ಯೆಹೋವನಿಗೆ ಭಯಪಟ್ಟು ಆತನ ಪವಿತ್ರ ನಾಮವನ್ನು ಘನಪಡಿಸಿರಿ
“ಯೆಹೋವನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಿದ್ದಾರೆ, ಯಾಕಂದರೆ ನಿಷ್ಠೆಯುಳ್ಳವನು ನೀನೊಬ್ಬನೇ ಅಲ್ಲವೇ?”—ಪ್ರಕಟನೆ 15:4,
1, 2. (ಎ) ಯೆಹೋವನು 1991 ರ ಸಮಯದಲ್ಲಿ ಪರಲೋಕ ದ್ವಾರಗಳನ್ನು ತೆರೆದದ್ದು ಹೇಗೆ? (ಬಿ) “ಯೆಹೋವನಿಗೆ ಭಯಪಡಿರಿ” ಎಂಬ ಸಲಹೆಯನ್ನು ಕೊಡಲು ಒಬ್ಬ ನಂಬಿಗಸ್ತ ಮಿಶನೆರಿಯನ್ನು ಯಾವ ಜೀವಿತ ಅನುಭವವು ಪ್ರೇರೇಪಿಸಿತು? (1991 ರ ವರ್ಷಪುಸ್ತಕ, ಪುಟ 187-9 ಸಹಾ ನೋಡಿರಿ.)
ಯೆಹೋವನು ‘ಪರಲೋಕದ ದ್ವಾರಗಳನ್ನು ತೆರೆದು ಸ್ಥಳಹಿಡಿಯಲಾಗದಷ್ಟು ಸುವರವನ್ನು ಕಾರ್ಯತಃ ಸುರಿಸಿದನು.’ ಈ ಮಾತುಗಳನ್ನು ಯೆಹೋವನ ಸಾಕ್ಷಿಗಳಿಗೆ ಇತ್ತೀಚಿನ ಕಾಲಗಳಲ್ಲಿ ಪದೇ ಪದೇ ಅನ್ವಯಿಸಬಹುದಾಗಿದೆ. (ಮಲಾಕಿಯ 3:10) ದೃಷ್ಟಾಂತಕ್ಕಾಗಿ, 1991 ರ ಸೇವಾ ವರ್ಷದಲ್ಲಿ, ಭೂಸುತ್ತಲೂ—ದಕ್ಷಿಣ ಅಮೆರಿಕದ ಬ್ಯೂನಸ್ ಏರಸ್; ಪೌರಾತ್ಯದ ಮನಿಲಾ, ತೈಪೀ ಮತ್ತು ಬ್ಯಾಂಕಾಕ್ನಲ್ಲಿ ನಡೆದ “ಶುದ್ಧ ಭಾಷೆ” ಸಮ್ಮೇಳನಗಳಿಂದ ಹಿಡಿದು ಪೂರ್ವ ಯೂರೋಪಿನಲ್ಲಿ ಬುದಾಪೆಸ್ಟ್, ಪ್ರಾಗ್ ಮತ್ತು ಝಗ್ರೆಬ್ (ಆಗಸ್ಟ್ 16-18, 1991) ಶಹರಗಳಲ್ಲಿ ನಡೆದ “ಸ್ವಾತಂತ್ರ್ಯ ಪ್ರಿಯರು” ಅಧಿವೇಶನಗಳ ತನಕ ನಡೆದ ವಿಶೇಷ ಸಮ್ಮೇಲನಗಳಲ್ಲಿ, ಸಂದರ್ಶಕ ಸಾಕ್ಷಿಗಳ ಮತ್ತು ಸ್ಥಳೀಕ ಅಧಿವೇಶನಗಾರರ ಉತ್ಸಾಹವು ಕ್ರೈಸ್ತ ಸಹವಾಸದಲ್ಲಿ ತುಂಬಿತುಳುಕಿತು.
2 ಪರದೇಶಗಳ ಪ್ರತಿನಿಧಿಗಳಿಗೆ ಆ ಸ್ಥಳಗಳ ನಂಬಿಗಸ್ತ ಸಾಕ್ಷಿಗಳನ್ನು ಭೇಟಿಯಾಗುವುದು ಅದೆಷ್ಟು ಸಂತೋಷದ ಸಂಗತಿಯಾಗಿತ್ತು! ದೃಷ್ಟಾಂತಕ್ಕಾಗಿ, ಬ್ಯಾಂಕಾಕ್ನಲ್ಲಿ, ಒಮ್ಮೆ ಥಾಯ್ಲೆಂಡಿನ ಒಬ್ಬನೇ ಪ್ರಚಾರಕನಾಗಿದ್ದ—ಫ್ರಾಂಕ್ ಡಿವಾರ್ ತನ್ನ 58 ವರ್ಷಗಳ ಮಿಶನೆರಿ ಸೇವೆಯ ಕುರಿತಾಗಿ ತಿಳಿಸಿದನು. ಅವನ ಚಟುವಟಿಕೆಗಳು ಪ್ಯಾಸಿಫಿಕ್ ದ್ವೀಪಗಳಿಂದ ಹಿಡಿದು ಆಗ್ನೇಯ ಏಶ್ಯಾದ ತನಕ, ಚೈನಾದೊಳಗೂ, ನಡೆದಿದ್ದವು. ಹಡಗು ಒಡೆತದಿಂದ, ಅರಣ್ಯಗಳ ಕ್ರೂರ ಮೃಗಗಳಿಂದ, ಉಷ್ಣವಲಯದ ವ್ಯಾದಿಗಳಿಂದ ಮತ್ತು ಜಾಪಾನಿನ ಮಹಾ-ಸೇನಾನಿಗಳ ಉಗ್ರ ಆಳಿಕೆಯಿಂದ ಅಪಾಯಗಳನ್ನು ಅವನಿಗೆ ಎದುರಿಸಲಿಕ್ಕಿತ್ತು. ಸಮ್ಮೇಳನಗಾರರಿಗೆ ಯಾವ ಸಲಹೆಯನ್ನು ಅವನು ಕೊಡಬಲ್ಲನು ಎಂದು ಕೇಳಿದಾಗ, ಅವನ ಉತ್ತರವು ಸರಳವಾಗಿತ್ತು: “ಯೆಹೋವನಿಗೆ ಭಯಪಡಿರಿ!”
3. ದೈವಿಕ ಭಯವನ್ನು ನಾವೇಕೆ ಪ್ರದರ್ಶಿಸಬೇಕು?
