ಯೇಸುವಿನ ಕುರಿತ ಸಂದೇಹಗಳಿಗೆ ನ್ಯಾಯ ಸಮರ್ಥನೆಯಿದೆಯೆ?
ನಜರೇತಿನ ಯೇಸು ನಿಜವಾಗಿ ಅದ್ಭುತಗಳನ್ನು ನಡಿಸಿದನೊ? ಅವನ ಶಿಷ್ಯರು ಘೋಷಿಸಿದ ಪ್ರಕಾರ ಅವನು ಸತ್ತವರೊಳಗಿಂದ ಪುನರುತ್ಥಾನಗೊಳಿಸಲ್ಪಟ್ಟನೊ? ಅವನು ಕನಿಷ್ಠಪಕ್ಷ ಜೀವಿಸಿಯಾದರೂ ಇದ್ದನೊ? ನಮ್ಮ ಆಧುನಿಕ ಯುಗದಲ್ಲಿ ಅಂಥ ಪ್ರಶ್ನೆಗಳನ್ನು ಖಂಡಿತಭಾವದಿಂದ ಉತ್ತರಿಸಲು ಅನೇಕರು ಅಸಮರ್ಥರಾಗಿ ತೋರುತ್ತಾರೆ. ಏಕೆ? ಏಕೆಂದರೆ ಅವರು ಯೇಸುವಿನ ಕುರಿತು ಸಂದೇಹಗಳಿಗೆ ಎಡೆಗೊಡುತ್ತಾರೆ, ಮತ್ತು ಒಂದು ವಿಷಯವು ಸತ್ಯ ಅಥವಾ ಶಕ್ಯವೂ ಇಲ್ಲವೋ ಎಂದು ತಿಳಿಯದಿರುವ ಅನಿಶ್ಚಿತ ಭಾವನೆಗಳೇ ಸಂದೇಹಗಳಾಗಿವೆ. ಆದರೆ ಯೇಸುವಿನ ಕುರಿತ ಅನಿಶ್ಚಿತ ಭಾವನೆಗಳಿಗೆ ನ್ಯಾಯ ಸಮರ್ಥನೆಯಿದೆಯೆ? ನಾವು ನೋಡೋಣ.
ಯೇಸುವಿನ ಕುರಿತಾದ ಸಂದೇಹಗಳು ಬಿತ್ತಲ್ಪಟ್ಟ ವಿಧ
19 ನೆಯ ಶತಮಾನದ ಅಂತ್ಯದ ಮತ್ತು 20 ನೆಯ ಶತಮಾನದ ಆದಿಭಾಗದ ಕೆಲವು ಜರ್ಮನ್ ದೇವತಾಶಾಸ್ತ್ರಜ್ಞರು ಯೇಸುವನ್ನು “ಪುರಾತನ ಚರ್ಚಿನ ಕಾಲ್ಪನಿಕ ವ್ಯಕ್ತಿಯಾಗಿ” ಚಿತ್ರಿಸಿದರು. ಯೇಸುವಿನ ಐತಿಹಾಸಿಕತೆಯ ಕುರಿತಾದ ಅವರ ಆಕ್ಷೇಪಣೆಯು ಈ ಶತಮಾನದ ಆರಂಭದ ವಿದ್ವಾಂಸರ ನಡುವೆ ಒಂದು ವಾಗ್ವಾದಕ್ಕೆ ನಡೆಸಿ, ಆ ಕಾಲದ ಸಾರ್ವಜನಿಕರನ್ನು ತಲಪಿತು ಮತ್ತು ಇಂದೂ ಅದು ಪ್ರಭಾವವನ್ನು ಬೀರುತ್ತಿದೆ. ಉದಾಹರಣೆಗೆ, ಇತ್ತೀಚಿನ ಜರ್ಮನ್ ಅಧ್ಯಯನವೊಂದು ಪ್ರಕಟಿಸಿತೇನೆಂದರೆ, ಮುಖತಃ ಭೇಟಿ ನಡೆಸಿದವರಲ್ಲಿ 3 ಪ್ರತಿಶತ ಜನರು, ಯೇಸು “ಎಂದೂ ಜೀವಿಸಲಿಲ್ಲ” ವೆಂದೂ “ಅಪೊಸ್ತಲರು ಅವನನ್ನು ಕಲ್ಪಿಸಿದರು” ಎಂದೂ ನಂಬುತ್ತಾರೆ. ಹೌದು, ಈ ಶತಕದ ಆರಂಭದಲ್ಲಿ ಬಿತ್ತಲ್ಪಟ್ಟ ಯೇಸುವಿನ ಕುರಿತ ಸಂದೇಹದ ಬೀಜಗಳು ಇಂದು ಸಹ ಜನರ ಹೃದಯಗಳಲ್ಲಿ ಫಲವತ್ತಾದ ನೆಲವನ್ನು ಕಾಣುತ್ತಿವೆ.
