ದೇವರ ರಾಜ್ಯ—ಅದರ ಅರ್ಥವನ್ನು ನೀವು ಗ್ರಹಿಸುತ್ತಿದ್ದೀರೊ?
“ಒಳ್ಳೆಯ ಮಣ್ಣಿನ ಮೇಲೆ ಬಿತ್ತಲ್ಪಟ್ಟವನ ವಿಷಯದಲ್ಲಾದರೊ, ವಾಕ್ಯವನ್ನು ಕೇಳುತ್ತಾ ಅದರ ಅರ್ಥವನ್ನು ಗ್ರಹಿಸುತ್ತಿರುವವನು ಇವನೇ.”—ಮತ್ತಾಯ 13:23, NW.
1. ‘ಪರಲೋಕರಾಜ್ಯದ’ ಸಂಬಂಧದಲ್ಲಿ, ಕೆಲವು ಸಾಮಾನ್ಯ ನಂಬಿಕೆಗಳಾವುವು?
ನೀವು, ದೇವರ ರಾಜ್ಯವು ಏನಾಗಿದೆ ಎಂಬುದರ ‘ಅರ್ಥವನ್ನು ಗ್ರಹಿಸಿದ್ದೀರೊ’? ಶತಮಾನಗಳ ಉದ್ದಕ್ಕೂ ‘ಪರಲೋಕರಾಜ್ಯ’ದ ಕಲ್ಪನೆಗಳು ತುಂಬ ಭಿನ್ನವಾಗಿವೆ. ರಾಜ್ಯವು, ಮತಾಂತರದ ಸಮಯದಲ್ಲಿ ಒಬ್ಬ ವ್ಯಕ್ತಿಯ ಹೃದಯದೊಳಗೆ ದೇವರು ಹಾಕುವ ಯಾವುದೊ ವಿಷಯವೆಂಬುದು ಇಂದು ಚರ್ಚಿನ ಕೆಲವು ಸದಸ್ಯರಲ್ಲಿರುವ ಒಂದು ಸಾಮಾನ್ಯ ನಂಬುಗೆ. ಅದು ಮರಣಾನಂತರ ಅನಂತ ಪರಮಸುಖವನ್ನು ಅನುಭವಿಸಲು ಒಳ್ಳೆಯ ಜನರು ಹೋಗುವ ಸ್ಥಳವಾಗಿದೆಯೆಂದು ಇತರರಿಗೆ ಅನಿಸುತ್ತದೆ. ಸಾಮಾಜಿಕ ಹಾಗೂ ಸರಕಾರೀ ಕೆಲಸಗಳಲ್ಲಿ ಕ್ರೈಸ್ತ ಬೋಧನೆಗಳನ್ನು ತುಂಬಲು ಕಾರ್ಯನಡೆಸುವ ಮೂಲಕ ಭೂಮಿಯ ಮೇಲೆ ರಾಜ್ಯವನ್ನು ಉಂಟುಮಾಡುವುದನ್ನು ದೇವರು ಮಾನವರಿಗೆ ಬಿಟ್ಟಿದ್ದಾನೆಂಬುದು ಇನ್ನೂ ಇತರರ ವಾದ.
2. ದೇವರ ರಾಜ್ಯವನ್ನು ಬೈಬಲು ಹೇಗೆ ವಿವರಿಸುತ್ತದೆ, ಮತ್ತು ಅದು ಏನನ್ನು ಸಾಧಿಸುವುದು?
2 ಹಾಗಿದ್ದರೂ, ದೇವರ ರಾಜ್ಯವು ಭೂಮಿಯ ಮೇಲಿರುವ ಒಂದು ಸಂಘಟನೆಯಲ್ಲವೆಂದು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ. ಅದು ಹೃದಯದ ಸ್ಥಿತಿಯೂ ಮಾನವ ಸಮಾಜದ ಕ್ರೈಸ್ತೀಕರಣವೂ ಆಗಿರುವುದಿಲ್ಲ. ಈ ರಾಜ್ಯವು ಏನಾಗಿದೆ ಎಂಬುದರ ಸರಿಯಾದ ತಿಳಿವಳಿಕೆಯು, ಅದರಲ್ಲಿ ನಂಬಿಕೆಯನ್ನು ಇಡುವವರ ಜೀವಿತಗಳಲ್ಲಿ ಮಹಾ ಬದಲಾವಣೆಗಳಿಗೆ ನಡೆಸುತ್ತದೆ ನಿಜ. ಆದರೆ ರಾಜ್ಯವು ತಾನೇ, ಪಾಪಮರಣಗಳ ಪರಿಣಾಮಗಳನ್ನು ತೆಗೆದುಹಾಕುತ್ತಾ, ಭೂಮಿಯ ಮೇಲೆ ನೀತಿಯ ಪರಿಸ್ಥಿತಿಗಳನ್ನು ಪುನಸ್ಸ್ಥಾಪಿಸುತ್ತಾ, ದೇವರ ಚಿತ್ತವನ್ನು ತರುವ ದೈವಿಕವಾಗಿ ಸ್ಥಾಪಿಸಲ್ಪಟ್ಟ ಸ್ವರ್ಗೀಯ ಸರಕಾರವಾಗಿದೆ. ಈಗಾಗಲೇ ಈ ರಾಜ್ಯವು ಪರಲೋಕದಲ್ಲಿ ಅಧಿಕಾರವನ್ನು ವಹಿಸಿಕೊಂಡಿದೆ ಮತ್ತು ಬೇಗನೆ “ಅದು . . . ಆ [ಮಾನವ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44; ಪ್ರಕಟನೆ 11:15; 12:10.
3. ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ, ಮಾನವರಿಗಾಗಿ ಯಾವುದು ತೆರೆಯಲ್ಪಟ್ಟಿತು?
