ಪ್ರಾರ್ಥನೆಯನ್ನು ಲಾಲಿಸುವಾತನಾದ ಯೆಹೋವನಿಗೆ ಭಯಪಡಿರಿ
“ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.”—ಕೀರ್ತನೆ 65:2.
1. ಪ್ರಾರ್ಥನೆಯಲ್ಲಿ ಸಮೀಪಿಸುವವರಿಗೆ ಯೆಹೋವನು ಆವಶ್ಯಕತೆಗಳನ್ನು ಇಡುತ್ತಾನೆಂದು ನಾವೇಕೆ ನಿರೀಕ್ಷಿಸಬಹುದು?
ಯೆಹೋವ ದೇವರು “ಶಾಶ್ವತತೆಯ ಅರಸನು.” ಆತನು “ನರರೆಲ್ಲರು [ಆತನ] ಬಳಿಗೆ ಬರುವ” ದೇವರೂ “ಪ್ರಾರ್ಥನೆಯನ್ನು ಕೇಳುವವನೂ” ಆಗಿದ್ದಾನೆ. (ಪ್ರಕಟನೆ 15:3, NW; ಕೀರ್ತನೆ 65:2) ಆದರೆ ಆವರು ಆತನ ಬಳಿಗೆ ಹೇಗೆ ಬರಬೇಕು? ಭೂರಾಜರು ತಮ್ಮ ಸನ್ನಿಧಿಗೆ ಬರಲು ಅನುಮತಿ ಇರುವವರ ಪೋಷಾಕು ಮತ್ತು ರೀತಿಯನ್ನು ನಿಯಂತ್ರಿಸುತ್ತಾರೆ. ಹೀಗಿರುವುದರಿಂದ, ಶಾಶ್ವತ ರಾಜನ ಬಳಿ ಪ್ರಾರ್ಥನೆ ಮತ್ತು ಉಪಕಾರಸ್ತುತಿಯೊಡಗೂಡಿ ಬರಲಿಚ್ಫಿಸುವವನಿಗೂ ಮುಟ್ಟಬೇಕಾದ ಆವಶ್ಯಕತೆಗಳಿರುವುವು ಎಂದು ನಾವು ನಿರೀಕ್ಷಿಸಬಲ್ಲೆವು.—ಫಿಲಿಪ್ಪಿ 4:6,7.
2. ಪ್ರಾರ್ಥನೆಯ ವಿಷಯದಲ್ಲಿ ಯಾವ ಪ್ರಶ್ನೆಗಳೇಳುತ್ತವೆ?
2 ಈ ಶಾಶ್ವತ ರಾಜನು ಪ್ರಾರ್ಥನೆಯಲ್ಲಿ ತನ್ನನ್ನು ಸಮೀಪಿಸುವವನಿಂದ ಏನು ಅವಶ್ಯಪಡುತ್ತಾನೆ? ಯಾರು ಪ್ರಾರ್ಥಿಸಬಲ್ಲರು ಮತ್ತು ಲಾಲಿಸಲ್ಪಡುವರು? ಮತ್ತು ಅವರು ಯಾವುದರ ಕುರಿತು ಪ್ರಾರ್ಥಿಸಬಹುದು?
ಶಾಶ್ವತ ರಾಜನನ್ನು ಸಮೀಪಿಸುವುದು
3. ದೇವರ ಆದಿಸೇವಕರ ಪ್ರಾರ್ಥನೆಗಳ ಯಾವ ಉದಾಹರಣೆಗಳನ್ನು ನೀವು ಕೊಡಬಲ್ಲಿರಿ, ಮತ್ತು ಅವರು ಮಧ್ಯಸ್ಥನ ಮೂಲಕ ಆತನನ್ನು ಸಮೀಪಿಸಿದರೊ?
3 ದೇವರ ಮಗ” ಆದಾಮನು ಪಾಪಿಯಾಗುವ ಮೊದಲು ದೇವರೊಂದಿಗೆ ಆಪ್ತ ಸಂಸರ್ಗವನ್ನು ಮಾಡುತ್ತಿದ್ದನೆಂದು ವ್ಯಕ್ತವಾಗುತ್ತದೆ. (ಲೂಕ 3:38; ಆದಿಕಾಂಡ 1:26-28) ಆದಾಮನ ಪುತ್ರ ಹೇಬೇಲನು “ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು” ದೇವರಿಗೆ ಅರ್ಪಿಸಿದಾಗ ಅದು ಪ್ರಾರ್ಥನೆ ಮತ್ತು ಸ್ತುತಿಗಳನ್ನೊಳಗೊಂಡಿತ್ತೆಂಬುದು ನಿಸ್ಸಂಶಯ.(ಆದಿಕಾಂಡ 4:2-4) ನೋಹ, ಅಬ್ರಹಾಮ, ಇಸಾಕ ಮತ್ತು ಯಾಕೋಬರು ಯಜ್ಞವೇದಿಗಳನ್ನು ಕಟ್ಟಿ ದೇವರನ್ನು ಕಾಣಿಕೆಗಳೊಂದಿಗೆ ಪ್ರಾರ್ಥನಾಪೂರ್ವಕವಾಗಿ ಸಮೀಪಿಸಿದರು.(ಆದಿಕಾಂಡ 8:18-22; 12:7, 8; 13:3, 4, 18; 22:9-14; 26:23-25; 33:18-20; 35:1, 3, 7) ಮತ್ತು ಸೊಲೊಮೋನ, ಎಜ್ರ ಮತ್ತು ದೈವಿಕವಾಗಿ ಪ್ರೇರಿತರಾದ ಕೀರ್ತನೆಗಾರರ ಪ್ರಾರ್ಥನೆಗಳು, ಇಸ್ರಾಯೇಲ್ಯರು ದೇವರನ್ನು ಯಾವ ಮಧ್ಯಸ್ಥನೂ ಇಲ್ಲದೆ ಸಮೀಪಿಸಿದರೆಂದು ತೋರಿಸುತ್ತವೆ.—1 ಅರಸು 8:22-24; ಎಜ್ರ 9:5, 6; ಕೀರ್ತನೆ 6:1, 2; 43:1; 55:1; 61:1; 72:1; 80:1; 143:1.
4. (ಎ) ಒಂದನೆಯ ಶತಮಾನದಲ್ಲಿ ಪ್ರಾರ್ಥನೆಯಲ್ಲಿ ದೇವರನ್ನು ಸಮೀಪಿಸುವ ಯಾವ ಹೊಸಮಾರ್ಗವನ್ನು ಏರ್ಪಡಿಸಲಾಯಿತು? (ಬಿ) ಯೇಸುವಿನ ಹೆಸರಲ್ಲಿ ಪ್ರಾರ್ಥಿಸುವುದು ವಿಶೇಷ ರೀತಿಯಲ್ಲಿ ಸಮಂಜಸವೇಕೆ?
