀತಿಸಿದ್ರೆ ಮತ್ತು ಸತ್ಯದ ಪ್ರಕಾರ ನಡೆದ್ರೆ ಮಾತ್ರನೇ ಯೆಹೋವನ ಕುಟುಂಬದ ಭಾಗ ಆಗೋಕೆ ಸಾಧ್ಯ ಆಗುತ್ತೆ. ಹಾಗಾಗಿ ನಾವು ನಮ್ಮ ಮಾತು ಮತ್ತು ನಡತೆಯಲ್ಲೂ ಪ್ರಾಮಾಣಿಕರಾಗಿ ಇರಬೇಕು.—ಕೀರ್ತ. 15:1-3.
2. (ಎ) ಯೇಸು ಎಂಥ ಹೆಸ್ರು ಮಾಡಿದ್ದನು? (ಬಿ) ಯೇಸು ಸಾರಿದ ಸತ್ಯನ ಜನ ಕೇಳಿಸ್ಕೊಂಡಾಗ ಹೇಗೆ ಪ್ರತಿಕ್ರಿಯಿಸಬಹುದು?
2 ಯೇಸು ಯಾವಾಗ್ಲೂ ಸತ್ಯವನ್ನೇ ಹೇಳ್ತಿದ್ದ. ಯೇಸು ಯಾವಾಗ್ಲೂ ಪ್ರಾಮಾಣಿಕವಾಗೇ ಮಾತಾಡ್ತಾನೆ ಅಂತ ಆತನ ಶತ್ರುಗಳೂ ಒಪ್ಕೊಂಡ್ರು. ಜನ್ರಿಗೆ ಇಷ್ಟ ಆಗಲ್ಲ ಅಂತ ಯೇಸು ಸತ್ಯವನ್ನ ನುಂಗಿ ಮಾತಾಡ್ತಾ ಇರ್ಲಿಲ್ಲ. (ಮತ್ತಾ. 22:16) ಆತನು ಹೇಳಿದ ಮಾತುಗಳನ್ನ ಕೇಳಿಸ್ಕೊಂಡಾಗ ಜನ ಹೇಗೆ ಪ್ರತಿಕ್ರಿಯಿಸ್ತಾರೆ ಅಂತ ಆತನಿಗೆ ಗೊತ್ತಿತ್ತು. ಅದಕ್ಕೆ ಆತನು “ಅಪ್ಪನಿಗೂ ಮಗನಿಗೂ, ಅಮ್ಮನಿಗೂ ಮಗಳಿಗೂ, ಅತ್ತೆಗೂ ಸೊಸೆಗೂ ವಿರೋಧ ತರೋಕೆ ನಾನು ಬಂದಿದ್ದೀನಿ” ಅಂದ. (ಮತ್ತಾ. 10:35) ಏನಿದ್ರ ಅರ್ಥ? ತಾನು ಸಾರಿದ್ದನ್ನ ಕೇಳಿಸ್ಕೊಂಡು ಜನ ತನ್ನನ್ನ ವಿರೋಧಿಸಬೇಕು ಅಂತ ಆತನು ಹೇಳ್ತಿಲ್ಲ. ಬದಲಿಗೆ ನಿಜವಾಗ್ಲೂ ಏನು ನಡೆಯುತ್ತೆ ಅನ್ನೋ ಸತ್ಯ ವಿಷ್ಯವನ್ನ ಇಲ್ಲಿ ಹೇಳ್ತಿದ್ದಾನೆ ಅಷ್ಟೇ! (ಮತ್ತಾ. 23:37) ಆದ್ರಿಂದ ಸಿಹಿಸುದ್ದಿಯನ್ನ ಕೇಳಿಸ್ಕೊಂಡ ಮೇಲೆ ಸ್ವಲ್ಪ ಜನ ಬೈಬಲ್ ಸತ್ಯಗಳನ್ನ ಪ್ರೀತಿಸಬಹುದು. ಇನ್ನು ಕೆಲವು ಜನ ಅದನ್ನ ಪ್ರೀತಿಸದೇ ಹೋಗಬಹುದು.—2 ಥೆಸ. 2:9-11.
3. ಈ ಲೇಖನದಲ್ಲಿ ಏನು ಕಲಿತೀವಿ?
3 ಯೇಸು ತರ ನಾವು ಪ್ರಾಮಾಣಿಕರಾಗಿ ಇರೋಕೆ ಪ್ರಯತ್ನ ಹಾಕ್ತೀವಿ. ಜನ ನಮ್ಮನ್ನ ಇಷ್ಟಪಡ್ಲಿಲ್ಲ ಅಂದ್ರೂ ಯಾವಾಗ್ಲೂ ಸತ್ಯವನ್ನೇ ಮಾತಾಡ್ತೀವಿ. ಜನ್ರಿಗೆ ಇಷ್ಟ ಆಗ್ಲಿ ಬಿಡ್ಲಿ ನಾವಂತೂ ಬೈಬಲ್ ಸತ್ಯವನ್ನ ಕಲಿಸೋದನ್ನ ಬಿಡಲ್ಲ. ಅದ್ರ ಅರ್ಥ ನಾವು ಈ ಸತ್ಯನ ಯಾವಾಗ ಬೇಕಾದ್ರೂ, ಹೇಗೆ ಬೇಕಾದ್ರೂ ಮಾತಾಡಬಹುದು ಅಂತಾನಾ? ಇಲ್ಲ. ಈ ಲೇಖನದಲ್ಲಿ ನಾವು ಕೆಲವು ಮುಖ್ಯ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಣ. ಸತ್ಯವನ್ನ ನಾವು ಎಲ್ಲಿ ಕಂಡ್ಕೊಬಹುದು? ಅದ್ರ ಜೊತೆಗೆ ಯಾಕೆ, ಹೇಗೆ ಮತ್ತು ಎಲ್ಲಿ ನಾವು ಈ ಸತ್ಯವನ್ನ ಮಾತಾಡಬೇಕು ಅನ್ನೋ ಪ್ರಶ್ನೆಗಳಿಗೂ ಉತ್ರ ತಿಳ್ಕೊಳ್ಳೋಣ. ಇದನ್ನ ತಿಳ್ಕೊಂಡ್ರೆ ನಾವು ಸತ್ಯನ ಮೃದುವಾಗಿ, ಮಧುರವಾಗಿ, ಜಾಣ್ಮೆಯಿಂದ ಮತ್ತು ಸರಿಯಾಗಿರೋ ಸಮಯದಲ್ಲಿ ಮಾತಾಡೋಕೆ ಕಲಿತೀವಿ.
