ಏಪ್ರಿಲ್ 6-12, 2026
ಗೀತೆ 29 ಬಾಳುವೆವು ನಮ್ಮ ನಾಮದಂತೆ
ಸಂಬಂಧಿಕರ ಜೊತೆ ಶಾಂತಿಯಿಂದಿರಿ
“ಒಳ್ಳೇದು ಮಾಡೋದನ್ನ ಬಿಡೋದು ಬೇಡ.”—ಗಲಾ. 6:9.
ಈ ಲೇಖನದಲ್ಲಿ ಏನಿದೆ?
ಸತ್ಯದಲ್ಲಿಲ್ಲದ ಸಂಬಂಧಿಕರ ಜೊತೆ ನಾವು ಹೇಗೆ ಒಳ್ಳೆ ಸಂಬಂಧವನ್ನ ಬೆಳೆಸ್ಕೊಳ್ಳಬಹುದು? ಒಂದುವೇಳೆ ಅವರು ಯೆಹೋವನ ಬಗ್ಗೆ ಕಲಿಯೋಕೆ ಇಷ್ಟಪಟ್ರೆ ನಾವು ಹೇಗೆ ಸಹಾಯ ಮಾಡಬಹುದು ಅಂತ ನೋಡೋಣ.
1-2. ನಾವು ಸತ್ಯ ಕಲಿಯೋಕೆ ಶುರು ಮಾಡಿದಾಗ ನಮ್ಮ ಸಂಬಂಧಿಕರಿಗೆ ಹೇಗೆ ಅನಿಸಿರಬಹುದು?
ಯೇಸು ತನ್ನ ಶಿಷ್ಯನಾಗೋಕೆ ಇಷ್ಟಪಡೋ ವ್ಯಕ್ತಿಗೆ, “ನಿನ್ನ ಮನೆಗೆ ಹೋಗು, ಯೆಹೋವ ನಿನಗೆ ಮಾಡಿದ ಎಲ್ಲ ವಿಷ್ಯಗಳ ಬಗ್ಗೆ ಮತ್ತು ಆತನು ನಿನಗೆ ತೋರಿಸಿದ ಕರುಣೆ ಬಗ್ಗೆ ನಿನ್ನ ಸಂಬಂಧಿಕರಿಗೆ ಹೇಳು” ಅಂದನು. (ಮಾರ್ಕ 5:19) ಯೇಸು ಯಾಕೆ ಈ ರೀತಿ ಹೇಳಿದನು? ತಮಗೆ ತಿಳಿದ ಒಳ್ಳೆ ವಿಷ್ಯನ ತಮ್ಮ ಕುಟುಂಬದವ್ರಿಗೂ ತಿಳಿಸಬೇಕು ಅಂತ ಹೆಚ್ಚಿನ ಜನ ಆಸೆಪಡ್ತಾರೆ ಅಂತ ಯೇಸುಗೆ ಗೊತ್ತಿತ್ತು.
2 ನೀವು ಮೊದಲ ಸಲ ಸಿಹಿಸುದ್ದಿ ಕೇಳಿಸ್ಕೊಂಡಾಗ ಹೇಗನಿಸ್ತು? ನಿಮಗೆ ಖುಷಿಯಾಗಿರಬಹುದಲ್ವಾ! ಅದನ್ನ ನಿಮ್ಮ ಹತ್ರಾನೇ ಇಟ್ಕೊಂಡ್ರಾ? ಇಲ್ಲ. ನೀವು ಅದನ್ನ ನಿಮ್ಮ ಸಂಬಂಧಿಕರಿಗೆ ಹೇಳಿರಬಹುದು. ಆದ್ರೆ ಅವರು ನಿಮ್ಮ ತರಾನೇ ಖುಷಿಪಟ್ರಾ? ಇಲ್ಲ ಅನ್ಸುತ್ತೆ. ನೀವು ಯೆಹೋವನ ಸಾಕ್ಷಿಗಳ ಜೊತೆ ಬೈಬಲ್ ಸ್ಟಡಿ ಮಾಡ್ತಿದ್ದೀರ ಅಂತ ಗೊತ್ತಾದಾಗ ಅವರು ನಿಮ್ಮ ಮೇಲೆ ಕೋಪ ಮಾಡ್ಕೊಂಡಿರಬಹುದು. ನಿಮ್ಮ ಮತ್ತು ಅವ್ರ ಸಂಬಂಧ ಮುರಿದು ಹೋಗಿರಬಹುದು. ಆದ್ರೆ ಯೆಹೋವನ ಮಟ್ಟಗಳನ್ನ ಮುರಿಯದೆ ನೀವು ಹೇಗೆ ನಿಮ್ಮ ಸಂಬಂಧಿಕರ ಜೊತೆ ಒಳ್ಳೆ ಸಂಬಂಧ ಕಾಪಾಡ್ಕೊಬಹುದು ಅಂತ ಈ ಲೇಖನ ತಿಳಿಸುತ್ತೆ.
3. ಈ ಲೇಖನದಲ್ಲಿ ನಾವೇನು ಕಲಿತೀವಿ?
3 ಈ ಲೇಖನದಲ್ಲಿ ನಾವು: (1) ಸತ್ಯದಲ್ಲಿಲ್ಲದ ಸಂಬಂಧಿಕರುa ಯೆಹೋವನ ಬಗ್ಗೆ ಕಲಿಯೋಕೆ ಆಸಕ್ತಿ ತೋರಿಸಿಲ್ಲ ಅಂದ್ರೂ ನಾವು ಹೇಗೆ ಕನಿಕರ ತೋರಿಸಬಹುದು? (2) ಸಂಬಂಧಿಕರು ನಮಗೆ ನೋವಾಗೋ ರೀತಿ ನಡ್ಕೊಂಡ್ರೆ ನಾವೇನು ಮಾಡಬೇಕು? (3) ನಾವು ತಾಳ್ಮೆ ತೋರಿಸ್ತಾ ಮುಂದೆ ಅವರು ಸತ್ಯ ಕಲಿತಾರೆ ಅಂತ ನಂಬಿಕೆ ಇಟ್ರೆ ಏನು ಪ್ರಯೋಜನ? ಮತ್ತು (4) ನಮ್ಮ ಸಂಬಂಧಿಕರನ್ನ ಪ್ರೀತಿಸ್ತೀವಿ ಅಂತ ನಾವು ಹೇಗೆ ತೋರಿಸಬಹುದು? ಅನ್ನೋದನ್ನ ನೋಡೋಣ.
ಅವ್ರಿಗೆ ಕನಿಕರ ತೋರಿಸಿ
4. ತನ್ನ ಶಿಷ್ಯರಾಗೋಕೆ ಇಷ್ಟಪಡದ ವ್ಯಕ್ತಿಗಳ ಜೊತೆ ಯೇಸು ಹೇಗೆ ನಡ್ಕೊಂಡನು?
