ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ದಯಾಪರರಾಗಿರುವ ಮೂಲಕ
1 “ಯೆಹೋವನು ದಯೆಯೂ ಕನಿಕರವೂ ಉಳ್ಳವನು.” (ಕೀರ್ತ. 145:8) ಯೆಹೋವನು ವಿಶ್ವದ ಪರಮಾಧಿಕಾರಿಯಾಗಿದ್ದಾನಾದರೂ, ಅಪರಿಪೂರ್ಣ ಮಾನವರೊಂದಿಗಿನ ತನ್ನ ವ್ಯವಹಾರಗಳಲ್ಲಿ ದಯಾಪರನೂ ಪರಿಗಣನೆಯುಳ್ಳವನೂ ಸೌಜನ್ಯಶೀಲನೂ ಆಗಿದ್ದಾನೆ. (ಆದಿ. 13:14; 19:18-21, 29) ಸುವಾರ್ತೆಯನ್ನು ಸಾರಲು ಬಳಸುವ ನಿರೂಪಣೆಗಳನ್ನು ಉತ್ತಮಗೊಳಿಸುವ ಮೂಲಕ ನಮ್ಮ ದಯಾಪರ ದೇವರನ್ನು ನಾವು ಅನುಕರಿಸಬಲ್ಲೆವು. (ಕೊಲೊ. 4:6) ಇದು ಕೇವಲ ಮಾತಿನಲ್ಲಿ ವಿನಯಭಾವದವರು ಮತ್ತು ಗೌರವಭರಿತರು ಆಗಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡಿದೆ.
2 ಮನೆಯಿಂದ ಮನೆಯ ಸೇವೆಯಲ್ಲಿ: ಮನೆಯವರಿಗೆ ಅನುಕೂಲಕರವಲ್ಲದ ಅಥವಾ ಮನೆಯವರು ನಮ್ಮೊಂದಿಗೆ ಮಾತಾಡಲಾರದಷ್ಟು ಕಾರ್ಯಮಗ್ನರಾಗಿರುವ ಸಮಯದಲ್ಲಿ ನಾವು ಅವರನ್ನು ಭೇಟಿಮಾಡಿರುವುದಾದರೆ ಆಗೇನು? ಅವರ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ನಮ್ಮ ನಿರೂಪಣೆಗಳನ್ನು ಚುಟುಕುಗೊಳಿಸುವುದಾದರೆ ಅಥವಾ ಬೇರೊಂದು ಸಮಯ ಹಿಂದಿರುಗಿ ಬರಲು ಅನುಮತಿ ಪಡೆಯುವುದಾದರೆ ಒಳ್ಳೇದು. ಜನರು ನಮ್ಮ ಸಾಹಿತ್ಯವನ್ನು ನಿರಾಕರಿಸುವಲ್ಲಿ ಅವುಗಳನ್ನು ಸ್ವೀಕರಿಸುವಂತೆ ಒತ್ತಾಯಮಾಡುವುದು ಸರಿಯಲ್ಲ. ಇತರರಿಗಾಗಿರುವ ಪರಿಗಣನೆಯು ಅವರ ಸ್ವತ್ತುಗಳ ಕಡೆಗೆ ಸಹ ಗೌರವವನ್ನು ತೋರಿಸುವಂತೆ, ಅಂದರೆ ಗೇಟನ್ನು ಸರಿಯಾಗಿ ಹಾಕುವಂತೆ ಮತ್ತು ಮನೆಯವರಿಗೆ ಕಿರಿಕಿರಿಯಾಗುವಷ್ಟರ ಮಟ್ಟಿಗೆ ಕರೆಗಂಟೆಯನ್ನು ಬಾರಿಸದಿರುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಇದೇ ರೀತಿ ನಡೆದುಕೊಳ್ಳುವಂತೆ ಮಕ್ಕಳನ್ನು ತರಬೇತಿಗೊಳಿಸುವುದೂ ಇದರಲ್ಲಿ ಸೇರಿದೆ. ಯಾರೂ ಇಲ್ಲದ ಮನೆಗಳಲ್ಲಿ ನಾವು ಬಿಟ್ಟುಬರುವ ಸಾಹಿತ್ಯವು ದಾರಿಹೋಕರ ದೃಷ್ಟಿಗೆ ಬೀಳದಿರುವ ಸ್ಥಳದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜನರು ನಮ್ಮೊಂದಿಗೆ ಹೇಗೆ ವರ್ತಿಸಬೇಕೆಂದು ನಾವು ಬಯಸುತ್ತೇವೋ ಅದೇ ರೀತಿ ನಾವು ಅವರೊಂದಿಗೆ ವರ್ತಿಸುವಂತೆ ದಯಾಪರತೆಯು ನಮ್ಮನ್ನು ಪ್ರಚೋದಿಸುತ್ತದೆ.—ಲೂಕ 6:31