3 “ಯೆಹೋವನಿಗೆ ಭಯಪಡಿರಿ!” ಆ ಹಿತಕರವಾದ ಭಯವನ್ನು ಬೆಳೆಸುವುದು ನಮಗೆಲ್ಲರಿಗೆ ಎಷ್ಟೊಂದು ಮಹತ್ವದ್ದು! “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು.” (ಕೀರ್ತನೆ 111:10) ಈ ಭಯವು ಯೆಹೋವನೆಡೆಗೆ ವಿಕಾರ ಭೀತಿಯಲ್ಲ. ಬದಲಿಗೆ ಅದು, ದೇವರ ವಾಕ್ಯದ ಒಂದು ಅಧ್ಯಯನದ ಮೂಲಕ ನಾವು ಪಡೆಯುವ ಒಳನೋಟದ ಮೇಲೆ ಆಧಾರಿತವಾದ ಆತನ ಮಹತ್ತಾದ ಘನತೆ ಮತ್ತು ದೈವಿಕ ಗುಣಗಳಿಗಾಗಿ ಗಾಢ ಗೌರವವಾಗಿರುತ್ತದೆ. ಪ್ರಕಟನೆ 15:3, 4ರಲ್ಲಿ, ಮೋಶೆಯ ಮತ್ತು ಕುರಿಮರಿಯ ಹಾಡು ಘೋಷಿಸುವುದು: “ದೇವರಾದ ಯೆಹೋವನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ. ಶಾಶ್ವತ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಯೆಹೋವನೇ, ನಿನ್ನ ನಾಮಕ್ಕೆ ಭಯಪಡದವರೂ ಅದು ಘನವಾದದ್ದೆಂದು ಒಪ್ಪದವರೂ ಯಾರಿದ್ದಾರೆ, ಯಾಕಂದರೆ ನಿಷ್ಠೆಯುಳ್ಳವನು ನೀನೊಬ್ಬನೇ ಅಲ್ಲವೇ?” ತನ್ನ ಆರಾಧಕರಿಗೆ ನಿಷ್ಠೆಯಲ್ಲಿ ಆತನು, “ಭಯಭಕ್ತಿಯಿಂದ ತನ್ನ ನಾಮ ಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸು”ವನು. ಅವರಿಗೆ ನಿತ್ಯಜೀವವು ಬಹುಮಾನವಾಗಿ ದೊರೆಯುವದು.—ಮಲಾಕಿಯ 3:16; ಪ್ರಕಟನೆ 20:12, 15.
ದೈವಿಕ ಭಯದ ವಿಜಯ
4. ಯಾವ ಪುರಾತನ ಬಿಡುಗಡೆಯು ಯೆಹೋವನಿಗೆ ಭಯಪಡಲು ನಮ್ಮನ್ನು ಪ್ರೋತ್ಸಾಹಿಸಬೇಕು?
4 ಇಸ್ರಾಯೇಲ್ಯರು ಫರೋಹನ ಐಗುಪ್ತವನ್ನು ಬಿಟ್ಟು ಹೊರಗೆ ನಡೆದಾಗ, ಮೋಶೆಯು ತಾನು ಯೆಹೋವನಿಗೆ ಮಾತ್ರ ಭಯಪಟ್ಟನೆಂಬದನ್ನು ಸ್ಪಷ್ಟವಾಗಿಗಿ ತೋರಿಸಿಕೊಟ್ಟನು. ಶೀಘ್ರದಲ್ಲೇ, ಇಸ್ರಾಯೇಲ್ಯರು ಕೆಂಪು ಸಮುದ್ರ ಮತ್ತು ಇಜಿಪ್ಟಿನ ಬಲಾಢ್ಯ ಮಿಲಿಟರಿ ಶಕ್ತಿಯ ನಡುವೆ ಸಿಕ್ಕಿಬಿದ್ದರು. ಅವರೇನು ಮಾಡ ಸಾಧ್ಯವಿತ್ತು? “ಮೋಶೆಯು ಆ ಜನರಿಗೆ—ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ, ಯೆಹೋವನೇ ನಿಮಗಾಗಿ ಯುದ್ಧ ಮಾಡುವನು; ನೀವಂತೂ ಸುಮ್ಮನೆ ಇರ್ರಿ ಎಂದು ಹೇಳಿದನು.” ಅದ್ಭುತಕರವಾಗಿ ಯೆಹೋವನು ನೀರನ್ನು ಇಬ್ಭಾಗ ಮಾಡಿದನು. ಇಸ್ರಾಯೇಲ್ಯರು ಒಣಗಿದ ಸಾಗರತಳದ ಮೇಲೆ ನಡೆದು ಅಚೇದಡ ಸೇರಿದರು. ಅನಂತರ ನೀರು ಮೊದಲಿನಂತೆ ಪುನಃ ತುಂಬಿಕೊಂಡಿತು. ಫರೋಹನ ಸೇನೆಯು ನಾಶವಾಗಿ ಹೋಯಿತು. ಯೆಹೋವನು ಆ ದೇವಭೀರು ಜನಾಂಗವನ್ನು ರಕ್ಷಿಸಿದನು, ಆದರೆ ಅದೇ ಸಮಯದಲ್ಲಿ, ದೇವರನ್ನು ಅಗೌರವಿಸಿದ ಐಗುಪ್ತದ ಮೇಲೆ ತನ್ನ ತೀರ್ಪನ್ನು ನಿರ್ವಹಿಸಿದನು. ಅದೇ ರೀತಿಯಲ್ಲಿ ಇಂದು, ತನ್ನ ದೇವ-ಭೀರು ಸಾಕ್ಷಿಗಳನ್ನು ಸೈತಾನನ ಲೋಕದೊಳಗಿಂದ ರಕ್ಷಿಸುವ ಮೂಲಕ ಆತನು ತನ್ನ ನಿಷ್ಠೆಯನ್ನು ಪ್ರದರ್ಶಿಸುವನು.—ವಿಮೋಚನಕಾಂಡ 14:13, 14; ರೋಮಾಪುರ 15:4.
5, 6. ಯೆಹೋಶುವನ ಕಾಲದ ಯಾವ ಘಟನೆಗಳು ನಾವು ಮನುಷ್ಯರಿಗಿಂತ ಹೆಚ್ಚು ಯೆಹೋವನಿಗೆ ಭಯಪಡಬೇಕೆಂಬದನ್ನು ತೋರಿಸುತ್ತದೆ?
5 ಐಗುಪ್ತದಿಂದ ಹೊರಗೆ ಹೊರಟು ಹೋದ ಮೇಲೆ, ಮೋಶೆಯು 12 ಮಂದಿ ಗೂಢಚಾರರನ್ನು ವಾಗ್ದಾನ ದೇಶದೊಳಗೆ ಕಳುಹಿಸಿಕೊಟ್ಟನು. ಅಲ್ಲಿನ ದೈತ್ಯಾಕಾರದ ನಿವಾಸಿಗಳನ್ನು ಕಂಡು ಅವರಲ್ಲಿ ಹತ್ತು ಮಂದಿ ಭಯಭೀತರಾದರು ಮತ್ತು ಇಸ್ರಾಯೇಲ್ಯರನ್ನು ಆ ದೇಶದೊಳಗೆ ಪ್ರವೇಶಿಸುವುದರಿಂದ ತಡೆಯಲು ಪ್ರಯತ್ನಿಸಿದರು. ಆದರೆ ಬೇರೆ ಇಬ್ಬರಾದ ಯೆಹೋಶುವ ಮತ್ತು ಕಾಲೇಬರು, ವರದಿ ಮಾಡಿದ್ದು: “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು; ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು. ಹೀಗಿರುವುದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಅದಲ್ಲದೆ ಆ ದೇಶದ ಜನರಿಗೆ ದಿಗಿಲುಪಡಬೇಡಿರಿ. ನಾವು ಅವರನ್ನು ನುಂಗಿ ಪುಷ್ಟಿಯಾಗುವೆವು. ಅವರ ನೆರಳಾಗಿದ್ದ ದೇವರು ಅವರ ಕೈಬಿಟ್ಟನು; ನಮ್ಮ ಕಡೆ ಯೆಹೋವನು ಇದ್ದಾನೆ. ಅವರಿಗೆ ಭಯಪಡಬೇಡಿರಿ.”—ಅರಣ್ಯಕಾಂಡ 14:7-9.
