ಹೆತ್ತವರೇ, ನಿಮ್ಮ ಮಾದರಿಯು ಏನನ್ನು ಕಲಿಸುತ್ತದೆ?
“ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ. . . . ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.”—ಎಫೆಸ 5:1, 2.
1. ಪ್ರಥಮ ಮಾನವ ದಂಪತಿಗೆ ಯೆಹೋವನು ಯಾವ ರೀತಿಯ ನಿರ್ದೇಶನಗಳನ್ನು ಒದಗಿಸಿದನು?
ಯೆಹೋವನು ಕುಟುಂಬ ಏರ್ಪಾಡಿನ ಮೂಲಕರ್ತನಾಗಿದ್ದಾನೆ. ಆತನು ಮೊದಲ ಕುಟುಂಬವನ್ನು ಸ್ಥಾಪಿಸಿ, ಪ್ರಥಮ ಮಾನವ ದಂಪತಿಗಳಿಗೆ ಜನ್ಮನೀಡುವ ಸಾಮರ್ಥ್ಯವನ್ನು ಕೊಟ್ಟ ಕಾರಣ, ಪ್ರತಿಯೊಂದು ಕುಟುಂಬವು ತನ್ನ ಅಸ್ತಿತ್ವಕ್ಕಾಗಿ ಆತನಿಗೆ ಋಣಿಯಾಗಿದೆ. (ಎಫೆಸ 3:14, 15) ಆದಾಮಹವ್ವರ ಜವಾಬ್ದಾರಿಗಳೇನು ಎಂಬುದರ ಬಗ್ಗೆ ಆತನು ಮೂಲಭೂತ ಉಪದೇಶಗಳನ್ನು ನೀಡಿ, ಅವುಗಳನ್ನು ಪೂರೈಸುತ್ತಾ ಮುಂದುವರಿಯಲು ಅವರಿಗೆ ಸಾಕಷ್ಟು ಅವಕಾಶವನ್ನು ನೀಡಿದನು. (ಆದಿಕಾಂಡ 1:28-30; 2:6, 15-22) ಆದಾಮಹವ್ವರು ಪಾಪಗೈದ ಮೇಲೆ, ಕುಟುಂಬಗಳು ನಿಭಾಯಿಸಬೇಕಾದ ಸನ್ನಿವೇಶಗಳು ತುಂಬ ಕಷ್ಟಕರವಾದವು. ಆದರೂ, ಇಂತಹ ಸನ್ನಿವೇಶಗಳನ್ನು ತನ್ನ ಸೇವಕರು ನಿಭಾಯಿಸುವಂತೆ ಸಹಾಯ ಮಾಡಲು ಯೆಹೋವನು ಪ್ರೀತಿಪೂರ್ವಕವಾಗಿ ಮಾರ್ಗದರ್ಶನಗಳನ್ನು ಒದಗಿಸಿದನು.
2. (ಎ) ಯಾವ ವಿಧಾನದ ಮೂಲಕ ಯೆಹೋವನು ಲಿಖಿತ ಸಲಹೆಯನ್ನು ಮೌಖಿಕ ಉಪದೇಶದೊಂದಿಗೆ ಬಲಪಡಿಸಿದ್ದಾನೆ? (ಬಿ) ಯಾವ ಪ್ರಶ್ನೆಗಳನ್ನು ಹೆತ್ತವರು ಸ್ವತಃ ಕೇಳಿಕೊಳ್ಳಬೇಕು?
2 ನಮ್ಮ ಮಹಾನ್ ಉಪದೇಶಕನೋಪಾದಿ ಯೆಹೋವನು, ನಾವು ಏನು ಮಾಡಬೇಕು ಮತ್ತು ಯಾವುದರಿಂದ ದೂರವಿರಬೇಕು ಎಂಬುದರ ಕುರಿತಾದ ಲಿಖಿತ ನಿರ್ದೇಶನಗಳನ್ನು ಒದಗಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿದ್ದಾನೆ. ಪುರಾತನ ಕಾಲಗಳಲ್ಲಿ ಲಿಖಿತ ಉಪದೇಶದೊಂದಿಗೆ ಯಾಜಕರು ಮತ್ತು ಪ್ರವಾದಿಗಳು ಹಾಗೂ ಕುಟುಂಬ ತಲೆಗಳ ಮೂಲಕ ಮೌಖಿಕ ಉಪದೇಶವನ್ನು ಆತನು ಒದಗಿಸಿದನು. ನಮ್ಮ ದಿನದಲ್ಲಿ ಇಂತಹ ಮೌಖಿಕ ಬೋಧನೆಯನ್ನು ಒದಗಿಸಲು ಆತನು ಯಾರನ್ನು ಉಪಯೋಗಿಸುತ್ತಿದ್ದಾನೆ? ಕ್ರೈಸ್ತ ಹಿರಿಯರನ್ನು ಮತ್ತು ಹೆತ್ತವರನ್ನು. ನೀವು ಒಬ್ಬ ಹೆತ್ತವರಾಗಿರುವುದಾದರೆ, ಯೆಹೋವನ ಮಾರ್ಗಗಳ ವಿಷಯವಾಗಿ ನಿಮ್ಮ ಕುಟುಂಬಕ್ಕೆ ಉಪದೇಶ ನೀಡುವ ನಿಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದೀರೊ?—ಜ್ಞಾನೋಕ್ತಿ 6:20-23.
3. ಪರಿಣಾಮಕಾರಿ ಬೋಧನೆಯ ವಿಷಯದಲ್ಲಿ ಕುಟುಂಬದ ತಲೆಗಳು ಯೆಹೋವನಿಂದ ಏನನ್ನು ಕಲಿತುಕೊಳ್ಳಸಾಧ್ಯವಿದೆ?
3 ಕುಟುಂಬದೊಳಗೆ ಇಂತಹ ಉಪದೇಶವನ್ನು ಹೇಗೆ ನೀಡಬೇಕು? ಈ ವಿಷಯದಲ್ಲಿ ಯೆಹೋವನು ಮಾದರಿಯನ್ನಿಡುತ್ತಾನೆ. ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ಆತನು ಸ್ಪಷ್ಟವಾಗಿ ತಿಳಿಸುತ್ತಾ, ವಿಷಯಗಳನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾನೆ. (ವಿಮೋಚನಕಾಂಡ 20:4, 5; ಧರ್ಮೋಪದೇಶಕಾಂಡ 4:23, 24; 5:8, 9; 6:14, 15; ಯೆಹೋಶುವ 24:19, 20) ಆತನು ವಿಚಾರಪ್ರೇರಕ ಪ್ರಶ್ನೆಗಳನ್ನು ಉಪಯೋಗಿಸುತ್ತಾನೆ. (ಯೋಬ 38:4, 8, 31) ದೃಷ್ಟಾಂತಗಳು ಮತ್ತು ನಿಜ ಜೀವನದ ಉದಾಹರಣೆಗಳಿಂದ ಆತನು ನಮ್ಮ ಭಾವನೆಗಳನ್ನು ಕೆರಳಿಸಿ, ನಮ್ಮ ಹೃದಯಗಳನ್ನು ರೂಪಿಸುತ್ತಾನೆ. (ಆದಿಕಾಂಡ 15:5; ದಾನಿಯೇಲ 3:1-29) ಹೆತ್ತವರೇ, ನಿಮ್ಮ ಮಕ್ಕಳಿಗೆ ಕಲಿಸುವಾಗ ಈ ನಮೂನೆಯನ್ನು ಅನುಕರಿಸಲು ನೀವು ಪ್ರಯತ್ನಿಸುತ್ತೀರೊ?
