ಅವರು ಕ್ಷಮೆಯನ್ನು ಕೇಳಿಕೊಳ್ಳುತ್ತಿರುವುದು ಏಕೆ?
ಚರ್ಚುಗಳು ತಮ್ಮ ತಪ್ಪುಗಳ ವಿಷಯದಲ್ಲಿ ಪಶ್ಚಾತ್ತಾಪಪಡಬೇಕು ಮತ್ತು ತಮ್ಮನ್ನು ಸುಧಾರಿಸಿಕೊಳ್ಳಬೇಕೆಂಬ ವಿಚಾರವು ಹೊಸತೇನಲ್ಲ. ಧರ್ಮದ ಒಂದು ನಿಘಂಟು ಆಗಿರುವ, ರೇಲೀಜೋನೀ ಮೀಟೀ (ಧರ್ಮಗಳು ಮತ್ತು ಮಿಥ್ಯೆಗಳು) ಹೇಳುವುದೇನೆಂದರೆ, ಆದಿ ಚರ್ಚಿನ ಊಹಿತ ಸಮಗ್ರತೆಯು, ಮಧ್ಯ ಯುಗಗಳ ಸಮಯದಲ್ಲಿ ಜನರನ್ನು ಆಕರ್ಷಿಸಿತು ಮತ್ತು ಅನೇಕರು ಧಾರ್ಮಿಕ ಸುಧಾರಣೆಯನ್ನು ವಿನಂತಿಸಿಕೊಳ್ಳುವಂತೆ ನಡಿಸಿತು.
1523ರಲ್ಲಿ, ರೋಮ್ನೊಂದಿಗೆ ಮಾರ್ಟಿನ್ ಲೂತರ್ನ ಬೇರ್ಪಡಿಸುವಿಕೆಯ ನಂತರ, ನ್ಯೂರೆಮ್ಬರ್ಗ್ನ ಶಾಸನಸಭೆಗೆ ಈ ಸಂದೇಶವನ್ನು ಕಳುಹಿಸುವ ಮೂಲಕ ಪೋಪ್ ಎಡ್ರಿಯನ್ VI ಐಕ್ಯವನ್ನು ತರಲು ಪ್ರಯತ್ನಿಸಿದನು: “ಅನೇಕ ವರ್ಷಗಳಿಂದ, ಹೇಸಲ್ಪಡಲು ಯೋಗ್ಯವಾಗಿರುವ ಸಂಗತಿಗಳು ಪೋಪನ ಆಸ್ಥಾನದ ಸುತ್ತಲೂ ಕೇಂದ್ರೀಕರಿಸಿವೆ . . . ಈ ಎಲ್ಲ ಕೆಡುಕುಗಳು ಪ್ರಾಯಶಃ ಎಲ್ಲಿಂದ ಆರಂಭವಾದವೊ, ಆ ರೋಮನ್ ಶಾಸಕರ ಸಭಾಮಂದಿರವನ್ನು ಪ್ರಧಾನವಾಗಿ ಸುಧಾರಿಸಲು ನಾವು ತುಂಬ ಶ್ರದ್ಧೆಯಿಂದ ಕಾರ್ಯವೆಸಗುವೆವು.” ಆದರೆ ಆ ಒಪ್ಪಿಕೊಳ್ಳುವಿಕೆಯು, ಆ ಒಡಕನ್ನು ಸರಿಪಡಿಸುವುದರಲ್ಲಿ ಅಥವಾ ಪೋಪನ ನ್ಯಾಯಸ್ಥಾನದಲ್ಲಿದ್ದ ಭ್ರಷ್ಟತೆಯನ್ನು ವಿರೋಧಿಸುವುದರಲ್ಲಿ ಸಫಲವಾಗಲಿಲ್ಲ.