3 ಇತಿಹಾಸಕಾರ ಏಚ್. ಜಿ. ವೆಲ್ಸ್ ಬರೆದುದು: “ಯೇಸುವಿನ ಪ್ರಧಾನ ಬೋಧನೆಯಾಗಿದ್ದ ಮತ್ತು ಕ್ರೈಸ್ತ ಮತಗಳಲ್ಲಿ ತುಂಬ ಕನಿಷ್ಠ ಪಾತ್ರವನ್ನು ವಹಿಸುವ ಪರಲೋಕರಾಜ್ಯದ ಈ ಸಿದ್ಧಾಂತವು, ಮಾನವ ಆಲೋಚನೆಯನ್ನು ಎಂದಾದರೂ ಕದಲಿಸಿದ ಮತ್ತು ಬದಲಾಯಿಸಿದ ಅತ್ಯಂತ ಕ್ರಾಂತಿಕಾರಿ ಸಿದ್ಧಾಂತಗಳಲ್ಲಿ ಖಂಡಿತವಾಗಿಯೂ ಒಂದಾಗಿದೆ.” ಆರಂಭದಿಂದಲೇ ಯೇಸುವಿನ ಶುಶ್ರೂಷೆಯ ಮುಖ್ಯವಿಷಯವು: “ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದಾಗಿತ್ತು. (ಮತ್ತಾಯ 4:17) ಅವನು ಅಲ್ಲಿ ಭೂಮಿಯ ಮೇಲೆ ಅಭಿಷಿಕ್ತ ರಾಜನೋಪಾದಿ ಇದ್ದನು, ಮತ್ತು ಅತ್ಯಾನಂದಪಡುವ ವಿಷಯವೇನೆಂದರೆ, ಆ ರಾಜ್ಯದ ಆಶೀರ್ವಾದಗಳಲ್ಲಿ ಭಾಗವಹಿಸುವುದು ಮಾತ್ರವಲ್ಲ ಆ ರಾಜ್ಯದಲ್ಲಿ ಯೇಸುವಿನೊಂದಿಗೆ ಸಹರಾಜರೂ ಯಾಜಕರೂ ಆಗಿರುವ ಮಾರ್ಗವು ಈಗ ಮಾನವರಿಗಾಗಿ ತೆರೆಯಲ್ಪಡುತ್ತಿತ್ತು!—ಲೂಕ 22:28-30; ಪ್ರಕಟನೆ 1:6; 5:10.
4. ಪ್ರಥಮ ಶತಮಾನದಲ್ಲಿ, “ರಾಜ್ಯದ ಸುವಾರ್ತೆ”ಗೆ ಜನಸಮೂಹಗಳು ಹೇಗೆ ಪ್ರತಿಕ್ರಿಯಿಸಿದವು, ಇದು ಯಾವ ನ್ಯಾಯತೀರ್ಪಿಗೆ ನಡೆಸಿತು?
4 ಜನಸಮೂಹಗಳು ರೋಮಾಂಚಗೊಳಿಸುವ “ರಾಜ್ಯದ ಸುವಾರ್ತೆಯನ್ನು” ಕೇಳಿದರೂ, ಕೊಂಚ ಜನರು ಮಾತ್ರ ನಂಬಿದರು. ಇದು ಭಾಗಶಃ ಏಕೆಂದರೆ, ಧಾರ್ಮಿಕ ನಾಯಕರು “ಪರಲೋಕರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿ”ಬಿಟ್ಟಿದ್ದರು. ತಮ್ಮ ಸುಳ್ಳು ಬೋಧನೆಗಳ ಮೂಲಕ ಅವರು “ಜ್ಞಾನಕ್ಕೆ ಸಾಧನವಾದ ಬೀಗದಕೈಯನ್ನು ತೆಗೆದು”ಬಿಟ್ಟರು. ಯೇಸುವನ್ನು ಹೆಚ್ಚಿನ ಜನರು ಮೆಸ್ಸೀಯನಂತೆ ಮತ್ತು ದೇವರ ರಾಜ್ಯದ ಅಭಿಷಿಕ್ತ ರಾಜನಂತೆ ತಿರಸ್ಕರಿಸಿದ ಕಾರಣ, ಯೇಸು ಅವರಿಗೆ ಹೇಳಿದ್ದು: “ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.”—ಮತ್ತಾಯ 4:23; 21:43; 23:13; ಲೂಕ 11:52.
5. ಯೇಸುವಿನ ದೃಷ್ಟಾಂತಗಳನ್ನು ಕೇಳಿದವರಲ್ಲಿ ಹೆಚ್ಚಿನವರು ತಾವು ತಿಳಿವಳಿಕೆಯಿಂದ ಕೇಳಲಿಲ್ಲವೆಂಬುದನ್ನು ಹೇಗೆ ತೋರಿಸಿದರು?
5 ಯೇಸು ಒಂದು ಸಂದರ್ಭದಲ್ಲಿ, ಒಂದು ದೊಡ್ಡ ಸಮೂಹಕ್ಕೆ ಕಲಿಸುತ್ತಿದ್ದಾಗ, ತನ್ನ ರೂಢಿಯ ಪ್ರಕಾರ, ಸಮೂಹವನ್ನು ಪರೀಕ್ಷಿಸಲು ಮತ್ತು ರಾಜ್ಯದಲ್ಲಿ ಕೇವಲ ತೋರ್ಕೆಯ ಆಸಕ್ತಿಯನ್ನು ಪಡೆದಿದ್ದವರನ್ನು ಬೇರ್ಪಡಿಸಲು ದೃಷ್ಟಾಂತಗಳ ಸರಣಿಯೊಂದನ್ನು ಉಪಯೋಗಿಸಿದನು. ಮೊದಲನೆಯ ದೃಷ್ಟಾಂತವು, ನಾಲ್ಕು ಬಗೆಯ ಮಣ್ಣಿನಲ್ಲಿ ಬೀಜವನ್ನು ಬಿತ್ತಿದ ಬಿತ್ತುವವನನ್ನು ಒಳಗೊಂಡಿತು. ಮೊದಲ ಮೂರು ಬಗೆಗಳು, ಗಿಡಗಳ ಬೆಳೆವಣಿಗೆಗಾಗಿ ಅನನುಕೂಲವಾಗಿದ್ದವು, ಆದರೆ ಕೊನೆಯದು ಒಳ್ಳೆಯ ಫಲವನ್ನು ಉತ್ಪಾದಿಸಿದ ‘ಒಳ್ಳೆಯ ಮಣ್ಣಾ’ಗಿತ್ತು. ಆ ಚಿಕ್ಕ ದೃಷ್ಟಾಂತವು, “ಕಿವಿಯುಳ್ಳವನು ಆಲಿಸಲಿ,” ಎಂಬ ಪ್ರಬೋಧನೆಯೊಂದಿಗೆ ಕೊನೆಗೊಂಡಿತು. (ಮತ್ತಾಯ 13:1-9, NW) ಉಪಸ್ಥಿತರಿದ್ದವರಲ್ಲಿ ಹೆಚ್ಚಿನವರು ಅವನಿಗೆ ಕಿವಿಗೊಟ್ಟರು, ಆದರೆ ಅವರು “ಆಲಿಸ”ಲಿಲ್ಲ. ಭಿನ್ನವಾದ ಪರಿಸ್ಥಿತಿಗಳಲ್ಲಿ ಬಿತ್ತಲ್ಪಟ್ಟ ಬೀಜವು ಹೇಗೆ ಪರಲೋಕರಾಜ್ಯದಂತಿತ್ತು ಎಂಬುದನ್ನು ಅರಿಯುವುದರಲ್ಲಿ ಅವರಿಗೆ ಯಾವ ಪ್ರೇರಣೆಯೂ, ನಿಜವಾದ ಆಸಕ್ತಿಯೂ ಇರಲಿಲ್ಲ. ಯೇಸುವಿನ ದೃಷ್ಟಾಂತಗಳು ನೈತಿಕ ಮುಖ್ಯವಿಷಯಗಳುಳ್ಳ ಒಳ್ಳೆಯ ಕಥೆಗಳಿಗಿಂತ ಹೆಚ್ಚೇನೂ ಆಗಿರಲಿಲ್ಲವೆಂದು ಬಹುಶಃ ಯೋಚಿಸುತ್ತಾ, ಅವರು ಮನೆಗೆ, ತಮ್ಮ ಅನುದಿನದ ಜೀವಿತಗಳಿಗೆ ಹಿಂದಿರುಗಿದರು. ಅವರ ಹೃದಯಗಳು ಪ್ರತಿಕ್ರಿಯಿಸದ ಕಾರಣ, ತಿಳಿವಳಿಕೆಯ ಎಂತಹ ಸಿರಿತನವನ್ನು ಮತ್ತು ಎಂತಹ ಮಹಾನ್ ಸುಯೋಗಗಳನ್ನು ಹಾಗೂ ಅವಕಾಶಗಳನ್ನು ಪಡೆಯುವುದರಿಂದ ಅವರು ತಪ್ಪಿಹೋದರು!
