Imagination World/stock.adobe.com
ದೇವರ ವಾಕ್ಯದಿಂದ, ಮನೆ ಕಳ್ಕೊಂಡವ್ರಿಗೆ ಭರವಸೆ!
ಪ್ರತಿ ವರ್ಷ ಲಕ್ಷಾಂತರ ಜನ ಮನೆ ಕಳ್ಕೊಳ್ತಾ ಇದ್ದಾರೆ. ತಮ್ಮ ಊರು, ದೇಶ ಬಿಟ್ಟು ಅಲೆಮಾರಿಗಳ ತರ ಜೀವನ ಮಾಡ್ತಿದ್ದಾರೆ. ನೀವು ಇಂಥದ್ದೇ ಪರಿಸ್ಥಿತಿಯಲ್ಲಿ ಇದ್ದೀರಾ? ಹಾಗಾದ್ರೆ ನಿಮಗೆ ಯಾರು ಸಹಾಯ ಮಾಡ್ತಾರೆ? ದೇವರು, ‘ನಾನು ನಿಮಗೆ ಸಹಾಯ ಮಾಡ್ತೀನಿ, ಒಳ್ಳೆ ಭವಿಷ್ಯ ಕೊಡ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. ಅದ್ರ ಬಗ್ಗೆ ನೀವು ಪವಿತ್ರ ಗ್ರಂಥದಿಂದ ಕಲಿಬಹುದು.
“ಮನೆ ಕಳ್ಕೊಂಡವ್ರಿಗೆ ಮತ್ತು ಚದುರಿ ಹೋಗಿರೋರಿಗೆ ನಾವು ಊಟ, ಬಟ್ಟೆ ಮಾತ್ರ ಕೊಟ್ರೆ ಸಾಕಾಗಲ್ಲ. ಅವ್ರಿಗೆ ನಾವು ಭವಿಷ್ಯದ ಬಗ್ಗೆ ಭರವಸೆ ಮಾತುಗಳನ್ನೂ ಹೇಳಬೇಕು”a ಅಂತ ಯುರೋಪಿಯನ್ ಯೂನಿಯನ್ ಕಮಿಷನರ್b ಆಗಿರೋ ಕ್ರಿಸ್ಟೋಸ್ ಸ್ಟೈಲಿನಿಡಿಸ್ ಹೇಳ್ತಾರೆ. ನಾವು ಹೀಗೆ ಮಾಡಿದ್ರೆ, ಅವರು ತಮ್ಮ ಭವಿಷ್ಯನ ಆಸೆಯಿಂದ ಎದುರು ನೋಡ್ತಾರೆ. ಜೊತೆಗೆ ನಾವು ಅವ್ರಿಗೆ ಸಾಂತ್ವನ, ಸಮಾಧಾನ ಆಗೋ ತರನೂ ಮಾತಾಡಬೇಕು. ಆಗ ಅವರು ಆ ಕಷ್ಟದ ಪರಿಸ್ಥಿತಿಯಿಂದ ಹೊರಬರೋಕೆ ಆಗುತ್ತೆ.
“ನನ್ನ ಕುಟುಂಬ ಮತ್ತು ದೇಶನ ನಾನು ಬಿಟ್ಟು ಬರಬೇಕಾಯ್ತು. ನಾನು ಒಬ್ಬಂಟಿಯಾಗಿಬಿಟ್ಟೆ ಅಂತ ಅನಿಸ್ತು. ಭಯ, ನೋವು, ಚಿಂತೆಯಲ್ಲೇ ಮುಳುಗಿ ಹೋಗಿದ್ದೆ.”—ಇಮ್ಯಾನುವೆಲ್, ಹೈಟಿ ದೇಶ.
