ಹೊಗೆಸೊಪ್ಪಿನ ಸಂರಕ್ಷಕರು ತಮ್ಮ ಜಂಬದ ಬಲೂನುಗಳನ್ನು ಉಡಾಯಿಸುತ್ತಾರೆ
1940ಗಳಲ್ಲಿ ಲಂಡನ್, ಮುತ್ತಿಗೆಯ ಕೆಳಗಿದ್ದಂತಹ ಒಂದು ನಗರವಾಗಿತ್ತು. ಜರ್ಮನಿಯ ಕಾದಾಟದ ವಿಮಾನಗಳು ಮತ್ತು ಸ್ಫೋಟಕ ಬಾಂಬ್ಗಳು, ಭಯ ಮತ್ತು ವಿನಾಶವನ್ನು ಸುರಿಸಿದವು. ಆದರೆ ಪರಿಸ್ಥಿತಿಯು ಅಷ್ಟು ವಿಪತ್ಕಾರಕವಾಗಿರದೆ ಇದ್ದಿದ್ದರೆ, ಅದರ ನಿವಾಸಿಗಳು ವಿಲಕ್ಷಣವಾದ ದೃಶ್ಯವೊಂದರಿಂದ ಉಲ್ಲಾಸಪಡಬಹುದಾಗಿತ್ತು.
ಉದ್ದವಾದ ತಂತಿಗಳಿಂದ ಕಟ್ಟಿಹಾಕಲ್ಪಟ್ಟ, ಸಾವಿರಗಟ್ಟಲೆ ದೊಡ್ಡ ಬಲೂನುಗಳು ಆಕಾಶದಲ್ಲಿ ತೇಲಿದವು. ಕೆಳಮಟ್ಟದ ವಿಮಾನದಾಳಿಗಳನ್ನು ನಿರಾಶೆಗೊಳಿಸುವುದು ಮತ್ತು ವಾತಾವರಣಮಧ್ಯದಲ್ಲಿರುವ ಕೆಲವು ಸ್ಫೋಟಕ ಬಾಂಬ್ಗಳನ್ನು ಆಶಾಜನಕವಾಗಿ ಅಡ್ಡಗಟ್ಟುವುದು ಅವುಗಳ ಉದ್ದೇಶವಾಗಿತ್ತು. ಅದು ಕಲ್ಪನಾ ಚತುರುವಾಗಿತ್ತಾದರೂ, ಬಲೂನು ತಡೆಸಾಲು ಅತ್ಯಂತ ಸ್ವಲ್ಪ ಯಶಸ್ವಿಯನ್ನು ಪಡೆಯಿತು.
ತದ್ರೀತಿಯಲ್ಲಿ ಸಿಗರೇಟ್ ಕಂಪೆನಿಗಳು ತಾವು ಮುತ್ತಿಗೆಯ ಕೆಳಗಿದ್ದೇವೆಂದು ಕಂಡುಕೊಂಡಿವೆ. ಈ ಹಿಂದೆ ರಾಜಕೀಯ ಮತ್ತು ಆರ್ಥಿಕ ಶಕ್ತಿಯ ಅಭೇದ್ಯ ಬುರುಜುಗಳಾಗಿದ್ದ ವ್ಯಾಪಕವಾಗಿ ಹರಡಿರುವ ತಂಬಾಕು ಸಾಮ್ರಾಜ್ಯಗಳು, ಈಗ ಅನೇಕ ಪಾರ್ಶ್ವಗಳಿಂದ ಆಕ್ರಮಿಸಲ್ಪಡುತ್ತಿವೆ.
ವೈದ್ಯಕೀಯ ಸಮುದಾಯವು ಬೃಹತ್ ಪ್ರಮಾಣಗಳಲ್ಲಿ ಆಪಾದಿಸುವ ಅಧ್ಯಯನಗಳನ್ನು ಉತ್ಪಾದಿಸುತ್ತದೆ. ಸುಧಾರಣಾ ಚಳುವಳಿ ನಡೆಸುವ ಆರೋಗ್ಯಾಧಿಕಾರಿಗಳು ತಮಗಾಗಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಪರಿಸ್ಥಿತಿಯನ್ನು ಉಪಯೋಗಿಸುತ್ತಾರೆ. ತಮ್ಮ ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆಯೆಂದು ಆಘಾತಗೊಂಡ ಹೆತ್ತವರು ಆರೋಪಿಸುತ್ತಾರೆ. ಆಫೀಸ್ ಕಟ್ಟಡಗಳು, ಫಲಾಹಾರ ಮಂದಿರಗಳು, ಮಿಲಿಟರಿ ಪ್ರತಿಷ್ಠಾಪನೆಗಳು, ಮತ್ತು ವಿಮಾನಗಳಲ್ಲಿ ಧೂಮಪಾನ ಮಾಡುವುದನ್ನು ದೃಢಸಂಕಲ್ಪದ ಶಾಸನಕಾರರು ನಿಷೇಧಿಸಿದ್ದಾರೆ. ಅನೇಕ ದೇಶಗಳಲ್ಲಿ, ಟೆಲಿವಿಷನ್ ಮತ್ತು ರೇಡಿಯೊಗಳಿಂದ ಹೊಗೆಸೊಪ್ಪಿನ ಜಾಹೀರಾತುಗಳು ಪ್ರತಿಷೇಧಿಸಲ್ಪಟ್ಟಿವೆ. ಅಮೆರಿಕದಲ್ಲಿ, ಇಡೀ ಪ್ರಾಂತ್ಯಗಳು ಆರೋಗ್ಯಾರೈಕೆಯ ವೆಚ್ಚಗಳಿಗಾಗಿ ಲಕ್ಷಾಂತರ ಡಾಲರ್ಗಳನ್ನು ಕೇಳಿಕೊಳ್ಳುತ್ತಿವೆ. ಈ ಹೋರಾಟದಲ್ಲಿ ವಕೀಲರು ಸಹ ಜೊತೆಗೂಡುತ್ತಿದ್ದಾರೆ.
ಆದುದರಿಂದ ತಮ್ಮ ಆಕ್ರಮಣಗಾರರನ್ನು ವಿಕರ್ಷಿಸಿಕೊಳ್ಳುವ ಪ್ರಯತ್ನದಿಂದ, ಹೊಗೆಸೊಪ್ಪಿನ ಕಂಪೆನಿಗಳು ತಮ್ಮ ಸ್ವಂತ ಸಂರಕ್ಷಕ ಬಲೂನುಗಳನ್ನು ಉಡಾಯಿಸಿವೆ. ಆದರೂ, ಅವು ಬಹಳ ಜಂಬದ ಮಾತುಗಳಿಂದ ತುಂಬಿಸಲ್ಪಟ್ಟಿರುವಂತೆ ಗೋಚರಿಸುತ್ತವೆ.
ಈ ಗತ ವರ್ಷದಲ್ಲಿ, ಕೋಪಗೊಂಡ ಶಾಸನಕಾರರು ಹಾಗೂ ಸರಕಾರದ ಆರೋಗ್ಯಾಧಿಕಾರಿಗಳು, ಹೊಗೆಸೊಪ್ಪಿನ ಉದ್ಯಮದ ವಿರುದ್ಧವಾಗಿ ಒಂದು ಹುರುಪಿನ ಆಕ್ರಮಣವನ್ನು ವ್ಯವಸ್ಥಾಪಿಸಿದಾಗ, ಅಮೆರಿಕದ ಸಾರ್ವಜನಿಕರು ಅದನ್ನು ಸ್ಪಷ್ಟವಾಗಿಗಿ ಗಮನಿಸಲು ಶಕ್ತರಾಗಿದ್ದರು. 1994ರ ಎಪ್ರಿಲ್ನಲ್ಲಿ, ಅಮೆರಿಕದ ಕಾಂಗ್ರೆಸ್ಸಿನ ಮಂಡಲಿಯೊಂದರ ಮುಂದಿನ ವಿಚಾರಣೆಗಳಲ್ಲಿ, ಅಮೆರಿಕದ ಏಳು ಬೃಹತ್ ಕಂಪೆನಿಗಳ ಹೊಗೆಸೊಪ್ಪಿನ ಕಾರ್ಯನಿರ್ವಾಹಕರು ಆಪಾದನಾ ಸಂಖ್ಯಾ ಸಂಗ್ರಹಣದಿಂದ ಎದುರಿಸಲ್ಪಟ್ಟರು: ಪ್ರತಿ ವರ್ಷ 4,00,000ಕ್ಕಿಂತಲೂ ಹೆಚ್ಚು ಅಮೆರಿಕನರು ಸತ್ತಿದ್ದಾರೆ ಮತ್ತು ಇನ್ನೂ ಹೆಚ್ಚು ಲಕ್ಷಾಂತರ ಮಂದಿ ಅಸ್ವಸ್ಥರಾಗುತ್ತಿದ್ದಾರೆ, ಸಾಯುತ್ತಿದ್ದಾರೆ, ಹಾಗೂ ವ್ಯಸನಿಗಳಾಗುತ್ತಿದ್ದಾರೆ.
ತಮ್ಮ ರಕ್ಷಣಾರ್ಥವಾಗಿ ಅವರಿಗೆ ಏನು ಹೇಳಲಿಕ್ಕಿತ್ತು? ತಮ್ಮನ್ನು ರಕ್ಷಿಸಿಕೊಳ್ಳಲಿಕ್ಕಾಗಿ, ಈ ಹೋರಾಟಕ್ಕೊಳಗಾಗಿದ್ದ ಕಾರ್ಯನಿರ್ವಾಹಕರು ಆಸಕ್ತಿಭರಿತವಾದ ಹೇಳಿಕೆಗಳನ್ನು ಕೊಟ್ಟರು: “ಧೂಮಪಾನವು . . . ರೋಗಗಳ ಬೆಳವಣಿಗೆಯಲ್ಲಿ ಒಂದು ಕಾರಣರೂಪದ ಪಾತ್ರವನ್ನು ಹೊಂದಿದೆಯೆಂದು ಇನ್ನೂ ರುಜುಮಾಡಲ್ಪಟ್ಟಿಲ್ಲ” ಎಂದು ಹೊಗೆಸೊಪ್ಪಿನ ಸಂಸ್ಥೆಯ ಒಬ್ಬ ಪ್ರತಿನಿಧಿಯು ಉದ್ಘೋಷಿಸಿದನು. ಇದಲ್ಲದೆ, ಧೂಮಪಾನದ ಹವ್ಯಾಸವು ಸಿಹಿತಿಂಡಿಗಳನ್ನು ತಿನ್ನುವುದು ಅಥವಾ ಕಾಫಿಯನ್ನು ಕುಡಿಯುವುದರಂತಹ ಇತರ ಯಾವುದೇ ಸಂತೋಷಾನುಭೋಗದ ಚಟುವಟಿಕೆಯಷ್ಟೇ ಹಾನಿರಹಿತವಾದಂತಹದ್ದಾಗಿ ವರ್ಣಿಸಲ್ಪಟ್ಟಿತು. “ನಿಕೊಟೀನ್ನ ಇರುವಿಕೆಯು ಸಿಗರೇಟ್ಗಳನ್ನು ಒಂದು ಅಮಲೌಷಧವನ್ನಾಗಿ ಅಥವಾ ಧೂಮಪಾನವನ್ನು ಒಂದು ವ್ಯಸನವನ್ನಾಗಿ ಮಾಡುವುದಿಲ್ಲ” ಎಂದು, ಹೊಗೆಸೊಪ್ಪಿನ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಹೇಳಿದನು. “ಯಾವುದೇ ಮಟ್ಟದಲ್ಲಿ ಸಿಗರೇಟ್ಗಳಲ್ಲಿ ನಿಕೊಟೀನ್ ಇರುವುದು ವ್ಯಸನಕಾರಿಯಾಗಿದೆ ಎಂಬ ಪೂರ್ವೋಕ್ತಿಯು ತಪ್ಪಾಗಿದೆ” ಎಂದು ಹೊಗೆಸೊಪ್ಪಿನ ಕಂಪೆನಿಯ ವಿಜ್ಞಾನಿಯೊಬ್ಬನು ಪ್ರತಿಪಾದಿಸಿದನು.
