ಬಳಲಿ ಹೋದವರಿಗೆ ಒಂದು ಪ್ರೀತಿಯ ಆಮಂತ್ರಣ
“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.”—ಮತ್ತಾಯ 11:28.
1. ಯೇಸು ತನ್ನ ಮೂರನೆಯ ಸಾರುವ ಸಂಚಾರದಲ್ಲಿ ಗಲಿಲಾಯದಲ್ಲಿ ಏನನ್ನು ಕಂಡನು?
ಸಾ.ಶ. 32 ನೆಯ ವರ್ಷದ ಆರಂಭದ ಸುಮಾರಿಗೆ, ಯೇಸು ಗಲಿಲಾಯ ಪ್ರಾಂತದಲ್ಲಿ ತನ್ನ ಮೂರನೆಯ ಸಾರುವ ಸಂಚಾರದಲ್ಲಿದ್ದನು. ಅವನು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸುತ್ತಾ, “ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾತರದ ರೋಗಗಳನ್ನೂ ಎಲ್ಲಾತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.” ಮತ್ತು ಆತನು ಇದನ್ನು ಮಾಡಿದಾಗ, ಅವನು ಜನರ ಗುಂಪುಗಳನ್ನು ನೋಡಿ, “ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.”—ಮತ್ತಾಯ 9:35, 36.
2. ಯೇಸು ಜನರಿಗೆ ಸಹಾಯ ಮಾಡಿದ್ದು ಹೇಗೆ?
2 ಆದರೂ, ಜನರ ಗುಂಪುಗಳನ್ನು ನೋಡಿ ಕೇವಲ ಕನಿಕರಪಡುವುದಕ್ಕಿಂತ ಹೆಚ್ಚನ್ನು ಯೇಸು ಮಾಡಿದನು. “ಬೆಳೆಯ ಯಜಮಾನ” ನಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡುವಂತೆ ತನ್ನ ಶಿಷ್ಯರಿಗೆ ಉಪದೇಶಿಸಿದ ಬಳಿಕ, ಅವನು ಅವರನ್ನು ಜನರಿಗೆ ಸಹಾಯ ಮಾಡಲು ಕಳುಹಿಸಿಕೊಟ್ಟನು. (ಮತ್ತಾಯ 9:38; 10:1) ಅನಂತರ ಅವನು ಜನರಿಗೆ ನಿಜ ಉಪಶಮನ ಮತ್ತು ಸಾಂತ್ವನವನ್ನು ಹೊಂದುವುದಕ್ಕಿರುವ ಮಾರ್ಗದ ಕುರಿತಾಗಿ ತನ್ನ ವೈಯಕ್ತಿಕ ಆಶ್ವಾಸನೆಯನ್ನು ನೀಡಿದನು. ಹೃದಯೋಲ್ಲಾಸವನ್ನು ತರುವ ಈ ಆಮಂತ್ರಣವನ್ನು ಆತನು ಅವರಿಗಿತ್ತನು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು.”—ಮತ್ತಾಯ 11:28, 29.
3. ಯೇಸುವಿನ ಆಮಂತ್ರಣವು ಇಂದು ತತ್ಸಮಾನವಾಗಿ ಇಷ್ಟಕರವಾಗಿರುತ್ತದೆ ಏಕೆ?
3 ಇಂದು ಅನೇಕರು ತಾವು ಭಾರವಾದ ಹೊರೆಯನ್ನು ಹೊತ್ತಿರುವವರಾಗಿ ಎಣಿಸುವಂತಹ ಒಂದು ಸಮಯದಲ್ಲಿ ನಾವು ಜೀವಿಸುತ್ತೇವೆ. (ರೋಮಾಪುರ 8:22; 2 ತಿಮೊಥೆಯ 3:1) ಕೆಲವರಿಗೆ ತಮ್ಮ ಜೀವನೋಪಾಯ ನಡೆಸುವುದರಲ್ಲೇ ಎಷ್ಟು ಸಮಯ ಮತ್ತು ಶಕ್ತಿಯು ವ್ಯಯವಾಗುತ್ತದೆಂದರೆ, ಅವರ ಕುಟುಂಬಕ್ಕಾಗಿ, ಮಿತ್ರರಿಗಾಗಿ, ಮತ್ತು ಬೇರೆ ಯಾವುದಕ್ಕೂ ಏನೂ ಸಮಯ ಉಳಿಯುವುದಿಲ್ಲ. ಅನೇಕರು ಗಂಭೀರ ಕಾಯಿಲೆ, ಬಾಧೆಗಳು, ಖಿನ್ನತೆ, ಮತ್ತು ಇತರ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಕುಗ್ಗಿಹೋಗಿದ್ದಾರೆ. ಒತ್ತಡವನ್ನು ಅನುಭವಿಸುವವರಾಗಿ ಕೆಲವರು ಸುಖಾನ್ವೇಷಣೆ, ತಿನ್ನುವಿಕೆ, ಕುಡಿಯುವಿಕೆ, ಮತ್ತು ಅಮಲೌಷಧದ ಅಪಪ್ರಯೋಗದಲ್ಲೂ ತಮ್ಮನ್ನು ಪೂರ್ಣವಾಗಿ ತಲ್ಲೀನಗೊಳಿಸಿಕೊಳ್ಳುವ ಮೂಲಕ ಉಪಶಮನ ಹೊಂದಲು ಪ್ರಯತ್ನಿಸುತ್ತಾರೆ. ಇದು ಅವರನ್ನು ಕೇವಲ ಒಂದು ವಿಷಮಚಕ್ರದೊಳಗೆ ಎಸೆದು, ಇನ್ನೂ ಹೆಚ್ಚಿನ ಸಮಸ್ಯೆಗಳನ್ನೂ ಒತ್ತಡಗಳನ್ನೂ ತರುತ್ತದೆ ನಿಶ್ಚಯ. (ರೋಮಾಪುರ 8:6) ಸ್ಪಷ್ಟವಾಗಿಗಿ, ಯೇಸುವಿನ ಪ್ರೀತಿಯ ಆಮಂತ್ರಣವು ಆಗ ಕಂಡುಬಂದಷ್ಟೇ ಈಗಲೂ ಇಷ್ಟಕರವಾಗಿರುತ್ತದೆ.
4. ಯೇಸುವಿನ ಪ್ರೀತಿಯ ಆಮಂತ್ರಣದಿಂದ ಪ್ರಯೋಜನ ಹೊಂದಲಿಕ್ಕೆ ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸಬೇಕು?
4 ಯೇಸು ಅವರಿಗೋಸ್ಕರ ಕನಿಕರಪಡುವಂತೆ ಪ್ರಚೋದಿಸಿದ ಯೇಸುವಿನ ಕಾಲದ ಆ ಜನರು, “ತೊಳಲಿ ಬಳಲಿ ಹೋದವ” ರಂತೆ ಕಂಡುಬರಲು ಗುರಿಯಾದದಾದ್ದರೂ ಯಾವುದಕ್ಕೆ? ಅವರು ಹೊತ್ತುಕೊಳ್ಳಬೇಕಾಗಿದ್ದ ಭಾರಗಳು ಮತ್ತು ಹೊರೆಗಳು ಯಾವುವು, ಮತ್ತು ಯೇಸುವಿನ ಆಮಂತ್ರಣವು ಅವರಿಗೆ ಹೇಗೆ ಸಹಾಯ ಮಾಡಲಿತ್ತು? ಈ ಪ್ರಶ್ನೆಗಳಿಗೆ ಉತ್ತರಗಳು, ಬಳಲಿ ಹೋದವರಿಗಾಗಿ ಯೇಸುವಿನ ಪ್ರೀತಿಯ ಆಮಂತ್ರಣದಿಂದ ಪ್ರಯೋಜನ ಹೊಂದುವುದರಲ್ಲಿ ನಮಗೆ ಅತ್ಯಂತ ಸಹಾಯಕರವಾಗಿರಬಲ್ಲವು.
