Nany/stock.adobe.com
ಈಗಿರೋ ಆಹಾರದ ಕೊರತೆ ಬಗ್ಗೆ ಬೈಬಲ್ ಏನು ಹೇಳುತ್ತೆ?
“ಹಸಿವು ಮುಕ್ತ ಲೋಕ.” ಈ ಮಾತುಗಳು ಇವತ್ತು ಜನರನ್ನ ಪೀಡಿಸ್ತಿರೋ ಅತೀ ದೊಡ್ಡ ಸಮಸ್ಯೆಯಿಂದ ಹೊರಗೆ ತರೋಕೆ ಈ ಲೋಕದ ನಾಯಕರು ಪ್ರಯತ್ನ ಮಾಡ್ತಿದ್ದಾರೆ ಅನ್ನೋದನ್ನ ತೋರಿಸುತ್ತೆ. ಅವರು ಭೂಮಿಯಲ್ಲಿರೋ ಎಲ್ಲರಿಗೂ ಸಾಕಾಗುವಷ್ಟು ಆಹಾರ ಸಿಗಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ.a ಆದ್ರೆ ಇಡೀ ಭೂಮಿಯಿಂದ ಆಹಾರದ ಕೊರತೆನ ತೆಗೆದುಹಾಕೋಕೆ ಆಗುತ್ತಾ? ಬೈಬಲ್ ಇದ್ರ ಬಗ್ಗೆ ಏನು ಹೇಳುತ್ತೆ?
ನಮ್ಮ ಕಾಲದಲ್ಲಿ ಆಹಾರದ ಕೊರತೆ ಇರುತ್ತೆ ಅಂತ ಬೈಬಲ್ ಮುಂಚೆನೇ ಹೇಳಿತ್ತು
ನಮ್ಮ ಕಾಲದಲ್ಲಿ ಆಹಾರದ ಕೊರತೆ ಇರುತ್ತೆ ಅಂತ ಬೈಬಲ್ ಮುಂಚೆನೇ ಹೇಳಿತ್ತು, ಆ ಸಮಯನ “ಕೊನೇ ದಿನಗಳು” ಅಂತನೂ ಕರೆಯುತ್ತೆ. (2 ತಿಮೊತಿ 3:1) ಹಾಗಂತ ಈ ಆಹಾರದ ಕೊರತೆಗೆ ದೇವರು ಕಾರಣ ಅಲ್ಲ, ಆದ್ರೆ ಈ ತರ ಪರಿಸ್ಥಿತಿ ಬರುತ್ತೆ ಅಂತ ದೇವರು ಮೊದಲೇ ಎಚ್ಚರಿಕೆ ಕೊಟ್ಟಿದ್ದನು. (ಯಾಕೋಬ 1:13) ದೇವರು ಕೊಟ್ಟ ಎರಡು ಎಚ್ಚರಿಕೆಗಳ ಬಗ್ಗೆ ಈಗ ನೋಡೋಣ.
“ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ.” (ಮತ್ತಾಯ 24:7) ತುಂಬ ಜಾಗಗಳಲ್ಲಿ ಬರಗಾಲ ಬರುತ್ತೆ ಅಂತ ಬೈಬಲ್ ಭವಿಷ್ಯವಾಣಿ ಹೇಳಿತ್ತು. “ಲೋಕದಲ್ಲಿ ಬರಗಾಲ, ಪೌಷ್ಟಿಕ ಆಹಾರದ ಕೊರತೆಯಿಂದ ಜನ ತುಂಬ ಕಷ್ಟ ಪಡ್ತಿದ್ದಾರೆ. ಜನರ ಹೊಟ್ಟೆ ತುಂಬಿಸೋಕೆ ಎಷ್ಟೇ ಪ್ರಯತ್ನಪಟ್ರೂ ಅದೆಲ್ಲಾ ವ್ಯರ್ಥ ಆಗ್ತಿದೆ. ಪರಿಸ್ಥಿತಿ ತುಂಬಾ ಹದಗೆಡ್ತಿದೆ”b ಅಂತ ಆಹಾರ ಉತ್ಪಾದನೆ ಮತ್ತು ವಿತರಣೆ ಬಗ್ಗೆ ಅಧ್ಯಯನ ಮಾಡೋರು ಇತ್ತೀಚಿಗೆ ವರದಿ ಕೊಟ್ಟಿದ್ದಾರೆ. ಎಷ್ಟೋ ದೇಶಗಳಲ್ಲಿ ಕೋಟ್ಯಾಂತರ ಜನ ಹೊಟ್ಟೆಗಿಲ್ಲದೇ ದಿನಗಳನ್ನ ಸಾಗಿಸ್ತಿದ್ದಾರೆ, ಇನ್ನೂ ಎಷ್ಟೋ ಜನ ಸತ್ತೇ ಹೋಗಿದ್ದಾರೆ.