ಸಿಗರೇಟ್ಗಳು ವ್ಯಸನಕಾರಿಯಾಗಿರದಿದ್ದಲ್ಲಿ, ಹೊಗೆಸೊಪ್ಪಿನ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ನಿಕೊಟೀನ್ನ ಮಟ್ಟಗಳನ್ನು ಔಚಿತ್ಯ ಮೀರಿ ಉಪಯೋಗಿಸಲು ಏಕೆ ಪ್ರಯತ್ನಿಸಿವೆ? ಎಂದು ಕಮಿಟಿಯು ಪ್ರತಿಯಾಗಿ ಕೇಳಿತು. “ರುಚಿಯನ್ನು ವರ್ಧಿಸಲಿಕ್ಕಾಗಿ” ಎಂದು ಹೊಗೆಸೊಪ್ಪಿನ ಕಂಪೆನಿಯ ಇನ್ನೊಬ್ಬ ಕಾರ್ಯನಿರ್ವಾಹಕನು ವಿವರಿಸಿದನು. ರುಚಿರಹಿತ ಸಿಗರೇಟ್ಗಿಂತ ಹೀನವಾದದ್ದು ಏನಾದರೂ ಇಲ್ಲವೊ? ನಿಕೊಟೀನ್ನ ವ್ಯಸನಕಾರಕತೆಯನ್ನು ಸೂಚಿಸುವ ಅವನ ಸ್ವಂತ ಕಂಪೆನಿಯ ಫೈಲ್ಗಳಿಂದ ಸಂಶೋಧನೆಯ ರಾಶಿಯು ತೋರಿಸಲ್ಪಟ್ಟಾಗ, ಅವನು ತನ್ನ ಕಥೆಗೆ ಅಂಟಿಕೊಂಡನು.
ಶ್ಮಶಾನಗಳು ಹೊಗೆಸೊಪ್ಪಿನ ಬಲಿಪಶುಗಳಿಂದ ಎಷ್ಟೇ ತುಂಬುವುದಾದರೂ, ಅವನು ಮತ್ತು ಇತರರು ಆ ಅಭಿಪ್ರಾಯಕ್ಕೆ ಅಂಟಿಕೊಳ್ಳುವರೆಂಬುದು ಸ್ಪಷ್ಟ. 1993ರ ಆರಂಭದಲ್ಲಿ, ಅಮೆರಿಕದ ವೈದ್ಯಕೀಯ ಸಂಘದ ನ್ಯಾಸಾಧಿಕಾರಿಗಳ ಮಂಡಲಿಯ ಅಧ್ಯಕ್ಷರಾದ ಡಾ. ಲಾನಿ ಬ್ರಿಸ್ಟೋ, ಆಸಕ್ತಿಭರಿತವಾದ ಒಂದು ಪಂಥಾಹ್ವಾನವನ್ನು ಪ್ರಕಟಿಸಿದರು. ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ವರದಿಸುವುದು: “ಧೂಮಪಾನದ ಪರಿಣಾಮಗಳಲ್ಲಿ ಒಂದಾದ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಶ್ವಾಸಕೋಶದ ಇತರ ವಿಕಲತೆಗಳ ರೋಗಿಗಳನ್ನು ನೋಡಲಿಕ್ಕಾಗಿ, ಆಸ್ಪತ್ರೆಯ ವಾರ್ಡ್ಗಳುದ್ದಕ್ಕೂ ತನ್ನೊಂದಿಗೆ ನಡೆಯುವಂತೆ, ಅಮೆರಿಕದ ಹೊಗೆಸೊಪ್ಪಿನ ಪ್ರಮುಖ ಕಂಪೆನಿಗಳ ಕಾರ್ಯನಿರ್ವಾಹಕರನ್ನು ಅವರು ಆಮಂತ್ರಿಸಿದರು. ಕಾರ್ಯನಿರ್ವಾಹಕರಲ್ಲಿ ಯಾರೊಬ್ಬರೂ ಈ ಆಮಂತ್ರಣವನ್ನು ಅಂಗೀಕರಿಸಲಿಲ್ಲ.”
ನಿರುದ್ಯೋಗವು ಪ್ರವರ್ಧಮಾನವಾಗುತ್ತಿರುವ ಜಗತ್ತಿನ ಆರ್ಥಿಕ ಆಡಳಿತದಲ್ಲಿ ಅದು ಒಳ್ಳೆಯ ಉದ್ಯೋಗಗಳನ್ನು ಒದಗಿಸುತ್ತದೆಂದು ಹೊಗೆಸೊಪ್ಪಿನ ಉದ್ಯಮವು ಕೊಚ್ಚಿಕೊಳ್ಳುತ್ತದೆ. ಉದಾಹರಣೆಗಾಗಿ, ಆರ್ಜೆಂಟೀನದಲ್ಲಿ, ಪರೋಕ್ಷವಾಗಿ ಸಂಬಂಧಿತವಾದ ಹೆಚ್ಚಿನ 40 ಲಕ್ಷ ಉದ್ಯೋಗಗಳೊಂದಿಗೆ, ಈ ಉದ್ಯಮದಿಂದ 10 ಲಕ್ಷ ಉದ್ಯೋಗಗಳು ನಿರ್ಮಿಸಲ್ಪಡುತ್ತವೆ. ಅಧಿಕ ಪ್ರಮಾಣದ ತೆರಿಗೆ ಆದಾಯಗಳು, ಹೊಗೆಸೊಪ್ಪಿನ ಕಂಪೆನಿಗಳು ಅನೇಕ ಸರಕಾರಗಳ ಮೆಚ್ಚುಗೆಗಳನ್ನು ಗಳಿಸುವಂತೆ ಮಾಡಿವೆ.
ಹೊಗೆಸೊಪ್ಪಿನ ವ್ಯಾಪಾರಸಂಸ್ಥೆಯೊಂದು, ಪೌರೋಚಿತ ಭಾವನೆಯ ಪ್ರದರ್ಶಿಸುವಿಕೆಯಂತೆ ತೋರುವ ಉದಾರವಾದ ದಾನಗಳಿಂದ ಅಲ್ಪಸಂಖ್ಯಾತ ಗುಂಪುಗಳಿಗೆ ನಿರ್ದಿಷ್ಟವಾಗಿ ದಯೆ ತೋರಿಸಿದೆ. ಆದರೂ, ಈ “ಮತದಾರ ಮಂಡಲಿ ಅಭಿವೃದ್ಧಿ ಆಯವ್ಯಯ”ದ ನಿಜವಾದ ಹೇತುವು, ಭಾವಿ ಮತದಾರರ ನಡುವೆ ಅಭಿಮಾನವನ್ನು ಸೃಷ್ಟಿಸುವುದಾಗಿತ್ತೆಂದು ಕಂಪೆನಿಯ ಆಂತರಿಕ ದಸ್ತಾವೇಜುಗಳು ಬಯಲುಮಾಡಿದವು.
ಹೊಗೆಸೊಪ್ಪಿನ ಇದೇ ಕಂಪೆನಿಯು, ಮ್ಯುಸಿಯಮ್ಗಳು, ಶಾಲೆಗಳು, ನಾಟ್ಯ ಶಾಲೆಗಳು, ಮತ್ತು ಸಂಗೀತ ಸಂಸ್ಥೆಗಳಿಗೆ ಧಾರಾಳವಾದ ಕಾಣಿಕೆಗಳೊಂದಿಗೆ, ಕಲೆಗಳ ನಡುವೆಯೂ ಗೆಳೆತನವನ್ನು ಮಾಡಿಕೊಂಡಿದೆ. ಕಲಾ ಸಂಸ್ಥೆಗಳ ಅಧಿಕಾರಿಗಳು ಅತ್ಯಗತ್ಯವಾದ ಹೊಗೆಸೊಪ್ಪಿನ ಹಣವನ್ನು ಅಂಗೀಕರಿಸಲು ತಮ್ಮನ್ನು ಉತ್ತೇಜನಪಡಿಸಿಕೊಳ್ಳುತ್ತಾರೆ. ಇತ್ತೀಚೆಗೆ, ಧೂಮಪಾನವಿರೋಧಿ ಶಾಸನದ ವಿರುದ್ಧವಾಗಿ ಶಾಸನ ಸಭೆಯ ಸದಸ್ಯರ ಅಭಿಮತಗಳನ್ನು ಪಡೆಯಲಿಕ್ಕಾಗಿರುವ ತಮ್ಮ ಪ್ರಯತ್ನಗಳಿಗೆ ಬೆಂಬಲವನ್ನು ಕೊಡುವಂತೆ, ಹೊಗೆಸೊಪ್ಪಿನ ಇದೇ ಸಂಸ್ಥೆಯು ಅವರಿಗೆ ಕರೆಕೊಟ್ಟಾಗ, ನ್ಯೂ ಯಾರ್ಕಿನ ಕಲಾ ಸಂಸ್ಥೆಯ ಸದಸ್ಯರು ತೊಡಕಾದ ಸಂದಿಗ್ಧತೆಯನ್ನು ಎದುರಿಸಿದರು.
ಮತ್ತು, ನಿಸ್ಸಂದೇಹವಾಗಿ, ಹೊಗೆಸೊಪ್ಪಿನ ಹಿತಾರ್ಥಗಳಿಗೆ ಅಹಿತವಾದ ಯಾವುದೇ ಯೋಜನೆಗೆ ವಿರುದ್ಧವಾಗಿ ತಮ್ಮ ಪ್ರಭಾವವನ್ನು ಉಪಯೋಗಿಸಬಲ್ಲ, ರಾಜಕಾರಣಿಗಳಿಗೆ ಹಣವನ್ನು ಹಂಚುವುದರ ಕುರಿತು ಧನಿಕ ಹೊಗೆಸೊಪ್ಪಿನ ಬೃಹತ್ ಕಂಪೆನಿಗಳು ಹೆದರುವುದಿಲ್ಲ. ಉನ್ನತ ಸ್ಥಾನಗಳಲ್ಲಿರುವ ಸಾರಕಾರೀ ಅಧಿಕಾರಿಗಳು ಹೊಗೆಸೊಪ್ಪಿನ ಕಂಪೆನಿಗಳ ಉದ್ದೇಶಗಳ ಪಕ್ಷ ಸಮರ್ಥನೆ ಮಾಡಿದ್ದಾರೆ. ಕೆಲವರಿಗೆ ಉದ್ಯಮದೊಂದಿಗೆ ಹಣಕಾಸಿನ ಬಂಧಗಳಿರುತ್ತವೆ ಅಥವಾ ಅವರು ತಂಬಾಕು ಹಣದಿಂದ ಉದಾರವಾದ ಚುನಾವಣಾ ಬೆಂಬಲವನ್ನು ಪ್ರತಿಯಾಗಿ ತೆರುವ ಒತ್ತಡಕ್ಕೊಳಗಾಗುತ್ತಾರೆ.
ವರದಿಗನುಸಾರ, ಸಿಗರೇಟ್ ಕಂಪೆನಿಗಳಿಂದ ಅಮೆರಿಕದ ಕಾಂಗ್ರೆಸ್ಸಿಗನೊಬ್ಬನು 21,000ಕ್ಕಿಂತಲೂ ಹೆಚ್ಚು ಡಾಲರ್ಗಳನ್ನು ದಾನಗಳಾಗಿ ಪಡೆದುಕೊಂಡನು ಮತ್ತು ತರುವಾಯ ಅನೇಕ ಹೊಗೆಸೊಪ್ಪುವಿರೋಧಿ ವಿವಾದಾಂಶಗಳ ವಿರುದ್ಧವಾಗಿ ತನ್ನ ಮತವನ್ನು ನೀಡಿದನು.
