ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 2/1 ಪು. 9-13
  • ಮಹಾ ಕುಂಬಾರ ಮತ್ತು ಆತನ ಕೆಲಸ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಹಾ ಕುಂಬಾರ ಮತ್ತು ಆತನ ಕೆಲಸ
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕುಂಬಾರನು ತನ್ನ ಕೆಲಸವನ್ನು ವಿಸ್ತರಿಸುತ್ತಾನೆ
  • ನೀವು ಯಾವ ರೀತಿಯ ಪಾತ್ರೆಯಾಗಿರುವಿರಿ?
  • ಪರೀಕ್ಷೆಗಳನ್ನು ನಿಭಾಯಿಸುವಂತೆ ರೂಪಿಸಲ್ಪಡುವುದು
  • ನಮ್ಮ ಎಳೆಯರನ್ನು ರೂಪಿಸುವುದು
  • ಸಕಲರಾಗಿರುವ ರೂಪಿಸುವಿಕೆ
  • ಯೆಹೋವನ ಶಿಸ್ತು ನಮ್ಮನ್ನು ರೂಪಿಸಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಮಣ್ಣಿನ ಘಟಗಳಲ್ಲಿರುವ ನಿಕ್ಷೇಪ
    ಕಾವಲಿನಬುರುಜು—1999
  • ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
    2007 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು—1999
w99 2/1 ಪು. 9-13

ಮಹಾ ಕುಂಬಾರ ಮತ್ತು ಆತನ ಕೆಲಸ

“ಸಕಲ ಸತ್ಕಾರ್ಯಕ್ಕೆ ಸಿದ್ಧರಾಗಿರುವ . . . ಗೌರವಾರ್ಹ ಬಳಕೆಗಾಗಿರುವ ಪಾತ್ರೆ [ಆಗಿರಿ].”—2 ತಿಮೊಥೆಯ 2:21, NW.

1, 2. (ಎ) ಯಾವ ರೀತಿಯಲ್ಲಿ ಪುರುಷ ಹಾಗೂ ಸ್ತ್ರೀಯ ಸೃಷ್ಟಿಯು, ದೇವರ ಸೃಷ್ಟಿಯಲ್ಲೇ ಎದ್ದುಕಾಣುವ ಸೃಷ್ಟಿಯಾಗಿತ್ತು? (ಬಿ) ಆದಾಮಹವ್ವರನ್ನು ಈ ಮಹಾ ಕುಂಬಾರನು ಯಾವ ಉದ್ದೇಶಕ್ಕಾಗಿ ರೂಪಿಸಿದನು?

ಯೆಹೋವನು ಮಹಾ ಕುಂಬಾರನಾಗಿದ್ದಾನೆ. ಆತನ ಸೃಷ್ಟಿಯಲ್ಲೇ ಅತ್ಯುತ್ತಮ ಸೃಷ್ಟಿಯು, ನಮ್ಮ ಮೂಲ ಪಿತೃವಾದ ಆದಾಮನಾಗಿದ್ದನು. ಬೈಬಲು ನಮಗೆ ಹೇಳುವುದು: “ಹೀಗಿರಲು ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು,” ಅಂದರೆ “ಉಸಿರಾಡುವ ಜೀವಿ” ಆದನು. (ಆದಿಕಾಂಡ 2:7, NW ಪಾದಟಿಪ್ಪಣಿ) ಆ ಪ್ರಥಮ ಮಾನವ ಸೃಷ್ಟಿಯು, ದೇವರ ಸ್ವರೂಪದಲ್ಲಿ ರೂಪಿಸಲ್ಪಟ್ಟಿದ್ದು, ಪರಿಪೂರ್ಣವಾಗಿತ್ತು. ಅದು ದೇವರ ದಿವ್ಯ ವಿವೇಕ ಹಾಗೂ ಸತ್ಯ ನೀತಿನ್ಯಾಯಗಳಿಗಾಗಿರುವ ಆತನ ಪ್ರೀತಿಯ ಪ್ರಮಾಣವೂ ಆಗಿತ್ತು.

2 ಆದಾಮನ ಪಕ್ಕೆಲುಬುಗಳಲ್ಲಿ ಒಂದನ್ನು ಉಪಯೋಗಿಸಿ ದೇವರು ಸ್ತ್ರೀಯನ್ನು, ಅಂದರೆ ಮನುಷ್ಯನಿಗಾಗಿ ಒಬ್ಬ ಸಹಕಾರಿಣಿ ಮತ್ತು ಸಹಾಯಕಳನ್ನು ರೂಪಿಸಿದನು. ಹವ್ವಳ ನಿರ್ಮಲ ಸೌಂದರ್ಯವು, ಇಂದು ಸ್ತ್ರೀಜಾತಿಯಲ್ಲಿರುವ ಅತ್ಯಂತ ಸುಂದರ ಸ್ತ್ರೀಯ ಸೌಂದರ್ಯಕ್ಕಿಂತಲೂ ಬಹಳಷ್ಟು ಮಿಗಿಲಾಗಿತ್ತು. (ಆದಿಕಾಂಡ 2:21-23) ಅಲ್ಲದೆ, ಈ ಭೂಮಿಯನ್ನು ಒಂದು ಪ್ರಮೋದವನವಾಗಿ ರೂಪಿಸುವ ಅವರ ನೇಮಕಕ್ಕೆ ಸರಿಯಾಗಿ ಹೊಂದಿಕೊಳ್ಳುವ ದೇಹಗಳನ್ನು ಮತ್ತು ಸಾಮರ್ಥ್ಯಗಳನ್ನು ಆ ಪ್ರಥಮ ಮಾನವ ದಂಪತಿಗಳು ಪಡೆದುಕೊಂಡಿದ್ದರು. ಅಲ್ಲದೆ, ಆದಿಕಾಂಡ 1:28ರಲ್ಲಿರುವ ದೇವರ ಆಜ್ಞೆಯನ್ನು ಪೂರೈಸಲು ಬೇಕಾದ ಸಾಮರ್ಥ್ಯವೂ ಅವರಿಗಿತ್ತು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” ಕಟ್ಟಕಡೆಗೆ, ಈ ಭೌಗೋಲಿಕ ತೋಟವು ಕೋಟ್ಯಾನುಕೋಟಿ ಆನಂದಭರಿತ ಮಾನವರಿಂದ ತುಂಬಲ್ಪಡಲಿತ್ತು. ಇವರು “ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿ”ರುವಂತಹ ಪ್ರೀತಿಯಲ್ಲಿ ಒಟ್ಟಿಗೆ ಸೇರಿಸಲ್ಪಡಲಿದ್ದರು.—ಕೊಲೊಸ್ಸೆ 3:14.

