ನಂಬಿಕೆಯು ರೋಗಿಗೆ ಸಹಾಯಮಾಡಬಲ್ಲ ವಿಧ
ನಮ್ಮ ಹಿತಾಸಕ್ತಿಯ ಕುರಿತು ದೇವರು ಚಿಂತೆಯುಳ್ಳವನಾಗಿದ್ದಾನೆ ಎಂದು ಬೈಬಲಿನ ಅದ್ಭುತಕರ ವಾಸಿಮಾಡುವಿಕೆಗಳ ದಾಖಲೆಗಳು ನಮಗೆ ಪುನಃ ಆಶ್ವಾಸನೆಯನ್ನೀಯುತ್ತವೆ ಮತ್ತು ವಾಸಿಮಾಡಲು ಅವನಿಗಿರುವ ಶಕ್ತಿಯನ್ನು ನಮಗೆ ತೋರಿಸುತ್ತವೆ. ಈ ಅದ್ಭುತಕರವಾದ ಗುಣಪಡಿಸುವಿಕೆಗಳು ದೇವರನ್ನು ಮಹಿಮೆಪಡಿಸಿದವು ಮತ್ತು ಬಹಳಷ್ಟು ಆನಂದವನ್ನು ತಂದವು, ಆದುದರಿಂದ ಹೀಗೆ ಕೇಳುವದು ತಾರ್ಕಿಕವಾಗಿರುತ್ತದೆ, ಪವಿತ್ರಾತ್ಮನ ಮೂಲಕ ವಾಸಿಮಾಡುವ ವರದಾನವು ಇನ್ನೂ ಕಾರ್ಯನಿರ್ವಹಿಸುತ್ತದೋ?
ಆ ಪ್ರಶ್ನೆಗೆ ಉತ್ತರವು ಇಲ್ಲ ಎಂದಾಗಿದೆ—ಮತ್ತು ಕಾರಣವು ಕೆಲವರನ್ನು ಅಚ್ಚರಿಗೊಳಿಸಬಹುದು. ಮೊದಲನೆಯ ಶತಕದ ಆ ಅದ್ಭುತ ಗುಣಪಡಿಸುವಿಕೆಗಳು ಅವುಗಳ ಉದ್ದೇಶವನ್ನು ನೆರವೇರಿಸಿವೆ. ದಿ ಇಲಸ್ಟ್ರೇಟಡ್ ಬೈಬಲ್ ಡಿಕ್ಷನರಿ ಸರಿಯಾಗಿಯೇ ಗಮನಿಸಿದ್ದು: “ವಾಸಿಮಾಡುವಿಕೆಯ ಅದ್ಭುತಗಳು ದೇವತಾಶಾಸ್ತ್ರಕ್ಕೆ ಸಂಬಂಧಿಸಿದವುಗಳೇ ಹೊರತು ವೈದ್ಯಕೀಯವಾಗಿ ಅಲ್ಲ.” ಆ ಅದ್ಭುತಗಳ ಮೂಲಕ ಪೂರೈಸಲ್ಪಟ್ಟ ದೇವತಾಶಾಸ್ತ್ರದ ಕೆಲವು ಉದ್ದೇಶಗಳು ಯಾವುದಾಗಿದ್ದವು?
