ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜನವರಿ ಪು. 8-13
  • ಕುಗ್ಗಿ ಹೋದಾಗ ಕೈ ಹಿಡಿತಾನೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಗ್ಗಿ ಹೋದಾಗ ಕೈ ಹಿಡಿತಾನೆ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪೌಲ ಯಾಕೆ ಕುಗ್ಗಿ ಹೋಗ್ತಿದ್ದ?
  • ತಪ್ಪಾದ ಯೋಚ್ನೆಗಳ ವಿರುದ್ಧ ಹೋರಾಡೋಕೆ ಪೌಲ ಏನು ಮಾಡಿದ?
  • ತಪ್ಪಾದ ಯೋಚ್ನೆ ವಿರುದ್ಧ ಹೋರಾಡೋಕೆ ನಾವೇನು ಮಾಡಬೇಕು?
  • ಯೆಹೋವ ನಿಮ್ಮ ಕೈಯನ್ನೂ ಹಿಡಿತಾನೆ!
  • ನಕಾರಾತ್ಮಕ ಭಾವನೆಗಳ ವಿರುದ್ಧ ಹೇಗೆ ಹೋರಾಡಬಲ್ಲಿರಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಸೇವೆಲಿ ಖುಷಿ ಪಡ್ಕೊಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೆಹೋವ “ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜನವರಿ ಪು. 8-13

ಮಾರ್ಚ್‌ 9-15, 2026

ಗೀತೆ 45 ನನ್ನ ಹೃದಯದ ಧ್ಯಾನ

ಕುಗ್ಗಿ ಹೋದಾಗ ಕೈ ಹಿಡಿತಾನೆ!

“ಛೆ! ನಂಗೆ ಎಂಥ ಗತಿ ಬಂತು!”—ರೋಮ. 7:24.

ಈ ಲೇಖನದಲ್ಲಿ ಏನಿದೆ?

ನಾವು ಕುಗ್ಗಿ ಹೋದಾಗ ಅಥವಾ ನಮಗೆ ತಪ್ಪಾದ ಯೋಚ್ನೆಗಳು ಬಂದಾಗ ಯೆಹೋವ ಹೇಗೆ ಸಹಾಯ ಮಾಡ್ತಾನೆ? ಆಗ ನಾವೇನು ಮಾಡಬೇಕು ಅಂತ ನೋಡೋಣ.

1-2. (ಎ) ಪೌಲನಿಗೆ ಒಂದೊಂದು ಸಲ ಹೇಗನಿಸ್ತಿತ್ತು? (ಬಿ) ನಮ್ಮ ಪರಿಸ್ಥಿತಿನೂ ಪೌಲನ ತರಾನೇ ಇದೆ ಅಂತ ಯಾಕೆ ಹೇಳಬಹುದು? (ರೋಮನ್ನರಿಗೆ 7:21-24)

ಅಪೊಸ್ತಲ ಪೌಲ ಅಂದ ತಕ್ಷಣ ನಿಮ್ಮ ಮನಸ್ಸಿಗೆ ಏನು ನೆನಪಿಗೆ ಬರುತ್ತೆ? ಅವನು ಧೈರ್ಯಶಾಲಿ ಮಿಷನರಿ ಆಗಿದ್ದ, ನಿಪುಣ ಬೋಧಕನಾಗಿದ್ದ ಅಥವಾ ಬೆಸ್ಟ್‌ ಬೈಬಲ್‌ ಬರಹಗಾರ ಆಗಿದ್ದ ಅಂತ ನೆನಪಾಗಬಹುದು. ಆದ್ರೆ ನಿಮಗೆ ಗೊತ್ತಾ? ಅವನು ನಮ್ಮ ತರಾನೇ ಆಗಾಗ ಕುಗ್ಗಿ ಹೋಗ್ತಿದ್ದ, ನೋವಲ್ಲಿ ಮುಳುಗಿ ಹೋಗ್ತಿದ್ದ. ಕೆಲವೊಮ್ಮೆ ಅವನನ್ನ ತಪ್ಪಾದ ಯೋಚ್ನೆಗಳು ಕಿತ್ತು ತಿಂತಿತ್ತು.

2 ರೋಮನ್ನರಿಗೆ 7:21-24 ಓದಿ. ಪೌಲ ರೋಮನ್ನರಿಗೆ ಬರೆದ ಪತ್ರನ ನೋಡಿದ್ರೆ, ‘ಅವನಿಗೂ ನಮ್ಮ ತರಾನೇ ಅನಿಸಿದೆ’ ಅಂತ ಗೊತ್ತಾಗುತ್ತೆ. ಪೌಲ ನಂಬಿಗಸ್ತನಾಗಿ ಸೇವೆ ಮಾಡ್ತಿದ್ದ. ಆದ್ರೂ ಅವನ ಮನಸ್ಸಲ್ಲೂ ಒಂದು ದೊಡ್ಡ ಯುದ್ಧ ನಡೀತಿತ್ತು. ಒಂದು ಕಡೆ ಅವನಿಗೆ ದೇವರಿಗೆ ಏನು ಇಷ್ಟಾನೋ ಅದನ್ನೇ ಮಾಡಬೇಕು ಅಂತ ಅನಿಸ್ತಿತ್ತು. ಇನ್ನೊಂದು ಕಡೆ ಅವನಲ್ಲಿದ್ದ ಪಾಪ, ತಪ್ಪುಗಳನ್ನ ಮಾಡೋಕೆ ಅವನನ್ನ ಒತ್ತಾಯ ಮಾಡ್ತಿತ್ತು. ಇದೆಲ್ಲದ್ರ ಜೊತೆಗೆ ಅವನು ಹಿಂದೆ ಮಾಡಿದ್ದ ತಪ್ಪುಗಳನೆಲ್ಲ ಆಗಾಗ ನೆನಸ್ಕೊಳ್ತಿದ್ದ. ಅಷ್ಟೇ ಅಲ್ಲ, ಅವನಿಗೆ ಬೇರೆಬೇರೆ ಸಮಸ್ಯೆಗಳಿತ್ತು. ಅವನು ಅದ್ರ ವಿರುದ್ಧನೂ ಹೋರಾಡಬೇಕಿತ್ತು. ಈ ಎಲ್ಲ ಕಾರಣಗಳಿಂದಾಗಿ ಅವನು ಕುಗ್ಗಿ ಹೋಗಿದ್ದ.

3. ಈ ಲೇಖನದಲ್ಲಿ ನಾವೇನು ಕಲಿತೀವಿ? (“ಪದ ವಿವರಣೆ” ನೋಡಿ.)

3 ಪೌಲನ ಹೃದಯದಲ್ಲಿ ಒಂದು ದೊಡ್ಡ ಯುದ್ಧನೇ ನಡೀತಿದ್ರೂ, ಅವನು ಆ ತಪ್ಪಾದ ಯೋಚ್ನೆಗಳಲ್ಲೇa ಮುಳುಗಿ ಹೋಗಲಿಲ್ಲ. ಅದ್ರ ವಿರುದ್ಧ ಹೋರಾಡೋಕೆ ತುಂಬ ಪ್ರಯತ್ನ ಹಾಕಿದ. ಅದಕ್ಕೆ ಈ ಲೇಖನದಲ್ಲಿ ನಾವು ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯೋಣ. “ನನಗೆ ಎಂಥ ಗತಿ ಬಂತು” ಅಂತ ಪೌಲ ಯಾಕೆ ಹೇಳಿದ? ತಪ್ಪಾದ ಯೋಚ್ನೆಗಳ ವಿರುದ್ಧ ಹೋರಾಡೋಕೆ ಪೌಲ ಏನು ಮಾಡಿದ? ನಾವು ತಪ್ಪಾದ ಯೋಚ್ನೆಗಳ ವಿರುದ್ಧ ಹೋರಾಡೋಕೆ ಏನು ಮಾಡಬೇಕು? ಅಂತ ನೋಡೋಣ.