3. ನಮ್ಮ ಪ್ರಥಮ ಹೆತ್ತವರು ಗೌರವಹೀನ ಪಾತ್ರೆಗಳಾದದ್ದು ಹೇಗೆ, ಮತ್ತು ಯಾವ ಪರಿಣಾಮದೊಂದಿಗೆ?

3 ಆದರೆ ದುಃಖಕರವಾಗಿ, ನಮ್ಮ ಪ್ರಥಮ ಹೆತ್ತವರು ಮಹಾ ಕುಂಬಾರನಾದ ತಮ್ಮ ಪರಮಾಧಿಕಾರಿ ಸೃಷ್ಟಿಕರ್ತನ ಅಧಿಕಾರದ ವಿರುದ್ಧ ದಂಗೆಯೇಳಲು ಉದ್ದೇಶಪೂರ್ವಕವಾಗಿಯೇ ಆರಿಸಿಕೊಂಡರು. ಅವರ ಮಾರ್ಗಕ್ರಮವು ಯೆಶಾಯ 29:15, 16ರಲ್ಲಿ ವರ್ಣಿಸಲಾದ ವಿಷಯದಂತಾಯಿತು: “ತಮ್ಮ ಆಲೋಚನೆಯನ್ನು ಯೆಹೋವನಿಗೆ ಮರೆಮಾಜುವದಕ್ಕೆ ಅಗಾಧೋಪಾಯ ಮಾಡಿ ನಮ್ಮನ್ನು ಯಾರು ನೋಡಿಯಾರು, ಯಾರು ತಿಳಿದಾರು ಅಂದುಕೊಂಡು ಕತ್ತಲಲ್ಲೇ ತಮ್ಮ ಕೆಲಸಗಳನ್ನು ನಡಿಸುವವರ ಗತಿಯನ್ನು ಏನು ಹೇಳಲಿ! . . . ಕುಂಬಾರನು ಮಣ್ಣೆನಿಸಿಕೊಂಡಾನೇ? ಕಾರ್ಯವು ಕರ್ತೃವನ್ನು ಕುರಿತು ಅವನು ನನ್ನನ್ನು ಮಾಡಲಿಲ್ಲ ಎಂದುಕೊಂಡೀತೇ? ನಿರ್ಮಿತವಾದದ್ದು ನಿರ್ಮಿಸಿದವನ ವಿಷಯವಾಗಿ ಅವನಿಗೆ ವಿವೇಕವಿಲ್ಲ ಎಂದೀತೇ?” ಅವರ ಮೊಂಡುತನವು ಕೇಡನ್ನು, ಅಂದರೆ ಅನಂತ ಮರಣ ದಂಡನೆಯನ್ನು ತಂದಿತು. ಮತ್ತು ಅವರಿಂದ ಬಂದ ಇಡೀ ಮಾನವ ಕುಲವು, ಪಾಪಮರಣಗಳನ್ನು ಪಿತ್ರಾರ್ಜಿತವಾಗಿ ಪಡೆದುಕೊಂಡಿತು. (ರೋಮಾಪುರ 5:12, 18) ಆ ಮಹಾ ಕುಂಬಾರನ ಸೃಷ್ಟಿಯ ಸೌಂದರ್ಯವು ತೀರ ಕಲೆಗಟ್ಟಿತು.

4. ಯಾವ ಗೌರವಾರ್ಹ ಉದ್ದೇಶವನ್ನು ನಾವು ಪೂರೈಸಬಲ್ಲಿವು?

4 ಪಾಪಪೂರ್ಣ ಆದಾಮನ ಸಂತತಿಯವರಾದ ನಾವು, ನಮ್ಮ ಸದ್ಯದ ಅಪರಿಪೂರ್ಣ ಸ್ಥಿತಿಯಲ್ಲೂ ಯೆಹೋವನನ್ನು ಕೀರ್ತನೆ 139:14ರ ಮಾತುಗಳಲ್ಲಿ ಸ್ತುತಿಸಸಾಧ್ಯವಿದೆ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” ಆದರೆ, ಮಹಾ ಕುಂಬಾರನ ಮೂಲ ಕೈಕೆಲಸವು ಅತಿಯಾಗಿ ಕಲೆಗೊಂಡಿರುವುದು ಎಷ್ಟೊಂದು ವಿಷಾದನೀಯ!

ಕುಂಬಾರನು ತನ್ನ ಕೆಲಸವನ್ನು ವಿಸ್ತರಿಸುತ್ತಾನೆ

5. ಯಾವ ರೀತಿಯಲ್ಲಿ ಮಹಾ ಕುಂಬಾರನ ಕೌಶಲವು ನಿರ್ವಹಿಸಲ್ಪಡಲಿತ್ತು?

5 ಸಂತೋಷಕರವಾಗಿ, ಕುಂಬಾರನೋಪಾದಿ ನಮ್ಮ ಸೃಷ್ಟಿಕರ್ತನ ಕೌಶಲವು ಮನುಷ್ಯನ ಸೃಷ್ಟಿಯ ರೂಪಿಸುವಿಕೆಯೊಂದಿಗೇ ನಿಂತುಹೋಗಲಿಲ್ಲ. ಅಪೊಸ್ತಲ ಪೌಲನು ನಮಗೆ ಹೇಳುವುದು: “ಎಲೋ ಮನುಷ್ಯನೇ, ಹಾಗನ್ನಬೇಡ; ದೇವರಿಗೆ ಎದುರುಮಾತಾಡುವದಕ್ಕೆ ನೀನು ಎಷ್ಟರವನು? ರೂಪಿಸಲ್ಪಟ್ಟದ್ದು ರೂಪಿಸಿದವನಿಗೆ—ನನ್ನನ್ನು ಹೀಗೇಕೆ ಮಾಡಿದೆ ಎಂದು ಕೇಳುವದುಂಟೇ? ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮುದ್ದೆಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?”—ರೋಮಾಪುರ 9:20, 21.

6, 7. (ಎ) ಇಂದು ಅನೇಕರು ಗೌರವಹೀನತೆಗೆ ರೂಪಿಸಲ್ಪಡುವಂತೆ ಆರಿಸಿಕೊಳ್ಳುವುದು ಹೇಗೆ? (ಬಿ) ನೀತಿವಂತರು ಗೌರವಾರ್ಹ ಬಳಕೆಗೆ ಹೇಗೆ ರೂಪಿಸಲ್ಪಡುತ್ತಾರೆ?