ಯೇಸು “ಕಲ್ಪಿಸಲ್ಪಟ್ಟ” ವ್ಯಕ್ತಿಯೆನ್ನುವ ತೀರ್ಮಾನವನ್ನು ನ್ಯಾಯ ಸಮರ್ಥನೆ ಮಾಡಲು ಸಾಧ್ಯವೇ ಇಲ್ಲವೇಕೆ? ಬೈಬಲ್ ವಿದ್ವಾಂಸನಾದ ವಾಲ್ಫ್ಗಾಂಗ್ ಟ್ರಿಲಿಂಗ್ ಹೇಳುವುದು: “ಯೇಸು ಎಂದಾದರೂ ಜೀವಿಸಿದ್ದು ಹೌದೋ ಅಲ್ಲವೋ ಎಂಬ ವಿಷಯವಾದ ವಾಗ್ವಾದವು, ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಯೇಸು ಐತಿಹಾಸಿಕ ವ್ಯಕ್ತಿ ಯಾ ಒಂದು ಮಿಥ್ಯೆ ಹೌದೋ ಅಲ್ಲವೋ ಎಂಬುದು, ಬಗೆಹರಿಸಲ್ಪಟ್ಟಿತು. ವಾದಾಂಶವು ಪಾಂಡಿತ್ಯಪೂರ್ಣ ರೀತಿಯಿಂದ ನಿರ್ಧರಿಸಲ್ಪಟ್ಟಿತು, ಕಡಿಮೆಪಕ್ಷ, ಗಂಭೀರ ಮನಸ್ಸಿನ ಜನರು ಆ ಸಮಸ್ಯೆಯನ್ನು ಇನ್ನುಮುಂದೆ ಊಹಾತ್ಮಕ ವಿಷಯವಾಗಿ ನೋಡದಂತಹ ರೀತಿಯಲ್ಲಿ.” ಆದರೂ, ಯೇಸು ಎಂದಾದರೂ ಅಸ್ತಿತ್ವದಲ್ಲಿದ್ದನೆಂಬುದನ್ನು ಕೆಲವರು ಇನ್ನೂ ಸಂದೇಹಿಸುತ್ತಾರೆ. ಆದುದರಿಂದ, ಯೇಸುವಿನ ಐತಿಹಾಸಿಕತೆಯನ್ನು ಒಬ್ಬನು ಹೇಗೆ ಸ್ಥಾಪಿಸಬಲ್ಲನು ಹಾಗೂ ಆತನ ಕುರಿತ ಇತರ ಸಂಶಯಗಳನ್ನು ಹೇಗೆ ನಿವಾರಿಸಬಲ್ಲನೆಂಬುದನ್ನು ನಾವು ಸಂಶೋಧಿಸೋಣ.
ಸಂದೇಹಗಳನ್ನು ತೊಲಗಿಸುವ ಸಾಕ್ಷಿಗಳು
ತುಚ್ಛ ಪಾತಕಿಯೋಪಾದಿ ಯೇಸುವಿನ ಅವಮಾನಕರ ವಧೆಯು, “ಯೇಸುವಿನ ಐತಿಹಾಸಿಕತೆಯನ್ನು ವಿರೋಧಿಸುವವರ ಎದುರಾಗಿ ಅತ್ಯಂತ ಮನಗಾಣಿಸುವ ವಾದವನ್ನು ಒದಗಿಸುತ್ತದೆ,” ಎಂದು ಹೇಳುತ್ತಾರೆ ಟ್ರಿಲಿಂಗ್. ಏಕೆ? ಏಕೆಂದರೆ ಆ ವಧೆಯು “ಯೆಹೂದ್ಯರಲ್ಲಿ ಮತ್ತು ಯೆಹೂದ್ಯೇತರರಲ್ಲಿ ಹೊಸ ನಂಬಿಕೆಯ ಹರಡಿಕೆಯನ್ನು ಪ್ರತಿಬಂಧಿಸಿತು, ತಡೆಗಟ್ಟಿತೂ ಹೌದು.” (ಹೋಲಿಸಿ 1 ಕೊರಿಂಥ 1:23.) ಮೆಸ್ಸೀಯನಾದ ಯೇಸುವಿನ ವಧೆಯು ಯೆಹೂದ್ಯರಿಗೆ ಮತ್ತು ಅನ್ಯಜನರಿಗೆ ಇಬ್ಬರಿಗೂ ಅಂಥ ಒಂದು ಮುಖಭಂಗವಾಗಿದ್ದಲ್ಲಿ, ಅದು ಅಪೊಸ್ತಲರ ಕಟ್ಟುಕಥೆಯಾಗಿದ್ದಿರಲಿಕ್ಕಿಲ್ಲ ನಿಶ್ಚಯ! ಅದಲ್ಲದೆ, ಯೇಸುವಿನ ಮರಣವು ಒಂದು ಚಾರಿತ್ರಿಕ ಘಟನೆಯಾಗಿ ನಾಲ್ಕು ಸುವಾರ್ತೆಗಳಿಂದ ಮಾತ್ರವಲ್ಲ ರೋಮನ್ ಲೇಖಕ ಟ್ಯಾಸಿಟಸ್ನಿಂದ ಮತ್ತು ಯೆಹೂದ್ಯರ ಟ್ಯಾಲ್ಮಡ್ನಲ್ಲೂ ದೃಢೀಕರಿಸಲ್ಪಟ್ಟಿದೆ.a
