ದಶಮಾಂಶದ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ಕೊಡೋ ಉತ್ತರ
ಇಸ್ರಾಯೇಲ್ಯರಿಗೆ ಸತ್ಯಾರಾಧನೆಯನ್ನ ಬೆಂಬಲಿಸುವ ಅವಕಾಶ ಇತ್ತು. ಅದಕ್ಕಾಗಿ ಅವರು ತಮ್ಮ ವರ್ಷದ ಆದಾಯದಲ್ಲಿ ದಶಮಾಂಶa ಅಥವಾ ಹತ್ತರಲ್ಲಿ ಒಂದು ಭಾಗವನ್ನ ಕಾಣಿಕೆಯಾಗಿ ಕೊಡಬಹುದಿತ್ತು. ದೇವರು ಅವರಿಗೆ “ಪ್ರತಿವರುಷದ ನಿಮ್ಮ ಹೊಲದ ಬೆಳೆಯಲ್ಲಿ ದಶಮಭಾಗವನ್ನು [“ದಶಮಾಂಶ,” ಕಿಂಗ್ ಜೇಮ್ಸ್ ವರ್ಷನ್] ಪ್ರತ್ಯೇಕಿಸಬೇಕು” ಅನ್ನೋ ಆಜ್ಞೆಯನ್ನ ಕೊಟ್ಟಿದ್ದನು.—ಧರ್ಮೋಪದೇಶಕಾಂಡ 14:22.
ದಶಮಾಂಶದ ಆಜ್ಞೆ ಮೋಶೆಯ ಧರ್ಮಶಾಸ್ತ್ರದ ಭಾಗವಾಗಿತ್ತು, ಇದು ಪ್ರಾಚೀನ ಇಸ್ರಾಯೇಲ್ಯರಿಗೆ ದೇವರು ಕೊಟ್ಟ ಒಂದು ನಿಯಮವಾಗಿತ್ತು. ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲದೆ ಇರೋದರಿಂದ ಅವರು ದಶಮಾಂಶವನ್ನ ಕೊಡಬೇಕಾಗಿಲ್ಲ. (ಕೊಲೊಸ್ಸೆ 2:13, 14) ಆದರೆ ಕಾಣಿಕೆಯನ್ನ ಕೊಡಬಹುದು. ಅದನ್ನ “ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂಥ 9:7.
“ಹಳೇ ಒಡಂಬಡಿಕೆ”ಯಲ್ಲಿ ದಶಮಾಂಶದ ಬಗ್ಗೆ ಏನು ಹೇಳುತ್ತೆ?
ಹಳೇ ಒಡಂಬಡಿಕೆಯಲ್ಲಿ ದಶಮಾಂಶದ ಬಗ್ಗೆ ತುಂಬ ಸಲ ಹೇಳಿದೆ. ಇಸ್ರಾಯೇಲ್ಯರಿಗೆ ಮೋಶೆಯ ಮೂಲಕ ಧರ್ಮಶಾಸ್ತ್ರವನ್ನ ಕೊಟ್ಟ ಮೇಲೆನೇ ಜಾಸ್ತಿ ಸಲ ದಶಮಾಂಶದ ಬಗ್ಗೆ ಹೇಳಲಾಗಿದೆ. ಅದಕ್ಕಿಂತ ಮುಂಚೆನೂ ಕೆಲವು ಸಲ ಬೈಬಲಿನಲ್ಲಿ ಇದರ ಬಗ್ಗೆ ತಿಳಿಸಲಾಗಿದೆ.
ಮೋಶೆಯ ಧರ್ಮಶಾಸ್ತ್ರಕ್ಕಿಂತ ಮುಂಚೆ
ದಶಮಾಂಶವನ್ನ ಕೊಟ್ಟ ಮೊದಲ ವ್ಯಕ್ತಿ ಅಬ್ರಾಮ (ಅಬ್ರಹಾಮ) ಅಂತ ಬೈಬಲ್ ಹೇಳುತ್ತೆ. (ಆದಿಕಾಂಡ 14:18-20; ಇಬ್ರಿಯ 7:4) ಸಾಲೇಮಿನ ಅರಸನಿಗೆ ಅಬ್ರಾಮ ಒಂದು ಸಲ ದಶಮಾಂಶವನ್ನ ಕೊಟ್ಟ. ಆಮೇಲೆ ಅಬ್ರಹಾಮನಾಗಲಿ ಅವನ ಮಕ್ಕಳಾಗಲಿ ದಶಮಾಂಶ ಕೊಟ್ರು ಅಂತ ಬೈಬಲ್ ಎಲ್ಲೂ ಹೇಳಲ್ಲ.
