ವಾಚಕರಿಂದ ಪ್ರಶ್ನೆಗಳು
ಸರ್ಕಾರಗಳು “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅನ್ನೋ ಘೋಷಣೆನ ಯಾವಾಗ ಮಾಡುತ್ತೆ?
ಇತ್ತೀಚಿನ ಕಾವಲಿನಬುರುಜುವಿನa “ವಾಚಕರಿಂದ ಪ್ರಶ್ನೆಗಳು” ಭಾಗದಲ್ಲಿ ನಾವು ಏನು ಓದಿದ್ವಿ ಅಂತ ನಿಮಗೆ ನೆನಪಿದ್ಯಾ? ಯೆಹೋವ, ತುಂಬ ಬೇಗ ‘ಹತ್ತು ಕೊಂಬುಗಳ’ (ಎಲ್ಲ ಸರ್ಕಾರಗಳ) ಹೃದಯದಲ್ಲಿ “ತನ್ನ ಯೋಚ್ನೆಯನ್ನ” ಹಾಕ್ತಾನೆ. ಇದು ಯಾವ ಯೋಚ್ನೆ? ಎಲ್ಲ ಸರ್ಕಾರಗಳು ತಮ್ಮ ಶಕ್ತಿ ಮತ್ತು ಅಧಿಕಾರವನ್ನ “ಕೆಂಪು ಕಾಡುಪ್ರಾಣಿ” ಆಗಿರೋ ವಿಶ್ವ ಸಂಸ್ಥೆಗೆ ಕೊಡಬೇಕು ಅನ್ನೋದೇ ಆ ಯೋಚ್ನೆ! ಈ ಕಾಡುಪ್ರಾಣಿಗೆ “ಕಾಡುಪ್ರಾಣಿಯ ಮೂರ್ತಿ” ಅನ್ನೋ ಇನ್ನೊಂದು ಹೆಸರೂ ಇದೆ. (ಪ್ರಕ. 13:14, 15; 17:3, 16, 17) ಈ “ಹತ್ತು ಕೊಂಬುಗಳು” ಮತ್ತು ಹೊಸದಾಗಿ ಶಕ್ತಿ ಪಡ್ಕೊಂಡ ವಿಶ್ವ ಸಂಸ್ಥೆ ಎರಡೂ ಸೇರ್ಕೊಂಡು ಭೂಮಿಯಲ್ಲಿರೋ ಎಲ್ಲ ಸುಳ್ಳು ಧರ್ಮಗಳನ್ನ ನಾಶ ಮಾಡುತ್ತೆ. ಹಾಗಾದ್ರೆ ಪ್ರಶ್ನೆ, “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ”b ಅನ್ನೋ ಘೋಷಣೆನ ಸರ್ಕಾರಗಳು ಯಾವಾಗ ಮಾಡುತ್ತೆ? ಸುಳ್ಳು ಧರ್ಮಗಳು ನಾಶ ಆಗೋ ಮುಂಚೆನಾ ಅಥವಾ ನಾಶ ಆದ ನಂತರನಾ?—1 ಥೆಸ. 5:3.
ನೇರವಾಗಿ ಹೇಳೋದಾದ್ರೆ, “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅನ್ನೋ ಘೋಷಣೆನ ಭವಿಷ್ಯದಲ್ಲಿ ಯಾವಾಗ ಮಾಡ್ತಾರೆ ಅಂತ ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ! ಒಂದುವೇಳೆ ಎಲ್ಲ ವಿವರಗಳು ನಮಗೆ ಈಗ್ಲೇ ಗೊತ್ತಾದ್ರೆ ‘ನಾವು ಹುಷಾರಾಗಿ, ಎಚ್ಚರವಾಗಿರೋ’ ಅಗತ್ಯನೇ ಬರಲ್ಲ. ಆದ್ದರಿಂದನೇ ಯೇಸು ನೀವು ಯಾವಾಗ್ಲೂ “ಎಚ್ಚರವಾಗಿರಿ” ಅಂತ ಪದೇಪದೇ ಹೇಳಿದನು. (ಮತ್ತಾ. 24:42; 25:13; 26:41) ಈಗ ನಾವು ಅಪೊಸ್ತಲ ಪೌಲ ಥೆಸಲೋನಿಕದವ್ರಿಗೆ ಬರೆದ ಪತ್ರದಲ್ಲಿ ಹೇಳಿದ ಈ ಭವಿಷ್ಯವಾಣಿಯಲ್ಲಿ ಇನ್ನೂ ಯಾವೆಲ್ಲ ವಿವರ ಇದೆ ಅಂತ ನೋಡೋಣ.
