ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 9/15 ಪು. 4-6
  • ನೆರೆಯವನ ಪ್ರೀತಿಯು ಶಕ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೆರೆಯವನ ಪ್ರೀತಿಯು ಶಕ್ಯ
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸುವಿನ ಉತ್ತಮ ಉದಾಹರಣೆ
  • ದೇವರು ಪಕ್ಷಪಾತಿಯಲ್ಲ
  • ಕಾರ್ಯದಲ್ಲಿ ನೆರೆಯವನ ಪ್ರೀತಿ
  • “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ನಿಮ್ಮ ನೆರೆಯವನನ್ನು ಯಾಕೆ ಪ್ರೀತಿಸಬೇಕು?
    ಕಾವಲಿನಬುರುಜು—1993
  • ನಮ್ಮ ನೆರೆಯವರನ್ನು ಪ್ರೀತಿಸುವುದರ ಅರ್ಥವೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಸಮಾರ್ಯದವನೊಬ್ಬನು ಒಳ್ಳೆಯ ನೆರೆಯವನಾಗುತ್ತಾನೆ
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು—1993
w93 9/15 ಪು. 4-6

ನೆರೆಯವನ ಪ್ರೀತಿಯು ಶಕ್ಯ

ಯಥಾರ್ಥವಾದ ನೆರೆಯವನ ಪ್ರೀತಿಯು ನಿಜವಾಗಿಯೂ ಏನನ್ನು ಅರ್ಥೈಸುತ್ತದೆ ಎಂದು ಯೇಸು ಕ್ರಿಸ್ತನು ಹೇಳಿದ ಸಮಾರ್ಯದವನ ದೃಷ್ಟಾಂತವು ತೋರಿಸಿತು. (ಲೂಕ 10:25-37) “ನಿನ್ನ ದೇವರಾಗಿರುವ ಕರ್ತನನ್ನು (ಯೆಹೋವ, NW) ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,” ಎಂದು ಸಹ ಯೇಸು ಕಲಿಸಿದನು.—ಮತ್ತಾಯ 22:37-39.

ಅನೇಕ ಜನರಂತೆ, ನಿಮ್ಮ ಸ್ವಂತ ಕುಲದ ಗುಂಪಿಗೆ ಸೇರದೇ ಇರುವ ನಿಮ್ಮ ನೆರೆಯವನನ್ನು ಪ್ರೀತಿಸುವುದು ಕಷ್ಟಕರವೆಂದು ನೀವು ಕಾಣುತ್ತೀರೊ? ಬಹುಶಃ ಇದು ಯಾಕಂದರೆ, ನೀವು ವ್ಯತ್ಯಾಸ ಮತ್ತು ಅನ್ಯಾಯದ ಕುರಿತು ತಿಳಿದಿದ್ದೀರಿ ಅಥವಾ ವೈಯಕ್ತಿಕವಾಗಿ ಅನುಭವಿಸಿದ್ದೀರಿ. ನೀವು ಅಥವಾ ನಿಮ್ಮ ಪ್ರಿಯರು ಇನ್ನೊಂದು ಗುಂಪಿನ ಜನರಿಂದ ಕ್ರೂರ ಮತ್ತು ಹಿಂಸಾತ್ಮಕ ಕೃತ್ಯದ ಫಲವನ್ನು ಸಹ ಅನುಭವಿಸಿರಬಹುದು.

ನಮ್ಮ ನೆರೆಯವರನ್ನು ಪ್ರೀತಿಸುವುದು ದೇವರ ಆಜ್ಞೆಗಳಲ್ಲಿ ಒಂದು ಎಂಬುದಾಗಿ ಯೇಸು ಸೂಚಿಸಿರುವುದರಿಂದ, ಇಂಥ ಬಲವಾದ ಅನಿಸಿಕೆಗಳನ್ನು ಜಯಿಸಲು ಸಾಧ್ಯವಾಗಿರಬೇಕು. ಜನರನ್ನು ದೇವರು ಮತ್ತು ಕ್ರಿಸ್ತನು ವೀಕ್ಷಿಸುವಂತೆ ವೀಕ್ಷಿಸುವುದೇ ಇದನ್ನು ಮಾಡುವ ಒಂದು ಕೀಲಿ ಕೈಯಾಗಿದೆ. ಈ ಸಂಬಂಧದಲ್ಲಿ ನಾವು ಯೇಸುವಿನ ಮತ್ತು ಆದಿ ಕ್ರೈಸ್ತರ ಉದಾಹರಣೆಯನ್ನು ಪರಿಗಣಿಸೋಣ.