4 ಅನೇಕ ಜನ್ರು ಯೇಸುವಿನ ಸಂದೇಶವನ್ನ ಕೇಳಲಿಲ್ಲ, ಹಾಗಂತ ಆತನು ಬಿಟ್ಕೊಡ್ಲಿಲ್ಲ. ಸಿಹಿಸುದ್ದಿ ಮೂಲಕ ಅವ್ರ ಮನಸ್ಸು ಮುಟ್ಟೋಕೆ ಪ್ರಯತ್ನ ಮಾಡ್ತಾನೇ ಇದ್ದನು. ಯೇಸು ತನ್ನನ್ನ ತೋಟಗಾರನಿಗೆ ಹೋಲಿಸ್ಕೊಂಡನು. (ಲೂಕ 13:6-9) ಒಬ್ಬ ವ್ಯಕ್ತಿ ತೋಟದಲ್ಲಿ ಅಂಜೂರ ಮರವನ್ನ ನೆಟ್ಟು ಹಣ್ಣು ಬಿಡೋಕೆ ಕಾಯ್ತಾ ಇರ್ತಾನೆ, ಅದಕ್ಕಾಗಿ ಅವನು ತುಂಬ ಪ್ರಯತ್ನ ಹಾಕ್ತಾನೆ. ಅದೇ ತರ, ಯೇಸು ಮೂರು ವರ್ಷಗಳಿಂದ ಯೆಹೂದ್ಯರಿಗೆ ಸಿಹಿಸುದ್ದಿಯನ್ನ ಸಾರ್ತಾನೇ ಇದ್ದನು. ಆದ್ರೆ ಅವ್ರಲ್ಲಿ ಹೆಚ್ಚಿನವರು ಆತನ ಮೇಲೆ ನಂಬಿಕೆ ಇಡ್ಲಿಲ್ಲ. ಹಾಗಂತ ಯೇಸು ಪ್ರಯತ್ನ ಬಿಡಲಿಲ್ಲ. ಅವ್ರಿಗೆ ಕನಿಕರ ತೋರಿಸಿದನು, ಅವ್ರಿಗೆ ಕಲಿಸೋಕೆ ಪ್ರಯತ್ನಿಸ್ತಾನೆ ಇದ್ದನು. ಹಾಗಾಗಿ ಅವ್ರ ಜೊತೆ ತಾಳ್ಮೆಯಿಂದ ನಡ್ಕೊಳ್ಳೋಕೆ ಆತನಿಗೆ ಸಾಧ್ಯ ಆಯ್ತು.
5. ಯೆಹೂದ್ಯರನ್ನ ನೋಡಿದಾಗ ಯೇಸುಗೆ ಯಾಕೆ ಕನಿಕರ ಬಂತು?
5 ದೇವರ ಬಗ್ಗೆ ಯೆಹೂದ್ಯರಿಗೆ ಸತ್ಯ ಕಲಿಸೋ ಜವಾಬ್ದಾರಿ ಧಾರ್ಮಿಕ ಮುಖಂಡರಿಗೆ ಇತ್ತು. ಆದ್ರೆ ಅವರು ಅದನ್ನ ಸರಿಯಾಗಿ ಮಾಡಲಿಲ್ಲ. ಅದಕ್ಕೆ ಯೇಸು ಆ ಜನ್ರನ್ನ ನೋಡಿ ಕನಿಕರ ಪಟ್ಟನು, ಅವರು “ಕುರುಬನಿಲ್ಲದ ಕುರಿಗಳ ಹಾಗೆ” ಇದ್ದಾರೆ ಅಂತ ಅರ್ಥ ಮಾಡ್ಕೊಂಡನು. (ಮಾರ್ಕ 6:34) ಯೇಸು ಸಾಯೋ ಮುಂಚೆ ಯೆರೂಸಲೇಮ್ ನೋಡಿ ಅತ್ತನು. ಯಾಕಂದ್ರೆ ಅವ್ರಲ್ಲಿ ಹೆಚ್ಚಿನವರು ಯೇಸು ಮೇಲೆ ಮತ್ತು ಯೆಹೋವನ ಮೇಲೆ ನಂಬಿಕೆ ಇಡಲಿಲ್ಲ. ಆದ್ರಿಂದ ಅವರು ಮುಂದೆ ತಮ್ಮ ಜೀವ ಕಳ್ಕೊತಾರೆ ಅಂತ ಯೇಸು ನೆನಪು ಮಾಡ್ಕೊಂಡನು. (ಲೂಕ 19:41-44) ನಾವು ನಮ್ಮ ಸಂಬಂಧಿಕರ ಬಗ್ಗೆ ಯೇಸುವಿನ ತರಾನೇ ಯೋಚಿಸಿದ್ರೆ, ಅವ್ರಿಗೆ ಕನಿಕರ ತೋರಿಸ್ತಾ ಸಹಾಯ ಮಾಡೋಕೆ ಮನಸ್ಸಾಗುತ್ತೆ.
6. ಸತ್ಯದಲ್ಲಿಲ್ಲದ ಸಂಬಂಧಿಕರ ಜೊತೆ ನಾವು ಯಾಕೆ ತಾಳ್ಮೆಯಿಂದ ನಡ್ಕೊಬೇಕು? (ಗಲಾತ್ಯ 6:9)
6 ಗಲಾತ್ಯ 6:9 ಓದಿ. ನಿಮ್ಮ ಸಂಬಂಧಿಕರಿಗೆ ಯೆಹೋವನ ಬಗ್ಗೆ ಕಲಿಯೋಕೆ ಇಷ್ಟ ಇಲ್ಲ ಅಂತ ಗೊತ್ತಾದ್ರೆ ಬೇಜಾರಾಗಬೇಡಿ. “ಒಳ್ಳೇದು ಮಾಡೋದನ್ನ” ಬಿಡಬೇಡಿ, ತಾಳ್ಮೆಯಿಂದ ಕಾಯಿರಿ. ಒಬ್ಬ ವ್ಯಕ್ತಿ ತಾನು ನಂಬ್ತಾ ಇರೋದನ್ನ ಬದಲಾಯಿಸ್ಕೊಳ್ಳೋಕೆ ಮತ್ತು ಯೆಹೋವನ ಮೇಲೆ ನಂಬಿಕೆನ ಬೆಳೆಸ್ಕೊಳೋಕೆ ಸಮಯ ಹಿಡಿಯುತ್ತೆ. ನಿಮಗೂ ಒಂದು ಸಮಯದಲ್ಲಿ “ನಿರೀಕ್ಷೆ ಇರಲಿಲ್ಲ, ದೇವರು ಯಾರಂತ ಗೊತ್ತೂ ಇರಲಿಲ್ಲ” ಅಲ್ವಾ? (ಎಫೆ. 2:12) ನಿಮಗೂ ಯಾರೋ ತಾಳ್ಮೆ ತೋರಿಸಿ, ಯೆಹೋವನ ಬಗ್ಗೆ ಕಲಿಸಿದ್ರು ಮತ್ತು ನೀವು ಬದಲಾಗೋಕೆ ಸಹಾಯ ಮಾಡಿದ್ರು ತಾನೇ? ನೀವು ನಿಮ್ಮ ಸಂಬಂಧಿಕರ ಜೊತೆ ಇದೇ ತರ ತಾಳ್ಮೆಯಿಂದ ನಡ್ಕೊಂಡ್ರೆ ಅವ್ರಿಗೆ ಒಂದಲ್ಲ ಒಂದು ದಿನ ಯೆಹೋವನ ಬಗ್ಗೆ ಕಲಿಸೋಕೆ ನಿಮಗೆ ಅವಕಾಶ ಸಿಗುತ್ತೆ.
ಸಂಬಂಧಿಕರು ನಿಮ್ಮ ಮನಸ್ಸು ನೋಯಿಸಿದಾಗ
7. ಯೇಸುವಿನ ತಮ್ಮಂದಿರು ಆತನ ಮೇಲೆ ಯಾಕೆ ನಂಬಿಕೆ ಇಡಲಿಲ್ಲ?