4. ದಂಡನೆ ವಿಧಿಸುವ ವಿಷಯದಲ್ಲಿ ನಾವು ಯೆಹೋವನಿಂದ ಏನನ್ನು ಕಲಿಯುತ್ತೇವೆ, ಮತ್ತು ದಂಡನೆಯು ಏಕೆ ಪ್ರಾಮುಖ್ಯವಾಗಿದೆ?
4 ಸರಿಯಾದ ವಿಷಯಗಳ ಸಂಬಂಧದಲ್ಲಿ ಯೆಹೋವನು ದೃಢನಾಗಿರುವುದಾದರೂ, ಅಪರಿಪೂರ್ಣತೆಯ ಪರಿಣಾಮಗಳನ್ನು ಆತನು ಅರ್ಥಮಾಡಿಕೊಳ್ಳುತ್ತಾನೆ. ಆದುದರಿಂದ, ದಂಡಿಸುವ ಮೊದಲು ಆತನು ಬೋಧಿಸುತ್ತಾನೆ ಮತ್ತು ಅಪರಿಪೂರ್ಣ ಮಾನವರಿಗೆ ಸತತವಾದ ಎಚ್ಚರಿಕೆಗಳನ್ನು ಹಾಗೂ ಮರುಜ್ಞಾಪನಗಳನ್ನು ನೀಡುತ್ತಾನೆ. (ಆದಿಕಾಂಡ 19:15, 16; ಯೆರೆಮೀಯ 7:23-26) ಆತನು ಶಿಕ್ಷಿಸುವಾಗ, ಅತಿರೇಕಕ್ಕೆ ಹೋಗುವುದಿಲ್ಲ, ಬದಲಾಗಿ ಉಚಿತ ರೀತಿಯಲ್ಲಿ ಹಾಗೆ ಮಾಡುತ್ತಾನೆ. (ಕೀರ್ತನೆ 103:10, 11; ಯೆಶಾಯ 28:26-29) ನಾವು ಮಕ್ಕಳೊಂದಿಗೆ ಈ ರೀತಿಯಲ್ಲಿ ವರ್ತಿಸುವಾಗ, ನಾವು ಯೆಹೋವನನ್ನು ಅರಿತುಕೊಂಡಿದ್ದೇವೆ ಎಂಬ ಪ್ರಮಾಣವನ್ನು ಇದು ನೀಡುತ್ತದೆ ಮಾತ್ರವಲ್ಲ, ಮಕ್ಕಳು ಸಹ ಆತನನ್ನು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಾಗುವುದು.—ಯೆರೆಮೀಯ 22:16; 1 ಯೋಹಾನ 4:8.
5. ಆಲಿಸುವುದರ ಬಗ್ಗೆ ಹೆತ್ತವರು ಯೆಹೋವನಿಂದ ಏನನ್ನು ಕಲಿಯಬಲ್ಲರು?
5 ಅದ್ಭುತಕರವಾಗಿ, ಯೆಹೋವನು ಒಬ್ಬ ಪ್ರೀತಿಪರ ಸ್ವರ್ಗೀಯ ತಂದೆಯಂತೆ ಆಲಿಸುತ್ತಾನೆ. ಆತನು ಕೇವಲ ಆಜ್ಞೆಗಳನ್ನು ಹೊರಡಿಸುವುದಿಲ್ಲ. ನಮ್ಮ ಹೃದಯಗಳನ್ನು ಆತನಲ್ಲಿ ತೋಡಿಕೊಳ್ಳುವಂತೆ ಆತನು ಉತ್ತೇಜಿಸುತ್ತಾನೆ. (ಕೀರ್ತನೆ 62:8) ನಾವು ವ್ಯಕ್ತಪಡಿಸುವ ಭಾವನೆಗಳು ಸರಿಯಾಗಿರದಿದ್ದರೆ, ಆತನು ಸ್ವರ್ಗದಿಂದ ನಮ್ಮನ್ನು ಬಯ್ಯುವುದಿಲ್ಲ. ತಾಳ್ಮೆಯಿಂದ ಆತನು ನಮಗೆ ಕಲಿಸುತ್ತಾನೆ. ಆದುದರಿಂದ, ಅಪೊಸ್ತಲ ಪೌಲನ ಸಲಹೆಯು ಎಷ್ಟು ಸೂಕ್ತವಾಗಿದೆ: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ”! (ಎಫೆಸ 4:31-5:1) ಹೆತ್ತವರು ತಮ್ಮ ಮಕ್ಕಳಿಗೆ ಉಪದೇಶವನ್ನು ನೀಡಲು ಪ್ರಯತ್ನಿಸುವಾಗ, ಯೆಹೋವನು ಹೆತ್ತವರಿಗೆ ಎಂತಹ ಉತ್ತಮ ಮಾದರಿಯನ್ನಿಡುತ್ತಾನೆ! ಅದು ನಮ್ಮ ಹೃದಯಗಳನ್ನು ಸ್ಪರ್ಶಿಸುವ ಮತ್ತು ಆತನ ಜೀವನ ಮಾರ್ಗದಲ್ಲಿ ನಾವು ನಡೆಯಲು ಬಯಸುವಂತೆ ಮಾಡುವ ಮಾದರಿಯಾಗಿದೆ.
ಮಾದರಿಯು ಬೀರುವ ಪ್ರಭಾವ
6. ಹೆತ್ತವರ ಮನೋಭಾವ ಹಾಗೂ ಮಾದರಿಯು ಮಕ್ಕಳನ್ನು ಹೇಗೆ ಪ್ರಭಾವಿಸುತ್ತದೆ?
6 ಮೌಖಿಕ ಉಪದೇಶದ ಜೊತೆಗೆ, ಮಾದರಿಯನ್ನಿಡುವುದು ಎಳೆಯರ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಹೆತ್ತವರು ಬಯಸಲಿ, ಬಯಸದಿರಲಿ, ಅವರ ಮಕ್ಕಳು ಅವರನ್ನು ಅನುಕರಿಸುವುದು ಖಂಡಿತ. ಹೆತ್ತವರು ನುಡಿಯುವ ಮಾತುಗಳನ್ನೇ ಮಕ್ಕಳು ನುಡಿಯುವುದನ್ನು ಕೇಳುವಾಗ, ಅವರಿಗೆ ಸಂತೋಷವಾಗಬಹುದು ಇಲ್ಲವೆ ಕೆಲವೊಮ್ಮೆ ಅದು ಅವರನ್ನು ತಲ್ಲಣಗೊಳಿಸಬಹುದು. ಹೆತ್ತವರ ನಡತೆ ಮತ್ತು ಮನೋಭಾವವು ಆತ್ಮಿಕ ವಿಷಯಗಳಿಗಾಗಿ ಆಳವಾದ ಗಣ್ಯತೆಯನ್ನು ಪ್ರತಿಬಿಂಬಿಸುವಾಗ, ಇದು ಮಕ್ಕಳ ಮೇಲೆ ಸಕಾರಾತ್ಮಕವಾದ ಪ್ರಭಾವವನ್ನು ಬೀರುತ್ತದೆ.—ಜ್ಞಾನೋಕ್ತಿ 20:7.
7. ಯೆಪ್ತಾಹನು ತನ್ನ ಮಗಳಿಗೆ ಯಾವ ರೀತಿಯ ಮಾದರಿಯನ್ನಿಟ್ಟನು, ಮತ್ತು ಯಾವ ಪರಿಣಾಮದೊಂದಿಗೆ?