6. “ಪರಲೋಕರಾಜ್ಯದ ಗುಟ್ಟುಗಳನ್ನು” ತಿಳಿದುಕೊಳ್ಳುವುದನ್ನು ಯೇಸುವಿನ ಶಿಷ್ಯರಿಗೆ ಮಾತ್ರ ಏಕೆ ದಯಪಾಲಿಸಲಾಗಿತ್ತು?
6 ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಪರಲೋಕರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ.” ಯೆಶಾಯನನ್ನು ಉದ್ಧರಿಸುತ್ತಾ, ಅವನು ಕೂಡಿಸಿದ್ದು: “ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು [“ಅದರ ಅರ್ಥವನ್ನು ಗ್ರಹಿಸಿ,” NW] ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ ಎಂಬದು. ಆದರೆ ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು.”—ಮತ್ತಾಯ 13:10-16; ಮಾರ್ಕ 4:11-13.
ರಾಜ್ಯದ “ಅರ್ಥವನ್ನು ಗ್ರಹಿಸು”ವುದು
7. ರಾಜ್ಯದ “ಅರ್ಥವನ್ನು ಗ್ರಹಿಸು”ವುದು ಏಕೆ ಪ್ರಾಮುಖ್ಯವಾಗಿದೆ?
7 ಸಮಸ್ಯೆಯು ಏನೆಂದು ಯೇಸು ನಿಷ್ಕೃಷ್ಟವಾಗಿ ತೋರಿಸಿದನು. ಅದು ರಾಜ್ಯ ಸಂದೇಶದ “ಅರ್ಥವನ್ನು ಗ್ರಹಿಸು”ವುದರೊಂದಿಗೆ ಸಂಬಂಧಿಸಿತ್ತು. ತನ್ನ ಶಿಷ್ಯರಿಗೆ ಅವನು ಖಾಸಗಿಯಾಗಿ ಹೇಳಿದ್ದು: “ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ—ಯಾವನಾದರೂ ಪರಲೋಕರಾಜ್ಯದ ವಾಕ್ಯವನ್ನು ಕೇಳಿ ತಿಳುಕೊಳ್ಳದೆ [“ಅದರ ಅರ್ಥವನ್ನು ಗ್ರಹಿಸದೆ,” NW] ಇರುವಲ್ಲಿ ಸೈತಾನನು ಬಂದು ಆ ಮನುಷ್ಯನ ಮನಸ್ಸಿನಲ್ಲಿ ಬಿತ್ತಿದ್ದನ್ನು ತೆಗೆದುಹಾಕುತ್ತಾನೆ.” ನಾಲ್ಕು ಬಗೆಯ ಮಣ್ಣು, “ಪರಲೋಕರಾಜ್ಯದ ವಾಕ್ಯ”ವು ಬಿತ್ತಲ್ಪಡಲಿರುವ ಹೃದಯದ ವಿಭಿನ್ನ ಪರಿಸ್ಥಿತಿಗಳನ್ನು ಪ್ರತಿನಿಧಿಸಿತೆಂದು ವಿವರಿಸಲು ಅವನು ಮುಂದುವರಿದನು.—ಮತ್ತಾಯ 13:18-23; ಲೂಕ 8:9-15.
8. ಮೊದಲ ಮೂರು ಬಗೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟ “ಬೀಜ”ವು ಫಲವನ್ನು ಉತ್ಪಾದಿಸದಂತೆ ಯಾವುದು ತಡೆಯಿತು?
8 “ಬೀಜ”ವು ಪ್ರತಿಯೊಂದು ಸಂದರ್ಭದಲ್ಲಿ ಒಳ್ಳೆಯದಾಗಿತ್ತು, ಆದರೆ ಫಲವು ಮಣ್ಣಿನ ಪರಿಸ್ಥಿತಿಯ ಮೇಲೆ ಅವಲಂಬಿಸಲಿತ್ತು. ಹೃದಯದ ಮಣ್ಣು ಒಂದು ಕಾರ್ಯಮಗ್ನ, ಆತ್ಮಿಕವಲ್ಲದ ಅನೇಕ ಚಟುವಟಿಕೆಗಳಿಂದ ಒತ್ತಿ ಗಟ್ಟಿಮಾಡಲ್ಪಟ್ಟ ದಾರಿಯಂತಿರುವಲ್ಲಿ, ರಾಜ್ಯಕ್ಕಾಗಿ ಸಮಯವಿಲ್ಲವೆಂದು ಹೇಳುತ್ತಾ, ರಾಜ್ಯ ಸಂದೇಶವನ್ನು ಕೇಳುವವನಿಗೆ ತನ್ನನ್ನು ಮನ್ನಿಸಿಕೊಳ್ಳುವುದು ಸರಳವಾಗಿರುವುದು. ಅಲಕ್ಷಿಸಲ್ಪಟ್ಟ ಬೀಜವು ಬೇರೂರುವ ಮುಂಚೆಯೇ ಸರಳವಾಗಿ ಕಿತ್ತುಕೊಳ್ಳಲ್ಪಡಬಹುದಿತ್ತು. ಆದರೆ ಬೀಜವು ಶಿಲಾಮಯ ಮಣ್ಣನ್ನು ಹೋಲುವ ಒಂದು ಹೃದಯದಲ್ಲಿ ಬಿತ್ತಲ್ಪಟ್ಟರೆ ಆಗೇನು? ಬೀಜವು ಮೊಳಕೆಯೊಡೆಯಬಹುದು, ಆದರೆ ಅದರ ಬೇರುಗಳನ್ನು ಪೋಷಣೆ ಮತ್ತು ಸ್ಥಿರತೆಗಾಗಿ ಯಾವುದೇ ಆಳಕ್ಕೆ ಕಳುಹಿಸುವ ವಿಷಯದಲ್ಲಿ ತೊಂದರೆಯನ್ನು ಎದುರಿಸಬಹುದು. ವಿಶೇಷವಾಗಿ ಹಿಂಸೆಯ ತಾಪದಲ್ಲಿ ದೇವರ ಒಬ್ಬ ವಿಧೇಯ ಸೇವಕನಾಗಿರುವುದರ ಪ್ರತೀಕ್ಷೆಯು, ಭಾವಪರವಶಗೊಳಿಸುವ ಒಂದು ಪಂಥಾಹ್ವಾನವನ್ನು ಪ್ರಸ್ತುತಪಡಿಸಬಹುದು ಮತ್ತು ವ್ಯಕ್ತಿಯು ಮುಗ್ಗರಿಸಬಹುದು. ಮತ್ತು ಪುನಃ, ಹೃದಯದ ಮಣ್ಣು ಮುಳ್ಳಿನಂತಹ ಚಿಂತೆಗಳಿಂದ ಅಥವಾ ಸಂಪತ್ತಿಗಾಗಿರುವ ಪ್ರಾಪಂಚಿಕ ಬಯಕೆಯಿಂದ ತುಂಬಿ ತುಳುಕಿದರೆ, ಕದಿರು ಕಡ್ಡಿಯಾದ ರಾಜ್ಯ ಗಿಡವು ಅದುಮಲ್ಪಡುವುದು. ಈ ಮೂರು ಪ್ರತಿನಿಧಿರೂಪದ ಜೀವಿತದ ಸನ್ನಿವೇಶಗಳಲ್ಲಿ, ಯಾವ ರಾಜ್ಯ ಫಲವೂ ಉತ್ಪನ್ನವಾಗದು.