7 ಯೇಸು ಗಲಿಲಾಯದಲ್ಲಿ ಮಾಡಿದ ಅದ್ಭುತಗಳ ಬಗ್ಗೆ ಅವನ ತಮ್ಮಂದಿರು ಕೇಳಿಸ್ಕೊಂಡಿರಬಹುದು. (ಲೂಕ 4:14, 22-24) ಆದ್ರೂ ಅವರು ಮೊದಮೊದ್ಲು ಯೇಸುನ ನಂಬಲಿಲ್ಲ. (ಯೋಹಾ. 7:5) ಯಾಕೆ? ಇದರ ಬಗ್ಗೆ ಬೈಬಲ್ ಹೇಳಿಲ್ಲ. ಆದ್ರೆ ಕೆಲವು ಯೆಹೂದ್ಯರು ಯೇಸುವಿನ ಶಿಷ್ಯರಾಗೋಕೆ ಯಾಕೆ ಹಿಂಜರಿದ್ರು ಅಂತ ಎರಡು ಕಾರಣಗಳನ್ನ ನೋಡಬಹುದು. ಒಂದು, ಕ್ರೈಸ್ತರಾದ್ರೆ ಅಕ್ಕಪಕ್ಕದವರು ನಮಗೆ ತೊಂದ್ರೆ ಕೊಡ್ತಾರೆ ಅಂತ ಅವರು ಭಯ ಪಟ್ಟಿರಬಹುದು. (ಯೋಹಾ. 9:18-22) ಎರಡು, ಯೇಸು ತಮ್ಮ ಕಣ್ಣ ಮುಂದೆ ಬೆಳೆದಿದ್ದನ್ನ ಕೆಲವರು ನೋಡಿದ್ರಿಂದ ಆತನು ಮಾಮೂಲಿ ವ್ಯಕ್ತಿ ಅಂದ್ಕೊಂಡ್ರು. ಅದಕ್ಕೆ ಯೇಸುನೇ ಮೆಸ್ಸೀಯ ಅಂತ ನಂಬಲಿಲ್ಲ. (ಮಾರ್ಕ 6:1-4) ಯೇಸುವಿನ ತಮ್ಮಂದಿರಿಗೂ ಹೀಗೆ ಅನಿಸಿರಬಹುದು. ನಿಮ್ಮ ಸಂಬಂಧಿಕರೂ ಸತ್ಯ ಕಲಿಯದೇ ಇರೋಕೆ ಇದೇ ತರ ಯಾವುದಾದ್ರೂ ಕಾರಣ ಇರುತ್ತೆ.
8. ಸಂಬಂಧಿಕರು ನಮ್ಮ ಜೊತೆ ಯಾಕೆ ನೋವಾಗೋ ತರ ನಡ್ಕೊಬಹುದು?
8 ಅವರು ಯಾಕೆ ಆ ತರ ನಡ್ಕೊತಿದ್ದಾರೆ ಅಂತ ಯೋಚಿಸಿ. “ಇವನಿಗೆ ಹುಚ್ಚುಹಿಡಿದಿದೆ” ಅಂತ ಯೇಸುವಿನ ಸಂಬಂಧಿಕರು ಅವನ ಬಗ್ಗೆ ಹೇಳಿದ್ರು. ಆಗ ಅವರ ಜೊತೆ ಯೇಸುವಿನ ತಮ್ಮಂದಿರೂ ಇದ್ದಿರಬಹುದು. (ಮಾರ್ಕ 3:21) ಅವರು ಯಾಕೆ ಹಾಗೆ ಹೇಳಿರಬಹುದು ಯೋಚಿಸಿ? ಬೈಬಲ್ ಘಟನೆಗಳನ್ನ ನೋಡಿದ್ರೆ ಯೇಸು ಸಿಹಿಸುದ್ದಿ ಸಾರುತ್ತಾ ಬಿಜ಼ಿ ಆಗಿದ್ದನು. ಎಷ್ಟರ ಮಟ್ಟಿಗೆ ಅಂದ್ರೆ ಆತನಿಗೆ ಊಟ ಮಾಡೋಕೂ ಟೈಮ್ ಇರ್ತಾ ಇರ್ಲಿಲ್ಲ. (ಮಾರ್ಕ 3:20) ಅದಕ್ಕೆ ಅವನ ಸಂಬಂಧಿಕರಿಗೆ ‘ಇವನು ತುಂಬ ಅತಿಯಾಗಿ ಆಡ್ತಿದ್ದಾನೆ’ ಅಂತ ಅನಿಸಿರಬಹುದು. ಅದೇ ತರ ನಿಮ್ಮ ಸಂಬಂಧಿಕರಿಗೂ ಅನಿಸುತ್ತಾ? ಅವರು ನಿಮ್ಮ ಬಗ್ಗೆ ‘ಇವರು ಮೂರು ಹೊತ್ತು ಸೇವೆ, ಸೇವೆ ಅಂತಾನೇ ಇರ್ತಾರೆ’ ಅಂತ ಅಂದ್ಕೊಳ್ತಿದ್ದಾರಾ? ಅವ್ರಿಗೆ ಆ ತರ ಅನಿಸ್ತಿದ್ರೆ, ನಾವು ಬರೀ ಸೇವೆಗಷ್ಟೇ ಅಲ್ಲ, ಬೇರೆ ವಿಷ್ಯಗಳಿಗೂ ಸಮಯ ಕೊಡ್ತೀವಿ ಅಂತ ಅರ್ಥ ಮಾಡಿಸಿ.
9. ನಮ್ಮ ಸಂಬಂಧಿಕರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಇರೋ ಅಭಿಪ್ರಾಯನ ಬದಲಾಯಿಸೋಕೆ ನಾವೇನು ಮಾಡಬೇಕು? (1 ಪೇತ್ರ 3:1, 2) (ಚಿತ್ರ ನೋಡಿ.)