ಒಂದೊಮ್ಮೆ ಪ್ರಾಂತ್ಯದ ಶಾಸನ ಸಭೆಯ ಸದಸ್ಯನೂ ಭಾರಿ ಧೂಮಪಾನಿಯೂ ಆಗಿದ್ದ ಮಾಜಿ ಬಹುವೇತನಿ ತಂಬಾಕು ಸಮರ್ಥಕನು, ಇತ್ತೀಚೆಗೆ ತನಗೆ ಗಂಟಲು, ಶ್ವಾಸಕೋಶ, ಮತ್ತು ಯಕೃತ್ತಿನ ಕ್ಯಾನ್ಸರ್ ಇದೆಯೆಂದು ಕಂಡುಕೊಂಡನು. ಈಗ ಅವನಿಗೆ ತೀವ್ರವಾದ ವಿಷಾದವಿದೆ ಮತ್ತು “ನೀನೇ ಕಾರಣನಾದ ರೋಗದಿಂದ ಹಾಸಿಗೆ ಹಿಡಿದಿರುವುದು” ಒಬ್ಬ ವ್ಯಕ್ತಿಯನ್ನು ತಾನು ಮೂರ್ಖನೆಂದೆಣಿಸುವಂತೆ ಮಾಡುತ್ತದೆ ಎಂದು ಪ್ರಲಾಪಿಸುತ್ತಾನೆ.
ಜನರನ್ನು ಪ್ರಭಾವಿಸಲಿಕ್ಕಾಗಿ ಜಾಹೀರಾತುಗಳಿಗಾಗಿ ಧಾರಾಳವಾಗಿ ಹಣವನ್ನು ಖರ್ಚು ಮಾಡುವ ಮೂಲಕ, ಹೊಗೆಸೊಪ್ಪಿನ ಬೃಹತ್ ಕಂಪೆನಿಗಳು ವಿರೋಧದ ಮೇಲೆ ಹುರುಪಿನಿಂದ ಆಕ್ರಮಣ ಮಾಡುತ್ತಿವೆ. “ಇಂದು ಸಿಗರೇಟ್ಗಳನ್ನು ನಿಷೇಧಿಸಲಾಗುತ್ತಿದೆ, ನಾಳೆ ಏನನ್ನು ನಿಷೇಧಿಸಲಾಗುವುದು?” ಎಂದು ಗಂಭೀರವಾಗಿ ಎಚ್ಚರಿಕೆ ನೀಡುವ ಮೂಲಕ ಒಂದು ಜಾಹೀರಾತು ಸ್ವಾತಂತ್ರ್ಯದ ಧ್ವಜವನ್ನು ಬೀಸುತ್ತದೆ. ಊಹಿತ ಉನ್ಮತ್ತಾಭಿಮಾನಿ ನಿಷೇಧವಾದಿಗಳ ಮುಂದಿನ ಬಲಿಪಶುಗಳು, ಕ್ಯಾಫೀನ್, ಮದ್ಯಸಾರ, ಮತ್ತು ಹ್ಯಾಂಬರ್ಗರ್ಗಳಾಗಿರುವವೆಂದು ಆ ಜಾಹೀರಾತು ಸೂಚಿಸುತ್ತದೆ.
ಜಡ ಧೂಮಪಾನವನ್ನು ಕ್ಯಾನ್ಸರ್ಜನಕವೆಂದು ವರ್ಗೀಕರಿಸಿದ, ವ್ಯಾಪಕವಾಗಿ ಉದ್ಧರಿಸಲ್ಪಟ್ಟ ಅಮೆರಿಕದ ಪರಿಸರೀಯ ಸಂರಕ್ಷಣಾ ಏಜೆನ್ಸಿಯ ಒಂದು ಅಧ್ಯಯನವನ್ನು ಅಪಕೀರ್ತಿಸಲು ವಾರ್ತಾಪತ್ರಿಕೆಗಳ ಜಾಹೀರಾತುಗಳು ಪ್ರಯತ್ನಿಸಿವೆ. ಹೊಗೆಸೊಪ್ಪಿನ ಉದ್ಯಮವು, ಶಾಸನ ಸಮ್ಮತವಾದ ಕದನವನ್ನು ನಡೆಸಲಿಕ್ಕಾಗಿ ಯೋಜನೆಗಳನ್ನು ಪ್ರಕಟಿಸಿತು. ವ್ಯಸನವನ್ನು ಉತ್ತೇಜಿಸಲಿಕ್ಕಾಗಿ ನಿಕೊಟೀನ್ನ ಮಟ್ಟಗಳೊಂದಿಗೆ ಚೆಲ್ಲಾಟವಾಡುತ್ತಿದೆಯೆಂದು, ಟೆಲಿವಿಷನ್ ಕಾರ್ಯಕ್ರಮವೊಂದು ಒಂದು ಕಂಪೆನಿಯನ್ನು ದೂಷಿಸಿತು. ಈ ಪ್ರದರ್ಶನವನ್ನು ಪ್ರಸಾರ ಮಾಡುತ್ತಿದ್ದ ನೆಟ್ವರ್ಕ್, 1,000 ಕೋಟಿ ಡಾಲರ್ ಮೊಕದ್ದಮೆಗೆ ಒಡನೆಯೇ ಒಳಗಾಯಿತು.
ಹೊಗೆಸೊಪ್ಪಿನ ಕಂಪೆನಿಗಳು ಅಧಿಕ ಬಲದಿಂದ ಕದನ ನಡೆಸಿವೆ, ಆದರೆ ಗಾಳಿಯು ದೂಷಣೆಗಳಿಂದ ಇನ್ನೂ ಹೆಚ್ಚು ದಟ್ಟವಾಗಿ ಪರಿಣಮಿಸುತ್ತಿದೆ. ಕಳೆದ ನಾಲ್ಕು ದಶಕಗಳ ಸಮಯದಲ್ಲಿ ಸುಮಾರು 50,000 ಅಧ್ಯಯನಗಳು ನಡೆಸಲ್ಪಟ್ಟಿದ್ದು, ಹೊಗೆಸೊಪ್ಪಿನ ಉಪಯೋಗದ ಅಪಾಯ ಸಂಭವಗಳ ಮೇಲಿನ ಪುರಾವೆಯು ನಿತ್ಯವೂ ವರ್ಧಿಸುತ್ತಿರುವ ಪರ್ವತವಾಗಿ ಪರಿಣಮಿಸಿದೆ.
ಸಿಗರೇಟ್ ಕಂಪೆನಿಗಳು ಅವುಗಳೆಡೆಗೆ ಹಾಕಲ್ಪಟ್ಟಂತಹ ಆರೋಪಗಳಿಂದ ಹೇಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿವೆ? ಊಹಾತ್ಮಕವಾದ ಸಂಗತಿಯೊಂದನ್ನು ಅವು ಹಟಮಾರಿತನದಿಂದ ಗಟ್ಟಿಯಾಗಿ ಹಿಡಿದುಕೊಂಡಿವೆ: ಧೂಮಪಾನಿಗಳು ಧೂಮಪಾನವನ್ನು ನಿಲ್ಲಿಸಿಬಿಡುತ್ತಾರೆ. ಹೀಗೆ, ನಿಕೊಟೀನ್ ವ್ಯಸನಕಾರಿಯಾಗಿಲವ್ಲೆಂದು ಅವರು ಹೇಳುತ್ತಾರೆ. ಆದರೂ, ಸಂಖ್ಯಾ ಸಂಗ್ರಹಣಗಳು ಬೇರೆ ರೀತಿಯಾಗಿ ತೋರಿಸುತ್ತವೆ. ನಾಲ್ಕು ಕೋಟಿ ಅಮೆರಿಕನರು ಧೂಮಪಾನವನ್ನು ನಿಲ್ಲಿಸಿದ್ದಾರೆ, ನಿಜ. ಆದರೆ ಇನ್ನೂ ಐದು ಕೋಟಿ ಧೂಮಪಾನ ಮಾಡುತ್ತಾರೆ, ಮತ್ತು ಇವರಲ್ಲಿ 70 ಪ್ರತಿಶತ ತಾವು ನಿಲ್ಲಿಸಿಬಿಡಲು ಬಯಸುತ್ತೇವೆಂದು ಹೇಳುತ್ತಾರೆ. ಪ್ರತಿ ವರ್ಷ ಧೂಮಪಾನವನ್ನು ನಿಲ್ಲಿಸಿಬಿಡಲು ಪ್ರಯತ್ನಿಸುವ 1.7 ಕೋಟಿ ಜನರಲ್ಲಿ, 90 ಪ್ರತಿಶತ ಒಂದು ವರ್ಷದೊಳಗೆ ಸೋತುಹೋಗುತ್ತಾರೆ.
ಶ್ವಾಸಕೋಶದ ಕ್ಯಾನ್ಸರ್ನ ಶಸ್ತ್ರಚಿಕಿತ್ಸೆಯ ಬಳಿಕ, ಅಮೆರಿಕದ 50 ಪ್ರತಿಶತ ಧೂಮಪಾನಿಗಳು ಆ ಹವ್ಯಾಸಕ್ಕೆ ಹಿಂದಿರುಗುತ್ತಾರೆ. ಹೃದಯಾಘಾತವನ್ನು ಹೊಂದಿದ್ದ ಧೂಮಪಾನಿಗಳಲ್ಲಿ, 38 ಪ್ರತಿಶತ ಮಂದಿ ಆಸ್ಪತ್ರೆಯನ್ನು ಬಿಡುವುದಕ್ಕೆ ಮೊದಲೇ ಧೂಮಪಾನ ಮಾಡಲಾರಂಭಿಸುತ್ತಾರೆ. ಕ್ಯಾನ್ಸರ್ ತಗಲಿರುವ ಗಂಟಲ ಕುಹರವು ತೆಗೆದುಹಾಕಲ್ಪಟ್ಟಿರುವ, ಧೂಮಪಾನಿಗಳಲ್ಲಿ ನಲ್ವತ್ತು ಪ್ರತಿಶತ, ಪುನಃ ಧೂಮಪಾನ ಮಾಡಲು ಪ್ರಯತ್ನಿಸುವರು.
ಧೂಮಪಾನವನ್ನು ನಿಲ್ಲಿಸಿಬಿಡಲಿಕ್ಕಾಗಿ ಕಡಿಮೆಪಕ್ಷ ಗಂಭೀರವಾದ ಒಂದು ಪ್ರಯತ್ನವನ್ನು ನಾವು ಮಾಡಿದ್ದೇವೆ, ಆದರೆ ಸೋತಿದ್ದೇವೆ ಎಂದು ಅಮೆರಿಕದ ಹದಿವಯಸ್ಸಿನ ಲಕ್ಷಾಂತರ ಧೂಮಪಾನಿಗಳಲ್ಲಿ ನಾಲ್ಕನೇ ಮೂರು ಭಾಗದಷ್ಟು ಮಂದಿ ಹೇಳುತ್ತಾರೆ. ಅನೇಕ ಯುವಜನರಿಗೆ, ಹೊಗೆಸೊಪ್ಪನ್ನು ಸೇದುವುದು ಹೆಚ್ಚು ಗಡುಸಾದ ಅಮಲೌಷಧಗಳಿಗೆ ಒಂದು ಮೆಟ್ಟುಗಲ್ಲಾಗಿದೆಯೆಂದು ಸಂಖ್ಯಾ ಸಂಗ್ರಹಣಗಳು ಸಹ ತೋರಿಸುತ್ತವೆ. ಧೂಮಪಾನ ಮಾಡದವರಿಗಿಂತ ಹರೆಯದ ಧೂಮಪಾನಿಗಳು ಕೊಕೇನನ್ನು ಉಪಯೋಗಿಸುವ ಸಂಭವನೀಯತೆ 50ಕ್ಕಿಂತಲೂ ಹೆಚ್ಚು ಪಟಾಗ್ಟಿದೆ. 13 ವರ್ಷ ಪ್ರಾಯದ ಒಬ್ಬ ಧೂಮಪಾನಿಯು ಒಪ್ಪಿಕೊಳ್ಳುತ್ತಾಳೆ. “ಒಬ್ಬನನ್ನು ಹೆಚ್ಚು ಗಡುಸಾದ ಅಮಲೌಷಧಗಳಿಗೆ ಪರಿಚಯ ಪಡಿಸುವ ಒಂದು ಅಮಲೌಷಧವು ಸಿಗರೇಟಾಗಿದೆಯೆಂಬುದರ ಕುರಿತು ನನ್ನ ಮನಸ್ಸಿನಲ್ಲಿ ಯಾವ ಸಂದೇಹವೂ ಇಲ್ಲ” ಎಂದು ಅವಳು ಬರೆದಳು. “ಮೂರು ಜನರ ಹೊರತಾಗಿ, ಬಹುಮಟ್ಟಿಗೆ ನನಗೆ ಗೊತ್ತಿರುವ ಪ್ರತಿಯೊಬ್ಬರೂ, ಅಮಲೌಷಧಗಳನ್ನು ತೆಗೆದುಕೊಳ್ಳುವುದಕ್ಕೆ ಮೊದಲು ಧೂಮಪಾನವನ್ನು ಆರಂಭಿಸಿದ್ದರು.”
