ನಿರೀಕ್ಷೆ—ಅದು ನಮ್ಗೆ ಎಲ್ಲಿ ಸಿಗುತ್ತೆ?
ಬೈಬಲ್ ಕೊಡೋ ಉತ್ತರ
“ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ” ಅಂತ ದೇವರು ಬೈಬಲಿನಲ್ಲಿ ಹೇಳಿದ್ದಾನೆ. (ಯೆರೆಮೀಯ 29:11) ನಿಜ ಹೇಳಬೇಕಂದ್ರೆ, ದೇವರು ಬೈಬಲನ್ನ ನಮ್ಗೆ ಕೊಟ್ಟಿರೋದೇ ನಾವು ‘ಸಾಂತ್ವನ ಮತ್ತು ನಿರೀಕ್ಷೆa ಪಡ್ಕೊಳ್ಳಬೇಕು’ ಅಂತ. (ರೋಮನ್ನರಿಗೆ 15:4) ದೇವರ ವಾಕ್ಯದಲ್ಲಿರೋ ಸಲಹೆಗಳು ಪ್ರತಿದಿನ ನಮಗೆ ಬರೋ ಸಮಸ್ಯೆಗಳನ್ನ ನಿಭಾಯಿಸೋಕಷ್ಟೇ ಅಲ್ಲ, ಮುಂದೆ ಎಲ್ಲಾ ಒಳ್ಳೇದಾಗುತ್ತೆ ಅನ್ನೋ ನಿರೀಕ್ಷೆಯನ್ನೂ ಕೊಡುತ್ತೆ.
ಈ ಲೇಖನದಲ್ಲಿ ಈ ಮುಂದಿನ ವಿಷ್ಯಗಳ ಬಗ್ಗೆ ತಿಳ್ಕೊಳ್ಳೋಣ.
ನಿರೀಕ್ಷೆ ಕಾಪಾಡಿಕೊಳ್ಳೋಕೆ ಬೈಬಲ್ ಹೇಗೆ ಸಹಾಯ ಮಾಡುತ್ತೆ?
ನಾವು ಸಂತೋಷವಾಗಿ ಇರೋಕೆ ಏನು ಮಾಡಬೇಕು ಅಂತ ಬೈಬಲ್ ಕೆಲವು ಪ್ರಾಯೋಗಿಕ ಸಲಹೆಗಳನ್ನ ಕೊಡುತ್ತೆ. ಹೀಗೆ ಅದು ನಮ್ಮ ಜೀವನಕ್ಕೆ ಒಂದು ನಿರೀಕ್ಷೆ ಕೊಡುತ್ತೆ. ಅದಕ್ಕೆ ಕೆಲವು ಉದಾಹರಣೆಗಳನ್ನ ನಾವೀಗ ನೋಡೋಣ.
ಬೈಬಲ್ ಓದಿ, ಪ್ರಯೋಜನ ಪಡ್ಕೊಳ್ಳಿ. ಕೀರ್ತನೆ 119:105 ಹೀಗೆ ಹೇಳುತ್ತೆ: “ನಿನ್ನ ವಾಕ್ಯ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು.” ಬೆಳಕಿಂದ ನಮಗೆ ಎರಡು ತರ ಪ್ರಯೋಜನ ಇದೆ. ಒಂದು, ತಕ್ಷಣಕ್ಕೆ ನಮ್ಮ ಮುಂದೆ ಏನಿದೆ ಅಂತ ಅದು ತೋರಿಸುತ್ತೆ, ಅಷ್ಟೇ ಅಲ್ಲ ದೂರದಲ್ಲಿ ಏನಿದೆ ಅನ್ನೋದನ್ನೂ ತೋರಿಸುತ್ತೆ. ಅದೇ ತರ ನಾವು ಪ್ರತಿದಿನ ಎದುರಿಸೋ ಸವಾಲುಗಳಿಗೆ ಬೇಕಾದ ಸಲಹೆಗಳು ಬೈಬಲಿನಲ್ಲಿವೆ. ಇದ್ರಿಂದ ನಾವು ಆ ಸಮಸ್ಯೆಗಳನ್ನ ಆರಾಮವಾಗಿ ನಿಭಾಯಿಸಬಹುದು. ಬೈಬಲಿನಲ್ಲಿರೋ ಸಲಹೆಗಳು ನಮ್ಮ “ಹೃದಯಕ್ಕೆ ಖುಷಿ ಕೊಡುತ್ತೆ” ಮತ್ತು ನಮ್ಮನ್ನ ಬಲಪಡಿಸುತ್ತೆ. (ಕೀರ್ತನೆ 19:7, 8) ಅದ್ರ ಜೊತೆಗೆ ದೇವರು ಮುಂದೆ ನಮಗೋಸ್ಕರ ಏನು ಮಾಡ್ತಾನೆ, ಈ ಭೂಮಿ ಹೇಗಿರುತ್ತೆ ಅಂತ ಬೈಬಲಿನಲ್ಲಿ ಇದೆ. ದೇವರು ಕೊಟ್ಟಿರೋ ಈ ನಿರೀಕ್ಷೆ ನಾವು ಯಾವಾಗ್ಲೂ ಸಂತೋಷವಾಗಿ, ತೃಪ್ತಿಯಿಂದ ಇರೋಕೆ ಸಹಾಯ ಮಾಡುತ್ತೆ.
