ಜೂನ್ 1-7, 2026
ಗೀತೆ 56 ಸದಾ ಸಂತೋಷದ ದಾರಿ
ನಿಮ್ಮನ್ನ ದ್ವೇಷಿಸಿದ್ರೂ ನೀವು ಖುಷಿಯಾಗಿರಿ!
‘ಜನ ನಿಮ್ಮನ್ನ ದ್ವೇಷಿಸಿದಾಗ ಸಂತೋಷವಾಗಿ ಇರ್ತಿರ.’—ಲೂಕ 6:22.
ಈ ಲೇಖನದಲ್ಲಿ ಏನಿದೆ?
ನಾವು ಯೆಹೋವನ ಆರಾಧನೆ ಮಾಡೋದನ್ನ ನೋಡಿ ಕೆಲವು ಜನ ನಮ್ಮನ್ನ ದ್ವೇಷಿಸ್ತಾರೆ. ಆದ್ರೂ ನಾವು ಯಾಕೆ ಖುಷಿಯಾಗಿರಬಹುದು ಅಂತ ನೋಡೋಣ.
1. ನಾವು ಎಂಥ ಸಂದರ್ಭದಲ್ಲೂ ಸಂತೋಷವಾಗಿರಬಹುದು ಅಂತ ಯೇಸು ಹೇಳಿದನು?
ಬೆಟ್ಟದ ಭಾಷಣದಲ್ಲಿ ಯೇಸು, ‘ಜನ ನಿಮ್ಮನ್ನ ದ್ವೇಷಿಸಿದ್ರೂ ನೀವು ಸಂತೋಷವಾಗಿ ಇರ್ತಿರ’ ಅಂತ ಹೇಳಿದನು. (ಲೂಕ 6:22) ಇದನ್ನ ಕೇಳಿದಾಗ ಅಲ್ಲಿದ್ದ ಜನ್ರಿಗೆ ಶಾಕ್ ಆಗಿರುತ್ತೆ. ನಮ್ಮನ್ನ ಯಾರಾದ್ರೂ ದ್ವೇಷಿಸಿದಾಗ ಅದು ಹೇಗೆ ನಮಗೆ ಖುಷಿಯಾಗುತ್ತೆ? ಹಾಗಾದ್ರೆ ಯೇಸು ಹೇಳಿದ ಆ ಮಾತಿನ ಅರ್ಥ ಏನು? ಇದಕ್ಕೆ ಉತ್ರ ತಿಳ್ಕೊಳ್ಳೋದು ತುಂಬ ಮುಖ್ಯ. ಯಾಕಂದ್ರೆ ಯೇಸುವಿನ ಶಿಷ್ಯರಾದ ನಮ್ಮನ್ನ ಜನ ತುಂಬ ದ್ವೇಷಿಸ್ತಾರೆ. ಹಾಗಾಗಿ ಈ ಲೇಖನದಲ್ಲಿ, ಜನ ಯಾಕೆ ನಮ್ಮನ್ನ ದ್ವೇಷಿಸ್ತಾರೆ, ಅವರು ದ್ವೇಷಿಸಿದ್ರೂ ನಾವು ಯಾಕೆ ಖುಷಿಯಾಗಿರಬಹುದು ಅಂತ ನೋಡೋಣ.
ನಮ್ಮನ್ನ ದ್ವೇಷಿಸೋಕೆ ಕಾರಣ
2-3. (ಎ) ಜನ ನಮ್ಮನ್ನ ಹಿಂಸಿಸೋಕೆ, ದ್ವೇಷಿಸೋಕೆ ಒಂದು ಕಾರಣ ಏನು? (ಬಿ) ಹಾಗಂತ ನಾವು ಆ ಜನ್ರನ್ನ ದ್ವೇಷಿಸೋದು ಸರಿನಾ? (ಯೋಹಾನ 16: 2, 3)
2 ನಾವು ಯೆಹೋವನನ್ನ ಆರಾಧಿಸ್ತೀವಿ, ಅದಕ್ಕೆ ಜನ ನಮ್ಮನ್ನ ದ್ವೇಷಿಸ್ತಾರೆ. ತನ್ನ ಶಿಷ್ಯರನ್ನ ಕೆಲವರು ಹಿಂಸಿಸ್ತಾರೆ, ಕೊಲ್ತಾರೆ ಅಂತ ಯೇಸು ಹೇಳಿದನು. ಯಾಕಂದ್ರೆ ಆ ಜನ್ರಿಗೆ, “ನನ್ನ ಬಗ್ಗೆ ಆಗಲಿ ನನ್ನ ಅಪ್ಪನ ಬಗ್ಗೆ ಆಗಲಿ ಗೊತ್ತಿಲ್ಲ” ಅಂತ ಯೇಸು ಹೇಳಿದನು. (ಯೋಹಾ. 16:2, 3 ಓದಿ.) ದೇವ ಜನ್ರಿಗೆ ಬರೋ ಎಲ್ಲ ವಿರೋಧಕ್ಕೆ ಯಾರು ಮುಖ್ಯ ಕಾರಣ? ‘ಈ ಲೋಕದ ದೇವರಾಗಿರೋ ಸೈತಾನನೇ’ ಮುಖ್ಯ ಕಾರಣ. (2 ಕೊರಿಂ. 4:3, 4) ಯಾಕಂದ್ರೆ ಅವನು ಯೆಹೋವನ ಬಗ್ಗೆ ಸತ್ಯ ತಿಳ್ಕೊಳ್ಳದ ಹಾಗೆ ಈ ಜನ್ರ ಕಣ್ಣು ಕುರುಡು ಮಾಡಿದ್ದಾನೆ. ಅಷ್ಟೇ ಅಲ್ಲ, ದೇವರನ್ನ ಪ್ರೀತಿಸೋರನ್ನ ಜನ ವಿರೋಧಿಸೋ ತರ ಮಾಡಿದ್ದಾನೆ. (ಯೋಹಾ. 8:42-44) ಈ ಸತ್ಯಾಂಶ ತಿಳಿದ ಮೇಲೆ ನಮ್ಮನ್ನ ವಿರೋಧಿಸೋರ ಬಗ್ಗೆ ನಿಮಗೆ ಏನು ಅನಿಸುತ್ತೆ? ಇದನ್ನೆಲ್ಲಾ ಅವರಾಗಿ ಅವರೇ ಮಾಡ್ತಿದ್ದಾರಾ? ಇಲ್ಲ, ಸೈತಾನ ಅವ್ರ ಕಣ್ಣಿಗೆ ಮಣ್ಣೆರಿಚ್ಚಿದ್ದಾನೆ, ಅವ್ರಿಗೆ ಮೋಸ ಮಾಡಿದ್ದಾನೆ. ಹಾಗಾಗಿ ಜನ ನಮ್ಮನ್ನ ದ್ವೇಷಿಸಿದ್ರೂ ನಾವು ಅವ್ರನ್ನ ದ್ವೇಷಿಸೋಕೆ ಹೋಗಲ್ಲ.