ಕಡಿಮೆ ಟಾರ್ ಇರುವ ಸಿಗರೇಟ್ಗಳ ಕುರಿತೇನು? ವಾಸ್ತವವಾಗಿ ಎರಡು ಕಾರಣಗಳಿಗಾಗಿ ಅವುಗಳು ಹೆಚ್ಚು ಅಪಾಯಕರವಾಗಿರಬಹುದೆಂದು ಅಧ್ಯಯನಗಳು ತೋರಿಸುತ್ತವೆ: ಒಂದನೆಯದು, ಧೂಮಪಾನದ ವಿಷಕರ ಪರಿಣಾಮಗಳಿಗೆ ಶ್ವಾಸಕೋಶದ ಅಂಗಾಂಶವನ್ನು ಹೆಚ್ಚಾಗಿ ಒಡ್ಡಿಕೊಳ್ಳುತ್ತಾ, ತನ್ನ ದೇಹವು ಹಂಬಲಿಸುವ ನಿಕೊಟೀನನ್ನು ಹೊರಸೆಳೆಯಲಿಕ್ಕಾಗಿ ಧೂಮಪಾನಿಯು ಅನೇಕವೇಳೆ ಹೆಚ್ಚು ಗಾಢವಾಗಿ ಸೇದಿಕೊಳ್ಳುತ್ತಾನೆ; ಎರಡನೆಯದು, ತಾನು “ಹೆಚ್ಚು ಆರೋಗ್ಯಕರವಾದ” ಒಂದು ಸಿಗರೇಟನ್ನು ಸೇದುತ್ತಿದ್ದೇನೆಂಬ ಅಪಾರ್ಥವು, ಸಂಪೂರ್ಣವಾಗಿ ಧೂಮಪಾನವನ್ನು ನಿಲ್ಲಿಸಿಬಿಡುವ ಪ್ರಯತ್ನವನ್ನು ಮಾಡುವುದರಿಂದ ಅವನನ್ನು ತಡೆಯಬಹುದು.
ನಿಕೊಟೀನ್ ಒಂದರ ಮೇಲೆಯೇ 2,000ಕ್ಕಿಂತಲೂ ಹೆಚ್ಚಿನ ಅಧ್ಯಯನಗಳು ನಡೆಸಲ್ಪಟ್ಟಿವೆ. ಮನುಷ್ಯನಿಗೆ ಗೊತ್ತಿರುವ ಅತ್ಯಂತ ವ್ಯಸನಕಾರಿ ಮತ್ತು ಅತ್ಯಂತ ಹಾನಿಕರ ವಸ್ತುಗಳಲ್ಲಿ ನಿಕೊಟೀನ್ ಒಂದಾಗಿದೆಯೆಂದು ಅವು ಬಯಲುಮಾಡುತ್ತವೆ. ನಿಕೊಟೀನ್ ಹೃದಯದ ವೇಗಪ್ರಮಾಣವನ್ನು ಅಧಿಕಗೊಳಿಸುತ್ತದೆ ಮತ್ತು ರಕ್ತ ನಾಳಗಳನ್ನು ಸಂಕೋಚಿಸುತ್ತದೆ. ಅಭಿಧಮನಿ (ಶುದ್ಧ ರಕ್ತನಾಳ)ಯೊಳಗೆ ನೇರವಾಗಿ ಕೊಡಲ್ಪಡುವ ಚುಚ್ಚುಮದ್ದಿಗಿಂತಲೂ ಹೆಚ್ಚು ವೇಗವಾಗಿ, ಏಳು ಸೆಕೆಂಡುಗಳಲ್ಲಿ ಅದು ರಕ್ತಪ್ರವಾಹದೊಳಗೆ ಹೀರಿಕೊಳ್ಳಲ್ಪಡುತ್ತದೆ. ಇದು ಹೆರೊವಿನ್ಗಿಂತ ಇಮ್ಮಡಿ ವ್ಯಸನಕಾರಿಯೆಂದು ಕೆಲವರು ಹೇಳುವ ಒಂದು ಹಂಬಲ, ಹೆಚ್ಚನ್ನು ಬಯಸುವಂತೆ ಮಿದುಳನ್ನು ಒಗ್ಗಿಸುತ್ತದೆ.
ಅವುಗಳ ನಿರಾಕರಣೆಯ ಹೊರತಾಗಿಯೂ, ಹೊಗೆಸೊಪ್ಪಿನ ಕಂಪೆನಿಗಳು, ನಿಕೊಟೀನ್ನ ವ್ಯಸನಕರ ಗುಣಗಳ ಅರಿವುಳ್ಳವುಗಳಾಗಿವೆಯೊ? ಅದು ಬಹಳ ದೀರ್ಘ ಸಮಯದಿಂದಲೂ ಅವುಗಳಿಗೆ ತಿಳಿದಿದೆಯೆಂದು ನಿರ್ದೇಶಕಗಳು ತಿಳಿಸುತ್ತವೆ. ದೃಷ್ಟಾಂತಕ್ಕಾಗಿ, ಸನ್ನೆಕೋಲುಗಳನ್ನು ತಳ್ಳುವ ಮೂಲಕ ನಿಕೊಟೀನ್ನ ಡೋಸ್ಗಳನ್ನು ಕ್ರಮವಾಗಿ ಸ್ವತಃ ದೊರಕಿಸಿಕೊಳ್ಳುತ್ತಾ, ಪ್ರಯೋಗಶಾಲೆಯ ಇಲಿಗಳು ವ್ಯಸನದ ಪ್ರತಿನಿಧಿರೂಪದ ರೋಗಲಕ್ಷಣಗಳನ್ನು ಪ್ರದರ್ಶಿಸಿದವೆಂದು ಹೊಗೆಸೊಪ್ಪಿನ ಕಂಪೆನಿಯೊಂದರ ಸಂಶೋಧಕನೊಬ್ಬನು ಗಮನಿಸಿದನೆಂದು 1983ರ ಒಂದು ವರದಿಯು ತೋರಿಸುತ್ತದೆ. ಆ ಅಧ್ಯಯನವು ಹೊಗೆಸೊಪ್ಪಿನ ಉದ್ಯಮದಿಂದ ಆ ಕೂಡಲೆ ನಿಗ್ರಹಿಸಲ್ಪಟ್ಟಿತೆಂದು ವದಂತಿಯಿದೆ ಮತ್ತು ಅದು ಕೇವಲ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಎಲ್ಲಾ ದಿಕ್ಕುಗಳಿಂದ ಆಕ್ರಮಿಸಲ್ಪಡುತ್ತಿರುವಾಗ ಹೊಗೆಸೊಪ್ಪಿನ ಬೃಹತ್ ಸಂಸ್ಥೆಗಳು ಜಡವಾಗಿ ಉಳಿದಿಲ್ಲ. “ಅಮೆರಿಕದ ವ್ಯಾಪಾರೀ ಇತಿಹಾಸದಲ್ಲಿನ ಅತ್ಯಂತ ದೀರ್ಘ ಕಾಲದ ತಪ್ಪು ತಿಳಿವಳಿಕೆಯ ಕಾರ್ಯಾಚರಣೆ” ಎಂದು ದ ವಾಲ್ ಸ್ಟ್ರೀಟ್ ಜರ್ನಲ್ ಯಾವುದನ್ನು ಕರೆಯುತ್ತದೊ ಅದನ್ನು, ನ್ಯೂ ಯಾರ್ಕ್ ನಗರದಲ್ಲಿ ಹೊಗೆಸೊಪ್ಪಿನ ಸಂಶೋಧನೆಗಾಗಿರುವ ಸಲಹಾಸಮಿತಿಯು ನಡೆಸುತ್ತಿದೆ.
ಸ್ವತಂತ್ರ ಸಂಶೋಧನೆಯನ್ನು ನಡೆಸುವ ಪತಾಕೆಯ ಕೆಳಗೆ, ಆಕ್ರಮಣಕಾರರನ್ನು ಪ್ರತಿಭಟಿಸುವುದರಲ್ಲಿ ಸಲಹಾಸಮಿತಿಯು ಲಕ್ಷಾಂತರ ಡಾಲರ್ಗಳನ್ನು ಬಂಡವಾಳವಾಗಿ ಹಾಕಿದೆ. ಇದೆಲ್ಲವೂ 1953ರಲ್ಲಿ, ಇಲಿಗಳ ಬೆನ್ನಿನ ಮೇಲೆ ಬಳಿಯಲ್ಪಟ್ಟ ಹೊಗೆಸೊಪ್ಪಿನ ಟಾರ್ಗಳು ಗೆಡ್ಡೆಗಳನ್ನುಂಟುಮಾಡಿದ್ದನ್ನು, ಸ್ಮಾರಕ ಸ್ಲೋನ್-ಕೆಟರಿಂಗ್ ಕ್ಯಾನ್ಸರ್ ಕೇಂದ್ರದ ಅರ್ನ್ಸ್ಟ್ ವಿಂಡರ್ ಕಂಡುಹಿಡಿದಾಗ ಆರಂಭವಾಯಿತು. ಉತ್ಪನ್ನದ ವಿರುದ್ಧ ಒಟ್ಟುಗೂಡುತ್ತಿರುವ ಸ್ಪಷ್ಟವಾಗಿದ ಪುರಾವೆಯನ್ನು, ತಮ್ಮ ಸ್ವಂತ ವೈಜ್ಞಾನಿಕ ಪುರಾವೆಯೊಂದಿಗೆ ಪ್ರತಿಕೂಲವಾಗಿ ನಿಷ್ಪರಿಣಾಮಗೊಳಿಸಲಿಕ್ಕಾಗಿ, ಆ ಉದ್ಯಮವು ಸಲಹಾಸಮಿತಿಯನ್ನು ಸ್ಥಾಪಿಸಿತು.