6 ಆದರೂ, ಆ ಇಸ್ರಾಯೇಲ್ಯರು ಮನುಷ್ಯನ ಭಯಕ್ಕೆ ಬಲಿಯಾದರು. ಫಲಿತಾಂಶವಾಗಿ ಅವರು ವಾಗ್ದಾನ ದೇಶವನ್ನೆಂದೂ ತಲಪಲಿಲ್ಲ. ಆದರೆ ಯೆಹೋಶುವ ಮತ್ತು ಕಾಲೇಬರು, ಇಸ್ರಾಯೇಲ್ಯರ ಒಂದು ಹೊಸ ಸಂತತಿಯೊಂದಿಗೆ ಜತೆಗೂಡಿ, ಆ ಅತ್ಯುತ್ತಮ ದೇಶವನ್ನು ಪ್ರವೇಶಿಸಲು ಮತ್ತು ದ್ರಾಕ್ಷೆ, ಎಣ್ಣೇಮರ ಇವುಗಳ ತೋಟವನ್ನು ವ್ಯವಸಾಯ ಮಾಡುವ ಸುಯೋಗವನ್ನು ಪಡೆದರು. ನೆರೆದ ಇಸ್ರಾಯೇಲ್ ಜನಸಮೂಹಕ್ಕೆ ತನ್ನ ಬೀಳ್ಕೊಡುವ ಭಾಷಣದಲ್ಲಿ, ಯೆಹೋಶುವನು ಈ ಸಲಹೆಯನ್ನು ಕೊಟ್ಟನು: “ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದು ಆತನನ್ನು ಯಥಾರ್ಥಚಿತ್ತದಿಂದ ಮತ್ತು ಸತ್ಯದಿಂದ ಸೇವಿಸಿರಿ.” ಮತ್ತು ಯೆಹೋಶುವನು ಕೂಡಿಸಿದ್ದು: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” (ಯೆಹೋಶುವ 24:14, 15) ದೇವರ ನೀತಿಯುಳ್ಳ ನೂತನ ಲೋಕದೊಳಗೆ ಪ್ರವೇಶಿಸಲು ನಾವು ಸಿದ್ಧತೆ ಮಾಡುತ್ತಿರುವಾಗ, ಕುಟುಂಬ ತಲೆಗಳೂ ಬೇರೆ ಎಲ್ಲರೂ ಯೆಹೋವನಿಗೆ ಭಯಭಕ್ತಿಯಲ್ಲಿ ಇರುವಂತೆ ಎಂಥ ಪ್ರೋತ್ಸಾಹನೀಯ ಮಾತುಗಳು!
7. ದೇವರ ಭಯದ ಮಹತ್ವವನ್ನು ದಾವೀದನು ಒತ್ತಿಹೇಳಿದ್ದು ಹೇಗೆ?
7 ಕುರುಬರ ಹುಡುಗನಾದ ದಾವೀದನು ಸಹಾ, ದೇವರ ಹೆಸರಿನಲ್ಲಿ ಗೊಲ್ಯಾತನನ್ನು ಪಂಥಾಹ್ವಾನಕ್ಕೆ ಕರೆದಾಗ, ಯೆಹೋವನಿಗೆ ಆದರ್ಶನೀಯ ಭಯವನ್ನು ಪ್ರದರ್ಶಿಸಿದನು. (1 ಸಮುವೇಲ 17:45, 47, NW) ತನ್ನ ಮೃತ್ಯುಶಯ್ಯೆಯಲ್ಲಿ ದಾವೀದನು ಹೀಗನ್ನ ಶಕ್ತನಾದನು: “ಯೆಹೋವನ ಆತ್ಮ ನನ್ನಲ್ಲಿ ಉಸುರಿತು; ಆತನ ವಾಕ್ಯ ನನ್ನ ಬಾಯಲ್ಲಿತ್ತು. ಇಸ್ರಾಯೇಲ್ಯರ ಶರಣನೂ ದೇವರೂ ಆಗಿರುವಾತನು ಹೇಳಿದ್ದೇನಂದರೆ—ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ಸೂರ್ಯನು ತೇಜೋಮಯನಾಗಿ ಉದಯಿಸುವಾಗ ಇರುವ ಬೆಳಗಾತದ ಬೆಳಕಿನಂತಿರುವನು.” (2 ಸಮುವೇಲ 23:2-4, NW) ದೇವರ ಈ ಭಯವು ಈ ಲೋಕದ ಅಧಿಪತಿಗಳ ನಡುವೆ ಗಮನಾರ್ಹವಾಗಿ ಕಾಣೆಯಾಗಿದೆ ಮತ್ತು ಫಲಿತಾಂಶವೆಷ್ಟು ಶೋಚನೀಯವು! “ದಾವೀದನ ಕುಮಾರನಾದ” ಯೇಸುವು, ಭೂಮಿಯನ್ನು ಯೆಹೋವನ ಭಯದಲ್ಲಿ ಆಳುವಾಗ ಪರಿಸ್ಥಿತಿಯೆಷ್ಟು ಬೇರೆಯಾಗಿರುವುದು!—ಮತ್ತಾಯ 21:9.
ಯೆಹೋವನ ಭಯದಲ್ಲಿ ಕ್ರಿಯೆಗೈಯುವುದು
8. ಯೆಹೋಷಾಫಾಟನ ಕೆಳಗೆ ಯೆಹೂದವು ಸಮೃದ್ಧಿಯನ್ನು ಪಡೆದದೇಕ್ದೆ, ನಮಗೆ ಅದು ಇಂದು ಏನನ್ನು ಸೂಚಿಸುತ್ತದೆ?
