ಸೃಷ್ಟಿಕರ್ತನು ನಿಮ್ಮ ಜೀವಿತಕ್ಕೆ ಅರ್ಥವನ್ನು ಕೂಡಿಸಬಲ್ಲನು
“ಅವು ಯೆಹೋವನ ನಾಮವನ್ನು ಸ್ತುತಿಸಲಿ; ಆತನು ಅಪ್ಪಣೆಕೊಡಲು ಅವು ಉಂಟಾದವು.”—ಕೀರ್ತನೆ 148:5.
1, 2. (ಎ) ಯಾವ ಪ್ರಶ್ನೆಯನ್ನು ನಾವು ಪರಿಗಣಿಸಬೇಕು? (ಬಿ) ಯೆಶಾಯನ ಪ್ರಶ್ನೆಯಲ್ಲಿ ಸೃಷ್ಟಿಯು ಹೇಗೆ ಒಳಗೊಂಡಿದೆ?
“ನೀವು ಗ್ರಹಿಸಲಿಲ್ಲವೋ?” ಎಂಬ ಪ್ರಶ್ನೆಯು, ‘ಏನನ್ನು ಗ್ರಹಿಸಲಿಲ್ಲ?’ ಎಂಬ ಪ್ರತಿಕ್ರಿಯೆಗೆ ಅನೇಕರನ್ನು ನಡೆಸುವಂತಹ ಪ್ರಶ್ನೆಯಾಗಿ ತೋರಬಹುದು. ಆದರೆ, ಅದೊಂದು ಗಂಭೀರ ಪ್ರಶ್ನೆಯಾಗಿದೆ. ಮತ್ತು ಅದರ ಹಿನ್ನೆಲೆಯನ್ನು, ಅಂದರೆ ಬೈಬಲಿನ ಯೆಶಾಯ ಎಂಬ ಪುಸ್ತಕದ 40ನೆಯ ಅಧ್ಯಾಯವನ್ನು ಗಮನಿಸುವ ಮೂಲಕ, ನಾವು ಉತ್ತರವನ್ನು ಬಹಳವಾಗಿ ಗಣ್ಯಮಾಡಬಹುದು. ಗತಕಾಲದ ಹೀಬ್ರು ವ್ಯಕ್ತಿಯಾದ ಯೆಶಾಯನು ಅದನ್ನು ಬರೆದ ಕಾರಣ, ಅದೊಂದು ಹಳೆಯ ಪ್ರಶ್ನೆಯಾಗಿದೆ. ಆದರೂ, ಅದು ನಿಮ್ಮ ಜೀವಿತದ ತಿರುಳಿಗೆ ಸಂಬಂಧಿಸುವ ಒಂದು ಅತ್ಯಾಧುನಿಕ ಪ್ರಶ್ನೆಯೂ ಆಗಿದೆ.
2 ಯೆಶಾಯ 40:28ರಲ್ಲಿ ದಾಖಲಿಸಲ್ಪಟ್ಟಿರುವ ಈ ಪ್ರಾಮುಖ್ಯ ಪ್ರಶ್ನೆಯು ನಮ್ಮ ಗಂಭೀರವಾದ ಪರಿಗಣನೆಗೆ ಅರ್ಹವಾಗಿದೆ: “ನೀವು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ [“ಸೃಷ್ಟಿಕರ್ತನು,” NW] ಆಗಿದ್ದಾನೆ.” ಹೀಗೆ, ‘ಗ್ರಹಿಸಿಕೊಳ್ಳುವುದು’ ಭೂಮಿಯ ಸೃಷ್ಟಿಕರ್ತನನ್ನು ಒಳಗೊಂಡಿತು, ಮತ್ತು ಪೂರ್ವಾಪರವು ತೋರಿಸುವಂತೆ ಭೂಮಿಗಿಂತಲೂ ಹೆಚ್ಚಿನ ವಿಷಯಗಳು ಇದರಲ್ಲಿ ಸೇರಿವೆ. ಹಿಂದಿನ ಎರಡು ವಚನಗಳಲ್ಲಿ ಯೆಶಾಯನು ನಕ್ಷತ್ರಗಳ ಬಗ್ಗೆ ಬರೆದನು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; . . . ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.”
3. ನಿಮಗೆ ಸೃಷ್ಟಿಕರ್ತನ ಕುರಿತು ಸಾಕಷ್ಟು ತಿಳಿದಿದ್ದರೂ, ಇನ್ನೂ ಹೆಚ್ಚನ್ನು ತಿಳಿದುಕೊಳ್ಳಲು ನೀವು ಏಕೆ ಬಯಸಬೇಕು?
3 ಹೌದು, “ನೀವು ಗ್ರಹಿಸಲಿಲ್ಲವೋ?” ಎಂಬ ಪ್ರಶ್ನೆಯು ನಿಜವಾಗಿ ನಮ್ಮ ವಿಶ್ವದ ಸೃಷ್ಟಿಕರ್ತನ ಕುರಿತಾಗಿದೆ. ಯೆಹೋವ ದೇವರೇ “ಭೂಮಿಯ ಕಟ್ಟಕಡೆಗಳ ಸೃಷ್ಟಿಕರ್ತನು” ಎಂಬ ವಿಷಯದಲ್ಲಿ ನೀವು ವೈಯಕ್ತಿಕವಾಗಿ ಮನಗಾಣಿಸಲ್ಪಟ್ಟಿರಬಹುದು. ಆತನ ವ್ಯಕ್ತಿತ್ವ ಹಾಗೂ ಮಾರ್ಗಗಳ ಕುರಿತಾಗಿಯೂ ನಿಮಗೆ ಹೆಚ್ಚು ತಿಳಿದಿರಬಹುದು. ಆದರೆ, ಸೃಷ್ಟಿಕರ್ತನ ಅಸ್ತಿತ್ವವನ್ನೇ ಸಂದೇಹಿಸುವ ಮತ್ತು ಆತನು ಯಾವ ರೀತಿಯ ವ್ಯಕ್ತಿಯೆಂದು ಸ್ಪಷ್ಟವಾಗಿ ಅರಿಯದ ಒಬ್ಬ ಸ್ತ್ರೀ ಇಲ್ಲವೆ ಪುರುಷನನ್ನು ನೀವು ಭೇಟಿಯಾಗುವಲ್ಲಿ ಆಗೇನು? ಅಂತಹ ಒಂದು ಭೇಟಿಯು ನಿಮ್ಮನ್ನು ಆಶ್ಚರ್ಯಗೊಳಿಸಬಾರದು, ಏಕೆಂದರೆ ಕೋಟಿಗಟ್ಟಲೆ ಜನರು ಸೃಷ್ಟಿಕರ್ತನನ್ನು ಅರಿಯದವರೂ ನಂಬದವರೂ ಆಗಿದ್ದಾರೆ.—ಕೀರ್ತನೆ 14:1; 53:1.
4. (ಎ) ಸೃಷ್ಟಿಕರ್ತನನ್ನು ಈ ಸಮಯದಲ್ಲಿ ಪರಿಗಣಿಸುವುದು ಏಕೆ ಸೂಕ್ತವಾಗಿದೆ? (ಬಿ) ಯಾವ ಉತ್ತರಗಳನ್ನು ವಿಜ್ಞಾನವು ನೀಡಸಾಧ್ಯವಿಲ್ಲ?
