ಕೋಟ್ಯಂತರ ಜೀವಗಳು ಹೊಗೆಯಾಗಿ ಹೋಗಿ ನಷ್ಟವಾಗುತ್ತಿವೆ
ಜಗತ್ತಿನಲ್ಲಿ ಅಧಿಕ ಮಾರಾಟದ ಬಳಕೆ ಉತ್ಪನ್ನಗಳಲ್ಲಿ ಹೊಗೆಸೊಪ್ಪು ಒಂದು. ನಿಷ್ಠಾವಂತ ಕೊಳ್ಳುಗರ ಪಡೆಗಳೇ ಅದರ ಬಳಿ ಇವೆ ಮತ್ತು ಅದು ವೇಗಗತಿಯಲ್ಲಿ ವಿಸ್ತರಿಸುತ್ತಿರುವ ವ್ಯಾಪಾರವನ್ನು ಅನುಭೋಗಿಸುತ್ತಿದೆ. ಹರ್ಷಗೊಂಡಿರುವ ಅದರ ವಾಣಿಜ್ಯ ಕಂಪೆನಿಗಳು ಉತ್ತೇಜಕ ಲಾಭಗಳು, ರಾಜಕೀಯ ಪ್ರಭಾವ, ಮತ್ತು ಪ್ರತಿಷ್ಠೆಯನ್ನು ಬಹುವಾಗಿ ಹೊಗಳಿಕೊಳ್ಳುತ್ತವೆ. ಒಂದೇ ಒಂದು ಸಮಸ್ಯೆಯೇನೆಂದರೆ, ಅದರ ಅತ್ಯುತ್ತಮ ಗಿರಾಕಿಗಳು ಸಾಯುತ್ತಿರುತ್ತಾರೆ!
ದಿ ಇಕಾನಮಿಸ್ಟ್ ಗಮನಿಸುವುದು: “ಜಗತ್ತಿನ ಅತ್ಯಂತ ಲಾಭಕರ ಬಳಕೆ ಉತ್ಪನ್ನಗಳಲ್ಲಿ ಸಿಗರೇಟ್ಗಳು ಸೇರಿವೆ. ಉದ್ದೇಶಿಸಿದಂತೆ ಬಳಸುವಲ್ಲಿ, ಅವುಗಳ ಬಳಕೆದಾರರಲ್ಲಿ ಹೆಚ್ಚಿನವರನ್ನು ವ್ಯಸನಿಗಳಾಗಿ ಪರಿವರ್ತಿಸುವ ಮತ್ತು ಅನೇಕವೇಳೆ ಕೊಲ್ಲುವ, ಏಕಮಾತ್ರ (ಶಾಸನ ಸಮ್ಮತ) ವಸ್ತುಗಳು ಅವಾಗಿವೆ.” ಹೊಗೆಸೊಪ್ಪಿನ ಕಂಪೆನಿಗಳಿಗೆ ದೊಡ್ಡ ಲಾಭಗಳು, ಆದರೆ ಅವುಗಳ ಗಿರಾಕಿಗಳಿಗೆ ಬೃಹತ್ ನಷ್ಟಗಳು ಎಂಬುದು ಇದರರ್ಥ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಯು.ಎಸ್. ಕೇಂದ್ರಗಳಿಗನುಸಾರ, ಸಾಮೂಹಿಕವಾಗಿ ಅಮೆರಿಕದ ಧೂಮಪಾನಿಗಳ ಜೀವನಾವಧಿಯು ಪ್ರತಿ ವರ್ಷ 50 ಲಕ್ಷ ವರ್ಷಗಳಷ್ಟು—ಸೇದುತ್ತಾ ಕಳೆದ ಪ್ರತಿ ನಿಮಿಷಕ್ಕೆ ಹೆಚ್ಚುಕಡಿಮೆ ಒಂದು ನಿಮಿಷ—ಕಡಿಮೆಗೊಳಿಸಲ್ಪಡುತ್ತದೆ. “ಧೂಮಪಾನವು ಒಂದು ವರ್ಷಕ್ಕೆ 4,20,000 ಅಮೆರಿಕನರನ್ನು ಕೊಲ್ಲುತ್ತದೆ,” ಎಂದು ನ್ಯೂಸ್ವೀಕ್ ಪತ್ರಿಕೆ ವರದಿಸುತ್ತದೆ. “ಕಾನೂನುಬಾಹಿರ ಅಮಲೌಷಧಗಳಂತೆಯೇ ಧೂಮಪಾನವು 50 ಪಟ್ಟು ಹೆಚ್ಚು ಅಮೆರಿಕನರನ್ನು ಕೊಲ್ಲುತ್ತದೆ.”
ಬ್ರಿಟನ್ನಿನ ಇಂಪೀರಿಯಲ್ ವ್ಯವಸ್ಥೆಯ ಕ್ಯಾನ್ಸರ್ ಸಂಶೋಧನಾ ನಿಧಿ, ಡಬ್ಲ್ಯುಏಚ್ಓ (ಲೋಕಾರೋಗ್ಯ ಸಂಸ್ಥೆ), ಮತ್ತು ಅಮೆರಿಕನ್ ಕ್ಯಾನ್ಸರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಮಾರ್ಟ್ಯಾಲಿಟಿ ಫ್ರಮ್ ಸ್ಮೋಕಿಂಗ್ ಇನ್ ಡೆವಲಪ್ಡ್ ಕಂಟ್ರೀಸ್ 1950-2000 ಎಂಬ ಪುಸ್ತಕಕ್ಕನುಸಾರವಾಗಿ, ಜಗತ್ತಿನಾದ್ಯಂತ, ಪ್ರತಿ ನಿಮಿಷಕ್ಕೆ ಆರರಂತೆ, ವರ್ಷವೊಂದಕ್ಕೆ 30 ಲಕ್ಷ ಜನರು ಧೂಮಪಾನದಿಂದ ಸಾಯುತ್ತಾರೆ. ಜಗತ್ತಿನ ಧೂಮಪಾನದ ಪ್ರವೃತ್ತಿಗಳ ಈ ವಿಶ್ಲೇಷಣವು, ಪ್ರಸ್ತುತ ಕ್ಷಣದ ವರೆಗೆ, 45 ದೇಶಗಳನ್ನು ಆವರಿಸುತ್ತದೆ. “ಅಧಿಕಾಂಶ ದೇಶಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯು ಇನ್ನೂ ಬರಲಿಕ್ಕಿದೆ” ಎಂದು ಇಂಪೀರಿಯಲ್ ವ್ಯವಸ್ಥೆಯ ಕ್ಯಾನ್ಸರ್ ಸಂಶೋಧನಾ ನಿಧಿಯ ರಿಚರ್ಡ್ ಪೀಟೊ ಎಚ್ಚರಿಸುತ್ತಾರೆ. “ಧೂಮಪಾನದ ಪ್ರಚಲಿತ ವಿಧಾನಗಳು ಸತತವಾಗಿ ಉಳಿಯುವಲ್ಲಿ, ಇಂದಿನ ಯುವ ಧೂಮಪಾನಿಗಳು ಮಧ್ಯ ಪ್ರಾಯ ಅಥವಾ ಮುಪ್ಪನ್ನು ತಲಪುವ ಸಮಯದಷ್ಟಕ್ಕೆ, ಹೊಗೆಸೊಪ್ಪಿನಿಂದ ಒಂದು ವರ್ಷಕ್ಕೆ ಸುಮಾರು ಒಂದು ಕೋಟಿ ಮರಣಗಳು ಸಂಭವಿಸುವವು—ಪ್ರತಿ ಮೂರು ಸೆಕೆಂಡುಗಳಿಗೆ ಒಂದು ಮರಣ.”
