‘ಹೃದಮನಗಳಲ್ಲಿ ಕುತೂಹಲದ ಜ್ವಾಲೆಗಳು’
“ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? (ಇಂಗ್ಲಿಷ್) ಎಂಬ ಪುಸ್ತಕವನ್ನು ನಾನು ಅತ್ಯಾಸಕ್ತಿಯಿಂದ ಓದುತ್ತಾ ಹೋದಂತೆ, ನನ್ನಲ್ಲಿ ಉಂಟಾಗುವ ಆನಂದ ಮತ್ತು ಉಲ್ಲಾಸದ ಭಾವನೆಗಳನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದು ಒಬ್ಬನಲ್ಲಿ ಹೆಚ್ಚನ್ನು ತಿಳಿದುಕೊಳ್ಳುವ ಅಪೇಕ್ಷೆಯನ್ನು ಮಾತ್ರವಲ್ಲ, ಅಗತ್ಯವನ್ನೂ ಕೆರಳಿಸುತ್ತದೆ. ನನ್ನ ಹೃದಮನಗಳಲ್ಲಿ ಕುತೂಹಲದ ಜ್ವಾಲೆಗಳನ್ನು ಕೆರಳಿಸಿದ್ದಕ್ಕಾಗಿ ನಿಮಗೆ ಉಪಕಾರ.”
ಹೀಗೆಂದು, 1998/99ರಲ್ಲಿ ನಡೆದ “ದೇವರ ಜೀವನ ಮಾರ್ಗ” ಎಂಬ ಜಿಲ್ಲಾ ಅಧಿವೇಶನಗಳಲ್ಲಿ, ವಾಚ್ ಟವರ್ ಸೊಸೈಟಿಯಿಂದ ಬಿಡುಗಡೆ ಮಾಡಲಾದ ಪುಸ್ತಕದ ಕುರಿತು, ಅಮೆರಿಕದ ಉತ್ತರ ಕ್ಯಾರೊಲಿನ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಾಕೆ ಹೇಳಿದಳು. ನಿಮ್ಮಲ್ಲಿ ಈ ಪುಸ್ತಕದ ಒಂದು ಪ್ರತಿ ಇರದಿದ್ದರೂ, ಇತರರ ಪ್ರತಿಕ್ರಿಯೆಗಳನ್ನು ಗಮನಿಸಿರಿ.
ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಸ್ಯಾನ್ ಡೀಯೆಗೊ ಅಧಿವೇಶನದಲ್ಲಿ ತನ್ನ ಪ್ರತಿಯನ್ನು ಪಡೆದು, ಹಲವಾರು ದಿನಗಳ ತರುವಾಯ ಒಬ್ಬ ವ್ಯಕ್ತಿಯು ಬರೆದದ್ದು: “ಈ ಪುಸ್ತಕವು ನನ್ನ ನಂಬಿಕೆಯನ್ನು ಬಹಳವಾಗಿ ಬಲಪಡಿಸುತ್ತಿದೆ. ಇದು ಯೆಹೋವನ ಸೃಷ್ಟಿಗಳಿಗಾಗಿ ನನ್ನಲ್ಲಿ ಆಳವಾದ ಗಣ್ಯತೆಯನ್ನು ಮೂಡಿಸುತ್ತಿದೆ. ಈಗ ನಾನು ಆ ಪುಸ್ತಕದ 98ನೆಯ ಪುಟವನ್ನು ಓದುತ್ತಿದ್ದೇನೆ, ಮತ್ತು ಅದು ಮುಗಿಯಲೇ ಬಾರದೆಂದು ನನ್ನ ಅಪೇಕ್ಷೆ! ಅದು ಅಷ್ಟೊಂದು ತೃಪ್ತಿದಾಯಕವಾಗಿದೆ.”