ಒಂದು ಸಂಗತಿಯೆಂದರೆ, ಮೆಸ್ಸೀಯನಾಗಿ ಯೇಸುವನ್ನು ಗುರುತಿಸುವದೇ ಅವನ ವಾಸಿಮಾಡುವ ಅದ್ಭುತಗಳ ಉದ್ದೇಶವನ್ನು ಪೂರೈಸಿದವು. ಮತ್ತು ಅವನ ಮರಣದ ನಂತರ, ಹೊಸ ಕ್ರೈಸ್ತ ಸಭೆಯ ಮೇಲೆ ದೇವರ ಆಶೀರ್ವಾದಗಳು ಇದ್ದವು ಎಂದು ಸಾಬೀತುಪಡಿಸಲು ಅವುಗಳು ನೆರವಾದವು. (ಮತ್ತಾಯ 11:2-6; ಇಬ್ರಿಯ 2:3, 4) ಅದಲ್ಲದೆ, ನೂತನ ಲೋಕದಲ್ಲಿ ಮಾನವ ಕುಲವನ್ನು ವಾಸಿಮಾಡುವ ದೇವರ ಉದ್ದೇಶವು ನೆರವೇರಲ್ಪಡುವದು ಎಂದು ಅವುಗಳು ಪ್ರದರ್ಶಿಸಿದವು. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವ” ಸಮಯವು ಖಂಡಿತವಾಗಿಯೂ ಬರುವದು ಎಂಬುದರ ಮೇಲೆ ನಮ್ಮ ನಂಬಿಕೆಯನ್ನು ಅವುಗಳು ಸ್ಥಿರೀಕರಿಸುತ್ತವೆ. (ಯೆಶಾಯ 33:24) ಒಮ್ಮೆ ಮೊದಲನೆಯ ಶತಕದ ಈ ಉದ್ದೇಶಗಳು ಸಾಧಿಸಲ್ಪಟ್ಟಾಗ, ಅದ್ಭುತಗಳ ಆವಶ್ಯಕತೆ ಇನ್ನು ಇರಲಿಲ್ಲ.
ಅದ್ಭುತಕರವಾಗಿ ವಾಸಿಮಾಡಲ್ಪಡದಂತಹ ದುರ್ಬಲತೆಗಳಿಂದ ಯೇಸುವಿನ ಮೊದಲನೆಯ ಶತಕದ ಶಿಷ್ಯರು ಸ್ವತಃ ಬಾಧಿತರಾಗಿದ್ದರು ಎಂಬುದು ಗಮನಾರ್ಹವಾಗಿದೆ. ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಲ್ಲ, ಬದಲಾಗಿ ಪ್ರಾಮುಖ್ಯ ಸತ್ಯತೆಗಳನ್ನು ಕಲಿಸಲು ಯೇಸುವಿನ ಹಾಗೂ ಅಪೊಸ್ತಲರ ಅದ್ಭುತಕರವಾದ ವಾಸಿಮಾಡುವಿಕೆಗಳು ರೂಪಿತಗೊಂಡಿದ್ದವು ಎನ್ನುವದನ್ನು ಇದು ಇನ್ನಷ್ಟು ರುಜುಗೊಳಿಸುತ್ತದೆ. ತಿಮೊಥಿಯ ಪದೇ ಪದೇ ಬರುವ ರೋಗಕ್ಕಾಗಿ, ಒಂದು ಔಷಧೋಪಚಾರವನ್ನು ಶಿಫಾರಸುಮಾಡುವಾಗ, ಪೌಲನು ದ್ರಾಕ್ಷಾಮದ್ಯದ ಚಿಕಿತ್ಸಕ ಬಳಕೆಯನ್ನು ಸೂಚಿಸಿದನೇ ಹೊರತು, ಭಕ್ತಿಚಿಕಿತ್ಸೆಯಲ್ಲ. ವಾಸಿಮಾಡುವಿಕೆಯ ಅದ್ಭುತಗಳನ್ನು ನಡಿಸಿದಂತಹ ಪೌಲನು, ಅವನನ್ನು “ಗುದ್ದುತ್ತಿರುವ” “ಒಂದು ಶೂಲ ಶರೀರದಲ್ಲಿ ನಾಟಿರು” ವದರಿಂದ ಪರಿಹಾರವನ್ನು ಕಂಡುಕೊಳ್ಳಲಿಲ್ಲ.—2 ಕೊರಿಂಥ 12:7; 1 ತಿಮೊಥಿ 5:23.