3 ಬೀದಿ ಸಾಕ್ಷಿಕಾರ್ಯದಲ್ಲಿ: ನಾವು ಬೀದಿ ಸಾಕ್ಷಿಕಾರ್ಯದಲ್ಲಿ ತೊಡಗಿರುವಾಗ, ಪಾದಚಾರಿಗಳಿಗೆ ಅಡಚಣೆಯಾಗದಿರುವಂತೆ ಮತ್ತು ಅಂಗಡಿ ಮಳಿಗೆಗಳ ಮುಂದೆ ಗುಂಪುಗೂಡದಂತೆ ನೋಡಿಕೊಳ್ಳುವುದರ ಮೂಲಕ ಸಭ್ಯತೆಯನ್ನು ತೋರಿಸುತ್ತೇವೆ. ನಾವು ಇತರರ ಸನ್ನಿವೇಶಗಳಿಗೆ ಪರಿಗಣನೆ ತೋರಿಸುವವರಾಗಿರುವಲ್ಲಿ, ತರಾತುರಿಯಲ್ಲಿರುವವರೊಂದಿಗಲ್ಲ ಬದಲಾಗಿ ಸ್ವಲ್ಪ ಸಮಯಾವಕಾಶವಿರುವವರೊಂದಿಗೆ ಮಾತಾಡಲು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ಬೀದಿಯಲ್ಲಿನ ಗೌಜುಗದ್ದಲದ ಕಾರಣ ಗಟ್ಟಿಯಾಗಿ ಮಾತಾಡಬೇಕಾಗಬಹುದು. ಆದರೂ, ಹಾಗೆ ಮಾಡುವಾಗ ಇತರರ ಗಮನವನ್ನು ನಮ್ಮ ಕಡೆಗೆ ಸೆಳೆಯದೆ ಗೌರವಪೂರ್ವಕವಾದ ಧ್ವನಿಯನ್ನು ಇಟ್ಟುಕೊಂಡಿರಬೇಕು.—ಮತ್ತಾ. 12:19
4 ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ: ಇತರರಿಗಾಗಿರುವ ದಯಾಪರತೆಯು ನಾವು ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡುತ್ತಿರುವಾಗ, ಯಾರೊಂದಿಗೆ ಮಾತಾಡುತ್ತಿದ್ದೇವೋ ಅವರು ನಮ್ಮ ಧ್ವನಿಯನ್ನು ಸರಿಯಾಗಿ ಕೇಳಿಸಿಕೊಳ್ಳಲು ಸಾಧ್ಯವಾಗುವಂತೆ ನಿಶ್ಶಬ್ದವಾದ ವಾತಾವರಣವನ್ನು ಆರಿಸಿಕೊಳ್ಳಲು ನಮ್ಮನ್ನು ಪ್ರಚೋದಿಸುವುದು. ನಮ್ಮ ಪರಿಚಯಮಾಡಿಕೊಡುವುದನ್ನು ತಡಮಾಡದಿರುವ ಮೂಲಕ ಮತ್ತು ನಾವು ಕರೆ ಮಾಡಿರುವ ಕಾರಣವನ್ನು ಕೂಡಲೇ ವಿವರಿಸುವ ಮೂಲಕ ನಾವು ಒಳ್ಳೆಯ ಶಿಷ್ಟಾಚಾರವನ್ನು ತೋರಿಸುತ್ತೇವೆ. ಟೆಲಿಫೋನಿನಲ್ಲಿ ಮಾತನಾಡುವಾಗ ರಿಸೀವರನ್ನು ಸರಿಯಾಗಿ ಹಿಡಿದುಕೊಳ್ಳುವುದು ಮತ್ತು ಇಂಪಾದ ಸ್ವರದಿಂದ ಮಾತಾಡುವುದು, ಇತರರನ್ನು ಭಕ್ತಿವೃದ್ಧಿಮಾಡುವಂಥ ಆಧ್ಯಾತ್ಮಿಕ ಸಂಭಾಷಣೆಯಲ್ಲಿ ಒಳಗೂಡಿಸಲು ಸಹಾಯಮಾಡುತ್ತದೆ. (1 ಕೊರಿಂ. 14:8, 9) ಈ ವಿಧಗಳಲ್ಲಿ ನಾವು ದಯಾಪರರೂ ಪರಿಗಣನೆಯುಳ್ಳವರೂ ಸೌಜನ್ಯಶೀಲರೂ ಆಗಿರುವ ಮೂಲಕ ನಮ್ಮ ದಯಾಪರ ದೇವರಾದ ಯೆಹೋವನನ್ನು ಅನುಕರಿಸಬಲ್ಲೆವು.