ವಾಚಕರಿಂದ ಪ್ರಶ್ನೆಗಳು
ಸಂತಾನಹರಣ ಶಸ್ತ್ರಚಿಕಿತ್ಸೆಯ ವಿಧಾನಗಳನ್ನು ಈಗ ವಿನಂತಿಯ ಮೇರೆಗೆ ಪುನಃ ಜೋಡಿಸಸಾಧ್ಯವಿದೆಯೆಂದು ಹೇಳಲ್ಪಡುವುದರಿಂದ, ಒಬ್ಬ ಕ್ರೈಸ್ತನು ಅದನ್ನು ಜನನ ನಿಯಂತ್ರಣ ಆಯ್ಕೆಯಾಗಿ ದೃಷ್ಟಿಸಸಾಧ್ಯವಿದೆಯೋ?
ಸಂತಾನಹರಣ ಚಿಕಿತ್ಸೆಯು ಕುಟುಂಬ ಯೋಜನೆಯ ಹೆಚ್ಚು ಜನಪ್ರಿಯ ವಿಧಾನವಾಗುತ್ತಿದೆ. ಅನೇಕ ವ್ಯಕ್ತಿಗಳಿಗಾದರೋ, ಅದರ ಸ್ವೀಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ಮೇಲೆ ಮಾತ್ರವಲ್ಲ, ಧಾರ್ಮಿಕ ದೃಷ್ಟಿಕೋನದಿಂದಲೂ ನಿರ್ಧರಿಸಲ್ಪಡುತ್ತದೆ. ಯೆಹೋವನ ಸಾಕ್ಷಿಗಳಿಗಾದರೋ ಅದು ಧಾರ್ಮಿಕ ನಂಬಿಕೆಯ ನೋಟದ ಮೇಲೆ ಅವಲಂಬಿಸಿರುತ್ತದೆ. ಇವರು ಕೀರ್ತನೆಗಾರನ ಬಯಕೆಯನ್ನು ವ್ಯಕ್ತಪಡಿಸುತ್ತಾರೆ: ‘‘ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು . . . ನನ್ನನ್ನು ಸಮವಾದ ದಾರಿಯಲ್ಲಿ ನಡಿಸು.’’ (ಕೀರ್ತನೆ 27:11) ಸಂತಾನಹರಣ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಏನೆಲ್ಲಾ ಒಳಗೂಡಿದೆ?
ಜನನ ನಿಯಂತ್ರಣಕ್ಕಾಗಿರುವ ಪುರುಷ ಸಂತಾನಹರಣ ಚಿಕಿತ್ಸೆಯನ್ನು ವಾಸೆಕ್ಟಮಿಯೆಂದು ಕರೆಯಲಾಗಿದೆ. ವೃಷಣಕೋಶದಲ್ಲಿರುವ ಎರಡು ಸಣ್ಣ ವೀರ್ಯಾಣು ಹುರಿಗಳನ್ನು ಅಥವಾ ನಾಳಗಳನ್ನು ಕತ್ತರಿಸಲಾಗುತ್ತದೆ ಮತ್ತು ಮುಚ್ಚಲಾಗುತ್ತದೆ. ಇದನ್ನು ಬೇರೆ ಬೇರೆ ವೈದ್ಯಕೀಯ ವಿಧಾನಗಳಲ್ಲಿ ಮಾಡಸಾಧ್ಯವಿದೆಯಾದರೂ, ವೃಷಣಗಳಿಂದ ವೀರ್ಯಾಣು ಹರಿಯುವದನ್ನು ಅಸಾಧ್ಯಗೊಳಿಸುವದೇ ಇದರ ಉದ್ದೇಶವಾಗಿದೆ. ಸ್ತ್ರೀ ಸಂತಾನಹರಣ ಚಿಕಿತ್ಸೆಯನ್ನು ನಾಳಗಳ ಜೋಡಣೆ (ಟ್ಯೂಬಲ್ ಲಿಗೇಶನ್) ಎಂದು ಕರೆಯಲಾಗಿದೆ. ಇದನ್ನು ಸಾಮಾನ್ಯವಾಗಿ ಅಂಡಾಶಯಗಳಿಂದ ಗರ್ಭಕೋಶಕ್ಕೆ ಅಂಡಗಳನ್ನು ಸಾಗಿಸುವ ಅಂಡಾಣುವಾಹಿ ನಾಳಗಳನ್ನು ಕತ್ತರಿಸುವ ಮತ್ತು ಕಟ್ಟುವ (ಅಥವಾ ಸುಡುವ) ಮೂಲಕ ಮಾಡಲಾಗುತ್ತದೆ
