ಅಡಿಗೆಮನೆಯು ವಿನೋದದ ಸ್ಥಳವಾಗಿರಬಲ್ಲದು
“ಅಡಿಗೆಮನೆಯಿಂದ ಹೊರಗಿರು!” ರಾತ್ರಿಯೂಟವು ಬಡಿಸಲ್ಪಡುವ ಮುಂಚೆಯೇ ಅದರ ರುಚಿಯನ್ನು ಸವಿಯಲು ಪ್ರಯತ್ನಿಸುತ್ತಿರುವಾಗ, ಅನೇಕ ಹಸಿದ ಮಕ್ಕಳಿಗೆ ಆ ಗದರಿಕೆ ಸಿಕ್ಕಿದೆ. ಆದರೂ, ತಮ್ಮ ಮಕ್ಕಳನ್ನು ಹೊರಗಿರಿಸುವ ಬದಲಿಗೆ, ಅವರನ್ನು ಅಡಿಗೆಮನೆಯೊಳಗೆ ಆಮಂತ್ರಿಸಲು ಹೆತ್ತವರಿಗೆ ಸಕಾರಣವಿದೆ. ಯಾಕೆ? ಯಾಕಂದರೆ, ಅಡಿಗೆಮನೆಯು ಕಾರ್ಯತಃ ಒಂದು ಆಕರ್ಷಕ ತರಗತಿಕೋಣೆಯಾಗಿದೆ.
ಅಡಿಗೆಮನೆಯು, ಮಕ್ಕಳು ಸೃಜನಶೀಲತೆ ಮತ್ತು ಸಮಸ್ಯೆಯನ್ನು ಬಗೆಹರಿಸುವ ಕೌಶಲಗಳನ್ನು ಕಲಿತುಕೊಳ್ಳಸಾಧ್ಯವಿರುವ ಒಂದು ಸ್ಥಳವಾಗಿದೆ. ಅದು ಇತರರ ಸೇವೆ ಮಾಡುವ ಮತ್ತು ಒಂದು ತಂಡದ ಭಾಗದೋಪಾದಿ ಕೆಲಸಮಾಡಲು ಅವರು ಕಲಿಯಸಾಧ್ಯವಿರುವ ಸ್ಥಳ, ಮತ್ತು ಹೃದಯವನ್ನು ಸ್ಪರ್ಶಿಸುವಂತಹ ಅರ್ಥಭರಿತ ಸಂಭಾಷಣೆಗಳು ಅಯತ್ನಪೂರ್ವಕವಾಗಿ ಏಳಸಾಧ್ಯವಿರುವ ಸ್ಥಳವಾಗಿದೆ. ಗಂಭೀರವಾಗಿ ಎತ್ತಿಹಿಡಿಯಲ್ಪಟ್ಟಿರುವ ಮೌಲ್ಯಗಳನ್ನು, ಶಾಂತವಾಗಿ ಬೇರೂರಿಸಸಾಧ್ಯವಿರುವ ಒಂದು ಸ್ಥಳ ಅದಾಗಿದೆ. ಹೌದು, ಪ್ರತಿಯೊಂದು ಅಡಿಗೆಮನೆಯ ಕಿಕ್ಕಿರಿದು ತುಂಬಿದ ಅಲಮಾರುಗಳಲ್ಲಿ, ಸಳೆಖಾನೆಗಳಲ್ಲಿ ಮತ್ತು ಅಂತಸ್ತು ಹಲಗೆಗಳ ಮೇಲೆ, ಮುಂದಿನ ಊಟವನ್ನು ತಯಾರಿಸುವಾಗ, ಕಲಿಯಬಹುದಾದ ಹಾಗೂ ಅನ್ವಯಿಸಬಹುದಾದ ಅನೇಕ ಅಮೂಲ್ಯ ಪಾಠಗಳಿವೆ.
ತಂತ್ರಜ್ಞಾನ ಮತ್ತು ಸಮಾಚಾರದ ಈ ಯುಗದಲ್ಲಿ, ಅಡಿಗೆಮನೆಯನ್ನು ಮಕ್ಕಳಿಗೆ ತರಬೇತಿ ನೀಡುವ ಸ್ಥಳವಾಗಿ ಏಕೆ ಉಪಯೋಗಿಸಬೇಕು? ಉತ್ತರವು, ಸಮಯ. ತಮ್ಮ ಮಕ್ಕಳೊಂದಿಗೆ ಸಮಯವನ್ನು—ತುಂಬ ಸಮಯವನ್ನು—ಕಳೆಯುವುದಕ್ಕೆ ಬೇರೆ ಯಾವುದೇ ಬದಲಿ ಇಲ್ಲವೇ ಇಲ್ಲವೆಂಬುದನ್ನು ಅನೇಕ ಹೆತ್ತವರು ಅಂಗೀಕರಿಸುತ್ತಾರೆ!a ಆ ಸಮಯವನ್ನು ಎಲ್ಲಿ ಕಂಡುಕೊಳ್ಳುವುದೆಂಬುದೇ ಸಮಸ್ಯೆಯಾಗಿದೆ. ಮನೆಯಲ್ಲಿ ಅವರು ಮಾಡುವ ನಿಯತಕ್ರಮದ ಕೆಲಸವನ್ನು, ತಮ್ಮ ಮಕ್ಕಳೊಂದಿಗೆ ವಿಷಯಗಳನ್ನು ಮಾಡುವ ಮತ್ತು ಅವರಿಗೆ ಶಿಕ್ಷಣ ಕೊಡುವ ಒಂದು ಅವಕಾಶದೋಪಾದಿ ಪರಿಗಣಿಸುವಂತೆ ಕೆಲವು ಅಧಿಕಾರಿಗಳು ಹೆತ್ತವರನ್ನು ಪ್ರೇರಿಸುತ್ತಾರೆ. ಇದು, ಪುರಾತನ ಇಸ್ರಾಯೇಲ್ ಜನಾಂಗದಲ್ಲಿದ್ದ ಹೆತ್ತವರಿಗೆ ದೇವರು ಕೊಟ್ಟ ಒಂದು ಆಜ್ಞೆಗೆ ಸಹಮತದಲ್ಲಿದೆ: “ನಾನು ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:6, 7.