8 ದಾವೀದನ ಮರಣದ ಸುಮಾರು ಒಂದು ನೂರು ವರ್ಷಗಳ ಅನಂತರ, ಯೆಹೋಷಾಫಾಟನು ಯೆಹೂದದ ಅರಸನಾದನು. ಯೆಹೋವನ ಭಯದಲ್ಲಿ ಸೇವೆ ಮಾಡಿದ್ದ ಅರಸರಲ್ಲಿ ಇವನು ಇನ್ನೊಬ್ಬನು. ಇವನು ಯೆಹೂದದಲ್ಲಿ ದೇವಪ್ರಭುತ್ವ ಕ್ರಮವನ್ನು ಪುನಃಸ್ಥಾಪಿಸಿದನು, ದೇಶದಲ್ಲೆಲ್ಲೂ ನ್ಯಾಯಾಧೀಶರನ್ನು ನೇಮಿಸಿದನು, ಮತ್ತು ಅವರಿಗೆ ಈ ಸೂಚನೆಗಳನ್ನು ಕೊಟ್ಟನು: “ನೀವು ನ್ಯಾಯ ತೀರಿಸುವುದು ಮನುಷ್ಯರಿಗೋಸ್ಕರವಲ್ಲ, ಯೆಹೋವನಿಗೋಸ್ಕರವೇ. ನ್ಯಾಯ ವಿಚಾರಣೆ ಮಾಡುವಾಗ ಆತನು ನಿಮ್ಮ ಮಧ್ಯದಲ್ಲಿರುತ್ತಾನೆ. ಹೀಗಿರುವಲ್ಲಿ ನಿಮಗೆ ಯೆಹೋವನ ಭಯವು ಇರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ ಮುಖದಾಕ್ಷಿಣ್ಯವೂ ಲಂಚತಿನ್ನುವುದೂ ಇಲ್ಲವಾದದರಿಂದ ಜಾಗರೂಕತೆಯಿಂದ ಕೆಲಸ ಮಾಡಿರಿ. . . . ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ನಂಬಿಗಸ್ತಿಕೆಯಿಂದಲೂ ಪೂರ್ಣ ಹೃದಯದಿಂದಲೂ ಇದನ್ನು ಮಾಡಬೇಕು.” (2 ಪೂರ್ವಕಾಲ 19:6-9) ಹೀಗೆ ಯೆಹೂದವು ಯೆಹೋವನ ಭಯದಲ್ಲಿ, ಹೇಗೆ ಕನಿಕರವುಳ್ಳ ಮೇಲ್ವಿಚಾರಕರ ಸೇವೆಯಿಂದ ಇಂದು ದೇವ ಜನರು ಪ್ರಯೋಜನ ಪಡೆಯುತ್ತಾರೊ ಅಂತೆಯೇ ಸಮೃದ್ಧಿಯನ್ನು ಪಡೆಯಿತು.
9, 10. ಯೆಹೋಷಾಫಾಟನು ಯೆಹೋವನ ಭಯದಲ್ಲಿ ಜಯವನ್ನು ಪಡೆದದ್ದು ಹೇಗೆ?
9 ಆದರೂ, ಯೆಹೂದಕ್ಕೆ ಶತ್ರುಗಳಿದ್ದರು. ಅವರು ದೇವರ ಜನಾಂಗವನ್ನು ನಿರ್ಮೂಲಗೊಳಿಸುವ ನಿರ್ಧಾರವನ್ನು ಮಾಡಿದ್ದರು. ಅಮ್ಮೋನ್, ಮೊವಾಬ್ ಮತ್ತು ಸೇಯೀರ್ ಪರ್ವತದವರು ತಮ್ಮ ಮಿಲಿಟರಿ ಸೈನ್ಯಗಳನ್ನು ಒಂದುಗೂಡಿಸಿ ಯೂದಾಯದ ಕ್ಷೇತ್ರದ ಮೇಲೆ ಆಕ್ರಮಣ ಮಾಡಿ, ಯೆರೂಸಲೇಮಿಗೆ ಬೆದರಿಕೆ ಹಾಕಿದರು. ಅದೊಂದು ಬಲಾಢ್ಯ ಸೇನೆಯಾಗಿತ್ತು. ಯೆಹೋಷಾಫಾಟನು ಪ್ರಾರ್ಥನೆಯಲ್ಲಿ ಯೆಹೋವನೆಡೆಗೆ ತಿರುಗಿದಾಗ, “ಎಲ್ಲಾ ಯೆಹೂದ್ಯರೂ ಅವರ ಹೆಂಡತಿ ಮಕ್ಕಳೂ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದರು.” ಅನಂತರ, ಆ ಪ್ರಾರ್ಥನೆಗೆ ಉತ್ತರವಾಗಿ, ಲೇವ್ಯನಾಗಿದ್ದ ಯಹಜೀಯೇಲನ ಮೇಲೆ ಯೆಹೋವನಾತ್ಮವು ಬಂತು, ಮತ್ತು ಅವನು ಅಂದದ್ದು: “ಯೆಹೋವನು ಹೇಳುವದನ್ನು ಕೇಳಿರಿ. ಈ ಮಹಾಸಮೂಹದ ನಿಮಿತ್ತವಾಗಿ ಕಳವಳಗೊಳ್ಳಬೇಡಿರಿ, ಹೆದರಬೇಡಿರಿ. ಯುದ್ಧವು ನಿಮ್ಮದಲ್ಲ, ದೇವರದೇ. ನಾಳೆ ಅವರ ವಿರೋಧವಾಗಿ ಹೊರಡಿರಿ. . . . ಈ ಸಾರಿ ನೀವು ಯುದ್ಧ ಮಾಡುವದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇಮಿನವರೆ, ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾ ಕಾರ್ಯವನ್ನು ನೋಡಿರಿ; ಹೆದರ ಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು.”—2 ಪೂರ್ವಕಾಲ 20:5-17.
10 ಮರುದಿನ ಯೆಹೂದದ ಪುರುಷರು ಬೆಳಿಗ್ಗೆ ಬೇಗ ಎದ್ದರು. ಅವರು ವಿಧೇಯತೆಯಿಂದ ಶತ್ರುಗಳೆದುರಾಗಿ ಹೊರಟಾಗ, ಯೆಹೋಷಾಫಾಟನು ಎದ್ದು ನಿಂತು, ಅಂದದ್ದು: “ಯೆಹೂದ್ಯರೇ, ಯೆರೂಸಲೇಮಿನವರೇ, ನನ್ನ ಮಾತನ್ನು ಕೇಳಿರಿ. ಯೆಹೋವನಲ್ಲಿ ಭರವಸವಿಡಿರಿ, ಆಗ ಸುರಕ್ಷಿತರಾಗಿರುವಿರಿ; ಆತನ ಪ್ರವಾದಿಗಳನ್ನು ನಂಬಿರಿ, ಆಗ ಸಾರ್ಥಕರಾಗುವಿರಿ.” ಯುದ್ಧ ಭಟರ ಮುಂದೆ ನಡೆಯುತ್ತಾ, ಯೆಹೋವನಿಗಾಗಿ ಹಾಡುವವರು ಧ್ವನಿಗೂಡಿಸಿ ಹಾಡಿದರು: “ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಕೃಪೆಯು ಶಾಶ್ವತವಾಗಿದೆ.” ಅವರ ಶತ್ರುಗಳು ತಾವು ಒಬ್ಬರನ್ನೊಬ್ಬರು ಕೊಂದುಕೊಳ್ಳುವಂತೆ ಗಲಿಬಿಲಿಗೊಳಿಸಿದ ಮೂಲಕ ಯೆಹೋವನು ಆ ಕೃಪೆಯನ್ನು ಪ್ರದರ್ಶಿಸಿ ತೋರಿಸಿದನು. ಯೆಹೂದ್ಯರು ಅರಣ್ಯದಲ್ಲಿನ ಕಾವಲಿನಬುರುಜಿಗೆ ಬಂದು ನೋಡಿದಾಗ, ಸತ್ತ ಶತ್ರುಗಳ ಶವಗಳು ಮಾತ್ರವೇ ಉಳಿದಿದ್ದವು.—2 ಪೂರ್ವಕಾಲ 20:20-24.