9 ಮಾತಿನ ಜೊತೆ ನಡತೆನೂ ಮುಖ್ಯ. ನಾವು ಅವ್ರನ್ನ ಪ್ರೀತಿಯಿಂದ ಮಾತಾಡಿಸಿದ್ರೆ, ದಯೆಯಿಂದ ನಡ್ಕೊಂಡ್ರೆ ಯೆಹೋವನ ಸಾಕ್ಷಿಗಳ ಬಗ್ಗೆ ಅವರಿಗಿರೋ ಅಭಿಪ್ರಾಯ ಬದಲಾಗಬಹುದು. (1 ಪೇತ್ರ 3:1, 2 ಓದಿ.) ಉದಾಹರಣೆಗೆ, ಒಬ್ಬ ಸಹೋದರಿಯ ಗಂಡ ಸತ್ಯದಲ್ಲಿ ಇಲ್ಲ ಅಂತ ನೆನಸಿ. ಅವಳು ಕೂಟಗಳಿಗೆ ಮತ್ತು ಸೇವೆಗೆ ಹೋದಾಗ ಗಂಡನಿಗೆ, ‘ಇವಳು ನನಗೆ ಸಮಯನೇ ಕೊಡಲ್ಲ’ ಅಂತ ನೆನಸಿ ಆಕೆ ಮೇಲೆ ಅವನಿಗೆ ಬೇಜಾರಾಗಬಹುದು. ಇಂಥ ಸಂದರ್ಭದಲ್ಲಿ ಆ ಸಹೋದರಿ ಏನು ಮಾಡಬಹುದು? ಗಂಡನ ಜೊತೆ ಸಮಯ ಕಳಿಯೋಕೆ ಅವಳು ತನ್ನ ಶೆಡ್ಯೂಲ್‌ನಲ್ಲಿ ಕೆಲವು ಹೊಂದಾಣಿಕೆ ಮಾಡ್ಕೊಬಹುದು. ಉದಾಹರಣೆಗೆ, ಅವಳ ಗಂಡ ಮನೆಯಲ್ಲಿ ಇಲ್ಲದಿರುವಾಗ ಅಥವಾ ಬೇರೆ ಕೆಲಸದಲ್ಲಿ ಬಿಜ಼ಿ ಆಗಿರುವಾಗ ಸೇವೆಗೆ ಹೋಗೋಕೆ ಪ್ಲಾನ್ ಮಾಡಬಹುದು. ಅವಳು ಇಂಥ ಹೊಂದಾಣಿಕೆಗಳನ್ನ ಮಾಡಿದ್ರೆ, ತನ್ನ ಗಂಡನ ಮನಸ್ಸನ್ನ ಗೆಲ್ಲೋಕಾಗುತ್ತೆ. ಯೆಹೋವನ ಸಾಕ್ಷಿಗಳ ಬಗ್ಗೆ ಆತನಿಗಿರೋ ಅಭಿಪ್ರಾಯನ ಬದಲಾಯಿಸೋಕೂ ಆಗುತ್ತೆ.
ಸತ್ಯದಲ್ಲಿಲ್ಲದ ಗಂಡನ ಜೊತೆ ಹೆಂಡತಿ ಪ್ರೀತಿ ಮತ್ತು ದಯೆಯಿಂದ ನಡ್ಕೊಂಡ್ರೆ ಅವನಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಇರೋ ಅಭಿಪ್ರಾಯ ಬದಲಾಗಬಹುದು (ಪ್ಯಾರ 9ನೋಡಿ)g
10. ಸಂಬಂಧಿಕರು ನಮ್ಮ ಬಗ್ಗೆ ತಪ್ಪಾಗಿ ಮಾತಾಡಿದ್ರೆ ನಾವು ಯೇಸು ತರ ಏನು ಮಾಡಬೇಕು?
10 ನಮ್ಮ ಬಗ್ಗೆ ತಪ್ಪಾಗಿ ಮಾತಾಡಿದಾಗೆಲ್ಲ ಅವ್ರಿಗೆ ಉತ್ರ ಕೊಡಬೇಕಾಗಿಲ್ಲ. ಜನರು ಯೇಸುವನ್ನ ‘ಹೊಟ್ಟೆಬಾಕ, ಕುಡುಕ’ ಅಂತ ಕರೆದಾಗ ಆತನು ಅವ್ರ ಮೇಲೆ ಕೋಪ ಮಾಡ್ಕೊಳ್ಳಲಿಲ್ಲ. ‘ನೀವು ಹೇಳ್ತಿರೋದು ತಪ್ಪು’ ಅಂತ ವಾದಿಸಲೂ ಇಲ್ಲ. ಬದ್ಲಿಗೆ ತಾನು ಮಾಡ್ತಿರೋದು ಸರಿನಾ ತಪ್ಪಾ ಅಂತ ಜನ್ರೇ ಗುರುತಿಸಲಿ ಅಂತ ತಾಳ್ಮೆಯಿಂದ ಇದ್ದನು. (ಮತ್ತಾ. 11:19) ಅಷ್ಟೇ ಅಲ್ಲ, ‘ದೇವರ ಸೇವೆ ಮಾಡೋದ್ರ ಜೊತೆಗೆ ಸ್ನೇಹಿತರ ಜೊತೆ ಸಮಯ ಕಳಿತೀನಿ, ಜೀವನದಲ್ಲಿ ನಾನು ಖುಷಿ-ಖುಷಿಯಾಗಿದ್ದೀನಿ’ ಅಂತಾನೂ ತೋರಿಸಿಕೊಟ್ಟನು. (ಯೋಹಾ. 2:2, 6-10 ಹೋಲಿಸಿ.) ಅದೇ ತರ ನಿಮ್ಮ ಸಂಬಂಧಿಕರು ನಿಮ್ಮ ಬಗ್ಗೆ ತಪ್ಪಾಗಿ ಮಾತಾಡಿದ್ರೆ ಅವ್ರಿಗೆ ನೀವು ಎಲ್ಲ ವಿವರಿಸಬೇಕು ಅಂತಿಲ್ಲ ಅನ್ನೋದನ್ನ ನೆನಪಿಡಿ. ನೀವು ಜೀವನದಲ್ಲಿ ಖುಷಿಯಾಗಿದ್ದೀರ ಮತ್ತು ಬೇರೆ ವಿಷ್ಯಗಳಿಗೂ ಸಮಯ ಕೊಡ್ತೀರ ಅಂತ ಅವ್ರಿಗೆ ತೋರಿಸಿ ಕೊಡಿ. ಆಗ ನಿಮ್ಮ ಬಗ್ಗೆ ಅವರು ಕೇಳಿಸ್ಕೊಂಡಿರೋದೆಲ್ಲ ತಪ್ಪು ಅಂತ ಅವ್ರಿಗೆ ಅರ್ಥ ಆಗುತ್ತೆ.
ತಾಳ್ಮೆ ತೋರಿಸಿ, ನಿರೀಕ್ಷೆ ಕಳ್ಕೊಬೇಡಿ
11. ಯೇಸು ತನ್ನ ಸತ್ಯದಲ್ಲಿಲ್ಲದ ತಮ್ಮಂದಿರ ಜೊತೆ ಹೇಗೆ ನಡ್ಕೊಂಡನು?
11 ಯೇಸು ತನ್ನ ತಮ್ಮಂದಿರ ಜೊತೆ ತಾಳ್ಮೆಯಿಂದ ನಡ್ಕೊಂಡನು ಅಂತ ಸುವಾರ್ತಾ ಪುಸ್ತಕಗಳು ಹೇಳುತ್ತೆ. ಉದಾಹರಣೆಗೆ, ಕಾನಾದಲ್ಲಿ ಯೇಸು ತನ್ನ ಮೊದಲ ಅದ್ಭುತವನ್ನ ಮಾಡಿದಾಗ ಅವನ ತಮ್ಮಂದಿರು ಅದನ್ನ ನೋಡಿದ್ರು. (ಯೋಹಾ. 2:11, 12) ಆದ್ರೂ ಅವರು ಯೇಸು ಮೇಲೆ ನಂಬಿಕೆ ಇಡಲಿಲ್ಲ. ಹಾಗಂತ ಯೇಸು ಅವ್ರ ಜೊತೆ ಸಂಬಂಧನ ಕಳ್ಕೊಂಡು ಬಿಟ್ಟನಾ? ಇಲ್ಲ. ಯೇಸು ಕಾನಾದಲ್ಲಿ ಅದ್ಭುತ ಮಾಡಿ ಮೂರು ವರ್ಷಗಳಾದ ಮೇಲೂ ತನ್ನ ತಮ್ಮಂದಿರ ಜೊತೆ ತುಂಬ ಪ್ರೀತಿಯಿಂದ ಮಾತಾಡಿದನು ಅಂತ ಬೈಬಲ್ ಹೇಳುತ್ತೆ.—ಯೋಹಾ. 7:5-8.
