ಬೈಬಲಲ್ಲಿರೋ ಆಸಕ್ತಿಕರ ವಿಷ್ಯ
ಬೈಬಲ್ ಕಾಲದಲ್ಲಿದ್ದ ಮೀನು ಹಿಡಿಯೋ ಬಲೆಗಳು
ಯೇಸುವಿನ ಹಿಂಬಾಲಕರಲ್ಲಿ ಕೆಲವರು ಮೀನು ಹಿಡಿಯೋ ಕೆಲಸ ಮಾಡ್ತಿದ್ರು. (ಮಾರ್ಕ 1:16-20) ಅವರು ಗಲಿಲಾಯ ಸಮುದ್ರದಲ್ಲಿ ಮೀನು ಹಿಡಿಯೋಕೆ ತಮ್ಮ ಬಲೆಗಳನ್ನ ಬೀಸ್ತಿದ್ರು.
ಈ ಮೀನಿನ ಬಲೆಗಳನ್ನ ಹಗ್ಗ ಅಥವಾ ನಾರಿನ ದಾರಗಳನ್ನ ಗಂಟು ಹಾಕಿ ಒಂದು ಜಾಲರಿ ತರ ತಯಾರಿಸ್ತಿದ್ರು. ಚಿಕ್ಕ ಮೀನುಗಳನ್ನ ಹಿಡಿಯೋಕೆ ಚಿಕ್ಕ ತೂತುಗಳಿರೋ ಬಲೆಗಳನ್ನ, ದೊಡ್ಡ ಮೀನುಗಳನ್ನ ಹಿಡಿಯೋಕೆ ದೊಡ್ಡ ತೂತುಗಳಿರೋ ಬಲೆಗಳನ್ನ ಬಳಸ್ತಿದ್ರು. ಸಾಮಾನ್ಯವಾಗಿ ಚಿಕ್ಕ ಬಲೆಯನ್ನ ನೀರಿನಲ್ಲಿ ಮುಳುಗಿಸೋಕೆ ಸೀಸ ಅಥವಾ ಕಲ್ಲುಗಳನ್ನ ಅದಕ್ಕೆ ಕಟ್ತಿದ್ರು. ಆದ್ರೆ ದೊಡ್ಡ ಬಲೆಗಳ ಕೆಳಗೆ ಭಾರವಾದ ವಸ್ತುಗಳನ್ನ ಜೋಡಿಸ್ತಿದ್ರು, ಬಲೆಯ ಮೇಲ್ಭಾಗದಲ್ಲಿ ಮರದಿಂದ ಮಾಡಿದ ವಸ್ತುಗಳನ್ನ ಕಟ್ತಿದ್ರು. ಇದ್ರಿಂದ ಅದು ತೇಲ್ತಿತ್ತು.
ಮೀನಿನ ಬಲೆಗಳು ದುಬಾರಿಯಾಗಿತ್ತು. ಅದಕ್ಕೆ ಅದನ್ನ ಹುಷಾರಾಗಿ ನೋಡ್ಕೊಳ್ತಿದ್ರು. ಕೆಲವು ಸಲ ಸಮುದ್ರದ ತಳದಲ್ಲಿರೋ ಕಲ್ಲು-ಬಂಡೆಗಳಿಗೆ ಸಿಕ್ಕಿ ಹಾಕೊಂಡು ಅದು ಹಾಳಾಗ್ತಿತ್ತು ಅಥವಾ ದೊಡ್ಡ ಮೀನುಗಳನ್ನ ಹಿಡಿಯುವಾಗ ಅದು ಹರಿದು ಹೋಗ್ತಿತ್ತು. (ಲೂಕ 5:6) ಅದಕ್ಕೆ ಯಾಕೋಬ ಮತ್ತು ಯೋಹಾನ “ಬಲೆ ಸರಿಮಾಡ್ತಿದ್ರು” ಅಥವಾ ರಿಪೇರಿ ಮಾಡ್ತಿದ್ರು ಅಂತ ಬೈಬಲ್ ಹೇಳುತ್ತೆ. ಹೀಗೆ ರಿಪೇರಿ ಮಾಡೋಕೆ ಅವರು ಸೂಜಿ ಮತ್ತು ನಾರಿನ ದಾರನ ಬಳಸಿರಬಹುದು. (ಮತ್ತಾ. 4:21) ಮೀನುಗಾರರು ಪ್ರತಿ ಸಲ ಬಲೆನ ಉಪಯೋಗಿಸಿದ ಮೇಲೆ ಅದನ್ನ ಹೀಗೆ ರಿಪೇರಿ ಮಾಡ್ತಿದ್ರು ಅನಿಸುತ್ತೆ. ಅವರು ತಮ್ಮ ಬಲೆಯಲ್ಲಿದ್ದ ಮಣ್ಣು, ಕಸ-ಕಡ್ಡಿನ ತೆಗೆಯೋಕೆ ಅದನ್ನ “ತೊಳಿತಾ ಇದ್ರು” ಅಂತ ಲೂಕನೂ ಹೇಳಿದ್ದಾನೆ. (ಲೂಕ 5:2) ತೊಳೆದ ಮೇಲೆ ಅದನ್ನ ಬಿಸಿಲಲ್ಲಿ ಒಣಗಿಸ್ತಿದ್ರು. ಬಹುಶಃ ಬಲೆ ಹಾಳಾಗದೇ ಇರೋಕೆ ಈ ತರ ಮಾಡ್ತಿದ್ರು.—ಯೆಹೆ. 47:10.
ಇಂಥ ಬಲೆಗಳನ್ನ ಚೆನ್ನಾಗಿ ಬಳಸ್ತಿದ್ದ ವ್ಯಕ್ತಿಗಳಿಗೆ ಯೇಸು, “ಮನುಷ್ಯರನ್ನ ಹಿಡಿಯೋ ಬೆಸ್ತರಾಗಿ” ಅಂತ ಹೇಳಿದನು.