“ಧೂಮಪಾನದಂತಹ ಅಪಾಯ ಸಂಭವವು ಬೇರೊಂದಿಲ್ಲ” ಎಂದು ಡಬ್ಲ್ಯುಏಚ್ಓನ ಡಾ. ಆ್ಯಲನ್ ಲೋಪೆಸ್ ಹೇಳುತ್ತಾರೆ. “ಕಟ್ಟಕಡೆಗೆ ಇದು ಇಬ್ಬರು ಧೂಮಪಾನಿಗಳಲ್ಲಿ ಒಬ್ಬನನ್ನು ಕೊಲ್ಲುವುದು.” ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ಇಲಾಖೆಯ ಮಾರ್ಟಿನ್ ವೆಸೀ ತದ್ರೀತಿಯಲ್ಲಿ ಹೇಳುವುದು: “40 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಲ್ಪಟ್ಟ ಈ ಕಂಡುಹಿಡಿತಗಳು, ನಿಜವಾಗಿಯೂ ದಿಗಿಲು ಹುಟ್ಟಿಸುವ ಒಂದು ವಿಚಾರಕ್ಕೆ, ಎಲ್ಲಾ ಧೂಮಪಾನಿಗಳಲ್ಲಿ ಅರ್ಧದಷ್ಟು ಮಂದಿ ಕಟ್ಟಕಡೆಗೆ ತಮ್ಮ ಹವ್ಯಾಸದಿಂದ ಕೊಲ್ಲಲ್ಪಡುವರೆಂಬ ಭೀಕರ ತೀರ್ಮಾನಕ್ಕೆ ನಡಿಸುತ್ತವೆ.” 1950ಗಳಂದಿನಿಂದ, ಆರು ಕೋಟಿ ಜನರು ಧೂಮಪಾನದಿಂದ ಸತ್ತಿದ್ದಾರೆ.
ನಿಜವಾಗಿಯೂ ಇದು ಹೊಗೆಸೊಪ್ಪಿನ ಕಂಪೆನಿಗಳಿಗೂ ದಿಗಿಲು ಹುಟ್ಟಿಸುವ ಒಂದು ವಿಚಾರವಾಗಿದೆ. ಧೂಮಪಾನ ಸಂಬಂಧಿತ ಕಾರಣಗಳಿಂದಾಗಿ, ಪ್ರತಿ ವರ್ಷ ಜಗತ್ತಿನಾದ್ಯಂತ ಮೂವತ್ತು ಲಕ್ಷ ಜನರು ಮರಣ ಹೊಂದುತ್ತಿರುವಾಗ ಹಾಗೂ ಇತರರು ಧೂಮಪಾನವನ್ನು ಬಿಟ್ಟುಬಿಡುತ್ತಿರುವಾಗ, ವಾರ್ಷಿಕವಾಗಿ ಮೂವತ್ತು ಲಕ್ಷಕ್ಕಿಂತ ಹೆಚ್ಚಿನ ಹೊಸ ಬಳಕೆದಾರರನ್ನು ಕಂಡುಕೊಳ್ಳಬೇಕಾಗಿದೆ.
ಹೊಗೆಸೊಪ್ಪಿನ ಕಂಪೆನಿಗಳು ಯಾವುದನ್ನು ಸ್ತ್ರೀಯರ ವಿಮೋಚನೆಯೆಂದು ಸಂಬೋಧಿಸುತ್ತವೋ ಅದರ ಕಾರಣದಿಂದಾಗಿ ಒಂದು ಬಳಕೆದಾರವರ್ಗವು ಹೊರಹೊಮ್ಮಿದೆ. ಸ್ತ್ರೀಯರಿಂದ ಧೂಮಪಾನ ಮಾಡಲ್ಪಡುವುದು ಪಾಶ್ಚಾತ್ಯ ದೇಶಗಳಲ್ಲಿ ಕೆಲವು ವರ್ಷಗಳ ವರೆಗೆ ಒಂದು ನೆರವೇರಿದ ಸಂಗತಿಯಾಗಿತ್ತು ಮತ್ತು ಎಲ್ಲಿ ಸ್ತ್ರೀಯರಿಂದ ಧೂಮಪಾನ ಮಾಡಲ್ಪಡುವುದನ್ನು ಕಳಂಕಿತವಾಗಿ ವೀಕ್ಷಿಸಲ್ಪಡುವ ವಾಡಿಕೆಯಿತ್ತೋ, ಆ ಸ್ಥಳಗಳಲ್ಲಿ ಇದು ಈಗ ಹಬ್ಬುತ್ತಿದೆ. ಹೊಗೆಸೊಪ್ಪಿನ ಕಂಪೆನಿಗಳು ಅದೆಲ್ಲವನ್ನು ಬದಲಾಯಿಸಲು ಸಂಕಲ್ಪಿಸಿವೆ. ಹೊಸದಾಗಿ ಕಂಡುಕೊಂಡ ತಮ್ಮ ಸಂಪತ್ಸಮೃದ್ಧಿ ಮತ್ತು ವಿಮೋಚನೆಯನ್ನು ಆಚರಿಸುವಂತೆ ಸ್ತ್ರೀಯರಿಗೆ ಸಹಾಯ ಮಾಡಲು ಅವು ಬಯಸುತ್ತವೆ. ಕಡಿಮೆ ಟಾರ್ ಮತ್ತು ಕಡಿಮೆ ಪ್ರಮಾಣಗಳ ನಿಕೊಟೀನ್ ಇದೆಯೆಂದು ವಾದಿಸುವ ವಿಶೇಷ ಸಿಗರೇಟ್ ಬ್ರ್ಯಾಂಡ್ಗಳು, ಧೂಮಪಾನ ಮಾಡುವ ಸ್ತ್ರೀಯರನ್ನು ಮತ್ತು ಅಂತಹ ಸೇದುವಿಕೆಯನ್ನು ಕಡಿಮೆ ಬಿರುಸಾದದ್ದಾಗಿ ಕಂಡುಕೊಳ್ಳುವವರನ್ನು ಸೆಳೆಯುತ್ತವೆ. ಇತರ ಸಿಗರೇಟ್ಗಳಲ್ಲಿ ಪರಿಮಳ ಸೇರಿಸಲಾಗುತ್ತದೆ, ಅಥವಾ ಒಂದು ಉದ್ದವಾದ, ತೆಳ್ಳನೆಯ ರೂಪ—ಸೇದುವುದರ ಮೂಲಕ ತಾವು ಸಾಧಿಸಲು ನಿರೀಕ್ಷಿಸುವ ರೂಪ—ವನ್ನು ಹೊಂದಿವೆ. ಏಷಿಯದಲ್ಲಿ ಹೊಗೆಸೊಪ್ಪಿನ ಜಾಹೀರಾತುಗಳು, ಪಾಶ್ಚಾತ್ಯ ಸೊಗಸುಗಾರಿಕೆಯಲ್ಲಿ ಮೋಹಕವಾಗಿ ಉಡುಪು ತೊಟ್ಟಿರುವ ಯುವ, ಒಯ್ಯಾರದ ಏಷಿಯನ್ ರೂಪದರ್ಶಿಗಳನ್ನು ಪ್ರದರ್ಶಿಸುತ್ತವೆ.
ಆದರೂ, ಧೂಮಪಾನ ಸಂಬಂಧಿತ ಮರಣದ ಪ್ರಮಾಣಗಳು, ಸ್ತ್ರೀಯರ “ವಿಮೋಚನೆ”ಯೊಂದಿಗೆ ಸರಿಸಮನಾಗಿ ಮುಂದುವರಿಯುತ್ತಿವೆ. ಬ್ರಿಟನ್, ಜಪಾನ್, ನಾರ್ವೆ, ಪೋಲೆಂಡ್, ಮತ್ತು ಸ್ವೀಡನ್ನಲ್ಲಿ ಕಳೆದ 20 ವರ್ಷಗಳಲ್ಲಿ, ಸ್ತ್ರೀಯರ ನಡುವೆ ಶ್ವಾಸಕೋಶದ ಕ್ಯಾನ್ಸರ್ಗೆ ಆಹುತಿಯಾದವರ ಸಂಖ್ಯೆಯು ದ್ವಿಗುಣವಾಗಿದೆ. ಅಮೆರಿಕ ಮತ್ತು ಕೆನಡದಲ್ಲಿ, ಪ್ರಮಾಣಗಳು 300 ಪ್ರತಿಶತ ಹೆಚ್ಚಿವೆ. “ನೀನು ಹೆಚ್ಚು ಪ್ರಗತಿಯನ್ನು ಮಾಡಿದ್ದೀ ಹುಡುಗಿ!” ಎಂದು ಒಂದು ಸಿಗರೇಟ್ ಜಾಹೀರಾತು ಘೋಷಿಸುತ್ತದೆ.
ಕೆಲವು ಹೊಗೆಸೊಪ್ಪಿನ ಸಂಸ್ಥೆಗಳು ತಮ್ಮ ಸ್ವಂತ ಚತುರೋಪಾಯವನ್ನು ಹೊಂದಿವೆ. ಕ್ಯಾತೊಲಿಕ್ ಧರ್ಮವು ಪ್ರಬಲವಾಗಿರುವ ಆ ದೇಶದಲ್ಲಿ ಫಿಲಿಪ್ಪೀನ್ ಕಂಪೆನಿಯೊಂದು, ಕನ್ಯೆ ಮರಿಯಳ ಒಂದು ಭಾವಚಿತ್ರವನ್ನು ಮತ್ತು ಆ ಪ್ರತಿಮೆಯ ಕೆಳಗೆ ಭಂಡತನದಿಂದ ಇಡಲ್ಪಟ್ಟ ಅವುಗಳ ಸಿಗರೇಟ್ ಬ್ರ್ಯಾಂಡ್ ಪದಚಿಹ್ನೆ (ಲೋಗೊ)ಗಳನ್ನು ಹೊಂದಿದ್ದಂತಹ ಕ್ಯಾಲೆಂಡರ್ಗಳನ್ನು ಉಚಿತವಾಗಿ ಹಂಚಿತು. “ಈ ಮುಂಚೆ ನಾನೆಂದೂ ಇಂತಹ ಯಾವುದೇ ವಿಷಯವನ್ನು ನೋಡಿರಲಿಲ್ಲ” ಎಂದು ಡಬ್ಲ್ಯುಏಚ್ಓನ ಏಷಿಯನ್ ಆರೋಗ್ಯ ಸಲಹೆಗಾರರಾದ ಡಾ. ರೋಸಮಾರೀ ಎರ್ಬನ್ ಹೇಳಿದರು. “ಫಿಲಿಪ್ಪೀನ್ ಸ್ತ್ರೀಯರನ್ನು ಧೂಮಪಾನದ ಕಲ್ಪನೆಯೊಂದಿಗೆ ನಿಶ್ಚಿಂತರನ್ನಾಗಿ ಮಾಡಲಿಕ್ಕಾಗಿ, ಅವರು ಪ್ರತಿಮೆಯ ಮುಖ್ಯೋದ್ದೇಶವನ್ನು ಹೊಗೆಸೊಪ್ಪಿಗೆ ಸರಿಹೊಂದಿಸಲು ಪ್ರಯತ್ನಿಸುತ್ತಿದ್ದರು.”
ಚೀನಾದಲ್ಲಿ ಅಂದಾಜು ಮಾಡಲ್ಪಟ್ಟ 61 ಪ್ರತಿಶತ ವಯಸ್ಕ ಪುರುಷರು ಧೂಮಪಾನ ಮಾಡುತ್ತಾರೆ, ಆದರೆ 7 ಪ್ರತಿಶತ ಸ್ತ್ರೀಯರು ಮಾತ್ರವೇ ಧೂಮಪಾನ ಮಾಡುತ್ತಾರೆ. ತಮ್ಮ ಮೋಹಕ ಪಾಶ್ಚಾತ್ಯ ಸಹೋದರಿಯರ “ಸುಖಾನುಭವಗಳ”ನ್ನು ಇಷ್ಟರ ವರೆಗೆ ನಿರಾಕರಿಸಲ್ಪಟ್ಟಿದ್ದ ಲಕ್ಷಾಂತರ ಸ್ತ್ರೀಯರ, ಮನೋಹರವಾದ ಈ ಪ್ರಾಚ್ಯ ಮಹಿಳೆಯರ “ವಿಮೋಚನೆ”ಯ ಮೇಲೆ, ಹೊಗೆಸೊಪ್ಪಿನ ಪಾಶ್ಚಾತ್ಯ ಕಂಪೆನಿಗಳು ತಮ್ಮ ಗಮನವನ್ನು ಕೇಂದ್ರೀಕರಿಸುತ್ತವೆ. ಆದರೂ, ಸಂತೋಷಕ್ಕೆ ಅಡಿಯ್ಡಾಗುವ ಒಂದು ದೊಡ್ಡ ವಸ್ತು: ಸರಕಾರದಿಂದ ಅಂಗೀಕೃತವಾದ ಹೊಗೆಸೊಪ್ಪಿನ ಕಂಪೆನಿಯು ಅಧಿಕಾಂಶ ಸಿಗರೇಟ್ಗಳನ್ನು ಸರಬರಾಯಿ ಮಾಡುವುದೇ.
ಆದರೂ, ಪಾಶ್ಚಾತ್ಯ ಕಂಪೆನಿಗಳು, ತಮ್ಮ ಉತ್ಪನ್ನಗಳಿಗಾಗಿ ಕ್ರಮೇಣ ಮಾರ್ಗವನ್ನು ದೊರಕಿಸಿಕೊಳ್ಳುತ್ತಿವೆ. ಜಾಹೀರಾತಿನ ಪರಿಮಿತ ಅವಕಾಶಗಳಿಂದಾಗಿ, ಕೆಲವು ಸಿಗರೇಟ್ ಕಂಪೆನಿಗಳು ತಮ್ಮ ಭವಿಷ್ಯದ ಗಿರಾಕಿಗಳನ್ನು ರಹಸ್ಯವಾದ ರೀತಿಯಲ್ಲಿ ಸಿದ್ಧಗೊಳಿಸಲು ಮುನ್ನೋಡುತ್ತವೆ. ಹಾಂಗ್ ಕಾಂಗ್ನಿಂದ ಚೀನಾವು ಚಲನಚಿತ್ರಗಳನ್ನು ಆಮದು ಮಾಡುತ್ತದೆ, ಮತ್ತು ಅವುಗಳಲ್ಲಿ ಅನೇಕವುಗಳಲ್ಲಿ ನಟರಿಗೆ ಧೂಮಪಾನ ಮಾಡಲಿಕ್ಕಾಗಿ ಹಣ ಕೊಡಲಾಗುತ್ತದೆ—ಒಂದು ಸೌಮ್ಯ ಒತ್ತಡದ ಮಾರಾಟ!
ತಮ್ಮ ಸ್ವಂತ ದೇಶದಲ್ಲಿ ಧೂಮಪಾನಕ್ಕೆ ವಿರೋಧವು ಬೆಳೆಯುತ್ತಿರುವುದರೊಂದಿಗೆ, ಊರ್ಜಿತ ಸ್ಥಿತಿಯ ಅಮೆರಿಕದ ಹೊಗೆಸೊಪ್ಪಿನ ಕಂಪೆನಿಗಳು, ಹೊಸ ಬಲಿಪಶುಗಳನ್ನು ಬಂಧನದಲ್ಲಿ ಸಿಕ್ಕಿಸಲಿಕ್ಕಾಗಿ ತಮ್ಮ ಗ್ರಹಣಾಂಗಗಳನ್ನು ಚಾಚುತ್ತಿವೆ. ವರ್ಧಿಷ್ಣು ದೇಶಗಳ ಕಡೆಗೆ ಮಾರಕವಾದ ಗುರಿಯನ್ನು ಅವು ತೆಗೆದುಕೊಂಡಿವೆಯೆಂದು ವಾಸ್ತವಾಂಶಗಳು ತೋರಿಸುತ್ತವೆ.