12. ನಮ್ಮ ಸಂಬಂಧಿಕರ ಮನಸ್ಸು ಬದಲಾಗಬೇಕು ಅಂದ್ರೆ ನಾವು ಏನೆಲ್ಲಾ ಮಾಡಬೇಕು?
12 ಯೆಹೋವನು ಕರುಣಾಮಯಿ ತಂದೆ ಅಂತ ನಾವು ನೆನಪು ಇಟ್ಕೊಬೇಕು. ಆಗ ನಮ್ಮ ಸಂಬಂಧಿಕರು ಸತ್ಯಕ್ಕೆ ಬರೋ ಅವಕಾಶ ಇನ್ನೂ ಇದೆ ಅಂತ ಅರ್ಥ ಮಾಡ್ಕೊತೀವಿ. ಸುಳ್ಳು ಧರ್ಮಗಳು ನಾಶ ಆದಾಗ ಈ ತರ ಆಗುತ್ತೆ ಅಂತ ನಾವು ಹೇಳಿದ ವಿಷ್ಯಗಳು ನಮ್ಮ ಸಂಬಂಧಿಕರಿಗೆ ನೆನಪಾಗಬಹುದು.b (ಪ್ರಕ. 17:16) ಮಹಾಸಂಕಟ ಶುರು ಆದಾಗ ಅವರು ನಮ್ಮ ಜೊತೆ ಯೆಹೋವನ ಸೇವೆ ಮಾಡೋಕೆ ಕೈ ಜೋಡಿಸಬಹುದು. ಒಂದುವೇಳೆ ನಮ್ಮ ಸಂಬಂಧಿಕರು ಈಗ ಕಷ್ಟಗಳನ್ನು ಎದುರಿಸ್ತಿದ್ರೆ ನಾವೇನು ಮಾಡಬೇಕು? ಅವ್ರ ಜೊತೆ ಇದ್ದು, ಅವ್ರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡಬೇಕು. ನಾವು ಪ್ರೀತಿ ಮತ್ತು ಕಾಳಜಿಯನ್ನ ತೋರಿಸಿದ್ರೆ ಅವರು ಬೈಬಲ್ ಸತ್ಯಗಳ ಬಗ್ಗೆ ಕಲಿಯೋಕೆ ಮನಸ್ಸು ಮಾಡಬಹುದು.
ಅವ್ರನ್ನ ಪ್ರೀತಿಸ್ತೀರ ಅಂತ ತೋರಿಸಿ!
13. ನಾವು ಯೆಹೋವನ ಸೇವೆಯಲ್ಲಿ ಬಿಜ಼ಿ ಆಗಿದ್ರೂ ಯಾವ ವಿಷ್ಯಕ್ಕೂ ಗಮನ ಕೊಡಬೇಕು?
13 ನಾವು ಯೆಹೋವನ ಸೇವೆಯಲ್ಲಿ ಬಿಜ಼ಿಯಾಗಿ ಇರ್ತೀವಿ ನಿಜ. ಹಾಗಂತ ನಾವು ಅವ್ರ ಜೊತೆ ಸಮಯ ಕಳಿಯೋಕೇ ಆಗಲ್ಲ, ಅವ್ರನ್ನ ಪ್ರೀತಿಸಲ್ಲ ಅಂತ ಅವ್ರಿಗೆ ಅನಿಸೋ ತರ ನಡ್ಕೊಬಾರದು. (ಮತ್ತಾ. 7:12) ಹಾಗಾದ್ರೆ ನಾವು ಅವ್ರನ್ನ ಪ್ರೀತಿಸ್ತೀವಿ, ಅವ್ರಿಗೆ ಕಾಳಜಿ ತೋರಿಸ್ತೀವಿ ಅಂತ ಹೇಗೆ ತೋರಿಸಬಹುದು? ಬನ್ನಿ ಈಗ ಅದ್ರ ಬಗ್ಗೆ ನೋಡೋಣ.
14-15. ಸತ್ಯದಲ್ಲಿಲ್ಲದ ನಮ್ಮ ಸಂಬಂಧಿಕರನ್ನ ನಾವು ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು? ಉದಾಹರಣೆ ಕೊಡಿ.
14 ಆಗಾಗ ಮಾತಾಡಿಸಿ, ಅವ್ರ ಮೇಲೆ ನಿಮಗೆ ಪ್ರೀತಿ ಇದೆ ಅಂತ ತೋರಿಸಿ. ನಮ್ಮ ಸಂಬಂಧಿಕರಿಗೆ ನಾವು ಹೇಗಿದ್ದೀವಿ, ಏನು ಮಾಡ್ತಿದ್ದೀವಿ ಅಂತ ಆಗಾಗ ಹೇಳಬಹುದು. ಆಗ ನಾವು ಅವ್ರನ್ನ ಎಷ್ಟು ಪ್ರೀತಿಸುತ್ತಾ ಇದ್ದೀವಿ ಅಂತ ತೋರಿಸ್ತೀವಿ. ಉದಾಹರಣೆಗೆ, ನಾವು ಇತ್ತೀಚಿಗೆ ಎಲ್ಲಾದ್ರೂ ಟ್ರಿಪ್‌ಗೆ ಹೋಗಿದ್ರೆ ಅಥವಾ ಗೆಟ್ ಟುಗೆದರ್ ಮಾಡಿದ್ರೆ ಆ ಫೋಟೋಗಳನ್ನ ನಾವು ಅವ್ರಿಗೆ ಕಳಿಸಬಹುದು. ಅವ್ರಿಗೆ ಚಿಕ್ಕ ಉಡುಗೊರೆಗಳನ್ನ ಕೊಡಬಹುದು ಅಥವಾ ಲೆಟರ್ ಬರೆಯಬಹುದು. ಹೀಗೆ ನಾವು ಅವ್ರನ್ನ ಎಷ್ಟು ಪ್ರೀತಿಸ್ತೀವಿ ಮತ್ತು ಅವ್ರ ಜೊತೆಗಿರೋ ಸಂಬಂಧವನ್ನ ಗಟ್ಟಿ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೀವಿ ಅಂತ ತೋರಿಸಿಕೊಡ್ತೀವಿ.