11. ಭಯದ ಸಂಬಂಧದಲ್ಲಿ, ರಾಷ್ಟ್ರಗಳು ದೇವ ಜನರಿಗಿಂತ ಬೇರೆಯಾಗಿರುವುದು ಹೇಗೆ?
11 ಈ ಅದ್ಭುತಕರವಾದ ಬಿಡುಗಡೆಯ ಕುರಿತು ನೆರೆಕರೆಯ ರಾಷ್ಟ್ರಗಳಿಗೆ ತಿಳಿದುಬಂದಾಗ, ಅವರೆಲ್ಲರೂ “ದೇವರ ಭೀತಿಯಿಂದ” ತುಂಬಿದರು. ಇನ್ನೊಂದು ಕಡೆ, ಯೆಹೋವನಿಗೆ ಭಯಪಟ್ಟು ವಿಧೇಯತೆ ತೋರಿಸಿದ ಜನಾಂಗಕ್ಕಾದರೋ, “ಸಮಾಧಾನವುಂಟಾಯಿತು.” (2 ಪೂರ್ವಕಾಲ 20:29, 30) ತದ್ರೀತಿಯಲ್ಲಿ, ಯೆಹೋವನು ಹರ್ಮಗೆದೋನ್ದಿನಲ್ಲಿ ತೀರ್ಪನ್ನು ನಿರ್ವಹಿಸುವಾಗ, ರಾಷ್ಟ್ರಗಳು “ದೇವರ ಭೀತಿಯಿಂದ” ಮತ್ತು ಸಂಹಾರಕನಾದ ಕ್ರಿಸ್ತನ ಭೀತಿಯಿಂದ ತುಂಬಿದವರಾಗುವರು ಮತ್ತು ದೈವಿಕ ಕೋಪದ ಮಹಾ ದಿನದಲ್ಲಿ ನಿಲ್ಲುವದಕ್ಕೆ ಶಕ್ತರಾಗಲಾರರು.—ಪ್ರಕಟನೆ 6:15-17.
12. ಯೆಹೋವನ ಭಯವು ಆರಂಭದ ಸಮಯಗಳಲ್ಲಿ ಹೇಗೆ ಪ್ರತಿಫಲವನ್ನು ಕೊಟ್ಟಿತ್ತು?
12 ಯೆಹೋವನ ಕಡೆಗೆ ಆರೋಗ್ಯಕರವಾದ ಭಯವು ಹೇರಳವಾದ ಪ್ರತಿಫಲಗಳನ್ನು ತರುತ್ತದೆ. ನೋಹನು “ದೈವಿಕ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” (ಇಬ್ರಿಯ 11:7) ಮತ್ತು ಒಂದನೆಯ ಶತಮಾನದ ಕ್ರೈಸ್ತರ ವಿಷಯದಲ್ಲಾದರೋ, ಹಿಂಸೆಯ ಕಾಲಾವಧಿಯನ್ನು ಹಿಂಬಾಲಿಸಿ, ಸಭೆಯು “ಸಮಾಧಾನವನ್ನು ಹೊಂದಿತು; ಮತ್ತು ಅದು ಯೆಹೋವನ ಭಯದಲ್ಲಿ ಮತ್ತು ಪವಿತ್ರಾತ್ಮನ ಸಾಂತ್ವನದಲ್ಲಿ ನಡೆದ ಹಾಗೆ ಹೆಚ್ಚುತ್ತಾ ಬಂತು” ಎಂದು ದಾಖಲೆಯಾಗಿದೆ—ಇಂದು ಪೂರ್ವ ಯೂರೋಪಿನಲ್ಲಿ ಅದು ಮಾಡುತ್ತಿರುವ ರೀತಿಯಲ್ಲೇ.—ಅಪೊಸ್ತಲರ ಕೃತ್ಯಗಳು 9:31, NW.
ಒಳ್ಳೇದನ್ನು ಪ್ರೀತಿಸಿರಿ, ಕೆಟ್ಟದ್ದನ್ನು ಹಗೆ ಮಾಡಿರಿ
13. ನಾವು ಹೇಗೆ ಮಾತ್ರವೇ ಯೆಹೋವನ ಆಶೀರ್ವಾದವನ್ನು ಅನುಭವಿಸಬಹುದು?
13 ಯೆಹೋವನು ಪೂರಾ ರೀತಿಯಲ್ಲಿ ಒಳ್ಳೆಯವನಾಗಿದ್ದಾನೆ. ಆದಕಾರಣ, “ಯೆಹೋವನ ಭಯವೆಂದರೆ ಕೆಟ್ಟದ್ದರ ದ್ವೇಷವು.” (ಜ್ಞಾನೋಕ್ತಿ 8:13) ಯೇಸುವಿನ ವಿಷಯದಲ್ಲಿ ಬರೆಯಲ್ಪಟ್ಟದ್ದು: “ನೀನು ನೀತಿಯನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ. ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.” (ಇಬ್ರಿಯ 1:9) ನಾವು ಯೇಸುವಿನಂತೆ, ಯೆಹೋವನ ಆಶೀರ್ವಾದವನ್ನು ಅಪೇಕ್ಷಿಸುವುದಾದರೆ, ಸೈತಾನನ ಜಂಬದ ಲೋಕದ ಕೆಟ್ಟತನ, ಅನೈತಿಕತೆ, ಹಿಂಸಾಚಾರ ಮತ್ತು ಲೋಭವನ್ನು ಹೇಸಲೇ ಬೇಕು. (ಜ್ಞಾನೋಕ್ತಿ 6:16-19 ಹೋಲಿಸಿ.) ಯೆಹೋವನು ಏನನ್ನು ಪ್ರೀತಿಸುತ್ತಾನೋ ಅದನ್ನು ನಾವು ಪ್ರೀತಿಸಬೇಕು ಮತ್ತು ಆತನು ಏನನ್ನು ದ್ವೇಷಿಸುತ್ತಾನೋ ಅದನ್ನು ದ್ವೇಷಿಸಬೇಕು. ಯೆಹೋವನನ್ನು ಅಪ್ರಸನ್ನಗೊಳಿಸುವ ಯಾವದನ್ನಾದರೂ ಮಾಡಲು ಭಯಪಡಬೇಕು. “ಯೆಹೋವನ ಭಯಭಕ್ತಿಯಿಂದ ಹಾನಿ ನಿವಾರಣೆ.”—ಜ್ಞಾನೋಕ್ತಿ 16:6.