‘ಕಷ್ಟಪಡುವವರು ಮತ್ತು ಹೊರೆಹೊತ್ತವರು’
5. ಯೇಸುವಿನ ಶುಶ್ರೂಷೆಯ ಈ ಘಟನೆಯ ವಿಷಯವಾಗಿ ಅಪೊಸ್ತಲ ಮತ್ತಾಯನು ವರದಿಸಿದುದು ಯಾಕೆ ಸೂಕ್ತವಾಗಿತ್ತು?
5 ಯೇಸುವಿನ ಶುಶ್ರೂಷೆಯ ಈ ಘಟನೆಯನ್ನು ಮತ್ತಾಯನು ಮಾತ್ರ ವರದಿಸಿರುವುದು ಆಸಕ್ತಿಕರ. ಲೇವಿಯಾಗಿಯೂ ಜ್ಞಾತನಾಗಿದ್ದ, ಸುಂಕದವನಾದ ಮತ್ತಾಯನು ಜನರು ಹೊರುತ್ತಿದ್ದ ಒಂದು ನಿರ್ದಿಷ್ಟ ಹೊರೆಯ ಕುರಿತು ಸುಪರಿಚಿತನಾಗಿದ್ದನು. (ಮತ್ತಾಯ 9:9; ಮಾರ್ಕ 2:14) ಯೇಸುವಿನ ಕಾಲದ ದಿನನಿತ್ಯದ ಜೀವನ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಹಣದ ರೂಪದಲ್ಲಿ ಮತ್ತು ವಸ್ತುರೂಪದಲ್ಲಿ [ಯೆಹೂದ್ಯರು] ಸಲ್ಲಿಸಬೇಕಿದ್ದ ತೆರಿಗೆಗಳು ಅತಿರೇಕ ಭಾರವಾಗಿದ್ದವು, ಮತ್ತು ಅವರಿಗೆ ಪೌರತೆರಿಗೆ ಮತ್ತು ಧಾರ್ಮಿಕ ತೆರಿಗೆಗಳೆಂಬ ಎರಡು ರೀತಿಯ ತೆರಿಗೆಗಳು ಏಕಕಾಲದಲ್ಲಿ ಚಾಲ್ತಿಯಲಿದ್ಲುದ್ದರಿಂದ, ಅವು ಇನ್ನೂ ಹೆಚ್ಚು ಭಾರಹಾಕಿದವು; ಎರಡರಲ್ಲಿ ಒಂದೂ ಹಗುರವಾಗಿರಲಿಲ್ಲ.”
6. (ಎ) ಯೇಸುವಿನ ಕಾಲದಲ್ಲಿ ಬಳಕೆಯಲ್ಲಿದ್ದ ತೆರಿಗೆಯ ವ್ಯವಸ್ಥೆಯ ಯಾವುದಾಗಿತ್ತು? (ಬಿ) ಸುಂಕದವರಿಗೆ ಅಂತಹ ಕುಖ್ಯಾತಿ ಇದ್ದದ್ದೇಕೆ? (ಸಿ) ತನ್ನ ಜೊತೆ ಕ್ರೈಸ್ತರಿಗೆ ಯಾವ ಮರುಜ್ಞಾಪನವನ್ನು ಕೊಡುವ ಅಗತ್ಯವು ಪೌಲನಿಗನಿಸಿತು?
6 ಇದೆಲ್ಲವನ್ನು ವಿಶೇಷ ಹೊರೆಯಾಗಿ ಮಾಡಿದ್ದು ಆ ಕಾಲದ ಸುಂಕ ವ್ಯವಸ್ಥೆಯೇ. ರೋಮನ್ ಅಧಿಕಾರಿಗಳು ಅತ್ಯಂತ ಹೆಚ್ಚು ಬೆಲೆಕೊಡುವೆವೆಂದು ಹೇಳಿದವರಿಗೆ ಪ್ರಾಂತಗಳ ತೆರಿಗೆ ವಸೂಲಿಯ ಹಕ್ಕನ್ನು ಗುತ್ತಿಗೆಗೆ ಕೊಡುತ್ತಿದ್ದರು. ಸರದಿಯಲ್ಲಿ ಅವರು, ಕಾರ್ಯತಃ ತೆರಿಗೆ ವಸೂಲಿಯ ಕೆಲಸದ ಮೇಲ್ವಿಚಾರಣೆ ನಡೆಸಲು ಸ್ಥಳಿಕ ಸಮುದಾಯಗಳ ಜನರನ್ನು ಕೆಲಸಕ್ಕೆ ಹಿಡಿಯುತ್ತಿದ್ದರು. ಲಾಭಗಳಿಸುವ ಯೋಜನೆಯಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಕಮಿಶನ್ ಅಥವಾ ತನ್ನ ಪಾಲಿನ ಲಾಭವನ್ನು ಕೂಡಿಸುವುದರಲ್ಲಿ ಪೂರ್ಣ ನ್ಯಾಯಸಮ್ಮತನೆಂದು ಭಾವಿಸಿದನು. ಉದಾಹರಣೆಗೆ, “ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಸುಂಕದ ಗುತ್ತಿಗೆದಾರನು ಮತ್ತು ಐಶ್ಚರ್ಯವಂತನು,” ಎಂದು ಲೂಕನು ತಿಳಿಸಿದ್ದಾನೆ. (ಲೂಕ 19:2) “ಸುಂಕದ ಗುತ್ತಿಗೆದಾರ” ಜಕ್ಕಾಯನು ಮತ್ತು ಅವನ ಮೇಲ್ವಿಚಾರದ ಕೆಳಗಿನವರು, ಜನರ ದುರವಸ್ಥೆಯ ವೆಚ್ಚದಲ್ಲಿ ಸಂಪತ್ತನ್ನು ಗಳಿಸಿದರೆಂಬುದು ಸುವ್ಯಕ್ತ. ಅಂತಹ ಒಂದು ವ್ಯವಸ್ಥೆಯಿಂದ ತರಲ್ಪಟ್ಟ ಅನ್ಯಾಯ ಮತ್ತು ಭ್ರಷ್ಟಾಚಾರವು, ಸುಂಕದವರನ್ನು ಪಾಪಿಗಳ ಮತ್ತು ವೇಶ್ಯೆಯರ ದರ್ಜೆಗೆ ಇಳಿಸುವಂತೆ ಜನರಿಗೆ ಕಾರಣವನ್ನಿತಿತ್ತು, ಪ್ರಾಯಶಃ ಹೆಚ್ಚಿನ ಸಂದರ್ಭಗಳಲ್ಲಿ ಅವರದಕ್ಕೆ ಅರ್ಹರಾಗಿದ್ದರು. (ಮತ್ತಾಯ 9:10; 21:31, 32; ಮಾರ್ಕ 2:15; ಲೂಕ 7:34) ಅದು ಬಹಳ ಮಟ್ಟಿಗೆ ಹೊರಲಾಗದ ಹೊರೆಯೆಂದು ಜನರು ಭಾವಿಸಿದ್ದರಿಂದ, ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರಿಗೆ, ಅವರು ರೋಮನ್ ನೊಗದಡಿಯಲ್ಲಿ ಸಿಡುಗುಟದ್ಟೆ, “ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು” ಸಲ್ಲಿಸುವ ಕುರಿತು ಮರುಜ್ಞಾಪನ ಕೊಡುವ ಅಗತ್ಯವನ್ನು ಕಂಡನು.—ರೋಮಾಪುರ 13:7ಎ; ಹೋಲಿಸಿ ಲೂಕ 23:2.