9. ಒಳ್ಳೆಯ ಮಣ್ಣಿನ ಮೇಲೆ ಬಿತ್ತಲ್ಪಟ್ಟ ಬೀಜವು ಒಳ್ಳೆಯ ಫಲವನ್ನು ಉತ್ಪಾದಿಸಶಕ್ತವಾಗಿತ್ತು ಏಕೆ?
9 ಆದರೆ, ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟ ರಾಜ್ಯ ಬೀಜದ ಕುರಿತೇನು? ಯೇಸು ಉತ್ತರಿಸುವುದು: “ಒಳ್ಳೆಯ ಮಣ್ಣಿನ ಮೇಲೆ ಬಿತ್ತಲ್ಪಟ್ಟವನ ವಿಷಯದಲ್ಲಾದರೊ, ವಾಕ್ಯವನ್ನು ಕೇಳುತ್ತಾ ಅದರ ಅರ್ಥವನ್ನು ಗ್ರಹಿಸುತ್ತಿರುವವನು ಇವನೇ. ಅವನು ನಿಜವಾಗಿಯೂ ಫಲವನ್ನು ಬಿಟ್ಟು, ಇವನು ನೂರರಷ್ಟು, ಅವನು ಅರುವತ್ತನ್ನು, ಇನ್ನೊಬ್ಬನು ಮೂವತ್ತನ್ನು ಉತ್ಪಾದಿಸುವನು.” (ಮತ್ತಾಯ 13:23, NW) ರಾಜ್ಯದ “ಅರ್ಥವನ್ನು ಗ್ರಹಿಸು”ವುದರಲ್ಲಿ, ಅವರು ತಮ್ಮ ವೈಯಕ್ತಿಕ ಪರಿಸ್ಥಿತಿಗಳಿಗನುಸಾರ ಒಳ್ಳೆಯ ಫಲವನ್ನು ಉತ್ಪಾದಿಸುವರು.
ತಿಳಿವಳಿಕೆಯೊಂದಿಗೆ ಜವಾಬ್ದಾರಿಯು ಬರುತ್ತದೆ
10. (ಎ) ರಾಜ್ಯದ “ಅರ್ಥವನ್ನು ಗ್ರಹಿಸು”ವುದು, ಆಶೀರ್ವಾದಗಳನ್ನು ಮತ್ತು ಜವಾಬ್ದಾರಿಯನ್ನು—ಎರಡನ್ನೂ—ತರುತ್ತದೆಂದು ಯೇಸು ಹೇಗೆ ತೋರಿಸಿದನು? (ಬಿ) ಹೊರಟುಹೋಗಿ ಶಿಷ್ಯರನ್ನಾಗಿ ಮಾಡುವ ಯೇಸುವಿನ ಆದೇಶವು ಪ್ರಥಮ ಶತಮಾನದ ಶಿಷ್ಯರಿಗೆ ಮಾತ್ರ ಅನ್ವಯಿಸಿತೊ?
10 ರಾಜ್ಯದ ಹಲವಾರು ವಿಷಯಾಂಶಗಳನ್ನು ವಿವರಿಸಲು ಇನ್ನೂ ಹೆಚ್ಚಿನ ಆರು ದೃಷ್ಟಾಂತಗಳನ್ನು ಕೊಟ್ಟ ತರುವಾಯ, ಯೇಸು ತನ್ನ ಶಿಷ್ಯರನ್ನು ಕೇಳಿದ್ದು: “ನೀವು ಈ ಎಲ್ಲಾ ಮಾತುಗಳ ಅರ್ಥವನ್ನು ಗ್ರಹಿಸಿದಿರೊ?” ಅವರು “ಹೌದು” ಎಂದು ಉತ್ತರಿಸಿದಾಗ, ಅವನು ಹೇಳಿದ್ದು: “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು ಮನೇಯಜಮಾನನಿಗೆ ಹೋಲಿಕೆಯಾಗಿದ್ದಾನೆ. ಅವನು ತನ್ನ ಬೊಕ್ಕಸದೊಳಗಿಂದ ಹೊಸ ವಸ್ತುಗಳನ್ನೂ ಹಳೇ ವಸ್ತುಗಳನ್ನೂ ಹೊರಗೆ ತರುತ್ತಿರುವನು.” ಯೇಸುವಿನ ಮೂಲಕ ಒದಗಿಸಲ್ಪಟ್ಟ ಬೋಧನೆಗಳು ಮತ್ತು ತರಬೇತು ಅವನ ಶಿಷ್ಯರನ್ನು, ಸಮೃದ್ಧವಾದ ಆತ್ಮಿಕ ಆಹಾರದ ಅಂತ್ಯರಹಿತ ಸರಬರಾಯಿಯನ್ನು ತಮ್ಮ ‘ಭಂಡಾರ’ದಿಂದ ಹೊರತರುವ ಪಕ್ವವಾದ ಕ್ರೈಸ್ತರನ್ನಾಗಿ ಕಟ್ಟಲಿತ್ತು. ಇದರಲ್ಲಿ ಹೆಚ್ಚಿನದು ದೇವರ ರಾಜ್ಯಕ್ಕೆ ಸಂಬಂಧಿಸಿತು. ರಾಜ್ಯದ “ಅರ್ಥವನ್ನು ಗ್ರಹಿಸು”ವುದು ಆಶೀರ್ವಾದಗಳನ್ನು ಮಾತ್ರವಲ್ಲ ಜವಾಬ್ದಾರಿಯನ್ನೂ ತರುವುದೆಂದು ಯೇಸು ಸ್ಪಷ್ಟಗೊಳಿಸಿದನು. ಅವನು ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಮತ್ತಾಯ 13:51 (NW), 52; 28:19, 20.