7 ಹೆತ್ತವರ ಮಾದರಿಯ ಪರಿಣಾಮವು ಬೈಬಲಿನಲ್ಲಿ ಉತ್ತಮವಾಗಿ ದೃಷ್ಟಾಂತಿಸಲ್ಪಟ್ಟಿದೆ. ಅಮ್ಮೋನಿಯರ ಮೇಲೆ ಇಸ್ರಾಯೇಲ್ ಜನಾಂಗವು ಜಯಗಳಿಸುವಂತೆ ಯೆಹೋವನಿಂದ ಉಪಯೋಗಿಸಲ್ಪಟ್ಟ ಯೆಪ್ತಾಹನು ಕೂಡ ಒಬ್ಬ ತಂದೆಯಾಗಿದ್ದನು. ಯೆಪ್ತಾಹನು ಇಸ್ರಾಯೇಲ್ಯರೊಂದಿಗೆ ಯೆಹೋವನ ವ್ಯವಹಾರಗಳ ಇತಿಹಾಸವನ್ನು ಪದೇ ಪದೇ ಓದಿರಬೇಕೆಂದು, ಅವನು ಅಮ್ಮೋನಿಯರ ಅರಸನಿಗೆ ನೀಡಿದ ಉತ್ತರವು ಸೂಚಿಸುತ್ತದೆ. ಅವನು ಆ ಇತಿಹಾಸವನ್ನು ಸರಳವಾಗಿ ಉದ್ಧರಿಸಬಲ್ಲವನಾಗಿದ್ದನು, ಮತ್ತು ಯೆಹೋವನಲ್ಲಿ ಬಲವಾದ ನಂಬಿಕೆಯನ್ನು ಪ್ರದರ್ಶಿಸಿದನು. ಅವನ ಮಗಳು ಅವಿವಾಹಿತ ಸ್ತ್ರೀಯೋಪಾದಿ ಜೀವನವಿಡೀ ಯೆಹೋವನಿಗೆ ಸೇವೆ ಸಲ್ಲಿಸಲು ಪ್ರದರ್ಶಿಸಿದ ನಂಬಿಕೆ ಹಾಗೂ ಸ್ವತ್ಯಾಗದ ಆತ್ಮವನ್ನು ವಿಕಸಿಸಿಕೊಳ್ಳುವಂತೆ, ಅವನ ಮಾದರಿಯು ಸಹಾಯ ಮಾಡಿತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.—ನ್ಯಾಯಸ್ಥಾಪಕರು 11:14-27, 34-40; ಹೋಲಿಸಿ ಯೆಹೋಶುವ 1:8.
8. (ಎ) ಯಾವ ಉತ್ತಮ ಮನೋಭಾವವನ್ನು ಸಮುವೇಲನ ಹೆತ್ತವರು ಪ್ರದರ್ಶಿಸಿದರು? (ಬಿ) ಇದರಿಂದ ಸಮುವೇಲನಿಗಾದ ಪ್ರಯೋಜನವೇನು?
8 ಸಮುವೇಲನು ಮಗುವಾಗಿದ್ದಾಗ ಒಬ್ಬ ಆದರ್ಶಪ್ರಾಯನಾಗಿದ್ದನು ಮತ್ತು ತನ್ನ ಜೀವನದುದ್ದಕ್ಕೂ ಒಬ್ಬ ಪ್ರವಾದಿಯಾಗಿ ದೇವರಿಗೆ ನಂಬಿಗಸ್ತನಾಗಿದ್ದನು. ನಿಮ್ಮ ಮಕ್ಕಳೂ ಅವನಂತಾಗಲು ನೀವು ಬಯಸುವಿರೊ? ಸಮುವೇಲನ ಹೆತ್ತವರಾದ ಎಲ್ಕಾನ ಮತ್ತು ಹನ್ನಳ ಮಾದರಿಯನ್ನು ವಿಶ್ಲೇಷಿಸಿರಿ. ಅವರ ಮನೆಯ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದರೂ, ಪವಿತ್ರ ಗುಡಾರವು ನೆಲೆಸಿದ್ದ ಶೀಲೋವಿಗೆ ಅವರು ಆರಾಧನೆಗಾಗಿ ಕ್ರಮವಾಗಿ ಹೋಗುತ್ತಿದ್ದರು. (1 ಸಮುವೇಲ 1:3-8, 21) ಹನ್ನಳು ಪ್ರಾರ್ಥಿಸಿದಾಗ ಅವಳ ಭಾವನೆಗಳ ಆಳವನ್ನು ಗಮನಿಸಿರಿ. (1 ಸಮುವೇಲ 1:9-13) ದೇವರಿಗೆ ಮಾಡಲ್ಪಟ್ಟ ಯಾವುದೇ ಹರಕೆಯನ್ನು ನೆರವೇರಿಸುವುದರ ಮಹತ್ವದ ಕುರಿತು ಅವರಿಬ್ಬರಿಗೂ ಹೇಗನಿಸಿತು ಎಂಬುದನ್ನು ಗಮನಿಸಿರಿ. (1 ಸಮುವೇಲ 1:22-28) ಅವರ ಉತ್ತಮ ಮಾದರಿಯು ಸಮುವೇಲನಿಗೆ ಸಹಾಯ ಮಾಡಿತೆಂಬುದರಲ್ಲಿ ಸಂದೇಹವೇ ಇಲ್ಲ. ಈ ಕಾರಣ, ಅವನ ಸುತ್ತಲ್ಲಿದ್ದ ಜನರು ಯೆಹೋವನನ್ನು ಸೇವಿಸುವ ಪ್ರತಿಪಾದನೆಯನ್ನು ಮಾಡಿದರೂ, ದೇವರ ಮಾರ್ಗಗಳಿಗೆ ಗೌರವವನ್ನೇ ತೋರಿಸದಿದ್ದಾಗ, ಪಟ್ಟುಬಿಡದೆ ಸರಿಯಾದ ಮಾರ್ಗಕ್ರಮದಲ್ಲಿ ಮುಂದುವರಿಯಲು ಶಕ್ತಗೊಳಿಸಿದ ಗುಣಗಳನ್ನು ವಿಕಸಿಸಿಕೊಳ್ಳಲು ಸಮುವೇಲನಿಗೆ ಸಾಧ್ಯವಾಯಿತು. ಸಕಾಲದಲ್ಲಿ, ಯೆಹೋವನು ಸಮುವೇಲನನ್ನು ತನ್ನ ಪ್ರವಾದಿಯಾಗಿರುವ ಜವಾಬ್ದಾರಿಗೆ ನೇಮಿಸಿಕೊಂಡನು.—1 ಸಮುವೇಲ 2:11, 12; 3:1-21.
9. (ಎ) ಮನೆಯಲ್ಲಿದ್ದ ಯಾವ ಪ್ರಭಾವಗಳು ತಿಮೊಥೆಯನ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಿದವು? (ಬಿ) ತಿಮೊಥೆಯನು ಯಾವ ರೀತಿಯ ವ್ಯಕ್ತಿಯಾಗಿ ಪರಿಣಮಿಸಿದನು?