ಆದರೂ, ಸಲಹಾಸಮಿತಿಯ ವಿಜ್ಞಾನಿಗಳು, ಸಂಶೋಧನಾ ಸಂಸ್ಥೆಯಲ್ಲಿನ ಉಳಿದ ಕಂಡುಹಿಡಿತಗಳಿಗೆ ತೀರ ವಿರುದ್ಧವಾದ ಫಲಿತಾಂಶಗಳನ್ನು ಉತ್ಪಾದಿಸಲು ಹೇಗೆ ಸಾಧ್ಯ? ಇತ್ತೀಚೆಗೆ ಬಿಡುಗಡೆಮಾಡಲ್ಪಟ್ಟ ದಸ್ತಾವೇಜುಗಳು, ಒಳಸಂಚಿನ ವಿಶದವಾದ ಜಾಲವನ್ನು ಹೊರಪಡಿಸಿದವು. ಲಿಖಿತ ಕರಾರುಗಳಿಂದ ನಿರ್ಬಂಧಿಸಲ್ಪಟ್ಟ, ತೀಕ್ಷ್ಣದೃಷ್ಟಿಯುಳ್ಳ ವಕೀಲರ ತಂಡಗಳಿಂದ ನಿಯಂತ್ರಿಸಲ್ಪಟ್ಟ ಸಲಹಾಸಮಿತಿಯ ಅನೇಕ ಸಂಶೋಧಕರು, ಬೆಳೆಯುತ್ತಿರುವ ಆರೋಗ್ಯ ಭಯಗಳು ಸಾಧಾರವುಳ್ಳವುಗಳಾಗಿದವ್ದೆಂದು ಕಂಡುಕೊಂಡರು. ಆದರೆ, ದ ವಾಲ್ ಸ್ಟ್ರೀಟ್ ಜರ್ನಲ್ಗನುಸಾರ, ವಾಸ್ತವಾಂಶಗಳಿಂದ ಎದುರಿಸಲ್ಪಟ್ಟಾಗ ಸಲಹಾಸಮಿತಿಯು, “ಧೂಮಪಾನವನ್ನು ಆರೋಗ್ಯ ಅಪಾಯಸಂಭವದೋಪಾದಿ ತೊಡಕಿಸಿದ ಅದರ ಸ್ವಂತ ಅಧ್ಯಯನಗಳನ್ನು ಕೆಲವೊಮ್ಮೆ ಕಡೆಗಣಿಸಿತು, ಅಥವಾ ನಿಲ್ಲಿಸಿತು ಸಹ.”
ಗೋಪ್ಯತೆಯ ಗೋಡೆಗಳ ಹಿಂದೆ, ಹೆಚ್ಚು ಸುರಕ್ಷಿತ ಸಿಗರೇಟ್ಗಾಗಿ ಅನ್ವೇಷಣೆಯು ಅನೇಕ ವರ್ಷಗಳ ವರೆಗೆ ಮುಂದುವರಿಯಿತು. ಸಾರ್ವಜನಿಕವಾಗಿ ಹಾಗೆ ಮಾಡುವುದು, ಧೂಮಪಾನವು ವಾಸ್ತವವಾಗಿ ಆರೋಗ್ಯಕ್ಕೆ ಅಪಾಯಸಂಭವವಾಗಿತ್ತೆಂಬುದರ ಧ್ವನಿತ ಒಪ್ಪಿಗೆಯಾಗಿರುತ್ತಿತ್ತು. 1970ಗಳ ಕೊನೆಯ ಭಾಗದಲ್ಲಿ, ಒಂದು “ಸುರಕ್ಷಿತ” ಸಿಗರೇಟನ್ನು ಉತ್ಪಾದಿಸುವ ಪ್ರಯತ್ನಗಳು ನಿಷ್ಪ್ರಯೋಜಕವೆಂದು ತೊರೆಯಲ್ಪಡಬೇಕು ಮತ್ತು ಎಲ್ಲಾ ಸಂಬಂಧಿತ ದಸ್ತಾವೇಜುಗಳು ಒಂದು ಕಡೆ ಅಡಕಲ್ಪಡಬೇಕೆಂದು, ಹೊಗೆಸೊಪ್ಪಿನ ಕಂಪೆನಿಯ ಪರವಾಗಿ ಒಬ್ಬ ಹಿರಿಯ ವಕೀಲರು ಶಿಫಾರಸ್ಸು ಮಾಡಿದರು.
ಅನೇಕ ವರ್ಷಗಳ ಪ್ರಯೋಗ ನಡೆಸುವಿಕೆಯಿಂದ ಎರಡು ವಿಷಯಗಳು ಸ್ಪಷ್ಟವಾಗಿದವು: ನಿಜವಾಗಿಯೂ ನಿಕೊಟೀನ್ ವ್ಯಸನಕಾರಿಯಾಗಿದೆ, ಮತ್ತು ಸಿಗರೇಟ್ ಸೇದುವಿಕೆಯು ಕೊಲ್ಲುತ್ತದೆ. ಈ ನಿಜತ್ವಗಳನ್ನು ಸಾರ್ವಜನಿಕವಾಗಿ ಭಾವಾವೇಶದಿಂದ ಅಲ್ಲಗಳೆಯುತ್ತಿರುವಾಗ್ಯೂ, ಈ ನಿಜತ್ವಗಳೆಲ್ಲವನ್ನು ತಾವು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೇವೆಂದು ಹೊಗೆಸೊಪ್ಪಿನ ಕಂಪೆನಿಗಳು ತಮ್ಮ ಕೃತ್ಯಗಳ ಮೂಲಕ ತೋರಿಸುತ್ತವೆ.
ಉದ್ದೇಶಪೂರ್ವಕವಾಗಿ ಕೌಶಲದಿಂದ ನಿರ್ವಹಿಸುವ ಆರೋಪಹೊರಿಸುತ್ತಾ, ಅಮೆರಿಕದ ಆಹಾರ ಮತ್ತು ಅಮಲೌಷಧ ಕಾರ್ಯಾಂಗ (ಎಫ್ಡಿಎ)ದ ಕಮಿಷನರರಾದ ಡೇವಿಡ್ ಕೆಸರ್ಲ್ ಹೇಳಿದ್ದು: “ನಿಜವಾಗಿಯೂ, ಇಂದಿನ ಕೆಲವು ಸಿಗರೇಟ್ಗಳು ನಿಖರವಾಗಿ ಲೆಕ್ಕಮಾಡಿದ ಮೊತ್ತದಲ್ಲಿ—ವ್ಯಸನವನ್ನು ಉಂಟುಮಾಡಿ ಪೋಷಿಸಲು ಸಾಕಾಗುವಷ್ಟು—ಉತ್ತಮ ತಾಂತ್ರಿಕತೆಯ ನಿಕೊಟೀನ್ ಬಿಡುಗಡೆ ಮಾಡುವ ವ್ಯೂಹಗಳಾಗಲು ಅರ್ಹವಾಗಿವೆ.”
ತಮ್ಮ ಆಶಯಗಳನ್ನು ರುಜುಪಡಿಸುವ ಅನೇಕ ಹಕ್ಕುಪತ್ರಗಳ ಒಡೆತನವನ್ನು ಹೊಗೆಸೊಪ್ಪಿನ ಕಂಪೆನಿಗಳು ಹೊಂದಿವೆಯೆಂದು ಕೆಸರ್ಲ್ ಬಹಿರಂಗಪಡಿಸಿದರು. ಇವುಗಳಲ್ಲಿ ಒಂದು, ಅತ್ಯಂತ ಹೆಚ್ಚು ನಿಕೊಟೀನ್ ಉತ್ಪನ್ನಮಾಡುವ ತಳಿಶಾಸ್ತ್ರೀಯವಾಗಿ ಬದಲಾಯಿಸಿದ ಹೊಗೆಸೊಪ್ಪಿನ ತಳಿಯಾಗಿದೆ. ಇನ್ನೊಂದು ಕಾರ್ಯವಿಧಾನವು, ಹೆಚ್ಚಿನ ಬಲವರ್ಧನೆಗಾಗಿ ಸಿಗರೇಟ್ ಶೋಧಕಗಳು ಮತ್ತು ಕಾಗದಗಳನ್ನು ನಿಕೊಟೀನ್ನಿಂದ ಸಂಸ್ಕರಿಸುತ್ತದೆ. ಮತ್ತೊಂದು ಕಾರ್ಯವಿಧಾನವು, ಧೂಮಪಾನಿಯ ಕೊನೆಯ ಸೇದಿಕೆಗಳಿಗಿಂತಲೂ ಮೊದಲ ಸೇದಿಕೆಗಳಲ್ಲಿ ಹೆಚ್ಚು ನಿಕೊಟೀನನ್ನು ಒಳಸೇರಿಸುತ್ತದೆ. ಇದಕ್ಕೆ ಕೂಡಿಸಿ, ಹೊಗೆಸೊಪ್ಪಿನಿಂದ ಹೆಚ್ಚು ನಿಕೊಟೀನನ್ನು ಬಿಡುಗಡೆಮಾಡಲಿಕ್ಕಾಗಿ, ಸಿಗರೇಟ್ಗಳಿಗೆ ಅಮೋನಿಯ ಸಂಯುಕ್ತಗಳು ಕೂಡಿಸಲ್ಪಡುತ್ತವೆಂದು ಉದ್ಯಮ ದಸ್ತಾವೇಜುಗಳು ತೋರಿಸುತ್ತವೆ. “ಬಹುಮಟ್ಟಿಗೆ ಒಳಕ್ಕೆ ಸೇದಿಕೊಳ್ಳಲ್ಪಡುವ ಸಾಮಾನ್ಯ ಪ್ರಮಾಣಕ್ಕಿಂತ ಇಮ್ಮಡಿಯಷ್ಟು ಧೂಮಪಾನಿಯ ರಕ್ತಪ್ರವಾಹದೊಳಗೆ ಸೇರಿತು” ಎಂದು ನ್ಯೂ ಯಾರ್ಕ್ ಟೈಮ್ಸ್ನ ಒಂದು ವರದಿಯು ಹೇಳುತ್ತದೆ. ನಿಕೊಟೀನ್ ಒಂದು ವ್ಯಸನಕಾರಿ ಅಮಲೌಷಧವಾಗಿದೆ ಮತ್ತು ಸಿಗರೇಟ್ಗಳನ್ನು ಹೆಚ್ಚು ಅಭೇದ್ಯವಾಗಿ ನಿಯಂತ್ರಿಸಲಿಕ್ಕಾಗಿ ಉದ್ದೇಶಿಸಲಾಗಿದೆಯೆಂದು ಎಫ್ಡಿಎ ಘೋಷಿಸಿದೆ.
ಸರಕಾರಗಳು ಸಹ ಸಿಗರೇಟ್ಗಳ ಮೇಲೆ ಅವಲಂಬಿಸಿವೆ, ಆದರೆ ವಿಭಿನ್ನವಾದ ಒಂದು ರೀತಿಯಲ್ಲಿ. ಉದಾಹರಣೆಗಾಗಿ, ಅಮೆರಿಕ ಸರಕಾರವು, ಒಂದು ವರ್ಷಕ್ಕೆ ಹೊಗೆಸೊಪ್ಪಿನ ಉತ್ಪನ್ನಗಳ ಮೇಲೆ ರಾಜ್ಯ ಹಾಗೂ ಸಂಯುಕ್ತ ರಾಷ್ಟ್ರದ ತೆರಿಗೆಗಳಲ್ಲಿ 1200 ಕೋಟಿ ಡಾಲರ್ಗಳನ್ನು ಸಂಗ್ರಹಿಸುತ್ತದೆ. ಆದರೂ, ಆರೋಗ್ಯಾರೈಕೆಯ ವೆಚ್ಚಗಳು ಮತ್ತು ನಷ್ಟಗೊಂಡ ಉತ್ಪನ್ನಕಾರಕತೆಯ ಮೇಲಾಧಾರಿಸಿ, ವರ್ಷವೊಂದಕ್ಕೆ ಧೂಮಪಾನದಿಂದ ಸರಕಾರಕ್ಕೆ 6,800 ಕೋಟಿ ಡಾಲರ್ ನಷ್ಟವೆಂದು ತಾಂತ್ರಿಕ ತೆರಿಗೆಯ ಸಂಯುಕ್ತ ರಾಷ್ಟ್ರದ ಕಚೇರಿಯು ಲೆಕ್ಕಾಚಾರ ಹಾಕುತ್ತದೆ.