ಪೌಲ ಯಾಕೆ ಕುಗ್ಗಿ ಹೋಗ್ತಿದ್ದ?

4. ಪೌಲ ಹಿಂದೆ ಯಾವೆಲ್ಲ ತಪ್ಪುಗಳನ್ನ ಮಾಡಿದ್ದ?

4 ಹಿಂದೆ ಅವನು ಮಾಡಿದ ಪಾಪ. ಪೌಲ ಕ್ರೈಸ್ತನಾಗೋ ಮುಂಚೆ ಅವನನ್ನ ಸೌಲ ಅಂತ ಕರೀತಿದ್ರು. ಆಗ ಅವನು ಒಂದೆರಡಲ್ಲ ಎಷ್ಟೋ ತಪ್ಪುಗಳನ್ನ ಮಾಡಿದ್ದ. ಉದಾಹರಣೆಗೆ, ಸ್ತೆಫನ ಅನ್ನೋ ನಂಬಿಗಸ್ತ ವ್ಯಕ್ತಿನ ಕಲ್ಲೆಸೆದು ಕೊಲ್ಲುವಾಗ ಅವರು ಮಾಡ್ತಿರೋದು ಸರಿ ಅನ್ನೋ ತರ ಸಮರ್ಥಿಸ್ತಾ ಅದನ್ನ ನಿಂತ್ಕೊಂಡು ನೋಡ್ತಿದ್ದ. (ಅ. ಕಾ. 7:58; 8:1) ಅಷ್ಟೇ ಅಲ್ಲ, ಕ್ರೈಸ್ತರೆಲ್ಲರಿಗೆ ಹಿಂಸೆ ಕೊಡಬೇಕು, ಅವ್ರಿಗೆ ತೊಂದರೆ ಕೊಡಬೇಕು ಅಂತ ಇವನು ಪಣತೊಟ್ಟಿದ್ದ.—ಅ. ಕಾ. 8:3; 26:9-11.

5. ಹಿಂದೆ ಮಾಡಿದ್ದ ತಪ್ಪುಗಳನ್ನ ನೆನಸ್ಕೊಂಡಾಗ ಪೌಲನಿಗೆ ಹೇಗೆ ಅನಿಸ್ತಿತ್ತು?

5 ಪೌಲ ಕ್ರೈಸ್ತನಾದ ಮೇಲೂ ಅವನು ಹಿಂದೆ ಮಾಡಿದ್ದ ತಪ್ಪುಗಳು ಅವನನ್ನ ಕುಗ್ಗಿಸ್ತಿತ್ತು. ಅವನು ಕ್ರೈಸ್ತರಿಗೆ ಚಿತ್ರಹಿಂಸೆ ಕೊಟ್ಟಿದ್ದ. ವರ್ಷಗಳು ಕಳಿತಾ ಅವನಲ್ಲಿ ಆ ನೋವು ಇನ್ನು ಜಾಸ್ತಿ ಆಗ್ತಾ ಹೋಯ್ತು. ಉದಾಹರಣೆಗೆ, ಅವನು ಕೊರಿಂಥದವರಿಗೆ ಕ್ರಿ. ಶ. 55ರಲ್ಲಿ ಮೊದಲನೇ ಪತ್ರ ಬರೆದಾಗ, “ದೇವರ ಸಭೆಗೆ ಹಿಂಸೆ ಕೊಟ್ಟ ನನಗೆ ಅಪೊಸ್ತಲ ಅಂತ ಕರೆಸಿಕೊಳ್ಳೋ ಯೋಗ್ಯತೆ ಇಲ್ಲ” ಅಂತ ಹೇಳಿದ. (1 ಕೊರಿಂ. 15:9) ಸುಮಾರು ಐದು ವರ್ಷಗಳು ಆದ್ಮೇಲೆ ಅವನು ಎಫೆಸದವರಿಗೆ ಪತ್ರ ಬರೆದ. ಆಗ ಅವನ ಬಗ್ಗೆ “ನಾನಂತೂ ಎಲ್ಲ ಪವಿತ್ರ ಜನ್ರಲ್ಲಿ ಲೆಕ್ಕಕ್ಕಿಲ್ಲದ ವ್ಯಕ್ತಿ” ಅಂತ ಹೇಳಿದ. (ಎಫೆ. 3:8) ತಿಮೊತಿಗೆ ಪತ್ರ ಬರೀತಿದ್ದಾಗ ಅವನು “ಮೊದ್ಲು ನಾನು ದೇವರದ್ದೇ ತಪ್ಪು ಅಂತ ಹೇಳ್ತಿದ್ದೆ, ದೇವಜನ್ರಿಗೆ ಹಿಂಸೆ ಕೊಡ್ತಿದ್ದೆ, ದುರಹಂಕಾರಿ ಆಗಿದ್ದೆ” ಅಂತ ತನ್ನ ನೋವನ್ನ ಹೇಳ್ಕೊಂಡ. (1 ತಿಮೊ. 1:13) ಪೌಲ ಈ ಮಾತನ್ನೆಲ್ಲ ಹೇಳ್ಕೊಂಡಿದ್ದಾನೆ ಅಂದ್ರೆ ಅವನಿಗೆ ಹೇಗೆ ಅನಿಸಿರಬೇಕು ಅಂತ ಯೋಚ್ನೆ ಮಾಡಿ. ಅವನು ಈ ಹಿಂದೆ ಯಾರಿಗೆಲ್ಲಾ ಹಿಂಸೆ ಕೊಟ್ಟಿದ್ನೋ ಅವ್ರ ಸಭೆಗಳಿಗೆ ಹೋಗಬೇಕಾದ ಸಂದರ್ಭ ಇರ್ತಿತ್ತು. ಅಲ್ಲಿ ಅವ್ರನ್ನ ಮತ್ತು ಅವ್ರ ಕುಟುಂಬದವ್ರನ್ನ ನೋಡಿದಾಗ ಅವನಿಗೆ ಎಷ್ಟು ಬೇಜಾರಾಗಿರಬೇಕಲ್ವಾ?

6. ಪೌಲ ಕುಗ್ಗಿ ಹೋಗೋಕೆ ಇನ್ಯಾವ ಕಾರಣ ಇತ್ತು? (ಪಾದಟಿಪ್ಪಣಿ ನೋಡಿ.)