9 ಯುವಕನಾಗಿದ್ದಾಗ ಅಪೊಸ್ತಲ ಪೌಲನ ಜೊತೆಗಾರನಾದ ತಿಮೊಥೆಯನಂತೆ ನಿಮ್ಮ ಮಗನು ಆಗಬೇಕೆಂದು ನೀವು ಬಯಸುವಿರೊ? ತಿಮೊಥೆಯನ ತಂದೆ ಅವಿಶ್ವಾಸಿಯಾಗಿದ್ದನು, ಆದರೆ ಆತ್ಮಿಕ ವಿಷಯಗಳಿಗಾಗಿ ಗಣ್ಯತೆಯನ್ನು ತೋರಿಸುವುದರಲ್ಲಿ ಅವನ ತಾಯಿ ಮತ್ತು ಅಜ್ಜಿಯು ಉತ್ತಮವಾದ ಮಾದರಿಯನ್ನಿಟ್ಟರು. ಕ್ರೈಸ್ತನೋಪಾದಿ ತಿಮೊಥೆಯನ ಜೀವಿತಕ್ಕೆ ಇದೊಂದು ಒಳ್ಳೆಯ ಅಸ್ತಿವಾರವಾಗಿತ್ತೆಂಬುದರಲ್ಲಿ ಸಂದೇಹವೇ ಇಲ್ಲ. ಅವನ ತಾಯಿಯಾದ ಯೂನೀಕೆ ಹಾಗೂ ಅಜ್ಜಿಯಾದ ಲೋವಿಯಲ್ಲಿ “ನಿಷ್ಕಪಟವಾದ ನಂಬಿಕೆ” ಇತ್ತೆಂದು ನಮಗೆ ಹೇಳಲಾಗಿದೆ. ಕ್ರೈಸ್ತರೋಪಾದಿ ಅವರ ಜೀವಿತಗಳು ಒಂದು ನಾಟಕವಾಗಿರಲಿಲ್ಲ. ತಾವು ಏನನ್ನು ನಂಬಿದರೊ ಅದಕ್ಕನುಗುಣವಾಗಿ ಜೀವಿಸಿದರಲ್ಲದೆ, ಯುವ ತಿಮೊಥೆಯನಿಗೂ ಅದನ್ನೇ ಕಲಿಸಿದರು. ತಾನು ನಂಬಲರ್ಹನೆಂದು ಮತ್ತು ಇತರರ ಕ್ಷೇಮದ ಕುರಿತು ಯಥಾರ್ಥವಾಗಿ ಚಿಂತಿಸುವವನೆಂದು ತಿಮೊಥೆಯನು ನಿರೂಪಿಸಿದನು.—2 ತಿಮೊಥೆಯ 1:5; ಫಿಲಿಪ್ಪಿ 2:20-22.
10. (ಎ) ಮನೆಯ ಹೊರಗಿನ ಯಾವ ಮಾದರಿಗಳು ನಮ್ಮ ಮಕ್ಕಳ ಮೇಲೆ ಪ್ರಭಾವ ಬೀರಬಲ್ಲವು? (ಬಿ) ಈ ಪ್ರಭಾವಗಳು ನಮ್ಮ ಮಕ್ಕಳ ಮಾತುಕತೆ ಇಲ್ಲವೆ ಮನೋಭಾವದಲ್ಲಿ ತೋರಿಬರುವಾಗ, ನಾವು ಹೇಗೆ ಪ್ರತಿಕ್ರಿಯಿಸಬೇಕು?
10 ನಮ್ಮ ಮಕ್ಕಳನ್ನು ಪ್ರಭಾವಿಸುವ ಮಾದರಿಗಳೆಲ್ಲವೂ ಮನೆಯಲ್ಲಿ ಇರುವುದಿಲ್ಲ. ತಮ್ಮೊಂದಿಗೆ ಶಾಲೆಗೆ ಹಾಜರಾಗುವ ಮಕ್ಕಳು, ಯುವ ಮನಸ್ಸುಗಳನ್ನು ರೂಪಿಸುವ ಜವಾಬ್ದಾರಿಯುಳ್ಳ ಶಿಕ್ಷಕರು, ಆಳವಾಗಿ ಬೇರೂರಿರುವ ಕುಲಸಂಬಂಧಿತ ಇಲ್ಲವೆ ಸಮುದಾಯದ ರೂಢಿಗಳಿಗೆ ಎಲ್ಲರೂ ಬದ್ಧರಾಗಬೇಕೆಂದು ದೃಢವಾಗಿ ಭಾವಿಸುವ ಜನರು, ಸಾಧನೆಗಳ ವ್ಯಾಪಕ ಸ್ತುತಿಗೆ ಒಳಗಾದ ಕ್ರೀಡಾ ತಾರೆಗಳು, ಮತ್ತು ಸುದ್ದಿಸಮಾಚಾರಗಳಲ್ಲಿ ತಮ್ಮ ನಡತೆಯ ನಿರೂಪಣೆಗೆ ಒಳಗಾದ ಸಾರ್ವಜನಿಕ ಅಧಿಕಾರಿಗಳಿದ್ದಾರೆ. ಇನ್ನೂ ಕೋಟಿಗಟ್ಟಲೆ ಮಕ್ಕಳು ಯುದ್ಧದ ಕ್ರೂರತೆಗೆ ಒಡ್ಡಲ್ಪಟ್ಟಿದ್ದಾರೆ. ಈ ಪ್ರಭಾವಗಳು ನಮ್ಮ ಮಕ್ಕಳ ಮಾತುಕತೆ ಇಲ್ಲವೆ ಮನೋಭಾವದಲ್ಲಿ ತೋರಿಬರುವುದಾದರೆ ನಾವು ಆಶ್ಚರ್ಯಗೊಳ್ಳಬೇಕೊ? ಅದು ಸಂಭವಿಸುವಾಗ ನಾವು ಹೇಗೆ ಪ್ರತಿಕ್ರಿಯಿಸುವೆವು? ತೀಕ್ಷ್ಣವಾದ ಗದರಿಕೆ ಇಲ್ಲವೆ ಗಡುಸಾದ ಭಾಷಣವು ಈ ಸಮಸ್ಯೆಯನ್ನು ಬಗೆಹರಿಸುವುದೊ? ನಮ್ಮ ಮಕ್ಕಳ ಕ್ರಿಯೆಗಳಿಗೆ ಕೂಡಲೇ ಪ್ರತಿಕ್ರಿಯಿಸುವ ಬದಲು, ‘ಈ ಸನ್ನಿವೇಶವನ್ನು ಹೇಗೆ ನಿಭಾಯಿಸುವುದೆಂದು ವಿವೇಚಿಸಲು ಸಹಾಯ ಮಾಡಬಹುದಾದ ಯಾವ ವಿಧವಾದರೂ ಯೆಹೋವನ ಮಾರ್ಗಗಳಲ್ಲಿದೆಯೊ’ ಎಂದು ನಮ್ಮನ್ನೇ ಕೇಳಿಕೊಳ್ಳುವುದು ಉತ್ತಮವಾಗಿರಲಾರದೋ?—ಹೋಲಿಸಿ ರೋಮಾಪುರ 2:4.
11. ಹೆತ್ತವರು ತಪ್ಪುಗಳನ್ನು ಮಾಡುವಾಗ, ಇದು ಮಕ್ಕಳ ಮನೋಭಾವವನ್ನು ಹೇಗೆ ಬಾಧಿಸಬಲ್ಲದು?
11 ಅಪರಿಪೂರ್ಣ ಹೆತ್ತವರು ಸನ್ನಿವೇಶಗಳನ್ನು ಯಾವಾಗಲೂ ಅತ್ಯುತ್ತಮವಾದ ವಿಧದಲ್ಲೇ ನಿಭಾಯಿಸಲಾರರೆಂಬುದು ನಿಶ್ಚಿತ. ಅವರು ಖಂಡಿತವಾಗಿಯೂ ತಪ್ಪುಗಳನ್ನು ಮಾಡುವರು. ಮಕ್ಕಳು ಅದನ್ನು ಗ್ರಹಿಸುವಾಗ, ಹೆತ್ತವರ ಕಡೆಗೆ ಅವರಿಗಿರುವ ಗೌರವವನ್ನು ಅದು ಕಡಿಮೆಮಾಡುವುದೊ? ವಿಶೇಷವಾಗಿ ಹೆತ್ತವರು ತಮ್ಮ ಅಧಿಕಾರವನ್ನು ನಿಷ್ಠುರವಾಗಿ ಪ್ರಯೋಗಿಸುವ ಮೂಲಕ ತಮ್ಮ ದೋಷಗಳನ್ನು ಲಘುವಾಗಿ ಪರಿಗಣಿಸಲು ಪ್ರಯತ್ನಿಸುವಾಗ, ಇದು ಸಂಭವಿಸಬಹುದು. ಆದರೆ, ಹೆತ್ತವರು ದೀನರಾಗಿದ್ದು, ತಮ್ಮ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುವಾಗ, ಪರಿಣಾಮವು ಬಹಳ ಭಿನ್ನವಾಗಿರಬಹುದು. ಮಕ್ಕಳು ಕೂಡ ಇದನ್ನೇ ಮಾಡಲು ಕಲಿಯಬೇಕಾದುದರಿಂದ, ಈ ವಿಷಯದಲ್ಲಿ ಹೆತ್ತವರು ಅಮೂಲ್ಯವಾದ ಮಾದರಿಯನ್ನಿಡಸಾಧ್ಯವಿದೆ.—ಯಾಕೋಬ 4:6.
