ಅಧ್ಯಯನ ಲೇಖನ 49
ಗೀತೆ 45 ನನ್ನ ಹೃದಯದ ಧ್ಯಾನ
ಯೋಬ ಪುಸ್ತಕದಿಂದ ಬೇರೆಯವ್ರಿಗೆ ಸಲಹೆ ಕೊಡಿ
“ಯೋಬ, ಈಗ ನಾನು ಹೇಳೋದನ್ನ ದಯವಿಟ್ಟು ಕೇಳು.”—ಯೋಬ 33:1.
ಈ ಲೇಖನದಲ್ಲಿ ಏನಿದೆ?
ಬೇರೆಯವ್ರಿಗೆ ಸಲಹೆ ಕೊಡೋಕೆ ಯೋಬ ಪುಸ್ತಕ ನಮಗೆ ಹೇಗೆ ಸಹಾಯ ಮಾಡುತ್ತೆ.
1-2. ಯೋಬನ ಮೂರು ಸ್ನೇಹಿತರು ಮತ್ತು ಎಲೀಹು ಏನು ಮಾಡಿದ್ರು?
ಯೋಬ ತನ್ನ ಆಸ್ತಿಪಾಸ್ತಿನ್ನೆಲ್ಲ ಕಳ್ಕೊಂಡಿದ್ದಾನೆ ಅನ್ನೋ ಸುದ್ದಿ ಕಾಡ್ಗಿಚ್ಚಿನ ತರ ಹರಡ್ತು. ಯೋಬನ ಸ್ನೇಹಿತರಾದ ಎಲೀಫಜ, ಬಿಲ್ದದ ಮತ್ತು ಚೋಫರನಿಗೂ ಈ ವಿಷ್ಯ ಗೊತ್ತಾಯ್ತು. ಅದಕ್ಕೆ ಅವರು ಅವನನ್ನ ಸಮಾಧಾನ ಮಾಡೋಕೆ ಊಚ್ ದೇಶಕ್ಕೆ ಬರ್ತಾರೆ. ಅಲ್ಲಿ ಬಂದಾಗ ಅವ್ರಿಗೆ ಅವನ ಪರಿಸ್ಥಿತಿ ನೋಡಿ ಏನು ಹೇಳಬೇಕು ಅಂತಾನೇ ಗೊತ್ತಾಗಲಿಲ್ಲ.
2 ಆ ಸನ್ನಿವೇಶನ ಸ್ವಲ್ಪ ಚಿತ್ರಿಸಿಕೊಳ್ಳಿ. ಯೋಬ ಅವನ ಹತ್ರ ಇದ್ದ ಕುರಿ, ದನ, ಒಂಟೆ ಮತ್ತು ಕತ್ತೆಗಳನ್ನೆಲ್ಲ ಕಳ್ಕೊಂಡಿದ್ದಾನೆ. ಅವನ ಮಕ್ಕಳೂ ತೀರಿ ಹೋಗಿದ್ದಾರೆ. ಅಷ್ಟೇ ಅಲ್ಲ, ತನ್ನ ಸೇವಕರಲ್ಲಿ ಹೆಚ್ಚಿನವ್ರನ್ನ ಕೊಂದು ಹಾಕಿದ್ದಾರೆ, ಇಷ್ಟೆಲ್ಲ ಸಾಲದೂ ಅಂತ ಯೋಬನಿಗೆ ಗಂಭೀರ ಕಾಯಿಲೆ ಬಂದಿದೆ, ಅವನ ಮೈಯೆಲ್ಲಾ ಹುಣ್ಣಾಗಿದೆ. ದೂರದಿಂದ ಬರ್ತಾ ಇರೋ ಯೋಬನ ಸ್ನೇಹಿತರು ಅವನು ಬೂದಿಯಲ್ಲಿ ಕೂತ್ಕೊಂಡಿರೋದನ್ನ ನೋಡ್ತಾರೆ. ಆಗ ‘ಅವರು ಏಳು ದಿನ ಯೋಬ ಅನುಭವಿಸ್ತಿದ್ದ ನೋವನ್ನ ನೋಡಿ ಅವ್ರ ಬಾಯಲ್ಲಿ ಒಂದು ಮಾತೂ ಬರ್ಲಿಲ್ಲ’ ಅನ್ನುತ್ತೆ ಬೈಬಲ್. (ಯೋಬ 2:12, 13) ವಯಸ್ಸಲ್ಲಿ ಚಿಕ್ಕವನಾಗಿದ್ದ ಎಲೀಹು ಕೂಡ ಬಂದು ಅವ್ರ ಜೊತೆ ಕುತ್ಕೊಳ್ತಾನೆ. ಯೋಬನೇ ಮಾತನ್ನು ಶುರು ಮಾಡಿ ತಾನು ಹುಟ್ಟಿದ ದಿನವನ್ನ ಶಪಿಸ್ತಾ ‘ನನ್ನ ಉಸಿರು ಈಗ್ಲೇ ನಿಂತು ಹೋಗಬೇಕಿತ್ತು’ ಅಂತಾನೆ. (ಯೋಬ 3:1-3, 11) ಯೋಬನಿಗೆ ಅವನ ಸ್ನೇಹಿತರ ಸಹಾಯ ಬೇಕಿತ್ತು. ಅವರು ಅವನನ್ನ ಪ್ರೋತ್ಸಾಹಿಸೋ, ಕಾಳಜಿ ತೋರಿಸೋ ನಿಜ ಸ್ನೇಹಿತರು ಅಂತ ಈ ಸಮಯದಲ್ಲಿ ತೋರಿಸಬೇಕಿತ್ತು. ಆದ್ರೆ ಇವರು ಏನು ಮಾಡಿದ್ರು?
3. ಈ ಲೇಖನದಲ್ಲಿ ನಾವೇನು ಕಲಿತೀವಿ?