ಯೇಸುವಿನ ಜೀವಿತ ಕಾಲದ ಬೇರೆ ಘಟನೆಗಳು, ಸುವಾರ್ತೆಗಳ—ಹೀಗೆ, ಅವು ಅವನ ಕುರಿತು ನಮಗೆ ಹೇಳುವಂತಹ ವಿಷಯಗಳ—ಭರವಸಯೋಗ್ಯತೆಯ ಆಂತರಿಕ ರುಜುವಾತಾಗಿಯೂ ವೀಕ್ಷಿಸಲ್ಪಡುತ್ತವೆ. ಉದಾಹರಣೆಗೆ, ಯೇಸು ನಜರೇತಿನಿಂದ, ಒಂದು ನಿಕೃಷ್ಟವೆಂದು ತೋರಿದ ಸ್ಥಳದಿಂದ ಬಂದವನೆಂಬ ಕಟ್ಟುಕಥೆಯನ್ನು ಅವನ ಹಿಂಬಾಲಕರು ಕಟ್ಟಿಯಾರೊ? ಅಥವಾ ನಂಬಿಗಸ್ತ ಸಂಗಡಿಗನಾದ ಯೂದನಿಂದ ಅವನಿಗೆ ಗೈಯಲಾದ ದ್ರೋಹವನ್ನು ಕಟ್ಟುಕಥೆಯಾಗಿ ಅವರು ಬರೆಯುವುದು ಸಂಭಾವ್ಯವೊ? ಯೇಸು ಇತರ ಶಿಷ್ಯರಿಂದ ಅಂತಹ ಹೇಡಿತನದಿಂದ ತ್ಯಜಿಸಲ್ಪಟ್ಟದ್ದರ ಕುರಿತ ಒಂದು ಕಟ್ಟುಕಥೆಯನ್ನು ಅವರು ಹೆಣೆಯುತ್ತಿದ್ದರೆಂದು ನೆನಸುವುದು ವಾಸ್ತವಿಕವಾಗಿ ತೋರುತ್ತದೊ? ಸಹಜಸ್ಥಿತಿಗೆ ಅಷ್ಟು ಅನಿಷ್ಠವಾದ ಕಾಲ್ಪನಿಕ ವಿವರಗಳನ್ನು ಶಿಷ್ಯರು ಬರೆಯುತ್ತಿದ್ದರೆಂಬುದು ಮತ್ತು ಅನಂತರ ಅದನ್ನು ವಿಸ್ತಾರವಾಗಿ ಘೋಷಿಸುತ್ತಿದ್ದರೆಂಬುದು ನಿಶ್ಚಯವಾಗಿಯೂ ಅಸಮಂಜಸ. ಅದಲ್ಲದೆ, ಯೇಸುವಿನಿಂದ ಬಳಸಲ್ಪಟ್ಟ ಕಲಿಸುವ ಕಲೆಯಲ್ಲಿ ಒಂದು ವಿಶೇಷ ಲಕ್ಷಣವಿತ್ತು. ಆತನ ದೃಷ್ಟಾಂತಗಳಿಗೆ ತುಲನಾತ್ಮಕವಾದ ಯಾವುದೂ ಒಂದನೆಯ ಶತಮಾನದ ಯೆಹೂದ್ಯ ಸಾಹಿತ್ಯದಲ್ಲಿರಲಿಲ್ಲ. ಪರ್ವತ ಪ್ರಸಂಗದಂತಹ ಒಂದು ನಾಯಕ ಕೃತಿಯನ್ನು ಯಾವ ಅನಾಮಧೇಯ ವ್ಯಕ್ತಿಯಾದರೂ “ಕಲ್ಪಿಸಿ” ಬರೆಯಲು ಶಕ್ತನಾಗಿದ್ದಿರಸಾಧ್ಯವೆ? ಈ ವಾದಾಂಶಗಳೆಲ್ಲವು, ಯೇಸುವಿನ ಜೀವನ ವರದಿಗಳಾಗಿ ಸುವಾರ್ತೆಗಳ ಭರವಸಯೋಗ್ಯತೆಯನ್ನು ದೃಢೀಕರಿಸಲು ಸಾಧಕವಾಗುತ್ತವೆ.
ಯೇಸುವಿನ ಐತಿಹಾಸಿಕತೆಗಾಗಿ ಬಾಹ್ಯ ಪುರಾವೆಯು ಸಹ ಇದೆ. ನಾಲ್ಕು ಸುವಾರ್ತೆಗಳು ಅವನನ್ನು ಒಂದು ವಿಶಿಷ್ಟವಾದ, ಸುಸ್ಪಷ್ಟ, ಐತಿಹಾಸಿಕ ಹಿನ್ನೆಲೆಯಲ್ಲಿ ಜೀವಿಸಿದವನಾಗಿ ಚಿತ್ರಿಸುತ್ತವೆ. ಬೇತ್ಲೆಹೇಮ್ ಮತ್ತು ಗಲಿಲಾಯದಂತಹ ಸ್ಥಳಗಳು, ಪೊಂತ್ಯ ಪಿಲಾತ ಮತ್ತು ಫರಿಸಾಯರಂತಹ ಪ್ರಾಮುಖ್ಯ ವ್ಯಕ್ತಿಗಳು ಮತ್ತು ಗುಂಪುಗಳು, ಹಾಗೂ ಯೆಹೂದ್ಯ ಪದ್ಧತಿಗಳು ಮತ್ತು ಇತರ ವೈಲಕ್ಷಣ್ಯಗಳು ಕೇವಲ ಕಟ್ಟುಕಥೆಗಳಲ್ಲ. ಒಂದನೆಯ ಶತಮಾನದ ಜೀವನ ಸ್ವರೂಪದ ಒಂದು ಭಾಗವನ್ನು ಅವು ರೂಪಿಸಿದವು, ಮತ್ತು ಅವು ಬೈಬಲೇತರ ಮೂಲಗಳಿಂದ ಮತ್ತು ಪ್ರಾಚೀನ ಶೋಧನಾ ಶಾಸ್ತ್ರದ ಕಂಡುಹಿಡಿತಗಳಿಂದ ದೃಢೀಕರಿಸಲ್ಪಟ್ಟಿವೆ.
ಹೀಗೆ, ಯೇಸು ಒಬ್ಬ ಐತಿಹಾಸಿಕ ವ್ಯಕ್ತಿಯೆಂಬುದಕ್ಕೆ ಆಂತರಿಕ ಮತ್ತು ಬಾಹ್ಯ ಪ್ರಮಾಣದ ಮನಗಾಣಿಸುವ ಪುರಾವೆಗಳಿವೆ.