3 ಪಾವೆಲ್a ಅವ್ರ ಅನುಭವ ನೋಡಿ. ಇವರು ಸಾರೋ ಕೆಲಸಕ್ಕೆ ನಿಷೇಧ ಇರೋ ದೇಶದಲ್ಲಿದ್ದಾರೆ. ಅವರು ಯೆಹೋವನನ್ನ ನಿಷ್ಠೆಯಿಂದ ಆರಾಧಿಸ್ತಾ ಇದ್ರು. ಅದಕ್ಕೆ ಅವ್ರನ್ನ ಜೈಲಿಗೆ ಹಾಕಿದ್ರು, ಸಿಕ್ಕಾಪಟ್ಟೆ ಹೊಡೆದ್ರು. ಎಷ್ಟೋ ತಿಂಗಳು ಒಬ್ರನ್ನೇ ಜೈಲಲ್ಲಿ ಕೊಳೆಯೋ ತರ ಮಾಡಿದ್ರು. ಆ ಸಹೋದರ ಹೇಳೋದು, “ನನಗೆ ಇಷ್ಟೆಲ್ಲಾ ಹಿಂಸೆ ಬರೋಕೆ ಕಾರಣ ನಾನು ಯೆಹೋವನನ್ನ ಆರಾಧಿಸ್ತಿರೋದು ಸೈತಾನನಿಗೆ ಮತ್ತವನ ಕೆಟ್ಟ ದೂತರಿಗೆ ಇಷ್ಟ ಇಲ್ಲ ಅನ್ನೋದೇ. ಯಾಕಂದ್ರೆ ನಾನಿದ್ದ ಜೈಲಲ್ಲಿ ಯಾರೆಲ್ಲ ಕೆಲಸ ಮಾಡ್ತಿದ್ರೋ ಅವ್ರಲ್ಲಿ ಒಬ್ರಿಗೂ ನಮ್ಮ ಮೇಲೆ ವೈಯಕ್ತಿಕ ದ್ವೇಷ ಇರಲಿಲ್ಲ. ಅವರು ಬರೀ ಅವರ ಕೆಲಸ ಮಾಡ್ತಿದ್ದಾರಷ್ಟೇ.” ಕ್ರೊಯೇಷಿಯಾದಲ್ಲಿ ಇರೋ ನಮ್ಮ ಸಹೋದರನಿಗೆ ಸತ್ಯದಲ್ಲಿಲ್ಲದ ಅವನ ಅಪ್ಪ-ಅಮ್ಮ ತುಂಬ ಹಿಂಸೆ ಕೊಟ್ಟಿದ್ದಾರೆ. ಆದ್ರೂ ಅವನು “ನನ್ನ ನಿಜವಾದ ಶತ್ರು ಸೈತಾನ. ನಮ್ಮ ಅಪ್ಪ-ಅಮ್ಮ ಅಲ್ಲ” ಅಂತ ಹೇಳ್ತಾನೆ.—ಎಫೆ. 6:12.
4. ಯೇಸು ಮತ್ತು ಸ್ತೆಫನನಿಂದ ನಾವೇನು ಕಲಿಬಹುದು? (ಚಿತ್ರ ನೋಡಿ.)
4 ಜನ ನಮ್ಮನ್ನ ದ್ವೇಷಿಸಿದ್ರೂ ನಾವು ಅವ್ರನ್ನ ದ್ವೇಷಿಸಲ್ಲ. ಅವ್ರಿಗೋಸ್ಕರ ಪ್ರಾರ್ಥನೆ ಮಾಡ್ತೀವಿ. (ಮತ್ತಾ. 5:44) ಯೇಸು ಮತ್ತು ಸ್ತೆಫನನೂ ಇದನ್ನೇ ಮಾಡಿದ್ರು. ಯೇಸುನ ಹಿಂಸಾ ಕಂಬಕ್ಕೆ ಹಾಕಿ ಮೊಳೆಗಳನ್ನ ಹೊಡೆದ್ರು. ಆಗ ಆತನು ಸೈನಿಕರಿಗೋಸ್ಕರ ಪ್ರಾರ್ಥಿಸ್ತಾ “ಅಪ್ಪಾ, ಇವ್ರನ್ನ ಕ್ಷಮಿಸು” ಅಂತ ಕೇಳಿದನು. (ಲೂಕ 23:34) ‘ಇವನನ್ನ ಕೊಲ್ಲಿ! ಕೊಲ್ಲಿ’ ಅಂತ ಜನ್ರ ಗುಂಪಲ್ಲಿ ಕೂಗ್ತಿದ್ದವರನ್ನೂ ‘ಕ್ಷಮಿಸು’ ಅಂತ ಯೇಸು ಪ್ರಾರ್ಥಿಸಿದನು. ಯಾಕೆ? ಅವರು ಏನು ಮಾಡ್ತಿದ್ದಾರೆ ಅಂತ ಪೂರ್ತಿಯಾಗಿ ತಿಳ್ಕೊಳ್ಳದೇ ಈ ತರ ನಡ್ಕೊತಿದ್ದಾರೆ ಅಂತ ಯೇಸು ಅರ್ಥ ಮಾಡ್ಕೊಂಡನು. ಅದೇ ತರ ಸ್ತೆಫನ ಕೂಡ ತನ್ನನ್ನ ಕೊಲ್ಲೋಕೆ ಬಂದವ್ರಿಗೋಸ್ಕರ ಯೆಹೋವನ ಹತ್ರ ಪ್ರಾರ್ಥನೆ ಮಾಡಿ ‘ಕ್ಷಮಿಸು’ ಅಂತ ಕೇಳಿದ. (ಅ. ಕಾ. 7:58-60) ಯೇಸು ಹಾಗೂ ಸ್ತೆಫನ ಮಾಡಿದ ಪ್ರಾರ್ಥನೆಗೆ ಯೆಹೋವ ಉತ್ರ ಕೊಟ್ಟನು. ಯೇಸುನ ಕೊಲ್ಲೋಕೆ ಒಪ್ಪಿಗೆ ನೀಡಿದ ಎಷ್ಟೋ ಜನ ಆಮೇಲೆ ಅವ್ರ ತಪ್ಪನ್ನ ಅರ್ಥ ಮಾಡ್ಕೊಂಡು ಆತನ ಮೇಲೆ ನಂಬಿಕೆ ಇಟ್ರು, ದೀಕ್ಷಾಸ್ನಾನ ತಗೊಂಡ್ರು. (ಅ. ಕಾ. 2:36-41) ಸ್ತೆಫನನನ್ನ ಕೊಲ್ಲಬೇಕಾದ್ರೆ ಅಲ್ಲಿ ನಿಂತು ನೋಡ್ತಾ ಇದ್ದವ್ರಲ್ಲಿ ಒಬ್ಬನಾಗಿದ್ದ ತಾರ್ಸದ ಸೌಲ ಆಮೇಲೆ ಕ್ರೈಸ್ತನಾದ. ಅವನು ಮಾಡಿದ ತಪ್ಪುಗಳಿಗಾಗಿ ತುಂಬ ಪಶ್ಚಾತ್ತಾಪಪಟ್ಟ.—1 ತಿಮೊ. 1:13.
ತನಗೆ ಹಿಂಸೆ ಕೊಟ್ಟವ್ರಿಗೋಸ್ಕರ ಯೇಸು ಮತ್ತು ಸ್ತೆಫನ ಪ್ರಾರ್ಥಿಸಿದರು, ನಾವೂ ಅದೇ ತರ ಪ್ರಾರ್ಥಿಸಬೇಕು (ಪ್ಯಾರ 4 ನೋಡಿ)
5. ಸಹೋದರ ಸೀಸರ್ ಅವರ ಅನುಭವದಿಂದ ನೀವೇನು ಕಲಿತ್ರಿ?