3 ಯೋಬನ ಮೂರು ಸ್ನೇಹಿತರು ಮತ್ತು ಎಲೀಹು ಏನೆಲ್ಲಾ ಹೇಳಿದ್ರು, ಏನೆಲ್ಲಾ ಮಾಡಿದ್ರು ಅನ್ನೋದನ್ನ ಯೆಹೋವ ದೇವರು ಮೋಶೆ ಮೂಲಕ ಬೈಬಲಲ್ಲಿ ಬರೆಸಿದ್ದಾನೆ. ನಿಮಗೆ ನೆನಪಿರಬಹುದು, ಎಲೀಫಜ ಹೇಳಿದ ಕೆಲವು ಮಾತುಗಳು ಸೈತಾನನಿಂದ ಬಂದಿರಬಹುದು. ಆದ್ರೆ ಎಲೀಹು ಚೆನ್ನಾಗಿ ಮಾತಾಡಿದ. ಅವನು, ಯೆಹೋವ ಯೋಬನಿಗೆ ಏನು ಹೇಳಬೇಕಂತ ಅದ್ಕೊಂಡಿದ್ನೋ ಅದನ್ನೇ ಹೇಳಿದ. (ಯೋಬ 4:12-16; 33:24, 25) ಯೋಬ ಪುಸ್ತಕದಲ್ಲಿ ನಾವು ಕೆಲವು ಒಳ್ಳೆಯ ಸಲಹೆಗಳನ್ನು ನೋಡಬಹುದು, ಅಷ್ಟೇ ಅಲ್ಲ ಕೆಲವು ವ್ಯಕ್ತಿಗಳು ಕೊಟ್ಟ ಕೆಟ್ಟ ಸಲಹೆಗಳನ್ನೂ ನೋಡಬಹುದು. ನಮ್ಮ ಸ್ನೇಹಿತರಿಗೆ ಬುದ್ಧಿ ಹೇಳಬೇಕಾದ ಪರಿಸ್ಥಿತಿ ಬಂದ್ರೆ ಯೋಬ ಪುಸ್ತಕ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ. ಮೊದ್ಲು ನಾವು ಆ ಮೂರು ಸ್ನೇಹಿತರು ಕೊಟ್ಟ ತಪ್ಪಾದ ಸಲಹೆ ಬಗ್ಗೆ ನೋಡೋಣ. ಆಮೇಲೆ ಎಲೀಹು ಕೊಟ್ಟ ಒಳ್ಳೆ ಸಲಹೆ ಬಗ್ಗೆನೂ ಚರ್ಚೆ ಮಾಡೋಣ. ಅಷ್ಟೇ ಅಲ್ಲ, ಯೋಬ ಪುಸ್ತಕದಿಂದ ಇಸ್ರಾಯೇಲ್ಯರು ಏನೆಲ್ಲ ಕಲ್ತಿರಬಹುದು ಮತ್ತು ನಾವೇನು ಕಲಿಬಹುದು ಅಂತಾನೂ ನೋಡೋಣ.
ಯೋಬನ ಮೂರು ಸ್ನೇಹಿತರು ಕೊಟ್ಟ ಕೆಟ್ಟ ಸಲಹೆ
4. ಯೋಬನ ಮೂರು ಸ್ನೇಹಿತರು ಅವನನ್ನ ಸಮಾಧಾನ ಮಾಡೋಕೆ ಯಾಕೆ ತಪ್ಪಿ ಹೋದ್ರು?
4 ಯೋಬನ ಮೂರು ಸ್ನೇಹಿತರು ಅವನಿಗೆ ಬಂದ ಕಷ್ಟಗಳನ್ನ ಕೇಳಿಸಿಕೊಂಡು ಅವನಿಗೆ ಸಮಾಧಾನದ ಮಾತನ್ನ ಹೇಳಬೇಕು ಅಂತ ನೆನಸಿದ್ರು. (ಯೋಬ 2:11) ಆದ್ರೆ ಅವರು ಅವನನ್ನ ಸಮಾಧಾನ ಮಾಡೋಕೆ ತಪ್ಪಿ ಹೋದ್ರು. ಯಾಕೆ? ಮೂರು ಕಾರಣಗಳನ್ನ ನೋಡೋಣ. ಒಂದು, ಅವರು ಯೋಬ ಹೇಳೋದನ್ನ ಕೇಳಿಸಿಕೊಳ್ಳದೇ ಅವನೇನೋ ದೊಡ್ಡ ತಪ್ಪು ಮಾಡಿದ್ದಾನೆ, ಅದಕ್ಕೆ ಅವನಿಗೆ ಇಷ್ಟೆಲ್ಲಾ ಕಷ್ಟ ಬರ್ತಿದೆ ಅಂತ ತಪ್ಪಾಗಿ ಊಹಿಸ್ಕೊಂಡ್ರು.a (ಯೋಬ 4:7; 11:14) ಎರಡು, ಅವರು ಬುದ್ಧಿ ಇರೋ ತರ ಮಾತಾಡ್ತಿದ್ದೀವಿ ಅಂತ ಅದ್ಕೊಂಡ್ರು, ಆದ್ರೆ ಅವ್ರ ಮಾತಿಂದ ಯೋಬನಿಗೆ ಒಂಚೂರೂ ಸಮಾಧಾನ ಆಗಲಿಲ್ಲ. ಅವರು ಯೋಬನಿಗೆ ಬೇಜಾರಾಗೋ ತರ ಮಾತಾಡಿದ್ರು. ಕೆಲವೊಂದು ಸಲ ಅವ್ರ ಮಾತಲ್ಲಿ ಒಂಚೂರೂ ದಯೆ ಇರಲಿಲ್ಲ. (ಯೋಬ 13:12) ಉದಾಹರಣೆಗೆ, ಬಿಲ್ದದ ಯೋಬನಿಗೆ ಎರಡು ಸಾರಿ, ‘ನೀನು ತುಂಬಾ ಮಾತಾಡ್ತಾ ಇದ್ದೀಯ’ ಅಂತ ಹೇಳಿದ. (ಯೋಬ 8:2; 18:2) ಚೋಫರ ಯೋಬನಿಗೆ ಖಡಕ್ಕಾಗಿ ‘ಮೂರ್ಖ’ ಅಂತ ಹೇಳಿಬಿಟ್ಟ. (ಯೋಬ 11:12) ಮೂರು, ಅವರು ಯೋಬನ ಹತ್ರ ಮಾತಾಡುವಾಗ ಕಿರ್ಚಾಡ್ಲಿಲ್ಲ ಅಂದ್ರೂ ಅವ್ರ ಮಾತಲ್ಲಿ ಕೊಂಕಿತ್ತು, ಆರೋಪ ಹಾಕಿದ್ರು ಮತ್ತು ಅವನಿಗೆ ಕಿಂಚಿತ್ತೂ ಗೌರವ ಕೊಡ್ಲಿಲ್ಲ. (ಯೋಬ 15:7-11) ಹೀಗೆ ಆ ಮೂರು ಜನ ಯೋಬನಿಗೆ ಸಮಾಧಾನ ಮಾಡೋದನ್ನ, ಅವನ ನಂಬಿಕೆನ ಬಲಪಡಿಸೋದನ್ನ ಬಿಟ್ಟು, ಅವನ ತಪ್ಪು ಹುಡುಕೋದ್ರಲ್ಲೇ ಸಮಯ ಕಳೆದುಬಿಟ್ರು.