ಬಹಳ ಸಮಯದಿಂದಲೂ ಈ ಹೆಜ್ಜೆಗಳು ಶಾಶ್ವತವಾದದ್ದಾಗಿ, ಅಂದರೆ ಇವು ಬದಲಾಯಿಸಲಾರದ ಸಂತಾನಹರಣ ಚಿಕಿತ್ಸೆಗಳಾಗಿ ಪರಿಗಣಿಸಲಾಗಿತ್ತು. ಆದರೆ ಕೆಲವು ವ್ಯಕ್ತಿಗಳು ತಮ್ಮ ಹೆಜ್ಜೆಗಾಗಿ ಅಥವಾ ಹೊಸ ಪರಿಸ್ಥಿತಿಗಳ ಫಲಿತಾಂಶಗಳಿಗಾಗಿ ವಿಷಾದಿಸುತ್ತಾ, ವಾಸೆಕ್ಟಮಿ ಅಥವಾ ನಾಳಗಳ ಜೋಡಣೆಯನ್ನು ತೆರೆಯಲು ವೈದ್ಯಕೀಯ ಸಹಾಯವನ್ನು ಕೋರಿದ್ದಾರೆ. ಆಧುನಿಕ ಸಾಧನಗಳ ಆವಿಷ್ಕಾರದಿಂದಾಗಿ ಮತ್ತು ಮೈಕ್ರೋಸರ್ಜರಿಯಿಂದಾಗಿ, ಮರುಜೋಡಿಸುವ ಪ್ರಯತ್ನಗಳು ಯಶಸ್ವಿಯಾಗಿವೆ. ವಾಸೆಕ್ಟಮಿಯ ಸೂಕ್ಷ್ಮ ನಾಳಗಳ ವಿಭಾಗಿತ ತುದಿಗಳನ್ನು ಮರುಜೋಡಿಸುವುದರಲ್ಲಿ 50ರಿಂದ 70 ಪ್ರತಿಶತ ಯಶಸ್ಸನ್ನು ಆಯ್ದ ಅಭ್ಯರ್ಥಿಗಳೊಂದಿಗೆ ಹೊಂದುವುದು ಅಸಾಮಾನ್ಯವೇನಲ್ಲ. 60ರಿಂದ 80 ಪ್ರತಿಶತದಷ್ಟು ಯಶಸ್ಸು ಸ್ತ್ರೀಯರ ನಾಳ ಕಟ್ಟುವಿಕೆಯನ್ನು ಮರುಜೋಡಿಸುವುದರಿಂದ ಲಭಿಸುತ್ತದೆಂದು ಹೇಳಲಾಗಿದೆ. ಇದರ ಅರಿವುಳ್ಳ ಕೆಲವರು ಸಂತಾನಹರಣ ಚಿಕಿತ್ಸೆಯನ್ನು ಶಾಶ್ವತವಾದದ್ದಾಗಿ ವೀಕ್ಷಿಸುವ ಅಗತ್ಯವನ್ನು ಕಾಣುವುದಿಲ್ಲ. ವಾಸೆಕ್ಟಮಿ ಮತ್ತು ನಾಳಗಳ ಜೋಡಣೆಯನ್ನು ಗರ್ಭನಿರೋಧಕ ಮಾತ್ರೆಗಳು, ಶಿಶ್ನಕವಚಗಳು ಮತ್ತು ಪೆಸರಿಗಳ ವರ್ಗಕ್ಕೆ ಸೇರಿಸಬಹುದೆಂದು ಅವರು ನಂಬುತ್ತಾರೆ—ಗರ್ಭಧಾರಣೆಯನ್ನು ಬಯಸಿದಾಗ ನಿಲ್ಲಿಸಿಬಿಡಬಹುದಾದ ವಿಧಾನಗಳು. ಹೀಗಿದ್ದರೂ, ಕೆಲವು ಗಂಭೀರವಾದ ವಿಷಯಗಳು ಅಲಕ್ಷಿಸಲ್ಪಡಬಾರದು.
