ಅವರು ಯೆಹೋವನ ಚಿತ್ತವನ್ನು ಮಾಡಿದರು
ಕ್ಷಮಿಸಲು ಸಿದ್ಧನಾಗಿರುವ ಒಬ್ಬ ತಂದೆ
ಸಕಾರಣದಿಂದ ಬರೆಯಲ್ಪಟ್ಟಿರುವುದರಲ್ಲಿಯೇ ಅತ್ಯಂತ ಮಹಾನ್ ಸಣ್ಣ ಕಥೆಯೆಂದು ಇದನ್ನು ಕರೆಯಲಾಗುತ್ತದೆ. ತನ್ನ ಪೋಲಿಹೋಗಿದ್ದ ಮಗನಿಗಾಗಿರುವ ಒಬ್ಬ ತಂದೆಯ ಪ್ರೀತಿಯ ಕುರಿತಾದ ಯೇಸುವಿನ ಸಾಮ್ಯವು, ಒಂದು ಕಿಟಕಿಯಂತಿದ್ದು, ಅದರ ಮೂಲಕವಾಗಿ ನಾವು ಪಶ್ಚಾತ್ತಾಪಪಡುವ ಪಾಪಿಗಳಿಗಾಗಿರುವ ದೇವರ ಸಹಾನುಭೂತಿಯ ಅತ್ಯುತ್ಕೃಷ್ಟವಾದ ದೃಷ್ಟಿಕೋನವನ್ನು ಪಡೆದುಕೊಳ್ಳುತ್ತೇವೆ.
ಪೋಲಿಹೋಗಿದ್ದನು ಮತ್ತು ಸಿಕ್ಕಿದನು
ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರಲ್ಲಿ ಕಿರಿಯವನು ಅವನಿಗೆ ಹೇಳಿದ್ದು: ‘ನೀವು ಸಾಯುವ ತನಕ ನಾನು ಕಾಯುತ್ತಿರಲಾರೆ, ನನ್ನ ಆಸ್ತಿ ನನಗೆ ಈಗಲೇ ಬೇಕು.’ ಇಬ್ಬರು ಗಂಡುಮಕ್ಕಳಲ್ಲಿ ಕಿರಿಯವನಿಗಾಗಿದ್ದ ನ್ಯಾಯಸಮ್ಮತ ಪಾಲನ್ನು—ತನಗಿದ್ದ ಆಸ್ತಿಯ ಮೂರನೇ ಒಂದು ಭಾಗವನ್ನು—ಅವನಿಗೆ ಕೊಡುವ ಮೂಲಕ, ಆ ತಂದೆಯು ಅವನ ಕೋರಿಕೆಯನ್ನು ನೆರವೇರಿಸಿದನು. (ಧರ್ಮೋಪದೇಶಕಾಂಡ 21:17) ಆ ಯೌವನಸ್ಥನು ತನ್ನ ಸ್ವತ್ತುಗಳನ್ನೆಲ್ಲಾ ಬಹಳ ತ್ವರೆಯಾಗಿ ಒಟ್ಟುಗೂಡಿಸಿಕೊಂಡು, ಬಹುದೂರದ ದೇಶವೊಂದಕ್ಕೆ ಪ್ರಯಾಣಿಸಿದನು. ಅಲ್ಲಿ ಅವನು ವ್ಯಭಿಚಾರದ ಜೀವನವನ್ನು ಬೆನ್ನಟ್ಟುತ್ತಾ, ತನ್ನ ಹಣವನ್ನೆಲ್ಲ ಹಾಳುಮಾಡಿದನು.—ಲೂಕ 15:11-13.