“ಜನ್ರು ‘ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ’ ಅಂತ ಹೇಳುವಾಗ್ಲೇ ಅವ್ರಿಗೆ ನಾಶ ದಿಢೀರಂತ ಬರುತ್ತೆ” ಅಂತ ಪೌಲ ಹೇಳಿದ. (1 ಥೆಸ. 5:2, 3) ಪೌಲನ ಈ ಮಾತುಗಳ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಈ ಹಿಂದೆ ತುಂಬ ಸಲ ಹೀಗೆ ಹೇಳಿತ್ತು: “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅನ್ನೋ ಘೋಷಣೆನ ಮಹಾಸಂಕಟ ಶುರುವಾಗೋಕೆ ಸ್ವಲ್ಪ ಮುಂಚೆ ಮಾಡಲಾಗುತ್ತೆ. ಆಗ ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವಾಗಿರೋ ಮಹಾ ಬಾಬೆಲಿನ ನಾಶ ಆರಂಭ ಆಗುತ್ತೆ. ಜೊತೆಗೆ, ಭವಿಷ್ಯದಲ್ಲಿ ಮಾಡಲಾಗೋ ಈ ಘೋಷಣೆನೇ ಮಹಾಸಂಕಟ ಶುರುವಾಗುತ್ತೆ ಅನ್ನೋದಕ್ಕೆ ಇರೋ ಕೊನೇ ಸೂಚನೆ ಆಗಿದೆ ಎಂದು ವಿವರಿಸಿತ್ತು.
ಆದ್ರೆ ಇದ್ರ ಬಗ್ಗೆ ನಾವು ಇನ್ನಷ್ಟು ಅಧ್ಯಯನ ಮಾಡಿದಾಗ ಈ ಘೋಷಣೆನ ಬೇರೆ ಸಮಯದಲ್ಲೂ ಮಾಡೋ ಸಾಧ್ಯತೆ ಸಹ ಇದೆ ಅಂತ ಅನಿಸಿದೆ. ಈ ‘ಶಾಂತಿ ಮತ್ತು ಸುರಕ್ಷತೆ’ ಅನ್ನೋ ಘೋಷಣೆನ ಸುಳ್ಳು ಧರ್ಮಗಳ ನಾಶನ ಆದಮೇಲೆ ಮಾಡೋ ಸಾಧ್ಯತೆ ಇದೆ. ಯಾಕೆ ಹಾಗೆ ಹೇಳಬಹುದು? ಇದಕ್ಕಿರೋ ಕೆಲವು ಕಾರಣಗಳನ್ನ ತಿಳ್ಕೊಳ್ಳೋಣ ಬನ್ನಿ.