ತೀರ ಇತ್ತೀಚೆಗೆ, ಯೆಹೂದಿಗಳ ಸಾಮೂಹಿಕ ಕಗ್ಗೊಲೆಯ ಸಂಬಂಧದಲ್ಲಿ ಚರ್ಚುಗಳ ಮೌನಕ್ಕಾಗಿ ಅವುಗಳು ಟೀಕಿಸಲ್ಪಟ್ಟಿವೆ. ತಮ್ಮ ಸದಸ್ಯರು ಯುದ್ಧಗಳಲ್ಲಿ ಭಾಗವಹಿಸುವುದರಿಂದ ನಿರುತ್ತೇಜಿಸದಿದ್ದುದಕ್ಕಾಗಿಯೂ ಅವುಗಳನ್ನು ದೂಷಿಸಲಾಗಿದೆ. 1941ರಲ್ಲಿ, IIನೆಯ ವಿಶ್ವ ಯುದ್ಧವು ನಡೆಯುತ್ತಿದ್ದಾಗ, ಪ್ರೀಮೊ ಮಾಟ್ಸೋಲಾರಿ ಎಂಬ ಹೆಸರಿನ ಒಬ್ಬ ಪಾದ್ರಿಯು ಕೇಳಿದ್ದು: “ಕಡಿಮೆ ಅಪಾಯಕಾರಿಯಾದ ಸಿದ್ಧಾಂತಗಳ ವಿಷಯದಲ್ಲಿ ರೋಮ್ ಬಲವಾಗಿ ಪ್ರತಿಕ್ರಿಯಿಸುತ್ತಿದ್ದಂತೆ ಮತ್ತು ಈಗಲೂ ಮಾಡುತ್ತಿರುವಂತೆಯೇ, ಕ್ಯಾಥೊಲಿಕ್ ಬೋಧನೆಗಳ ಕುಸಿತಕ್ಕೆ ಅದು ಏಕೆ ಬಲವಾಗಿ ಪ್ರತಿಕ್ರಿಯಿಸುವುದಿಲ್ಲ?” ಆ ಪಾದ್ರಿಯು ಕಡಿಮೆ ಅಪಾಯಕಾರಿಯಾದ ಸಿದ್ಧಾಂತವನ್ನು ಯಾವುದರೊಂದಿಗೆ ಹೋಲಿಸುತ್ತಿದ್ದನು? ಆ ಸಮಯದಲ್ಲಿ ನಾಗರಿಕತೆಯನ್ನು ಸಿಗಿದುಹಾಕುತ್ತಿದ್ದ, ಯುದ್ಧಕೆರಳಿಸುವ ರಾಷ್ಟ್ರೀಯವಾದದ ಕುರಿತಾಗಿ ಆ ಪಾದ್ರಿಯು ಮಾತಾಡುತ್ತಿದ್ದನು.
ವಾಸ್ತವಾಂಶವೇನೆಂದರೆ, ತೀರ ಇತ್ತೀಚಿನ ವರೆಗೂ, ಧರ್ಮಗಳಿಂದ ತಪ್ಪೊಪ್ಪಿಕೊಳ್ಳುವಿಕೆಯು ಅಸಾಮಾನ್ಯವಾದ ಸಂಗತಿಯಾಗಿತ್ತು. 1832ರಲ್ಲಿ, ಕ್ಯಾಥೊಲಿಕ್ ಚರ್ಚ್ ‘ತನ್ನನ್ನೇ ಜೀರ್ಣೋದ್ಧಾರಮಾಡಲು’ ಪ್ರೇರಿಸುತ್ತಿದ್ದ ಕೆಲವರಿಗೆ ಪ್ರತಿಕ್ರಿಯೆಯಲ್ಲಿ, ಗ್ರೆಗರಿ XVI ಹೇಳಿದ್ದು: “ಚರ್ಚು ತಪ್ಪನ್ನು ಮಾಡುತ್ತದೊ ಎಂಬಂತೆ, [ಚರ್ಚಿನ] ಸುರಕ್ಷೆ ಮತ್ತು ಬೆಳವಣಿಗೆಗಾಗಿ ನಿರ್ದಿಷ್ಟ ‘ಪುನಸ್ಸ್ಥಾಪನೆ ಮತ್ತು ಜೀರ್ಣೋದ್ಧಾರ’ದ ಪ್ರಸ್ತಾಪವನ್ನು ಮಾಡುವುದು ಹುಚ್ಚುತನ ಮತ್ತು ಹಾನಿಕರವಾದ ಸಂಗತಿಯೆಂಬುದು ಸುವ್ಯಕ್ತ.” ನಿರಾಕರಿಸಲು ತೀರ ಭೀಕರವಾಗಿರುವ ಕುಂದುಗಳ ಕುರಿತಾಗಿ ಏನು? ಆ ಕುಂದುಗಳಿಗೆ ಒಂದು ನ್ಯಾಯಸಮ್ಮತ ನೆವನವನ್ನು ಕೊಡಲಿಕ್ಕಾಗಿ ವಿಭಿನ್ನ ಉಪಾಯಗಳನ್ನು ಉಪಯೋಗಿಸಲಾಯಿತು. ಉದಾಹರಣೆಗಾಗಿ, ಚರ್ಚು ಪವಿತ್ರವೂ ಆಗಿದೆ, ಪಾಪಪೂರ್ಣವೂ ಆಗಿದೆಯೆಂದು ಕೆಲವು ದೇವತಾಶಾಸ್ತ್ರಜ್ಞರು ಸಮರ್ಥಿಸಿ ಹೇಳಿದ್ದಾರೆ. ಚರ್ಚು ತಾನೇ ಪವಿತ್ರವಾಗಿದೆ—ದೇವರು ಅದನ್ನು ದೋಷದಿಂದ ಸಂರಕ್ಷಿಸಿದ್ದಾನೆಂದು ಹೇಳಲಾಗಿದೆ. ಆದರೂ, ಅದರ ಸದಸ್ಯರು ಪಾಪಪೂರ್ಣರಾಗಿದ್ದಾರೆ. ಹೀಗೆ, ಚರ್ಚಿನ ಹೆಸರಿನಲ್ಲಿ ಘೋರಕೃತ್ಯಗಳು ನಡೆಸಲ್ಪಡುವಾಗ, ಸ್ವತಃ ಚರ್ಚನ್ನು ಅಲ್ಲ ಬದಲಾಗಿ, ಚರ್ಚಿನೊಳಗಿರುವ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಅದು ತರ್ಕಸಂಗತವಾಗಿ ಧ್ವನಿಸುತ್ತದೊ? ರೋಮನ್ ಕ್ಯಾಥೊಲಿಕ್ ದೇವತಾಶಾಸ್ತ್ರಜ್ಞರಾದ ಹಾನ್ಸ್ ಕುಂಗ್ಗೆ ಹಾಗೆ ಧ್ವನಿಸಲಿಲ್ಲ. ಅವರು ಬರೆದುದು: “ಮಾನವ ಜಗತ್ತಿನ ಮೇಲೆ ತೇಲುತ್ತಿರುವ ಯಾವುದೇ ಆದರ್ಶಮಯ ಚರ್ಚು ಇಲ್ಲ.” ಅವರು ವಿವರಿಸಿದ್ದು: “ನಿವೇದಿಸಿಕೊಳ್ಳಲು ಯಾವುದೇ ಪಾಪಗಳಿರದ ಚರ್ಚು ಅಸ್ತಿತ್ವದಲ್ಲೇ ಇಲ್ಲ.”
ವಿಶ್ವಕ್ರೈಸ್ತ ತತ್ವ (ಎಕ್ಯುಮೆನಿಸ್ಮ್) ಮತ್ತು ನೈತಿಕ ನಿಲುವು
ಯಾವ ವಿಕಸನಗಳು ಚರ್ಚುಗಳು ಈಗ ಕ್ಷಮೆಯನ್ನು ಕೇಳಿಕೊಳ್ಳುವಂತೆ ನಡಿಸಿವೆಯೆಂದು ನೀವು ಕುತೂಹಲಪಡಬಹುದು. ಆರಂಭದಲ್ಲಿ, ಪ್ರಾಟೆಸ್ಟಂಟರು ಮತ್ತು ಆರ್ತೊಡಾಕ್ಸ್ ಧರ್ಮವು, ವಿಭಿನ್ನ ಪಂಗಡಗಳ ನಡುವಿನ “ಗತಕಾಲದ ವಿಭಜನೆ”ಗಳಿಗಾಗಿ ಹೊಣೆಗಾರಿಕೆಯನ್ನು ಅಂಗೀಕರಿಸಿಕೊಂಡವು. ಅವರಿದನ್ನು, 1927ರಲ್ಲಿ ಸ್ವಿಟ್ಸರ್ಲೆಂಡ್ನ ಲೋಸಾನ್ನಲ್ಲಿ ನಡೆದ “ನಂಬಿಕೆ ಮತ್ತು ವ್ಯವಸ್ಥೆ” ಎಂಬ ವಿಶ್ವಕ್ರೈಸ್ತ ಐಕ್ಯತೆಯ ಸಮ್ಮೇಳನದಲ್ಲಿ ಮಾಡಿದರು. ರೋಮನ್ ಕ್ಯಾಥೊಲಿಕ್ ಚರ್ಚು ಕಟ್ಟಕಡೆಗೆ ಇವರ ಮಾದರಿಯನ್ನು ಅನುಸರಿಸಿತು. ವಿಶೇಷವಾಗಿ ವ್ಯಾಟಿಕನ್ IIರ ಸಭೆಯಂದಿನಿಂದ,a ಪೋಪರನ್ನು ಸೇರಿಸಿ ಉಚ್ಚಪದವಿಯ ಧರ್ಮಾಧ್ಯಕ್ಷರು ಹೆಚ್ಚೆಚ್ಚಾಗಿ, ಕ್ರೈಸ್ತಪ್ರಪಂಚದೊಳಗಿನ ವಿಭಜನೆಗಳಿಗಾಗಿ ಕ್ಷಮೆಯನ್ನು ಕೇಳಿಕೊಂಡಿದ್ದಾರೆ. ಯಾವ ಉದ್ದೇಶಕ್ಕಾಗಿ? ಕ್ರೈಸ್ತಪ್ರಪಂಚದಲ್ಲಿ ಅವರು ಇನ್ನೂ ಹೆಚ್ಚಿನ ಐಕ್ಯವನ್ನು ಬಯಸುತ್ತಾರೆಂಬುದು ವ್ಯಕ್ತ. ಜಾನ್ ಪಾಲ್ IIರ “‘ಮೇಅ ಕುಲ್ಪ’ಗಳ (ದೋಷಾಂಗೀಕಾರಗಳ) ಕಾರ್ಯಯೋಜನೆಯಲ್ಲಿ ಒಂದು ಉಪಾಯವಿದೆ, ಮತ್ತು ಅದು ವಿಶ್ವಕ್ರೈಸ್ತ ಐಕ್ಯದ ತತ್ವವಾಗಿದೆ,” ಎಂದು ಕ್ಯಾಥೊಲಿಕ್ ಇತಿಹಾಸಕಾರ ನೀಕೋಲೀನೋ ಸಾರಾಲೆ ತಿಳಿಸಿದರು.