ಬೇರೆಯವರ ಸಹಾಯ ಪಡ್ಕೊಳ್ಳಿ. ಸಮಸ್ಯೆಗಳು ಬಂದಾಗ ಕೆಲವು ಸಲ ನಮಗೆ ದಿಕ್ಕೇ ತೋಚಲ್ಲ, ಆಗ ನಾವು ಯಾರ ಜೊತೆನೂ ಸೇರದೆ ಒಬ್ಬರೇ ಇದ್ದು ಬಿಡ್ತೀವಿ. ಆದ್ರೆ ಈ ತರ ಮಾಡೋದು ತಪ್ಪು ಅಂತ ಬೈಬಲ್ ಹೇಳುತ್ತೆ. ನಾವು ಸ್ನೇಹಿತರಿಂದ ಕುಟುಂಬದವರಿಂದ ದೂರ ಇದ್ರೆ ಏನಾದ್ರೂ ಎಡವಟ್ಟು ಮಾಡ್ಕೊತೀವಿ, ತಪ್ಪಾದ ತೀರ್ಮಾನಗಳನ್ನ ತಗೊಂಡುಬಿಡ್ತೀವಿ. (ಜ್ಞಾನೋಕ್ತಿ 18:1) ಆದ್ರೆ ಸಮಸ್ಯೆಗಳು ಬಂದಾಗ ನಮ್ಮ ಆಪ್ತರು ನಮಗೆ ಬೆನ್ನೆಲುಬಾಗಿ ಇರ್ತಾರೆ. ಆ ಸಮಸ್ಯೆಯಿಂದ ಹೇಗೆ ಆಚೆ ಬರಬಹುದು ಅನ್ನೋದಕ್ಕೆ ಬೇಕಾಗಿರೋ ಸಲಹೆ ಕೊಡ್ತಾರೆ. (ಜ್ಞಾನೋಕ್ತಿ 11:14) ಒಂದುವೇಳೆ ಸಲಹೆ ಕೊಡೋದಕ್ಕೆ ಆಗ್ಲಿಲ್ಲ ಅಂದ್ರೂ ಪರಿಸ್ಥಿತಿ ತಿಳಿ ಆಗೋವರೆಗೂ ಅವ್ರು ನಮ್ಮ ಜೊತೆ ಇದ್ದು ನಮ್ಮನ್ನ ಸಂತೈಸ್ತಾರೆ, ಬಲಪಡಿಸ್ತಾರೆ.—ಜ್ಞಾನೋಕ್ತಿ 12:25.