ನಾವು ಕ್ರಮವಾಗಿ ಅಡಿಗೆಮನೆಯಲ್ಲಿ ಸಮಯವನ್ನು ಹೇಗೂ ಕಳೆಯಬೇಕಾಗಿರುವುದರಿಂದ, ಪಾಲಿಗ ಕುಟುಂಬ ಚಟುವಟಿಕೆಗಾಗಿ ಅದು ಒಂದು ಸ್ಫುಟವಾದ ಸ್ಥಳವಾಗಿ ತೋರುವುದು. ಮತ್ತು ಯಾವುದಕ್ಕಾಗಿ ನಮಗೆ ಸಮಯ, ಶಕ್ತಿ ಅಥವಾ ಹಣವಿರುವ ಸಮಯದ ತನಕ ಅನೇಕವೇಳೆ ಕಾಯಬೇಕಾಗುತ್ತದೊ, ಆ ವಿಶೇಷವಾದ ಸಂತೋಷ ಸಂಚಾರಗಳಿಗಿಂತ ಭಿನ್ನವಾಗಿ, ಆರೋಗ್ಯಕರ ಹಸಿವೆಗಳನ್ನಾದರೊ ಮುಂದೆ ಹಾಕಸಾಧ್ಯವಿಲ್ಲ. ಅದಲ್ಲದೆ, ಮಕ್ಕಳಿಗೆ ಅಡಿಗೆಮನೆಯ ಕಡೆಗೆ ಒಂದು ಸ್ವಾಭಾವಿಕ ಆಕರ್ಷಣೆಯಿದೆ. ಎಷ್ಟೆಂದರೂ, ಕತ್ತಿಗಳನ್ನು ಜಾಗರೂಕವಾಗಿ ಉಪಯೋಗಿಸಲು ಮತ್ತು ಇನ್ನಿತರ ಪಾತ್ರೆಗಳನ್ನು ಸರಿಯಾಗಿ ಬಳಸಲು ಅವರು ಇನ್ನೆಲ್ಲಿ ತರಬೇತುಗೊಳಿಸಲ್ಪಡುತ್ತಾರೆ? ವಿನೋದವಾಡುತ್ತಿರುವ ಮಕ್ಕಳು ಕೆಲವೊಮ್ಮೆ ಅಸ್ತವ್ಯಸ್ತತೆಯನ್ನೂ ಉಂಟುಮಾಡಬಹುದು! ಆದರೂ, ಅಡಿಗೆಮನೆಯು ಯಾವ ಪಾಠಗಳನ್ನು ಕಲಿಸಬಲ್ಲದು?
ಅಡಿಗೆಮನೆಯೆಂಬ “ತರಗತಿಕೋಣೆಯಲ್ಲಿ” ಕಲಿಯುವುದು
ಬಿಸ್ಕೆಟ್ ಆಂಟಿ ಎಂದು ತನ್ನ ನಾಲ್ಕು ವರ್ಷ ಪ್ರಾಯದ ವಿದ್ಯಾರ್ಥಿಗಳಿಗೆ ಪರಿಚಿತರಾಗಿರುವ, ಲವೀಸ್ ಸ್ಮಿತ್, ಎಳೆಯ ಮಕ್ಕಳಿಗೆ ಅಡಿಗೆಮಾಡುವುದನ್ನು ಕಲಿಸುವುದರಲ್ಲಿ 17 ವರ್ಷಗಳ ಅನುಭವದ ಆಧಾರದ ಮೇಲೆ ಈ ಅವಲೋಕನವನ್ನು ಮಾಡಿದರು: “ಎಲ್ಲಾ ಮಕ್ಕಳಿಗೆ ಅದು ಅರ್ಥವಾಗುವುದರಿಂದ, ಆಹಾರವು ಒಂದು ಅತಿ ಒಳ್ಳೆಯ ಬೋಧನಾ ಸಾಧನವಾಗಿದೆ. ಅವರ ಘ್ರಾಣ, ರಸನ, ಮತ್ತು ಸ್ಪರ್ಶದ ಜ್ಞಾನೇಂದ್ರಿಯಗಳು ಆ ಎಳೆಯ ಪ್ರಾಯಗಳಲ್ಲಿ ಎಷ್ಟು ತೀಕ್ಷ್ಣವಾಗಿರುತ್ತವೆಂದರೆ, ಅವರು ಪೂರ್ಣವಾಗಿ ತಲ್ಲೀನರಾಗುತ್ತಾರೆ. ಮತ್ತು ಆಹಾರದ ಮೂಲಕ ನೀವು ಅಕ್ಷರ ಸಂಯೋಜನೆ, ಗಣಿತ, ಮತ್ತು ಸಮಸ್ಯೆಯನ್ನು ಬಗೆಹರಿಸುವ ಕೌಶಲಗಳನ್ನು ಕಲಿಸಬಲ್ಲಿರಿ.” ಸುರಿಯುವುದು, ಕುಟ್ಟುವುದು, ಸುಲಿಯುವುದು, ಸೋಸುವುದು, ಕಲಕುವುದು, ಮತ್ತು