ನಿಮಗೂ ಇವ್ರ ತರ ಅನಿಸ್ತಿದ್ಯಾ? ನೀವು ಮನೆ ಕಳ್ಕೊಂಡಿದ್ರೆ, ದೇಶ ಬಿಟ್ಟು ದೇಶ ಅಲೆದಾಡ್ತಾ ಇದ್ರೆ ನಿಮಗೂ ಸಾಂತ್ವನ ಮತ್ತು ಭರವಸೆ ತುಂಬೋ ಮಾತುಗಳು ಬೇಕು. ದೇವರ ವಾಕ್ಯವಾದ ಬೈಬಲ್ ನಿಮಗೆ ಆ ಸಹಾಯ ಕೊಡುತ್ತೆ. ನೀವು ಅದನ್ನ ಪಡ್ಕೊಳ್ಳೋಕೆ ಇಷ್ಟಪಡ್ತೀರಾ?
ದೇವರ ವಾಕ್ಯ ಕೊಡೋ ಸಮಾಧಾನ
ಬೈಬಲ್ ಹೇಳೋದು: “ನಿಮ್ಮ ದೇವರಾದ ಯೆಹೋವc . . . ವಿದೇಶಿಯರನ್ನ ಪ್ರೀತಿಸ್ತಾನೆ.”—ಧರ್ಮೋಪದೇಶಕಾಂಡ 10:17, 18.
ಇದ್ರ ಅರ್ಥ: ನೀವು ಒಬ್ಬಂಟಿಯಲ್ಲ. ಬೈಬಲನ್ನ ಯೆಹೋವ ದೇವರೇ ಬರೆಸಿರೋದು. ಆತನಿಗೆ ನಿಮ್ಮ ಪರಿಸ್ಥಿತಿ ಚೆನ್ನಾಗಿ ಅರ್ಥ ಆಗುತ್ತೆ, ನಿಮ್ಮನ್ನ ತುಂಬ ಪ್ರೀತಿಸ್ತಾನೆ. ನೀವು ಚೆನ್ನಾಗಿರಬೇಕು ಅಂತಾನೂ ಆಸೆಪಡ್ತಾನೆ.
ಬೈಬಲ್ ಹೇಳೋದು: “ಯಾರೆಲ್ಲ ಆತನಿಗೆ . . . ಪ್ರಾರ್ಥನೆ ಮಾಡ್ತಾರೋ, ಅವ್ರೆಲ್ಲರಿಗೆ ಯೆಹೋವ [ದೇವರು] ಹತ್ರಾನೇ ಇರ್ತಾನೆ.”—ಕೀರ್ತನೆ 145:18.
ಇದ್ರ ಅರ್ಥ: ನಿಮ್ಮ ಪ್ರಾರ್ಥನೆಯನ್ನ ದೇವರು ಕೇಳ್ತಾನೆ. ನಿಮಗೆ ಶಾಂತಿ ಸಮಾಧಾನ ಕೊಡ್ತಾನೆ. ನಿಮಗಿರೋ ಸಮಸ್ಯೆಯನ್ನ ನಿಭಾಯಿಸೋಕೆ ಬೇಕಾಗಿರೋ ವಿವೇಕನ ಬೈಬಲಿನಿಂದ ಕೊಡ್ತಾನೆ.
ಬೈಬಲ್ ಹೇಳೋದು: “ಸತ್ಯ ದೇವರು ಕೆಟ್ಟದ್ದನ್ನ ಮಾಡೋದೇ ಇಲ್ಲ . . . ಸರ್ವಶಕ್ತ ಅನ್ಯಾಯ ಮಾಡಲ್ಲ ಅನ್ನೋದು ನೂರಕ್ಕೆ ನೂರು ಸತ್ಯ!”—ಯೋಬ 34:10, 12.
ಇದ್ರ ಅರ್ಥ: ದೇವರು ನಿಮ್ಮ ಕಷ್ಟಕ್ಕೆ ಕಾರಣ ಅಲ್ಲ. ಆತನು ನಿಮಗೆ ಶಿಕ್ಷೆ ಕೊಡ್ತಿಲ್ಲ, ನಿಮ್ಮನ್ನ ಪರೀಕ್ಷೆ ಮಾಡಬೇಕು ಅಂತ ಕಷ್ಟನೂ ಕೊಡ್ತಿಲ್ಲ.