ಆರ್ಥಿಕ ಪ್ರತಿಫಲಗಳು ಮತ್ತು ಹೇರಳ ಉದ್ಯೋಗಗಳು, ಕಲೆಗಳ ಕುರಿತಾದ ಧರ್ಮಶೀಲ ಬೆಂಬಲ, ಆರೋಗ್ಯದ ಅಪಾಯಗಳ ಘೋರ ನಿರಾಕರಣೆಗಳ ಪ್ರತಿಪಾದನೆಗಳು, ಸರ್ವಕ್ಷಣೆಗಾಗಿ ಹೊಗೆಸೊಪ್ಪಿನ ಉದ್ಯಮವು ಕೆಲವು ವಿಚಿತ್ರ ತೋರಿಕೆಯ ಬಲೂನುಗಳನ್ನು ಮೇಲೇರಿಸಿದೆ. ಅವುಗಳು ಲಂಡನ್ನಲ್ಲಿನ ಬಲೂನು ತಡೆಸಾಲಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಪರಿಣಮಿಸುವವೊ ಇಲ್ಲವೊ ಎಂಬುದು ನೋಡಲಿಕ್ಕಿದೆ.
ಆದರೆ ಬೃಹತ್ ಕಂಪೆನಿಗಳು ತಮ್ಮ ನೈಜ ಸ್ವಭಾವವನ್ನು ಇನ್ನು ಮುಂದೆ ಮುಚ್ಚಿಡಲಾರವೆಂಬುದು ಸ್ಪಷ್ಟ. ಅವು ಲಕ್ಷಾಂತರ ಡಾಲರ್ಗಳನ್ನು ಗಳಿಸಿವೆ, ಮತ್ತು ಅವು ಲಕ್ಷಾಂತರ ಜನರನ್ನು ಕೊಂದಿವೆ, ಆದರೆ ಮಾನವ ಜೀವಿತಗಳಲ್ಲಿ ಭೀಕರ ನಷ್ಟವು ಅಂತಿಮ ಫಲಿತಾಂಶವಾಗಿರುವ ವಿಷಯದಿಂದ ಅವು ಬಾಧಿಸಲ್ಪಟ್ಟಿಲ್ಲವೆಂಬಂತೆ ತೋರುತ್ತವೆ.
[ಪುಟ 9 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅವು ಬಹಳ ಜಂಬದ ಮಾತುಗಳಿಂದ ತುಂಬಿಸಲ್ಪಟ್ಟಿರುವಂತೆ ಗೋಚರಿಸುತ್ತವೆ
[ಪುಟ 0 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಜಡ ಹೊಗೆಯು ಕ್ಯಾನ್ಸರ್ಜನಕವೆಂದು ಸರಕಾರದ ಒಂದು ಅಧ್ಯಯನವು ದೋಷಾರೋಪಿಸುತ್ತದೆ
[ಪುಟ 21 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿದಿತವಾದ ಅತ್ಯಂತ ವ್ಯಸನಕಾರಿ ವಸ್ತುಗಳಲ್ಲಿ ನಿಕೊಟೀನ್ ಒಂದು
[ಪುಟ 22 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅವು ಲಕ್ಷಾಂತರ ಡಾಲರ್ಗಳನ್ನು ಗಳಿಸಿವೆ; ಅವು ಲಕ್ಷಾಂತರ ಜನರನ್ನು ಕೊಂದಿವೆ
[ಪುಟ 21 ರಲ್ಲಿರುವ ಚೌಕ]
50,000 ಅಧ್ಯಯನಗಳು—ಅವು ಏನನ್ನು ಕಂಡುಕೊಂಡಿವೆ?
ಹೊಗೆಸೊಪ್ಪಿನ ಉಪಯೋಗಕ್ಕೆ ಸಂಬಂಧಿಸಿ ಸಂಶೋಧಕರಿಂದ ಎಬ್ಬಿಸಲ್ಪಟ್ಟ ಆರೋಗ್ಯ ಹಿತಾಸಕ್ತಿಗಳ ಸಣ್ಣ ನಮೂನೆಯೊಂದು ಇಲ್ಲಿದೆ:
ಶ್ವಾಸಕೋಶದ ಕ್ಯಾನ್ಸರ್: ಶ್ವಾಸಕೋಶದ ಕ್ಯಾನ್ಸರಿನ ಮರಣಗಳಲ್ಲಿ ಧೂಮಪಾನಿಗಳದ್ದು 87 ಪ್ರತಿಶತ.
ಹೃದ್ರೋಗ: ಧೂಮಪಾನಿಗಳಿಗೆ ಹೃದಯರಕ್ತನಾಳಕ್ಕೆ ಸಂಬಂಧಿಸಿದ ರೋಗದಲ್ಲಿ 70 ಪ್ರತಿಶತ ಹೆಚ್ಚು ಅಪಾಯವಿದೆ.
ಸ್ತನದ ಕ್ಯಾನ್ಸರ್: ದಿನಾಲೂ 40 ಅಥವಾ ಅದಕ್ಕಿಂತ ಹೆಚ್ಚು ಸಿಗರೇಟ್ಗಳನ್ನು ಸೇದುವ ಸ್ತ್ರೀಯರು, ಸ್ತನದ ಕ್ಯಾನ್ಸರ್ನಿಂದ ಸಾಯುವ 74 ಪ್ರತಿಶತ ಹೆಚ್ಚು ಸಾಧ್ಯತೆಯನ್ನು ಹೊಂದಿದ್ದಾರೆ.
ಶ್ರವಣ ದುರ್ಬಲತೆ: ಧೂಮಪಾನ ಮಾಡುವ ತಾಯಂದಿರ ಶಿಶುಗಳಿಗೆ, ಶಬ್ದವನ್ನು ಸಂಸ್ಕರಿಸುವುದರಲ್ಲಿ ಹೆಚ್ಚು ಕಷ್ಟವಿದೆ.
ಮಧುಮೇಹರೋಗದ ಅಪಾಯ ಸಂಭವಗಳು: ಧೂಮಪಾನ ಮಾಡುವ ಅಥವಾ ಹೊಗೆಸೊಪ್ಪನ್ನು ಜಗಿಯುವ ಮಧುಮೇಹರೋಗಿಗಳು, ಮೂತ್ರಜನಕಾಂಗದ ಹಾನಿ ಮತ್ತು ಅತಿ ಬೇಗನೆ ಅಭಿವೃದ್ಧಿಹೊಂದುವ ಕಣಾಲ್ಜಬೇನೆ (ಅಕ್ಷಿಪಟದ ದೌರ್ಬಲ್ಯ)ಯನ್ನು ಹೊಂದುವ ಅತ್ಯಧಿಕ ಅಪಾಯದಲ್ಲಿದ್ದಾರೆ.
ದೊಡ್ಡ ಕರುಳಿನ ಕ್ಯಾನ್ಸರ್: 1,50,000ಕ್ಕಿಂತಲೂ ಹೆಚ್ಚು ಜನರನ್ನೊಳಗೊಂಡ ಎರಡು ಅಧ್ಯಯನಗಳು, ಧೂಮಪಾನ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್ನ ನಡುವಣ ಸ್ಪಷ್ಟ ಸಂಬಂಧವನ್ನು ತೋರಿಸುತ್ತವೆ.
ಉಬ್ಬಸ: ಪರೋಕ್ಷವಾದ ಧೂಮಪಾನವು ಯುವಜನರಲ್ಲಿ ಉಬ್ಬಸವನ್ನು ಇನ್ನೂ ಕೆಡಿಸಬಲ್ಲದು.
ಧೂಮಪಾನಕ್ಕೆ ಅನುಕೂಲವಾದ ದೇಹ ಸ್ಥಿತಿ: ಗರ್ಭಾವಸ್ಥೆಯ ಸಮಯದಲ್ಲಿ ಧೂಮಪಾನ ಮಾಡಿದ ಸ್ತ್ರೀಯರ ಪುತ್ರಿಯರು, ಧೂಮಪಾನ ಮಾಡುವುದು ನಾಲ್ಕು ಬಾರಿ ಹೆಚ್ಚು ಸಂಭವನೀಯ.
ರಕ್ತಕ್ಷಯ: ಧೂಮಪಾನವು ಬೆನ್ನುಹುರಿ ರಕ್ತಕ್ಷಯವನ್ನು ಉಂಟುಮಾಡುವಂತೆ ತೋರುತ್ತದೆ.
ವ್ಯಾಯಾಮ ಘಾಸಿಗಳು: ಅಮೆರಿಕದ ಸೇನಾ ಅಧ್ಯಯನವೊಂದಕ್ಕನುಸಾರ, ಧೂಮಪಾನಿಗಳು ವ್ಯಾಯಾಮ ಮಾಡುತ್ತಿರುವಾಗ ಘಾಸಿಗಳನ್ನು ಅನುಭವಿಸುವುದು ಹೆಚ್ಚು ಸಂಭವನೀಯ.
ಜ್ಞಾಪಕಶಕ್ತಿ: ವ್ಯಕ್ತಿಯೊಬ್ಬನು ಸಂಕೀರ್ಣವಾದ ಕೆಲಸಗಳನ್ನು ನಿರ್ವಹಿಸುತ್ತಿರುವಾಗ, ನಿಕೊಟೀನ್ನ ಅಧಿಕ ಡೋಸ್ಗಳು ಮಾನಸಿಕ ಜಾಣ್ಮೆಯನ್ನು ಕುಂದಿಸಬಹುದು.
ಖಿನ್ನತೆ: ಧೂಮಪಾನ ಮತ್ತು ಪ್ರಧಾನ ಖಿನ್ನತೆ ಹಾಗೂ ಕವಲುಮನ (ಸ್ಕಿಟ್ಸಫ್ರೀನಿಯ)ದ ನಡುವಿನ ಸಂಬಂಧವೊಂದರ ಪುರಾವೆಯನ್ನು ಮನಶ್ಶಾಸ್ತ್ರಜ್ಞರು ಶೋಧಿಸುತ್ತಿದ್ದಾರೆ.
ಆತ್ಮಹತ್ಯೆ: ಧೂಮಪಾನ ಮಾಡಿದ ದಾದಿಯರ ನಡುವೆ ದುಪ್ಪಟ್ಟು ಆತ್ಮಹತ್ಯೆಯು ಸಂಭವನೀಯವೆಂದು, ದಾದಿಯರ ಕುರಿತಾದ ಅಧ್ಯಯನವೊಂದು ತೋರಿಸಿತು.
ಈ ಪಟ್ಟಿಗೆ ಕೂಡಿಸಲಿಕ್ಕಾಗಿರುವ ಇತರ ಅಪಾಯಗಳು: ಬಾಯಿ, ಧ್ವನಿನಾಳ, ಗಂಟಲು, ಅನ್ನನಾಳ, ಮೇದೋಜೀರಕ ಗ್ರಂಥಿ, ಹೊಟ್ಟೆ, ಸಣ್ಣ ಕರುಳು, ಪಿತ್ತ ಕೋಶ, ಮೂತ್ರಜನಕಾಂಗ, ಮತ್ತು ಗರ್ಭಕೋಶದ ಕಂಠದ ಕ್ಯಾನ್ಸರ್; ಸ್ಟ್ರೋಕ್, ಹೃದಯಾಘಾತ, ಅಸ್ಥಿಗತ ಶ್ವಾಸಕೋಶದ ರೋಗ, ರಕ್ತಪರಿಚಲನೆಗೆ ಸಂಬಂಧಿಸಿದ ರೋಗ, ಜೀರ್ಣಾಂಗಗಳ ಹುಣ್ಣುಗಳು, ಮಧುಮೇಹ, ಬಂಜೆತನ, ತೀರ ಕಡಿಮೆ ತೂಕದ ಜನನ, ಎಲುಬಿನ ಉರಿಯೂತ, ಮತ್ತು ಕಿವಿಯ ಸೋಂಕುಗಳು. ಮನೆ, ಹೋಟೆಲ್, ಮತ್ತು ಆಸ್ಪತ್ರೆಯ ಬೆಂಕಿ ಹೊತ್ತಿಕೊಳ್ಳುವಿಕೆಗೆ ಧೂಮಪಾನವು ಮುಖ್ಯ ಕಾರಣವಾಗಿರುವುದರಿಂದ, ಬೆಂಕಿಯ ಅಪಾಯ ಸಂಭವಗಳನ್ನೂ ಕೂಡಿಸಬಹುದಾಗಿದೆ.