6 ಹೌದು, ಮಹಾ ಕುಂಬಾರನ ಕೆಲಸದಲ್ಲಿ ಕೆಲವು ಗೌರವಾರ್ಹ ಬಳಕೆಗೆ ಮತ್ತು ಇನ್ನೂ ಕೆಲವು ಗೌರವಹೀನ ಬಳಕೆಗೆ ರೂಪಿಸಲ್ಪಡುವವು. ಲೋಕವು ಭಕ್ತಿಹೀನತೆಯೆಂಬ ಕೆಸರಿನಲ್ಲಿ ಇನ್ನೂ ಆಳವಾಗಿ ಮುಳುಗುತ್ತಿರುವಾಗ ಅದರೊಂದಿಗೆ ಸೇರಿಕೊಳ್ಳಲು ಬಯಸುವ ಜನರು, ನಾಶನಕ್ಕೆ ಗುರುತಿಸಲ್ಪಟ್ಟ ಜನರಾಗಿ ರೂಪಿಸಲ್ಪಟ್ಟಿದ್ದಾರೆ. ಮಹಿಮಾಭರಿತ ರಾಜನಾದ ಕ್ರಿಸ್ತ ಯೇಸುವು ನ್ಯಾಯತೀರ್ಪಿಗಾಗಿ ಬರುವಾಗ, ಎಲ್ಲ ಹಟಮಾರಿ ಆಡುಸದೃಶ ಮನುಷ್ಯರು ಗೌರವಹೀನ ಪಾತ್ರೆಗಳ ವರ್ಗದಲ್ಲಿ ಸೇರಿಕೊಂಡಿದ್ದು, ಮತ್ತಾಯ 25:46 ಹೇಳುವಂತೆ ‘ನಿತ್ಯಶಿಕ್ಷೆಗೆ ಹೋಗುವರು.’ ಆದರೆ “ಗೌರವಾರ್ಹ” ಬಳಕೆಗಾಗಿ ರೂಪಿಸಲ್ಪಟ್ಟ ಕುರಿಸದೃಶ “ನೀತಿವಂತರು,” ‘ನಿತ್ಯಜೀವವನ್ನು’ ಪಡೆದುಕೊಳ್ಳುವರು.

7 ಈ ನೀತಿವಂತರು ದೀನಭಾವದಿಂದ ತಮ್ಮನ್ನು ದೈವಿಕ ರೂಪಿಸುವಿಕೆಗೆ ಅಧೀನಪಡಿಸಿಕೊಂಡಿರುವರು. ಅವರು ದೇವರ ಜೀವನ ಮಾರ್ಗವನ್ನು ಪ್ರವೇಶಿಸಿರುವ ಜನರಾಗಿರುವರು. ಅವರು “ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆ”ಯನ್ನಿಡಬೇಕು ಎಂಬ 1 ತಿಮೊಥೆಯ 6:17-19ರಲ್ಲಿರುವ ಸಲಹೆಯನ್ನು ಸ್ವೀಕರಿಸಿದ್ದಾರೆ. “ವಾಸ್ತವಾದ ಜೀವವನ್ನು ಹೊಂದುವದಕ್ಕೋಸ್ಕರ ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿದ್ದು ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟು”ಕೊಳ್ಳಲು ಪರಿಶ್ರಮಪಟ್ಟಿದ್ದಾರೆ. ಅವರು ದೈವಿಕ ಸತ್ಯದ ಮೂಲಕ ರೂಪಿಸಲ್ಪಟ್ಟು, ಕ್ರಿಸ್ತ ಯೇಸುವಿನ ಮುಖಾಂತರ ಯೆಹೋವನು ಮಾಡಿರುವ ಒದಗಿಸುವಿಕೆಯಲ್ಲಿ ಅಚಲವಾದ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ. ಈತನು ಆದಾಮನ ಪಾಪದ ಕಾರಣ ಕಳೆದುಹೋದ ಸಕಲವನ್ನೂ ಪುನಸ್ಥಾಪಿಸಲು “ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಕೊಟ್ಟನು.” (1 ತಿಮೊಥೆಯ 2:6) ಹಾಗಾದರೆ, ‘ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಅದು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ’ ಎಂಬ ಪೌಲನ ಬುದ್ಧಿವಾದಕ್ಕೆ ನಾವು ಎಷ್ಟು ಮನಃಪೂರ್ವಕವಾಗಿ ಅಧೀನರಾಗಬೇಕು!—ಕೊಲೊಸ್ಸೆ 3:10.

ನೀವು ಯಾವ ರೀತಿಯ ಪಾತ್ರೆಯಾಗಿರುವಿರಿ?

8. (ಎ) ವ್ಯಕ್ತಿಯೊಬ್ಬನು ಯಾವ ರೀತಿಯ ಪಾತ್ರೆಯಾಗುತ್ತಾನೆಂಬುದನ್ನು ಯಾವುದು ನಿರ್ಧರಿಸುತ್ತದೆ? (ಬಿ) ಯಾವ ಎರಡು ಅಂಶಗಳು ಒಬ್ಬನ ರೂಪಿಸುವಿಕೆಯ ಮೇಲೆ ಪ್ರಭಾವಬೀರುತ್ತವೆ?

8 ವ್ಯಕ್ತಿಯೊಬ್ಬನು ಯಾವ ರೀತಿಯ ಪಾತ್ರೆಯಾಗುವನೆಂಬುದನ್ನು ಯಾವುದು ನಿರ್ಧರಿಸುತ್ತದೆ? ಅವನ ಮನೋಭಾವ ಹಾಗೂ ನಡತೆಗಳೇ. ಇವು ಪ್ರಥಮವಾಗಿ ಹೃದಯದ ಅಪೇಕ್ಷೆಗಳು ಹಾಗೂ ಯೋಚನೆಗಳಿಂದ ರೂಪಿಸಲ್ಪಡುತ್ತವೆ. ವಿವೇಕಿ ಅರಸನಾದ ಸೊಲೊಮೋನನು ಬರೆದುದು: “ಮನುಷ್ಯನು ತನ್ನ ಮನದಂತೆ ದಾರಿಯನ್ನಾರಿಸಿಕೊಂಡರೂ ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.” (ಜ್ಞಾನೋಕ್ತಿ 16:9) ಎರಡನೆಯದಾಗಿ, ಕಂಡು ಕೇಳಿದಂತಹ ವಿಷಯಗಳಿಂದ, ಸಹವಾಸಗಳಿಂದ ಮತ್ತು ಅನುಭವಗಳಿಂದ ಅವು ರೂಪುಗೊಳ್ಳುತ್ತವೆ. ಹಾಗಾದರೆ, “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು,” ಎಂಬ ಸಲಹೆಗೆ ಕಿವಿಗೊಡುವುದು ಎಷ್ಟೊಂದು ಪ್ರಾಮುಖ್ಯವಾಗಿದೆ! (ಜ್ಞಾನೋಕ್ತಿ 13:20) 2 ಪೇತ್ರ 1:16 ನಮಗೆ ಎಚ್ಚರ ನೀಡುವಂತೆ, ನಾವು “ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು” ಇಲ್ಲವೆ ನಾಕ್ಸ್‌ ಅವರ ರೋಮನ್‌ ಕ್ಯಾತೊಲಿಕ್‌ ತರ್ಜುಮೆಗನುಸಾರ “ಮಾನವ ನಿರ್ಮಿತ ಕಥೆಗಳನ್ನು” ಅನುಸರಿಸಬಾರದು. ಇವುಗಳಲ್ಲಿ ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಬೋಧನೆಗಳು ಮತ್ತು ಹಬ್ಬಗಳು ಸೇರಿವೆ.