ಅಪೊಸ್ತಲರು ಮೃತಿಹೊಂದಿದಾಗ, ವಾಸಿಮಾಡುವಿಕೆಯ ವರದಾನವು ಗತಿಸಿಹೋಯಿತು. ಹೀಗೆ ಸಂಭವಿಸಲಿರುವದೆಂದು ಪೌಲನು ತಾನೇ ಸೂಚಿಸಿದ್ದನು. ಕ್ರೈಸ್ತ ಸಭೆಯನ್ನು ಒಂದು ಕೂಸಿಗೆ ಸರಿದೂಗುತ್ತಾ, ಪೌಲನು ಅಂದದ್ದು: “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.” ಅವನ ಉದಾಹರಣೆಯ ವಿಚಾರವೇನಂದರೆ ಆತ್ಮದ ಅದ್ಭುತಗಳ ವರದಾನಗಳು ಕ್ರೈಸ್ತ ಸಭೆಯ ಬಾಲ್ಯತನದ ಲಕ್ಷಣಗಳಾಗಿದ್ದವು. ಅವುಗಳು “ಬಾಲ್ಯದವುಗಳು” ಆಗಿದ್ದವು. ಆದಕಾರಣ, ಅವನಂದದ್ದು: “ಅವುಗಳಾದರೋ [ಅದ್ಭುತಗಳ ವರದಾನಗಳು] ಇಲ್ಲದಂತಾಗುವವು.”—1 ಕೊರಿಂಥ 13:8-11.
ನಾವು ಅಸ್ವಸ್ಥರಾದಾಗ ನಂಬಿಕೆಯು ನಮಗೆ ಸಹಾಯ ಮಾಡಬಲ್ಲದೋ?
ಆದಾಗ್ಯೂ, ನಾವು ಭಕ್ತಿಚಿಕಿತ್ಸೆಯ ಮೇಲೆ ಅವಲಂಬಿಸುವದಿಲ್ಲದಿದ್ದರೂ ಕೂಡ, ನಾವು ಅಸ್ವಸ್ಥರಾದಾಗ ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸುವದು ಖಂಡಿತವಾಗಿಯೂ ಯುಕ್ತವಾಗಿದೆ. ಮತ್ತು ನಮ್ಮ ಪರವಾಗಿ ಇತರರು ಮಾಡುವ ಪ್ರಾರ್ಥನೆಗಳಲ್ಲಿ ಖಂಡಿತವಾಗಿಯೂ ಯಾವುದೇ ತಪ್ಪಿಲ್ಲ. ಆದರೆ ಪ್ರಾರ್ಥನೆಗಳು ವಾಸ್ತವತೆಯದ್ದಾಗಿರತಕ್ಕದ್ದು ಮತ್ತು ದೇವರ ಚಿತ್ತದೊಂದಿಗೆ ಹೊಂದಿಕೆಯಿಂದಿರತಕ್ಕದ್ದು. (1 ಯೋಹಾನ 5:14, 15) ಭಕ್ತಿಚಿಕಿತ್ಸೆಗಾಗಿ ಪ್ರಾರ್ಥಿಸುವಂತೆ ಬೈಬಲಿನಲ್ಲಿ ಎಲ್ಲಿಯೂ ನಮಗೆ ಆಜ್ಞಾಪಿಸಿರುವದಿಲ್ಲ.a ಬದಲಾಗಿ, ಅಸ್ವಸ್ಥತೆಯಿಂದ ಉಂಟಾದ ಪರಿಶೋಧನೆಗಳಲ್ಲಿ ಯೆಹೋವನ ಪ್ರೀತಿಯ ಬೆಂಬಲಕ್ಕಾಗಿ ನಾವು ಪ್ರಾರ್ಥಿಸುತ್ತೇವೆ.
ನಂಬಿಗಸ್ತರು ಅನಾರೋಗ್ಯದಲ್ಲಿ ಬಿದ್ದಿರುವಾಗ ಏನನ್ನು ಪ್ರಾರ್ಥಿಸಬಹುದು ಎಂಬುದನ್ನು, ಬೈಬಲು ಹೀಗೆ ಹೇಳುವದರ ಮೂಲಕ ತೋರಿಸುತ್ತದೆ: “ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ, ಸ್ವಾಮೀ.” (ಕೀರ್ತನೆ 41:3) ದೇವರ ವಾಕ್ಯದ ಮೇಲಿನ ಮನನಮಾಡುವಿಕೆಯು ಭಾವನಾತ್ಮಕ ರೋಗಗಳಿಂದ ನರಳುವವರಿಗೆ ಸಹಾಯ ಮಾಡುವದು. ಕೀರ್ತನೆಗಾರನು ಬರೆದದ್ದು: “ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದಾಗಲೇ ನಿನ್ನ ಕೃಪೆಯು ನನಗೆ ಆಧಾರವಾಯಿತು. ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”—ಕೀರ್ತನೆ 94:18, 19; 63:6-8 ಕೂಡ ನೋಡಿರಿ.
