ಅನುಭವಸ್ಥ ಪ್ರಚಾರಕರಿಂದ ಕಲಿಯಿರಿ
ಸಭೆಯಲ್ಲಿರುವ ಅನುಭವಸ್ಥ ಪ್ರಚಾರಕರನ್ನು ನಾವೆಲ್ಲರೂ ತುಂಬ ಗಣ್ಯ ಮಾಡುತ್ತೇವೆ. ಅವರಲ್ಲಿ ಅನೇಕರು ಎಷ್ಟೋ ವರ್ಷಗಳಿಂದ ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡುತ್ತಾ ಇದ್ದಾರೆ. ಇನ್ನು ಕೆಲವರು ಪರಿಣಾಮಕಾರಿಯಾಗಿ ಸೇವೆ ಮಾಡುವುದನ್ನು ಇತ್ತೀಚೆಗಷ್ಟೇ ಕಲಿತಿರಬಹುದು. ಈ ಕಡೇ ದಿವಸಗಳಲ್ಲಿ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸ ಹೇಗೆ ವೃದ್ಧಿಯಾಗಿದೆ ಮತ್ತು ಈ ಕೆಲಸವನ್ನು ಹೆಚ್ಚಿಸಲು ಯೇಸು ಸಭೆಗಳನ್ನು ಹೇಗೆ ಮಾರ್ಗದರ್ಶಿಸುತ್ತಿದ್ದಾನೆ ಎನ್ನುವುದನ್ನು ಅವರು ಕಣ್ಣಾರೆ ನೋಡಿದ್ದಾರೆ. (ಮತ್ತಾ. 28:19, 20) ವೈಯಕ್ತಿಕ ಕಷ್ಟ, ಸಮಸ್ಯೆಗಳನ್ನು ಎದುರಿಸಲು ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ಅವರು ಸೇವೆಯಲ್ಲಿ ಭಾಗವಹಿಸುವ ಮೂಲಕ ಪಡೆದಿದ್ದಾರೆ. (2 ಕೊರಿಂ. 4:7) ಆದ್ದರಿಂದ ನಾವು ಅವರಿಂದ ಅನೇಕ ವಿಷಯಗಳನ್ನು ಕಲಿಯಬಹುದು. ಅವರು ಸಹ ಅವಕಾಶ ಸಿಕ್ಕಿದಾಗೆಲ್ಲಾ ನಮಗೆ ಕಲಿಸಲು ಸಂತೋಷಿಸುತ್ತಾರೆ. (ಕೀರ್ತ. 71:18) ಹಾಗಾಗಿ ಅವರಿಂದ ಕಲಿಯಲು ನಾವೇ ಮೊದಲ ಹೆಜ್ಜೆ ತೆಗೆದುಕೊಳ್ಳಬೇಕು. ಆದರೆ ಇದನ್ನು ಮಾಡುವುದು ಹೇಗೆ?
ಅವರೊಂದಿಗೆ ಸೇವೆ ಮಾಡಿ: ಹೊಸಬರು ಮತ್ತು ಅನುಭವ ಇಲ್ಲದವರು ಪರಿಣಾಮಕಾರಿಯಾಗಿ ಸೇವೆ ಮಾಡಬೇಕೆಂದರೆ ಅವರಿಗೆ ತರಬೇತಿ ಬೇಕೇಬೇಕು. ಅನುಭವಸ್ಥ ಪ್ರಚಾರಕರು ಸೇವೆಯಲ್ಲಿ ಹೇಗೆ ಮಾತಾಡುತ್ತಾರೆ ಎಂದು ಸರಿಯಾಗಿ ಗಮನಿಸುವ ಮೂಲಕ ಅಂಥವರು ಎಷ್ಟೋ ವಿಷಯಗಳನ್ನು ಕಲಿಯಬಹುದು. (ಫೆಬ್ರವರಿ 15, 2015 ಕಾವಲಿನಬುರುಜುವಿನ “ನಿಮ್ಮ ಉತ್ಸಾಹ ಕಳಕೊಳ್ಳಬೇಡಿ” ಎಂಬ ಲೇಖನದ “ಹೊಸ ಪ್ರಚಾರಕರಿಗೆ ಸಹಾಯಮಾಡಿ” ಉಪಶೀರ್ಷಿಕೆಯ ಕೆಳಗಿನ 3ನೇ ಪ್ಯಾರ ನೋಡಿ.) ಅನುಭವಸ್ಥರ ಜೊತೆಯಲ್ಲಿ ಸೇವೆ ಮಾಡಿರುವುದರಿಂದ ನಿಮಗೆ ಯಾವ ಪ್ರಯೋಜನಗಳಾಗಿವೆ?