“ಒಂದು ಕಪ್ಪು ಕುದುರೆ ಬಂತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು.” (ಪ್ರಕಟನೆ 6:5) ಈ ಭವಿಷ್ಯವಾಣಿ ಪ್ರಕಾರ ಇಲ್ಲಿ ಹೇಳಿರೋ ಕುದುರೆ ಮತ್ತು ಅದ್ರ ಸವಾರ ಕೊನೇ ದಿನಗಳಲ್ಲಿ ಬರೋ ಬರಗಾಲವನ್ನ ಸೂಚಿಸುತ್ತೆ.c ಆ ಸವಾರ ತನ್ನ ಕೈಯಲ್ಲಿರೋ ತಕ್ಕಡಿಯಿಂದ ಊಟವನ್ನ ಅಳಿತಾನೆ. ಅವನು ಕುದುರೆ ಮೇಲೆ ಹೋಗ್ತಿದ್ದಾಗ ಒಂದು ಧ್ವನಿ ‘ಆಹಾರದ ಬೆಲೆ ಏರಿಕೆ ಆಗುತ್ತೆ, ಎಲ್ಲರೂ ಅದನ್ನ ಶೇಖರಿಸಿ’ ಅಂತ ಎಚ್ಚರಿಕೆ ಕೊಡ್ತಿತ್ತು. (ಪ್ರಕಟನೆ 6:6) ಇಲ್ಲಿ ಹೇಳಿರೋ ಮಾತುಗಳು ನಮ್ಮ ಕಣ್ಮುಂದೆ ನಿಜ ಆಗ್ತಿದೆ. ಇವತ್ತು ಇಡೀ ಪ್ರಪಂಚದಲ್ಲಿ ಕೋಟ್ಯಾಂತರ ಜನರಿಗೆ ಪೌಷ್ಟಿಕ ಆಹಾರ ಸಿಗದೆ ಪರದಾಡ್ತಿದ್ದಾರೆ.
ಆಹಾರದ ಕೊರತೆಗೆ ಕೊನೆ ಯಾವಾಗ?
ಭೂಮಿ ಮೇಲಿರೋ ಎಲ್ಲರಿಗೂ ಬೇಕಾಗುವಷ್ಟು ಬೆಳೆ ಬೆಳೆಯೋ ಶಕ್ತಿ ಭೂಮಿಗೆ ಇದೆ ಅಂತ ವಿದ್ವಾಂಸರು ಹೇಳ್ತಾರೆ. ಹಾಗಿದ್ದ ಮೇಲೆ ಇವತ್ತು ತುಂಬ ಜನ ಯಾಕೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಕಷ್ಟಪಡ್ತಿದ್ದಾರೆ? ನಮ್ಮನ್ನ ಸೃಷ್ಟಿ ಮಾಡಿರೋ ಯೆಹೋವd ದೇವರು ಈ ಸಮಸ್ಯೆಗೆ ಪರಿಹಾರ ತರೋಕೆ ಏನು ಮಾಡ್ತಾನೆ? ಅದಕ್ಕೆ ಉತ್ರ ಬೈಬಲಲ್ಲಿ ಇದೆ.
ಸಮಸ್ಯೆ: ಜನರ ಹಸಿವೆಗೆ ಕಾರಣವಾಗಿರೋ ಬಡತನ ಮತ್ತು ಅನ್ಯಾಯನ ಇವತ್ತಿರೋ ಸರ್ಕಾರಗಳಿಂದ ತೆಗೆದುಹಾಕೋಕೆ ಆಗಲ್ಲ.
ಪರಿಹಾರ: ದೇವರು ಮನುಷ್ಯರ ಸರ್ಕಾರಗಳನ್ನ ತೆಗೆದುಹಾಕಿ, ಯಾವ ಕೊರತೆನೂ ಇಲ್ಲದೇ ಇರೋ ತನ್ನ ಸರ್ಕಾರನ ಈ ಭೂಮಿ ಮೇಲೆ ತರ್ತಾನೆ. (ದಾನಿಯೇಲ 2:44; ಮತ್ತಾಯ 6:10) ಇವತ್ತು ಬಡವರು ಒಂದೊಂದು ತುತ್ತಿಗೂ ತುಂಬಾ ಕಷ್ಟ ಪಡ್ತಿದ್ದಾರೆ. ಆದ್ರೆ ದೇವರ ಸರ್ಕಾರ ಬಂದಾಗ ಈ ಪರಿಸ್ಥಿತಿ ಬದಲಾಗುತ್ತೆ. ದೇವರ ಸರ್ಕಾರದ ರಾಜನಾದ ಯೇಸು ಕ್ರಿಸ್ತ “ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ, ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ . . . ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ, ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ” ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 72:12, 16.