14. ಯೇಸು ನಮಗೆ ಒಂದು ಮಾದರಿಯನ್ನು ಒದಗಿಸಿರುವುದು ಹೇಗೆ?
14 ಯೇಸುವಿನ ಹೆಜ್ಜೆಜಾಡನ್ನು ನಾವು ನಿಕಟವಾಗಿ ಹಿಂಬಾಲಿಸುವಂತೆ ಆತನು ನಮಗೆ ಒಂದು ಮಾದರಿಯನ್ನು ಬಿಟ್ಟು ಹೋಗಿದ್ದಾನೆ. “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪು ಮಾಡುವವನಿಗೆ ತನ್ನನ್ನು ಒಪ್ಪಿಸುತ್ತಾ ಇದ್ದನು.” (1 ಪೇತ್ರ 2:21-23) ಯೆಹೋವನ ಭಯದಲ್ಲಿ, ನಾವೂ ಸೈತಾನನ ಲೋಕವು ನಮ್ಮ ಮೇಲೆ ಹೊರಿಸುವ ನಿಂದೆಗಳನ್ನು, ಅಪಹಾಸ್ಯಗಳನ್ನು ಮತ್ತು ಹಿಂಸೆಗಳನ್ನು ತಾಳಿಕೊಳ್ಳ ಸಾಧ್ಯವಿದೆ.
15. ದೇಹವನ್ನು ಕೊಲ್ಲಶಕ್ತರಾದವರಿಗೆ ಭಯಪಡುವ ಬದಲಿಗೆ ನಾವು ಯೆಹೋವನಿಗೆ ಭಯಪಡಬೇಕು ಯಾಕೆ?
15 ಮತ್ತಾಯ 10:28ರಲ್ಲಿ ಯೇಸು ನಮಗೆ ಉಪದೇಶಿಸಿದ್ದು: “ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲಲ್ಲಾರದವರಿಗೆ ಹೆದರಬೇಡಿರಿ; ಆತ್ಮ ಮತ್ತು ದೇಹ ಎರಡನ್ನೂ ಗೆಹೆನ್ನಾದಲ್ಲಿ ನಾಶ ಮಾಡಬಲ್ಲಾತನಿಗೇ ಹೆದರಿರಿ.” (NW) ಯೆಹೋವನಿಗೆ ಭಯಪಡುವ ಒಬ್ಬನು ಶತ್ರುವಿನಿಂದ ಕೊಲ್ಲಲ್ಪಟ್ಟಾಗ್ಯೂ, ಮರಣ ವೇದನೆಯು ಕೇವಲ ಕ್ಷಣಿಕವಾದದ್ದು. (ಹೋಶೇಯ 13:14) ಪುನರುತ್ಥಾನವನ್ನು ಹೊಂದಿದ ಮೇಲೆ, ಆ ವ್ಯಕ್ತಿಯು ಹೀಗೆ ಹೇಳಶಕ್ತನು: “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ಕೊಂಡಿ ಎಲ್ಲಿ?”—1 ಕೊರಿಂಥ 15:55.
16. ಯೇಸು ಯೆಹೋವನಿಗೆ ಭಯವನ್ನು ತೋರಿಸಿದ್ದೂ ಅವನನ್ನು ಘನಪಡಿಸಿದ್ದೂ ಹೇಗೆ?
16 ಯೆಹೋವನ ನೀತಿಯನ್ನು ಪ್ರೀತಿಸುವುದಕ್ಕೆ ಮತ್ತು ಯಾವುದು ಕೆಟ್ಟದ್ದೋ ಅದನ್ನು ದ್ವೇಷಿಸುವುದಕ್ಕೆ ಯೇಸುವು ತಾನೇ ಒಂದು ಅತ್ಯುತ್ತಮ ಮಾದರಿಯನ್ನು ಒದಗಿಸುತ್ತಾನೆ. ಯೆಹೋವನಲ್ಲಿ ಅವನಿಗಿದ್ದ ಭಯಭಕ್ತಿಯು ಶಿಷ್ಯರಿಗೆ ಅವನಂದ ಕೊನೆಯ ಮಾತುಗಳಲ್ಲಿ ಪ್ರತಿಬಿಂಬಿಸುತ್ತದೆ, ಯೋಹಾನ 16:33 ರಲ್ಲಿ ಅದು ಹೇಳುವುದು: “ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.” ಯೋಹಾನನ ದಾಖಲೆಯು ಮುಂದುವರಿಸುವುದು: “ಯೇಸು ಈ ಮಾತುಗಳನ್ನಾಡಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ ಹೇಳಿದ್ದೇನಂದರೆ—ತಂದೆಯೇ ಕಾಲ ಬಂದದೆ; ನಿನ್ನ ಮಗನನ್ನು ಮಹಿಮೆ ಪಡಿಸು, ಆಗ ನಿನ್ನ ಮಗನು ನಿನ್ನನ್ನು ಮಹಿಮೆ ಪಡಿಸುವುದಕ್ಕಾಗುವುದು. . . . ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು.”—ಯೋಹಾನ 17:1-6.
ಯೆಹೋವನಿಗೆ ಭಯಪಡಿರಿ ಮತ್ತು ಆತನನ್ನು ಸ್ತುತಿಸಿರಿ
17. ಯೇಸುವಿನ ಮಾದರಿಯನ್ನು ನಾವು ಯಾವ ರೀತಿಗಳಲ್ಲಿ ಅನುಸರಿಸಬಲ್ಲೆವು?