ಆದರೆ, ವಿಶ್ವಕ್ರೈಸ್ತ ಐಕ್ಯಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಇಂದು ಕ್ರೈಸ್ತಪ್ರಪಂಚದ ಕುಪ್ರಸಿದ್ಧ ಇತಿಹಾಸವು ವ್ಯಾಪಕವಾಗಿ ಜ್ಞಾತವಾಗಿದೆ. “ಒಬ್ಬ ಕ್ಯಾಥೊಲಿಕನು ಈ ಎಲ್ಲ ಇತಿಹಾಸವನ್ನು ಸುಮ್ಮನೆ ಅಲಕ್ಷಿಸಲಾರನು. . . . ಅವನು ಯಾವ ಚರ್ಚಿಗೆ ಸೇರಿರುತ್ತಾನೊ, ಅದೇ ಚರ್ಚು, ನಾವು ಈ ದಿನಗಳಲ್ಲಿ ನಿಶ್ಚಯವಾಗಿಯೂ ಸಮ್ಮತಿಸಲಾರದಂತಹ ವಿಷಯಗಳನ್ನು ಮಾಡಿದೆ, ಅಥವಾ ಅವುಗಳು ನಡಿಸಲ್ಪಡುವಂತೆ ಅನುಮತಿಯನ್ನು ಕೊಟ್ಟಿದೆ,” ಎಂದು ದೇವತಾಶಾಸ್ತ್ರಜ್ಞರಾದ ಹಾನ್ಸ್ ಉರ್ಸ್ ಫಾನ್ ಬಾಲ್ತಾಸಾರ್ ಹೇಳುತ್ತಾರೆ. ಹೀಗಿರುವುದರಿಂದ, “ಕ್ಷಮೆಯು ಕೇಳಲ್ಪಡುವಂತೆ . . . ಚರ್ಚಿನ ಕರಾಳ ಅವಧಿಗಳ ಮೇಲೆ ಬೆಳಕನ್ನು ಬೀರಲಿಕ್ಕಾಗಿ” ಪೋಪರು ಒಂದು ನಿಯೋಗಮಂಡಳಿಯನ್ನು ನೇಮಿಸಿದ್ದಾರೆ. ಹಾಗಾದರೆ, ಸ್ವ-ವಿಮರ್ಶೆಯಲ್ಲಿ ಒಳಗೂಡಲು ಚರ್ಚಿಗಿರುವ ಬಯಕೆಗೆ ಇನ್ನೊಂದು ಕಾರಣವು, ತನ್ನ ನೈತಿಕ ನಿಲುವನ್ನು ಮತ್ತೆ ಸಂಪಾದಿಸುವ ಒಂದು ಬಯಕೆಯಾಗಿದೆ ಎಂಬಂತೆ ತೋರುತ್ತದೆ.
ತದ್ರೀತಿಯಲ್ಲಿ, ಕ್ಷಮೆಗಾಗಿರುವ ಚರ್ಚಿನ ವಿನಂತಿಗಳ ಮೇಲೆ ಹೇಳಿಕೆಗಳನ್ನು ಮಾಡುತ್ತಾ, ಇತಿಹಾಸಕಾರ ಆಲ್ಬರ್ಟೋ ಮೆಲೋನೀ ಬರೆಯುವುದು: “ವಾಸ್ತವದಲ್ಲಿ, ಕೆಲವೊಮ್ಮೆ ಕೇಳಲ್ಪಡುವುದು, ಹೊಣೆಗಾರಿಕೆಯ ಆಪಾದನೆಗಳಿಂದ ಬಿಡುವೇ.” ಹೌದು, ಕ್ಯಾಥೊಲಿಕ್ ಚರ್ಚು ಸಾರ್ವಜನಿಕರ ದೃಷ್ಟಿಯಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಪುನಃ ಗಳಿಸಿಕೊಳ್ಳಲಿಕ್ಕೋಸ್ಕರ, ಗತಕಾಲದ ಪಾಪಗಳ ಹೊರೆಯನ್ನು ಹೆಗಲಿನಿಂದ ಜಾರಿಸಿಬಿಡಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಅದಕ್ಕೆ ದೇವರೊಂದಿಗೆ ಸಮಾಧಾನವನ್ನು ಮಾಡುವುದಕ್ಕಿಂತಲೂ ಹೆಚ್ಚಾಗಿ ಲೋಕದೊಂದಿಗೆ ಸಮಾಧಾನವನ್ನು ಮಾಡುವ ಚಿಂತೆಯಿದೆಯೆಂದು ತೋರುತ್ತದೆ.