ದೇವರ ವಾಕ್ಯ ಕೊಡೋ ಭರವಸೆ
ಭವಿಷ್ಯದಲ್ಲಿ ದೇವರು, ನಮಗೋಸ್ಕರ ಏನೆಲ್ಲಾ ಮಾಡ್ತಾನೆ ಅಂತ ಬೈಬಲ್ ಹೇಳುತ್ತೆ. ಮನೆ ಕಳ್ಕೊಂಡವ್ರಿಗೆ ಈ ಭರವಸೆಯ ಮಾತುಗಳು ತುಂಬ ಸಹಾಯ ಮಾಡಿದೆ. ಅದು ಹೇಗೆ ಅಂತ ನೀವೇ ನೋಡಿ.
ಬೈಬಲ್ ಹೇಳೋದು: “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ.”—ಪ್ರಕಟನೆ 21:4.
ಇದ್ರ ಅರ್ಥ: ನಮ್ಮ ಕಷ್ಟಗಳಿಗೆ ಕೊನೆ ಇದೆ. ಈಗ ನಮ್ಮ ಜೀವನ ಕಷ್ಟಗಳಲ್ಲೇ ಮುಳುಗಿದೆ. ಆದ್ರೆ ಇದನ್ನೆಲ್ಲ ತೆಗೆದುಹಾಕ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ.
“ಇವತ್ತು ನಡಿತಿರೋ ಅನ್ಯಾಯನ, ಕೆಟ್ಟ ವಿಷ್ಯಗಳನ್ನ ತುಂಬ ಬೇಗ ತೆಗೆದುಹಾಕ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ. ಆದ್ರಿಂದ ನಮ್ಮ ಕಷ್ಟಗಳೆಲ್ಲ ಕಣ್ಮರೆಯಾಗೋ ಆ ದಿನ ಹೇಗಿರುತ್ತೆ ಅಂತ ನಾನು ಯೋಚ್ನೆ ಮಾಡ್ತಾ ಇರ್ತೀನಿ.”—ಕಾರ್ಲಾ, ಎಲ್ ಸಾಲ್ವಡಾರ್ ದೇಶ.
ಬೈಬಲ್ ಹೇಳೋದು: “ಆಗ ಹಳೇ ಸಂಗತಿಗಳು ನೆನಪಿಗೆ ಬರಲ್ಲ, ಅವುಗಳನ್ನ ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.”—ಯೆಶಾಯ 65:17.
ಇದ್ರ ಅರ್ಥ: ನೋವಿನ ನೆನಪುಗಳೇ ನಿಮಗೆ ಬರಲ್ಲ. ನಿಮಗೆ ಆದ ತೊಂದ್ರೆ, ಅದ್ರಿಂದ ನೀವು ಪಟ್ಟ ಕಷ್ಟ, ಇದ್ಯಾವುದೂ ನಿಮಗೆ ಯಾವತ್ತೂ ನೆನಪಿಗೆ ಬರದಿರೋ ತರ ‘ನಾನು ನೋಡ್ಕೊಳ್ತೀನಿ’ ಅಂತ ದೇವರು ಮಾತು ಕೊಟ್ಟಿದ್ದಾನೆ.
“ನಮಗಾದ ನೋವು, ನಾವು ಕಳ್ಕೊಂಡ ವಿಷ್ಯ, ಇವೆಲ್ಲ ನಮ್ಮ ನೆನಪಿಗೆ ಬರಲ್ಲ ಅಂತ ಬೈಬಲ್ ಮಾತು ಕೊಡುತ್ತೆ. ಇದ್ರ ಬಗ್ಗೆ ಯೋಚ್ನೆ ಮಾಡೋದ್ರಿಂದ ಈಗ ನನಗಿರೋ ಕಷ್ಟನ ನಿಭಾಯಿಸೋಕೆ ಆಗ್ತಿದೆ. ಯಾಕಂದ್ರೆ ನಮಗಿರೋ ಕಷ್ಟಗಳೆಲ್ಲ ತುಂಬ ಬೇಗ ಇಲ್ಲದೇ ಹೋಗುತ್ತೆ.”—ನಟಾಲ್ಯಾ, ಉಕ್ರೇನ್ ದೇಶ.
