‘ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಿ’
1 ಸಾರುವಿಕೆಯ ಹೊಸ ಕಾರ್ಯಾಚರಣೆಯನ್ನು ಯೇಸು ಆರಂಭಿಸಿದಾಗ ತನ್ನ ಶಿಷ್ಯರನ್ನು ಸಿದ್ಧಗೊಳಿಸಲು ಸಮಯ ತೆಗೆದುಕೊಂಡನು. (ಮತ್ತಾ. 10:5-14) ನಾವೆಲ್ಲರೂ ಕಾರ್ಯಮಗ್ನರು ನಿಜ. ಆದರೂ ಮನೆ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವ ಮುಂಚೆ ತಯಾರಿ ಮಾಡಲು ಕೆಲವು ನಿಮಿಷಗಳನ್ನಾದರೂ ತೆಗೆದುಕೊಂಡರೆ ಉತ್ತಮ ಫಲಿತಾಂಶಗಳು ಸಿಗುವವು.—2 ಕೊರಿಂ. 9:6.
2 ತಯಾರಿಸುವ ವಿಧ: ನಾವು ನೀಡಲಿರುವ ಸಾಹಿತ್ಯದೊಂದಿಗೆ ಪರಿಚಿತರಾಗುವುದು ಒಳ್ಳೇ ತಯಾರಿಯ ಆರಂಭದ ಹೆಜ್ಜೆಯಾಗಿದೆ. ನಮ್ಮ ಕ್ಷೇತ್ರದಲ್ಲಿರುವ ಜನರ ಕುರಿತೂ ನಾವು ಯೋಚಿಸಬೇಕು. ಅವರಿಗೆ ಯಾವ ವಿಷಯಗಳ ಬಗ್ಗೆ ಚಿಂತೆಯಿದೆ? ಸಾಮಾನ್ಯವಾಗಿ ಅವರ ಧಾರ್ಮಿಕ ನಂಬಿಕೆಗಳೇನು? ಅಂಥವರೊಂದಿಗೆ ಮಾತಾಡಲಿಕ್ಕಾಗಿ ನಮ್ಮ ರಾಜ್ಯದ ಸೇವೆ ಹಾಗೂ ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯಲ್ಲಿರುವ ಮಾದರಿ ನಿರೂಪಣೆಗಳನ್ನು ನಾವು ಪರಿಗಣಿಸಬಹುದು.
3 ಸೇವಾ ಕೂಟದಲ್ಲಿನ ಪ್ರತ್ಯಕ್ಷಾಭಿನಯಗಳನ್ನು ಕಿವಿಗೊಟ್ಟು ಕೇಳುವುದರಿಂದಲೂ ನಮಗೆ ಸಹಾಯವಾಗಬಲ್ಲದು. ನಿರೂಪಣೆಗಳನ್ನು ಬಳಸುವುದರಲ್ಲಿ ನಮ್ಮ ಅನುಭವ ಹೆಚ್ಚಾದಂತೆ ತಯಾರಿ ಮಾಡಲು ನಮಗೆ ಹೆಚ್ಚು ಸಮಯ ಬೇಕಾಗಲಿಕ್ಕಿಲ್ಲ. ಆದರೂ ಪ್ರತಿ ಸಲ ಶುಶ್ರೂಷೆಗೆ ತೆರಳುವ ಮುಂಚೆ ನಾವೇನನ್ನು ಹೇಳಲಿದ್ದೇವೋ ಆ ಕುರಿತು ಸ್ವಲ್ಪ ಯೋಚಿಸಿ, ನಮ್ಮ ನಿರೂಪಣೆಯನ್ನು ಪರಿಷ್ಕರಿಸುತ್ತಿರುವಲ್ಲಿ ನಾವು ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯವಿದೆ. ಅಲ್ಲದೇ ಸೇವೆಯ ಬ್ಯಾಗ್ನಲ್ಲಿ ಅಗತ್ಯವಿರುವುದೆಲ್ಲ ಇದೆಯೋ ಎಂಬುದನ್ನು ಪರಿಶೀಲಿಸಲಿಕ್ಕಾಗಿಯೂ ನಾವು ಒಂದೆರಡು ಕ್ಷಣ ತೆಗೆದುಕೊಳ್ಳಬೇಕು.