4 ನಮ್ಮ ಸಾಮಾನ್ಯ ಶಕದ ಪ್ರಥಮ ಶತಕದಲ್ಲಿ ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವ ಹೊಸ ದಾರಿಯೊಂದು ಏರ್ಪಡಿಸಲ್ಪಟ್ಟಿತು. ಇದು, ಯಾರಿಗೆ ಮಾನವಕುಲದ ಮೇಲೆ ಪ್ರೀತಿಯಿತ್ತೊ ಅಂಥ ಆತನ ಕುಮಾರನಾದ ಯೇಸುಕ್ರಿಸ್ತನ ಮೂಲಕವಾಗಿತ್ತು. ತನ್ನ ಮಾನವಪೂರ್ವದ ಅಸ್ತಿತ್ವದಲ್ಲಿ ಯೇಸು “[ಕುಶಲ]ಶಿಲ್ಪಿ” ಯಾಗಿದ್ದು ಮಾನವಕುಲಸಂಬಂಧದ ವಿಷಯಗಳನ್ನು ಪ್ರೀತಿಸುತ್ತಾ ಸಂತೋಷದಿಂದ ಸೇವೆ ಮಾಡಿದನು. (ಜ್ಞಾನೋಕ್ತಿ 8:30,31) ಭೂಮಿಯಲ್ಲಿ ಮನುಷ್ಯನಾಗಿದ್ದ ಯೇಸು ಅಪೂರ್ಣ ಮನುಷ್ಯರಿಗೆ ಪ್ರೀತಿಯಿಂದ ಆತ್ಮಿಕವಾಗಿ ಸಹಾಯಮಾಡಿ, ರೋಗಿಗಳನ್ನು ಗುಣಮಾಡಿ, ಸತ್ತವರನ್ನೂ ಎಬ್ಬಿಸಿದನು. (ಮತ್ತಾಯ 9:35-38; ಲೂಕ 8:1-3,49-56) ಎಲ್ಲಕ್ಕೂ ಮಿಗಿಲಾಗಿ, ಯೇಸು, ‘ಅನೇಕರ ಪರವಾಗಿ ತನ್ನ ಪ್ರಾಣವನ್ನು ಪ್ರಾಯಶ್ಚಿತ್ತವಾಗಿ ಕೊಟ್ಟನು.’(ಮತ್ತಾಯ 20:28) ಆದುದರಿಂದ ಪ್ರಾಯಶ್ಚಿತ್ತವನ್ನು ಲಭಿಸಿಕೊಳ್ಳುವವನು ದೇವರನ್ನು, ಮಾನವಕುಲವನ್ನು ಅಷ್ಟೊಂದು ಪ್ರೀತಿಸಿದ ಈ ವ್ಯಕ್ತಿಯ ಮೂಲಕ ಸಮೀಪಿಸಬೇಕೆನ್ನುವುದು ಅದೆಷ್ಟು ಸಮಂಜಸ! ಇದು ಈಗ ಶಾಶ್ವತರಾಜನನ್ನು ಸಮೀಪಿಸುವ ಒಂದೇ ಹಾದಿ. ಯೇಸು ತಾನೇ ಹೇಳಿದ್ದು:“ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.”(ಯೋಹಾನ 14:6; 16:23) ಯೇಸುವಿನ ಹೆಸರಲ್ಲಿ ಕೇಳುವುದೆಂದರೆ ಪ್ರಾರ್ಥನೆಯನ್ನು ಕೇಳುವಾತನನ್ನು ಸಮೀಪಿಸುವ ಮಾರ್ಗ ಯೇಸುವೇ ಎಂದು ಒಪ್ಪಿಕೊಳ್ಳುವುದೆಂದರ್ಥ.
5. ಮಾನವಕುಲವೆಂಬ ಲೋಕದ ಕಡೆಗೆ ದೇವರ ಮನೋಭಾವವೇನು, ಮತ್ತು ಇದಕ್ಕೂ ಪ್ರಾರ್ಥನೆಗೂ ಏನು ಸಂಬಂಧ?
5 ವಿಶೇಷವಾಗಿ, ಪ್ರಾಯಶ್ಚಿತ್ತವನ್ನು ಒದಗಿಸಿದರ್ದ ಮಾಲಕ ಯೆಹೋವನು ತೋರಿಸಿದ ಪ್ರೀತಿಯನ್ನು ನಾವು ಗಣ್ಯಮಾಡಬೇಕು. ಯೇಸು ಹೇಳಿದ್ದು:“ದೇವರು [ಮಾನವಕುಲವೆಂಬ] ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ದೇವರ ಪ್ರೇಮದ ಆಳವು ಕೀರ್ತನೆಗಾರನ ಈ ಮಾತುಗಳಲ್ಲಿ ಸುವ್ಯಕ್ತವಾಗಿವೆ: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು. ನಾವು ಧೂಳಿಯಾಗಿದ್ದೇವೆಂಬದನ್ನು ನೆನಪು ಮಾಡಿಕೊಳ್ಳುತ್ತಾನೆ.” (ಕೀರ್ತನೆ 103:11-14) ಯೆಹೋವನ ಸಮರ್ಪಿತ ಸಾಕ್ಷಿಗಳ ಪ್ರಾರ್ಥನೆಗಳು ಮಗನ ಮೂಲಕ ಇಂಥ ಪ್ರೀತಿಯ ತಂದೆಗೆ ಏರಿಹೋಗುತ್ತದೆಂದು ತಿಳಿಯುವುದು ಎಷ್ಟೊಂದು ಹುರಿದುಂಬಿಸುವ ವಿಷಯ!
ಒಂದು ಪರಿಮಿತ ಸುಯೋಗ
6. ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ ಯಾವ ಮನೋಭಾವವಿರಬೇಕು?
6 ಮಾನವ ಅರಸರು ತಮ್ಮ ಅರಮನೆಗೆ, ಮೊದಲು ಪ್ರಕಟಿಸಲ್ಪಡದಿರುವಲ್ಲಿ ಯಾರನ್ನೂ ಪ್ರವೇಶಿಸಲು ಬಿಡುವುದಿಲ್ಲ. ಅರಸನೊಂದಿಗೆ ಭೇಟಿಯು ಒಂದು ಪರಿಮಿತ ಸುಯೋಗ. ಶಾಶ್ವತರಾಜನಿಗೆ ಮಾಡುವ ಪ್ರಾರ್ಥನೆಯೂ ಹೀಗೆಯೇ. ದೇವರ ಮಹಿಮಾಭರಿತ ಘನತೆಯನ್ನು ಗಣ್ಯ ಮಾಡುತ್ತಾ ಯೇಸುಕ್ರಿಸ್ತನ ಮೂಲಕ ಆತನನ್ನು ಸಮೀಪಿಸುವವರು ಲಾಲಿಸಲ್ಪಡುವರೆಂದು ನಿರೀಕ್ಷಿಸಬಹುದೆಂಬುದು ಖರೆ. ಈ ಶಾಶ್ವತ ರಾಜನನ್ನು ಪೂಜ್ಯವಾದ ಆರಾಧನಾಭಾವದಿಂದ ಸಮೀಪಿಸತಕ್ಕದ್ದು. ಮತ್ತು ಕೇಳಲ್ಪಡುವ ಬಯಕೆಯುಳ್ಳವರು “ಯೆಹೋವನ ಭಯ”ವನ್ನು ಪ್ರದರ್ಶಿಸತಕ್ಕದ್ದು.—ಜ್ಞಾನೋಕ್ತಿ 1:7.
