ಭವಿಷ್ಯತ್ತನ್ನು ಕನಸುಗಳು ಮುಂತಿಳಿಸಬಲ್ಲವೊ?
ಪುರಾತನ ಸಮಯಗಳಿಂದಲೂ, ಮಾನವಕುಲಕ್ಕೆ ಕನಸುಗಳಲ್ಲಿ ತೀವ್ರವಾದ ಅಭಿರುಚಿಯಿತ್ತು. ಐಗುಪ್ತ್ಯರು ಕನಸಿನ ಅರ್ಥವಿವರಣೆಗಾಗಿ ಪರಿಷ್ಕಾರವಾದ ಪುಸ್ತಕಗಳನ್ನು ರಚಿಸಿದರು, ಮತ್ತು ಬಾಬೆಲಿನವರಿಗೆ ಅವರ ಕನಸಿನ ಅರ್ಥವಿವರಣೆಗಾರರಿದ್ದರು. ಗ್ರೀಕರ ನಡುವೆ, ಅಸ್ವಸ್ಥ ಜನರು ತಮ್ಮ ಕನಸುಗಳಲ್ಲಿ ಆರೋಗ್ಯ ಉಪದೇಶಗಳನ್ನು ಪಡೆದುಕೊಳ್ಳುವಂತೆ, ಅವರನ್ನು ಅಸ್ಕ್ಲೀಪಿಅಸ್ನ ದೇವಾಲಯಗಳಲ್ಲಿ ಮಲಗಿಸುವುದು ಸಂಪ್ರದಾಯವಾಗಿತ್ತು. ನಮ್ಮ ಸಾಮಾನ್ಯ ಶಕದ ಎರಡನೆಯ ಶತಮಾನದಲ್ಲಿ, ಆರ್ಟಮಡೋರಸ್ನು ಒಂದು ಪುಸ್ತಕವನ್ನು ಪ್ರಕಟಿಸಿ, ಅದರಲ್ಲಿ ಅವನು ಕನಸಿನ ಸಂಕೇತಗಳ ಅರ್ಥವಿವರಣೆಗಳನ್ನು ಕೊಟ್ಟನು. ಅಂದಿನಿಂದ ಪ್ರಕಟಿಸಲ್ಪಟ್ಟ ತದ್ರೀತಿಯ ಅನೇಕ ಪುಸ್ತಕಗಳು, ಅವನ ಪುಸ್ತಕದ ಮೇಲಾಧಾರಿತವಾಗಿವೆ. ಈ ದಿನದ ತನಕವೂ, ಕನಸುಗಳ ಅರ್ಥವಿವರಣೆಯ ಪ್ರಯತ್ನಗಳು ಮಾಡಲ್ಪಟ್ಟಿವೆ, ಆದರೂ ಅವು ವಾಸ್ತವವಾಗಿ ಭವಿಷ್ಯತ್ತಿನ ಘಟನೆಗಳೊಳಗೆ ಒಳನೋಟವನ್ನು ಕೊಡುತ್ತವೊ?
ಅವುಗಳು ಭವಿಷ್ಯತ್ತಿಗೆ ಸಂಬಂಧಿಸಿದ ಅರ್ಥಗರ್ಭಿತತೆಯನ್ನು ಪಡೆದಿರಲಿಕ್ಕಾಗಿ, ಅವು ಒಂದು ಪರಮ ಶಕ್ತಿಯಿಂದ ಪ್ರಭಾವಿಸಲ್ಪಟ್ಟಿದ್ದಿರಲೇಬೇಕು. ಅದೇ ಶಕ್ತಿಯನ್ನು ದೇವರು ಸರಬರಾಯಿಮಾಡಿದ ಅನೇಕ ಸಂದರ್ಭಗಳನ್ನು ನಾವು ಬೈಬಲಿನಲ್ಲಿ ಕಂಡುಕೊಳ್ಳುತ್ತೇವೆ. ಆತನು ತನ್ನ ಸೇವಕರಿಗೆ ಹಾಗೂ ತನ್ನನ್ನು ಆರಾಧಿಸದ ಕೆಲವರಿಗೆ ಪ್ರವಾದನಾತ್ಮಕವಾದ ಕನಸುಗಳನ್ನು ಕೊಟ್ಟನು. ವಾಸ್ತವವಾಗಿ, ಯೋಬ 33:14-16 ಹೀಗೆ ಹೇಳುತ್ತದೆ: “ದೇವರು ಮಾತಾಡುವ ರೀತಿ . . . ಮನುಷ್ಯರಿಗೆ ಗಾಢನಿದ್ರೆಯುಂಟಾದಾಗಲೂ ಹಾಸಿಗೆಯ ಮೇಲೆ ಜಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ ಅವರ ಕಿವಿಗಳನ್ನು ತೆರೆ”ಯುತ್ತಾನೆ.