ಲಟ್ಟಿಸುವುದು, ಮಕ್ಕಳಿಗೆ ಕೈದುಡಿಮೆಯ ನೈಪುಣ್ಯ ಮತ್ತು ಕಣ್ಣು ಹಾಗೂ ಕೈಗಳ ಸುಸಂಘಟನೆಯನ್ನು ವಿಕಸಿಸಿಕೊಳ್ಳುವಂತೆ ಸಹಾಯಮಾಡುತ್ತದೆ. ಆಯ್ದು ತೆಗೆಯುವುದು (ಒಣದ್ರಾಕ್ಷಿ ಮತ್ತು ನಟ್ಸ್ಗಳನ್ನು ಪ್ರತ್ಯೇಕವಾದ ರಾಶಿಗಳಲ್ಲಿ ಹಾಕುವುದು) ಮತ್ತು ಸೀಕ್ವೆನ್ಸಿಂಗ್ (ಅಳತೆಯ ಕಪ್ಗಳನ್ನು ಒಂದರೊಳಗೆ ಒಂದನ್ನು ವ್ಯವಸ್ಥಿತವಾಗಿ ಇಡುವುದು), ಗಣಿತಶಾಸ್ತ್ರವನ್ನು ಕಲಿಯಲಿಕ್ಕಾಗಿ ಮೂಲಭೂತ ವಿಷಯಗಳಾಗಿ ಕಾರ್ಯನಡಿಸುವ ಕಲ್ಪನೆಗಳನ್ನು ಕಲಿಸುತ್ತವೆ. ಒಂದು ಪಾಕವಿಧಾನದಲ್ಲಿರುವ ಸೂಚನೆಗಳನ್ನು ಅನುಸರಿಸುವುದು, ಅಂಕಿಗಳು, ಅಳತೆಗಳು, ಸಮಯಪಾಲನೆ, ತರ್ಕ, ಮತ್ತು ಭಾಷೆಯ ಉಪಯೋಗದಲ್ಲಿ ಒಂದು ಅಭ್ಯಾಸವಾಗಿದೆ. ಮತ್ತು ಸುರಕ್ಷೆ, ಜವಾಬ್ದಾರಿ, ವೈಯಕ್ತಿಕ ಸಂಘಟನೆ ಹಾಗೂ ತಂಡಕೆಲಸದ ಕುರಿತಾಗಿ ಸ್ವಲ್ಪ ವಿಷಯವನ್ನಾದರೂ ಕಲಿಯದೆ, ಒಬ್ಬನು ಅಡಿಗೆಮನೆಯ ಜಟಿಲವಾದ ಮತ್ತು ಅಪಾಯದಿಂದ ತುಂಬಿದ ಲೋಕದೊಳಗೆ ಅಡಿಯನ್ನಿರಿಸುವ ಸಾಹಸವನ್ನು ಮಾಡಲಾರನು.
ಅಡಿಗೆಮಾಡುವುದನ್ನು ಕಲಿಯುವ ಮೌಲ್ಯವು ಕೂಡ ಪ್ರಾಮುಖ್ಯ. ಅಡಿಗೆಮನೆಯಲ್ಲಿ ಸಹಾಯಮಾಡುವ ಮೂಲಕ ಆರಂಭಿಸುವ ಮಕ್ಕಳು, ತಮ್ಮ ಹದಿವಯಸ್ಸಿನ ವರ್ಷಗಳನ್ನು ತಲಪುವಷ್ಟರಲ್ಲಿ, ಇಡೀ ಊಟಗಳನ್ನು ತಯಾರಿಸಲು ಶಕ್ತರಾಗಿರುವುದು ಅಸಾಮಾನ್ಯವಲ್ಲ. ಯಾವ ಕಾರ್ಯಮಗ್ನ ಹೆತ್ತವರೊಬ್ಬರು ಅದನ್ನು ಆಗಿಂದಾಗ್ಗೆ ಸಂತೋಷದಿಂದ ಸ್ವಾಗತಿಸದಿರರು? ಇನ್ನೂ ಹೆಚ್ಚಾಗಿ, ಅಡಿಗೆಮಾಡುವುದು, ಯುವ ಜನರಿಗೆ ಆತ್ಮವಿಶ್ವಾಸ ಮತ್ತು ಸ್ವಸಂತುಷ್ಟಿಯನ್ನು ವಿಕಸಿಸಿಕೊಳ್ಳುವಂತೆ ಸಹಾಯ ಮಾಡುತ್ತದೆ. ಈ ಗುಣಗಳು, ಅವರು ವಿವಾಹವಾಗಲಿ ಅಥವಾ ಅವಿವಾಹಿತರಾಗಿ ಉಳಿಯಲಿ, ತದನಂತರ ವಯಸ್ಕ ಜವಾಬ್ದಾರಿಗಳನ್ನು ವಹಿಸುವಾಗ ಅವರಿಗೆ ಲಾಭ ತರಸಾಧ್ಯವಿದೆ.—1 ತಿಮೊಥೆಯ 6:6ನ್ನು ಹೋಲಿಸಿರಿ.
