ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳು ನಿಮಗೆ ಪ್ರಾಯೋಗಿಕ ಮೌಲ್ಯವುಳ್ಳವುಗಳಾಗಿರುವುದನ್ನು ನೀವು ಕಂಡುಕೊಂಡಿದ್ದೀರೊ? ಹಾಗಿರುವಲ್ಲಿ, ಈ ಕೆಳಗಿನ ಪ್ರಶ್ನೆಗಳೊಂದಿಗೆ ನಿಮ್ಮ ಜ್ಞಾಪಕಶಕ್ತಿಯನ್ನು ಏಕೆ ಪರೀಕ್ಷಿಸಬಾರದು?
◻ ಅರ್ಮಗೆದೋನ್ ಯಾವುದರಂತಿರುವುದು? (ಪ್ರಕಟನೆ 16:14, 16)
ಅದೊಂದು ನ್ಯೂಕ್ಲಿಯರ್ ಭೀಕರ ಘಟನೆ ಅಥವಾ ಮಾನವರಿಂದ ಕೆರಳಿಸಲ್ಪಟ್ಟ ಒಂದು ವಿಪತ್ತಾಗಿರದು. ಇಲ್ಲ, ಅದು ಎಲ್ಲ ಮಾನವ ಯುದ್ಧಗಳನ್ನು ಕೊನೆಗೊಳಿಸಲು, ಅಂತಹ ಯುದ್ಧಗಳನ್ನು ಪ್ರವರ್ಧಿಸುವ ಸಕಲರನ್ನೂ ನಿರ್ಮೂಲಮಾಡಲು, ಮತ್ತು ಶಾಂತಿಪ್ರಿಯರಿಗಾಗಿ ನಿಜ ಶಾಂತಿಯನ್ನು ತರಲಿರುವ ದೇವರ ಯುದ್ಧವಾಗಿದೆ. ಅದು ತಡಮಾಡದು. (ಹಬಕ್ಕೂಕ 2:3)—4/15, ಪುಟ 17.
◻ ಯಾವ ವಿಧದ ವಿವಾಹವು ಯೆಹೋವನಿಗೆ ಘನತೆಯನ್ನು ತರುತ್ತದೆ?
ಲೌಕಿಕ ರೀತಿನೀತಿಗಳಿಗಿಂತಲೂ, ಆತ್ಮಿಕ ಅಂಶಗಳೇ ಪ್ರಮುಖವಾಗಿರುವ ಒಂದು ವಿವಾಹವು, ನಿಜವಾಗಿಯೂ ಯೆಹೋವನಿಗೆ ಘನತೆ ತರುವುದು. ಕ್ರೈಸ್ತರು ಕೀಳ್ಮಟ್ಟದ ಲೌಕಿಕ ಪದ್ಧತಿಗಳು, ಮೂಢನಂಬಿಕೆಗಳು ಹಾಗೂ ವೈಪರೀತ್ಯಗಳನ್ನು ದೂರವಿಡುವಲ್ಲಿ, ಅದು ಕ್ರಮವಾದ ದೇವಪ್ರಭುತ್ವ ಚಟುವಟಿಕೆಗಳಿಗೆ ಅಡ್ಡಬರುವಂತೆ ಅನುಮತಿಸದಿರುವಲ್ಲಿ, ಹಾಗೂ ಆಡಂಬರದ ಪ್ರದರ್ಶನಕ್ಕೆ ಬದಲಾಗಿ ಆಡಂಬರಮಿತಿಯನ್ನು ತೋರಿಸುವಲ್ಲಿ, ಅವರು ಆ ಸಂದರ್ಭದಲ್ಲಿ ಆನಂದಿಸುವರು.—4/15, ಪುಟ 26.
◻ ಒಬ್ಬ ಸಮಗ್ರತೆಯ ಮನುಷ್ಯನ ಮುಖ್ಯ ಲಕ್ಷಣಗಳಾವುವು?
