ನಂಗೆ ಸಾಂತ್ವನ ಕೊಡೋ ವಿಷ್ಯಗಳು ಬೈಬಲಲ್ಲಿ ಇದ್ಯಾ?
ಬೈಬಲ್ ಕೊಡುವ ಉತ್ತರ
ಇದೆ. (ರೋಮನ್ನರಿಗೆ 15:4) ಕಷ್ಟ, ದುಃಖ, ನೋವಲ್ಲಿದ್ದ ಎಷ್ಟೋ ಜನ್ರಿಗೆ ಬೈಬಲಲ್ಲಿರೋ ವಚನಗಳು ಸಾಂತ್ವನ ಕೊಟ್ಟಿದೆ. ಆ ವಚನಗಳನ್ನ ಮುಂದೆ ಕೊಡಲಾಗಿದೆ.
ಈ ಲೇಖನದಲ್ಲಿ
ಕಷ್ಟ
ಕೀರ್ತನೆ 23:4: “ಕತ್ತಲ ಕಣಿವೆಯಲ್ಲಿ ನಾನು ನಡೆದ್ರೂ, ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ, ಯಾಕಂದ್ರೆ ನೀನೇ ನನ್ನ ಜೊತೆ ಇದ್ದೀಯ.”
ಇದರರ್ಥ: ನೀವು ದೇವರಿಗೆ ಪ್ರಾರ್ಥನೆ ಮಾಡಿದ್ರೆ ಮತ್ತು ಬೈಬಲ್ ಕೊಡೋ ಬುದ್ಧಿಮಾತನ್ನ ಪಾಲಿಸಿದ್ರೆ ಕಷ್ಟಗಳನ್ನ ಧೈರ್ಯವಾಗಿ ಎದುರಿಸಬಹುದು.
ಫಿಲಿಪ್ಪಿ 4:13: “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ.”
ಇದರರ್ಥ: ದೇವರು ನಿಮಗೆ ಯಾವುದೇ ಸಮಸ್ಯೆನ ತಾಳ್ಕೊಳ್ಳೋಕೆ ಬೇಕಾಗಿರೋ ಶಕ್ತಿನ ಕೊಡ್ತಾನೆ.
ನಮ್ಮವರ ಸಾವು
ಪ್ರಸಂಗಿ 9:10: ‘ಸಮಾಧಿಯಲ್ಲಿ ಯಾವುದೇ ಕೆಲಸ ಮಾಡಕ್ಕಾಗಲ್ಲ, ಯೋಚ್ನೆ ಮಾಡಕ್ಕಾಗಲ್ಲ, ಜ್ಞಾನ ಆಗ್ಲಿ ವಿವೇಕ ಆಗ್ಲಿ ಪಡಿಯೋಕೆ ಆಗಲ್ಲ.’
ಇದರರ್ಥ: ತೀರಿಹೋದವರು ನರಳ್ತಾನೂ ಇಲ್ಲ, ಅವರು ನಮಗೆ ಹಾನಿ ಮಾಡೋಕೂ ಆಗಲ್ಲ. ಅವ್ರಿಗೆ ಪ್ರಜ್ಞೆ ಇಲ್ಲ.
ಅಪೊಸ್ತಲರ ಕಾರ್ಯ 24:15: ‘ಅವರು ಮತ್ತೆ ಬದುಕೋ ತರ ದೇವರು ಮಾಡ್ತಾನೆ.’
ಇದರರ್ಥ: ನಾವು ಕಳ್ಕೊಂಡಿರೋ ನಮ್ಮವರಿಗೆ ದೇವರು ಮತ್ತೆ ಜೀವಕೊಡ್ತಾನೆ.
ಅತಿಯಾದ ದೋಷಿ ಭಾವನೆ
ಕೀರ್ತನೆ 86:5: “ಯೆಹೋವನೇ,a ನೀನು ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ, ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ.”