ನೀವು ಯಾರಿಗಾದ್ರೂ ಸಲಹೆ ಕೊಡುವಾಗ, ಅವ್ರಿಗಿಂತ ನೀವೇ ಶ್ರೇಷ್ಠ, ನಿಮಗೇ ಎಲ್ಲಾ ಗೊತ್ತಿರೋದು ಅನ್ನೋ ತರ ಮಾತಾಡಬೇಡಿ. ಬದ್ಲಿಗೆ ಅವ್ರಿಗೆ ಸಹಾಯ ಮಾಡೋದೇ ನಿಮ್ಮ ಗುರಿ ಅಂತ ತೋರಿಸಿ. (ಪ್ಯಾರ 4 ನೋಡಿ)
5. ಯೋಬನ ಮೂರು ಸ್ನೇಹಿತರ ಮಾತಿಂದ ಏನೆಲ್ಲಾ ಆಯ್ತು?
5 ಯೋಬನ ಮೂರು ಸ್ನೇಹಿತರು ತಮ್ಮ ಮಾತನ್ನ ಮುಗಿಸಿದ ಮೇಲೆ ಯೋಬ ಮುಂಚೆಗಿಂತ ಇನ್ನೂ ದುಃಖದಲ್ಲಿ ಮುಳುಗಿ ಹೋಗಿಬಿಟ್ಟ. (ಯೋಬ 19:2) ಅದಕ್ಕೇ ಯೋಬ, ‘ನಾನೇನೂ ತಪ್ಪು ಮಾಡಿಲ್ಲ, ನಾನು ನೀತಿವಂತ’ ಅಂತ ಸಮರ್ಥಿಸಿಕೊಳ್ತಾನೇ ಇದ್ದ. ಆತುರದಲ್ಲಿ ಸರಿಯಾಗಿ ಯೋಚನೆ ಮಾಡದೇ ಏನೇನೋ ಮಾತಾಡಿಬಿಟ್ಟ. (ಯೋಬ 6:3, 26) ಆ ಸಮಯದಲ್ಲಿ ಯೋಬನ ಸ್ನೇಹಿತರು ಅವನನ್ನ ತಿದ್ದಿ ಯೆಹೋವನ ಯೋಚನೆ ಏನಂತ ಹೇಳೋಕೂ ಹೋಗ್ಲಿಲ್ಲ. ಯೋಬನ ಹತ್ರ ದಯೆಯಿಂದ ನಡ್ಕೊಳ್ಳಲೂ ಇಲ್ಲ. ಹೀಗೆ ಅವರು ಸೈತಾನನ ಕೈಗೊಂಬೆ ಆದ್ರು. (ಯೋಬ 2:4, 6) ಈ ಘಟನೆಯಿಂದ ಆಗಿನ ಕಾಲದ ಇಸ್ರಾಯೇಲ್ಯರಿಗೂ ನಮಗೂ ಯಾವ ಪಾಠ ಇದೆ?
6. ಯೋಬನ ಮೂರು ಸ್ನೇಹಿತರ ಕೆಟ್ಟ ಮಾದರಿಯಿಂದ ಇಸ್ರಾಯೇಲಿನ ಹಿರಿಯರು ಯಾವ ಪಾಠಗಳನ್ನ ಕಲಿತಿರಬಹುದು?