ಪ್ರಾಚ್ಯ ದೇಶದ ಒಬ್ಬ ಸ್ತ್ರೀಯು ಬರೆದುದು: “ಅಧಿವೇಶನದಲ್ಲಿ ಭಾಷಣಕರ್ತರು ‘ಒಂದು ಅದ್ವಿತೀಯ ಪುಸ್ತಕ’ ಎಂಬ ಅಭಿವ್ಯಕ್ತಿಯನ್ನು ಬಳಸಿದರು, ಮತ್ತು ಈ ಪುಸ್ತಕದ ಒಳವಿಷಯಕ್ಕೆ ಅದು ಸರಿಯಾಗಿ ಹೊಂದಿಕೊಳ್ಳುತ್ತದೆ. ಈ ಪುಸ್ತಕದ ಗಮನಾರ್ಹ ವೈಶಿಷ್ಟ್ಯವು ಏನೆಂದರೆ, ಅದು ನಿಜತ್ವಗಳನ್ನು ಪ್ರಸ್ತುತಪಡಿಸುವುದಾದರೂ ವಾಚಕನು ದೇವರ ಅಸ್ತಿತ್ವವನ್ನು ನಂಬಲೇಬೇಕೆಂದು ಒತ್ತಾಯಪಡಿಸುವುದಿಲ್ಲ.”
ಈ ನಿಜತ್ವಗಳಲ್ಲಿ ವಿಶ್ವಮಂಡಲ, ಜೀವ, ಹಾಗೂ ನಮ್ಮ ಕುರಿತಾದ ಸ್ತಬ್ಧಗೊಳಿಸುವ ವೈಜ್ಞಾನಿಕ ಕಂಡುಹಿಡಿತಗಳು ಸೇರಿವೆ. ಇದು ಅನೇಕರನ್ನು ಪ್ರಭಾವಿಸಿದೆ. “ಈ ಚಿಕ್ಕ ಪುಸ್ತಕವು ನನ್ನನ್ನು ಎಷ್ಟು ಆಳವಾಗಿ ಪ್ರಭಾವಿಸಿದೆ ಎಂದರೆ, ಅದನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳೇ ಇಲ್ಲ” ಎಂದು ಕ್ಯಾಲಿಫೋರ್ನಿಯದ ಸ್ತ್ರೀಯೊಬ್ಬಳು ಬರೆದಳು. “ಪ್ರತಿಯೊಂದು ಪುಟವು ನಮ್ಮ ವಿಶ್ವಮಂಡಲದ ಕುರಿತು ಮತ್ತು ಸ್ವತಃ ಜೀವದ ಕುರಿತು ಹೆಚ್ಚೆಚ್ಚು ವಿಷಯಗಳನ್ನು ವರ್ಣಿಸಿದಂತೆ, ನನಗೆ ಓದುವುದನ್ನು ನಿಲ್ಲಿಸಲಾಗಲಿಲ್ಲ. ನಾನು ನಿಜವಾಗಿಯೂ ಬಹಳಷ್ಟನ್ನು ತಿಳಿದುಕೊಂಡಿದ್ದೇನೆ! ಈ ಚಿಕ್ಕ ಪುಸ್ತಕವನ್ನು ನಾನು ಅಮೂಲ್ಯವೆಂದೆಣಿಸಿ, ಸಾಧ್ಯವಿರುವಷ್ಟು ಜನರೊಂದಿಗೆ ಹಂಚಿಕೊಳ್ಳುವೆ.”
ಪುಸ್ತಕವು ಸೃಷ್ಟಿಕರ್ತನ ವ್ಯಕ್ತಿತ್ವಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾ, ಬೈಬಲಿನ ಸಾರಾಂಶವನ್ನು ವರ್ಣಿಸಿರುವ ರೀತಿಯು ಅನೇಕರಿಗೆ ಉಲ್ಲಾಸವನ್ನು ತಂದಿದೆ. “ಪುಸ್ತಕದ ಕೊನೆಯಲ್ಲಿ ಪ್ರಸ್ತುತಗೊಳಿಸಲ್ಪಟ್ಟಿರುವ ಬೈಬಲಿನ ಒಟ್ಟು ದೃಷ್ಟಿಕೋನವು, ನಾನು ಓದಿರುವ ಅತ್ಯುತ್ತಮ ದೃಷ್ಟಿಕೋನಗಳಲ್ಲೇ ಒಂದಾಗಿದೆ” ಎಂಬುದು ಒಂದು ಸಾಮಾನ್ಯ ಹೇಳಿಕೆಯಾಗಿದೆ. ಅಮೆರಿಕದ ನ್ಯೂ ಯಾರ್ಕ್ನಲ್ಲಿ ಒಂದು ಅಧಿವೇಶನವು ಮುಗಿದ ಕೂಡಲೇ ಒಬ್ಬಾಕೆ ಬರೆದುದು: “ನೀವು ಮುದ್ರಿಸಿರುವ ಅತ್ಯಂತ ಆಸಕ್ತಿಕರ ಪ್ರಕಾಶನಗಳಲ್ಲಿ ಈ ಹೊಸ ಪುಸ್ತಕವು ಒಂದಾಗಿರಲೇ ಬೇಕು. ಸೃಷ್ಟಿಕರ್ತನೊಬ್ಬನು ಇದ್ದಾನೆಂಬ ವೈಜ್ಞಾನಿಕ ಪುರಾವೆಗಳಿಂದ ನಾನು ಆಶ್ಚರ್ಯಚಕಿತಗೊಂಡೆ. ಬೈಬಲಿನ ಸಂಕ್ಷಿಪ್ತ ಸಾರಾಂಶವು, ಪ್ರಸ್ತುತಗೊಳಿಸಲ್ಪಟ್ಟಿರುವ ಅಂಶಗಳನ್ನು ವಿವರಿಸುತ್ತದಲ್ಲದೆ, ಹೆಚ್ಚನ್ನು ಓದುವ ಇಚ್ಛೆಯನ್ನು ಕೆರಳಿಸುತ್ತದೆ.”