ಸಮಗ್ರತೆಯ ಮನುಷ್ಯನ ಮೇಲೆ ಕೇವಲ ಅವನ ಜೊತೆಮಾನವನಲ್ಲ, ಹೆಚ್ಚು ಪ್ರಾಮುಖ್ಯವಾಗಿ, ದೇವರು ಭರವಸೆಯಿಡಬಲ್ಲನು. ಅಂತಹ ಒಬ್ಬ ವ್ಯಕ್ತಿಯ ಹೃದಯದ ಶುದ್ಧತೆಯು ಅವನ ಕೃತ್ಯಗಳಲ್ಲಿ ತೋರಿಬರುತ್ತದೆ. ಅವನು ಕಪಟತನದಿಂದ ವಿಮುಕ್ತನಾಗಿದ್ದಾನೆ. ಅವನು ಮೋಸಗಾರ ಅಥವಾ ಭ್ರಷ್ಟನಾಗಿರುವುದಿಲ್ಲ. (2 ಕೊರಿಂಥ 4:2)—5/1, ಪುಟ 6.
◻ “ಯೌವನದಲ್ಲಿ ನೊಗಹೊರುವದು ಮನುಷ್ಯನಿಗೆ ಲೇಸು” ಎಂದು ಯೆರೆಮೀಯನು ಏಕೆ ಹೇಳಿದನು? (ಪ್ರಲಾಪಗಳು 3:27)
ಯುವ ಪ್ರಾಯದಲ್ಲಿದ್ದಾಗಲೇ ಕಷ್ಟಗಳನ್ನು ನಿಭಾಯಿಸಲು ಕಲಿಯುವುದು, ಒಬ್ಬನನ್ನು ಪ್ರೌಢವಯಸ್ಸಿನ ಪಂಥಾಹ್ವಾನಗಳನ್ನು ಎದುರಿಸಲು ತಯಾರುಮಾಡುವುದರಲ್ಲಿ ಸಹಾಯಮಾಡುತ್ತದೆ. (2 ತಿಮೊಥೆಯ 3:12) ಒಪ್ಪಂದವು ತರಬಹುದಾದ ಯಾವುದೇ ತಾತ್ಕಾಲಿಕ ಬಿಡುಗಡೆಗಿಂತ, ನಂಬಿಗಸ್ತಿಕೆಯ ಪ್ರಯೋಜನಗಳು ಬಹು ಹೆಚ್ಚು ಪ್ರಧಾನವಾಗಿವೆ.—5/1, ಪುಟ 32.
◻ ರೂಪಾಂತರದ ದರ್ಶನದಲ್ಲಿ ಮೋಶೆ ಮತ್ತು ಎಲೀಯರ ತೋರಿಬರುವಿಕೆಯಿಂದ ಏನು ಮುನ್‌ಚಿತ್ರಿಸಲ್ಪಟ್ಟಿತು?
ರೂಪಾಂತರದ ಪೂರ್ವಾಪರ ಸನ್ನಿವೇಶದಲ್ಲಿ, ಮೋಶೆ ಮತ್ತು ಎಲೀಯರು, ಯೇಸುವಿನ ಅಭಿಷಿಕ್ತ ಸಹೋದರರ ತಕ್ಕ ಸಂಕೇತಗಳಾಗಿದ್ದರು. ಅವರು ಹಾಗೂ ಯೇಸು, “ವೈಭವದೊಡನೆ ಕಾಣಿಸಿಕೊಂಡ” ವಿಷಯವು, ಆ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ಸ್ವರ್ಗೀಯ ರಾಜ್ಯ ಏರ್ಪಾಡಿನಲ್ಲಿ ಯೇಸುವಿನೊಂದಿಗೆ ‘ಮಹಿಮೆಯಲ್ಲಿ ಪಾಲುಗಾರರಾಗು’ವರು ಎಂಬುದನ್ನು ಸಂಕೇತಿಸಿತು. (ಲೂಕ 9:30, 31; ರೋಮಾಪುರ 8:17; 2 ಥೆಸಲೊನೀಕ 1:10)—5/15, ಪುಟಗಳು 12, 14.