9. ಮಹಾ ಕುಂಬಾರನ ರೂಪಿಸುವಿಕೆಗೆ ನಾವು ಹೇಗೆ ಅನುಕೂಲಕರವಾಗಿ ಪ್ರತಿಕ್ರಿಯಿಸಸಾಧ್ಯವಿದೆ?

9 ನಮ್ಮ ಪ್ರತಿಕ್ರಿಯೆಗನುಸಾರ, ದೇವರು ನಮ್ಮನ್ನು ರೂಪಿಸಬಲ್ಲನು. ಯೆಹೋವನ ಮುಂದೆ ನಾವು ದೀನಭಾವದಿಂದ ದಾವೀದನ ಪ್ರಾರ್ಥನೆಯನ್ನು ಪುನರುಚ್ಚರಿಸಸಾಧ್ಯವಿದೆ: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.” (ಕೀರ್ತನೆ 139:23, 24) ರಾಜ್ಯ ಸಂದೇಶವು ಸಾರಲ್ಪಡುವಂತೆ ಯೆಹೋವನು ಅನುಮತಿ ನೀಡಿದ್ದಾನೆ. ನಮ್ಮ ಹೃದಯಗಳು ಸುವಾರ್ತೆಗೆ ಮತ್ತು ಆತನಿಂದ ಬರುವ ಹೆಚ್ಚಿನ ಮಾರ್ಗದರ್ಶನಗಳಿಗೆ ಗಣ್ಯತೆಯಿಂದ ಪ್ರತಿಕ್ರಿಯಿಸಿವೆ. ಸುವಾರ್ತೆಯ ಸಾರುವಿಕೆಯೊಂದಿಗೆ ಸಂಬಂಧಿಸಿರುವ ಹಲವಾರು ಸುಯೋಗಗಳನ್ನು ಆತನು ತನ್ನ ಸಂಸ್ಥೆಯ ಮೂಲಕ ನಮಗೆ ನೀಡಿದ್ದಾನೆ. ನಾವು ಅವುಗಳನ್ನು ಭದ್ರವಾಗಿ ಹಿಡಿದುಕೊಂಡು, ಅವುಗಳನ್ನು ಆದರಿಸಬೇಕು.—ಫಿಲಿಪ್ಪಿ 1:9-11.

10. ಆತ್ಮಿಕ ಕಾರ್ಯಕ್ರಮಗಳನ್ನು ಅನುಸರಿಸುವುದರಲ್ಲಿ ನಾವು ಹೇಗೆ ಪ್ರಯಾಸಪಡಬೇಕು?

10 ನಾವು ದೇವರ ವಾಕ್ಯಕ್ಕೆ ಸತತವಾದ ಗಮನವನ್ನು ಕೊಡುವುದು, ಅನುದಿನವೂ ಬೈಬಲನ್ನು ಓದುವುದು ಮತ್ತು ನಮ್ಮ ಕುಟುಂಬಗಳು ಹಾಗೂ ಮಿತ್ರರ ಜೊತೆಗೆ ಶಾಸ್ತ್ರಗಳನ್ನು ಹಾಗೂ ಯೆಹೋವನ ಸೇವೆಯ ಕುರಿತಾದ ವಿಷಯವನ್ನು ಚರ್ಚೆಯ ಮುಖ್ಯ ಅಂಶವಾಗಿ ಬಳಸುವುದು ಬಹಳಷ್ಟು ಪ್ರಾಮುಖ್ಯವಾಗಿದೆ. ಪ್ರತಿದಿನ ಬೆಳಗ್ಗೆ ಎಲ್ಲ ಬೆತೆಲ್‌ ಕುಟುಂಬ ಹಾಗೂ ಮಿಷನೆರಿ ಗೃಹದಲ್ಲಿ ನಡೆಯುವ ಆರಾಧನಾ ಕಾರ್ಯಕ್ರಮದಲ್ಲಿ, ಸಾಮಾನ್ಯವಾಗಿ ಎರಡು ವಾರಗಳಿಗೊಮ್ಮೆ ಬೈಬಲಿನ ಸಂಕ್ಷಿಪ್ತ ವಾಚನ ಇಲ್ಲವೆ ಪ್ರಚಲಿತ ವರ್ಷಪುಸ್ತಕದ ವಾಚನವು ಸೇರಿರುತ್ತದೆ. ನಿಮ್ಮ ಕುಟುಂಬದಲ್ಲಿಯೂ ತದ್ರೀತಿಯ ಏರ್ಪಾಡನ್ನು ನೀವು ಮಾಡಸಾಧ್ಯವಿದೆಯೊ? ಕ್ರೈಸ್ತ ಸಭೆಯಲ್ಲಿನ ನಮ್ಮ ಸಹವಾಸಗಳ ಮೂಲಕ, ಕೂಟಗಳಲ್ಲಿ ಒಟ್ಟಿಗೆ ಸೇರಿಬರುವ ಮೂಲಕ, ಮತ್ತು ವಿಶೇಷವಾಗಿ ಸಾಪ್ತಾಹಿಕ ಕಾವಲಿನಬುರುಜು ಅಧ್ಯಯನದಲ್ಲಿ ಭಾಗವಹಿಸುವ ಮೂಲಕ ನಾವೆಲ್ಲರೂ ಎಷ್ಟೊಂದು ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ!