ಅಂತಹ ನಡವಳಿಕೆಯು ನಮಗೆ, ಇಸ್ರಾಯೇಲಿನ ಪ್ರಥಮ ರಾಜನಾದ ಸೌಲನ ಜ್ಞಾಪಕಹುಟ್ಟಿಸುತ್ತದೆ. (1 ಸಮುವೇಲ 15:1-12) ಅವನೊಂದು ಗಂಭೀರ ತಪ್ಪನ್ನು ಮಾಡಿದನು ಮತ್ತು ಇದು ಬಯಲುಮಾಡಲ್ಪಟ್ಟಾಗ, ಅವನು ಮೊದಲು ತನ್ನನ್ನು ಸಮರ್ಥಿಸಿಕೊಳ್ಳಲು—ದೇವರ ಒಬ್ಬ ನಂಬಿಗಸ್ತ ಪ್ರವಾದಿಯಾದ ಸಮುವೇಲನಿಗೆ ತನ್ನ ತಪ್ಪಿಗೆ ನೆವನವನ್ನು ಕೊಡಲು—ಪ್ರಯತ್ನಿಸಿದನು. (1 ಸಮುವೇಲ 15:13-21) ಕೊನೆಯಲ್ಲಿ, ರಾಜನು ಸಮುವೇಲನ ಮುಂದೆ ಹೀಗೆ ಒಪ್ಪಿಕೊಳ್ಳಬೇಕಾಯಿತು: “ನಾನು ಯೆಹೋವನ . . . ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ.” (1 ಸಮುವೇಲ 15:24, 25) ಹೌದು, ಅವನು ತನ್ನ ತಪ್ಪನ್ನು ಒಪ್ಪಿಕೊಂಡನು. ಆದರೆ ಅವನ ಮುಂದಿನ ಮಾತುಗಳು ಅವನ ಮನಸ್ಸಿನಲ್ಲಿ ಅತಿ ಮುಖ್ಯವಾಗಿದ್ದಂತಹ ವಿಷಯವನ್ನು ಪ್ರಕಟಪಡಿಸುತ್ತವೆ: “ನಾನು ಪಾಪಮಾಡಿದ್ದೇನೆ; ದಯವಿಟ್ಟು ಇಸ್ರಾಯೇಲ್ಯರ ಮುಂದೆಯೂ ಜನರ ಹಿರಿಯರ ಮುಂದೆಯೂ ನನ್ನ ಮಾನವನ್ನುಳಿಸು.” (1 ಸಮುವೇಲ 15:30) ದೇವರೊಂದಿಗೆ ಸಂಧಾನವನ್ನು ಮಾಡುವುದಕ್ಕಿಂತಲೂ ಹೆಚ್ಚಾಗಿ, ಸೌಲನು ಇಸ್ರಾಯೇಲಿನಲ್ಲಿ ತನ್ನ ನಿಲುವಿನ ಕುರಿತಾಗಿ ಚಿಂತಿತನಾಗಿದ್ದನೆಂಬುದು ಸುವ್ಯಕ್ತ. ಈ ಮನೋಭಾವವು, ದೇವರು ಸೌಲನನ್ನು ಕ್ಷಮಿಸುವುದರಲ್ಲಿ ಫಲಿಸಲಿಲ್ಲ. ತದ್ರೀತಿಯ ಮನೋಭಾವವು, ದೇವರು ಚರ್ಚುಗಳನ್ನು ಕ್ಷಮಿಸುವುದರಲ್ಲಿ ಫಲಿಸುವುದೆಂದು ನೀವು ನೆನಸುತ್ತೀರೊ?
