ನೀವು ನಾಮ ಪ್ರಸ್ತಾವನೆಗಳಿಗಾಗಿ ಕೇಳಿದ್ದೀರೊ?
ನೀವು ಈಗ ಒಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿರುವಲ್ಲಿ ಆ ವಿದ್ಯಾರ್ಥಿಯ ಸ್ನೇಹಿತರು, ಸಂಬಂಧಿಕರು ಅಥವಾ ಪರಿಚಯಸ್ಥರಲ್ಲಿ ಯಾರಿಗಾದರೂ ಬೈಬಲ್ ಏನನ್ನು ಬೋಧಿಸುತ್ತದೋ ಅದರ ಕುರಿತು ಕಲಿಯಲು ಮನಸ್ಸಿರಬಹುದೋ ಎಂದು ಏಕೆ ಕೇಳಿನೋಡಬಾರದು? ಹೆಚ್ಚಿನ ವಿದ್ಯಮಾನಗಳಲ್ಲಿ ವಿದ್ಯಾರ್ಥಿಗಳು ಅನೇಕ ವ್ಯಕ್ತಿಗಳ ಹೆಸರುಗಳನ್ನು ಕೊಡುತ್ತಾರೆ. ಬೈಬಲ್ ಅಧ್ಯಯನವನ್ನು ನಡೆಸಲಿಕ್ಕಾಗಿ ಆ ಆಸಕ್ತ ಜನರನ್ನು ನೀವು ಭೇಟಿಮಾಡುವಾಗ ವಿದ್ಯಾರ್ಥಿಯ ಅನುಮತಿಯನ್ನು ನೀವು ಪಡೆದಿರುವುದಾದರೆ ಅವನ ಹೆಸರನ್ನು ತಿಳಿಸಬಹುದು. ಹೀಗೆ ಭೇಟಿಮಾಡುವಾಗ, “[ವಿದ್ಯಾರ್ಥಿಯ ಹೆಸರು]ರವರು ಬೈಬಲಿನ ಅಧ್ಯಯನಮಾಡುವುದರಲ್ಲಿ ಎಷ್ಟು ಸಂತೋಷವನ್ನು ಪಡೆದುಕೊಂಡಿದ್ದಾರೆಂದರೆ, ನಮ್ಮ ಉಚಿತ ಬೈಬಲ್ ಅಧ್ಯಯನ ಕಾರ್ಯಕ್ರಮದಿಂದ ನೀವು ಕೂಡ ಪ್ರಯೋಜನ ಪಡೆದುಕೊಳ್ಳಲು ಇಷ್ಟಪಡಬಹುದೆಂದು ಅವರು ನೆನಸಿದರು” ಎಂದು ನೀವು ಹೇಳಬಹುದು. ತದನಂತರ, ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸಿ ಬೈಬಲ್ ಅಧ್ಯಯನವನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ಚುಟುಕಾಗಿ ತೋರಿಸಿರಿ.
ನಿಮ್ಮ ವಿದ್ಯಾರ್ಥಿ ಒಳ್ಳೇ ಪ್ರಗತಿಮಾಡುತ್ತಿರುವಲ್ಲಿ, ಆಸಕ್ತಿ ತೋರಿಸುವ ಅವನ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಈ ಅಧ್ಯಯನ ಏರ್ಪಾಡಿನ ಕುರಿತು ವಿವರಿಸುವಂತೆ ಅವನನ್ನು ಉತ್ತೇಜಿಸಬಹುದು. ತನ್ನ ಅಧ್ಯಯನ ನಡೆಸಲ್ಪಡುವ ಸಮಯದಲ್ಲಿ ಉಪಸ್ಥಿತರಿರುವಂತೆ ಅವನು ಅವರನ್ನು ಆಮಂತ್ರಿಸಬಹುದು. ಅಥವಾ ಅದು ಅನುಕೂಲಕರವಾಗಿರದಿದ್ದಲ್ಲಿ, ನೀವು ಆ ಆಸಕ್ತ ವ್ಯಕ್ತಿಯನ್ನು ಭೇಟಿಯಾಗಿ ಅಧ್ಯಯನವನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ಅವರಿಗೆ ತೋರಿಸುವಂತೆ ಅವನು ಏರ್ಪಡಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ವಿದ್ಯಾರ್ಥಿಯು ಪಡೆದುಕೊಂಡಿರುವ ಬೈಬಲ್ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಆರಂಭಿಸುವಂತೆ ಅವನನ್ನು ಉತ್ತೇಜಿಸಿದಂತಾಗುವುದು.
ನೀವು ಕ್ರಮವಾಗಿ ಪುನರ್ಭೇಟಿ ಮಾಡುವ ಆದರೆ ಸ್ವತಃ ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಿರದ ಜನರು ಸಹ ನಿಮಗೆ ಕೆಲವರ ಹೆಸರುಗಳನ್ನು ಕೊಡಬಹುದು. ಅಂಥ ಜನರಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕದ ಒಂದು ಪ್ರತಿಯನ್ನು ನೀಡುವಾಗ ನೀವು ಹೀಗೆ ಹೇಳಬಹುದು: “ಈ ಪುಸ್ತಕದ ಇನ್ನೊಂದು ಪ್ರತಿಯನ್ನು ಪಡೆಯಲು ಸಂತೋಷಿಸಬಹುದಾದ ಬೇರೆ ಯಾರಾದರೂ ನಿಮಗೆ ಗೊತ್ತಿದ್ದಾರೋ?”
ನಾವು ಜೀವಿಸುತ್ತಿರುವ ಸಮಯದ ತ್ವರಿತತೆಯನ್ನು ಮನಸ್ಸಿನಲ್ಲಿಟ್ಟವರಾಗಿ, ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುವ ಮತ್ತು ತಮ್ಮದಾಗಿ ಮಾಡಿಕೊಳ್ಳಲು ಸಾಧ್ಯವಿರುವ ಪ್ರತಿಯೊಂದು ಸಂದರ್ಭವನ್ನು ನಾವು ಸದುಪಯೋಗಿಸಲು ಬಯಸುತ್ತೇವೆ. ನೀವು ನಾಮ ಪ್ರಸ್ತಾವನೆಗಳಿಗಾಗಿ ಕೇಳಿದ್ದೀರೊ?