ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜನವರಿ ಪು. 14-19
  • ನಮಗೆ ಬಿಡುಗಡೆ ಬೆಲೆ ಯಾಕೆ ಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮಗೆ ಬಿಡುಗಡೆ ಬೆಲೆ ಯಾಕೆ ಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕ್ಷಮೆ ಸಿಗುತ್ತೆ
  • ಪರಿಪೂರ್ಣರಾಗೋ ನಿರೀಕ್ಷೆ ಕೊಡ್ತಾನೆ
  • ಶಾಂತಿ ಸಂಬಂಧ ಸಿಗುತ್ತೆ
  • ಕರುಣೆಗೆ ಹಿಡಿದ ಕನ್ನಡಿ
  • ಪ್ರೀತಿ ನ್ಯಾಯಕ್ಕೆ ಸಾಕ್ಷಿಯಾದ ಬಿಡುಗಡೆ ಬೆಲೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಬಿಡುಗಡೆ ಬೆಲೆಗೆ ನೀವು ಋಣಿನಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಯೆಹೋವ ಕೊಡೋ ಬಹುಮಾನ ಪಡಿಯೋಕೆ ನೀವು ರೆಡಿನಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೆಹೋವನ ಕ್ಷಮೆಗೆ ನಾವು ಯಾಕೆ ಕೃತಜ್ಞತೆ ತೋರಿಸಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜನವರಿ ಪು. 14-19

ಮಾರ್ಚ್‌ 16-22, 2026

ಗೀತೆ 20 ಕೊಟ್ಟೆ ನೀ ಮಗನ

ನಮಗೆ ಬಿಡುಗಡೆ ಬೆಲೆ ಯಾಕೆ ಬೇಕು?

“ಸಾಯ್ತಿರೋ ಈ ದೇಹದಿಂದ ನನ್ನನ್ನ ಯಾರು ಬಿಡಿಸ್ತಾರೆ?”—ರೋಮ. 7:24.

ಈ ಲೇಖನದಲ್ಲಿ ಏನಿದೆ?

ಬಿಡುಗಡೆ ಬೆಲೆಯಿಂದಾಗಿ ನಮಗೆ ಯೆಹೋವನ ಕ್ಷಮೆ, ನಿರೀಕ್ಷೆ ಮತ್ತು ಆತನ ಜೊತೆ ಶಾಂತಿ ಸಂಬಂಧ ಸಿಕ್ಕಿದೆ. ಇದೆಲ್ಲ ಹೇಗೆ ಸಾಧ್ಯ ಆಯ್ತು ಅಂತ ನೋಡೋಣ.

1-2. ನಮ್ಮನ್ನ ಯಾವುದ್ರಿಂದ ಕಾಪಾಡಬೇಕು ಮತ್ತು ಯಾಕೆ? (ರೋಮನ್ನರಿಗೆ 7:22-24) (ಚಿತ್ರ ನೋಡಿ.)

ಒಂದು ದೊಡ್ಡ ಬಿಲ್ಡಿಂಗ್‌ ಕುಸಿದು ಬಿದ್ದಿದೆ ಅಂತ ನೆನಸಿ. ಅದ್ರ ಮಧ್ಯದಲ್ಲಿ ಒಬ್ಬ ಮನುಷ್ಯ ಸಿಕ್ಕಿ ಹಾಕೊಂಡಿದ್ದಾನೆ. ಅವನಿನ್ನೂ ಜೀವಂತವಾಗಿ ಇದ್ದಾನೆ. ಆದ್ರೆ ಅವನು ಎಷ್ಟೇ ಪ್ರಯತ್ನಿಸಿದ್ರೂ ತನ್ನಿಂದ ತಾನು ಎದ್ದು ಹೊರಗೆ ಬರೋಕೆ ಆಗ್ತಿಲ್ಲ. ‘ನನ್ನನ್ನ ಕಾಪಾಡಿ, ಕಾಪಾಡಿ’ ಅಂತ ಕೂಗ್ತಿದ್ದಾನೆ. ತನ್ನನ್ನ ಯಾರಾದ್ರೂ ಕಾಪಾಡ್ಲಿ ಅಂತ ಎದುರು ನೋಡ್ತಾ ಇದ್ದಾನೆ.

2 ಒಂದು ರೀತಿಯಲ್ಲಿ ನಮ್ಮೆಲ್ರ ಪರಿಸ್ಥಿತಿನೂ ಹೀಗೇ ಇದೆ. ಯಾಕೆ? ಆದಾಮ ದೇವರ ವಿರುದ್ಧ ತಿರುಗಿ ಬಿದ್ದಾಗ ಪಾಪ ಮಾಡಿದ. ಅವನಿಂದಾಗಿ ಅವನ ವಂಶದಲ್ಲಿರೋ ಎಲ್ರಿಗೂ ಪಾಪ ಬಂತು. ಇಡೀ ಮಾನವಕುಲ ಆ ಪಾಪದಲ್ಲಿ ಸಿಕ್ಕಿಕೊಂಡು ನರಳ್ತಿದೆ. ನಾವ್ಯಾರೂ ನಮ್ಮ ಸ್ವಂತ ಶಕ್ತಿಯಿಂದ ತಪ್ಪಿಸ್ಕೊಂಡು ಹೊರಗೆ ಬರೋಕೆ ಆಗ್ತಿಲ್ಲ. ಪಾಪ ನಮ್ಮನ್ನ ಕೈದಿ ತರ ಬಂಧಿಸಿದೆ ಅಂತ ಅಪೊಸ್ತಲ ಪೌಲ ರೋಮನ್ನರಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ. (ರೋಮನ್ನರಿಗೆ 7:22-24 ಓದಿ.) ಆ ಪತ್ರದಲ್ಲಿ ಅವನು “ಸಾಯ್ತಿರೋ ಈ ದೇಹದಿಂದ ನನ್ನನ್ನ ಯಾರು ಬಿಡಿಸ್ತಾರೆ?” ಅಂತ ಬೇಡ್ತಿದ್ದಾನೆ. ಈ ಪಾಪದಿಂದಾಗಿ ನಾವೆಲ್ರೂ ಒಂದಲ್ಲ ಒಂದು ದಿನ ಸಾಯಬೇಕಾಗಿದೆ. (ರೋಮ. 6:23) ನಾವು ಇಂಥ ಕಷ್ಟದ ಪರಿಸ್ಥಿತಿಲಿ ಇದ್ದೀವಿ. ಹಾಗಾಗಿ ನಮ್ಮನ್ನ ಯಾರಾದ್ರೂ ಕೈ ಹಿಡಿದು ಕಾಪಾಡಬೇಕಾಗಿದೆ!

ಕುಸಿದು ಬಿದ್ದಿರೋ ಬಿಲ್ಡಿಂಗ್‌ ಮಧ್ಯದಲ್ಲಿ ಸಿಕ್ಕಿ ಹಾಕೊಂಡಿರೋ ಗಾಯಗೊಂಡ ವ್ಯಕ್ತಿ ಸಹಾಯಕ್ಕಾಗಿ ಕೈ ಚಾಚ್ತಾ ಇದ್ದಾನೆ

ಕುಸಿದು ಬಿದ್ದಿರೋ ಬಿಲ್ಡಿಂಗ್‌ ಮಧ್ಯದಲ್ಲಿ ಸಿಕ್ಕಿ ಹಾಕೊಂಡಿರೋ ವ್ಯಕ್ತಿ ತರ ನಾವು ಪಾಪದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀವಿ, ನಮ್ಮನ್ನ ಯಾರಾದ್ರೂ ಕಾಪಾಡಬೇಕು (ಪ್ಯಾರ 1-2 ನೋಡಿ)


3. ಬಿಡುಗಡೆ ಬೆಲೆ ನಮ್ಮನ್ನ ಹೇಗೆಲ್ಲಾ ಕಾಪಾಡುತ್ತೆ?