[ಪುಟ 23 ರಲ್ಲಿರುವ ಚೌಕ]
ಹೊಗೆರಹಿತ ಹೊಗೆಸೊಪ್ಪು—ಒಂದು ಅಪಾಯಕರ ಬದಲಿ
110 ಕೋಟಿ ಡಾಲರ್ ನಸ್ಯದ ಉದ್ಯಮದಲ್ಲಿ ಅತ್ಯಂತ ಹೆಚ್ಚು ಯಶಸ್ವಿಯನ್ನು ಗಳಿಸಿದ ಕಂಪೆನಿಯು, ಸುವಾಸನೆಯಿಂದ ಕೂಡಿದ ನಸ್ಯದೊಂದಿಗೆ ಆರಂಭಿಗರನ್ನು ಚಾಣಾಕ್ಷತನದಿಂದ ಸೆಳೆಯುತ್ತದೆ. ಇದು ಜನಪ್ರಿಯವಾಗಿರುವ ಸುವಾಸನೆಯಿಂದ ಕೂಡಿದ ಬ್ರ್ಯಾಂಡ್ಗಳನ್ನು ಹೊಂದಿದೆ. ಅವುಗಳು ಬಿಡುಗಡೆಮಾಡುವ “ಹೊಗೆಸೊಪ್ಪಿನ ತುಸು ಮೊರೆತ”ವು ತೃಪ್ತಿಯನ್ನುಂಟುಮಾಡುತ್ತದೆ, ಆದರೆ ದೀರ್ಘ ಸಮಯಕ್ಕಾಗಿ ಅಲ್ಲ. ಈ ಹೊಗೆಸೊಪ್ಪಿನ ಕಂಪೆನಿಯ ಮಾಜಿ ಉಪಾಧ್ಯಕ್ಷನೊಬ್ಬನು ಹೇಳಿದ್ದು: “ಅನೇಕ ಜನರು ಹೆಚ್ಚು ಸುವಾಸನೆಯಿಂದ ಕೂಡಿದ ಉತ್ಪನ್ನಗಳನ್ನು ಉಪಯೋಗಿಸಲಾರಂಭಿಸಬಹುದಾದರೂ, ಅಂತಿಮವಾಗಿ, ಅವರು ಅತ್ಯಂತ ತೀಕ್ಷ್ಣವಾದ ಬ್ರ್ಯಾಂಡ್ಗೆ ಬಂದು ತಲಪುತ್ತಾರೆ.” “ಗಡುಸಾದ ಪುರುಷರಿಗಾಗಿ ಗಡುಸಾದ ಒಂದು ಜಗಿತ” ಮತ್ತು “ಇದು ಸಂತೃಪ್ತಿಗೊಳಿಸುತ್ತದೆ” ಎಂಬುದಾಗಿ ಅದನ್ನು ಜಾಹೀರುಮಾಡಲಾಗುತ್ತದೆ.
ಆ ಕಂಪೆನಿಯ ಈ ತಂತ್ರೋಪಾಯದ ಕುರಿತಾಗಿ ದ ವಾಲ್ ಸ್ಟ್ರೀಟ್ ಜರ್ನಲ್ ವರದಿಸಿತು ಮತ್ತು “ಅದು ನಿಕೊಟೀನ್ನ ಮಟ್ಟಗಳನ್ನು ಹೆಚ್ಚುಕಡಿಮೆ ಮಾಡುತ್ತದೆ” ಎಂಬ ಅದರ ನಿರಾಕರಣೆಯನ್ನು ಇದು ಉದ್ಧರಿಸಿತು. “ಕಂಪೆನಿಯು ನಿಕೊಟೀನ್ ಮಟ್ಟಗಳನ್ನು ಔಚಿತ್ಯ ಮೀರಿ ಉಪಯೋಗಿಸದಿರುವಾಗ್ಯೂ, ಅದು ಅದನ್ನು ಉಪಯೋಗಿಸುವವರು ಹೀರಿಕೊಳ್ಳುವ ನಿಕೊಟೀನ್ ಪ್ರಮಾಣವನ್ನು ಅದು ಔಚಿತ್ಯ ಮೀರಿ ಉಪಯೋಗಿಸುತ್ತದೆ” ಎಂದು ಕಂಪೆನಿಯ ಮಾಜಿ ರಸಾಯನಶಾಸ್ತ್ರಜ್ಞರಿಬ್ಬರು, ಮೊದಲ ಬಾರಿಗೆ ಈ ವಿಷಯದ ಮೇಲೆ ಮಾತಾಡುತ್ತಾ ಹೇಳಿದರೆಂದು ಸಹ ಜರ್ನಲ್ ಹೇಳಿತು. ತನ್ನ ನಸ್ಯದ ಕ್ಷಾರೀಯತೆಯನ್ನು ಹೆಚ್ಚಿಸಲಿಕ್ಕಾಗಿ ಕಂಪೆನಿಯು ರಾಸಾಯನಿಕಗಳನ್ನು ಕೂಡಿಸುತ್ತದೆಂದೂ ಅವರು ಹೇಳುತ್ತಾರೆ. ನಸ್ಯವು ಹೆಚ್ಚು ಕ್ಷಾರೀಯವಾಗಿದ್ದಷ್ಟು, “ಹೆಚ್ಚು ನಿಕೊಟೀನ್ ಬಿಡುಗಡೆಮಾಡಲ್ಪಡುತ್ತದೆ.” ನಸ್ಯ ಮತ್ತು ಜಗಿಯುವ ಹೊಗೆಸೊಪ್ಪಿನ ಸಂಬಂಧವಾಗಿ ಜರ್ನಲ್ ಈ ಸ್ಪಷ್ಟೀಕರಣವನ್ನು ಕೂಡಿಸುತ್ತದೆ: “ಕೆಲವೊಮ್ಮೆ ಜಗಿಯುವ ಹೊಗೆಸೊಪ್ಪಿನೊಂದಿಗೆ ತಪ್ಪಾಗಿ ಗ್ರಹಿಸಲ್ಪಡುವ ನಸ್ಯವು, ಚೂರುಚೂರು ಮಾಡಲ್ಪಟ್ಟ ಹೊಗೆಸೊಪ್ಪಾಗಿದ್ದು, ಅದನ್ನು ಉಪಯೋಗಿಸುವವರು ಅದನ್ನು ಜಗಿಯುವುದಿಲ್ಲ, ಬದಲಾಗಿ ಹೀರುತ್ತಾರೆ. ಅದನ್ನು ಉಪಯೋಗಿಸುವವರು ಒಂದು ಚಿಟಿಕೆ ಅಥವಾ ‘ಡಿಪ್’ ನಸ್ಯವನ್ನು ತೆಗೆದುಕೊಂಡು, ಗಲ್ಲ ಮತ್ತು ಒಸಡಿನ ನಡುವೆ ಇಡುತ್ತಾರೆ; ಅದನ್ನು ತಮ್ಮ ನಾಲಿಗೆಗಳಿಂದ ಕದಲಿಸುತ್ತಾ ಆಗಾಗ್ಗೆ ಉಗಿಯುತ್ತಿರುತ್ತಾರೆ.”
ಆರಂಭಿಗರಿಗಾಗಿ ಮಾಡಿದ, ಸುವಾಸನೆಯಿಂದ ಕೂಡಿದ ಬ್ರ್ಯಾಂಡ್ಗಳು, ರಕ್ತಪ್ರವಾಹವು ಹೀರಿಕೊಳ್ಳುವಂತೆ ತಮ್ಮ ನಿಕೊಟೀನ್ನಿಂದ ಕೇವಲ 7 ಮತ್ತು 22 ಸೇಕಡವನ್ನು ಬಿಡುಗಡೆಮಾಡುತ್ತವೆ. ಅತ್ಯಂತ ತೀಕ್ಷ್ಣವಾದ ಬ್ರ್ಯಾಂಡ್ ಹೊಸದಾಗಿ ಉಪಯೋಗಿಸುವವರ ಉಸಿರುಕಟ್ಟುವಂತೆ ಮಾಡಬಲ್ಲದು. ಅದರ ಹೊಗೆಸೊಪ್ಪು “ಪೌರುಷವುಳ್ಳ”ವರಿಗಾಗಿ ಹೆಚ್ಚು ಉತ್ತಮವಾಗಿ ತರಿಯಲ್ಪಟ್ಟ ರೂಪದಲ್ಲಿದೆ. ಅದರ ನಿಕೊಟೀನ್ನಲ್ಲಿ ಎಪ್ಪತ್ತೊಂಬತ್ತು ಶೇಕಡ “ಮುಕ್ತ”ವಾಗಿದ್ದು ರಕ್ತಪ್ರವಾಹದೊಳಗೆ ಆ ಕೂಡಲೆ ಹೀರಿಕೊಳ್ಳಲಿಕ್ಕಾಗಿ ಲಭ್ಯವಾಗಿದೆ. ಅಮೆರಿಕದಲ್ಲಿ, ನಸ್ಯವನ್ನು ಉಪಯೋಗಿಸುವವರು ಅದನ್ನು ಸರಾಸರಿಯಾಗಿ ಒಂಬತ್ತರ ಪ್ರಾಯದಲ್ಲಿ ಆರಂಭಿಸುತ್ತಾರೆ. ಮತ್ತು ಒಂಬತ್ತು ವರ್ಷ ಪ್ರಾಯದವರು ಹೆಚ್ಚು ತೀಕ್ಷ್ಣವಾದ ಬ್ರ್ಯಾಂಡ್ಗಳನ್ನು ಉಪಯೋಗಿಸುವುದನ್ನು ಮತ್ತು “ಪೌರುಷವುಳ್ಳ”ವರೊಂದಿಗೆ ಜೊತೆಗೂಡುವುದನ್ನು ಮುಂದುವರಿಸಲು ಹೆಚ್ಚು ದೀರ್ಘಸಮಯ ನಿರೋಧಿಸುವರೊ?
ಒಂದು ಸಿಗರೇಟ್ನಿಂದ ಬರುವ ಡೋಸ್ಗಿಂತಲೂ ನಿಕೊಟೀನ್ನಿಂದ ಫಲಿಸುವ ಡೋಸ್ ನಿಜವಾಗಿಯೂ ಹೆಚ್ಚು ಪ್ರಬಲವಾದದ್ದಾಗಿದೆ. ವರದಿಗನುಸಾರ, ನಸ್ಯವನ್ನು ಉಪಯೋಗಿಸುತ್ತಿರುವವರು ಬಾಯಿಯ ಕ್ಯಾನ್ಸರನ್ನು ವಿಕಸಿಸಿಕೊಳ್ಳುವ ಸಂಭವನೀಯತೆಯು 4 ಪಟ್ಟು ಹೆಚ್ಚು, ಮತ್ತು ಅವರು ಗಂಟಲಿನ ಕ್ಯಾನ್ಸರನ್ನು ವಿಕಸಿಸಿಕೊಳ್ಳುವುದರ ಅಪಾಯವು, ಅದನ್ನು ಉಪಯೋಗಿಸದವರಿಗಿಂತ 50 ಪಟ್ಟು ಹೆಚ್ಚು ಮಹತ್ತರವಾಗಿದೆ.
