ಚರ್ಚುಗಳು ಪಾಪನಿವೇದನೆ ಮಾಡಿಕೊಳ್ಳುತ್ತವೆ
“ಪೋಪ್ ಚರ್ಚನ್ನು ವಿಚಾರಣೆಗೊಳಪಡಿಸುತ್ತಾರೆ.” “ಪಾಷಂಡಿವಿಚಾರಣೆ ಮತ್ತು ಷೇಮ್-ವಂಶ ವಿರೋಧ—ಚರ್ಚ್ ತನ್ನ ಸ್ವಂತ ದೋಷಾಂಗೀಕಾರ [ಮೇಅ ಕುಲ್ಪ]ವನ್ನು ಸಿದ್ಧಪಡಿಸುತ್ತಿದೆ.”a “ಯೆಹೂದಿಗಳ ಸಾಮೂಹಿಕ ಕಗ್ಗೊಲೆಗಾಗಿ ದೋಷಾಂಗೀಕಾರ.” “ಮೆತೊಡಿಸ್ಟರು, ಪಶ್ಚಿಮ ಅಮೆರಿಕದ ಆದಿವಾಸಿಗಳಿಂದ ಕ್ಷಮೆಯಾಚಿಸುತ್ತಾರೆ.”
ನೀವು ಇಂತಹ ತಲೆಪಂಕ್ತಿಗಳನ್ನು ಓದಿದ್ದೀರೊ? ಹೆಚ್ಚುತ್ತಿರುವ ಸಂಭವಪ್ರಮಾಣದಲ್ಲಿ, ಚರ್ಚುಗಳು ದೋಷವನ್ನು ಅಂಗೀಕರಿಸುತ್ತಿರುವಂತೆ ಮತ್ತು ಅನೇಕ ಶತಮಾನಗಳಿಂದ ತಾವು ಮಾಡಿದಂತಹ ಸಂಗತಿಗಳಿಗಾಗಿ ಕ್ಷಮೆಯಾಚಿಸುತ್ತಿರುವಂತೆ ತೋರುತ್ತಿದೆ. ವಾರ್ತಾಮಾಧ್ಯಮವು, ಪೋಪರಿಂದ ಮಾಡಲ್ಪಡುವ ಹೊಸ ದೋಷಾಂಗೀಕಾರಗಳನ್ನು ಸತತವಾಗಿ, ಎತ್ತಿಹೇಳುತ್ತಾ ಇರುತ್ತದೆ.
ಪೋಪ್ ಕ್ಷಮೆಯನ್ನು ಕೇಳುವಾಗ
1980 ಮತ್ತು 1996ರ ನಡುವೆ, ಜಾನ್ ಪಾಲ್ II, ಕಡಿಮೆ ಪಕ್ಷ 94 ಬಾರಿ ‘ಚರ್ಚಿನ ಐತಿಹಾಸಿಕ ತಪ್ಪುಗಳನ್ನು ಅಂಗೀಕರಿಸಿದ್ದಾರೆ ಅಥವಾ ಕ್ಷಮೆಯನ್ನು ಕೇಳಿಕೊಂಡಿದ್ದಾರೆ’ ಎಂದು ಕ್ವಾಂಡೋ ಈಲ್ ಪಾಪಾ ಕೇಡೆ ಪೆರ್ಡೊನೋ (ಪೋಪ್ ಕ್ಷಮೆಯನ್ನು ಕೇಳಿಕೊಳ್ಳುವಾಗ) ಎಂಬ ತಮ್ಮ ಪುಸ್ತಕದಲ್ಲಿ ವ್ಯಾಟಿಕನ್ ವ್ಯಾಖ್ಯಾನಕಾರ ಲೂಈಜೀ ಆಕಾಟಾಲೀ ಹೇಳುತ್ತಾರೆ. ಆಕಾಟಾಲೀಗನುಸಾರ, “ಕ್ಯಾಥೊಲಿಕ್ ಚರ್ಚ್ನಲ್ಲಿ ಕೇವಲ ಪೋಪನು ಯೋಗ್ಯವಾಗಿಯೇ ದೋಷಾಂಗೀಕಾರವನ್ನು