ದೇಶಗಳು ನಡೆಸುತ್ತಾ ಬಂದಿರೋ ಯುದ್ಧಗಳಲ್ಲಿ ಸುಳ್ಳು ಧರ್ಮಗಳ ಕೈವಾಡ ಇದ್ಯಾ? ಬೈಬಲ್ ಇದ್ರ ಬಗ್ಗೆ ಹೀಗೆ ವಿವರಿಸುತ್ತೆ: “ಭೂಮಿಯ ಮೇಲೆ ಕ್ರೂರವಾಗಿ ಕೊಂದ ಜನ್ರ ರಕ್ತ ಈ ಪಟ್ಟಣದಲ್ಲಿ [“ಪ್ರಸಿದ್ಧ ವೇಶ್ಯೆ”, ಮಹಾ ಬಾಬೆಲ್] ಕಾಣಿಸ್ತು.” (ಪ್ರಕ. 17:1, 5; 18:24) ನಾವು ನೋಡೋದಾದ್ರೆ ಇತಿಹಾಸದುದ್ದಕ್ಕೂ ದೇಶಗಳು ಯುದ್ಧದಲ್ಲಿ ಪಾಲ್ಗೊಳ್ಳೋಕೆ ಮತ್ತು ಭಯೋತ್ಪಾದನೆ ಮಾಡೋಕೆ ಈ ಸುಳ್ಳು ಧರ್ಮಗಳೇ ಅವನ್ನ ಪ್ರೇರೇಪಿಸಿದೆ ಅನ್ನೋದು ಗೊತ್ತಾಗುತ್ತೆ. ಸುಳ್ಳು ಧರ್ಮಗಳಿಂದಾಗಿ ಯುದ್ಧ, ಹಿಂಸೆ ಮುಗಿಲು ಮುಟ್ಟಿದೆಯೇ ಹೊರತು ಶಾಂತಿ, ಸುರಕ್ಷತೆ ಸಿಕ್ಕಿಲ್ಲ! ಇದನ್ನೆಲ್ಲ ಗಮನಿಸಿದ್ರೆ ದೇಶಗಳು ‘ಶಾಂತಿ ಮತ್ತು ಸುರಕ್ಷತೆ’ ಅನ್ನೋ ಘೋಷಣೆನ ಸುಳ್ಳು ಧರ್ಮಗಳೆಲ್ಲ ನಾಶ ಆದಮೇಲೆ ಮಾಡೋ ಸಾಧ್ಯತೆ ಇದ್ಯಾ? ಹೌದು ಅಂತಾನೇ ಅನಿಸುತ್ತೆ, ಆದ್ರೆ ಇದನ್ನ ಗ್ಯಾರಂಟಿಯಾಗಿ ಹೇಳೋಕೆ ಆಗಲ್ಲ.
‘ಶಾಂತಿ ಮತ್ತು ಸುರಕ್ಷತೆ’ ಘೋಷಣೆ ಮಾಡಿದ ಮೇಲೆ ಏನಾಗುತ್ತೆ? “ಅವ್ರಿಗೆ ನಾಶ ದಿಢೀರಂತ ಬರುತ್ತೆ” ಅಂತ ಪೌಲ ಹೇಳಿದ್ದಾನೆ. (1 ಥೆಸ. 5:3) ಒಂದುವೇಳೆ ‘ಶಾಂತಿ ಮತ್ತು ಸುರಕ್ಷತೆ’ ಅನ್ನೋ ಘೋಷಣೆನ ಸುಳ್ಳು ಧರ್ಮಗಳ ನಾಶ ಆಗೋ ಮುಂಚೆ ಮಾಡೋದಾದ್ರೆ ಏನಾಗುತ್ತೆ ಅಂತ ಯೋಚಿಸಿ. ಆಗ ಸರ್ಕಾರಗಳಿಗೆ ಸುಳ್ಳು ಧರ್ಮಗಳನ್ನ ನಾಶ ಮಾಡೋಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತೆ. ಅದಾದ ಮೇಲೆ ಯೆಹೋವನು ಈ ಸರ್ಕಾರಗಳನ್ನ ನಾಶ ಮಾಡಬೇಕಾಗುತ್ತೆ. ಆದ್ರೆ ಪೌಲ ಇಲ್ಲಿ, ಈ ಘೋಷಣೆ ಮಾಡಿದ ತಕ್ಷಣ, ಸರ್ಕಾರಗಳ ಮೇಲೆ ದಿಢೀರಂತ, ಇದ್ದಕ್ಕಿದ್ದ ಹಾಗೆ ನಾಶ ಬರುತ್ತೆ ಅಂತ ಹೇಳಿದ್ದಾನೆ. ಆದ್ದರಿಂದ ಈ ಸುಳ್ಳು ಧರ್ಮಗಳ ನಾಶ ಆದಮೇಲೆ ಸರ್ಕಾರಗಳು ‘ಶಾಂತಿ ಮತ್ತು ಸುರಕ್ಷತೆ’ ಅನ್ನೋ ಘೋಷಣೆ ಮಾಡೋ ಸಾಧ್ಯತೆ ಇದೆ.