ಆದರೂ, ಅನೇಕ ವ್ಯಕ್ತಿಗಳು ಆತನನ್ನು ಒಳಗೊಂಡಿರುವ ಅದ್ಭುತ ಕಾರ್ಯಗಳ ಕುರಿತು ಸಂದೇಹಗಳಿಗೆ ಎಡೆಗೊಡುತ್ತಾರೆ. ನಿಶ್ಚಯವಾಗಿ, ಮೇಲೆ ಉದ್ಧರಿಸಿದ ಸಮೀಕ್ಷೆಗನುಸಾರವಾಗಿ, ಜರ್ಮನ್ ಚರ್ಚ್ಹೋಕರಲ್ಲಿ ಕೇವಲ ಅಲ್ಪಸಂಖ್ಯಾತರು, ಯೇಸುವಿನ ಅದ್ಭುತಗಳು ಮತ್ತು ಆತನ ಪುನರುತ್ಥಾನವು “ನಿಜವಾಗಿ ಸಂಭವಿಸಿದವು” ಎಂದು ದೃಢವಾಗಿ ನಂಬುತ್ತಾರೆ. ಯೇಸುವಿನ ಅದ್ಭುತಗಳ ಕುರಿತ ಸಂದೇಹಗಳು ಮತ್ತು ಆತನ ಪುನರುತ್ಥಾನವು ಸಾಧಾರವುಳ್ಳವುಗಳೊ?
ಯೇಸುವಿನ ಅದ್ಭುತಗಳನ್ನು ಕೆಲವರು ಸಂದೇಹಿಸುವುದಕ್ಕೆ ಕಾರಣ
ಯೇಸು ಅದ್ಭುತಕರವಾಗಿ ರೋಗಿಗಳನ್ನು ವಾಸಿಮಾಡಿದನು, ಸತ್ತವರನ್ನು ಪುನರುತ್ಥಾನಗೊಳಿಸಿದನು, ಮತ್ತು ದೆವ್ವಗಳನ್ನು ಬಿಡಿಸಿದನು ಎಂದು ಮತ್ತಾಯ 9:18-36 ವರದಿಸುತ್ತದೆ. ಇತಿಹಾಸಗಾರರಾದ ಪ್ರೊಫೆಸರ್ ಹ್ಯೂಗೊ ಸಾಡ್ಟಿಂಗರ್ ಹೇಳುವುದು: “ಈ ಅಸಾಮಾನ್ಯ ವರದಿಗಳು ವಿಶದವಾದ ಕಲ್ಪನೆಯ ಉತ್ಪನ್ನವಾಗಿವೆಯೆಂಬುದು ತೀರ ಸರಳವಾಗಿಯೆ ನಂಬಲಶಕ್ಯ, ಮತ್ತು ಇತಿಹಾಸದ ದೃಷ್ಟಿಕೋನದಿಂದಲಾದರೊ ಅಸಾಧ್ಯವೇ ಸರಿ.” ಯಾಕೆ? ಯಾಕೆಂದರೆ ಅತ್ಯಾರಂಭದ ಸುವಾರ್ತೆಗಳು, ಈ ಅದ್ಭುತಗಳಿಗೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಹೆಚ್ಚಿನವರು ಜೀವಿಸಿದ್ದ ಸಮಯದಲ್ಲಿ ಬರೆಯಲ್ಪಟ್ಟವೆಂದು ತೋರುತ್ತದೆ! ಸಾಡ್ಟಿಂಗರ್ ಮುಂದುವರಿಸುತ್ತಾ ಹೇಳುವಂತೆ, ಯೆಹೂದ್ಯ ವಿರೋಧಿಗಳು “ಯೇಸುವು ಮಹತ್ಕಾರ್ಯಗಳನ್ನು ನಡಿಸಿದನೆಂಬುದನ್ನು ಎಂದೂ ಅಲ್ಲಗಳೆಯಲಿಲ್ಲ” ಎಂಬುದರಲ್ಲಿ ಅಧಿಕ ದೃಢೀಕರಣವು ಕಂಡುಬರುತ್ತದೆ. ಬೇರೆಲ್ಲಾ ಪುರಾವೆಯನ್ನು ಅಲಕ್ಷಿಸಿ, ನಮ್ಮ ತೀರ್ಮಾನವನ್ನು ಈ ಬಾಹ್ಯ ಪ್ರಮಾಣದ ಪುರಾವೆಯಲ್ಲಿ ಆಧಾರಿಸಿದರೂ, ಯೇಸುವಿನ ಅದ್ಭುತಗಳು ನಿಶ್ಚಯವಾಗಿಯೂ ನಮ್ಮ ನಂಬಿಕೆಗೆ ಪಾತ್ರವಾಗಿವೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ.—2 ತಿಮೊಥೆಯ 3:16.
“ಯೇಸು ರೋಗಿಗಳನ್ನು ವಾಸಿಮಾಡಿದನೆಂಬುದು ಅಧಿಕಾಂಶ ಜರ್ಮನರಿಗೆ ಮಂದಟ್ಟಾಗಿದೆ” ಯಾದರೂ, ಈ ರೋಗವಾಸಿಗಳ ಹಿಂದಿರುವ ಶಕ್ತಿಯ ಕುರಿತು ಅನೇಕರಿಗೆ ಸಂಶಯವಿದೆ. ಉದಾಹರಣೆಗೆ, ಯೇಸುವಿನಿಂದ ನಡಿಸಲ್ಪಟ್ಟ ರೋಗವಾಸಿಗಳು, ಮಾನಸಿಕ ಕ್ಲೇಶದಿಂದ ಬಾಧಿತರಾಗಿದ್ದ ಜನರನ್ನು ಸುಪ್ತ್ಯಾವಾಹಕ ಶಕಿಯ್ತಿಂದ ಪ್ರಭಾವಿಸಿದ ಫಲವಾಗಿತ್ತು ಎಂಬುದಾಗಿ ಒಬ್ಬ ಪ್ರಖ್ಯಾತ ಜರ್ಮನ್ ದೇವತಾಶಾಸ್ತ್ರಜ್ಞನು ಬಹಿರಂಗವಾಗಿ ಹೇಳಿದ್ದಾನೆ. ಇದು ಒಂದು ಸ್ವಸ್ಥ ಸ್ಪಷ್ಟೀಕರಣವೆ?