ಸಾಮಾನ್ಯ ಶಕಕ್ಕೆ 1,700ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಜೀವಿಸಿದ್ದ ಯೋಸೇಫನ ದಿನಗಳಲ್ಲಿ, ಐಗುಪ್ತ್ಯನಾದ ಫರೋಹನ ವಿದ್ಯಮಾನದಲ್ಲಿ ದೇವರು ಇದನ್ನು ಮಾಡಿದನು. ಫರೋಹನ ಕನಸು, ಆದಿಕಾಂಡ 41:1-7, ಮತ್ತು 25ರಿಂದ 32ನೆಯ ವಚನಗಳಲ್ಲಿ ಕಂಡುಬರುತ್ತದೆ; ‘ಐಗುಪ್ತ ದೇಶದಲ್ಲೆಲ್ಲಾ ಬಹಳ ಸುಭಿಕ್ಷವಾದ’ ಏಳು ವರ್ಷಗಳ ತರುವಾಯ, ಬರಗಾಲದ ಏಳು ವರ್ಷಗಳು ಬರುವವು ಎಂದು ಅದು ಮುಂತಿಳಿಸುತ್ತದೆಂಬುದಾಗಿ ಯೋಸೇಫನು ಅದರ ಅರ್ಥವಿವರಿಸುತ್ತಾನೆ. ಯೋಸೇಫನು ಫರೋಹನಿಗೆ ವಿವರಿಸಿದ್ದು: “ಸತ್ಯ ದೇವರು ತಾನು ಏನು ಮಾಡುತ್ತಿದ್ದಾನೋ ಅದನ್ನು ಫರೋಹನು ನೋಡುವಂತೆ ಮಾಡಿದ್ದಾನೆ.” (ಆದಿಕಾಂಡ 41:28, NW) ಆ ಕನಸು, ವಾಸ್ತವವಾಗಿ ಏನು ಸಂಭವಿಸಿತೊ ಅದರ ಪ್ರವಾದನಾತ್ಮಕ ವಿಷಯವಾಗಿತ್ತು.
ಬಾಬೆಲಿನವರ ಪ್ರಧಾನ ಅರಸನೊಬ್ಬನಿಗೆ ತದ್ರೀತಿಯ ಒಂದು ಅನುಭವವಾಯಿತು. ನೆಬೂಕದ್ನೆಚ್ಚರನಿಗೆ ಬಹಳವಾಗಿ ಕ್ಷೋಭೆಯನ್ನುಂಟುಮಾಡಿದ ಒಂದು ಕನಸು ಬಿದ್ದಿತ್ತು, ಆದರೆ ಅವನಿಗೆ ಅದನ್ನು ಜ್ಞಾಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದುದರಿಂದ ಕನಸನ್ನೂ ಅದರ ಅರ್ಥವಿವರಣೆಯನ್ನೂ ತನಗೆ ತಿಳಿಯಪಡಿಸುವಂತೆ ಅವನು ತನ್ನ ಮಂತ್ರವಾದಿಗಳಿಗೆ ಕರೆನೀಡಿದನು. ಇದು ಅವರಿಂದ ಪೂರೈಸಲು ಅಸಾಧ್ಯವಾದ ಒಂದು ಬಿನ್ನಹವಾಗಿತ್ತು.—ದಾನಿಯೇಲ 2:1-11.