15 ಅರ್ಮೇನಿಯಾದಲ್ಲಿರೋ ಹ್ಯಾನ ಉದಾಹರಣೆ ನೋಡೋಣ. ಯಾರದಾದ್ರೂ ಹುಟ್ಟು ಹಬ್ಬ ಇದ್ದಾಗ ಅಥವಾ ರಜೆ ದಿನ ಇದ್ದಾಗ ಅವರು ಕುಟುಂಬವಾಗಿ ಸಮಯ ಕಳಿತಾ ಇದ್ರು. ಹ್ಯಾನ ಸತ್ಯ ಕಲಿತಾಗ ‘ಅವಳು ಇನ್ಮುಂದೆ ನಮ್ಮ ಜೊತೆ ಮುಂಚಿನ ತರ ಇರಲ್ಲ, ಹೆಚ್ಚು ಸಮಯ ಕಳಿಯಲ್ಲ,’ ಅಂತ ಅವಳ ಸಂಬಂಧಿಕರು ಅಂದ್ಕೊಂಡ್ರು. ‘ಇವಳು ಸಾಕ್ಷಿ ಆದ್ರೆ ಮುಂದೆ ಅವಳ ಜೀವನದಲ್ಲಿ ಬರಿ ಕಷ್ಟಗಳನ್ನೇ ಅನುಭವಿಸಬೇಕಾಗುತ್ತೆ’ ಅಂತ ಭಯಪಟ್ರು. ಆಗ ಹ್ಯಾನ ಏನ್ ಮಾಡಿದಳು? ಅವಳು ಹೀಗೆ ಹೇಳ್ತಾಳೆ, “ನಾನು ನನ್ನ ಸಂಬಂಧಿಕರ ಮನೆಗೆ ಹೋದಾಗೆಲ್ಲ ನನ್ನ ಜೀವನದಲ್ಲಿ ಏನಾಗ್ತಿದೆ, ನಾನು ಹೇಗಿದ್ದೀನಿ ಅಂತ ಹೇಳ್ತೀನಿ. ನಾನು ಅವ್ರನ್ನ ನನ್ನ ಮನೆಗೆ ಕರಿತೀನಿ ಮತ್ತು ನನ್ನ ಫ್ರೆಂಡ್ಸ್‌ನ ಅವ್ರಿಗೆ ಪರಿಚಯ ಮಾಡ್ಕೊಟ್ಟಿದ್ದೀನಿ. ಹೀಗೆ ನನ್ನ ಸಂಬಂಧಿಕರಿಗೆ ನನ್ನ ಫ್ರೆಂಡ್ಸ್ ಬಗ್ಗೆ ಚೆನ್ನಾಗಿ ಗೊತ್ತಾಗಿದೆ. ಅವ್ರ ಜೊತೆನೂ ಸಮಯ ಕಳೆಯೋಕೆ, ಮಾತಾಡೋಕೆ ಅವರು ಇಷ್ಟಪಡ್ತಾರೆ. ಅಷ್ಟೇ ಅಲ್ಲ, ಎಷ್ಟೋ ಸಂಬಂಧಿಕರು ನನಗೆ, ‘ಈಗ ನೀನು ತುಂಬ ಖುಷಿಯಾಗಿದ್ದೀಯ, ನಿನ್ನ ಬಗ್ಗೆ ನಮಗೆ ಯಾವುದೇ ಚಿಂತೆ ಇಲ್ಲ’ ಅಂತ ಹೇಳಿದ್ದಾರೆ.”
16. ಯೇಸುಗೆ ತನ್ನ ತಮ್ಮ ಯಾಕೋಬನ ಮೇಲೆ ಪ್ರೀತಿ ಇತ್ತು ಅಂತ ಹೇಗೆ ಗೊತ್ತಾಗುತ್ತೆ? (ಪಾದಟಿಪ್ಪಣಿ ನೋಡಿ.)
16 ನಿಮಗೆ ಅವರು ಮುಖ್ಯ ಅಂತ ತೋರಿಸ್ಕೊಡಿ. ಯೇಸು ಮತ್ತೆ ಜೀವಂತವಾಗಿ ಎದ್ದು ಬಂದ್ಮೇಲೆ ತನ್ನ ತಮ್ಮ ಯಾಕೋಬನಿಗೆ ಕಾಣಿಸಿಕೊಂಡನು. ಇದ್ರಿಂದ ತನ್ನ ತಮ್ಮನ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದನು. (1 ಕೊರಿಂ. 15:7) ಯೇಸು ತನ್ನ ಕೈ ಬಿಟ್ಟಿಲ್ಲ, ಇನ್ನೂ ಪ್ರೀತಿಸ್ತಾನೇ ಇದ್ದಾನೆ ಅಂತ ಯಾಕೋಬನಿಗೆ ಗೊತ್ತಾದಾಗ ಅವನಿಗೆ ಹೇಗೆ ಅನಿಸಿರಬಹುದು ಅಂತ ಸ್ವಲ್ಪ ಯೋಚ್ನೆ ಮಾಡಿ. ಯೇಸು ಹೀಗೆ ತನ್ನ ಜೊತೆ ನಡ್ಕೊಂಡ ಮೇಲೆ ಯಾಕೋಬನಿಗೆ ಖಂಡಿತವಾಗ್ಲೂ ಯೇಸುನೇ ಮೆಸ್ಸೀಯ ಅಂತ ಗೊತ್ತಾಗಿರಬಹುದು. ಅದಾದ್ಮೇಲೆ ಬಹುಶಃ ಯಾಕೋಬ ಅವನ ಮನೆಯಲ್ಲಿರೋ ಬೇರೆಯವರಿಗೂ ಯೇಸುನೇ ಮೆಸ್ಸೀಯ ಅಂತ ಹೋಗಿ ಹೇಳಿರ್ತಾನೆ. ಅವ್ರಿಗೆ ಅರ್ಥ ಮಾಡಿಸೋಕೆ ಪ್ರಯತ್ನ ಮಾಡಿರ್ತಾನೆ.c—ಅ. ಕಾ. 1:14.
17. ರೋಮನ್ನರಿಗೆ 12:15ರಲ್ಲಿರೋ ಸಲಹೆಯನ್ನ ನಾವು ಹೇಗೆ ಪಾಲಿಸಬಹುದು? (ಚಿತ್ರ ನೋಡಿ.)
17 ರೋಮನ್ನರಿಗೆ 12:15 ಓದಿ. ನಮ್ಮ ಸಂಬಂಧಿಕರ ಜೀವನದಲ್ಲೂ ಸುಖ-ದುಃಖ ಇದ್ದೇ ಇರುತ್ತೆ. ಆಗ ನಾವು ಅವ್ರಿಗೆ ಬೇಕಾದ ಸಹಾಯ ಮಾಡಬಹುದು. ಆಗ ಅವ್ರಿಗೆ ನಮ್ಮ ಬಗ್ಗೆ ಇರೋ ಅಭಿಪ್ರಾಯ ಬದಲಾಗಬಹುದು.d ಉದಾಹರಣೆಗೆ, ನಮ್ಮ ಸಂಬಂಧಿಕರಲ್ಲಿ ಯಾರಿಗಾದ್ರೂ ಮಗು ಹುಟ್ಟಿದಾಗ ನಾವು ಆ ಮಗುನ ನೋಡೋಕೆ ಹೋಗಬಹುದು, ಅವ್ರಿಗೆ ಗಿಫ್ಟ್ ಕೊಡಬಹುದು. ಹೀಗೆ ಅವ್ರ ಖುಷಿ ಕ್ಷಣದಲ್ಲಿ ನಾವು ಭಾಗಿಯಾಗಬಹುದು. ನಮ್ಮ ಸಂಬಂಧಿಕರಲ್ಲಿ ಯಾರಾದ್ರೂ ತೀರಿ ಹೋದಾಗ, ಅವ್ರಿಗೆ ಸಮಾಧಾನ ಆಗೋ ರೀತಿ ಮಾತಾಡಬಹುದು. ಅವ್ರಿಗೆ ಬೇಕಾಗಿರೋ ಸಹಾಯ ಮಾಡಬಹುದು, ಮೆಸೇಜ್ ಕಳಿಸಬಹುದು. ಜೊತೆಗೆ ಆಗಾಗ ಅವ್ರಿಗೆ ಏನು ಅವಶ್ಯಕತೆ ಇದೆ ಅಂತ ತಿಳ್ಕೊಂಡು ಕೈಲಾಗಿದ್ದನ್ನ ಮಾಡಬಹುದು. ಅದ್ರಲ್ಲೂ ಅವರು ಕಷ್ಟದ ಸಮಯದಲ್ಲಿದ್ದಾಗ ಅವ್ರ ಜೊತೆಯಲ್ಲೇ ಇದ್ದು ಸಹಾಯ ಮಾಡಬೇಕು.