ಇದಕ್ಕೆ ಕೂಡಿಸಿ, ಆರೋಗ್ಯ ವಿಚಾರಗಳಲ್ಲಿ ನಾವು ಸ್ವಸ್ಥ ಬುದ್ಧಿಯನ್ನು ತೋರಿಸುವ ಜರೂರಿಯಿದೆ, ಮತ್ತು ಇದರ ಕುರಿತು ಬೈಬಲು ನಮಗೆ ಸಲಹೆಯನ್ನೀಯುತ್ತದೆ. ಮಾದಕೌಷಧದ ದುರುಪಯೋಗದಲ್ಲಿ, ಧೂಮಪಾನದಲ್ಲಿ, ಅತಿ ಕುಡಿಕತನದಲ್ಲಿ, ಯಾ ಅತೀ ಭೋಜನದಲ್ಲಿ ತೊಡಗಿ, ತದನಂತರ ರೋಗಗಳು ಬರುವಾಗ, ಹತಾಶೆಯಿಂದ ಭಕ್ತಿಚಿಕಿತ್ಸೆಗೆ ತಿರುಗುವದರ ಬದಲು, ಬೈಬಲಿನ ಸೂತ್ರಗಳಿಗನುಸಾರ ಬದುಕುವದು ಎಷ್ಟೋ ಉತ್ತಮ. ಅಸ್ವಸ್ಥ ಹೊಡೆಯುವಾಗ ಅದ್ಭುತಕ್ಕಾಗಿ ಪ್ರಾರ್ಥಿಸುವುದು, ಪೋಷಕಾಹಾರವನ್ನು, ಅದು ಸಿಕ್ಕುವುದಾದರೆ, ತಿನ್ನುವದರ ಮೂಲಕ ಇಲ್ಲವೆ ಅರ್ಹತೆಯ ವೈದ್ಯಕೀಯ ಸಹಾಯವನ್ನು ಹುಡುಕುವದರ ಮೂಲಕ ವಿವೇಕದ ವರ್ತನೆ ತೋರಿಸುವದಕ್ಕೆ ಬದಲಿಯಾಗಿರುವದಿಲ್ಲ.
ನಮ್ಮ ದೈಹಿಕ ಆರೋಗ್ಯಕ್ಕೆ ಪ್ರಯೋಜನತರಶಕ್ಯವಾದ ಆರೋಗ್ಯಕರ ಮಾನಸಿಕ ಮನೋಭಾವಗಳನ್ನು ಬೆಳೆಸುವಂತೆ ಕೂಡ ದೇವರ ವಾಕ್ಯವು ನಮಗೆ ಉತ್ತೇಜಿಸುತ್ತದೆ. ಜ್ಞಾನೋಕ್ತಿ ಪುಸ್ತಕವು ಸಲಹೆಯನ್ನೀಯುವದು: “ಶಾಂತಿಗುಣವು ದೇಹಕ್ಕೆ ಜೀವಾಧಾರವು; ಕ್ರೋಧವು ಎಲುಬಿಗೆ ಕ್ಷಯ.” “ಹರ್ಷಹೃದಯವು ಒಳ್ಳೇ ಔಷಧ, ಕುಗ್ಗಿದ ಮನದಿಂದ ಒಣಮೈ.” (ಜ್ಞಾನೋಕ್ತಿ 14:30; 17:22) ಶಾಂತಗುಣವನ್ನು ಮತ್ತು ಸಂತೋಷವನ್ನು ಬೆಳಸಲು ಪವಿತ್ರಾತ್ಮಕ್ಕಾಗಿ ಬೇಡುವದು ಮಾತ್ರ ನಮ್ಮ ದೈಹಿಕ ಆರೋಗ್ಯದ ಮೇಲೆ ಲಾಭಕರ ಪರಿಣಾಮಗಳನ್ನು ತರಸಾಧ್ಯವಿದೆ.—ಫಿಲಿಪ್ಪಿ 4:6, 7.