ಆ ಅರಸನಿಗೆ ಕನಸು ಬೀಳುವಂತೆ ದೇವರು ಮಾಡಿದುದರಿಂದ, ಕನಸನ್ನೂ ಅದರ ಅರ್ಥವಿವರಣೆಯನ್ನೂ ಪ್ರಕಟಪಡಿಸುವಂತೆ ಆತನು ಪ್ರವಾದಿಯಾದ ದಾನಿಯೇಲನನ್ನು ಶಕ್ತನನ್ನಾಗಿ ಮಾಡಿದನು. ದಾನಿಯೇಲ 2:19 ಹೇಳುವುದು: “ಆಗ ಆ ರಹಸ್ಯವು ರಾತ್ರಿಯ ಸ್ವಪ್ನದಲ್ಲಿ ದಾನಿಯೇಲನಿಗೆ ವ್ಯಕ್ತವಾಯಿತು.” ಈ ಕನಸಿಗಾಗಿ ದಾನಿಯೇಲನು ದೇವರಿಗೆ ಕೀರ್ತಿ ಸಲ್ಲಿಸಿದನು: “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು; ಆದರೆ ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ; ಉತ್ತರ ಕಾಲದಲ್ಲಿ ನಡೆಯತಕ್ಕದ್ದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ.”—ದಾನಿಯೇಲ 2:27, 28.
ಕೆಲವೊಮ್ಮೆ ದೇವರು ತನ್ನ ಜನರಿಗೆ ಕನಸುಗಳ ಮೂಲಕವಾಗಿ ಉಪದೇಶಗಳನ್ನು ನೀಡಿದನು, ಮತ್ತು ಇತರ ಸಮಯಗಳಲ್ಲಿ ಆತನು ದೈವಿಕ ಅನುಗ್ರಹದ ಆಶ್ವಾಸನೆಯನ್ನು ಕೊಟ್ಟನು ಅಥವಾ ತಾನು ಅವರಿಗೆ ಹೇಗೆ ಸಹಾಯವನ್ನು ನೀಡುತ್ತಿದ್ದೆನೆಂಬುದನ್ನು ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯ ಮಾಡಿದನು. ಯಾಕೋಬನ ವಿದ್ಯಮಾನದಲ್ಲಿ, ದೇವರು ತನ್ನ ಒಪ್ಪಿಗೆಯನ್ನು ಒಂದು ಕನಸಿನ ಮೂಲಕ ಪ್ರಕಟಪಡಿಸಿದನು.—ಆದಿಕಾಂಡ 48:3, 4.
ಮರಿಯಳು ಗರ್ಭಿಣಿಯಾಗಿದ್ದಳೆಂದು ಯೇಸುವಿನ ದತ್ತುತಂದೆಯಾದ ಯೋಸೇಫನು ಕಂಡುಕೊಂಡಾಗ, ಅವನು ಅವಳಿಗೆ ವಿವಾಹ ವಿಚ್ಛೇದ ನೀಡಲು ನಿರ್ಧರಿಸಿದನು. ಆಗ ಅವನು ಹಾಗೆ ಮಾಡದಿರುವಂತೆ ಒಂದು ಕನಸಿನಲ್ಲಿ ಉಪದೇಶಗಳನ್ನು ಪಡೆದುಕೊಂಡನು. ಮತ್ತಾಯ 1:20 ಹೇಳುವುದು: “ಅವನು ಇದನ್ನು ಆಲೋಚಿಸುತ್ತಿರುವಾಗ ಕರ್ತನ [“ಯೆಹೋವನ,” NW] ದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು—ಎಲೈ ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು.” ತದನಂತರ ಒಂದು ಕನಸಿನಲ್ಲಿ ಅವನು ಒಂದು ಎಚ್ಚರಿಕೆಯನ್ನು ಪಡೆದುಕೊಂಡನು: “ಯೆಹೋವನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, ಹೀಗೆ ಹೇಳಿದನು: ‘ನೀನು ಎದ್ದು ಈ ಕೂಸನ್ನೂ ಇದರ ತಾಯಿಯನ್ನೂ ಕರೆದುಕೊಂಡು ಐಗುಪ್ತದೇಶಕ್ಕೆ ಓಡಿಹೋಗು.’”—ಮತ್ತಾಯ 2:13, NW.