3 “ಸಾಯ್ತಿರೋ ಈ ದೇಹದಿಂದ ನನ್ನನ್ನ ಯಾರು ಬಿಡಿಸ್ತಾರೆ?” ಅಂತ ಪೌಲ ಪ್ರಶ್ನೆ ಕೇಳಿದ ಮೇಲೆ ಅಲ್ಲಿಗೆ ಸುಮ್ಮನಾಗಲಿಲ್ಲ. “ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ದೇವರೇ” ಅಂತ ಹೇಳಿ ಆ ಪ್ರಶ್ನೆಗೆ ಉತ್ತರ ಕೊಡ್ತಾನೆ. (ರೋಮ. 7:25) ಪೌಲ ಇಲ್ಲಿ ನಮಗೆ ಯೇಸುವಿಂದ ಸಿಕ್ಕ ಬಿಡುಗಡೆ ಬೆಲೆ ಬಗ್ಗೆ ಹೇಳ್ತಿದ್ದಾನೆ.a ಬಿಡುಗಡೆ ಬೆಲೆ ಕೊಟ್ಟಿದ್ರಿಂದ (1) ಪಾಪಗಳಿಗೆ ಕ್ಷಮೆ ಸಿಗ್ತಿದೆ, (2) ನಾವು ಪರಿಪೂರ್ಣರಾಗೋಕೆ ನಿರೀಕ್ಷೆ ಸಿಕ್ಕಿದೆ ಮತ್ತು (3) ಯೆಹೋವನ ಜೊತೆ ಶಾಂತಿ ಸಂಬಂಧ ಮಾಡ್ಕೊಳ್ಳೋಕೆ ಅವಕಾಶ ಸಿಕ್ಕಿದೆ. ನಾವು ಈ ಮೂರು ವಿಷ್ಯಗಳನ್ನ ಕಲಿತ್ರೆ “ನಿರೀಕ್ಷೆ ಕೊಡೋ ದೇವರಲ್ಲಿ” ನಮಗಿರೋ ಪ್ರೀತಿ ಜಾಸ್ತಿ ಆಗುತ್ತೆ. (ರೋಮ. 15:13) ಅಷ್ಟೇ ಅಲ್ಲ, ಯೇಸು ಕ್ರಿಸ್ತನ ಮೇಲಿರೋ ನಮ್ಮ ಕೃತಜ್ಞತೆನೂ ಜಾಸ್ತಿ ಆಗುತ್ತೆ. ಯಾಕಂದ್ರೆ ಆತನು ‘ಬಿಡುಗಡೆ ಬೆಲೆ ಕೊಟ್ಟು ನಮ್ಮನ್ನ ಬಿಡಿಸಿದ್ದಾನೆ.’—ಕೊಲೊ. 1:14.

ಕ್ಷಮೆ ಸಿಗುತ್ತೆ

4-5. ನಮ್ಮೆಲ್ರಿಗೂ ಬಿಡುಗಡೆ ಬೆಲೆ ಯಾಕೆ ಬೇಕು? (ಪ್ರಸಂಗಿ 7:20)

4 ನಮ್ಮ ಪಾಪಗಳಿಗೆ ಕ್ಷಮೆ ಸಿಗಬೇಕಂದ್ರೆ ನಮಗೆ ಬಿಡುಗಡೆ ಬೆಲೆ ಬೇಕೇ ಬೇಕು. ಮನುಷ್ಯರೆಲ್ಲ ಪಾಪಿಗಳೇ! ನಮ್ಮ ನಡೆ ಅಥವಾ ನುಡಿಯಲ್ಲಿ ನಾವೆಲ್ಲ ಪಾಪ ಮಾಡೇ ಮಾಡ್ತೀವಿ. (ಪ್ರಸಂಗಿ 7:20 ಓದಿ.) ಕೆಲವೊಂದು ಪಾಪಗಳು ತುಂಬ ಗಂಭೀರವಾಗಿ ಇರುತ್ತೆ. ಉದಾಹರಣೆಗೆ, ಕೊಲೆ ಮತ್ತು ವ್ಯಭಿಚಾರ. ಇಂಥ ಪಾಪ ಮಾಡಿದ್ರೆ ಮೋಶೆ ನಿಯಮ ಪುಸ್ತಕದ ಪ್ರಕಾರ ಅವ್ರಿಗೆ ಮರಣ ಶಿಕ್ಷೆ ಕೊಡಬೇಕು ಅನ್ನೋ ತೀರ್ಪು ಇತ್ತು. (ಯಾಜ. 20:10; ಅರ. 35:30, 31) ಆದ್ರೆ ಬೇರೆ ಎಷ್ಟೋ ಪಾಪಗಳು ಅಷ್ಟೇನೂ ಗಂಭೀರವಾಗಿಲ್ಲ ಅಂತ ನಮಗೆ ಅನ್ಸುತ್ತೆ. ಆದ್ರೂ ಪಾಪ ಪಾಪನೇ! ಅದಕ್ಕೇ ದಾವೀದ ಹೀಗೆ ಹೇಳ್ತಾನೆ: “ನನ್ನ ನಾಲಿಗೆ ಪಾಪ ಮಾಡದ ಹಾಗೆ, ತುಂಬ ಹುಷಾರಾಗಿ ಇರ್ತಿನಿ.” (ಕೀರ್ತ. 39:1) ನೋಡಿದ್ರಾ? ನಾವು ನಮ್ಮ ಮಾತಲ್ಲೂ ಪಾಪ ಮಾಡಿ ಬಿಡಬಹುದು.—ಯಾಕೋ. 3:2.

5 ನೀವು ಹಿಂದೆ ನಡ್ಕೊಂಡ ರೀತಿ ಮತ್ತು ಮಾತಾಡಿದ ವಿಷ್ಯದ ಬಗ್ಗೆ ಯೋಚಿಸಿ. ನೀವು ಯಾವತ್ತಾದ್ರೂ ‘ಛೆ, ನಾನು ಈ ತರ ಮಾತಾಡಬಾರದಿತ್ತು’ ಅಂತ ಅಂದ್ಕೊಂಡಿದ್ದೀರಾ? ಅಥವಾ ನಾನು ‘ಈ ತರ ತಪ್ಪು ಮಾಡಿ ಬಿಟ್ಟನಲ್ಲಾ’ ಅಂತ ಬೇಜಾರಾಗಿದ್ದೀರಾ? ಹೌದು, ನಮ್ಮಲ್ಲಿ ಪ್ರತಿಯೊಬ್ರೂ ಈ ತರ ತಪ್ಪುಗಳನ್ನ ಮಾಡೇ ಮಾಡ್ತೀವಿ. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ: “‘ನಮ್ಮಲ್ಲಿ ಪಾಪ ಇಲ್ಲ’ ಅಂತ ಹೇಳೋದಾದ್ರೆ ನಮಗೆ ನಾವೇ ಮೋಸ ಮಾಡ್ಕೊಳ್ತಾ ಇದ್ದೀವಿ ಮತ್ತು ಸತ್ಯ ಅನ್ನೋದು ನಮ್ಮಲ್ಲಿಲ್ಲ ಅಂತ ಆಗುತ್ತೆ.” ನೋಡಿದ್ರಾ, ಇದು ಎಷ್ಟು ಗಂಭೀರ ವಿಷ್ಯ!—1 ಯೋಹಾ. 1:8.