ಮಾಡಬಲ್ಲನು.” ಮತ್ತು ಕ್ಯಾಥೊಲಿಕ್ ಇತಿಹಾಸದ ಅತಿ ವಾದಾಸ್ಪದವಾದ ಪುಟಗಳಿಗೆ—ಕ್ರೂಸೇಡ್ಗಳು, ಯುದ್ಧಗಳು, ನಿರಂಕುಶಾಧಿಕಾರಿಗಳಿಗೆ ಬೆಂಬಲ, ಚರ್ಚುಗಳ ವಿಭಜನೆ, ಷೇಮ್-ವಂಶ ವಿರೋಧ, ಪಾಷಂಡಿ ವಿಚಾರಣೆಗಳು, ಮಾಫಿಯ ಮತ್ತು ಜಾತೀವಾದ—ಸೂಚಿಸುತ್ತಾ ಅವರಿದನ್ನು ಮಾಡಿದ್ದಾರೆ. 1994ರಲ್ಲಿ ಕಾರ್ಡಿನಲ್ಗಳಿಗೆ ಕಳುಹಿಸಲ್ಪಟ್ಟ ಒಂದು ಸುತ್ತೋಲೆಯಲ್ಲಿ (ಇದನ್ನು ಪೋಪರ ಅತಿ ಪ್ರಾಮುಖ್ಯವಾದ ದಸ್ತಾವೇಜು ಎಂದು ಕೆಲವರು ಪರಿಗಣಿಸುತ್ತಾರೆ) ಜಾನ್ ಪಾಲ್ II, “ಎರಡನೆಯ ಕ್ರೈಸ್ತ ಸಹಸ್ರ ವರ್ಷಗಳ ಕಾಲದಲ್ಲಿ ನಡೆಸಲ್ಪಟ್ಟ ಪಾಪಗಳ ಒಂದು ಸಾಮಾನ್ಯ ಪಾಪನಿವೇದನೆಯ” ಪ್ರಸ್ತಾಪವನ್ನು ಮಾಡಿದರು.
ಹಲವಾರು ಧರ್ಮಾಧ್ಯಕ್ಷರು ಪೋಪರ ಮಾದರಿಯನ್ನು ಅನುಸರಿಸಿದ್ದಾರೆ. 1994ರ ಡಿಸೆಂಬರ್ ತಿಂಗಳಿನಲ್ಲಿ, ಇಟಾಲ್ಯನ್ ವಾರ್ತಾಪತ್ರಿಕೆಯಾದ ಈಲ್ ಜಾರ್ನಾಲೆ ವರದಿಸಿದ್ದು: “ಅನೇಕ ಅಮೆರಿಕನ್ ಬಿಷಪರುಗಳು, ಟೆಲಿವಿಷನ್ನಲ್ಲಿ ತೋರಿಬಂದು ಬಹಿರಂಗವಾಗಿ ಕ್ಷಮೆಯನ್ನು ಕೇಳಿಕೊಂಡರು.” ಯಾವುದಕ್ಕಾಗಿ ಕ್ಷಮೆ? ಅನೇಕ ಎಳೆಯ ಬಲಿಗಳಿಗೆ ಹಾನಿಯಾಗುವಂತೆ ಮಾಡಿದ, ಶಿಶುಕಾಮಿ ಪಾದ್ರಿಗಳ ಸಮಸ್ಯೆಯನ್ನು ಅಪ್ರಾಮುಖ್ಯವೆಂದು ಎಣಿಸಿದ್ದಕ್ಕಾಗಿಯೇ. ಜನವರಿ 1995ರಲ್ಲಿ, ಲಾ ರೇಪೂಬ್ಲೀಕಾ ಎಂಬ ವಾರ್ತಾಪತ್ರಿಕೆಯು “ಆಧುನಿಕ ಕ್ಯಾಥೊಲಿಕ್ವಾದದ ಇತಿಹಾಸದಲ್ಲಿ ಹಿಂದೆಂದೂ ಮಾಡಲ್ಪಟ್ಟಿರದ ಒಂದು