ಸತ್ಯವನ್ನ ಎಲ್ಲಿ ಕಂಡ್ಕೊಬಹುದು?
4. ಯೆಹೋವನೇ ಸತ್ಯದ ದೇವರು ಅಂತ ನಾವ್ಯಾಕೆ ಹೇಳಬಹುದು?
4 ಯೆಹೋವ ಸತ್ಯದ ಮೂಲನಾಗಿದ್ದಾನೆ. ಆತನು ಹೇಳೋದೆಲ್ಲ ಸತ್ಯನೇ ಆಗಿದೆ. ಉದಾಹರಣೆಗೆ, ಯಾವುದು ಸರಿ, ಯಾವುದು ತಪ್ಪು ಅಂತ ಹೇಳೋ ಆತನ ತೀರ್ಪುಗಳು ಸತ್ಯ ಆಗಿದೆ. (ಕೀರ್ತ. 19:9; 119:142, 151) ಭವಿಷ್ಯದ ಬಗ್ಗೆ ಯೆಹೋವ ಹೇಳಿರೋದೆಲ್ಲ ಸತ್ಯ ಆಗಿದೆ. (ಯೆಶಾ. 55:10, 11) ಆತನು ಮಾತು ಕೊಟ್ಟ ಮೇಲೆ ಅದನ್ನ ಯಾವತ್ತೂ ಮುರಿಯಲ್ಲ. (ಅರ. 23:19) ನಿಜ ಹೇಳ್ಬೇಕಂದ್ರೆ ಯೆಹೋವ ಸುಳ್ಳನ್ನ ಹೇಳೋಕೆ ಸಾಧ್ಯನೇ ಇಲ್ಲ! (ಇಬ್ರಿ. 6:18) ಈ ಎಲ್ಲ ಕಾರಣಗಳಿಂದಾಗಿ ‘ಯೆಹೋವನೇ ಸತ್ಯದ ದೇವರು’ ಅಂತ ನಾವು ಹೇಳಬಹುದು.—ಕೀರ್ತ. 31:5.
5. ‘ಸತ್ಯ ದೇವರನ್ನ’ ಹುಡುಕೋದು ಯಾಕೆ ಕಷ್ಟ ಅಲ್ಲ? ವಿವರಿಸಿ. (ಅಪೊಸ್ತಲರ ಕಾರ್ಯ 17:27)
5 ‘ಸತ್ಯದ ದೇವರನ್ನ’ ಕಂಡುಹಿಡಿಯೋದು ಅಷ್ಟು ಸುಲಭ ಅಲ್ಲ ಅಂತ ಕೆಲವರು ಹೇಳ್ತಾರೆ, ಆದ್ರೆ ಅದು ನಿಜ ಅಲ್ಲ. ದೇವರು ಇದ್ದಾನೆ ಅನ್ನೋದಕ್ಕೆ ಸ್ಪಷ್ಟ ರುಜುವಾತು ನಮ್ಮ ಸುತ್ತಲೂ ಇದೆ. (ರೋಮ. 1:20) ಅಥೆನ್ಸಿನಲ್ಲಿದ್ದ ಗ್ರೀಕ್ ತತ್ವಜ್ಞಾನಿಗಳ ಹತ್ರ ಅಪೊಸ್ತಲ ಪೌಲ ಮಾತಾಡುವಾಗ “ತನ್ನನ್ನ ಹುಡುಕಬೇಕು ಅನ್ನೋದು” ದೇವರ ಆಸೆ, ಆತನು “ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ” ಅಂತ ಹೇಳಿದ. (ಅಪೊಸ್ತಲರ ಕಾರ್ಯ 17:27 ಓದಿ.) ನಿಜ ಹೇಳ್ಬೇಕಂದ್ರೆ, ಸತ್ಯ ಹುಡುಕುತ್ತಿರೋ ದೀನ ಜನ್ರನ್ನ ಯೆಹೋವ ದೇವರೇ ತನ್ನ ಹತ್ರ ಸೆಳ್ಕೊತಾನೆ.—ಯೋಹಾ. 6:44.
6. (ಎ) ಬೈಬಲಲ್ಲಿರೋ ಕೆಲವು ಸತ್ಯಗಳನ್ನ ತಿಳಿಸಿ. (ಬಿ) ಈ ಸತ್ಯಗಳನ್ನ ತಿಳ್ಕೊಂಡಿರೋದ್ರಿಂದ ನಿಮಗೆ ಏನು ಪ್ರಯೋಜನ ಆಗಿದೆ?