4 ವಿಶ್ವ ಹಾಗೂ ಜೀವದ ಆರಂಭದ ಕುರಿತಿರುವ ಪ್ರಶ್ನೆಗಳಿಗೆ ವಿಜ್ಞಾನವು ಉತ್ತರಗಳನ್ನು ನೀಡುವುದು (ಇಲ್ಲವೆ ಕಂಡುಕೊಳ್ಳುವುದು) ಎಂದು ಭಾವಿಸುವ ಅನೇಕ ಸಂದೇಹವಾದಿಗಳನ್ನು ಶಾಲೆಯು ಸೃಷ್ಟಿಸುತ್ತದೆ. ಜೀವದ ಉಗಮ ಎಂಬ ಇಂಗ್ಲಿಷ್ ಪುಸ್ತಕದಲ್ಲಿ (ಮೂಲ ಫ್ರೆಂಚ್ ತಲೆಬರಹವು, ಓ ಆರೀಸೀನ್ ಡಿ ಲೇವೀ ಆಗಿದೆ) ಗ್ರಂಥಕರ್ತರಾದ ಅಸಾನ್ ಮತ್ತು ಲೆನೆ ಗಮನಿಸುವುದು: “ಇಪ್ಪತ್ತೊಂದನೆಯ ಶತಮಾನದ ಆರಂಭವಾಗಿರುವ ಈ ಸಮಯದಲ್ಲೂ ಜೀವದ ಉಗಮದ ಕುರಿತು ವಾದವಿವಾದಗಳಿವೆ. ಪರಿಹರಿಸಲು ಇಷ್ಟೊಂದು ಕ್ಲಿಷ್ಟಕರವಾಗಿರುವ ಈ ಸಮಸ್ಯೆಯು, ಅಪರಿಮಿತ ಅಂತರಿಕ್ಷದಿಂದ ಹಿಡಿದು ಭೌತವಸ್ತುವಿನ ಸೂಕ್ಷ್ಮಾತಿಸೂಕ್ಷ್ಮತೆಯ ವರೆಗೆ ಎಲ್ಲ ಕ್ಷೇತ್ರಗಳಲ್ಲಿ ತನಿಖೆಗಳನ್ನು ಅಗತ್ಯಪಡಿಸುತ್ತದೆ. ಹಾಗಿದ್ದರೂ, “ಪ್ರಶ್ನೆಯು ಉತ್ತರಿಸಲ್ಪಡದೆ ಉಳಿಯುತ್ತದೆ” ಎಂಬ ಕೊನೆಯ ಅಧ್ಯಾಯವು ಒಪ್ಪಿಕೊಳ್ಳುವುದು: “ಭೂಮಿಯ ಮೇಲೆ ಜೀವವು ಹೇಗೆ ಕಾಣಿಸಿಕೊಂಡಿತು? ಎಂಬ ಪ್ರಶ್ನೆಗೆ ಕೆಲವು ವೈಜ್ಞಾನಿಕ ಉತ್ತರಗಳನ್ನು ನಾವು ಕಂಡುಹಿಡಿದಿದ್ದೇವೆ. ಆದರೆ ಜೀವವು ಏಕೆ ಕಾಣಿಸಿಕೊಂಡಿತು? ಜೀವಕ್ಕೆ ಒಂದು ಗುರಿಯಿದೆಯೊ? ಈ ಪ್ರಶ್ನೆಗಳಿಗೆ ವಿಜ್ಞಾನವು ಉತ್ತರ ನೀಡುವುದಿಲ್ಲ. ಅದು ಕೇವಲ ‘ಹೇಗೆ’ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ‘ಹೇಗೆ’ ಮತ್ತು ‘ಏಕೆ’ ಎಂಬುದು ತೀರ ಭಿನ್ನವಾದ ಎರಡು ಪ್ರಶ್ನೆಗಳು. . . . ‘ಏಕೆ’ ಎಂಬ ಪ್ರಶ್ನೆಗೆ, ತತ್ವಜ್ಞಾನ, ಧರ್ಮ, ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಉತ್ತರವನ್ನು ಕಂಡುಕೊಳ್ಳಬೇಕು.”
ಉತ್ತರಗಳನ್ನು ಮತ್ತು ಅರ್ಥವನ್ನು ಕಂಡುಕೊಳ್ಳುವುದು
5. ಸೃಷ್ಟಿಕರ್ತನ ಕುರಿತು ಹೆಚ್ಚನ್ನು ಕಲಿಯುವುದರಿಂದ ಯಾವ ರೀತಿಯ ಜನರು ವಿಶೇಷವಾಗಿ ಪ್ರಯೋಜನ ಪಡೆದುಕೊಳ್ಳಬಹುದು?
5 ಹೌದು, ಜೀವವು ಏಕೆ ಅಸ್ತಿತ್ವದಲ್ಲಿದೆ, ಮತ್ತು ವಿಶೇಷವಾಗಿ ನಾವು ಏಕೆ ಇಲ್ಲಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಬಯಸುತ್ತೇವೆ. ಅಲ್ಲದೆ, ಸೃಷ್ಟಿಕರ್ತನು ಇಲ್ಲವೆಂದು ತೀರ್ಮಾನಿಸಿರುವ ಹಾಗೂ ಆತನ ಮಾರ್ಗಗಳ ಕುರಿತು ಕೊಂಚವನ್ನೇ ಅರಿತಿರುವ ಜನರಲ್ಲಿ ನಾವು ಆಸಕ್ತರಾಗಿರಬೇಕು. ಇಲ್ಲವೆ ಯಾರ ಹಿನ್ನೆಲೆಯು ಬೈಬಲು ಪ್ರಸ್ತುತಪಡಿಸುವ ದೇವರ ಪರಿಕಲ್ಪನೆಗಿಂತಲೂ ತೀರ ಭಿನ್ನವಾಗಿದೆಯೊ ಅಂಥವರನ್ನು ಜ್ಞಾಪಿಸಿಕೊಳ್ಳಿ. ಎಲ್ಲಿ ಹೆಚ್ಚಿನ ಜನರು ಒಬ್ಬ ವೈಯಕ್ತಿಕ ದೇವರ ಕುರಿತು, ಅಂದರೆ ಒಂದು ಆಕರ್ಷಕ ವ್ಯಕ್ತಿತ್ವವಿರುವ ನಿಜವಾದ ವ್ಯಕ್ತಿಯ ಕುರಿತು ನೆನಸುವುದಿಲ್ಲವೋ, ಅಂತಹ ಸ್ಥಳಗಳಲ್ಲಿ ಇಲ್ಲವೆ ಪ್ರಾಚ್ಯ ದೇಶಗಳಲ್ಲಿ ಕೋಟ್ಯಾನುಕೋಟಿ ಜನರು ಹುಟ್ಟಿ ಬೆಳೆದಿದ್ದಾರೆ. ಅಂತಹವರಿಗೆ “ದೇವರು” ಎಂಬ ಪದವು, ಒಂದು ಅಸ್ಪಷ್ಟವಾದ ಶಕ್ತಿ ಇಲ್ಲವೆ ಅಮೂರ್ತವಾದ ಕಾರಣದ ಚಿತ್ರಣವನ್ನು ಮೂಡಿಸುತ್ತದೆ. ಅವರು ‘ಸೃಷ್ಟಿಕರ್ತನನ್ನು’ ಇಲ್ಲವೆ ಆತನ ಮಾರ್ಗಗಳನ್ನು ‘ಗ್ರಹಿಸಿಕೊಂಡಿರುವುದಿಲ್ಲ.’ ಅವರು ಮತ್ತು ತದ್ರೀತಿಯ ನೋಟವುಳ್ಳ ಕೋಟ್ಯಂತರ ಜನರು, ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬುವಂತಾದರೆ, ಅನಂತ ಪ್ರತೀಕ್ಷೆಗಳೊಂದಿಗೆ ಅವರು ಎಂತಹ ಪ್ರಯೋಜನಗಳನ್ನು ಪಡೆದುಕೊಳ್ಳಬಲ್ಲರು! ಅವರು ಕೂಡ ಜೀವಿತದಲ್ಲಿರುವ ನಿಜಾರ್ಥ, ನಿಜ ಉದ್ದೇಶ ಹಾಗೂ ಮನಃಶಾಂತಿಯಂತಹ ವಿರಳವಾಗಿರುವ ವಿಷಯಗಳನ್ನು ಅನುಭವಿಸಸಾಧ್ಯವಿದೆ.
6. ಪಾಲ್ ಗೋಗ್ಯನ್ನ ಅನುಭವ ಮತ್ತು ಅವನ ಚಿತ್ರಕಲೆಗಳಲ್ಲೊಂದಕ್ಕೆ ಅನೇಕರ ಜೀವಿತವು ಹೇಗೆ ಸದೃಶವಾದದ್ದಾಗಿದೆ?