5 ನಮ್ಮನ್ನ ವಿರೋಧಿಸೋ ಜನ್ರಿಗೋಸ್ಕರ ನಾವು ಮಾಡೋ ಪ್ರಾರ್ಥನೆಗಳನ್ನ ಯೆಹೋವ ಇವತ್ತೂ ಕೇಳಿಸ್ಕೊಳ್ತಾನೆ, ಅದಕ್ಕೆ ಉತ್ರ ಕೊಡ್ತಾನೆ. ವೆನೆಜುವೆಲಾದಲ್ಲಿರೋ ಸಹೋದರ ಸೀಸರ್ ಅವರ ಅನುಭವ ನೋಡಿ. ಇವರು ಸತ್ಯದಲ್ಲಿರೋದ್ರಿಂದ ಇವರ ಅಪ್ಪ ತುಂಬ ವಿರೋಧ ಮಾಡ್ತಿದ್ರು. ಸೀಸರ್ ಹೇಳೋದು, “ನಮ್ಮ ಅಮ್ಮ ಮಕ್ಕಳನ್ನೆಲ್ಲ ಚೆನ್ನಾಗಿ ನೋಡ್ಕೊಳ್ತಿದ್ರು. ಅಪ್ಪನಿಗೆ ತುಂಬ ಗೌರವ ಕೊಡ್ತಿದ್ರು. ಯಾವಾಗ್ಲೂ ಯೆಹೋವನಿಗೆ ಮೊದಲ ಸ್ಥಾನ ಕೊಡ್ತಿದ್ರು. ಅಪ್ಪನ ಜೊತೆ ಯಾವತ್ತೂ ಒರಟಾಗಿ ನಡ್ಕೊಳ್ತಿರ್ಲಿಲ್ಲ. ಮಕ್ಕಳೆಲ್ರಿಗೂ ‘ಅಪ್ಪನ ಮಾತು ಕೇಳಿ, ಅವ್ರಿಗೆ ಗೌರವ ಕೊಡಿ. ಅಪ್ಪ, ಯೆಹೋವನಿಗೆ ಇಷ್ಟ ಇಲ್ಲದೆ ಇರೋದನ್ನ ಮಾಡೋಕೆ ಹೇಳಿದ್ರೆ ಮಾತ್ರ ಅದನ್ನ ಕೇಳಬೇಡಿ’ ಅಂತ ಹೇಳ್ತಿದ್ರು. ಅಮ್ಮ ಈ ರೀತಿ ನಡ್ಕೊಳ್ತಾ ಇದ್ದಿದ್ರಿಂದ ಕೆಲವು ವರ್ಷಗಳಾದ್ಮೇಲೆ ಕಲ್ಲಿನ ತರ ಇದ್ದ ನಮ್ಮ ಅಪ್ಪನ ಮನಸ್ಸು ಕರಗ್ತು. ಒಂದಿನ ನಾನು ಯೆಹೋವನಿಗೆ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡ್ದೆ. ಆಮೇಲೆ ಅಪ್ಪನ ಹತ್ರ ಹೋಗಿ, ‘ಅಪ್ಪ, ನಾನು ನಿನ್ನ ಜೊತೆ ಬೈಬಲ್ ಸ್ಟಡಿ ಮಾಡ್ಲಾ?’ ಅಂತ ಕೇಳ್ದೆ. ಆಗ ನಮ್ಮಪ್ಪ ‘ಮಾಡು’ ಅಂತ ಹೇಳಿದ್ರು. ಆಗ ನನಗೆ ಆದಂಥ ಖುಷಿ ಅಷ್ಟಿಷ್ಟಲ್ಲ!” ನಿಮಗೆ ಗೊತ್ತಾ? ಕೊನೆಗೂ ಸಹೋದರ ಸೀಸರ್ ಅವ್ರ ತಂದೆ ದೀಕ್ಷಾಸ್ನಾನ ತಗೊಂಡ್ರು. ನಮ್ಮನ್ನ ವಿರೋಧಿಸೋ ಎಲ್ರೂ ಬದಲಾಗ್ತಾರೆ, ದೀಕ್ಷಾಸ್ನಾನ ತಗೊಳ್ತಾರೆ ಅಂತ ಹೇಳೋಕ್ಕಾಗಲ್ಲ ನಿಜ. ಆದ್ರೆ ನಾವು ಗೌರವದಿಂದ ನಡ್ಕೊಂಡ್ರೆ, ಚೆನ್ನಾಗಿ ಮಾತಾಡಿದ್ರೆ ಕಲ್ಲಿನ ತರ ಇರೋರ ಮನಸ್ಸೂ ಖಂಡಿತ ಕರಗುತ್ತೆ. ಅವರು ಬದಲಾದಾಗ ನಮಗೆ ಎಷ್ಟು ಖುಷಿ ಆಗುತ್ತಲ್ವಾ! ‘ಇಡೀ ಭೂಮಿಯ ನ್ಯಾಯಾಧೀಶನಾಗಿರೋ ಯೆಹೋವ’ ಇಂಥ ವ್ಯಕ್ತಿಗಳನ್ನ ಇನ್ನೂ ಹೇಗೆಲ್ಲ ಸತ್ಯಕ್ಕೆ ಕರ್ಕೊಂಡು ಬರ್ತಾನೆ ಅಂತ ನೋಡೋದೇ ನಮ್ಮ ಕಣ್ಣಿಗೆ ಹಬ್ಬ! —ಆದಿ. 18:25.
6. ಮಾರ್ಕ 13:13ರ ಪ್ರಕಾರ ಜನ ನಮ್ಮನ್ನ ದ್ವೇಷಿಸೋಕೆ ಇನ್ನೊಂದು ಕಾರಣ ಏನು?
6 ನಾವು ಯೇಸುನ ಗೌರವಿಸ್ತೀವಿ, ಬೆಂಬಲಿಸ್ತಿವಿ, ಅದಕ್ಕೆ ಜನ ನಮ್ಮನ್ನ ದ್ವೇಷಿಸ್ತಾರೆ. “ನನ್ನ ಶಿಷ್ಯರಾಗಿರೋ ಕಾರಣ ನಿಮ್ಮನ್ನ ಜನ್ರೆಲ್ಲ ದ್ವೇಷಿಸ್ತಾರೆ” ಅಂತ ಯೇಸು ಹೇಳಿದನು. (ಮಾರ್ಕ 13:13 ಓದಿ.) ಯೇಸು ದೇವರ ಮಗನಾಗಿದ್ದಾನೆ. ದೇವರ ಆಳ್ವಿಕೆಯ ರಾಜನಾಗಿದ್ದಾನೆ. ಹಾಗಾಗಿ ನಾವೆಲ್ಲ ಆತನನ್ನ ಬೆಂಬಲಿಸ್ತೀವಿ. ಆದ್ರೆ ಜನ, ರಾಜಕೀಯ ನಾಯಕರ ಮೇಲೆ ತಮ್ಮ ನಂಬಿಕೆ ಇಟ್ಟಿದ್ದಾರೆ. ಯೆಹೋವ ಆಯ್ಕೆ ಮಾಡಿರೋ ಯೇಸು ಮೇಲೆ ನಂಬಿಕೆ ಇಟ್ಟಿಲ್ಲ. ಹಾಗಾಗಿ ಅವರು ನಮ್ಮನ್ನ ದ್ವೇಷಿಸ್ತಾರೆ. ಆದ್ರೆ ಯೇಸು 1914ರಿಂದ ದೇವರ ಆಳ್ವಿಕೆಯ ರಾಜನಾಗಿ ಆಳ್ವಿಕೆ ಮಾಡ್ತಿದ್ದಾನೆ. ತುಂಬ ಬೇಗ ಆತನು ಬೇರೆಲ್ಲ ಸರ್ಕಾರಗಳನ್ನ ತೆಗೆದುಹಾಕ್ತಾನೆ.