ಕುಟುಂಬದವ್ರಿಗೆ ಅಗತ್ಯವಿದ್ದಾಗ ಅದ್ರಲ್ಲೂ ಅವರು ಕಷ್ಟದಲ್ಲಿದ್ದಾಗ ನಾವು ಸಹಾಯ ಮಾಡಬೇಕು, ಪ್ರೀತಿ ತೋರಿಸಬೇಕು. ಆಗ ಅವ್ರಿಗೆ ನಮ್ಮ ಬಗ್ಗೆ ಇರೋ ಅಭಿಪ್ರಾಯ ಬದಲಾಗಬಹುದು ಅಥವಾ ಸತ್ಯ ಕಲಿಯೋಕೆ ಅವರು ಮನಸ್ಸು ಮಾಡಬಹುದು (ಪ್ಯಾರ 17ನೋಡಿ)h
18. ಅಂದ್ರೆಯನ ತರ ನಾವು ಏನು ಮಾಡಬಹುದು?
18 ಸಹೋದರ ಸಹೋದರಿಯರನ್ನ ಪರಿಚಯ ಮಾಡಿಸಿ. ಅಂದ್ರೆಯನಿಗೆ ಯೇಸುನೇ ಮೆಸ್ಸೀಯ ಅಂತ ಗೊತ್ತಾಯ್ತು. ಆಗ ಅವನು ತನ್ನ ಅಣ್ಣ ಪೇತ್ರನಿಗೆ ಯೇಸುನ ಪರಿಚಯ ಮಾಡಿಸೋಕೆ ತುಂಬ ಆಸೆ ಪಟ್ಟ. (ಯೋಹಾ. 1:40-42) ನಾವು ಅವನ ತರಾನೇ ಮಾಡಬಹುದಾ? ಉದಾಹರಣೆಗೆ, ನಾವು ನಮ್ಮ ಕುಟುಂಬದವ್ರನ್ನ ಮೀಟಿಂಗ್‌ಗೆ ಕರೆಯಬಹುದು ಅಥವಾ ನಮ್ಮ ಫ್ರೆಂಡ್ಸ್ ಜೊತೆ ಊಟ ಮಾಡುವಾಗ ಅದಕ್ಕೂ ಅವ್ರನ್ನ ಕರೆಯಬಹುದು. ಈ ರೀತಿ ನಮ್ಮ ಸಹೋದರ ಸಹೋದರಿಯರನ್ನ ಪರಿಚಯ ಮಾಡಿಸಿದಾಗ, ಅವರೂ ಎಲ್ಲರ ತರಾನೇ ಜೀವನ ಮಾಡ್ತಿದ್ದಾರೆ ಮತ್ತು ಅವರು ಒಳ್ಳೇ ಜನ ಅಂತ ನಮ್ಮ ಕುಟುಂಬದವ್ರಿಗೆ ಗೊತ್ತಾಗುತ್ತೆ.
19. ಸಂಬಂಧಿಕರು ನಮ್ಮ ನಂಬಿಕೆಗಳನ್ನ ಪೂರ್ತಿಯಾಗಿ ಒಪ್ಪದಿದ್ರೂ ನಾವು ಅವ್ರ ಜೊತೆ ಹೇಗೆ ನಡ್ಕೊಬೇಕು? (1 ಪೇತ್ರ 3:15)
19 1 ಪೇತ್ರ 3:15 ಓದಿ. ನಮ್ಮ ಕುಟುಂಬದವ್ರಿಗೆ ನಾವು ಯಾಕೆ ಕೆಲವು ವಿಷ್ಯಗಳನ್ನ ಮಾಡಲ್ಲ, ಒಪ್ಕೊಳಲ್ಲ ಅಂತ ಪೂರ್ತಿಯಾಗಿ ಅರ್ಥ ಆಗದೇ ಇರಬಹುದು. ಆದ್ರೆ ನಾವು ತೋರಿಸೋ ಪ್ರೀತಿ, ಕಾಳಜಿ ಮತ್ತು ನಾವು ಕೊಡೋ ಗೌರವ ಅವ್ರಿಗೆ ಯಾವಾಗ್ಲೂ ನೆನಪಿರುತ್ತೆ. ಅವ್ರ ಜೊತೆ ಸಮಯ ಕಳಿಯೋಕೆ ನಾವು ಹಾಕೋ ಪ್ರಯತ್ನವನ್ನ ಅವರು ಖಂಡಿತವಾಗ್ಲೂ ಮೆಚ್ಚಿಕೊಳ್ತಾರೆ. ಬೈಬಲಲ್ಲಿ ಹೇಳದೇ ಇರೋ ಪದ್ಧತಿಗಳನ್ನ, ಹಬ್ಬಗಳನ್ನ ನಾವು ಮಾಡೋಕೆ ಹೋಗಲ್ಲ ನಿಜ. ಆದ್ರೆ ಬೇರೆ ಸಮಯದಲ್ಲಿ ನಾವು ಅವ್ರ ಜೊತೆ ಸಮಯ ಕಳಿತೀವಿ, ಅವ್ರ ಜೊತೆ ಊಟ ಮಾಡ್ತೀವಿ ಮತ್ತು ಗಿಫ್ಟ್‌ಗಳನ್ನ ಕೊಡ್ತೀವಿ.
ಅವರು ಯೆಹೋವನನ್ನ ಆರಾಧಿಸಬಹುದು ಅಂತ ನಂಬಿ
20. ಯಾಕೋಬನ ಉದಾಹರಣೆಯಿಂದ ನಾವೇನು ಕಲಿಬಹುದು?
20 ಯಾಕೋಬ ಯೇಸುವಿನ ಜೊತೆ ಸಿಹಿಸುದ್ದಿ ಸಾರೋ ಅವಕಾಶವನ್ನ ಕಳ್ಕೊಂಡ. ಆದ್ರೆ ಅವನು ಆಮೇಲೆ ಆತನ ಶಿಷ್ಯನಾದ. (ಗಲಾ. 1:18, 19; 2:9) ಅವನು ಮೊದ್ಲಿಗೆ ಶಿಷ್ಯನಾಗಲಿಲ್ಲ ಅಂದ್ರೂ ಸತ್ಯ ಕಲಿತ ಮೇಲೆ ಯೇಸು ಕಲಿಸಿದ ವಿಷ್ಯಗಳನ್ನ ಅರ್ಥ ಮಾಡ್ಕೊಂಡ ಮತ್ತು ಅದನ್ನ ಪ್ರೀತಿಸಿದ. ನಾವು ಅದನ್ನ ಹೇಗೆ ಹೇಳಬಹುದು? ಯೇಸು ಬೆಟ್ಟದ ಭಾಷಣದಲ್ಲಿ ಕಲಿಸಿದ ವಿಷ್ಯಗಳನ್ನೇ ಅವನು ತನ್ನ ಪತ್ರದಲ್ಲಿ ಬರೆದ.e
21. ನಾವು ಯಾಕೆ ಪ್ರಯತ್ನ ಬಿಡಬಾರದು?