ಈ ಕೆಲವು ಅಂಶಗಳು, ಮತ್ತೆ ಒಂದುಗೂಡಿಸುವ ಆಸೆಗಳ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತವೆ. ಇವು ಸಂತಾನಹರಣ ಚಿಕಿತ್ಸೆಯನ್ನು ಮಾಡುವ ಸಮಯದಲ್ಲಿ ನಾಳಗಳಿಗಾಗುವ ಭಾರೀ ಹಾನಿ, ಕತ್ತರಿಸಲ್ಪಟ್ಟ ಅಥವಾ ಗಾಯಗೊಳಿಸಲ್ಪಟ್ಟ ನಾಳಗಳ ಒಟ್ಟು ಭಾಗಗಳು, ಚಿಕಿತ್ಸಾವಿಧಾನದ ಬಳಿಕ ಗತಿಸಿಹೋದ ವರ್ಷಗಳು, ಮತ್ತು ವಾಸೆಕ್ಟಮಿಯಲ್ಲಿಯಾದರೋ, ಗಂಡಸಿನ ವೀರ್ಯಾಣುವಿನ ಫಲವಾಗಿ ಸಿದ್ಧವಾಗಿರಸಾಧ್ಯವಿರುವ ಪ್ರತಿಕಾಯಜೀವಾಣುಗಳು. ಮೈಕ್ರೋಸರ್ಜರಿಯ ಸೌಲಭ್ಯಗಳು ಅನೇಕ ಕಡೆಗಳಲ್ಲಿ ಲಭ್ಯವಿಲ್ಲದಿರುವ ಅಥವಾ ಖರ್ಚುವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗದೇ ಹೋಗುವ ನಿಜತ್ವವನ್ನು ನಾವು ಅಲಕ್ಷಿಸಬಾರದು. ಹೀಗೆ, ಸಂತಾನಹರಣ ಚಿಕಿತ್ಸೆಯಿಂದ ಮತ್ತೆ ಒಂದುಗೂಡಿಸುವುದನ್ನು ಉತ್ಕಟವಾಗಿ ಬಯಸುವ ಅನೇಕರಿಗೆ, ಅದನ್ನು ಮಾಡಸಾಧ್ಯವಾಗುವುದಿಲ್ಲ. ಇಂಥವರಿಗೆ ಅದು ಅಂತಿಮ ಸ್ಥಿತಿಯಾಗಿರುತ್ತದೆ.a ಆದ್ದರಿಂದ, ಮತ್ತೆ ಒಂದುಗೂಡಿಸುವ ಬಗ್ಗೆ ಮೇಲೆ ಸೂಚಿಸಲಾದ ಅಂಕಿ-ಸಂಖ್ಯೆಗಳು ನೈಜತೆಯಲ್ಲಿ ಕೇವಲ ಸೈದ್ಧಾಂತಿಕವಾಗಿವೆಯೇ ಹೊರತು ವಿಶ್ವಾಸನೀಯ ಸರಾಸರಿಗಳಾಗಿರುವದಿಲ್ಲ.
ಕೆಲವು ನಿಜತ್ವಗಳು ವಾಸ್ತವಾಂಶಗಳ ಮೇಲೆ ಯೋಗ್ಯವಾಗಿಯೇ ಬೆಳಕನ್ನು ಚೆಲ್ಲುತ್ತವೆ. ವಾಸೆಕ್ಟಮಿಯ ಮೂಲಕ ಮರುಜೋಡಿಸುವುದರ ಕುರಿತು ಅಮೆರಿಕದಲ್ಲಿ ಪ್ರಕಟಿಸಲಾದ ಅಗ್ರಲೇಖನವು ಹೇಳಿಕೆ ನೀಡಿದ್ದೇನೆಂದರೆ, 12,000ಗಳಷ್ಟು ಡಾಲರುಗಳ ಈ ಶಸ್ತ್ರಚಿಕಿತ್ಸೆಯ ಬಳಿಕ, ‘‘ಕೇವಲ 63 ಪ್ರತಿಶತದಷ್ಟು ರೋಗಿಗಳಿಗೆ ಮಾತ್ರ ತಮ್ಮ ಸಂಗಾತಿಯೊಟ್ಟಿಗೆ ಕೂಡಿ ಗರ್ಭಧರಿಸಸಾಧ್ಯವಾಗುತ್ತದೆ.” ಅದೂ ಅಲ್ಲದೆ, “ವಾಸೆಕ್ಟಮಿಯನ್ನು ಮಾಡಿದ ಆರು ಪ್ರತಿಶತದಷ್ಟು ಗಂಡಸರು ಕಾಲಕ್ರಮೇಣ ಮರುಜೋಡಣೆಯನ್ನು ಆರಿಸುತ್ತಾರೆ.’’ ಮಧ್ಯ ಯೂರೋಪಿನ ಕುರಿತು ಜರ್ಮನಿಯಲ್ಲಿ ನಡೆದ ಅಧ್ಯಯನವೊಂದರಲ್ಲಿ ಕೆಲವು ಮೂರು ಪ್ರತಿಶತದಷ್ಟು ಗಂಡಸರು ಸಂತಾನಹರಣ ಚಿಕಿತ್ಸೆಯನ್ನು ಮಾಡಿದ ಸ್ವಲ್ಪ ಸಮಯದ ಬಳಿಕ ಮರುಜೋಡಿಸಲು ಮುಂಬರುತ್ತಿದ್ದಾರೆ. ಈ ಪ್ರಯತ್ನಗಳಲ್ಲಿ ಅರ್ಧದಷ್ಟು ಸಫಲವಾಗುತ್ತಿದ್ದರೂ, 98.5 ಪ್ರತಿಶತದಷ್ಟು ವಾಸೆಕ್ಟಮಿಯ ಚಿಕಿತ್ಸಾವಿಧಾನಗಳು ಶಾಶ್ವತ ಸಂತಾನಹರಣ ಚಿಕಿತ್ಸೆಯಾಗಿತ್ತೆಂಬುದನ್ನು ಅರ್ಥೈಸುತ್ತದೆ. ಅಲ್ಲದೆ, ಮೈಕ್ರೋಸರ್ಜನ್‌ಗಳು ಕೆಲವರೇ ಅಥವಾ ಒಬ್ಬರೂ ಇಲ್ಲದಿರುವ ಸ್ಥಳಗಳಲ್ಲಿ ಪ್ರಮಾಣಗಳು ಅಧಿಕವಾಗಿರುತ್ತದೆ.
ಸುಸಮಂಜಸವಾಗಿಯೇ, ಪುರುಷ ಅಥವಾ ಸ್ತ್ರೀ ಸಂತಾನಹರಣ ಚಿಕಿತ್ಸೆಯನ್ನು ತಾತ್ಕಾಲಿಕ ಜನನ ನಿಯಂತ್ರಣವೆಂಬಂತೆ ಹಗುರವಾಗಿ ಪರಿಗಣಿಸುವುದು ಅವಾಸ್ತವಿಕವಾಗಿದೆ. ಅಷ್ಟೇ ಅಲ್ಲ, ಯಥಾರ್ಥ ಕ್ರೈಸ್ತನಿಗಾದರೊ ಗಮನಿಸಬೇಕಾದ ಇನ್ನಿತರ ವಿಷಯಗಳು ಇವೆ.
ಸಂತಾನೋತ್ಪತ್ತಿ ಶಕ್ತಿಯು ನಮ್ಮ ಸೃಷ್ಟಿಕರ್ತನು ನೀಡಿದ ವರವಾಗಿದೆಯೆಂಬುದು ಪ್ರಮುಖ ಅಂಶವಾಗಿದೆ. ಆತನ ಮೂಲ ಉದ್ದೇಶದಲ್ಲಿ ಪರಿಪೂರ್ಣ ಮಾನವರು, “ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳು”ವ ಪುನರುತ್ಪಾದಿಸುವಿಕೆಯು ಒಳಗೊಂಡಿತು. (ಆದಿಕಾಂಡ 1:28) ಜಲಪ್ರಳಯವು ಭೂಮಿಯ ಜನಸಂಖ್ಯೆಯನ್ನು ಎಂಟಕ್ಕೆ ಕಡಿತಗೊಳಿಸಿದಾಗಲೂ ದೇವರು ಆ ಮೂಲ ಆಜ್ಞೆಯನ್ನು ಪುನರುಚ್ಚರಿಸಿದ್ದನು. (ಆದಿಕಾಂಡ 9:1) ದೇವರು ಆ ಆಜ್ಞೆಯನ್ನು ಇಸ್ರಾಯೇಲ್ ಜನಾಂಗಕ್ಕೆ ಪುನರುಚ್ಚರಿಸಲಿಲ್ಲವಾದರೂ, ಇಸ್ರಾಯೇಲ್ಯರು ಸಂತಾನಪಡೆಯುವುದನ್ನು ಬಹಳ ಅಪೇಕ್ಷಣೀಯ ವಿಷಯವಾಗಿ ಪರಿಗಣಿಸಿದರು.—1 ಸಮುವೇಲ 1:1-11; ಕೀರ್ತನೆ 128:3.