7-8. ಜನ ನಮ್ಮನ್ನ ದ್ವೇಷಿಸೋಕೆ ಇನ್ನೊಂದು ಕಾರಣ ಏನು? (ಯೋಹಾನ 15:18-20) (ಚಿತ್ರ ನೋಡಿ.)
7 ನಾವು ಈ ಲೋಕದ ಜನ್ರ ತರ ಇಲ್ಲ ಅದಕ್ಕೆ ಅವರು ನಮ್ಮನ್ನ ದ್ವೇಷಿಸ್ತಾರೆ. “ನೀವು ಲೋಕದ ಜನ್ರ ತರ ಇಲ್ಲದೇ ಇರೋದ್ರಿಂದ . . . ಲೋಕ ನಿಮ್ಮನ್ನ ದ್ವೇಷಿಸುತ್ತೆ” ಅಂತ ಯೇಸು ಹೇಳಿದನು. (ಯೋಹಾನ 15:18-20 ಓದಿ.) ಒಂದನೇ ಶತಮಾನದ ಜನ ದೇವ್ರಿಗೆ ಇಷ್ಟ ಆಗದೆ ಇರೋ ತರ ನಡ್ಕೊಳ್ತಿದ್ರು, ಮಾತಾಡ್ತಿದ್ರು ಮತ್ತು ಕೆಟ್ಟ ಗುಣಗಳನ್ನ ತೋರಿಸ್ತಿದ್ರು. ಆದ್ರೆ ಆಗಿದ್ದ ಕ್ರೈಸ್ತರು ಆ ಜನ್ರ ತರ ನಡ್ಕೊಳ್ಳಲಿಲ್ಲ. ಇವತ್ತು ನಮ್ಮ ಸಹೋದರ ಸಹೋದರಿಯರು ಈ ಲೋಕದ ಜನ್ರ ತರ ನಡ್ಕೊಳಲ್ಲ. ಅದಕ್ಕೆ, ಶಾಲೆಯಲ್ಲಿ ಮತ್ತು ಕೆಲಸದಲ್ಲಿ ಅವ್ರನ್ನ ಜನ ಹಂಗಿಸ್ತಾರೆ, ರೇಗಿಸ್ತಾರೆ ಮತ್ತು ತೊಂದ್ರೆ ಕೊಡ್ತಾರೆ. (1 ಪೇತ್ರ 4:3, 4) ಆದ್ರೆ ಈ ತರ ತೊಂದ್ರೆ ಕೊಟ್ಟವರೂ ನಿಧಾನವಾಗಿ ನಮ್ಮ ಒಳ್ಳೆ ನಡತೆ ನೋಡಿ ಬದಲಾಗಿದ್ದಾರೆ. ಕೊನೆಗೂ ನಮ್ಮ ನಡತೆನ ಅವರು ಮೆಚ್ಕೊಂಡಿದ್ದಾರೆ.
8 ಮಧ್ಯ ಅಮೇರಿಕಾದಲ್ಲಿರೋ ಇಗ್ನಾಷಿಯೋ ಅನ್ನೋ ಸಹೋದರನ ಅನುಭವ ನೋಡಿ. ಅವರು ಪಾಲಿಸುತ್ತಿದ್ದ ಬೈಬಲ್ ನಿಯಮಗಳನ್ನೆಲ್ಲ ನೋಡಿ ಅವ್ರ ಶಾಲೆಯಲ್ಲಿದ್ದ ಒಬ್ಬ ಟೀಚರ್ ಅವ್ರನ್ನ ರೇಗಿಸ್ತಿದ್ರು. ಆದ್ರೆ ನಮ್ಮ ಸಹೋದರ ತನ್ನ ಓದನ್ನ ಮುಗಿಸೋ ಮುಂಚೆ ಅದೇ ಟೀಚರ್ ಅವನ ಹತ್ರ ಬಂದು, ‘ನಿನಗೆ ಇಷ್ಟೆಲ್ಲಾ ಅವಮಾನ ಆದ್ರೂ, ಯಾಕೆ ನೀನು ಬೈಬಲ್ ಹೇಳೋ ತರಾನೇ ನಡ್ಕೊಳ್ತೀಯಾ?’ ಅಂತ ಕೇಳಿದ್ರು. ಆಗ ಇಗ್ನಾಷಿಯೋ ‘ದೇವರ ಮಾತನ್ನ ನಾವು ಪಾಲಿಸಿದ್ರೆ ಅದ್ರಿಂದ ನಮಗೆ ಎಷ್ಟೋ ರಕ್ಷಣೆ ಸಿಗುತ್ತೆ’ ಅಂತ ಹೇಳಿದ. ‘ನಮ್ಮ ಸಭಾಕೂಟಗಳಿಗೆ ಬನ್ನಿ’ ಅಂತ ಕರೆದ. ನಿಮಗೆ ಗೊತ್ತಾ? ಆ ಟೀಚರ್ ಕೂಟಗಳಿಗೂ ಬಂದ್ರು. ಅಲ್ಲಿದ್ದ ಪ್ರೀತಿ-ವಿಶ್ವಾಸ ನೋಡಿ ಅವ್ರಿಗೆ ತುಂಬ ಖುಷಿ ಆಯ್ತು. ಆಮೇಲೆ ಅವರು ಬೈಬಲ್ ಕಲಿಯೋಕೆ ಶುರು ಮಾಡಿದ್ರು. ಇದ್ರಿಂದ ಟೀಚರ್‌ಗೂ ಮುಂದೆ ತುಂಬ ವಿರೋಧ ಬಂತು. ಆದ್ರೆ ಅವರು ಸತ್ಯನ ಬಿಟ್ಕೊಡಲಿಲ್ಲ. ಆಧ್ಯಾತ್ಮಿಕವಾಗಿ ಪ್ರಗತಿ ಮಾಡಿದ್ರು, ಕೊನೆಗೆ ದೀಕ್ಷಾಸ್ನಾನನೂ ತಗೊಂಡ್ರು.
ನಾವು ಚಿಕ್ಕವ್ರಾಗಿರಲಿ, ದೊಡ್ಡವ್ರಾಗಿರಲಿ, ಧೈರ್ಯವಾಗಿ ನಮ್ಮ ನಂಬಿಕೆ ಬಗ್ಗೆ ಹೇಳಬಹುದು (ಪ್ಯಾರ 8 ನೋಡಿ)b
9-10. (ಎ) ಬೇರೆ ಯಾವ ಕಾರಣದಿಂದಾನೂ ನಾವು ಈ ಲೋಕದ ಜನ್ರ ತರ ಇಲ್ಲ ಅಂತ ಹೇಳಬಹುದು? (ಬಿ) ಅಪೊಸ್ತಲ ಪೌಲನಿಂದ ನಾವು ಏನು ಕಲಿಬಹುದು?