6-7. ನಮ್ಮ ಪಾಪಗಳನ್ನ ಕ್ಷಮಿಸೋಕೆ ಯೆಹೋವನಿಗೆ ಯಾವುದು ಬಲವಾದ ಆಧಾರ ಕೊಡುತ್ತೆ? (ಚಿತ್ರ ನೋಡಿ.)

6 ನಮ್ಮ ಪಾಪಗಳನ್ನ ಕ್ಷಮಿಸಬೇಕು ಅಂತಾನೇ ಯೆಹೋವನು ತನ್ನ ಮಗನ ಮೂಲಕ ಬಿಡುಗಡೆ ಬೆಲೆ ಕೊಟ್ಟಿದ್ದಾನೆ. (ಎಫೆ. 1:7) ಹಾಗಂತ ಯೆಹೋವ ‘ಇದೆಲ್ಲ ಚಿಕ್ಕ ಪುಟ್ಟ ತಪ್ಪುಗಳು ಬಿಡು’ ಅಂತ ನೋಡಿದ್ರೂ ನೋಡದ ಹಾಗೆ ಬಿಟ್ಟು ಬಿಡ್ತಾನಾ? ಇಲ್ಲ. ನಾವು ಮಾಡೋ ಪಾಪನ ಆತನು ದ್ವೇಷಿಸ್ತಾನೆ ಅಂತ ಬೈಬಲ್‌ ಹೇಳುತ್ತೆ. (ಯೆಶಾ. 59:2) ಆದ್ರೆ ಯೆಹೋವ ಪರಿಪೂರ್ಣ ನ್ಯಾಯಾಧೀಶನಾಗಿ ಇರೋದ್ರಿಂದ ನಮ್ಮ ಪಾಪಗಳನ್ನ ಕ್ಷಮಿಸಬೇಕಂದ್ರೆ ಆತನು ಬಲವಾದ ಆಧಾರ ಇದ್ಯಾ ಅಂತ ನೋಡ್ತಾನೆ.

7 ಮೋಶೆ ನಿಯಮ ಪುಸ್ತಕದ ಪ್ರಕಾರ ಇಸ್ರಾಯೇಲ್ಯರು ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡ್ಕೋಬೇಕಂದ್ರೆ ಪ್ರಾಣಿ ಬಲಿನ ಕೊಡಬೇಕಿತ್ತು. (ಯಾಜ. 4:27-31; 17:11) ಈ ಬಲಿಗಳು ಮುಂದೆ ಯೇಸು ಕೊಡಲಿದ್ದ ಆ ದೊಡ್ಡ ಬಲಿ ಮತ್ತು ಅದ್ರಿಂದ ಸಿಗೋ ಪ್ರಯೋಜ್ನಗಳನ್ನ ಸೂಚಿಸ್ತಿತ್ತು. ಯೇಸು ಕೊಟ್ಟ ಈ ಬಲಿ ನಮ್ಮ ಪಾಪಗಳನ್ನ ಕ್ಷಮಿಸೋಕೆ ಯೆಹೋವನಿಗೆ ಒಂದು ಬಲವಾದ ಆಧಾರ ಕೊಡ್ತು. ಯೇಸು ಕೊಟ್ಟ ಬಿಡುಗಡೆ ಬೆಲೆಯಿಂದ ಮನುಷ್ಯರಿಗೆ ಎಷ್ಟೆಲ್ಲಾ ಪ್ರಯೋಜ್ನ ಆಗುತ್ತೆ ಅಂತ ಪೌಲ ಅರ್ಥ ಮಾಡ್ಕೊಂಡಿದ್ದ. ಅದಕ್ಕೆ ಪೌಲ ಕೊರಿಂಥದವ್ರಿಗೆ ಅದ್ರ ಬಗ್ಗೆ ಬರೆದ. ಹಿಂದೆ ಅವರು ಏನೆಲ್ಲಾ ತಪ್ಪುಗಳನ್ನ ಮಾಡಿದರು ಅನ್ನೋ ಪಟ್ಟಿನ ಹೇಳಿದ ಮೇಲೆ ಆತನು ಹೀಗೆ ಹೇಳ್ತಾನೆ: “ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ, ಪವಿತ್ರ ಮಾಡಿದ್ದಾನೆ. ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಿಂದ ನಮ್ಮ ದೇವರ ಪವಿತ್ರಶಕ್ತಿಯಿಂದ ನೀವು ದೇವರ ದೃಷ್ಟಿಯಲ್ಲಿ ನೀತಿವಂತರಾದ್ರಿ.”—1 ಕೊರಿಂ. 6:9-11.

ಒಂದು ಇಸ್ರಾಯೇಲ್ಯ ಕುಟುಂಬ ದೇವಾಲಯದಲ್ಲಿ ಅರ್ಪಿಸೋಕೆ ಪುರೋಹಿತನಿಗೆ ಒಂದು ಕುರಿ ಕೊಡ್ತಿದ್ದಾರೆ.

ಇಸ್ರಾಯೇಲ್ಯರು ತಮ್ಮ ಪಾಪ ಪರಿಹಾರಕ್ಕೆ ಅಂತ ಕೊಡ್ತಿದ್ದ ಬಲಿಗಳು ಯೇಸು ಕೊಟ್ಟ ಬಿಡುಗಡೆ ಬೆಲೆ ಮತ್ತು ಅದ್ರಿಂದ ಸಿಗೋ ಪ್ರಯೋಜನಗಳ ಛಾಯೆ ಆಗಿತ್ತು (ಪ್ಯಾರ 6-7 ನೋಡಿ)


8. ನೀವು ಈ ವರ್ಷದ ಸ್ಮರಣೆಗೆ ಹೋಗೋಕೂ ಮುಂಚೆ ಏನೆಲ್ಲಾ ಯೋಚ್ನೆ ಮಾಡಬಹುದು?