ಇಸ್ರಾಯೇಲ್ಯರಿಗೆ ದೇವರ ನಿಯಮದಲ್ಲಿ ಮಾನವ ಪುನರುತ್ಪಾದನೆಗಾಗಿರುವ ಆತನ ಪರಿಗಣನೆಯ ಸೂಚನೆಗಳು ಆವರಿಸಲ್ಪಟ್ಟಿದ್ದವು. ಉದಾಹರಣೆಗೆ, ಒಬ್ಬ ವಿವಾಹಿತ ಪುರುಷನು ತನ್ನ ವಂಶಾವಳಿಯನ್ನು ಸಾಗಿಸಲು ಮಗನನ್ನು ಉತ್ಪಾದಿಸುವ ಮುಂಚೆ ಸಾಯುವುದಾದರೆ, ಅಂಥವನ ಸಹೋದರನು ಮೈದುನಧರ್ಮದ ವಿವಾಹದ ಮೂಲಕ ಮಗುವನ್ನು ಹುಟ್ಟಿಸಬೇಕಿತ್ತು. (ಧರ್ಮೋಪದೇಶಕಾಂಡ 25:5) ಇನ್ನೂ ಹೆಚ್ಚಾಗಿ, ತನ್ನ ಗಂಡನನ್ನು ಜಗಳವೊಂದರಿಂದ ಬಿಡಿಸಲು ಪ್ರಯತ್ನಿಸುವ ಅವನ ಹೆಂಡತಿಯ ಕುರಿತಿರುವ ನಿಯಮವು ಹೆಚ್ಚು ಸಮಯೋಚಿತವಾದದ್ದಾಗಿದೆ. ಒಂದು ವೇಳೆ, ಆಕೆಯು ಗಂಡನ ವಿರೋಧಿಯ ಪ್ರಧಾನಸ್ಥಾನವನ್ನು ಬಿಗಿಯಾಗಿ ಹಿಡಿದುಕೊಂಡರೆ, ಅವಳ ಕೈಯನ್ನು ಕಡಿದುಹಾಕಬೇಕಾಗುತ್ತಿತ್ತು; ಮಹತ್ವವುಳ್ಳದ್ದಾಗಿ, ಅವಳ ಹಾಗೂ ಅವಳ ಗಂಡನ ಸಂತಾನೋತ್ಪಾದಕ ಅಂಗಗಳಿಗೆ, ಕಣ್ಣಿಗೆ ಪ್ರತಿಯಾಗಿ ಕಣ್ಣಿನಂಥ ಶಿಕ್ಷೆಯನ್ನು ದೇವರು ಅವಶ್ಯಪಡಿಸಲಿಲ್ಲ. (ಧರ್ಮೋಪದೇಶಕಾಂಡ 25:11, 12) ಈ ನಿಯಮವು ಸ್ಪಷ್ಟವಾಗಿ, ಸಂತಾನೋತ್ಪಾದಕ ಅಂಗಗಳಿಗಾಗಿ ಗೌರವವನ್ನು ಉಂಟುಮಾಡುತ್ತಿತ್ತು; ಅವನ್ನು ಅನಾವಶ್ಯವಾಗಿ ಭಂಗಪಡಿಸಬಾರದಿತ್ತು.b
ಕ್ರೈಸ್ತರು ಇಸ್ರಾಯೇಲ್ಯ ನಿಯಮದ ಕೆಳಗೆ ಇಲ್ಲದಿರುವುದರಿಂದ, ಧರ್ಮೋಪದೇಶಕಾಂಡ 25:11, 12ರಲ್ಲಿ ಕೊಡಲ್ಪಟ್ಟಿರುವ ನಿಬಂಧನೆಯು ಅವರನ್ನು ಬದ್ಧಪಡಿಸುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಯೇಸುವು ತನ್ನ ಶಿಷ್ಯರು ಮದುವೆಯಾಗಲೇಬೇಕೆನ್ನುವ ಇಲ್ಲವೇ ಸಾಧ್ಯವಾದಷ್ಟು ಹೆಚ್ಚು ಮಕ್ಕಳನ್ನು ಪಡೆಯಬೇಕೆಂಬುದನ್ನು ಆದೇಶಿಸಲಿಲ್ಲ ಅಥವಾ ಅರ್ಥೈಸಲಿಲ್ಲವಾದರೂ, ಅನೇಕ ದಂಪತಿಗಳು ಜನನ ನಿಯಂತ್ರಣದ ಯಾವುದೇ ವಿಧಾನದ ಬಳಸುವಿಕೆಯನ್ನು ನಿರ್ಧರಿಸುವಾಗ ಇದನ್ನು ಪರ್ಯಾಲೋಚಿಸುತ್ತಾರೆ. (ಮತ್ತಾಯ 19:10-12) ಅಪೊಸ್ತಲ ಪೌಲನು ಕಾಮಾಸಕ್ತಿಯನ್ನು ತೋರಿಸುವ “ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆರು”ವುದನ್ನು ಉತ್ತೇಜಿಸಿದನು. (1 ತಿಮೊಥೆಯ 5:11-14) ಕ್ರೈಸ್ತರು ಮಕ್ಕಳನ್ನು ಹೆರುವ ತಮ್ಮ ಸಂತಾನೋತ್ಪತ್ತಿಯ ಸಂಭವನೀಯತೆಯನ್ನು ಸ್ವಇಚ್ಚೆಯಿಂದ ತ್ಯಾಗಮಾಡಿ, ಹೀಗೆ ಶಾಶ್ವತ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವುದನ್ನು ಪೌಲನು ತಿಳಿಸಲಿಲ್ಲ.