ಪರೀಕ್ಷೆಗಳನ್ನು ನಿಭಾಯಿಸುವಂತೆ ರೂಪಿಸಲ್ಪಡುವುದು

11, 12. (ಎ) ನಮ್ಮ ಅನುದಿನದ ಜೀವಿತಗಳಲ್ಲಿ ಬರುವ ಪರೀಕ್ಷೆಗಳ ಕುರಿತು ಯಾಕೋಬನು ನೀಡಿದ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು? (ಬಿ) ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಯೋಬನ ಅನುಭವವು ನಮ್ಮನ್ನು ಹೇಗೆ ಉತ್ತೇಜಿಸುತ್ತದೆ?

11 ನಮ್ಮ ಅನುದಿನದ ಜೀವಿತಗಳಲ್ಲಿ ಕೆಲವೊಂದು ಸನ್ನಿವೇಶಗಳು ಏಳುವಂತೆ ದೇವರು ಅನುಮತಿಸುತ್ತಾನೆ. ಅವುಗಳಲ್ಲಿ ಕೆಲವು ಕಷ್ಟಕರವಾಗಿರಬಹುದು. ಅವುಗಳನ್ನು ನಾವು ಹೇಗೆ ವೀಕ್ಷಿಸಬೇಕು? ಯಾಕೋಬ 4:8 ಸಲಹೆ ನೀಡುವಂತೆ, ನಾವು ಎಂದಿಗೂ ನಿಷ್ಠುರರಾಗದೆ, ದೇವರ ಸಮೀಪಕ್ಕೆ ಬರಬೇಕು; ಪೂರ್ಣ ಹೃದಯದಿಂದ ಆತನಲ್ಲಿ ವಿಶ್ವಾಸವಿಡಬೇಕು ಮತ್ತು ನಾವು ‘ಆತನ ಸಮೀಪಕ್ಕೆ ಬಂದರೆ, ಆತನು ನಮ್ಮ ಸಮೀಪಕ್ಕೆ ಬರುವನೆಂಬ’ ಭರವಸೆ ನಮ್ಮಲ್ಲಿರಬೇಕು. ನಾವು ತೊಂದರೆಗಳನ್ನು ಮತ್ತು ಪರೀಕ್ಷೆಗಳನ್ನು ತಾಳಿಕೊಳ್ಳಬೇಕಾಗಿರುವುದು ನಿಜ, ಆದರೂ ನಮ್ಮ ರೂಪಿಸುವಿಕೆಗೆ ನೆರವು ನೀಡುವ ಕಾರಣ, ಸಂತೋಷಕರ ಪರಿಣಾಮದೊಂದಿಗೆ ಅವು ಅನುಮತಿಸಲ್ಪಟ್ಟಿವೆ. ಯಾಕೋಬ 1:2, 3 ನಮಗೆ ಆಶ್ವಾಸನೆ ನೀಡುವುದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.”

12 ಯಾಕೋಬನು ಹೀಗೂ ಹೇಳುತ್ತಾನೆ: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ—ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ. ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ.” (ಯಾಕೋಬ 1:13, 14) ನಮ್ಮ ಪರೀಕ್ಷೆಗಳು ವೈವಿಧ್ಯಮಯವಾಗಿದ್ದರೂ, ಯೋಬನ ವಿಷಯದಲ್ಲಿ ಸತ್ಯವಾಗಿದ್ದಂತೆಯೇ ಅವು ನಮ್ಮ ರೂಪಿಸುವಿಕೆಯಲ್ಲಿ ಅತ್ಯುತ್ತಮ ಪಾತ್ರವನ್ನು ವಹಿಸುತ್ತವೆ. ಹಾಗಿರುವಲ್ಲಿ, ಯಾಕೋಬ 5:11ರಲ್ಲಿ ಶಾಸ್ತ್ರಗಳು ನಮಗೆ ಎಂತಹ ಮಹಾನ್‌ ಆಶ್ವಾಸನೆಯನ್ನು ನೀಡುತ್ತವೆ: “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” ನಾವು ಮಹಾ ಕುಂಬಾರನ ಹಸ್ತಗಳಲ್ಲಿರುವ ಪಾತ್ರೆಗಳಂತೆ, ಮುಂದಾಗಲಿರುವ ಪರಿಣಾಮದಲ್ಲಿ ಯೋಬಸದೃಶ ಭರವಸೆಯನ್ನು ವ್ಯಕ್ತಪಡಿಸಿ, ಎಲ್ಲ ಸಮಯಗಳಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳೋಣ.—ಯೋಬ 2:3, 9, 10; 27:5; 31:1-6; 42:12-15.

ನಮ್ಮ ಎಳೆಯರನ್ನು ರೂಪಿಸುವುದು

13, 14. (ಎ) ಹೆತ್ತವರು ತಮ್ಮ ಮಕ್ಕಳನ್ನು ರೂಪಿಸಲು ಯಾವಾಗ ಆರಂಭಿಸಬೇಕು, ಮತ್ತು ಯಾವ ಪರಿಣಾಮವನ್ನು ಅವರು ಮನಸ್ಸಿನಲ್ಲಿಟ್ಟುಕೊಳ್ಳಬೇಕು? (ಬಿ) ಯಾವ ಸಂತೋಷಕರ ಫಲಿತಾಂಶಗಳನ್ನು ನೀವು ಉಲ್ಲೇಖಿಸಬಲ್ಲಿರಿ?