ಅರ್ಥವಾಗಬಲ್ಲ ವಿಜ್ಞಾನ
ಪ್ರಾರಂಭದ ಅಧ್ಯಯನಗಳಲ್ಲಿರುವ ವೈಜ್ಞಾನಿಕ ಮಾಹಿತಿಯನ್ನು ತಿಳಿದುಕೊಳ್ಳುವುದು ಕಷ್ಟಕರವಾಗಿ ತೋರಬಹುದಾದರೂ, ಕೆಲವು ಸಾಮಾನ್ಯ ಪ್ರತಿಕ್ರಿಯೆಗಳನ್ನು ಗಮನಿಸಿರಿ.
ಕೆನಡದ ಒಬ್ಬ ಪುರುಷನು ಬರೆದುದು: “ತಾಂತ್ರಿಕ ಪುಸ್ತಕಗಳ ಲೇಖಕರು ಬಳಸುವ ದೊಡ್ಡ ದೊಡ್ಡ ಶಬ್ದಗಳಿಗೆ ಹೋಲಿಸುವಾಗ ಇದು ಎಷ್ಟೊಂದು ಭಿನ್ನವಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಡಿಎನ್ಎ, ವರ್ಣತಂತುಗಳು, ಮುಂತಾದ ವಿಷಯಗಳನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿರುವುದು, ನಿಮ್ಮ ನೈಪುಣ್ಯವನ್ನು ಎತ್ತಿತೋರಿಸುತ್ತದೆ. ನಾನು ಹಲವಾರು ವರ್ಷಗಳ ಹಿಂದೆ ಅಭ್ಯಸಿಸಿದ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳನ್ನು ನೀವೇ ಬರೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!”
ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರವನ್ನು ಕಲಿಸುವ ಒಬ್ಬ ಪ್ರೊಫೆಸರ್ ಬರೆದುದು: “[ಅದು] ತಾಂತ್ರಿಕ ವಿವರಗಳಲ್ಲಿ ಸಿಲುಕಿಕೊಳ್ಳದೆಯೇ ವಿಷಯಗಳನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಪುಸ್ತಕವು ವಾಚಕನೊಂದಿಗೆ ತರ್ಕಿಸಿ, ಅನೇಕ ಪ್ರಸಿದ್ಧ ವಿಜ್ಞಾನಿಗಳ ಹೇಳಿಕೆಗಳನ್ನು ಉದ್ಧರಿಸುತ್ತದೆ. ಇದು ವಿಶ್ವಮಂಡಲ ಹಾಗೂ ಜೀವದ ಆರಂಭದ ವಿಷಯದಲ್ಲಿ ಆಸಕ್ತನಾಗಿರುವ ಒಬ್ಬ ವಿಜ್ಞಾನಿಯು ಇಲ್ಲವೆ ಸಾಮಾನ್ಯನು ‘ಓದಲೇಬೇಕಾದ’ ಪುಸ್ತಕವಾಗಿದೆ.”