6 ದೇಹದಲ್ಲಿ ಒಂದು ಮುಳ್ಳು. ಪೌಲ ತನಗೆ ಆಗ್ತಿದ್ದ ನೋವನ್ನ ‘ದೇಹಕ್ಕೆ ಚುಚ್ಚುವ ಒಂದು ಮುಳ್ಳಿಗೆ’ ಹೋಲಿಸಿದ. (2 ಕೊರಿಂ. 12:7) ಹಾಗಾದ್ರೆ ಪೌಲನಿಗೆ ಯಾವ ಕಾರಣದಿಂದ ಈ ನೋವಾಗ್ತಿತ್ತು? ಅದು ನಮಗೆ ಗೊತ್ತಿಲ್ಲ. ಅವನಿಗೆ ಆರೋಗ್ಯ ಸಮಸ್ಯೆ ಇದ್ದಿರಬಹುದು, ಖಿನ್ನತೆ ಕಾಡ್ತಿದ್ದಿರಬಹುದು ಅಥವಾ ಬೇರೆ ಯಾವುದಾದ್ರೂ ಕಾರಣದಿಂದ ಅವನಿಗೆ ಈ ನೋವು ಇದ್ದಿರಬಹುದು.b

7. ಯಾವಾಗ್ಲೂ ಒಳ್ಳೆದೇ ಮಾಡೋಕೆ ಪೌಲನಿಗೆ ಯಾಕೆ ಆಗ್ತಿರಲಿಲ್ಲ? (ರೋಮನ್ನರಿಗೆ 7:18, 19)

7 ತನ್ನಲ್ಲಿದ್ದ ಪಾಪ. ಪೌಲ ಕೆಲವು ತಪ್ಪುಗಳನ್ನ ಮಾಡಿದ್ದ. (ರೋಮನ್ನರಿಗೆ 7:18, 19 ಓದಿ.) ಅದನ್ನ ನೆನಸ್ಕೊಂಡು ಕುಗ್ಗಿ ಹೋಗ್ತಾ ಇದ್ದ. ಮತ್ತೆ ಅದನ್ನ ಮಾಡಬಾರದು ಅಂತ ಎಷ್ಟೇ ಪ್ರಯತ್ನ ಮಾಡಿದ್ರೂ ಅವನು ಸೋತು ಹೋಗ್ತಿದ್ದ. ‘ನಾನು ಒಳ್ಳೇದು ಮಾಡಬೇಕು ಅಂದ್ಕೊಂಡ್ರೂ ಒಳ್ಳೇದು ಮಾಡೋಕೆ ಆಗ್ತಿಲ್ಲ. ಕೆಟ್ಟದನ್ನ ಮಾಡಬಾರದು ಅಂದ್ಕೊಂಡ್ರೂ ಅದನ್ನೇ ಮಾಡ್ತಿದ್ದೀನಿ. ಅದಕ್ಕೆ ನಾನು ಹೋರಾಟ ಮಾಡಿ-ಮಾಡಿ ಸೋತು ಹೋಗಿದ್ದೀನಿ’ ಅಂತ ಹೇಳಿದ. (1 ಕೊರಿಂ. 9:27) ನೋಡಿದ್ರಾ? ಅವನು ಅಂದ್ಕೊಳ್ತಿದಿದ್ದು ಒಂದು ಆದ್ರೆ ಅವನು ಮಾಡ್ತಿದಿದ್ದೇ ಇನ್ನೊಂದು. ಛೆ, ಅವನು ಎಂಥ ಪರಿಸ್ಥಿತಿಯಲ್ಲಿದ್ದ ಅಲ್ವಾ?

ತಪ್ಪಾದ ಯೋಚ್ನೆಗಳ ವಿರುದ್ಧ ಹೋರಾಡೋಕೆ ಪೌಲ ಏನು ಮಾಡಿದ?

8. ತನ್ನಲ್ಲಿದ್ದ ಪಾಪದ ವಿರುದ್ಧ ಹೋರಾಡೋಕೆ ಪೌಲ ಏನೆಲ್ಲಾ ಮಾಡಿದ್ದ ಅಂತ ಗೊತ್ತಾಗುತ್ತೆ?

8 ಪೌಲನ ಪತ್ರಗಳನ್ನ ನೋಡಿದ್ರೆ ನಮಗೊಂದು ವಿಷ್ಯ ಗೊತ್ತಾಗುತ್ತೆ. ತಪ್ಪಾದ ಆಸೆಗಳ ವಿರುದ್ಧ ಹೋರಾಡೋಕೆ ಮತ್ತು ಬದಲಾವಣೆ ಮಾಡ್ಕೊಳ್ಳೋಕೆ ಪವಿತ್ರಶಕ್ತಿ ಹೇಗೆ ಸಹಾಯ ಮಾಡುತ್ತೆ ಅಂತ ಪೌಲ ಚೆನ್ನಾಗಿ ಯೋಚಿಸಿದ. (ರೋಮ. 8:13; ಗಲಾ. 5:16, 17) ಅದಕ್ಕೆ ಪೌಲ ತನ್ನ ಪತ್ರಗಳಲ್ಲಿ ಪದೇ-ಪದೇ ಕ್ರೈಸ್ತರು ಯಾವ ಕೆಲಸಗಳಿಂದ, ಯಾವ ಆಸೆಗಳಿಂದ ದೂರ ಇರಬೇಕು ಅನ್ನೋದನ್ನ ಹೇಳಿದ್ದಾನೆ. (ಗಲಾ. 5:19-21, 26) ಅವನು ಇದನ್ನೆಲ್ಲಾ ಹೇಳಿದ್ದಾನೆ ಅಂದ್ರೆ ಖಂಡಿತ ತನ್ನಲ್ಲಿದ್ದ ಬಲಹೀನತೆ ಬಗ್ಗೆ ಅವನು ಚೆನ್ನಾಗಿ ಯೋಚ್ನೆ ಮಾಡಿದ್ದ ಅಂತ ಗೊತ್ತಾಗುತ್ತೆ. ಅದ್ರ ವಿರುದ್ಧ ಹೋರಾಡೋಕೆ ದೇವರ ವಾಕ್ಯದಲ್ಲಿ ಸಲಹೆಗಳನ್ನ ಹುಡುಕಿದ ಮತ್ತು ಅದನ್ನ ಪಾಲಿಸಿದ ಅಂತ ಗೊತ್ತಾಗುತ್ತೆ. ಅವನು ಬೇರೆಯವ್ರಿಗೆ ಈ ವಿಷ್ಯಗಳನ್ನ ಬೋಧಿಸಿದ್ದಾನೆ ಅಂದ್ರೆ ಖಂಡಿತ ಅವನೂ ಪಾಲಿಸಿರ್ತಾನೆ ಅಂತ ನಾವು ನಂಬಬಹುದು.

9-10. ಪೌಲ ತಪ್ಪಾದ ಯೋಚ್ನೆಗಳ ವಿರುದ್ಧ ಹೋರಾಡಿ ಗೆಲ್ಲೋಕೆ ಅವನಿಗೆ ಯಾವುದೆಲ್ಲ ಸಹಾಯ ಮಾಡ್ತು? (ಎಫೆಸ 1:7) (ಚಿತ್ರ ನೋಡಿ.)

9 ಪೌಲ ಕೆಲವೊಮ್ಮೆ ಕುಗ್ಗಿ ಹೋಗ್ತಿದ್ದ ನಿಜ. ಆದ್ರೆ ಅದೇ ಸಮಯದಲ್ಲಿ ಅವನು ಖುಷಿಯಾಗಿ ಕೂಡ ಇರ್ತಿದ್ದ. ಉದಾಹರಣೆಗೆ, ತನ್ನ ಜೊತೆ ಪ್ರಯಾಣ ಮಾಡಿದವರು ಬೇರೆಬೇರೆ ಸಭೆಗಳ ಬಗ್ಗೆ ಒಳ್ಳೆ ವರದಿಗಳನ್ನ ಕೊಟ್ಟಾಗ ಅವನು ಅದನ್ನ ಕೇಳಿಸ್ಕೊಂಡು ಖುಷಿಪಡ್ತಿದ್ದ. (2 ಕೊರಿಂ. 7:6, 7) ತನ್ನ ಜೊತೆ ಸೇವಕರೊಟ್ಟಿಗೆ ಅವನಿಗಿದ್ದ ಸ್ನೇಹದಿಂದ ಕೂಡ ಅವನು ಖುಷಿಯಾಗಿದ್ದ. (2 ತಿಮೊ. 1:4) ಅವನು ಮಾಡ್ತಿರೋ ಸೇವೆನ ನೋಡಿ ಯೆಹೋವನು ಅವನನ್ನ ಮೆಚ್ಕೊಂಡಿದ್ದಾನೆ ಅಂತ ಅವನಿಗೆ ಅರ್ಥ ಆಗಿತ್ತು. ಅದಕ್ಕೆ ಪೌಲ “ಶುದ್ಧ ಮನಸ್ಸಾಕ್ಷಿಯಿಂದ” ದೇವರಿಗೆ ನಾನು ಪವಿತ್ರ ಸೇವೆ ಮಾಡ್ತಿದ್ದೀನಿ ಅಂತ ಹೇಳಿ ಸಂತೋಷಪಟ್ಟ. (2 ತಿಮೊ. 1:3) ಅವನು ರೋಮ್‌ನಲ್ಲಿ ಸೆರೆಮನೆಯಲ್ಲಿದ್ದಾಗ ತನ್ನ ಜೊತೆ ಸೇವಕರಿಗೆ “ಒಡೆಯನಿಂದಾಗಿ ಯಾವಾಗ್ಲೂ ಖುಷಿಯಾಗಿರಿ” ಅಂತ ಹೇಳಿದ. (ಫಿಲಿ. 4:4) ಇದನ್ನೆಲ್ಲಾ ನೋಡಿದ್ರೆ ಅವನು ಮೂರು ಹೊತ್ತು ತನ್ನನ್ನ ಕುಗ್ಗಿಸೋ ವಿಷ್ಯಗಳ ಬಗ್ಗೆನೇ ಯೋಚ್ನೆ ಮಾಡ್ತಿರಲಿಲ್ಲ ಅಂತ ನಮಗೆ ಗೊತ್ತಾಗುತ್ತೆ. ನಿಜ, ಅವನಿಗೆ ಯಾವಾಗೆಲ್ಲ ತಪ್ಪಾದ ಆಲೋಚನೆಗಳು ಬಂತೋ ಆಗೆಲ್ಲ ಅದ್ರ ವಿರುದ್ಧ ಹೋರಾಡಿ ಮತ್ತೆ ಖುಷಿಯಾಗಿರೋಕೆ ತನ್ನ ಕೈಲಾದ ಎಲ್ಲ ಪ್ರಯತ್ನ ಮಾಡ್ತಿದ್ದ.

10 ಯೆಹೋವನು ಬಿಡುಗಡೆ ಬೆಲೆನ ‘ನನಗೋಸ್ಕರ ಕೊಟ್ಟಿದ್ದಾನೆ’ ಅಂತ ಪೌಲ ನಂಬಿದ. ಅದಕ್ಕೆ ತಪ್ಪಾದ ಯೋಚ್ನೆಗಳಿಂದ ಹೊರಗೆ ಬಂದ. (ಗಲಾ. 2:20; ಎಫೆಸ 1:7 ಓದಿ.) ಅವನು ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಟ್ಟಿದ್ರಿಂದ ‘ಯೆಹೋವನು ಖಂಡಿತ ಯೇಸುವಿನ ಮೂಲಕ ನನ್ನನ್ನ ಕ್ಷಮಿಸ್ತಾನೆ’ ಅನ್ನೋ ಭರವಸೆಯಿಂದ ಇದ್ದ. (ರೋಮ. 7:24, 25) ಹಿಂದೆ ಅವನು ತಪ್ಪು ಮಾಡಿದ್ರೂ, ಈಗ ಅವನಲ್ಲಿ ಪಾಪ ಇದ್ರೂ “ದೇವ್ರಿಗೆ ಪವಿತ್ರ ಸೇವೆ” ಮಾಡ್ತಾ, ಖುಷಿ-ಖುಷಿಯಿಂದ ಇದ್ದ.—ಇಬ್ರಿ. 9:12-14.

ಚಿತ್ರ: 1. ಅಪೊಸ್ತಲ ಪೌಲ ಯೋಚ್ನೆ ಮಾಡ್ತಾ ಇದ್ದಾನೆ. 2. ವರ್ಷಗಳ ಹಿಂದೆ ಒಬ್ಬ ಕ್ರೈಸ್ತ ವ್ಯಕ್ತಿಯನ್ನ ಮನೆಯಿಂದ ಹೊರ ಹಾಕೋಕೆ ಅಧಿಕಾರಿಗೆ ಹೇಳಿದ್ದನ್ನ ನೆನಪಿಸ್ಕೊಳ್ತಿದ್ದಾನೆ. 3. ಯೇಸು ಹಿಂಸಾ ಕಂಬದ ಮೇಲೆ ಸತ್ತಿದ್ರ ಬಗ್ಗೆ ಯೋಚ್ನೆ ಮಾಡ್ತಿದ್ದಾನೆ.

ಹಿಂದೆ ಮಾಡಿದ ತಪ್ಪುಗಳನ್ನ ನೆನಪಿಸ್ಕೊಂಡಾಗ ಪೌಲನಿಗೆ ಬೇಜಾರಾಯ್ತು. ಆದ್ರೆ ಬಿಡುಗಡೆ ಬೆಲೆ ಬಗ್ಗೆ ಯೋಚ್ನೆ ಮಾಡಿದಾಗ ಸಮಾಧಾನ ಆಯ್ತು (ಪ್ಯಾರ 9-10 ನೋಡಿ)


11. ಪೌಲನ ಉದಾಹರಣೆ ನೋಡಿದ್ರೆ ನಮಗೆ ಯಾಕೆ ಸಮಾಧಾನ ಆಗುತ್ತೆ?

11 ನಮ್ಮ ಪರಿಸ್ಥಿತಿನೂ ಪೌಲನ ತರಾನೇ ಇದೆ. ಎಷ್ಟೋ ಸಲ ‘ಈ ತರ ಯೋಚ್ನೆ ಮಾಡಬಾರದು, ಈ ತರ ಮಾತಾಡಬಾರದು, ಈ ತರ ನಡ್ಕೋಬಾರದು’ ಅಂತ ಅಂದ್ಕೊಳ್ತೀವಿ. ಆದ್ರೆ ಪದೇಪದೇ ಅದನ್ನೇ ಮಾಡ್ತೀವಿ. ಹಾಗೆಲ್ಲ ನಮಗೆ ‘ಛೆ, ನಾನು ಯಾಕೆ ಯಾವಾಗ್ಲೂ ತಪ್ಪೇ ಮಾಡ್ತೀನಿ’ ಅಂತ ಅನಿಸಿಬಿಡುತ್ತೆ. ಆದ್ರೆ 26 ವರ್ಷದ ಸಹೋದರಿ ಎಲಿಜ಼ಾಗೆc ಏನು ಸಹಾಯ ಮಾಡ್ತು ಅಂತ ನೋಡಿ, “ಪೌಲನ ಪರಿಸ್ಥಿತಿ ಬಗ್ಗೆ ಓದಿದೆ. ಆಗ ಪೌಲನಿಗೂ ನನ್ನ ತರನೇ ಕಷ್ಟ ಇತ್ತು ಅಂತ ಕೇಳಿ ಸಮಾಧಾನ ಆಯ್ತು. ಅಷ್ಟೇ ಅಲ್ಲ, ಯೆಹೋವನಿಗೆ ತನ್ನ ಜನ್ರ ಮನಸ್ಸಲ್ಲಿ ಏನೆಲ್ಲಾ ಓಡ್ತಿದೆ ಅನ್ನೋದೂ ಚೆನ್ನಾಗಿ ಗೊತ್ತಿದೆ ಅಂತ ಅರ್ಥ ಆಯ್ತು.” ನೋಡಿದ್ರಾ? ನಾವು ಕುಗ್ಗಿ ಹೋಗ್ತಾ ಇದ್ರೂ ಪೌಲನ ತರ ಯೆಹೋವನನ್ನ ಮೆಚ್ಚಿಸಬಹುದು. ಜೊತೆಗೆ ಖುಷಿ-ಖುಷಿಯಾಗಿ ಇರಬಹುದು. ಅದಕ್ಕೆ ಏನು ಮಾಡಬೇಕು ಅಂತ ನೋಡೋಣ.