7. ರೋಮನ್ ದಂಡನೆಯ ಕಾನೂನುಗಳು ಜನರ ಹೊರೆಗೆ ಹೆಚ್ಚನ್ನು ಕೂಡಿಸಿದ್ದು ಹೇಗೆ?
7 ಕ್ರೈಸ್ತರು “ಯಾರಿಗೆ ಭಯವೋ ಅವರಿಗೆ ಭಯವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು” ಸಹ ಸಲ್ಲಿಸುವಂತೆ ಪೌಲನು ಅವರಿಗೆ ಮರುಜ್ಞಾಪನ ಕೊಟ್ಟನು. (ರೋಮಾಪುರ 13:7ಬಿ) ರೋಮನರು ತಮ್ಮ ದಂಡನೆಯ ಕಾನೂನುಗಳ ಕ್ರೌರ್ಯ ಮತ್ತು ಕಾಠಿಣ್ಯಕ್ಕೆ ಪ್ರಸಿದ್ಧರಾಗಿದ್ದರು. ಜನರನ್ನು ಅಧೀನದಲಿಡ್ಲಲಿಕ್ಕಾಗಿ ಕೊರಡೆ ಹೊಡೆತ, ಚೆಡಿ ಹೊಡೆತ, ಕ್ರೂರ ಸೆರೆವಾಸದ ಅವಧಿಗಳು, ಮತ್ತು ಶಿರಚ್ಛೆದನಗಳೂ ಆಗಿಂದಾಗ್ಗೆ ಬಳಸಲ್ಪಡುತ್ತಿದ್ದವು. (ಲೂಕ 23:32, 33; ಅ. ಕೃತ್ಯಗಳು 22:24, 25) ಯೆಹೂದ್ಯ ಮುಖಂಡರಿಗೆ ಸಹ ಯುಕ್ತವಾಗಿ ಕಾಣುವಲ್ಲಿ ಅಂತಹ ದಂಡನೆಯನ್ನು ನಿರ್ವಹಿಸುವುದಕ್ಕೆ ಅಧಿಕಾರವನ್ನು ಕೊಡಲಾಗಿತ್ತು. (ಮತ್ತಾಯ 10:17; ಅ. ಕೃತ್ಯಗಳು 5:40) ಅಂತಹ ವ್ಯವಸ್ಥೆಯ ಅದರ ಕೆಳಗೆ ಜೀವಿಸುವ ಯಾವನಿಗಾದರೂ ಅತ್ಯಂತ ದಬ್ಬಾಳಿಕೆಯ ಹೌದು, ಗೋಳುಗುಟ್ಟಿಸುವ ವ್ಯವಸ್ಥೆಯಾಗಿತ್ತು ಖಂಡಿತ.
8. ಧಾರ್ಮಿಕ ಮುಖಂಡರು ಜನರ ಮೇಲೆ ಒಂದು ಹೊರೆಯನ್ನು ಹೊರಿಸಿದ್ದು ಹೇಗೆ?
8 ಆದರೂ, ರೋಮನ್ ತೆರಿಗೆಗಳು ಮತ್ತು ನಿಯಮಗಳಿಗಿಂತಲೂ ಹೆಚ್ಚು ಕೆಟ್ಟದ್ದಾಗಿದುದ್ದು ಆ ಕಾಲದ ಧಾರ್ಮಿಕ ಮುಖಂಡರಿಂದ ಸಾಮಾನ್ಯ ಜನರ ಮೇಲೆ ಹೊರಿಸಲ್ಪಟ್ಟ ಹೊರೆಯೇ. ವಾಸ್ತವದಲ್ಲಿ, “ಕಷ್ಟಪಡುವವರೇ, ಹೊರೆಹೊತ್ತವರೇ,” ಎಂದು ಜನರನ್ನು ವರ್ಣಿಸಿದಾಗ ಯೇಸುವಿಗಿದ್ದ ಮುಖ್ಯ ಚಿಂತೆಯು ಇದೇ ಆಗಿ ತೋರಿತು. ದೊಬ್ಬಲ್ಪಟ್ಟ ಜನರಿಗೆ ನಿರೀಕ್ಷೆ ಮತ್ತು ಸಾಂತ್ವನವನ್ನು ಕೊಡುವ ಬದಲಾಗಿ, ಧಾರ್ಮಿಕ ಮುಖಂಡರು “ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು,” ಎಂದು ಯೇಸು ಹೇಳಿದನು. (ಮತ್ತಾಯ 23:4; ಲೂಕ 11:46) ಸುವಾರ್ತೆಗಳು, ಧಾರ್ಮಿಕ ಮುಖಂಡರನ್ನು—ವಿಶೇಷವಾಗಿ ಶಾಸ್ತ್ರಿಗಳನ್ನು ಮತ್ತು ಫರಿಸಾಯರನ್ನು—ಗರ್ವಿಷ್ಟರೂ, ಕಲ್ಲೆದೆಯವರೂ, ಮತ್ತು ಕಪಟಿಗಳ ಗುಂಪಾಗಿಯೂ ಮಾಡಿರುವ ಸುಸ್ಪಷ್ಟವಾಗಿದ ಚಿತ್ರೀಕರಣವನ್ನು ಒಬ್ಬನು ಗಮನಿಸದಿರಲು ಸಾಧ್ಯವಿಲ್ಲ. ಅವರು ಸಾಮಾನ್ಯ ಜನರನ್ನು ನಿರಕ್ಷಕರೂ ಅಶುದ್ಧರೂ ಆದವರಂತೆ ತಿರಸ್ಕಾರದಿಂದ ನೋಡಿದರು, ಮತ್ತು ತಮ್ಮ ನಡುವೆ ಇದ್ದ ಪರದೇಶಿಗಳನ್ನು ಕಡೆಗಣಿಸಿದರು. ಅವರ ಮನೋಭಾವದ ಕುರಿತು ಒಂದು ವ್ಯಾಖ್ಯಾನವು ವೀಕ್ಷಿಸುವುದು: “ಇಂದಿನ ಕಾಲದಲ್ಲಿ ಕುದುರೆಯ ಮೇಲೆ ಅಧಿಕ ಹೊರೆಯನ್ನು ಹೇರುವ ಮನುಷ್ಯನು ಕಾನೂನಿನ ಮುಂದೆ ಆರೋಪಣೀಯನಾಗುತ್ತಾನೆ. ಧಾರ್ಮಿಕ ತರಬೇತು ಇಲ್ಲದಿದ್ದ ‘ಸಾಮಾನ್ಯ ಜನರ’ ಮೇಲೆ ಮೋಶೆಯ ಇಡೀ ಧರ್ಮಶಾಸ್ತ್ರದ 613 ನಿಯಮಗಳನ್ನು ಹೊರಿಸಿದ, ಹಾಗೂ, ಅವರಿಗೆ ನೆರವಾಗಲು ಏನನ್ನೂ ಮಾಡದಿದ್ದರೂ ಅವರನ್ನು ಭಕ್ತಿಹೀನರೆಂದು ಖಂಡಿಸಿದ ಮನುಷ್ಯನ ಕುರಿತೇನು?” ನಿಶ್ಚಯವಾಗಿಯೂ ನಿಜ ಹೊರೆಯು, ಮೋಶೆಯ ನಿಯಮಶಾಸ್ತ್ರವಲ್ಲ, ಬದಲಾಗಿ ಜನರ ಮೇಲೆ ಹೊರಿಸಲ್ಪಟ್ಟ ಸಂಪ್ರದಾಯದ ರಾಶಿಯಾಗಿತ್ತು.