7. “ಯೆಹೋವನ ಭಯ” ಎಂದರೇನು?
7 “ಯೆಹೋವನ ಭಯ”ವೆಂದರೇನು? ದೇವರಿಗೆ ತೀವ್ರವಾದ ಪೂಜ್ಯಭಾವ ತೋರಿಸುವುದರೊಂದಿಗೆ ಆತನನ್ನು ಅಸಮಾಧಾನ ಪಡಿಸುವ ವಿಷಯದಲ್ಲಿ ಇರುವ ಹಿತಕರವಾದ ಅಂಜಿಕೆಯೇ ಇದು. ಆತನ ಪ್ರೀತಿದಯೆ ಮತ್ತು ಒಳ್ಳೆಯತನಕ್ಕೆ ಆಳವಾದ ಕೃತಜ್ಞತೆ ತೋರಿಸುವುದರಿಂದ ಇಂಥ ಭಯಭಕ್ತಿ ಬರುತ್ತದೆ.(ಕೀರ್ತನೆ 106:1) ಅವಿಧೇಯನಾಗುವ ಯಾವನಿಗೂ ಮರಣವನ್ನೊಳಗೊಂಡ ಶಿಕ್ಷೆ ವಿಧಿಸುವ ಹಕ್ಕು ಮತ್ತು ಶಕ್ತಿ ಯಾರಿಗಿದೆಯೊ ಆ ಶಾಶ್ವತ ರಾಜನನ್ನು ಒಪ್ಪಿಕೊಳ್ಳುವುದು ಇದರಲ್ಲಿ ಸೇರಿದೆ. ಯೆಹೋವನ ಭಯವನ್ನು ಪ್ರದರ್ಶಿಸುವ ವ್ಯಕ್ತಿಗಳು ಆಲಿಸಲ್ಪಡುತ್ತೇವೆಂಬ ನಿರೀಕ್ಷೆಯಿಂದ ಅವನಿಗೆ ಪ್ರಾರ್ಥಿಸಬಹುದು.
8. ದೇವರಿಗೆ ಭಯಪಡುವವರ ಪ್ರಾರ್ಥನೆಯನ್ನು ಆತನೇಕೆ ಲಾಲಿಸುತ್ತಾನೆ?
8 ದುಷ್ಟರೂ ಅಪನಂಬಿಗಸ್ತರೂ ಸ್ವಧರ್ಮಿಷ್ಟಾಭಿಮಾನಿಗಳೂ ಆಗಿರುವವರ ಪ್ರಾರ್ಥನೆಯನ್ನು ದೇವರು ಆಲಿಸುವುದಿಲ್ಲವೆಂಬುದು ಸಹಜ.(ಜ್ಞಾನೋಕ್ತಿ 15:29; ಯೆಶಾಯ 1:15; ಲೂಕ 18:9-14) ಆದರೆ ಯೆಹೋವನಿಗೆ ಭಯ ಪಡುವವರು, ಆತನ ನೀತಿಯ ಮಟ್ಟಗಳಿಗೆ ಹೊಂದಿಕೊಳ್ಳುವುದರಿಂದ ಆಲಿಸಲ್ಪಡುತ್ತಾರೆ. ಇದಕ್ಕಿಂತಲೂ ಹೆಚ್ಚಿನದನ್ನು ಅವರು ಮಾಡಿದ್ದಾರೆ. ಅವರು ಪ್ರಾರ್ಥನೆಯಲ್ಲಿ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು ಇದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸಿದ್ದಾರೆ. ಹೀಗೆ ಅವರಿಗೆ ಅಪರಿಮಿತ ಪ್ರಾರ್ಥನಾಸುಯೋಗವಿದೆ.
9, 10.ದೀಕ್ಷಾಸ್ನಾನವಾಗಿರದವರು ತಮ್ಮ ಪ್ರಾರ್ಥನೆ ಕೇಳಲ್ಪಡುತ್ತದೆಂಬ ನಿರೀಕ್ಷೆಯಿಂದ ಪ್ರಾರ್ಥಿಸಬಹುದೋ?
9 ದೇವರು ಆಲಿಸಬೇಕಾದರೆ ಒಬ್ಬ ವ್ಯಕ್ತಿ ದೈವಿಕ ಚಿತ್ತಕ್ಕೆ ಹೊಂದಿಕೆಯಾಗಿರುವ ತನ್ನ ಪ್ರಾರ್ಥನಾಭಾವನೆಗಳನ್ನು ವ್ಯಕ್ತಪಡಿಸತಕ್ಕದ್ದು. ಹೌದು, ಅವನು ಯಥಾರ್ಥವಂತನಷ್ಟೇಯಲ್ಲ, ಅದಕ್ಕಿಂತ ಹೆಚ್ಚಿನ ವಿಷಯದ ಅಗತ್ಯವಿದೆ. ಅಪೊಸ್ತಲ ಪೌಲನು ಬರೆದುದು:“ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ. ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅಗತ್ಯ.(ಇಬ್ರಿಯ 11:6) ಹಾಗಾದರೆ, ಪ್ರಾರ್ಥನೆ ಕೇಳಲ್ಪಡುತ್ತದೆ ಎಂಬ ನಿರೀಕ್ಷೆಯಿಂದ ದೀಕ್ಷಾಸ್ನಾನವಾಗಿರದ ವ್ಯಕ್ತಿಗಳು ಪ್ರಾರ್ಥಿಸುವಂತೆ ನಾವು ಪ್ರೋತ್ಸಾಹಿಸಬಹುದೋ?
