ನಾವು ಯೆಹೋವನ ಅಧಿಕಾರವನ್ನು ಗೌರವಿಸಲೇಬೇಕು
ಕೋರಹ, ದಾತಾನ್, ಮತ್ತು ಅಬೀರಾಮ್ ಎಂಬ ಪುರಾತನ ಹೆಸರುಗಳನ್ನು ಕೇಳಿಸಿಕೊಳ್ಳುವಾಗ ನಿಮಗೆ ಯಾವುದು ಮನಸ್ಸಿಗೆ ಬರುತ್ತದೆ? ದಂಗೆಕೋರತನವೇ! ಯಾವುದರ ವಿರುದ್ಧ? ದೈವಿಕ ಅಧಿಕಾರದ ವಿರುದ್ಧ. ಈ ದುರಂತಮಯ ಮಾರ್ಗದ ಕುರಿತಾದ ವಿವರಗಳು, ಅರಣ್ಯಕಾಂಡ 16ನೇ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿವೆ. ಮತ್ತು ಆಗಸ್ಟ್ 1, 2002ರ ಕಾವಲಿನಬುರುಜು ಪತ್ರಿಕೆಯ “ದೈವಿಕ ಅಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗಿರಿ” ಎಂಬ ಲೇಖನದಲ್ಲಿ ಇದರ ಕುರಿತಾದ ಸಾರಾಂಶವು ಒದಗಿಸಲ್ಪಟ್ಟಿದೆ. ಈ ವಿಷಯಭಾಗವನ್ನು ಓದಿ, ತದನಂತರ ಯೆಹೋವನ ಅಧಿಕಾರವನ್ನು ಗೌರವಿಸಿರಿ ಎಂಬ ವಿಡಿಯೋದಲ್ಲಿ ಇದರ ಆಲೋಚನಾಪ್ರೇರಕ ಚಿತ್ರಣವನ್ನು ನೋಡುವುದನ್ನು ನೀವು ಪ್ರಯೋಜನಕರವಾದದ್ದಾಗಿ ಕಂಡುಕೊಳ್ಳಬಹುದು. ಕೋರಹನ ನಂಬಿಗಸ್ತ ಪುತ್ರರ ಹಾಗೂ ವಿಶ್ವದ ಪರಮಾಧಿಕಾರಿಗೆ ವಿರುದ್ಧವಾಗಿರುವ ಮಾರ್ಗವನ್ನು ಬೆನ್ನಟ್ಟಿದ ಅವರ ದಂಗೆಕೋರ ತಂದೆಯ ನಡುವೆ ಉಂಟಾದ ಘರ್ಷಣೆಯನ್ನು ನೀವು ನೋಡುವಿರಿ. (ಅರಣ್ಯ. 26:9-11) ನಿಜ ಜೀವನದ ಈ ಡ್ರಾಮವು, ಯೆಹೋವನ ಕಡೆಗಿರುವ ನಮ್ಮ ನಿಷ್ಠೆಯನ್ನು ಇನ್ನೂ ಹೆಚ್ಚು ಪೂರ್ಣವಾದ ರೀತಿಯಲ್ಲಿ ಬೆಳೆಸಿಕೊಳ್ಳುವಂತೆ ನಮ್ಮೆಲ್ಲರನ್ನೂ ಪ್ರಚೋದಿಸಬೇಕು.