6 ಯೆಹೋವ ದೇವರ ಬಗ್ಗೆ ನಾವು ಸತ್ಯ ತಿಳ್ಕೊಬೇಕಂದ್ರೆ ಬೈಬಲನ್ನ ಚೆನ್ನಾಗಿ ಓದಬೇಕು. ಬೈಬಲನ್ನ ದೇವರು ಕೆಲವು ಜನರ ಕೈಲಿ ತನ್ನ ಪವಿತ್ರಶಕ್ತಿ ಕೊಟ್ಟು ಬರೆಸಿದ್ದಾನೆ. (2 ಪೇತ್ರ 1:20, 21) ಹಾಗಾಗಿ ಬೈಬಲಲ್ಲಿ ಇರೋದೆಲ್ಲ ಸತ್ಯ ಆಗಿದೆ, ನಾವು ಅದನ್ನ ಸಂಪೂರ್ಣವಾಗಿ ನಂಬಬಹುದು. ಉದಾಹರಣೆಗೆ, ಈ ವಿಶ್ವ ಹೇಗೆ ಬಂತು? ಈ ಜೀವಿಗಳು ಹೇಗೆ ಸೃಷ್ಟಿಯಾದವು? ಅಂತ ಬೈಬಲ್ ಹೇಳುತ್ತೆ. (ಆದಿ. 1:1, 26) ನಾವ್ಯಾಕೆ ಪಾಪ ಮಾಡ್ತೀವಿ? ಇವತ್ತು ಕಷ್ಟಗಳು ಮತ್ತು ಮರಣ ಯಾಕಿದೆ? ಅಂತಾನೂ ಬೈಬಲಲ್ಲಿದೆ. ಈ ವಿಷ್ಯಗಳನ್ನೆಲ್ಲಾ ನಾವು ನಂಬಬಹುದು. (ರೋಮ. 5:12; 6:23) ‘ಸುಳ್ಳನ್ನ ಹುಟ್ಟಿಸಿದ’ ಸೈತಾನ ಮಾಡಿರೋ ಎಲ್ಲಾ ತೊಂದ್ರೆಗಳನ್ನ ಯೆಹೋವ ತನ್ನ ಮಗನ ಮೂಲಕ ತೆಗೆದುಹಾಕ್ತೀನಿ ಅಂತ ಕೊಟ್ಟಿರೋ ಮಾತನ್ನ ಸಹ ನಾವು ನಂಬಬಹುದು. (ಯೋಹಾ. 8:44; ರೋಮ. 16:20) ತುಂಬ ಬೇಗ ಯೇಸು ಕೆಟ್ಟವರನ್ನೆಲ್ಲ ಈ ಭೂಮಿಯಿಂದ ತೆಗೆದು ಹಾಕ್ತಾನೆ, ಸತ್ತು ಹೋಗಿರೋರನ್ನೆಲ್ಲ ಮತ್ತೆ ಬದುಕೋ ತರ ಮಾಡ್ತಾನೆ ಮತ್ತು ಈ ಭೂಮಿಯನ್ನ ಪರದೈಸಾಗಿ ಮಾಡ್ತಾನೆ. ನಮ್ಮೆಲ್ರನ್ನ ಪರಿಪೂರ್ಣರಾಗಿ ಮಾಡ್ತಾನೆ ಅಂತ ಮಾತು ಕೊಟ್ಟಿದ್ದಾನೆ, ಈ ಮಾತನ್ನೂ ನಾವು ನಂಬಬಹುದು. (ಯೋಹಾ. 11:25, 26; 1 ಯೋಹಾ. 3:8) ಇದೆಲ್ಲದ್ರ ಜೊತೆ ನಮ್ಮೆಲ್ರಿಗೂ ಮಾಡೋಕೆ ಒಂದು ಅದ್ಭುತ ಕೆಲಸ ಇದೆ. ಯೆಹೋವ ನಮಗೆ ಸತ್ಯ ಏನು ಅಂತ ಕಲಿಸಿದ್ದಾನೆ, ಈ ಸತ್ಯನ ಬೇರೆಯವ್ರಿಗೆ ಸಾರೋ ಅವಕಾಶ ನಮ್ಮೆಲ್ರಿಗೂ ಕೊಟ್ಟಿದ್ದಾನೆ.—ಮತ್ತಾ. 28:19, 20.
ನಾವು ಯಾಕೆ ಸತ್ಯಾನೇ ಮಾತಾಡಬೇಕು?
7-8. ನಾವು ಸತ್ಯವನ್ನ ಯಾವ ಉದ್ದೇಶದಿಂದ ಹೇಳ್ತಿದ್ದೀವಿ ಅನ್ನೋದು ಮುಖ್ಯನಾ? ಉದಾಹರಣೆ ಕೊಡಿ. (ಮಾರ್ಕ 3:11, 12) (ಚಿತ್ರ ನೋಡಿ.)