10 ಪ್ರಾರ್ಥನೆಯು ಪರಿಮಿತ ಸುಯೋಗವೆಂಬುದರ ಪ್ರಜ್ಞೆಯಿದ್ದ ಸೊಲೊಮೋನ ರಾಜನು, ಯೆರೂಸಲೇಮಿನ ದೇವಾಲಯದ ಕಡೆ ಮುಖಮಾಡಿ ಪ್ರಾರ್ಥಿಸುವ ವಿದೇಶೀಯರನ್ನು ಮಾತ್ರ ಯೆಹೋವನು ಆಲಿಸಬೇಕೆಂದು ಕೇಳಿಕೊಂಡನು.(1 ಅರಸು 8:41-43) ಶತಮಾನಗಳ ಬಳಿಕ ಯೆಹೂದ್ಯೇತರ ವಿದೇಶೀಯ ಕೊರ್ನೇಲ್ಯನು “ದೇವರಿಗೆ ನಿತ್ಯವೂ ಪ್ರಾರ್ಥನೆ” ಮಾಡಿದನು. ಸೂಕ್ಷ್ಮಜ್ಞಾನವನ್ನು ಸಂಪಾದಿಸಿದ ಮೇಲೆ ಕೊರ್ನೇಲ್ಯನು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳಲಾಗಿ ದೇವರು ಅವನಿಗೆ ಪವಿತ್ರಾತ್ಮವನ್ನು ಒದಗಿಸಿದನು. ಇದಾದ ಬಳಿಕ ಕೊರ್ನೇಲ್ಯನೂ ಇತರ ಅನ್ಯರೂ ದೀಕ್ಷಾಸ್ನಾನ ಹೊಂದಿದರು.(ಅಪೊಸ್ತಲರ ಕೃತ್ಯ 10:1-44) ಕೊರ್ನೇಲ್ಯನಂತೆ, ಇಂದು ಸಮರ್ಪಣೆಯ ಕಡೆಗೆ ಮುಂದುವರಿಯುತ್ತಿರುವ ಯಾವನೂ ಪ್ರಾರ್ಥಿಸುವಂತೆ ಪೋತ್ಸಾಹಿಸಲ್ಪಡಬಹುದು. ಆದರೆ ಶಾಸ್ತ್ರಾಭ್ಯಾಸದಲ್ಲಿ ಯಥಾರ್ಥತೆಯಿಲ್ಲದ, ಪ್ರಾರ್ಥನೆಯ ದೈವಿಕ ಆವಶ್ಯಕತೆಗಳನ್ನು ತಿಳಿಯದ ಮತ್ತು ಇದುವರೆಗೆ ದೇವರನ್ನು ಮೆಚ್ಚಿಸುವ ಮನೋಭಾವವನ್ನು ಪ್ರದರ್ಶಿಸಿರದ ವ್ಯಕ್ತಿಯು ಯೆಹೋವನಿಗೆ ಭಯಪಡುವವನು, ನಂಬಿಕೆಯುಳ್ಳವನು ಯಾ ಶೃದ್ಧಾಪೂರ್ವಕವಾಗಿ ಆತನನ್ನು ಹುಡುಕುವವನು ಎಂದು ಹೇಳಸಾಧ್ಯವಿಲ್ಲ. ಇಂಥ ವ್ಯಕ್ತಿ ದೇವರಿಗೆ ಸ್ವೀಕಾರಯೋಗ್ಯ ಪ್ರಾರ್ಥನೆಗಳನ್ನು ಅರ್ಪಿಸುವ ಸ್ಥಾನದಲ್ಲಿಲ್ಲ.
11 ಸಮರ್ಪಣೆಯ ಕಡೆಗೆ ಸಾಗುತ್ತಿದ್ದ ಕೆಲವರಿಗೆ ಏನು ಸಂಭವಿಸಿದೆ, ಮತ್ತು ತಮ್ಮೊಂದಿಗೆ ಯಾವ ಪ್ರಶ್ನೆಯನ್ನು ಅವರು ಕೇಳಿಕೊಳ್ಳಬೇಕು?
11 ಒಂದೊಮ್ಮೆ ಸಮರ್ಪಣೆಯ ಕಡೆಗೆ ನಡೆಯುತ್ತಿದ್ದ ಕೆಲವರು ಆ ಬಳಿಕ ಹಿಂಜರಿಯುವಂತೆ ಕಾಣಬಹುದು. ದೇವರಿಗೆ ಮೀಸಲಲ್ಲದ ಸಮರ್ಪಣೆ ಮಾಡುವಷ್ಟು ಪ್ರೀತಿ ಅವರಲ್ಲಿಲ್ಲದಿದ್ದರೆ, ಪ್ರಾರ್ಥನೆಯ ಆಶ್ಚರ್ಯಕರವಾದ ಸುಯೋಗ ಅವರಿಗೆ ಇನ್ನೂ ಇದೆಯೇ ಎಂದು ಅವರು ತಮ್ಮನ್ನು ಕೇಳಿಕೊಳ್ಳಬೇಕು. ಆ ಸುಯೋಗ ಇಲ್ಲವೆಂಬುದು ಸ್ಪಷ್ಟ, ಏಕೆಂದರೆ ದೇವರನ್ನು ಸಮೀಪಿಸುವವರು ಆತನನ್ನು ಮತ್ತು ನೀತಿ ಮತ್ತು ದೈನ್ಯವನ್ನು ಶ್ರದ್ಧಾಪೂರ್ವಕವಾಗಿ ಹುಡುಕಬೇಕು.(ಚೆಫನ್ಯ 2:3) ಯೆಹೋವನಿಗೆ ನಿಜವಾಗಿಯೂ ಭಯಪಡುವವನು ದೇವರಿಗೆ ತನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನದ ಮೂಲಕ ಅದನ್ನು ಸೂಚಿಸುವ ವಿಶ್ವಾಸಿಯಾಗಿದ್ದಾನೆ.(ಅಪೊಸ್ತಲರ ಕೃತ್ಯ 8:13; 18:8) ಮತ್ತು ಶಾಶ್ವತ ರಾಜನನ್ನು ಪ್ರಾರ್ಥನೆಯಲ್ಲಿ ಸಮೀಪಿಸುವ ಅಪರಿಮಿತ ಸುಯೋಗವು ಕೇವಲ ದೀಕ್ಷಾಸ್ನಾನ ಹೊಂದಿರುವ ವಿಶ್ವಾಸಿಗಳಿಗಿದೆ.
“ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆ” ಮಾಡುವುದು
12. ಒಬ್ಬನು “ಪವಿತ್ರಾತ್ಮಪ್ರೇರಿತನಾಗಿ” ಪ್ರಾರ್ಥಿಸುತ್ತಾನೆಂದು ಯಾವಾಗ ಹೇಳಬಹುದು?
12 ಒಬ್ಬನು ದೇವರಿಗೆ ತನ್ನನ್ನು ಸಮರ್ಪಿಸಿಕೊಂಡು ಅದನ್ನು ದೀಕ್ಷಾಸ್ನಾನದಿಂದ ಸೂಚಿಸಿದ ಬಳಿಕ ‘ಪವಿತ್ರಾತ್ಮದೊಂದಿಗೆ ಪ್ರಾರ್ಥಿಸುವ’ ಸ್ಥಾನದಲ್ಲಿರುವನು. ಇದರ ಕುರಿತು ಯೂದನು ಬರೆದುದು:“ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತನಂಬಿಕೆಯನ್ನು ಆಧಾರ ಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡುತ್ತಾ ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರು ನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.”(ಯೂದ 20,21) ಒಬ್ಬನು ಪವಿತ್ರಾತ್ಮದೊಂದಿಗೆ ಪ್ರಾರ್ಥಿಸುವುದು, ಅವನು ದೇವರ ಆತ್ಮ ಅಥವಾ ಕ್ರಿಯಾಶೀಲ ಶಕ್ತಿಯ ಪ್ರಭಾವದಲ್ಲಿದ್ದು ಆತನ ವಾಕ್ಯದ ವಿಷಯಗಳಿಗೆ ಹೊಂದಿಕೆಯಿಂದಿರುವಾಗಲೇ. ಯೆಹೋವನ ಆತ್ಮದ ಪ್ರೇರಣೆಯಿಂದ ಬರೆಯಲ್ಪಟ್ಟಿರುವ ಶಾಸ್ತ್ರವು ನಾವು ಹೇಗೆ ಪ್ರಾರ್ಥಿಸಬೇಕು, ಯಾವುದನ್ನು ಕೇಳಿಕೊಳ್ಳಬೇಕು ಎಂದು ತೋರಿಸುತ್ತದೆ. ದೃಷ್ಟಾಂತಕ್ಕೆ, ದೇವರು ತನ್ನ ಪವಿತ್ರಾತ್ಮವನ್ನು ಕೊಡುವಂತೆ ನಾವು ದೃಢತೆಯಿಂದ ಪ್ರಾರ್ಥಿಸಬಲ್ಲೆವು.(ಲೂಕ 11:13) ನಾವು ಪವಿತ್ರಾತ್ಮದೊಂದಿಗೆ ಪ್ರಾರ್ಥಿಸುವಾಗ ಯೆಹೋವನು ಪ್ರೀತಿಸುವ ಹೃದಯಸ್ಥಿತಿಯನ್ನು ನಮ್ಮ ಪ್ರಾರ್ಥನೆಗಳು ತೋರಿಸುತ್ತವೆ.