◻ ದೇವರ “ಪವಿತ್ರ ರಹಸ್ಯ”ವು ಏನಾಗಿದೆ? (1 ಕೊರಿಂಥ 2:7)
ದೇವರ “ಪವಿತ್ರ ರಹಸ್ಯ”ವು ಯೇಸು ಕ್ರಿಸ್ತನ ಮೇಲೆ ಕೇಂದ್ರೀಕರಿಸುತ್ತದೆ. (ಎಫೆಸ 1:9, 10) ಆದಾಗಲೂ, ಅದು ಯೇಸು ವಾಗ್ದಾನಿತ ಮೆಸ್ಸೀಯನಾಗಿದ್ದಾನೆಂಬ ಗುರುತಿಸುವಿಕೆ ಮಾತ್ರ ಆಗಿರುವುದಿಲ್ಲ. ಅದು ಒಂದು ಸ್ವರ್ಗೀಯ ಸರಕಾರವಾದ, ದೇವರ ಮೆಸ್ಸೀಯ ಸಂಬಂಧಿತ ರಾಜ್ಯವನ್ನು ಒಳಗೊಳ್ಳುತ್ತದೆ, ಮತ್ತು ಯೇಸು ದೇವರ ಉದ್ದೇಶದಲ್ಲಿ ವಹಿಸುವಂತೆ ನೇಮಿಸಲ್ಪಟ್ಟಿರುವ ಪಾತ್ರವನ್ನು ಒಳಗೂಡಿಸುತ್ತದೆ.—6/1, ಪುಟ 13.
◻ ಕ್ರೈಸ್ತನೊಬ್ಬನು ವೃದ್ಧಾಪ್ಯ ಅಥವಾ ಅಸ್ವಸ್ಥತೆಯನ್ನು ಹೇಗೆ ದೃಷ್ಟಿಸಬೇಕು?
ಅಂತಹ ಸಂಕಷ್ಟಗಳನ್ನು, ಯೆಹೋವನಿಗೆ ತಾನು ಸಲ್ಲಿಸುವ ಸೇವೆಯನ್ನು ಸೀಮಿತಗೊಳಿಸುವಂತಹ ವಿಷಯವಾಗಿ ದೃಷ್ಟಿಸುವ ಬದಲಿಗೆ, ಆತನ ಮೇಲೆ ತನ್ನ ಆತುಕೊಳ್ಳುವಿಕೆಯನ್ನು ಹೆಚ್ಚಿಸುವ ಒಂದು ಅವಕಾಶದೋಪಾದಿ ಅವನು ಅವುಗಳನ್ನು ದೃಷ್ಟಿಸಬೇಕು. ಒಬ್ಬ ಕ್ರೈಸ್ತನ ಮೌಲ್ಯವನ್ನು, ಅವನ ಚಟುವಟಿಕೆಯ ಮಟ್ಟದಿಂದಲ್ಲ, ಬದಲಾಗಿ ಅವನ ನಂಬಿಕೆ ಮತ್ತು ಪ್ರೀತಿಯ ಅಗಾಧತೆಯಿಂದಲೂ ಅಳೆಯಲಾಗುತ್ತದೆಂಬುದನ್ನು ಅವನು ನೆನಪಿನಲ್ಲಿಡತಕ್ಕದ್ದು. (ಮಾರ್ಕ 12:41-44)—6/1, ಪುಟ 26.
◻ ಬೈಬಲನ್ನು ಬರೆಯಲಿಕ್ಕಾಗಿ ಯೆಹೋವನು, ದೇವದೂತರ ಬದಲಿಗೆ ಮನುಷ್ಯರನ್ನು ಉಪಯೋಗಿಸಿದ್ದು ಆತನ ಮಹಾ ವಿವೇಕವನ್ನು ಹೇಗೆ ತೋರಿಸಿತು?
ಮಾನವ ಅಭಿರುಚಿಯು ಸಂಪೂರ್ಣವಾಗಿ ಇಲ್ಲದೇ ಹೋಗಿರುತ್ತಿದ್ದಲ್ಲಿ, ಬೈಬಲಿನ ಸಂದೇಶವನ್ನು ಗ್ರಹಿಸುವುದು ನಮಗೆ ಕಷ್ಟಕರವಾಗಿರುತ್ತಿದ್ದಿರಬಹುದು. ಅಲ್ಲದೆ, ಮಾನವ ಅಭಿರುಚಿಯು ಬೈಬಲಿಗೆ ಕೊಡುವಂತಹ ಆದರಣೆ, ವೈವಿಧ್ಯತೆ, ಹಾಗೂ ಆಕರ್ಷಣೆ ಅದಕ್ಕಿದೆ.—6/15, ಪುಟ 8.