ನಮ್ಮ ಮಾದರಿಯು ಕಲಿಸಬಹುದಾದ ವಿಷಯ
12, 13. (ಎ) ಪ್ರೀತಿಯ ಕುರಿತು ಮಕ್ಕಳು ಏನನ್ನು ಕಲಿಯುವ ಅಗತ್ಯವಿದೆ, ಮತ್ತು ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಗೆ ಕಲಿಸಸಾಧ್ಯವಿದೆ? (ಬಿ) ಮಕ್ಕಳು ಪ್ರೀತಿಯ ಕುರಿತು ಕಲಿತುಕೊಳ್ಳುವುದು ಏಕೆ ಅಷ್ಟು ಪ್ರಾಮುಖ್ಯವಾದದ್ದಾಗಿದೆ?
12 ಮೌಖಿಕ ಉಪದೇಶದೊಂದಿಗೆ ಒಂದು ಒಳ್ಳೆಯ ಮಾದರಿಯು, ಅನೇಕ ಅಮೂಲ್ಯವಾದ ಪಾಠಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲಿಸಸಾಧ್ಯವಿದೆ. ಅವುಗಳಲ್ಲಿ ಕೆಲವೊಂದನ್ನು ಪರಿಗಣಿಸಿರಿ.
13 ನಿಸ್ವಾರ್ಥ ಪ್ರೀತಿಯನ್ನು ವ್ಯಕ್ತಪಡಿಸುವುದು: ಮಾದರಿಯ ಮೂಲಕ ಭದ್ರಪಡಿಸಬೇಕಾದ ಅತ್ಯಂತ ಪ್ರಾಮುಖ್ಯವಾದ ಪಾಠಗಳಲ್ಲೊಂದು, ಪ್ರೀತಿಯ ಅರ್ಥವಾಗಿದೆ. “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾನ 4:19) ಆತನೇ ಪ್ರೀತಿಯ ಮೂಲನೂ ಅದರ ಅತಿಶ್ರೇಷ್ಠ ಮಾದರಿಯೂ ಆಗಿದ್ದಾನೆ. ಈ ತತ್ವಾಧಾರಿತವಾದ ಅಗಾಪೆ ಪ್ರೀತಿಯು, ಬೈಬಲಿನಲ್ಲಿ 100ಕ್ಕಿಂತಲೂ ಹೆಚ್ಚು ಬಾರಿ ಉಲ್ಲೇಖಿಸಲ್ಪಟ್ಟಿದೆ. ಅದು ಸತ್ಯ ಕ್ರೈಸ್ತರನ್ನು ಗುರುತಿಸುವ ಒಂದು ಗುಣವಾಗಿದೆ. (ಯೋಹಾನ 13:35) ಇಂತಹ ಪ್ರೀತಿಯನ್ನು ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ತೋರಿಸಬೇಕಲ್ಲದೆ, ಮಾನವರು ಸಹ ಪರಸ್ಪರ ತೋರಿಸಬೇಕಾಗಿದೆ. ಇವರಲ್ಲಿ, ತಮಗೆ ಇಷ್ಟವಾಗದ ವ್ಯಕ್ತಿಗಳೂ ಸೇರಿದ್ದಾರೆ. (ಮತ್ತಾಯ 5:44, 45; 1 ಯೋಹಾನ 5:3) ಇದನ್ನು ನಮ್ಮ ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸುವ ಮೊದಲು, ಈ ಪ್ರೀತಿಯು ನಮ್ಮ ಹೃದಯಗಳಲ್ಲಿರಬೇಕು ಮತ್ತು ನಮ್ಮ ಜೀವಿತಗಳಲ್ಲಿ ವ್ಯಕ್ತವಾಗಬೇಕು. ನುಡಿಗಿಂತ ನಡೆಯು ಹೆಚ್ಚು ಕಾರ್ಯಸಾಧಕವಾಗಿದೆ. ಕುಟುಂಬದೊಳಗೆ, ಮಕ್ಕಳು ಪ್ರೀತಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ವಾತ್ಸಲ್ಯದಂತಹ ಗುಣಗಳನ್ನು ನೋಡಬೇಕು ಮತ್ತು ಅನುಭವಿಸಬೇಕು. ಇಲ್ಲದಿದ್ದರೆ, ಒಂದು ಮಗುವಿನ ಬೆಳವಣಿಗೆಯು ಶಾರೀರಿಕವಾಗಿ, ಮಾನಸಿಕವಾಗಿ, ಮತ್ತು ಭಾವನಾತ್ಮಕವಾಗಿ ಕುಂಠಿತಗೊಳ್ಳುತ್ತದೆ. ಕುಟುಂಬದ ಹೊರಗೆ, ಜೊತೆ ಕ್ರೈಸ್ತರ ಕಡೆಗೆ ಪ್ರೀತಿ ಮತ್ತು ವಾತ್ಸಲ್ಯವು ಯೋಗ್ಯವಾಗಿ ಪ್ರದರ್ಶಿಸಲ್ಪಡುವ ವಿಧವನ್ನೂ ಮಕ್ಕಳು ನೋಡಬೇಕಾಗಿದೆ.—ರೋಮಾಪುರ 12:10; 1 ಪೇತ್ರ 3:8.
14. (ಎ) ತೃಪ್ತಿಯನ್ನು ತರುವಂತಹ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡುವಂತೆ ಮಕ್ಕಳಿಗೆ ಹೇಗೆ ಕಲಿಸಸಾಧ್ಯವಿದೆ? (ಬಿ) ನಿಮ್ಮ ಕುಟುಂಬದ ಸನ್ನಿವೇಶದಲ್ಲಿ ಇದನ್ನು ಹೇಗೆ ಮಾಡಸಾಧ್ಯವಿದೆ?
