ನೀವು ಕುಟುಂಬವಾಗಿ ಪಾರಾಗಲು ಸಿದ್ಧರಾಗಿದ್ದೀರೋ?
1 ಈ ದುಷ್ಟಲೋಕದ ಅಂತ್ಯವು ತೀವ್ರವಾಗಿ ಧಾವಿಸುತ್ತಾ ಇದೆ ಎಂಬುದಕ್ಕೆ ನೆರವೇರಿದ ಬೈಬಲ್ ಪ್ರವಾದನೆಗಳು ಭರವಸಾರ್ಹ ಪುರಾವೆಯನ್ನು ಕೊಡುತ್ತವೆ. ಜಲಪ್ರಲಯಕ್ಕೆ ಮುಂಚೆ ಇದ್ದಂಥ ತದ್ರೀತಿಯ ಕಠಿನ ಕಾಲದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. (ಮತ್ತಾ. 24:37-39) ನೋಹನು ಆ ಪುರಾತನ ಲೋಕದ ನಾಶನವನ್ನು ಪಾರಾದನು ಯಾಕೆಂದರೆ ಅವನು “ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.” (ಆದಿ. 6:9) ಯೆಹೋವನ ಮಾರ್ಗಗಳಿಗೆ ಅನುಸಾರವಾಗಿ ನಡೆಯಲು ಅವನು ತನ್ನ ಕುಟುಂಬಕ್ಕೆ ಸಹ ಕಲಿಸಿದ್ದಿರಬೇಕು. ಆದುದರಿಂದ ಅವರು ಕೂಡ ಜೀವಂತವಾಗಿ ಪಾರಾದರು. ನಾವು ನೋಹನನ್ನು ಯಾವ ರೀತಿಯಲ್ಲಿ ಅನುಕರಿಸಬಹುದು ಹಾಗೂ ಕುಟುಂಬವಾಗಿ ಸದ್ಯದ ದುಷ್ಟ ವಿಷಯ ವ್ಯವಸ್ಥೆಯ ಅಂತ್ಯವನ್ನು ಪಾರಾಗಲು ಹೇಗೆ ಸಿದ್ಧರಾಗಿರಬಹುದು?
2 ನೀತಿಯನ್ನು ಸಾರುವವನು: “ಸುನೀತಿಯನ್ನು ಸಾರುವವನಾಗಿದ್ದ” ನೋಹನು ಸುಮಾರು 40-50 ವರ್ಷಗಳ ವರೆಗೆ ಎಡೆಬಿಡದೆ ಸಾರಿದನು. (2 ಪೇತ್ರ 2:5) ಅವನ ನೆರೆಯವರು, ರೂಪಾಂತರಗೊಂಡ ದಂಗೆಕೋರ ದೇವದೂತರ ಪ್ರಭಾವದಿಂದಲೋ ಏನೋ, ನೋಹನು ಸಾರುವುದನ್ನು ಕಂಡು ಗೇಲಿಮಾಡಿದರು. ನಮ್ಮ ಶುಶ್ರೂಷೆಯು ಸಹ ಆಗಿಂದಾಗ್ಗೆ ಜನರ ನಿರಾಸಕ್ತಿ ಮತ್ತು ನಿಂದೆಗೆ ಗುರಿಯಾಗುತ್ತದೆ. ಇದು ಈ ವ್ಯವಸ್ಥೆಯ ಅಂತ್ಯವು ಸಮೀಪವಿದೆ ಎಂಬುದಕ್ಕೆ ರುಜುವಾತು. (2 ಪೇತ್ರ 3:3, 4) ಆದರೂ ನೋಹನ ದಿನದ ಜನರಿಗಿಂತ ಭಿನ್ನವಾಗಿ ಈಗಲಾದರೋ ಅನೇಕರು ನಮ್ಮ ಸಾರುವಿಕೆಗೆ ಪ್ರತಿಕ್ರಿಯಿಸುತ್ತಾ ಯೆಹೋವನ ಆರಾಧನೆಗಾಗಿ “ಪ್ರವಾಹಗಳಂತೆ” ಕೂಡಿಬರುತ್ತಿದ್ದಾರೆ. (ಯೆಶಾ. 2:2) ನಾವು ಬಿಡದೆ ಸಾರುತ್ತಿರುವುದಾದರೆ ಮಾತ್ರ ‘ನಮ್ಮನ್ನೂ ನಮಗೆ ಕಿವಿಗೊಡುವವರನ್ನೂ ರಕ್ಷಿಸುವೆವು.’ (1 ತಿಮೋ. 4:16) ಆದುದರಿಂದ ಹೆತ್ತವರು ತಮ್ಮ ಮಕ್ಕಳಿಗೆ ಸಾರುವುದರ ಕುರಿತ ಮಹತ್ವವನ್ನು ತಮ್ಮ ಮಾತಿನಿಂದಲೂ ಮಾದರಿಯಿಂದಲೂ ಕಲಿಸುವುದು ಎಷ್ಟೊಂದು ಪ್ರಾಮುಖ್ಯ!—2 ತಿಮೊ. 4:2.