13 ಹೆತ್ತವರು ತಮ್ಮ ಮಕ್ಕಳನ್ನು ಬಾಲ್ಯಾವಸ್ಥೆಯಿಂದಲೇ ರೂಪಿಸಲು ತೊಡಗಬೇಕು. ಇದರಿಂದಾಗಿ ನಮ್ಮ ಯುವ ಜನರು ಸಮಗ್ರತೆಯನ್ನು ಕಾಪಾಡುವ ಎಷ್ಟು ಉತ್ತಮ ಮಾದರಿಗಳಾಗಿರಬಲ್ಲರು! (2 ತಿಮೊಥೆಯ 3:14, 15) ಪರೀಕ್ಷೆಗಳು ತೀರ ಕಷ್ಟಕರವಾಗಿದ್ದಾಗಲೂ ಇದು ಸತ್ಯವಾಗಿ ಪರಿಣಮಿಸಿದೆ. ಕೆಲವು ವರ್ಷಗಳ ಹಿಂದೆ, ಆಫ್ರಿಕ ದೇಶವೊಂದರಲ್ಲಿ ಹಿಂಸೆಯು ಬಹಳ ತೀವ್ರವಾಗಿದ್ದಾಗ, ಒಂದು ವಿಶ್ವಾಸಾರ್ಹ ಕುಟುಂಬವು ಹಿತ್ತಲಿನಲ್ಲಿ ಕಾವಲಿನಬುರುಜು ಪತ್ರಿಕೆಯನ್ನು ಗುಪ್ತವಾಗಿ ಮುದ್ರಿಸುತ್ತಿತ್ತು. ಒಂದು ದಿನ ಸೈನಿಕರು, ಯುವ ಪುರುಷರನ್ನು ಸೇನೆಯಲ್ಲಿ ಭರ್ತಿಮಾಡುವುದಕ್ಕೋಸ್ಕರ ಎಲ್ಲ ಮನೆಗಳನ್ನೂ ಸಂದರ್ಶಿಸುತ್ತಿದ್ದರು. ಈ ಕುಟುಂಬದಲ್ಲಿದ್ದ ಇಬ್ಬರು ಯುವಕರಿಗೆ ಅವಿತುಕೊಳ್ಳಲು ಇನ್ನೂ ಸಮಯಾವಕಾಶವಿತ್ತು. ಆದರೆ ಸೈನಿಕರು ನಡೆಸಲಿದ್ದ ಹುಡುಕಾಟದಲ್ಲಿ ಮುದ್ರಣ ಯಂತ್ರವು ಖಂಡಿತವಾಗಿಯೂ ಸಿಕ್ಕಿಬೀಳುತ್ತಿತ್ತು. ಇದು ಚಿತ್ರಹಿಂಸೆಗೆ ಇಲ್ಲವೆ ಇಡೀ ಕುಟುಂಬದ ಕೊಲೆಗೆ ನಡೆಸಸಾಧ್ಯವಿತ್ತು. ಏನು ಮಾಡಸಾಧ್ಯವಿತ್ತು? ಇಬ್ಬರೂ ಯೋಹಾನ 15:13ನ್ನು ಉದ್ಧರಿಸುತ್ತಾ, ಧೈರ್ಯದಿಂದ ಮಾತನಾಡಿದರು: “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ.” ಅವರು ಅವಿತುಕೊಳ್ಳದೆ, ವಾಸದ ಕೋಣೆಯಲ್ಲೇ ಇರುತ್ತೇವೆಂದು ಪಟ್ಟುಹಿಡಿದರು. ಸೈನಿಕರು ನಿಶ್ಚಯವಾಗಿಯೂ ಅವರನ್ನು ಕಂಡುಕೊಳ್ಳಲಿದ್ದರು, ಮತ್ತು ಅವರು ಸೇನೆಯಲ್ಲಿ ಭರ್ತಿಯಾಗಲು ನಿರಾಕರಿಸುವಾಗ ಅವರನ್ನು ಕ್ರೂರವಾಗಿ ಹಿಂಸಿಸಲಿದ್ದರು ಇಲ್ಲವೆ ಕೊಲ್ಲಲಿದ್ದರು. ಆದರೆ ಆ ಸೈನಿಕರು ಹೆಚ್ಚಿನ ಹುಡುಕಾಟವನ್ನು ಮಾಡುತ್ತಿರಲಿಲ್ಲ. ಮುದ್ರಣ ಯಂತ್ರ ಮತ್ತು ಕುಟುಂಬದ ಇತರ ಸದಸ್ಯರು ಬಚಾವಾಗಲಿದ್ದರು. ಆದರೆ, ಅಲ್ಲಿ ನಡೆದ ಸಂಗತಿಯೇ ಬೇರೆಯಾಗಿತ್ತು. ಸೈನಿಕರು ಈ ಒಂದು ಮನೆಯನ್ನು ಬಿಟ್ಟು ಬೇರೆಲ್ಲಾ ಮನೆಗಳಿಗೆ ಹೋದರು! ಗೌರವಾರ್ಹ ಬಳಕೆಗಾಗಿ ರೂಪಿಸಲ್ಪಟ್ಟ ಆ ಮಾನವ ಪಾತ್ರೆಗಳು, ಮುದ್ರಣ ಯಂತ್ರದೊಂದಿಗೆ ಬದುಕಿ ಉಳಿದು, ಸಮಯೋಚಿತವಾದ ಆತ್ಮಿಕ ಆಹಾರವನ್ನು ಈಗಲೂ ಪ್ರಕಟಿಸುತ್ತಿವೆ. ಆ ಇಬ್ಬರು ಹುಡುಗರಲ್ಲಿ ಒಬ್ಬನು ಮತ್ತು ಅವನ ಅಕ್ಕ ಈಗ ಬೆತೆಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ; ಅವನು ಆ ಹಳೆಯ ಯಂತ್ರವನ್ನು ಈಗಲೂ ನಡೆಸುತ್ತಿದ್ದಾನೆ.

14 ಎಳೆಯ ಮಕ್ಕಳಿಗೆ ಹೇಗೆ ಪ್ರಾರ್ಥಿಸಬೇಕೆಂಬುದನ್ನೂ ಕಲಿಸಸಾಧ್ಯವಿದೆ. ಮತ್ತು ನಮ್ಮ ದೇವರು ನಿಶ್ಚಯವಾಗಿಯೂ ಅವರ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ. ರುಆಂಡದಲ್ಲಾದ ಕಗ್ಗೊಲೆಗಳ ಸಮಯದಲ್ಲಿ ಈ ಎದ್ದುಕಾಣುವ ಘಟನೆಯು ಸಂಭವಿಸಿತು. ಆರು ವರ್ಷ ಪ್ರಾಯದ ಹುಡುಗಿಯೂ ಅವಳ ಹೆತ್ತವರೂ ಸಿಡಿಗುಂಡಿನಿಂದ ವಧಿಸಲ್ಪಡುವಂತೆ ವಿದ್ರೋಹಿಗಳು ಎಲ್ಲವನ್ನೂ ಸಿದ್ಧಪಡಿಸಿದ್ದ ಸಮಯದಲ್ಲಿ, ಯೆಹೋವನಿಗೆ ಹೆಚ್ಚಿನ ಸೇವೆಯನ್ನು ಸಲ್ಲಿಸಲಿಕ್ಕಾಗಿ ತಾವು ಉಳಿಸಲ್ಪಡಬೇಕೆಂದು ಆ ಹುಡುಗಿಯು ಗಟ್ಟಿಯಾಗಿಯೂ ಉದ್ರಿಕ್ತವಾಗಿಯೂ ಪ್ರಾರ್ಥಿಸಿದಳು. “ಈ ಪುಟ್ಟ ಹುಡುಗಿಯ ಕಾರಣ ನಾವು ನಿಮ್ಮನ್ನು ಕೊಲ್ಲಸಾಧ್ಯವಿಲ್ಲ” ಎಂದು ಹೇಳುತ್ತಾ, ಕೊಲೆಗೈಯಲಿದ್ದ ಆ ಜನರು ಇವರನ್ನು ಕೊಲ್ಲದೆ ಬಿಟ್ಟುಬಿಟ್ಟರು.—1 ಪೇತ್ರ 3:12.