ಎಲ್ಲರೂ ಸಮ್ಮತಿಸುವುದಿಲ್ಲ
ಚರ್ಚುಗಳು ಬಹಿರಂಗವಾಗಿ ಕ್ಷಮೆಯನ್ನು ಕೇಳಿಕೊಳ್ಳಬೇಕೆಂಬ ವಿಷಯವನ್ನು ಎಲ್ಲರೂ ಸಮ್ಮತಿಸುವುದಿಲ್ಲ. ಉದಾಹರಣೆಗಾಗಿ, ತಮ್ಮ ಪೋಪ್ ದಾಸತ್ವಕ್ಕಾಗಿ ಕ್ಷಮೆಯನ್ನು ಕೇಳಿಕೊಳ್ಳುವಾಗ ಅಥವಾ ಹಸ್ ಮತ್ತು ಕ್ಯಾಲ್ವಿನ್ರಂತಹ “ಪಾಷಂಡಿಗಳನ್ನು” ಪುನಸ್ಸ್ಥಾಪಿಸುವಾಗ, ರೋಮನ್ ಕ್ಯಾಥೊಲಿಕರಲ್ಲಿ ಅನೇಕರಿಗೆ ಕಸಿವಿಸಿಯಾಗುತ್ತದೆ. ವ್ಯಾಟಿಕನ್ ಮೂಲಗಳಿಗನುಸಾರ, ಕ್ಯಾಥೊಲಿಕ್ವಾದದ ಗತ ಸಾವಿರ ವರ್ಷಗಳ ಇತಿಹಾಸದ ಕುರಿತು “ಮನಸ್ಸಾಕ್ಷಿಯ ಪರೀಕ್ಷೆ”ಯನ್ನು ಪ್ರಸ್ತಾಪಿಸುತ್ತಾ, ಪೋಪರ ರಾಯಭಾರಿಗಳಿಗೆ ಕಳುಹಿಸಲ್ಪಟ್ಟ ದಸ್ತಾವೇಜು, 1994ರ ಜೂನ್ ತಿಂಗಳಲ್ಲಿ ನಡೆಸಲ್ಪಟ್ಟ ಒಂದು ಕೂಟವನ್ನು ಹಾಜರಾಗುತ್ತಿದ್ದ ಪೋಪರ ರಾಯಭಾರಿಗಳಿಂದ ಟೀಕಿಸಲ್ಪಟ್ಟಿತು. ಹಾಗಿದ್ದರೂ, ಆ ಪ್ರಸ್ತಾಪದ ವಿಷಯವನ್ನು ಪೋಪರು ಒಂದು ಸುತ್ತೋಲೆಯಲ್ಲಿ ಸೇರಿಸಲು ಬಯಸಿದಾಗ, “ಚರ್ಚಿನಲ್ಲಿ ಯಾವುದೇ ಪಾಪವಿಲ್ಲ” ಎಂದು ದೃಢೀಕರಿಸಿದ ಒಂದು ಧರ್ಮಾಧಿಕಾರ ಪತ್ರವನ್ನು ಪೋಪರ ಇಟಾಲ್ಯನ್ ರಾಯಭಾರಿ ಜಾಕೋಮೋ ಬೀಫೀ ಎಂಬವನು ಸಲ್ಲಿಸಿದನು. ಹಾಗಿದ್ದರೂ, ಅವನು ಒಪ್ಪಿಕೊಂಡದ್ದು: “ಗತಕಾಲದ ಕ್ರೈಸ್ತ ಮಠೀಯ ತಪ್ಪುಗಳಿಗಾಗಿ ಕ್ಷಮೆಯನ್ನು ಬೇಡಿಕೊಳ್ಳುವುದು . . . ಚರ್ಚಿಗೆ ಹೆಚ್ಚು ಅನುಕೂಲಕರವಾದ ಚಿತ್ರಣವನ್ನು ಕೊಡುವ ಉದ್ದೇಶವನ್ನು ಪೂರೈಸುವುದು.”
“ಪಾಪ ನಿವೇದನೆಯು, ಕ್ಯಾಥೊಲಿಕ್ ಚರ್ಚಿನಲ್ಲಿ ಅತಿ ಹೆಚ್ಚು ವಾದಾಸ್ಪದವಾದ ವಿಷಯಗಳಲ್ಲಿ ಒಂದಾಗಿದೆ,” ಎಂದು ವ್ಯಾಟಿಕನ್ ವ್ಯಾಖ್ಯಾನಕಾರ ಲೂಈಜೀ ಆಕಟಾಲೀ ಹೇಳುತ್ತಾರೆ. “ಪೋಪರು ಮಿಷನೆರಿಗಳ ತಪ್ಪುಗಳನ್ನು ಒಪ್ಪಿಕೊಂಡರೆ, ಸದ್ಭಾವನೆಯಿಂದ ಅದರ ಕಡೆಗೆ ಅಸಮಾಧಾನ ವ್ಯಕ್ತಪಡಿಸಿಕೊಳ್ಳುವ ಮಿಷನೆರಿಗಳಿದ್ದಾರೆ.” ಇನ್ನೂ ಹೆಚ್ಚಾಗಿ, ಒಬ್ಬ ರೋಮನ್ ಕ್ಯಾಥೊಲಿಕ್ ಪತ್ರಿಕೋದ್ಯೋಗಿ ಬರೆದುದು: “ಪೋಪರಿಗೆ, ಚರ್ಚ್ ಇತಿಹಾಸದ ಕುರಿತಾಗಿ ನಿಜವಾಗಿಯೂ ಅಷ್ಟು ಭೀತಿಕಾರಕ ಅಭಿಪ್ರಾಯವಿರುವಲ್ಲಿ, ಅವರು ಈಗ ಅದೇ ಚರ್ಚನ್ನು ‘ಮಾನವ ಹಕ್ಕುಗಳ’ ರಕ್ಷಣಾ ವೀರನಾಗಿ, ಮಾನವಕುಲವನ್ನು ನಿಜವಾಗಿಯೂ ಉಜ್ವಲವಾದ ಮೂರನೆಯ ಸಹಸ್ರ ವರ್ಷ ಕಾಲದ ಕಡೆಗೆ ಮಾರ್ಗದರ್ಶಿಸಸಾಧ್ಯವಿರುವ ‘ತಾಯಿ ಮತ್ತು ಶಿಕ್ಷಕಿ’ಯಾಗಿ ಹೇಗೆ ಸಾದರಪಡಿಸಬಲ್ಲನೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರ.”