3 “ಅಪ್ಪಣೆಕೊಟ್ಟ ಪ್ರಕಾರವೇ” ಮಾಡಿದನು: ಯೆಹೋವನ ಆದೇಶಗಳನ್ನು ಜಾಗರೂಕತೆಯಿಂದ ಪಾಲಿಸುವುದರ ಮೇಲೆ ನೋಹನ ಮತ್ತು ಅವನ ಕುಟುಂಬದ ಪಾರಾಗುವಿಕೆ ಅವಲಂಬಿಸಿತ್ತು. (ಆದಿ. 6:22) ಬೈಬಲಿನಿಂದ ಮತ್ತು ನಂಬಿಗಸ್ತ ಆಳಿನಿಂದ ಬರುವ ಅಪ್ಪಣೆಗಳನ್ನು ‘ವಿಧೇಯತೆಯಿಂದ ಪಾಲಿಸಲು ಸಿದ್ಧರಾಗಿರುವುದು’ ಇಂದು ನಮಗೆ ಸಹ ಪ್ರಾಮುಖ್ಯ. (ಯಾಕೋ. 3:17, NW) ಯೆಹೋವನ ಸಂಘಟನೆಯಿಂದ ಬರುವ ಸಲಹೆಗಳನ್ನು ಒಬ್ಬ ತಂದೆಯು ತನ್ನ ಕುಟುಂಬಕ್ಕೆ ಹೇಗೆ ಅನ್ವಯಿಸಿದನೆಂದು ಅವನ ದೊಡ್ಡ ಮಕ್ಕಳು ಜ್ಞಾಪಿಸಿಕೊಳ್ಳುತ್ತಾರೆ. ಉದಾಹರಣೆಗೆ, ಸಂಘಟನೆಯ ಸಲಹೆಗನುಸಾರ, ಅವನು ಪ್ರತಿವಾರ ಕುಟುಂಬ ಬೈಬಲ್ ಅಧ್ಯಯನವನ್ನು ನಡಿಸುತ್ತಿದ್ದನು. ಪ್ರತಿ ವಾರಾಂತ್ಯದಲ್ಲಿ ಕುಟುಂಬವನ್ನು ಸೇವೆಗೆ ಕರೆದೊಯ್ಯುತ್ತಿದ್ದನು. ಪ್ರತಿ ವಾರ ತನ್ನ ಮಕ್ಕಳಲ್ಲಿ ಒಬ್ಬೊಬ್ಬರೊಂದಿಗೆ ಸೇವೆಮಾಡುತ್ತಿದ್ದನು. “ಅಪ್ಪಣೆ ಕೊಟ್ಟ ಪ್ರಕಾರವೇ” ಮಾಡುವುದರಲ್ಲಿ ಅವನ ದೃಢನಿಶ್ಚಯವು ಅವನ ಮಕ್ಕಳಲ್ಲಿ ಗಾಢ ಪ್ರಭಾವವನ್ನು ಬೀರಿತು ಮತ್ತು ಆರು ಮಂದಿ ಮಕ್ಕಳಲ್ಲಿ ಎಲ್ಲರೂ ಯೆಹೋವನ ನಿಷ್ಠಾವಂತ ಸೇವಕರಾಗಿ ಬೆಳೆದರು.
4 ಈ ವ್ಯವಸ್ಥೆಯ ಅಂತ್ಯವು ನೆನಸದ ಗಳಿಗೆಯಲ್ಲಿ ಫಕ್ಕನೇ ಬರಲಿದೆ. (ಲೂಕ 12:40) ನೋಹನನ್ನು ಅನುಕರಿಸುವ ಮೂಲಕ ಮತ್ತು ರಕ್ಷಣೆಗಾಗಿ ನಂಬಿಕೆಯನ್ನು ತೋರಿಸುವ ಮೂಲಕ ನಾವೂ ನಮ್ಮ ಕುಟುಂಬವೂ ಖಂಡಿತವಾಗಿಯೂ ಪಾರಾಗಲು ಸಿದ್ಧರಾಗಿರುವೆವು.—ಇಬ್ರಿ. 11:7.