ತನ್ನ 30ಗಳ ಪ್ರಾಯದ ಆದಿ ಭಾಗದ ತನಕ ಅವಿವಾಹಿತನಾಗಿ ಉಳಿದ ಲೀ ಜ್ಞಾಪಿಸಿಕೊಳ್ಳುವುದು: “ನಾನು ಸುಮಾರು ಆರು ವರ್ಷ ಪ್ರಾಯದವನಾಗಿದ್ದಾಗಲೇ ನನ್ನ ತಾಯಿ ಅಡಿಗೆಮನೆಯ ಮೂಲಭೂತ ನಿಯತಕ್ರಮಗಳಲ್ಲಿ ತರಬೇತಿ ನೀಡಲು ಆರಂಭಿಸಿದರು. ಆರಂಭದಲ್ಲಿ, ನಾನು ಮುಖ್ಯವಾಗಿ, ಬಿಸ್ಕತ್ತುಗಳು, ಕೇಕ್ಗಳು ಮತ್ತು ಇತರ ಸಿಹಿತಿಂಡಿಗಳನ್ನು ತಯಾರಿಸುವುದರಲ್ಲಿ ಆಸಕ್ತನಾಗಿದ್ದೆ. ಆದರೆ ನಾನು ಒಂಬತ್ತು ವರ್ಷದವನಾಗಿದ್ದ ಸಮಯದೊಳಗೆ ನಾನು, ನನ್ನ ಕುಟುಂಬಕ್ಕಾಗಿ ಇಡೀ ಊಟವನ್ನು ಯೋಜಿಸಿ, ತಯಾರಿಸಲು ಶಕ್ತನಾಗಿದ್ದೆ. ಮತ್ತು ನಾನು ಇದನ್ನು ಕ್ರಮವಾಗಿ ಮಾಡಿದೆ. ಅನಂತರ, ಒಬ್ಬ ಅವಿವಾಹಿತ ವಯಸ್ಕನೋಪಾದಿ, ಅಡಿಗೆಮಾಡುವುದನ್ನು ಸೇರಿಸಿ, ಗೃಹಸಂಬಂಧವಾದ ವಿವಿಧ ಕರ್ತವ್ಯಗಳನ್ನು ನಿರ್ವಹಿಸುವ ವಿಧವನ್ನು ತಿಳಿದಿರುವುದು, ಜೀವನವನ್ನು ಹೆಚ್ಚು ಸುಲಭವನ್ನಾಗಿ ಮಾಡುತ್ತದೆಂಬುದನ್ನು ನಾನು ಕಂಡುಕೊಂಡೆ. ಮತ್ತು ಇದು ನಾನು ಈಗ ಒಂದು ಯಶಸ್ವಿ ವಿವಾಹವನ್ನು ಅನುಭವಿಸುವಂತೆ ನೆರವು ನೀಡಿದೆಯೆಂದು ನಾನು ಖಂಡಿತವಾಗಿ ಹೇಳುವೆ.”
ಅಡಿಗೆಮಾಡುವುದು ವಿನೋದಕರ!
ಅಡಿಗೆಮನೆಯಲ್ಲಿ ಮಕ್ಕಳಿಗೆ ತರಬೇತಿ ನೀಡಲು ಒಬ್ಬ ಹೆತ್ತವರು ಸಮಯವನ್ನು ಹೇಗೆ ಕಂಡುಕೊಳ್ಳಬಹುದು? ಸಾಧ್ಯವಿರುವಷ್ಟು ಕಡಿಮೆ ಅಪಕರ್ಷಣೆಗಳಿರುವ ಒಂದು ಸಮಯವನ್ನು ನಿಗದಿಪಡಿಸುವುದರ ಕುರಿತು ಒಬ್ಬ ತಾಯಿಯು ಸಲಹೆ ನೀಡುತ್ತಾಳೆ. ನಿಮಗೆ ಹಲವಾರು ಮಕ್ಕಳಿರುವಲ್ಲಿ, ಅವರು ಅಡಿಗೆಮನೆಯ ಕುರಿತಾಗಿ ಕಲಿಯಲು ಆರಂಭಿಸುತ್ತಿರುವಾಗ, ಒಬ್ಬೊಬ್ಬರೊಂದಿಗೆ ಕೆಲಸಮಾಡಲು ನೀವು ಬಯಸಬಹುದು. ಇದನ್ನು ಮಾಡಲು, ಬೇರೆ ಮಕ್ಕಳು ನಿದ್ರೆ ಮಾಡುತ್ತಿರುವಾಗ ಅಥವಾ ಶಾಲೆಯಲ್ಲಿರುವಾಗಿನ ಸಮಯವನ್ನು ಆರಿಸಿಕೊಳ್ಳಿರಿ. ನೀವು ಒಬ್ಬರೇ ಅಡಿಗೆಮಾಡುತ್ತಿದ್ದಲ್ಲಿ ನೀವು ಕಳೆಯುತ್ತಿದ್ದ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಕಳೆಯುವುದನ್ನು ಯೋಜಿಸಿರಿ. ಮತ್ತು ಅಡಿಗೆಮನೆಯಲ್ಲಿ ವಿನೋದವನ್ನು ಹೊಂದಲಿಕ್ಕಾಗಿ ತಯಾರಾಗಿರಿ!
ನಿಮ್ಮ ಪ್ರಥಮ ಸೆಷನ್ಗಾಗಿ, ನಿಮ್ಮ ಮಗು ತಿನ್ನಲು ಇಷ್ಟಪಡುವ ಒಂದು ವಿಷಯವನ್ನು ಆರಿಸಿಕೊಳ್ಳುವಂತೆ ಬಿಡಿರಿ.b ತ್ವರಿತವಾದ ಫಲಿತಾಂಶಗಳನ್ನು ತರುವ ಒಂದು ಸರಳವಾದ ಪಾಕವಿಧಾನವನ್ನು ಹುಡುಕಿರಿ. ಅವನು ಯಶಸ್ವಿಯಾಗಿ ಪೂರ್ಣಗೊಳಿಸಬಹುದಾದ ಕೆಲಸಗಳು ಸೇರಿರುವುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ಮಗುವು ಚಡಪಡಿಸದಿರಲು, ಹಾಗೂ ಅವನಿಗೆ ಬೇಸರವಾಗದಂತೆ ಮಾಡಲು, ಅದಕ್ಕಾಗಿ ಬೇಕಾದಂತಹ ಸಾಮಗ್ರಿಗಳನ್ನು ಮತ್ತು ಪಾತ್ರೆಗಳನ್ನು ಅವನು ಮುಂಚೆಯೇ ಕಂಡುಕೊಳ್ಳುವಂತೆ ಮಾಡಿರಿ. ನೀವು ಸಾಮಗ್ರಿಗಳಲ್ಲಿ ಕೆಲವನ್ನು ಮುಂಗಡವಾಗಿಯೇ ಆಂಶಿಕವಾಗಿ ತಯಾರಿಸಿಡಬಹುದು. ಹೀಗೆ ಆ ಸೆಷನ್ ತುಂಬ ದೀರ್ಘ ಸಮಯದ್ದು ಮತ್ತು ಆಯಾಸಕರವಾದದ್ದಾಗಿ ಪರಿಣಮಿಸುವುದಿಲ್ಲ.