ಭವಿಷ್ಯದಲ್ಲಿ ಈ ಎಲ್ಲಾ ಘಟನೆಗಳು ನಡೆದಾಗ ಯೆಹೋವನ ಜನರಿಗೆ ಏನು ಗೊತ್ತಾಗುತ್ತೆ? ಇದ್ರ ಬಗ್ಗೆ ಪೌಲ ಹೀಗೆ ಹೇಳಿದ್ದಾನೆ: “ಸಹೋದರರೇ, ಆ ದಿನ ಪಟ್ಟಂತ ನಿಮ್ಮ ಮೇಲೆ ಬರೋಕೆ ನೀವೇನು ಕಳ್ಳರ ತರ ಕತ್ತಲಲ್ಲಿ ಇಲ್ಲ.” (1 ಥೆಸ. 5:4) ಏನಿದ್ರ ಅರ್ಥ? ಒಂದುವೇಳೆ ಸುಳ್ಳು ಧರ್ಮಗಳ ನಾಶ ಆದಮೇಲೆ ಸರ್ಕಾರಗಳು ‘ಶಾಂತಿ ಮತ್ತು ಸುರಕ್ಷತೆ’ ಘೋಷಣೆ ಮಾಡಿದ್ರೆ, ಆಗ ಎಲ್ಲ ಮನುಷ್ಯ ಸರ್ಕಾರಗಳು ಇನ್ನೇನು ನಾಶ ಆಗುತ್ತೆ ಅನ್ನೋದು ದೇವ ಜನರಿಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಆದ್ರೆ ಸರ್ಕಾರಗಳಿಗೆ ಆಗ ‘ಶಾಂತಿ ಮತ್ತು ಸುರಕ್ಷತೆ’ ಸಿಕ್ಕಿದೆ ಅನ್ನೋ ತಪ್ಪಾದ ಅನಿಸಿಕೆ ಇರುತ್ತೆ. ‘ನಮಗೇನೂ ಆಗಲ್ಲ, ನಾವು ಸುರಕ್ಷಿತವಾಗಿದ್ದೀವಿ’ ಅಂತ ಅವರು ಅಂದ್ಕೊಳ್ತಾರೆ. ಆಗ ಅವ್ರ ಮೇಲೆ ನಾಶ, ಕಳ್ಳನು ಬರೋ ತರ ದಿಢೀರಂತ ಬರುತ್ತೆ.