ಭಕ್ತಿಚಿಕಿತ್ಸೆಯ ಕುರಿತೇನು?
ಒಬ್ಬನ ಪರಿಸ್ಥಿತಿಯು ಅನುಮತಿಸುವಷ್ಟರ ಮಟ್ಟಿಗೆ ವ್ಯಕ್ತಿಯೊಬ್ಬನು ಒಂದು ಆರೋಗ್ಯಕರ ಜೀವನವನ್ನು ನಡಿಸುವದಾದರೂ ಕೂಡ, ರೋಗವು ಇನ್ನೂ ಅವನಿಗೆ ತಟ್ಟಬಹುದು. ಆಗ ಏನು? ಗುಣಪಡೆಯುವ ಉದ್ದೇಶದಿಂದ ಒಬ್ಬ ಭಕ್ತಿಚಿಕಿತ್ಸಕನ ಬಳಿಗೆ ಹೋಗುವದರಲ್ಲಿ ಏನಾದರೂ ಹಾನಿಯಿದೆಯೇ? ಹೌದು, ಅಲ್ಲಿ ಹಾನಿ ಇರುತ್ತದೆ. ಆಧುನಿಕ ಭಕ್ತಿಚಿಕಿತ್ಸಕರು ಉಚಿತವಾಗಿ ಮಾಡುವದು ವಿರಳ. ಮತ್ತು ವೈದ್ಯಕೀಯ ಸಹಾಯವನ್ನು ಪಡೆಯುವದರ ಮೇಲೆ ವಿನಿಯೋಗಿಸುವ ಹಣವನ್ನು ಭಕ್ತಿಚಿಕಿತ್ಸಕನೊಡನೆ ವ್ಯಯಿಸುವದಾದರೆ, ಅದು ನಮಗೆ ದುಬಾರಿಯಾಗಬಹುದು. ಅದಲ್ಲದೆ, ಜನರ ಮೂಢಶ್ರದ್ಧೆಯ ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಹಣವನ್ನು ಯಾಕೆ ಕೊಡತಕ್ಕದ್ದು?
ಕೆಲವರು ವಿವಾದಿಸಬಹುದು: ‘ಒಂದು ವೇಳೆ “ವಾಸಿಮಾಡುವವರ” ಬಳಿಗೆ ಹೋಗುವವರಲ್ಲಿ ಕೇವಲ ಕೊಂಚ ಪ್ರತಿಶತದಷ್ಟು ಕೂಡ ಗುಣಮುಖಗೊಳ್ಳುವದಾದರೆ, ಭಕ್ತಿಚಿಕಿತ್ಸೆಯಲ್ಲಿ ಸ್ವಲ್ಪವಾದರೂ ಮೂಲ್ಯತೆ ಖಂಡಿತವಾಗಿ ಇರಲೇಬೇಕು.’ ಆದರೆ ಭಕ್ತಿಚಿಕಿತ್ಸಕರು ನಿಜವಾಗಿ ಯಾರೊಬ್ಬನನ್ನಾದರೂ ಶಾಶ್ವತವಾಗಿ ಗುಣಮುಖಪಡಿಸುವರೋ ಎನ್ನುವದು ವಾದಾರ್ಹವಾದದ್ದು. ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಅಂಗೀಕರಿಸುವದು: “ಭಕ್ತಿಚಿಕಿತ್ಸೆಯಲ್ಲಿ ಅನೇಕ ಅಜ್ಞಾತ ವಾಸ್ತವಾಂಶಗಳ ಕುರಿತು ಸಂಬಂಧಿತವಾಗಿ ಕೊಂಚವೇ ನಿಯಂತ್ರಿಸಲ್ಪಟ್ಟ ಸಂಶೋಧನೆಯನ್ನು ಸಾಧಿಸಲಾಗಿದೆ.”