ಯೇಸುವಿನ ಉತ್ತಮ ಉದಾಹರಣೆ

ಯೂದಾಯ ಮತ್ತು ಗಲಿಲಾಯದ ನಡುವೆ ಇರುವ ಒಂದು ಪ್ರದೇಶದಲ್ಲಿ ಜೀವಿಸುತ್ತಿದ್ದ ಒಂದು ಜನಾಂಗ—ಸಮಾರ್ಯರ ವಿರುದ್ಧ, ಮೊದಲನೆಯ ಶತಮಾನದ ಯೆಹೂದ್ಯರಿಗೆ ಬಲವಾದ ಭಾವನೆಗಳಿದ್ದವು. ಒಂದು ಸಂದರ್ಭದಲ್ಲಿ ಯೆಹೂದ್ಯ ವಿರೋಧಕರು ಯೇಸುವನ್ನು, “ನೀನು ಸಮಾರ್ಯನೂ ದೆವ್ವಹಿಡಿದವನೂ ಆಗಿದ್ದೀ ಎಂದು ನಾವು ಹೇಳುವದು ಸರಿಯಲ್ಲವೋ”? ಎಂದು ದುರಹಂಕಾರದಿಂದ ಕೇಳಿದರು. (ಯೋಹಾನ 8:48) ಸಮಾರ್ಯರ ವಿರುದ್ಧ ಭಾವನೆಯು ಎಷ್ಟು ಪ್ರಬಲವಾಗಿತ್ತೆಂದರೆ, ಕೆಲವು ಯೆಹೂದ್ಯರು ಸಮಾರ್ಯರನ್ನು ಬಹಿರಂಗವಾಗಿ ದೇವಾಲಯಗಳಲ್ಲಿ ಶಪಿಸಿದರು ಮತ್ತು ಸಮಾರ್ಯರಿಗೆ ನಿತ್ಯಜೀವವು ದೊರಕಬಾರದೆಂದು ದಿನನಿತ್ಯ ಪ್ರಾರ್ಥಿಸಿದರು ಸಹ.