ನೀವು ವಿಡಿಯೋವನ್ನು ನೋಡುತ್ತಿರುವಾಗ, ಆರು ನಿರ್ಣಾಯಕ ಕ್ಷೇತ್ರಗಳಲ್ಲಿ ಕೋರಹನೂ ಅವನ ಜೊತೆ ದಂಗೆಕೋರರೂ ನಿಷ್ಠೆಯ ಪರೀಕ್ಷೆಯಲ್ಲಿ ವಿಫಲರಾದ ಪುರಾವೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿ. (1) ಅವರು ದೈವಿಕ ಅಧಿಕಾರಕ್ಕೆ ಹೇಗೆ ಅಗೌರವ ತೋರಿಸಿದರು? (2) ಅಹಂಕಾರ, ಮಹತ್ವಾಕಾಂಕ್ಷೆ, ಮತ್ತು ಈರ್ಷ್ಯೆಯು ತಮ್ಮನ್ನು ಪ್ರಭಾವಿಸುವಂತೆ ಅವರು ಹೇಗೆ ಅನುಮತಿಸಿದರು? (3) ಯೆಹೋವನಿಂದ ನೇಮಿಸಲ್ಪಟ್ಟವರ ಅಪರಿಪೂರ್ಣತೆಗಳ ಮೇಲೆ ಅವರು ಹೇಗೆ ಗಮನವನ್ನು ಕೇಂದ್ರೀಕರಿಸಿದರು? (4) ಅವರು ಯಾವ ರೀತಿಯ ಗುಣುಗುಟ್ಟುವ ಮನೋಭಾವವನ್ನು ಬೆಳೆಸಿಕೊಂಡಿದ್ದರು? (5) ತಮ್ಮ ಸೇವಾ ಸುಯೋಗಗಳ ವಿಷಯದಲ್ಲಿ ಅವರು ಏಕೆ ಅತೃಪ್ತರಾದರು? (6) ದೇವರಿಗೆ ತೋರಿಸಲ್ಪಡುವ ನಿಷ್ಠೆಗಿಂತಲೂ ಹೆಚ್ಚಾಗಿ ಸ್ನೇಹಿತರು ಮತ್ತು ಕುಟುಂಬಕ್ಕೆ ನಿಷ್ಠೆಯನ್ನು ತೋರಿಸಲು ಅವರು ಹೇಗೆ ಮುಂದಾದರು?
ಬೈಬಲ್ ಡ್ರಾಮದಲ್ಲಿ ಕಲಿತಂಥ ಪಾಠಗಳು, ಇಂದು ದೈವಿಕ ಅಧಿಕಾರದ ಕುರಿತಾದ ನಮ್ಮ ವೈಯಕ್ತಿಕ ದೃಷ್ಟಿಕೋನಕ್ಕೆ ಹೇಗೆ ಅನ್ವಯವಾಗುತ್ತವೆ ಎಂಬುದನ್ನು ಪರಿಗಣಿಸಿರಿ: (1) ಸಭೆಯಲ್ಲಿನ ಹಿರಿಯರ ನಿರ್ಣಯಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು, ಮತ್ತು ಏಕೆ? (2) ನಮ್ಮೊಳಗಿರುವ ಯಾವುದೇ ಅಯೋಗ್ಯ ಹೇತುಗಳನ್ನು ನಾವು ಹೇಗೆ ಪ್ರತಿರೋಧಿಸಸಾಧ್ಯವಿದೆ? (3) ಮುಂದಾಳುತ್ವವನ್ನು ವಹಿಸಿಕೊಳ್ಳಲು ನೇಮಿತರಾದವರ ಅಪರಿಪೂರ್ಣತೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? (4) ನಮ್ಮ ಹೃದಯದಲ್ಲಿ ಗುಣುಗುಟ್ಟುವ ಮನೋಭಾವವು ಬೆಳೆಯಲು ಆರಂಭವಾಗುವಲ್ಲಿ ನಾವೇನು ಮಾಡತಕ್ಕದ್ದು? (5) ನಮಗೆ ಕೊಡಲ್ಪಟ್ಟಿರುವ ಯಾವುದೇ ಸುಯೋಗಗಳ ಕುರಿತು ನಮಗೆ ಯಾವ ಭಾವನೆಯಿರಬೇಕು? (6) ದೇವರಿಗೆ ತೋರಿಸುವ ನಿಷ್ಠೆಗಿಂತಲೂ ಯಾವುದಕ್ಕೆ ನಾವು ಆದ್ಯತೆ ನೀಡಬಾರದು, ಮತ್ತು ಯಾವಾಗ ಇದು ನಮಗೆ ಒಂದು ಕಷ್ಟಕರ ಪರೀಕ್ಷೆಯಾಗಿ ಪರಿಣಮಿಸಬಹುದು?
ಸಭೆಯಲ್ಲಿ ಈ ಮಾಹಿತಿಯನ್ನು ಚರ್ಚಿಸಿದ ಬಳಿಕ, ವಿಡಿಯೋವನ್ನು ಪುನಃ ಏಕೆ ವೀಕ್ಷಿಸಬಾರದು? ಇದು, ನಾವು ಯಾವಾಗಲೂ ಯೆಹೋವನ ಅಧಿಕಾರವನ್ನು ಏಕೆ ಗೌರವಿಸಬೇಕು ಎಂಬುದಕ್ಕಿರುವ ಕಾರಣಗಳನ್ನು ನಿಮ್ಮ ಮನಸ್ಸುಗಳ ಮೇಲೆ ಇನ್ನಷ್ಟು ಅಚ್ಚೊತ್ತಿಸುವುದು.—ಕೀರ್ತ. 18:25; 37:28.