ಬಾಯಿಯ ಕ್ಯಾನ್ಸರಿನಿಂದ ಸತ್ತ ಒಬ್ಬ ಮಾಜಿ ಪ್ರೌಢ ಶಾಲಾ ಪ್ರಸಿದ್ಧ ಓಟಗಾರನ ತಾಯಿಯಿಂದ, ಒಂದು ಹೊಗೆಸೊಪ್ಪಿನ ಕಂಪೆನಿಯ ವಿರುದ್ಧವಾಗಿ ಮೊಕದ್ದಮೆಯು ತರಲ್ಪಟ್ಟಾಗ, ಅಮೆರಿಕದಲ್ಲಿ ಸಾರ್ವಜನಿಕ ಕೂಗಾಟವು ತಾತ್ಕಾಲಿಕವಾಗಿ ಭಗ್ಗನೆ ಹೊತ್ತಿಕೊಂಡಿತು. 12ರ ಪ್ರಾಯದಲ್ಲಿ ಗೋವಳಿಕೆ ಪ್ರದರ್ಶನ (rodeo)ವೊಂದರಲ್ಲಿ ನಸ್ಯದ ಉಚಿತವಾದ ಡಬ್ಬವು ಅವನಿಗೆ ಸಿಕ್ಕಿತು ಮತ್ತು ಅವನು ಒಂದು ವಾರಕ್ಕೆ ನಾಲ್ಕು ಡಬ್ಬಗಳನ್ನು ಉಪಯೋಗಿಸುವವನಾಗಿ ಪರಿಣಮಿಸಿದನು. ಅವನ ನಾಲಿಗೆ, ದವಡೆ, ಮತ್ತು ಕತ್ತುಗಳನ್ನು ಹಲವಾರು ತುಂಡುಗಳಾಗಿ ವಿಭಾಗಿಸಿದ ಅನೇಕ ವೇದನಾಭರಿತ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡ ಬಳಿಕ, ಅವನ ವೈದ್ಯರು ಪ್ರಯತ್ನವನ್ನು ಬಿಟ್ಟುಬಿಟ್ಟರು. ಆ ಯೌವನಸ್ಥನು 19 ವರ್ಷಗಳ ಪ್ರಾಯದಲ್ಲಿ ಮರಣಹೊಂದಿದನು.
[ಪುಟ 24 ರಲ್ಲಿರುವ ಚೌಕ]
ಧೂಮಪಾನವನ್ನು ನಿಲ್ಲಿಸುವವನಾಗುವುದು ಹೇಗೆ?
ಲಕ್ಷಾಂತರ ಜನರು ಯಶಸ್ವಿಕರವಾಗಿ ತಮ್ಮ ನಿಕೊಟೀನ್ ವ್ಯಸನದಿಂದ ತಮ್ಮನ್ನು ಬಿಡಿಸಿಕೊಂಡಿದ್ದಾರೆ. ನೀವು ಒಬ್ಬ ಧೂಮಪಾನಿಯಾಗಿರುವಲ್ಲಿ—ಬಹಳ ದೀರ್ಘಸಮಯದಿಂದಲೂ—ನೀವು ಸಹ ಈ ಹಾನಿಕರ ಹವ್ಯಾಸವನ್ನು ತೊಲಗಿಸಿಬಿಡಸಾಧ್ಯವಿದೆ. ಸಹಾಯ ಮಾಡಬಹುದಾದ ಕೆಲವೊಂದು ಸಲಹೆಗಳು:
• ಏನನ್ನು ನಿರೀಕ್ಷಿಸಬೇಕೆಂಬುದರ ಕುರಿತಾಗಿ ಮುಂಚಿತವಾಗಿಯೇ ತಿಳಿದುಕೊಳ್ಳಿರಿ. ಬಿಟ್ಟುಬಿಡುವಿಕೆಯ ರೋಗಲಕ್ಷಣಗಳು, ವ್ಯಾಕುಲತೆ, ಮುಂಗೋಪ, ತಲೆ ತಿರುಗುವಿಕೆ, ತಲೆನೋವುಗಳು, ನಿದ್ರಾಹೀನತೆ, ಹೊಟ್ಟೆ ಕೆಟ್ಟುಹೋಗುವಿಕೆ, ಹಸಿವೆ, ಹಂಬಲಿಕೆ, ನ್ಯೂನ ಚಿತ್ತೈಕಾಗ್ರತೆ ಮತ್ತು ನಡುಕಗಳನ್ನು ಒಳಗೂಡಬಹುದು. ನಿಶ್ಚಯವಾಗಿಯೂ, ಹಿತಕರವಾದ ಒಂದು ಪ್ರತೀಕ್ಷೆಯಲ್ಲ, ಆದರೆ ಅತ್ಯಂತ ತೀಕ್ಷ್ಣವಾದ ರೋಗಲಕ್ಷಣಗಳು ಕೆಲವು ದಿನಗಳ ವರೆಗೆ ಮಾತ್ರ ಇರುತ್ತವೆ ಮತ್ತು ದೇಹವು ನಿಕೊಟೀನ್ನಿಂದ ಸ್ವತಂತ್ರವಾದಂತೆ ಕ್ರಮೇಣವಾಗಿ ಮಾಸಿಹೋಗುತ್ತವೆ.
• ಈಗ ಮಾನಸಿಕ ಹೋರಾಟವು ತೀವ್ರವಾಗಿ ಆರಂಭವಾಗುತ್ತದೆ. ನಿಮ್ಮ ದೇಹವು ನಿಕೊಟೀನ್ಗಾಗಿ ಹಂಬಲಿಸುತ್ತಿತ್ತು ಮಾತ್ರವಲ್ಲ, ಧೂಮಪಾನಕ್ಕೆ ಸಂಬಂಧಿಸಿದ ವರ್ತನೆಗಳಿಂದ ನಿಮ್ಮ ಮನಸ್ಸು ನಿಯಂತ್ರಿಸಲ್ಪಟ್ಟಿತ್ತು. ನೀವು ಅಪ್ರಜ್ಞಾಪೂರ್ವಕವಾಗಿ ಯಾವಾಗ ಒಂದು ಸಿಗರೇಟ್ಗಾಗಿ ಕೈ ಚಾಚುತ್ತೀರಿ ಎಂಬುದನ್ನು ಅವಲೋಕಿಸಲಿಕ್ಕಾಗಿ ನಿಮ್ಮ ನಿಯತಕ್ರಮವನ್ನು ವಿಶ್ಲೇಷಿಸಿರಿ, ಮತ್ತು ಆ ಮಾದರಿಯನ್ನು ಬದಲಾಯಿಸಿರಿ. ಉದಾಹರಣೆಗಾಗಿ, ಊಟವಾದ ಕೂಡಲೆ ನೀವು ಯಾವಾಗಲೂ ಧೂಮಪಾನ ಮಾಡುತ್ತಿದ್ದಲ್ಲಿ, ಒಡನೆಯೆ ಎದ್ದು, ಸ್ವಲ್ಪ ನಡೆದಾಡಲು ಅಥವಾ ಪಾತ್ರೆಗಳನ್ನು ತೊಳೆಯಲು ನಿರ್ಧರಿಸಿರಿ.
• ಬಹುಶಃ ಒತ್ತಡಭರಿತವಾದ ಒಂದು ಕ್ಷಣದಿಂದಾಗಿ, ತೀವ್ರವಾದ ಹಂಬಲಿಕೆಯು ಅನಿರೀಕ್ಷಿತವಾಗಿ ನಿಮಗೆ ಎದುರಾಗುವಾಗ, ಸಾಮಾನ್ಯವಾಗಿ ಆ ಪ್ರೇರಣೆಯು ಐದು ನಿಮಿಷಗಳೊಳಗೆ ಕಳೆದುಹೋಗುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ. ಒಂದು ಪತ್ರ ಬರೆಯುವ ಮೂಲಕ, ವ್ಯಾಯಾಮ ಮಾಡುವ ಮೂಲಕ, ಅಥವಾ ಆರೋಗ್ಯಕರವಾದ ಉಪಾಹಾರವನ್ನು ತಿನ್ನುವ ಮೂಲಕ ನಿಮ್ಮ ಮನಸ್ಸನ್ನು ತುಂಬಿಸಲು ಸಿದ್ಧರಾಗಿರಿ. ಆತ್ಮನಿಯಂತ್ರಣದ ವಿಷಯದಲ್ಲಿ ಪ್ರಾರ್ಥನೆಯು ಪ್ರಬಲವಾದೊಂದು ಸಹಾಯವಾಗಿದೆ.
• ಧೂಮಪಾನವನ್ನು ನಿಲ್ಲಿಸುವುದರ ವಿಫಲಗೊಂಡ ಪ್ರಯತ್ನಗಳಿಂದ ನೀವು ನಿರುತ್ಸಾಹಗೊಳಿಸಲ್ಪಡುವಲ್ಲಿ, ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ. ಪ್ರಯತ್ನಿಸುತ್ತಾ ಇರುವುದು ಪ್ರಾಮುಖ್ಯವಾದ ವಿಷಯವಾಗಿದೆ.
• ತೂಕವನ್ನು ಗಳಿಸುತ್ತೀರೆಂಬ ಪ್ರತೀಕ್ಷೆಯು ನಿಮ್ಮನ್ನು ತಡೆಗಟ್ಟುವುದಾದರೆ, ಸಿಗರೇಟ್ಗಳನ್ನು ವಿಸರ್ಜಿಸುವುದರಿಂದ ಬರುವ ಪ್ರಯೋಜನಗಳು, ಗಳಿಸುವ ಕೆಲವು ಕಿಲೊಗ್ರಾಮ್ಗಳ ಅಪಾಯಕ್ಕಿಂತ ಎಷ್ಟೋ ಹೆಚ್ಚು ಪ್ರಯೋಜನಕರ ಎಂಬುದನ್ನು ಮನಸ್ಸಿನಲ್ಲಿಡಿರಿ. ಸಿದ್ಧವಾಗಿ ದೊರೆಯಲಾಗುವಂತೆ ಹಣ್ಣು ಅಥವಾ ತರಕಾರಿಗಳನ್ನು ಇಡುವುದು ಸಹಾಯ ಮಾಡಬಹುದು. ಮತ್ತು ತುಂಬ ನೀರನ್ನು ಕುಡಿಯಿರಿ.
• ಧೂಮಪಾನವನ್ನು ನಿಲ್ಲಿಸಿಬಿಡುವುದು ಒಂದು ವಿಷಯ. ಹೊಗೆಸೊಪ್ಪಿನಿಂದ ದೂರವಿರುವುದು ಇನ್ನೊಂದು ವಿಷಯ. ಧೂಮಪಾನದಿಂದ ಸ್ವತಂತ್ರವಾಗಿರಲಿಕ್ಕಾಗಿ ಸಮಯದ ಗುರಿಗಳನ್ನಿಡಿರಿ—ಒಂದು ದಿನ, ಒಂದು ವಾರ, ಮೂರು ತಿಂಗಳುಗಳು, ಸದಾಕಾಲ.
ಯೇಸು ಹೇಳಿದ್ದು: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮಾರ್ಕ 12:31) ನಿಮ್ಮ ನೆರೆಯವನನ್ನು ಪ್ರೀತಿಸಲಿಕ್ಕಾಗಿ, ಧೂಮಪಾನವನ್ನು ನಿಲ್ಲಿಸಿರಿ. ನಿಮ್ಮನ್ನು ಪ್ರೀತಿಸಿಕೊಳ್ಳಲಿಕ್ಕಾಗಿ, ಧೂಮಪಾನವನ್ನು ನಿಲ್ಲಿಸಿರಿ.—ಜುಲೈ 8, 1989ರ ಅವೇಕ್!ನ 13-15ನೇ ಪುಟಗಳಲ್ಲಿರುವ, “ಧೂಮಪಾನ—ಕ್ರೈಸ್ತ ನೋಟ” (ಇಂಗ್ಲಿಷ್) ಎಂಬ ಲೇಖನವನ್ನೂ ನೋಡಿರಿ.