ರಾಜ್ಯ ಘೋಷಕರು ವರದಿಮಾಡುತ್ತಾರೆ
ಸತ್ಯ ದೇವರಿಗಾಗಿ ನಡೆಸಿದ ಹುಡುಕಾಟವು ಬಹುಮಾನಿಸಲ್ಪಟ್ಟಿತು
ಸಾ.ಶ.ಪೂ. ಹತ್ತನೆಯ ಶತಮಾನದಲ್ಲಿ, ಎರಡು ಕುಲಗಳ ರಾಜ್ಯವಾದ ಯೆಹೂದವು ಸುಳ್ಳಾರಾಧನೆಯಿಂದ ತುಂಬಿ ತುಳುಕುತ್ತಿತ್ತು. ಆದರೆ, ಎಲ್ಲೆಡೆಯೂ ವ್ಯಾಪಿಸಿದ್ದ ಈ ಮೂರ್ತಿಪೂಜೆಯ ಮಧ್ಯದಲ್ಲಿಯೂ, ದೇವರ ಕಡೆಗೆ ಯೋಗ್ಯ ಮನೋಭಾವವನ್ನು ಪ್ರದರ್ಶಿಸಿದ ಒಬ್ಬ ಮನುಷ್ಯನು ಜೀವಿಸಿದನು. ಅವನೇ ಯೆಹೋಷಾಫಾಟನು. ಅವನ ಕುರಿತು ಪ್ರವಾದಿಯಾದ ಯೇಹೂ ಹೀಗೆ ಹೇಳಿದನು: “ನಿನ್ನಲ್ಲಿ ಒಳ್ಳೆಯ ವಿಷಯಗಳು ಕಂಡುಕೊಳ್ಳಲ್ಪಟ್ಟಿವೆ, ಏಕೆಂದರೆ ನೀನು . . . ಸತ್ಯ ದೇವರನ್ನು ಹುಡುಕಲಿಕ್ಕಾಗಿ ನಿನ್ನ ಹೃದಯವನ್ನು ಸಿದ್ಧಗೊಳಿಸಿರುವಿ.” (2 ಪೂರ್ವಕಾಲವೃತ್ತಾಂತ 19:3, NW) ಅಂತೆಯೇ ಇಂದು, ಈ “ಕಠಿನಕಾಲ”ಗಳಲ್ಲಿ ಸತ್ಯ ದೇವರಾದ ಯೆಹೋವನನ್ನು ಹುಡುಕಲು ಲಕ್ಷಾಂತರ ಜನರು ‘ತಮ್ಮ ಹೃದಯಗಳನ್ನು ಸಿದ್ಧಗೊಳಿಸಿ’ಕೊಂಡಿದ್ದಾರೆ. (2 ತಿಮೊಥೆಯ 3:1-5) ಪಶ್ಚಿಮ ಆಫ್ರಿಕದ ಟೋಗೊ ಪ್ರದೇಶದಿಂದ ಬಂದ ಈ ಕೆಳಗಿನ ಅನುಭವದಿಂದ ಈ ವಿಷಯವು ಸ್ಪಷ್ಟವಾಗುತ್ತದೆ.
ಕಾಸೀಮೀರ್ ಕ್ಯಾತೊಲಿಕ್ ಶಾಲೆಗೆ ಹೋಗುತ್ತಿದ್ದು, ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಪ್ರಪ್ರಥಮವಾಗಿ ಪ್ರಭುಭೋಜನದ ಸಂಸ್ಕಾರದಲ್ಲಿ ಭಾಗವಹಿಸಿದನು. ಹಾಗಿದ್ದರೂ, ಅವನಿಗೆ 14 ವರ್ಷ ವಯಸ್ಸಾಗುವಾಗಲೇ ಅವನು ಚರ್ಚಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದನು. ತಾನು ಚರ್ಚಿನ ವ್ರತಾಚರಣೆಗೆ ಹೋಗದೆ ಇದ್ದ ಕಾರಣ, ನರಕಾಗ್ನಿಗೊ ಇಲ್ಲವೆ ಶುದ್ಧಿಲೋಕಕ್ಕೊ ಹೋಗುವೆನೆಂಬ ಭಯದಲ್ಲಿ ಅವನು ಜೀವಿಸುತ್ತಿದ್ದನು.