ತಪ್ಪಾದ ಯೋಚ್ನೆ ವಿರುದ್ಧ ಹೋರಾಡೋಕೆ ನಾವೇನು ಮಾಡಬೇಕು?

12. ನಾವು ಯಾವಾಗ್ಲೂ ಖುಷಿಯಾಗಿ ಇರಬೇಕಾದ್ರೆ ಬಿಡದೇ ಏನೆಲ್ಲಾ ಮಾಡಬೇಕು?

12 ಯೆಹೋವನಿಗೆ ಹತ್ರ ಆಗೋಕೆ ಸಹಾಯ ಮಾಡೋ ರೂಢಿಗಳನ್ನ ಬೆಳೆಸ್ಕೊಳ್ಳಿ. ಇಂಥ ರೂಢಿಗಳನ್ನ ಬೆಳೆಸ್ಕೊಂಡ್ರೆ, ತಪ್ಪಾದ ಯೋಚ್ನೆಗಳಿಂದ ನಾವು ದೂರ ಇರ್ತೀವಿ. ನಾವು ಒಳ್ಳೆ ಆಹಾರ ತಿಂದ್ರೆ, ತಪ್ಪದೇ ವ್ಯಾಯಾಮ ಮಾಡಿದ್ರೆ ಮತ್ತು ಕಣ್ತುಂಬ ನಿದ್ದೆ ಮಾಡಿದ್ರೆ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತೆ. ಅದೇ ತರಾನೇ ನಾವು ಬಿಡದೇ ಬೈಬಲ್‌ ಓದಿದ್ರೆ, ಸಿಹಿಸುದ್ದಿ ಸಾರಿದ್ರೆ, ತಯಾರಿ ಮಾಡಿ ಕೂಟಗಳಿಗೆ ಹೋದ್ರೆ ಮತ್ತು ಉತ್ಸಾಹದಿಂದ ಉತ್ರಗಳನ್ನ ಹೇಳ್ತಿದ್ರೆ ಯೆಹೋವನ ಜೊತೆ ನಮಗಿರೋ ಸಂಬಂಧ ಇನ್ನೂ ಗಟ್ಟಿಯಾಗುತ್ತೆ. ಇಂಥ ಕೆಲಸಗಳು ತಪ್ಪಾದ ಯೋಚ್ನೆಗಳಿಂದ ದೂರ ಇರೋಕೆ ನಮಗೆ ಸಹಾಯ ಮಾಡುತ್ತೆ. ಆಗ ನಾವು ಸಂತೋಷವಾಗಿ ಇರ್ತೀವಿ.—ರೋಮ. 12:11, 12.

13-14. ಕುಗ್ಗಿ ಹೋದಾಗ್ಲೂ ತಮ್ಮ ರೂಢಿಗಳನ್ನ ಬಿಡದೇ ಇರೋದ್ರಿಂದ ಕೆಲವ್ರಿಗೆ ಹೇಗೆ ಪ್ರಯೋಜನ ಆಗಿದೆ?

13 ಜಾನ್‌ ಅವ್ರ ಅನುಭವ ನೋಡಿ. ಅವ್ರಿಗೆ 39 ವಯಸ್ಸಾದಾಗ, ಕ್ಯಾನ್ಸರ್‌ ಕಾಯಿಲೆ ಬಂತು. ಆಗ ಅವರು ಕುಗ್ಗಿ ಹೋದರು. ತಪ್ಪು ತಪ್ಪಾಗಿ ಯೋಚಿಸೋಕೆ ಶುರು ಮಾಡಿದ್ರು. ‘ನನಗೆ ಇಷ್ಟು ಚಿಕ್ಕ ವಯಸ್ಸಲ್ಲಿ ಯಾಕೆ ಇಂಥ ದೊಡ್ಡ ಕಾಯಿಲೆ ಬಂತು?’ ಅಂತ ಬೇಜಾರಾದ್ರು. ಅವ್ರ ಮಗನಿಗೆ ಆಗಿನ್ನೂ ಬರೀ ಮೂರು ವರ್ಷ ಆಗಿತ್ತಷ್ಟೇ. ಅವರು ಈ ರೀತಿ ಕುಗ್ಗಿ ಹೋಗಿದ್ದಾಗ ಯಾವುದು ಸಹಾಯ ಮಾಡ್ತು? ಅವರು ಹೀಗೆ ಹೇಳ್ತಾರೆ, “ಇಂಥ ಕಷ್ಟದಲ್ಲೂ ನಮ್ಮ ಕುಟುಂಬದವರೆಲ್ಲ ದೇವರಿಗೆ ಹತ್ರ ಆಗೋ ರೂಢಿಗಳನ್ನ ಬಿಡದೇ ಇರೋ ತರ ನಾನು ನೋಡ್ಕೊಂಡೆ. ನಾವು ಕೂಟಗಳಿಗೆ ತಪ್ಪದೇ ಹೋಗ್ತಿದ್ವಿ, ವಾರಕ್ಕೊಂದು ಸಲನಾದ್ರೂ ಸಿಹಿಸುದ್ದಿ ಸಾರ್ತಿದ್ವಿ. ತುಂಬ ಕಷ್ಟ ಆಗ್ತಿದ್ರೂ ಕುಟುಂಬ ಆರಾಧನೆ ಮಾಡೋದನ್ನ ಮಾತ್ರ ತಪ್ಪಿಸಲಿಲ್ಲ.” ಈಗ ಅವ್ರ ಆ ಪರಿಸ್ಥಿತಿ ಬಗ್ಗೆ ಯೋಚ್ನೆ ಮಾಡ್ತಾ ಜಾನ್‌ ಹೀಗೆ ಹೇಳ್ತಾರೆ, “ಮೊದಮೊದಲು ನಮಗೆ ದುಃಖ, ಕಷ್ಟ ಆಗೋದು ಸಹಜ. ಆದ್ರೆ ಯೆಹೋವ ಆದಷ್ಟು ಬೇಗ ನಮಗೆ ಬೇಕಾಗಿರೋ ಬಲ ಮತ್ತು ಪ್ರೀತಿನ ಕೊಡ್ತಾನೆ, ನನಗೂ ಕೊಟ್ಟಿದ್ದಾನೆ!”