ಬೈಬಲ್ ಹೇಳೋದು: “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ . . . ಅದು ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ.”—ದಾನಿಯೇಲ 2:44.
ಇದ್ರ ಅರ್ಥ: ದೇವರ ಸ್ವರ್ಗೀಯ ಸರ್ಕಾರ ಈ ಭೂಮಿನ ಆಳುತ್ತೆ. ಈ ಭೂಮಿಯಲ್ಲಿರೋ ಎಲ್ಲ ಮನುಷ್ಯ ಸರ್ಕಾರಗಳನ್ನ ದೇವರು ತುಂಬ ಬೇಗ ತೆಗೆದುಹಾಕಿ ತನ್ನ ಸರ್ಕಾರವನ್ನ ತರ್ತಾನೆ. ಆ ದೇವರ ಸರ್ಕಾರ ನಿಜ ಶಾಂತಿ, ಭದ್ರತೆ ಮತ್ತು ನ್ಯಾಯವನ್ನ ತರುತ್ತೆ. ಆಗ ಆಹಾರದ ಕೊರತೆನೇ ಇರಲ್ಲ.—ಮೀಕ 4:3, 4.
“ಈಗಿರೋ ದಬ್ಬಾಳಿಕೆ, ಭೇದಭಾವ, ಅನುಮಾನ, ಮೇಲು ಕೀಳು ಅನ್ನೋ ವಿಷ್ಯಗಳೆಲ್ಲ ಸ್ವಲ್ಪ ದಿನ ಅಷ್ಟೇ. ಯೆಹೋವ ದೇವರ ಸರ್ಕಾರ ಇದೆಲ್ಲದಕ್ಕೂ ಬ್ರೇಕ್ ಹಾಕುತ್ತೆ. ಇದ್ರ ಬಗ್ಗೆ ಯೋಚ್ನೆ ಮಾಡಿದಾಗ ನಂಗೆ ತುಂಬ ಖುಷಿಯಾಗುತ್ತೆ.”—ಮುಸ್ತಫಾ, ಮಧ್ಯಪೂರ್ವ ದೇಶ.
ಬೈಬಲ್ ಕೊಡೋ ಭರವಸೆಯಿಂದ ಸಮಾಧಾನ ಪಡ್ಕೊಳ್ಳಿ.
ದೇವರ ವಾಕ್ಯ ಕೊಡೋ ವಿವೇಕ
ಬೈಬಲಲ್ಲಿರೋ ವಿವೇಕ ನಿಮ್ಮ ಈ ಕಷ್ಟದ ಪ್ರಯಾಣದಲ್ಲಿ ಬೇಕಾಗಿರೋ ಮಾರ್ಗದರ್ಶನ ಕೊಡುತ್ತೆ. ನಿಮ್ಮ ಪರಿಸ್ಥಿತಿ ಈಗ ಬದಲಾಗಿದೆ, ನೀವು ಎಷ್ಟೋ ವಸ್ತುಗಳನ್ನ ಕಳ್ಕೊಂಡಿದ್ದೀರ. ಇದನ್ನೆಲ್ಲಾ ಹೇಗೆ ನಿಭಾಯಿಸೋದು ಅಂತ ಅದು ನಿಮಗೆ ಕಲಿಸುತ್ತೆ. ಬೈಬಲ್ನಲ್ಲಿರೋ ಕೆಲವು ಮಾತುಗಳು ಈಗಾಗ್ಲೇ ಮನೆ ಕಳ್ಕೊಂಡವ್ರಿಗೆ ಹೇಗೆ ಸಹಾಯ ಮಾಡ್ತಿದೆ ಅಂತ ನೋಡಿ:
ಬೈಬಲ್ ಹೇಳೋದು: “ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ.”—ಲೂಕ 12:15.