6 ಇಸ್ರಾಯೇಲ್ಯರು ಯಾವ ಪಾಠ ಕಲಿತಿರಬಹುದು? ಯೆಹೋವನು ಇಸ್ರಾಯೇಲ್ಯರಿಗೆ ತನ್ನ ನಿಯಮಗಳನ್ನ ಕೊಟ್ಟಾಗ ಆ ನಿಯಮಗಳ ಪ್ರಕಾರ ಜನ್ರನ್ನ ತೀರ್ಪು ಮಾಡೋಕೆ ಹಿರಿಯರನ್ನ, ವಯಸ್ಸಾದವ್ರನ್ನ ಮತ್ತು ನ್ಯಾಯಾಧೀಶರನ್ನ ಆರಿಸಿಕೊಂಡನು. (ಧರ್ಮೋ. 1:15-18; 27:1) ಇವರು ಸಲಹೆ ಅಥವಾ ತೀರ್ಪು ಕೊಡೋ ಮುಂಚೆ ಚೆನ್ನಾಗಿ ಕೇಳಿಸ್ಕೊಬೇಕಿತ್ತು. (2 ಪೂರ್ವ. 19:6) ‘ನಂಗೇ ಎಲ್ಲಾ ಗೊತ್ತು’ ಅಂತ ಊಹಿಸಿಕೊಳ್ಳೋ ಬದ್ಲು, ಪ್ರಶ್ನೆಗಳನ್ನ ಕೇಳಿ ಸತ್ಯ ಏನು ಅಂತ ತಿಳ್ಕೊಬೇಕಿತ್ತು. (ಧರ್ಮೋ. 19:18) ಸಹಾಯ ಕೇಳ್ಕೊಂಡು ಬಂದವ್ರ ಹತ್ರ ಅವರು ಕಟುವಾಗಿ ಮಾತಾಡದೆ, ದಯೆಯಿಂದ ಮಾತಾಡಬೇಕಿತ್ತು. ಯಾಕೆ? ಒಂದುವೇಳೆ ಹಿರಿಯರು ತಾಳ್ಮೆ ಕಳ್ಕೊಂಡ್ರೆ, ಕಿರಿಕಿರಿ ಆದ್ರೆ ಸಹಾಯ ಕೇಳ್ಕೊಂಡು ಬಂದವ್ರಿಗೆ ಮಾತಾಡೋಕೇ ಮನಸ್ಸೇ ಬರ್ತಿರಲಿಲ್ಲ. (ವಿಮೋ. 22:22-24) ಯೋಬನ ಕಥೆಯಿಂದ ಇಸ್ರಾಯೇಲಿನ ಹಿರಿಯರು ಈ ಎಲ್ಲಾ ಪಾಠಗಳನ್ನ ಕಲಿತಿರಬಹುದು.
7. (ಎ) ಇಸ್ರಾಯೇಲಿನ ಹಿರಿಯರು ಮಾತ್ರ ಸಲಹೆ ಕೊಡ್ತಿದ್ರಾ? (ಬಿ) ಯೋಬನ ಕಥೆಯಿಂದ ಅವ್ರಿಗೇನು ಪ್ರಯೋಜನ ಆಗಿರುತ್ತೆ? (ಜ್ಞಾನೋಕ್ತಿ 27:9)
7 ಇಸ್ರಾಯೇಲಿನ ಹಿರಿಯರು ಮಾತ್ರ ಸಲಹೆ ಕೊಡ್ತಿರಲಿಲ್ಲ. ಅಲ್ಲಿದ್ದ ಚಿಕ್ಕವರು, ದೊಡ್ಡವರು, ಗಂಡಸ್ರು, ಹೆಂಗಸ್ರು ಅನ್ನೋ ಬೇಧ ಇಲ್ಲದೆ ಯಾರು ಬೇಕಾದ್ರೂ ತಮ್ಮ ಸ್ನೇಹಿತರು ತಪ್ಪು ಮಾಡಿದಾಗ ಅವ್ರನ್ನ ತಿದ್ದಿ, ಅವ್ರಿಗೆ ಬುದ್ಧಿ ಹೇಳಬಹುದಿತ್ತು. (ಕೀರ್ತ. 141:5) ನಿಜ ಸ್ನೇಹಿತರು ಮಾಡಬೇಕಾಗಿರೋದೂ ಅದೇ ಅಲ್ವಾ? (ಜ್ಞಾನೋಕ್ತಿ 27:9 ಓದಿ.) ಯೋಬನ ಮೂರು ಸ್ನೇಹಿತರ ಕೆಟ್ಟ ಮಾದರಿ, ಸಲಹೆ ಕೊಡುವಾಗ ಸ್ನೇಹಿತರ ಹತ್ರ ಏನು ಮಾತಾಡಬಾರದು, ಹೇಗೆ ನಡ್ಕೊಬಾರದು ಅಂತ ಇಸ್ರಾಯೇಲ್ಯರಿಗೂ ಕಲಿಸ್ತಿತ್ತು.
8. ಬೇರೆಯವ್ರಿಗೆ ಸಲಹೆ ಕೊಡುವಾಗ ನಾವೇನು ಮಾಡಬಾರದು? (ಚಿತ್ರ ನೋಡಿ.)