ನಿಮ್ಮ ಮಗುವಿನೊಂದಿಗೆ ಪಾಕವಿಧಾನವನ್ನು ಸಂಪೂರ್ಣವಾಗಿ ಓದಿರಿ. ಪ್ರತಿಯೊಂದು ಕೆಲಸವನ್ನು ಹೇಗೆ ಮಾಡುವುದೆಂಬುದನ್ನು ಅವನಿಗೆ ತೋರಿಸಿರಿ. ನಿಮ್ಮ ಮಗುವಿಗೆ ಅಡಿಗೆಮನೆಯಲ್ಲಿ ಅವನ ಸ್ವಂತ ಸ್ಥಳವನ್ನು—ಪ್ರಾಯಶಃ ಒಂದೆರಡು ಬೋಗುಣಿಗಳು ಮತ್ತು ಕೆಲವು ಪಾತ್ರೆಗಳಿರುವ ಒಂದು ಡ್ರಾಅರ್—ಕೊಡಿರಿ. ಮತ್ತು ಅವನಿಗೆ ಒಂದು ಏಪ್ರನನ್ನು ಕೊಡಿರಿ. ಒಬ್ಬ ಹುಡುಗನಿಗೆ ಒಬ್ಬ ಸ್ತ್ರೀಯ ಏಪ್ರನನ್ನು ಧರಿಸುವಂತೆ ಮಾಡುವ ಬದಲಿಗೆ, ಒಬ್ಬ ಬಾಣಸಿಗನಿಗಾಗಿ ಮಾಡಲ್ಪಟ್ಟ ಒಂದು ಏಪ್ರನನ್ನು ನೀವು ಅವನಿಗಾಗಿ ತರಿಸಬಹುದು. ಆರಂಭದಿಂದಲೇ ಸುರಕ್ಷೆಯ ಪ್ರಾಮುಖ್ಯವನ್ನು ಒತ್ತಿಹೇಳಿರಿ ಮತ್ತು ಅಡಿಗೆಮನೆಗಾಗಿ ವಿವೇಕಯುತವಾದ ನಿಯಮಗಳನ್ನು ಇಡಿರಿ.—ಪುಟ 18ರಲ್ಲಿ, “ಪ್ರಥಮ ಪಾಠ—ಸುರಕ್ಷೆ” ಎಂಬ ಶಿರೋನಾಮವುಳ್ಳ ರೇಖಾಚೌಕವನ್ನು ನೋಡಿರಿ.
ಎಲ್ಲಕ್ಕಿಂತಲೂ ಮಿಗಿಲಾಗಿ, ಅದನ್ನು ವಿನೋದಕರವನ್ನಾಗಿ ಮಾಡಲು ಪ್ರಯತ್ನಿಸಿರಿ. ನಿಮ್ಮ ಮಗು ಕೇವಲ ನಿಮ್ಮನ್ನು ನೋಡುತ್ತಾ ಇರುವಂತೆ ಬಿಡಬೇಡಿ; ಅವನು ತನ್ನ ಕೈಗಳನ್ನು ತೊಳೆದುಕೊಳ್ಳುವಂತೆ ಮಾಡಿ, ಊಟದ ತಯಾರಿಯಲ್ಲಿ ಅವುಗಳನ್ನು ಕಾರ್ಯಮಗ್ನರಾಗಿರಿಸಿರಿ. ಶೋಧಿಸುವಂತೆ, ಪ್ರಯೋಗನಡಿಸುವಂತೆ ಮತ್ತು ಪ್ರಶ್ನೆಗಳನ್ನು ಕೇಳುವಂತೆ ಅವನಿಗೆ ಅವಕಾಶ ಕೊಡಿರಿ. ಮತ್ತು ಒಂದು ಭಕ್ಷ್ಯವು ಚೆನ್ನಾಗಿ ತಯಾರಾಗದಿದ್ದರೆ, ಚಿಂತಿಸಬೇಡಿರಿ. ನಿಮ್ಮ ಮಗನು ಅದನ್ನು ಸ್ವತಃ ಮಾಡಿರುವಲ್ಲಿ, ಬಹುಶಃ ಅವನದನ್ನು ಹೇಗಾದರೂ ತಿಂದಾನು!