8 ನೀವು ಈ ವರ್ಷ ಸ್ಮರಣೆಗೆ ಹೋಗೋಕೂ ಮುಂಚೆ ಯೆಹೋವ ನಿಮ್ಮನ್ನ ಕ್ಷಮಿಸಿರೋದ್ರಿಂದ ನಿಮಗೆ ಏನೆಲ್ಲಾ ಪ್ರಯೋಜ್ನ ಆಗಿದೆ ಅಂತ ಯೋಚಿಸೋಕೆ ಸಮಯ ಮಾಡ್ಕೊಳ್ಳಿ. ಉದಾಹರಣೆಗೆ, ನೀವು ಹಿಂದೆ ಮಾಡಿರೋ ತಪ್ಪಿಗೆ ಪಶ್ಚಾತಾಪ ಪಟ್ಟಿದ್ರೆ ಅದನ್ನ ನೆನಸ್ಕೊಂಡು ಈಗ್ಲೂ ಕೊರಗೋ ಅವಶ್ಯಕತೆ ಇಲ್ಲ. ಯೆಹೋವ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ಒಪ್ಕೊಳ್ಳೋಕೆ ನಿಮಗೆ ಕಷ್ಟ ಆಗ್ತಿದ್ಯಾ? ಕೆಲವೊಂದು ಸಲ, ‘ಯೆಹೋವ ನನ್ನನ್ನ ಕ್ಷಮಿಸಿದ್ದಾನೆ ಅಂತ ನನಗೆ ಗೊತ್ತು. ಆದ್ರೂ ನನ್ನನ್ನ ನಾನೇ ಕ್ಷಮಿಸ್ಕೊಳ್ಳೋಕೆ ಆಗಲ್ಲ’ ಅಂತ ಅನ್ಸಬಹುದು. ನಿಮಗೆ ಈ ತರ ಅನಿಸ್ತಿದ್ರೆ ಈ ವಿಷ್ಯ ನೆನಪಿಡಿ: ನಮ್ಮನ್ನ ಕ್ಷಮಿಸೋ ಹಕ್ಕು ಯೆಹೋವನಿಗೆ ಮಾತ್ರ ಇದೆ. ನಮಗೆ ನ್ಯಾಯ ತೀರಿಸೋ ಅಧಿಕಾರನ ಆತನು ತನ್ನ ಮಗನಿಗೆ ಕೊಟ್ಟಿದ್ದಾನೆ. ನಿಮಗಾಗ್ಲಿ ಅಥವಾ ಬೇರೆ ಯಾವುದೇ ಮನುಷ್ಯರಿಗಾಗ್ಲಿ ಯಾರನ್ನ ಕ್ಷಮಿಸಬೇಕು, ಯಾರನ್ನ ಕ್ಷಮಿಸಬಾರದು ಅನ್ನೋ ಅಧಿಕಾರನ ಯೆಹೋವ ಕೊಟ್ಟಿಲ್ಲ. ಹಾಗಾಗಿ ‘ನನ್ನನ್ನ ದೇವರು ಕ್ಷಮಿಸಿಲ್ಲ’ ಅಂತ ನಾವೇ ತಪ್ಪು ನಿರ್ಧಾರಕ್ಕೆ ಬಂದು ಬಿಡಬಾರದು. ಯೆಹೋವನ ತರ “ನಾವೂ ಬೆಳಕಲ್ಲಿ ನಡಿಯೋದಾದ್ರೆ . . . ಆತನ ಮಗ ಯೇಸುವಿನ ರಕ್ತದಿಂದ ನಮ್ಮ ಪಾಪಗಳನ್ನೆಲ್ಲ ಕ್ಷಮಿಸ್ತಾನೆ” ಅಂತ ಬೈಬಲ್‌ ಹೇಳುತ್ತೆ. (1 ಯೋಹಾ. 1:6, 7) ಬೈಬಲ್‌ ಬೋಧನೆಗಳನ್ನ ನಾವು ಪೂರ್ಣ ಮನಸ್ಸಿಂದ ನಂಬ್ತೀವಿ ತಾನೇ? ಅದೇ ತರ ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅನ್ನೋದನ್ನೂ ಪೂರ್ತಿಯಾಗಿ ನಂಬಬೇಕು. ಯೆಹೋವ ನಮ್ಮನ್ನ ಕ್ಷಮಿಸೋಕೆ ಮತ್ತು ಕರುಣೆ ತೋರಿಸೋಕೆ ಬಿಡುಗಡೆ ಬೆಲೆ ಒಂದು ಬಲವಾದ ಆಧಾರ ಆಗಿದೆ. ಅದಕ್ಕೆ ಬೈಬಲ್‌, ಯೆಹೋವನು ‘ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಾನೆ’ ಅಂತ ಹೇಳುತ್ತೆ.—ಕೀರ್ತ. 86:5.

ಪರಿಪೂರ್ಣರಾಗೋ ನಿರೀಕ್ಷೆ ಕೊಡ್ತಾನೆ

9. ಪಾಪ ಅಂದ್ರೆ ಏನು? (ಕೀರ್ತನೆ 51:5 ಮತ್ತು ಪಾದಟಿಪ್ಪಣಿ)

9 ಬೈಬಲಲ್ಲಿ “ಪಾಪ” ಅನ್ನೋ ಪದ ನಾವು ಮಾಡೋ ತಪ್ಪುಗಳನ್ನಷ್ಟೇ ಅಲ್ಲ. ಹುಟ್ಟಿದಾಗಿಂದ ನಮ್ಮಲ್ಲಿರೋ ಪಾಪ ಮಾಡೋ ಸ್ವಭಾವವನ್ನೂ ಸೂಚಿಸುತ್ತೆ. (ಕೀರ್ತನೆ 51:5 ಓದಿ ಮತ್ತು ಪಾದಟಿಪ್ಪಣಿ.) ನಮ್ಮಲ್ಲಿ ಈ ಸ್ವಭಾವ ಇರೋದ್ರಿಂದಾನೇ ನಾವು ತಪ್ಪಾಗಿ ಯೋಚಿಸ್ತೀವಿ ಮತ್ತು ನಡ್ಕೊಳ್ತೀವಿ. ಅಷ್ಟೇ ಅಲ್ಲ, ಇದ್ರಿಂದಾನೇ ನಾವು ಮುದುಕರಾಗ್ತೀವಿ, ಕಾಯಿಲೆ ಬೀಳ್ತೀವಿ ಮತ್ತು ಒಂದಲ್ಲಾ ಒಂದು ದಿನ ಸತ್ತು ಹೋಗ್ತೀವಿ. ಈ ಸತ್ಯನ ನಾವು ಅರ್ಥಮಾಡ್ಕೊಬೇಕು. ಆಗ ‘ಏನೂ ತಪ್ಪು ಮಾಡದಿರೋ ಕೂಸುಗಳಿಗೆ ಯಾಕೆ ಕಾಯಿಲೆ ಬರ್ತಿದೆ ಮತ್ತು ಅವು ಯಾಕೆ ಸಾಯ್ತಿವೆ’ ಅಂತ ಅರ್ಥ ಮಾಡ್ಕೊಳ್ತೀವಿ. ಅಷ್ಟೇ ಅಲ್ಲ ಒಳ್ಳೆಯವರು, ಕೆಟ್ಟವರು ಇಬ್ಬರೂ ಯಾಕೆ ಕಷ್ಟಪಡ್ತಿದ್ದಾರೆ, ಸಾಯ್ತಿದ್ದಾರೆ ಅಂತ ಗೊತ್ತಾಗುತ್ತೆ. ಆದಾಮ-ಹವ್ವ ಪಾಪ ಮಾಡಿದ್ರಿಂದಾನೇ ನಮ್ಮೆಲ್ರಿಗೂ ಪಾಪ ಮಾಡೋ ಸ್ವಭಾವ ಬಂದಿದೆ.

10. ಪಾಪ ಮಾಡಿದ್ಮೇಲೆ ಆದಾಮ-ಹವ್ವಗೆ ಹೇಗನಿಸ್ತು?