7 ನಾವೀಗಾಗ್ಲೇ ನೋಡಿದಂತೆ ಯೆಹೋವನ ಕುಟುಂಬದಲ್ಲಿ ನಾವು ಒಬ್ಬರಾಗಬೇಕಾದ್ರೆ ಯಾವಾಗ್ಲೂ ಸತ್ಯವನ್ನೇ ಹೇಳಬೇಕು. ಹಾಗಂತ ಬರೀ ಸತ್ಯ ಮಾತಾಡಿಬಿಟ್ರೆ ಸಾಕಾಗಲ್ಲ. ಆ ಸತ್ಯನ ನಾವು ಯಾಕೆ ಮಾತಾಡ್ತೀವಿ ಅನ್ನೋದು ಕೂಡ ಯೆಹೋವನಿಗೆ ತುಂಬ ಮುಖ್ಯ. ಯೇಸು ಭೂಮಿಯಲ್ಲಿದ್ದಾಗ ಏನಾಯ್ತು ಅಂತ ನೋಡೋಣ ಬನ್ನಿ. (ಮಾರ್ಕ 3:11, 12 ಓದಿ.) ಯೇಸು ಒಂದ್ಸಲ ಗಲಿಲಾಯ ಸಮುದ್ರದ ಹತ್ರ ಸಾರ್ತಾ ಇದ್ದ. ಆಗ ಆತನ ಸುತ್ತಲೂ ಜನ ಗುಂಪು ಗುಂಪಾಗಿ ಬಂದು ಆತನ ಬೋಧನೆ ಕೇಳಿಸ್ಕೊಳ್ತಾ ಇದ್ರು. ಆಗ ಅಲ್ಲಿ ಕೆಟ್ಟ ದೇವದೂತರು ಹಿಡಿದಿದ್ದ ಕೆಲವು ಜನ ಯೇಸುಗೆ ಅಡ್ಡ ಬಿದ್ದು, “ನೀನು ದೇವರ ಮಗ” ಅಂತ ಕೂಗ್ತಿದ್ರು. ಅವರು ಹೇಳಿದ್ದು ಸತ್ಯನೇ ಅಲ್ವಾ? ಆದ್ರೆ ಈ ತರ ಹೇಳೋದ್ರ ಹಿಂದೆ ಆ ಕೆಟ್ಟ ದೂತರಿಗೆ ಯಾವ ಉದ್ದೇಶ ಇತ್ತು? ಜನ ತಾವು ಹೇಳೋದನ್ನ ಕೇಳಿಸ್ಕೊಂಡು ತಮ್ಮ ಮೇಲೆ ನಂಬಿಕೆ ಬೆಳೆಸ್ಕೊಬೇಕು ಅಂತ ಅವರು ಅಂದ್ಕೊಂಡ್ರು. ನಿಧಾನವಾಗಿ ಇವರು ಆ ಜನ್ರನ್ನೆಲ್ಲ ದೇವರಿಂದ ದೂರ ಮಾಡಬೇಕು ಅನ್ನೋ ಕುತಂತ್ರ ಮಾಡಿದ್ರು. ನೋಡಿದ್ರಾ? ಆ ಕೆಟ್ಟ ದೂತರು ಮೊದಲು ಸತ್ಯಾನೇ ಹೇಳಿದ್ರು. ಆದ್ರೆ ಅವ್ರಿಗೆ ಅದ್ರ ಹಿಂದೆ ಸ್ವಾರ್ಥ ಉದ್ದೇಶ ಇತ್ತು. ಯೇಸು ಅವರ ಬಣ್ಣದ ಮಾತಿಗೆ ಬಲಿ ಬೀಳಲಿಲ್ಲ. ಆತನು ಅವ್ರಿಗೆ, ‘ನೀವು ನನ್ನ ಬಗ್ಗೆ ಸಾರಬೇಡಿ ಇಲ್ಲಿಂದ ಹೋಗಿ’ ಅಂತ ಗದರಿಸಿದನು.
8 ಈ ಘಟನೆಯಿಂದ ನಾವು ಯಾವ ಪಾಠ ಕಲಿಯಬಹುದು? ನಾವು ಸತ್ಯಾನೇ ಹೇಳ್ತಿದ್ರೂ, ನಾವು ಅದನ್ನ ಯಾವ ಉದ್ದೇಶದಿಂದ ಹೇಳ್ತಿದ್ದೀವಿ ಅಂತ ಯೆಹೋವ ನೋಡ್ತಾನೆ. ನಾವು ಸಾರೋದಕ್ಕೆ ಕಾರಣ ಯೆಹೋವನ ಮೇಲಿರೋ ಪ್ರೀತಿ ಆಗಿರಬೇಕೇ ಹೊರತು ಜನ ನಮ್ಮನ್ನ ಹೊಗಳಬೇಕು ಅನ್ನೋದಲ್ಲ. ಜನ ನಮ್ಮನ್ನ ಹೊಗಳಿದಾಗ್ಲೂ ಆ ಗೌರವನ ನಾವು ಯೆಹೋವನಿಗೆ ಕೊಡಬೇಕು!—ಮತ್ತಾ. 5:16 ಮತ್ತು ಅ. ಕಾ. 14:12-15 ಅನ್ನು ಹೋಲಿಸಿ.
ನೀವು ಸತ್ಯ ಕಲಿಸುವಾಗ ಅವ್ರ ಗಮನ ಯಾರ ಮೇಲೆ ಹೋಗುವಂತೆ ಮಾಡ್ತೀರ? (ಪ್ಯಾರ 7-8 ನೋಡಿ)
9. ನಾವು ಏನು ಮಾಡೋಕೆ ಹೋಗಬಾರದು? ಯಾಕೆ?