ಕುಟುಂಬದ ಜೊತೆಗೂಡಿಕೆ
ಅಡಿಗೆಮನೆಯಿಂದ ಬರುವಂತಹ ಅತ್ಯಂತ ಮಹಾ ಲಾಭಗಳಲ್ಲಿ, ಕುಟುಂಬದ ಐಕ್ಯ ಮತ್ತು ಮೌಲ್ಯಗಳು ಒಳಗೊಳ್ಳುತ್ತವೆಂಬುದು ನಿಸ್ಸಂದೇಹ. ಇಂದು ಕೆಲವು ಮನೆವಾರ್ತೆಗಳಲ್ಲಿ, ಕುಟುಂಬ ಸದಸ್ಯರು ತಮ್ಮ ಪ್ರತ್ಯೇಕವಾದ ಚಟುವಟಿಕೆಗಳನ್ನು, ಪರಸ್ಪರರೊಂದಿಗೆ ಹೆಚ್ಚಿನ ನಿಜ ಸಂಪರ್ಕವಿಲ್ಲದೆ ಮಾಡುತ್ತಾ, ಕಾರ್ಯಮಗ್ನರಿರುತ್ತಾರೆಂಬುದನ್ನು ನೀವು ಗಮನಿಸಿರಬಹುದು. ಅಂತಹ ಪರಿಸ್ಥಿತಿಗಳಡಿಯಲ್ಲಿ, ಮನೆಯು ಒಂದು ವಿಶ್ರಾಂತಿ ತಾಣ, ಭೋಜನ ಗೃಹಕ್ಕಿಂತ ಹೆಚ್ಚೇನೂ ಆಗಿರುವುದಿಲ್ಲ. ವ್ಯತಿರಿಕ್ತವಾಗಿ, ಜೊತೆಗೂಡಿ ಅಡಿಗೆಮಾಡುವ ಒಂದು ಕುಟುಂಬವು, ಜೊತೆಯಾಗಿ ಊಟಮಾಡಿ, ಜೊತೆಯಾಗಿ ಶುಚಿಗೊಳಿಸುವುದು ಹೆಚ್ಚು ಸಂಭವನೀಯ. ಈ ಚಟುವಟಿಕೆಗಳು ಅವರಿಗೆ, ಸಂವಾದಮಾಡಲು, ಪರಸ್ಪರ ಕ್ರಿಯೆಗೈಯಲು, ಮತ್ತು ಒಬ್ಬರು ಇನ್ನೊಬ್ಬರೊಂದಿಗೆ ಸಂಪರ್ಕವನ್ನಿಡಲು ಕ್ರಮವಾಗಿ ಅವಕಾಶಗಳನ್ನು ಒದಗಿಸುತ್ತವೆ. “ಅಡಿಗೆಮನೆಯ ಪಾತ್ರೆಗಳನ್ನು ತೊಳೆಯುವ ಸ್ಥಳದಲ್ಲಿ ನಿಂತಿರುವಾಗ ನಾನು ನನ್ನ ಹುಡುಗರೊಂದಿಗೆ ಕೆಲವು ಅತ್ಯುತ್ತಮವಾದ ಚರ್ಚೆಗಳನ್ನು ನಡಿಸಿದ್ದೇನೆ,” ಎಂದು ಒಬ್ಬ ತಾಯಿ ಜ್ಞಾಪಿಸಿಕೊಳ್ಳುತ್ತಾಳೆ. ಮತ್ತು ಒಬ್ಬ ಕ್ರೈಸ್ತ ತಂದೆಯಾದ ಹರ್ಮಾನ್ ಕೂಡಿಸುವುದು: “ಹಲವಾರು ವರ್ಷಗಳ ವರೆಗೆ ನಾವು ಬೇಕುಬೇಕೆಂದೇ ಪಾತ್ರೆಗಳನ್ನು ತೊಳೆಯುವ ಯಂತ್ರವನ್ನು ತರಲಿಲ್ಲ. ಹೀಗೆ ಪಾತ್ರೆಗಳನ್ನು ಕೈಯಿಂದಲೇ ತೊಳೆದು, ಒರಸಿಒಣಗಿಸಬೇಕಾಗುತ್ತಿತ್ತು. ನಮ್ಮ ಪುತ್ರರು ಸರದಿಗನುಸಾರ ಪಾತ್ರೆಗಳನ್ನು ಒರಸಿಒಣಗಿಸುವ ಕೆಲಸವನ್ನು ಮಾಡಲು ನೇಮಿಸಲ್ಪಟ್ಟರು. ಅನೌಪಚಾರಿಕವಾದ ಸಂಸರ್ಗಕ್ಕಾಗಿ ಇದಕ್ಕಿಂತ ಉತ್ತಮವಾದ ಸಮಯ ಬೇರೊಂದಿರಲಿಲ್ಲ.”
ಹೌದು, ನೀವು ನಿಮ್ಮ ಮಕ್ಕಳೊಂದಿಗೆ ಅಡಿಗೆಮನೆಯಲ್ಲಿ—ವಾರ ವಾರ, ವರ್ಷಾನುವರ್ಷ—ಕಳೆಯುವ ಸಮಯವು, ಯಾವುದರ ಮೇಲೆ ಆತ್ಮಿಕ ಮೌಲ್ಯಗಳು ಮತ್ತು ದೈವಿಕ ಗುಣಗಳು ವಿಕಸಿಸಬಲ್ಲವೊ ಅದಕ್ಕೆ ಒಂದು ಆಧಾರವನ್ನು ಒದಗಿಸುತ್ತದೆ. ಜೊತೆಗಿರುವಿಕೆಯ ಇಂತಹ ಆರಾಮವಾದ ಕ್ಷಣಗಳಲ್ಲಿ, ಹೆತ್ತವ ಮತ್ತು ಮಗುವಿನ ನಡುವಿನ ಬಿಚ್ಚು ಮನಸ್ಸಿನ ಸಂಭಾಷಣೆಗಳು ಸ್ವಾಭಾವಿಕವಾಗಿ ಏಳಬಲ್ಲವು. ಮತ್ತು ಆಗ ಒಬ್ಬ ಹೆತ್ತವನ ಮಾದರಿಯ ಪರಿಣಾಮವು, ಒಂದು ಮಗುವಿನ ಹೃದಯವನ್ನು ಶಾಂತವಾಗಿ ಪ್ರಭಾವಿಸಬಲ್ಲದು. ಅಂತಹ ತರಬೇತಿಯು ಒಂದು ಮಗುವಿಗೆ ಜೀವನಪರ್ಯಂತರ ಪ್ರಯೋಜನ ತರಬಲ್ಲದು, ಯಾಕಂದರೆ ಜ್ಞಾನೋಕ್ತಿ 22:6 ಹೇಳುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”
ಆದುದರಿಂದ ಒಬ್ಬ ಹೆತ್ತವರೋಪಾದಿ, ನೀವು ನಿಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಲಿಕ್ಕಾಗಿ ಮಾರ್ಗಗಳನ್ನು ಹುಡುಕುತ್ತಿರುವಲ್ಲಿ, ಒಂದು ಕೇಕನ್ನು ಅಥವಾ ಇಡೀ ಊಟವನ್ನು ತಯಾರಿಸಲು ನಿಮಗೆ ಸಹಾಯಮಾಡುವಂತೆ ಅವರನ್ನು ಏಕೆ ಆಮಂತ್ರಿಸಬಾರದು? ಅಡಿಗೆಮನೆಯಲ್ಲಿ ಅವರೊಂದಿಗೆ ಕೆಲಸಮಾಡುವುದು, ನಿಮ್ಮ ಕುಟುಂಬವನ್ನು ಉಣಿಸುವ ಹಾಗೂ ಪೋಷಿಸುವ, ಎರಡನ್ನೂ ಮಾಡುವ ಒಂದು ಮಾಧ್ಯಮವಾಗಿದೆಯೆಂಬುದನ್ನು ನೀವು ಕಂಡುಕೊಳ್ಳಬಹುದು.