10 ಆದಾಮ-ಹವ್ವ ತಪ್ಪು ಮಾಡಿದಾಗ ಅವ್ರಿಗೆ ಹೇಗನಿಸ್ತು ಅಂತ ಸ್ವಲ್ಪ ಯೋಚಿಸಿ. ಅವ್ರ ಮನಸ್ಸಲ್ಲಿ ಒಂದು ರೀತಿ ಕಳವಳ ಶುರುವಾಯ್ತು. ಅವರು ದೇವರಿಗೆ ತಿರುಗಿ ಬಿದ್ದ ತಕ್ಷಣ, ‘ಹೃದಯದಲ್ಲಿ ಬರೆಯಲಾದ’ ಯೆಹೋವನ ನಿಯಮನ ಮುರಿದು ಬಿಟ್ವಿ ಅಂತ ಅವ್ರ ಮನಸ್ಸು ಚುಚ್ಚೋಕೆ ಶುರು ಮಾಡ್ತು. (ರೋಮ. 2:15) ಆಗ ಅವ್ರಿಗೆ ‘ನಾವು ಮಾಡಬಾರದ ಏನನ್ನೋ ಮಾಡಿಬಿಟ್ವಿ’ ಅಂತ ಅನಿಸ್ತು. ಅದಕ್ಕೇ ಅವರು ಕಳ್ಳರ ತರ ಹೋಗಿ ಬಚ್ಚಿಟ್ಕೊಂಡ್ರು. (ಆದಿ. 3:7, 8) ತಪ್ಪು ಮಾಡಿದ್ಮೇಲೆ ಮೊದಲನೇ ಸಲ ಆದಾಮ-ಹವ್ವಗೆ ಮನಸ್ಸು ಚುಚ್ತು, ನೋವು, ನಾಚಿಕೆ ಮತ್ತು ಭಯ ಆಯ್ತು. ಸಾಯೋವರೆಗೂ ಆ ಭಾವನೆಗಳು ಅವ್ರನ್ನ ಬಿಟ್ಟು ಹೋಗ್ಲಿಲ್ಲ.—ಆದಿ. 3:16-19.

11. ನಮ್ಮಲ್ಲಿ ಪಾಪ ಇರೋದ್ರಿಂದ ನಮ್ಮ ಪರಿಸ್ಥಿತಿ ಹೇಗಾಗಿದೆ?

11 ನಮ್ಮ ಪರಿಸ್ಥಿತಿನೂ ಆದಾಮ ಹವ್ವ ತರಾನೇ ಇದೆ. ಪಾಪಿಗಳಾಗಿರೋದ್ರಿಂದ ನಾವು ಕಾಯಿಲೆ ಬೀಳ್ತೀವಿ, ಭಾವನಾತ್ಮಕವಾಗಿ ಕುಗ್ಗಿ ಹೋಗ್ತೀವಿ. ಎಷ್ಟೇ ಪ್ರಯತ್ನ ಮಾಡಿದ್ರೂ ನಮ್ಮ ಜೀವನನ ಸುಧಾರಿಸ್ಕೊಳ್ಳೋ ಶಕ್ತಿ ನಮ್ಮ ಕೈಲಿ ಇಲ್ಲ. ಯಾಕೆ? ಯಾಕಂದ್ರೆ ‘ನಾವು ವ್ಯರ್ಥ ಜೀವನ ಮಾಡ್ತಿದ್ದೀವಿ’ ಅಂತ ಬೈಬಲ್‌ ಹೇಳುತ್ತೆ. (ರೋಮ. 8:20) ಇಡೀ ಮಾನವ ಕುಲ ಹಾಕ್ತಿರೋ ಪ್ರಯತ್ನ ಎಲ್ಲಾ ವ್ಯರ್ಥ ಆಗ್ತಿದೆ. ಉದಾಹರಣೆಗೆ, ಪರಿಸರ ಕಾಪಾಡಬೇಕು, ಬಡತನ, ಅಪರಾಧ ತೆಗೆದು ಹಾಕಬೇಕು ಮತ್ತು ಶಾಂತಿ ಸ್ಥಾಪಿಸಬೇಕು ಅಂತ ಜನ ಏನೇನೋ ಪ್ರಯತ್ನ ಮಾಡ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಅಲ್ಲಲ್ಲಿ ಪ್ರಗತಿ ಆಗ್ತಿದೆ. ಆದ್ರೆ ಯಾವುದನ್ನೂ ಸಂಪೂರ್ಣವಾಗಿ ಸರಿ ಮಾಡೋಕೆ ಅವ್ರಿಂದ ಆಗ್ತಾ ಇಲ್ಲ. ಹಾಗಾದ್ರೆ ಈ ಎಲ್ಲ ಪರಿಸ್ಥಿತಿಗಳಿಂದ ಬಿಡುಗಡೆ ಬೆಲೆ ನಮ್ಮನ್ನ ಹೇಗೆ ಕಾಪಾಡುತ್ತೆ?

12. ಬಿಡುಗಡೆ ಬೆಲೆ ನಮಗೆ ಯಾವ ನಿರೀಕ್ಷೆ ಕೊಡುತ್ತೆ?

12 ಬಿಡುಗಡೆ ಬೆಲೆಯಿಂದಾಗಿ ‘ಸೃಷ್ಟಿನೂ ಸಾಯೋ ದೇಹದ ದಾಸತ್ವದಿಂದ ಬಿಡುಗಡೆಯಾಗುತ್ತೆ’ ಅನ್ನೋ ನಿರೀಕ್ಷೆ ನಮಗೆ ಕೊಡುತ್ತೆ. (ರೋಮ. 8:21) ಪರದೈಸಲ್ಲಿ ನಾವು ಸಂಪೂರ್ಣವಾಗಿ ಪರಿಪೂರ್ಣರಾದಾಗ ಭಾವನಾತ್ಮಕವಾಗಿ ಕುಗ್ಗಿ ಹೋಗೋದು, ಮಾನಸಿಕ ಕಾಯಿಲೆ, ನೋವು, ದುಃಖ, ಮನಸ್ಸು ಚುಚ್ಚೋದು ಮತ್ತು ಭಯ ಇದ್ಯಾವುದೂ ಇರಲ್ಲ. ಆಗ ಪರಿಸರ ಕಾಪಾಡೋಕೆ ಮತ್ತು ನಾವೆಲ್ಲ ಸಮಾಧಾನವಾಗಿ ಇರೋಕೆ ನಾವು ಹಾಕೋ ಯಾವ ಪ್ರಯತ್ನನೂ ವ್ಯರ್ಥ ಆಗಲ್ಲ. ಯಾಕಂದ್ರೆ “ಸಮಾಧಾನದ ಪ್ರಭು” ಆಗಿರೋ ಯೇಸು ನಮ್ಮನ್ನ ಆಗ ರಾಜನಾಗಿ ಆಳ್ತಾನೆ.—ಯೆಶಾ. 9:6, 7.

13. ಸ್ಮರಣೆ ಹತ್ರ ಬರ್ತಿದ್ದಂತೆ ನೀವು ಇನ್ನೂ ಯಾವುದ್ರ ಬಗ್ಗೆ ಯೋಚ್ನೆ ಮಾಡಬಹುದು?