ದೇವರಿಂದ ಬಂದಿರದ ಕನಸುಗಳು
ದೇವರ ಜನರಾಗಿರದಿದ್ದವರ ಮಧ್ಯೆ ಕನಸಿನ ಅರ್ಥವಿವರಣೆಯು ಸಾಮಾನ್ಯವಾಗಿತ್ತೆಂಬ ವಾಸ್ತವಾಂಶವು, ಸರ್ವಸಾಮಾನ್ಯವಾಗಿ ಕನಸುಗಳನ್ನು ಭವಿಷ್ಯತ್ತಿನ ವಿಶ್ವಾಸಾರ್ಹ ಪ್ರಕಟಪಡಿಸುವಿಕೆಗಳಾಗಿ ಪರಿಗಣಿಸಸಾಧ್ಯವಿಲ್ಲವೆಂಬುದನ್ನು ಸೂಚಿಸುತ್ತವೆ. ದೇವರ ಪ್ರವಾದಿಯಾದ ಯೆರೆಮೀಯನ ದಿನಗಳಲ್ಲಿ, ಸುಳ್ಳು ಪ್ರವಾದಿಗಳು ಹೀಗೆ ಹೇಳುತ್ತಿದ್ದರು: “ನನಗೆ ಕನಸು ಬಿತ್ತು, ಕನಸು ಬಿತ್ತು.” (ಯೆರೆಮೀಯ 23:25) ದೇವರು ತಮ್ಮ ಮುಖಾಂತರ ಮಾತಾಡುತ್ತಿದ್ದನೆಂದು ಜನರು ಆಲೋಚಿಸುವಂತೆ ಅವರನ್ನು ತಪ್ಪಾಗಿ ಮುನ್ನಡಿಸುವುದು ಅವರ ಉದ್ದೇಶಗಳಾಗಿದ್ದವು. ಈ ಕನಸುಗಾರರ ಕುರಿತಾಗಿ ಯೆರೆಮೀಯನು ಹೀಗೆ ಹೇಳುವಂತೆ ಪ್ರೇರಿಸಲ್ಪಟ್ಟನು: “ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ—ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ ಶಕುನದವರಿಂದಲೂ [“ಕಣಿ ಹೇಳುವ ರೂಢಿಯುಳ್ಳವರಿಂದಲೂ,” NW] ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡದಿರಿ; ಅವರು ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಸಾರುತ್ತಾರೆ; . . . ಇದು ಯೆಹೋವನ ನುಡಿ.”—ಯೆರೆಮೀಯ 29:8, 9.
ಈ ಸುಳ್ಳು ಪ್ರವಾದಿಗಳು “ಕಣಿ ಹೇಳುವ ರೂಢಿಯುಳ್ಳ”ವರಾಗಿದ್ದದರಿಂದ, ಜನರನ್ನು ವಂಚಿಸುವ ಉದ್ದೇಶದಿಂದ, ಅವರ ಕನಸುಗಳು ದುಷ್ಟಾತ್ಮ ಸೈನ್ಯಗಳಿಂದ ಪ್ರಭಾವಿಸಲ್ಪಟ್ಟಿದ್ದಿರಸಾಧ್ಯವಿದೆ. ಜೆಕರ್ಯ 10:2ರಲ್ಲಿ ಹೇಳಲ್ಪಟ್ಟಿರುವ ಸಂಗತಿಯಲ್ಲಿಯೂ ಇದೇ ವಿಷಯವು ಸೂಚಿಸಲ್ಪಟ್ಟಿದೆ: “ವಿಗ್ರಹಗಳು ನುಡಿಯುವದು ಜೊಳ್ಳು; ಕಣಿಯವರು [“ಕಣಿ ಹೇಳುವ ರೂಢಿಯುಳ್ಳವರು,” NW] ಕಾಣುವದು ಸುಳ್ಳು, ತಿಳಿಸುವ ಕನಸುಗಳು ಕಲ್ಪಿತ, ಹೇಳುವ ಸಮಾಧಾನವು ವ್ಯರ್ಥ.”