ಬೈಬಲಿನಲ್ಲಿ ದಶಮಾಂಶವನ್ನ ಕೊಟ್ಟ ಎರಡನೇ ವ್ಯಕ್ತಿ, ಅಬ್ರಹಾಮನ ಮೊಮ್ಮಗ ಯಾಕೋಬ. ಅವನು, ದೇವರು ತನ್ನನ್ನ ಆಶೀರ್ವದಿಸೋದಾದ್ರೆ ತನ್ನ “ಎಲ್ಲಾ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು” ದೇವರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ. (ಆದಿಕಾಂಡ 28:20-22) ಕೆಲವು ಬೈಬಲ್ ವಿದ್ವಾಂಸರು ಯಾಕೋಬ ಪ್ರಾಣಿಗಳ ಯಜ್ಞವನ್ನ ದಶಮಾಂಶವಾಗಿ ಕೊಟ್ಟ ಅಂತಾರೆ. ಕೊಟ್ಟ ಮಾತಿನ ತರ ಯಾಕೋಬ ನಡಕೊಂಡ. ಆ ಭಾರನ ತನ್ನ ಕುಟುಂಬದ ಮೇಲೆ ಹಾಕಲಿಲ್ಲ.
ಮೋಶೆಯ ಧರ್ಮಶಾಸ್ತ್ರದ ಸಮಯದಲ್ಲಿ
ಇಸ್ರಾಯೇಲ್ಯರು ಧಾರ್ಮಿಕ ಚಟುವಟಿಕೆಗಳನ್ನ ಬೆಂಬಲಿಸಲು ದಶಮಾಂಶವನ್ನ ಕೊಡಬೇಕಾಗಿತ್ತು. ಇದು ದೇವರು ಅವರಿಗೆ ಕೊಟ್ಟ ಆಜ್ಞೆ.
ಲೇವಿಯರು ಮತ್ತು ಯಾಜಕರು ಪೂರ್ತಿ ಸಮಯ ದೇವರ ಕೆಲಸವನ್ನ ಮಾಡ್ತಿದ್ರಿಂದ ವ್ಯವಸಾಯ ಮಾಡೋಕೆ ಅವರಿಗೆ ಸ್ವಂತ ಭೂಮಿ ಇರಲಿಲ್ಲ. ಇಸ್ರಾಯೇಲ್ಯರು ಕೊಡ್ತಿದ್ದ ದಶಮಾಂಶದ ಮೂಲಕ ಇವರ ಅವಶ್ಯಕತೆಗಳನ್ನ ಪೂರೈಸಲಾಗುತ್ತಿತ್ತು. (ಅರಣ್ಯಕಾಂಡ 18:20, 21) ಯಾಜಕರಲ್ಲದ ಲೇವಿಯರು ಜನರಿಂದ ತಗೊಳ್ತಿದ್ದ ದಶಮಾಂಶದಲ್ಲಿ ಅತ್ಯುತ್ತಮವಾದದ್ದನ್ನ ಅಂದ್ರೆ ‘ಹತ್ತನೆಯ ಪಾಲಿನ ಹತ್ತನೆಯ ಭಾಗವನ್ನ’ ಯಾಜಕರಿಗೆ ಕೊಡಬೇಕಾಗಿತ್ತು.—ಅರಣ್ಯಕಾಂಡ 18:26-29.
ಎರಡನೇ ವರ್ಷದಲ್ಲಿ ಸಿಗುತ್ತಿದ್ದ ದಶಮಾಂಶದಿಂದ ಲೇವಿಯರಿಗೂ ಲೇವಿಯರಲ್ಲದವರಿಗೂ ಪ್ರಯೋಜನ ಆಗ್ತಿತ್ತು. (ಧರ್ಮೋಪದೇಶಕಾಂಡ 14:22, 23) ಈ ಸೌಲಭ್ಯವನ್ನು ಇಸ್ರಾಯೇಲ್ಯರು ವಿಶೇಷ ಹಬ್ಬಗಳ ಸಮಯದಲ್ಲಿ ಉಪಯೋಗಿಸಿಕೊಳ್ಳುತ್ತಿದ್ರು. ಕೆಲವು ಸಲ ಅದನ್ನ ಬಡವರಿಗೆ ಸಹಾಯ ಮಾಡಲು ಉಪಯೋಗಿಸುತ್ತಿದ್ದರು.—ಧರ್ಮೋಪದೇಶಕಾಂಡ 14:28, 29; 26:12.