9 ಜನ್ರ ಗಮನ ನಮ್ಮ ಕಡೆಗೆ ಬರೋ ತರ ಮಾಡೋ ಇನ್ನೊಂದು ಸನ್ನಿವೇಶದ ಬಗ್ಗೆ ನೋಡೋಣ. ತುಂಬ ಜವಾಬ್ದಾರಿ ಇರೋ ಒಬ್ಬ ಸಹೋದರ ನಮ್ಮ ಹತ್ರ ಬಂದು, ಒಂದು ಗುಟ್ಟು ಅಥವಾ ಗೌಪ್ಯವಾಗಿರೋ ವಿಷ್ಯ ಹೇಳಿದ್ರು ಅಂದ್ಕೊಳ್ಳಿ. ನಾವು ಆ ವಿಷ್ಯವನ್ನ ಬೇರೆಯವ್ರಿಗೆ ಹೇಳಿ ಬಿಟ್ವಿ. ನಾವು ಹೇಳಿದ ವಿಷ್ಯ ಸತ್ಯ ಅಂತ ಕೇಳಿಸ್ಕೊಂಡವ್ರಿಗೆ ಆಮೇಲೆ ಗೊತ್ತಾಯ್ತು ಅಂತ ಅಂದ್ಕೊಳ್ಳಿ. ಆಗ ಅವ್ರಿಗೆ ನಮ್ಮ ಬಗ್ಗೆ ಹೇಗೆ ಅನಿಸುತ್ತೆ? ‘ಪರವಾಗಿಲ್ವೇ ಇವ್ರಿಗೆ ಎಲ್ಲಾ ಮೊದ್ಲೇ ಗೊತ್ತಾಗಿಬಿಟ್ಟಿದೆ, ಇವರು ಹೇಳೋದೆಲ್ಲ ಸರಿಯಾಗಿರುತ್ತೆ’ ಅಂತ ಅವ್ರಿಗೆ ಅನಿಸುತ್ತೆ. ನಿಜ ನಾವು ಹೇಳಿದ್ದನ್ನ ಕೇಳಿಸ್ಕೊಂಡವ್ರಿಗೆ, ಅದು ಸತ್ಯ ಅಂತ ಗೊತ್ತಾದಾಗ ನಮ್ಮ ಮೇಲೆ ಗೌರವ ಹೆಚ್ಚಾಗುತ್ತೆ. ಆದ್ರೆ ಯೆಹೋವನಿಗೆ ನಮ್ಮ ಮೇಲೆ ಗೌರವ ಹೆಚ್ಚಾಗುತ್ತಾ? ಇಲ್ಲ. (ಜ್ಞಾನೋ. 11:13) ಯಾಕೆ? ನಾವಿಲ್ಲಿ ಎರಡು ತಪ್ಪು ಮಾಡಿಬಿಟ್ವಿ. ಒಂದು, ಗೌಪ್ಯವಾಗಿರೋ ವಿಷ್ಯವನ್ನ ಬೇರೆಯವ್ರಿಗೆ ಹೇಳಿ ಬಿಟ್ವಿ! ಎರಡು, ನಾವು ಹೇಳಿದ್ದು ಸತ್ಯನೇ ಆದ್ರೂ ತಪ್ಪಾಗಿರೋ ಉದ್ದೇಶದಿಂದ ಅದನ್ನ ಹೇಳಿದ್ವಿ!
ಸತ್ಯವನ್ನ ಹೇಗೆ ಹೇಳಬೇಕು?
10. ನಮ್ಮ ಮಾತು “ಮೃದುವಾಗಿ, ಮಧುರವಾಗಿ” ಇರಬೇಕು ಅನ್ನೋದ್ರ ಅರ್ಥ ಏನು? (ಕೊಲೊಸ್ಸೆ 4:6)
10 ಕೊಲೊಸ್ಸೆ 4:6 ಓದಿ. ಅಪೊಸ್ತಲ ಪೌಲ ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ “ನಿಮ್ಮ ಮಾತು ಯಾವಾಗ್ಲೂ ಮೃದುವಾಗಿ, ಮಧುರವಾಗಿ ಇರಲಿ” ಅಂತ ಹೇಳಿದ. ಅವನ ಮಾತಿನ ಅರ್ಥ ಏನು? ಮೂಲ ಭಾಷೆಯಲ್ಲಿ ಅವನು ಹೇಳಿದ ಈ ಮಾತಿನ ಅರ್ಥ ಏನಂದ್ರೆ, ನಾವು ಹೇಳೋ ವಿಷ್ಯ ಜನ್ರಿಗೆ ಬರೀ ಪ್ರಯೋಜನ ತಂದ್ರೆ ಸಾಕಾಗಲ್ಲ. ಜೊತೆಯಲ್ಲಿ ಅದು ದಯೆಯಿಂದ, ಅವ್ರಿಗೆ ಇಷ್ಟ ಆಗೋ ತರಾನೂ ಇರಬೇಕು.
11-12. ನಾವು ಸತ್ಯವನ್ನ ಹೇಗೆ ಕಲಿಸ್ತಾ ಇದ್ದೀವಿ ಅನ್ನೋ ವಿಷ್ಯದಲ್ಲೂ ಹುಷಾರಾಗಿರಬೇಕು ಯಾಕೆ? ಉದಾಹರಣೆ ಕೊಡಿ. (ಚಿತ್ರ ನೋಡಿ.)
11 ನಾವು ಬೇರೆಯವ್ರಿಗೆ ಸತ್ಯ ಕಲಿಸುವಾಗ್ಲೂ ನಮ್ಮ ಮಾತು ಮೃದುವಾಗಿ, ಮಧುರವಾಗಿ ಇರಬೇಕು. ಬೈಬಲಲ್ಲಿರೋ ಸತ್ಯ ಚೂಪಾಗಿರೋ ಕತ್ತಿ ತರ ಇದೆ. ಅದು ನಮ್ಮ ಹೃದಯನ, ಮನಸ್ಸನ್ನ ತೂರಿಕೊಂಡು ಹೋಗುತ್ತೆ. ಅಂದ್ರೆ ಈ ಸತ್ಯಗಳು ನಮ್ಮ ಭಾವನೆಗಳನ್ನ, ನಮ್ಮ ಉದ್ದೇಶಗಳನ್ನೆಲ್ಲ ಬಯಲು ಮಾಡುತ್ತೆ. (ಇಬ್ರಿ. 4:12) ಒಂದುವೇಳೆ ನಾವು ಬೈಬಲನ್ನ ಸರಿಯಾಗಿ ಉಪಯೋಗಿಸ್ಲಿಲ್ಲ ಅಂದ್ರೆ ಬೇರೆಯವ್ರಿಗೆ ನೋವು ಮಾಡಬಹುದು, ಇಲ್ದೇ ಇರೋ ಸಮಸ್ಯೆಯನ್ನ ಮೈಮೇಲೆ ಎಳೆಯಬಹುದು. ಇದು ಹೇಗಾಗುತ್ತೆ ಅಂತ ನೋಡೋಣ ಬನ್ನಿ.