15. ಭ್ರಷ್ಟಗೊಳಿಸುವ ಯಾವ ಪ್ರಭಾವಗಳ ವಿರುದ್ಧ ಪೌಲನು ಎಚ್ಚರಿಸಿದನು?

15 ಮೇಲೆ ವರ್ಣಿಸಲಾದಂತಹ ಕಷ್ಟಕರವಾದ ಸನ್ನಿವೇಶಗಳನ್ನು ನಮ್ಮಲ್ಲಿ ಹೆಚ್ಚಿನ ಯುವ ಮಕ್ಕಳು ನಿಭಾಯಿಸಬೇಕಾಗಿರುವುದಿಲ್ಲ. ಆದರೆ, ಇಂದು ಶಾಲೆಯಲ್ಲಿ ಹಾಗೂ ಭ್ರಷ್ಟ ಸಮಾಜಗಳಲ್ಲಿ ಅವರು ಎದುರಿಸುವಂತಹ ಪರೀಕ್ಷೆಗಳು ಅನೇಕ ಇವೆ: ದುರ್ಭಾಷೆ, ಲಂಪಟ ಸಾಹಿತ್ಯ, ಕೀಳ್ಮಟ್ಟದ ಮನೋರಂಜನೆ, ಮತ್ತು ದುರಭ್ಯಾಸಗಳಲ್ಲಿ ತೊಡಗಲಿಕ್ಕಾಗಿರುವ ಸಮವಯಸ್ಕರ ಒತ್ತಡವು ಅನೇಕ ಸ್ಥಳಗಳಲ್ಲಿ ಪ್ರಚಲಿತವಾಗಿವೆ. ಇಂತಹ ಪ್ರಭಾವಗಳ ವಿರುದ್ಧ ಅಪೊಸ್ತಲ ಪೌಲನು ಸತತವಾಗಿ ಎಚ್ಚರಿಸಿದನು.—1 ಕೊರಿಂಥ 5:6; 15:33, 34; ಎಫೆಸ 5:3-7.

16. ಒಬ್ಬನು ಗೌರವಾರ್ಹ ಬಳಕೆಗಾಗಿರುವ ಪಾತ್ರೆಯಾಗಬಹುದು ಹೇಗೆ?

16 “ಕೆಲವು ಉತ್ತಮವಾದ ಬಳಕೆಗೂ ಕೆಲವು ಹೀನವಾದ ಬಳಕೆಗೂ” ಇಡಲ್ಪಟ್ಟ ಪಾತ್ರೆಗಳ ಕುರಿತು ತಿಳಿಸಿದ ಬಳಿಕ, ಪೌಲನು ಹೇಳುವುದು: “ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ ಅವನು ಉತ್ತಮನಾದ ಬಳಕೆಗೆ ಯೋಗ್ಯನಾಗಿರುವನು; ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ ಯಜಮಾನನಿಗೆ ಉಪಯುಕ್ತನಾಗಿಯೂ ಸಕಲಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧನಾಗಿಯೂ ಇರುವನು.” ಆದುದರಿಂದ ಯುವ ಜನರು ತಮ್ಮ ಸಹವಾಸಿಗಳ ವಿಷಯದಲ್ಲಿ ಜಾಗರೂಕರಾಗಿರುವಂತೆ ನಾವು ಅವರನ್ನು ಉತ್ತೇಜಿಸೋಣ. ಅವರು ‘ಯೌವನದ ಇಚ್ಛೆಗಳಿಗೆ ದೂರವಾಗಿ ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ಪ್ರಯಾಸ’ಪಡಲಿ. (2 ತಿಮೊಥೆಯ 2:20-22) ನಮ್ಮ ಯುವ ಜನರನ್ನು ರೂಪಿಸುವುದರಲ್ಲಿ ‘ಒಬ್ಬರನ್ನೊಬ್ಬರು ಕಟ್ಟುವ’ ಕುಟುಂಬ ಕಾರ್ಯಯೋಜನೆಯು ಅತ್ಯಮೂಲ್ಯವಾಗಿರುವುದು. (1 ಥೆಸಲೊನೀಕ 5:11; ಜ್ಞಾನೋಕ್ತಿ 22:6) ಸೊಸೈಟಿಯು ಪ್ರಕಾಶಿಸಿರುವ ಸೂಕ್ತವಾದ ಪ್ರಕಾಶನವನ್ನು ಉಪಯೋಗಿಸುತ್ತಾ, ದೈನಿಕ ಬೈಬಲ್‌ ವಾಚನ ಮತ್ತು ಅಧ್ಯಯನವನ್ನು ಮಾಡುವುದು, ಉತ್ತಮ ಸಹಾಯವಾಗಿರಬಲ್ಲದು.

ಸಕಲರಾಗಿರುವ ರೂಪಿಸುವಿಕೆ

17. ಶಿಸ್ತು ನಮ್ಮನ್ನು ಹೇಗೆ ರೂಪಿಸುವುದು, ಮತ್ತು ಯಾವ ಆನಂದಕರ ಫಲಿತಾಂಶದೊಂದಿಗೆ?

17 ನಮ್ಮನ್ನು ರೂಪಿಸಲು, ಯೆಹೋವನು ತನ್ನ ವಾಕ್ಯದಿಂದ ಮತ್ತು ತನ್ನ ಸಂಸ್ಥೆಯ ಮೂಲಕ ಸಲಹೆ ನೀಡುತ್ತಾನೆ. ಅಂತಹ ದೈವಿಕ ಸಲಹೆಯನ್ನು ಎಂದಿಗೂ ವಿರೋಧಿಸದಿರಿ! ವಿವೇಕಯುಕ್ತವಾಗಿ ಅದಕ್ಕೆ ಪ್ರತಿಕ್ರಿಯಿಸಿ, ಯೆಹೋವನು ನಿಮ್ಮನ್ನು ಗೌರವಾರ್ಹ ಬಳಕೆಗಾಗಿ ಉಪಯೋಗಿಸುವಂತೆ ಅದನ್ನು ಅನುಮತಿಸಿರಿ. ಜ್ಞಾನೋಕ್ತಿ 3:11, 12 ಬುದ್ಧಿಹೇಳುವುದು: “ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.” ಅಲ್ಲದೆ, ತಂದೆಸದೃಶ ಸಲಹೆಯು ಇಬ್ರಿಯ 12:6-11ರಲ್ಲಿ ನೀಡಲ್ಪಟ್ಟಿದೆ: “ಕರ್ತನು [“ಯೆಹೋವನು,” “NW”] ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ; . . . ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.” ಅಂತಹ ಶಿಸ್ತಿನ ಮುಖ್ಯ ಮಾಧ್ಯಮವು ದೇವರ ಪ್ರೇರಿತ ಗ್ರಂಥವಾಗಿರಬೇಕು.—2 ತಿಮೊಥೆಯ 3:16, 17.