6 ದೃಷ್ಟಾಂತಕ್ಕೆ: 1891ರಲ್ಲಿ ಫ್ರೆಂಚ್ ಚಿತ್ರಗಾರ ಪಾಲ್ ಗೋಸ್ಯಾನ್, ಫ್ರೆಂಚ್ ಪಾಲಿನೀಷಿಯದ ಒಂದು ಸಾಕ್ಷಾತ್ ಪ್ರಮೋದವನದಲ್ಲಿ ಸಂತುಷ್ಟಕರ ಜೀವಿತವನ್ನು ಕಂಡುಕೊಳ್ಳಲು ಹೋದನು. ಆದರೆ ಅವನ ಗತಕಾಲದ ನೀತಿಗೆಟ್ಟ ಜೀವನಶೈಲಿಯು ಅವನಿಗೂ ಇತರರಿಗೂ ವ್ಯಾಧಿಯನ್ನು ತಂದಿತು. ಮರಣವು ಸಮೀಪಿಸುತ್ತಿರುವುದನ್ನು ಗ್ರಹಿಸಿದ ಅವನು, ಒಂದು ದೊಡ್ಡ ತೈಲಚಿತ್ರವನ್ನು ಬಿಡಿಸಿದನು. ಅದರಲ್ಲಿ ‘ಜೀವನವನ್ನು ಒಂದು ಮಹಾ ರಹಸ್ಯವಾಗಿ ಅರ್ಥನಿರೂಪಿಸಿದನು.’ ಗೋಗ್ಯಾನ್ ಆ ಚಿತ್ರಕಲೆಯನ್ನು ಏನೆಂದು ಹೆಸರಿಸಿದನೆಂದು ನಿಮಗೆ ಗೊತ್ತೊ? “ನಾವು ಎಲ್ಲಿಂದ ಬರುತ್ತೇವೆ? ನಾವು ಏನಾಗಿದ್ದೇವೆ? ನಾವು ಎಲ್ಲಿಗೆ ಹೋಗುತ್ತಿದ್ದೇವೆ?” ಇತರರು ಇದೇ ರೀತಿಯ ಪ್ರಶ್ನೆಗಳನ್ನು ಕೇಳಿರುವುದನ್ನು ನೀವು ಆಲಿಸಿದ್ದಿರಬಹುದು. ಅನೇಕರು ಕೇಳುತ್ತಾರೆ. ಆದರೆ ಅವರು ತೃಪ್ತಿದಾಯಕ ಉತ್ತರಗಳನ್ನು, ಜೀವಿತದಲ್ಲಿ ನಿಜಾರ್ಥವನ್ನು ಕಂಡುಕೊಳ್ಳದಿದ್ದಾಗ, ಅವರು ಎಲ್ಲಿಗೆ ಹೋಗಸಾಧ್ಯವಿದೆ? ಅವರ ಜೀವಿತಕ್ಕೂ ಪ್ರಾಣಿಗಳ ಜೀವಿತಕ್ಕೂ ಬಹಳ ವ್ಯತ್ಯಾಸವೇನೂ ಇಲ್ಲವೆಂದು ಅವರು ತೀರ್ಮಾನಿಸಬಹುದು.—2 ಪೇತ್ರ 2:12.a
7, 8. ವಿಜ್ಞಾನದ ತನಿಖೆಗಳು ತಮ್ಮಲ್ಲೇ ಏಕೆ ಸಮರ್ಪಕವಾದವುಗಳಾಗಿಲ್ಲ?
7 ಭೌತವಿಜ್ಞಾನದ ಪ್ರೊಫೆಸರರಾದ ಫ್ರೀಮನ್ ಡೈಸನ್ರಂತಹ ಒಬ್ಬರು ಹೀಗೇಕೆ ಹೇಳಿದರೆಂದು ನೀವು ಗ್ರಹಿಸಿಕೊಳ್ಳಬಹುದು: “ಯೋಬನು ಕೇಳಿದಂಥ ಪ್ರಶ್ನೆಗಳನ್ನು ಪುನಃ ಕೇಳುವಾಗ, ಅನೇಕ ಗಣನೀಯ ವ್ಯಕ್ತಿಗಳ ಸ್ಥಾನದಲ್ಲಿ ನಾನಿದ್ದೇನೆ. ನಾವು ಏಕೆ ಕಷ್ಟಾನುಭವಿಸುತ್ತೇವೆ? ಲೋಕದಲ್ಲಿ ಏಕೆ ಇಷ್ಟೊಂದು ಅನ್ಯಾಯವಿದೆ? ನೋವು ಮತ್ತು ದುರಂತದ ಉದ್ದೇಶವೇನು?” (ಯೋಬ 3:20, 21; 10:2, 18; 21:7) ಈ ಮೊದಲು ತಿಳಿಸಲ್ಪಟ್ಟ ಪ್ರಕಾರ, ಉತ್ತರಗಳಿಗಾಗಿ ಅನೇಕ ಜನರು ದೇವರ ಕಡೆಗೆ ತಿರುಗುವ ಬದಲು, ವಿಜ್ಞಾನದ ಕಡೆಗೆ ತಿರುಗುತ್ತಾರೆ. ಜೀವಶಾಸ್ತ್ರಜ್ಞರು, ಸಾಗರವಿಜ್ಞಾನಿಗಳು ಮತ್ತು ಇತರರು, ನಮ್ಮ ಭೂಗೋಲದ ಮತ್ತು ಅದರಲ್ಲಿರುವ ಜೀವದ ಕುರಿತಾದ ಜ್ಞಾನಕ್ಕೆ ಹೆಚ್ಚನ್ನು ಕೂಡಿಸುತ್ತಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ಅನ್ವೇಷಿಸುವ ಭೌತವಿಜ್ಞಾನಿಗಳು ಮತ್ತು ಖಗೋಳಶಾಸ್ತ್ರಜ್ಞರು, ನಮ್ಮ ಸೌರವ್ಯೂಹ, ತಾರೆಗಳು, ಮತ್ತು ದೂರದ ಕ್ಷೀರಪಥಗಳ ಕುರಿತಾಗಿಯೂ ಹೆಚ್ಚನ್ನು ಕಲಿಯತ್ತಾ ಇದ್ದಾರೆ. (ಹೋಲಿಸಿ ಆದಿಕಾಂಡ 11:6.) ಇಂತಹ ನಿಜಾಂಶಗಳು ಯಾವ ಯುಕ್ತವಾದ ತೀರ್ಮಾನಗಳ ಕಡೆಗೆ ಕೈ ತೋರಿಸಸಾಧ್ಯವಿದೆ?
8 ಕೆಲವು ವಿಜ್ಞಾನಿಗಳು ದೇವರ “ಮನಸ್ಸಿನ” ಕುರಿತು ಅಥವಾ ವಿಶ್ವದಲ್ಲಿ ಪ್ರಕಟಿಸಲ್ಪಟ್ಟ ಆತನ “ಕೈ ಬರಹ”ದ ಕುರಿತು ಮಾತನಾಡುತ್ತಾರೆ. ಆದರೆ ಮುಖ್ಯಾಂಶವನ್ನು ಗ್ರಹಿಸಿಕೊಳ್ಳುವುದರಲ್ಲಿ ಇದು ತಪ್ಪಿಹೋಗಬಲ್ಲದೊ? ಸೈಎನ್ಸ್ ಪತ್ರಿಕೆಯು ಗಮನಿಸಿದ್ದು: “ವಿಶ್ವಶಾಸ್ತ್ರವು ದೇವರ ‘ಮನಸ್ಸು’ ಅಥವಾ ‘ಕೈ ಬರಹ’ವನ್ನು ಪ್ರಕಟಪಡಿಸುತ್ತದೆಂದು ಸಂಶೋಧಕರು ಹೇಳುವಾಗ, ಯಾವುದು ವಿಶ್ವದ ಅತ್ಯಂತ ಅಲ್ಪ ವಿಷಯವಾಗಿದೆಯೋ, ಆ ಭೌತಿಕ ರಚನೆಯನ್ನು ದೇವರು ಸೃಷ್ಟಿಸಿದನೆಂದು ಅವರು ಸೂಚಿಸುತ್ತಾರೆ.” ವಾಸ್ತವದಲ್ಲಿ, ನೊಬೆಲ್ ಪ್ರಶಸ್ತಿ ಪಡೆದ ಸ್ಟೀವನ್ ವೈನ್ಬರ್ಗ್ ಎಂಬ ಭೌತವಿಜ್ಞಾನಿಯು ಬರೆದುದು: “ವಿಶ್ವದ ಭೌತಿಕ ನಿಜಾಂಶಗಳನ್ನು ನಾವು ಎಷ್ಟು ಹೆಚ್ಚಾಗಿ ತಿಳಿದುಕೊಳ್ಳುತ್ತೇವೋ, ಅಷ್ಟೇ ಹೆಚ್ಚಾಗಿ ವಿಶ್ವಕ್ಕೆ ಯಾವ ಉದ್ದೇಶವೂ ಇಲ್ಲವೆಂದು ತೋರುತ್ತದೆ.”
9. ಸೃಷ್ಟಿಕರ್ತನ ಕುರಿತು ನಾವು ಮತ್ತು ಇತರರು ಕಲಿತುಕೊಳ್ಳುವಂತೆ ಯಾವ ಪುರಾವೆಯು ನಮಗೆ ಸಹಾಯ ಮಾಡಬಲ್ಲದು?