17 ಯೇಸುವಿನ ಆ ಧೀರ ಮಾದರಿಯನ್ನು ನಾವಿಂದು ಅನುಕರಿಸಬಲ್ಲೆವೋ? ಯೆಹೋವನ ಭಯದಲ್ಲಿ ಖಂಡಿತವಾಗಿಯೂ ನಾವದನ್ನು ಅನುಕರಿಸಬಲ್ಲೆವು! ಯೇಸು ನಮಗೆ ಯೆಹೋವನ ಪ್ರಸಿದ್ಧ ನಾಮವನ್ನು ಮತ್ತು ಆತನ ಗುಣಗಳನ್ನು ಪ್ರಕಟಪಡಿಸಿದ್ದಾನೆ. ಯೆಹೋವನನ್ನು ನಮ್ಮ ಸಾರ್ವಭೌಮ ಕರ್ತನಾಗಿ ತಿಳಿದು ಭಯಪಡುವ ಮೂಲಕ, ನಾವಾತನನ್ನು ಬೇರೆ ಎಲ್ಲಾ ದೇವರುಗಳಿಗಿಂತ, ಕ್ರೈಸ್ತ ಪ್ರಪಂಚದ ಅನಾಮಧೇಯ, ನಿಗೂಢ ತ್ರಿಯೈಕ್ಯ ದೇವರಿಗಿಂತ ಸಹಾ, ಎಷ್ಟೋ ಹೆಚ್ಚು ಉನ್ನತಪಡಿಸುತ್ತೇವೆ. ಯೇಸು ಯೆಹೋವನನ್ನು ಒಂದು ಆರೋಗ್ಯಕರ ಭಯದಿಂದ ಸೇವಿಸಿದನು, ಮರ್ತ್ಯ ಮಾನವರ ಭಯದ ಪಾಶದಲ್ಲಿ ಸಿಕ್ಕಿಬೀಳಲು ಅವನು ನಿರಾಕರಿಸಿದನು. “ಕ್ರಿಸ್ತನು ತಾನು ಭೂಲೋಕದಲ್ಲಿದ್ದಾಗ ಮರಣಕ್ಕೆ ತಪ್ಪಿಸಿ ಕಾಪಾಡಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” ಯೇಸುವಿನಂತೆ, ನಾವು ಸಹಾ, ಅನುಭವಿಸುವ ಬಾಧೆಗಳಿಂದ ವಿಧೇಯತೆಯನ್ನು ಕಲಿಯುತ್ತಾ ಮುಂದುವರಿಯುವಾಗ ಯೆಹೋವನಿಗೆ ಭಯಭಕ್ತಿಯಿಂದಿರೋಣ—ಯಾವಾಗಲೂ ನಿತ್ಯ ರಕ್ಷಣೆಯನ್ನು ನಮ್ಮ ಗುರಿಯಾಗಿಡೋಣ.—ಇಬ್ರಿಯ 5:7-9.
18. ದೈವಿಕ ಭಯಭಕ್ತಿಯಿಂದ ನಾವು ಹೇಗೆ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಬಹುದು?
18 ತದನಂತರ ಇಬ್ರಿಯ ಕ್ರೈಸ್ತರಿಗೆ ಬರೆದ ಆ ಪತ್ರದಲ್ಲಿ, ಪೌಲನು ಅಭಿಷಿಕ್ತ ಕ್ರೈಸ್ತರನ್ನು ಪ್ರಬೋಧಿಸುತ್ತಾ ಅಂದದ್ದು: “ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಹೊಂದುವವರಾದ ನಾವು ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ ಪವಿತ್ರ ಸೇವೆಯನ್ನು ಭಕ್ತಿಯಿಂದಲೂ ಭಯದಿಂದಲೂ ಮಾಡೋಣ.” ಇಂದು “ಮಹಾ ಸಮೂಹ”ವು ಆ ಪವಿತ್ರ ಸೇವೆಯಲ್ಲಿ ಭಾಗವಹಿಸುತ್ತದೆ. ಮತ್ತು ಅದರಲ್ಲಿ ಏನು ಅಡಕವಾಗಿದೆ? ತನ್ನ ಮಗನಾದ ಯೇಸು ಕ್ರಿಸ್ತನ ಯಜ್ಞಾರ್ಪಣೆಯನ್ನು ಒದಗಿಸಿದರಲ್ಲಿ ದೇವರ ಅಪಾರ ಕೃಪೆಯನ್ನು ಚರ್ಚಿಸಿಯಾದ ಬಳಿಕ, ಪೌಲನು ಹೇಳುವುದು: “ಆತನ ಮೂಲಕವಾಗಿ ದೇವರಿಗೆ ಸ್ತೋತ್ರ ಯಜ್ಞವನ್ನು ಯಾವಾಗಲೂ ಸಮರ್ಪಿಸೋಣ, ಅದು ಆತನ ನಾಮವನ್ನು ಬಹಿರಂಗವಾಗಿ ಘೋಷಿಸುವ ತುಟೀಫಲವಾಗಿದೆ.” (ಇಬ್ರಿಯ 12:28; 13:12, 15, NW) ಯೆಹೋವನ ಅಪಾರ ಕೃಪೆಗೆ ಗಣ್ಯತೆಯಲ್ಲಿ, ನಾವು ಶಕ್ಯವಾದ ಪ್ರತಿಯೊಂದು ತಾಸನ್ನು ಆತನ ಪವಿತ್ರ ಸೇವೆಗಾಗಿ ಮೀಸಲಾಗಿಡಬೇಕು. ಉಳಿದಿರುವ ಅಭಿಷಿಕ್ತ ಕ್ರೈಸ್ತರ ನಿಷ್ಠೆಯುಳ್ಳ ಸಂಗಡಿಗರೋಪಾದಿ, ಮಹಾ ಸಮೂಹದವರು ಆ ಸೇವೆಯಲ್ಲಿ ಬಹು ದೊಡ್ಡ ಭಾಗವನ್ನು ಇಂದು ನಿರ್ವಹಿಸುತ್ತಿದ್ದಾರೆ. ಹೀಗೆ ಅವರು ಸಾಂಕೇತಿಕವಾಗಿ ದೇವರ ಸಿಂಹಾಸನದ ಮುಂದೆ ನಿಂತು, “ಹಗಲಿರುಳು ಆತನ ಪವಿತ್ರ ಸೇವೆಯನ್ನು ಮಾಡುತ್ತಾ” ಇರುವಾಗ, ದೇವರಿಗೂ ಮತ್ತು ಕ್ರಿಸ್ತನಿಗೂ ತಮ್ಮ ರಕ್ಷಣೆಗಾಗಿ ಸ್ತೋತ್ರವನ್ನು ಸಲ್ಲಿಸುತ್ತಾರೆ.—ಪ್ರಕಟನೆ 7:9, 10, 15.
ಯೆಹೋವನನ್ನು ನಿರಂತರವಾಗಿ ಘನಪಡಿಸಿರಿ
19, 20. “ಯೆಹೋವನ ದಿನ”ದಲ್ಲಿ ಯಾವ ಎರಡು ರೀತಿಯ ಭಯಗಳು ತೋರಿಬರುವವು?
19 ಯೆಹೋವನ ನಿರ್ದೋಷೀಕರಣದ ಆ ಮಹಿಮೆಯುಳ್ಳ ದಿನವು ತೀವ್ರವಾಗಿ ಹತ್ತರಿಸುತ್ತಾ ಇದೆ! “ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ ದುಷ್ಕರ್ಮಿಗಳೂ ಹೊಟ್ಟಿನಂತಿರುವರು. ಬರುತ್ತಿರುವ ಆ ದಿನವು ಅವರನ್ನು ಖಂಡಿತವಾಗಿಯೂ ನುಂಗಿಹಾಕುವುದು. ಇದು ಸೇನಾಧೀಶ್ವರನಾದ ಯೆಹೋವನ ನುಡಿ.” ಆ ವಿಪತ್ಕಾರಕ ಸಮಯವು “ಯೆಹೋವನ ಭಯಂಕರವಾದ ಮಹಾದಿನ”ವಾಗಿದೆ. (ಮಲಾಕಿಯ 4:1, 5) ಅದು ದುಷ್ಟರ ಹೃದಯದಲ್ಲಿ “ಅಂಜಿಕೆ”ಯನ್ನು ಹಾಕುವುದು, ಮತ್ತು ಅವರು “ಹೇಗೂ ತಪ್ಪಿಸಿಕೊಳ್ಳಲಾರರು.”—ಯೆರೆಮೀಯ 8:15; 1 ಥೆಸಲೊನೀಕ 5:3.