11. 1914 ಆಗಮಿಸಿದಾಗ, ರಾಜ್ಯಕ್ಕೆ ಸಂಬಂಧಿಸಿದ ಯಾವ ಘಟನೆಗಳು ಸಂಭವಿಸಿದವು?
11 ವಾಗ್ದಾನಿಸಿದ ಹಾಗೆ, ಯೇಸು ಈ ದಿನದ ವರೆಗೆ ಶತಮಾನಗಳ ಉದ್ದಕ್ಕೂ ತನ್ನ ನಿಜ ಶಿಷ್ಯರೊಂದಿಗೆ ಇರುವುದನ್ನು ಮುಂದುವರಿಸಿದ್ದಾನೆ. ಈ ಕೊನೆಯ ದಿವಸಗಳಲ್ಲಿ, ಅವನು ಪ್ರಗತಿಪರವಾಗಿ ಅವರಿಗೆ ತಿಳಿವಳಿಕೆಯನ್ನು ನೀಡಿದ್ದಾನೆ ಮತ್ತು ಹೆಚ್ಚುತ್ತಿರುವ ಸತ್ಯದ ಬೆಳಕಿನ ಉಪಯೋಗಕ್ಕಾಗಿ ಅವನು ಅವರನ್ನು ಜವಾಬ್ದಾರರನ್ನಾಗಿಯೂ ಮಾಡಿದ್ದಾನೆ. (ಲೂಕ 19:11-15, 26) 1914ರಲ್ಲಿ, ರಾಜ್ಯ ಘಟನೆಗಳು ಕ್ಷಿಪ್ರವಾಗಿಯೂ ನಾಟಕೀಯವಾಗಿಯೂ ಅನಾವರಣಗೊಳ್ಳಲು ತೊಡಗಿದವು. ಆ ವರ್ಷದಲ್ಲಿ, ದೀರ್ಘಸಮಯದಿಂದ ನಿರೀಕ್ಷಿಸಲ್ಪಟ್ಟಿದ್ದ ರಾಜ್ಯದ ‘ಜನನ’ವಾಯಿತು ಮಾತ್ರವಲ್ಲ, “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯೂ ಆರಂಭಿಸಿತು. (ಪ್ರಕಟನೆ 11:15; 12:5, 10; ದಾನಿಯೇಲ 7:13, 14, 27) ನಿಜ ಕ್ರೈಸ್ತರು, ಪ್ರಚಲಿತ ಘಟನೆಗಳ ಅರ್ಥವನ್ನು ವಿವೇಚಿಸುತ್ತಾ, ಇತಿಹಾಸದಲ್ಲಿನ ಅತಿ ಮಹತ್ತರವಾದ ರಾಜ್ಯ ಸಾರುವ ಮತ್ತು ಕಲಿಸುವ ಚಳವಳಿಯನ್ನು ನಡೆಸಿದ್ದಾರೆ. ಯೇಸು ಹೀಗೆ ಹೇಳುತ್ತಾ, ಇದನ್ನು ಮುಂತಿಳಿಸಿದನು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.
12. (ಎ) ವಿಸ್ತಾರವಾದ ಆಧುನಿಕ ದಿನದ ರಾಜ್ಯ ಸಾಕ್ಷ್ಯದ ಪರಿಣಾಮವು ಏನಾಗಿದೆ? (ಬಿ) ಸಂದೇಹ ಪಡುವ ಈ ಲೋಕದಲ್ಲಿ, ಕ್ರೈಸ್ತರಿಗೆ ಯಾವ ಅಪಾಯವಿದೆ?
12 ಈ ವಿಸ್ತಾರವಾದ ರಾಜ್ಯ ಸಾಕ್ಷಿಯು 230ಕ್ಕಿಂತಲೂ ಹೆಚ್ಚಿನ ದೇಶಗಳನ್ನು ತಲಪಿದೆ. ಈಗಾಗಲೇ ಸುಮಾರು ಐವತ್ತು ಲಕ್ಷ ನಿಜ ಶಿಷ್ಯರು ಈ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ, ಮತ್ತು ಇನ್ನೂ ಇತರರು ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಆದರೆ ಭೂಮಿಯ 560 ಕೋಟಿ ನಿವಾಸಿಗಳೊಂದಿಗೆ ಶಿಷ್ಯರ ಸಂಖ್ಯೆಯನ್ನು ನಾವು ಹೋಲಿಸಿದರೆ, ಯೇಸುವಿನ ದಿನದಲ್ಲಾದಂತೆ, ಮಾನವ ಜಾತಿಯ ಅತಿ ಹೆಚ್ಚಿನ ಸಂಖ್ಯೆಯವರು ರಾಜ್ಯದ “ಅರ್ಥವನ್ನು ಗ್ರಹಿಸು”ವುದಿಲ್ಲವೆಂಬುದು ಸುಸ್ಪಷ್ಟ. ಅನೇಕರು, ಮುನ್ಸೂಚಿಸಲ್ಪಟ್ಟಂತೆ ಅಪಹಾಸ್ಯ ಮಾಡಿ ಹೇಳುವುದು: “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು?” (2 ಪೇತ್ರ 3:3, 4) ಕ್ರೈಸ್ತರೋಪಾದಿ ನಮಗಿರುವ ಅಪಾಯವು ಏನೆಂದರೆ, ಅವರ ಆತ್ಮತೃಪ್ತಿಯ, ಸಂದೇಹ ಪಡುವ, ಪ್ರಾಪಂಚಿಕ ಮನೋಭಾವವು ಕ್ರಮೇಣವಾಗಿ ನಾವು ನಮ್ಮ ರಾಜ್ಯ ಸುಯೋಗಗಳನ್ನು ವೀಕ್ಷಿಸುವ ವಿಧವನ್ನು ಪ್ರಭಾವಿಸಬಲ್ಲದು. ಈ ಲೋಕದ ಜನರಿಂದ ಸುತ್ತುವರಿಯಲ್ಪಟ್ಟ ನಾವು, ಸರಳವಾಗಿ ಅವರ ಮನೋಭಾವಗಳು ಮತ್ತು ಆಚರಣೆಗಳಲ್ಲಿ ಕೆಲವನ್ನು ಅಂಗೀಕರಿಸಲು ತೊಡಗಬಲ್ಲೆವು. ನಾವು ದೇವರ ರಾಜ್ಯದ ‘ಅರ್ಥವನ್ನು ಗ್ರಹಿಸಿ’ ಅದಕ್ಕೆ ಬಲವಾಗಿ ಅಂಟಿಕೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆ!