9 ಹಾಗಿದ್ದರೂ, ಈ ವಿಷಯವನ್ನು ಗಂಭೀರವಾಗಿ ಅಧ್ಯಯನಿಸಿರುವ ಮತ್ತು ಜೀವನದ ನಿಜಾರ್ಥವು ಸೃಷ್ಟಿಕರ್ತನನ್ನು ತಿಳಿಯುವುದಕ್ಕೆ ಸಂಬಂಧಿಸಿದೆ ಎಂದು ಗ್ರಹಿಸಿಕೊಳ್ಳುವ ಲಕ್ಷಾಂತರ ಜನರಲ್ಲಿ ನೀವೂ ಒಬ್ಬರಾಗಿರಬಹುದು. ಅಪೊಸ್ತಲ ಪೌಲನು ಬರೆದ ವಿಷಯವನ್ನು ಜ್ಞಾಪಿಸಿಕೊಳ್ಳಿರಿ: “ದೇವರ ಕುರಿತು ತಮಗೆ ಗೊತ್ತಿಲ್ಲವೆಂದು ಜನರು ಹೇಳಸಾಧ್ಯವಿಲ್ಲ. ಲೋಕದ ಆರಂಭದಿಂದ, ದೇವರು ಉಂಟುಮಾಡಿರುವ ವಿಷಯಗಳ ಮೂಲಕ ಆತನು ಎಂಥವನಾಗಿದ್ದಾನೆಂಬುದನ್ನು ಜನರು ನೋಡಸಾಧ್ಯವಿತ್ತು. ನಿತ್ಯವಾಗಿ ಬಾಳುವಂತಹ ಆತನ ಬಲವನ್ನು ಇದು ತೋರಿಸುತ್ತದೆ. ಆತನೇ ದೇವರು ಎಂಬುದನ್ನು ಇದು ತೋರಿಸುತ್ತದೆ.” (ರೋಮಾಪುರ 1:20, ಹೋಲಿ ಬೈಬಲ್, ನ್ಯೂ ಲೈಫ್ ವರ್ಷನ್) ಜನರು ಸೃಷ್ಟಿಕರ್ತನನ್ನು ಗುರುತಿಸಲು ಮತ್ತು ಆತನ ಸಂಬಂಧದಲ್ಲಿ ಅರ್ಥವನ್ನು ಕಂಡುಕೊಳ್ಳಲು ಸಹಾಯ ಮಾಡುವಂತಹ, ಲೋಕದ ಕುರಿತಾದ ಹಾಗೂ ನಮ್ಮ ಕುರಿತಾದ ನಿಜಾಂಶಗಳು ಇವೆ. ಇದರ ಮೂರು ವಿಷಯಾಂಶಗಳನ್ನು ಪರಿಗಣಿಸಿರಿ: ನಮ್ಮ ಸುತ್ತಲೂ ಇರುವ ವಿಶ್ವ, ಜೀವದ ಮೂಲ, ಮತ್ತು ನಮ್ಮ ಸ್ವಂತ ಮಾನಸಿಕ ಸಾಮರ್ಥ್ಯಗಳು.
ನಂಬಲಿಕ್ಕಾಗಿರುವ ಕಾರಣಗಳು
10. ನಾವು ‘ಆರಂಭ’ದ ಕುರಿತು ಏಕೆ ವಿಚಾರಿಸಬೇಕು? (ಆದಿಕಾಂಡ 1:1; ಕೀರ್ತನೆ 111:10)
10 ನಮ್ಮ ವಿಶ್ವವು ಅಸ್ತಿತ್ವಕ್ಕೆ ಹೇಗೆ ಬಂತು? ನಮ್ಮ ವಿಶ್ವವು ಯಾವಾಗಲೂ ಅಸ್ತಿತ್ವದಲ್ಲಿರಲಿಲ್ಲ ಎಂಬುದನ್ನು ಹೆಚ್ಚಿನ ವಿಜ್ಞಾನಿಗಳು ಒಪ್ಪುವುದಾಗಿ ಬಾಹ್ಯಾಕಾಶ ಟೆಲಿಸ್ಕೋಪುಗಳು ಮತ್ತು ಅನ್ವೇಷಣ ವರದಿಗಳಿಂದ ನೀವು ತಿಳಿದುಕೊಂಡಿರಬಹುದು. ಅದಕ್ಕೊಂದು ಆರಂಭವಿತ್ತು, ಮತ್ತು ಅದು ವಿಸ್ತರಿಸುತ್ತಾ ಇದೆ. ಇದು ಏನನ್ನು ಅರ್ಥೈಸುತ್ತದೆ? ಖಗೋಲಶಾಸ್ತ್ರಜ್ಞರಾದ ಸರ್ ಬರ್ನಾಡ್ ಲವೆಲ್ರಿಗೆ ಕಿವಿಗೊಡಿರಿ: “ಗತಕಾಲದ ಯಾವುದೊ ಬಿಂದುವಿನಲ್ಲಿ, ವಿಶ್ವವು ಅತ್ಯಂತ ಅಲ್ಪಗಾತ್ರದ ಮತ್ತು ಅತ್ಯಂತ ಸಾಂದ್ರತೆಯುಳ್ಳ ಸ್ಥಿತಿಗೆ ಹತ್ತಿರವಾಗಿ ಇದ್ದುದಾದರೆ, ಅಲ್ಲಿ ಮುಂಚೆ ಏನಿತ್ತು ಎಂಬ ಪ್ರಶ್ನೆಯನ್ನು ನಾವು ಕೇಳಲೇಬೇಕು . . . ಆರಂಭದ ಕುರಿತಾದ ಒಂದು ಸಮಸ್ಯೆಯನ್ನು ನಾವು ಎದುರಿಸಲೇ ಬೇಕು.”
11. (ಎ) ವಿಶ್ವವು ಎಷ್ಟು ವಿಶಾಲವಾಗಿದೆ? (ಬಿ) ವಿಶ್ವದ ನಿಷ್ಕೃಷ್ಟತೆಯು ಏನನ್ನು ಸೂಚಿಸುತ್ತದೆ?
11 ಭೂಮಿಯನ್ನು ಸೇರಿಸಿ ನಮ್ಮ ವಿಶ್ವದ ರಚನೆಯು ಸಹ, ಬೆರಗುಗೊಳಿಸುವ ಉತ್ಕೃಷ್ಟ ಅಳವಡಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ. ಉದಾಹರಣೆಗೆ, ನಮ್ಮ ಸೂರ್ಯ ಹಾಗೂ ಇತರ ನಕ್ಷತ್ರಗಳ ಎರಡು ಗಮನಾರ್ಹ ವೈಶಿಷ್ಟ್ಯಗಳು, ದೀರ್ಘಾವಧಿಯ ಕಾರ್ಯಸಮರ್ಥತೆ ಮತ್ತು ಸ್ಥಿರತೆಯೇ ಆಗಿವೆ. ದೃಗ್ಗೋಚರವಾಗಿರುವ ವಿಶ್ವದಲ್ಲಿನ ಕ್ಷೀರಪಥಗಳ ಸಂಖ್ಯೆಯ ಪ್ರಸ್ತುತ ಅಂದಾಜುಗಳು, 50 ಅರಬ್ (50,00,00,00,000)ಯಿಂದ 125 ಅರಬ್ ಆಗಿದೆ. ಮತ್ತು ನಮ್ಮ ಕ್ಷೀರಪಥದಲ್ಲಿ ಕೋಟ್ಯಾನುಕೋಟಿ ನಕ್ಷತ್ರಗಳಿವೆ. ಈಗ ಪರಿಗಣಿಸಿರಿ: ಒಂದು ಮೋಟಾರು ಎಂಜಿನಿಗೆ ಇಂಧನ ಮತ್ತು ವಾಯುವಿನ ಒಂದು ನಿಷ್ಕೃಷ್ಟವಾದ ಪ್ರಮಾಣವು ಅಗತ್ಯವೆಂದು ನಮಗೆ ಗೊತ್ತಿದೆ. ನಿಮಗೊಂದು ಕಾರಿರುವುದಾದರೆ, ಅದು ಹೆಚ್ಚು ಸುಗಮವಾಗಿ ಮತ್ತು ಸಮರ್ಥವಾಗಿ ಚಲಿಸುವಂತೆ ಒಬ್ಬ ಮೆಕ್ಯಾನಿಕನನ್ನು ಕರೆಸಿ ಅದರ ಎಂಜಿನನ್ನು ಅಳವಡಿಸುವಿರಿ. ಬರಿಯ ಒಂದು ಎಂಜಿನಿಗೇ ಇಂತಹ ನಿಖರತೆಯು ಪ್ರಾಮುಖ್ಯವಾಗಿರುವಲ್ಲಿ, ಸಮರ್ಥವಾಗಿ “ಉರಿಯುವ” ನಮ್ಮ ಸೂರ್ಯನ ಕುರಿತೇನು? ಭೂಮಿಯ ಮೇಲಿನ ಜೀವದ ಅಸ್ತಿತ್ವಕ್ಕೆ ಒಳಗೊಂಡಿರುವ ಮುಖ್ಯ ಶಕ್ತಿಗಳು ನಿಷ್ಕೃಷ್ಟವಾಗಿ ಅಳವಡಿಸಲ್ಪಟ್ಟಿವೆ. ಇದು ಆಕಸ್ಮಿಕವಾಗಿ ಸಂಭವಿಸಿತೊ? ಪುರಾತನ ಕಾಲದ ಯೋಬನು ಹೀಗೆ ಕೇಳಲ್ಪಟ್ಟನು: “ಆಕಾಶವನ್ನಾಳುವ ಕಟ್ಟಳೆಗಳನ್ನು ಘೋಷಿಸಿದವನು ಅಥವಾ ಭೂಮಿಯ ನೈಸರ್ಗಿಕ ನಿಯಮಗಳನ್ನು ನಿರ್ಧರಿಸಿದವನು ನೀನೋ?” (ಯೋಬ 38:33, ದ ನ್ಯೂ ಇಂಗ್ಲಿಷ್ ಬೈಬಲ್) ಯಾವ ಮಾನವನೂ ಅದನ್ನು ಮಾಡಲಿಲ್ಲ. ಹಾಗಾದರೆ ಈ ನಿಷ್ಕೃಷ್ಟತೆಯು ಎಲ್ಲಿಂದ ಬಂತು?—ಕೀರ್ತನೆ 19:1.