ಯೆರೆಮೀಯ ಮತ್ತು ಜೆಕರ್ಯರ ದಿನಗಳಲ್ಲಿನ ಸುಳ್ಳು ಪ್ರವಾದಿಗಳು ಮಾಡಿದಂತೆಯೇ, ಪ್ರಧಾನ ವಂಚಕನಾಗಿರುವ ಪಿಶಾಚನು, ದರ್ಶನಗಳು ಹಾಗೂ ಕನಸುಗಳ ಮೂಲಕವಾಗಿ ದೇವರು ತಮ್ಮ ಬಳಿ ಮಾತಾಡಿದ್ದಾನೆಂದು ಸುಳ್ಳಾಗಿ ಪ್ರತಿಪಾದಿಸುವಂತೆ, ಸಾವಿರಾರು ವರ್ಷಗಳಿಂದ ಧಾರ್ಮಿಕ ಮುಖಂಡರನ್ನು ಉಪಯೋಗಿಸಿದ್ದಾನೆ. ಅಂತಹವರ ಕುರಿತಾಗಿ, ಪ್ರೇರಿತ ಬೈಬಲ್ ಬರಹಗಾರನಾದ ಯೂದನು ಪ್ರಥಮ ಶತಮಾನದ ಕ್ರೈಸ್ತರಿಗೆ ಹೀಗೆ ಬರೆದನು: “ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅರಿಯದವರೂ ಆಗಿರುವ ಕೆಲವು ಜನರು ಸಭೆಯಲ್ಲಿ ಕಳ್ಳತನದಿಂದ ಹೊಕ್ಕಿದ್ದಾರೆ.” ಈ ಜನರು “ಕನಸುಗಳಲ್ಲಿ ಲೋಲುಪರಾದ”ವರೋ (NW) ಎನ್ನುವಂತಿದ್ದರೆಂದು ಅವನು ಹೇಳಿದನು.—ಯೂದ 4, 8.
ಪ್ರತಿಪಾದನೆಗಳನ್ನು ಪರೀಕ್ಷಿಸಿರಿ
ದೇವರು ಒಂದು ಕನಸಿನಲ್ಲಿ ತನ್ನೊಂದಿಗೆ ಮಾತಾಡಿದನು ಅಥವಾ ಭವಿಷ್ಯತ್ತಿನ ಘಟನೆಗಳ ಕುರಿತಾಗಿರುವ ತನ್ನ ಕನುಸುಗಳು ನಿಜವಾಗಿ ಪರಿಣಮಿಸಿದವು ಎಂಬುದಾಗಿ ವ್ಯಕ್ತಿಯೊಬ್ಬನು ಪ್ರತಿಪಾದಿಸಬಹುದು. ಆದರೂ ಅವನನ್ನು ನಂಬುವುದಕ್ಕೆ ಮತ್ತು ಕರುಡಾಗಿ ಅನುಸರಿಸುವುದಕ್ಕೆ ಅದು ತೃಪ್ತಿದಾಯಕ ಕಾರಣವಾಗಿರುವುದಿಲ್ಲ. ಧರ್ಮೋಪದೇಶಕಾಂಡ 13:1-3, 5ರಲ್ಲಿ ಕಂಡುಬರುವ, ಇಸ್ರಾಯೇಲ್ಯರಿಗೆ ಬರೆಯಲ್ಪಟ್ಟ ಉಪದೇಶಗಳನ್ನು ಗಮನಿಸಿರಿ: “ಯಾವ ಪ್ರವಾದಿಯಾಗಲಿ ಕನಸುಕಂಡವನಾಗಲಿ ನಿಮ್ಮ ಮಧ್ಯದಲ್ಲಿ ಬಂದು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚನೆಮಾಡಿ—ಈ ದೇವತೆಗಳನ್ನು ಅವಲಂಬಿಸಿ ಸೇವಿಸೋಣ ಎಂದು ಬೋಧಿಸುತ್ತಾ ಆ ಬೋಧನೆಯನ್ನು ಸ್ಥಾಪಿಸುವದಕ್ಕೆ ಒಂದು ಅದ್ಭುತವನ್ನಾಗಲಿ ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಹೇಳಲು ಅವನು ಹೇಳಿದಂತೆಯೇ ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. . . . ಆ ಪ್ರವಾದಿಗೆ ಅಥವಾ ಆ ಕನಸುಕಂಡವನಿಗೆ ಮರಣಶಿಕ್ಷೆಯಾಗಬೇಕು.” ತನ್ನ ಜನರ ನಿಷ್ಠೆಯ ಕುರಿತಾದ ಒಂದು ಪರೀಕ್ಷೆಯೋಪಾದಿ, ಸುಳ್ಳಾಗಿ ಮಾತಾಡುವಂತೆ ದೇವರು ಅಂತಹವರನ್ನು ಅನುಮತಿಸಿದನು.