13. ನಾವು ಪವಿತ್ರಾತ್ಮದೊಂದಿಗೆ ಪ್ರಾರ್ಥಿಸುವಲ್ಲಿ ಯಾವುದನ್ನು ತಪ್ಪಿಸುವೆವು, ಮತ್ತು ಯೇಸುವಿನ ಯಾವ ಸಲಹೆಯನ್ನು ಅನ್ವಯಿಸಿಕೊಳ್ಳುವೆವು?
13 ನಾವು ಪವಿತ್ರಾತ್ಮದೊಂದಿಗೆ ಪ್ರಾರ್ಥಿಸುವಾಗ ನಮ್ಮ ಪ್ರಾರ್ಥನೆಗಳು ಶಬ್ದಾಡಂಬರದ ಮಾತುಗಳಿಂದ ತುಂಬಿರುವುದಿಲ್ಲ. ಸರದಿಯಾಗಿ ಪುನರಾವೃತ್ತಿಸುವ ಸೂತ್ರಗಳು ಅದರಲ್ಲಿರುವುದಿಲ್ಲ. ಏನೂ ಅರ್ಥವಿಲ್ಲದ ಸ್ತೋತ್ರಗೀತೆಗಳು, ಅಪ್ರಾಮಾಣಿಕ ಸ್ತುತಿಪದಗಳು ಅವುಗಳಲ್ಲಿರುವುದಿಲ್ಲ. ಇಂಥ ವಿಧದ ಪ್ರಾರ್ಥನೆಗಳು ಕ್ರೈಸ್ತಪ್ರಪಂಚದಲ್ಲಿ ಮತ್ತು ಮಿಥ್ಯಾಧರ್ಮ ಲೋಕಸಾಮ್ರಾಜ್ಯವಾದ ಮಹಾಬಾಬೆಲಿನ ಇತರ ಧರ್ಮಗಳಲ್ಲಿ ಹೇರಳವಾಗಿದೆ. ಆದರೆ ಸತ್ಯ ಕ್ರೈಸ್ತರು ಯೇಸುವಿನ ಸಲಹೆಗೆ ಕಿವಿಗೊಡುತ್ತಾರೆ:“ನೀವು ಪ್ರಾರ್ಥನೆ ಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಆವರು ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆ ಮಾಡುವದಕ್ಕೆ ಇಷ್ಟಪಡುತ್ತಾರೆ. ಪ್ರಾರ್ಥನೆ ಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ. ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು [ತಪ್ಪಾಗಿ] ನೆನಸುತ್ತಾರೆ. ಆದದರಿಂದ ನೀವು ಅವರ ಹಾಗೆ ಆಗಬೇಡಿರಿ.”—ಮತ್ತಾಯ 6:5-8, ಬೈಯಿಂಗ್ಟನ್.
14. ಕೆಲವರು ಪ್ರಾರ್ಥನೆಯ ಕುರಿತು ಯಾವ ಗ್ರಾಹ್ಯವಾದ ಹೇಳಿಕೆಗಳನ್ನು ಮಾಡಿದ್ದಾರೆ?
14 ಯೇಸು ಮತ್ತು ಬೈಬಲ್ ಲೇಖಕರು ಮಾತ್ರವಲ್ಲ, ಇತರರೂ ಬೈಬಲಿನ ಕುರಿತು ಗ್ರಹಿಸಲಾಗುವ ಹೇಳಿಕೆಗಳನ್ನು ಹೇಳಿದ್ದಾರೆ. ಇಂಗ್ಲಿಷ್ ಲೇಖಕ ಜಾನ್ ಬನ್ಯನ್(1628-88) ಹೇಳಿದ್ದು: “ಪ್ರಾರ್ಥನೆಯು ಕ್ರಿಸ್ತನ ಮೂಲಕ, ಆತ್ಮದ ಶಕ್ತಿ ಮತ್ತು ಸಹಾಯದಿಂದ ದೇವರು ವಾಗ್ದಾನಿಸಿರುವುದನ್ನು ಕೇಳುವ ಯಥಾರ್ಥತೆಯ, ವಿವೇಕದ ಮತ್ತು ಸ್ನೇಹಭಾವದ ಪ್ರಾಣದ ಸುರಿತವಾಗಿದೆ.” ಪ್ಯೂರಿಟನ್ ಪುರೋಹಿತ ಥಾಮಸ್ ಬ್ರುಕ್ಸ್(1608-80) ಗಮನಿಸಿದ್ದು:“ದೇವರು ನಿಮ್ಮ ಪ್ರಾರ್ಥನೆಗಳ ವಾಗ್ಮಿತೆಯನ್ನು ಅವೆಷ್ಟು ಲಲಿತವಾಗಿರಬಹುದಾದರೂ ಯಾ ನಿಮ್ಮ ಪ್ರಾರ್ಥನೆಗಳ ಜ್ಯಾಮಿತಿಯನ್ನು ಅವೆಷ್ಟು ದೀರ್ಘವಾಗಿರಬಹುದಾದರೂ ಯಾ ನಿಮ್ಮ ಪ್ರಾರ್ಥನೆಗಳ ಗಣಿತವನ್ನು ಅವೆಷ್ಟೇ ಇರಬಹುದಾದರೂ ಯಾ ನಿಮ್ಮ ಪ್ರಾರ್ಥನೆಗಳ ವಾದಸರಣಿಯನ್ನು ಅವೆಷ್ಟು ಕ್ರಮಾನುಸಾರವಾಗಿರಬಹುದಾದರೂ ನೋಡದೆ ಅವುಗಳ ಯಥಾರ್ಥತೆಯನ್ನೇ ನೋಡುತ್ತಾನೆ.” ಈ ಹೇಳಿಕೆಗಳಿಗೆ ಬನ್ಯನನ ಈ ಹೇಳಿಕೆಯನ್ನು ಕೂಡಿಸಬಹುದು:“ಪ್ರಾರ್ಥನೆಯಲ್ಲಿ ಹೃದಯವಿಲ್ಲದ ಮಾತುಗಳಿಗಿಂತ ಮಾತುಗಳಿಲ್ಲದ ಹೃದಯವೇ ಲೇಸು.” ಆದರೆ ನಾವು ಯಥಾರ್ಥರಾಗಿದ್ದು ದೈವಿಕ ಆವಶ್ಯಕತೆಗಳನ್ನು ಮುಟ್ಟುವಲ್ಲಿ ಶಾಶ್ವತ ರಾಜನು ನಮ್ಮ ಪ್ರಾರ್ಥನೆಗಳನ್ನು ಕೇಳುವನೆಂದು ನಮಗೆ ಹೇಗೆ ಖಾತರಿ ಇರಬಲ್ಲದು?