[ಅಧ್ಯಯನ ಪ್ರಶ್ನೆಗಳು]
a ಈ ವಿಷಯದ ಕುರಿತಾದ ಒಂದು ಚರ್ಚೆಗಾಗಿ, ಮೇ 22, 1993ರ ಎಚ್ಚರ! ಸಂಚಿಕೆಯ 16-17ನೆಯ ಪುಟಗಳಲ್ಲಿರುವ “ಸೀಮಿತ ಪ್ರಮಾಣಗಳಲ್ಲಿ ಹಂಚಲ್ಪಡುವ ‘ಗುಣಮಟ್ಟದ ಸಮಯ’” (ಇಂಗ್ಲಿಷ್) ಎಂಬ ಲೇಖನವನ್ನು ನೋಡಿರಿ.
b ಸಂಕ್ಷಿಪ್ತತೆಗಾಗಿ, ಇದರ ನಂತರ ಮಗುವನ್ನು “ಅವನು” ಎಂದು ಸೂಚಿಸಲಾಗುವುದು. ಆದರೆ, ಈ ಮಾಹಿತಿಯು ಹುಡುಗಿಯರಿಗೂ ಸಮಾನವಾಗಿ ಅನ್ವಯಿಸುತ್ತದೆ.
[ಪುಟ 33 ರಲ್ಲಿರುವ ಚೌಕ]
ಪ್ರಥಮ ಪಾಠ—ಸುರಕ್ಷೆ
ಸುರಕ್ಷೆಯ ಪ್ರಜ್ಞೆಯುಳ್ಳವರಾಗಿರಿ
• ಒಂದು ಗಂಭೀರವಾದ, ಆದರೆ ಭಯಪಡಿಸದಂತಹ ವಿಧದಲ್ಲಿ, ಅಡಿಗೆಮನೆಯಲ್ಲಿ ಕೆಲಸಮಾಡುವುದರ ಅಪಾಯಗಳನ್ನು ವಿವರಿಸಿರಿ. ನಿಬಿಡವಾದ ರಸ್ತೆಯೊಂದರಲ್ಲಿ ವಾಹನಸಂಚಾರದ ಅಪಾಯಗಳ ಕುರಿತಾಗಿ ನೀವು ವಿವರಿಸುವಂತಹ ವಿಧದಲ್ಲೇ ಇದನ್ನೂ ವಿವರಿಸಿರಿ. ನೀವೇ ಒಂದು ಉತ್ತಮ ಮಾದರಿಯನ್ನಿಡಿರಿ.
• ಮಕ್ಕಳು ಅಡಿಗೆಮನೆಯಲ್ಲಿ ಕೆಲಸಮಾಡುತ್ತಿರುವಾಗ ವಯಸ್ಕರ ಮೇಲ್ವಿಚಾರಣೆಯಿರಲಿ. ಒಂದು ಮಗು ಯಾವುದೇ—ವಿಶೇಷವಾಗಿ ವಿದ್ಯುತ್ತಿನ—ಪಾತ್ರೆ ಅಥವಾ ಉಪಕರಣವನ್ನು ಸುರಕ್ಷಿತವಾಗಿ ಉಪಯೋಗಿಸಲು ಬಲ್ಲವನಾಗುವ ವರೆಗೆ, ಅವನದನ್ನು ಉಪಯೋಗಿಸುವಂತೆ ಬಿಡಬೇಡಿರಿ.
• ನಿಮ್ಮ ಅಡಿಗೆಮನೆಯನ್ನು ವ್ಯವಸ್ಥಿತವಾಗಿ ಇಡಿರಿ. ತಡವಿಲ್ಲದೆ ಚೆಲ್ಲಿ ಹೋಗಿರುವಂತಹದ್ದನ್ನು ಒರಸಿಬಿಡಿರಿ ಮತ್ತು ಬೇಡವಾದ ವಸ್ತುಗಳನ್ನು ತೆಗೆದುಹಾಕಿರಿ. ನೀವು ಅಡಿಗೆಮಾಡುತ್ತಿರುವಾಗ, ಮುದ್ದುಪ್ರಾಣಿಗಳು ಮತ್ತು ಇತರ ಅಪಕರ್ಷಣೆಗಳನ್ನು ಅಡಿಗೆಮನೆಯಿಂದ ಹೊರಗಿಡತಕ್ಕದ್ದು.
ಬೆರಳುಗಳನ್ನು ಸಂರಕ್ಷಿಸಿರಿ
• ಎಲೆಕ್ಟ್ರಿಕ್ ಮಿಕ್ಸರ್ಗಳು, ಮಿಶ್ರಣ ಯಂತ್ರಗಳು, ಮತ್ತು ಫುಡ್ ಪ್ರೊಸೆಸರ್ಗಳನ್ನು, ಒಬ್ಬ ವಯಸ್ಕನು ಉಸ್ತುವಾರಿ ವಹಿಸುತ್ತಿರುವಾಗ ಮಾತ್ರ ಉಪಯೋಗಿಸಬೇಕು. ನಿಮ್ಮ ಮಗು ಆ ಉಪಕರಣದ ಬೋಗುಣಿಯೊಳಗೆ ಒಂದು ಚಮಚವನ್ನು ಹಾಕುವ ಮುಂಚೆ, ಉಪಕರಣವನ್ನು ಆಫ್ ಮಾಡಿ, ಪ್ಲಗ್ಗನ್ನು ತೆಗೆಯಲಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ.