13 ಬಿಡುಗಡೆ ಬೆಲೆಯಿಂದ ನೀವು ಪರಿಪೂರ್ಣರಾಗ್ತೀರ. ಆಗ ನಿಮ್ಮ ಜೀವನ ಹೇಗಿರುತ್ತೆ ಅಂತ ಸ್ವಲ್ಪ ಊಹಿಸಿ. ಪ್ರತಿದಿನ ಬೆಳಿಗ್ಗೆ ನಾವಲ್ಲಿ ಖುಷಿ-ಖುಷಿಯಾಗಿ ಎದ್ದೇಳ್ತೀವಿ. ಅಲ್ಲಿ, ‘ನನಗೆ ಊಟ ಇರಲ್ವೇನೋ, ನಾನು ಕಾಯಿಲೆ ಬೀಳ್ತಿನೇನೋ ಅಥವಾ ನಾನು ಸತ್ತು ಹೋಗ್ತಿನೇನೋ’ ಅನ್ನೋ ಭಯದಲ್ಲಿ ಜೀವನ ಮಾಡಲ್ಲ. ಆದ್ರೆ ಈ ವಿಷ್ಯದ ಬಗ್ಗೆ ನಾವು ‘ಸಂಶಯಪಡದೇ ದೃಢವಾಗಿದ್ದು ನಮ್ಮ ನಿರೀಕ್ಷೆಯನ್ನ ಲಂಗರದಂತೆ ಗಟ್ಟಿಯಾಗಿ’ ಇಟ್ಕೊಬೇಕು. ಆಗ ಈ ಸಮಯದಲ್ಲೂ ಸ್ವಲ್ಪ ಮಟ್ಟಿಗೆ ಶಾಂತಿ ನೆಮ್ಮದಿನ ಕಂಡ್ಕೊಳ್ಳಬಹುದು. (ಇಬ್ರಿ. 6:18, 19) ಒಂದು ಲಂಗರ ಹಡಗು ಸ್ಥಿರವಾಗಿ ನಿಲ್ಲೋಕೆ ಸಹಾಯ ಮಾಡುತ್ತೆ. ಅದೇ ತರ ನಮ್ಮ ನಿರೀಕ್ಷೆ ಎಷ್ಟೇ ಕಷ್ಟಗಳು ಬಂದಾಗ್ಲೂ ಅದನ್ನ ಸಹಿಸ್ಕೊಳ್ಳೋಕೆ ಮತ್ತು ನಂಬಿಕೆಯಿಂದ ಇರೋಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಯೆಹೋವ ‘ತನ್ನನ್ನ ಶ್ರದ್ಧೆಯಿಂದ ಆರಾಧಿಸೋರನ್ನ ಆಶೀರ್ವದಿಸ್ತಾನೆ’ ಅನ್ನೋ ಭರವಸೆನೂ ಕೊಡುತ್ತೆ. (ಇಬ್ರಿ. 11:6) ಹಾಗಾದ್ರೆ ಈಗ ನಮಗೆ ಸಿಗ್ತಿರೋ ಶಾಂತಿ ಸಮಾಧಾನ ಮತ್ತು ಮುಂದೆ ಸಿಗೋ ಆಶೀರ್ವಾದಕ್ಕೆ ಏನು ಕಾರಣ? ನೆನಪಿಡಿ, ಅದು ಬಿಡುಗಡೆ ಬೆಲೆನೇ!

ಶಾಂತಿ ಸಂಬಂಧ ಸಿಗುತ್ತೆ

14. ಪಾಪದಿಂದಾಗಿ ಯೆಹೋವನ ಜೊತೆಗಿರೋ ನಮ್ಮ ಸಂಬಂಧ ಏನಾಯ್ತು? ಯಾಕೆ?

14 ಆದಾಮ-ಹವ್ವ ಪಾಪ ಮಾಡಿದಾಗ ಮನುಷ್ಯರು ಯೆಹೋವನಿಂದ ದೂರ ಆದ್ರು. ಸೃಷ್ಟಿಕರ್ತನ ಜೊತೆ ಇಡೀ ಮಾನವಕುಲಕ್ಕೆ ಇದ್ದ ಸಂಬಂಧ ಮುರಿದು ಬಿತ್ತು ಅಂತ ಬೈಬಲ್‌ ಹೇಳುತ್ತೆ. (ರೋಮ. 8:7, 8; ಕೊಲೊ. 1:21) ಯಾಕೆ? ಯಾಕಂದ್ರೆ, ಯೆಹೋವ ಪರಿಪೂರ್ಣನು, ಆತನ ಕೈಯಲ್ಲಿ ಪಾಪಗಳನ್ನ ಸಹಿಸೋಕೆ ಸಾಧ್ಯನೇ ಇಲ್ಲ. ಅದಕ್ಕೆ ಬೈಬಲ್‌, “ಕೆಟ್ಟದ್ದನ್ನ ನೋಡದಷ್ಟು ಪವಿತ್ರ ಕಣ್ಣುಗಳು ನಿಂದು, ನೀನು ಕೆಟ್ಟತನವನ್ನ ಸಹಿಸಲ್ಲ” ಅಂತ ಹೇಳುತ್ತೆ. (ಹಬ. 1:13) ಈ ಪಾಪ ಮನುಷ್ಯರನ್ನ ಮತ್ತು ದೇವರನ್ನ ಬೇರೆಬೇರೆ ಮಾಡಿದೆ. ನಾವು ಮತ್ತೆ ಯೆಹೋವನ ಜೊತೆ ಒಂದಾಗಬೇಕು ಅಂದ್ರೆ, ಆತನ ಜೊತೆ ಶಾಂತಿ ಸಂಬಂಧಕ್ಕೆ ಬರಬೇಕು. ಬಿಡುಗಡೆ ಬೆಲೆ ನಾವು ಈ ತರ ಶಾಂತಿ ಸಂಬಂಧಕ್ಕೆ ಬರೋಕೆ ಸಹಾಯ ಮಾಡುತ್ತೆ.

15. ಯೆಹೋವನ ಜೊತೆ ಮತ್ತೆ ಶಾಂತಿ ಸಂಬಂಧವನ್ನ ಬೆಳೆಸ್ಕೊಳ್ಳೋಕೆ ಬಿಡುಗಡೆ ಬೆಲೆ ಹೇಗೆ ಸಹಾಯ ಮಾಡ್ತು?

