ಯೆಹೋವನ ನ್ಯಾಯವನ್ನು ಅನುಕರಿಸಿರಿ
1 “ಯೆಹೋವನು ನ್ಯಾಯವನ್ನು ಮೆಚ್ಚುವವನು” ಅಥವಾ ಪ್ರೀತಿಸುವವನು ಆಗಿದ್ದಾನೆ. (ಕೀರ್ತ. 37:28) ಆದುದರಿಂದಲೇ, ಆತನು ಈ ಅನೀತಿವಂತ ಲೋಕದ ನಾಶನವನ್ನು ವಿಧಿಸಿದ್ದಾನಾದರೂ, ಅದಕ್ಕಿಂತ ಮುಂಚೆ ಒಂದು ಎಚ್ಚರಿಕೆಯು ಕೊಡಲ್ಪಡುವಂತೆ ಏರ್ಪಾಡು ಮಾಡಿದ್ದಾನೆ. (ಮಾರ್ಕ 13:10) ಇದು, ಜನರಿಗೆ ಪಶ್ಚಾತ್ತಾಪಪಡುವಂತೆ ಮತ್ತು ರಕ್ಷಿಸಲ್ಪಡುವಂತೆ ಅವಕಾಶವನ್ನು ಕೊಡುತ್ತದೆ. (2 ಪೇತ್ರ 3:9) ನಾವು ಯೆಹೋವನ ನ್ಯಾಯವನ್ನು ಅನುಕರಿಸಲು ಪ್ರಯಾಸಪಡುತ್ತೇವೊ? ಮಾನವ ಕುಟುಂಬದಲ್ಲಿರುವ ಕ್ಲೇಶ ಮತ್ತು ದುಃಖವು, ನಾವು ಇತರರಿಗೆ ರಾಜ್ಯ ನಿರೀಕ್ಷೆಯನ್ನು ಹಂಚುವಂತೆ ನಮ್ಮನ್ನು ಪ್ರಚೋದಿಸುತ್ತದೊ? (ಜ್ಞಾನೋ. 3:27) ನ್ಯಾಯಕ್ಕಾಗಿರುವ ಪ್ರೀತಿಯು, ನಾವು ಸಾರುವಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಮ್ಮನ್ನು ಬಲವಂತಪಡಿಸುವುದು.
2 ನಿಷ್ಪಕ್ಷಪಾತದಿಂದ ಸಾರಿರಿ: ಯಾವುದೇ ಪಕ್ಷಪಾತವಿಲ್ಲದೆ ಎಲ್ಲರಿಗೂ ದೇವರ ಉದ್ದೇಶವನ್ನು ಘೋಷಿಸುವ ಮೂಲಕ, ನಾವು ‘ನ್ಯಾಯವನ್ನು ಆಚರಿಸುತ್ತೇವೆ.’ (ಮೀಕ 6:8) ಬೇರೆಯವರ ಬಾಹ್ಯ ತೋರಿಕೆಯನ್ನು ನೋಡಿ ಅವರ ಕುರಿತಾಗಿ ಅಭಿಪ್ರಾಯವನ್ನು ಕಟ್ಟುವ ಅಪರಿಪೂರ್ಣ ಪ್ರವೃತ್ತಿಯನ್ನು ನಾವು ನಿಗ್ರಹಿಸಬೇಕು. (ಯಾಕೋ. 2:1-4, 9) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು [ಯೆಹೋವನ] ಚಿತ್ತವಾಗಿದೆ.” (1 ತಿಮೊ. 2:4) ದೇವರ ಸತ್ಯ ವಾಕ್ಯವು, ಜನರ ಜೀವಿತಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡಬಲ್ಲದು. (ಇಬ್ರಿ. 4:12) ಈ ವಾಸ್ತವಾಂಶವನ್ನು ನಾವು ಗಣ್ಯಮಾಡುವುದು, ವ್ಯಕ್ತಿಗಳನ್ನು ಆತ್ಮವಿಶ್ವಾಸದಿಂದ ಸಮೀಪಿಸಲು, ಯಾರು ಹಿಂದೆ ನಮಗೆ ಕಿವಿಗೊಡಲು ನಿರಾಕರಿಸಿದರೊ ಅವರನ್ನೂ ಸಮೀಪಿಸುವಂತೆ ಪ್ರಚೋದಿಸಬಲ್ಲದು.
