ಇತರರೊಂದಿಗೆ ತರ್ಕಬದ್ಧವಾಗಿ ಮಾತಾಡುವುದರಲ್ಲಿ ಕೌಶಲವನ್ನು ಬೆಳೆಸಿಕೊಳ್ಳಿ
1. ಯಾವ ಬೈಬಲ್ ವೃತ್ತಾಂತವನ್ನು ನಾವು ಪರಿಶೀಲಿಸಲಿದ್ದೇವೆ, ಮತ್ತು ಏಕೆ?
1 ಅಪೊಸ್ತಲರ ಕೃತ್ಯಗಳು 13:16-41ರಲ್ಲಿ ದಾಖಲಿಸಲ್ಪಟ್ಟಿರುವ, ಪಿಸಿದ್ಯದ ಅಂತಿಯೋಕ್ಯದ ಸಭಾಮಂದಿರದಲ್ಲಿ ಅಪೊಸ್ತಲ ಪೌಲನು ನೀಡಿದ ಭಾಷಣವು, ಇತರರೊಂದಿಗೆ ತರ್ಕಬದ್ಧವಾಗಿ ಮಾತಾಡುವುದರ ಕುರಿತು ಒಂದು ಅತ್ಯುತ್ತಮ ಉದಾಹರಣೆಯನ್ನು ಒದಗಿಸುತ್ತದೆ. ತನ್ನ ಕೇಳುಗರ ಹಿನ್ನೆಲೆಯನ್ನು ಪೌಲನು ಪರಿಗಣನೆಗೆ ತೆಗೆದುಕೊಂಡನು ಮತ್ತು ಅದಕ್ಕೆ ತಕ್ಕಂತೆ ತನ್ನ ಸುವಾರ್ತೆಯ ನಿರೂಪಣೆಯನ್ನು ಹೊಂದಿಸಿಕೊಂಡನು. ಈ ವೃತ್ತಾಂತವನ್ನು ನಾವು ಪರಿಶೀಲಿಸುತ್ತಿರುವಾಗ, ಶುಶ್ರೂಷೆಯಲ್ಲಿ ನಾವು ಸಹ ಇದೇ ರೀತಿ ಹೇಗೆ ತರ್ಕಬದ್ಧವಾಗಿ ಮಾತಾಡಸಾಧ್ಯವಿದೆಯೆಂದು ಪರಿಗಣಿಸೋಣ.
2. ಪೌಲನು ತನ್ನ ಭಾಷಣವನ್ನು ಪ್ರಾರಂಭಿಸಿದ ರೀತಿಯಿಂದ ನಾವೇನು ಕಲಿಯಬಲ್ಲೆವು?
2 ಇಬ್ಬರೂ ಒಪ್ಪುವ ಅಂಶವನ್ನು ಕಂಡುಹಿಡಿಯಿರಿ: ಪೌಲನ ಸಂದೇಶವು ದೇವರ ಉದ್ದೇಶದ ನೆರವೇರಿಕೆಯಲ್ಲಿ ಯೇಸುವಿಗಿರುವ ಮುಖ್ಯ ಪಾತ್ರದ ಮೇಲೆ ಕೇಂದ್ರೀಕರಿಸಿತ್ತಾದರೂ, ಅವನು ತನ್ನ ಭಾಷಣವನ್ನು ಈ ವಿಷಯದಿಂದ ಪ್ರಾರಂಭಿಸಲಿಲ್ಲ. ಬದಲಾಗಿ, ಹೆಚ್ಚಾಗಿ ಯೆಹೂದ್ಯರೇ ಇದ್ದ ತನ್ನ ಸಭಿಕರಿಗೆ ತಿಳಿದಿರುವ ಒಂದು ಸಾಮಾನ್ಯ ಅಂಶದ ಕುರಿತು ಅಂದರೆ ಯೆಹೂದಿ ಜನರ ಇತಿಹಾಸದ ಕುರಿತು ಅವನು ಮಾತನಾಡಿದನು. (ಅ. ಕೃ. 13:16-22) ಇದೇ ರೀತಿಯಲ್ಲಿ, ನಾವು ಮತ್ತು ನಮ್ಮ ಕೇಳುಗರು ಒಪ್ಪುವ ಒಂದು ಸಾಮಾನ್ಯ ಅಂಶವನ್ನು ಕಂಡುಹಿಡಿಯುವುದಾದರೆ, ಅವರ ಹೃದಯವನ್ನು ತಲಪುವುದರಲ್ಲಿ ನಾವು ಹೆಚ್ಚು ಪರಿಣಾಮಕಾರಿಯಾಗುವೆವು. ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವಂತೆ ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ, ಅವರಿಗೆ ನಿಜವಾಗಿಯೂ ಪ್ರಾಮುಖ್ಯವೆಂದೆಣಿಸುವ ವಿಷಯಗಳು ಯಾವುದೆಂಬುದನ್ನು ನಾವು ತಿಳಿದುಕೊಳ್ಳಲಿಕ್ಕಾಗಿ ಅವರ ಉತ್ತರಗಳನ್ನು ಜಾಗರೂಕತೆಯಿಂದ ಆಲಿಸುವುದು ಇದಕ್ಕೆ ಅಗತ್ಯ.