9 ರೋಮನ್ನರಿಗೆ 13:1 ಹೇಳೋ ಹಾಗೆ ನಾವು ಅಧಿಕಾರಿಗಳಿಗೆ ಗೌರವ ಕೊಡ್ತೀವಿ. ಹಾಗಾಗಿ ಅವರು ಇಡೋ ನಿಯಮಗಳನ್ನ ಪಾಲಿಸ್ತೀವಿ. ಆದ್ರೆ ನಾವು ರಾಜಕೀಯ ವಿಷಯಗಳಲ್ಲಿ ಮತ್ತು ಯುದ್ಧಗಳಲ್ಲಿ ತಟಸ್ಥರಾಗಿ ಇರ್ತಿವಿ. (ಯೋಹಾ. 18:36) ಅದಕ್ಕೇ ಜನ ನಮ್ಮನ್ನ ದ್ವೇಷಿಸ್ತಾರೆ. ನಾವು ಎಲೆಕ್ಷನ್‌ಗೆ ನಿಲ್ಲಲ್ಲ ಅಥವಾ ವೋಟ್ ಹಾಕಲ್ಲ. ಯಾಕೆ? ಯಾಕಂದ್ರೆ ಈಗಾಗಲೇ ನಾವು ಯೆಹೋವನಿಗೆ ಮತ್ತು ಕ್ರಿಸ್ತನ ಆಳ್ವಿಕೆಗೆ ನಿಯತ್ತಾಗಿ ಇದ್ದೀವಿ ಮತ್ತು ಅದನ್ನ ಬೆಂಬಲಿಸ್ತಾ ಇದ್ದೀವಿ. ಇದನ್ನ ನಂಬಿರೋದ್ರಿಂದ ಎಷ್ಟೋ ಯೆಹೋವನ ಸಾಕ್ಷಿಗಳನ್ನ ಜೈಲಿಗೆ ಹಾಕಿದ್ದಾರೆ. ಹಾಗಿದ್ರೂ ಜೈಲಿಗೆ ಹೋದ್ಮೇಲೂ ನಮ್ಮ ಸಹೋದರ ಸಹೋದರಿಯರು ಸಾರೋ ಕೆಲಸನ ಮುಂದುವರೆಸಿದ್ದಾರೆ. ಅಪೊಸ್ತಲ ಪೌಲನನ್ನೂ ಎಷ್ಟೋ ವರ್ಷ ಜೈಲಿಗೆ ಹಾಕಿದ್ರು. (ಅ. ಕಾ. 24:27; 28:16, 30) ಆಗ ಅವನು ಏನು ಮಾಡಿದ? ಯಾರೆಲ್ಲ ತಾನು ಸಾರೋ ಸಿಹಿಸುದ್ದಿಯನ್ನ ಕೇಳಿಸ್ಕೊಳ್ಳೋಕೆ ಮನಸ್ಸು ಮಾಡಿದ್ರೋ ಅವ್ರೆಲ್ರಿಗೂ ಅದನ್ನ ಸಾರಿದ. ಆದ್ರಿಂದ ಜೈಲಿನ ಕಾವಲುಗಾರರಿಗೆ, ಅಧಿಕಾರಿಗಳಿಗೆ, ರಾಜ್ಯಪಾಲರಿಗೆ, ರಾಜರಿಗೆ ಮತ್ತು ರೋಮನ್ ಚಕ್ರವರ್ತಿ ನೀರೊಗೂ ಸಿಹಿಸುದ್ದಿ ಕೇಳೋ ಅವಕಾಶ ಸಿಕ್ತು.—ಅ. ಕಾ. 9:15.
10 ಪೌಲನ ತರಾನೇ ಇವತ್ತು ಜೈಲಲ್ಲಿರೋ ನಮ್ಮ ಸಹೋದರ ಸಹೋದರಿಯರು, ನ್ಯಾಯಾಧೀಶರಿಗೆ, ಸರ್ಕಾರಿ ಅಧಿಕಾರಿಗಳಿಗೆ, ಕಾವಲುಗಾರರಿಗೆ ಸಿಹಿಸುದ್ದಿ ಸಾರ್ತಿದ್ದಾರೆ. ಒಬ್ಬ ಸಹೋದರ ರಾಜಕೀಯ ವಿಷ್ಯಗಳಲ್ಲಿ ತಟಸ್ಥರಾಗಿದ್ರು. ಹಾಗಾಗಿ ಅವ್ರನ್ನ 6ಕ್ಕಿಂತ ಹೆಚ್ಚು ವರ್ಷ ಜೈಲಿಗೆ ಹಾಕಿದ್ರು. ಆ ಸಹೋದರ ಹೇಳೋದು, ‘ಜೈಲಿಗೆ ಹಾಕಿದ್ದು ನನಗೆ ಸಿಕ್ಕ ಶಿಕ್ಷೆ ಅಲ್ಲ. ಸಾರೋಕೆ ನನಗೆ ಸಿಕ್ಕ ನೇಮಕ ಅಂತ ಅನಿಸಿದೆ.’ ಜೈಲಲ್ಲಿ ಇರೋ ಜನ್ರಿಗೆ ಸಿಹಿಸುದ್ದಿ ಸಾರೋಕೆ ಯೆಹೋವ ನಮ್ಮನ್ನ ಈ ರೀತಿ ಬಳಸೋದಾದ್ರೆ, ಅದನ್ನ ನಾವು ಸಂತೋಷವಾಗಿ ಸ್ವೀಕರಿಸಬೇಕಲ್ವಾ? (ಕೊಲೊ. 4:3) ಜನ ನಮ್ಮನ್ನ ದ್ವೇಷಿಸೋಕೆ ಇನ್ನೂ ಏನು ಕಾರಣ ಇದೆ ಅಂತಾನೂ ನೋಡೋಣ ಬನ್ನಿ.
ದ್ವೇಷಿಸಿದ್ರೂ ಯಾಕೆ ಖುಷಿಯಾಗಿರಬಹುದು?
11. ಹಿಂಸೆ ಬಂದಾಗ ನಮ್ಮ ನಂಬಿಕೆ ಗಟ್ಟಿ ಆಗುತ್ತಾ? ಉದಾಹರಣೆ ಕೊಡಿ.