3 ಒಂದು ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಸಹೋದರಿಯು, ಅಂಗಡಿಗೆ ಕ್ರಮವಾಗಿ ಬರುತ್ತಿದ್ದ ಗಿರಾಕಿಯೊಬ್ಬನ ತೋರಿಕೆಯನ್ನು ನೋಡಿ ಸ್ವಲ್ಪ ಹೆದರಿದಳು. ಹಾಗಿದ್ದರೂ, ಸೂಕ್ತವಾದ ಸಂದರ್ಭ ಸಿಕ್ಕಿದಾಗ ಅವನಿಗೆ ದೇವರ ವಾಗ್ದತ್ತ ಪರದೈಸಿನ ಬಗ್ಗೆ ಸಾಕ್ಷಿಕೊಡಲು ಅವಳು ಪ್ರಯತ್ನಿಸಿದಳು. ಆದರೆ ಅವನು, ತಾನು ಇಂಥ ಕಟ್ಟುಕತೆಗಳನ್ನು ನಂಬುವವನಲ್ಲ ಮತ್ತು ತಾನೊಬ್ಬ ಹಿಪ್ಪಿ ಹಾಗೂ ಅಮಲೌಷಧ ವ್ಯಸನಿಯಾಗಿದ್ದೇನೆ ಎಂದು ತುಂಬ ಒರಟಾಗಿ ಹೇಳಿದನು. ಆದರೂ ಅವಳು ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ಒಂದು ದಿನ ಅವನು, ತನ್ನ ಉದ್ದ ಕೂದಲಿನ ಬಗ್ಗೆ ಅವಳ ಅಭಿಪ್ರಾಯವೇನೆಂದು ಕೇಳಿದನು. ಅವಳು ಸಮಯೋಚಿತ ಜಾಣ್ಮೆಯಿಂದ, ಬೈಬಲ್ ಈ ವಿಷಯದ ಕುರಿತಾಗಿ ಏನು ಹೇಳುತ್ತದೆಂಬದನ್ನು ವಿವರಿಸಿದಳು. (1 ಕೊರಿಂ. 11:14) ಮರುದಿನ, ಅವನು ಗಡ್ಡ ಬೋಳಿಸಿ, ಕುರುಚಲು ಕೂದಲಿನೊಂದಿಗೆ ಬಂದಾಗ ಅವಳಿಗೆ ತುಂಬ ಅಚ್ಚರಿಯೂ ಸಂತೋಷವೂ ಆಯಿತು! ಅವನು ಒಂದು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಂಡನು, ಮತ್ತು ಒಬ್ಬ ಸಹೋದರನು ಅದನ್ನು ಸಂತೋಷದಿಂದ ನಡೆಸಿದನು. ಆ ವ್ಯಕ್ತಿಯು ಸಮರ್ಪಣೆ ಮತ್ತು ದೀಕ್ಷಾಸ್ನಾನದ ವರೆಗೂ ಪ್ರಗತಿಮಾಡಿದನು. ಈ ವ್ಯಕ್ತಿಯಂತೆಯೇ, ಇಂದು ಯೆಹೋವನನ್ನು ಸೇವಿಸುತ್ತಿರುವ ಅನೇಕರು, ತಮಗೆ ರಾಜ್ಯ ಸಂದೇಶವನ್ನು ತಲಪಿಸಿದವರು ಮಾಡಿದ ನಿಷ್ಪಕ್ಷಪಾತದ, ಪಟ್ಟುಹಿಡಿದ ಪ್ರಯತ್ನಗಳಿಗಾಗಿ ಆಭಾರಿಗಳಾಗಿದ್ದಾರೆ.
4 ಯೆಹೋವನು ಬೇಗನೆ ಇಡೀ ಭೂಮಿಯಿಂದ ಅನೀತಿಯನ್ನು ಅಳಿಸಿಹಾಕಲಿದ್ದಾನೆ. (2 ಪೇತ್ರ 3:10, 13) ಉಳಿದಿರುವ ಅಲ್ಪಾವಧಿಯಲ್ಲಿ ನಾವು ಯೆಹೋವನ ನ್ಯಾಯವನ್ನು ಅನುಕರಿಸುತ್ತಾ, ಸೈತಾನನ ಅನೀತಿಯ ಲೋಕದ ಮೇಲೆ ಬರುತ್ತಿರುವ ನಾಶನದಿಂದ ತಪ್ಪಿಸಿಕೊಳ್ಳಲು ಎಲ್ಲರಿಗೂ ಒಂದು ಅವಕಾಶವನ್ನು ಕೊಡೋಣ.—1 ಯೋಹಾ. 2:17.