ಒಂದು ತಪ್ಪನ್ನು ಮಾಡಿ ಸಿಕ್ಕಿಬೀಳುವ ಪೇಚಾಟದಿಂದಾಗಿ ಪ್ರಚೋದಿಸಲ್ಪಟ್ಟಿರುವ ಪಶ್ಚಾತ್ತಾಪದ ತೋರಿಕೆಯ ವಿರುದ್ಧ ಬೈಬಲ್ ಎಚ್ಚರಿಸುತ್ತದೆ. ಆ ವಿಧದ ಪಶ್ಚಾತ್ತಾಪವು, ಪಶ್ಚಾತ್ತಾಪಪಡುವ ವ್ಯಕ್ತಿಯಲ್ಲಿ ಒಂದು ದೀರ್ಘಾವಧಿಯ ಬದಲಾವಣೆಗೆ ನಡಿಸುವುದು ವಿರಳ. (2 ಕೊರಿಂಥ 7:8-11ನ್ನು ಹೋಲಿಸಿರಿ.) ದೇವರ ದೃಷ್ಟಿಯಲ್ಲಿ ಮೌಲ್ಯವಿರುವ ಪಶ್ಚಾತ್ತಾಪದ ಜೊತೆಗೆ, “ಪಶ್ಚಾತ್ತಾಪಕ್ಕೆ ತಕ್ಕ ಫಲಗಳು” (NW)—ಅಂದರೆ, ಪಶ್ಚಾತ್ತಾಪದ ನಿಷ್ಕಪಟತೆಯನ್ನು ತೋರಿಸುವ ರುಜುವಾತು—ಇರುತ್ತವೆ.—ಲೂಕ 3:8.
ಪಶ್ಚಾತ್ತಾಪಪಟ್ಟು ನಿವೇದಿಸಿಕೊಳ್ಳುವ ವ್ಯಕ್ತಿಯು ಆ ತಪ್ಪುಕೃತ್ಯಗಳನ್ನು ಬಿಟ್ಟುಬಿಡಬೇಕು, ಅವುಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 28:13) ಇದು ಆಗಿದೆಯೊ? ರೋಮನ್ ಕ್ಯಾಥೊಲಿಕ್ ಚರ್ಚ್ ಮತ್ತು ಇತರ ಚರ್ಚುಗಳಿಂದ ಇಷ್ಟೆಲ್ಲ ನಿವೇದನೆಗಳ ನಂತರ, “ಕ್ರೈಸ್ತರ” ದೊಡ್ಡ ಜನಸಂಖ್ಯೆಗಳನ್ನೊಳಗೊಂಡಿರುವ ಮಧ್ಯ ಆಫ್ರಿಕ ಮತ್ತು ಪೂರ್ವ ಯೂರೋಪಿನಲ್ಲಿನ ಇತ್ತೀಚಿನ ಆಂತರಿಕ ಹೋರಾಟಗಳಲ್ಲಿ ಏನು ಸಂಭವಿಸಿತು? ಚರ್ಚುಗಳು ಶಾಂತಿಗಾಗಿರುವ ಒಂದು ಶಕ್ತಿಯಾಗಿ ಕ್ರಿಯೆಗೈದವೊ? ತಮ್ಮ ಸದಸ್ಯರುಗಳು ನಡೆಸುತ್ತಿದ್ದ ಘೋರ ಕೃತ್ಯಗಳ ವಿರುದ್ಧವಾಗಿ ಅವರ ಎಲ್ಲ ಮುಖಂಡರು ಐಕ್ಯವಾಗಿ ಮಾತಾಡಿದರೊ? ಇಲ್ಲ. ಅಷ್ಟೇಕೆ, ಕೆಲವು ಧಾರ್ಮಿಕ ಪಾದ್ರಿಗಳು ಆ ಹತ್ಯೆಯಲ್ಲಿ ಪಾಲ್ಗೊಂಡರು ಕೂಡ!