15 ನಾವು ಮತ್ತೆ ದೇವರ ಜೊತೆ ಶಾಂತಿ ಸಂಬಂಧದಲ್ಲಿ ಇರ್ಬೇಕು ಅನ್ನೋದು ಯೇಸುವಿನ ಆಸೆ. ಅದಕ್ಕೆ “ನಮ್ಮ ಪಾಪಗಳನ್ನ ಮುಚ್ಚೋಕೆ ತನ್ನನ್ನೇ ಬಲಿ ಕೊಟ್ಟಿದ್ದಾನೆ” ಅಂತ ಬೈಬಲ್‌ ಹೇಳುತ್ತೆ. (1 ಯೋಹಾ. 2:2, ಪಾದಟಿಪ್ಪಣಿ.) ಇದು ಹೇಗೆ ಸಾಧ್ಯ? ಯೇಸು ಸತ್ತಿದ್ರಿಂದ ಯೆಹೋವನಿಗೆ ಎಲ್ಲೋ ಒಂದು ಕಡೆ ನೆಮ್ಮದಿ ಆಯ್ತು ಅಂತ ನಾವು ಯಾವತ್ತೂ ಅಂದ್ಕೊಬಾರದು. ಬದ್ಲಿಗೆ ಯೇಸು ಬಿಡುಗಡೆ ಬೆಲೆ ಕೊಟ್ಟಿದ್ರಿಂದ, ಯೆಹೋವನ ನ್ಯಾಯದ ಮಟ್ಟ ಆಗ ಪೂರೈಕೆ ಆಯ್ತು. ಈ ಬಿಡುಗಡೆ ಬೆಲೆಯಿಂದ ದೂರ ಆಗಿರೋ ಮನುಷ್ಯರು ಮತ್ತು ಯೆಹೋವ ದೇವರು ಮತ್ತೆ ಒಂದಾಗೋಕೆ ಸಾಧ್ಯ ಆಯ್ತು. (ರೋಮ. 3:23-26) ನಿಜ ಹೇಳಬೇಕಂದ್ರೆ, ಪಾಪಿಗಳು ನೀತಿವಂತರಾಗೋಕೆ ಸಾಧ್ಯ ಇಲ್ಲ. ಆದ್ರೆ ಯೇಸು ಸಾಯೋಕ್ಕಿಂತ ಮುಂಚೆ ಯಾರೆಲ್ಲ ತನಗೆ ನಂಬಿಗಸ್ತರಾಗಿ ಸೇವೆ ಮಾಡಿದ್ರೋ, ಅವ್ರನ್ನ ಯೆಹೋವ ನೀತಿವಂತರು ಅಂತ ಕರೆದನು. (ಆದಿ. 15:1, 6) ಅದು ಹೇಗೆ? ಯೇಸು ಭವಿಷ್ಯದಲ್ಲಿ ಬಿಡುಗಡೆ ಬೆಲೆಯನ್ನ ಕೊಟ್ಟೇ ಕೊಡ್ತಾನೆ ಅನ್ನೋ ದೃಢ ನಂಬಿಕೆ ಯೆಹೋವನಿಗಿತ್ತು. (ಯೆಶಾ. 46:10) ಹಾಗಾಗಿ ಈ ಬಿಡುಗಡೆ ಬೆಲೆಯಿಂದಾಗಿ ಮನುಷ್ಯರು ಯೆಹೋವನ ಜೊತೆ ಮತ್ತೆ ಶಾಂತಿ ಸಂಬಂಧವನ್ನ ಬೆಳೆಸ್ಕೊಳ್ಳೋಕೆ ಸಾಧ್ಯ ಮಾಡ್ತು.

16. ನೀವು ಸ್ಮರಣೆಗೆ ಹೋಗೋ ಮುಂಚೆ ಇನ್ನು ಯಾವೆಲ್ಲಾ ವಿಷ್ಯಗಳ ಬಗ್ಗೆ ಯೋಚಿಸಬಹುದು? (ಚಿತ್ರ ನೋಡಿ.)

16 ಈಗ ನಮಗೆ ಯೆಹೋವನ ಜೊತೆ ಒಳ್ಳೆ ಶಾಂತಿ ಸಂಬಂಧ ಇದೆ. ಇದ್ರಿಂದ ನಮ್ಮ ಜೀವನದಲ್ಲಿ ಎಷ್ಟೆಲ್ಲಾ ಪ್ರಯೋಜನ ಆಗಿದೆ ಅಂತ ಸ್ವಲ್ಪ ಯೋಚಿಸಿ. ಉದಾಹರಣೆಗೆ, ಯೇಸು ಹೇಳಿದ ತರ ಯೆಹೋವನನ್ನ “ಅಪ್ಪಾ” ಅಂತ, “ಸ್ನೇಹಿತ” ಅಂತ ನಾವು ಮನಸಾರೆ ಕರಿಬಹುದು. (ಮತ್ತಾ. 6:9) ಆದ್ರೆ “ಅಪ್ಪಾ” ಅಥವಾ “ಸ್ನೇಹಿತ” ಅಂತ ಯೆಹೋವನನ್ನ ಕರೆಯುವಾಗ ನಮ್ಮಲ್ಲಿ ತುಂಬ ಭಯ ಭಕ್ತಿ ಮತ್ತು ದೀನತೆ ಇರಬೇಕು. ಯಾಕೆ? ನಾವು ಪಾಪಿಗಳಾಗಿ ಇರೋದ್ರಿಂದ ನಾವಾಗಿ ನಾವೇ ಯೆಹೋವನಿಗೆ ಹತ್ರ ಆಗೋಕೆ ಆಗಲ್ಲ. ಆ ತರ ಕರೆಯೋಕೂ ನಮಗೆ ಅರ್ಹತೆ ಇಲ್ಲ. ಆದ್ರೆ ಯೆಹೋವ ತನ್ನ ಮಗನ ಮೂಲಕ ಬಿಡುಗಡೆ ಬೆಲೆ ಕೊಟ್ಟಿದ್ರಿಂದಾನೇ ಆ ಸಂಬಂಧ ಬೆಳೆಸ್ಕೊಳ್ಳೋಕೆ ಸಾಧ್ಯ ಆಗಿದೆ. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ, “ಕ್ರಿಸ್ತನಿಂದ ಅಂದ್ರೆ ಹಿಂಸಾ ಕಂಬದ ಮೇಲೆ ಆತನು ಸುರಿಸಿದ ರಕ್ತದಿಂದ ದೇವರು . . . ಎಲ್ಲವನ್ನ ತನ್ನ ಜೊತೆ ಶಾಂತಿ ಸಂಬಂಧಕ್ಕೆ ತಂದನು.” (ಕೊಲೊ. 1:19, 20) ನಾವು ಪಾಪಿಗಳಾಗಿದ್ರೂ, ಅಪರಿಪೂರ್ಣರಾಗಿದ್ರೂ ಈ ಕಾರಣದಿಂದಾನೇ ಯೆಹೋವ ದೇವರ ಜೊತೆ ಒಂದು ಒಳ್ಳೆ ಶಾಂತಿ ಸಂಬಂಧ ಕಾಪಾಡ್ಕೊಳ್ಳೋಕೆ ಸಾಧ್ಯ ಆಗಿದೆ.

ರೋಮನ್‌ ಸೈನಿಕರು ಯೇಸುಗೆ ಮೊಳೆ ಹೊಡೆಯೋಕೆ ಸಿದ್ಧತೆ ಮಾಡ್ತಿದ್ದಾರೆ. ಇಬ್ರು ಸೈನಿಕರು ಯೇಸುನ ಹಿಂಸಾ ಕಂಬದ ಹತ್ರ ಕರ್ಕೊಂಡು ಬರ್ತಿದ್ದಾರೆ. ಇನ್ನೊಬ್ಬ ಸೈನಿಕ ಮೊಳೆ ಮತ್ತು ಸುತ್ತಿಗೆ ಹಿಡ್ಕೊಂಡ ನಿಂತಿದ್ದಾನೆ.