ಜಗದ್ವ್ಯಾಪಕವಾಗಿ ಆರೋಗ್ಯಾಧಿಕಾರಿಗಳು ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. “ಆಫ್ರಿಕವು ಒಂದು ಹೊಸ ವ್ಯಾಧಿಯ ವಿರುದ್ಧ ಹೋರಾಡುತ್ತದೆ—ಸಿಗರೇಟ್ ಸೇದುವಿಕೆ” ಎಂದು ಶಿರೋನಾಮಗಳು ಪ್ರಕಟಿಸುತ್ತವೆ. “ಸಿಗರೇಟ್ ವ್ಯಾಪಾರವು ಗಗನಕ್ಕೇರುತ್ತಿರುವಂತೆ ಏಷಿಯದಲ್ಲಿ ಹೊಗೆಯು ಬೆಂಕಿಯಾಗಿ ಪರಿವರ್ತಿಸುತ್ತದೆ.” “ಏಷಿಯದ ಧೂಮಪಾನದ ಪ್ರಮಾಣಗಳು ಕ್ಯಾನ್ಸರ್ ಸಾಂಕ್ರಾಮಿಕ ರೋಗಕ್ಕೆ ನಡಿಸುವವು.” “ಹೊಸ ಮೂರನೆಯ ಜಗತ್ತಿನ ಹೋರಾಟವು ಹೊಗೆಸೊಪ್ಪಿನ ಸಂಬಂಧದಲ್ಲಿ.”
ಆಫ್ರಿಕ ಭೂಖಂಡದ ಮೇಲೆ ಬರ, ಅಂತರ್ಯುದ್ಧ, ಮತ್ತು ಏಯ್ಡ್ಸ್ ಸಾಂಕ್ರಾಮಿಕ ರೋಗವು ಸತತವಾಗಿ ದಾಳಿಮಾಡಿದೆ. ಆದರೂ, ಬ್ರಿಟಿಷ್ ಹೃದಯ ಶಾಸ್ತ್ರಜ್ಞರಾದ ಡಾ. ಕೀತ್ ಬಾಲ್ ಹೇಳುವುದು: “ನ್ಯೂಕ್ಲಿಯರ್ ಯುದ್ಧ ಅಥವಾ ಕ್ಷಾಮದ ಹೊರತಾಗಿ, ಆಫ್ರಿಕದ ಭವಿಷ್ಯತ್ತಿನ ಆರೋಗ್ಯಕ್ಕೆ ಸಿಗರೇಟ್ ಸೇದುವಿಕೆಯು ಅತ್ಯಂತ ದೊಡ್ಡ ಏಕಮಾತ್ರ ಬೆದರಿಕೆಯಾಗಿದೆ.”
ಹೊಗೆಸೊಪ್ಪನ್ನು ಬೆಳೆಸಲಿಕ್ಕಾಗಿ, ಪ್ರಬಲ ಕಂಪೆನಿಗಳು ಸ್ಥಳಿಕ ರೈತರನ್ನು ಬಾಡಿಗೆಗೆ ತೆಗೆದುಕೊಳ್ಳುತ್ತವೆ. ಅಡುಗೆ, ಬಿಸುಪು, ಮತ್ತು ವಸತಿ ವ್ಯವಸ್ಥೆಗಾಗಿ ಅತ್ಯಂತ ಹೆಚ್ಚು ಅಗತ್ಯವಾಗಿರುವ ಮರಗಳನ್ನು ರೈತರು ಕಡಿದುಹಾಕುತ್ತಾರೆ ಮತ್ತು ಹೊಗೆಸೊಪ್ಪನ್ನು ಕೆಡದಂತೆ ಸಂರಕ್ಷಿಸುವ ಇಂಧನವನ್ನಾಗಿ ಅವುಗಳನ್ನು ಉಪಯೋಗಿಸುತ್ತಾರೆ. ಕಡಿಮೆ ಲಾಭದಾಯಕವಾದ ಆಹಾರ ಬೆಳೆಗಳನ್ನು ಬೆಳೆಸುವುದಕ್ಕೆ ಬದಲಾಗಿ ಅವರು, ಆದಾಯ ಕೊಡುವ ಹೊಗೆಸೊಪ್ಪಿನ ಬೆಳೆಗಳನ್ನು ಬೆಳೆಸುತ್ತಾರೆ. ಬಡತನಕ್ಕೆ ಇಳಿದಿರುವ ಆಫ್ರಿಕದ ಜನರು ತಮ್ಮ ಅಲ್ಪ ಆದಾಯದ ಅಧಿಕವಾದ ಭಾಗವನ್ನು ಸಾಮಾನ್ಯವಾಗಿ ಸಿಗರೇಟ್ಗಳಿಗಾಗಿ ವ್ಯಯಿಸುತ್ತಾರೆ. ಆದುದರಿಂದಲೇ ಹೊಗೆಸೊಪ್ಪಿನ ಪಾಶ್ಚಾತ್ಯ ಕಂಪೆನಿಗಳು ಲಾಭಗಳಿಂದ ಧನಿಕವಾಗುತ್ತಿರುವಾಗ, ಆಫ್ರಿಕದ ಕುಟುಂಬಗಳು ನ್ಯೂನ ಪೋಷಣೆಯಿಂದ ಸೊರಗುತ್ತಿವೆ.
ಆಫ್ರಿಕ, ಪ್ರಾಚ್ಯ ಯೂರೋಪ್, ಮತ್ತು ಲ್ಯಾಟಿನ್ ಅಮೆರಿಕಗಳೆಲ್ಲವೂ, ವರ್ಧಿಷ್ಣು ಜಗತ್ತನ್ನು ಒಂದು ದೈತ್ಯಾಕಾರದ ವ್ಯಾಪಾರ ಅವಕಾಶದೋಪಾದಿ ಅವಲೋಕಿಸುವ, ಹೊಗೆಸೊಪ್ಪಿನ ಪಾಶ್ಚಾತ್ಯ ಕಂಪೆನಿಗಳಿಂದ ಗುರಿಯಾಗಿಸಲ್ಪಡುತ್ತಿವೆ. ಆದರೆ ಜನಭರಿತವಾದ ಏಷಿಯವು ಇಷ್ಟರ ವರೆಗೆ ಅವೆಲ್ಲವುಗಳಲ್ಲಿ ಅತ್ಯಂತ ದೊಡ್ಡ ಸಂಪದ್ಭರಿತ ಮೂಲವಾಗಿದೆ. ಚೀನಾ ಒಂದೇ ಪ್ರಸ್ತುತವಾಗಿ, ಅಮೆರಿಕದ ಇಡೀ ಜನಸಂಖ್ಯೆಯಾದ 30 ಕೋಟಿಗಳಿಗಿಂತಲೂ ಹೆಚ್ಚಿನ ಧೂಮಪಾನಿಗಳನ್ನು ಹೊಂದಿದೆ. ಒಂದು ವರ್ಷಕ್ಕೆ, ತತ್ತರಗುಟ್ಟಿಸುವ 1,60,000 ಕೋಟಿ ಸಿಗರೇಟ್ಗಳನ್ನು ಅವರು ಸೇದುತ್ತಾರೆ—ಜಗತ್ತಿನಲ್ಲೇ ಬಳಸಲ್ಪಡುವ ಒಟ್ಟು ಸಿಗರೇಟ್ಗಳಲ್ಲಿ ಮೂರನೆಯ ಒಂದು ಭಾಗ!
“ಏಷಿಯದಲ್ಲಿ ಹೊಗೆಸೊಪ್ಪಿನ ಉತ್ಕರ್ಷದ ಆರೋಗ್ಯ ತೊಡಕುಗಳು ನಿಶ್ಚಯವಾಗಿಯೂ ದಿಗಿಲುಹುಟ್ಟಿಸುವಂತಹವುಗಳಾಗಿವೆಯೆಂದು ವೈದ್ಯರು ಹೇಳುತ್ತಾರೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಮುಂದಿನ ಎರಡು ಅಥವಾ ಮೂರು ದಶಕಗಳಲ್ಲಿ ಪ್ರತಿ ವರ್ಷ ನಿರೀಕ್ಷಿಸಲ್ಪಡುವ ಒಂದು ಕೋಟಿ ಧೂಮಪಾನ ಸಂಬಂಧಿತ ಮರಣಗಳಲ್ಲಿ, ಚೀನಾ ಒಂದರಲ್ಲಿಯೇ 20 ಲಕ್ಷ ಮರಣಗಳು ಸಂಭವಿಸುವವು ಎಂದು ರಿಚರ್ಡ್ ಪೀಟೊ ಅಂದಾಜು ಮಾಡುತ್ತಾರೆ. ಇಂದು ಜೀವಂತರಿರುವ ಚೀನಾದ ಐದು ಕೋಟಿ ಮಕ್ಕಳು, ಧೂಮಪಾನ ಸಂಬಂಧಿತ ರೋಗಗಳಿಂದ ಸಾಯಬಹುದೆಂದು ಪೀಟೊ ಹೇಳುತ್ತಾರೆ.