ಈ ವಿವೇಕದ ಮಾತು ನಿಮಗೆ ಹೇಗೆ ಸಹಾಯ ಮಾಡುತ್ತೆ? ನೀವು ನಿಮ್ಮ ಆಸ್ತಿನೆಲ್ಲ ಕಳ್ಕೊಂಡಿರೋದ್ರಿಂದ ಶಾಕ್ನಲ್ಲಿರಬಹುದು, ನೋವಲ್ಲಿರಬಹುದು. ಆದ್ರೆ ನೀವು ಏನು ಉಳಿಸ್ಕೊಂಡಿದ್ದೀರ ಅಂತ ಯೋಚಿಸಿ. ನಿಮ್ಮ ಜೀವ ಉಳಿಸ್ಕೊಂಡಿದ್ದೀರ! ನಿಮ್ಮ ಜೀವಕ್ಕಿಂತ ಜಾಸ್ತಿ ನಿಮ್ಮ ಆಸ್ತಿಗೆ ಬೆಲೆ ಇದ್ಯಾ? ಇಲ್ಲ ಅಲ್ವಾ? ಹಾಗಾಗಿ ಕಳ್ಕೊಂಡಿರೋ ವಸ್ತುಗಳ ಬಗ್ಗೆ ಜಾಸ್ತಿ ಚಿಂತೆ ಮಾಡಬೇಡಿ.
“ಆಸ್ತಿಪಾಸ್ತಿಗಿಂತ ಜೀವ ಮುಖ್ಯ. ಕೆಲವು ಕಷ್ಟಗಳು ಬಂದಾಗ ನಮ್ಮ ಆಸ್ತಿ, ಹಣ ಯಾವುದೂ ನಮಗೆ ನಯಾ ಪೈಸೆ ಸಹಾಯನೂ ಮಾಡಲ್ಲ.”—ನಟಾಲ್ಯಾ, ಉಕ್ರೇನ್ ದೇಶ.
ಬೈಬಲ್ ಹೇಳೋದು: “‘ಈಗ ಇರೋದಕ್ಕಿಂತ ಹಿಂದೆ ನಾವು ತುಂಬ ಚೆನ್ನಾಗಿದ್ವಿ’ ಅಂತ ನೀನು ಹೇಳಬೇಡ.”—ಪ್ರಸಂಗಿ 7:10.
ಈ ವಿವೇಕದ ಮಾತು ನಿಮಗೆ ಹೇಗೆ ಸಹಾಯ ಮಾಡುತ್ತೆ? ನಿಮಗೆ ಈಗ ತುಂಬ ಕಷ್ಟಗಳಿರಬಹುದು ನಿಜ. ಆದ್ರೆ ಅದನ್ನ ನಿಮ್ಮ ಹಿಂದಿನ ಜೀವನಕ್ಕೆ ಹೋಲಿಸಿ ನೋಡಬೇಡಿ, ಹೋಲಿಸಿದ್ರೆ ನೀವು ಕುಗ್ಗಿ ಹೋಗ್ತೀರ.
“ಈಗ ನನ್ನ ಪರಿಸ್ಥಿತಿ ಬದಲಾಗಿದೆ ಅಂತ ಅರ್ಥ ಮಾಡ್ಕೊಂಡಿದ್ದೀನಿ. ಆದ್ರಿಂದ ಈಗಿರೋ ಪರಿಸ್ಥಿತಿನ ಚೆನ್ನಾಗಿ ನಿಭಾಯಿಸೋಕೆ ಆಗ್ತಿದೆ.”—ಏಲಿ, ರುವಾಂಡ.
ಬೈಬಲ್ ಹೇಳೋದು: “ನಮಗೆ ಊಟ ಬಟ್ಟೆ ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.”—1 ತಿಮೊತಿ 6:8.