ಆಳವಾಗಿ ನೆಲಸಿದ್ದ ಈ ದ್ವೇಷದ ಜ್ಞಾನವು, ಕಳ್ಳರಿಂದ ಹೊಡೆಯಲ್ಪಟ್ಟ ಯೆಹೂದ್ಯ ಮನುಷ್ಯನ ಕಾಳಜಿವಹಿಸುವ ಮೂಲಕ ತಾನೊಬ್ಬ ನಿಜವಾದ ನೆರೆಯವನೆಂದು ರುಜುಪಡಿಸಿದ ಸಮಾರ್ಯನ ಕುರಿತಾದ ದೃಷ್ಟಾಂತವನ್ನು ಕೊಡುವಂತೆ ನಿಸ್ಸಂದೇಹವಾಗಿ ಯೇಸುವನ್ನು ಪ್ರೇರಿಸಿತು. ಮೋಶೆಯ ನಿಯಮದಲ್ಲಿ ಪರಿಣಿತನಾದ ಯೆಹೂದ್ಯನು “ನನ್ನ ನೆರೆಯವನು ಯಾರು?” ಎಂದು ಕೇಳಿದಾಗ, ಯೇಸು ಹೇಗೆ ಉತ್ತರಿಸಬಹುದಿತ್ತು? (ಲೂಕ 10:29) ಒಳ್ಳೆಯದು, ‘ನಿನ್ನ ನೆರೆಯವನು ನಿನ್ನ ಜೊತೆ ಯೆಹೂದ್ಯನನ್ನು ಮಾತ್ರವಲ್ಲ, ಬೇರೆ ಜನರನ್ನು ಕೂಡ, ಒಬ್ಬ ಸಮಾರ್ಯದವನನ್ನು ಸಹ ಒಳಗೊಂಡಿದೆ,’ ಎಂದು ನೇರವಾಗಿ ಹೇಳುವ ಮೂಲಕ ಯೇಸು ಉತ್ತರಿಸಬಹುದಿತ್ತು. ಯೆಹೂದ್ಯರಿಗಾದರೊ ಅದನ್ನು ಸ್ವೀಕರಿಸುವುದು ಕಷ್ಟಕರವಾಗಿ ಕಂಡಿರಬೇಕು. ಆದುದರಿಂದ ಒಬ್ಬ ಸಮಾರ್ಯನ ಕರುಣೆಯನ್ನು ಪಡೆದ ಒಬ್ಬ ಯೆಹೂದ್ಯನ ದೃಷ್ಟಾಂತವನ್ನು ಅವನು ಹೇಳಿದನು. ಹೀಗೆ ನಿಜವಾದ ನೆರೆಯವನ ಪ್ರೀತಿಯು ಯೆಹೂದ್ಯರಲ್ಲದವರಿಗೂ ವಿಸ್ತರಿಸಲಿರುವುದು ಎಂಬ ಸಮಾಪ್ತಿಗೆ ಬರುವಂತೆ ಯೇಸು ಯೆಹೂದ್ಯ ಕೇಳುಗರಿಗೆ ಸಹಾಯ ಮಾಡಿದನು.

ಯೇಸುವಿಗೆ ಸಮಾರ್ಯರ ವಿರುದ್ಧ ಯಾವ ಭಾವನೆಯೂ ಇರಲಿಲ್ಲ. ಒಂದು ಸಂದರ್ಭದಲ್ಲಿ ಸಮಾರ್ಯದಲ್ಲಿ ಪ್ರಯಾಣಿಸುವಾಗ, ಅವನ ಶಿಷ್ಯರು ಹತ್ತಿರದ ಪಟ್ಟಣಕ್ಕೆ ಆಹಾರವನ್ನು ತರಲು ಹೋಗಿರುವಾಗ, ಅವನು ಒಂದು ಬಾವಿಯ ಬಳಿ ವಿಶ್ರಮಿಸಿದನು. ಒಬ್ಬಾಕೆ ಸಮಾರ್ಯದ ಸ್ತ್ರೀಯು ನೀರನ್ನು ಸೇದಲು ಬಂದಾಗ, ಅವನು, “ನೀರು ಕುಡಿಯುವದಕ್ಕೆ ಕೊಡು” ಎಂದು ಕೇಳಿದನು. ಸಮಾರ್ಯರೊಂದಿಗೆ ಯೆಹೂದ್ಯರಿಗೆ ಯಾವ ವ್ಯವಹಾರಗಳು ಇಲ್ಲದೆ ಇದದ್ದರಿಂದ, “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ನೀರು ಬೇಡುವದು ಹೇಗೆ”? ಎಂದು ಅವಳು ಕೇಳಿದಳು. ಆಗ ಯೇಸು ಅವಳಿಗೆ ಸಾಕ್ಷಿಯನ್ನು ನೀಡಿದನು, ಅವನೇ ಮೆಸ್ಸೀಯನೆಂದು ಕೂಡ ಬಹಿರಂಗವಾಗಿ ತಿಳಿಸಿದನು. ಅವಳು ಪಟ್ಟಣಕ್ಕೆ ಹೋಗಿ ಇತರರು ಬಂದು ಅವನಿಗೆ ಕಿವಿಗೊಡುವಂತೆ ಕರೆಯುವ ಮೂಲಕ ಪ್ರತಿಕ್ರಿಯಿಸಿದಳು. ಫಲಿತಾಂಶ? “ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು.” ತನ್ನ ಸಮಕಾಲೀನ ಯೆಹೂದ್ಯರ ಸಾಮಾನ್ಯವಾದ ಮನೋಭಾವನೆಗಳಿಂದ ಯೇಸು ನಿರ್ಬಂಧಿಸಲ್ಪಡದೇ ಇದ್ದ ಕಾರಣ ಎಂಥ ಒಂದು ಉತ್ತಮವಾದ ಫಲಿತಾಂಶ ಉಂಟಾಯಿತು!—ಯೋಹಾನ 4:4-42.