ಡಾ. ನೈಜಲ್ ಗ್ರೇ ಈ ರೀತಿಯಲ್ಲಿ ಇದರ ಸಾರಾಂಶವನ್ನು ಹೇಳಿದರು: “ಕಳೆದ ಐದು ದಶಕಗಳಲ್ಲಿ ಚೀನಾ ಮತ್ತು ಪ್ರಾಚ್ಯ ಯೂರೋಪ್ನ ಧೂಮಪಾನದ ಘಟನಾವಳಿಯು, ಆ ದೇಶಗಳನ್ನು ಒಂದು ಪ್ರಮುಖವಾದ ಹೊಗೆಸೊಪ್ಪಿನ ಸಾಂಕ್ರಾಮಿಕ ರೋಗಕ್ಕೆ ಗುರಿಮಾಡುತ್ತದೆ.”
“ಅಮೆರಿಕದಲ್ಲಿ ಪ್ರತಿ ವರ್ಷ 4,00,000 ಅಪ್ರಾಪ್ತ ಮರಣಗಳಿಗೆ ಕಾರಣವಾಗಿರುವ ಒಂದು ಉತ್ಪನ್ನ, ಅದರ ಪ್ರಜೆಗಳು ಅದನ್ನು ಬಿಟ್ಟುಬಿಡುವಂತೆ ಸಹಾಯ ಮಾಡಲಿಕ್ಕಾಗಿ ಅಮೆರಿಕ ಸರಕಾರವು ಕಠಿನವಾಗಿ ಪ್ರಯತ್ನಿಸುತ್ತಿರುವ ಒಂದು ಉತ್ಪನ್ನವು, ಅನಿರೀಕ್ಷಿತವಾಗಿ ಅಮೆರಿಕದ ಗಡಿಗಳಿಂದಾಚೆ ಹೇಗೆ ಭಿನ್ನವಾಗಿ ಪರಿಣಮಿಸಸಾಧ್ಯವಿದೆ?” ಎಂದು ಥಾಯ್ಲೆಂಡ್ನ ಧೂಮಪಾನವಿರೋಧಿ ಕ್ಯಾಂಪೇನ್ನ ಡಾ. ಪ್ರಕಿತ್ ವಟೀಸಟೋಕಿಟ್ ಕೇಳಿದರು. “ಅದೇ ಉತ್ಪನ್ನವು ಬೇರೆ ದೇಶಗಳಿಗೆ ರಫ್ತು ಮಾಡಲ್ಪಡುವಾಗ ಆರೋಗ್ಯವು ಅಪ್ರಕೃತವಾಗಿ ಪರಿಣಮಿಸುತ್ತದೊ?”
ಹೆಚ್ಚುತ್ತಿರುವ ಹೊಗೆಸೊಪ್ಪಿನ ವ್ಯಾಪಾರಗಳಿಗೆ ಅಮೆರಿಕ ಸರಕಾರವು ಪ್ರಬಲವಾದ ಸಹಕಾರಿಯಾಗಿದೆ. ವಿದೇಶದಲ್ಲಿ, ವಿಶೇಷವಾಗಿ ಏಷಿಯದ ಮಾರುಕಟ್ಟೆಗಳಲ್ಲಿ ಆಶ್ರಯಗಳನ್ನು ಪಡೆದುಕೊಳ್ಳಲಿಕ್ಕಾಗಿ ಅವುಗಳು ಜೊತೆಯಾಗಿ ಕಾದಾಡಿವೆ. ಅನೇಕ ವರ್ಷಗಳ ವರೆಗೆ, ಜಪಾನ್, ಟೈವಾನ್, ಥಾಯ್ಲೆಂಡ್, ಮತ್ತು ಯಾವ ದೇಶಗಳ ಸರಕಾರಗಳು ಹೊಗೆಸೊಪ್ಪಿನ ಉತ್ಪನ್ನಗಳ ಮೇಲೆ ತಮ್ಮ ಸ್ವಂತ ಪೂರ್ಣಾಧಿಕಾರವನ್ನು ಹೊಂದಿದ್ದವೋ, ಆ ಇತರ ದೇಶಗಳಲ್ಲಿ ಅಮೆರಿಕದ ಸಿಗರೇಟ್ಗಳು ವಿಕ್ರಯಿಸುವಂತೆ ಅನುಮತಿಸಲ್ಪಟ್ಟಿರಲ್ಲಿಲ. ಧೂಮಪಾನವಿರೋಧಿ ಗುಂಪುಗಳು ಸಿಗರೇಟ್ಗಳ ಆಮದು ಮಾಡುವಿಕೆಗಳನ್ನು ಪ್ರತಿಭಟಿಸಿದವು, ಆದರೆ ಅಮೆರಿಕದ ಆಡಳಿತವು ಪ್ರೇರಕವಾದ ಒಂದು ಆಯುಧವನ್ನು ಝಳಪಿಸಿತು—ಪ್ರತೀಕಾರರೂಪದ ಸುಂಕಗಳು.
1985ರಿಂದ, ಅಮೆರಿಕ ಸರಕಾರದ ತೀವ್ರವಾದ ಒತ್ತಡದ ಕೆಳಗೆ, ಏಷಿಯದ ಅನೇಕ ದೇಶಗಳು ಸಿಗರೇಟ್ಗಳ ಆಮದು ಮಾಡುವಿಕೆಯನ್ನು ಅನುಮತಿಸಿವೆ, ಮತ್ತು ಅಮೆರಿಕದ ಸಿಗರೇಟ್ಗಳು ಒಳಪ್ರವಹಿಸುತ್ತಿವೆ. ಏಷಿಯಕ್ಕೆ ಅಮೆರಿಕದ ಸಿಗರೇಟ್ನ ರಫ್ತುಗಳು 1988ರಲ್ಲಿ 75 ಪ್ರತಿಶತ ಅಧಿಕಗೊಂಡವು.
ಬಹುಶಃ ಹೊಗೆಸೊಪ್ಪಿನ ಸ್ಪರ್ಧೆಗಳ ಅತ್ಯಂತ ದುರಂತಮಯ ಬಲಿಪಶುಗಳು ಮಕ್ಕಳಾಗಿದ್ದಾರೆ. “ಎಲ್ಲಾ ಹೊಸ ಧೂಮಪಾನಿಗಳಲ್ಲಿ 90% ಮಕ್ಕಳು ಮತ್ತು ಹದಿವಯಸ್ಕರಾಗಿದ್ದಾರೆ” ಎಂದು ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ನಲ್ಲಿ ವರದಿಸಲ್ಪಟ್ಟ ಅಧ್ಯಯನವೊಂದು ಹೇಳುತ್ತದೆ.
ಅಮೆರಿಕದಲ್ಲಿ ಹದಿವಯಸ್ಕ ಧೂಮಪಾನಿಗಳ ಸಂಖ್ಯೆಯು 31 ಲಕ್ಷವೆಂದು ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ನಲ್ಲಿನ ಒಂದು ಲೇಖನವು ಅಂದಾಜುಮಾಡುತ್ತದೆ. ಪ್ರತಿ ದಿನ 3,000ದಂತೆ, ಒಂದು ವರ್ಷಕ್ಕೆ 10,00,000 ಹೊಸ ಉಮೇದ್ವಾರರು ಧೂಮಪಾನ ಮಾಡಲು ಆರಂಭಿಸುತ್ತಾರೆ.
ಒಂದು ಸಿಗರೇಟ್ ಜಾಹೀರಾತು, ಒಂದು ವಿನೋದಪ್ರಿಯ, ಸುಖಾನ್ವೇಷಕ ಒಂಟೆಯ ವ್ಯಂಗ್ಯಚಿತ್ರವು ಅನೇಕವೇಳೆ ಅದರ ತುಟಿಗಳಿಂದ ಸಿಗರೇಟ್ ನೇತಾಡುತ್ತಿರುವುದನ್ನು ಪ್ರದರ್ಶಿಸುತ್ತದೆ. ಯುವಜನರು ಆರೋಗ್ಯಾಪಾಯಗಳನ್ನು ಗ್ರಹಿಸುವ ಮೊದಲೇ, ಆ ಸಿಗರೇಟ್ ಜಾಹೀರಾತು ಅವರನ್ನು ನಿಕೊಟೀನ್ ಅಡಿಯಾಳುತನಕ್ಕೆ ಸೆಳೆಯುತ್ತದೆಂದು ಆರೋಪಿಸಲಾಗುತ್ತದೆ. ಈ ಜಾಹೀರಾತಿನ ಚಲಾವಣೆಯ ಮೂರು ವರ್ಷಗಳೊಳಗೇ, ಹರೆಯದವರಿಗೆ ವಿಕ್ರಯಿಸುವುದರಲ್ಲಿ ಆ ಸಿಗರೇಟ್ ಕಂಪೆನಿಯು 64 ಪ್ರತಿಶತ ಹೆಚ್ಚಳವನ್ನು ಅನುಭೋಗಿಸಿತು. ಸಮೀಕ್ಷೆ ನಡೆಸಲ್ಪಟ್ಟ ಆರು ವರ್ಷ ಪ್ರಾಯದವರಲ್ಲಿ 91 ಪ್ರತಿಶತ ಈ ಧೂಮಪಾನದ ವ್ಯಂಗ್ಯಚಿತ್ರ ಚಿತ್ರಣವನ್ನು ಗುರುತಿಸಿದರೆಂದು, ಜಾರ್ಜಿಯ (ಅಮೆರಿಕ)ದ ವೈದ್ಯಕೀಯ ಕಾಲೇಜ್ನಲ್ಲಿನ ಒಂದು ಅಧ್ಯಯನವು ಕಂಡುಕೊಂಡಿತು.
ಜನಪ್ರಿಯವಾದ ಇನ್ನೊಂದು ಸಿಗರೇಟ್ ಲಾಂಛನವು, ಯಾರ ಸಂದೇಶವು ಒಬ್ಬ ಹದಿವಯಸ್ಕನಿಗನುಸಾರ “ನೀವು ಧೂಮಪಾನ ಮಾಡುತ್ತಿರುವಾಗ ನಿಮ್ಮನ್ನು ತಡೆಯಸಾಧ್ಯವಿಲ್ಲ” ಎಂದಾಗಿದೆಯೋ, ಆ ಸ್ವೇಚ್ಛೆಯ ಓಜಸ್ವಿ ದನಗಾಹಿ ರಾಹುತ (cowboy)ನದ್ದಾಗಿದೆ. ಜಗತ್ತಿನಲ್ಲಿಯೆ ಅತ್ಯಧಿಕ ಮಾರಾಟದ ಬಳಕೆಯ ಉತ್ಪನ್ನವು, ಹದಿವಯಸ್ಕ ಧೂಮಪಾನಿಗಳ ನಡುವಿನ ವ್ಯಾಪಾರದ 69 ಪ್ರತಿಶತ ಸ್ವಾಮ್ಯವನ್ನು ಪಡೆದಿರುವ ಒಂದು ಸಿಗರೇಟಾಗಿದೆ ಮತ್ತು ಅದು ಅತ್ಯಂತ ಹೆಚ್ಚು ಜಾಹೀರುಪಡಿಸಲ್ಪಟ್ಟ ಬ್ರ್ಯಾಂಡಾಗಿದೆಯೆಂದು ಹೇಳಲಾಗುತ್ತದೆ. ಜೊತೆಗೂಡಿಸಲ್ಪಟ್ಟ ಪ್ರೋತ್ಸಾಹಕದೋಪಾದಿ, ಯುವಜನರಲ್ಲಿ ಜನಪ್ರಿಯವಾಗಿರುವ ಜೀನ್ಸ್, ಹ್ಯಾಟ್ಸ್, ಮತ್ತು ಕ್ರೀಡಾ ಉಡುಪುಗಳನ್ನು ವಿನಿಮಯ ಮಾಡಿಕೊಳ್ಳಲಿಕ್ಕಾಗಿ ಪ್ರತಿ ಸಿಗರೇಟ್ ಪ್ಯಾಕ್ನೊಂದಿಗೆ ಕೂಪನ್ಗಳು ಬರುತ್ತವೆ.
ಜಾಹೀರಾತು ಕೊಡುವುದರ ಪ್ರಚಂಡ ಶಕ್ತಿಯನ್ನು ಗ್ರಹಿಸುತ್ತಾ, ಅನೇಕ ದೇಶಗಳಲ್ಲಿ ಟೆಲಿವಿಷನ್ ಮತ್ತು ರೇಡಿಯೊಗಳಿಂದ ಹೊಗೆಸೊಪ್ಪಿನ ಜಾಹೀರಾತುಗಳನ್ನು ನಿಷೇಧಿಸಿರುವುದರಲ್ಲಿ ಧೂಮಪಾನವಿರೋಧಿ ಗುಂಪುಗಳು ಯಶಸ್ವಿಯಾಗಿವೆ. ಆದರೂ, ಕ್ರೀಡಾ ಘಟನಾವಳಿಗಳಲ್ಲಿ ತಂತ್ರೋಪಾಯದಿಂದ ಜಾಹೀರಾತು ಫಲಕಗಳನ್ನು ಇಡುವುದು, ಬುದ್ಧಿವಂತಿಕೆಯುಳ್ಳ ಹೊಗೆಸೊಪ್ಪಿನ ಜಾಹೀರಾತುಗಾರರು ಈ ವ್ಯವಸ್ಥೆಯನ್ನು ಭಂಗಗೊಳಿಸುವ ಒಂದು ವಿಧವಾಗಿದೆ. ಆದುದರಿಂದ, ಅಪಾರ ಯುವ ಪ್ರೇಕ್ಷಕರೊಂದಿಗೆ, ಟೆಲಿವಿಷನ್ನಿಂದ ಪ್ರಸಾರ ಮಾಡಲ್ಪಡುವ ಕ್ರೀಡೆಯು, ಮುನ್ನೆಲೆಯಲ್ಲಿ ಅವರ ಅಚ್ಚುಮೆಚ್ಚಿನ ಆಟಗಾರನು ಚಟುವಟಿಕೆಗಾಗಿ ಉತ್ತೇಜಿತನಾಗುವುದನ್ನು ಮತ್ತು ಹಿನ್ನೆಲೆಯಲ್ಲಿ ಬಹಳ ಎತ್ತರದಲ್ಲಿ ಸಿಗರೇಟ್ ಜಾಹೀರಾತು ಫಲಕಗಳು ಅಡಗಿಕೊಂಡಿರುವುದನ್ನು ಪ್ರದರ್ಶಿಸಬಹುದು.
ನಗರಮಧ್ಯದಲ್ಲಿರುವ ಸ್ಥಳಗಳಲ್ಲಿ ಅಥವಾ ಶಾಲೆಗಳ ಎದುರಿನಲ್ಲಿ, ಗಿಡ್ಡಲಂಗಗಳು ಅಥವಾ ದನಗಾಹಿ ರಾಹುತ ಅಥವಾ ಸಫಾರಿ ಸೂಟ್ಗಳಂತಹ ಉಡುಪುಗಳನ್ನು ಜಾಣತನದಿಂದ ಧರಿಸಿರುವ ಸ್ತ್ರೀಯರು, ಕಾತುರರಾದ ಅಥವಾ ಕೂತೂಹಲಿಗಳಾದ ಹದಿವಯಸ್ಕರಿಗೆ ಉಚಿತ ಸಿಗರೇಟ್ಗಳನ್ನು ಕೊಡುತ್ತಾರೆ. ವಿಡಿಯೊ ಅರ್ಕೇಡ್ಗಳಲ್ಲಿ, ಡಿಸ್ಕೊಗಳಲ್ಲಿ, ಮತ್ತು ರಾಕ್ ಗಾನಗೋಷ್ಠಿಗಳಲ್ಲಿ, ಸಿಗರೇಟ್ಗಳ ಸ್ಯಾಂಪ್ಲ್ಗಳು ಉಚಿತವಾಗಿ ಹಂಚಲ್ಪಡುತ್ತವೆ. ವಾರ್ತಾಮಾಧ್ಯಮಕ್ಕೆ ಗುಟ್ಟಾಗಿ ಹೊರಬಿದ್ದ ಒಂದು ಕಂಪೆನಿಯ ವ್ಯಾಪಾರೀ ಯೋಜನೆಯು, 12ರಿಂದ 17 ವರ್ಷ ಪ್ರಾಯದ ಫ್ರೆಂಚ್ ಭಾಷೆಯನ್ನು ಮಾತಾಡುವ ಗಂಡುಗಳ ಮೇಲೆ, ಕೆನಡದ ನಿರ್ದಿಷ್ಟವಾದ ಒಂದು ಬ್ರ್ಯಾಂಡ್ ಕೇಂದ್ರೀಕರಿಸಿತೆಂದು ತೋರಿಸಿತು.