3. ಪೌಲನ ಕೇಳುಗರಿಗೆ ಯೇಸುವೇ ವಾಗ್ದತ್ತ ಮೆಸ್ಸೀಯನಾಗಿದ್ದನೆಂದು ಒಪ್ಪುವುದು ಏಕೆ ಕಷ್ಟಕರವಾಗಿತ್ತು?
3 ಪೌಲನು ಯೆಹೂದ್ಯರ ಇತಿಹಾಸದ ಕುರಿತು ಚರ್ಚಿಸುವಾಗ, ಒಬ್ಬ ರಕ್ಷಕನು ದಾವೀದನ ವಂಶದಿಂದ ಬರುವನೆಂಬ ದೇವರ ವಾಗ್ದಾನವನ್ನು ತನ್ನ ಕೇಳುಗರಿಗೆ ನೆನಪುಹುಟ್ಟಿಸಿದನು. ಆದರೆ ಅನೇಕ ಯೆಹೂದ್ಯರು, ತಮ್ಮನ್ನು ರೋಮನ್ ಪ್ರಭುತ್ವದಿಂದ ಬಿಡುಗಡೆಗೊಳಿಸಿ, ಯೆಹೂದಿ ಜನಾಂಗವನ್ನು ಉಳಿದ ಎಲ್ಲ ಜನಾಂಗಗಳಿಗಿಂತ ಉನ್ನತಕ್ಕೇರಿಸುವ ಒಬ್ಬ ಮಿಲಿಟರಿ ವೀರನನ್ನು ಎದುರುನೋಡುತ್ತಿದ್ದರು. ಯೇಸು ಯೆರೂಸಲೇಮಿನ ಧಾರ್ಮಿಕ ಮುಖಂಡರಿಂದ ತಿರಸ್ಕರಿಸಲ್ಪಟ್ಟು, ರೋಮನ್ ಅಧಿಕಾರಿಗಳ ವಶಕ್ಕೆ ಒಪ್ಪಿಸಲ್ಪಟ್ಟು ಕೊಲ್ಲಲ್ಪಟ್ಟಿದ್ದನೆಂದು ಅವರಿಗೆ ನಿಸ್ಸಂದೇಹವಾಗಿ ತಿಳಿದಿತ್ತು. ಇವನೇ ವಾಗ್ದತ್ತ ಮೆಸ್ಸೀಯನೆಂದು ಪೌಲನು ಹೇಗೆ ಅವರ ಮನವೊಪ್ಪಿಸಸಾಧ್ಯವಿತ್ತು?
4. ಪೌಲನು ಯೆಹೂದಿ ಸಭಿಕರೊಂದಿಗೆ ಹೇಗೆ ಕೌಶಲದಿಂದ ತರ್ಕಿಸಿದನು?