ಯೇಸುವಿನ ಬಿಡುಗಡೆ ಬೆಲೆಯಿಂದ ಮಾತ್ರನೇ ಯೆಹೋವನ ಜೊತೆ ಮನುಷ್ಯರು ಮತ್ತೆ ಶಾಂತಿ ಸಂಬಂಧವನ್ನ ಬೆಳೆಸ್ಕೊಳ್ಳೋಕೆ ಸಾಧ್ಯ ಆಗಿದೆ (ಪ್ಯಾರ 16 ನೋಡಿ)


ಕರುಣೆಗೆ ಹಿಡಿದ ಕನ್ನಡಿ

17. ಬಿಡುಗಡೆ ಬೆಲೆಯಿಂದ ಯೆಹೋವ ಕರುಣಾಮಯಿ ಅಂತ ಹೇಗೆ ಗೊತ್ತಾಗುತ್ತೆ? (ಎಫೆಸ 2:4, 5)

17 ಬಿಡುಗಡೆ ಬೆಲೆಯಿಂದಾಗಿ ಯೆಹೋವನು ಎಷ್ಟು ‘ಕರುಣಾಮಯಿ ದೇವರು’ ಅಂತ ನಮಗೆ ಗೊತ್ತಾಗುತ್ತೆ. ಯಾಕಂದ್ರೆ, ‘ನಮ್ಮ ಅಪರಾಧಗಳಿಂದಾಗಿ ನಾವು ಸತ್ತಿದ್ರೂ ದೇವರು ನಮ್ಮನ್ನ ಬದುಕಿಸಿದನು.’ (ಎಫೆಸ 2:4, 5 ಓದಿ.) ಜನ ಪಾಪದಲ್ಲಿ ಸಿಕ್ಕಿ ಹಾಕೊಂಡು ನರಳ್ತಿದ್ದಾರೆ, ಅವ್ರನ್ನ ಕಾಪಾಡಬೇಕಾಗಿದೆ ಅಂತ ಯೆಹೋವ ಅರ್ಥ ಮಾಡ್ಕೊಂಡಿದ್ದಾನೆ. ‘ಶಾಶ್ವತ ಜೀವ ಪಡೆಯೋ ಯೋಗ್ಯತೆ ಇರೋ’ ಜನ್ರ ಕೂಗನ್ನ ಆತನು ಕೇಳಿಸ್ಕೊಳ್ತಿದ್ದಾನೆ. (ಅ. ಕಾ. 13:48) ಅದಕ್ಕೇ ದೇವರ ಆಳ್ವಿಕೆಯ ಸಿಹಿಸುದ್ದಿನ ಅವ್ರಿಗೆ ತಲುಪೋ ತರ ನೋಡ್ಕೊಳ್ತಿದ್ದಾನೆ. ಅಷ್ಟೇ ಅಲ್ಲ ಆತನ ಬಗ್ಗೆ, ಆತನ ಮಗನ ಬಗ್ಗೆ ತಿಳ್ಕೊಳ್ಳೋ ಅವಕಾಶನೂ ಕೊಟ್ಟಿದ್ದಾನೆ. (ಯೋಹಾ. 17:3) ‘ಆದಾಮ ಹವ್ವಳನ್ನ ದಾರಿ ತಪ್ಪಿಸಿದ್ರೆ ಸಾಕು, ಯೆಹೋವನ ಉದ್ದೇಶನ ಮಣ್ಣುಪಾಲು ಮಾಡಬಹುದು’ ಅಂತ ಸೈತಾನ ಅಂದ್ಕೊಂಡಿದ್ರೆ ಅವನಷ್ಟು ದಡ್ಡ ಬೇರೆ ಯಾರೂ ಇಲ್ಲ!

18. ಯೆಹೋವ ಬಿಡುಗಡೆ ಬೆಲೆ ಕೊಡೋಕೆ ಮುಖ್ಯ ಕಾರಣ ಏನು?

18 ಬಿಡುಗಡೆ ಬೆಲೆ ಕೊಟ್ಟಿದ್ರಿಂದ ನಮಗೆ ಏನೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚಿಸೋದು ಒಳ್ಳೇದು. ಆದ್ರೆ ಅದ್ರ ಜೊತೆಗೆ ಅದನ್ನ ಕೊಟ್ಟಿರೋದಕ್ಕೆ ಮುಖ್ಯ ಕಾರಣ ಏನು ಅಂತ ಯೋಚಿಸೋದು ಇನ್ನೂ ಒಳ್ಳೇದು. ಯೆಹೋವ ಈ ಬಿಡುಗಡೆ ಬೆಲೆ ಮೂಲಕ ಏದೆನ್‌ ತೋಟದಲ್ಲಿ ಸೈತಾನ ಹಾಕಿದ ಸವಾಲಿಗೆ ಉತ್ರ ಕೊಡ್ತಾನೆ. (ಆದಿ. 3:1-5, 15) ಜೊತೆಗೆ ಯೆಹೋವ ತನ್ನ ಹೆಸ್ರನ್ನ ಪವಿತ್ರ ಮಾಡ್ಕೊಳ್ತಾನೆ ಮತ್ತು ಆತನ ಮೇಲೆ ಬಂದಿರೋ ಎಲ್ಲಾ ಆರೋಪಗಳನ್ನ ತೆಗೆದು ಹಾಕ್ತಾನೆ. ಅಷ್ಟೇ ಅಲ್ಲ, ಯೆಹೋವ ನಮ್ಮನ್ನ ಪಾಪ ಮತ್ತು ಮರಣದಿಂದ ಕಾಪಾಡ್ತಾನೆ, ಹೀಗೆ ಆತನು ಪ್ರೀತಿಯ ದೇವರು ಅಂತ ನಿರೂಪಿಸ್ತಾನೆ. ನಾವು ಪಾಪಿಗಳಾಗಿದ್ರೂ ಯೆಹೋವ ಅಪಾರ ಕೃಪೆ ತೋರಿಸಿ ಸೈತಾನನಿಗೆ ಉತ್ರ ಕೊಡೋಕೆ ಅಂತಾನೆ ನಮ್ಮನ್ನ ತನ್ನ ಟೀಮ್‌ನಲ್ಲಿ ಸೇರಿಸ್ಕೊಂಡಿದ್ದಾನೆ. (ಜ್ಞಾನೋ. 27:11) ಈ ಬಿಡುಗಡೆ ಬೆಲೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿದ್ರಾ? ಇದಕ್ಕೆ ಕೃತಜ್ಞತೆ ತೋರಿಸೋಕೆ ನಾವು ಏನೆಲ್ಲಾ ಮಾಡಬೇಕು? ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.

ಬಿಡುಗಡೆ ಬೆಲೆಯಿಂದ ಹೇಗೆ . . .

  • ಕ್ಷಮೆ ಸಿಗುತ್ತೆ?

  • ಪರಿಪೂರ್ಣರಾಗೋ ನಿರೀಕ್ಷೆ ಸಿಗುತ್ತೆ?

  • ಯೆಹೋವನ ಜೊತೆ ಒಳ್ಳೆ ಶಾಂತಿ ಸಂಬಂಧ ಸಿಗುತ್ತೆ?

ಗೀತೆ 17 “ನನಗೆ ಮನಸ್ಸಿದೆ”

a ಪದ ವಿವರಣೆ: ಬಿಡುಗಡೆ ಬೆಲೆ ಪದನೇ ಹೇಳೋ ತರ ಇದು ಬಂಧನದಿಂದ ಬಿಡಿಸೋಕೆ ಕೊಡೋ ಬೆಲೆ ಆಗಿದೆ. ದೇವರ ಮಾತು ಕೇಳೋ ಮನುಷ್ಯರನ್ನ ಪಾಪ ಮತ್ತು ಮರಣದಿಂದ ಬಿಡಿಸೋಕೆ ಯೇಸು ತನ್ನ ಪ್ರಾಣವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಾನೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