14 ಈ ಹಿಂದೆ ಹೇಳಿದ್ದ ಎಲಿಜ಼ಾ ಹೀಗೆ ಹೇಳ್ತಾರೆ, “ಪ್ರತಿ ಸಲ ನಾನು ಕೂಟಕ್ಕೆ ಹೋದಾಗ, ವೈಯಕ್ತಿಕ ಅಧ್ಯಯನ ಮಾಡಿದಾಗ, ಯೆಹೋವ ನನ್ನ ಪ್ರಾರ್ಥನೆ ಕೇಳ್ತಿದ್ದಾನೆ, ನನ್ನನ್ನ ತುಂಬ ಪ್ರೀತಿಸ್ತಿದ್ದಾನೆ ಅಂತ ನನಗೆ ಅರ್ಥ ಆಗಿದೆ. ಇದನ್ನ ನೆನಸ್ಕೊಂಡಾಗೆಲ್ಲ ನಂಗೆ ತುಂಬ ಖುಷಿ ಆಗುತ್ತೆ.” ಆಫ್ರಿಕಾದಲ್ಲಿ ಸಂಚರಣ ಮೇಲ್ವಿಚಾರಕರಾಗಿರೋ ನೋಲನ್‌, ತನ್ನ ಮತ್ತು ತನ್ನ ಹೆಂಡ್ತಿ ಡೈನಿ ಬಗ್ಗೆ ಹೀಗೆ ಹೇಳ್ತಾರೆ, “ನಾವು ಎಷ್ಟೇ ಕುಗ್ಗಿ ಹೋಗಿದ್ರೂ ಮೀಟಿಂಗ್‌ ಹೋಗೋದನ್ನ, ಬೈಬಲ್‌ ಓದೋದನ್ನ, ಪ್ರಾರ್ಥನೆ ಮತ್ತು ಸೇವೆ ಮಾಡೋದನ್ನ ಯಾವತ್ತೂ ಬಿಟ್ಟಿಲ್ಲ. ಇವನ್ನೆಲ್ಲ ಮಾಡ್ತಿದ್ರೆ ನಾವು ಸಂತೋಷವಾಗಿ ಇರೋಕೆ, ತಪ್ಪಾದ ಯೋಚ್ನೆಗಳಿಂದ ದೂರ ಇರೋಕೆ ಯೆಹೋವ ಸಹಾಯ ಮಾಡ್ತಾನೆ. ಜೊತೆಗೆ ನಮಗೆ ಏನೇ ಕಷ್ಟ ಬರಲಿ ಯೆಹೋವ ನಮಗೆ ಸಹಾಯ ಮಾಡ್ತಾನೆ, ಆಶೀರ್ವದಿಸ್ತಾನೆ ಅಂತ ನೆನಪು ಮಾಡ್ಕೊತೀವಿ. ಆತನು ಹೇಗೆ ಸಹಾಯ ಮಾಡ್ತಾನೆ ಅಂತ ಗೊತ್ತಿಲ್ಲ, ಆದ್ರೆ ಖಂಡಿತ ಸಹಾಯ ಮಾಡ್ತಾನೆ ಅಂತ ಭರವಸೆ ಇದೆ.”

15. ತಪ್ಪಾದ ಯೋಚ್ನೆಗಳಿಂದ ನೀವು ಹೊರಬರೋಕೆ ಇನ್ನೇನು ಮಾಡಬೇಕು? ಉದಾಹರಣೆ ಕೊಡಿ.

15 ತಪ್ಪಾದ ಯೋಚ್ನೆಗಳಿಂದ ನಾವು ಹೊರಗೆ ಬರಬೇಕಂದ್ರೆ, ಬೇರೆ ಕೆಲವು ವಿಷ್ಯಗಳನ್ನ ಮಾಡಬೇಕು. ಉದಾಹರಣೆಗೆ, ನಿಮಗೆ ಬೆನ್ನು ನೋವು ಇದೆ ಅಂತ ಅಂದ್ಕೊಳ್ಳಿ. ಪ್ರತಿದಿನ ಬರೀ ಮುಲಾಮು ಹಚ್ಕೊಂಡ್ರೆ ಸಾಕಾಗುತ್ತಾ? ಇಲ್ಲ. ನಿಮಗೆ ಯಾಕೆ ನೋವು ಬರ್ತಿದೆ ಅಂತ ನೀವು ಕಂಡುಹಿಡಿಬೇಕು. ಅದ್ರ ಬಗ್ಗೆ ಒಬ್ಬ ಡಾಕ್ಟರ್‌ ಹತ್ರ ಹೋಗಿ ಮಾತಾಡಬೇಕು. ಅದೇ ತರಾನೇ ನಿಮಗೆ ಪದೇಪದೇ ತಪ್ಪಾದ ಯೋಚ್ನೆಗಳು ಬರ್ತಿದ್ರೆ ಅದ್ರ ಬಗ್ಗೆ ಬೈಬಲಿನಲ್ಲಿ, ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಬೇಕು. ಪ್ರೌಢ ಕ್ರೈಸ್ತರ ಹತ್ರ ಅದ್ರ ಬಗ್ಗೆ ಮಾತಾಡಬೇಕು. ಈ ವಿಷ್ಯದಲ್ಲಿ ನಮಗೆ ಇನ್ನೂ ಏನೆಲ್ಲ ಸಹಾಯ ಇದೆ ಅಂತ ನೋಡೋಣ ಬನ್ನಿ.

16. ನಿಮಗೆ ತಪ್ಪಾದ ಯೋಚ್ನೆಗಳು ಬರೋಕೆ ಕಾರಣ ಏನು ಅಂತ ಕಂಡುಹಿಡಿಯೋಕೆ ಯಾವುದು ಸಹಾಯ ಮಾಡುತ್ತೆ? (ಕೀರ್ತನೆ 139:1-4, 23, 24)

16 ಕುಗ್ಗಿ ಹೋಗೋಕೆ ಕಾರಣ ಏನಂತ ತಿಳ್ಕೊಳ್ಳೋಕೆ ಪ್ರಾರ್ಥನೆ ಮಾಡಿ. ಯೆಹೋವನಿಗೆ ತನ್ನ ಬಗ್ಗೆ ಚೆನ್ನಾಗಿ ಗೊತ್ತು ಅಂತ ರಾಜ ದಾವೀದ ತಿಳ್ಕೊಂಡಿದ್ದ. ಅದಕ್ಕೆ ಅವನು ‘ನನ್ನ ಕಳವಳಗಳಿಗೆ ಕಾರಣ ಏನಂತ ಕಂಡುಹಿಡಿಯೋಕೆ ಸಹಾಯ ಮಾಡು’ ಅಂತ ಯೆಹೋವನ ಹತ್ರ ಪ್ರಾರ್ಥನೆ ಮಾಡಿದ. (ಕೀರ್ತನೆ 139:1-4, 23, 24 ಓದಿ, ಪಾದಟಿಪ್ಪಣಿ.) ನೀವು ದಾವೀದನ ತರ ಪ್ರಾರ್ಥನೆ ಮಾಡಬಹುದು. ‘ನನಗೆ ತಪ್ಪಾದ ಯೋಚ್ನೆಗಳು ಬರೋಕೆ ಕಾರಣ ಏನು? ಅವುಗಳನ್ನ ಜಯಿಸೋದು ಹೇಗೆ ಅಂತ ತಿಳಿಸು’ ಅಂತ ಯೆಹೋವನ ಹತ್ರ ಕೇಳಬಹುದು. ನಿಮ್ಮನ್ನ ನೀವು ಈ ಪ್ರಶ್ನೆಗಳನ್ನ ಕೇಳ್ಕೊಬಹುದು: ‘ನನ್ನ ಚಿಂತೆಗಳಿಗೆ ಮುಖ್ಯ ಕಾರಣ ಏನು? ಯಾವ ವಿಷ್ಯಗಳು ನಾನು ಈ ರೀತಿ ತಪ್ಪಾಗಿ ಯೋಚ್ನೆ ಮಾಡೋ ತರ ಮಾಡ್ತಿದೆ? ನನಗೆ ತಪ್ಪಾದ ಯೋಚ್ನೆ ಬಂದಾಗ, ನಾನು ಅದ್ರ ಬಗ್ಗೆನೇ ಯೋಚ್ನೆ ಮಾಡ್ತಾ ಕೂರ್ತೀನಾ? ಅಥವಾ ಅದನ್ನ ಪಕ್ಕಕ್ಕೆ ಇಟ್ಟು ಬಿಡ್ತೀನಾ?’

17. ಯಾವ ವಿಷ್ಯಗಳ ಬಗ್ಗೆ ಅಧ್ಯಯನ ಮಾಡೋದಾದ್ರೆ ನಮಗೆ ಚೈತನ್ಯ ಸಿಗುತ್ತೆ? (ಚಿತ್ರ ನೋಡಿ.)