ಈ ಉದಾಹರಣೆಗಳನ್ನು ತುಸು ಗಮನಿಸಿರಿ. ಒಬ್ಬ ಮನುಷ್ಯನ ಬತ್ತಿಹೋದ ಕೈಯನ್ನು ಯೇಸು ವಾಸಿಮಾಡಿದನೆಂಬುದಾಗಿ ಮಾರ್ಕ 3:3-5 ವರದಿಸುತ್ತದೆ. ಆದರೆ ಒಂದು ಬತ್ತಿಹೋದ ಕೈ ಮಾನಸಿಕ ಕ್ಲೇಶದ ಫಲವೊ? ಖಂಡಿತವಾಗಿಯೂ ಅಲ್ಲ. ಆದಕಾರಣ, ಈ ವಾಸಿಯನ್ನು ಸುಪ್ತ್ಯಾವಾಹಕ ಶಕ್ತಿಗೆ ಅಧ್ಯಾರೋಪಿಸಸಾಧ್ಯವಿಲ್ಲ. ಹೀಗಿರಲಾಗಿ ಅದ್ಭುತಗಳನ್ನು ನಡಿಸುವಂತೆ ಯೇಸುವನ್ನು ಶಕ್ತನನ್ನಾಗಿ ಮಾಡಿದ್ದು ಯಾವುದು? ಪ್ರೊಫೆಸರ್ ಸಾಡ್ಟಿಂಗರ್ ಅಂಗೀಕರಿಸುವುದು: “ಸಂಪೂರ್ಣ ಸಪ್ರಮಾಣತೆಯ ನಿಯಮಗಳು ಇರದೆ ಇದ್ದರೆ, ಮತ್ತು ಒಬ್ಬನು ದೇವರನ್ನು ಸಂಪೂರ್ಣವಾಗಿ ಅಲ್ಲಗಳೆಯುವುದಿಲ್ಲವಾದರೆ, ಯಾರ ಶಕ್ತಿಯು ಮಾನುಷ ಶಕಿಗ್ತಿಂತ ಮಿಗಿಲಾಗಿದೆಯೋ, ಆ ದೇವರು ಅಸಾಧಾರಣವಾದ ಕಾರ್ಯಗಳನ್ನು ನಡಿಸಶಕ್ತನಿರುವ ಸಾಧ್ಯತೆಯನ್ನು ಒಬ್ಬನು ಮೂಲಭೂತವಾಗಿ ತಳ್ಳಿಹಾಕಸಾಧ್ಯವಿಲ್ಲ.” ಹೌದು, ನಿಶ್ಚಯವಾಗಿ, “ದೇವರ ಶಕ್ತಿಯ” ಸಹಾಯದಿಂದ ಯೇಸು ಅಸ್ವಸ್ಥರಾದ ಜನರನ್ನು ಅಕ್ಷರಶಃ ವಾಸಿಮಾಡಿದನು. ಹೀಗೆ ಆತನ ಅದ್ಭುತಗಳ ನಿಜತ್ವವನ್ನು ಸಂದೇಹಿಸಲು ಯಾವ ಕಾರಣವೂ ಇರುವುದಿಲ್ಲ.—ಲೂಕ 9:43; ಮತ್ತಾಯ 12:28.
ದಿ ಅಮೆರಿಕನ್ ಪೀಪಲ್ಸ್ ಎನ್ಸೈಕ್ಲೊಪೀಡಿಯ ನಿರೂಪಿಸುವ ಪ್ರಕಾರ, ಅದ್ಭುತಗಳಲ್ಲಿ ಅತ್ಯಂತ ಮಹತ್ತಾದ ಯೇಸುವಿನ ಪುನರುತ್ಥಾನವು ಸಂಭವಿಸಿತ್ತೆಂದಾದರೆ, ಸುವಾರ್ತೆಗಳಲ್ಲಿ ವರದಿಯಾದ ಬೇರೆಲ್ಲ ಅದ್ಭುತಗಳು “ಶಕ್ಯತೆಯ ಕ್ಷೇತ್ರದೊಳಗೆ ಬೀಳುತ್ತವೆ.” ಯೇಸು ನಿಜವಾಗಿಯೂ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೊ?
ಯೇಸುವಿನ ಪುನರುತ್ಥಾನದ ಕುರಿತ ಸಂದೇಹಗಳಿಗೆ ನ್ಯಾಯ ಸಮರ್ಥನೆಯಿದೆಯೆ?