ಇಲ್ಲಿವರೆಗೂ ಕಲಿತ ಪ್ರಕಾರ ಮುಂದೆ ಏನಾಗುತ್ತೆ? ತುಂಬ ಬೇಗ “ಹತ್ತು ಕೊಂಬುಗಳು” ಮತ್ತು ಹೊಸದಾಗಿ ಶಕ್ತಿ ಪಡ್ಕೊಂಡ ಕಾಡುಪ್ರಾಣಿ, ಸುಳ್ಳು ಧರ್ಮಗಳನ್ನ ಪೂರ್ತಿ ನಾಶ ಮಾಡುತ್ತೆ. ಇದು ಯಾವಾಗ ಆಗುತ್ತೋ ಆಗ ಮಹಾಸಂಕಟ ಶುರು ಆಯ್ತು ಅಂತ ಅರ್ಥ. ಇದ್ರ ಜೊತೆಗೆ “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅನ್ನೋ ಘೋಷಣೆನ ಸರ್ಕಾರಗಳು ಭವಿಷ್ಯದಲ್ಲಿ ಮಾಡ್ತಾರೆ ಅಂತ ಕೂಡ ನಮಗೆ ಗೊತ್ತು. ಆದ್ರೆ ಈ ಘೋಷಣೆನ ಅವರು ನಿರ್ದಿಷ್ಟವಾಗಿ ಯಾವಾಗ ಮಾಡ್ತಾರೆ? ಇದು ನಮಗೆ ಸ್ಪಷ್ಟವಾಗಿ ಇನ್ನೂ ಗೊತ್ತಿಲ್ಲ, ಆದ್ರೆ ಎರಡು ಸಾಧ್ಯತೆಗಳಿದೆ. ಒಂದು, ಸುಳ್ಳು ಧರ್ಮಗಳನ್ನ ನಾಶ ಮಾಡೋ ಮುಂಚೆ ಈ ಘೋಷಣೆ ಮಾಡಬಹುದು. ಎರಡು, ಈ ಘೋಷಣೆನ ಸರ್ಕಾರಗಳು ಸುಳ್ಳು ಧರ್ಮಗಳನ್ನ ಸಂಪೂರ್ಣವಾಗಿ ನಾಶ ಮಾಡಿದ ಮೇಲೆ ಮಾಡೋ ಸಾಧ್ಯತೆನೂ ಇದೆ. ಹಾಗಾಗಿ ನಿರ್ದಿಷ್ಟವಾಗಿ ಯಾವ ಸಮಯದಲ್ಲಿ ಸರ್ಕಾರಗಳು ಈ ಘೋಷಣೆ ಮಾಡ್ತಾರೆ ಅಂತ ನಾವು ಕಾದು ನೋಡಬೇಕಾಗಿದೆ. ಯಾಕಂದ್ರೆ ಬೈಬಲಿನ ಭವಿಷ್ಯವಾಣಿಗಳ ಪೂರ್ತಿ ಅರ್ಥ, ಅದು ನೆರವೇರುತ್ತಿರುವಾಗ ಅಥವಾ ನೆರವೇರಿದ ನಂತರನೇ ಗೊತ್ತಾಗೋದು.—ಯೋಹಾನ 12:16 ಹೋಲಿಸಿ.
ಹಾಗಾದ್ರೆ ಮುಖ್ಯ ವಿಷ್ಯ ಯಾವುದು? ಈ ಘೋಷಣೆನ ಯಾವಾಗ ಮಾಡ್ತಾರೆ ಅನ್ನೋದಾ ಅಥವಾ ಯೆಹೋವನಿಗೆ ನಾವು ಯಾವಾಗ್ಲೂ ನಿಯತ್ತಾಗಿ ಇರಬೇಕು ಅನ್ನೋದಾ? ನೆನಪಿಡಿ, ಈ ಘಟನೆಗಳು ಯಾವಾಗ್ಲೇ ನಡೀಲಿ ನಾವು “ಎಚ್ಚರವಾಗಿ ಇರೋಣ, ಬುದ್ಧಿ ಉಪಯೋಗಿಸಿ ನಡಿಯೋಣ.”—1 ಥೆಸ. 5:6.
a ನವೆಂಬರ್ 2025ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ನೋಡಿ.
b ಅಪೊಸ್ತಲ ಪೌಲ ಬಳಸಿರೋ ಮಾತನ್ನ ನೋಡಿದ್ರೆ ಈ ಘೋಷಣೆನ ಒಂದಕ್ಕಿಂತ ಹೆಚ್ಚು ಬಾರಿ ಮಾಡಲಾಗುತ್ತೆ ಅಂತ ಅನಿಸುತ್ತೆ.