ದೇವರು ಪಕ್ಷಪಾತಿಯಲ್ಲ

“ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನ”ಕ್ಕೆ, ಯೆಹೂದ್ಯರಿಗೆ, ಪ್ರಾಮುಖ್ಯವಾಗಿ ಯೇಸು ಸಾರಬೇಕು ಎಂಬುದು ದೇವರ ಉದ್ದೇಶವಾಗಿತ್ತು. (ಮತ್ತಾಯ 15:24) ಆದುದರಿಂದ, ಅವನ ಪ್ರಥಮ ಹಿಂಬಾಲಕರು ಯೆಹೂದ್ಯ ಹಿನ್ನೆಲೆಯವರಾಗಿದ್ದರು. ಆದರೆ ಸಾ. ಶ. 33 ರ ಪಂಚಾಶತ್ತಮದಲ್ಲಿ ಪವಿತ್ರಾತ್ಮನ ಸುರಿಯುವಿಕೆಯ ಕೇವಲ ಮೂರು ವರ್ಷಗಳ ತರುವಾಯ, ನಂಬುವ ಯೆಹೂದ್ಯರು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ರಾಷ್ಟ್ರಗಳ ಜನರಿಗೆ, ಅನ್ಯಜನಾಂಗದವರಿಗೆ ವಿಸ್ತಾರಗೊಳಿಸಬೇಕೆಂದು ಆತನು ಬಯಸುತ್ತಾನೆ ಎಂಬುದಾಗಿ ಯೆಹೋವನು ಸ್ಪಷ್ಟಮಾಡಿದನು.