8 ನಮಗೆ ಯಾವ ಪಾಠ ಇದೆ. ನಮ್ಮ ಸಹೋದರ ಸಹೋದರಿಯರು ಕಷ್ಟದಲ್ಲಿರುವಾಗ ನಾವು ಯಾವಾಗ್ಲೂ ಅವ್ರಿಗೆ ಸಹಾಯ ಮಾಡೋಕೆ ರೆಡಿ ಇರ್ಬೇಕು. ಆದ್ರೆ ನಾವು ಯೋಬನ ಮೂರು ಸ್ನೇಹಿತರ ತರ ಮಾತಾಡಿದ್ರೆ ಅವ್ರನ್ನ ಸಮಾಧಾನ ಮಾಡೋಕ್ಕಾಗಲ್ಲ. ಅದ್ರ ಬದ್ಲಿಗೆ ನಾವೇನು ಮಾಡಬೇಕು? ಒಂದು, ನಾವು ಆತುರಪಟ್ಟು ನಿರ್ಧಾರ ಮಾಡಬೇಡಿ, ಸಲಹೆ ಕೊಡೋ ಮುಂಚೆ ನಿಜ ಏನಂತ ತಿಳ್ಕೊಬೇಕು. ಎರಡು, ನಾವು ಬೈಬಲಿಂದ ಸಲಹೆ ಕೊಡಬೇಕು. ಎಲೀಫಜ ಮಾಡಿದ ತರ ನಾವು ನಮ್ಮ ಸ್ವಂತ ಅನುಭವದಿಂದ, ನಮ್ಮ ಅಭಿಪ್ರಾಯ ಹೇಳಬಾರದು. (ಯೋಬ 4:8; 5:3, 27) ಮೂರು, ನಾವು ಕಟುವಾಗಿ ಅಥವಾ ಚುಚ್ಚಿ-ಚುಚ್ಚಿ ಮಾತಾಡಬಾರದು. ನೆನಪಿಡಿ, ಎಲೀಫಜ ಮತ್ತು ಅವನ ಸ್ನೇಹಿತರು ಹೇಳಿದ ಕೆಲವು ಮಾತುಗಳು ನಿಜ ಆಗಿದ್ವು, ಅಪೊಸ್ತಲ ಪೌಲನೇ ಎಲೀಫಜನ ಕೆಲವು ಮಾತುಗಳನ್ನು ಬಳಸಿದ್ದಾನೆ. (ಯೋಬ 5:13; 1 ಕೊರಿಂ. 3:19 ಹೋಲಿಸಿ.) ಆದ್ರೆ ಆ ಮೂರು ಜನ ದೇವರ ಬಗ್ಗೆ ಹೇಳಿದ ಎಷ್ಟೋ ವಿಷಯಗಳು ನಿಜ ಆಗಿರಲಿಲ್ಲ, ಅಷ್ಟೇ ಅಲ್ಲ, ಅವ್ರ ಮಾತುಗಳು ಯೋಬನಿಗೆ ನೋವು ಮಾಡ್ತು. ಅದಕ್ಕೇ ಯೆಹೋವ ದೇವರು “ನೀವು ನನ್ನ ಬಗ್ಗೆ ಸತ್ಯ ಹೇಳಲಿಲ್ಲ” ಅಂತ ಹೇಳಿದನು. (ಯೋಬ 42:7, 8) ಒಳ್ಳೆಯ ಸಲಹೆ ಹೇಗಿರುತ್ತೆ ಅಂದ್ರೆ ಅದು ಯೆಹೋವನನ್ನು ಯಾವತ್ತೂ ಕ್ರೂರವಾಗಿ ಚಿತ್ರಿಸೋದಿಲ್ಲ ಅಥವಾ ಯೆಹೋವ ತನ್ನ ಸೇವಕರನ್ನ ಪ್ರೀತಿಸಲ್ಲ ಅನ್ನೋ ಭಾವನೆನೂ ಹುಟ್ಟಿಸಲ್ಲ. ಈಗ ಎಲೀಹುನಿಂದ ಏನು ಕಲಿಬಹುದು ಅಂತ ನೋಡೋಣ.
ನಾವು ಸಲಹೆ ಕೊಡುವಾಗ, (1) ನಿಜ ಏನು ಅಂತ ಮೊದ್ಲೇ ತಿಳ್ಕೊಬೇಕು (2) ಬೈಬಲನ್ನ ಬಳಸಬೇಕು (3) ಚುಚ್ಚಿ ಮಾತಾಡದೇ ದಯೆಯಿಂದ ಮಾತಾಡಬೇಕು. (ಪ್ಯಾರ 8 ನೋಡಿ)
ಎಲೀಹು ಯೋಬನಿಗೆ ಕೊಟ್ಟ ಸಲಹೆ
9. (ಎ) ಯೋಬನ ಸ್ನೇಹಿತರು ಮಾತನ್ನ ನಿಲ್ಲಿಸಿದ ತಕ್ಷಣ ಅವನಿಗೆ ಸಮಾಧಾನ ಯಾಕೆ ಬೇಕಿತ್ತು? (ಬಿ) ಯೆಹೋವ ಅದನ್ನ ಹೇಗೆ ಕೊಟ್ಟನು?
9 ಯೋಬ ಮತ್ತು ಅವನ ಮೂರು ಸ್ನೇಹಿತರು ತುಂಬ ಸಮಯದವರೆಗೂ ವಾದ ಮಾಡ್ತಾನೇ ಇದ್ರು. ಅವರು ಎಷ್ಟು ಮಾತಾಡ್ತಿದ್ರು ಅಂದ್ರೆ ಬೈಬಲಿನ 28 ಅಧ್ಯಾಯಗಳು ಅದ್ರಿಂದಾನೇ ತುಂಬಿ ಹೋಗಿಬಿಡ್ತು. ಅವರು ಆಡಿದ ಹೆಚ್ಚಿನ ಮಾತಲ್ಲಿ ಕೋಪ ಇತ್ತು. ಅದಕ್ಕೆ ಯೋಬ ಇನ್ನೂ ಕುಗ್ಗಿಹೋದ. ಅವನನ್ನ ಸಮಾಧಾನ ಮಾಡೋರು, ಬುದ್ಧಿ ಹೇಳೋರು