ಕಾಸೀಮೀರನು ಶಾಲೆಯಲ್ಲಿ ಬೈಬಲನ್ನು ಅಭ್ಯಸಿಸಲು ವಾರಕ್ಕೊಮ್ಮೆ ಕೂಡಿಬರುತ್ತಿದ್ದ ಯುವಕರ ಒಂದು ಗುಂಪಿನಲ್ಲಿ ಸೇರಿಕೊಂಡು, ತಾನೂ ಬೈಬಲನ್ನು ಓದತೊಡಗಿದನು. ಪ್ರಕಟನೆಯ ಪುಸ್ತಕದಲ್ಲಿ, ಸಮುದ್ರದಿಂದ ಹೊರಬರುತ್ತಿರುವ ಒಂದು ಭಯಂಕರವಾದ ಮೃಗದ ಕುರಿತು ಕಾಸೀಮೀರ್ ಒಮ್ಮೆ ಓದಿದನು. (ಪ್ರಕಟನೆ 13:1, 2) ಆ ಮೃಗದ ಕುರಿತು ಬೈಬಲ್ ಅಧ್ಯಯನ ಗುಂಪಿನ ನಾಯಕನನ್ನು ಕೇಳಿದಾಗ, ಅದು ವಾಸ್ತವವಾದ ಮೃಗವೆಂದೂ ಅದು ನಿಜವಾಗಿಯೂ ಸಮುದ್ರದಿಂದ ಹೊರಬರುವುದೆಂದೂ ಅವನಿಗೆ ತಿಳಿಸಲಾಯಿತು. ಕಾಸೀಮೀರ್ ಅ್ಯಟ್ಲ್ಯಾಂಟಿಕ್ ತೀರದ ಬಳಿಯೇ ಜೀವಿಸುತ್ತಿದ್ದ ಕಾರಣ, ಈ ವಿವರಣೆಯು ಅವನನ್ನು ಬಹಳವಾಗಿ ಬಾಧಿಸಿತು. ಆ ಮೃಗದ ಪ್ರಥಮ ಆಹುತಿಗಳಲ್ಲಿ ತಾನು ಒಬ್ಬನಾಗಿರುವೆನೆಂದು ಅವನಿಗೆ ಮನದಟ್ಟಾಯಿತು.
ಮೃಗದಿಂದ ತಪ್ಪಿಸಿಕೊಳ್ಳಲು, ಉತ್ತರ ದಿಕ್ಕಿನಲ್ಲಿರುವ ಮರುಭೂಮಿಗೆ ಓಡಿಹೋಗಸಾಧ್ಯವಾಗುವಂತೆ ಕಾಸೀಮೀರ್ ಹಣವನ್ನು ಒಟ್ಟುಗೂಡಿಸಲಾರಂಭಿಸಿದನು. ತನ್ನ ಯೋಜನೆಗಳ ಕುರಿತು ತನ್ನ ಸಹಪಾಠಿಗೆ ತಿಳಿಸಿದನು. ಆ ಸಹಪಾಠಿಯು ಯೆಹೋವನ ಒಬ್ಬ ಸಾಕ್ಷಿಯಾಗಿದ್ದ ಕಾರಣ, ಅಂತಹ ಒಂದು ಅಕ್ಷರಶಃ ಮೃಗವು ಸಮುದ್ರದಿಂದ ಹೊರಬರಲಾರದೆಂದು ಅವನಿಗೆ ಭರವಸೆ ನೀಡಿದನು. ತರುವಾಯ, ರಾಜ್ಯ ಸಭಾಗೃಹದ ಕೂಟಗಳಿಗೆ ಕಾಸೀಮೀರ್ ಆಮಂತ್ರಿಸಲ್ಪಟ್ಟನು. ಅವನು ಕೂಟಗಳಲ್ಲಿ ಆನಂದಿಸಿದನು ಮತ್ತು ಕ್ರಮವಾಗಿ ಹಾಜರಾಗತೊಡಗಿದನು. ಅವನೊಂದು ಮನೆ ಬೈಬಲ್ ಅಭ್ಯಾಸವನ್ನೂ ಸ್ವೀಕರಿಸಿದನು.