ಸಮಸ್ಯೆ: ಯುದ್ಧದಿಂದ ಎಲ್ಲ ಸರ್ವನಾಶ ಆಗ್ತಿದೆ, ಆರ್ಥಿಕ ಪರಿಸ್ಥಿತಿ ಕುಸಿತಾ ಇದೆ, ಇದ್ರಿಂದ ತುಂಬ ಜನರಿಗೆ ಆಹಾರ ಸಿಕ್ತಿಲ್ಲ.
ಪರಿಹಾರ: “[ಯೆಹೋವ] ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ. ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ, ಯುದ್ಧ ರಥಗಳನ್ನ ಬೆಂಕಿಯಲ್ಲಿ ಸುಟ್ಟುಹಾಕ್ತಾನೆ.” (ಕೀರ್ತನೆ 46:9) ದೇವರು ಆಯುಧಗಳನ್ನ, ಯುದ್ಧ ಮಾಡೋರನ್ನ ನಾಶ ಮಾಡ್ತಾನೆ. ಇದ್ರಿಂದ ಎಲ್ಲರಿಗೂ ಹೊಟ್ಟೆ ತುಂಬಾ ಊಟ ಸಿಗುತ್ತೆ. ಅದಕ್ಕೆ ಬೈಬಲ್ “ನೀತಿವಂತರು ಅಭಿವೃದ್ಧಿ ಆಗ್ತಾರೆ . . . ಎಲ್ಲ ಕಡೆ ಶಾಂತಿ ತುಂಬಿತುಳುಕುತ್ತೆ” ಅಂತ ಮಾತು ಕೊಟ್ಟಿದೆ.—ಕೀರ್ತನೆ 72:7.
ಸಮಸ್ಯೆ: ಹವಾಮಾನದಲ್ಲಿ ತುಂಬ ಬದಲಾವಣೆ ಆಗ್ತಿರೋದ್ರಿಂದ ಮತ್ತು ಪ್ರಕೃತಿ ವಿಕೋಪದಿಂದ ಬೆಳೆಗಳು ಹಾಳಾಗ್ತಿವೆ, ಪ್ರಾಣಿಗಳು ಜೀವ ಕಳ್ಕೊತಿವೆ.
ಪರಿಹಾರ: ದೇವರಿಗೆ ಪ್ರಕೃತಿ ಮೇಲೆ ಹಿಡಿತ ಇರೋದ್ರಿಂದ ಬೆಳೆ ಚೆನ್ನಾಗಿ ಬೆಳೆಯೋ ಹಾಗೆ ಹವಾಮಾನವನ್ನ ನಿಯಂತ್ರಿಸೋಕೆ ಆಗುತ್ತೆ. “ಬಿರುಗಾಳಿಯನ್ನ [ಯೆಹೋವ] ನಿಲ್ಲಿಸ್ತಾನೆ, ಸಮುದ್ರದ ಅಲೆಗಳು ಪ್ರಶಾಂತವಾಗ್ತವೆ . . . ಆತನು ಮರುಭೂಮಿಯನ್ನ ನೀರಿನ ಕೆರೆಯಾಗಿ, ಬಂಜರು ಭೂಮಿಯನ್ನ ನೀರಿನ ಬುಗ್ಗೆಗಳಾಗಿ ಮಾಡ್ತಾನೆ. ಹಸಿದವರು ಅಲ್ಲಿ ವಾಸಿಸೋ ತರ ಆತನು ಮಾಡ್ತಾನೆ . . . ಅವರು ಹೊಲಗಳಲ್ಲಿ ಬೀಜ ಬಿತ್ತುತ್ತಾರೆ, ದ್ರಾಕ್ಷಿತೋಟಗಳನ್ನ ನೆಡ್ತಾರೆ. ಅವು ಒಳ್ಳೇ ಹಣ್ಣು ಕೊಡುತ್ತೆ” ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 107:29, 35-37.
ಸಮಸ್ಯೆ: ಭ್ರಷ್ಟರು ಮತ್ತು ದುಡ್ಡು ಮಾಡಬೇಕು ಅನ್ನೋ ದುರಾಸೆ ಇರೋರು ಆಹಾರನ ಕಲಬೆರಕೆ ಮಾಡ್ತಿದ್ದಾರೆ, ಆಹಾರ ಸೇರಬೇಕಾದವರಿಗೆ ಸೇರದೇ ಇರೋ ತರ ಮಾಡ್ತಿದ್ದಾರೆ.