ನರ್ಸಿಂಗ್ ತರಬೇತಿಯನ್ನು ಪಡೆಯುತ್ತಿರುವ ಯುವತಿಯೊಬ್ಬಳು ಹೇಳಿದ್ದು: “ನಾವು ತರಗತಿಯಲ್ಲಿ ಉಪಯೋಗಿಸುತ್ತಿರುವ ಒಂದು ಗ್ರಂಥದಿಂದ ತೆಗೆದ ಹೇಳಿಕೆಯನ್ನು ಈ ಪುಸ್ತಕದ ನಾಲ್ಕನೆಯ ಅಧ್ಯಾಯದಲ್ಲಿ ಕಂಡು ನಾನು ಬಹಳ ಆಶ್ಚರ್ಯಗೊಂಡೆ! ಈ ಪುಸ್ತಕವನ್ನು ನಮ್ಮ ಪ್ರೊಫೆಸರರಿಗೆ ಕೊಟ್ಟು, ಅದರಲ್ಲಿರುವ ಮಾಹಿತಿಯನ್ನು ಅವರು ತುಂಬ ಇಷ್ಟಪಡುವರೆಂದು ನಾನು ಅವರಿಗೆ ಹೇಳಿದೆ. ಮಿದುಳಿನ ಕುರಿತಾದ ಮಾಹಿತಿಯಿದ್ದ ಪುಟ 54ನ್ನು ಅವರಿಗೆ ತೋರಿಸಿದೆ. ಅದನ್ನು ಓದಿದ ಅವರು, ‘ಇದು ಆಸಕ್ತಿಕರವಾಗಿದೆ! ನಾನು ಇದನ್ನು ಪರಿಶೀಲಿಸಿ ನೋಡುವೆ’ ಎಂದರು.”
ಬೆಲ್ಜಿಯಮ್ನ ಶಾಸನ ಮಂಡಲಿಯ ಸದಸ್ಯರೊಬ್ಬರು ಬರೆದುದು: “ಆಧುನಿಕ ವಿಜ್ಞಾನವು ಬೈಬಲಿನ ಏಕದೇವತ್ವದ ತಿಳಿವಳಿಕೆಗೆ ವಿರುದ್ಧವಾಗಿರದೆ, ಅದನ್ನು ಒಟ್ಟುಸೇರಿಸುತ್ತದೆಂಬ ವೈಜ್ಞಾನಿಕ ಹೊರನೋಟವು ನನ್ನನ್ನು ಬಹಳವಾಗಿ ಪ್ರಭಾವಿಸಿತು. ಇದೊಂದು ಗಮನಾರ್ಹವಾದ ಹೊರನೋಟವಾಗಿದೆ.”
ಸೃಷ್ಟಿಕರ್ತನನ್ನು ಉತ್ತಮವಾಗಿ ತಿಳಿದುಕೊಳ್ಳುವುದು
ದೇವರನ್ನು ಉತ್ತಮವಾಗಿ ತಿಳಿದುಕೊಳ್ಳುವಂತೆ ಮತ್ತು ಆತನ ಹತ್ತಿರಕ್ಕೆ ಬರುವಂತೆ ಈ ಪುಸ್ತಕವು ಅನೇಕ ದೇಶಗಳಲ್ಲಿನ ಜನರಿಗೆ ಸಹಾಯಮಾಡಿದೆ. ಜಪಾನಿನ ಫುಕುವೊಕಾ ಸಿಟಿಯ ಒಬ್ಬ ವಾಚಕನು ಗಮನಿಸಿದ್ದು: “ಇದು ಲೆನ್ಸನ್ನು ಪ್ರಥಮ ಬಾರಿ ಯೆಹೋವನ ಮೇಲೆಯೇ ನಿಖರವಾಗಿ ಕೇಂದ್ರೀಕರಿಸಲಾಗಿದೆಯೋ ಎಂಬಂತಿದೆ. ಈ ಪುಸ್ತಕವು ಅದ್ಭುತ ರೀತಿಯಲ್ಲಿ ಮನವರಿಕೆಯನ್ನು ಉಂಟುಮಾಡುತ್ತದೆ. ಈ ವರೆಗೂ ನಾನು ಯೋಚಿಸದಿದ್ದ ದೃಷ್ಟಿಕೋನದಿಂದ ಯೆಹೋವನನ್ನು ತಿಳಿದುಕೊಳ್ಳಲು ಈಗ ನಾನು ಶಕ್ತಳಾಗಿದ್ದೇನೆ.” ಎಲ್ ಸ್ಯಾಲ್ವಡೋರ್ನ ವ್ಯಕ್ತಿಯೊಬ್ಬನು ಬರೆದುದು: “ದೇವರು ಎಷ್ಟೊಂದು ಕರುಣಾಭರಿತನೂ, ದಯೆಯುಳ್ಳವನೂ, ಮಂದಕೋಪಿಯೂ, ಮಹಾಕೃಪೆಯುಳ್ಳವನೂ ಆಗಿದ್ದಾನೆಂದು ನೀವು ಸ್ಪಷ್ಟವಾಗಿ ವಿವರಿಸುತ್ತೀರಿ. ಆತನಿಗೆ ಮತ್ತು ಆತನ ಪುತ್ರನಿಗೆ ನಿಕಟರಾಗಿರಲು ನಮಗೆ ಇದೇ ಅಗತ್ಯವಾಗಿದೆ. ಯೆಹೋವನ ಮತ್ತು ಆತನ ಮಗನಾದ ಯೇಸುವಿನ ಮಾನವೀಯ ಭಾವನೆಗಳನ್ನು ವಿವರಿಸುವ ಪ್ರಥಮ ಪುಸ್ತಕವು ಇದಾಗಿದೆ.” ಸಾಂಬಿಯದ ಒಬ್ಬ ವಾಚಕನು ಪ್ರತಿಕ್ರಿಯಿಸಿದ್ದು: “ಈಗ ನಾನು ಯೆಹೋವನನ್ನು ವಿಭಿನ್ನ ಕೋನಗಳಿಂದ ವೀಕ್ಷಿಸುತ್ತೇನೆ.”
ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? ಎಂಬ ಪುಸ್ತಕವನ್ನು ಇತರರೊಂದಿಗೆ ಹಂಚಿಕೊಳ್ಳುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಉತ್ತೇಜಿತರಾಗಿದ್ದಾರೆ. ಒಬ್ಬಾಕೆ ಹೇಳಿದ್ದು: “ಹತ್ತನೆಯ ಅಧ್ಯಾಯವನ್ನು [“ಸೃಷ್ಟಿಕರ್ತನು ಚಿಂತಿಸುವುದಾದರೆ ಇಷ್ಟೊಂದು ಕಷ್ಟಾನುಭವವು ಏಕೆ?”] ಓದಿ ಮುಗಿಸಿದ ಬಳಿಕ, ‘ಜಪಾನಿನಲ್ಲಿರುವ ಜನರಿಗೆ ಇಂತಹದ್ದೇ ಪುಸ್ತಕದ ಅಗತ್ಯವಿದೆ!’ ಎಂದು ಹೇಳದೇ ಇರಲು ನನಗೆ ಸಾಧ್ಯವಾಗಲಿಲ್ಲ. ಈ ಅಧ್ಯಾಯದಲ್ಲಿರುವ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಂಡು, ಅದನ್ನು ಕ್ಷೇತ್ರ ಸೇವೆಯಲ್ಲಿ ಹೆಚ್ಚೆಚ್ಚು ಉಪಯೋಗಿಸಲು ನಾನು ಬಯಸುವೆ.” ಮತ್ತೊಬ್ಬ ಸ್ತ್ರೀಯು, ಒಂದು ದೇವಾಲಯದಲ್ಲಿ ಬೆಳೆದುಬಂದ ಹುಡುಗಿಯೊಂದಿಗೆ ಬೈಬಲನ್ನು ಅಭ್ಯಸಿಸುತ್ತಿದ್ದಾಳೆ. ಅವಳ ತಂದೆ ಅಲ್ಲಿಯ ಪುರೋಹಿತರಾಗಿದ್ದಾರೆ. “ಸೃಷ್ಟಿಕರ್ತನ ಪರಿಕಲ್ಪನೆಯನ್ನು ಸ್ವೀಕರಿಸುವುದು ಅವಳಿಗೆ ತುಂಬ ಕಷ್ಟಕರವಾಗಿದೆ. ಈ ಪುಸ್ತಕದ ವಿವರಣೆಯು ಏನನ್ನೂ ಒತ್ತಾಯಿಸದಿದ್ದರೂ, ನಿಜತ್ವಗಳು ಅದರಲ್ಲಿರುವುದರಿಂದ ಬೌದ್ಧರು ಕೂಡ ಯಾವ ಹಿಂಜರಿಕೆ ಇಲ್ಲದೆ ಓದಬಹುದೆಂದು ನಾನು ನೆನಸುತ್ತೇನೆ. ನಾವು ಯೆಹೋವನ ಪ್ರೀತಿಯನ್ನು ಇನ್ನೂ ಹೆಚ್ಚಾಗಿ ಅನುಭವಿಸುವಂತೆಯೂ ಇದು ಮಾಡುತ್ತದೆ.”