ಧೂಮಪಾನವು ಆಹ್ಲಾದ, ಔಚಿತ್ಯ, ಪುರುಷತ್ವ, ಮತ್ತು ಜನಪ್ರಿಯತೆಯನ್ನು ತರುತ್ತದೆಂಬುದೇ ಹೆಚ್ಚು ಗಮನ ಸೆಳೆಯುವಂತಹ ಸಂದೇಶವಾಗಿದೆ. “ನಾನು ಕೆಲಸ ಮಾಡುತ್ತಿದ್ದಲ್ಲಿ, 14 ವರ್ಷ ಪ್ರಾಯದವರಾಗಿದ್ದ ಮಕ್ಕಳು ಧೂಮಪಾನ ಮಾಡಲು ಪ್ರಾರಂಭಿಸುವಂತೆ ಪ್ರಭಾವಿಸಲಿಕ್ಕಾಗಿ ನಾವು ಬಹಳ ಕಠಿನವಾಗಿ ಪ್ರಯತ್ನಿಸುತ್ತಿದ್ದೆವು” ಎಂದು ಜಾಹೀರಾತಿನ ಸಲಹೆಗಾರನೊಬ್ಬನು ಹೇಳಿದನು. ಏಷಿಯದಲ್ಲಿನ ಜಾಹೀರಾತುಗಳು, ಆರೋಗ್ಯವಂತ, ಯುವ ಪಾಶ್ಚಾತ್ಯ ಸ್ಪರ್ಧಾಳುಸದೃಶರು—ನಿಶ್ಚಯವಾಗಿ ಧೂಮಪಾನಮಾಡುತ್ತಾ—ಸಮುದ್ರ ತೀರಗಳು ಮತ್ತು ಚೆಂಡಿನ ಮೈದಾನಗಳಲ್ಲಿ ಜಿಗಿದಾಡುವುದನ್ನು ಚಿತ್ರಿಸುತ್ತವೆ. “ಪಾಶ್ಚಾತ್ಯ ರೂಪದರ್ಶಿಗಳು ಮತ್ತು ಜೀವನಶೈಲಿಗಳು, ಅನುಕರಿಸಲು ಸೊಬಗಿನ ಮಟ್ಟಗಳನ್ನು ಸೃಷ್ಟಿಸುತ್ತವೆ ಮತ್ತು ಏಷಿಯದ ಧೂಮಪಾನಿಗಳು ಪಾಶ್ಚಾತ್ಯ ಜೀವನಶೈಲಿಗಳನ್ನು ಅನುಕರಿಸಲು ಬಹಳ ಕಾತುರರಾಗಿದ್ದಾರೆ” ಎಂದು ವ್ಯಾಪಾರೀ ಉದ್ಯಮದ ಪತ್ರಿಕೆಯೊಂದು ಹೇಳಿಕೆ ನೀಡಿತು.
ಜಾಹೀರಾತಿಗಾಗಿ ನೂರಾರು ಕೋಟಿಗಳಷ್ಟು ಡಾಲರ್ಗಳನ್ನು ವೆಚ್ಚಮಾಡಿದ ಬಳಿಕ, ಹೊಗೆಸೊಪ್ಪಿನ ವ್ಯಾಪಾರಿಗಳು ಬೃಹತ್ ಯಶಸ್ಸುಗಳನ್ನು ಸಾಧಿಸಿದ್ದಾರೆ. ಯುವ ಧೂಮಪಾನಿಗಳ ಸಂಖ್ಯೆಯಲ್ಲಿನ ಏರಿಕೆಯು ಗಾಬರಿಗೊಳಿಸುವಂತಹದ್ದಾಗಿದೆಯೆಂದು ಒಂದು ರೀಡರ್ಸ್ ಡೈಜೆಸ್ಟ್ನ ವಿಶೇಷ ವರದಿಯು ತೋರಿಸಿತು. “ಫಿಲಿಪ್ಪೀನ್ಸ್ನಲ್ಲಿ, 18 ವರ್ಷಗಳ ಕೆಳಗಿನ 22.7 ಪ್ರತಿಶತ ಜನರು ಈಗ ಧೂಮಪಾನ ಮಾಡುತ್ತಾರೆ. ಕೆಲವು ಲ್ಯಾಟಿನ್ ಅಮೆರಿಕನ್ ನಗರಗಳಲ್ಲಿ, ಹದಿಪ್ರಾಯದ ಪ್ರಮಾಣವು ವಿಸ್ಮಯಗೊಳಿಸುವಂತಹ 50 ಪ್ರತಿಶತವಾಗಿದೆ. ಹಾಂಗ್ ಕಾಂಗ್ನಲ್ಲಿ, ಏಳು ವರ್ಷಗಳಷ್ಟು ಎಳೆಯ ಪ್ರಾಯದ ಮಕ್ಕಳು ಧೂಮಪಾನ ಮಾಡುತ್ತಿದ್ದಾರೆ” ಎಂದು ವರದಿಯು ಹೇಳುತ್ತದೆ.
ಆದರೂ, ವಿದೇಶಗಳಲ್ಲಿ ತನ್ನ ವಿಜಯಗಳನ್ನು ಹೊಗೆಸೊಪ್ಪು ಆಚರಿಸುತ್ತಿರುವಾಗ್ಯೂ, ತಮ್ಮ ಸ್ವದೇಶದಲ್ಲಿ ಆಸನ್ನವಾಗುತ್ತಿರುವ ಬಿಕ್ಕಟ್ಟಿನ ಕುರಿತು ಸಿಗರೇಟ್ ಕಂಪೆನಿಗಳು ವೇದನಾಭರಿತವಾಗಿ ಅರಿವುಳ್ಳವುಗಳಾಗಿವೆ. ಹೊಗೆಸೊಪ್ಪು ಆ ಬಿರುಗಾಳಿಯನ್ನು ಪಾರಾಗುವ ಸಂಭವವೆಷ್ಟು?
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅದರ ಅತ್ಯುತ್ತಮ ಗಿರಾಕಿಗಳು ಸಾಯುತ್ತಿರುತ್ತಾರೆ
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಏಷಿಯ, ಹೊಗೆಸೊಪ್ಪಿನ ತೀರ ಹೊಸತಾದ ಕೊಲ್ಲುವಿಕೆಯ ಕ್ಷೇತ್ರಗಳು
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಎಲ್ಲಾ ಹೊಸ ಧೂಮಪಾನಿಗಳಲ್ಲಿ 90 ಪ್ರತಿಶತ—ಮಕ್ಕಳು ಮತ್ತು ಹದಿವಯಸ್ಕರು!
[ಪುಟ 5 ರಲ್ಲಿರುವ ಚೌಕ]
ಮಾರಕ ಪಾಕಪಟ್ಟಿ—ಸಿಗರೇಟ್ನಲ್ಲಿ ಯಾವ ಪದಾರ್ಥಗಳಿವೆ?
700ರ ವರೆಗಿನ ವಿವಿಧ ರಾಸಾಯನಿಕ ಸಂಯೋಜನೀಯಗಳು ಸಿಗರೇಟ್ ತಯಾರಕರಿಂದ ಉಪಯೋಗಿಸಲ್ಪಡಬಹುದು, ಆದರೆ ಕಂಪೆನಿಗಳು ತಮ್ಮ ಪಟ್ಟಿಗಳನ್ನು ರಹಸ್ಯವಾಗಿಡಲು ನ್ಯಾಯಶಾಸ್ತ್ರವು ಅನುಮತಿಸುತ್ತದೆ. ಆದರೂ, ಅಧಿಕ ಸಾಂದ್ರತೆಯ ಲೋಹಗಳು, ಕ್ರಿಮಿ ನಾಶಕಗಳು ಮತ್ತು ಕೀಟ ನಾಶಕಗಳು ಆ ಪದಾರ್ಥಗಳಲ್ಲಿ ಒಳಗೂಡಿವೆ. ಕೆಲವು ಪದಾರ್ಥಗಳು ಎಷ್ಟು ವಿಷಭರಿತವಾಗಿವೆಯೆಂದರೆ, ಅವುಗಳನ್ನು ಕಚಡಾಭರ್ತಿ ಪ್ರದೇಶದಲ್ಲಿ ರಾಶಿಹಾಕುವುದೂ ನ್ಯಾಯ ವಿರುದ್ಧವಾದದ್ದಾಗಿದೆ. ಸಿಗರೇಟ್ ಹೊಗೆಯ ಆ ಮನೋಹರ ಸುಳಿಯು, ಆ್ಯಸಿಟೋನ್, ಆರ್ಸನಿಕ್, ಬ್ಯೂಟೇನ್, ಕಾರ್ಬನ್ ಮಾನಾಕ್ಸೈಡ್, ಮತ್ತು ಸಯನೈಡ್ಗಳನ್ನು ಒಳಗೊಂಡು, ಸುಮಾರು 4,000 ವಸ್ತುಗಳನ್ನು ಹೊಂದಿರುತ್ತದೆ. ಧೂಮಪಾನಿಗಳ ಮತ್ತು ಹೊಗೆಯನ್ನು ಸೇವಿಸುವ ಇತರ ಜನರ ಶ್ವಾಸಕೋಶಗಳು, ಕಡಿಮೆಪಕ್ಷ 43 ವಿದಿತ ಕ್ಯಾನ್ಸರ್ ಉಂಟುಮಾಡುವ ವಸ್ತುಗಳಿಗೆ ಒಡ್ಡಲ್ಪಡುತ್ತವೆ.
[ಪುಟ 6 ರಲ್ಲಿರುವ ಚೌಕ]
ಧೂಮಪಾನ ಮಾಡದವರು ಅಪಾಯದಲ್ಲಿದ್ದಾರೆ
ಅತಿಯಾದ ಧೂಮಪಾನಿಗಳೊಂದಿಗೆ ನೀವು ಜೀವನ, ಕೆಲಸ, ಅಥವಾ ಪ್ರಯಾಣವನ್ನು ಮಾಡುತ್ತೀರೊ? ಹಾಗಿರುವಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದ್ರೋಗವು ಬರುವ ಅಧಿಕವಾದ ಅಪಾಯದಲ್ಲಿ ನೀವಿರಬಹುದು. ಪರಿಸರೀಯ ಹೊಗೆಸೊಪ್ಪಿನ ಹೊಗೆಯು (ಇಟಿಎಸ್) ಎ ಗುಂಪಿನ ಕ್ಯಾನ್ಸರ್ಜನಕವಾಗಿದ್ದು, ಅತ್ಯಂತ ಅಪಾಯಕಾರಿಯಾಗಿದೆಯೆಂದು ಅಮೆರಿಕದ ಪರಿಸರೀಯ ಸಂರಕ್ಷಣಾ ಏಜೆನ್ಸಿಯ (ಇಪಿಎ) 1993ರ ಅಧ್ಯಯನವೊಂದು ಮುಕ್ತಾಯಗೊಳಿಸಿತು. ಸಿಗರೇಟ್ಗಳ ಕೊನೆಯಿಂದ ಆವರ್ತ ಹೊಗೆಯನ್ನು ಹಾಗೂ ಹೊರಬಿಟ್ಟಂತಹ ಹೊಗೆಯನ್ನು ಅಪ್ರತ್ಯಕ್ಷವಾಗಿ ಸೂಚಿಸುವ 30 ಅಧ್ಯಯನಗಳ ಫಲಿತಾಂಶಗಳನ್ನು, ಆ ಬಹಳ ದೊಡ್ಡ ವರದಿಯು ವಿಶ್ಲೇಷಿಸಿತು.
ಅಮೆರಿಕದಲ್ಲಿ ಪ್ರತಿ ವರ್ಷ ಸಂಭವಿಸುವ ಶ್ವಾಸಕೋಶದ ಕ್ಯಾನ್ಸರ್ನ 3,000 ಮರಣಗಳಿಗಾಗಿ, ಇಪಿಎ ಪರಿಸರೀಯ ಹೊಗೆಸೊಪ್ಪಿನ ಹೊಗೆಯನ್ನು ಆರೋಪಿಸುತ್ತದೆ. ಜೀವನಾದ್ಯಂತ ಧೂಮಪಾನ ಮಾಡಿರದ ಜನರಿಗಿಂತಲೂ, ಎಂದೂ ಧೂಮಪಾನ ಮಾಡಿರದಿದ್ದರೂ ಇಟಿಎಸ್ಗೆ ಒಡ್ಡಲ್ಪಟ್ಟಿರುವ ಸ್ತ್ರೀಯರಿಗೆ, ಶ್ವಾಸಕೋಶದ ಕ್ಯಾನ್ಸರನ್ನು ವಿಕಸಿಸಿಕೊಳ್ಳುವ ಅಪಾಯವು 30 ಪ್ರತಿಶತ ಅತ್ಯಧಿಕವಾಗಿದೆಯೆಂದು, 1994ರ ಜೂನ್ನಲ್ಲಿ ಅಮೆರಿಕದ ವೈದ್ಯಕೀಯ ಸಂಘವು, ತಾನು ಪ್ರಕಾಶಿಸಿದ ಅಧ್ಯಯನದಿಂದ ಈ ತೀರ್ಮಾನಗಳನ್ನು ಪುಷ್ಟೀಕರಿಸಿತು.
ಎಳೆಯ ಮಕ್ಕಳಿಗೆ, ಹೊಗೆಗೆ ಒಡ್ಡಿಕೊಳ್ಳುವುದು, ವಾರ್ಷಿಕವಾಗಿ ನ್ಯುಮೋನಿಯ (ಶ್ವಾಸಕೋಶಗಳ ಉರಿಯೂತ) ಮತ್ತು ಬ್ರಾಂಕೈಟಿಸ್ (ಶ್ವಾಸನಾಳಗಳ ಉರಿಯೂತ)ನ 1,50,000ದಿಂದ 3,00,000 ರೋಗಿಗಳಲ್ಲಿ ಫಲಿಸುತ್ತದೆ. ಅಮೆರಿಕದಲ್ಲಿ ಪ್ರತಿ ವರ್ಷ ಹೊಗೆಯು 2,00,000ದಿಂದ 10,00,000 ಮಕ್ಕಳಿಗೆ ಉಬ್ಬಸ ರೋಗಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ.
ಇಟಿಎಸ್ನಿಂದ ಉಂಟುಮಾಡಲ್ಪಡುವ ಹೃದಯ ಮತ್ತು ರಕ್ತನಾಳದ ರೋಗಗಳಿಂದ, ವರ್ಷವೊಂದಕ್ಕೆ 40,000ದಷ್ಟು ದೊಡ್ಡ ಸಂಖ್ಯೆಯ ಮರಣಗಳು ಸಂಭವಿಸುತ್ತವೆಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಅಂದಾಜುಮಾಡುತ್ತದೆ.
[ಪುಟ 8 ರಲ್ಲಿರುವ ಚಿತ್ರಗಳು]
ಏಷಿಯದ ಒಬ್ಬ ಸೊಬಗಿನ ರೂಪದರ್ಶಿ ಮತ್ತು ಗುರಿಹಲಗೆಗಳು