ಪ್ರಪ್ರಥಮವಾಗಿ ಯೇಸುವಿನ ಪುನರುತ್ಥಾನದ ಸತ್ಯತೆಯನ್ನು ಬೆಂಬಲಿಸುವ ಒಂದು ಬಲವಾದ ಸಂದರ್ಭ ಸಾಕ್ಷ್ಯ, ಅವನ ಬರಿದಾದ ಸಮಾಧಿಯನ್ನು ಪರಿಗಣಿಸಿರಿ. ಯೇಸುವಿನ ಸಮಾಧಿ ಬರಿದಾಗಿ ಕಂಡುಬಂದ ನಿಜತ್ವವು ಅವನ ಸಮಕಾಲೀನರಿಂದ, ಅವನ ವಿರೋಧಿಗಳಿಂದಲೂ ನಿರ್ವಿವಾದಿಸಲ್ಪಟ್ಟಿತ್ತು. (ಮತ್ತಾಯ 28:11-15) ಮೋಸಗಾರಿಕೆಯು ಸುಲಭವಾಗಿ ಹೊರಗೆಡವಲ್ಪಡುತ್ತಿತ್ತು! ಮೇಲೆ ತಿಳಿಸಿದ ಪ್ರಮಾಣ ಕೃತಿಯು ಯುಕ್ತವಾಗಿಯೆ ತೀರ್ಮಾನಿಸುವುದು: “‘ಆತನು ಇಲ್ಲಿ ಇಲ್ಲ; ಅವನು ಎದಿದ್ದಾನ್ದೆ’ (ಮತ್ತಾಯ 28:5) ಎಂಬ ಬೈಬಲಿನ ಹೇಳಿಕೆಯ ಹೊರತು, ಬರಿದಾದ ಸಮಾಧಿಗೆ ಯಾವ ಸಮಂಜಸ ಸ್ಪಷ್ಟೀಕರಣವನ್ನು ಎಂದೂ ಸೂಚಿಸಲಾಗಿಲ್ಲ.”
ಕೆಲವರು ಆಕ್ಷೇಪಿಸುತ್ತಾ, ಆತನು ಪುನರುತಿತ್ಥ ಮೆಸ್ಸೀಯನೆಂದು ಎಲ್ಲೆಡೆಗಳಲ್ಲಿ ಘೋಷಿಸಿದವರು ಯೇಸುವಿನ ಸ್ವಂತ ಶಿಷ್ಯರು ಮಾತ್ರ ಎಂದು ಹೇಳುತ್ತಾರೆ. ಹೌದು, ಅದು ಸತ್ಯ. ಆದರೆ ಅವರ ಸಂದೇಶದ ಭರವಸಯೋಗ್ಯತೆಯು, ವಿಶೇಷವಾಗಿ ಯೇಸುವಿನ ಮರಣ ಮತ್ತು ಪುನರುತ್ಥಾನವು, ಐತಿಹಾಸಿಕ ನಿಜತ್ವದಲ್ಲಿ ದೃಢವಾಗಿ ಬೇರೂರಿರಲಿಲ್ಲವೇ? ನಿಶ್ಚಯವಾಗಿ ಬೇರೂರಿತ್ತು. ಈ ಸಂಬಂಧದ ಅರಿವು ಅಪೊಸ್ತಲ ಪೌಲನಿಗೆ ಇದುದ್ದರಿಂದ ಅವನು ಬರೆದುದು: “ಕ್ರಿಸ್ತನು ಎದ್ದುಬರಲಿಲ್ಲವಾದರೆ ನಮ್ಮ ಪ್ರಸಂಗವು ಹುರುಳಿಲ್ಲದ್ದು, ಮತ್ತು ನಿಮ್ಮ ನಂಬಿಕೆಯೂ ಹುರುಳಿಲ್ಲದ್ದು. ಇದಲ್ಲದೆ ಸತ್ತವರು ಎದ್ದುಬರುವದಿಲ್ಲವೆಂಬದು ನಿಜವಾಗಿದ್ದ ಪಕ್ಷದಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ; ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೆವು.”—1 ಕೊರಿಂಥ 15:14, 15; ಹೋಲಿಸಿ ಯೋಹಾನ 19:35; 21:24; ಇಬ್ರಿಯ 2:3.
ಒಂದನೆಯ ಶತಮಾನದಲ್ಲಿ, ಗುರುತು ಪರಿಚಯಗಳು ಸುಪರಿಚಿತವಾಗಿದ್ದ ಮತ್ತು ಯೇಸುವಿನ ಮರಣಾನಂತರದ ತೋರಿಬರುವಿಕೆಗೆ ಸಾಕ್ಷಿಕೊಡಶಕ್ತರಿದ್ದ ಅನೇಕ ಜನರಿದ್ದರು. ಅವರಲ್ಲಿ 12 ಮಂದಿ ಅಪೊಸ್ತಲರು ಮತ್ತು ಪೌಲನು, ಹಾಗೂ 500 ಕ್ಕಿಂತಲೂ ಹೆಚ್ಚು ಇತರ ಪ್ರತ್ಯಕ್ಷ ಸಾಕ್ಷಿಗಳಿದ್ದರು.b (1 ಕೊರಿಂಥ 15:6) ಅಪನಂಬಿಗಸ್ತ ಅಪೊಸ್ತಲ ಯೂದನ ಸ್ಥಾನವನ್ನು ಭರ್ತಿಮಾಡಲು ಮತ್ತೀಯನು ಹೇಗೆ ಯೋಗ್ಯತೆ ಪಡೆದನೆಂಬುದನ್ನು ಸಹ ಜ್ಞಾಪಿಸಿಕೊಳ್ಳಿ. ಮತ್ತೀಯನು ಯೇಸುವಿನ ಪುನರುತ್ಥಾನಕ್ಕೆ ಮತ್ತು ಆತನ ಸಂಬಂಧವಾದ ಆರಂಭದ ಘಟನೆಗಳಿಗೆ ಸಾಕಿಕ್ಷೊಡಶಕ್ತನಿದ್ದನು ಎಂದು ಅಪೊಸ್ತಲರ ಕೃತ್ಯಗಳು 1:21-23 ವರದಿಸುತ್ತದೆ. ಯೇಸುವಿನ ಜೀವನ ಮತ್ತು ಪುನರುತ್ಥಾನವು ನಿಜತ್ವದ ಬದಲಿಗೆ ಕಟ್ಟುಕಥೆಯಾಗಿದ್ದಿರುತ್ತಿದ್ದಲ್ಲಿ, ಆ ನೇಮಕಕ್ಕಾಗಿ ಅಂತಹ ಆವಶ್ಯಕತೆಯು ಪೂರ್ಣ ಅರ್ಥವಿಲ್ಲದ್ದಾಗಿರುತ್ತಿತ್ತು ನಿಶ್ಚಯ.