ಇದರರ್ಥ: ಯಾರು ಹಿಂದೆ ಮಾಡಿದ ತಪ್ಪಿಗೆ ನಿಜವಾಗ್ಲೂ ಪಶ್ಚಾತ್ತಾಪ ಪಡ್ತಾರೋ ಮತ್ತು ಆ ತಪ್ಪನ್ನ ಮತ್ತೆ ಮಾಡದೇ ಇರೋಕೆ ತೀರ್ಮಾನ ಮಾಡ್ತಾರೋ ಅವ್ರನ್ನ ದೇವರು ಕ್ಷಮಿಸ್ತಾನೆ.
ಕೀರ್ತನೆ 103:12: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ, ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ.”
ಇದರರ್ಥ: ದೇವರು ನಮ್ಮನ್ನ ಕ್ಷಮಿಸಿದ್ರೆ ನಮ್ಮ ತಪ್ಪುಗಳನ್ನ ನಾವು ಊಹಿಸೋಕೂ ಆಗದಿರೋಷ್ಟು ದೂರ ಎಸೆದು ಬಿಡ್ತಾನೆ. ಅದನ್ನ ಮತ್ತೆಮತ್ತೆ ನೆನಪು ಮಾಡ್ಕೊಂಡು ನಮಗೆ ಶಿಕ್ಷೆ ಕೊಡಲ್ಲ.
ದುಃಖ
ಕೀರ್ತನೆ 31:7: “ನನ್ನ ಸಂಕಟವನ್ನ ನೀನು ನೋಡಿದ್ದೀಯ, ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ.”
ಇದರರ್ಥ: ನೀವು ಏನೆಲ್ಲಾ ಅನುಭವಿಸ್ತಿದ್ದೀವಿ ಅಂತ ದೇವರಿಗೆ ಚೆನ್ನಾಗಿ ಗೊತ್ತು. ನಿಮ್ಮ ಮನಸ್ಸೊಳಗೆ ಹೇಗೆ ಅನಿಸ್ತಿದೆ ಅಂತ ಬೇರೆಯವ್ರಿಗೆ ಅರ್ಥ ಆಗಲ್ಲ, ಆದ್ರೆ ದೇವರಿಗೆ ಚೆನ್ನಾಗಿ ಅರ್ಥ ಆಗುತ್ತೆ.
ಕೀರ್ತನೆ 34:18: “ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ, ಮನಸ್ಸು ಚೂರುಚೂರಾಗಿ ಹೋಗಿರೋರನ್ನ ಆತನು ಕಾದು ಕಾಪಾಡ್ತಾನೆ.”
ಇದರರ್ಥ: ದುಃಖದಲ್ಲಿದ್ದಾಗ ನಿಮಗೆ ಸಹಾಯ ಮಾಡ್ತೀನಿ ಅಂತ ದೇವರು ಮಾತುಕೊಟ್ಟಿದ್ದಾನೆ. ಆ ದುಃಖನ ತಾಳ್ಕೊಳ್ಳೋಕೆ ಬೇಕಾದ ಶಕ್ತಿನ ಆತನು ನಿಮಗೆ ಕೊಡ್ತಾನೆ.
ಕಾಯಿಲೆ
ಕೀರ್ತನೆ 41:3: “ಅವನಿಗೆ ಹುಷಾರಿಲ್ಲದೆ ಹಾಸಿಗೆ ಹಿಡಿದಾಗ ಯೆಹೋವ ಅವನಿಗೆ ಆಸರೆಯಾಗಿ ಇರ್ತಾನೆ.”
ಇದರರ್ಥ: ಗಂಭೀರ ಕಾಯಿಲೆಯನ್ನ ನಿಭಾಯಿಸೋಕೆ ದೇವರು ನಿಮಗೆ ಮನಶ್ಶಾಂತಿ ಕೊಡ್ತಾನೆ. ಅದ್ರ ಜೊತೆಗೆ ಶಕ್ತಿ, ತಾಳ್ಮೆ ಮತ್ತು ಒಳ್ಳೇ ತೀರ್ಮಾನಗಳನ್ನ ಮಾಡೋ ವಿವೇಕ ಕೊಡ್ತಾನೆ.