ಯಾರಾದ್ರೂ ಬೇಕಿತ್ತು. ಎಲೀಹುನ ಬಳಸಿ ಯೆಹೋವನು ಯೋಬನನ್ನ ತಿದ್ದಿದನು. ಎಲೀಹು ಇಷ್ಟೊತ್ತು ಅಲ್ಲೇ ಇದ್ದ ಅಲ್ವಾ, ಮತ್ತೆ ಯಾಕೆ ಮಾತಾಡ್ಲಿಲ್ಲ? ಯಾಕಂದ್ರೆ ಎಲೀಹು, “ನೀವೆಲ್ಲ ವಯಸ್ಸಲ್ಲಿ ನನಗಿಂತ ದೊಡ್ಡವರು, ನಾನು ಚಿಕ್ಕವನು. ನಿಮ್ಮ ಮೇಲಿನ ಗೌರವದಿಂದ ನಾನು ಮಧ್ಯ ಬಾಯಿ ಹಾಕಲಿಲ್ಲ” ಅಂತ ಹೇಳ್ತಾನೆ. (ಯೋಬ 32:6, 7) ವಯಸ್ಸಾದವ್ರಿಗೆ ತುಂಬ ಅನುಭವ ಇರುತ್ತೆ, ಅವರು ತುಂಬ ವಿಷಯಗಳನ್ನು ನೋಡಿರ್ತಾರೆ ಮತ್ತೆ ಅವ್ರಿಗೆ ಚಿಕ್ಕವ್ರಿಗಿಂತ ಹೆಚ್ಚು ವಿವೇಕ ಇರುತ್ತೆ ಅಂತ ಎಲೀಹುಗೆ ಚೆನ್ನಾಗಿ ಗೊತ್ತಿತ್ತು. ಇಷ್ಟೊತ್ತು ತಾಳ್ಮೆಯಿಂದ ಇದ್ದ ಎಲೀಹುಗೆ ಯೋಬ ಮತ್ತು ಅವನ ಸ್ನೇಹಿತರು ಹೇಳಿದ ಮಾತನ್ನ ಕೇಳಿಸ್ಕೊಂಡು ಸುಮ್ಮನೆ ಇರೋಕಾಗ್ಲಿಲ್ಲ. ಅದಕ್ಕೆ ಅವನು, “ದೊಡ್ಡವ್ರಿಗೆ ಎಲ್ಲ ಗೊತ್ತಿರಬೇಕು ಅಂತಿಲ್ಲ, ಸರಿ ಯಾವುದು ಅಂತ ಅರ್ಥ ಮಾಡ್ಕೊಳ್ಳೋರು ವಯಸ್ಸಾದವರು ಮಾತ್ರ ಅಲ್ಲ” ಅಂತ ಹೇಳ್ತಾನೆ. (ಯೋಬ 32:9) ಆಮೇಲೆ ಎಲೀಹು ಏನು ಹೇಳ್ತಾನೆ ಮತ್ತು ಅದನ್ನ ಹೇಗೆ ಹೇಳ್ತಾನೆ ಅಂತ ನೋಡೋಣ.
10. ಯೋಬನಿಗೆ ಸಲಹೆ ಕೊಡೋಕೆ ಮುಂಚೆ ಎಲೀಹು ಏನು ಮಾಡ್ತಾನೆ? (ಯೋಬ 33:6, 7)
10 ಎಲೀಹು ಸಲಹೆ ಕೊಡೋಕೆ ಮುಂಚೆ ಯೋಬನಿಗೆ ಸಮಾಧಾನ ಮಾಡಿದ, ತಾನು ಏನು ಹೇಳೋಕೆ ಹೋಗ್ತಿದಾನೋ ಅದನ್ನ ಕೇಳೋಕೆ ಯೋಬನ ಮನಸ್ಸನ್ನ ರೆಡಿ ಮಾಡಿದ. ಹೇಗೆ? ಒಂದು, ಈ ಮುಂಚೆ ಕೇಳಿಸಿಕೊಂಡ ವಿಷಯಗಳಿಂದ ಎಲೀಹುಗೆ ಕೋಪ ಬಂದಿತ್ತು ಅಂತ ಬೈಬಲ್ ಹೇಳುತ್ತೆ. ಆದ್ರೂ ಅವನು ಸಮಾಧಾನದಿಂದ ಯೋಬನ ಹತ್ರ ಮಾತಾಡೋಕೆ ಶುರು ಮಾಡ್ತಾನೆ. (ಯೋಬ 32:2-5) ಅವನು ಮಾತಾಡುವಾಗ ಒಂದು ಸಾರಿನೂ ಯೋಬನ ಮೇಲೆ ಕೋಪ ಮಾಡ್ಕೊಳ್ಳಲಿಲ್ಲ, ಕಿರಿಚಾಡಲಿಲ್ಲ. ಬದ್ಲಿಗೆ ಒಬ್ಬ ಸ್ನೇಹಿತನ ತರ ಮಾತಾಡಿದ. “ನೋಡು, ಸತ್ಯ ದೇವರ ಮುಂದೆ ನೀನು ಹೇಗೋ ನಾನೂ ಹಾಗೆ” ಅಂತ ಹೇಳಿದ. (ಯೋಬ 33:6, 7 ಓದಿ.) ಎಲೀಹು ಸಲಹೆ ಕೊಡೋಕೆ ಮುಂಚೆ ಯೋಬ ಹೇಳಿದ ಕೆಲವು ಮುಖ್ಯ ವಿಷಯಗಳನ್ನ ಹೇಳ್ತಾನೆ. ಹೀಗೆ ಯೋಬ ಮಾತಾಡುವಾಗ ತಾನು ಚೆನ್ನಾಗಿ ಕೇಳಿಸ್ಕೊಳ್ತಿದ್ದೆ ಅಂತ ಅರ್ಥ ಮಾಡಿಸ್ತಾನೆ. (ಯೋಬ 32:11; 33:8-11) ಮುಂದೆ ಇನ್ನೊಂದು ಸಾರಿ ಯೋಬನಿಗೆ ಸಲಹೆ ಕೊಡುವಾಗ್ಲೂ ಎಲೀಹು ಇದೇ ತರ ಮಾಡ್ತಾನೆ.—ಯೋಬ 34:5, 6, 9; 35:1-4.