ದಿವ್ಯಶಕ್ತಿಯುಳ್ಳ ಕನಸುಗಾರರ ಪ್ರತಿಪಾದನೆಗಳನ್ನು ಕುರುಡಾಗಿ ನಂಬುವುದಕ್ಕೆ ಬದಲಾಗಿ, “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ತ್ತಿರುವ ಪ್ರಧಾನ ವಂಚಕನಿಂದ ಮರುಳುಗೊಳಿಸಲ್ಪಡುವುದನ್ನು ತೊರೆಯಲಿಕ್ಕಾಗಿ, ಅವರ ಪ್ರತಿಪಾದನೆಗಳನ್ನು ಪರೀಕ್ಷಿಸುವುದು ನಮಗಾಗಿರುವ ವಿವೇಕಯುತವಾದ ಮಾರ್ಗವಾಗಿದೆ. (ಪ್ರಕಟನೆ 12:9) ಆದರೆ ಅವುಗಳನ್ನು ವಿಶ್ವಾಸಾರ್ಹವಾಗಿ ಹೇಗೆ ಪರೀಕ್ಷಿಸಸಾಧ್ಯವಿದೆ?
ದೇವರ ಲಿಖಿತ ವಾಕ್ಯವು, ಸತ್ಯಕ್ಕಾಗಿ ನಮಗೆ ದೈವಿಕವಾಗಿ ಕೊಡಲ್ಪಟ್ಟ ಮಾರ್ಗದರ್ಶಕವಾಗಿದೆ. ಅದರ ಕುರಿತಾಗಿ ಯೇಸು ಕ್ರಿಸ್ತನು ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ಆದುದರಿಂದ 1 ಯೋಹಾನ 4:1ರಲ್ಲಿ ನಮಗೆ ಹೀಗೆ ಬುದ್ಧಿಹೇಳಲ್ಪಟ್ಟಿದೆ: “ಪ್ರಿಯರೇ, ಅನೇಕ ಮಂದಿ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವದರಿಂದ ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.” ಬೈಬಲಿನೊಂದಿಗೆ ಜಾಗರೂಕತೆಯಿಂದ ಹೋಲಿಸಲ್ಪಡುವಾಗ, ಅವರ ಪ್ರತಿಪಾದನೆಗಳು, ತತ್ವಜ್ಞಾನಗಳು, ಹಾಗೂ ಕ್ರಿಯೆಗಳು ಅದರೊಂದಿಗೆ ಸಂಘರ್ಷಿಸುವವು. ಯಾವುದು ಸತ್ಯವಾಗಿದೆ ಎಂಬುದಕ್ಕೆ ದೇವರ ವಾಕ್ಯವು ಅಧಿಕಾರಿಯಾಗಿದೆ.