14 ಕೆಲಸಮಾಡುವ ವಿಧವನ್ನು ಕಲಿತುಕೊಳ್ಳುವುದು: ಕೆಲಸವು ಜೀವಿತದ ಮೂಲಭೂತ ಅಂಶವಾಗಿದೆ. ಸ್ವಗೌರವವನ್ನು ಕಾಪಾಡಿಕೊಳ್ಳಲು, ವ್ಯಕ್ತಿಯೊಬ್ಬನು ಉತ್ತಮ ಗುಣಮಟ್ಟದ ಕೆಲಸವನ್ನು ಮಾಡುವುದು ಹೇಗೆಂದು ತಿಳಿದುಕೊಳ್ಳಬೇಕು. (ಪ್ರಸಂಗಿ 2:24; 2 ಥೆಸಲೊನೀಕ 3:10) ಒಂದು ಮಗುವಿಗೆ ಸಾಕಷ್ಟು ಉಪದೇಶ ನೀಡದೆ ಕೆಲಸಗಳನ್ನು ಮಾಡುವಂತೆ ಹೇಳಿ, ತದನಂತರ ಅವುಗಳನ್ನು ಸರಿಯಾಗಿ ಮಾಡದೆ ಇರುವಾಗ ಬೈಯುವುದಾದರೆ, ಅದು ಗುಣಮಟ್ಟದ ಕೆಲಸವನ್ನು ಮಾಡಲು ಬಹುಶಃ ಕಲಿತುಕೊಳ್ಳಲಾರದು. ಆದರೆ, ಮಕ್ಕಳು ತಮ್ಮ ಹೆತ್ತವರ ಜೊತೆಗೆ ಕೆಲಸಮಾಡುವ ಮೂಲಕ ಕಲಿತುಕೊಳ್ಳುವಾಗ ಮತ್ತು ಸೂಕ್ತವಾದ ಶ್ಲಾಘನೆಯನ್ನು ಪಡೆದುಕೊಳ್ಳುವಾಗ, ತೃಪ್ತಿದಾಯಕ ಕೆಲಸವನ್ನು ಮಾಡಲು ಅವರು ಕಲಿತುಕೊಳ್ಳಬಹುದು. ಹೆತ್ತವರ ಮಾದರಿಯ ಜೊತೆಗೆ ವಿವರಣೆಯು ಸೇರಿದ್ದರೆ, ಒಂದು ಕೆಲಸವನ್ನು ಹೇಗೆ ಮಾಡಿ ಮುಗಿಸುವುದೆಂದು ಮಕ್ಕಳು ಕಲಿಯುತ್ತಾರಲ್ಲದೆ, ಸಮಸ್ಯೆಗಳನ್ನು ಜಯಿಸುವುದು, ಕೆಲಸವು ಪೂರ್ಣಗೊಳ್ಳುವ ತನಕ ಅದಕ್ಕೆ ಅಂಟಿಕೊಂಡಿರುವುದು, ವಿವೇಚಿಸಿ ನಿರ್ಣಯಗಳನ್ನು ಮಾಡುವುದು ಹೇಗೆಂಬುದನ್ನೂ ಕಲಿತುಕೊಳ್ಳುತ್ತಾರೆ. ಈ ರೀತಿಯ ವಾತಾವರಣದಲ್ಲಿರುವ ಮಕ್ಕಳಿಗೆ, ಯೆಹೋವನು ಉತ್ತಮ ಗುಣಮಟ್ಟದ ಕೆಲಸವನ್ನು ಮಾಡುತ್ತಾನೆಂದು, ಮತ್ತು ಯೇಸು ತನ್ನ ತಂದೆಯನ್ನು ಅನುಕರಿಸುತ್ತಾನೆ ಎಂಬುದನ್ನು ಗಣ್ಯಮಾಡುವಂತೆ ಸಹಾಯವು ನೀಡಲ್ಪಡಸಾಧ್ಯವಿದೆ. (ಆದಿಕಾಂಡ 1:31; ಜ್ಞಾನೋಕ್ತಿ 8:27-31; ಯೋಹಾನ 5:17) ಕುಟುಂಬದ ವೃತ್ತಿಯು ವ್ಯವಸಾಯ ಇಲ್ಲವೆ ವ್ಯಾಪಾರವಾಗಿರುವಾಗ, ಕುಟುಂಬ ಸದಸ್ಯರಲ್ಲಿ ಕೆಲವರು ಒಟ್ಟಿಗೆ ಸೇರಿ ಕೆಲಸಮಾಡಬಹುದು. ಅಥವಾ ತಾಯಿಯು ತನ್ನ ಮಗ ಇಲ್ಲವೆ ಮಗಳಿಗೆ ಒಂದು ಹೊತ್ತಿನ ಅಡುಗೆಯನ್ನು ತಯಾರಿಸಲು ಮತ್ತು ತದನಂತರ ಸ್ವಚ್ಛಗೊಳಿಸಲು ಕಲಿಸಿಕೊಡಬಹುದು. ಕೆಲಸದ ನಿಮಿತ್ತ ತಂದೆಯು ಮನೆಯಿಂದ ದೂರವಿರಬೇಕಾದಲ್ಲಿ, ಮನೆಯಲ್ಲಿ ತನ್ನ ಮಕ್ಕಳೊಂದಿಗೆ ಸೇರಿಕೊಂಡು ಮಾಡುವ ಕೆಲಸಗಳನ್ನು ಅವನು ಯೋಜಿಸಬಲ್ಲನು. ಕೆಲಸಗಳನ್ನು ತತ್ಕ್ಷಣ ಮಾಡಿಮುಗಿಸುವುದೇ ಹೆತ್ತವರ ಲಕ್ಷ್ಯವಾಗಿರದೆ, ಮಕ್ಕಳನ್ನು ಮುಂದಿನ ಜೀವಿತಕ್ಕಾಗಿ ಸಜ್ಜುಗೊಳಿಸುವುದೇ ಅವರ ಲಕ್ಷ್ಯವಾಗಿರುವಾಗ, ಅದು ಎಷ್ಟು ಪ್ರಯೋಜನಕರವಾಗಿರುವುದು!
15. ಯಾವ ವಿಧಗಳಲ್ಲಿ ನಂಬಿಕೆಯ ಪಾಠಗಳು ಕಲಿಸಲ್ಪಡಬಲ್ಲವು? ದೃಷ್ಟಾಂತಿಸಿರಿ.
15 ವಿಪತ್ತುಗಳ ಎದುರಿನಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳುವುದು: ನಂಬಿಕೆಯು ಕೂಡ ನಮ್ಮ ಜೀವಿತಗಳ ಅತ್ಯಾವಶ್ಯಕ ಅಂಶವಾಗಿದೆ. ಕುಟುಂಬ ಅಧ್ಯಯನದಲ್ಲಿ ನಂಬಿಕೆಯ ವಿಷಯವಾಗಿ ಚರ್ಚಿಸುವಾಗ, ಅದರ ಅರ್ಥನಿರೂಪಣೆಯನ್ನು ಮಕ್ಕಳು ಕಲಿತುಕೊಳ್ಳಬಹುದು. ತಮ್ಮ ಹೃದಯಗಳಲ್ಲಿ ನಂಬಿಕೆಯನ್ನು ಹೆಚ್ಚಿಸುವ ಪುರಾವೆಗಳ ಅರಿವು ಅವರಿಗಾಗಬಹುದು. ಆದರೆ, ತೀವ್ರವಾದ ಸಂಕಷ್ಟಗಳ ಎದುರಿನಲ್ಲೂ ತಮ್ಮ ಹೆತ್ತವರು ಸ್ಥಿರವಾದ ನಂಬಿಕೆಯನ್ನು ತೋರಿಸುವುದನ್ನು ಮಕ್ಕಳು ನೋಡುವಾಗ, ಆ ಪರಿಣಾಮವು ಅವರ ಜೀವನಪರ್ಯಂತ ಉಳಿಯಬಹುದು. ಪನಾಮದಲ್ಲಿರುವ ಒಬ್ಬ ಬೈಬಲ್ ವಿದ್ಯಾರ್ಥಿಯು, ಯೆಹೋವನ ಸೇವೆಯನ್ನು ನಿಲ್ಲಿಸದಿದ್ದಲ್ಲಿ ಮನೆಯಿಂದ ಹೊರಹಾಕಲ್ಪಡುವ ಬೆದರಿಕೆಯನ್ನು ತನ್ನ ಗಂಡನಿಂದ ಎದುರಿಸಿದಳು. ಆದರೂ, ತನ್ನ ನಾಲ್ಕು ಚಿಕ್ಕ ಮಕ್ಕಳೊಂದಿಗೆ ಅವಳು ಹತ್ತಿರದ ರಾಜ್ಯ ಸಭಾಗೃಹಕ್ಕೆ ಹೋಗಲು ಕ್ರಮವಾಗಿ 16 ಕಿಲೊಮೀಟರುಗಳು ನಡೆದು, ತದನಂತರ ಇನ್ನೂ 30 ಕಿಲೊಮೀಟರುಗಳ ಅಂತರವನ್ನು ಆವರಿಸಲು ಬಸ್ಸಿನಲ್ಲಿ ಹೋದಳು. ಆ ಮಾದರಿಯಿಂದ ಉತ್ತೇಜಿತರಾಗಿ, ಅವಳ ಕುಟುಂಬದ 20 ಸದಸ್ಯರು ಸತ್ಯದ ಮಾರ್ಗವನ್ನು ಸ್ವೀಕರಿಸಿದ್ದಾರೆ.