ವರ್ತನೆಯ” ಕುರಿತು ವರದಿಸಿತು. ಅದೇನೆಂದರೆ, ಯೆಹೂದಿಗಳ ಸಾಮೂಹಿಕ ಕಗ್ಗೊಲೆಯ ಸಂಬಂಧದಲ್ಲಿ ಪೋಪ್ ಪೈಯಸ್ XIIರ ಮೌನದ ಸಮಸ್ಯೆಯನ್ನು ಉದ್ದೇಶಿಸಿ ಮಾತಾಡಲಾಯಿತು. ಜನವರಿ 1995ರಲ್ಲಿ, ಜರ್ಮನ್ ಬಿಷಪ್ಗಣವು, ನಾಸಿಗಳ ಅಪರಾಧಗಳನ್ನು ಬೆಂಬಲಿಸಿದ ರೋಮನ್ ಕ್ಯಾಥೊಲಿಕರ “ಅನೇಕ ತಪ್ಪು”ಗಳಿಗಾಗಿ ಕ್ಷಮೆಯನ್ನು ಕೇಳಿಕೊಂಡದ್ದನ್ನು ಅದೇ ವಾರ್ತಾಪತ್ರಿಕೆಯು ವರದಿಸಿತು. ವಿವಿಧ ಪ್ರಾಟೆಸ್ಟಂಟ್ ಚರ್ಚುಗಳು ಕೂಡ ತಮ್ಮನ್ನೇ ಸ್ವವಿಮರ್ಶೆಗೆ ಒಳಪಡಿಸಿಕೊಂಡಿವೆ.
ಏಕೆ ಕ್ಷಮೆಯಾಚಿಸಬೇಕು?
ನಾವು ತಪ್ಪುಮಾಡಿರುವಾಗ ಕ್ಷಮೆಯನ್ನು ಕೇಳಿಕೊಳ್ಳುವಂತೆ ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ, ಮತ್ತು ಚರ್ಚುಗಳು ತಮ್ಮನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳುವಾಗ ಅನೇಕರು ಅವುಗಳನ್ನು ಶ್ಲಾಘಿಸುತ್ತಾರೆ. (ಯಾಕೋಬ 5:16) ಆದರೆ ಚರ್ಚುಗಳು ಇದನ್ನೇಕೆ ಮಾಡುತ್ತಿವೆ? ನಾವು ಅವುಗಳನ್ನು ವೀಕ್ಷಿಸುವ ರೀತಿಯನ್ನು ಇದು ಹೇಗೆ ಪ್ರಭಾವಿಸಬೇಕು?
[ಪಾದಟಿಪ್ಪಣಿ]
a ಮೇಅ ಕುಲ್ಪ ಎಂಬುದು, “ನನ್ನ ಸ್ವಂತ ದೋಷ” ಎಂಬುದಕ್ಕೆ ಲ್ಯಾಟಿನ್ ಭಾಷೆಯ ಅಭಿವ್ಯಕ್ತಿಯಾಗಿದೆ. ಇದು ಒಂದು ಕ್ಯಾಥೊಲಿಕ್ ಪ್ರಾರ್ಥನೆಯ (ಕಾನ್ಫಿಟಿಓರ್ ಅಥವಾ “ನಾನು ನಿವೇದಿಸುತ್ತೇನೆ”) ಭಾಗವಾಗಿದೆ. ಈ ಪ್ರಾರ್ಥನೆಯಲ್ಲಿ ಚರ್ಚ್ ಸದಸ್ಯರು ಈ ಪದಗಳನ್ನು ಪದೇಪದೇ ಹೇಳುತ್ತಾರೆ.