11. ಎಲೀಹು ಯೋಬನಿಗೆ ಹೇಗೆ ಸಲಹೆ ಕೊಟ್ಟನು? (ಯೋಬ 33:1)
11 ಎಲೀಹು ಯೋಬನಿಗೆ ಸಲಹೆ ಕೊಡುವಾಗ ‘ನೀನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಹೇಳದೇ ಅವನಿಗೆ ಗೌರವ ಕೊಟ್ಟು ಮಾತಾಡ್ತಾನೆ. ಉದಾಹರಣೆಗೆ, ಎಲೀಹು ಯೋಬನ ಹತ್ರ ಮಾತಾಡುವಾಗ ಅವನ ಹೆಸರು ಹೇಳಿ ಮಾತಾಡ್ತಾನೆ. ಆದ್ರೆ ಇದನ್ನ ಯೋಬನ ಮೂರು ಸ್ನೇಹಿತರು ಬಹುಶಃ ಮಾಡ್ಲಿಲ್ಲ. (ಯೋಬ 33:1 ಓದಿ.) ಯೋಬನ ಸ್ನೇಹಿತರು ವಾದ ಮಾಡುವಾಗ ಯೋಬನ ಮನಸ್ಸು ಮಾತಾಡೋಕೆ ತುಡಿತಾ ಇತ್ತು ಅಂತ ಎಲೀಹು ಗಮನಿಸಿದ. ಅದಕ್ಕೇ ಎಲೀಹು, ತಾನು ಸಲಹೆ ಕೊಟ್ಟ ಮೇಲೆ ಯೋಬನಿಗೆ ಮಾತಾಡೋಕೆ ಅವಕಾಶ ಕೊಟ್ಟ. (ಯೋಬ 32:4; 33:32) ಅದೇ ಸಮಯದಲ್ಲಿ ಯೋಬ ಹೇಳಿದ ಮತ್ತು ಮಾಡಿದ ಕೆಲವು ವಿಷ್ಯಗಳು ತಪ್ಪಾಗಿತ್ತು ಅಂತ ಎಲೀಹು ಎಚ್ಚರಿಸಿದ. ಯೆಹೋವನ ವಿವೇಕ, ಶಕ್ತಿ, ನ್ಯಾಯ ಮತ್ತು ಪ್ರೀತಿ ಬಗ್ಗೆ ನೆನಪು ಹುಟ್ಟಿಸಿದ. (ಯೋಬ 36:18, 21-26; 37:23, 24) ಎಲೀಹು ಕೊಟ್ಟ ಒಳ್ಳೆ ಸಲಹೆ ಯೋಬನಿಗೆ ತುಂಬ ಸಹಾಯ ಮಾಡ್ತು. ಮುಂದೆ ಯೆಹೋವ ಸಲಹೆ ಕೊಡುವಾಗ ಅದನ್ನ ಕೇಳೋದಕ್ಕೂ ಅವನ ಮನಸ್ಸನ್ನ ರೆಡಿ ಮಾಡ್ತು. (ಯೋಬ 38:1-3) ಎಲೀಹುವಿನ ಒಳ್ಳೆಯ ಉದಾಹರಣೆಯಿಂದ ಆಗಿನ ಕಾಲದ ಇಸ್ರಾಯೇಲ್ಯರಿಗೆ ಮತ್ತು ನಮಗೆ ಹೇಗೆ ಸಹಾಯ ಆಗುತ್ತೆ?
12. (ಎ) ಯೆಹೋವನು ಪ್ರವಾದಿಗಳನ್ನ ಬಳಸಿ ತನ್ನ ಜನ್ರಿಗೆ ಹೇಗೆ ಸಹಾಯ ಮಾಡಿದನು? (ಬಿ) ಎಲೀಹುವಿನ ಒಳ್ಳೆ ಮಾದರಿಯಿಂದ ಇಸ್ರಾಯೇಲ್ಯರಿಗೆ ಹೇಗೆ ಪ್ರಯೋಜನ ಆಗಿರಬಹುದು?
12 ಇಸ್ರಾಯೇಲ್ಯರು ಯಾವ ಪಾಠ ಕಲಿತಿರಬಹುದು? ಇಸ್ರಾಯೇಲ್ಯರಿಗೆ ಕಲಿಸೋಕೆ ಮತ್ತು ತಿದ್ದೋಕೆ ಯೆಹೋವನು ಆಗಾಗ ಪ್ರವಾದಿಗಳನ್ನ ಬಳಸಿದನು. ಉದಾಹರಣೆಗೆ, ನ್ಯಾಯಾಧೀಶರ ಕಾಲದಲ್ಲಿ ತನ್ನ ಜನ್ರನ್ನ ಮಾರ್ಗದರ್ಶಿಸೋಕೆ ಯೆಹೋವನು ಪ್ರವಾದಿನಿ ದೆಬೋರಳನ್ನ ಬಳಸಿದನು. ಅಷ್ಟೇ ಅಲ್ಲ ಸಮುವೇಲ ಇನ್ನೂ ಚಿಕ್ಕವನಾಗಿದ್ದಾಗ್ಲೇ ಅವನ ಮೂಲಕ ಇಸ್ರಾಯೇಲ್ಯರಿಗೆ ಎಷ್ಟೋ ವಿಷ್ಯಗಳನ್ನ ಹೇಳಿದನು. (ನ್ಯಾಯ. 4:4-7; 5:7; 1 ಸಮು. 3:19, 20) ರಾಜರ ಕಾಲದಲ್ಲಿ ಯೆಹೋವನನ್ನ ಸರಿಯಾಗಿ ಆರಾಧನೆ ಮಾಡೋಕೆ ಆತನು ಒಬ್ರಾದ ಮೇಲೆ ಒಬ್ರಂತೆ ಪ್ರವಾದಿಗಳನ್ನ ಕಳಿಸಿದನು. ಅಷ್ಟೇ ಅಲ್ಲ, ಅವರು ಯೆಹೋವನ ಮಾತು ಕೇಳ್ದೆ ಇದ್ದಾಗ್ಲೂ ಅವ್ರನ್ನ ತಿದ್ದೋಕೆ ಪ್ರವಾದಿಗಳನ್ನ ಕಳಿಸಿದನು. (2 ಸಮು. 12:1-4; ಅ. ಕಾ. 3:24) ಈ ನಂಬಿಗಸ್ತ ಸ್ತ್ರೀ, ಪುರುಷರು ಯೋಬನ ಪುಸ್ತಕದಲ್ಲಿರೋ ಎಲೀಹುನಿಂದ ತುಂಬ ವಿಷಯಗಳನ್ನ ಕಲಿತಿರಬಹುದು. ಸಲಹೆ ಕೊಡುವಾಗ ಏನು ಹೇಳಬೇಕು ಮತ್ತು ಅದನ್ನ ಹೇಗೆ ಹೇಳಬೇಕು ಅಂತ ಖಂಡಿತ ಕಲ್ತಿರ್ತಾರೆ.