12 ಈ ಸನ್ನಿವೇಶವನ್ನ ಊಹಿಸ್ಕೊಳ್ಳಿ. ನೀವು ಸೇವೆಗೆ ಹೋಗಿದ್ದೀರ, ಒಬ್ಬ ನಿಯತ್ತಾಗಿರೋ ಮನುಷ್ಯ ಸಿಗ್ತಾನೆ. ಅವನು ಮೂರ್ತಿಗಳಿಗೆ ಪ್ರತಿದಿನ ತಪ್ಪದೇ ಪ್ರಾರ್ಥನೆ ಮಾಡ್ತಾನೆ. ತನ್ನ ಕುಟುಂಬದ ಜೊತೆ ಕ್ರಿಸ್ಮಸ್, ಈಸ್ಟರ್ ಹಬ್ಬ ಮಾಡೋಕೆ ತುಂಬ ಇಷ್ಟ ಪಡ್ತಾನೆ. ಆ ವ್ಯಕ್ತಿಗೆ ನೀವು ಬೈಬಲನ್ನ ಬಳಸಿ, ಜೀವ ಇಲ್ದೆ ಇರೋ ಈ ಮೂರ್ತಿಗಳಿಗೆ ಪ್ರಾರ್ಥನೆ ಮಾಡೋದು ದಡ್ಡತನ. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳು ಸುಳ್ಳು ಧರ್ಮದ ಆಚರಣೆಗಳು ಅಂತ ರುಜು ಮಾಡಿ ತೋರಿಸಬಹುದು. (ಯೆಶಾ. 44:14-20; 2 ಕೊರಿಂ. 6:14-17) ಆದ್ರೆ ನೀವು ಮೊದಲ ಸಲಾನೇ ಈ ಎಲ್ಲಾ ವಿಷ್ಯಗಳನ್ನ ಹೇಳ್ಬಿಟ್ರೆ ಹೇಗಿರುತ್ತೆ? ನೀವು ಸತ್ಯನೇ ಹೇಳ್ತಿದ್ದೀರ ನಿಜ, ಆದ್ರೆ ಈ ರೀತಿ ಮಾತಾಡಿಬಿಟ್ರೆ ನೀವು ದೇವರ ವಾಕ್ಯವನ್ನ ಸರಿಯಾಗಿ ಬಳಸಿದ ಹಾಗೆ ಇರಲ್ಲ ಅನ್ನೋದನ್ನ ಮನಸಲ್ಲಿಡಿ!
ಅವ್ರ ಮನಸ್ಸು ಮುಟ್ಟೋ ತರ ಹೇಗೆ ಸತ್ಯ ಕಲಿಸಬಹುದು? (ಪ್ಯಾರ 11-12 ನೋಡಿ)a
13. ನಮ್ಮ ಮಾತು ಉಪ್ಪಿನಿಂದ ಹದಗೊಳಿಸಿದ ತರ ಇರಬೇಕಾದ್ರೆ ನಾವೇನು ಮಾಡಬೇಕು?
13 ನಮ್ಮ ಮಾತು ಉಪ್ಪಿನಿಂದ ಹದಗೊಳಿಸಿದ ತರ ಇರಬೇಕು ಅಂತ ಪೌಲ ಹೇಳಿದ. ಅದ್ರ ಅರ್ಥ ನಾವು ಸತ್ಯನ ಮುಚ್ಚಿಡೋ ತರ ಹೇಳಬೇಕು ಅಂತಲ್ಲ. ಬದ್ಲಿಗೆ ನಮ್ಮ ಮಾತು ಹದಗೊಳಿಸಿದ ತರ ಇರಬೇಕು. ಅಂದ್ರೆ, ನಮ್ಮ “ನಾಲಿಗೆ ರುಚಿ ನೋಡೋ ತರ” ನಾವು ಹೇಳೋ ಮಾತು ಜನ್ರ ಕಿವಿಗೆ ‘ರುಚಿಯಾಗಿ’ ಇರಬೇಕು. (ಯೋಬ 12:11) ಇದನ್ನ ಮಾಡೋದು ಅಷ್ಟು ಸುಲಭ ಅಲ್ಲ. ಉದಾಹರಣೆಗೆ, ನಾವು ಮಾಡಿದ ಆಹಾರ ನಮಗೆ ರುಚಿಯಾಗಿದೆ ಅಂದ ತಕ್ಷಣ ಬೇರೆಯವ್ರಿಗೂ ಅದು ರುಚಿಯಾಗಿರುತ್ತೆ ಅಂತ ಹೇಳೋಕಾಗಲ್ಲ ಅಲ್ವಾ? ಅದೇ ತರಾನೇ ನಾವು ಮಾತಾಡ್ತಿರೋ ವಿಷ್ಯ, ವಿಧಾನ ನಮಗೆ ಸರಿಯಾಗಿದೆ ಅಂದ ತಕ್ಷಣ, ಬೇರೆಯವ್ರಿಗೂ ಅದು ಸರಿಯಾಗೇ ಇರುತ್ತೆ ಅಂತ ನಾವು ಅಂದ್ಕೊಬಾರದು. ಯಾಕಂದ್ರೆ, ಒಂದೊಂದು ಸಂಸ್ಕೃತಿಯವರು ಒಂದೊಂದು ರೀತಿಲಿ ಮಾತಾಡ್ತಾರೆ. ಕೆಲವರು ಇದ್ದಿದ್ದನ್ನ ಇದ್ದಂಗೆ ಹೇಳಿ ಬಿಡ್ತಾರೆ, ವಯಸ್ಸಲ್ಲಿ ದೊಡ್ಡವರಾಗಿದ್ರೂ ಪರವಾಗಿಲ್ಲ ಅವ್ರ ಮನಸ್ಸಿಗೆ ಅನಿಸಿದ್ದನ್ನ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ. ಆದ್ರೆ ಬೇರೆ ಸಂಸ್ಕೃತಿಯವರು ಈ ತರ ಮಾತಾಡೋದನ್ನ ಒಪ್ಕೊಳ್ಳೋದಿಲ್ಲ, ಅದು ತಪ್ಪು ಅಂತ ಹೇಳ್ತಾರೆ. ಅದಕ್ಕೆ ಪೌಲ, ‘ನೀವು ಯಾರಿಗೆ ಹೇಗೆ ಉತ್ತರ ಕೊಡಬೇಕು ಅಂತ ತಿಳ್ಕೊಳ್ಳಿ’ ಅಂತ ಹೇಳಿದ. ಅದ್ರ ಅರ್ಥ ಏನಂದ್ರೆ, ನಾವು ಹೇಳ್ತಿರೋದು ನಮಗೆ ಸರಿ ಅನಿಸಿದ್ರೂ ಅದನ್ನ ಬೇರೆಯವ್ರಿಗೆ ಇಷ್ಟ ಆಗೋ ತರ ಹೇಳ್ಬೇಕು.