ಬರಿದಾಗಿ ಹಿಂದೆ ಕಳುಹಿಸುವುದೇ ಇಲ್ಲ
15. ಯೇಸು ಲೂಕ 11:5-8ರಲ್ಲಿ ಸಾರಾಂಶವಾಗಿ ಏನು ಹೇಳಿದನು?
15 ಯೆಹೋವ ದೇವರು ತನ್ನ ಸಮರ್ಪಿತ ಸೇವಕರ ಪ್ರಾರ್ಥನೆಗಳಿಗೆ ಎಂದಿಗೂ ಕಿವಿಗೊಡದೆ ಇರುವುದಿಲ್ಲ. ಇದು, ಯೇಸುವಿನ ಶಿಷ್ಯರು ಪ್ರಾರ್ಥನೆಯ ವಿಷಯ ಸಲಹೆ ಕೇಳಿದಾಗ ಅವನ ಹೃದಯೋಲ್ಲಾಸಗೊಳಿಸುವ ಮಾತುಗಳಿಂದ ಸ್ಪಷ್ಟವಾಗುತ್ತದೆ. ಅವನು ಅಂಶಿಕವಾಗಿ ಹೇಳಿದ್ದು:“ನಿಮ್ಮಲ್ಲಿ ಒಬ್ಬನಿಗೆ ಸ್ನೇಹಿತನಿದ್ದಾನೆ ಎಂದು ಹೇಳೋಣ. ಅವನು ಸರುಹೊತ್ತಿನಲ್ಲಿ ಆ ಸ್ನೇಹಿತನ ಬಳಿಗೆ ಹೋಗಿ—ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಕಡವಾಗಿ ಕೊಡು. ನನ್ನ ಸ್ನೇಹಿತರಲ್ಲಿ ಒಬ್ಬನು ಎಲ್ಲಿಗೋ ಪ್ರಯಾಣವಾಗಿ ನನ್ನ ಬಳಿಗೆ ಬಂದಿದ್ದಾನೆ; ಅವನಿಗೆ ಊಟ ಮಾಡಿಸುವದಕ್ಕೆ ನನ್ನಲ್ಲಿ ಏನೂ ಇಲ್ಲ ಎಂದು ಕೇಳಲು ಆ ಸ್ನೇಹಿತನು—ನನಗೆ ತೊಂದರೆ ಕೊಡಬೇಡ. ಈಗ ಕದಾ ಹಾಕಿ ಅದೆ. ನನ್ನ ಚಿಕ್ಕಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ನಿನಗೆ ಕೊಡುವದಕ್ಕಾಗುವದಿಲ್ಲ ಎಂದು ಒಳಗಿನಿಂದ ಉತ್ತರ ಕೊಟ್ಟರೂ ಕೊಡಬಹುದು. ಆದರೆ ಸ್ನೇಹದ ನಿಮಿತ್ತವಾಗಿ ಎದ್ದು ಕೊಡದೆ ಇದ್ದರೂ ಅವನ ಕಾಟದ ದೆಸೆಯಿಂದ ಎದ್ದು ಬಂದು ಕೇಳಿದಷ್ಟು ಅವನಿಗೆ ಕೊಡುವನೆಂದು ನಿಮಗೆ ಹೇಳುತ್ತೇನೆ.”(ಲೂಕ 11:1, 5-8) ಈ ದೃಷ್ಟಾಂತದ ಮುಖ್ಯ ವಿಷಯವೇನು?
16. ಪ್ರಾರ್ಥನೆಯ ಸಂಬಂಧದಲ್ಲಿ ನಾವೇನು ಮಾಡುವಂತೆ ಯೇಸು ಬಯಸಿದನು?
16 ಯೆಹೋವನು ನಮಗೆ ಸಹಾಯ ಮಾಡಲು ಅಪೇಕ್ಷೆಯಿಲ್ಲದವನು ಎಂಬರ್ಥದಲ್ಲಿ ಯೇಸು ನಿಶ್ಚಯವಾಗಿಯೂ ಮಾತಾಡಲಿಲ್ಲ. ಬದಲಿಗೆ, ನಾವು ದೇವರಲ್ಲಿ ಪೂರ್ಣ ವಿಶ್ವಾಸವಿಟ್ಟು ಬಿಡದೆ ಪ್ರಾರ್ಥಿಸುವಷ್ಟು ಆತನನ್ನು ಪ್ರೀತಿಸಬೇಕೆಂದು ಕ್ರಿಸ್ತನು ಬಯಸುತ್ತಾನೆ. ಆದುದರಿಂದಲೇ ಯೇಸು ಮುಂದುವರಿಸಿದ್ದು:“ನಾನು ನಿಮಗೆ ಹೇಳುವದೇನಂದರೆ, ಕೇಳುತ್ತಾ ಹೋಗಿರಿ ಮತ್ತು ಅದು ನಿಮಗೆ ಕೊಡಲ್ಪಡುವದು; ಹುಡುಕುತ್ತಾ ಹೋಗಿರಿ, ಮತ್ತು ನೀವು ಕಂಡುಕೊಳ್ಳುವಿರಿ, ನಂಬುತ್ತಾ ಹೋಗಿರಿ, ಅದು ನಿಮಗೆ ತೆರೆಯುವದು. ಏಕೆಂದರೆ ಕೇಳವ ಪ್ರತಿಯೊಬ್ಬನು ಪಡೆಯುತ್ತಾನೆ ಮತ್ತು ಹುಡುಕುವ ಪ್ರತಿಯೊಬ್ಬನಿಗೆ ದೊರೆಯುತ್ತದೆ ಮತ್ತು ತಟ್ಟುವ ಪ್ರತಿಯೊಬ್ಬನಿಗೆ ತೆರೆಯಲ್ಪಡುತ್ತದೆ.” (ಲೂಕ 11:9,10, NW) ಆದುದರಿಂದ, ನಮಗೆ ಹಿಂಸೆ ಬರುವಾಗ ಆಳವಾಗಿ ಬೇರೂರಿರುವ ವ್ಯಕ್ತಿಪರ ಬಲಹೀನತೆಗಳ ವಿಷಯ ನಾವು ಸಂಕಟಪಡುವಾಗ ಯಾ ಇನ್ನಿತರ ಪರೀಕ್ಷೆಗಳು ಬರುವಾಗ ನಾವು ಪ್ರಾರ್ಥಿಸುತ್ತಾ ಹೋಗಬೇಕೆಂಬುದು ನಿಶ್ಚಯ. ಯೆಹೋವನು ಯಾವಾಗಲೂ ತನ್ನ ನಂಬಿಗಸ್ತ ಸೇವಕರಿಗೆ ಸಹಾಯ ಮಾಡಲು ಸಿದ್ಧನು. ಆತನು ಎಂದಿಗೂ ನನಗೆ ತೊಂದರೆ ಕೊಡಬೇಡ ಎಂದು ಹೇಳಲಾರನು.