ಆ ಬಳಿಕ ಭೀಕರವಾದ ಬರವು ಬಂತು. ಅತ್ಯಂತ ನಿರಾಶೆಯಿಂದ, ಆ ಯುವ ವ್ಯಕ್ತಿಯು, ಯೆಹೂದ್ಯನೊಬ್ಬನಿಗೆ ಅತಿ ತುಚ್ಛವಾದ ಒಂದು ವೃತ್ತಿಯಾಗಿದ್ದ ಹಂದಿ ಮೇಯಿಸುವ ಕೆಲಸವನ್ನು ಒಪ್ಪಿಕೊಂಡನು. (ಯಾಜಕಕಾಂಡ 11:7, 8) ಆಹಾರವು ಸಿಗುವುದು ಎಷ್ಟು ವಿರಳವಾಗಿತ್ತೆಂದರೆ, ಹಂದಿಗಳಿಗೆ ಆಹಾರವಾಗಿದ್ದ ಕ್ಯಾರಬ್ ಕಾಯಿಗಳನ್ನು ತಿನ್ನಲು ಅವನು ಹಂಬಲಿಸಲಾರಂಭಿಸಿದನು! ಕೊನೆಗೆ, ಆ ಯುವ ವ್ಯಕ್ತಿಗೆ ಬುದ್ಧಿಬಂತು. ‘ನನಗಿಂತಲೂ ನನ್ನ ತಂದೆಯ ಸೇವಕರು ಹೆಚ್ಚು ಉತ್ತಮವಾಗಿ ಉಣಿಸಲ್ಪಡುತ್ತಿದ್ದಾರೆ!’ ಎಂದು ಅವನು ತನ್ನಷ್ಟಕ್ಕೇ ಆಲೋಚಿಸಿದನು. ‘ನಾನು ಮನೆಗೆ ಹಿಂದಿರುಗಿ ಹೋಗಿ, ನನ್ನ ಪಾಪಗಳನ್ನು ಅರಿಕೆಮಾಡಿಕೊಂಡು, ನನ್ನ ತಂದೆಯ ಕೂಲಿಯಾಳುಗಳಲ್ಲಿ ಒಬ್ಬನಾಗಿ ನನ್ನನ್ನು ಪರಿಗಣಿಸುವಂತೆ ಬೇಡಿಕೊಳ್ಳುತ್ತೇನೆ.’a—ಲೂಕ 15:14-19.
ಆ ಯುವ ವ್ಯಕ್ತಿಯು ಕಷ್ಟಪಟ್ಟುಕೊಂಡು ಮನೆಗೆ ಹಿಂದಿರುಗಿದನು. ಅವನ ಹೊರತೋರಿಕೆಯು ಗಮನಾರ್ಹವಾಗಿ ಬದಲಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಆದರೂ, ಅವನು “ಇನ್ನೂ ದೂರದಲ್ಲಿರುವಾಗ”ಲೇ ಅವನ ತಂದೆಯು ಅವನನ್ನು ಗುರುತಿಸಿದನು. ಕರುಣೆಯಿಂದ ಪ್ರಚೋದಿತನಾಗಿ, ಅವನು ತನ್ನ ಮಗನ ಬಳಿಗೆ ಓಡಿಹೋಗಿ, ಅವನನ್ನು ಅಪ್ಪಿಕೊಂಡು, “ಅವನಿಗೆ ಬಹಳವಾಗಿ ಮುದ್ದಿಟ್ಟನು.”—ಲೂಕ 15:20.
ಈ ಹೃತ್ಪೂರ್ವಕವಾದ ಬರಮಾಡಿಕೊಳ್ಳುವಿಕೆಯು, ಈ ಯುವ ವ್ಯಕ್ತಿಯು ತನ್ನ ಅಳಲನ್ನು ತೋಡಿಕೊಳ್ಳಲು ಹೆಚ್ಚು ಸುಲಭ ಮಾರ್ಗವನ್ನು ಒದಗಿಸಿತು. ಅವನಂದದ್ದು: “ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ. [“ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಮಾಡಿಕೊ,” NW].” ಆ ತಂದೆಯು ತನ್ನ ಸೇವಕರಿಗೆ ಬರಹೇಳಿದನು. ಅವನು ಅವರಿಗೆ ಆಜ್ಞಾಪಿಸಿದ್ದು: “ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನು ಇಡಿರಿ; ಕಾಲಿಗೆ ಜೋಡು ಮೆಡಿಸಿರಿ; ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಉಲ್ಲಾಸಪಡೋಣ. ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು.”—ಲೂಕ 15:21-24.