ಒಂದನೆಯ ಶತಮಾನದ ಅಷ್ಟು ಮಂದಿ ಪ್ರತ್ಯಕ್ಷ ಸಾಕ್ಷಿಗಳು ಯೇಸುವಿನ ಜೀವನ, ಅದ್ಭುತಗಳು, ಮರಣ, ಮತ್ತು ಪುನರುತ್ಥಾನಕ್ಕೆ ಪುರಾವೆ ನೀಡಶಕ್ತರಾಗಿದ್ದ ಕಾರಣ, ರೋಮನ್ ಸಾಮ್ರಾಜ್ಯದಲ್ಲೆಲ್ಲೂ ಕ್ರೈಸ್ತತ್ವವು ಮೇಲೆ ತಿಳಿಸಿದ ತಡೆಗಟ್ಟುಗಳ ಮಧ್ಯೆಯೂ ತುಲನಾತ್ಮಕವಾಗಿ ಬಹು ಬೇಗನೆ ಹಬ್ಬಿತು. ಅವನ ಹಿಂಬಾಲಕರು, ಪುನರುತ್ಥಾನವನ್ನು ಮತ್ತು ಅದರಿಂದ ಹೊರಸೂಸುವ ಮೂಲಭೂತ ಸತ್ಯವನ್ನು ಎಲ್ಲೆಲ್ಲಿಯೂ ಘೋಷಿಸಲಿಕ್ಕಾಗಿ ಕಷ್ಟ, ಹಿಂಸೆ, ಮತ್ತು ಮರಣವನ್ನಾದರೂ ತಾಳಿಕೊಳ್ಳಲು ಸಿದ್ಧರಾಗಿದ್ದರು. ಯಾವ ಸತ್ಯವನ್ನು? ದೇವರ ಶಕ್ತಿಯ ಕಾರಣದಿಂದ ಮಾತ್ರ ಪುನರುತ್ಥಾನವು ಸಾಧ್ಯಮಾಡಲ್ಪಟ್ಟಿತ್ತೆಂಬ ಸತ್ಯವನ್ನು. ಮತ್ತು ಯೆಹೋವ ದೇವರು ಯೇಸುವನ್ನು ಸತ್ತವರೊಳಗಿಂದ ಪುನರುತ್ಥಾನ ಮಾಡಿದ್ದೇಕೆ? ಆ ಪ್ರಶ್ನೆಗೆ ಉತ್ತರವು ಐತಿಹಾಸಿಕ ಯೇಸು ಯಾರೆಂಬುದನ್ನು ತೋರಿಸುತ್ತದೆ.
ಪಂಚಾಶತ್ತಮ ದಿನದಲ್ಲಿ, ಅಪೊಸ್ತಲ ಪೇತ್ರನು ಯೆರೂಸಲೇಮಿನಲ್ಲಿ ಚಕಿತರಾದ ಯೆಹೂದ್ಯರಿಗೆ ಸರಳವಾಗಿ ಘೋಷಿಸಿದ್ದು: “ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. ಆತನು ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟು ವಾಗ್ದಾನವಾಗಿದ್ದ ಪವಿತ್ರಾತ್ಮವರವನ್ನು ತಂದೆಯಿಂದ ಹೊಂದಿ ನೀವು ನೋಡಿ ಕೇಳುವದನ್ನು ಸುರಿಸಿದ್ದಾನೆ. ದಾವೀದನು ಆಕಾಶಕ್ಕೆ ಏರಿಹೋಗಲಿಲ್ಲವಲ್ಲಾ. ತಾನೇ ಹೇಳುವ ಮಾತೇನಂದರೆ—ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು [“ಯೆಹೋವನು,” NW] ನನ್ನ ಒಡೆಯನಿಗೆ ನುಡಿದನು ಎಂಬದೇ. ಆದದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ.” (ಅ. ಕೃತ್ಯಗಳು 2:32-36) ಹೌದು, ಯೆಹೋವ ದೇವರು ನಜರೇತಿನ ಯೇಸುವನ್ನು “ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ” ಮಾಡಿದನು. ದೇವರ ಉದ್ದೇಶದ ಈ ಭಾಗದಲ್ಲಿ ಆತನ ಪಾತ್ರದ ಕುರಿತ ಸಂದೇಹಗಳಿಗೆ ನ್ಯಾಯ ಸಮರ್ಥನೆಯಿದೆಯೆ?
ಯೇಸುವಿನ ಪ್ರಚಲಿತ ಪಾತ್ರವನ್ನು ಸಂದೇಹಿಸುವುದೇಕೆ?