ಕಷ್ಟದ ನಿಜ ಕಾರಣ
9. ಯೇಸುವಿನ ಕಾಲದ ಜನರಲ್ಲಿದ್ದ ಪರಿಸ್ಥಿತಿಗಳು ಸೊಲೊಮೋನನ ಕಾಲದವುಗಳಿಗೆ ಹೇಗೆ ಹೋಲಿಕೆಯಾದವು?
9 ಕೆಲವೊಮ್ಮೆ ಜನರ ಮೇಲೆ ಹೊರಿಸಲ್ಪಟ್ಟ ಆರ್ಥಿಕ ಹೊರೆಯು ಎಷ್ಟು ಭಾರವಾಗಿತ್ತೆಂದರೆ, ದಾರಿದ್ರ್ಯವು ವ್ಯಾಪಕವಾಗಿ ಹರಡಿತ್ತು. ಇಸ್ರಾಯೇಲ್ಯರಿಗೆ ಮೋಶೆಯ ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟ ನ್ಯಾಯಸಮ್ಮತ ತೆರಿಗೆಗಳನ್ನು ಸಲ್ಲಿಸಲಿಕ್ಕಿತ್ತು. ಬಳಿಕ ಸೊಲೊಮೋನನ ಆಳಿಕೆಯ ಸಮಯದಲ್ಲಿ, ದೇವಾಲಯ ಮತ್ತು ಇತರ ಭವನಗಳನ್ನು ಕಟ್ಟುವಂತಹ ಅತಿ ದುಬಾರಿಯಾದ ರಾಷ್ಟ್ರೀಯ ಯೋಜನೆಗಳಿಗೆ ಜನರು ಸಹಾಯ ಮಾಡಿದರು. (1 ಅರಸುಗಳು 7:1-8; 9:17-19) ಆದರೂ ಜನರು, “ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು. . . . ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು,” ಎಂದು ಬೈಬಲು ನಮಗನ್ನುತ್ತದೆ. (1 ಅರಸುಗಳು 4:20, 25) ಈ ವ್ಯತ್ಯಾಸಕ್ಕೆ ಕಾರಣ ಯಾವುದು?
10. ಒಂದನೆಯ ಶತಮಾನದೊಳಗೆ ಇಸ್ರಾಯೇಲಿನ ಆ ಸನ್ನಿವೇಶಕ್ಕೆ ಯಾವುದು ಕಾರಣವಾಗಿತ್ತು?
10 ಜನಾಂಗವು ಸತ್ಯಾರಾಧನೆಯಲ್ಲಿ ದೃಢವಾಗಿ ನಿಂತಷ್ಟು ಸಮಯ, ಅವರು ಯೆಹೋವನ ಅನುಗ್ರಹವನ್ನು ಅನುಭವಿಸಿದರು ಮತ್ತು ಭಾರಿ ರಾಷ್ಟ್ರೀಯ ವೆಚ್ಚವಿದ್ದಾಗ್ಯೂ ಸುರಕ್ಷೆ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಟ್ಟರು. ಹಾಗಿದ್ದರೂ, ಅವರು “[ಆತನ] ಆಜ್ಞಾವಿಧಿಗಳನ್ನು ಕೈಕೊಳ್ಳದೆ [ಆತನನ್ನು] ಬಿಟ್ಟರೆ,” ಗಂಭೀರ ಪ್ರತಿಕೂಲತೆಗಳನ್ನು ಅನುಭವಿಸಲಿದ್ದರೆಂದು ಯೆಹೋವನು ಎಚ್ಚರಿಸಿದನು. ವಾಸ್ತವಿಕವಾಗಿ, “ಇಸ್ರಾಯೇಲ್ಯರು ಎಲ್ಲಾ ಜನಾಂಗಗಳವರ ಗಾದೆಗೂ ನಿಂದೆಗೂ ಆಸ್ಪದರಾಗ[ಲಿದ್ದರು].” (1 ಅರಸುಗಳು 9:6, 7) ವಿಷಯಗಳು ಸರಿಯಾಗಿ ಹಾಗೆಯೆ ನಡೆದವು. ಇಸ್ರಾಯೇಲು ವಿದೇಶೀ ದಬ್ಬಾಳಿಕೆಯ ಕೆಳಗೆ ಬಂತು, ಮತ್ತು ಒಮ್ಮೆ ವೈಭವಯುಕ್ತವಾಗಿದ್ದ ರಾಜ್ಯವು ಬರಿಯ ನೆಲಸುನಾಡಿನ ಮಟ್ಟಕ್ಕೆ ಇಳಿಸಲ್ಪಟ್ಟಿತು. ಆತ್ಮಿಕ ಹಂಗುಗಳನ್ನು ಅಸಡ್ಡೆಮಾಡಿದುದಕ್ಕಾಗಿ ಎಂತಹ ಭೀಕರ ಫಲಿತಾಂಶಗಳು!
11. ಜನರು “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ” ಎಂದು ಯೇಸು ಎಣಿಸಿದ್ದೇಕೆ?