ಬಹಳ ವಿಜೃಂಭಣೆಯ ಉತ್ಸವವು ನಡೆಯುತ್ತಿದೆ—ಅದರಲ್ಲಿ ಸಂಗೀತನೃತ್ಯಗಳೂ ಸೇರಿವೆ. ಹೊಲದಿಂದ ಹಿಂದಿರುಗುತ್ತಿದ್ದಾಗ, ಹಿರಿಯ ಮಗನು ಈ ಗದ್ದಲವನ್ನು ಕೇಳಿಸಿಕೊಂಡನು. ತನ್ನ ತಮ್ಮನು ಹಿಂದಿರುಗಿ ಮನೆಗೆ ಬಂದಿದ್ದಾನೆ, ಮತ್ತು ಈ ಸಂತೋಷ ಸಮಾರಂಭಕ್ಕೆ ಕಾರಣವು ಇದೇ ಆಗಿತ್ತೆಂಬುದು ಅವನಿಗೆ ತಿಳಿದುಬಂದಾಗ, ಅವನು ಕ್ರೋಧಗೊಂಡನು. ‘ನೋಡಿ, ನಾನು ಅನೇಕ ವರುಷಗಳಿಂದ ನಿಮ್ಮ ಸೇವೆಮಾಡಿದ್ದೇನೆ, ಮತ್ತು ನಾನೆಂದೂ ನಿಮಗೆ ಅವಿಧೇಯನಾಗಿಲ್ಲ, ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವದಕ್ಕಾಗಿ ನೀವು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ’ ಎಂದು ಅವನು ತನ್ನ ತಂದೆಗೆ ದೂರಿತ್ತನು. ‘ಆದರೆ ಈಗ ನಿಮ್ಮ ಐಶ್ವರ್ಯವನ್ನು ಹಾಳುಮಾಡಿದ ಮಗನು ಹಿಂದಿರುಗಿದ ಕೂಡಲೆ, ಅವನಿಗಾಗಿ ನೀವು ಉತ್ಸವವನ್ನು ಏರ್ಪಡಿಸಿದಿರಿ.’ ಅವನ ತಂದೆಯು ಕೋಮಲಭಾವದಿಂದ ಉತ್ತರಿಸಿದ್ದು: ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ಮತ್ತು ನನ್ನದೆಲ್ಲಾ ನಿನ್ನದೇ. ಆದರೆ ನಾವು ಸಂತೋಷಗೊಳ್ಳುವದು ನ್ಯಾಯವಾದದ್ದೇ, ಏಕೆಂದರೆ ನಿನ್ನ ತಮ್ಮ ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು. ಅವನು ಪೋಲಿಹೋಗಿದ್ದನು, ಸಿಕ್ಕಿದನು.’ (ಓರೆಅಕ್ಷರಗಳು ನಮ್ಮವು.)—ಲೂಕ 15:25-32.
ನಮಗಾಗಿರುವ ಪಾಠಗಳು
ಯೇಸುವಿನ ಸಾಮ್ಯದಲ್ಲಿನ ತಂದೆಯು, ನಮ್ಮ ಕರುಣಾಭರಿತ ದೇವರಾದ ಯೆಹೋವನನ್ನು ಪ್ರತಿನಿಧಿಸುತ್ತಾನೆ. ಪೋಲಿಹೋಗಿದ್ದ ಮಗನಂತೆ, ಕೆಲವು ಜನರು ಸ್ವಲ್ಪ ಸಮಯದ ವರೆಗೆ ದೇವರ ಮನೆವಾರ್ತೆಯ ಭದ್ರತೆಯನ್ನು ಬಿಟ್ಟುಹೋಗುತ್ತಾರಾದರೂ, ತದನಂತರ ಹಿಂದಿರುಗುತ್ತಾರೆ. ಅಂತಹವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? ಯಥಾರ್ಥವಾದ ಪಶ್ಚಾತ್ತಾಪದಿಂದ ಯೆಹೋವನ ಬಳಿಗೆ ಹಿಂದಿರುಗುವವರು, “ಆತನು ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ” ಎಂಬ ಆಶ್ವಾಸನೆಯಿಂದಿರಸಾಧ್ಯವಿದೆ. (ಕೀರ್ತನೆ 103:9) ಸಾಮ್ಯದಲ್ಲಿ, ಆ ತಂದೆಯು ತನ್ನ ಮಗನನ್ನು ಪುನಃ ಬರಮಾಡಿಕೊಳ್ಳಲಿಕ್ಕಾಗಿ ಓಡಿಹೋದನು. ತದ್ರೀತಿಯಲ್ಲಿ, ಪಶ್ಚಾತ್ತಾಪಪಡುವ ಪಾಪಿಗಳನ್ನು ಕ್ಷಮಿಸಲು ಯೆಹೋವನು ಸಿದ್ಧಮನಸ್ಕನಾಗಿದ್ದಾನೆ ಮಾತ್ರವಲ್ಲ, ಅದಕ್ಕಾಗಿ ತವಕಪಡುತ್ತಾನೆ ಕೂಡ. ಆತನು “ಕ್ಷಮಿಸಲು ಸಿದ್ದನಾಗಿ”ದ್ದಾನೆ, ಮತ್ತು ಆತನು ಅದನ್ನು “ಮಹಾಕೃಪೆಯಿಂದ” ಕ್ಷಮಿಸುತ್ತಾನೆ.—ಕೀರ್ತನೆ 86:5; ಯೆಶಾಯ 55:7; ಜೆಕರ್ಯ 1:3.