ಕೇವಲ ಕೆಲವೇ ಸಂಖ್ಯೆಯಲ್ಲಿ ಗುಣಮುಖರಾಗಿದ್ದಾರೆಂದು ಭಾಸವಾದರೂ, ಇದು ಪವಿತ್ರಾತ್ಮನ ಶಕ್ತಿಯು ಕಾರ್ಯವೆಸಗುವದರ ಒಂದು ಪುರಾವೆ ಅಲ್ಲ. ಪರ್ವತ ಪ್ರಸಂಗದಲ್ಲಿ ಯೇಸುವು ಅಂದದ್ದು: “ಸ್ವಾಮೀ, ಸ್ವಾಮೀ ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.” (ಮತ್ತಾಯ 7:22, 23) ಯೇಸುವು ಇದನ್ನು ಕೂಡ ಹೇಳಿದ್ದನು, ಕೆಲವು ನಿರ್ದಿಷ್ಟ ವ್ಯಕ್ತಿಗಳು ದೇವರಿಂದ ಒಪ್ಪಲ್ಪಡದೆ ಇರುವದಾದರೂ ಸೂಚಕಕಾರ್ಯಗಳ ಮೂಲಕ ತಮ್ಮೆಡೆಗೆ ಅನೇಕರನ್ನು ಆಕರ್ಷಿಸುವರು: “ಸುಳ್ಳುಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಸಹ ಮೋಸಗೊಳಿಸುವದಕ್ಕೋಸ್ಕರ ದೊಡ್ಡ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.” (ಮತ್ತಾಯ 24:24) ಖಂಡಿತವಾಗಿಯೂ, ಆಧುನಿಕ ಭಕ್ತಿಚಿಕಿತ್ಸಕರನ್ನು, ಅವರ ಎಲ್ಲಾ ನಾಟಕೀಯ ಪ್ರದರ್ಶನಗಳೊಂದಿಗೆ, ಹಣಕ್ಕಾಗಿ ಅವಿರತ ಬೇಡಿಕೆಯೊಂದಿಗೆ, ಮತ್ತು ಹೇಳಿಕೊಳ್ಳಲ್ಪಡುವ ಅದ್ಭುತಕರ ವಾಸಿಮಾಡುವಿಕೆಗಳ ಸಹಿತ ಆ ಮಾತುಗಳ ಅನ್ವಯಿಸುವಿಕೆಯಲ್ಲಿ ಕೂಡಿಸುವ ಸಾಧ್ಯತೆಯಿದೆ.
ಅಂಥವರು ಯೇಸುವಿನ ಹೆಜ್ಜೇಜಾಡೆಯನ್ನು ಅನುಸರಿಸುವದಿಲ್ಲ. ಹಾಗಾದರೆ ಅವರು ಯಾರನ್ನು ಹಿಂಬಾಲಿಸುತ್ತಾರೆ? ಅಪೊಸ್ತಲ ಪೌಲನು ಇದನ್ನು ಹೇಳುವಾಗ ನಮಗೆ ಒಂದು ಸೂಚನೆ ನೀಡುತ್ತಾನೆ: “ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸುವದಕ್ಕೆ ವೇಷಹಾಕಿಕೊಳ್ಳುವದು ದೊಡ್ಡದಲ್ಲ. ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.” (2 ಕೊರಿಂಥ 11:14, 15) ಅವರು ಹೇಳಿಕೊಳ್ಳುವಂಥ ವಾಸಿಮಾಡುವಿಕೆಯನ್ನು ಭಕ್ತಿಚಿಕಿತ್ಸಕರು ಮಾಡುವದಿಲ್ಲವಾದರೆ, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ” ಸೈತಾನನ ಪಥವನ್ನು ಅನುಸರಿಸುವ ಅವರು ಮೋಸಗಾರರಾಗಿರುತ್ತಾರೆ. (ಪ್ರಕಟನೆ 12:9) ಆದರೆ ಅಲ್ಪಾಂಶ ಸಂಖ್ಯೆಯಲ್ಲಿ ಅವರು ವಾಸಿಮಾಡುವಿಕೆಯನ್ನು ಮಾಡುವದಾದರೆ, ಆಗೇನು? ಅವರ “ಮಹತ್ಕಾರ್ಯಗಳು” ಸೈತಾನನ ಮತ್ತು ಅವನ ದೆವ್ವಗಳ ಶಕ್ತಿಯಲ್ಲಿ ಪ್ರಭಾವಿತಗೊಂಡಿವೆಯೇ? ಹೌದು, ವಿಷಯವು ಹಾಗಿರಲೇಬೇಕು!