ಪ್ರಾರ್ಥನೆ ಮಾಡಿ. “ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು, ಆತನೇ ನಿನಗೆ ಆಧಾರವಾಗಿ ಇರ್ತಾನೆ. ನೀತಿವಂತ ಬಿದ್ದುಹೋಗೋಕೆ ಆತನು ಯಾವತ್ತೂ ಬಿಡಲ್ಲ” ಅಂತ ಬೈಬಲ್ ಹೇಳುತ್ತೆ.b (ಕೀರ್ತನೆ 55:22) ಅದಕ್ಕೆ ಬೈಬಲ್ ಯೆಹೋವನನ್ನ ‘ನಿರೀಕ್ಷೆ ಕೊಡೋ ದೇವರು‘ ಅಂತ ಹೇಳುತ್ತೆ. (ರೋಮನ್ನರಿಗೆ 15:13) ಹಾಗಾಗಿ “ನಿಮಗಿರೋ ಚಿಂತೆಯನ್ನೆಲ್ಲಾ” ಆತನ ಮೇಲೆ ಹಾಕಬಹುದು. ಯಾಕಂದ್ರೆ ಆತನಿಗೆ ನಿಮ್ಮ ಮೇಲೆ ತುಂಬಾ ಕಾಳಜಿ ಇದೆ. (1 ಪೇತ್ರ 5:7) ಅದಕ್ಕೆ ಬೈಬಲಿನಲ್ಲಿ ಹೀಗಿದೆ: ದೇವರು “ನಿಮ್ಮನ್ನು ಬಲಪಡಿಸ್ತಾನೆ . . . ನೀವು ನಂಬಿಗಸ್ತರಾಗಿ ಉಳಿಯೋಕೆ ಸಹಾಯ ಮಾಡ್ತಾನೆ. ನಿಮ್ಮನ್ನ ಗಟ್ಟಿ ನೆಲದ ಮೇಲೆ ನಿಲ್ಲಿಸ್ತಾನೆ.”—1 ಪೇತ್ರ 5:10.
ಕಷ್ಟಗಳು ನಿಮ್ಮ ನಿರೀಕ್ಷೆಯನ್ನ ಗಟ್ಟಿ ಮಾಡುತ್ತೆ ಅಂತ ಅರ್ಥ ಮಾಡ್ಕೊಳ್ಳಿ. “ನನ್ನ ಮಾತು ಕೇಳಿದವನು ಸುರಕ್ಷಿತವಾಗಿ ಇರ್ತಾನೆ, ಯಾವುದೇ ಆತಂಕ ಇಲ್ಲದೆ ಆರಾಮಾಗಿ ಇರ್ತಾನೆ” ಅಂತ ದೇವರು ಬೈಬಲಿನಲ್ಲಿ ಮಾತು ಕೊಟ್ಟಿದ್ದಾನೆ. (ಜ್ಞಾನೋಕ್ತಿ 1:33) ಆಸ್ಟ್ರೇಲಿಯಾದಲ್ಲಿರೋ ಮಾರ್ಗರೇಟ್ ಅನ್ನೋ ಸ್ತ್ರೀ ಅವ್ರಿದ್ದ ಜಾಗದಲ್ಲಿ ಚಂಡಮಾರುತ ಬಂದಾಗ ತಮ್ಮ ಮನೆ, ಆಸ್ತಿ-ಪಾಸ್ತಿ ಎಲ್ಲಾ ಕಳ್ಕೊಂಡ್ರು. ಆಗ ಅವರು ‘ಹೀಗಾಯ್ತಲ್ಲಾ’ ಅಂತ ದುಃಖದಲ್ಲೇ ಮುಳುಗಿ ಹೋಗೋ ಬದಲು, ಆಸ್ತಿ-ಪಾಸ್ತಿ ಕ್ಷಣಿಕ ಅನ್ನೋ ಪ್ರಾಮುಖ್ಯ ಪಾಠ ಕಲಿತ್ರು. ಆದಾದ ಮೇಲೆ ಜೀವನದಲ್ಲಿ ಆಸ್ತಿಪಾಸ್ತಿಗಿಂತ ದೇವರ ಜೊತೆ ನಮಗಿರೋ ಸ್ನೇಹ, ಸ್ನೇಹಿತರು, ಕುಟುಂಬದವರು ಮತ್ತು ಬೈಬಲ್ ಕೊಟ್ಟಿರೋ ನಿರೀಕ್ಷೆನೇ ಮುಖ್ಯ ಅನ್ನೋದನ್ನ ಅರ್ಥ ಮಾಡ್ಕೊಂಡ್ರು.—ಕೀರ್ತನೆ 37:34; ಯಾಕೋಬ 4:8.
ಬೈಬಲ್ ನಮಗೆ ಯಾವ ನಿರೀಕ್ಷೆ ಕೊಡುತ್ತೆ?