• ಚೂರಿಗಳನ್ನು ಹರಿತವಾಗಿರಿಸಿರಿ, ಯಾಕಂದರೆ ಒಂದು ಮೊಂಡು ಚೂರಿಗೆ ಹೆಚ್ಚು ಒತ್ತಡದ ಅಗತ್ಯವಿದೆ ಮತ್ತು ಇದರಿಂದಾಗಿ ಅದು ಜಾರುವುದು ಹೆಚ್ಚು ಸಂಭವನೀಯ.
• ನಿಮ್ಮ ಮಗು ಒಂದು ಚೂರಿಯನ್ನು ಉಪಯೋಗಿಸಲು ಕಲಿಯುತ್ತಿರುವಾಗ, ಅವನು ಈ ಹೆಜ್ಜೆಗಳನ್ನು ಅನುಸರಿಸುವಂತೆ ಮಾಡಿರಿ: (1) ಚೂರಿಯನ್ನು ಅದರ ಹಿಡಿಯಿಂದ ಎತ್ತುವುದು, (2) ಚೂರಿಯನ್ನು ಆಹಾರದ ಮೇಲೆ ಇಡುವುದು, (3) ಇನ್ನೊಂದು ಕೈಯನ್ನು ಚೂರಿಯ ಹಿಂಭಾಗದ ಮೇಲೆ ಇಡುವುದು, ಮತ್ತು (4) ಆಹಾರವನ್ನು ಕತ್ತರಿಸಲು ಒತ್ತಡವನ್ನು ಹೇರುವುದು.
• ಒಂದು ಕತ್ತರಿಸುವ ಹಲಗೆ (ಕಟಿಂಗ್ ಬೋರ್ಡ್)ಯನ್ನು ಉಪಯೋಗಿಸಿರಿ. ನಿಮ್ಮ ಮಗು ತರಕಾರಿಗಳನ್ನು ಕತ್ತರಿಸಲು ಪ್ರಯತ್ನಿಸುತ್ತಿರುವಾಗ, ಅವು ಅತ್ತಿತ್ತ ಉರುಳಿಹೋಗುವುದನ್ನು ತಡೆಯಲು, ಮೊದಲು ಅವುಗಳನ್ನು ಅರ್ಧಕ್ಕೆ ಕತ್ತರಿಸಿ, ಕತ್ತರಿಸುವ ಹಲಗೆಯ ಮೇಲೆ ಚಪ್ಪಟೆ ಭಾಗವನ್ನು ಕೆಳಮುಖವಾಗಿಡಿರಿ.
ಸುಟ್ಟಗಾಯಗಳ ವಿರುದ್ಧ ಕಾಪಾಡಿಕೊಳ್ಳಿರಿ
• ಉಪಯೋಗಿಸದಿರುವಾಗ, ಯಾವಾಗಲೂ ಸ್ಟೋವ್ ಬರ್ನರ್ ಮತ್ತು ಆವನಿನ (ಒಲೆ) ಡೈಯಲ್ಗಳನ್ನು ಆಫ್ ಮಾಡಿರಿ. ಟವೆಲ್ಗಳು, ಪಾಕಪುಸ್ತಕಗಳು, ಮತ್ತು ಪಾತ್ರೆಯ ಹಿಡಿಗಳನ್ನು ಬರ್ನರುಗಳಿಂದ ದೂರವಿಡಿರಿ.
• ಬಾಣಲೆಗಳ ಹಿಡಿಗಳು ಸ್ಟೋವಿನ ಮಧ್ಯಕ್ಕೆ ಬರುವಂತೆ ಇಡಿರಿ. ಹಾಗೆ ಇಟ್ಟಲ್ಲಿ, ಅವುಗಳನ್ನು ಸುಲಭವಾಗಿ ಡಿಕ್ಕಿಹೊಡೆದು, ಚೆಲ್ಲುವುದನ್ನು ತಪ್ಪಿಸಬಹುದು.
• ನಿಮ್ಮ ಮಗು ಸ್ಟೋವ್ ಉಪಯೋಗಿಸಿ ಕೆಲಸಮಾಡುವಂತೆ ನೀವು ಅನುಮತಿಸುವಲ್ಲಿ, ಒಂದು ಗಟ್ಟಿಮುಟ್ಟಾದ ಮತ್ತು ಸ್ಥಿರವಾದ ಮೇಲ್ಮೈಯ ಮೇಲೆ ಅವನು ನಿಂತಿದ್ದಾನೆಂಬುದನ್ನು ಖಚಿತಪಡಿಸಿಕೊಳ್ಳಿರಿ.
• ಬಿಸಿಯಾಗಿರುವ ಒಂದು ಪಾತ್ರೆಯನ್ನು ನೀವು ಎಲ್ಲಿ ಇಡುವಿರಿ ಎಂಬುದು ನಿಮಗೆ ಈಗಾಗಲೇ ತಿಳಿದಿರುವ ತನಕ ಅದನ್ನು ಎತ್ತಬೇಡಿರಿ. ನೀವು ಒಂದು ಬಿಸಿ ಪಾತ್ರೆಯನ್ನು ಒಯ್ಯುತ್ತಿರುವಾಗ, ಅಡಿಗೆಮನೆಯಲ್ಲಿರುವ ಇತರರಿಗೆ ಅದು ತಿಳಿದಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ, ವಿಶೇಷವಾಗಿ ನೀವು ಅವರ ಹಿಂದೆ ನಡೆಯಲಿರುವಿರಾದರೆ.