ವಿಶೇಷವಾದ ಜ್ಞಾನವಿದೆಯೆಂದು ಪ್ರತಿಪಾದಿಸುವ ಕನಸುಗಾರನು, ವಾಸ್ತವವಾಗಿ ಕಣಿ ಹೇಳುವಿಕೆಯನ್ನು ಅಥವಾ ಇತರ ಪ್ರೇತವ್ಯವಹಾರ ಸಂಬಂಧಿತ ಪದ್ಧತಿಗಳನ್ನು ಉಪಯೋಗಿಸುತ್ತಿದ್ದಾನೊ? ಹಾಗಿರುವಲ್ಲಿ, ಅವನು ದೇವರ ವಾಕ್ಯದಿಂದ ಖಂಡಿಸಲ್ಪಡುತ್ತಾನೆ. “ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.”—ಧರ್ಮೋಪದೇಶಕಾಂಡ 18:10-12.
ಸಾಯದಿರುವಂತಹ ಒಂದು ಪ್ರಾಣವು ತನ್ನಲ್ಲಿದೆಯೆಂದು ಕನಸುಗಾರನು ಪ್ರತಿಪಾದಿಸುವಲ್ಲಿ, ಸರಳವಾಗಿ ಈ ಕೆಳಗಿನಂತೆ ಹೇಳುವ ದೇವರ ವಾಕ್ಯವನ್ನು ಅವನು ಅಲ್ಲಗಳೆಯುತ್ತಿದ್ದಾನೆ: “ಪಾಪಮಾಡುತ್ತಿರುವ ಪ್ರಾಣವು—ಅದು ತಾನೇ ಸಾಯುವುದು.” (ಯೆಹೆಜ್ಕೇಲ 18:4, NW) ಅವನು ತನ್ನನ್ನೇ ಹೆಚ್ಚಿಸಿಕೊಂಡು, ವೈಯಕ್ತಿಕ ಹಿಂಬಾಲಕರನ್ನು ಸೆಳೆಯುತ್ತಿದ್ದಾನೊ? ಮತ್ತಾಯ 23:12 ಎಚ್ಚರಿಸುವುದು: “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು.” ಮತ್ತು ಅಪೊಸ್ತಲ ಕೃತ್ಯಗಳು 20:30 ಕ್ರೈಸ್ತರಿಗೆ ಎಚ್ಚರಿಕೆ ಕೊಡುವುದು: “ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.”
ಕನಸುಗಾರನು ಹಿಂಸಾತ್ಮಕವಾದ ಕೃತ್ಯಗಳನ್ನು ಸಮರ್ಥಿಸುತ್ತಾನೊ? ಯಾಕೋಬ 3:17, 18 ಅವನನ್ನು ಹೀಗೆ ಖಂಡಿಸುತ್ತದೆ: “ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ ಕಪಟವೂ ಇಲ್ಲ. ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.” ಅವನು ಲೋಕದಲ್ಲಿನ ರಾಜಕೀಯ ಅಧಿಕಾರ ಅಥವಾ ಪ್ರಭಾವವನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಯತ್ನಿಸುತ್ತಾನೊ? ದೇವರ ವಾಕ್ಯವು ಅವನನ್ನು ಹೀಗೆ ಹೇಳುವ ಮೂಲಕ ಪ್ರಬಲವಾಗಿ ಖಂಡಿಸುತ್ತದೆ: “ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” ಹೀಗೆ ಬೈಬಲು ಸುಳ್ಳಾಗಿರುವ ವಿಷಯವನ್ನು ಬಯಲುಮಾಡುತ್ತದೆ.—ಯಾಕೋಬ 4:4.