11 ತಾನು ಕಂಡ ಜನರು “ತೊಳಲಿ ಬಳಲಿ ಹೋಗಿದ್ದಾರಲ್ಲ” ಎಂದು ಯೇಸು ಭಾವಿಸಿದ್ದೇಕೆಂಬುದನ್ನು ತಿಳಿದುಕೊಳ್ಳಲು ಇದೆಲ್ಲವು ನಮಗೆ ನೆರವಾಗುತ್ತದೆ. ಇವರು ಇಸ್ರಾಯೇಲ್ಯರು, ಯೆಹೋವನ ಜನರು, ಒಟ್ಟಿನಲ್ಲಿ ದೇವರ ನಿಯಮಕ್ಕನುಸಾರ ಜೀವಿಸಲು ಮತ್ತು ತಮ್ಮ ಆರಾಧನೆಯನ್ನು ಸ್ವೀಕಾರಾರ್ಹವಾದ ರೀತಿಯಲ್ಲಿ ಮುಂದುವರಿಸಲು ಪ್ರಯತ್ನಿಸುತ್ತಿದ್ದವರು. ಆದಾಗ್ಯೂ, ಅವರು ರಾಜಕೀಯ ಮತ್ತು ವಾಣಿಜ್ಯ ಅಧಿಕಾರಗಳಿಂದ ಮಾತ್ರವಲ್ಲ ಅವರೊಳಗಿದ್ದ ಧರ್ಮಭ್ರಷ್ಟ ಧಾರ್ಮಿಕ ಮುಖಂಡರಿಂದಲೂ ದೋಚಲ್ಪಟ್ಟರು ಮತ್ತು ತುಳಿಯಲ್ಪಟ್ಟರು. ಅವರು “ಕುರುಬನಿಲ್ಲದ ಕುರಿಗಳ ಹಾಗೆ” ಇದ್ದರು ಏಕೆಂದರೆ ಅವರ ಪರಾಮರಿಕೆಗಾಗಿ ಮತ್ತು ಅವರ ಪರವಾಗಿ ವಾದಿಸಲು ಯಾರೂ ಇದ್ದಿರಲಿಲ್ಲ. ಕಠೋರ ವಾಸ್ತವಿಕತೆಗಳನ್ನು ನಿಭಾಯಿಸಲಿಕ್ಕಾಗಿ ಅವರಿಗೆ ಸಹಾಯವು ಬೇಕಾಗಿತ್ತು. ಯೇಸುವಿನ ಪ್ರೀತಿಯ ಹಾಗೂ ಸೌಮ್ಯ ಆಮಂತ್ರಣವು ಎಷ್ಟು ಸಮಯೋಚಿತವಾಗಿತ್ತು!
ಇಂದು ಯೇಸುವಿನ ಆಮಂತ್ರಣ!
12. ಇಂದು ದೇವರ ಸೇವಕರು ಮತ್ತು ಇತರ ಯಥಾರ್ಥ ಜನರು ಯಾವ ಒತ್ತಡಗಳನ್ನು ಅನುಭವಿಸುತ್ತಾರೆ?
12 ಅನೇಕ ವಿಧಗಳಲ್ಲಿ ಇಂದು ವಿಷಯಗಳು ಅದೇ ರೀತಿಯಾಗಿವೆ. ಪ್ರಾಮಾಣಿಕ ಜೀವನವನ್ನು ನಡೆಸಲು ಪ್ರಯತ್ನಿಸುತ್ತಿರುವ ಯಥಾರ್ಥ ಜನರು, ಭ್ರಷ್ಟ ವಿಷಯಗಳ ವ್ಯವಸ್ಥೆಯ ಒತ್ತಡಗಳನ್ನು ಮತ್ತು ನಿರ್ಬಂಧಗಳನ್ನು ಸಹಿಸುವುದು ಕಷ್ಟಕರವೆಂದು ಕಂಡುಕೊಳ್ಳುತ್ತಾರೆ. ಯೆಹೋವನಿಗೆ ತಮ್ಮ ಜೀವವನ್ನು ಸಮರ್ಪಿಸಿಕೊಂಡವರು ಸಹ ಭ್ರಷ್ಟ ಪ್ರಭಾವಗಳಿಂದ ಅಬಾಧಿತರಲ್ಲ. ಯೆಹೋವನ ಸೇವಕರಲ್ಲಿ ಕೆಲವರು, ಹಾಗೆ ಮಾಡಲು ಅವರಿಗೆ ಮನಸ್ಸಿದ್ದರೂ, ತಮ್ಮೆಲ್ಲಾ ಜವಾಬ್ದಾರಿಗಳಿಗನುಸಾರ ಜೀವಿಸುವುದನ್ನು ಅಧಿಕಾಧಿಕ ಕಷ್ಟಕರವಾಗಿ ಕಾಣುತ್ತಿದ್ದಾರೆಂದು ವರದಿಗಳು ತೋರಿಸುತ್ತವೆ. ಭಾರದಿಂದ ಕುಗ್ಗಿದ, ದಣಿದು ಹೋದ, ಬಳಲಿ ಹೋದ ಅನಿಸಿಕೆ ಅವರಿಗಾಗುತ್ತದೆ. ತಮ್ಮ ಯೋಚನೆಗಳನ್ನು ಸ್ತಿಮಿತಕ್ಕೆ ತಂದುಕೊಳ್ಳುವುದಕ್ಕಾಗಿ, ಚಿಂತೆಯೆಲ್ಲವನ್ನು ಬದಿಗೊತ್ತಿ, ಜನರ ಕಣ್ಣಿಗೆ ಮರೆಯಾಗಿ ಎಲ್ಲಿಗಾದರೂ ಹೋಗಿಬಿಡುವುದೆಷ್ಟು ಉಪಶಮನ ಎಂಬ ಅನಿಸಿಕೆಯೂ ಕೆಲವರಿಗಾಗುತ್ತದೆ. ನಿಮಗೆಂದಾದರೂ ಆ ರೀತಿಯ ಅನಿಸಿಕೆಯಾಗಿದೆಯೊ? ನಿಮ್ಮ ಆಪ್ತರಲ್ಲಿ ಒಬ್ಬರು ಆ ಸನ್ನಿವೇಶದಲ್ಲಿರುವುದು ನಿಮಗೆ ಗೊತ್ತುಂಟೊ? ಹೌದು, ಹೃದಯೋಲ್ಲಾಸಗೊಳಿಸುವ ಯೇಸುವಿನ ಆಮಂತ್ರಣವು ಇಂದು ನಮಗೆ ಬಹಳಷ್ಟು ಅರ್ಥದಲ್ಲಿರುತ್ತದೆ.
13. ಸಾಂತ್ವನವನ್ನೂ ವಿಶ್ರಾಂತಿಯನ್ನೂ ಕಂಡುಕೊಳ್ಳಲು ಯೇಸು ನಮಗೆ ಸಹಾಯ ಮಾಡಬಲ್ಲನೆಂದು ನಾವು ನಿಶ್ಚಯದಿಂದಿರಬಲೆವ್ಲೇಕೆ?