ದೈವಿಕ ನ್ಯಾಯತೀರ್ಪು
ಪೋಪರು ಪದೇಪದೇ ಮಾಡುತ್ತಿರುವ ದೋಷಾಂಗೀಕಾರಗಳ ಕುರಿತಾಗಿ ಮಾತಾಡುತ್ತಿದ್ದಾಗ, ಪೋಪರ ರಾಯಭಾರಿಯಾದ ಬೀಫೀ ವ್ಯಂಗ್ಯವಾಗಿ ಕೇಳಿದ್ದು: “ಗತಕಾಲದಲ್ಲಿ ಮಾಡಿದ ಪಾಪಗಳಿಗಾಗಿ, ನಾವೆಲ್ಲರೂ ವಿಶ್ವ ನ್ಯಾಯತೀರ್ಪಿಗಾಗಿ ಕಾಯುವುದು ಒಳ್ಳೇದಲ್ಲವೊ?” ಇಡೀ ಮಾನವಕುಲದ ನ್ಯಾಯತೀರ್ಪು ಸನ್ನಿಹಿತವಾಗಿದೆ. ಧರ್ಮದ ಇತಿಹಾಸದ ಎಲ್ಲ ಕರಾಳ ಅವಧಿಗಳ ಕುರಿತಾಗಿ ಯೆಹೋವ ದೇವರಿಗೆ ಚೆನ್ನಾಗಿ ತಿಳಿದಿದೆ. ಬೇಗನೆ, ಆತನು ಅಪರಾಧಿಗಳಿಗೆ ಲೆಕ್ಕ ತೀರಿಸುವನು. (ಪ್ರಕಟನೆ 18:4-8) ಅಷ್ಟರ ವರೆಗೆ, ಕ್ರೈಸ್ತಪ್ರಪಂಚದ ಚರ್ಚುಗಳು ಯಾವುದಕ್ಕಾಗಿ ಕ್ಷಮೆಯಾಚಿಸುತ್ತಿವೆಯೊ ಆ ರಕ್ತಾಪರಾಧ, ಮಾರಕ ಅಸಹಿಷ್ಣುತೆ, ಮತ್ತು ಇತರ ಪಾತಕಗಳಿಂದ ಕಳಂಕಿತವಾಗಿರದ ಆರಾಧನೆಯ ರೂಪವನ್ನು ಕಂಡುಕೊಳ್ಳುವುದು ಸಾಧ್ಯವೊ? ಹೌದು, ಸಾಧ್ಯವಿದೆ.
ನಾವದನ್ನು ಹೇಗೆ ಮಾಡಬಲ್ಲೆವು? ಯೇಸು ಕ್ರಿಸ್ತನಿಂದ ತಿಳಿಸಲ್ಪಟ್ಟ ಈ ನಿಯಮವನ್ನು ಅನ್ವಯಿಸಿಕೊಳ್ಳುವ ಮೂಲಕವೇ: “ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.” ಕೆಲವು ಧರ್ಮಗಳು ಮರೆಯುವಂತೆ ಇಷ್ಟಪಡುವ ಇತಿಹಾಸದ ದಾಖಲೆಯು, ಯೇಸು ಯಾರನ್ನು “ಸುಳ್ಳುಪ್ರವಾದಿಗಳು” ಎಂದು ಕರೆದನೊ ಅವರನ್ನು ಮಾತ್ರವಲ್ಲ, ಯಾರು “ಒಳ್ಳೇ ಫಲವನ್ನು” ಉತ್ಪಾದಿಸಿದ್ದಾರೊ ಅವರನ್ನು ಸಹ ಗುರುತಿಸುವಂತೆ ನಮಗೆ ಸಹಾಯಮಾಡುತ್ತದೆ. (ಮತ್ತಾಯ 7:15-20) ಇವರು ಯಾರು? ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಪರೀಕ್ಷಿಸುವ ಮೂಲಕ, ಅದನ್ನು ಸ್ವತಃ ನೀವೇ ಕಂಡುಕೊಳ್ಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಲೋಕದಲ್ಲಿ ಒಂದು ಪ್ರಭಾವಯುಕ್ತ ಸ್ಥಾನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವ ಬದಲಿಗೆ, ದೇವರ ವಾಕ್ಯವನ್ನು ಅನುಸರಿಸಲು ನಿಜವಾಗಿಯೂ ಪ್ರಯತ್ನಿಸುತ್ತಿರುವವರು ಯಾರೆಂಬುದನ್ನು ನೋಡಿರಿ.—ಅ. ಕೃತ್ಯಗಳು 17:11.
[ಪಾದಟಿಪ್ಪಣಿ]
a 1962-65ರ ವರೆಗೆ ರೋಮ್ನಲ್ಲಿ, ನಾಲ್ಕು ಅಧಿವೇಶನಗಳಲ್ಲಿ ಸೇರಿಬಂದ 21ನೆಯ ವಿಶ್ವಕ್ರೈಸ್ತ ಐಕ್ಯ ಸಭೆ.
[ಪುಟ 5 ರಲ್ಲಿರುವ ಚಿತ್ರ]
ಇವುಗಳಂತಹ ಘೋರಕೃತ್ಯಗಳಿಗಾಗಿ ಚರ್ಚುಗಳು ಕ್ಷಮೆಯಾಚಿಸುತ್ತಿವೆ
[ಕೃಪೆ]
The Complete Encyclopedia of Illustration/J. G. Heck