11 ಜನ ನಮ್ಮನ್ನ ದ್ವೇಷಿಸೋದು ಭವಿಷ್ಯವಾಣಿಯ ನೆರವೇರಿಕೆ. ಸೈತಾನ ಮತ್ತು ಅವನ ಸಂತಾನ, ಯೆಹೋವನನ್ನ ಪ್ರೀತಿಸೋ ಪ್ರತಿಯೊಬ್ರನ್ನ ದ್ವೇಷಿಸ್ತಾರೆ ಅಂತ ಮೊದಲ ಭವಿಷ್ಯವಾಣಿಯಲ್ಲೇ ಯೆಹೋವ ಹೇಳಿದನು. (ಆದಿ. 3:15) ಆ ಭವಿಷ್ಯವಾಣಿಯ ಪ್ರಕಾರ ‘ಜನ ನಮ್ಮನ್ನ ದ್ವೇಷಿಸ್ತಾರೆ’ ಅನ್ನೋ ವಿಷ್ಯನ ಯೇಸು ಮತ್ತೆಮತ್ತೆ ನೆನಪಿಸಿದನು. (ಮತ್ತಾ. 10:22; ಮಾರ್ಕ 13:9-12; ಲೂಕ 6:22, 23; ಯೋಹಾ. 15:20) ಬೈಬಲನ್ನ ಬರೆದ ಬೇರೆ ಬರಹಗಾರರು ಅದನ್ನೇ ಹೇಳಿದ್ದಾರೆ. (2 ತಿಮೊ. 3:12; ಯಾಕೋ. 1:2; 1 ಪೇತ್ರ 4:12-14; ಯೂದ 3, 17-19) ಹಾಗಾಗಿ ನಮಗೆ ಹಿಂಸೆ ಬಂದಾಗ ಆಶ್ಚರ್ಯ ಆಗಲ್ಲ. ಬದಲಿಗೆ ಬೈಬಲ್ ಭವಿಷ್ಯವಾಣಿ ನೆರವೇರ್ತಿದೆ ಅಂತ ನಮಗೆ ಖುಷಿ ಆಗುತ್ತೆ. ಅದು ನೆರವೇರೋದನ್ನ ನೋಡಿದಾಗ ನಾವು ಸತ್ಯದೇವರನ್ನೇ ಆರಾಧಿಸ್ತಿದ್ದೀವಿ ಅನ್ನೋ ಭರವಸೆ ಹೆಚ್ಚಾಗುತ್ತೆ. ಸಾರೋ ಕೆಲಸಕ್ಕೆ ನಿಷೇಧ ಇರೋ ದೇಶದಲ್ಲಿ ಸೇವೆ ಮಾಡ್ತಿರೋ ಒಬ್ಬ ಸಹೋದರಿ ಹೀಗೆ ಹೇಳ್ತಾರೆ, “ನಾನು ಯೆಹೋವನಿಗೆ ಸಮರ್ಪಿಸ್ಕೊಂಡಾಗ್ಲೇ ಇವತ್ತಲ್ಲ ನಾಳೆ ನಂಗೆ ಹಿಂಸೆ ಬರುತ್ತೆ ಅನ್ನೋದು ಗೊತ್ತಿತ್ತು. ಹಾಗಾಗಿ ಹಿಂಸೆಗಳು ಬಂದಾಗ ನಾನು ಭಯಪಡಲಿಲ್ಲ ಅಥವಾ ಶಾಕ್ ಆಗ್ಲಿಲ್ಲ.” (ಇಬ್ರಿ. 10:39) ಇವ್ರಿಗೆ ತುಂಬ ಜನ ವಿರೋಧ ಮಾಡಿದ್ರು. ಅವ್ರಲ್ಲಿ ಇವ್ರ ಗಂಡ ಕೂಡ ಒಬ್ಬ. ಅವನು ಇವ್ರಿಗೆ ಬೈತಿದ್ದ, ಅವಮಾನ ಮಾಡ್ತಿದ್ದ. ಬೈಬಲನ್ನ, ಬೈಬಲ್ ಪುಸ್ತಕಗಳನ್ನೆಲ್ಲ ಸುಟ್ಟಾಕ್ತಿದ್ದ. ಆದ್ರೆ ನಮ್ಮ ಸಹೋದರಿ ಇದನ್ನೆಲ್ಲಾ ನೋಡಿ ಭಯದಿಂದ ಹಿಂದೆ ಹೋಗ್ಲಿಲ್ಲ. ತಮ್ಮ ನಂಬಿಕೆನ ಇನ್ನಷ್ಟು ಬಲಪಡಿಸ್ಕೊಂಡ್ರು. ಸಹೋದರಿ ಹೇಳೋದು, “ಹಿಂಸೆ ಬರುತ್ತೆ ಅಂತ ಭವಿಷ್ಯವಾಣಿಯಲ್ಲಿ ಈಗಾಗ್ಲೇ ಹೇಳಿದೆ. ಹಾಗಾಗಿ ಹಿಂಸೆ ಬಂದೇ ಬರುತ್ತೆ ಅಂತ ನನಗೆ ಗೊತ್ತಿತ್ತು. ಹಿಂಸೆ ಬಂದಾಗ ಇದೇ ಸತ್ಯ ಧರ್ಮ ಅನ್ನೋದು ನನಗೆ ಇನ್ನಷ್ಟು ಮನದಟ್ಟಾಯ್ತು.”
12. ಹಿಂಸೆಯನ್ನ ನಿಭಾಯಿಸೋಕೆ ಒಬ್ಬ ಸಹೋದರನಿಗೆ ಯಾವುದು ಸಹಾಯ ಮಾಡ್ತು?
12 ಹಿಂಸೆ ಬರುತ್ತೆ ಅಂತ ಗೊತ್ತಿದ್ರೂ ಅದು ಬಂದಾಗ ತಾಳ್ಕೊಳೋದು ಅಷ್ಟು ಸುಲಭ ಅಲ್ಲ. ಜೈಲಲ್ಲಿದ್ದ ಒಬ್ಬ ಸಹೋದರ ಹಿಂಸೆ ಬಂದಾಗ ಅವ್ರಿಗೆ ಹೇಗೆ ಅನಿಸ್ತು ಅಂತ ಹೇಳ್ತಾರೆ ನೋಡಿ, “ಕೆಲವೊಮ್ಮೆ ನಾನು ಕುಗ್ಗಿ ಹೋಗ್ತಿದ್ದೆ. ತುಂಬ ಚಿಂತೆ ಆಗ್ತಿತ್ತು, ಅಳ್ತಿದ್ದೆ.” ಈ ಪರಿಸ್ಥಿತಿನ ನಿಭಾಯಿಸೋಕೆ ಆ ಸಹೋದರನಿಗೆ ಯಾವುದು ಸಹಾಯ ಮಾಡ್ತು? ಅವರು ಹೇಳೋದು, “ನಾನು ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ದೆ. ಬೆಳಿಗ್ಗೆ ಎದ್ದ ತಕ್ಷಣ ಪ್ರಾರ್ಥನೆ ಮಾಡ್ತಿದ್ದೆ, ನನಗೆ ಕಷ್ಟ ಅನಿಸಿದಾಗೆಲ್ಲ ಪ್ರಾರ್ಥನೆ ಮಾಡ್ತಿದ್ದೆ. ಯಾರಾದ್ರೂ ನನ್ನ ಜೊತೆ ತಪ್ಪಾಗಿ ನಡ್ಕೊಂಡ್ರೆ, ಅನ್ಯಾಯ ಮಾಡಿದ್ರೆ ಕೋಪ ಬರ್ತಿತ್ತು. ಆದ್ರೆ ಆಗ್ಲೂ ನಾನು ಬಾತ್ರೂಮ್ ಒಳಗೆ ಹೋಗಿ ಪ್ರಾರ್ಥನೆ ಮಾಡ್ತಿದ್ದೆ.” ಇವರು, ಬೈಬಲ್ ಸಮಯದಲ್ಲಿದ್ದ ಮತ್ತು ನಮ್ಮ ದಿನಗಳಲ್ಲಿರೋ ಯೆಹೋವನ ಸೇವಕರು ನಿಷ್ಠೆ ತೋರಿಸೋಕೆ ಏನೆಲ್ಲಾ ಮಾಡಿದ್ದಾರೆ ಅನ್ನೋದ್ರ ಬಗ್ಗೆನೂ ಧ್ಯಾನ ಮಾಡ್ತಿದ್ರು. ಅದು ಹಿಂಸೆಯನ್ನ ತಾಳ್ಕೊಳ್ಳೋಕೆ ಇವ್ರಿಗೆ ಸಹಾಯ ಮಾಡ್ತು. ಅಷ್ಟೇ ಅಲ್ಲ, ಯೇಸು ತನ್ನ ಶಿಷ್ಯರಿಗೆ ಕೊಡ್ತೀನಿ ಅಂತ ಹೇಳಿದ್ದ ಶಾಂತಿಯನ್ನ ಪಡ್ಕೊಳ್ಳೋಕೂ ಸಹಾಯ ಮಾಡ್ತು.—ಯೋಹಾ. 14:27; 16:33.