13 ತನ್ನ ಪ್ರೀತಿಯುಳ್ಳ ಆಮಂತ್ರಣವನ್ನು ನೀಡುವ ಮುಂಚೆ, ಯೇಸು ಹೇಳಿದ್ದು: “ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ.” (ಮತ್ತಾಯ 11:27) ಯೇಸು ಮತ್ತು ಆತನ ತಂದೆಯ ನಡುವಣ ಈ ಆಪ್ತ ಸಂಬಂಧದ ಕಾರಣ, ಯೇಸುವಿನ ಆಮಂತ್ರಣವನ್ನು ಸ್ವೀಕರಿಸಿ ಆತನ ಶಿಷ್ಯರಾಗುವ ಮೂಲಕ, “ಸಂತೈಸುವ ದೇವರೂ” ಆದ ಯೆಹೋವನೊಂದಿಗೆ ಒಂದು ಒತ್ತಾದ, ವೈಯಕ್ತಿಕ ಸಂಬಂಧದೊಳಗೆ ನಾವು ಪ್ರವೇಶಿಸಬಲ್ಲೆವು ಎಂಬ ಆಶ್ವಾಸನೆ ನಮಗಿದೆ. (2 ಕೊರಿಂಥ 1:3; ಹೋಲಿಸಿ ಯೋಹಾನ 14:6.) ಅದಲ್ಲದೆ ‘ಎಲ್ಲವೂ ಆತನಿಗೆ ಒಪ್ಪಿಸಲ್ಪಟ್ಟಿದೆ,’ ಆದುದರಿಂದ ನಮ್ಮ ಹೊರೆಗಳನ್ನು ಹೌರಗೊಳಿಸಲು ಶಕ್ತಿಯೂ ಅಧಿಕಾರವೂ ಇರುವುದು ಯೇಸು ಕ್ರಿಸ್ತನಿಗೆ ಮಾತ್ರ. ಯಾವ ಹೊರೆಗಳು? ಭ್ರಷ್ಟ ರಾಜಕೀಯ, ವಾಣಿಜ್ಯ, ಹಾಗೂ ಧಾರ್ಮಿಕ ವ್ಯವಸ್ಥೆಗಳಿಂದ ಹೊರಿಸಲ್ಪಟ್ಟವುಗಳು, ಹಾಗೂ ನಾವು ಬಾಧ್ಯತೆಯಾಗಿ ಹೊಂದಿದ ಪಾಪ ಮತ್ತು ಅಸಂಪೂರ್ಣತೆಯ ಹೊರೆಯೇ. ಪ್ರಾರಂಭದಿಂದಲೇ, ಎಂತಹ ಉತ್ತೇಜಕ ಹಾಗೂ ಪುನರಾಶ್ವಾಸನೆಯ ವಿಚಾರವು!
14. ಯಾವ ಕಷ್ಟಪಡುವಿಕೆಯಿಂದ ಯೇಸು ಪುನರ್ಚೈತನ್ಯವನ್ನು ಒದಗಿಸಶಕ್ತನು?
14 ಯೇಸು ಮುಂದುವರಿಸುತ್ತಾ ಅಂದದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.” (ಮತ್ತಾಯ 11:28) ನಿಶ್ಚಯವಾಗಿ, ಪರಿಶ್ರಮದ ಕೆಲಸದ ವಿರುದ್ಧವಾಗಿ ಯೇಸು ಮಾತಾಡುತ್ತಿದ್ದುದಲ್ಲ. ಯಾಕೆಂದರೆ ತಮಗಿದ್ದ ಕೆಲಸವನ್ನು ಪರಿಶ್ರಮಪಟ್ಟು ಮಾಡುವಂತೆ ಆತನು ಆಗಿಂದಾಗ್ಗೆ ತನ್ನ ಶಿಷ್ಯರಿಗೆ ಬುದ್ಧಿಹೇಳಿದನು. (ಲೂಕ 13:24) ಆದರೆ “ಕಷ್ಟಪಡುವವರೇ,” (“ಗೇಯುವವರೇ,” ಕಿಂಗ್ಡಂ ಇಂಟರ್ಲಿನಿಯರ್) ಎಂಬುದು ಹೆಚ್ಚಾಗಿ ಯಾವ ಸಾರ್ಥಕ ಪ್ರತಿಫಲವೂ ಇಲ್ಲದ ದೀರ್ಘವೂ ಆಯಾಸಕರವೂ ಆದ ಜೀತವನ್ನು ಸೂಚಿಸುತ್ತದೆ. “ಹೊರೆಹೊತ್ತವರೇ,” ಎಂಬುದು ಸಾಮಾನ್ಯ ಶಕಿಗ್ತಿಂತ ಮಿಗಿಲಾದ ಹೊರೆ ಹೊರಿಸಲ್ಪಟ್ಟವರನ್ನು ಸೂಚಿಸುತ್ತದೆ. ಇದರ ವ್ಯತ್ಯಾಸವನ್ನು ಒಂದು ಗುಪ್ತ ನಿಧಿಗಾಗಿ ಅಗೆಯುತ್ತಿರುವ ಒಬ್ಬ ಮನುಷ್ಯನ ಮತ್ತು ಕಾರ್ಮಿಕ ಶಿಬಿರದಲ್ಲಿ ಹೊಂಡಗಳನ್ನು ಅಗೆಯುತ್ತಿರುವ ಮನುಷ್ಯನ ನಡುವಣ ಸ್ಥಿತಿಗೆ ಹೋಲಿಸಸಾಧ್ಯವಿದೆ. ಅವರಿಬ್ಬರೂ ಒಂದೇ ರೀತಿಯ ಕಷ್ಟದ ಕೆಲಸವನ್ನು ಮಾಡುತ್ತಿದ್ದಾರೆ. ಒಬ್ಬನಿಗೆ ಅದು ಆತುರದಿಂದ ಕೈಕೊಂಡ ಕೆಲಸವಾದರೂ, ಇನ್ನೊಬ್ಬನಿಗೆ ಅದು ಕೊನೆಯಿಲ್ಲದ ದುಡಿಮೆ. ವ್ಯತ್ಯಾಸವನ್ನು ಮಾಡುವಂತಹದ್ದು ಕೆಲಸದ ಉದ್ದೇಶ, ಅಥವಾ ಉದ್ದೇಶದ ಕೊರತೆಯೇ.
15. (ಎ) ನಾವು ನಮ್ಮ ಹೆಗಲುಗಳ ಮೇಲೆ ಭಾರವಾದ ಹೊರೆಯನ್ನು ಹೊರುತ್ತೇವೆಂದು ನಮಗನಿಸುವುದಾದರೆ, ಯಾವ ಪ್ರಶ್ನೆಗಳನ್ನು ನಾವು ಸ್ವತಃ ಕೇಳಿಕೊಳ್ಳಬೇಕು? (ಬಿ) ನಮ್ಮ ಹೊರೆಗಳ ಮೂಲದ ಕುರಿತು ಏನು ಹೇಳಸಾಧ್ಯವಿದೆ?