ನೈಜ ವಾಸಿಮಾಡುವಿಕೆಯ ಸಮಯ
ಯೇಸುವಿನ ಅದ್ಭುತಕರ ಗುಣಪಡಿಸುವಿಕೆಗಳು ದೇವರ ಪವಿತ್ರ ಆತ್ಮದ ಸಹಾಯದಿಂದ ಮಾಡಲ್ಪಟ್ಟವು. ಅವನ ಕ್ಲುಪ್ತಕಾಲದಲ್ಲಿ ಮಾನವನ ಆರೋಗ್ಯದ ಸಮಸ್ಯೆಗಳೆಲ್ಲವನ್ನೂ ಪರಿಹರಿಸುವ ಅವನ ಉದ್ದೇಶವನ್ನು ಅವು ಪ್ರದರ್ಶಿಸಿದವು. “ಜನಾಂಗದವರನ್ನು ವಾಸಿಮಾಡುವದನ್ನು” ಯೆಹೋವನು ವಾಗ್ದಾನಿಸುತ್ತಾನೆ. (ಪ್ರಕಟನೆ 22:2) ಮತ್ತು ಅವನು ಕೇವಲ ಅಸ್ವಸ್ಥತೆಯನ್ನು ವಾಸಿಮಾಡುವುದು ಮಾತ್ರವಲ್ಲ, ಮರಣವನ್ನೂ ಕೂಡ ತೆಗೆಯಲಿದ್ದಾನೆ. ಯೇಸುವು “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂದು” ಬಂದನು ಎಂದು ಯೋಹಾನನು ವಿವರಿಸುತ್ತಾನೆ. (ಯೋಹಾನ 3:16) ಅದು ಎಂಥ ಒಂದು ಉತ್ತಮ ವಾಸಿಮಾಡುವಿಕೆಯಾಗಲಿರುವದು! ಬೈಬಲಿನಲ್ಲಿ ದಾಖಲೆಯಾದಂಥ ವಾಸಿಮಾಡುವಿಕೆಗಳನ್ನು, ಆದರೆ ಇನ್ನಷ್ಟು ಮಹತ್ತರವಾದ ಪ್ರಮಾಣದಲ್ಲಿ, ಯೇಸುವು ಪುನಃ ಒಮ್ಮೆ ಮಾಡಲಿರುವನು. ಅವನು ಮೃತರನ್ನೂ ಪುನರುತ್ಥಾನಗೊಳಿಸಲಿರುವನು! (ಯೋಹಾನ 5:28, 29) ಇದು ಯಾವಾಗ ಸಂಭವಿಸಲಿರುವದು?
ದೊರಕುವ ಎಲ್ಲಾ ಸಾಕ್ಷ್ಯಗಳಿಗನುಸಾರ, ಅತಿ ನಿಕಟದಲ್ಲಿರುವ ದೇವರ ಹೊಸ ಲೋಕದಲ್ಲಿ. ಈ ವಿಷಯಗಳ ವ್ಯವಸ್ಥೆಯ ದುಷ್ಟತೆಯು ನಿರ್ಮೂಲಗೊಳಿಸಲ್ಪಟ್ಟ ನಂತರ ಒಳಪ್ರವೇಶಿಸಲಿರುವ ಆ ಹೊಸ ಲೋಕವು, ನೀತಿಯ ಹೃದಯದ ಮಾನವಕುಲಕ್ಕೆ ಒಂದು ನೈಜ ಆಶೀರ್ವಾದವಾಗಲಿರುವದು. ಸಂಕಷ್ಟರಹಿತವಾದ ಒಂದು ಲೋಕ ಅದಾಗಲಿರುವದು! “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು, ಇನ್ನು ಮರಣವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಇಂದು ನಮ್ಮ ಸುತ್ತಲೂ ನೋಡುವದಕ್ಕೆ ಇದು ಎಂಥ ಒಂದು ವಿಪರ್ಯಸ್ತ!