ಕಾಸೀಮೀರ್ ತನ್ನ ಬೈಬಲ್ ಅಭ್ಯಾಸದಲ್ಲಿ ಪ್ರಗತಿಮಾಡಿದಂತೆ, ಅವನ ಕುಟುಂಬವು ಅವನನ್ನು ವಿರೋಧಿಸತೊಡಗಿತು. ಅವನ ಕುಟುಂಬದವರು ಪೂರ್ವಿಕರ ಆರಾಧನೆಯಲ್ಲಿ ಪಾಲ್ಗೊಂಡು, ಯಜ್ಞಾರ್ಪಣೆಗಳಲ್ಲಿ ಮಿಕ್ಕಿ ಉಳಿದ ರಕ್ತಾವರಿತ ಮಾಂಸವನ್ನು ತಿಂದರು. ಆ ಮಾಂಸವನ್ನು ತಿನ್ನಲು ಕಾಸೀಮೀರ್ ವಿನಯವಾಗಿ ನಿರಾಕರಿಸಿದಾಗ, ಮನೆಯನ್ನು ಬಿಟ್ಟುಹೋಗುವ ಬೆದರಿಕೆ ಅವನಿಗೆ ಹಾಕಲಾಯಿತು. ಕಾಸೀಮೀರ್ ಶಾಂತಚಿತ್ತನಾಗಿದ್ದ ಕಾರಣ, ಆ ಬೆದರಿಕೆಗಳನ್ನು ಕಾರ್ಯರೂಪಕ್ಕೆ ತರಲಿಲ್ಲ. ಆದರೆ, ಮೂರು ತಿಂಗಳುಗಳ ವರೆಗೂ, ಭೋಜನದ ಸಮಯದಲ್ಲಿ ಅಂತಹ ಮಾಂಸವನ್ನೇ ಬಡಿಸಲಾಯಿತು. ಕಾಸೀಮೀರನಿಗೆ ಸಾಕಷ್ಟು ಊಟ ಸಿಕ್ಕುತ್ತಿರಲಿಲ್ಲವಾದರೂ, ಇದರೊಂದಿಗೆ ಇತರ ಕಷ್ಟಗಳನ್ನೂ ಅವನು ತಾಳಿಕೊಂಡನು.
ಕಾಸೀಮೀರ್ ಸಮರ್ಪಣೆ ಹಾಗೂ ದೀಕ್ಷಾಸ್ನಾನದ ಹಂತದ ವರೆಗೆ ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಮುಂದುವರಿದನು. ತದನಂತರ, ಅವನೊಬ್ಬ ಶುಶ್ರೂಷಾ ಸೇವಕನಾಗಿ ನೇಮಿಸಲ್ಪಟ್ಟು, ಟೋಗೊದಲ್ಲಿ ನಡೆದ ಶುಶ್ರೂಷಾ ತರಬೇತಿ ಶಾಲೆಯ ನಾಲ್ಕನೆಯ ತರಗತಿಗೆ ಹಾಜರಾದನು. ಈಗ ಅವನು ಬ್ರಾಂಚ್ ಆಫೀಸಿನಲ್ಲಿ ಸ್ವಯಂಸೇವೆಯನ್ನು ಮಾಡುತ್ತಾ ಆನಂದವನ್ನು ಕಂಡುಕೊಳ್ಳುತ್ತಿದ್ದಾನೆ.
ಹೌದು, “ನೀನು [ಯೆಹೋವನನ್ನು] ಹುಡುಕುವದಾದರೆ ಆತನು ನಿನಗೆ ಸಿಕ್ಕುವನು,” ಎಂಬ ರಾಜ ದಾವೀದನ ಮಾತುಗಳು ಅನೇಕ ಸಂದರ್ಭಗಳಲ್ಲಿ ಎಷ್ಟು ನಿಜವೆಂದು ರುಜುವಾಗಿವೆ.—1 ಪೂರ್ವಕಾಲವೃತ್ತಾಂತ 28:9.
[ಪುಟ 8 ರಲ್ಲಿರುವ ಚಿತ್ರ]
ಕಾಸೀಮೀರ್ (ಬಲಕ್ಕೆ) ಬ್ರಾಂಚ್ನಲ್ಲಿ ಸ್ವಯಂಸೇವೆ ಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳುತ್ತಾನೆ