15 ನೀವು ‘ಕಷ್ಟಪಡುವವರೂ ಹೊರೆಹೊತ್ತವರೂ’ ಆಗಿದ್ದೀರಿ, ನಿಮ್ಮ ಸಮಯ ಮತ್ತು ಶಕ್ತಿಯ ಮೇಲೆ ತೀರ ಹೆಚ್ಚಾದ ನಿರ್ಬಂಧಗಳಿವೆಯೆಂಬ ಅನಿಸಿಕೆ ನಿಮಗಾಗುತ್ತದೊ? ನೀವು ಹೊರುತ್ತಿರುವ ಹೊರೆಗಳು ತೀರ ಭಾರವಾಗಿ ನಿಮಗೆ ತೋರುತ್ತವೆಯೆ? ಹಾಗಿರುವಲ್ಲಿ, ‘ನಾನು ಯಾತಕ್ಕಾಗಿ ಕಷ್ಟಪಡುತ್ತಿದ್ದೇನೆ? ಯಾವ ವಿಧದ ಹೊರೆಯನ್ನು ನಾನು ಹೊತ್ತಿರುತ್ತೇನೆ?’ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳುವುದು ಸಹಾಯಕವಾದೀತು. ಈ ವಿಷಯದಲ್ಲಿ ಬೈಬಲ್ ವ್ಯಾಖ್ಯಾನಕಾರರೊಬ್ಬರು 80 ವರ್ಷಗಳಿಗಿಂತಲೂ ಹೆಚ್ಚು ಹಿಂದೆ ವೀಕ್ಷಿಸಿದ್ದು: “ಜೀವನದ ಹೊರೆಗಳನ್ನು ನಾವು ಗಮನಿಸುವುದಾದರೆ, ಅವು ಎರಡು ವರ್ಗಗಳಿಗೆ ಬೀಳುತ್ತವೆ; ಇವನ್ನು ಸ್ವಯಂಕೃತ ಮತ್ತು ಅನಿವಾರ್ಯ ಎಂಬುದಾಗಿ ನಾವು ಹೆಸರಿಸಬಹುದು. ನಮ್ಮ ಸ್ವಂತ ಕ್ರಿಯೆಗಳಿಂದಾಗಿ ಬರತಕ್ಕವುಗಳು, ಮತ್ತು ನಮ್ಮ ಸ್ವಂತ ಕ್ರಿಯೆಗಳಿಂದ ಬಾರದೆ ಇರುವವುಗಳು.” ಅವರು ಬಳಿಕ ಕೂಡಿಸಿದ್ದು: “ಕಟ್ಟುನಿಟ್ಟಿನ ಸ್ವಪರೀಕ್ಷಣೆಯ ಬಳಿಕ, ನಮ್ಮ ಇಡೀ ಹೊರೆಗಳಲ್ಲಿ ಬಹು ದೊಡ್ಡ ಭಾಗವು ನಮ್ಮ ಸ್ವಯಂಕೃತವೆಂದು ಕಾಣಲು ನಮ್ಮಲ್ಲಿ ಹೆಚ್ಚಿನವರು ಆಶ್ಚರ್ಯಪಟ್ಟೇವು.”
16. ಯಾವ ಹೊರೆಗಳನ್ನು ನಾವು ನಮ್ಮ ಮೇಲೆ ಅವಿವೇಕದಿಂದ ಹೊರಿಸಿಕೊಳ್ಳಬಹುದು?
16 ನಮ್ಮ ಮೇಲೆ ನಾವು ತಂದುಕೊಳ್ಳಬಹುದಾದ ಕೆಲವು ಹೊರೆಗಳು ಯಾವುವು? ಇಂದು ನಾವು ಒಂದು ಪ್ರಾಪಂಚಿಕ, ಭೋಗಪ್ರಿಯ, ಮತ್ತು ಅನೈತಿಕ ಲೋಕದಲ್ಲಿ ಜೀವಿಸುತ್ತೇವೆ. (2 ತಿಮೊಥೆಯ 3:1-5) ಸಮರ್ಪಿತ ಕ್ರೈಸ್ತರು ಸಹ ಲೋಕದ ಉಡುಪಿನ ಫ್ಯಾಷನ್ಗಳಿಗೆ ಮತ್ತು ಜೀವನ ಶೈಲಿಗಳಿಗೆ ಹೊಂದಿಸಿಕೊಳ್ಳುವ ಸತತವಾದ ಒತ್ತಡದ ಕೆಳಗಿದ್ದಾರೆ. ಅಪೊಸ್ತಲ ಯೋಹಾನನು “ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ”ದ ಕುರಿತು ಬರೆದನು. (1 ಯೋಹಾನ 2:16) ಇವು ನಮ್ಮನ್ನು ಸುಲಭವಾಗಿ ಬಾಧಿಸಬಲ್ಲ ಶಕ್ತಿಯುಕ್ತ ಪ್ರಭಾವಗಳಾಗಿವೆ. ಲೋಕದ ಭೋಗಗಳನ್ನು ಇನ್ನೂ ಹೆಚ್ಚು ಭೋಗಿಸಲಿಕ್ಕಾಗಿ ಅಥವಾ ಒಂದು ನಿರ್ದಿಷ್ಟವಾದ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ, ಕೆಲವರು ಕಡು ಸಾಲಕ್ಕೆ ಬೀಳಲೂ ಸಿದ್ಧರಾಗಿದ್ದಾರೆಂದು ತಿಳಿದುಬರುತ್ತದೆ. ಆಮೇಲೆ ತಮ್ಮ ಸಾಲಗಳನ್ನು ಸಲ್ಲಿಸಲು ಹಣವನ್ನು ಪಡೆದುಕೊಳ್ಳಲಿಕ್ಕಾಗಿ, ಹೆಚ್ಚು ಮೊತ್ತದ ಸಮಯವನ್ನು ಕೆಲಸದಲ್ಲಿ ವ್ಯಯಿಸಬೇಕಾಗಿದೆ, ಇಲ್ಲವೇ ಹಲವಾರು ಕೆಲಸಗಳನ್ನು ಕೈಕೊಳ್ಳಲೇಬೇಕಾಗಿದೆಯೆಂದು ಕಂಡುಕೊಳ್ಳುತ್ತಾರೆ.
17. ಯಾವ ಸನ್ನಿವೇಶವು, ಹೊರೆಯನ್ನು ಹೊರಲು ಇನ್ನೂ ಹೆಚ್ಚು ಕಷ್ಟಕರವನ್ನಾಗಿ ಮಾಡಬಹುದು, ಮತ್ತು ಇದನ್ನು ಹೇಗೆ ಸರಿಪಡಿಸಸಾಧ್ಯವಿದೆ?
17 ಬೇರೆಯವರಲ್ಲಿರುವ ವಸ್ತುಗಳನ್ನು ಮತ್ತು ಅವರು ಮಾಡುವ ಕೆಲವು ವಿಷಯಗಳನ್ನು ಹೊಂದುವುದು ಮತ್ತು ಮಾಡುವುದು ತಪ್ಪಲ್ಲವೆಂದು ಒಬ್ಬ ವ್ಯಕ್ತಿಯು ವಿವೇಚಿಸಬಹುದಾದರೂ, ಅವನು ಅನಾವಶ್ಯಕವಾಗಿ ತನ್ನ ಹೊರೆಗೆ ಹೆಚ್ಚನ್ನು ಕೂಡಿಸುತ್ತಾನೋ ಇಲ್ಲವೋ ಎಂಬುದನ್ನು ವಿಶ್ಲೇಷಿಸುವುದು ಪ್ರಾಮುಖ್ಯ. (1 ಕೊರಿಂಥ 10:23) ಒಬ್ಬ ವ್ಯಕ್ತಿಯು ಇಂತಿಷ್ಟನ್ನೇ ಹೊರಬಲನ್ಲಾದುದರಿಂದ, ಇನ್ನೊಂದು ಹೊರೆಯನ್ನು ತೆಗೆದುಕೊಳ್ಳಲಿಕ್ಕಾಗಿ ಬೇರೊಂದನ್ನು ತೆಗೆದುಹಾಕಲೇಬೇಕಾಗುತ್ತದೆ. ಅನೇಕಸಾರಿ, ನಮ್ಮ ಆತ್ಮಿಕ ಸುಕ್ಷೇಮಕ್ಕೆ ಆವಶ್ಯಕವಾದ, ವೈಯಕ್ತಿಕ ಬೈಬಲಧ್ಯಯನ, ಕೂಟದ ಉಪಸ್ಥಿತಿ, ಮತ್ತು ಕ್ಷೇತ್ರ ಶುಶ್ರೂಷೆಗಳು ಮೊದಲು ತೆಗೆದುಹಾಕಲ್ಪಡುತ್ತವೆ. ಫಲಿತಾಂಶವು ಆತ್ಮಿಕ ಬಲದ ನಷ್ಟ, ಇದು ಹೊರೆಯನ್ನು ಹೊತ್ತುಕೊಳ್ಳಲು ಇನ್ನೂ ಕಷ್ಟಕರವಾಗಿ ಮಾಡುತ್ತದೆ. ಅಂತಹ ಅಪಾಯದ ಕುರಿತು ಯೇಸು ಕ್ರಿಸ್ತನು ಅಂದದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.” (ಲೂಕ 21:34, 35; ಇಬ್ರಿಯ 12:1) ಒಬ್ಬನು ಹೊರೆಹೊತ್ತವನಾಗಿ ಬಳಲಿ ಹೋಗಿದ್ದಲ್ಲಿ, ಒಂದು ಉರ್ಲನ್ನು ಗುರುತಿಸುವುದೂ ಅದರಿಂದ ಪಾರಾಗುವುದೂ ಅವನಿಗೆ ಕಷ್ಟಕರ.