12. ಸೃಷ್ಟಿಯ ಹಿಂದೆ ಒಂದು ಶಕ್ತಿಶಾಲಿ ವಿಚಾರವಂತನು ಇದ್ದಾನೆಂದು ಭಾವಿಸಿಕೊಳ್ಳುವುದು ಏಕೆ ಅಸಮಂಜಸವಲ್ಲ?
12 ಕಣ್ಣಿಗೆ ಕಾಣದಿರುವ ಯಾವುದೊ ಒಂದರಿಂದ ಅಥವಾ ಯಾರೊ ಒಬ್ಬನಿಂದ ಅದು ಬಂದಿರಬಹುದೊ? ಈ ಪ್ರಶ್ನೆಯನ್ನು ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಪರಿಗಣಿಸಿರಿ. ಕಪ್ಪು ಪ್ರದೇಶಗಳೆಂದು ಕರೆಯಲ್ಪಡುವ ಅತಿಶಕ್ತಿಶಾಲಿ ಆಕಾಶಸ್ಥಕಾಯಗಳು ಇವೆಯೆಂಬುದನ್ನು ಈಗ ಹೆಚ್ಚಿನ ಖಗೋಲಶಾಸ್ತ್ರಜ್ಞರು ಅಂಗೀಕರಿಸುತ್ತಾರೆ. ಈ ಕಪ್ಪು ಪ್ರದೇಶಗಳನ್ನು ನೋಡಸಾಧ್ಯವಿರದಿದ್ದರೂ, ಅವು ಅಸ್ತಿತ್ವದಲ್ಲಿವೆ ಎಂಬ ವಿಷಯದಲ್ಲಿ ಪರಿಣತರು ಖಚಿತರಾಗಿದ್ದಾರೆ. ತದ್ರೀತಿಯಲ್ಲಿ, ಇನ್ನೊಂದು ಕ್ಷೇತ್ರದಲ್ಲಿ ಕಣ್ಣಿಗೆ ಕಾಣದಿರುವ ಶಕ್ತಿಶಾಲಿ ಆತ್ಮ ಜೀವಿಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಬೈಬಲು ವರದಿಸುತ್ತದೆ. ಇಂತಹ ಶಕ್ತಿಶಾಲಿ ಹಾಗೂ ಅದೃಶ್ಯ ಜೀವಿಗಳು ಅಸ್ತಿತ್ವದಲ್ಲಿರುವುದಾದರೆ, ವಿಶ್ವದಾದ್ಯಂತ ತೋರಿಬರುವ ನಿಷ್ಕೃಷ್ಟತೆಯು ಒಬ್ಬ ಶಕ್ತಿಶಾಲಿ ವಿಚಾರವಂತನಿಂದ ಉಂಟಾಯಿತೆಂಬುದು ನ್ಯಾಯಸಮ್ಮತವಲ್ಲವೊ?—ನೆಹೆಮೀಯ 9:6.
13, 14. (ಎ) ಜೀವದ ಆರಂಭದ ಕುರಿತು ವಿಜ್ಞಾನವು ಏನನ್ನು ನಿರೂಪಿಸಿದೆ? (ಬಿ) ಭೂಮಿಯಲ್ಲಿ ಜೀವಿತದ ಅಸ್ತಿತ್ವವು ಏನನ್ನು ಸೂಚಿಸುತ್ತದೆ?
13 ಜನರು ಒಬ್ಬ ಸೃಷ್ಟಿಕರ್ತನನ್ನು ಅಂಗೀಕರಿಸುವಂತೆ ಸಹಾಯ ಮಾಡುವ ಎರಡನೆಯ ರುಜುವಾತು ಜೀವದ ಆರಂಭವನ್ನು ಒಳಗೊಳ್ಳುತ್ತದೆ. ಲೂಯಿ ಪ್ಯಾಶ್ಚರ್ನ ಪ್ರಯೋಗಗಳ ಸಮಯದಂದಿನಿಂದ, ಸ್ವಯಂ ಜನನದ ಮೂಲಕ ಯಾವ ಜೀವವೂ ತನ್ನಷ್ಟಕ್ಕೆ ತಾನೇ ಅಸ್ತಿತ್ವಕ್ಕೆ ಬರುವುದಿಲ್ಲವೆಂಬುದು ಅಂಗೀಕರಿಸಲ್ಪಟ್ಟಿದೆ. ಹಾಗಾದರೆ ಭೂಜೀವವು ಹೇಗೆ ಆರಂಭಗೊಂಡಿತು? ಆದಿಕಾಲದ ವಾತಾವರಣವು ಮಿಂಚಿನಿಂದ ಸತತವಾಗಿ ಹೊಡೆಯಲ್ಪಟ್ಟಾಗ, ಯಾವುದೋ ಆದಿಸಾಗರದಲ್ಲಿ ಜೀವವು ನಿಧಾನವಾಗಿ ವಿಕಸಿಸಿರಬಹುದೆಂದು, 1950ಗಳಲ್ಲಿ ವಿಜ್ಞಾನಿಗಳು ರುಜುಪಡಿಸಲು ಪ್ರಯತ್ನಿಸಿದರು. ಆದರೆ, ಇತ್ತೀಚಿನ ಅನೇಕ ಪುರಾವೆಗಳು ತೋರಿಸುವುದೇನೆಂದರೆ, ಆ ರೀತಿಯ ವಾತಾವರಣವು ಎಂದೂ ಇರದಿದ್ದ ಕಾರಣ, ಭೂಜೀವವು ಆ ರೀತಿಯಲ್ಲಿ ಆರಂಭಗೊಂಡಿತೆಂಬ ವಿಷಯವು ಅಸಂಭವವಾಗಿದೆ. ಈ ಕಾರಣ, ಕಡಿಮೆ ಕುಂದುಗಳಿರುವ ವಿವರಣೆಗಾಗಿ ಕೆಲವು ವಿಜ್ಞಾನಿಗಳು ಹುಡುಕುತ್ತಿದ್ದಾರೆ. ಅವರು ಕೂಡ ಮುಖ್ಯವಿಷಯವನ್ನು ಗ್ರಹಿಸುವುದರಲ್ಲಿ ತಪ್ಪಿಹೋಗುತ್ತಿದ್ದಾರೊ?
14 ವಿಶ್ವ ಮತ್ತು ಅದರಲ್ಲಿರುವ ಜೀವವನ್ನು ಅಧ್ಯಯನಿಸುವುದರಲ್ಲಿ ದಶಕಗಳನ್ನು ವ್ಯಯಿಸಿದ ಬ್ರಿಟಿಷ್ ವಿಜ್ಞಾನಿ ಸರ್ ಫ್ರೆಡ್ ಹಾಯ್ಲ್ ಹೇಳಿದ್ದು: “ಜೀವವು ನಿಸರ್ಗದ ಕುರುಡುಶಕ್ತಿಗಳಿಂದ ಉಂಟಾಯಿತೆನ್ನುವ ವಿಲಕ್ಷಣವಾದ ಅಲ್ಪ ಸಂಭವನೀಯತೆಯನ್ನು ಸ್ವೀಕರಿಸುವ ಬದಲಿಗೆ, ಜೀವದ ಆರಂಭವು ಉದ್ದೇಶಪೂರ್ವಕವಾದ ಬುದ್ಧಿಶಕ್ತಿಯ ಕೆಲಸವೆಂದು ಭಾವಿಸುವುದು ಹೆಚ್ಚು ಉತ್ತಮವೆಂದು ತೋರುತ್ತದೆ.” ಹೌದು, ಜೀವದ ಅದ್ಭುತಗಳ ಕುರಿತು ನಾವು ಎಷ್ಟು ಹೆಚ್ಚು ಕಲಿಯುತ್ತೇವೊ, ಅಷ್ಟು ಹೆಚ್ಚಾಗಿ ಅದು ಒಂದು ಬುದ್ಧಿಶಕ್ತಿಯ ಮೂಲದಿಂದ ಬಂದಿದೆಯೆಂಬುದು ನ್ಯಾಯಸಮ್ಮತವಾಗುತ್ತದೆ.—ಯೋಬ 33:4; ಕೀರ್ತನೆ 8:3, 4; 36:9; ಅ. ಕೃತ್ಯಗಳು 17:28.