ಒಬ್ಬ ವ್ಯಕ್ತಿಯು, ಕುಟುಂಬ ಸದಸ್ಯನೊಬ್ಬನ ಅಥವಾ ಸ್ನೇಹಿತನೊಬ್ಬನ ಸಾವಿನ ಕುರಿತಾಗಿರುವ ಕನಸನ್ನು ಕಂಡಿರುವಲ್ಲಿ, ಇದು ಈ ವ್ಯಕ್ತಿಯ ಕುರಿತಾಗಿ ಅವನು ಹಿತಾಸಕ್ತಿಯುಳ್ಳವನಾಗಿದ್ದ ಕಾರಣದಿಂದಾಗಿರಬಹುದು. ಆ ಕನಸಿನ ರಾತ್ರಿಯಂದೇ ಆ ವ್ಯಕ್ತಿಯು ಸತ್ತಿದ್ದಿರಬಹುದಾಗಿರುವುದು, ಆ ಕನಸು ಪ್ರವಾದನಾತ್ಮಕವಾಗಿತ್ತೆಂದು ತಾನೇ ರುಜುಪಡಿಸುವುದಿಲ್ಲ. ಏಕೆಂದರೆ ಒಂದು ನೈಜತೆಯಾಗಿ ಪರಿಣಮಿಸುವಂತೆ ಗೋಚರಿಸುವ ಈ ರೀತಿಯ ಪ್ರತಿಯೊಂದು ಕನಸಿಗೆ, ನೈಜತೆಯಾಗಿ ಪರಿಣಮಿಸದಿರುವ ನೂರಾರು ಕನಸುಗಳಿವೆ.
ಗತಕಾಲದಲ್ಲಿ, ಪ್ರವಾದನಾತ್ಮಕವಾದ ಘಟನೆಗಳನ್ನು ಪ್ರಕಟಪಡಿಸಲಿಕ್ಕಾಗಿಯೂ ತನ್ನ ಲಿಖಿತ ವಾಕ್ಯವು ಇನ್ನೂ ಪ್ರಕಾಶಿಸಲ್ಪಡುತ್ತಿದ್ದ ಸಮಯದಲ್ಲಿ ಉಪದೇಶಗಳನ್ನು ಕೊಡಲಿಕ್ಕಾಗಿಯೂ ದೇವರು ಕನಸುಗಳನ್ನು ಉಪಯೋಗಿಸಿದನಾದರೂ, ಇಂದು ಹಾಗೆ ಮಾಡುವುದರ ಅಗತ್ಯ ಆತನಿಗಿಲ್ಲ. ಆ ಲಿಖಿತ ವಾಕ್ಯವು, ಈ ಸಮಯದಲ್ಲಿ ಮಾನವಕುಲಕ್ಕೆ ಆವಶ್ಯಕವಾಗಿರುವ, ದೇವರಿಂದ ಕೊಡಲ್ಪಟ್ಟ ಎಲ್ಲಾ ಉಪದೇಶಗಳನ್ನು ಒಳಗೊಂಡಿದೆ, ಮತ್ತು ಅದರ ಪ್ರವಾದನೆಗಳು ಭವಿಷ್ಯತ್ತಿನ ಸಾವಿರ ವರ್ಷಗಳಿಗಿಂತಲೂ ಮುಂದಿರುವ ಘಟನೆಗಳಿಗೆ ಸಂಬಂಧಿಸಿದವುಗಳಾಗಿವೆ. (2 ತಿಮೊಥೆಯ 3:16, 17) ಆದುದರಿಂದ, ನಮ್ಮ ಕನಸುಗಳು ಭವಿಷ್ಯತ್ತಿನ ಘಟನೆಗಳ ಕುರಿತಾಗಿ ದೇವರಿಂದ ನಮಗೆ ಕೊಡಲ್ಪಟ್ಟಿರುವ ಸೂಚಕಗಳಾಗಿಲ್ಲ, ಬದಲಾಗಿ ನಮ್ಮ ಮಾನಸಿಕ ಕ್ಷೇಮವನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ಮಿದುಳಿನ ಅತ್ಯಗತ್ಯವಾದ ಕಾರ್ಯಗಳಾಗಿವೆಯೆಂದು ನಾವು ದೃಢಭರವಸೆಯಿಂದಿರಸಾಧ್ಯವಿದೆ.
[ಪುಟ 7 ರಲ್ಲಿರುವ ಚಿತ್ರ]
ಫರೋಹನ ಕನಸು, ಏನು ಬರಲಿಕ್ಕಿತ್ತೋ ಅದನ್ನು ತೋರಿಸಿದಂತೆಯೇ, ದೇವರ ವಾಕ್ಯವು ನಮ್ಮ ಭವಿಷ್ಯತ್ತಿನ ಮೇಲೆ ಬೆಳಕುಬೀರುತ್ತದೆ