ದಶಮಾಂಶನ ಹೇಗೆ ಲೆಕ್ಕ ಹಾಕ್ತಿದ್ರು? ಇಸ್ರಾಯೇಲ್ಯರು ತಮ್ಮ ವ್ಯವಸಾಯದ ಭೂಮಿಯಲ್ಲಿ ಸಿಗ್ತಿದ್ದ ಆದಾಯದ ಹತ್ತನೇ ಒಂದು ಭಾಗವನ್ನ ದಶಮಾಂಶವಾಗಿ ಕೊಡಬೇಕಿತ್ತು. (ಯಾಜಕಕಾಂಡ 27:30) ಅವ್ರು ಈ ದಶಮಾಂಶವನ್ನ ಧಾನ್ಯಗಳ ರೂಪದಲ್ಲಿ ಕೊಡದೆ ಹಣದ ರೂಪದಲ್ಲಿ ಕೊಡೋ ಹಾಗಿದ್ದರೆ 12 ಪರ್ಸೆಂಟ್ ಕೊಡಬೇಕಿತ್ತು. (ಯಾಜಕಕಾಂಡ 27:31) ಅಷ್ಟೇ ಅಲ್ಲದೆ ‘ಆಡು ದನಕುರಿ ಪಶುಗಳಲ್ಲಿ ಪ್ರತಿ ಹತ್ತನೆಯದನ್ನ’ ದಶಮಾಂಶವಾಗಿ ಕೊಡಬೇಕಿತ್ತು.—ಯಾಜಕಕಾಂಡ 27:32.
ಇಸ್ರಾಯೇಲ್ಯರು ಪ್ರಾಣಿಗಳನ್ನ ಹೇಗೆ ದಶಮಾಂಶವಾಗಿ ಕೊಡ್ತಿದ್ರು? ಅವ್ರು ತಮ್ಮ ಪ್ರಾಣಿಗಳ ಗುಂಪಿನಲ್ಲಿ ಹತ್ತನೇ ಪ್ರಾಣಿಯನ್ನ ದಶಮಾಂಶವಾಗಿ ಕೊಡೋಕೆ ಮೀಸಲಾಗಿ ಇಡ್ತಿದ್ರು. ಈ ತರ ಮೀಸಲಾಗಿರೋ ಪ್ರಾಣಿಗಳಿಗೆ ಬದಲಾಗಿ ಬೇರೆ ಪ್ರಾಣಿಯನ್ನ ಅಥವಾ ಹಣವನ್ನ ಕೊಡಬಾರದಿತ್ತು. (ಯಾಜಕಕಾಂಡ 27:32, 33) ವಾರ್ಷಿಕ ಹಬ್ಬಗಳನ್ನ ಮಾಡ್ತಿದ್ದ ಸಮಯದಲ್ಲಿ ಕೊಡಬೇಕಿದ್ದ ದಶಮಾಂಶವನ್ನ ಹಣದ ರೂಪದಲ್ಲೂ ಕೊಡಬಹುದಿತ್ತು. ಇದ್ರಿಂದ ದೇವರ ಆರಾಧನೆಗೋಸ್ಕರ ತುಂಬ ದೂರ ಪ್ರಯಾಣಮಾಡ್ತಿದ್ದವ್ರಿಗೆ ತುಂಬ ಪ್ರಯೋಜನ ಆಗ್ತಿತ್ತು.—ಧರ್ಮೋಪದೇಶಕಾಂಡ 14:25, 26.