15. ನೀವು ಅಸದೃಶರೆಂದು ಏಕೆ ಹೇಳಬಹುದಾಗಿದೆ?
15 ಹೀಗೆ, ತರ್ಕಸರಣಿಯ ಪ್ರಥಮ ಪ್ರಮಾಣವು ವಿಶ್ವವಾಗಿದೆ, ಮತ್ತು ಎರಡನೆಯ ಪ್ರಮಾಣವು ಭೂಮಿಯ ಮೇಲೆ ಜೀವದ ಆರಂಭವಾಗಿದೆ. ಮೂರನೆಯ ಪ್ರಮಾಣವನ್ನು ಗಮನಿಸಿರಿ. ಅದು ನಮ್ಮ ಅಸದೃಶತೆಯಾಗಿದೆ. ಅನೇಕ ವಿಧಗಳಲ್ಲಿ ಎಲ್ಲ ಮಾನವರು ಅಸದೃಶರಾಗಿರುತ್ತಾರೆ. ಹಾಗಾದರೆ ನೀವು ಕೂಡ ಅಸದೃಶರೆಂಬುದು ಇದರ ಅರ್ಥ. ಅದು ಹೇಗೆ? ಮಿದುಳನ್ನು ಒಂದು ಶಕ್ತಿಶಾಲಿ ಕಂಪ್ಯೂಟರಿಗೆ ಹೋಲಿಸಲ್ಪಟ್ಟಿರುವುದನ್ನು ನೀವು ಬಹುಶಃ ಕೇಳಿದ್ದೀರಿ. ಆದರೂ ಈ ಹೋಲಿಕೆಯು ತೀರ ಅಸಂಬದ್ಧವಾದದ್ದೆಂದು ಇತ್ತೀಚಿನ ಸಂಶೋಧನೆಗಳು ತೋರಿಸಿವೆ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಒಬ್ಬ ವಿಜ್ಞಾನಿಯು ಹೇಳಿದ್ದು: “ಇಂದಿನ ಕಂಪ್ಯೂಟರುಗಳ ನೋಡುವ, ಮಾತನಾಡುವ, ಚಲಿಸುವ ಮತ್ತು ವ್ಯವಹಾರ ಜ್ಞಾನದ ಸಾಮರ್ಥ್ಯವು ನಾಲ್ಕು ವರ್ಷದ ಬಾಲಕನಿಗೂ ಸರಿಸಮವಾಗಿಲ್ಲ. . . . ಅತಿ ಶಕ್ತಿಶಾಲಿ ಸೂಪರ್ ಕಂಪ್ಯೂಟರಿನ ಮಾಹಿತಿ ಪ್ರಕ್ರಿಯೆಯ ಸಾಮರ್ಥ್ಯವು, ಒಂದು ಬಸವನ ಹುಳುವಿನ ನರವ್ಯೂಹಕ್ಕೆ, ಅಂದರೆ [ನಿಮ್ಮ] ತಲೆಬುರುಡೆಯೊಳಗಿರುವ ಸೂಪರ್ ಕಂಪ್ಯೂಟರಿಗಿರುವ ಶಕ್ತಿಯ ಲವಲೇಶ ಭಾಗಕ್ಕೆ ಸಮಾನವಾಗಿದೆಯೆಂದು ಅಂದಾಜು ಮಾಡಲಾಗಿದೆ.”
16. ನಿಮ್ಮ ಭಾಷಾ ಸಾಮರ್ಥ್ಯವು ಏನನ್ನು ಸೂಚಿಸುತ್ತದೆ?
16 ನಿಮ್ಮ ಮಿದುಳಿನ ಕಾರಣ, ನಿಮಗಿರುವ ಸಾಮರ್ಥ್ಯಗಳಲ್ಲಿ ಭಾಷೆಯೂ ಒಂದಾಗಿದೆ. ಕೆಲವರು ಎರಡು, ಮೂರು, ಇಲ್ಲವೆ ಹೆಚ್ಚಿನ ಭಾಷೆಗಳನ್ನಾಡುತ್ತಾರಾದರೂ, ಒಂದೇ ಭಾಷೆಯನ್ನಾಡುವ ಸಾಮರ್ಥ್ಯವು ಕೂಡ ನಮ್ಮನ್ನು ಅಸದೃಶರನ್ನಾಗಿ ಮಾಡುತ್ತದೆ. (ಯೆಶಾಯ 36:11; ಅ. ಕೃತ್ಯಗಳು 21:37-40) ಆರ್. ಎಸ್. ಮತ್ತು ಡಿ. ಏಚ್. ಫೌಟ್ಸ್ ಎಂಬ ಪ್ರೊಫೆಸರರು ಕೇಳಿದ್ದು: “ಭಾಷೆಯ ಮೂಲಕ ಸಂಭಾಷಣೆಮಾಡಲು . . . ಮನುಷ್ಯನು ಮಾತ್ರ ಶಕ್ತನೊ? . . . ಎಲ್ಲ ಮೇಲ್ಮಟ್ಟದ ಪ್ರಾಣಿಗಳು . . . ಚಲನವಲನಗಳು, ವಾಸನೆಗಳು, ಕರೆಗಳು, ಕೂಗುಗಳು, ಮತ್ತು ಜೇನುಹುಳುಗಳು ತಮ್ಮ ನೃತ್ಯದ ಮೂಲಕವೂ ಸಂಭಾಷಣೆ ಮಾಡುತ್ತವೆಂಬುದು ಖಂಡಿತ. ಆದರೂ ಮನುಷ್ಯನನ್ನು ಬಿಟ್ಟು ಬೇರಾವ ಪ್ರಾಣಿಗಳಿಗೂ ವ್ಯಾಕರಣಕ್ಕನುಸಾರ ರಚಿಸಲ್ಪಟ್ಟ ಭಾಷೆಯಿರುವಂತೆ ತೋರುವುದಿಲ್ಲ. ಮತ್ತು ಪ್ರಾಣಿಗಳಿಗೆ ಚಿತ್ರಗಳನ್ನು ಬಿಡಿಸುವ ಸಾಮರ್ಥ್ಯವಿಲ್ಲವೆಂಬುದು ಅತ್ಯಂತ ಗಮನಾರ್ಹವಾದ ವಿಷಯವಾಗಿದೆ. ಹೆಚ್ಚೆಂದರೆ ಅವು ಗೀಚು ಚಿತ್ರಗಳನ್ನು ಬಿಡಿಸಬಹುದಷ್ಟೇ.” ನಿಜವಾಗಿಯೂ, ಮನುಷ್ಯರು ಮಾತ್ರ ಒಂದು ಭಾಷೆಯನ್ನಾಡಲು ಮತ್ತು ಅರ್ಥಭರಿತ ಚಿತ್ರಗಳನ್ನು ಬಿಡಿಸಲು ತಮ್ಮ ಮಿದುಳನ್ನು ಉಪಯೋಗಿಸಬಲ್ಲರು.—ಹೋಲಿಸಿ ಯೆಶಾಯ 8:1; 30:8; ಲೂಕ 1:3.
17. ಒಂದು ಪ್ರಾಣಿಯು ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳುವುದಕ್ಕೂ, ಒಬ್ಬ ಮನುಷ್ಯನು ನೋಡಿಕೊಳ್ಳುವುದಕ್ಕೂ ಯಾವ ಮುಖ್ಯ ವ್ಯತ್ಯಾಸವಿದೆ?
17 ಅಲ್ಲದೆ, ನಿಮಗೆ ನಿಮ್ಮ ಸ್ವಂತ ಅರಿವು ಇದೆ, ಅಂದರೆ ಸ್ವಪ್ರಜ್ಞಾಶಕ್ತಿಯನ್ನು ನೀವು ಹೊಂದಿದ್ದೀರಿ. (ಜ್ಞಾನೋಕ್ತಿ 14:10) ಒಂದು ಪಕ್ಷಿ, ನಾಯಿ ಇಲ್ಲವೆ ಬೆಕ್ಕು, ಕನ್ನಡಿಯಲ್ಲಿ ತನ್ನ ಮುಖನೋಡಿ, ತನ್ನನ್ನು ಕುಕ್ಕಿಕೊಳ್ಳುವುದು, ಗುರುಗುಟ್ಟುವುದು ಅಥವಾ ಆಕ್ರಮಿಸುವುದನ್ನು ನೀವು ನೋಡಿದ್ದೀರೊ? ಅದು ತನ್ನನ್ನು ಗುರುತಿಸಿಕೊಳ್ಳದೆ, ತಾನು ಬೇರೊಂದು ಪ್ರಾಣಿಯನ್ನು ನೋಡುತ್ತಿದ್ದೇನೆಂದು ನೆನಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವಾಗ, ಅದು ನೀವೇ ಎಂದು ನಿಮಗೆ ತಿಳಿಯುತ್ತದೆ. (ಯಾಕೋಬ 1:23, 24) ನೀವು ನಿಮ್ಮ ತೋರಿಕೆಯನ್ನು ಪರೀಕ್ಷಿಸಿಕೊಳ್ಳಬಹುದು ಇಲ್ಲವೆ ಕೆಲವೊಂದು ವರ್ಷಗಳಲ್ಲಿ ನೀವು ಹೇಗೆ ಕಾಣುವಿರೆಂದು ಸೋಜಿಗಪಟ್ಟುಕೊಳ್ಳಬಹುದು. ಪ್ರಾಣಿಗಳು ಹೀಗೆ ಮಾಡುವುದಿಲ್ಲ. ಹೌದು, ನಿಮ್ಮ ಮಿದುಳು ನಿಮ್ಮನ್ನು ಅಸದೃಶರನ್ನಾಗಿ ಮಾಡುತ್ತದೆ. ಕೀರ್ತಿಯು ಯಾರಿಗೆ ಸಲ್ಲತಕ್ಕದ್ದು? ದೇವರಿಂದಲ್ಲದೇ ಎಲ್ಲಿಂದ ನಿಮ್ಮ ಮಿದುಳು ಬಂತು?