ಆದಕಾರಣ, ಅಸ್ವಸ್ಥತೆಯ ವಿಷಯಗಳಲ್ಲಿ, ಬೆಂಬಲಕ್ಕಾಗಿ ದೇವರಿಗೆ ಪ್ರಾರ್ಥಿಸಿರಿ. ಮತ್ತು ಅನಾರೋಗ್ಯದಿಂದಿರಲಿ ಯಾ ಆರೋಗ್ಯದಿಂದಿರಲಿ, ಅಸ್ವಸ್ಥತೆಯಿಲ್ಲದ ಒಂದು ನಿತ್ಯ ಜೀವವು ಖಂಡಿತವಾಗಿಯೂ ಸಾಧ್ಯವಿರುವದು ಹೇಗೆ ಎಂದು ಕಲಿಯಿರಿ. ಬೈಬಲಿನಲ್ಲಿ ಅದರ ಕುರಿತು ಇರುವ ಅನೇಕ ಪರಾಮರ್ಶೆಗಳನ್ನು ಅಭ್ಯಾಸಿಸುವ ಮೂಲಕ, ದೇವರ ಈ ಭರವಸಾರ್ಹ ವಾಗ್ದಾನದ ಮೇಲೆ ನಿಮ್ಮ ನಂಬಿಕೆಯನ್ನು ಬೆಳಸಿರಿ. ಅವನ ಸ್ವಂತ ವೇಳಾಪಟ್ಟಿಗನುಸಾರ ಈ ವಿಷಯದಲ್ಲಿ ದೇವರ ಉದ್ದೇಶದ ನೆರವೇರಿಕೆ ಹತ್ತರಿಸಿರುವದು ಹೇಗೆ ಎಂದು ಕಲಿಯಿರಿ. ನಿಸ್ಸಂದೇಹವುಳ್ಳವರಾಗಿರಿ, ಯಾಕಂದರೆ ದೇವರ ವಾಕ್ಯವು ನಮಗೆ ಆಶ್ವಾಸನೆಯನ್ನೀಯುವದು: “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.
[ಅಧ್ಯಯನ ಪ್ರಶ್ನೆಗಳು]
a ಯಾಕೋಬ 5:14, 15 ರಲ್ಲಿರುವ ಮಾತುಗಳು ಭಕ್ತಿಚಿಕಿತ್ಸೆಗೆ ಸಂಬಂಧಿಸಿದವುಗಳು ಎಂದು ಕೆಲವರು ಯೋಚಿಸುತ್ತಾರೆ. ಆದರೆ ಯಾಕೋಬನು ಇಲ್ಲಿ ಆತ್ಮಿಕ ಅಸ್ವಸ್ಥತೆಯ ಕುರಿತಾಗಿ ಮಾತಾಡುತ್ತಾನೆ ಎಂದು ಪೂರ್ವಾಪರವು ತೋರಿಸುತ್ತದೆ. (ಯಾಕೋಬ 5:15ಬಿ, 16, 19, 20) ನಂಬಿಕೆಯಲ್ಲಿ ನಿರ್ಬಲರಾದಂಥ ವ್ಯಕ್ತಿಗಳು ಸಹಾಯಕ್ಕಾಗಿ ಹಿರಿಯರನ್ನು ಕರೆಯತಕ್ಕದ್ದು ಎಂಬ ಬುದ್ಧಿವಾದವನ್ನು ಅವನು ಕೊಡುತ್ತಾನೆ.
[ಪುಟ 7 ರಲ್ಲಿರುವ ಚಿತ್ರ]
ಯೇಸುವಿನ ಅದ್ಭುತಕರ ವಾಸಿಮಾಡುವಿಕೆಗಳು ಅವುಗಳ ಉದ್ದೇಶವನ್ನು ನೆರವೇರಿಸಿದವು
[ಪುಟ 8 ರಲ್ಲಿರುವ ಚಿತ್ರ]
ಯೇಸುವು ವಾಸಿಮಾಡುವ ಅದ್ಭುತಗಳನ್ನು ಬಹುಸಂಖ್ಯಾತವಾಗಿ ಪುನಃ ಮಾಡುವನು