ರಾಜ್ಯದ ಸಂಬಂಧದಲ್ಲಿ ನಮ್ಮನ್ನು ಪರೀಕ್ಷಿಸಿಕೊಳ್ಳುವುದು
13. ರಾಜ್ಯ ಸುವಾರ್ತೆಯನ್ನು ಸಾರುವ ಆದೇಶದ ವಿಷಯದಲ್ಲಿ, ನಾವು ವಿವೇಚನೆಯಿಂದ ‘ಕೇಳಲು’ ಮುಂದುವರಿಯುತ್ತಿದ್ದೇವೊ ಇಲ್ಲವೊ ಎಂಬುದನ್ನು ನಾವು ಹೇಗೆ ಪರೀಕ್ಷಿಸಬಲ್ಲೆವು?
13 ನಾವು ಜೀವಿಸುತ್ತಿರುವ ಕೊಯ್ಲಿನ ಅವಧಿಯ ಕುರಿತು ಯೇಸು ಹೇಳಿದ್ದು: “ಮನುಷ್ಯ ಕುಮಾರನು ತನ್ನ ದೂತರನ್ನು ಕಳುಹಿಸುವನು; ಅವರು ಆತನ ರಾಜ್ಯದೊಳಗಿಂದ ಎಲ್ಲಾ ಕಂಟಕರನ್ನೂ ಅಧರ್ಮಿಗಳನ್ನೂ ಕೂಡಿಸಿ . . . ಹಾಕುವರು; . . . ಆಗ ನೀತಿವಂತರೂ ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಆಲಿಸಲಿ.” (ಮತ್ತಾಯ 13:41, 43, NW) ರಾಜ್ಯವನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆಗೆ ನೀವು ವಿಧೇಯ ಪ್ರತಿಕ್ರಿಯೆಯೊಂದಿಗೆ ‘ಕೇಳುವುದನ್ನು’ ಮುಂದುವರಿಸುತ್ತಿದ್ದೀರೊ? “ಒಳ್ಳೆಯ ಮಣ್ಣಿನ ಮೇಲೆ ಬಿತ್ತಲ್ಪಟ್ಟವ”ನು ‘ವಾಕ್ಯವನ್ನು ಕೇಳುತ್ತಾ ಅದರ ಅರ್ಥವನ್ನು ಗ್ರಹಿಸಿ’ ಒಳ್ಳೆಯ ಫಲವನ್ನು ಉತ್ಪಾದಿಸಿದನು ಎಂಬುದನ್ನು ಜ್ಞಾಪಕದಲ್ಲಿಡಿ.—ಮತ್ತಾಯ 13:23, NW.
14. ಉಪದೇಶವು ಕೊಡಲ್ಪಡುವಾಗ, ನಾವು ಕೊಡಲ್ಪಟ್ಟ ಸಲಹೆಯ “ಅರ್ಥವನ್ನು ಗ್ರಹಿಸು”ತ್ತೇವೆಂದು ಹೇಗೆ ತೋರಿಸುತ್ತೇವೆ?
14 ವೈಯಕ್ತಿಕ ಅಧ್ಯಯನವನ್ನು ಮಾಡುವಾಗ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ, ನಾವು ‘ನಮ್ಮ ಹೃದಯವನ್ನು ವಿವೇಚನೆಯ ಕಡೆಗೆ ತಿರುಗಿಸಬೇಕು.’ (ಜ್ಞಾನೋಕ್ತಿ 2:1-4, NW) ನಡತೆ, ಉಡುಪು, ಸಂಗೀತ ಮತ್ತು ಮನೋರಂಜನೆಯ ಸಂಬಂಧದಲ್ಲಿ ಸಲಹೆಯು ಕೊಡಲ್ಪಟ್ಟಾಗ, ಅದು ನಮ್ಮ ಹೃದಯಗಳೊಳಗೆ ಇಳಿಯುವಂತೆ ಮತ್ತು ಬೇಕಾದ ಯಾವುದೇ ಹೊಂದಾಣಿಕೆಗಳನ್ನು ಮಾಡಲು ನಮ್ಮನ್ನು ಪ್ರೇರೇಪಿಸುವಂತೆ ನಾವು ಬಿಡಬೇಕು. ಸಮನ್ವಯಿಸಲು, ನೆಪಗಳನ್ನು ಮಾಡಲು, ಇಲ್ಲದಿದ್ದರೆ ಪ್ರತಿಕ್ರಿಯಿಸಲು ಎಂದಿಗೂ ತಪ್ಪಬೇಡಿರಿ. ರಾಜ್ಯವು ನಮ್ಮ ಜೀವಿತಗಳಲ್ಲಿ ನೈಜವಾಗಿದ್ದರೆ, ನಾವು ಅದರ ಮಟ್ಟಗಳಿಗನುಸಾರ ಜೀವಿಸುವೆವು ಮತ್ತು ಹುರುಪಿನಿಂದ ಅದನ್ನು ಇತರರಿಗೆ ಘೋಷಿಸುವೆವು. ಯೇಸು ಹೇಳಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.”—ಮತ್ತಾಯ 7:21-23.
15. ‘ರಾಜ್ಯವನ್ನೂ ದೇವರ ನೀತಿಯನ್ನೂ ಪ್ರಥಮವಾಗಿ ಹುಡುಕುವುದು’ ಪ್ರಾಮುಖ್ಯವೇಕೆ?