13. ದ್ವೇಷವನ್ನ ತಾಳ್ಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
13 ದ್ವೇಷವನ್ನ ತಾಳ್ಕೊಳ್ಳೋಷ್ಟು ಪ್ರೀತಿ ನಮಗಿದೆ. ತನ್ನ ಕೊನೆ ಉಸಿರು ಇರೋವರೆಗೂ ಯೇಸು, ಯೆಹೋವನನ್ನ ಮತ್ತು ತನ್ನ ಸ್ನೇಹಿತ್ರನ್ನ ಪೂರ್ಣ ಹೃದಯದಿಂದ ಪ್ರೀತಿಸಿದ. (ಯೋಹಾ. 13:1; 15:13) ನಾವು ಯೆಹೋವನ ಮೇಲೆ, ನಮ್ಮ ಸಹೋದರ ಸಹೋದರಿಯರ ಮೇಲೆ ಅಂಥ ಪ್ರೀತಿಯನ್ನ ಬೆಳೆಸ್ಕೊಬೇಕು. ಆಗ ನಾವು ದ್ವೇಷವನ್ನ ಜಯಿಸಬಹುದು. ಅದು ಹೇಗೆ ಅಂತ ಅಪೊಸ್ತಲ ಪೌಲನ ಉದಾಹರಣೆಯಿಂದ ಕಲಿಯೋಣ.
14. ಸಾವು ಕಣ್ಣು ಮುಂದೆ ಇದ್ರೂ ಯೆಹೋವನಿಗೆ ನಿಷ್ಠೆಯಿಂದ ಇರೋಕೆ ಪೌಲನಿಗೆ ಯಾವುದು ಸಹಾಯ ಮಾಡ್ತು?
14 ತನ್ನನ್ನ ಜನ ಕೊಲ್ಲೋಕ್ಕಿಂತ ಮುಂಚೆ ಪೌಲ ತನ್ನ ಸ್ನೇಹಿತ ತಿಮೊತಿಗೆ, “ದೇವರು ಕೊಡೋ ಪವಿತ್ರಶಕ್ತಿ ನಮ್ಮಲ್ಲಿ ಹೇಡಿತನವನ್ನ ಅಲ್ಲ, ಬಲ, ಪ್ರೀತಿ . . . ಹುಟ್ಟಿಸುತ್ತೆ” ಅಂತ ಹೇಳಿದ. (2 ತಿಮೊ. 1:7) ಪೌಲ ಹೇಳಿದ ಮಾತಿನ ಅರ್ಥ ಏನು? ಒಬ್ಬ ಕ್ರೈಸ್ತನಿಗೆ ಯೆಹೋವನ ಮೇಲೆ ನಿಜವಾದ ಪ್ರೀತಿ ಇದ್ರೆ, ಎಂಥದ್ದೇ ಕಷ್ಟಗಳು ಬಂದ್ರೂ ಅವನ್ನ ಎದುರಿಸೋಕೆ ಅವನು ರೆಡಿ ಇರ್ತಾನೆ. (2 ತಿಮೊ. 1:8) ಪೌಲನಿಗೂ ಯೆಹೋವನ ಮೇಲೆ ಇಂಥ ಪ್ರೀತಿ ಇತ್ತು. ಅದಕ್ಕೆ, ತನ್ನನ್ನ ಕೊಲ್ತಾರೆ ಅಂತ ಗೊತ್ತಿದ್ರೂ ಧೈರ್ಯವಾಗಿ ಕೊನೆವರೆಗೂ ಯೆಹೋವನಿಗೆ ನಿಷ್ಠೆಯಿಂದ ಇದ್ದ.—ಅ. ಕಾ. 20:22-24.
15. ನಮ್ಮ ಸಹೋದರ ಸಹೋದರಿಯರು ಇವತ್ತು ಹೇಗೆ ನಿಸ್ವಾರ್ಥ ಪ್ರೀತಿ ತೋರಿಸ್ತಿದ್ದಾರೆ? (ಚಿತ್ರ ನೋಡಿ.)
15 ಹಿಂಸೆ ಬಂದ್ರೂ ಯೆಹೋವನ ಮೇಲೆ ತಮಗಿರೋ ಪ್ರೀತಿನ ಬಿಟ್ಕೊಡದೇ ಇರೋ ಸಹೋದರ ಸಹೋದರಿಯರನ್ನ ನೋಡಿದಾಗ ನಮಗೆ ಎಷ್ಟು ಖುಷಿ ಆಗುತ್ತಲ್ವಾ! ಇಂಥ ಪರಿಸ್ಥಿತಿಯಲ್ಲಿ ಇರೋರಿಗೆ ಪ್ರೋತ್ಸಾಹ ಕೊಡೋಕೆ ಇವತ್ತು ಎಷ್ಟೋ ಸಹೋದರರು ಅಕ್ವಿಲ ಮತ್ತು ಪ್ರಿಸ್ಕ ತರ ತಮ್ಮ ಜೀವಾನೇ ಪಣಕ್ಕೊಡ್ಡಿದ್ದಾರೆ. (ರೋಮ. 16:3, 4) ಉದಾಹರಣೆಗೆ, ರಷ್ಯಾದಲ್ಲಿ ನಮ್ಮ ಸಹೋದರ ಸಹೋದರಿಯರ ವಿಚಾರಣೆ ನಡಿಬೇಕಾದ್ರೆ, ನಮ್ಮವರು ಕೋರ್ಟ್‌ಗೆ ಹೋಗಿದ್ರು. ಒಂದ್ಸಲ ನಮ್ಮ ಸಹೋದರಿಯನ್ನ ಜೈಲಿಗೆ ಹಾಕಿದ್ರು. ಆ ಸಹೋದರಿಯ ಕೋರ್ಟ್ ವಿಚಾರಣೆ ನಡೆಯೋ ದಿನ, ಹತ್ತಾರು ಸಹೋದರ ಸಹೋದರಿಯರು ಹೊರಗಡೆ ನಿಂತ್ಕೊಂಡಿದ್ರು. ಇದನ್ನ ನೋಡಿದಾಗ ಆ ಸಹೋದರಿಗೆ ಎಷ್ಟು ಪ್ರೋತ್ಸಾಹ ಸಿಕ್ತು ಅಂದ್ರೆ, ಎಷ್ಟೋ ಸಮಯದವರೆಗೆ ಅವ್ರಿಗೆ ಏನು ಮಾತಾಡಬೇಕು ಅಂತಾನೇ ಗೊತ್ತಾಗಿಲ್ಲ ಅಂತ ಅವರು ಹೇಳ್ತಾರೆ. ಇವ್ರಿಗೆ ನಮ್ಮ ಸಹೋದರ ಸಹೋದರಿಯರು ಸರಿಯಾದ ಸಮಯಕ್ಕೆ ಪ್ರೀತಿ ತೋರ್ಸಿದ್ರು. ಇದು ಅವ್ರಿಗೆ ಬಲ ತುಂಬ್ತು. ನಮಗೋಸ್ಕರ ಇಷ್ಟು ಪ್ರೀತಿ ತೋರಿಸೋ ಇರೋ ಸಹೋದರ ಸಹೋದರಿಯರು ಇರುವಾಗ ನಾವು ಎಂಥ ದ್ವೇಷವನ್ನ ಬೇಕಾದ್ರೂ ಎದುರಿಸಬಹುದಲ್ವಾ?