18. ಯಾವ ಮಾನಸಿಕ ಸಾಮರ್ಥ್ಯಗಳು ನಿಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸುತ್ತವೆ?
18 ಕಲೆ ಮತ್ತು ಸಂಗೀತವನ್ನು ಗಣ್ಯಮಾಡುವಂತೆ ಹಾಗೂ ನೀತಿ ಪ್ರಜ್ಞೆಯನ್ನು ಹೊಂದಿರುವಂತೆಯೂ ಮಿದುಳು ನಿಮಗೆ ಅನುಮತಿ ನೀಡುತ್ತದೆ. (ವಿಮೋಚನಕಾಂಡ 15:20; ನ್ಯಾಯಸ್ಥಾಪಕರು 11:34; 1 ಅರಸು 6:1, 29-35; ಮತ್ತಾಯ 11:16, 17) ಈ ಗುಣಗಳು ಪ್ರಾಣಿಗಳಲ್ಲಿರದೆ ನಿಮ್ಮಲ್ಲಿರುವುದೇಕೆ? ಏಕೆಂದರೆ, ಅವು ಆಹಾರವನ್ನು ದೊರಕಿಸಿಕೊಳ್ಳುವುದು, ಸಂಗಾತಿಯನ್ನು ಕಂಡುಕೊಳ್ಳುವುದು, ಅಥವಾ ಗೂಡನ್ನು ಕಟ್ಟಿಕೊಳ್ಳುವಂತಹ ತತ್ಕ್ಷಣದ ಅಗತ್ಯಗಳನ್ನು ಪೂರೈಸಲಿಕ್ಕಾಗಿ ತಮ್ಮ ಮಿದುಳನ್ನು ಉಪಯೋಗಿಸಿಕೊಳ್ಳುತ್ತವೆ. ಕೇವಲ ಮನುಷ್ಯರು ಮಾತ್ರ ಅಲ್ಪಾವಧಿಗಿಂತಲೂ ದೂರದೃಷ್ಟಿಯುಳ್ಳವರಾಗಿ ಯೋಚಿಸುತ್ತಾರೆ. ತಮ್ಮ ಕ್ರಿಯೆಗಳು ಭವಿಷ್ಯತ್ತಿನ ವರ್ಷಗಳಲ್ಲಿ ತಮ್ಮ ಪರಿಸರವನ್ನು ಅಥವಾ ತಮ್ಮ ಸಂತತಿಯನ್ನು ಹೇಗೆ ಪ್ರಭಾವಿಸುವವೆಂದು ಸಹ ಕೆಲವರು ಯೋಚಿಸುತ್ತಾರೆ. ಏಕೆ? ಮನುಷ್ಯರ ಕುರಿತು ಪ್ರಸಂಗಿ 3:11 ಹೇಳುವುದು: “ಮನುಷ್ಯರ ಹೃದಯದಲ್ಲಿ [ಸೃಷ್ಟಿಕರ್ತನು] ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.” ಹೌದು, ಅನಂತಕಾಲದ ಅರ್ಥವನ್ನು ಪರಿಗಣಿಸಲು ಇಲ್ಲವೆ ಅಂತ್ಯರಹಿತ ಜೀವಿತನ್ನು ಕಲ್ಪಿಸಿಕೊಳ್ಳಲು ನಿಮಗಿರುವ ಸಾಮರ್ಥ್ಯವು ವಿಶೇಷವಾದದ್ದಾಗಿದೆ.
ಸೃಷ್ಟಿಕರ್ತನು ಅರ್ಥವನ್ನು ಕೂಡಿಸಲಿ
19. ಸೃಷ್ಟಿಕರ್ತನ ಕುರಿತು ಇತರರು ಯೋಚಿಸುವಂತೆ ಸಹಾಯ ಮಾಡಲು ಯಾವ ಮೂರು ತರ್ಕಸರಣಿಗಳನ್ನು ನೀವು ಉಪಯೋಗಿಸಬಹುದು?
19 ಕೇವಲ ಮೂರು ಕ್ಷೇತ್ರಗಳನ್ನು ನಾವು ಸೂಚಿಸಿದ್ದೇವೆ: ವ್ಯಾಪಕವಾದ ವಿಶ್ವದಲ್ಲಿ ಪ್ರತಿಬಿಂಬಿತವಾಗುವ ನಿಷ್ಕೃಷ್ಟತೆ, ಭೂಮಿಯ ಮೇಲೆ ಜೀವದ ಆರಂಭ, ಮತ್ತು ವಿಭಿನ್ನ ಸಾಮರ್ಥ್ಯಗಳೊಂದಿಗೆ ಮಾನವ ಮಿದುಳಿನ ಅಲ್ಲಗಳೆಯಲಾಗದ ಅಸದೃಶತೆ. ಈ ಮೂರೂ ವಿಷಯಗಳು ಏನನ್ನು ಸೂಚಿಸುತ್ತವೆ? ಇತರರು ಒಂದು ತೀರ್ಮಾನಕ್ಕೆ ಬರುವಂತೆ ಸಹಾಯ ಮಾಡಲು ನೀವು ಉಪಯೋಗಿಸಸಾಧ್ಯವಿರುವ ಒಂದು ತರ್ಕಸರಣಿಯು ಇಲ್ಲಿದೆ. ನೀವು ಮೊದಲಾಗಿ ಹೀಗೆ ಕೇಳಬಹುದು: ವಿಶ್ವಕ್ಕೆ ಒಂದು ಆರಂಭವಿತ್ತೋ? ಹೌದೆಂದು ಅನೇಕರು ಒಪ್ಪಿಕೊಳ್ಳುವರು. ತದನಂತರ ಕೇಳಿರಿ: ಆ ಆರಂಭವು ತಾನಾಗಿಯೇ ಉಂಟಾಯಿತೊ, ಇಲ್ಲವೆ ಅದು ಉಂಟುಮಾಡಲ್ಪಟ್ಟಿತೊ? ವಿಶ್ವವು ಉಂಟುಮಾಡಲ್ಪಟ್ಟಿತೆಂದು ಅನೇಕರು ಗ್ರಹಿಸುತ್ತಾರೆ. ಇದು ಕೊನೆಯ ಪ್ರಶ್ನೆಗೆ ನಡೆಸುತ್ತದೆ: ಈ ಆರಂಭವನ್ನು ಉಂಟುಮಾಡಿದ್ದು ಯಾವುದೋ ಶಾಶ್ವತ ವಸ್ತುವೊ ಅಥವಾ ಶಾಶ್ವತನಾದ ಒಬ್ಬಾತನೋ? ಹೀಗೆ, ಈ ವಾದಾಂಶಗಳು ಸ್ಪಷ್ಟವಾಗಿಯೂ ತರ್ಕಬದ್ಧವಾಗಿಯೂ ಸಾದರಗೊಳಿಸಲ್ಪಡುವಾಗ, ಒಬ್ಬ ಸೃಷ್ಟಿಕರ್ತನು ಇರಲೇ ಬೇಕು! ಎಂಬ ತೀರ್ಮಾನಕ್ಕೆ ಅನೇಕರನ್ನು ನಡೆಸಬಹುದು. ವಿಷಯವು ಹಾಗಿರುವಲ್ಲಿ, ಜೀವಿತಕ್ಕೆ ಅರ್ಥವು ಇರಸಾಧ್ಯವಿಲ್ಲವೋ?
20, 21. ನಮ್ಮ ಜೀವಿತಕ್ಕೆ ಅರ್ಥವಿರಬೇಕಾದರೆ, ಸೃಷ್ಟಿಕರ್ತನನ್ನು ತಿಳಿದುಕೊಳ್ಳುವುದು ಏಕೆ ಆವಶ್ಯಕವಾಗಿದೆ?