ದೇವರು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಆದರದಿಂದ ಕಾಣುತ್ತಾನೆಂಬ ಇಂಥ ಸೂಚನೆಗಳನ್ನು ತೂಗಿ ನೋಡುವುದು ಕ್ರೈಸ್ತರಿಗೆ ಬಹಳ ಉತ್ತಮ. ಪ್ರತಿ ದಂಪತಿಗಳು ಕುಟುಂಬ ಯೋಜನೆಯ ತಕ್ಕದಾದ ಯಾವ ವಿಧಾನವನ್ನು ಆರಿಸಿ ಅದನ್ನು ಹೇಗೆ ಬಳಸಬಹುದೆನ್ನುವುದನ್ನು ನಿರ್ಧರಿಸಬೇಕು. ಮುಂದೆ ಗರ್ಭವತಿಯಾಗುವಲ್ಲಿ, ತಾಯಿ ಅಥವಾ ಮಗು ಗಂಭೀರ ವೈದ್ಯಕೀಯ ಅಪಾಯಗಳನ್ನು, ಹೌದು ಸಂಭಾವ್ಯ ಮರಣಕ್ಕೂ ತುತ್ತಾಗುವ ದೃಢ ವೈದ್ಯಕೀಯ ಆಶ್ವಾಸನೆಗಳಿದ್ದರೆ, ಅವರ ನಿರ್ಣಯವು ವಿಶೇಷ ಗುರುತರವಾಗಿರುವುದು ಗ್ರಾಹ್ಯ. ಇಂತಹ ಸನ್ನಿವೇಶದಲ್ಲಿ ತಾಯಿಯ (ಈಗಾಗಲೇ ಬೇರೆ ಮಕ್ಕಳನ್ನು ಪಡೆದಿರುವವಳು) ಜೀವವನ್ನು ಅಪಾಯಕ್ಕೊಳಪಡಿಸಸಾಧ್ಯವಿರುವ ಗರ್ಭಧಾರಣೆಯನ್ನು ತಡೆಯಲು ಖಾತ್ರಿಗೊಳಿಸುವುದನ್ನು ಅಥವಾ ನಂತರ ಹುಟ್ಟಸಾಧ್ಯವಿರುವ ಮಗುವೊಂದರ ಜೀವಕ್ಕೆ ಅಪಾಯಕರವಾಗಿರುವ ಆರೋಗ್ಯ ಸಮಸ್ಯೆಯೊಂದಿಗೆ ಹುಟ್ಟಬಾರದೆಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವರು ಈ ಹಿಂದೆ ವಿವರಿಸಲಾದ ಸಂತಾನಹರಣ ಚಿಕಿತ್ಸೆಯನ್ನು ಇಷ್ಟವಿಲ್ಲದೆ ಮಾಡಿಸಿಕೊಂಡಿರುತ್ತಾರೆ.