ದೈನಿಕ ಬೈಬಲ್ ವಾಚನದ ವಿಷಯದಲ್ಲಿ ಮಾದರಿಯನ್ನಿಡುವುದು
16. ದೈನಿಕ ಕುಟುಂಬ ಬೈಬಲ್ ವಾಚನವು ಏಕೆ ಶಿಫಾರಸ್ಸು ಮಾಡಲ್ಪಟ್ಟಿದೆ?
16 ಯಾವುದೇ ಕುಟುಂಬವು ಸ್ಥಾಪಿಸಸಾಧ್ಯವಿರುವ ಅತ್ಯಮೂಲ್ಯವಾದ ರೂಢಿಗಳಲ್ಲಿ, ಬೈಬಲಿನ ಕ್ರಮವಾದ ವಾಚನವು ಒಂದಾಗಿದೆ. ಇದು ಹೆತ್ತವರಿಗೆ ಪ್ರಯೋಜನವನ್ನು ತರುತ್ತಾ, ಮಕ್ಕಳು ಅನುಕರಿಸಬಹುದಾದ ಒಂದು ಮಾದರಿಯಾಗಿ ಪರಿಣಮಿಸಸಾಧ್ಯವಿದೆ. ಸಾಧ್ಯವಿರುವಲ್ಲಿ, ಪ್ರತಿ ದಿನ ಒಂದಿಷ್ಟು ಬೈಬಲ್ ವಾಚನವನ್ನು ಮಾಡಿರಿ. ಎಷ್ಟು ಓದಲಾಗುತ್ತದೆ ಎಂಬುದು ಅತಿ ಪ್ರಾಮುಖ್ಯವಾದ ವಿಷಯವಲ್ಲ. ಕ್ರಮಬದ್ಧತೆ ಮತ್ತು ಅದನ್ನು ಮಾಡುವ ವಿಧಾನವೇ ಹೆಚ್ಚು ಪ್ರಾಮುಖ್ಯವಾದ ವಿಷಯವಾಗಿದೆ. ಬೈಬಲ್ ವಾಚನದ ಜೊತೆಗೆ, ಬೈಬಲ್ ಕಥೆಗಳ ನನ್ನ ಪುಸ್ತಕದ ಆಡಿಯೊ ಕ್ಯಾಸೆಟ್ಗಳು ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಲಭ್ಯವಿರುವುದಾದರೆ, ಅವುಗಳನ್ನು ಸಹ ಮಕ್ಕಳು ಆಲಿಸಬಹುದು. ದೇವರ ವಾಕ್ಯವನ್ನು ಪ್ರತಿ ದಿನ ಓದುವುದರಿಂದ, ದೇವರ ವಿಚಾರಗಳಿಗೆ ಪ್ರಥಮ ಸ್ಥಾನವನ್ನು ಕೊಡಲು ನಮಗೆ ಸಾಧ್ಯವಾಗುತ್ತದೆ. ಮತ್ತು ಬೈಬಲ್ ವಾಚನವನ್ನು ವ್ಯಕ್ತಿಗಳು ಮಾತ್ರವಲ್ಲ, ಕುಟುಂಬಗಳು ಮಾಡುವಾಗ, ಇಡೀ ಮನೆವಾರ್ತೆಯು ಯೆಹೋವನ ಮಾರ್ಗಗಳಲ್ಲಿ ನಡೆಯುವಂತೆ ಇದು ಸಹಾಯ ಮಾಡಬಲ್ಲದು. ಈ ರೂಢಿಯನ್ನೇ, ಕುಟುಂಬಗಳೇ—ದೈನಿಕ ಬೈಬಲ್ ವಾಚನವನ್ನು ನಿಮ್ಮ ಜೀವನದ ರೀತಿಯಾಗಿ ಮಾಡಿರಿ! ಎಂಬ ಡ್ರಾಮಾದ ಮೂಲಕ, ಇತ್ತೀಚಿನ “ದೇವರ ಜೀವನ ಮಾರ್ಗ” ಅಧಿವೇಶನಗಳಲ್ಲಿ ಉತ್ತೇಜಿಸಲಾಯಿತು.—ಕೀರ್ತನೆ 1:1-3.
17. ಎಫೆಸ 6:4ರಲ್ಲಿರುವ ಸಲಹೆಯನ್ನು ಅನ್ವಯಿಸುವುದರಲ್ಲಿ, ಕುಟುಂಬ ಬೈಬಲ್ ವಾಚನ ಹಾಗೂ ಮುಖ್ಯ ಶಾಸ್ತ್ರವಚನಗಳನ್ನು ಕಂಠಪಾಠ ಮಾಡುವುದು ಹೇಗೆ ಸಹಾಯ ಮಾಡುತ್ತದೆ?
17 ಕುಟುಂಬವಾಗಿ ಬೈಬಲನ್ನು ಓದುವುದು, ಅಪೊಸ್ತಲ ಪೌಲನು ಎಫೆಸದಲ್ಲಿದ್ದ ಕ್ರೈಸ್ತರಿಗೆ ತನ್ನ ಪ್ರೇರಿತ ಪತ್ರದಲ್ಲಿ ಬರೆದ ವಿಷಯಕ್ಕೆ ಸುಸಂಗತವಾಗಿದೆ. ಅದೇನೆಂದರೆ: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶ [“ಮಾನಸಿಕ ಕ್ರಮಪಡಿಸುವಿಕೆ,” NW]ವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4) ಇದು ಏನನ್ನು ಅರ್ಥೈಸುತ್ತದೆ? “ಮಾನಸಿಕ ಕ್ರಮಪಡಿಸುವಿಕೆ”ಯ ಅಕ್ಷರಾರ್ಥವು, “ಮನಸ್ಸನ್ನು ಹಾಕುವುದು” ಎಂದಾಗಿದೆ. ಆದುದರಿಂದ, ಮಕ್ಕಳು ದೇವರ ವಿಚಾರಗಳನ್ನು ತಿಳಿದುಕೊಳ್ಳುವಂತೆ ಸಹಾಯಮಾಡಲು, ಕ್ರೈಸ್ತ ತಂದೆಗಳು ತಮ್ಮ ಮಕ್ಕಳಲ್ಲಿ ಯೆಹೋವ ದೇವರ ಮನಸ್ಸನ್ನು (ಆಲೋಚನೆಗಳನ್ನು) ಹಾಕುವಂತೆ ಪ್ರೇರಿಸಲ್ಪಟ್ಟಿದ್ದಾರೆ. ಮುಖ್ಯ ವಚನಗಳನ್ನು ಮಕ್ಕಳು ಕಂಠಪಾಠ ಮಾಡುವಂತೆ ಉತ್ತೇಜಿಸುವ ಮೂಲಕ, ಇದನ್ನು ಸಾಧಿಸಸಾಧ್ಯವಿದೆ. ಯೆಹೋವನ ವಿಚಾರಗಳು ಮಕ್ಕಳ ಆಲೋಚನೆಯನ್ನು ಮಾರ್ಗದರ್ಶಿಸಬೇಕೆಂಬುದೇ ಇದರ ಉದ್ದೇಶವಾಗಿದೆ. ಇದರಿಂದಾಗಿ, ಹೆತ್ತವರು ಮಕ್ಕಳೊಂದಿಗೆ ಇರಲಿ, ಇಲ್ಲದಿರಲಿ, ಅವರ ಬಯಕೆಗಳು ಮತ್ತು ನಡತೆಯು ಪ್ರಗತಿಪರವಾಗಿ ದೈವಿಕ ಮಟ್ಟಗಳನ್ನು ಪ್ರತಿಬಿಂಬಿಸುವವು. ಇಂತಹ ಆಲೋಚನೆಗೆ ಬೈಬಲು ಆಧಾರವಾಗಿದೆ.—ಧರ್ಮೋಪದೇಶಕಾಂಡ 6:6, 7.