ಯೇಸುವಿನ ಸಾಮ್ಯದಲ್ಲಿ, ಆ ತಂದೆಯ ಯಥಾರ್ಥವಾದ ಪ್ರೀತಿಯು, ಆ ಮಗನು ಹಿಂದಿರುಗಲು ಧೈರ್ಯವನ್ನು ಒಟ್ಟುಗೂಡಿಸಿಕೊಳ್ಳುವುದನ್ನು ಹೆಚ್ಚು ಸುಲಭವನ್ನಾಗಿ ಮಾಡಿತು. ಆದರೆ ಪರಿಗಣಿಸಿರಿ: ತಂದೆಯು ಆ ಮಗನನ್ನು ತಿರಸ್ಕರಿಸಿ, ಕೋಪದಿಂದ ಕೆರಳಿ, ಎಂದಿಗೂ ಹಿಂದಿರುಗಬೇಡವೆಂದು ಅವನಿಗೆ ಹೇಳಿರುತ್ತಿದ್ದಲ್ಲಿ ಏನು ಸಂಭವಿಸಿದ್ದಿರಸಾಧ್ಯವಿತ್ತು? ಅಂತಹ ಒಂದು ಮನೋಭಾವವು, ಆ ತರುಣನು ಶಾಶ್ವತವಾಗಿ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದೀತು.—2 ಕೊರಿಂಥ 2:6, 7ನ್ನು ಹೋಲಿಸಿರಿ.
ಆದುದರಿಂದ, ಒಂದರ್ಥದಲ್ಲಿ ತಂದೆಯು, ತನ್ನ ಮಗನ ಹಿಂದಿರುಗುವಿಕೆಗಾಗಿ ಅವನು ಹೊರಟುಹೋದಾಗಲೇ ಮಾರ್ಗವನ್ನು ಸಿದ್ಧಪಡಿಸಿದನು. ಕೆಲವೊಮ್ಮೆ ಇಂದು ಕ್ರೈಸ್ತ ಹಿರಿಯರು ಪಶ್ಚಾತ್ತಾಪಪಡದ ಪಾಪಿಗಳನ್ನು ಸಭೆಯಿಂದ ತೆಗೆದುಹಾಕಬೇಕಾಗುತ್ತದೆ. (1 ಕೊರಿಂಥ 5:11, 13) ಹಾಗೆ ಮಾಡುವಾಗ, ಭವಿಷ್ಯತ್ತಿನ ಪುನಃಸ್ಥಾಪನೆಗಾಗಿ ಅವನು ತೆಗೆದುಕೊಳ್ಳಸಾಧ್ಯವಿರುವ ಹೆಜ್ಜೆಗಳನ್ನು ಪ್ರೀತಿಯಿಂದ ಸೂಚಿಸುವ ಮೂಲಕ, ಆ ಪಾಪಿಯ ಹಿಂದಿರುಗುವಿಕೆಗಾಗಿ ಮಾರ್ಗವನ್ನು ಸಿದ್ಧಪಡಿಸಲು ಆರಂಭಿಸಸಾಧ್ಯವಿದೆ. ಹಿರಿಯರ ಅಂತಹ ಹೃತ್ಪೂರ್ವಕವಾದ ಬೇಡಿಕೆಯ ಸ್ಮರಣೆಯು, ಆತ್ಮಿಕವಾಗಿ ದಾರಿತಪ್ಪಿದ್ದ ಅನೇಕರನ್ನು, ಪಶ್ಚಾತ್ತಾಪಪಡುವಂತೆ ಪ್ರಚೋದಿಸಿದೆ ಮತ್ತು ತದನಂತರ ದೇವರ ಮನೆವಾರ್ತೆಗೆ ಹಿಂದಿರುಗುವಂತೆ ಅವರನ್ನು ಪ್ರವರ್ಧಿಸಿದೆ.—2 ತಿಮೊಥೆಯ 4:2.