18. ಪಶ್ಚಾತ್ತಾಪದ ವಿಷಯದಲ್ಲಿ ನಾವು ಲೂಕನ 15ನೆಯ ಅಧ್ಯಾಯದಿಂದ ಏನನ್ನು ಕಲಿಯುತ್ತೇವೆ?

18 ಯೆಹೋವನು ಕರುಣಾಭರಿತನೂ ಹೌದು. (ವಿಮೋಚನಕಾಂಡ 34:6) ಅತಿ ಗಂಭೀರವಾದ ಪಾಪದ ವಿಷಯದಲ್ಲಿಯೂ ಹೃತ್ಪೂರ್ವಕವಾದ ಪಶ್ಚಾತ್ತಾಪವನ್ನು ತೋರಿಸಿದಾಗ, ಆತನು ಕ್ಷಮಾಪಣೆಯನ್ನು ನೀಡುತ್ತಾನೆ. ಆಧುನಿಕ ದಿನದ ‘ಪೋಲಿಹೋದವರು’ ಕೂಡ, ಗೌರವಾರ್ಹ ಬಳಕೆಗಾಗಿರುವ ಪಾತ್ರೆಗಳಾಗಿ ರೂಪಿಸಲ್ಪಡಸಾಧ್ಯವಿದೆ. (ಲೂಕ 15:22-24, 32) ನಮ್ಮ ಪಾಪಗಳು ಪೋಲಿಹೋದವನ ಪಾಪಗಳಷ್ಟು ಗಂಭೀರವಾಗಿರಲಿಕ್ಕಿಲ್ಲ. ಆದರೆ ಶಾಸ್ತ್ರೀಯ ಸಲಹೆಗೆ ನಾವು ದೀನಭಾವದಿಂದ ಪ್ರತಿಕ್ರಿಯಿಸುವಾಗ, ನಾವು ಗೌರವಾರ್ಹ ಬಳಕೆಗಾಗಿರುವ ಪಾತ್ರೆಗಳಾಗಿ ರೂಪಿಸಲ್ಪಡುವುದಕ್ಕೆ ಅದು ಸದಾ ನಮ್ಮನ್ನು ನಡೆಸುವುದು.

19. ಯೆಹೋವನ ಹಸ್ತಗಳಲ್ಲಿ ನಾವು ಗೌರವಾರ್ಹ ಪಾತ್ರೆಗಳಾಗಿ ಹೇಗೆ ಸೇವೆಸಲ್ಲಿಸುತ್ತಾ ಇರಬಹುದು?

19 ನಾವು ಸತ್ಯವನ್ನು ಮೊದಮೊದಲು ಕಲಿತಾಗ, ಯೆಹೋವನು ನಮ್ಮನ್ನು ರೂಪಿಸುವಂತೆ ನಾವು ಸ್ವಇಚ್ಛೆಯಿಂದ ಅನುಮತಿಸಿದೆವು. ನಾವು ಲೌಕಿಕ ರೀತಿನೀತಿಗಳನ್ನು ತೊರೆದು, ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡು, ಸಮರ್ಪಿತ ಹಾಗೂ ದೀಕ್ಷಾಸ್ನಾನ ಪಡೆದುಕೊಂಡ ಕ್ರೈಸ್ತರಾದೆವು. ಎಫೆಸ 4:20-24ರಲ್ಲಿರುವ ಸಲಹೆಗೆ ನಾವು ವಿಧೇಯರಾದೆವು: ‘ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥ ಪೂರ್ವಸ್ವಭಾವವನ್ನು ತೆಗೆದುಹಾಕಿ, ಆಂತರ್ಯದಲ್ಲಿ ಹೊಸಬರಾಗಿ ನೂತನಸ್ವಭಾವವನ್ನು ಧರಿಸಿಕೊಂಡೆವು. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.’ ನಾವು ಮಹಾ ಕುಂಬಾರನಾದ ಯೆಹೋವನ ಗೌರವಾರ್ಹ ಬಳಕೆಗಾಗಿರುವ ಪಾತ್ರೆಗಳಂತೆ ಸದಾ ಸೇವೆಸಲ್ಲಿಸುತ್ತಾ, ಆತನ ಹಸ್ತಗಳಲ್ಲಿ ಮಣಿಯುವವರಾಗುವಂತೆ ವ್ಯಕ್ತಿಗತವಾಗಿ ಮುಂದುವರಿಯೋಣ!

ಪುನರ್ವಿಮರ್ಶೆಯಲ್ಲಿ

◻ ನಮ್ಮ ಭೂಮಿಯ ಕಡೆಗೆ ಮಹಾ ಕುಂಬಾರನ ಉದ್ದೇಶವು ಏನಾಗಿದೆ?

◻ ನೀವು ಗೌರವಾರ್ಹ ಬಳಕೆಗಾಗಿ ಹೇಗೆ ರೂಪಿಸಲ್ಪಡಬಹುದು?

◻ ಯಾವ ವಿಧದಲ್ಲಿ ನಮ್ಮ ಮಕ್ಕಳು ರೂಪಿಸಲ್ಪಡಬಲ್ಲರು?

◻ ಶಿಸ್ತಿನ ವಿಷಯದಲ್ಲಿ ನಮ್ಮ ನೋಟವು ಏನಾಗಿರಬೇಕು?

[ಪುಟ 10 ರಲ್ಲಿರುವ ಚಿತ್ರ]

ನೀವು ಗೌರವಾರ್ಹ ಬಳಕೆಗಾಗಿ ರೂಪಿಸಲ್ಪಡುವಿರೊ ಇಲ್ಲವೆ ತಿರಸ್ಕರಿಸಲ್ಪಡುವಿರೊ?

[ಪುಟ 12 ರಲ್ಲಿರುವ ಚಿತ್ರ]

ಎಳೆಯರನ್ನು ಬಾಲ್ಯಾವಸ್ಥೆಯಿಂದ ರೂಪಿಸಸಾಧ್ಯವಿದೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