ಮನುಷ್ಯರಿಗಾಗಿ ಒಂದು ಸುಂದರ ಭವಿಷ್ಯ ಕಾದಿದೆ ಅಂತ ಬೈಬಲ್ ಹೇಳುತ್ತೆ. ಆದ್ರೆ ಅದು ಜಾಸ್ತಿ ದೂರ ಇಲ್ಲ. ನಾವು ಇವತ್ತು ಅನುಭವಿಸ್ತಿರೋ ಕಷ್ಟಗಳೇ ನಾವು “ಕೊನೇ ದಿನಗಳಲ್ಲಿ” ಬದುಕ್ತಿದ್ದೀವಿ ಅನ್ನೋದನ್ನ ತೋರಿಸುತ್ತೆ. (2 ತಿಮೊತಿ 3:1-5) ಬೇಗ ದೇವರು ಈ ಭೂಮಿಯನ್ನ ತನ್ನ ನಿಯಂತ್ರಣಕ್ಕೆ ತಗೊಂಡು ಇಲ್ಲಿ ನಡೀತಿರೋ ಅನ್ಯಾಯ, ಕಷ್ಟಗಳನ್ನೆಲ್ಲಾ ತೆಗೆದು ಹಾಕ್ತಾನೆ. ಈ ಕೆಲಸ ತನ್ನ ಸರ್ಕಾರದ ಮೂಲಕ ಮಾಡ್ತಾನೆ. ಇದು ಇಡೀ ಭೂಮಿಯನ್ನ ಆಳುತ್ತೆ. (ದಾನಿಯೇಲ 2:44; ಪ್ರಕಟನೆ 11:15) ಯೇಸು ಮಾದರಿ ಪ್ರಾರ್ಥನೆ ಮಾಡುವಾಗ “ನಿನ್ನ ಆಳ್ವಿಕೆ ಬರಲಿ. ನಿನ್ನ ಇಷ್ಟ . . . ಭೂಮಿಯಲ್ಲೂ ನೆರವೇರಲಿ” ಅಂತ ಹೇಳಿದಾಗ ಆತನ ಮನಸ್ಸಿನಲ್ಲಿ ದೇವರ ಸರ್ಕಾರ ಇತ್ತು.—ಮತ್ತಾಯ 6:9, 10.
ಮನುಷ್ಯರು ಚೆನ್ನಾಗಿರಬೇಕು ಅನ್ನೋದೇ ದೇವರ ಆಸೆ. ಆತನು ಇದನ್ನ ಬೈಬಲಿನಲ್ಲಿ ಸ್ಪಷ್ಟವಾಗಿ ಬರೆಸಿಟ್ಟಿದ್ದಾನೆ. ದೇವರ ಸರ್ಕಾರ ಯಾವೆಲ್ಲಾ ಸಮಸ್ಯೆಗಳನ್ನ ತೆಗೆದು ಹಾಕುತ್ತೆ ಅನ್ನೋದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:
ಹಸಿವು ಇರಲ್ಲ. “ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ, ದೇವರು, ನಮ್ಮ ದೇವರು ನಮ್ಮನ್ನ ಆಶೀರ್ವದಿಸ್ತಾನೆ.”—ಕೀರ್ತನೆ 67:6.
ಕಾಯಿಲೆಗಳು ಇರಲ್ಲ. “ದೇಶದಲ್ಲಿ ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ.”—ಯೆಶಾಯ 33:24.
ಸಾವು ಇರಲ್ಲ. “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”—ಪ್ರಕಟನೆ 21:3, 4.
a ನಾವು ಯಾವುದಾದ್ರೂ ಒಂದು ವಿಷ್ಯವನ್ನ ಇಷ್ಟಪಟ್ಟಾಗ ಮತ್ತು ಅದನ್ನ ನಾವು ಪಡ್ಕೊತೀವಿ ಅಂತ ಅನಿಸಿದಾಗ ಅದ್ರ ಬಗ್ಗೆ ನಿರೀಕ್ಷೆ ಇಟ್ಕೊತೀವಿ. ಯಾವುದಾದ್ರೂ ವಸ್ತು ಅಥವಾ ಕಾರಣಕ್ಕಾಗಿ ಎದುರು ನೋಡೋದು ಕೂಡ ನಿರೀಕ್ಷೆ ಆಗಿದೆ.
b ದೇವರ ಹೆಸರು ಯೆಹೋವ ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 83:18.