4 ನಿಮ್ಮ ಪ್ರಸ್ತಾಪವನ್ನು ಹೊಂದಿಸಿಕೊಳ್ಳಿರಿ: ಪೌಲನು ತನ್ನ ಕೇಳುಗರ ಆಲೋಚನಾಧಾಟಿಯನ್ನು ತಿಳಿದಿದ್ದರಿಂದ, ಅವರು ಈಗಾಗಲೇ ಸ್ವೀಕರಿಸಿದಂಥ ವಿಷಯಗಳ ಆಧಾರದ ಮೇಲೆ ತರ್ಕಿಸಲು ಶಾಸ್ತ್ರವಚನಗಳನ್ನು ಉಪಯೋಗಿಸಿದನು. ಉದಾಹರಣೆಗೆ, ಅವನು ಯೇಸುವನ್ನು ದಾವೀದನ ಸಂತತಿಯವನು ಮತ್ತು ದೇವರ ಪ್ರವಾದಿಯೆಂದು ಹೆಚ್ಚಿನವರಿಂದ ಪರಿಗಣಿಸಲ್ಪಟ್ಟ ಸ್ನಾನಿಕನಾದ ಯೋಹಾನನಿಂದ ಗುರುತಿಸಲ್ಪಟ್ಟವನು ಎಂದು ಪರಿಚಯಪಡಿಸಿದನು. (ಅ. ಕೃ. 13:23-25) ಆ ಧಾರ್ಮಿಕ ಮುಖಂಡರು ಯೇಸುವನ್ನು ತಿರಸ್ಕರಿಸಿ, ಮರಣದಂಡನೆಗೆ ಒಳಪಡಿಸಿ “ಪ್ರವಾದಿಗಳ . . . ವಾಕ್ಯಗಳನ್ನೇ ನೆರವೇರಿಸಿದರು” ಎಂದು ಪೌಲನು ಸೂಚಿಸಿದನು. (ಅ. ಕೃ. 13:26-28) ಇದಲ್ಲದೆ ಅವನು, ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟದ್ದನ್ನು ಕಣ್ಣಾರೆ ಕಂಡವರಿದ್ದಾರೆ ಎಂದು ವಿವರಿಸಿದನು ಮತ್ತು ಯೇಸುವಿನ ಪುನರುತ್ಥಾನದಲ್ಲಿ ನೆರವೇರಿದ ಚಿರಪರಿಚಿತ ಶಾಸ್ತ್ರವಚನಗಳ ಕಡೆಗೆ ಗಮನವನ್ನು ಸೆಳೆದನು.—ಅ. ಕೃ. 13:29-37.
5. (ಎ) ಗ್ರೀಕ್ ಸಭಿಕರನ್ನು ಸಂಬೋಧಿಸಿದಾಗ, ಪೌಲನು ತನ್ನ ಪ್ರಸ್ತಾಪವನ್ನು ಹೇಗೆ ಹೊಂದಿಸಿಕೊಂಡನು? (ಬಿ) ಸ್ಥಳಿಕ ಟೆರಿಟೊರಿಯಲ್ಲಿ ಸಾಕ್ಷಿಕೊಡುವಾಗ ಪೌಲನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?
5 ಇನ್ನೊಂದು ಕಡೆಯಲ್ಲಿ, ಅಥೇನೆ ಪಟ್ಟಣದ ಅರಿಯೋಪಾಗದಲ್ಲಿನ ಗ್ರೀಕ್ ಸಭಿಕರನ್ನು ಸಂಬೋಧಿಸಿದಾಗ ಪೌಲನು ಮತ್ತೊಂದು ವಿಧಾನವನ್ನು ಉಪಯೋಗಿಸಿದನು. (ಅ. ಕೃ. 17:22-31) ಆದರೂ, ಅವನು ಅದೇ ಮೂಲ ಸಂದೇಶವನ್ನು ಪ್ರಸ್ತುತಪಡಿಸಿದನು ಮತ್ತು ಎರಡೂ ಸಂದರ್ಭಗಳಲ್ಲಿ ಅವನ ಪ್ರಯತ್ನಗಳಿಗೆ ಒಳ್ಳೇ ಫಲಿತಾಂಶಗಳು ಸಿಕ್ಕಿದವು. (ಅ. ಕೃ. 13:42, 43; 17:34) ಇಂದು ಕೂಡ ನಮ್ಮ ಕೇಳುಗರು ಒಪ್ಪುವ ಒಂದು ಆಸಕ್ತಿಕರವಾದ ಸಾಮಾನ್ಯ ಅಂಶವನ್ನು ಕಂಡುಹಿಡಿದು, ಅವರ ಹಿನ್ನೆಲೆ ಮತ್ತು ಆಲೋಚನಾಧಾಟಿಗನುಸಾರ ನಮ್ಮ ಪ್ರಸ್ತಾಪವನ್ನು ಹೊಂದಿಸಿಕೊಳ್ಳುವುದಾದರೆ ನಾವು ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗುವೆವು.