ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 2/8 ಪು. 12-13
  • ಕಾಡುಗಳಿಗೆ ಒಂದು ಭವಿಷ್ಯವಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಾಡುಗಳಿಗೆ ಒಂದು ಭವಿಷ್ಯವಿದೆಯೇ?
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪರಿಸರವಾದಿಗಳು ವ್ಯತ್ಯಾಸವನ್ನುಂಟುಮಾಡಾರೇ?
  • ಸಮಸ್ಯೆಯ ಬುಡ
  • ಒಂದು ಕ್ಷಣದಲ್ಲಿ ಕಣ್ಮರೆ!
    ಎಚ್ಚರ!—1991
  • ಕಾಡು
    ಎಚ್ಚರ!—2023
  • ಮಳೆ ಕಾಡುಗಳನ್ನು ಏಕೆ ರಕ್ಷಿಸಬೇಕು?
    ಎಚ್ಚರ!—1991
  • ಮಳೆ ಕಾಡುಗಳನ್ನು ಯಾರು ಕೊಲ್ಲುತ್ತಿದ್ದಾರೆ?
    ಎಚ್ಚರ!—1991
ಎಚ್ಚರ!—1991
g91 2/8 ಪು. 12-13

ಕಾಡುಗಳಿಗೆ ಒಂದು ಭವಿಷ್ಯವಿದೆಯೇ?

ದಕ್ಷಿಣ ಶಾಂತಿ ಸಾಗರದ ಈಸ್ಟರ್‌ ದ್ವೀಪದ ಹುಲ್ಲು ಬೆಳೆದಿರುವ ಬೆಟ್ಟದ ಬದಿಗಳಲ್ಲಿ ಕಲ್ಲಿನಿಂದ ಮಾಡಿದ ಭಾರೀ ತಲೆಗಳು ಶೂನ್ಯದೃಷ್ಟಿಯಿಂದ ಸಮುದ್ರವನ್ನು ನೋಡುತ್ತವೆ. ಇವುಗಳನ್ನು ರಚಿಸಿದ ಜನರು ಶತಕಗಳ ಹಿಂದೆಯೇ ಅವನತಿ ಹೊಂದಿ ಹೋಗಿದ್ದಾರೆ. ಪಶ್ಚಿಮ ಯುನೊಯಿಟೆಡ್‌ ಸ್ಟೇಟ್ಸ್‌ನಲ್ಲಿ, ನಿರ್ಜನ ಬಂಜರು ಭೂಮಿಗಳಲ್ಲಿರುವ ಪ್ರಾಚೀನ ಕಟ್ಟಡಗಳ ಅವಶೇಷಗಳು ಬಿಳಿಜನರು ಬರುವುದಕ್ಕೆ ಎಷ್ಟೋ ಮುಂಚಿತವಾಗಿ ಕಣ್ಮರೆಯಾದ ಜನರ ಸ್ಮಾರಕವಸ್ತುಗಳಾಗಿವೆ. ನಾಗರಿಕತೆ ಮತ್ತು ವಾಣಿಜ್ಯ ಸಮೃದ್ಧಿಯಾಗಿದ್ದ ಕೆಲವು ಬೈಬಲ್‌ ಪ್ರದೇಶಗಳು ಈಗ ಗಾಳಿಯ ಹೊಡೆತಕ್ಕೆ ಸಿಕ್ಕಿದ ಮರುಭೂಮಿಗಳಾಗಿವೆ. ಏಕೆ?

ಈ ಮೇಲಿನ ಮೂರು ಸಂದರ್ಭಗಳಲ್ಲಿಯೂ ಕಾಡು ಕಡಿತವೇ ಅಂಶಿಕ ಉತ್ತರವಾಗಿರಬಹುದು. ಈ ಜನರು ಕಾಡುಗಳನ್ನು ನಿರ್ಮೂಲ ಮಾಡಿದ ಕಾರಣ ಈ ಪ್ರದೇಶಗಳನ್ನು ಬಿಡಬೇಕಾಯಿತೆಂದು ಕೆಲವು ಪರಿಣತರ ಅಭಿಪ್ರಾಯ. ಮರಗಳಿಲ್ಲದ ಕಾರಣ ಜಮೀನು ಬಂಜರು ಬಿತ್ತು. ಹೀಗೆ ಮನುಷ್ಯನು ಅಲ್ಲಿಂದ ತೊಲಗಿದನು. ಆದರೆ ಇಂದು ಮನುಷ್ಯನು ಇಡೀ ಭೂಗ್ರಹಕ್ಕೆ ಹೀಗೆ ಮಾಡುವ ಬೆದರಿಕೆ ಹಾಕಿದ್ದಾನೆ. ಅವನು ಹಾಗೇ ಮಾಡಾನೇ? ಈ ಕಾರ್ಯಗತಿಯನ್ನು ಯಾವುದಾದರೂ ನಿಲ್ಲಿಸಿತೇ?

ಅನೇಕರು ಪ್ರಯತ್ನಿಸುತ್ತಿದ್ದಾರೆ. ಹಿಮಾಲಯ ಪ್ರದೇಶದಲ್ಲಿ ಮರ ಕಡಿಯುವವರು ಕಡಿಯುವುದನ್ನು ನಿಲ್ಲಿಸುವಂತಹ ಅಂತಿಮ ಪ್ರಯತ್ನ ಮಾಡುತ್ತಾ ಸ್ತ್ರೀಯರು ಮರಗಳನ್ನು ಅಪ್ಪಿ ಹಿಡಿದು ಕೊಂಡರೆಂದು ವರದಿಯಾಗಿದೆ. ಮಲೇಷ್ಯಾದಲ್ಲಿ, ಮರ ಕಡಿಯುವವರು ತಮ್ಮ ದೊಡ್ಡ ಯಂತ್ರಗಳೊಂದಿಗೆ ಬರುವುದನ್ನು ತಡೆಯಲು ಅಲ್ಲಿಯ ಕಾಡು ನಿವಾಸಿಗಳು ಮಾನವ ಸರಪಣಿಯನ್ನು ರಚಿಸಿದರು.

ಮಳೆ ಅರಣ್ಯಗಳಿಂದ ಜೀವನೋಪಾಯ ಮಾಡುವ 20 ಕೋಟಿ ಜನರಿಗೆ ಈ ವಿಪತ್ತಿನಲ್ಲಿ ತೀರಾ ವೈಯಕ್ತಿಕ ಪರಿಣಾಮವೇ. ನಾಗರಿಕತೆ ಮುಂದೆ ಹೆಜ್ಜೆ ಇಡುವಾಗ ಮೂಲ ನಿವಾಸಿಗಳು ಹೆಚ್ಚು ಆಳವಾಗಿ ಕಾಡಿನೊಳಗೆ ಹಿಂದೆ ಸರಿಯುತ್ತಾರೆ. ಕೆಲವು ಸಲ ಹೀಗೆ ಹಿಂದೆ ಸರಿಯುವಾಗ ಆ ಪಕ್ಕದಿಂದ ಮುಂದೆ ಬರುತ್ತಿರುವ ವಲಸೆಗಾರರನ್ನು ಅವರು ಭೇಟಿಯಾಗುತ್ತಾರೆ. ಅನೇಕ ಕಾಡು ನಿವಾಸಿಗಳ ಕುಲಗಳು ಹೊರಗಿನಿಂದ ಬರುವವರು ತರುವ ರೋಗಗಳಿಂದ ನಿರ್ಮೂಲವಾಗುತ್ತವೆ. ಇತರರು, ಹೊರ ಲೋಕವನ್ನು ಹೊಂದಿಕೊಳ್ಳುವಂತೆ ಬಲಾತ್ಕರಿಸಲ್ಪಟ್ಟು ಅಭಿಮಾನ ತೊರೆದ, ದುರ್ವ್ಯಸನಿಗಳಾದ ಬಡ ನಗರವಾಸಿಗಳಾಗುತ್ತಾರೆ. ಆದರೆ ಲೋಕ ಅವರ ಪೇಚಾಟಕ್ಕೆ ಈಗ ಎಚ್ಚತ್ತಿದೆ. ಪರಿಸರವಾದ ಮನಸ್ಸು ಈಗ ಭೂಗೋಲದ ಮೇಲೆ ಬೀಸುತ್ತಿದೆ.

ಪರಿಸರವಾದಿಗಳು ವ್ಯತ್ಯಾಸವನ್ನುಂಟುಮಾಡಾರೇ?

“ಲೋಕದ ಉಷ್ಣ ವಲಯದ ಕಾಡುಗಳನ್ನು ಉಳಿಸಲು ಜ್ಞಾನ ಮತ್ತು ತಾಂತ್ರಿಕ ವಿಜ್ಞಾನ ಇವೆರಡೂ ಇವೆ” ಎಂದು ಹೇಳುತ್ತಾ ಉಷ್ಣ ವಲಯದ ಕಾಡುಗಳನ್ನು ರಕ್ಷಿಸುವುದು ಎಂಬ ಇಂಗ್ಲಿಷ್‌ ಪುಸ್ತಕ ತನ್ನ ಹೇಳಿಕೆಯನ್ನು ಆರಂಭಿಸುತ್ತದೆ. ಇದು ಸತ್ಯವೆಂಬುದನ್ನು ಲೋಕದಾದ್ಯಂತ ವನಪ್ರದೇಶಗಳು ತೋರಿಸಿವೆ. ಕೋಸ್ಟರಿಕದ ಗುವಾಗ್‌ಕಾಸ್ಟ್‌ ನೇಷನಲ್‌ ಪಾರ್ಕ್‌, ಕಾಡುಗಳ ವಿಸ್ತಾರ ಪ್ರದೇಶಗಳನ್ನು ಪುನಃ ನೆಡುವ ಕಾರ್ಯದಲ್ಲಿ ನಿರತವಾಗಿದೆ. ಕೆನ್ಯ, ಭಾರತ, ಹೈಟಿ ಮತ್ತು ಚೀನಾಗಳಂತಹ ದೇಶಗಳಲ್ಲಿ ಕೋಟ್ಯಂತರ ಮರಗಳನ್ನು ನೆಡಲಾಗಿದೆ. ಆದರೆ ಮರಗಳನ್ನು ನೆಡುವುದಕ್ಕೂ ಕಾಡುಗಳನ್ನು ಪುನಃಸ್ಥಾಪಿಸುವುದಕ್ಕೂ ವ್ಯತ್ಯಾಸವಿದೆ.

ಹಲವು ಸಲ “ಅರಣ್ಯ ಪೂರ್ವಸ್ಥಿತೀಕರಣ”ವೆಂದರೆ ಒಂದೇ ಜಾತಿಯ ಮರಗಳನ್ನು ಆ ಬಳಿಕ ಕಡಿಯಲಿಕ್ಕಾಗಿ ವ್ಯಾಪಾರದ ಉದ್ದೇಶದಿಂದ ನೆಡುವುದೆಂದಾಗಿದೆ. ಇದು ಮಳೆ ಕಾಡಿನ ಜಟಿಲ ಪರಿಸರ ವ್ಯವಸ್ಥೆಗೆ ಸಮಾನವಲ್ಲ. ಅಷ್ಟೇ ಅಲ್ಲ, ತೇವವಿರುವ ಉಷ್ಣ ವಲಯದ ಕಾಡುಗಳನ್ನು ಅದರ ಮೂಲ ಜಟಿಲತೆಯಂತೆ ಪುನಃ ಸ್ಥಾಪಿಸಲು ಸಾಧ್ಯವೇ ಇಲ್ಲವೆಂದು ಹಲವರ ಹೇಳಿಕೆ. ಆದುದರಿಂದ, ಪೂರ್ವಸ್ಥಿತೀಕರಣಕ್ಕಿಂತ ಅವುಗಳ ರಕ್ಷಣೆಯೇ ಹೆಚ್ಚು ಉತ್ತಮವೆಂದು ಅನೇಕ ಪರಿಸರವಾದಿಗಳು ಹೇಳುವುದರಲ್ಲಿ ಆಶ್ಚರ್ಯವಿಲ್ಲ.

ಆದರೆ ಸಂರಕ್ಷಣೆ ಅನಿಸುವಷ್ಟು ಸುಲಭವಲ್ಲ. ಕಾಡು ಪ್ರದೇಶ ತೀರಾ ಚಿಕ್ಕದಾಗಿರುವಲ್ಲಿ ಅದು ಉಳಿಯಲಾರದು. ಜಗತ್ತಿನ ಮಳೆ ಅರಣ್ಯಗಳು ತಮ್ಮ ವೈವಿಧ್ಯತೆಯ ಸಂಪತ್ತನ್ನು ಉಳಿಸ ಬೇಕಾದರೆ ಅವುಗಳಲ್ಲಿ 10ರಿಂದ 20 ಸೇಕಡಾವನ್ನು ಕಾದಿರಿಸಲೇ ಬೇಕು ಎಂದು ಕೆಲವು ಪರಿಸರವಾದಿಗಳು ಸೂಚಿಸುತ್ತಾರೆ. ಆದರೆ ಈಗ ಆಫ್ರಿಕಾದಲ್ಲಿ ಕೇವಲ ಮೂರು ಸೇಕಡಾ ಮಳೆ ಅರಣ್ಯಗಳು ರಕ್ಷಿಸಲ್ಪಡುತ್ತಿವೆ. ಆಗ್ನೇಯ ಏಷ್ಯಾದಲ್ಲಿ ಇದು 2 ಸೇಕಡಾ ಮತ್ತು ದಕ್ಷಿಣ ಅಮೆರಿಕದಲ್ಲಿ 1 ಸೇಕಡಾ.

ಮತ್ತು ಇವುಗಳಲ್ಲಿ ಕೆಲವು ಪ್ರದೇಶಗಳು ರಕ್ಷಿಸಲ್ಪಡುತ್ತಿರುವುದು ಕೇವಲ ದಾಖಲೆಗಳಲ್ಲಿ ಮಾತ್ರ. ವನ ಮತ್ತು ಅಭಯಾರಣ್ಯಗಳನ್ನು ನ್ಯೂನ ತೆರದಲ್ಲಿ ಯೋಜಿಸುವಲ್ಲಿ ಅಥವಾ ನಿರ್ವಹಿಸುವಲ್ಲಿ ಅಥವಾ ಅಧಿಕಾರಿಗಳೇ ಅದಕ್ಕೆ ಕಾದಿರಿಸಲ್ಪಟ್ಟ ಹಣವನ್ನು ತಿನ್ನುವಲ್ಲಿ ಅಂಥ ಅರಣ್ಯಗಳು ನಿಷ್ಫಲಗೊಳ್ಳುತ್ತವೆ. ಕೆಲವರು ಗುಪ್ತ ರೀತಿಯಲ್ಲಿ ಮರ ಕಡಿಯುವ ಅನುಮತಿ ಕೊಟ್ಟೂ ಹಣ ಗಳಿಸುತ್ತಾರೆ. ಆಳುಬಲವೂ ದುರ್ಲಭ. ಆಮೆಜೊನ್‌ ಪ್ರದೇಶದಲ್ಲಿ ಫ್ರಾನ್ಸಿನ ಗಾತ್ರದಷ್ಟು ಮಳೆಕಾಡನ್ನು ಪಾಲಿಸಲು ಒಬ್ಬನೇ ವನರಕ್ಷಕನನ್ನು ನೇಮಿಸಲಾಯಿತು.

ಮಣ್ಣು ಖಾಲಿ ಮಾಡದೆ ಹೇಗೆ ಬೇಸಾಯ ಮಾಡಬಹುದೆಂದು ಬೇಸಾಯಗಾರರಿಗೆ ಕಲಿಸಲ್ಪಡಬೇಕೆಂದೂ ಪರಿಸರವಾದಿಗಳು ಪ್ರೋತ್ಸಾಹಿಸುತ್ತಾರೆ. ಹೀಗೆ ಮಾಡುವುದಾದರೆ ಅವರು ಒಂದು ಜಮೀನನ್ನು ಬಿಟ್ಟು ಹೋಗಿ ಇನ್ನೂ ಹೆಚ್ಚು ಕಾಡನ್ನು ಕಡಿಯುವ ಬಲಾತ್ಕಾರಕ್ಕೊಳಗಾಗುವುದಿಲ್ಲ. ಕೆಲವರು ಗದ್ದೆಯಲ್ಲಿ ಅನೇಕ ತರಹದ ಉತ್ಪತ್ತಿಯನ್ನು ಬೆಳೆಸಲು ಪ್ರಯತ್ನಿಸಿದ್ದಾರೆ. ಇದು ಒಂದೇ ಜಾತಿಯ ಪೈರನ್ನು ತಿನ್ನುವ ಕೀಟಗಳನ್ನು ನಿರುತ್ತೇಜಿಸುತ್ತದೆ. ಫಲವೃಕ್ಷಗಳು ಉಷ್ಣ ವಲಯದ ಮಳೆಯಿಂದ ಮಣ್ಣನ್ನು ರಕ್ಷಿಸಬಲ್ಲವು. ಇತರರು ಹಳೆಯ ಪದ್ಧತಿಯೊಂದನ್ನು ಪುನರುಜ್ಜೀವಿಸಿದ್ದಾರೆ. ಅವರು ಸಣ್ಣ ತೋಟಗಳ ಸುತ್ತಲೂ ಕಾಲುವೆಗಳನ್ನು ತೋಡಿ ಆ ಕಾಲುವೆಗಳಿಂದ ಮಣ್ಣನ್ನೂ ಪಾಚಿಯನ್ನೂ ತೆಗೆದು ಬೆಳೆಗೆ ಪೋಷಕ ಪದಾರ್ಥವಾಗಿ ಉಪಯೋಗಿಸುತ್ತಾರೆ. ಹೆಚ್ಚಿಗೆಯ ಆಹಾರಕ್ಕಾಗಿ ಆ ಕಾಲುವೆಗಳಲ್ಲಿ ಮೀನುಗಳನ್ನೂ ಬೆಳೆಯಿಸಬಹುದು. ಪ್ರಯೋಗಗಳಲ್ಲಿ ಈ ವಿಧಾನಗಳು ಸಾಕಷ್ಟು ಸಾಫಲ್ಯ ಪಡೆದಿವೆ.

ಆದರೆ ಜನರಿಗೆ ಇದು “ಹೇಗೆ” ಎಂದು ಕಲಿಸಲು ಸಮಯ, ಹಣ ಮತ್ತು ನೈಪುಣ್ಯ ಬೇಕು. ಉಷ್ಣ ವಲಯದ ರಾಷ್ಟ್ರಗಳಲ್ಲಿ ಅನೇಕ ವೇಳೆ ಕಠಿಣ ಆರ್ಥಿಕ ಸಮಸ್ಯೆಗಳಿರುವವುದರಿಂದ ಈ ತೆರನಾದ ದೀರ್ಘಾವಧಿಯ ಬಂಡವಾಳವನ್ನು ಹಾಕಲಾಗುವುದಿಲ್ಲ. ಮತ್ತು ತಾಂತ್ರಿಕ ನೈಪುಣ್ಯ ವ್ಯಾಪಕವಾಗಿದ್ದರೂ ಅದು ಸಮಸ್ಯೆಯನ್ನು ಬಗೆಹರಿಸದು. ಉಷ್ಣ ವಲಯದ ಕಾಡುಗಳನ್ನು ರಕ್ಷಿಸುವುದು ಎಂಬ ಇಂಗ್ಲಿಷ್‌ ಪುಸ್ತಕದಲ್ಲಿ ಮೈಕಲ್‌ ಎಚ್‌. ರಾಬಿನ್ಸನ್‌ ಬರೆಯುವಂತೆ “ಮಳೆಕಾಡುಗಳು ನಾಶವಾಗುತ್ತಿರುವುದು ಬುದ್ಧಿಗೇಡಿತನ ಅಥವಾ ಮೂರ್ಖತನದಿಂದಲ್ಲ. ಅಧಿಕಾಂಶ ಅದು ಬಡತನ ಮತ್ತು ದುರಾಶೆಯಿಂದ ನಾಶವಾಗುತ್ತಿದೆ.”

ಸಮಸ್ಯೆಯ ಬುಡ

ಬಡತನ ಮತ್ತು ದುರಾಶೆ. ಕಾಡು ಕಡಿತದ ವಿಪತ್ತಿನ ಬೇರುಗಳು ಮಾನವ ಸಮಾಜರಚನೆಯೊಳಗೆ ಆಳವಾಗಿ ಹೊಕ್ಕಿವೆ. ಅವು ಉಷ್ಣ ವಲಯದ ತೆಳ್ಳಗಿನ ಮಳೆಕಾಡುಗಳ ಮರಗಳು ಬೇರು ಬಿಟ್ಟಿರುವುದಕ್ಕಿಂತಲೂ ಹೆಚ್ಚು ಆಳವಾಗಿ ಹೋಗಿವೆ. ಈ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯುವ ಸಾಮರ್ಥ್ಯ ಮಾನವ ಸಂತತಿಗಿದೆಯೇ?

ನೆದರ್ಲೆಂಡ್ಸ್‌ನ ದ ಹೇಗ್‌ನಲ್ಲಿ ನಡೆದು 24 ರಾಷ್ಟ್ರಗಳ ಶೃಂಗ ಸಭೆ, ಕಳೆದ ವರ್ಷ, ಸಂಯುಕ್ತ ರಾಷ್ಟ್ರ ಸಂಘದೊಳಗೆ ಗ್ಲೋಬ್‌ ಎಂಬ ಹೆಸರುಳ್ಳ ಒಂದು ಹೊಸ ಅಧಿಕಾರ ನಿಯೋಗವನ್ನು ನಿರ್ಮಿಸಬೇಕೆಂದು ಪ್ರಸ್ತಾಪಿಸಿತು. ಲಂಡನ್ನಿನ ಫೈನಾನ್ಸಿಯಲ್‌ ಟೈಮ್ಸ್‌ ಪತ್ರಿಕೆಗನುಸಾರ, ಈ ಸಂಘಕ್ಕೆ “ಪರಿಸರ ಮಟ್ಟಗಳನ್ನು ಸ್ಥಾಪಿಸಿ ಜಾರಿಗೆ ತರಲು ಅಭೂತಪೂರ್ವ ಅಧಿಕಾರ ವ್ಯಾಪ್ತಿ” ಇರುವುದು. ಈ ಗ್ಲೋಬ್‌ ಸಂಘಕ್ಕೆ ನಿಜ ಅಧಿಕಾರ ಸಿಕ್ಕಬೇಕಾದರೆ ರಾಷ್ಟ್ರಗಳು ತಮ್ಮ ಆದರದ ರಾಷ್ಟ್ರೀಯ ಪ್ರಭುತ್ವದಲ್ಲಿ ಕೆಲವನ್ನು ತ್ಯಜಿಸಬೇಕಾಗಿ ಬಂದರೂ ಇಂಥ ಒಂದು ಸಂಘ ಒಂದು ದಿನ ಹುಟ್ಟಿ ಬರುವುದು ಅನಿವಾರ್ಯವೆಂದು ಕೆಲವರ ಹೇಳಿಕೆ. ಇಂಥ ಭೂವ್ಯಾಪಕ ಸಮಸ್ಯೆಗಳನ್ನು ಒಂದು ದಿನ ಐಕ್ಯವುಳ್ಳ ಭೂವ್ಯಾಪಕ ನಿಯೋಗ ಮಾತ್ರ ಪರಿಹರಿಸ ಬಲ್ಲದು.

ಇದು ಒಪ್ಪತಕ್ಕ ವಿಷಯ. ಆದರೆ ಯಾವ ಮಾನವ ಸರಕಾರ ಅಥವಾ ಉಪಕರಣ ಈ ಲೋಭ ಮತ್ತು ದಾರಿದ್ರ್ಯವನ್ನು ನಿವಾರಿಸ ಬಲ್ಲದು? ಇದು ವರೆಗೆ ಯಾವ ಸರಕಾರ ಹಾಗೆ ಮಾಡಿದೆ? ಹೆಚ್ಚಾಗಿ ಈ ಸರಕಾರಗಳು ಲೋಭದಲ್ಲಿಯೇ ಆಧರಿತವಾಗಿರುವುದರಿಂದ ಅವು ದಾರಿದ್ರ್ಯವನ್ನು ಮುಂದುವರಿಸುತ್ತವೆ. ಹೌದು, ಕಾಡು ಕಡಿತದ ವಿಪತ್ತನ್ನು ಪರಿಹರಿಸಲು ಮಾನವ ಸಂಘಕ್ಕಾಗಿ ನಾವು ಕಾಯುವಲ್ಲಿ ಕಾಡುಗಳಿಗೂ ಭವಿಷ್ಯವಿಲ್ಲ, ಮಾನವರಿಗೂ ಭವಿಷ್ಯವಿಲ್ಲ.

ಆದರೆ ಇದನ್ನು ಪರಿಗಣಿಸಿರಿ. ಕಾಡುಗಳು ಬುದ್ಧಿಶಕ್ತಿಯ ವ್ಯಕ್ತಿಯಿಂದ ರಚಿಸಲ್ಪಟ್ಟಿವೆಯೆಂಬುದಕ್ಕೆ ಪುರಾವೆಯನ್ನು ಒದಗಿಸುವುದಿಲ್ಲವೇ? ಹೌದು! ಅವುಗಳ ಬೇರುಗಳಿಂದ ಹಿಡಿದು, ಎಲೆಗಳ ತನಕ ಅವುಗಳು ಕುಶಲಿಯಾದ ವಾಸ್ತುಶಿಲ್ಪಿಯೊಬ್ಬನಿಂದ ಮಾಡಲ್ಪಟ್ಟಿವೆಯೆಂದು ಸಾರಿ ಹೇಳುತ್ತವೆ.

ಹಾಗಾದರೆ ಈ ಮಹಾ ವಾಸ್ತುಶಿಲ್ಪಿ, ಮನುಷ್ಯನು ಮಳೆ ಕಾಡುಗಳನ್ನು ನಾಶ ಮಾಡಿ ಭೂಮಿಯನ್ನು ಧ್ವಂಸ ಮಾಡುವಂತೆ ಬಿಟ್ಟಾನೇ? ಬೈಬಲಿನ ಒಂದು ಪ್ರಧಾನ ಪ್ರವಾದನೆಯು ಈ ಪ್ರಶ್ನೆಗೆ ನೇರವಾಗಿ ಉತ್ತರ ಕೊಡುತ್ತದೆ. ಅಲ್ಲಿ ಹೇಳುವುದು: “ಜನಾಂಗಗಳು ಕೋಪಿಸಿ ಕೊಂಡವು. ನಿನ್ನ (ದೇವರ) ಕೋಪವೂ ಪ್ರಕಟವಾಯಿತು. . . . ಸಮಯ ಬಂದದೆ; . . . ಲೋಕ ನಾಶಕರನ್ನು ನಾಶ ಮಾಡುವಿ.”—ಪ್ರಕಟನೆ 11:18.

ಈ ಪ್ರವಾದನೆಯಲ್ಲಿ ಎರಡು ಗಮನಾರ್ಹ ವಿಷಯಗಳಿವೆ. ಒಂದನೆಯದಾಗಿ, ಮನುಷ್ಯನು ಇಡೀ ಭೂಮಿಯನ್ನು ನಾಶ ಮಾಡಸಾಧ್ಯವಿರುವ ಸಮಯವನ್ನು ಅದು ಸೂಚಿಸುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಆ ಮಾತುಗಳು ಬರೆಯಲ್ಪಟ್ಟಾಗ ಮನುಷ್ಯನು ಹೇಗೆ ಚಂದ್ರಲೋಕಕ್ಕೆ ಹಾರಿ ಹೋಗ ಸಾಧ್ಯವಿರಲಿಲ್ಲವೋ ಹಾಗೆಯೇ ಭೂಮಿಯನ್ನು ನಾಶ ಮಾಡುವ ಸಾಧ್ಯತೆಯೂ ಇರಲಿಲ್ಲ. ಆದರೆ ಇಂದು ಅವನು ಎರಡು ವಿಷಯಗಳನ್ನೂ ಮಾಡುತ್ತಿದ್ದಾನೆ. ಎರಡನೆಯದಾಗಿ, ಮನುಷ್ಯನು ಭೂಮಿಯನ್ನು ಪೂರ್ತಿ ಧ್ವಂಸ ಮಾಡಿಯಾನೋ ಎಂಬ ಪ್ರಶ್ನೆಗೆ ಪ್ರವಾದನೆಯು ಇಲ್ಲವೆಂದು ಗಟ್ಟಿಯಾಗಿ ಘೋಷಿಸುತ್ತದೆ!

ದೇವರು ಭೂಮಿಯ ಜಾಗ್ರತೆ ವಹಿಸಿ ಅದನ್ನು ವ್ಯವಸಾಯ ಮಾಡಲು ಸೃಷ್ಟಿಸಿದನೇ ಹೊರತು ಬರಿದು ಮಾಡಲಿಕ್ಕಲ್ಲ. ಪ್ರಾಚೀನ ಇಸ್ರಾಯೇಲಿನಲ್ಲಿ, ಜನರು ವಾಗ್ದಾನ ದೇಶವನ್ನು ಜಯಿಸಿದಾಗ ಕಾಡು ಕಡಿತದ ಮಿತಿಯನ್ನು ದೇವರು ತನ್ನ ಜನರಿಗೆ ತಿಳಿಸಿದನು. (ಧರ್ಮೋಪದೇಶಕಾಂಡ 20:19, 20) ಸಮೀಪ ಭವಿಷ್ಯದಲ್ಲಿ ಸರ್ವ ಮಾನವ ಜಾತಿ ತನ್ನ ಪರಿಸರಕ್ಕೆ ಹೊಂದಿಕೆಯಾಗಿ ಜೀವಿಸುವುದೆಂದು ಆತನು ವಾಗ್ದಾನಿಸುತ್ತಾನೆ.—1 ಯೋಹಾನ 2:17; ಯೆರೆಮೀಯ 10:10-12.

ಬೈಬಲಾದರೋ ನಿಜ ನಿರೀಕ್ಷೆಯನ್ನು ನೀಡುತ್ತದೆ. ಮನುಷ್ಯನು ಭೂಮಿಯನ್ನು ಮರುಭೂಮಿಯಾಗಿ ನೆಲಸಮ ಮಾಡುವ ಬದಲಿಗೆ ಪ್ರಮೋದವನವಾಗಿ ಮಾರ್ಪಡಿಸುವ ಸಮಯದ, ಹಾಳು ಮಾಡುವ ಬದಲಿಗೆ ಸುಸ್ಥಿತಿಗೆ ತರುವ ಸಮಯದ, ಕ್ಷಣಿಕ ಸಂಪಾದನೆಗಾಗಿ ಲೋಭದಿಂದ ಅದನ್ನು ಬರಿದು ಮಾಡುವ ಬದಲಿಗೆ ದೂರದೃಷ್ಟಿಯಿಂದ ಅದರ ಜಾಗ್ರತೆ ವಹಿಸುವ ಸಮಯದ ನಿರೀಕ್ಷೆಯನ್ನು ಅದು ನೀಡುತ್ತದೆ. ಕಾಡುಗಳಿಗಾದರೋ ಉತ್ತಮ ಭವಿಷ್ಯವಿದೆ, ಆದರೆ ಅವನ್ನು ಮತ್ತು ಭೂಮಿಯನ್ನು ಧ್ವಂಸ ಮಾಡುವ ಭ್ರಷ್ಟ ವ್ಯವಸ್ಥೆಗಾದರೋ ಭವಿಷ್ಯವು ಶೂನ್ಯವೇ. (g90 3/22)

[ಪುಟ 13 ರಲ್ಲಿರುವಚಿತ್ರ]

ಇಲ್ಲಿ ಈಸ್ಟರ್‌ ದ್ವೀಪದ ಮೇಲೆ ನಾಗರಿಕತೆಯೊಂದು ಕಣ್ಮರೆಯಾಗಲು ಕಾಡು ಕಡಿತವು ಕಾರಣವಾಗಿದ್ದಿರಬಹುದು

[ಕೃಪೆ]

H. Armstrong Roberts

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