ನಿಮ್ಮನ್ನು ಜೀವನದ ಪಥದಲ್ಲಿ ನಡೆಸುವ ಒಂದು ದೀಪ
“ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಈ ಮಾತುಗಳಿಂದ ಪ್ರವಾದಿಯಾದ ಯೆರೆಮೀಯನು ತೋರಿಸಿಕೊಟ್ಟದ್ದೇನೆಂದರೆ, ಸಹಾಯವಿಲ್ಲದೆ ಮಾನವರು ಜೀವಿತದ ಹಾದಿಯನ್ನು ಯಶಸ್ವಿಯಾಗಿ ದಾಟಲಾರರು. ಅಂತಹ ಸಹಾಯವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ಯೆಹೋವ ದೇವರಿಗೆ ಮಾಡಿದ ತನ್ನ ಪ್ರಾರ್ಥನೆಯಲ್ಲಿ ಕೀರ್ತನೆಗಾರನು ಉತ್ತರಿಸುವುದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.”—ಕೀರ್ತನೆ 119:105.
ದೇವರ ವಾಕ್ಯವಾದ ಪವಿತ್ರ ಬೈಬಲಿನ ಅಭ್ಯಾಸವನ್ನು ಕೈಕೊಂಡು, ಅದು ಹೇಳುವ ವಿಚಾರಗಳನ್ನು ಅನ್ವಯಿಸಿಕೊಳ್ಳುವವರು, ಮುಂಜಾವದಲ್ಲಿ ಪ್ರಯಾಣವನ್ನು ಆರಂಭಿಸುವ ಒಬ್ಬ ವ್ಯಕ್ತಿಯಂತಿರುವರು. ಮೊದಮೊದಲು ಕತ್ತಲೆಯ ಕಾರಣದಿಂದ ಅವನು ಹೆಚ್ಚನ್ನು ನೋಡಸಾಧ್ಯವಿಲ್ಲ. ಆದರೆ ಸೂರ್ಯನು ಉದಯಿಸಲು ಆರಂಭಿಸಿದಂತೆ, ಅವನು ಹೆಚ್ಚೆಚ್ಚು ವಿಷಯಗಳನ್ನು ನೋಡುತ್ತಾನೆ. ಕೊನೆಯದಾಗಿ, ಸೂರ್ಯನು ನೇರವಾಗಿ ನೆತ್ತಿಯ ಮೇಲ್ಗಡೆಯೇ ಪ್ರಕಾಶಿಸುತ್ತಾನೆ. ಸವಿಸ್ತಾರವಾಗಿ ಅವನು ಸರ್ವವನ್ನೂ ನೋಡುತ್ತಾನೆ. ಅಂತಹ ಒಂದು ದೃಷ್ಟಾಂತವು, ಬೈಬಲಿನ ಒಂದು ಜ್ಞಾನೋಕ್ತಿಯನ್ನು ಮನಸ್ಸಿಗೆ ತರುತ್ತದೆ: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.”—ಜ್ಞಾನೋಕ್ತಿ 4:18.
ದೇವರ ಮಾರ್ಗದರ್ಶನವನ್ನು ತಿರಸ್ಕರಿಸುವವರ ಕುರಿತಾಗಿ ಏನು? ಬೈಬಲು ಹೇಳುವುದು: “ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು.” (ಜ್ಞಾನೋಕ್ತಿ 4:19) ಹೌದು, ದುಷ್ಟರು, ಕತ್ತಲಿನಲ್ಲಿ ಎಡವಿಬೀಳುವ ಮನುಷ್ಯನಂತಿದ್ದಾರೆ. ಅವರ ಯಶಸ್ಸಿನ ತೋರಿಬರುವಿಕೆಗಳು ಸಹ, ಹೆಚ್ಚೆಂದರೆ ತಾತ್ಕಾಲಿಕವಾದವುಗಳು, ಏಕೆಂದರೆ “ಯಾವ ಜ್ಞಾನವೂ ಯಾವ ವಿವೇಕವೂ ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವದಿಲ್ಲ.”—ಜ್ಞಾನೋಕ್ತಿ 21:30.
ಆದುದರಿಂದ, ದೇವರ ವಾಕ್ಯವಾದ ಬೈಬಲಿನ ಮಾರ್ಗದರ್ಶನವನ್ನು ಅನುಸರಿಸಿರಿ. ನೀವು ಹಾಗೆ ಮಾಡುವಲ್ಲಿ, ಜ್ಞಾನೋಕ್ತಿ 3:5, 6ರ ಮಾತುಗಳು ಸತ್ಯವಾಗಿವೆಯೆಂಬುದನ್ನು ನೀವು ಕಂಡುಕೊಳ್ಳುವಿರಿ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”