20 ಯೆಹೋವನ ಜನರಾದರೋ ಒಂದು ಬೇರೆ ರೀತಿಯ ಭಯದಿಂದ ಪ್ರೇರಿಸಲ್ಪಡುತ್ತಾರೆ. “ನಿತ್ಯವಾದ ಶುಭವರ್ತಮಾನ”ವನ್ನು ವಹಿಸಿಕೊಂಡ ದೇವದೂತನು ಅವರನ್ನು ಕರೆದು, “ನೀವೆಲ್ಲರೂ ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಯಾಕಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆಯು ಬಂದಿದೆ,” ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು. (ಪ್ರಕಟನೆ 14:6, 7) ಹರ್ಮಗೆದೋನ್ದಿನ ದಹಿಸುವ ಅಗ್ನಿಯು ಸೈತಾನನ ಲೋಕವನ್ನು ಸುಟ್ಟು ಬೂದಿಮಾಡುವಾಗ, ನಾವಾದರೋ ಗೌರವದಿಂದಲೇ ನಿಂತು ನೋಡುವೆವು. ಯೆಹೋವನ ಹಿತಕರವಾದ ಭಯವು ನಮ್ಮ ಹೃದಯದಲ್ಲಿ ಅಳಿಸಲಾರದ ರೀತಿಯಲ್ಲಿ ಕೊರೆಯಲ್ಪಡುವುದು. ಆಗ ನಾವು ನಮ್ಮನ್ನು ‘ಯೆಹೋವನ ನಾಮವನ್ನು ಹೇಳಿಕೊಂಡು ರಕ್ಷಣೆಯಾದವರ’ ನಡುವೆ ಕಂಡುಕೊಳ್ಳುವಂಥ ಅನುಗ್ರಹವನ್ನು ಪಡೆಯುವಂತಾಗಲಿ.—ಯೋವೇಲ 2:31, 32; ರೋಮಾಪುರ 10:13.
21. ಯೆಹೋವನ ಭಯವು ಯಾವ ಆಶೀರ್ವಾದಗಳಿಗೆ ನಡಿಸುವುದು?
21 ಆಶ್ಚರ್ಯಕರವಾದ ಆಶೀರ್ವಾದಗಳು ಹಿಂಬಾಲಿಸುವುವು, “ಆಯುಸ್ಸಿನ ವರುಷಗಳು” ನಿತ್ಯ ನಿರಂತರಕ್ಕೆ ವೃದ್ಧಿಯಾಗುವುದೂ ಅದರಲ್ಲಿ ಸೇರಿದೆ! (ಜ್ಞಾನೋಕ್ತಿ 9:11; ಕೀರ್ತನೆ 37:9-11, 29) ಆದುದರಿಂದ, ನಮ್ಮ ನಿರೀಕ್ಷೆಯು, ರಾಜ್ಯವನ್ನು ಬಾಧ್ಯವಾಗಿ ಹೊಂದುವದಾಗಿರಲಿ, ಇಲ್ಲವೇ ಅದರ ಭೂಕ್ಷೇತ್ರದಲ್ಲಿ ಸೇವೆ ಮಾಡುವುದಾಗಿರಲಿ, ದೇವರಿಗೆ ಭಯಭಕ್ತಿಯಿಂದ ಮತ್ತು ಗೌರವದಿಂದ ಪವಿತ್ರ ಸೇವೆಯನ್ನು ನಾವೀಗ ಸಲ್ಲಿಸುತ್ತಾ ಇರೋಣ. ಆತನ ಪವಿತ್ರ ನಾಮವನ್ನು ನಾವು ಘನಪಡಿಸುತ್ತಾ ಮುಂದರಿಯೋಣ. ಮತ್ತು ಯಾವ ಆಶೀರ್ವಾದಿತ ಫಲಿತಾಂಶದೊಂದಿಗೆ? ಯಾವಾಗಲೂ ಯೆಹೋವನಿಗೆ ಭಯಪಡುವ ಆ ಸುಜ್ಞ ಸೂಚನೆಯನ್ನು ಹೃದಯಕ್ಕೆ ತಕ್ಕೊಂಡದ್ದಕ್ಕಾಗಿ ಸದಾ ಕೃತಜ್ಞತೆಯಿಂದಿರುವುದೇ! (w92 1/1)
ನೀವು ಹೇಗೆ ಉತ್ತರಿಸುವಿರಿ?
▫ “ಯೆಹೋವನ ಭಯ” ಎಂದರೇನು?
▫ ದೇವರ ಭಯವು ಆತನ ಪ್ರಾಚೀನ ಜನರಿಗೆ ಹೇಗೆ ಪ್ರಯೋಜನವಾಯಿತು?
▫ ದೈವಿಕ ಭಯದ ಯಾವ ಮಾದರಿಯನ್ನು ಯೇಸುವು ನಮಗಾಗಿ ಬಿಟ್ಟುಹೋದನು?
▫ ಯೆಹೋವನ ಭಯದಲ್ಲಿ ನಾವು ಸಮಗ್ರತೆಯನ್ನು ಹೇಗೆ ಕಾಪಾಡಬಹುದು?
[ಪುಟ 14 ರಲ್ಲಿರುವ ಚಿತ್ರ]
ಪ್ರಕಟನೆ ಪುಸ್ತಕದಲ್ಲಿ, ಯೇಸುವಿನ ಸಹೋದರರು “ಮೋಶೆಯ ಹಾಡನ್ನು,” ಯೆಹೋವನನ್ನು ಸ್ತುತಿಸುವ ಒಂದು ಹಾಡನ್ನು ಹಾಡುವವರಾಗಿ ಕಂಡುಬಂದರು
[ಪುಟ 16 ರಲ್ಲಿರುವ ಚಿತ್ರ]
ಯೆಹೋಷಾಫಾಟನ ಸೈನ್ಯವು ಯೆಹೋವನ ಭಯದಲ್ಲಿ ವಿಜಯಿಯಾಯಿತು
[ಪುಟ 19 ರಲ್ಲಿರುವ ಚಿತ್ರ]
ಆಯುಸ್ಸಿನ ವರುಷಗಳು ನಿತ್ಯ ನಿರಂತರಕ್ಕೂ ವೃದ್ಧಿಯಾಗುವುದೇ ಯೆಹೋವನಿಗೆ ಭಯಪಡುವವರಿಗೆ ದೊರಕಲಿರುವ ಬಹುಮಾನವು