17 ನಿಮ್ಮ ಪರಿಸ್ಥಿತಿಗೆ ಅನ್ವಯಿಸೋ ವಿಷ್ಯಗಳನ್ನ ಅಧ್ಯಯನ ಮಾಡಿ. ಆಗಿಂದಾಗ್ಗೆ ಯೆಹೋವನಲ್ಲಿರೋ ಗುಣಗಳ ಬಗ್ಗೆ ಅಧ್ಯಯನ ಮಾಡೋದ್ರಿಂದ ತುಂಬ ಪ್ರಯೋಜನ ಆಗುತ್ತೆ. ಉದಾಹರಣೆಗೆ, ಅಪೊಸ್ತಲ ಪೌಲ ಬಿಡುಗಡೆ ಬೆಲೆ ಬಗ್ಗೆ, ಯೆಹೋವನ ಕ್ಷಮೆ ಬಗ್ಗೆ ಧ್ಯಾನ ಮಾಡಿದ. ನೀವೂ ಈ ವಿಷ್ಯಗಳ ಬಗ್ಗೆ ಧ್ಯಾನ ಮಾಡಬಹುದು. ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ, ವಾಚ್‌ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ ಅಥವಾ ನಿಮ್ಮ ಭಾಷೆಯಲ್ಲಿರೋ ಬೈಬಲ್‌ ಅಧ್ಯಯನ ಮಾಡೋಕೆ ಸಹಾಯ ಮಾಡೋ ಬೇರೆ ಪುಸ್ತಕಗಳನ್ನ ಬಳಸಿ ದೇವರ ಕರುಣೆ, ಕ್ಷಮೆ, ಶಾಶ್ವತ ಪ್ರೀತಿ ಅನ್ನೋ ವಿಷ್ಯಗಳ ಬಗ್ಗೆ ಸಂಶೋಧನೆ ಮಾಡಬಹುದು. ನಿಮಗೆ ಸಹಾಯ ಆಗೋ ಕೆಲವು ಲೇಖನಗಳು ಸಿಕ್ಕಾಗ ಅವುಗಳನ್ನೆಲ್ಲ ಒಂದು ಪಟ್ಟಿ ಮಾಡಿ. ಆ ಪಟ್ಟಿನ ನಿಮಗೆ ಕಾಣಿಸೋ ತರ ಒಂದು ಕಡೆ ಅಂಟಿಸಿ. ನೀವು ಯಾವಾಗೆಲ್ಲ ಕುಗ್ಗಿ ಹೋಗ್ತಿರೋ, ಆಗ ಒಂದೊಂದೇ ಲೇಖನ ಓದೋಕೆ ಶುರು ಮಾಡಿ. ನೀವು ಓದಿದ ವಿಷ್ಯನ ನಿಮ್ಮ ಪರಿಸ್ಥಿತಿಗೆ ಅನ್ವಯಿಸೋಕೆ ಪ್ರಯತ್ನ ಮಾಡಿ.—ಫಿಲಿ. 4:8.

ಒಬ್ಬ ಯುವ ಸಹೋದರ ಬೈಬಲ್‌, ಟ್ಯಾಬ್‌ ಮತ್ತು ನೋಟ್‌ಬುಕ್‌ ಬಳಸ್ತಾ ವೈಯಕ್ತಿಕ ಅಧ್ಯಯನ ಮಾಡ್ತಿದ್ದಾನೆ. ತನ್ನ ಬೈಬಲಲ್ಲಿ ಒಂದು ಟಿಪ್ಪಣಿ ಬರೀತಿದ್ದಾನೆ.

ತಪ್ಪಾದ ಯೋಚ್ನೆಗಳಿಂದ ಹೊರಬರೋಕೆ ಸಹಾಯ ಮಾಡೋ ವಿಷ್ಯಗಳ ಬಗ್ಗೆ ಅಧ್ಯಯನ ಮಾಡಿ (ಪ್ಯಾರ 17 ನೋಡಿ)


18. ಕೆಲವರು ಯಾವ ವಿಷ್ಯಗಳನ್ನ ಅಧ್ಯಯನ ಮಾಡಿದ್ದಾರೆ?

18 ಈ ಹಿಂದೆ ಹೇಳಿದ ಎಲಿಜ಼ಾ ಹೀಗೆ ಹೇಳ್ತಾರೆ, “ನನಗೆ ಒಂದಾದ ಮೇಲೆ ಒಂದು ಕಷ್ಟ ಬಂತು. ಅದಕ್ಕೆ ನಾನು ಯೋಬನ ಬಗ್ಗೆ ಅಧ್ಯಯನ ಮಾಡಿದೆ. ಅವನಿಗೂ ಎಷ್ಟೊಂದು ಸಮಸ್ಯೆಗಳು ಬಂತು. ಅವನು ತುಂಬ ಕುಗ್ಗಿ ಹೋಗಿದ್ದ. ಅವನಿಗೆ ಯಾಕೆ ಈ ಕಷ್ಟಗಳು ಬರ್ತಿದೆ ಅಂತ ಗೊತ್ತಿಲ್ಲದಿದ್ರೂ ಯೆಹೋವನ ಮೇಲೆ ಆತ್ಕೊಳ್ಳೋದನ್ನ ಮಾತ್ರ ಅವನು ಬಿಡಲಿಲ್ಲ.” (ಯೋಬ 42:1-6) ಈ ಹಿಂದೆ ಹೇಳಿದ ಸಹೋದರಿ ಡೈನಿ ಹೀಗೆ ಹೇಳ್ತಾರೆ, “ನಾನು, ನನ್ನ ಗಂಡ ಯೆಹೋವನ ಸಮೀಪಕ್ಕೆ ಬನ್ನಿರಿ ಅನ್ನೋ ಪುಸ್ತಕನ ಕುಟುಂಬವಾಗಿ ಅಧ್ಯಯನ ಮಾಡ್ತಿದ್ದೀವಿ. ಯೆಹೋವನು ನಮ್ಮ ಕುಂಬಾರ ಆಗಿದ್ದಾನೆ. ನಾವು ಆತನ ಕೈಯಲ್ಲಿ ಜೇಡಿ ಮಣ್ಣಾಗಿದ್ದೀವಿ ಅಂತ ನೆನಸ್ಕೊಂಡಾಗ ನನಗೆ ತುಂಬ ಖುಷಿಯಾಗುತ್ತೆ. ನಾನು ಏನೆಲ್ಲಾ ತಪ್ಪು ಮಾಡ್ತಿದ್ದೀನಿ ಅಂತ ಯೋಚ್ನೆ ಮಾಡಿ ಕುಗ್ಗಿ ಹೋಗಲ್ಲ. ಬದಲಿಗೆ ನನ್ನನ್ನ ಯೆಹೋವ ರೂಪಿಸ್ತಿದ್ದಾನೆ, ಪ್ರತಿದಿನ ಒಳ್ಳೆ ವ್ಯಕ್ತಿ ಆಗೋಕೆ ಸಹಾಯ ಮಾಡ್ತಿದ್ದಾನೆ ಅಂತ ನೆನಸ್ಕೊಳ್ತೀನಿ. ಇದ್ರಿಂದ ನಾನು ಆತನಿಗೆ ಇನ್ನಷ್ಟು ಹತ್ರತ್ತಿರ ಆಗ್ತಿದ್ದೀನಿ.”—ಯೆಶಾ. 64:8.

ಯೆಹೋವ ನಿಮ್ಮ ಕೈಯನ್ನೂ ಹಿಡಿತಾನೆ!