◻ ಕುಟುಂಬ ಸಂತೋಷದ ರಹಸ್ಯವೇನು?
ರಹಸ್ಯವು ದೇವರ ವಾಕ್ಯವಾದ ಬೈಬಲಿನ ಪುಟಗಳಲ್ಲಿ ಮತ್ತು ಆತ್ಮಸಂಯಮ, ತಲೆತನದ ಅಂಗೀಕಾರ, ಒಳ್ಳೆಯ ಸಂವಾದ ಮತ್ತು ಪ್ರೀತಿಯಂತಹ, ಅದರ ಮೂಲತತ್ವಗಳ ಅನ್ವಯದಲ್ಲಿ ಅಡಕವಾಗಿದೆ.—6/15, ಪುಟ 23, 24.
◻ ಯೇಸುವಿನಿಂದ ನಡೆಸಲ್ಪಟ್ಟ ವಾಸಿಮಾಡುವಿಕೆಯು, ವಾಸಿಮಾಡುವಿಕೆಯ ಶಕ್ತಿಗಳನ್ನು ಹೊಂದಿರುತ್ತೇವೆಂದು ಇಂದು ಸಾಮಾನ್ಯವಾಗಿ ಪ್ರತಿಪಾದಿಸುವವರಿಂದ ಮಾಡಲ್ಪಡುವ ವಾಸಿಮಾಡುವಿಕೆಯಿಂದ ಹೇಗೆ ಬಹಳ ಭಿನ್ನವಾಗಿತ್ತು?
ಜನರ ಗುಂಪುಗಳಿಂದ ಬಲವಾದ ಭಾವಾತ್ಮಕ ಪ್ರದರ್ಶನವಾಗಲಿ ಹಾಗೂ ಯೇಸುವಿನ ವತಿಯಿಂದ ನಾಟಕೀಯ ಉನ್ಮಾದವಾಗಲಿ ಇರಲಿಲ್ಲ. ಇದಕ್ಕೆ ಕೂಡಿಸಿ, ಆ ದುರ್ಬಲರ ಕಾಣಿಕೆ ಸಾಕಷ್ಟು ಉದಾರವಾದದ್ದಾಗಿರಲಿಲ್ಲ ಇಲ್ಲವೇ ಅವರಲ್ಲಿ ನಂಬಿಕೆಯ ಕೊರತೆಯಿದೆಯೆಂಬ ನೆಪದಿಂದ, ಯೇಸು ಅವರನ್ನು ವಾಸಿಮಾಡಲು ಎಂದೂ ತಪ್ಪಲಿಲ್ಲ.—7/1, ಪುಟ 5.
◻ ಯೆಹೋವನು, ತನ್ನ ನಾಮ ಹಾಗೂ ರಾಜ್ಯದ ಸಂಬಂಧದಲ್ಲಿರುವ ತನ್ನ ದೈವಿಕ ಉದ್ದೇಶದಲ್ಲಿ ತನ್ನ ಜನರಿಗೆ ಒಂದು ಸ್ಥಾನವಿರುವಂತೆ ಹೇಗೆ ಸಹಾಯ ಮಾಡಿದ್ದಾನೆ?
ಪ್ರಥಮವಾಗಿ, ಯೆಹೋವನು ತನ್ನ ಜನರಿಗೆ ಸತ್ಯದ ಹೊಣೆಯನ್ನು ಒಪ್ಪಿಸಿದ್ದಾನೆ. ಎರಡನೆಯದಾಗಿ, ಆತನು ಅವರಿಗೆ ತನ್ನ ಪವಿತ್ರಾತ್ಮವನ್ನು ಕೊಟ್ಟನು. ಮತ್ತು ಮೂರನೆಯದಾಗಿ, ನಮ್ಮ ಲೋಕವ್ಯಾಪಕ ಸಹೋದರತ್ವ ಮತ್ತು ಆರಾಧನೆಗಾಗಿ ಯೆಹೋವನ ಸುಸಂಘಟಿತ ಏರ್ಪಾಡು ನಮಗಿದೆ.—7/1, ಪುಟ 19, 20.