ಯೇಸುವಿನ ಪರಿಚಯ ಮತ್ತು ಪಾತ್ರದ ಕುರಿತ ಸಂದೇಹಗಳೆಲ್ಲವು ಹೇಗೆ ತೊಲಗಿಸಲ್ಪಡಬಲ್ಲವು? ಸ್ಪಷ್ಟವಾಗಿಗಿ ಆತನು ಸತ್ಯ ಪ್ರವಾದಿಯಾಗಿದ್ದ ನಿಜತ್ವದಿಂದಲೇ. ಆತನು ಯುದ್ಧಗಳನ್ನು, ಬರಗಳನ್ನು, ಭೂಕಂಪಗಳನ್ನು, ಪಾತಕಗಳನ್ನು, ಮತ್ತು ನಾವಿಂದು ನೋಡುವ ಪ್ರೀತಿಯ ಅಭಾವವನ್ನು ಮುಂತಿಳಿಸಿದನು. ಅದಲ್ಲದೆ, “ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು” ಎಂದೂ ಕಾಲಜ್ಞಾನ ನುಡಿದನು. (ಮತ್ತಾಯ 24:3-14) ಈ ಪ್ರವಾದನೆಗಳ ನೆರವೇರಿಕೆಯು ಪುನರುತಿತ್ಥ ಕ್ರಿಸ್ತನು ಯೇಸುವೆಂದೂ, ‘ತನ್ನ ವೈರಿಗಳ ಮಧ್ಯದಲ್ಲಿ’ ಅವನು ಅದೃಶ್ಯವಾಗಿ ಆಳುತ್ತಾನೆಂದೂ, ಬೇಗನೆ ಆತನು ದೇವರ ಹೊಸ ಲೋಕವನ್ನು ತರುವನೆಂದೂ ರುಜುಪಡಿಸುತ್ತದೆ.—ಕೀರ್ತನೆ 110:1, 2; ದಾನಿಯೇಲ 2:44; ಪ್ರಕಟನೆ 21:1-5.
ಎಂದಿಗಿಂತಲೂ ಹೆಚ್ಚಾಗಿ ಈಗ, ಮಾನವಕುಲಕ್ಕೆ ಅತಿಮಾನುಷ ಜ್ಞಾನಸಂಪನ್ನನಾದ ಒಬ್ಬ ರಕ್ಷಕನ ಜರೂರಿಯ ಅಗತ್ಯವಿದೆ. ಮಾನವಕುಲವನ್ನು ಉದ್ಧರಿಸಲು ಯುಕ್ತವಾಗಿ ಆರಿಸಲ್ಪಟ್ಟವನು ಯೇಸುವೇ ಎಂಬುದನ್ನು ನಾವೇಕೆ ಸಂದೇಹಿಸಬೇಕು? ಯೇಸುವಿನ ಮನತಟ್ಟುವ ಅದ್ಭುತಗಳಿಗೆ ಮತ್ತು ಪುನರುತ್ಥಾನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಯೋಹಾನನು ಘೋಷಿಸಿದ್ದು: “ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ.” (1 ಯೋಹಾನ 4:14; ಹೋಲಿಸಿ ಯೋಹಾನ 4:42.) ಯೇಸುವಿನ ಅಸ್ತಿತ್ವ, ಅದ್ಭುತಗಳು, ಮರಣ, ಮತ್ತು ಪುನರುತ್ಥಾನವನ್ನು ಸಂದೇಹಿಸುವುದಕ್ಕೆ ನಮಗೆ ಹೇಗೆ ಸಮಂಜಸವಾದ ಆಧಾರವಿಲ್ಲವೋ, ಹಾಗೆಯೆ ಯೆಹೋವ ದೇವರ ಬಲಗಡೆಯಲ್ಲಿ ನ್ಯಾಯಬದ್ಧ ರಾಜನೋಪಾದಿ ಅವನು ಸಿಂಹಾಸನಕ್ಕೆ ಏರಿಸಲ್ಪಟ್ಟಿದ್ದಾನೆಂಬುದನ್ನು ಸಂದೇಹಿಸುವುದಕ್ಕೆ ಯಾವ ಕಾರಣವೂ ಇಲ್ಲ. ಹೌದು, ನಜರೇತಿನ ಯೇಸು ನಿಸ್ಸಂಶಯವಾಗಿಯೂ ದೇವರ ರಾಜ್ಯದ ರಾಜನು ಮತ್ತು “ಲೋಕರಕ್ಷಕನು.”—ಮತ್ತಾಯ 6:10.
[ಅಧ್ಯಯನ ಪ್ರಶ್ನೆಗಳು]
a ಟ್ಯಾಲ್ಮಡ್ನಲ್ಲಿನ ಯೇಸುವಿನ ಕುರಿತ ವಾದಾತ್ಮಕ ಸೂಚನೆಗಳು ನಿರ್ದಿಷ್ಟ ವಿದ್ವಾಂಸರಿಂದ ಮಾತ್ರ ನಿಜವೆಂದು ಅಂಗೀಕರಿಸಲ್ಪಡುತ್ತವೆ. ಇನ್ನೊಂದು ಕಡೆ, ಟ್ಯಾಸಿಟಸ್, ಸ್ಯುಟೋನಿಯಸ್, ಪಿನ್ಲಿ ದ ಯಂಗರ್ನಿಂದ ಯೇಸುವಿನ ಕುರಿತ ಸೂಚನೆಗಳು ಮತ್ತು ಫ್ಲೇವಿಯಸ್ ಜೊಸೀಫಸನಿಂದ ಕಡಿಮೆಪಕ್ಷ ಒಂದು ಸೂಚನೆಯು ಯೇಸುವಿನ ಚಾರಿತ್ರಿಕ ಅಸ್ತಿತ್ವಕ್ಕೆ ರುಜುವಾತೆಂದು ಸಾಮಾನ್ಯವಾಗಿ ಅಂಗೀಕರಿಸಲಾಗುತ್ತದೆ.
b ಒಂದು ಸಂದರ್ಭದಲ್ಲಿ, ಪುನರುತಿತ್ಥ ಯೇಸುವು ತನ್ನ ಶಿಷ್ಯರೊಂದಿಗೆ ಮೀನನ್ನು ತಿಂದ ವಿಷಯವು, ಇಂದು ಕೆಲವರು ವಾದಿಸುವ ಪ್ರಕಾರ, ಆತನ ತೋರಿಬರುವಿಕೆ ಕೇವಲ ಒಂದು ಕಾಲ್ಪನಿಕ ದರ್ಶನವಲ್ಲವೆಂಬುದನ್ನು ರುಜುಪಡಿಸುತ್ತದೆ.—ಲೂಕ 24:36-43.