ಆದರೆ ಇಂಥ ಅಪೂರ್ವ ಹಾಗೂ ಅಸಾಮಾನ್ಯ ಅಪಾಯವನ್ನು ಎದುರಿಸದಿರುವವರು ‘ಸ್ವಸ್ಥಚಿತ್ತ’ವನ್ನು ನಿಶ್ಚಿತವಾಗಿ ಉಪಯೋಗಿಸಬಯಸುವರು ಮಾತ್ರವಲ್ಲ, ತಮ್ಮ ಯೋಚನೆ ಮತ್ತು ಕೃತ್ಯಗಳಲ್ಲಿ ಸಂತಾನೋತ್ಪಾದಕ ಸಾಮರ್ಥ್ಯಕ್ಕಾಗಿ ದೇವದತ್ತ ಗೌರವದಿಂದ ರೂಪಿಸಲ್ಪಡುತ್ತಾರೆ. (1 ತಿಮೊಥೆಯ 3:2; ತೀತ 1:8; 2:2, 5-8) ಇದು ಶಾಸ್ತ್ರೀಯ ಸೂಚನೆಗಳಿಗೆ ಪ್ರೌಢ ಸೂಕ್ಷ್ಮತೆಯನ್ನು ಪ್ರತಿಬಿಂಬಿಸುವುದು. ಇದೆಲ್ಲದರಲ್ಲೂ, ದೇವರ ಮೌಲ್ಯಗಳಿಗೆ ಒಬ್ಬ ಕ್ರೈಸ್ತನು ತಿರಸ್ಕಾರದಿಂದ ಅಗೌರವಿಸುವುದು ಬಹಿರಂಗವಾಗಿ ಗೊತ್ತಾಗುವಲ್ಲಿ ಆಗೇನು? ಬೈಬಲಿನೊಂದಿಗೆ ಹೊಂದಿಕೆಯಲ್ಲಿ ನಿರ್ಣಯಗಳನ್ನು ಮಾಡುವ ಖ್ಯಾತಿ ಹೊಂದಿದ್ದು, ಅವನು (ಅಥವಾ ಅವಳು) ಉತ್ತಮ ಮಾದರಿಯಾಗಿ ಇರುವನೋ ಎಂಬುದಾಗಿ ಇತರರು ಸಂದೇಹಿಸದಿರುವರೋ? ಒಬ್ಬನ ಖ್ಯಾತಿಯ ಮೇಲೆ ಇಂತಹ ಕ್ಷೋಭೆಗೊಳಿಸುವ ಕಳಂಕವು, ನಿಶ್ಚಯವಾಗಿಯೂ, ಸೇವಕನು ವಿಶೇಷ ಸೇವಾ ಸುಯೋಗಗಳಿಗೆ ಅರ್ಹತೆ ಪಡೆಯುವುದನ್ನು ಬಾಧಿಸಬಲ್ಲದು. ಹೀಗಿದ್ದರೂ ಈ ಚಿಕಿತ್ಸಾವಿಧಾನವನ್ನು ಅಜ್ಞಾನದಿಂದ ಕೈಗೊಂಡಿರುವವನಿಗೆ ಬಾಧೆಪಡುವ ಅಗತ್ಯವಿಲ್ಲ.—1 ತಿಮೊಥೆಯ 3:7.
[ಅಧ್ಯಯನ ಪ್ರಶ್ನೆಗಳು]
a ‘‘ವಾಸೆಕ್ಟಮಿಯಲ್ಲಿ ನಾಳಗಳ ಪುನಃ ಜೋಡಣೆಯ ಶಸ್ತ್ರಚಿಕಿತ್ಸಾ ಪ್ರಯತ್ನಗಳಲ್ಲಿ ಕಡಿಮೆಪಕ್ಷ 40 ಪ್ರತಿಶತದಷ್ಟು ಯಶಸ್ಸಿನ ಪ್ರಮಾಣವಿರುತ್ತದೆ, ಮತ್ತು ಸುಧಾರಿಸಿದ ಮೈಕ್ರೋಸರ್ಜಿಕಲ್ ಚಿಕಿತ್ಸಾವಿಧಾನದೊಂದಿಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಗಳಿಸಬಹುದೆನ್ನುವುದಕ್ಕೆ ಕೆಲವು ರುಜುವಾತಿದೆ. ಹೀಗಿದ್ದರೂ, ವಾಸೆಕ್ಟಮಿಯ ಮೂಲಕ ಮಾಡಲಾದ ಸಂತಾನಹರಣ ಚಿಕಿತ್ಸೆಯು ಶಾಶ್ವತವೆಂದು ಪರಿಗಣಿಸಲ್ಪಡಬೇಕು.” (ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕಾ) ‘‘ಸಂತಾನಹರಣ ಚಿಕಿತ್ಸೆಯು ಶಾಶ್ವತ ವಿಧಾನವಾಗಿ ಪರಿಗಣಿಸಲ್ಪಡತಕ್ಕದ್ದು. ರೋಗಿಯು ಮರುಜೋಡಣೆಯ ಬಗ್ಗೆ ಕೇಳಿರಬಹುದಾದರೂ, ವಿಭಜಿಸಿದ ನಾಳಗಳ ಮತ್ತೆ ಜೋಡಿಸುವಿಕೆಯ ಶಸ್ತ್ರಕ್ರಿಯೆಯು ದುಬಾರಿಯಾಗಿರುತ್ತದೆ ಮತ್ತು ಯಶಸ್ಸಿನ ಖಾತ್ರಿಯನ್ನು ಕೊಡಸಾಧ್ಯವಿಲ್ಲ. ಸಂತಾನಹರಣ ಚಿಕಿತ್ಸೆಯಲ್ಲಿ ನಾಳಗಳ ಮರುಜೋಡಣೆಯನ್ನು ಮಾಡುವ ಹೆಂಗಸರಿಗಾದರೋ, ಅಪಸ್ಥಾನೀಯ ಗರ್ಭಾವಸ್ಥೆಯ ಅಪಾಯವು ಅಧಿಕವಾಗಿರುತ್ತದೆ.”—ಜೂನ್ 1998, ಸಮಕಾಲೀನ ಪ್ರಸವವಿದ್ಯಾಪಾರಂಗತ/ಸ್ತ್ರೀರೋಗತಜ್ಞ (ಇಂಗ್ಲಿಷ್).