20 ನಮ್ಮ ನೀತಿ ಪ್ರಜ್ಞೆಯನ್ನು ಸೇರಿಸಿ, ನಮ್ಮ ಇಡೀ ಅಸ್ತಿತ್ವ ಹಾಗೂ ನೈತಿಕತೆಯು ತಾನೇ ಸೃಷ್ಟಿಕರ್ತನೊಂದಿಗೆ ಸಂಬಂಧಿಸಿರಬೇಕು. ಡಾ. ರಾಲೋ ಮೇ ಒಮ್ಮೆ ಬರೆದುದು: “ನೈತಿಕತೆಗಾಗಿರುವ ಏಕೈಕ ಯೋಗ್ಯವಾದ ರಚನಾಕ್ರಮವು, ಜೀವಿತದ ಅರ್ಥದ ಮೇಲೆ ಅವಲಂಬಿಸಿರುವಂತಹದ್ದಾಗಿದೆ.” ಅದನ್ನು ಎಲ್ಲಿ ಕಂಡುಕೊಳ್ಳಬಹುದು? ಅವರು ಮುಂದುವರಿಸಿ ಹೇಳುವುದು: “ಕಟ್ಟಕಡೆಯ ರಚನಾಕ್ರಮವು ದೇವರ ಮೂಲಸ್ವಭಾವವಾಗಿದೆ. ದೇವರ ತತ್ವಗಳು, ಸೃಷ್ಟಿಯ ಆರಂಭದಿಂದ ಅಂತ್ಯದ ವರೆಗೆ ಜೀವವನ್ನು ಸಮರ್ಥಿಸುವ ತತ್ವಗಳೇ ಆಗಿವೆ.”
21 “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು” ಎಂಬುದಾಗಿ ಸೃಷ್ಟಿಕರ್ತನಲ್ಲಿ ಬೇಡಿಕೊಂಡಾಗ, ಕೀರ್ತನೆಗಾರನು ದೀನತೆ ಹಾಗೂ ವಿವೇಕವನ್ನು ಏಕೆ ಪ್ರದರ್ಶಿಸುತ್ತಿದ್ದನೆಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. (ಕೀರ್ತನೆ 25:4, 5) ಕೀರ್ತನೆಗಾರನು ಸೃಷ್ಟಿಕರ್ತನನ್ನು ಉತ್ತಮವಾಗಿ ತಿಳಿದುಕೊಂಡಂತೆ, ಅವನ ಜೀವಿತಕ್ಕೆ ಹೆಚ್ಚು ಅರ್ಥ, ಉದ್ದೇಶ, ಮತ್ತು ನಿರ್ದೇಶನವು ಖಂಡಿತವಾಗಿಯೂ ದೊರಕಿದ್ದಿರಬೇಕು. ನಮ್ಮಲ್ಲಿ ಪ್ರತಿಯೊಬ್ಬರ ವಿಷಯದಲ್ಲೂ ಇದು ಸತ್ಯವಾಗಿದೆ.—ವಿಮೋಚನಕಾಂಡ 33:13.
22. ಸೃಷ್ಟಿಕರ್ತನ ಮಾರ್ಗಗಳನ್ನು ತಿಳಿದುಕೊಳ್ಳುವುದರಲ್ಲಿ ಏನು ಒಳಗೂಡಿದೆ?
22 ಸೃಷ್ಟಿಕರ್ತನ “ಮಾರ್ಗಗಳ” ಕುರಿತು ತಿಳಿದುಕೊಳ್ಳುವುದರಲ್ಲಿ, ಆತನು ಎಂಥವನೆಂಬುದರ ಕುರಿತು, ಮತ್ತು ಆತನ ವ್ಯಕ್ತಿತ್ವ ಹಾಗೂ ಮಾರ್ಗಗಳ ಕುರಿತು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವುದು ಸೇರಿದೆ. ದೇವರು ಅದೃಶ್ಯನೂ ಭಯಚಕಿತಗೊಳಿಸುವ ರೀತಿಯಲ್ಲಿ ಶಕ್ತಿಶಾಲಿಯೂ ಆಗಿರುವುದರಿಂದ, ನಾವು ಆತನನ್ನು ಹೇಗೆ ಉತ್ತಮವಾಗಿ ತಿಳಿದುಕೊಳ್ಳಸಾಧ್ಯವಿದೆ? ಮುಂದಿನ ಲೇಖನವು ಇದನ್ನು ಪರಿಗಣಿಸುವುದು.
[ಅಧ್ಯಯನ ಪ್ರಶ್ನೆಗಳು]
a ನಾಸಿ ಕೂಟಶಿಬಿರಗಳಲ್ಲಿ ಪಡೆದ ಅನುಭವದಿಂದ, ಡಾ. ವಿಕ್ಟರ್ ಈ. ಫ್ರಾಂಗಲ್ ಗ್ರಹಿಸಿದ್ದು: “ಜೀವನದ ಅರ್ಥವೇನು ಎಂಬ ವಿಷಯದ ಕುರಿತಾದ ಮಾನವನ ಅನ್ವೇಷಣೆಯು, ಅವನ ಜೀವನದ ಪ್ರಧಾನ ಪ್ರೇರಣೆಯಾಗಿದೆ.” ಪ್ರಾಣಿಗಳಂತೆ, “ಹುಟ್ಟರಿವಿನ ಕಾರಣ ಎದ್ದು ಬರುವ ‘ಅಮುಖ್ಯ ಪ್ರೇರಣೆ’ ಇದಲ್ಲ.” ಎರಡನೆಯ ಜಾಗತಿಕ ಯುದ್ಧವಾದ ಹಲವಾರು ದಶಕಗಳ ತರುವಾಯ, ಫ್ರಾನ್ಸಿನಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಗನುಸಾರ, “ಸಮೀಕ್ಷೆಯಲ್ಲಿ ಒಳಗೊಂಡವರಲ್ಲಿ 89 ಪ್ರತಿಶತ ಜನರು ಒಪ್ಪಿಕೊಂಡಿದ್ದೇನೆಂದರೆ, ಜೀವಿಸುವ ಸಲುವಾಗಿ ಮನುಷ್ಯನಿಗೆ ‘ಯಾವುದೊ’ ಒಂದು ವಿಷಯದ ಅಗತ್ಯವಿದೆ.”
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ ನಮ್ಮ ವಿಶ್ವದ ಕುರಿತಾದ ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚನ್ನು ತಿಳಿದುಕೊಳ್ಳಲು ನಾವು ಏಕೆ ಬಯಸಬೇಕು?
◻ ಇತರರು ಸೃಷ್ಟಿಕರ್ತನ ಕುರಿತು ಯೋಚಿಸುವಂತೆ ಸಹಾಯ ಮಾಡಲು, ನೀವು ಯಾವ ವಿಷಯವನ್ನು ಸೂಚಿಸಬಹುದು?
◻ ಸೃಷ್ಟಿಕರ್ತನನ್ನು ತಿಳಿದುಕೊಳ್ಳುವುದು ಜೀವಿತದಲ್ಲಿ ತೃಪ್ತಿದಾಯಕ ಅರ್ಥವನ್ನು ಪಡೆದುಕೊಂಡಿರುವುದಕ್ಕೆ ಒಂದು ಕೀಲಿ ಕೈಯಾಗಿದೆ ಏಕೆ?
[ಪುಟ 18 ರಲ್ಲಿರುವ ಚಿತ್ರ]
(For fully formatted text, see publication)
ನಿಮ್ಮ ತೀರ್ಮಾನವೇನು?
ನಮ್ಮ ವಿಶ್ವ
↓ ↓
ಆರಂಭವಿರಲಿಲ್ಲ
ಆರಂಭವಿತ್ತು
↓ ↓
ತಾನೇ ಅಸ್ತಿತ್ವಕ್ಕೆ ಬಂತು
↓ ↓
ಉಂಟುಮಾಡಲ್ಪಟ್ಟಿತು
ಶಾಶ್ವತವಾದ ಮೂಲದಿಂದ ಶಾಶ್ವತನಾದ ಒಬ್ಬಾತನಿಂದ
[ಪುಟ 15 ರಲ್ಲಿರುವ ಚಿತ್ರ]
ವಿಶಾಲವಾದ ವಿಶ್ವ ಹಾಗೂ ಅದರಲ್ಲಿ ತೋರಿಬರುವ ನಿಷ್ಕೃಷ್ಟತೆ, ಸೃಷ್ಟಿಕರ್ತನ ಕುರಿತು ಯೋಚಿಸುವಂತೆ ಅನೇಕರನ್ನು ಪ್ರಚೋದಿಸಿದೆ
[ಕೃಪೆ]
15 ಮತ್ತು 18ನೆಯ ಪುಟಗಳು: Jeff Hester (Arizona State University) and NASA