ಈ ವಿವೇಕದ ಮಾತು ನಿಮಗೆ ಹೇಗೆ ಸಹಾಯ ಮಾಡುತ್ತೆ? ಇರೋದ್ರಲ್ಲೇ ತೃಪ್ತಿಯಿಂದ ಇರೋಕೆ ಪ್ರಯತ್ನ ಮಾಡಿ. ಆಗ ನಿಮಗೆ ಒತ್ತಡ ಮತ್ತು ಚಿಂತೆ ಇರಲ್ಲ, ನೆಮ್ಮದಿಯಾಗಿ ಇರ್ತೀರ.
“ಏನೆಲ್ಲಾ ಕಳ್ಕೊಂಡಿದ್ದೀವೋ ಅದ್ರ ಬಗ್ಗೆ ಯೋಚ್ನೆ ಮಾಡದೇ ಇರೋಕೆ ಬೈಬಲ್ ನನಗೆ ಸಹಾಯ ಮಾಡಿದೆ. ನಾನು, ನನ್ನ ಹೆಂಡತಿ ಜೀವಂತವಾಗಿದ್ದೀವಿ, ಈಗ ಸುರಕ್ಷಿತವಾಗಿರೋ ಜಾಗದಲ್ಲಿದ್ದೀವಿ. ಇದ್ರಿಂದ ನಾವು ಖುಷಿಯಾಗಿದ್ದೀವಿ.”—ಇವಾನ್, ಉಕ್ರೇನ್ ದೇಶ.
ಬೈಬಲ್ ಹೇಳೋದು: “ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”—ಮತ್ತಾಯ 7:12.
ಈ ವಿವೇಕದ ಮಾತು ನಿಮಗೆ ಹೇಗೆ ಸಹಾಯ ಮಾಡುತ್ತೆ? ನೀವು ತಾಳ್ಮೆ ತೋರಿಸಿ, ದಯೆಯಿಂದ ನಡ್ಕೊಳ್ಳಿ. ನೀವು ಇದನ್ನ ಮಾಡಿದ್ರೆ ಜನ ನಿಮ್ಮ ಜೊತೆ ಚೆನ್ನಾಗಿ ನಡ್ಕೊಳ್ತಾರೆ. ಅವರು ನಿಮಗೆ ಭೇದಭಾವ ಮಾಡಲ್ಲ.
“ನೀವು ಗೌರವದಿಂದ, ದಯೆಯಿಂದ, ಪ್ರೀತಿಯಿಂದ ನಡ್ಕೊಂಡ್ರೆ ಜನ ನಿಮ್ಮನ್ನ ಇಷ್ಟಪಡ್ತಾರೆ. ಆಗ ಸುತ್ತಮುತ್ತ ಇರೋ ಜನ್ರ ಜೊತೆ ಒಳ್ಳೆ ಬಾಂಧವ್ಯ ಬೆಳೆಯುತ್ತೆ.”—ಏಂಜಲೋ, ಶ್ರೀಲಂಕ ದೇಶ.
ಬೈಬಲ್ ಹೇಳೋದು: ‘ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಆಗ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ. ಆತನು ನಿಮ್ಮ ಹೃದಯನ, ಯೋಚ್ನೆನ ಕಾಯ್ತಾನೆ.’—ಫಿಲಿಪ್ಪಿ 4:6, 7.
ಈ ವಿವೇಕದ ಮಾತು ನಿಮಗೆ ಹೇಗೆ ಸಹಾಯ ಮಾಡುತ್ತೆ? ನಿಮ್ಮ ಭಾವನೆಗಳನ್ನ, ಅಗತ್ಯಗಳನ್ನ, ನಿಮಗಿರೋ ಭಯ, ಚಿಂತೆಯನ್ನೆಲ್ಲ ದೇವರ ಹತ್ರ ಹೇಳ್ಕೊಳ್ಳಿ. ನೀವು ಪ್ರಾರ್ಥನೆ ಮಾಡಿದ್ರೆ ನಿಮ್ಮ ಚಿಂತೆ ಕಡಿಮೆ ಆಗುತ್ತೆ. ನೀವು ಚಿಂತೆಯಲ್ಲೇ ಮುಳುಗಿ ಹೋಗದಂತೆ ತಡೆಯುತ್ತೆ.