ಸತ್ಯವನ್ನ ಯಾವಾಗ ಹೇಳ್ಬೇಕು?
14. ಯೇಸು ತನ್ನ ಶಿಷ್ಯರಿಗೆ ಎಲ್ಲಾನೂ ಒಂದೇ ಸಲ ಹೇಳಿದ್ನಾ? ವಿವರಿಸಿ.
14 ಯೇಸು ತನ್ನ ಶಿಷ್ಯರಿಗೆ ಕಲಿಸುವಾಗ ಯಾವಾಗ್ಲೂ ಮಧುರವಾಗಿ, ಮೃದುವಾಗಿ ಮಾತಾಡ್ತಿದ್ದ. (ಮಾರ್ಕ 6:34) ಆತನು ತನ್ನ ಶಿಷ್ಯರಿಗೆ ಕಲಿಸೋಕೆ ತುಂಬ ಇತ್ತು. ಆದ್ರೂ ಎಲ್ಲವನ್ನ ಒಂದೇ ಸಲ ಹೇಳಿ ಕೊಡೋಕೆ ಹೋಗ್ಲಿಲ್ಲ. ಅವ್ರ ಇತಿಮಿತಿನ ಯೇಸು ಅರ್ಥ ಮಾಡ್ಕೊಂಡ. ಅವ್ರ ಕೈಯಲ್ಲಿ ಈಗ ಕೆಲವು ಸತ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ಆಗಲ್ಲ ಅಂತಾನೂ ಹೇಳಿದ. (ಯೋಹಾ. 16:12) ಇದ್ರಿಂದ ನಾವೇನು ಕಲಿಬಹುದು?
15. ನಮಗೆ ಗೊತ್ತಿರೋ ಸತ್ಯನೆಲ್ಲಾ ಬೈಬಲ್ ವಿದ್ಯಾರ್ಥಿಗೆ ಒಂದೇ ಸಲ ಹೇಳ್ಬೇಕಾ? ವಿವರಿಸಿ. (ಜ್ಞಾನೋಕ್ತಿ 25:11) (ಚಿತ್ರ ನೋಡಿ.)
15 ನಮಗೆ ಗೊತ್ತಿರೋ ಸತ್ಯನೆಲ್ಲಾ ಒಂದೇ ಸಲ ನಾವು ಹೇಳಬೇಕಾಗಿಲ್ಲ ಅಂತ ಯೇಸುವಿನ ಮಾದರಿಯಿಂದ ಕಲಿತೀವಿ. ಹಾಗಾದ್ರೆ ನಾವು ಹೇಗೆ ಯೇಸು ತರ ಕಲಿಸಬಹುದು? ನಾವು ಕಲಿಸುವಾಗ ಜನ್ರ ಪರಿಸ್ಥಿತಿಯನ್ನ ಅರ್ಥ ಮಾಡ್ಕೊಳ್ಳಬೇಕು. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬ ಮಾಡೋಕೆ ಆಸೆಪಡ್ತಿದ್ದ ಆ ವ್ಯಕ್ತಿ ಬಗ್ಗೆ ಯೋಚ್ನೆ ಮಾಡಿ. ಈ ಹಬ್ಬಗಳು ಸುಳ್ಳು ಧರ್ಮಕ್ಕೆ ಸೇರಿದ್ದು, ಇದನ್ನ ಯೆಹೋವ ದೇವರು ಮೆಚ್ಚಲ್ಲ ಅಂತ ನಮಗೆ ಗೊತ್ತು. ಆದ್ರೆ ಆ ವ್ಯಕ್ತಿ ಜೊತೆ ನೀವು ಕ್ರಿಸ್ಮಸ್‌ಗಿಂತ ಒಂದೆರಡು ವಾರ ಮುಂಚೆ ಬೈಬಲ್ ಸ್ಟಡಿ ಮಾಡ್ತಿದ್ದೀರಾ ಅಂತ ಅಂದ್ಕೊಳ್ಳಿ. ನೀವು ಬೈಬಲ್ ತೋರಿಸ್ತಾ ‘ಇದೆಲ್ಲ ಸುಳ್ಳು ಧರ್ಮದ ಹಬ್ಬಗಳು, ಇದನ್ನೆಲ್ಲಾ ನೀವು ತಕ್ಷಣ ನಿಲ್ಲಿಸಬೇಕು’ ಅಂತ ಹೇಳಿದ್ರೆ ಸರಿ ಇರುತ್ತಾ? ಈ ತರ ಹೇಳಿದ್ರೆ ನೀವು ಮೃದುವಾಗಿ, ಮಧುರವಾಗಿ ಮಾತಾಡಿದ ಹಾಗೆ ಆಗುತ್ತಾ? ನಿಜ, ಕೆಲವು ವಿದ್ಯಾರ್ಥಿಗಳು ಕಲಿತಿದ್ದನ್ನ ಪಟ್ ಅಂತ ಅನ್ವಯಿಸ್ತಾರೆ. ಆದ್ರೆ ಇನ್ನು ಕೆಲವರು ಅದ್ರ ಬಗ್ಗೆ ಯೋಚ್ನೆ ಮಾಡೋಕೆ, ಸರಿಯಾಗಿರೋ ನಿರ್ಧಾರ ಮಾಡೋಕೆ ಟೈಮ್ ತಗೊಳ್ತಾರೆ. ಹಾಗಾಗಿ ನಮ್ಮ ವಿದ್ಯಾರ್ಥಿ ಪ್ರಗತಿ ಮಾಡೋಕೆ ಯಾವ ವಿಷ್ಯನ, ಯಾವಾಗ ಹೇಳಬೇಕು ಅಂತ ನೀವು ಚೆನ್ನಾಗಿ ಯೋಚ್ನೆ ಮಾಡಬೇಕು. ಅವನು ಅರ್ಥ ಮಾಡ್ಕೊಳ್ಳೋಕೆ ಯಾವಾಗ ಸಾಧ್ಯ ಆಗುತ್ತೋ ಅವಾಗ ಅದನ್ನ ಕಲಿಸಬೇಕು.—ಜ್ಞಾನೋಕ್ತಿ 25:11 ಓದಿ.
