ಎಡೆಬಿಡದೆ ಸಾರಿರಿ
1 ನಮ್ಮ ಟೆರಿಟೊರಿಯಲ್ಲಿ ಪದೇ ಪದೇ ಹಾಗೂ ಪೂರ್ತಿಯಾಗಿ ಸೇವೆಯಾಗಿದ್ದರೂ ಪ್ರತಿಕ್ರಿಯೆಯು ಕೊಂಚವೇ ಎಂದು ಕೆಲವು ಸಲ ನಾವು ನೆನಸಬಹುದು. ಆದರೂ ನಾವು ಸಾರುತ್ತಾ ಮುಂದುವರಿಯಲು ಬಲವಾದ ಕಾರಣಗಳು ನಮಗಿವೆ.—ಮತ್ತಾ. 28:19, 20.
2 ಸಾಕ್ಷಿಗಾಗಿ: ರಾಜ್ಯದ ಸಾರುವಿಕೆಯು ‘ಯುಗದ ಸಮಾಪ್ತಿಯ’ ಸೂಚನೆಗಳ ಪ್ರಮುಖ ಭಾಗವಾಗಿದೆಯೆಂದೂ ಅದು “ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರಲಾಗುವುದೆಂದೂ ಯೇಸು ಮುಂತಿಳಿಸಿದನು. (ಮತ್ತಾ. 24:3, 14) ರಾಜ್ಯದ ಸುವಾರ್ತೆಯನ್ನು ಸಾರುತ್ತಿರುವುದನ್ನು ಜನರು ಕಾಣುವಾಗ ಬಲವಾದ ಸಾಕ್ಷಿಯು ನೀಡಲ್ಪಡುತ್ತದೆ. ಒಂದು ವೇಳೆ ಅವರು ನಮ್ಮ ಸಂದೇಶಕ್ಕೆ ಕಿವಿಗೊಡದಿದ್ದರೂ ನಾವು ಆ ಕ್ಷೇತ್ರವನ್ನು ಬಿಟ್ಟುಹೋದ ಮೇಲೆ ಕೆಲವರು ನಮ್ಮ ಭೇಟಿಯ ಕುರಿತು ಗಂಟೆಗಟ್ಟಲೆಯೋ ದಿನಗಳ ತನಕವೋ ಮಾತಾಡಿಯಾರು. ನಮ್ಮ ಶುಶ್ರೂಷೆಯ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಎಡೆಬಿಡದೆ ಸಾರುವಂತೆ ನಮಗೆ ಸಹಾಯಮಾಡುತ್ತದೆ. ಸಾಕ್ಷಿಯನ್ನು ಕೊಡುವ ಮೂಲಕ ಮತ್ತು ಎಚ್ಚರಿಕೆಯ ಸಂದೇಶವನ್ನು ಘೋಷಿಸುವ ಮೂಲಕ ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ನಾವು ಭಾಗವಹಿಸುತ್ತೇವೆ. ಹೀಗೆ ಯೆಹೋವನನ್ನು ಸಂತೋಷಪಡಿಸುತ್ತೇವೆ.—2 ಥೆಸ. 1:6-9.
3 ಸತತ ಪ್ರಯತ್ನ ಅಗತ್ಯ: ಜನರ ಸಮಯವನ್ನು ಅಪಹರಿಸುವ ಎಷ್ಟೋ ಅಪಕರ್ಷಣೆಗಳೂ ಕೆಲಸಗಳೂ ಇರುವ ಕಾರಣ ಅವರ ಆಸಕ್ತಿಯನ್ನು ಬೆಳೆಸಲು ನಾವು ಸತತ ಪ್ರಯತ್ನಮಾಡಲೇಬೇಕು. ಒಬ್ಬಾಕೆ ಸ್ತ್ರೀಯನ್ನು ಸಾಕ್ಷಿಗಳು ಪ್ರತಿವಾರವೂ ಭೇಟಿಮಾಡಿದರು. ಹೀಗೆ ಸತತವಾಗಿ ಒಂದು ವರ್ಷ ಭೇಟಿನೀಡಿದ ಬಳಿಕವೇ ಆಕೆ ಬೈಬಲ್ ಚರ್ಚೆಗಾಗಿ ಅವರನ್ನು ಮನೆಯೊಳಗೆ ಕರೆದಳು. ಕೇಳಿದ ವಿಷಯಗಳು ಆಕೆಗೆ ಎಷ್ಟು ಹಿಡಿಸಿತೆಂದರೆ ಆಕೆ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡಳು, ಕೂಟಗಳಿಗೂ ಹಾಜರಾದಳು, ಅಲ್ಲದೆ ಬೇಗನೇ ದೀಕ್ಷಾಸ್ನಾನ ಪಡೆಯುವ ಅಪೇಕ್ಷೆಯನ್ನು ವ್ಯಕ್ತಪಡಿಸಿದಳು.
4 ಲೋಕದ ಪರಿಸ್ಥಿತಿಗಳು ಮಾತ್ರವಲ್ಲ ಜನರ ಸ್ಥಿತಿಗತಿಗಳು ಸಹ ತ್ವರಿತಗತಿಯಲ್ಲಿ ಬದಲಾಗುತ್ತಿವೆ. ಈ ಹಿಂದೆ ನಮ್ಮ ಸಂದೇಶವನ್ನು ತಿರಸ್ಕರಿಸಿದ್ದ ಅನೇಕರು ಈಗ ನಾವು ತಿಳಿಸುತ್ತಿರುವ ಚೈತನ್ಯಕರ ನಿರೀಕ್ಷೆಗೆ ಕಿವಿಗೊಡಲು ಮನಸ್ಸುಮಾಡಬಹುದು. ಅವರಲ್ಲಿ ಒಬ್ಬರು ನಮ್ಮ ರಾಜ್ಯ ಸಂದೇಶಕ್ಕೆ ಒಳ್ಳೆಯ ಪ್ರತಿಕ್ರಿಯೆ ತೋರಿಸಿದರೂ ನಮ್ಮ ಸತತ ಪ್ರಯತ್ನವು ಸಾರ್ಥಕವೇ ಸರಿ.
5 ಲೋಕದಾದ್ಯಂತ ಅನೇಕಾನೇಕ ಜನರು ಲೋಕದಲ್ಲಿ ‘ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿದ್ದಾರೆ.’ (ಯೆಹೆ. 9:4) ಯೋಗ್ಯ ಪ್ರವೃತ್ತಿಯುಳ್ಳ ಜನರು ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆಂಬುದನ್ನು ನಮ್ಮ ಸಾರುವ ಕಾರ್ಯದ ಫಲಿತಾಂಶ ತೋರಿಸುತ್ತದೆ. (ಯೆಶಾಯ 2:2, 3) ಆದುದರಿಂದ, “ಒಳ್ಳೆಯ ಶುಭವರ್ತಮಾನವನ್ನು” ಪ್ರೀತಿಪೂರ್ವಕವಾಗಿ ಸಾರುವುದರಲ್ಲಿ ಸತತವಾಗಿ ಶ್ರಮಿಸೋಣ.—ಯೆಶಾ. 52:7; ಅ. ಕೃ. 5:42.