ಯೆಶಾಯ 33:24: “ದೇಶದಲ್ಲಿ ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ.”
ಇದರರ್ಥ: ಮನುಷ್ಯರೆಲ್ರೂ ಆರೋಗ್ಯವಾಗಿ ಇರೋ ಸಮಯ ಬರುತ್ತೆ ಅಂತ ದೇವರು ಮಾತುಕೊಟ್ಟಿದ್ದಾನೆ.
ಒತ್ತಡ ಮತ್ತು ಚಿಂತೆ
ಕೀರ್ತನೆ 94:19: “ಚಿಂತೆಗಳು ನನ್ನನ್ನ ಮುತ್ಕೊಂಡಿದ್ದಾಗ, ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ.”
ಇದರರ್ಥ: ನಾವು ಒತ್ತಡದಲ್ಲಿದ್ದಾಗ ದೇವರ ಸಹಾಯ ಕೇಳಿದ್ರೆ ಶಾಂತವಾಗಿರೋಕೆ ಆತನು ನಮಗೆ ಸಹಾಯಮಾಡ್ತಾನೆ.
1 ಪೇತ್ರ 5:7: “ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ. ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.”
ಇದರರ್ಥ: ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆ. ನಾವು ಕಷ್ಟಪಡೋದನ್ನ ನೋಡಿದಾಗ ಆತನಿಗೆ ನೋವಾಗುತ್ತೆ. ನಮ್ಮ ಚಿಂತೆಯನ್ನೆಲ್ಲಾ ನಾವು ಆತನ ಹತ್ರ ಹೇಳ್ಕೊಬೇಕು ಅಂತ ಇಷ್ಟಪಡ್ತಾನೆ.
ಯುದ್ಧ
ಕೀರ್ತನೆ 46:9: “ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.”
ಇದರರ್ಥ: ದೇವರ ಆಳ್ವಿಕೆ ಆದಷ್ಟು ಬೇಗ ಯುದ್ಧಗಳನ್ನ ತೆಗೆದುಹಾಕುತ್ತೆ.
ಕೀರ್ತನೆ 37:11, 29: “ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ. . . . ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”
ಇದರರ್ಥ: ಒಳ್ಳೇ ಜನ್ರು ಭೂಮಿ ಮೇಲೆ ಶಾಶ್ವತವಾಗಿ ಶಾಂತಿಯನ್ನ ಅನುಭವಿಸ್ತಾರೆ.
ಭವಿಷ್ಯದ ಬಗ್ಗೆ ಚಿಂತೆ
ಯೆರೆಮೀಯ 29:11: “ಯೆಹೋವ ಹೇಳೋದು ಏನಂದ್ರೆ ‘ನಿಮಗೆ ಒಳ್ಳೇದು ಮಾಡಬೇಕಂತ ಯೋಚ್ನೆ ಮಾಡಿದ್ದೀನಿ. ನೀವು ಶಾಂತಿ ನೆಮ್ಮದಿಯಿಂದ ಬದುಕಬೇಕು, ನಿಮಗೆ ಕೆಟ್ಟದು ಆಗಬಾರದು, ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ.’”
ಇದರರ್ಥ: ತನ್ನ ಜನ್ರಿಗೆ ಒಳ್ಳೇ ಭವಿಷ್ಯ ಸಿಗುತ್ತೆ ಅಂತ ದೇವರು ಮಾತುಕೊಟ್ಟಿದ್ದಾನೆ.
ಪ್ರಕಟನೆ 21:4: “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”
ಇದರರ್ಥ: ನೀವು ಇವತ್ತು ನೋಡ್ತಿರೋ ಮತ್ತು ಅನುಭವಿಸ್ತಿರೋ ಎಲ್ಲಾ ಕೆಟ್ಟ ವಿಷ್ಯಗಳನ್ನ ತೆಗೆದುಹಾಕ್ತೀನಿ ಅಂತ ದೇವರು ಮಾತುಕೊಟ್ಟಿದ್ದಾನೆ.
a ದೇವರ ಹೆಸರು ಯೆಹೋವ ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.