ಸೇವೆಯಲ್ಲಿ ಚೆನ್ನಾಗಿ ಮಾತಾಡಲು ತಿಳಿದಿರುವ ಪ್ರಚಾರಕರನ್ನು ನಿಮ್ಮೊಂದಿಗೆ ಸೇವೆಗೆ ಕರೆಯಿರಿ. ಆ ಅನುಭವಸ್ಥ ಪ್ರಚಾರಕ ಮನೆಯಿಂದಾಚೆ ಹೋಗಲು ಆಗದೇ ಇರುವಷ್ಟು ಅಸ್ವಸ್ಥರಾಗಿದ್ದಾರಾ? ಹಾಗಾದರೆ, ಆಗಿಂದಾಗ್ಗೆ ಅವರ ಮನೆಯಲ್ಲೇ ನಿಮ್ಮ ಬೈಬಲ್ ಅಧ್ಯಯನಗಳನ್ನು ನಡೆಸಿ. ನೀವು ನಡೆಸಿದ ಬೈಬಲ್ ಅಧ್ಯಯನದಲ್ಲಿ ಅವರೇನನ್ನು ಗಮನಿಸಿದರು, ಯಾವ ವಿಷಯದಲ್ಲಿ ನೀವಿನ್ನೂ ಪ್ರಗತಿಮಾಡಬೇಕು ಎಂದು ಅಧ್ಯಯನ ಮುಗಿದ ನಂತರ ಕೇಳಿ ತಿಳಿದುಕೊಳ್ಳಿ.
ಅವರೊಂದಿಗೆ ಸಮಯ ಕಳೆಯಿರಿ: ಅನುಭವಸ್ಥ ಪ್ರಚಾರಕರೊಂದಿಗೆ ಸಮಯ ಕಳೆಯುವ ಮೂಲಕ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಅಂಥ ಒಬ್ಬ ಅನುಭವಸ್ಥ ಪ್ರಚಾರಕರನ್ನು ನಿಮ್ಮ ಕುಟುಂಬ ಆರಾಧನೆಗೆ ಕರೆಯಿರಿ ಮತ್ತು ಅವರ ಅನುಭವವನ್ನು ಕೇಳಿ ತಿಳಿದುಕೊಳ್ಳಿ. ಆ ಅನುಭವಸ್ಥ ಪ್ರಚಾರಕ ಮನೆಯಿಂದಾಚೆ ಹೋಗಲು ಆಗದೇ ಇರುವಷ್ಟು ಅಸ್ವಸ್ಥರಾಗಿದ್ದರೆ, ಅವರ ಮನೆಯಲ್ಲೇ ನಿಮ್ಮ ಕುಟುಂಬ ಆರಾಧನೆ ನಡೆಸಲು ಸಾಧ್ಯನಾ ಎಂದು ನೋಡಿ. ಅವರು ಸತ್ಯವನ್ನು ಹೇಗೆ ಕಲಿತರು? ಯೆಹೋವನಿಂದ ಯಾವೆಲ್ಲಾ ಆಶೀರ್ವಾದಗಳನ್ನು ಪಡೆದರು? ಸ್ಥಳಿಕವಾಗಿ ಯಾವ ಆಧ್ಯಾತ್ಮಿಕ ಪ್ರಗತಿಯನ್ನು ತಮ್ಮ ಜೀವನದಲ್ಲಿ ನೋಡಿದ್ದಾರೆ? ಯೆಹೋವನ ಸೇವೆ ಮಾಡುವುದರಿಂದ ಹೇಗೆ ಸಂತೋಷ ಪಡೆದಿದ್ದಾರೆ ಎಂದು ಕೇಳಿ.
ಅವರಿಗೆ ವಯಸ್ಸಾಗಿರುವುದರಿಂದ ಇತಿ-ಮಿತಿಗಳಿರುತ್ತವೆ ಎಂದು ಅರ್ಥಮಾಡಿಕೊಳ್ಳಿ. ಅವರಲ್ಲಿ ಕೆಲವರಿಗೆ ನಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಆಗದೇ ಇರಬಹುದು. ಆದರೂ ಅನೇಕ ವರ್ಷಗಳಿಂದ ನಂಬಿಗಸ್ತರಾಗಿ ಸೇವೆ ಮಾಡುತ್ತಿರುವ ಈ ಪ್ರಚಾರಕರಲ್ಲಿ ಬೇರೆ ಬೇರೆ ವರಗಳು ಅಥವಾ ಸಾಮರ್ಥ್ಯಗಳಿರುತ್ತವೆ. (ರೋಮ. 12:6-8) ಅಷ್ಟೇ ಅಲ್ಲದೆ, ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆ ಮಾಡಿದ ಅನುಭವ ಸಹ ಇದೆ. ಆದ್ದರಿಂದ ನಾವು ಅವರಿಂದ ಅನೇಕ ವಿಷಯಗಳನ್ನು ಕಲಿಯಬಹುದು.