ತನ್ನ ಮಗನು ಹಿಂದಿರುಗಿದಾಗ, ತಂದೆಯು ಸಹ ಸಹಾನುಭೂತಿಯನ್ನು ತೋರಿಸಿದನು. ಆ ಹುಡುಗನ ಯಥಾರ್ಥವಾದ ಪಶ್ಚಾತ್ತಾಪವನ್ನು ಅರ್ಥಮಾಡಿಕೊಳ್ಳಲು ಅವನಿಗೆ ದೀರ್ಘ ಸಮಯವು ತಗಲಲಿಲ್ಲ. ತದನಂತರ, ತನ್ನ ಮಗನ ತಪ್ಪುಗಳ ಕುರಿತಾದ ಪ್ರತಿಯೊಂದು ವಿವರವನ್ನು ಹೊರಸೆಳೆಯಲು ಪ್ರಯತ್ನಿಸುವುದಕ್ಕೆ ಬದಲಾಗಿ, ಅವನನ್ನು ಹಿಂದಿರುಗಿ ಬರಮಾಡಿಕೊಳ್ಳಲಿಕ್ಕಾಗಿ ಅವನು ಧಾವಿಸಿದನು ಮತ್ತು ಹಾಗೆ ಮಾಡುವುದರಲ್ಲಿ ಅವನು ಮಹತ್ತರವಾದ ಆನಂದವನ್ನು ವ್ಯಕ್ತಪಡಿಸಿದನು. ಕ್ರೈಸ್ತರು ಈ ಉದಾಹರಣೆಯನ್ನು ಅನುಕರಿಸಬಲ್ಲರು. ದಾರಿತಪ್ಪಿದವನು ಕಂಡುಕೊಳ್ಳಲ್ಪಟ್ಟಿರುವಾಗ ಅವರು ಹರ್ಷಾನಂದಪಡಬೇಕು.—ಲೂಕ 15:10.
ತನ್ನ ಮೊಂಡು ಮಗನ ಹಿಂದಿರುಗುವಿಕೆಯನ್ನು ಅವನು ಬಹಳ ಸಮಯದಿಂದಲೂ ತವಕದಿಂದ ಎದುರುನೋಡಿದನೆಂಬುದನ್ನು, ಆ ತಂದೆಯ ವರ್ತನೆಯು ಸ್ಪಷ್ಟವಾಗಿ ತೋರಿಸಿತು. ನಿಶ್ಚಯವಾಗಿಯೂ, ಅದು ತನ್ನ ಮನೆವಾರ್ತೆಯನ್ನು ಬಿಟ್ಟುಹೋಗಿರುವವರೆಲ್ಲರ ಕುರಿತಾಗಿರುವ ಯೆಹೋವನ ಹಂಬಲಿಕೆಯ ಕೇವಲ ಒಂದು ಛಾಯೆಯಾಗಿದೆ. “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾ”ಗಿದ್ದಾನೆ. (ಓರೆಅಕ್ಷರಗಳು ನಮ್ಮವು.) (2 ಪೇತ್ರ 3:9) ಆದುದರಿಂದಲೇ, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುವವರು, ತಾವು ‘ದೇವರ [“ಯೆಹೋವನ,” NW] ಸನ್ನಿಧಾನದಿಂದ ಬರುವ ವಿಶ್ರಾಂತಿಕಾಲಗಳಿಂದ’ ಆಶೀರ್ವದಿಸಲ್ಪಡುವೆವೆಂಬ ಆಶ್ವಾಸನೆಯಿಂದಿರಸಾಧ್ಯವಿದೆ.—ಅ. ಕೃತ್ಯಗಳು 3:19, 20.
[ಪಾದಟಿಪ್ಪಣಿ]
a ಒಬ್ಬ ಸೇವಕನನ್ನು ಮನೆವಾರ್ತೆಯ ಭಾಗವಾಗಿರುವವನಾಗಿ ಪರಿಗಣಿಸುವಾಗ, ಒಬ್ಬ ಕೂಲಿಯಾಳನ್ನು ದಿನಗೂಲಿಯವನಾಗಿ ಪರಿಗಣಿಸಲಾಗುತ್ತಿತ್ತು; ಅವನನ್ನು ಯಾವುದೇ ಸಮಯದಲ್ಲಿ ಕೆಲಸದಿಂದ ತೆಗೆದುಹಾಕಸಾಧ್ಯವಿತ್ತು. ಆ ಯುವ ವ್ಯಕ್ತಿಯು, ತನ್ನ ತಂದೆಯ ಮನೆವಾರ್ತೆಯಲ್ಲಿ ಅತ್ಯಂತ ನಿಕೃಷ್ಟವಾದ ಸ್ಥಾನವನ್ನು ಕೂಡ ತಾನು ಅಂಗೀಕರಿಸಲು ಸಿದ್ಧಮನಸ್ಕನು ಎಂದು ತರ್ಕಿಸಿದನು.