15 ಮಾನವ ಪ್ರವೃತ್ತಿಯು, ಬೇಕಾದ ಆಹಾರ, ಉಡುಗೆ-ತೊಡುಗೆ ಮತ್ತು ಆಶ್ರಯದ ಕುರಿತು ಚಿಂತಿತರಾಗಿರುವುದಾಗಿದೆ, ಆದರೆ ಯೇಸು ಹೇಳಿದ್ದು: “ಹೀಗಿರುವದರಿಂದ, ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33, 34) ಆದ್ಯತೆಗಳನ್ನು ಇಡುವುದರಲ್ಲಿ, ರಾಜ್ಯವನ್ನು ನಿಮ್ಮ ಜೀವಿತದಲ್ಲಿ ಪ್ರಥಮವಾಗಿಡಿರಿ. ಆವಶ್ಯಕತೆಗಳಿಂದ ತೃಪ್ತರಾಗುತ್ತಾ, ನಿಮ್ಮ ಜೀವಿತವನ್ನು ಸರಳವಾಗಿಡಿರಿ. ತಮ್ಮಲ್ಲಿಯೇ ಈ ವಿಷಯಗಳು ಅನಿವಾರ್ಯವಾಗಿ ಕೆಟ್ಟದ್ದಾಗಿರದ ಕಾರಣ, ಇದನ್ನು ಮಾಡುವುದು ಸ್ವೀಕಾರಾರ್ಹವೆಂದು ಬಹುಶಃ ಸಮನ್ವಯಿಸುತ್ತಾ, ನಮ್ಮ ಜೀವಿತಗಳನ್ನು ಅನಾವಶ್ಯಕ ಚಟುವಟಿಕೆಗಳಿಂದ ಮತ್ತು ಸಂಪಾದನೆಗಳಿಂದ ತುಂಬುವುದು ಮುರ್ಖತನವಾಗಿರುವುದು. ಅದು ಸತ್ಯವಾಗಿರುವಾಗ, ಇಂತಹ ಅನಾವಶ್ಯಕ ವಿಷಯಗಳ ಸಂಪಾದನೆ ಮತ್ತು ಬಳಕೆಯು ನಮ್ಮ ವೈಯಕ್ತಿಕ ಅಧ್ಯಯನದ ಪಟ್ಟಿಮಾಡುವಿಕೆಗೆ, ಕ್ರೈಸ್ತ ಕೂಟಗಳ ಹಾಜರಿಗೆ, ಮತ್ತು ಸಾರುವ ಕೆಲಸದಲ್ಲಿ ತೊಡಗುವ ವಿಷಯಕ್ಕೆ ಏನು ಮಾಡುವುದು? ರಾಜ್ಯವು, “ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡ” ಒಬ್ಬ ವ್ಯಾಪಾರಸ್ಥನಂತಿದೆ ಎಂದು ಯೇಸು ಹೇಳಿದನು. (ಮತ್ತಾಯ 13:45, 46) ದೇವರ ರಾಜ್ಯದ ಕುರಿತು ನಮಗೆ ಹೀಗೆಯೇ ಅನಿಸಬೇಕು. ನಾವು “ಇಹಲೋಕವನ್ನು ಪ್ರೀತಿಸಿ”ದ ಕಾರಣ ಶುಶ್ರೂಷೆಯನ್ನು ತ್ಯಜಿಸಿದ ದೇಮನನ್ನಲ್ಲ, ಪೌಲನನ್ನು ಅನುಕರಿಸಬೇಕು.—2 ತಿಮೊಥೆಯ 4:10, 18; ಮತ್ತಾಯ 19:23, 24; ಫಿಲಿಪ್ಪಿ 3:7, 8, 13, 14; 1 ತಿಮೊಥೆಯ 6:9, 10, 17-19.
“ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ”
16. ದೇವರ ರಾಜ್ಯದ “ಅರ್ಥವನ್ನು ಗ್ರಹಿಸು”ವುದು ನಾವು ತಪ್ಪಾದ ನಡತೆಯನ್ನು ತೊರೆಯುವಂತೆ ಹೇಗೆ ಸಹಾಯ ಮಾಡುವುದು?
16 ಕೊರಿಂಥದ ಸಭೆಯು ಅನೈತಿಕತೆಯನ್ನು ಸಹಿಸಿಕೊಳ್ಳುತ್ತಿದ್ದಾಗ, ಪೌಲನು ಮುಚ್ಚುಮರೆಯಿಲ್ಲದೆ ಹೇಳಿದ್ದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ನಾವು ದೇವರ ರಾಜ್ಯದ “ಅರ್ಥವನ್ನು ಗ್ರಹಿಸು”ವುದಾದರೆ, ಕ್ರೈಸ್ತ ಸೇವೆಯಲ್ಲಿ ನಾವು ಕಾರ್ಯಮಗ್ನರಾಗಿರುವುದನ್ನು ಯೆಹೋವನು ನೋಡುವಷ್ಟರ ತನಕ ಆತನು ಅನೈತಿಕತೆಯ ಯಾವುದೋ ಬಗೆಯನ್ನು ಸಹಿಸಿಕೊಳ್ಳುವನೆಂದು ಯೋಚಿಸುವ ಮೂಲಕ ನಮ್ಮನ್ನು ನಾವು ಮೋಸಪಡಿಸಿಕೊಳ್ಳಲಾರೆವು. ಅಶುದ್ಧತೆಯು ನಮ್ಮ ಮಧ್ಯೆ ಪ್ರಸ್ತಾಪಿಸಲ್ಪಡಲೂ ಬಾರದು. (ಎಫೆಸ 5:3-5) ಈ ಲೋಕದ ಹೊಲಸು ಯೋಚನೆ ಅಥವಾ ಆಚರಣೆಗಳಲ್ಲಿ ಕೆಲವು ನಿಮ್ಮ ಜೀವಿತದಲ್ಲಿ ನುಸುಳಲು ತೊಡಗುತ್ತಿರುವುದನ್ನು ನೀವು ಕಂಡುಹಿಡಿಯುತ್ತೀರೊ? ಕೂಡಲೇ ಅವುಗಳನ್ನು ನಿಮ್ಮ ಜೀವಿತದಿಂದ ಕಡಿದುಹಾಕಿರಿ! ಇಂತಹ ವಿಷಯಗಳ ಸಲುವಾಗಿ ಕಳೆದುಕೊಳ್ಳಲು, ರಾಜ್ಯವು ಬಹಳ ಅಮೂಲ್ಯವಾಗಿದೆ.—ಮಾರ್ಕ 9:47.
17. ಯಾವ ವಿಧಗಳಲ್ಲಿ ದೇವರ ರಾಜ್ಯಕ್ಕಾಗಿ ಗಣ್ಯತೆಯು ದೀನತೆಯನ್ನು ಪ್ರವರ್ಧಿಸಿ, ಎಡವುವುದಕ್ಕಾಗಿ ಇರುವ ಕಾರಣಗಳನ್ನು ತೆಗೆದುಹಾಕುವುದು?
17 ಯೇಸುವಿನ ಶಿಷ್ಯರು ಕೇಳಿದ್ದು: “ಪರಲೋಕರಾಜ್ಯದಲ್ಲಿ ಯಾವನು ಹೆಚ್ಚಿನವನು”? ಒಂದು ಚಿಕ್ಕ ಮಗುವನ್ನು ಅವರ ನಡುವೆ ನಿಲ್ಲಿಸುವ ಮೂಲಕ ಯೇಸು ಉತ್ತರಿಸಿದನು. ಅವನಂದದ್ದು: “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ, ಅವನೇ ಪರಲೋಕರಾಜ್ಯದಲ್ಲಿ ಹೆಚ್ಚಿನವನು.” (ಮತ್ತಾಯ 18:1-6) ದುರಭಿಮಾನಿಗಳು, ತಗಾದೆ ಮಾಡುವವರು, ಉಪೇಕ್ಷಿಸುವವರು ಮತ್ತು ಸ್ವಚ್ಛಂದರು ದೇವರ ರಾಜ್ಯದಲ್ಲಿ ಇರುವುದೂ ಇಲ್ಲ, ಆ ರಾಜ್ಯದ ಪ್ರಜೆಗಳು ಅವರಾಗುವುದೂ ಇಲ್ಲ. ನಿಮ್ಮ ಸಹೋದರರಿಗಾಗಿರುವ ನಿಮ್ಮ ಪ್ರೀತಿ, ನಿಮ್ಮ ದೀನತೆ, ನಿಮ್ಮ ದಿವ್ಯಭಕ್ತಿಯು, ನಿಮ್ಮ ನಡತೆಯ ಮೂಲಕ ಇತರರು ಎಡವುವಂತೆ ಮಾಡುವುದನ್ನು ತೊರೆಯಲು ನಿಮ್ಮನ್ನು ಪ್ರೇರೇಪಿಸುತ್ತದೊ? ಅಥವಾ ಈ ಮನೋಭಾವ ಮತ್ತು ನಡತೆಯು ಇತರರನ್ನು ಯಾವ ರೀತಿಯಲ್ಲೇ ಪ್ರಭಾವಿಸಲಿ, ನೀವು ನಿಮ್ಮ ‘ಹಕ್ಕುಗಳ’ ವಿಷಯದಲ್ಲಿ ಪಟ್ಟುಹಿಡಿಯುತ್ತೀರೊ?—ರೋಮಾಪುರ 14:13, 17.