ಯೆಹೂದ್ಯ ಮನಸ್ಸಿಗೆ, ತನ್ನಂತೆ ಒಬ್ಬ ಸಮಾರ್ಯದವನನ್ನು ಪ್ರೀತಿಸುವುದು ಬಹಳ ಕಠಿನವಾಗಿರಲಿತ್ತು. ಯೆಹೂದ್ಯರೊಂದಿಗೆ ಸಮಾರ್ಯರಿಗಿಂತ ಕಡಿಮೆ ಸಾಮಾನ್ಯತೆಯನ್ನು ಹೊಂದಿದ್ದ ಜನರಾದ, ಸುನ್ನತಿ ಪಡೆಯದ ಅನ್ಯಜನಾಂಗದವರಿಗೆ ನೆರೆಯವನ ಪ್ರೀತಿ ತೋರಿಸುವುದು ಇನ್ನೂ ಕಷ್ಟಕರವಾಗಿರಲಿತ್ತು. ಅನ್ಯಜನಾಂಗದವರ ಕಡೆಗೆ ಯೆಹೂದ್ಯರ ಮನೋಭಾವನೆಯ ಕುರಿತು ಹೇಳಿಕೆ ನೀಡುತ್ತಾ, ದ ಇಂಟರ್‌ನ್ಯಾಷನಲ್‌ ಸ್ಟಾಂಡರ್ಡ್‌ ಬೈಬಲ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಹೊಸ ಒಡಂಬಡಿಕೆಯ ಸಮಯಗಳಲ್ಲಿ, ನಾವು ಅತ್ಯಂತ ತೀವ್ರವಾದ ಹೇವರಿಕೆ, ತಿರಸ್ಕಾರ ಮತ್ತು ದ್ವೇಷವನ್ನು ಕಾಣುತ್ತೇವೆ. ಅವರು [ಅನ್ಯಜನಾಂಗದವರು] ಅಶುದ್ಧರೆಂದು ಪರಿಗಣಿಸಲ್ಪಡುತ್ತಿದ್ದರು. ಅವರೊಂದಿಗೆ ಸ್ನೇಹಪೂರ್ಣ ವ್ಯವಹಾರಗಳನ್ನು ಇಟ್ಟುಕೊಳ್ಳುವುದು ನ್ಯಾಯಸಮ್ಮತವಾಗಿರಲಿಲ್ಲ. ಅವರು ದೇವರ ಮತ್ತು ಆತನ ಜನರ ವೈರಿಗಳಾಗಿದ್ದರು, ಮತಾಂತರ ಹೊಂದುವ ತನಕ ಅವರಿಗೆ ದೇವರ ಕುರಿತಾದ ಜ್ಞಾನವು ನಿರಾಕರಿಸಲಾಗಿತ್ತು, ಮತ್ತು ಪ್ರಾಚೀನ ಸಮಯಗಳಂತೆ, ಆಗಲೂ ಕೂಡ ಅವರನ್ನು ಸಂಪೂರ್ಣ ಸಹವಾಸಕ್ಕೆ ಅನುಮತಿಸತ್ತಿರಲಿಲ್ಲ. ಅವರಿಗೆ ಸಲಹೆ ನೀಡುವುದರಿಂದ ಯೆಹೂದ್ಯರು ನಿಷೇಧಿಸಲ್ಪಟ್ಟಿದ್ದರು, ಮತ್ತು ಅವರು ದೈವಿಕ ವಿಷಯಗಳ ಕುರಿತು ಕೇಳುವುದಾದರೆ ಅವರನ್ನು ಶಪಿಸಲಾಗುತ್ತಿತ್ತು.”

ಅನೇಕರು ಇಂಥ ನೋಟಗಳನ್ನು ಹೊಂದಿರುವಾಗ, ‘ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬೇಡ,’ ಎಂಬುದಾಗಿ ಅವನಿಗೆ ಹೇಳಲಾದ ಒಂದು ದರ್ಶನವನ್ನು ಅಪೊಸ್ತಲ ಪೇತ್ರನು ಅನುಭವಿಸುವಂತೆ ಯೆಹೋವನು ಉಂಟುಮಾಡಿದನು. ತದನಂತರ ದೇವರು ಅನ್ಯಜನಾಂಗದವನಾದ ಕೊರ್ನೇಲ್ಯನ ಮನೆಗೆ ಅವನನ್ನು ಮಾರ್ಗದರ್ಶಿಸಿದನು. ಪೇತ್ರನು ಕ್ರಿಸ್ತನ ಕುರಿತಾದ ಒಂದು ಸಾಕ್ಷಿಯನ್ನು ಕೊರ್ನೇಲ್ಯನಿಗೆ, ಅವನ ಕುಟುಂಬದವರಿಗೆ, ಮತ್ತು ಇತರ ಅನ್ಯಜನಾಂಗದವರಿಗೆ ಕೊಟ್ಟನು. “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ,” ಎಂದು ಪೇತ್ರನು ಹೇಳಿದನು. ಪೇತ್ರನು ಇನ್ನೂ ಸಾರುತ್ತಿರುವಾಗಲೇ, ತದನಂತರ ದೀಕ್ಷಾಸ್ನಾನ ಪಡೆದ ಮತ್ತು ಕ್ರಿಸ್ತನ ಪ್ರಥಮ ಅನ್ಯಜನಾಂಗದ ಹಿಂಬಾಲಕರಾದ, ಹೊಸದಾಗಿ ನಂಬುವವರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು.—ಅ.ಕೃತ್ಯಗಳು ಅಧ್ಯಾಯ 10.

“ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಆಜ್ಞೆಯು ಎಲ್ಲಾ ದೇಶಗಳಲ್ಲಿರುವ ಯೆಹೂದ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ ಆದರೆ ಅನ್ಯಜನಾಂಗದವರನ್ನು ಒಳಗೊಂಡಿತ್ತು ಎಂಬುದನ್ನು ಗ್ರಹಿಸುತ್ತಾ, ಯೆಹೂದ್ಯ ಹಿಂಬಾಲಕರು ಈ ಬೆಳವಣಿಗೆಯನ್ನು ಸ್ವೀಕರಿಸಿದರು. (ಮತ್ತಾಯ 28:19, 20; ಅ. ಕೃತ್ಯಗಳು 11:18) ಅವರಲ್ಲಿ ಅನ್ಯಜನಾಂಗದ ವಿರುದ್ಧವಿದ್ದಿರಬಹುದಾದ ಯಾವುದೇ ಅನಿಸಿಕೆಗಳನ್ನು ಜಯಿಸುತ್ತಾ, ಜನಾಂಗಗಳಲ್ಲಿ ಶಿಷ್ಯರನ್ನು ಮಾಡಲು ಅವರು ಉತ್ಸಾಹಪೂರ್ವಕವಾಗಿ ಸಾರುವ ಒಂದು ಕಾರ್ಯಾವಳಿಯನ್ನು ಸಂಘಟಿಸಿದರು. ಮೂವತ್ತಕ್ಕಿಂತಲೂ ಕಡಿಮೆ ವರ್ಷಗಳ ಅನಂತರ, “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸುವಾರ್ತೆಯು ಸಾರಲ್ಪಟ್ಟಿತ್ತೆಂದು ಹೇಳಬಹುದಿತ್ತು.—ಕೊಲೊಸ್ಸೆ 1:23.

ಸ್ವತಃ ಯೆಹೂದ್ಯ ಹಿನ್ನೆಲೆಯ ಕ್ರೈಸ್ತನಾಗಿದ್ದ ಅಪೊಸ್ತಲ ಪೌಲನು, ಈ ಸಾರುವ ಕೆಲಸವನ್ನು ಮುಂದಕ್ಕೆ ನುಗ್ಗುವವನಾಗಿದ್ದನು. ಕ್ರಿಸ್ತನ ಹಿಂಬಾಲಕನಾಗುವ ಮೊದಲು, ಅವನು ಫರಿಸಾಯರ ಧಾರ್ಮಿಕ ಪಂಗಡದ ಒಬ್ಬ ಉತ್ಸಾಹವುಳ್ಳ ಸದಸ್ಯನಾಗಿದ್ದನು. ಅವರು ಅನ್ಯಜನಾಂಗದವರನ್ನು ಮಾತ್ರವಲ್ಲ ತಮ್ಮ ಸ್ವಂತ ಜನಾಂಗದ ಸಾಮಾನ್ಯ ಜನರನ್ನು ಕೂಡ ಕೀಳು ದೃಷ್ಟಿಯಿಂದ ನೋಡಿದರು. (ಲೂಕ 18:11, 12) ಆದರೆ ಇತರರಿಗೆ ನೆರೆಯವನ ಪ್ರೀತಿಯನ್ನು ತೋರಿಸುವುದರಿಂದ ಆ ನೋಟಗಳು ಅವನನ್ನು ತಡೆಯುವಂತೆ ಪೌಲನು ಬಿಡಲಿಲ್ಲ. ಅದರ ಬದಲು, ಭೂಮಧ್ಯದ ಪ್ರದೇಶಗಳ ಉದ್ದಕ್ಕೂ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ತನ್ನ ಜೀವವನ್ನು ಸಮರ್ಪಿಸಿಕೊಂಡು, ಅವನು “ಅನ್ಯಜನರಿಗೆ ಅಪೊಸ್ತಲ” ನಾದನು.—ರೋಮಾಪುರ 11:13.