“ನನಗಿರೋ ಕಷ್ಟಗಳನ್ನೆಲ್ಲ ಪ್ರಾರ್ಥನೆಯಲ್ಲಿ ದೇವರ ಹತ್ರ ಹೇಳ್ಕೊಳ್ತೀನಿ, ಆತನು ನನಗೆ ಉತ್ತರ ಕೊಟ್ಟಿದ್ದಾನೆ. ಬೈಬಲಿಂದ ನಾನು ಕಲಿತಿರೋ ವಿಷ್ಯಗಳು ನಂಗೆ ನಿಜ ಶಾಂತಿಯನ್ನ ಕೊಟ್ಟಿದೆ.”—ಯಾಲ್, ದಕ್ಷಿಣ ಸೂಡಾನ್ ದೇಶ.
“ಬೈಬಲ್ ಕೊಡೋ ಒಳ್ಳೆ ಸಲಹೆ ನಾನು ಶಾಂತಿ ಪಡ್ಕೊಳ್ಳೋಕೆ, ನನಗಿರೋ ಸಮಸ್ಯೆಯನ್ನ ನಿಭಾಯಿಸೋಕೆ ಸಹಾಯ ಮಾಡಿದೆ.”—ವ್ಯಾಲೆಂಟಿನ, ಉಕ್ರೇನ್ ದೇಶ.
“ಯೆಹೋವ ದೇವರು ಮುಂದೆ ನಮಗೊಂದು ಒಳ್ಳೆ ಜೀವನ ಕೊಡ್ತಾನೆ ಅನ್ನೋ ವಿಷ್ಯ ನನಗೆ ಬೆಟ್ಟದಷ್ಟು ಬಲ ಕೊಡುತ್ತೆ.”—ಇಮ್ಯಾನುವೆಲ್, ಹೈಟಿ ದೇಶ
ನಿಮಗೆ ಸಮಾಧಾನ ಮತ್ತು ಭರವಸೆ ತುಂಬೋ ಇನ್ನೂ ಯಾವೆಲ್ಲ ಮಾತುಗಳು ಬೈಬಲಿನಲ್ಲಿದೆ? ಅದನ್ನ ನೀವು ನಂಬಬಹುದಾ? ಇದ್ರ ಬಗ್ಗೆ ಹೆಚ್ಚನ್ನ ಯೆಹೋವನ ಸಾಕ್ಷಿಗಳು ತಿಳಿಸ್ತಾರೆ. ಅವರು ಬಂದು ನಿಮ್ಮನ್ನ ಭೇಟಿ ಮಾಡೋಕೆ ನಿಮಗೆ ಒಪ್ಪಿಗೆ ಇದ್ಯಾ?
a ಯುಎನ್ ರೆಫ್ಯೂಜಿ ಏಜೆನ್ಸಿ ಪ್ರಕಾರ, ನಿರಾಶ್ರಿತರು ಅಥವಾ ಮನೆ ಕಳ್ಕೊಂಡವರು ಅಂದ್ರೆ ಯಾರು ಗೊತ್ತಾ? ತಮ್ಮ ಸ್ವಂತ ದೇಶದಲ್ಲೇ ಚದುರಿ ಹೋಗಿರೋರು ಅಥವಾ ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಬಂದಿರೋರು. ಇವರು ಕಾನೂನು ಪ್ರಕಾರ ನಿರಾಶ್ರಿತರಲ್ಲದಿದ್ರೂ ಅವ್ರನ್ನ ಈ ಪಟ್ಟಿಗೆ ಸೇರಿಸಲಾಗಿದೆ.
b ಯುರೋಪಿಯನ್ ಒಕ್ಕೂಟದ ಮಾನವೀಯ ಸಹಾಯ ಮತ್ತು ಸಂಕಷ್ಟ ನಿರ್ವಹಣೆಯ ಆಯುಕ್ತರು.
c ಯೆಹೋವ ಅನ್ನೋದು ದೇವರ ಹೆಸರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.