18. ಆತನ ಚಿತ್ತವು “ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ” ನೆರವೇರುವಂತೆ ದೇವರ ರಾಜ್ಯವು ಮಾಡುವಾಗ, ವಿಧೇಯ ಮಾನವ ಜಾತಿಗೆ ಏನು ಫಲಿಸುವುದು?
18 ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನು, ಬೇಗನೆ ಆ ಉತ್ಸಾಹಶೀಲ ಪ್ರಾರ್ಥನೆಯನ್ನು ಪೂರ್ಣವಾಗಿ ಉತ್ತರಿಸುವನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” ಬಹು ಬೇಗನೆ ಆಳುತ್ತಿರುವ ಅರಸನಾದ ಯೇಸು ಕ್ರಿಸ್ತನು, “ಕುರಿಗಳನ್ನು” “ಆಡು”ಗಳಿಂದ ಬೇರ್ಪಡಿಸಲು, ನ್ಯಾಯತೀರ್ಪಿಗಾಗಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಅರ್ಥದಲ್ಲಿ ಬರುವನು. ಆ ನೇಮಿತ ಸಮಯದಲ್ಲಿ, “ಅರಸನು ತನ್ನ ಬಲಗಡೆಯಲ್ಲಿರುವವರಿಗೆ—ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ” ಎಂದು ಹೇಳುವನು. ಆಡುಗಳು “ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.” (ಮತ್ತಾಯ 6:10; 25:31-34, 46) “ಮಹಾ ಸಂಕಟವು,” ಹಳೆಯ ವ್ಯವಸ್ಥೆಯನ್ನು ಮತ್ತು ರಾಜ್ಯದ “ಅರ್ಥವನ್ನು ಗ್ರಹಿಸ”ಲು ನಿರಾಕರಿಸುವ ಎಲ್ಲರನ್ನು ನಾಶಮಾಡುವುದು. ಆದರೆ, “ಮಹಾ ಸಂಕಟ”ವನ್ನು ಪಾರಾಗಿ ಉಳಿಯುವ ಲಕ್ಷಾಂತರ ಜನರು ಮತ್ತು ಪುನರುತ್ಥಾನಗೊಳ್ಳಲಿರುವ ಶತ ಕೋಟಿ ಜನರು, ಪುನಸ್ಸ್ಥಾಪಿತ ಭೌಮಿಕ ಪ್ರಮೋದವನದಲ್ಲಿ ಕೊನೆಯಿಲ್ಲದೆ ರಾಜ್ಯ ಆಶೀರ್ವಾದಗಳನ್ನು ಪಡೆಯುವರು. (ಪ್ರಕಟನೆ 7:14) ರಾಜ್ಯವು ಪರಲೋಕದಿಂದ ಆಳುವ ಭೂಮಿಯ ಹೊಸ ಸರಕಾರವಾಗಿದೆ. ಭೂಮಿ ಮತ್ತು ಮಾನವ ಜಾತಿಗಾಗಿರುವ ಯೆಹೋವನ ಉದ್ದೇಶವನ್ನು ಅದು ಪೂರ್ಣವಾಗಿ ನೆರವೇರಿಸುವುದು—ಎಲ್ಲ ಆತನ ಅತಿ ಪವಿತ್ರ ನಾಮದ ಪವಿತ್ರೀಕರಣಕ್ಕಾಗಿ. ಆ ಆಸ್ತಿಯು, ಅದಕ್ಕಾಗಿ ಕಾರ್ಯನಡೆಸಲು, ತ್ಯಾಗಮಾಡಲು ಮತ್ತು ಕಾಯಲು ಯೋಗ್ಯವಾದದ್ದಾಗಿರುವುದಿಲ್ಲವೊ? ರಾಜ್ಯದ “ಅರ್ಥವನ್ನು ಗ್ರಹಿಸು”ವುದು, ನಮಗೆ ಇದನ್ನೇ ಅರ್ಥೈಸಬೇಕು!
ನೀವು ಹೇಗೆ ಉತ್ತರಿಸುವಿರಿ?
◻ ದೇವರ ರಾಜ್ಯವು ಏನಾಗಿದೆ?
◻ ಯೇಸುವಿನ ಕೇಳುಗರಲ್ಲಿ ಹೆಚ್ಚಿನವರು ರಾಜ್ಯದ “ಅರ್ಥವನ್ನು ಗ್ರಹಿಸ”ಲಿಲ್ಲ ಏಕೆ?
◻ ರಾಜ್ಯದ “ಅರ್ಥವನ್ನು ಗ್ರಹಿಸು”ವುದು, ಆಶೀರ್ವಾದಗಳನ್ನು ಮತ್ತು ಜವಾಬ್ದಾರಿಯನ್ನು—ಎರಡನ್ನೂ—ತರುತ್ತದೆ ಹೇಗೆ?
◻ ಸಾರುವ ವಿಷಯದಲ್ಲಾದರೊ, ನಾವು ರಾಜ್ಯದ ‘ಅರ್ಥವನ್ನು ಗ್ರಹಿಸಿ’ದ್ದೇವೊ ಇಲ್ಲವೊ ಎಂಬುದನ್ನು ಯಾವುದು ಸೂಚಿಸುತ್ತದೆ?
◻ ನಾವು ಕೊಡಲ್ಪಟ್ಟ ಸಲಹೆಯ ‘ಅರ್ಥವನ್ನು ಗ್ರಹಿಸಿ’ದ್ದೇವೆಂದು ನಮ್ಮ ನಡತೆಯ ಮೂಲಕ ನಾವು ಹೇಗೆ ತೋರಿಸುತ್ತೇವೆ?
[ಪುಟ 17 ರಲ್ಲಿರುವ ಚಿತ್ರಗಳು]
ಯೇಸುವಿನ ಶಿಷ್ಯರು ರಾಜ್ಯದ ‘ಅರ್ಥವನ್ನು ಗ್ರಹಿಸಿ’ದರು ಮತ್ತು ಒಳ್ಳೆಯ ಫಲವನ್ನು ಉತ್ಪಾದಿಸಿದರು