4 ನಿರೂಪಣೆಗಳನ್ನು ನೆನಪಿನಲ್ಲಿಡಲು ನಮಗೆ ಯಾವುದು ಸಹಾಯ ಮಾಡಬಲ್ಲದು? ನಿರೂಪಣೆಗಳನ್ನು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಸುವ ಒಂದು ವಿಧ ಅವನ್ನು ಗಟ್ಟಿಯಾದ ಸ್ವರದಲ್ಲಿ ಅಭ್ಯಾಸಿಸುವುದಾಗಿದೆ. ಕೆಲವರು ಇದನ್ನು ತಮ್ಮ ಕುಟುಂಬ ಅಧ್ಯಯನದ ವೇಳೆಯಲ್ಲಿ ಪ್ರ್ಯಾಕ್ಟಿಸ್ ಸೆಷನ್ಗಳಲ್ಲಿ ಮಾಡುತ್ತಾರೆ. ಇನ್ನಿತರರು, ಒಂದು ಚಿಕ್ಕ ಕಾರ್ಡ್ನಲ್ಲಿ ನಿರೂಪಣೆಯನ್ನು ಚುಟುಕಾಗಿ ಬರೆದಿಟ್ಟು ಪ್ರತಿಯೊಂದು ಮನೆಬಾಗಿಲಿಗೆ ಹೋಗುವ ಮುಂಚೆ ಅದರ ಮೇಲೊಮ್ಮೆ ಕಣ್ಣಾಡಿಸುವುದು ಸಹಾಯಕರವೆಂದು ಕಂಡುಕೊಂಡಿದ್ದಾರೆ.
5 ಪ್ರಯೋಜನಗಳು: ಒಳ್ಳೇ ತಯಾರಿಯು ಶುಶ್ರೂಷೆಯಲ್ಲಿ ನಮ್ಮ ಪರಿಣಾಮಕಾರಿತ್ವ ಮತ್ತು ಆನಂದವನ್ನು ಹೆಚ್ಚಿಸುತ್ತದೆ. ಜನರು ನಮ್ಮನ್ನು ಪ್ರಶ್ನಿಸುವಾಗ ಅಥವಾ ನಮ್ಮ ಮೇಲೆ ಆರೋಪ ಹೊರಿಸುವಾಗ ಸೂಕ್ತ ಪದಗಳನ್ನು ಬಳಸುತ್ತಾ ಇಂಪಾದ ರೀತಿಯಲ್ಲಿ ಉತ್ತರಕೊಡಲು ನಾವು ಶಕ್ತರಾಗುತ್ತೇವೆ. ಇದು ನಾವು ಮನೆ ಬಾಗಿಲಿಗೆ ಹೋದಾಗ ಹೆದರದೆ ಆರಾಮವಾಗಿರಲು ಸಹಾಯ ಮಾಡುತ್ತದೆ. ನಾವೇನು ಹೇಳಲಿದ್ದೇವೋ ಅದರ ಬಗ್ಗೆಯೇ ಚಿಂತಿಸುತ್ತಿರುವ ಬದಲು ಮನೆಯವನ ಕಡೆಗೆ ಹೆಚ್ಚು ಗಮನಕೊಡಲು ಶಕ್ತರಾಗುವೆವು. ಅಲ್ಲದೇ ಸಾಹಿತ್ಯದೊಂದಿಗೆ ಚಿರಪರಿಚಿತರಿರುವಾಗ ಅವುಗಳನ್ನು ನೀಡಲು ಹೆಚ್ಚು ಉತ್ಸುಕರಾಗಿರುವೆವು.
6 ‘ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಿ’ ಎಂದು ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. (ತೀತ 3:1) ಸುವಾರ್ತೆ ಸಾರುವುದಕ್ಕಿಂತ ಹೆಚ್ಚು ಉತ್ತಮ ಕೆಲಸ ಬೇರೊಂದಿಲ್ಲ. ಒಳ್ಳೇ ತಯಾರಿ ಮಾಡುವ ಮೂಲಕ, ನಮಗೆ ಕಿವಿಗೊಡಲು ಬಯಸುವ ಮನೆಯವರಿಗೆ ಮತ್ತು ನಾವು ಪ್ರತಿನಿಧಿಸುವ ಯೆಹೋವ ದೇವರಿಗೆ ಗೌರವ ತೋರಿಸುತ್ತೇವೆ.—ಯೆಶಾ. 43:10.