19. ನಮಗೆ ಒಳ್ಳೆ ರೂಢಿಗಳು ಇದೆ ಅಂದ ತಕ್ಷಣ ನಮ್ಮ ಕಷ್ಟಗಳೆಲ್ಲ ಮಾಯ ಆಗಿಬಿಡುತ್ತಾ?

19 ನಮಗೆ ಯೆಹೋವನಿಗೆ ಹತ್ರ ಆಗೋ ಒಳ್ಳೆ ರೂಢಿಗಳು ಇದೆ ಅಂದ ತಕ್ಷಣ ತಪ್ಪಾದ ಯೋಚ್ನೆಗಳು ಮಾಯ ಆಗಿಬಿಡುತ್ತೆ ಅಂತ ಹೇಳಕ್ಕಾಗಲ್ಲ. ಇಷ್ಟೆಲ್ಲಾ ಮಾಡಿದ್ರೂ ಕೆಲವು ದಿನಗಳು ನಾವು ಕುಗ್ಗಿ ಹೋಗಬಹುದು. ಆಗ ನಮಗೆ ‘ಛೆ, ನಾನು ಎಂಥ ಪರಿಸ್ಥಿತಿಯಲ್ಲಿ ಇದ್ದೀನಿ’ ಅಂತ ಅನಿಸಿಬಿಡುತ್ತೆ. ಆದ್ರೆ ಯೆಹೋವ ನಮಗೆ ಸಹಾಯ ಮಾಡ್ತಾನೆ ಅಂತ ನಾವು ಮರಿಬಾರದು. ನಮ್ಮಲ್ಲಿರೋ ಇಂತಹ ಭಾವನೆಗಳು ಹೋಗ್ತಾಹೋಗ್ತಾ ಕಮ್ಮಿ ಆಗುತ್ತೆ. ಹಾಗಾಗಿ ನಮಗೆ ಒಳ್ಳೇ ಮನಸಾಕ್ಷಿ ಇರುತ್ತೆ, ಯೆಹೋವ ನಮ್ಮನ್ನ ಮೆಚ್ಕೊಳ್ತಿದ್ದಾನೆ ಅನ್ನೋ ಭರವಸೆ ಇರುತ್ತೆ. ಈ ಕಾರಣದಿಂದಾಗಿ ನಾವು ಖಂಡಿತ ನಮ್ಮ ಜೀವನದ ಹೆಚ್ಚಿನ ದಿನ ಖುಷಿಯಾಗಿ ಇರ್ತೀವಿ.

20. ನಾವು ಯಾವ ನಿರ್ಧಾರ ಮಾಡಬೇಕು?

20 ನಾವು ಜೀವನದಲ್ಲಿ ಖುಷಿ-ಖುಷಿಯಾಗಿ ಇರಬೇಕು. ನಮಗಿರೋ ಕಷ್ಟಗಳಾಗ್ಲಿ, ನಮ್ಮ ಯೋಚ್ನೆಗಳಾಗ್ಲಿ, ಹಿಂದೆ ನಾವು ಮಾಡಿದ ತಪ್ಪುಗಳಾಗ್ಲಿ ನಮ್ಮ ಖುಷಿನ ಕಿತ್ಕೊಳ್ಳದೇ ಇರೋ ತರ ನೋಡ್ಕೊಬೇಕು. ಒಂದುವೇಳೆ ನಮಗೆ ಕಳವಳ ಆದ್ರೆ ಯೆಹೋವ ನಮ್ಮ ಮನಸ್ಸಿಗೆ ಸಮಾಧಾನ ಕೊಡ್ತಾನೆ ಅಂತ ನಾವು ಭರವಸೆಯಿಂದ ಇರಬೇಕು. (ಕೀರ್ತ. 143:10) ತುಂಬ ಬೇಗ ತಪ್ಪಾದ ಯೋಚ್ನೆಗಳೇ ಇಲ್ಲದಿರೋ ಒಂದು ಸಮಯ ಬರುತ್ತೆ. ಆಗ ಪ್ರತಿದಿನ ಬೆಳಿಗ್ಗೆ ನಾವು ಯಾವುದೇ ಚಿಂತೆ ಇಲ್ಲದೆ ಖುಷಿ-ಖುಷಿಯಾಗಿ ಎದ್ದೇಳ್ತೀವಿ. ನಮ್ಮ ದೇವರಾದ ಯೆಹೋವನನ್ನ ಮನಸಾರೆ ಆರಾಧಿಸ್ತೀವಿ.

ನೀವೇನು ಹೇಳ್ತೀರಾ?

  • ಅಪೊಸ್ತಲ ಪೌಲ ಕುಗ್ಗಿ ಹೋಗೋಕೆ ಕಾರಣ ಏನು?

  • ಖುಷಿಯಾಗಿ ಆರಾಧನೆ ಮಾಡೋಕೆ ಪೌಲನಿಗೆ ಯಾವುದು ಸಹಾಯ ಮಾಡ್ತು?

  • ತಪ್ಪಾದ ಯೋಚ್ನೆಗಳ ವಿರುದ್ಧ ಹೋರಾಡೋಕೆ ನಾವೇನು ಮಾಡಬೇಕು?

ಗೀತೆ 34 ನಿಯತ್ತಾಗಿ ಬಾಳೋದೇ ನನ್ನಾಸೆ

a ಪದ ವಿವರಣೆ: ಈ ಲೇಖನದಲ್ಲಿ ಬಳಸಲಾಗಿರೋ “ತಪ್ಪಾದ ಯೋಚ್ನೆಗಳು” ಅನ್ನೋ ಪದ ಆಗಾಗ ಚಿಂತೆ, ದುಃಖದಲ್ಲಿ ಮುಳುಗಿ ಹೋಗೋದಕ್ಕೆ, ಭಾವನೆಗಳಲ್ಲಿ ಆಗೋ ಏರುಪೇರನ್ನ ಸೂಚಿಸುತ್ತೆ. ಈ ಲೇಖನದಲ್ಲಿ ಡಾಕ್ಟರ್ಸ್‌ನ ಸಹಾಯ ಪಡಿತಿರೋ ಖಿನ್ನತೆ ಇರೋ ವ್ಯಕ್ತಿಗಳ ಬಗ್ಗೆ ಮಾತಾಡ್ತಿಲ್ಲ.

b ಪೌಲನ ಪತ್ರಗಳನ್ನ ನೋಡಿದ್ರೆ ಬಹುಶಃ ಅವನಿಗೆ ಕಣ್ಣಿನ ಸಮಸ್ಯೆ ಇತ್ತು ಅಂತ ಅನಿಸುತ್ತೆ. ಅದಕ್ಕೆ ಅವನಿಗೆ ಪತ್ರಗಳನ್ನ ಬರೆಯೋಕೆ, ಸಿಹಿಸುದ್ದಿ ಸಾರೋಕೆ ಕಷ್ಟ ಆಗಿದ್ದಿರಬಹುದು. (ಗಲಾ. 4:15; 6:11) ಅವನ ಪರಿಸ್ಥಿತಿಯನ್ನ ಚೆನ್ನಾಗಿ ಗಮನಿಸಿದ್ರೆ, ಸುಳ್ಳು ಬೋಧಕರು ಅವನ ಬಗ್ಗೆ ತಪ್ಪಾದ ವಿಷ್ಯಗಳನ್ನ ಹೇಳ್ತಿದ್ರು ಅಂತ ಗೊತ್ತಾಗುತ್ತೆ. (2 ಕೊರಿಂ. 10:10; 11:5, 13) ಈ ಎಲ್ಲಾ ಕಾರಣಗಳಿಂದಾಗಿ ಅವನು ಕುಗ್ಗಿ ಹೋಗಿರಬಹುದು.

c ಕೆಲವ್ರ ಹೆಸ್ರು ಬದಲಾಗಿದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