ಉಪಶಮನ ಮತ್ತು ವಿಶ್ರಾಂತಿ
18. ತನ್ನ ಬಳಿಗೆ ಬಂದವರಿಗೆ ಯೇಸು ಏನನ್ನು ನೀಡಿದನು?
18 ಆದುದರಿಂದ ಪ್ರೀತಿಯಿಂದ ಯೇಸು ಪರಿಹಾರವನ್ನು ನೀಡಿದನು: “ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.” (ಮತ್ತಾಯ 11:28) ಇಲ್ಲಿರುವ “ವಿಶ್ರಾಂತಿಕೊಡು” ಮತ್ತು 29 ನೆಯ ವಚನದಲ್ಲಿರುವ “ವಿಶ್ರಾಂತಿ” ಎಂಬ ಪದಗಳು, ಸೆಪುವ್ಟಜಿಂಟ್ ಭಾಷಾಂತರವು “ಸಬ್ಬತ್ತು” ಅಥವಾ “ಸಬ್ಬತ್ತನ್ನು ಆಚರಿಸುವುದು” ಎಂಬ ಹೀಬ್ರು ಪದವನ್ನು ಭಾಷಾಂತರಿಸಲು ಉಪಯೋಗಿಸುವ ಪದಕ್ಕೆ ಅನುರೂಪವಾದ ಗ್ರೀಕ್ ಪದಗಳಿಂದ ಬರುತ್ತವೆ. (ವಿಮೋಚನಕಾಂಡ 16:23) ಹೀಗೆ, ತನ್ನ ಬಳಿಗೆ ಬರುವವರಿಗೆ ಇನ್ನುಮುಂದೆ ಕೆಲಸ ಮಾಡಲಿಕ್ಕಿಲ್ಲವೆಂದು ಯೇಸು ವಾಗ್ದಾನಿಸಲಿಲ್ಲವಾದರೂ, ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಅವರು ನಡೆಸಲೇಬೇಕಾದ ಕೆಲಸಕ್ಕೆ ಸಿದ್ಧರಾಗಿರುವಂತೆ ಅವರಿಗೆ ವಿಶ್ರಾಂತಿಯನ್ನು ಕೊಡಲಿದ್ದನು.
19. ‘ಯೇಸುವಿನ ಬಳಿಗೆ’ ಒಬ್ಬನು ಹೇಗೆ ಬರುತ್ತಾನೆ?
19 ಆದರೂ, ಒಬ್ಬನು ‘ಯೇಸುವಿನ ಬಳಿಗೆ ಬರು’ ವುದು ಹೇಗೆ? ತನ್ನ ಶಿಷ್ಯರಿಗೆ ಯೇಸು ಅಂದದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24) ಆದುದರಿಂದ, ಯೇಸುವಿನ ಬಳಿಗೆ ಬರಲಿಕ್ಕಾಗಿ, ಒಬ್ಬನು ತನ್ನ ಸ್ವಂತ ಚಿತ್ತವನ್ನು ದೇವರ ಮತ್ತು ಕ್ರಿಸ್ತನ ಚಿತ್ತಕ್ಕೆ ಅಧೀನಪಡಿಸುವುದನ್ನು, ಜವಾಬ್ದಾರಿಯ ಒಂದು ನಿರ್ದಿಷ್ಟ ಹೊರೆಯನ್ನು ಸ್ವೀಕರಿಸುತ್ತಾ ಅದನ್ನು ಸದಾ ಮಾಡುತ್ತಿರುವುದನ್ನು ಸೂಚಿಸುತ್ತದೆ. ಇದೆಲ್ಲವೂ ತೀರ ಹೆಚ್ಚು ನಿರ್ಬಂಧಪಡಿಸುವಿಕೆಯೆ? ಬೆಲೆಯು ತೀರ ಹೆಚ್ಚಾಗಿದೆಯೆ? ಬಳಲಿ ಹೋದವರಿಗೆ ಈ ಪ್ರೀತಿಯ ಆಮಂತ್ರಣವನ್ನು ಕೊಟ್ಟಾದ ಬಳಿಕ ಯೇಸು ಏನಂದನೆಂಬುದನ್ನು ನಾವು ಪರಿಗಣಿಸೋಣ.
ನೀವು ನೆನಪಿಸಿಕೊಳ್ಳಬಲ್ಲಿರೊ?
◻ ಯಾವ ವಿಧದಲ್ಲಿ ಯೇಸುವಿನ ಕಾಲದ ಜನರು ಹೊರೆಹೊತ್ತವರಾಗಿದ್ದರು?
◻ ಜನರ ಕಷ್ಟದೆಸೆಗೆ ನಿಜ ಕಾರಣವು ಏನಾಗಿತ್ತು?
◻ ಭಾರವಾದ ಹೊರೆಹೊತ್ತ ಅನಿಸಿಕೆಯು ನಮಗಾದಲ್ಲಿ, ನಾವು ನಮ್ಮನ್ನು ಹೇಗೆ ಪರೀಕ್ಷಿಸಿಕೊಳ್ಳಬೇಕು?
◻ ಯಾವ ಹೊರೆಗಳನ್ನು ನಾವು ಅವಿವೇಕದಿಂದ ನಮ್ಮ ಮೇಲೆ ಹೊರಿಸಿಕೊಳ್ಳಬಹುದು?
◻ ಯೇಸು ವಾಗ್ದಾನಿಸಿದ ವಿಶ್ರಾಂತಿಯನ್ನು ನಾವು ಹೇಗೆ ಪಡೆದುಕೊಳ್ಳಬಲ್ಲೆವು?
[ಪುಟ 15 ರಲ್ಲಿರುವ ಚಿತ್ರ]
ನಾವು ನಮ್ಮ ಮೇಲೆ ತಂದುಕೊಳ್ಳಬಹುದಾದ ಕೆಲವು ಹೊರೆಗಳು ಯಾವುವು?
[ಪುಟ 15 ರಲ್ಲಿರುವ ಚಿತ್ರ ಕೃಪೆ]
Courtesy of Bahamas Ministry of Tourism