ಪರಿಹಾರ: ದೇವರ ಸರ್ಕಾರದಲ್ಲಿ ಕೆಟ್ಟವರಿಗೆ ಮತ್ತು ಭ್ರಷ್ಟರಿಗೆ ಜಾಗ ಇಲ್ಲ. (ಕೀರ್ತನೆ 37:10, 11; ಯೆಶಾಯ 61:8) ಯಾಕಂದ್ರೆ ಯೆಹೋವ ದೇವರು ‘ಅನ್ಯಾಯ ಆದವ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ, ಹಸಿದವ್ರಿಗೆ ಊಟ ಕೊಡ್ತಾನೆ’ ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 146:7.
ಸಮಸ್ಯೆ: ಪ್ರತಿ ವರ್ಷ ಭೂಮಿಯಲ್ಲಿ ಬೆಳೆಯೋ ಆಹಾರದಲ್ಲಿ ಮೂರನೇ ಒಂದು ಭಾಗದಷ್ಟು ಆಹಾರ ವೇಸ್ಟ್ ಆಗ್ತಿದೆ.
ಪರಿಹಾರ: ದೇವರ ಸರ್ಕಾರದಲ್ಲಿ ಆಹಾರ ವಿತರಣೆ ಮಾಡೋರು ಎಲ್ಲರಿಗೂ ಆಹಾರ ಸಿಗೋ ತರ ನೋಡ್ಕೊತಾರೆ. ಯೇಸು ಭೂಮಿಯಲ್ಲಿ ಇದ್ದಾಗ ಆಹಾರನ ವೇಸ್ಟ್ ಮಾಡ್ಲಿಲ್ಲ. ಉದಾಹರಣೆಗೆ, ಒಂದು ಸಂದರ್ಭದಲ್ಲಿ ಯೇಸು 5,000ಕ್ಕಿಂತ ಜಾಸ್ತಿ ಜನ್ರಿಗೆ ಅದ್ಭುತವಾಗಿ ಊಟ ಕೊಟ್ಟ ಮೇಲೆ ತನ್ನ ಶಿಷ್ಯರಿಗೆ, “ಉಳಿದ ರೊಟ್ಟಿ ತುಂಡುಗಳನ್ನ ಬಿಸಾಕದೆ ಕೂಡಿಸಿಡಿ” ಅಂತ ಹೇಳಿದನು.—ಯೋಹಾನ 6:5-13.
ದೇವರ ಸರ್ಕಾರ ಆಹಾರದ ಕೊರತೆಗೆ ಕಾರಣ ಆಗಿರೋ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕುತ್ತೆ. ಆಗ ಭೂಮಿಯಲ್ಲಿರೋ ಎಲ್ಲರಿಗೂ ಬೇಕಾದಷ್ಟು ಪೌಷ್ಟಿಕ ಆಹಾರ ಸಿಗುತ್ತೆ. (ಯೆಶಾಯ 25:6) ದೇವರ ಸರ್ಕಾರ ಇದನ್ನೆಲ್ಲಾ ಯಾವಾಗ ಮಾಡುತ್ತೆ ಅಂತ ತಿಳ್ಕೊಳ್ಳೋಕೆ “ದೇವರ ಸರ್ಕಾರದ ಆಳ್ವಿಕೆ ಭೂಮಿಗೆ ಯಾವಾಗ ಬರುತ್ತೆ?” ಅನ್ನೋ ಲೇಖನ ನೋಡಿ.
a 2030ರಷ್ಟಕ್ಕೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನ ಮುಟ್ಟಬೇಕು ಅಂತ ವಿಶ್ವಸಂಸ್ಥೆಯ ಸದಸ್ಯರೆಲ್ಲರೂ 2015ರಲ್ಲಿ ತೀರ್ಮಾನ ಮಾಡಿದ್ರು.
b ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ, ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ, ವಿಶ್ವಸಂಸ್ಥೆಯ ಮಕ್ಕಳ ನಿಧಿ, ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಮತ್ತು ವಿಶ್ವ ಆರೋಗ್ಯ ಸಂಸ್ಥೆ. ಈ ಎಲ್ಲಾ ಸಂಸ್ಥೆಗಳು ಒಟ್ಟಿಗೆ ಕೊಟ್ಟ ವರದಿ.
c ಪ್ರಕಟನೆ ಪುಸ್ತಕದಲ್ಲಿ ಹೇಳಿರೋ ನಾಲ್ಕು ಕುದುರೆ ಸವಾರರ ಬಗ್ಗೆ ತಿಳ್ಕೊಳ್ಳೋಕೆ “ನಾಲ್ಕು ರಾಹುತರು ನಾಗಾಲೋಟದಲ್ಲಿ!” ಅನ್ನೋ ಲೇಖನ ನೋಡಿ.
d ಯೆಹೋವ ಅನ್ನೋದು ದೇವರ ಹೆಸ್ರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.