ಕಲಿಯೋಕೆ ಒಂದು ಕಥೆ
ಓಬದ್ಯನ ತರ ದೇವಭಯ ಬೆಳೆಸ್ಕೊಳ್ಳಿ
ಕೆಟ್ಟ ರಾಜ ಅಹಾಬನ ಅರಮನೆಯಲ್ಲಿ ಓಬದ್ಯ ಮೇಲ್ವಿಚಾರಕನಾಗಿ ಕೆಲಸ ಮಾಡ್ತಿದ್ದ. ರಾಜ ಅಹಾಬ ಬಾಳನ ಆರಾಧನೆಯನ್ನ ಇಸ್ರಾಯೇಲ್ ದೇಶದಲ್ಲೆಲ್ಲಾ ತುಂಬಿಸಿ ಬಿಟ್ಟಿದ್ದ. ಆದ್ರೆ ಓಬದ್ಯ ಮಾತ್ರ ‘ಚಿಕ್ಕ ವಯಸ್ಸಿಂದಾನೇ ಯೆಹೋವನಿಗೆ ಭಯಪಡ್ತಿದ್ದ.’ (1 ಅರ. 18:1-13) ಒಂದು ಸಾರಿ ರಾಣಿ ಈಜೆಬೇಲ್ ‘ಯೆಹೋವನ ಎಲ್ಲ ಪ್ರವಾದಿಗಳನ್ನ ಸಾಯಿಸಿ’ ಅಂತ ಆಜ್ಞೆ ಕೊಟ್ಟಳು. ಆಗ ಆ ಪ್ರವಾದಿಗಳಿಗೆ ಸಹಾಯ ಮಾಡೋಕೆ ಓಬದ್ಯ ಧೈರ್ಯದಿಂದ ಮುಂದೆ ಬಂದ. ಆ ಸಮಯದಲ್ಲಿ ಒಬ್ಬ ಪ್ರವಾದಿಯನ್ನ ಬಚ್ಚಿಡೋದೇ ತುಂಬ ಕಷ್ಟ. ಅಂಥದ್ರಲ್ಲಿ ಓಬದ್ಯ 100 ಪ್ರವಾದಿಗಳನ್ನ ಬಚ್ಚಿಟ್ಟು ಅವ್ರಿಗೆ ಬರಗಾಲದಲ್ಲೂ ಆಹಾರ ತಂದ್ಕೊಡ್ತಿದ್ದ. ಆ ಕೆಟ್ಟ ರಾಜ-ರಾಣಿಯ ಕೈ ಕೆಳಗಿದ್ದ ನೂರಾರು ಸುಳ್ಳು ಪ್ರವಾದಿಗಳ ಕಣ್ಣು ತಪ್ಪಿಸಿ ಈ ಕೆಲಸ ಮಾಡೋಕೆ ಓಬದ್ಯನಿಗೆ ಎಷ್ಟು ಕಷ್ಟ ಆಗಿರಬೇಕಲ್ವಾ!—1 ಅರ. 18:19.
ಓಬದ್ಯನಿಂದ ನಾವೇನು ಕಲಿಬಹುದು? ಓಬದ್ಯನಿಗೆ ಅಹಾಬನ ಮೇಲೆ ಭಯ ಇತ್ತು ನಿಜ, ಆದ್ರೆ ಅದಕ್ಕಿಂತ ಹೆಚ್ಚಾಗಿ ಅವನಿಗೆ ದೇವಭಯ ಇತ್ತು. ಪ್ರವಾದಿಗಳನ್ನ ಬಚ್ಚಿಡೋದು ಅಷ್ಟು ಸುಲಭ ಆಗಿರ್ಲಿಲ್ಲ, ಆದ್ರೆ ದೇವ ಭಯ ಅವನಿಗೆ ಧೈರ್ಯ ತುಂಬ್ತು. ಇದ್ರಿಂದ ತನ್ನ ಜೀವವನ್ನೇ ಪಣಕ್ಕಿಟ್ಟು ಅವ್ರನ್ನ ಕಾಪಾಡಿದ. ಓಬದ್ಯನ ತರಾನೇ ನಾವು ದೇವ ಭಯವನ್ನ ಬೆಳೆಸ್ಕೊಳ್ಳಬೇಕು. ನಾವಿರೋ ಜಾಗದಲ್ಲಿ ಯೆಹೋವನನ್ನ ಆರಾಧಿಸೋಕೆ ನಿಷೇಧ ಇದ್ರಂತೂ ನಾವಿದನ್ನ ಬೆಳೆಸ್ಕೊಳ್ಳಲೇಬೇಕು. ಆಗ ಕಷ್ಟವನ್ನ ತಾಳ್ಕೊಳ್ತಾ ಇರೋ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನಾವೂ ಧೈರ್ಯದಿಂದ ಮುಂದೆ ಬರ್ತೀವಿ.