ನಾವು ಸತ್ಯ ಕಲಿಸುವಾಗ ಯೇಸು ತರ ಯಾವಾಗ ಹೇಳಬೇಕು ಮತ್ತು ಎಷ್ಟು ವಿಷ್ಯ ಹೇಳ್ಬೇಕು ಅಂತ ಯೋಚಿಸಬೇಕು (ಪ್ಯಾರ 15 ನೋಡಿ)
16. “ಸತ್ಯಕ್ಕೆ ತಕ್ಕ ಹಾಗೆ” ನಡಿಯೋಕೆ ನಿಮ್ಮ ವಿದ್ಯಾರ್ಥಿಗಳಿಗೆ ನೀವು ಹೇಗೆ ಸಹಾಯ ಮಾಡಬಹುದು?
16 ಯೆಹೋವ ದೇವರ ಬಗ್ಗೆ ಬೇರೆಯವ್ರಿಗೆ ಸತ್ಯ ಕಲಿಸುವಾಗ ಸಿಗೋ ಸಂತೋಷದ ಮುಂದೆ ಬೇರೆ ಯಾವುದನ್ನೂ ಹೋಲಿಸೋಕೆ ಆಗಲ್ಲ. ನಿಮ್ಮ ವಿದ್ಯಾರ್ಥಿಗಳು ಯಾವಾಗ್ಲೂ ಸತ್ಯದಲ್ಲೇ ನಡೀತಾ ಇರಬೇಕು ಅಂತ ನೀವು ಬಯಸೋದಾದ್ರೆ ಕೆಲವು ವಿಷ್ಯಗಳನ್ನ ಮಾಡ್ಬೇಕು. ಅವ್ರಿಗೆ ನೀವು ಒಂದು ಒಳ್ಳೆ ಮಾದರಿಯಾಗಿ ಇರಬೇಕು. (3 ಯೋಹಾ. 3, 4) ದೇವರ ವಾಕ್ಯದಲ್ಲಿರೋ ಮಾತುಗಳನ್ನ ನೀವು ನಂಬ್ತಿದ್ದೀರ ಅಂತ ನಿಮ್ಮ ಜೀವನದಲ್ಲಿ ತೋರಿಸಬೇಕು. ನೀವು ಯಾವಾಗ್ಲೂ ಒಳ್ಳೆ ಉದ್ದೇಶದಿಂದ ಸತ್ಯನೇ ಹೇಳಬೇಕು. ನಿಮ್ಮ ಮಾತು ಮಧುರವಾಗಿ, ಮೃದುವಾಗಿರಬೇಕು. ನೀವು ಸತ್ಯವನ್ನ ದಯೆಯಿಂದ, ಸರಿಯಾಗಿರೋ ಸಮಯದಲ್ಲಿ ಹೇಳಬೇಕು. ನಿಮಗೆ ಯಾವುದೇ ಗೌರವ, ಮಹಿಮೆ ಸಿಗಲಿ ಅದನ್ನೆಲ್ಲಾ ಯೆಹೋವನಿಗೆ ಕೊಡಬೇಕು. ನೀವು ಇದನ್ನೆಲ್ಲಾ ಮಾಡ್ತಿದ್ರೆ, ಸತ್ಯದ ದೇವರಾಗಿರೋ ಯೆಹೋವನ ಸಾಕ್ಷಿ ಅಂತ ತೋರಿಸ್ತೀರ.
ಗೀತೆ 160 ಸಿಹಿ ಸಂದೇಶ!
a ಚಿತ್ರ ವಿವರಣೆ: ಮೊದಲನೇ ಚಿತ್ರದಲ್ಲಿ, ಸಹೋದರ ಮನೆಯವರು ಇಟ್ಟಿರೋ ಕ್ರಿಸ್ಮಸ್ ಟ್ರೀ ನೋಡಿ ಕ್ರಿಸ್ಮಸ್ ಎಲ್ಲಿಂದ ಬಂತು ಅನ್ನೋದಕ್ಕೆ ಸಹಾಯ ಮಾಡೋ ಲೇಖನ ತೋರಿಸ್ತಿದ್ದಾರೆ. ಎರಡನೇ ಚಿತ್ರದಲ್ಲಿ, ಸಹೋದರ ಮನೆಯವನಿಗೆ ಅಪ್ಪಂದಿರಿಗೆ ಇರೋ ಕೆಲವು ಪ್ರಾಯೋಗಿಕ ಸಲಹೆಗಳಿರೋ ಒಂದು ಲೇಖನ ತೋರಿಸ್ತಿದ್ದಾರೆ. ಈ ಎರಡ್ರಲ್ಲಿ ಯಾವುದನ್ನ ತೋರಿಸಿದ್ರೆ ಹೆಚ್ಚು ಪ್ರಯೋಜನ ಆಗುತ್ತೆ?