ಇಸ್ರಾಯೇಲ್ಯರು ಯಾವಾಗ ದಶಮಾಂಶವನ್ನ ಕೊಡ್ತಿದ್ರು? ಇಸ್ರಾಯೇಲ್ಯರು ಪ್ರತಿವರ್ಷ ದಶಮಾಂಶವನ್ನು ಕೊಡ್ತಿದ್ರು. (ಧರ್ಮೋಪದೇಶಕಾಂಡ 14:22) ಆದ್ರೆ ಏಳನೇ ವರ್ಷ ಅವ್ರಿಗೆ ರಿಯಾಯಿತಿ ಸಿಗ್ತಿತ್ತು. ಯಾಕಂದ್ರೆ ಆ ವರ್ಷ ಸಬ್ಬತ್ ವರ್ಷ ಅಥವಾ ವಿಶ್ರಾಂತಿ ವರ್ಷವಾದ್ರಿಂದ ಅವ್ರು ಯಾವುದೇ ಧಾನ್ಯಗಳನ್ನು ಬೆಳೀತಿರಲಿಲ್ಲ. (ಯಾಜಕಕಾಂಡ 25:4, 5) ಈ ವರ್ಷಗಳಲ್ಲಿ ಕೊಯ್ಲು ಮಾಡುವಾಗ ಯಾವುದೇ ದಶಮಾಂಶವನ್ನ ತೆಗೆದುಕೊಳ್ತಿರಲಿಲ್ಲ. ಇಸ್ರಾಯೇಲ್ಯರು ಇನ್ನೊಂದು ರೀತಿಯಲ್ಲೂ ದಶಮಾಂಶವನ್ನ ಕೊಡ್ತಿದ್ರು, ಪ್ರತಿ ಏಳು ವರ್ಷಗಳ ಸಬ್ಬತ್ ಕ್ರಮದ ಮೂರು ಮತ್ತು ಆರನೇ ವರ್ಷಗಳಲ್ಲಿ ಅವರು ಆ ವರ್ಷದ ಬೆಳೆಯ ಹತ್ತನೇ ಒಂದು ಭಾಗವನ್ನ ಬಡವರು ಮತ್ತು ಯಾಜಕರಿಗೆ ಕೊಡ್ತಿದ್ರು.—ಧರ್ಮೋಪದೇಶಕಾಂಡ 14:28, 29.
ದಶಮಾಂಶ ಕೊಡದೇ ಇದ್ರೆ ಏನಾದ್ರೂ ದಂಡ ಹಾಕ್ತಿದ್ರಾ? ಮೋಶೆ ಧರ್ಮಶಾಸ್ತ್ರದಲ್ಲಿ ಇದ್ರ ಬಗ್ಗೆ ಏನೂ ಹೇಳಿಲ್ಲ. ದಶಮಾಂಶ ಕೊಡೋದು ಇಸ್ರಾಯೇಲ್ಯರಿಗೆ ಒಂದು ಸುಯೋಗವಾಗಿದ್ರಿಂದ ಅವರು ಅದನ್ನ ಕೊಡ್ತಾ ಇದ್ರೇ ಹೊರತು ಕೊಡದೆ ಇದ್ರೆ ಶಿಕ್ಷೆ ಸಿಗುತ್ತೆ ಅಂತ ಭಯಪಟ್ಟು ಕೊಡ್ತಿರಲಿಲ್ಲ. ಅವರು ದಶಮಾಂಶವನ್ನ ಕೊಟ್ಟು ದೇವರ ಆಶೀರ್ವಾದವನ್ನ ಪಡ್ಕೋಬಹುದಿತ್ತು. (ಧರ್ಮೋಪದೇಶಕಾಂಡ 26:12-15) ಒಂದುವೇಳೆ ಕೊಟ್ಟಿಲ್ಲ ಅಂದ್ರೆ ಯೆಹೋವನಿಂದ ಅದನ್ನ ಕದ್ದುಕೊಳ್ಳೋ ತರ ಇರ್ತಿತ್ತು.—ಮಲಾಕಿ 3:8, 9.
ದಶಮಾಂಶ ಹೊರೆಯಾಗಿತ್ತಾ? ಇಲ್ಲ. ದೇವರು ಇಸ್ರಾಯೇಲ್ಯರಿಗೆ ‘ನೀವು ನನಗೆ ದಶಮಾಂಶವನ್ನ ಕೊಟ್ರೆ ನಾನು ನಿಮ್ಮನ್ನ ಜಾಸ್ತಿ ಆಶೀರ್ವಾದ ಮಾಡ್ತೀನಿ, ನಿಮಗೆ ಯಾವುದೇ ಕೊರತೆ ಆಗಲ್ಲ’ ಅಂತ ಮಾತು ಕೊಟ್ಟಿದ್ರು. (ಮಲಾಕಿ 3:10) ಯಾವಾಗ ಅವ್ರು ದೇವರಿಗೆ ದಶಮಾಂಶ ಕೊಡಲಿಲ್ಲವೋ ಆಗ ತುಂಬ ಕಷ್ಟ ಅನುಭವಿಸಬೇಕಾಯ್ತು. ಅವ್ರು ದೇವರ ಆಶೀರ್ವಾದ ಕಳಕೊಂಡ್ರು. ಲೇವಿಯರು ಮತ್ತು ಯಾಜಕರು ತಮ್ಮ ಅವಶ್ಯಕತೆನ ಪೂರೈಸಿಕೊಳ್ಳೋಕೆ ತುಂಬ ಸಮಯ ಕೆಲಸ ಮಾಡ್ತಿದ್ರಿಂದ ದೇವರನ್ನ ಆರಾಧಿಸೋಕೆ ಇಸ್ರಾಯೇಲ್ಯರಿಗೆ ಸಹಾಯ ಮಾಡಕ್ಕೆ ಅವರಿಂದ ಆಗ್ತಿರಲಿಲ್ಲ.—ನೆಹೆಮೀಯ 13:10; ಮಲಾಕಿ 3:7.