21 ನಾವು ನಮ್ಮ ಸಂಬಂಧಿಕರಿಗೆ ಎಷ್ಟೇ ಪ್ರೀತಿ, ಕಾಳಜಿ ತೋರಿಸಿದ್ರೂ ಅವರು ಈಗ ಸತ್ಯ ಕಲಿಯೋಕೆ ಅಥವಾ ನಾವು ನಂಬ್ತಿರೋ ವಿಷ್ಯಗಳನ್ನ ಒಪ್ಕೊಳ್ಳೋಕೆ ಇಷ್ಟಪಡದೆ ಇರಬಹುದು. ಹಾಗಂತ ಇವರು ಸತ್ಯಕ್ಕೆ ಯಾವತ್ತೂ ಬರಲ್ಲ ಅಂತ ಅಂದ್ಕೊಂಡು ಅವ್ರನ್ನ ಬಿಟ್ಟು ಬಿಡೋದಾ? ಇಲ್ಲ. ನಾವು ಯಾವಾಗ್ಲೂ ನಮ್ಮ ಸಂಬಂಧಿಕರಿಗೆ ಪ್ರೀತಿ, ದಯೆಯನ್ನ ತೋರಿಸ್ತಾ ಇರಬೇಕು. ಆಗ ಕರುಣಾಮಯಿ ದೇವರಾಗಿರೋ ಯೆಹೋವನನ್ನ ಮತ್ತು ಆತನ ಮಗನಾದ ಯೇಸುವನ್ನ ನಾವು ಅನುಕರಿಸ್ತಾ ಇರ್ತೀವಿ. (ಲೂಕ 6:33, 36) ನಾವು ಪ್ರೀತಿ ತೋರಿಸ್ತಾ ಇದ್ರೆ ನಮ್ಮಲ್ಲಿರೋ ಒಳ್ಳೇತನ ನೋಡಿ ಅವರು ಬದಲಾಗ್ತಾರೆ. ನಾವು ಅವ್ರಿಗೆ ಈ ಹಿಂದೆ ಹೇಳಿದ ನಮ್ಮ ನಂಬಿಕೆಯ ಬಗ್ಗೆ ನೆನಪು ಮಾಡ್ಕೊತಾರೆ. ಹಾಗಾಗಿ ನಾವು ಬಿಟ್ಟು ಕೊಡಬಾರದು, ಪ್ರಯತ್ನ ಹಾಕ್ತಾನೇ ಇರಬೇಕು. ಆಗ ಅವರು ಒಂದಲ್ಲ ಒಂದು ದಿನ ಯೆಹೋವನನ್ನ ಆರಾಧಿಸೋಕೆ ಮನಸ್ಸು ಮಾಡಬಹುದು. ಅವಾಗ ನಾವೆಲ್ರೂ ಒಟ್ಟಾಗಿ ಖುಷಿ-ಖುಷಿಯಾಗಿ ಇರಬಹುದು!
ಗೀತೆ 60 ಜೀವದ ಹೊಣೆ
a ಪದ ವಿವರಣೆ: ಬೈಬಲಲ್ಲಿ “ಸತ್ಯದೇವರನ್ನ ನಂಬದ” ಅಥವಾ “ಕ್ರೈಸ್ತನಲ್ಲದವನು” ಅಂತ ಹೇಳಿರೋ ಪದ ದೇವರನ್ನ ನಂಬದವರನ್ನ ಅಥವಾ ಯಾವುದೇ ಧರ್ಮಕ್ಕೆ ಸೇರದೇ ಇರುವವರನ್ನ ಸೂಚಿಸುವುದಿಲ್ಲ. (1 ಕೊರಿಂ. 7:12 ; “ಸತ್ಯದೇವರನ್ನ ನಂಬದ ಹೆಂಡತಿ” ಅನ್ನೋ ಇಂಗ್ಲಿಷ್ ಸ್ಟಡಿ ನೋಟ್ ನೋಡಿ.) ಬದ್ಲಿಗೆ ಈ ಪದ ಈ ಲೇಖನದಲ್ಲಿ ಯಾರು ಯೆಹೋವ ದೇವರನ್ನ ಯೆಹೋವನ ಸಾಕ್ಷಿಗಳ ತರ ಆರಾಧಿಸಲ್ವೋ ಅಂತವ್ರಿಗೆ ಸೂಚಿಸ್ತಿದೆ.
b ಕಾವಲಿನಬುರುಜು ಮೇ 2024ರ ಪು. 11, ಪ್ಯಾ. 11-13ರಲ್ಲಿರೋ “ಯೆಹೋವ ಭವಿಷ್ಯದಲ್ಲಿ ಜನ್ರಿಗೆ ತೀರ್ಪು ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿದೆ?” ಅನ್ನೋ ಲೇಖನ ನೋಡಿ.
c ಯೇಸುವಿನ ತಮ್ಮಂದಿರಾದ ಯಾಕೋಬ ಮತ್ತು ಯೂದ, ಆತನು ಸತ್ತು ಮತ್ತೆ ಜೀವಂತವಾಗಿ ಎದ್ದು ಬಂದಮೇಲೆ ಸತ್ಯ ಕಲಿತು ಆತನ ಶಿಷ್ಯರಾದರು.
d “ಮದುವೆಗೆ ಅಥವಾ ಶವಸಂಸ್ಕಾರಕ್ಕೆ ನೀವು ಹೋಗ್ತೀರಾ?” ಅನ್ನೋ ಚೌಕ ನೋಡಿ.
e ಈ ವಚನಗಳನ್ನ ಹೋಲಿಸಿ ನೋಡಿ: ಯಾಕೋಬ 1:2 ಮತ್ತು ಮತ್ತಾಯ 5:11, 12; ಯಾಕೋಬ 1:19 ಮತ್ತು ಮತ್ತಾಯ 5:22; ಯಾಕೋಬ 1:22; 2:24 ಮತ್ತು ಮತ್ತಾಯ 7:21; ಯಾಕೋಬ 2:13 ಮತ್ತು ಮತ್ತಾಯ 5:7; 6:14, 15.
f ಇಂಥ ಸನ್ನಿವೇಶಗಳಲ್ಲಿ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ ಕಾವಲಿನಬುರುಜು ಮೇ 15, 2002ರ ಮತ್ತು ಡಿಸೆಂಬರ್ 1, 2007ರ “ವಾಚಕರಿಂದ ಪ್ರಶ್ನೆಗಳು” ಲೇಖನಗಳನ್ನು ನೋಡಿ.
g ಚಿತ್ರ ವಿವರಣೆ: ಸಹೋದರಿ ಸಿಹಿಸುದ್ದಿ ಸಾರೋಕೆ ಹೋಗೋಕೆ ಮುಂಚೆ ಗಂಡನಿಗೆ ಬೇಕಾದ ಊಟ ರೆಡಿ ಮಾಡ್ತಿದ್ದಾಳೆ.
h ಚಿತ್ರ ವಿವರಣೆ: ಹಿಂದಿನ ಚಿತ್ರದಲ್ಲಿ ನೋಡಿದ ಅದೇ ಸಹೋದರಿ ಸತ್ಯದಲ್ಲಿಲ್ಲದ ತನ್ನ ಅತ್ತೆಯನ್ನ ನೋಡೋಕೆ ಅವ್ರ ಮನೆಗೆ ಬಂದಿದ್ದಾಳೆ.