18. ಬೈಬಲನ್ನು ಓದುವಾಗ, (ಎ) ಅದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು, (ಬಿ) ಅದರಲ್ಲಿರುವ ಸಲಹೆಯಿಂದ ಪ್ರಯೋಜನ ಪಡೆದುಕೊಳ್ಳಲು, (ಸಿ) ಯೆಹೋವನ ಉದ್ದೇಶದ ಬಗ್ಗೆ ಅದು ಪ್ರಕಟಪಡಿಸುವ ವಿಷಯಕ್ಕೆ ಪ್ರತಿಕ್ರಿಯಿಸಲು, (ಡಿ) ಜನರ ಮನೋಭಾವಗಳು ಮತ್ತು ಕ್ರಿಯೆಗಳ ಕುರಿತು ಅದು ಹೇಳುವ ವಿಷಯದಿಂದ ಪ್ರಯೋಜನ ಪಡೆಯಲು, ಏನು ಅಗತ್ಯವಿರಬಹುದು?
18 ಬೈಬಲು ನಮ್ಮ ಜೀವಿತಗಳನ್ನು ಪ್ರಭಾವಿಸಬೇಕಾದರೆ, ಅದು ಹೇಳುವ ವಿಷಯಗಳನ್ನು ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ, ಅನೇಕರು ವಾಚನದ ಭಾಗಗಳನ್ನು ಒಂದಕ್ಕಿಂತಲೂ ಹೆಚ್ಚು ಬಾರಿ ಓದಬೇಕಾದೀತು. ಕೆಲವು ಅಭಿವ್ಯಕ್ತಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ನಾವು ಪದಗಳ ಅರ್ಥವನ್ನು ಡಿಕ್ಷನೆರಿಯಲ್ಲಿ ಇಲ್ಲವೆ ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕದಲ್ಲಿ ನೋಡಬೇಕಾಗಬಹುದು. ವಚನದಲ್ಲಿ ಸಲಹೆ ಇಲ್ಲವೆ ಒಂದು ಆಜ್ಞೆ ಇರುವುದಾದರೆ, ನಮ್ಮ ದಿನದಲ್ಲಿ ಅದಕ್ಕೆ ಹೋಲುವ ಸನ್ನಿವೇಶಗಳ ಕುರಿತು ಮಾತಾಡಲು ಸಮಯವನ್ನು ತೆಗೆದುಕೊಳ್ಳಿರಿ. ತದನಂತರ ನೀವು ಹೀಗೆ ಕೇಳಬಹುದು, ‘ಈ ಸಲಹೆಯನ್ನು ಅನ್ವಯಿಸುವುದರಿಂದ ನಮಗಾಗುವ ಲಾಭವೇನು?’ (ಯೆಶಾಯ 48:17, 18) ಶಾಸ್ತ್ರವಚನವು ಯೆಹೋವನ ಉದ್ದೇಶದ ಯಾವುದೇ ಅಂಶದ ಕುರಿತು ಮಾತಾಡುತ್ತಿರುವುದಾದರೆ, ‘ಇದರಿಂದ ನಮ್ಮ ಜೀವಿತಗಳು ಹೇಗೆ ಪ್ರಭಾವಿಸಲ್ಪಡುತ್ತವೆ?’ ಎಂದು ಕೇಳಿರಿ. ನೀವು ಜನರ ಮನೋಭಾವಗಳು ಮತ್ತು ಕ್ರಿಯೆಗಳ ಕುರಿತು ತಿಳಿಸುವಂತಹ ಒಂದು ವೃತ್ತಾಂತವನ್ನು ಓದುತ್ತಿದ್ದೀರೆಂದು ಭಾವಿಸಿಕೊಳ್ಳಿ. ಜೀವಿತದಲ್ಲಿ ಅವರು ಯಾವ ಒತ್ತಡಗಳನ್ನು ಅನುಭವಿಸಿದರು? ಅವುಗಳನ್ನು ಅವರು ಹೇಗೆ ನಿಭಾಯಿಸಿದರು? ಅವರ ಮಾದರಿಯಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ? ಈ ವೃತ್ತಾಂತವು ಇಂದು ನಮ್ಮ ಜೀವಿತಕ್ಕೆ ಯಾವ ಅರ್ಥವನ್ನು ನೀಡುತ್ತದೆ ಎಂಬುದನ್ನು ಚರ್ಚಿಸಲು ಯಾವಾಗಲೂ ಸಮಯವನ್ನು ಬದಿಗಿಡಿರಿ.—ರೋಮಾಪುರ 15:4; 1 ಕೊರಿಂಥ 10:11.
19. ದೇವರನ್ನು ಅನುಕರಿಸುವವರಾಗಿರುವ ಮೂಲಕ, ನಾವು ನಮ್ಮ ಮಕ್ಕಳಿಗೆ ಏನನ್ನು ಒದಗಿಸುತ್ತಿರುವೆವು?
19 ದೇವರ ವಿಚಾರಗಳನ್ನು ನಮ್ಮ ಹೃದಮನಗಳ ಮೇಲೆ ಅಚ್ಚೊತ್ತಲು ಇದು ಎಂತಹ ಒಂದು ಉತ್ತಮ ವಿಧಾನ! ಹೀಗೆ, ನಾವು “ದೇವರ ಪ್ರಿಯ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸು”ವವರಾಗಲು ನಮಗೆ ಸಹಾಯವು ದೊರೆಯುವುದು. (ಎಫೆಸ 5:1) ಮತ್ತು ನಮ್ಮ ಮಕ್ಕಳು ಅನುಸರಿಸಲು ಯೋಗ್ಯವಾದ ಮಾದರಿಯನ್ನು ನಾವು ಒದಗಿಸುವೆವು.
ನಿಮಗೆ ಜ್ಞಾಪಕವಿದೆಯೊ?
◻ ಯೆಹೋವನ ಮಾದರಿಯಿಂದ ಹೆತ್ತವರು ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲರು?
◻ ಮಕ್ಕಳಿಗೆ ನೀಡುವ ಮೌಖಿಕ ಉಪದೇಶದ ಜೊತೆಗೆ ಹೆತ್ತವರ ಒಳ್ಳೆಯ ಮಾದರಿಯು ಏಕೆ ಅಗತ್ಯವಾಗಿದೆ?
◻ ಹೆತ್ತವರ ಮಾದರಿಯಿಂದ ಅತ್ಯುತ್ತಮವಾಗಿ ಕಲಿಸಲ್ಪಡುವ ಕೆಲವು ಪಾಠಗಳಾವುವು?
◻ ಕುಟುಂಬ ಬೈಬಲ್ ವಾಚನದಿಂದ ನಾವು ಹೇಗೆ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
[ಪುಟ 10 ರಲ್ಲಿರುವ ಚಿತ್ರ]
ಅನೇಕರು ಕುಟುಂಬವಾಗಿ ದೈನಿಕ ಬೈಬಲ್ ವಾಚನದಲ್ಲಿ ಆನಂದಿಸುತ್ತಾರೆ