“ಹೊಸ ಒಡಂಬಡಿಕೆ”ಯಲ್ಲಿ ದಶಮಾಂಶದ ಬಗ್ಗೆ ಏನು ಹೇಳುತ್ತೆ?
ಯೇಸು ಭೂಮಿ ಮೇಲೆ ಇದ್ದಾಗಲೂ ದೇವರ ಆರಾಧಕರು ದಶಮಾಂಶವನ್ನ ಕೊಡ್ತಿದ್ರು. ಯೇಸು ಸತ್ತ ಮೇಲೆ ಈ ರೂಢಿ ನಿಂತುಹೋಯ್ತು.
ಯೇಸು ಸಮಯದಲ್ಲಿ
ಯೇಸು ಭೂಮಿ ಮೇಲೆ ಇದ್ದಾಗಲೂ ಇಸ್ರಾಯೇಲ್ಯರು ದಶಮಾಂಶವನ್ನ ಕೊಡ್ತಿದ್ರು ಅಂತ ಹೊಸ ಒಡಂಬಡಿಕೆ ಹೇಳುತ್ತೆ. ದಶಮಾಂಶ ಕೊಡೋದು ಒಂದು ಸುಯೋಗ ಅಂತ ಯೇಸು ಹೇಳಿದನು. ಆದ್ರೆ ಧಾರ್ಮಿಕ ನಾಯಕರನ್ನ ಯೇಸು ಖಂಡಿಸಿದನು. ಯಾಕಂದ್ರೆ ಅವ್ರು ದಶಮಾಂಶವನ್ನ ತಪ್ಪದೇ ಕೊಡ್ತಿದ್ದರು ಆದರೆ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ‘ನ್ಯಾಯ, ಕರುಣೆ ಮತ್ತು ನಂಬಿಗಸ್ತಿಕೆಯಂಥ ಪ್ರಾಮುಖ್ಯ ವಿಷಯಗಳನ್ನು ಕಡೆಗಣಿಸಿದ್ದರು.’—ಮತ್ತಾಯ 23:23.
ಯೇಸು ಸತ್ತ ಮೇಲೆ
ಯೇಸು ಸತ್ತ ಮೇಲೆ ದಶಮಾಂಶ ಕೊಡೋ ಅವಶ್ಯಕತೆ ಇಲ್ಲ. ಯಾಕಂದ್ರೆ ಯೇಸುವಿನ ಮರಣ ಮೋಶೆಯ ಧರ್ಮಶಾಸ್ತ್ರವನ್ನ ರದ್ದು ಮಾಡಿತು. ಆದ್ರಿಂದ ‘ದಶಮಭಾಗಗಳನ್ನು ತೆಗೆದುಕೊಳ್ಳುವ’ ಆಜ್ಞೆ ಕೂಡ ರದ್ದಾಯಿತು.—ಇಬ್ರಿಯ 7:5, 18; ಎಫೆಸ 2:13-15; ಕೊಲೊಸ್ಸೆ 2:13, 14.
a ದಶಮಾಂಶ ಅನ್ನೋದು “ಒಬ್ಬ ವ್ಯಕ್ತಿಯ ಆದಾಯದ ಹತ್ತನೇ ಒಂದು ಭಾಗವನ್ನ ನಿರ್ದಿಷ್ಟ ಕೆಲಸಕೋಸ್ಕರ ತೆಗೆದಿಡೋದನ್ನ ಸೂಚಿಸುತ್ತೆ . . . ಬೈಬಲ್ನಲ್ಲಿ ತಿಳಿಸಿರೋ ದಶಮಾಂಶವು ಧಾರ್ಮಿಕ ಉದ್ದೇಶಕ್ಕಾಗಿದೆ.”—ಹಾರ್ಪರ್ಸ್ ಬೈಬಲ್ ಡಿಕ್ಷನರಿ,ಪುಟ 765.