17, 18. (ಎ) ನಾವು ಪವಿತ್ರಾತ್ಮಕ್ಕಾಗಿ ಕೇಳುವಂತೆ ಯೇಸು ಹೇಗೆ ಪ್ರೋತ್ಸಾಹಿಸಿದನು, ಮತ್ತು ಅವನ ಮಾತುಗಳ ಶಕ್ತಿಯನ್ನು ಯಾವುದು ಹೆಚ್ಚಿಸುತ್ತದೆ? (ಬಿ) ಯೇಸು ಭೂತಂದೆಯ ವ್ಯವಹಾರವನ್ನು ದೇವರ ವ್ಯವಹಾರಕ್ಕೆ ಹೇಗೆ ಹೋಲಿಸುತ್ತಾನೆ?
17 ನಾವು ದೇವರೊಂದಿಗೆ ಆಪ್ತ ಸಂಬಂಧವನ್ನು ಅನುಭವಿಸಬೇಕಾದರೆ ನಮಗೆ ಆತನ ಪವಿತ್ರಾತ್ಮ ಯಾ ಕ್ರಿಯಾಶೀಲ ಶಕ್ತಿ ಅಗತ್ಯ. ಈ ಕಾರಣದಿಂದ ಯೇಸು ಮುಂದುವರಿಸಿದ್ದು:“ ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ? ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ?”(ಲೂಕ 11:11-13) ಮತ್ತಾಯ 7:9-11ರಲ್ಲಿ ರೊಟ್ಟಿಯ ಬದಲು ಕಲ್ಲು ಕೊಡುವದಾಗಿ ಹೇಳಲ್ಪಟ್ಟಿದೆ. ಹಳೆಯ ಬೈಬಲ್ ದೇಶಗಳ ರೊಟ್ಟಿಯ ಗಾತ್ರ ಮತ್ತು ಆಕಾರ ಚಪ್ಪಟೆಯೂ ಉರುಟೂ ಆದ ಕಲ್ಲಿನಂತಿತ್ತು ಎಂದು ನಾವು ಗ್ರಹಿಸುವಾಗ ಯೇಸುವಿನ ಮಾತುಗಳಲ್ಲಿರುವ ಶಕ್ತಿ ಹೆಚ್ಚುತ್ತದೆ. ಕೆಲವು ವಿಧದ ಹಾವುಗಳು ಹಲವು ರೀತಿಯ ಮೀನುಗಳಿಗೆ ಹೋಲುತ್ತವೆ. ಒಂದು ಚಿಕ್ಕ ಬಿಳಿ ಚೇಳು ಒಂದು ಮೊಟ್ಟೆಗೆ ಸದೃಶವಾಗಿದೆ. ಆದರೆ ರೊಟ್ಟಿ, ಮೀನು ಯಾ ಮೊಟ್ಟೆ ಕೇಳಿದಾಗ ತನ್ನ ಮಗುವಿಗೆ ಕಲ್ಲು, ಹಾವು ಯಾ ಚೇಳನ್ನು ಕೊಡುವ ತಂದೆ ಯಾವ ರೀತಿಯವನು?
18 ಅನಂತರ ಯೇಸು, ಭೂತಂದೆಯೊಬ್ಬನ ವ್ಯವಹಾರವನ್ನು ದೇವರ ಆರಾಧಕ ಕುಟುಂಬದ ಸದಸ್ಯರ ಕಡೆಗೆ ದೇವರು ತೋರಿಸುವ ವರ್ತನೆಗೆ ಹೋಲಿಸುತ್ತಾನೆ. ಪಿತ್ರಾರ್ಜಿತ ಪಾಪದಿಂದ ಹೆಚ್ಚುಕಡಮೆ ದುಷ್ಟರೇ ಆಗಿರುವ ನಾವು ಮಕ್ಕಳಿಗೆ ಉತ್ತಮ ಕೊಡುಗೆಗಳನ್ನು ಕೊಡುವುದಾದರೆ ನಮ್ಮ ಸ್ವರ್ಗೀಯ ತಂದೆಯು ನಮ್ರತೆಯಿಂದ ಕೇಳುವ ತನ್ನ ನಿಷ್ಠ ಸೇವಕರಿಗೆ ಉತ್ಕೃಷ್ಟವಾದ ಪವಿತ್ರಾತ್ಮವರವನ್ನು ಎಷ್ಟು ಹೆಚ್ಚಾಗಿ ಕೊಡುವನೆಂದು ನಾವು ನಿರೀಕ್ಷಿಸಬೇಕು!
19. (ಎ) ಲೂಕ 11:11-13 ಮತ್ತು ಮತ್ತಾಯ 7:9-11ರಲ್ಲಿ ದಾಖಲೆಯಾಗಿರುವ ಯೇಸುವಿನ ಮಾತುಗಳಿಂದ ಏನು ಸೂಚಿಸಲ್ಪಟ್ಟಿದೆ? (ಬಿ)ನಾವು ಪವಿತ್ರಾತ್ಮದಿಂದ ನಡೆಸಲ್ಪಡುವಲ್ಲಿ ನಮ್ಮ ಪರೀಕ್ಷೆಗಳನ್ನು ನಾವು ಹೇಗೆ ವೀಕ್ಷಿಸುವೆವು?