b ತನ್ನ ಜನನಾಂಗಗಳನ್ನು ತೀವ್ರವಾಗಿ ಹೊಡಿಸಿಕೊಂಡವನು ದೇವರ ಸಭೆಯಲ್ಲಿ ಬರಸಾಧ್ಯವಿರಲಿಲ್ಲವೆಂಬುದು ವಿಷಯಕ್ಕೆ ಸಂಬಂಧಪಟ್ಟ ಇನ್ನೊಂದು ನಿಯಮವಾಗಿ ಕಾಣಬಹುದು. (ಧರ್ಮೋಪದೇಶಕಾಂಡ 23:1) ಹೀಗಿದ್ದರೂ, ಶಾಸ್ತ್ರಗಳಲ್ಲಿ ಒಳನೋಟ (ಇಂಗ್ಲಿಷ್) ಗಮನಿಸಿದ್ದೇನೆಂದರೆ, ‘‘ಸಲಿಂಗಕಾಮವೇ ಮುಂತಾದ ಅನೈತಿಕ ಉದ್ದೇಶಗಳಿಗಾಗಿ ಬೇಕುಬೇಕೆಂದೇ ಬೀಜಹೊಡಿಸಿಕೊಳ್ಳುವುದಕ್ಕೆ’’ ಇದು ಸೂಚಿಸುತ್ತದೆ. ಆದುದರಿಂದ, ಆ ನಿಯಮದಲ್ಲಿ ಬೀಜಒಡೆಯುವಿಕೆ ಅಥವಾ ಜನನ ನಿಯಂತ್ರಣಕ್ಕೆ ಸಮಾನವಾಗಿರುವ ಯಾವುದೂ ಒಳಗೂಡಿರುವುದಿಲ್ಲ. ಒಳನೋಟವು ಮತ್ತೂ ಹೇಳುವುದು: “ನಪುಂಸಕರನ್ನು ತನ್ನ ಸೇವಕರಾಗಿ ಸ್ವೀಕರಿಸುವ ಸಮಯವೊಂದು ಬರಲಿತ್ತೆಂದು ಯೆಹೋವನು ಸಾಂತ್ವನದಾಯಕವಾಗಿ ಮುಂತಿಳಿಸಿದನು ಮಾತ್ರವಲ್ಲ ವಿಧೇಯರಾಗಿ ನಡೆದಲ್ಲಿ, ಹೆಣ್ಣು ಗಂಡುಮಕ್ಕಳಿಗಿಂತಲೂ ಮಿಗಿಲಾದ ಹೆಸರನ್ನು ಇವರು ಪಡೆಯಲಿದ್ದರು. ಯೇಸುಕ್ರಿಸ್ತನು ನಿಯಮಶಾಸ್ತ್ರವನ್ನು ರದ್ದುಗೊಳಿಸುವುದರೊಂದಿಗೆ, ಈ ಹಿಂದಿನ ಸ್ಥಾನವು ಇಲ್ಲವೆ ಸ್ಥಿತಿಯು ಏನೇ ಆಗಿರಲಿ, ನಂಬಿಕೆಯನ್ನು ಪ್ರದರ್ಶಿಸುವ ವ್ಯಕ್ತಿಗಳೆಲ್ಲರೂ ದೇವರ ಆತ್ಮಿಕ ಪುತ್ರರಾಗಸಾಧ್ಯತೆಯಿದೆ. ದೈಹಿಕ ವ್ಯತ್ಯಾಸಗಳು ತೆಗೆಯಲ್ಪಟ್ಟವು.—ಯೆಶಾಯ 56:4, 5; ಯೋಹಾನ 1:12.’’