ಇಂಗ್ಲೆಂಡಿನಿಂದ ಈ ಹೇಳಿಕೆಯು ಬಂದಿದೆ: “ಈಗ ತಾನೇ ನಾನು ಸೃಷ್ಟಿಕರ್ತನು ಪುಸ್ತಕವನ್ನು ಓದಿಮುಗಿಸಿದ್ದೇನೆ, ಮತ್ತು ಪುನಃ ಅದನ್ನು ಓದಲು ಆರಂಭಿಸಲಿದ್ದೇನೆ. ಎಂತಹ ಅದ್ಭುತಕರ ಪುಸ್ತಕ! ಅದನ್ನು ಓದುವಾಗ ಒಬ್ಬನು ಯೆಹೋವನನ್ನು ಪ್ರೀತಿಸದೆ ಇರಸಾಧ್ಯವಿಲ್ಲ. ನಾನು ನನ್ನ ನೆರೆಯಾಕೆಗೆ ಒಂದು ಪ್ರತಿಯನ್ನು ಕೊಟ್ಟಿದ್ದೇನೆ. ಅದರ ಎರಡು ಅಧ್ಯಾಯಗಳನ್ನು ಮಾತ್ರ ಓದಿರುವ ಆಕೆ ಹೇಳಿದ್ದು, ‘ಅದನ್ನು ಕೆಳಗಿಡಲು ಸಾಧ್ಯವೇ ಇಲ್ಲ, ಅದು ಅಷ್ಟು ಆಸಕ್ತಿಕರವಾಗಿದೆ.’ ಜನರು ನಮ್ಮ ಮಹಾನ್ ಸೃಷ್ಟಿಕರ್ತನನ್ನು ತಿಳಿದುಕೊಂಡು, ಆತನನ್ನು ಪ್ರೀತಿಸುವಂತೆ ಈ ಪುಸ್ತಕವು ಖಂಡಿತವಾಗಿಯೂ ಸಹಾಯ ಮಾಡುವುದು.”
ಅಮೆರಿಕದ ಮೇರಿಲ್ಯಾಂಡ್ನ ಒಬ್ಬ ಮನುಷ್ಯನು ಹೇಳಿದ್ದು: “ನನ್ನ ಆತ್ಮಿಕತೆಗೆ ಇದು ನಿಜವಾಗಿಯೂ ನಿರ್ಣಾಯಕವಾಗಿ ಪರಿಣಮಿಸಿದೆ! ನಾನು ಯಾರೊಂದಿಗೆಲ್ಲಾ ವ್ಯಾಪಾರ ಮಾಡುತ್ತೇನೊ ಅವರಿಗೆಲ್ಲ ಒಂದು ಪ್ರತಿಯನ್ನು ಕೊಡಲು ನಿರ್ಧರಿಸಿದ್ದೇನೆ. ಇಂತಹ ಕಾರ್ಯಮಗ್ನ, ಸುಶಿಕ್ಷಿತ ಜನರಿಗೆ ಸಾಕ್ಷಿ ನೀಡುವುದು ಕಷ್ಟಕರವೆಂದು ನಾನು ಕೆಲವೊಮ್ಮೆ ಕಂಡುಕೊಳ್ಳುತ್ತೇನೆ. ಆದರೆ ಈ ಪುಸ್ತಕದೊಂದಿಗೆ, ಒಂದು ಆಕರ್ಷಕ ಹಾಗೂ ಪರಿಣಾಮಕಾರಿ ವಿಧಾನವನ್ನು ನಾನು ಕಂಡುಕೊಳ್ಳುವೆ.”
ಸ್ಪಷ್ಟವಾಗಿಯೇ, ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? ಎಂಬ ಪುಸ್ತಕವು, ಭೂವ್ಯಾಪಕವಾಗಿ ಎಲ್ಲ ಜನರ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುವುದು.
[ಪುಟ 25 ರಲ್ಲಿರುವ ಚಿತ್ರ ಕೃಪೆ]
ಮೇಲಿರುವ ಮುಖಪುಟ ಚಿತ್ರ, ಈಗಲ್ ನೆಬುಲ: J. Hester and P. Scowen (AZ State Univ.), NASA