19 ಯೇಸುವಿನ ಮಾತುಗಳು ನಾವು ದೇವರ ಪವಿತ್ರಾತ್ಮದಲ್ಲಿ ಹೆಚ್ಚು ಭಾಗಕ್ಕಾಗಿ ಕೇಳಿಕೊಳ್ಳಬೇಕೆಂದು ಸೂಚಿಸುತ್ತವೆ. ನಾವು ಅದರಿಂದ ನಡೆಸಲ್ಪಡುವಲ್ಲಿ ನಾವು ‘ಗುಣುಗುಟ್ಟದೆ’ ಪರೀಕ್ಷೆ ಮತ್ತು ನಿರಾಸೆಗಳು ನಮಗೆ ನಿಜವಾಗಿಯೂ ಹಾನಿಕರವೆಂದು ವೀಕ್ಷಿಸುವೆವು. (ಯೂದ 16) ನಿಜ, “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳ ತುಂಬಿದವನಾಗಿಯೂ” ಇದ್ದಾನೆ ಮತ್ತು ಅನೇಕರು ತಮ್ಮ ಮನೋವ್ಯಥೆಗಳ ಅಂತ್ಯವನ್ನು ಕಾಣುವ ಮೊದಲೇ ಸತ್ತಿದ್ದಾರೆ.(ಯೋಬ 14:1) ಆದರೆ ನಮ್ಮ ಸಮಸ್ಯೆಗಳು, ಪ್ರಾರ್ಥನೆಯನ್ನು ಕೇಳುವಾತನು ಹೇಗೋ ನಮಗೆ ಕೊಟ್ಟಿರುವ ಕಲ್ಲು, ಹಾವು ಮತ್ತು ಚೇಳೆಂದು ನಾವೆಂದಿಗೂ ತಿಳಿಯದೆ ಇರೋಣ. ಆತನು ಪ್ರೀತಿಯ ಸಾರವಾಗಿದ್ದು ಯಾರನ್ನೂ ಕೆಟ್ಟ ವಿಷಯಗಳಿಂದ ಪರೀಕ್ಷಿಸನು. ಬದಲಾಗಿ, ಆತನು ನಮಗೆ, ‘ಪ್ರತಿಯೊಂದು ಉತ್ತಮ ದಾನ ಮತ್ತು ಪರಿಪೂರ್ಣ ಇನಾಮ’ನ್ನು ಕೊಡುತ್ತಾನೆ.(ಯಾಕೋಬ 1:12-17; 1 ಯೋಹಾನ 4:8) ಅನೇಕ ವರ್ಷಕಾಲ ಸತ್ಯದಲ್ಲಿ ನಡೆದಿರುವವರು, ತಮಗೆ ಬಂದಿದ್ದ ಅತಿ ಕಠಿಣ ಪರೀಕ್ಷೆಗಳು ಪ್ರಾರ್ಥನೆ ಮತ್ತು ನಂಬಿಕೆಯ ಮೂಲಕ ತಮಗೆ ಪ್ರಯೋಜನಕರವಾಗಿ ಪರಿಣಮಿಸಿ ತಮ್ಮ ಜೀವಿತದಲ್ಲಿ ದೇವರಾತ್ಮದ ಫಲಗಳನ್ನು ವೃದ್ಧಿಸಿವೆಯೆಂದು ಅನುಭವದಿಂದ ತಿಳಿದಿದ್ದಾರೆ.(3 ಯೋಹಾನ 4) ವಾಸ್ತವವಾಗಿ, ಸ್ವರ್ಗೀಯ ಪಿತನನ್ನು ಅವಲಂಬಿಸಲು ಮತ್ತು ಆತ್ಮದ ಫಲಗಳಾದ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಒಳ್ಳೇತನ, ನಂಬಿಕೆ, ಸಾಧುತ್ವ ಮತ್ತು ಆತ್ಮನಿಯಂತ್ರಣಗಳನ್ನು ಬೆಳೆಸುವಂತೆ ಕಲಿತು ಸಹಾಯಿಸಲ್ಪಡಲು ಇದಕ್ಕಿಂತ ಉತ್ತಮವಾದ ಇನ್ನಾವ ಮಾರ್ಗವಿದ್ದೀತು?—ಗಲಾತ್ಯ 5:22,23.
20. ಲೂಕ 11:5-13ರಲ್ಲಿ ದಾಖಲೆಯಾಗಿರುವ ಮಾತುಗಳು ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು?
20 ಲೂಕ 11:5-13ರಲ್ಲಿ ದಾಖಲೆಯಾಗಿರುವ ಯೇಸುವಿನ ಮಾತುಗಳು ಹೀಗೆ ಯೆಹೋವನ ಪ್ರೀತಿ ಮತ್ತು ಕೋಮಲವಾದ ಆರೈಕೆಯ ಸಮಾಧಾನಕರವಾದ ಭರವಸೆಯನ್ನು ನೀಡುತ್ತವೆ. ಇದು ನಮ್ಮ ಹೃದಯವನ್ನು ಅತಿ ಆಳವಾದ ಕೃತಜ್ಞತೆ ಮತ್ತು ಪ್ರೀತಿಯಿಂದ ತುಂಬಿಸಬೇಕು. ಇದು ನಮ್ಮ ನಂಬಿಕೆಯನ್ನು ಬಲಪಡಿಸಿ ನಾವು ಶಾಶ್ವತ ರಾಜನ ಪಾದಪೀಠಕ್ಕೆ ಅನೇಕಾವರ್ತಿ ಹೋಗಿ ಆತನ ಪ್ರೀತಿಯ ಸನ್ನಿಧಿಯಲ್ಲಿ ನಿಲ್ಲುತ್ತಾ ಇರುವ ನಮ್ಮ ಅಪೇಕ್ಷೆಯನ್ನು ವೃದ್ಧಿಸಬೇಕು. ಇದಲ್ಲದೆ ಯೇಸುವಿನ ಮಾತುಗಳು, ನಾವೆಂದಿಗೂ ಬರಿದಾಗಿ ಹಿಂದೆ ಕಳುಹಿಸಲ್ಪಡೆವು ಎಂಬ ಆಶ್ವಾಸನೆ ನೀಡುತ್ತವೆ. ನಮ್ಮ ಸ್ವರ್ಗೀಯ ಪಿತನು ನಾವು ನಮ್ಮ ಹೊರೆಗಳನ್ನು ಆತನ ಮೇಲೆ ಹಾಕುವಾಗ ಅತ್ಯಂತ ಸಂತುಷ್ಟನು.(ಕೀರ್ತನೆ 55:22; 121:1-3) ಮತ್ತು ಆತನ ನಂಬಿಗಸ್ತ ಸಮರ್ಪಿತ ಸೇವಕರಾದ ನಾವು ಆತನ ಪವಿತ್ರಾತ್ಮಕ್ಕಾಗಿ ಕೇಳುವಾಗ ಆತನು ಜಿಪುಣತೆ ಪ್ರದರ್ಶಿಸದೆ ಕೊಡುತ್ತಾನೆ. ಈತನೇ ನಮ್ಮ ಪ್ರಿಯ ತಂದೆ ಮತ್ತು ಈತನು ಪ್ರಾರ್ಥನೆಗಳನ್ನು ಕೇಳುವಾತನೆಂದು ನಾವು ಪೂರ್ಣ ವಿಶ್ವಾಸವಿಡಬಲ್ಲೆವು. (w90 5/15)
ನೆನಪಿದೆಯೆ?
▫ ನಾವು ದೇವರನ್ನು ಯಾರ ಮೂಲಕ ಪ್ರಾರ್ಥನೆಯಲ್ಲಿ ಸಮೀಪಿಸಬೇಕು, ಮತ್ತು ಏಕೆ?
▫ ಪ್ರಾರ್ಥನೆಯು ಯಾವ ವಿಧದಲ್ಲಿ ಒಂದು ಪರಿಮಿತ ಸುಯೋಗ?
▫ ‘ಪವಿತ್ರಾತ್ಮದೊಂದಿಗೆ ಪ್ರಾರ್ಥಿಸುವುದು’ ಎಂಬುದರ ಅರ್ಥವೇನು?
▫ ಯೆಹೋವನ ನಂಬಿಗಸ್ತ ದೀಕ್ಷಾಸ್ನಾನಿತ ಸಾಕ್ಷಿಗಳ ಪ್ರಾರ್ಥನೆಗಳುಕೇಳಲ್ಪಡುತ್ತವೆಂದು ನೀವು ಹೇಗೆ ಶಾಸ್ತ್ರಾಧಾರದಿಂದ ರುಜು ಮಾಡಬಲ್ಲಿರಿ?
[ಪುಟ 15 ರಲ್ಲಿರುವ ಚಿತ್ರಗಳು]
ಮಾನವ ತಂದೆಗಳು ತಮ್ಮ ಮಕ್ಕಳಿಗೆ ಉತ್ತಮ ಕೊಡುಗೆಗಳನ್ನು ಕೊಡುವಂತೆಯೆ ಯೆಹೋವನು ತನ್ನನ್ನು ಕೇಳುವವರಿಗೆ ಪವಿತ್ರಾತ್ಮವನ್ನು ಕೊಡುತ್ತಾನೆ