ನಮ್ಮ ಕೆಲಸ ನಿಷೇಧ ಆಗಿರೋ ಜಾಗದಲ್ಲೂ ನಮ್ಮ ಸಹೋದರ ಸಹೋದರಿಯರೂ ಒಬ್ರಿಗೊಬ್ರು ನಿಸ್ವಾರ್ಥ ಪ್ರೀತಿಯನ್ನ ತೋರಿಸಿದ್ದಾರೆ (ಪ್ಯಾರ 15 ನೋಡಿ)c
16. ದೇವರ ಆರಾಧನೆ ಮಾಡೋದ್ರಿಂದ ಯಾರಾದ್ರೂ ನಮ್ಮನ್ನ ದ್ವೇಷಿಸಿದ್ರೆ ನಾವು ಯಾಕೆ ಖುಷಿಪಡಬೇಕು ಅಂತ ಪೇತ್ರ ಹೇಳಿದ್ದಾನೆ? (1 ಪೇತ್ರ 4:14)
16 ನಾವು ದ್ವೇಷನ ತಾಳ್ಕೊಂಡ್ರೆ ದೇವರು ನಮ್ಮ ಬಗ್ಗೆ ಹೆಮ್ಮೆ ಪಡ್ತಾನೆ ಅಂತ ನಮಗೆ ಗೊತ್ತು. (1 ಪೇತ್ರ 4:14 ಓದಿ.) ದೇವರ ಆರಾಧನೆ ಮಾಡ್ತಿರೋದ್ರಿಂದ, ನಮ್ಮಲ್ಲಿ ಯಾರಾದ್ರೂ ಅನ್ಯಾಯನ ಸಹಿಸ್ಕೊಳ್ಳೋದಾದ್ರೆ ನಾವು ಖುಷಿಪಡಬಹುದು ಅಂತ ಅಪೊಸ್ತಲ ಪೇತ್ರ ಹೇಳಿದ. ಯಾಕೆ? ಆ ತರ ಅನ್ಯಾಯನ ನಾವು ಸಹಿಸ್ಕೊಂಡ್ರೆ ‘ದೇವರ ಪವಿತ್ರಶಕ್ತಿ ನಮ್ಮಲ್ಲಿದೆ’ ಅಂತರ್ಥ. ಹಿಂಸೆಯನ್ನ ತಾಳ್ಕೊಂಡಾಗ ದೇವರು ನಮ್ಮನ್ನ ನೋಡಿ ಖುಷಿ ಪಡ್ತಾನೆ ಅನ್ನೋದು ಪೇತ್ರನಿಗೆ ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ ಸಾ.ಶ 33ರ 50ನೇ ದಿನದ ಹಬ್ಬದ ನಂತ್ರ ಪೇತ್ರ ಮತ್ತು ಬೇರೆ ಅಪೊಸ್ತಲರನ್ನ ಬಂಧಿಸೋಕೆ ಯೆಹೂದಿ ದೇವಾಲಯದ ಅಧಿಕಾರಿಗಳು ಕೆಲವ್ರನ್ನ ಕಳಿಸಿದರು. ಆದ್ರೆ ಪೇತ್ರ ಆಗ ಧೈರ್ಯವಾಗಿ ತನ್ನ ನಂಬಿಕೆ ಬಗ್ಗೆ ಮಾತಾಡಿದ. (ಅ. ಕಾ. 5:24-29) ಅವರು ಪೇತ್ರನನ್ನ ಎಚ್ಚರಿಸಿ ಕಳಿಸಿದ ಮೇಲೆನೂ ಅವನು ಮತ್ತು ಬೇರೆ ಅಪೊಸ್ತಲರು ಸಿಹಿಸುದ್ದಿ ಸಾರೋದನ್ನ ನಿಲ್ಲಿಸಲಿಲ್ಲ. “ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು” ಅಂತ ಬೈಬಲ್ ಹೇಳುತ್ತೆ. ಹಾಗಾಗಿ ನಮಗೆ ಹಿಂಸೆ ಬಂದಾಗ ನಾವೂ ಖುಷಿಪಡಬಹುದು.—ಅ. ಕಾ. 5:40-42.
17. ತಾನು ಸಾಯೋ ಹಿಂದಿನ ರಾತ್ರಿ ಯೇಸು ಶಿಷ್ಯರಿಗೆ ಏನು ಹೇಳಿದನು?
17 ಯೇಸು ಸಾಯೋ ಹಿಂದಿನ ರಾತ್ರಿ ತನ್ನ ಶಿಷ್ಯರಿಗೆ, ‘ನನ್ನನ್ನ ಪ್ರೀತಿಸೋರನ್ನ ನನ್ನ ಅಪ್ಪ ಪ್ರೀತಿಸ್ತಾನೆ. ನಾನು ಸಹ ಅವ್ರನ್ನ ಪ್ರೀತಿಸ್ತೀನಿ’ ಅಂತ ಹೇಳಿದನು. (ಯೋಹಾ. 14:21) ಯೆಹೋವನನ್ನ ಆರಾಧಿಸೋರನ್ನ ಯಾರೂ ದ್ವೇಷಿಸದೆ, ಎಲ್ರೂ ಪ್ರೀತಿಸೋ ಸಮಯ ತುಂಬ ಬೇಗ ಬರುತ್ತೆ. (2 ಥೆಸ. 1:6-8) ಆ ಸಮಯ ಬಂದಾಗ ಜೀವನ ಎಷ್ಟು ಚೆನ್ನಾಗಿರುತ್ತಲ್ವಾ! ಆದ್ರೆ ಅಲ್ಲಿವರೆಗೂ ದ್ವೇಷದ ಮಧ್ಯೆನೂ ಖುಷಿಯಾಗಿರೋಕೆ ನಮಗೆ ಎಷ್ಟೋ ಕಾರಣಗಳಿವೆ. ಅದ್ರ ಕಡೆಗೆ ಗಮನ ಕೊಡೋಣ.
ಗೀತೆ 7 ಯೆಹೋವ, ನಮ್ಮ ಶಕ್ತಿ
a ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.
b ಚಿತ್ರ ವಿವರಣೆ: ಇಗ್ನಾಷಿಯೋ ತನ್ನ ಟೀಚರ್‌ಗೆ ಸಿಹಿಸುದ್ದಿ ಸಾರ್ತಿರೋ ಚಿತ್ರ.
c ಚಿತ್ರ ವಿವರಣೆ: ತನ್ನ ನಂಬಿಕೆಯಿಂದಾಗಿ ಜೈಲು ಶಿಕ್ಷೆ ಪಡೆದ ಸಹೋದರಿಯನ್ನ ಬೆಂಬಲಿಸೋಕೆ ಬಂದಿರೋ ಸಹೋದರ ಸಹೋದರಿಯರು.