ಅವನ ಶುಶ್ರೂಷೆಯ ಸಮಯದಲ್ಲಿ, ಪೌಲನು ಕಲ್ಲೆಸೆಯಲ್ಪಟ್ಟನು, ಹೊಡೆಯಲ್ಪಟ್ಟನು ಮತ್ತು ಸೆರೆಯಲ್ಲಿಡಲ್ಪಟ್ಟನು. (ಅ. ಕೃತ್ಯಗಳು 14:19; 16:22, 23) ಅವನು ವೈಮನಸ್ಸುಳ್ಳವನಾಗುವಂತೆ ಮತ್ತು ನಿರ್ದಿಷ್ಟ ಜನಾಂಗಗಳು ಮತ್ತು ಕುಲ ಗುಂಪುಗಳೊಳಗೆ ಅವನ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾನೆಂದು ತೀರ್ಮಾನಿಸುವಂತೆ ಇಂಥ ಒರಟಾದ ಅನುಭವಗಳು ಅವನನ್ನು ಅನುಮತಿಸಿದವೊ? ಇಲ್ಲವೇ ಇಲ್ಲ. ಅವನ ದಿನದ ಅನೇಕ ಕುಲ ಗುಂಪುಗಳಲ್ಲಿ ಯಥಾರ್ಥ ಹೃದಯದ ವ್ಯಕ್ತಿಗಳು ಚದರಿದ್ದಾರೆಂದು ಅವನಿಗೆ ಗೊತ್ತಿತ್ತು.

ದೇವರ ಮಾರ್ಗಗಳ ಕುರಿತಾಗಿ ಕಲಿಸಲ್ಪಡುವಂತೆ ಸಿದ್ಧರಾಗಿದ್ದ ಅನ್ಯಜನಾಂಗದವರನ್ನು ಪೌಲನು ಕಂಡಾಗ, ಅವನು ಅವರನ್ನು ಪ್ರೀತಿಸ ತೊಡಗಿದನು. ಉದಾಹರಣೆಗೆ, ಅವನು ಥೆಸಲೊನೀಕದವರಿಗೆ ಹೀಗೆ ಬರೆದನು: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು. ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸಲೊನೀಕ 2:7, 8) ಪೌಲನು ಅನ್ಯಜನಾಂಗದವರಾದ ಥೆಸಲೊನೀಕದವರನ್ನು ನಿಜವಾಗಿಯೂ ಪ್ರೀತಿಸಿದನೆಂದು ಈ ಹೃತ್ಪೂರ್ವಕವಾದ ಮಾತುಗಳು ತೋರಿಸುತ್ತವೆ ಮತ್ತು ಅವರೊಂದಿಗೆ ಒಂದು ಒಳ್ಳೆಯ ಸಂಬಂಧದ ಸಂತೋಷವನ್ನು ಕೆಡಿಸುವಂತೆ ಯಾವುದನ್ನೂ ಬಿಡಲಿಲ್ಲ.

ಕಾರ್ಯದಲ್ಲಿ ನೆರೆಯವನ ಪ್ರೀತಿ

ಮೊದಲನೆಯ ಶತಮಾನದಂತೆ ಇಂದು, ಕ್ರೈಸ್ತ ಸಭೆಗೆ ತಮ್ಮನ್ನು ಕೂಡಿಸಿಕೊಳ್ಳುವವರು ಎಲ್ಲಾ ಕುಲ ಗುಂಪುಗಳ ಜನರಿಗಾಗಿ ನೆರೆಯವರ ಪ್ರೀತಿಯನ್ನು ಬೆಳಸಿಕೊಳ್ಳುತ್ತಾರೆ. ಇತರರ ಕುರಿತು ಒಂದು ದೈವಿಕ ನೋಟವನ್ನು ವಿಕಸಿಸುವ ಮೂಲಕ ಮತ್ತು ಅವರೊಂದಿಗೆ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳುವ ಮೂಲಕ, ಅವರಿಗೆ ಎಂದೂ ಪರಿಚಯವಾಗದೆ ಇರಬಹುದಾದ ಜನರ ಕುರಿತಾದ ತಮ್ಮ ತಿಳಿವಳಿಕೆಯನ್ನು ನಿಜ ಕ್ರೈಸ್ತರು ವಿಶಾಲಗೊಳಿಸಿದ್ದಾರೆ. ಅವರಿಗಾಗಿ ಸಹೋದರ ಪ್ರೀತಿಯನ್ನು ಕೂಡ ಅವರು ಹೊಂದಿದ್ದಾರೆ. (ಯೋಹಾನ 13:34, 35) ಇದು ನಿಮ್ಮ ಅನುಭವ ಕೂಡ ಆಗಿರಬಲ್ಲದು.