◻ ಸದ್ಗುಣವೆಂದರೇನು?
ಸದ್ಗುಣವೆಂದರೆ ನೈತಿಕ ಹಿರಿಮೆ, ಒಳ್ಳೆಯತನ, ಸ್ವದರ್ತನೆ ಮತ್ತು ಆಲೋಚನೆ. ಅದು ನಿಷ್ಕ್ರಿಯ ಗುಣವಾಗಿರದೆ ಕ್ರಿಯಾಶೀಲ, ಸಕರಾತ್ಮಕ ಗುಣವಾಗಿದೆ. ಸದ್ಗುಣದಲ್ಲಿ ಪಾಪವನ್ನು ವರ್ಜಿಸುವುದಕ್ಕಿಂತ ಹೆಚ್ಚಿನದ್ದು ಸೇರಿದೆ; ಒಳ್ಳೆಯದನ್ನು ಬೆನ್ನಟ್ಟುವುದೆಂದು ಅದರ ಅರ್ಥ. (1 ತಿಮೊಥೆಯ 6:11)—7/15, ಪುಟ 14.
◻ ಹೆತ್ತವರು ತಮ್ಮ ಮಕ್ಕಳಿಗೆ ದಾಟಿಸಬಲ್ಲ ಅತ್ಯಮೂಲ್ಯವಾದ ಬಾಧ್ಯತೆಯೇನು?
ಅತ್ಯಮೂಲ್ಯವಾದ ಬಾಧ್ಯತೆಯು, ಇತರರಿಗೆ ಪ್ರೀತಿ ತೋರಿಸುವ ತಮ್ಮ ಸ್ವಂತ ಮಾದರಿಯೇ. ಗಮನಾರ್ಹವಾದ ರೀತಿಯಲ್ಲಿ, ತಮ್ಮ ಹೆತ್ತವರು ಮಾಡುವಂತಹ ಪ್ರತಿಯೊಂದು ಕಾರ್ಯದಲ್ಲಿ, ದೇವರ ಕಡೆಗೆ ನಿಜ ಪ್ರೀತಿಯನ್ನು ವ್ಯಕ್ತಪಡಿಸಿ ಅದನ್ನು ತೋರಿಸುವುದನ್ನು ಮಕ್ಕಳು ನೋಡಿ, ಕೇಳುವುದು ಅಗತ್ಯ.—7/15, ಪುಟ 21.
◻ ಒಂದು ಪರಿಣಾಮಕಾರಿಯಾದ ಕುಟುಂಬ ಅಧ್ಯಯನಕ್ಕಾಗಿರುವ ಕೆಲವು ಆವಶ್ಯಕ ವಿಷಯಗಳು ಯಾವುವು?
ಕುಟುಂಬ ಅಧ್ಯಯನವೊಂದು ನಿಯತಕ್ರಮದ್ದಾಗಿರಬೇಕು. ನೀವು ಅಧ್ಯಯನಕ್ಕಾಗಿ ಸಮಯವನ್ನು ‘ಖರೀದಿಸ’ (NW)ಬೇಕು. (ಎಫೆಸ 5:15-17) ಬೈಬಲು ಜೀವಂತವಾಗುವಂತೆ ಮಾಡುವ ಮೂಲಕ ಅಧ್ಯಯನ ಅವಧಿಗಳನ್ನು ಮಕ್ಕಳಿಗೆ ಸಜೀವವಾಗಿರುವಂತೆ ಮಾಡಿರಿ. ಮಕ್ಕಳು ಅದರಲ್ಲಿ ಆನಂದಿಸಲಿಕ್ಕೋಸ್ಕರ, ಅವರಿಗೆ ಅದರಲ್ಲಿ ಒಳಗೂಡಿರುವ ಅನಿಸಿಕೆಯಾಗಬೇಕು.—8/1, ಪುಟ 26, 28.