ಅವರು 229 ದೇಶಗಳಲ್ಲಿ ಕಂಡುಕೊಳ್ಳಲ್ಪಟ್ಟರೂ ಮತ್ತು “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರ”ನ್ನು ಪ್ರತಿನಿಧಿಸಿದರೂ, ಇಂಥ ಪ್ರೀತಿಯು ಯೆಹೋವನ ಸಾಕ್ಷಿಗಳೊಳಗೆ ಇದೆ. (ಪ್ರಕಟನೆ 7:9) ಒಂದು ಭೌಗೋಲಿಕ ಸಹೋದರತ್ವದೋಪಾದಿಯಲ್ಲಿ, ಕುಲ ಸಂಬಂಧವಾದ ಘರ್ಷಣೆಗಳಲ್ಲಿ ಮತ್ತು ಸ್ಪರ್ಧೆಗಳಲ್ಲಿ ಭಾಗವನ್ನು ತೆಗೆದುಕೊಳ್ಳಲು ತಮ್ಮ ತಿರಸ್ಕಾರದಿಂದ, ಮತ್ತು ಜೊತೆ ಮಾನವರೊಂದಿಗೆ ಆದರದ ಸಂಬಂಧಗಳಿಂದ ಜನರನ್ನು ವಂಚಿತಗೊಳಿಸುವ ಪೂರ್ವಾಗ್ರಹಗಳ ತಮ್ಮ ತಿರಸ್ಕಾರದಿಂದ, ಅವರು ಯೆಹೋವನ ಆರಾಧನೆಯಲ್ಲಿ ಐಕ್ಯರಾಗಿದ್ದಾರೆ.

ಸಾಕ್ಷಿಗಳೊಂದಿಗೆ ಸಹವಸಿಸಿರಿ, ಮತ್ತು ಎಲ್ಲಾ ಕುಲಹಿನ್ನೆಲೆಗಳ ಜನರು ದೇವರ ಚಿತ್ತವನ್ನು ಹೇಗೆ ಮಾಡುತ್ತಿದ್ದಾರೆಂದು ನೀವು ವೀಕ್ಷಿಸುವಿರಿ. ಅವರು ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುವಾಗ ಕಾರ್ಯದಲ್ಲಿ ನೆರೆಯವನ ಪ್ರೀತಿಯನ್ನು ನೀವು ಕಾಣುವಿರಿ. ಹೌದು, ಮತ್ತು ಅವರ ಸಭೆಗಳಲ್ಲಿ, ತಮ್ಮ ನೆರೆಯವರನ್ನು ಪ್ರೀತಿಸಲು ನಿಜವಾಗಿಯೂ ಕಲಿತಿದ್ದಾರೆಂದು ತಮ್ಮ ಜೀವಿತಗಳ ಮೂಲಕ ತೋರಿಸುವ ದಯಾಪರ, ಯಥಾರ್ಥ ಜನರನ್ನು ನೀವು ಭೇಟಿಯಾಗುವಿರಿ.

[ಪುಟ 4 ರಲ್ಲಿರುವ ಚಿತ್ರ ಕೃಪೆ]

Arrival of the Good Samaritan at the Inn/The Doré Bible Illustrations/Dover Publications, Inc.

[ಪುಟ 6 ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ, ಎಲ್ಲಾ ಕುಲಗಳ ಆನಂದಭರಿತ ಜನರನ್ನು ನೀವು ಕಾಣುವಿರಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