13. ನಾವು ಬೇರೆಯವ್ರನ್ನ ಪ್ರೋತ್ಸಾಹಿಸೋಕೆ ಏನು ಮಾಡಬೇಕು?
13 ನಮಗೆ ಯಾವ ಪಾಠ ಇದೆ? ನಾವು ಬೈಬಲನ್ನ ಬಳಸಿ ಬೇರೆಯವ್ರಿಗೆ ಸಾರುವಾಗ ಯೆಹೋವನ ಇಷ್ಟ ಏನಂತ ಹೇಳ್ತೀವಿ. ಅಷ್ಟೇ ಅಲ್ಲ, ಸಹೋದರ ಸಹೋದರಿಯರಿಗೆ ಅದನ್ನ ಬಳಸಿ ಸಮಾಧಾನ ಮಾಡ್ತೀವಿ. (1 ಕೊರಿಂ. 14:3) ಅದ್ರಲ್ಲೂ ಮುಖ್ಯವಾಗಿ ಹಿರಿಯರು ಸಂತೈಸೋ ತರ ಮಾತಾಡಬೇಕು, ಕೆಲವೊಮ್ಮೆ ಸಹೋದರ ಸಹೋದರಿಯರು ಯೋಚನೆ ಮಾಡದೇ ದುಡುಕಿ ಏನೇನೋ ಮಾತಾಡಿರಬಹುದು. ಅಂತವ್ರ ಜೊತೆನೂ ಅವರು ತಾಳ್ಮೆಯಿಂದ ಮಾತಾಡಬೇಕು. —1 ಥೆಸ. 5:14; ಯೋಬ 6:3.
14-15. ಒಬ್ಬ ಹಿರಿಯ ಎಲೀಹುವಿನ ಮಾದರಿನ ಹೇಗೆ ಅನುಕರಿಸಬಹುದು? ವಿವರಿಸಿ.
14 ಈ ಸನ್ನಿವೇಶವನ್ನ ಊಹಿಸ್ಕೊಳ್ಳಿ. ಒಬ್ಬ ಹಿರಿಯನಿಗೆ ಒಬ್ಬ ಸಹೋದರಿ ಬೇಜಾರಲ್ಲಿದ್ದಾರೆ ಅಂತ ಗೊತ್ತಾಯ್ತು. ಅವರು ಇನ್ನೊಬ್ಬ ಹಿರಿಯನನ್ನ ಕರ್ಕೊಂಡು ಆ ಸಹೋದರಿನ ಪ್ರೋತ್ಸಾಹಿಸೋಕೆ ಹೋಗ್ತಾರೆ. ಆಗ ಆ ಸಹೋದರಿ ‘ನಾನು ಸೇವೆಗೆ, ಮೀಟಿಂಗ್‌ಗೆ ಹೋಗ್ತಿದ್ದೀನಿ, ಆದ್ರೂ ನಂಗೆ ಖುಷಿ ಇಲ್ಲ’ ಅಂತ ಹೇಳ್ತಾಳೆ. ಈಗ ಆ ಹಿರಿಯ ಏನು ಮಾಡ್ತಾನೆ?
15 ಒಂದು, ಆ ಸಹೋದರಿಗೆ ಯಾಕೆ ಹಾಗೆ ಅನಿಸ್ತಿದೆ ಅಂತ ತಿಳ್ಕೊಳ್ತಾನೆ. ಅದನ್ನ ಮಾಡೋಕೆ ಆ ಹಿರಿಯ ಚಿಕ್ಕಪುಟ್ಟ ಪ್ರಶ್ನೆಯನ್ನ ಕೇಳ್ತಾನೆ ಮತ್ತು ಆ ಸಹೋದರಿ ಹೇಳುವಾಗ ಗಮನ ಕೊಟ್ಟು ಕೇಳಿಸ್ಕೊತಾನೆ. ಆ ಸಹೋದರಿಗೆ ಯೆಹೋವನ ಪ್ರೀತಿ ಪಡೆಯೋಕೆ ಯೋಗ್ಯತೆನೇ ಇಲ್ಲ ಅಂತ ಅನಿಸ್ತಿದೆಯಾ ಅಥವಾ ‘ಜೀವನದ ಚಿಂತೆಗಳಿಂದ’ ಕುಗ್ಗಿ ಹೋಗಿದ್ದಾಳಾ ಅಂತ ತಿಳ್ಕೊಳ್ತಾನೆ. (ಲೂಕ 21:34) ಎರಡು, ಸಹೋದರಿ ಈಗಾಗ್ಲೇ ಮಾಡ್ತಿರೋ ಒಳ್ಳೆ ವಿಷಯಗಳನ್ನ ಶ್ಲಾಘಿಸೋಕೆ ಆ ಹಿರಿಯ ಅವಕಾಶಗಳನ್ನ ಹುಡುಕ್ತಾನೆ. ಇಷ್ಟೆಲ್ಲಾ ಕಷ್ಟಗಳಿದ್ರೂ ಅವಳು ಕೂಟಗಳಿಗೆ, ಸೇವೆಗೆ ಬರ್ತಿರೋದನ್ನ ನೋಡಿ ಮೆಚ್ಕೊತಾನೆ. ಮೂರು, ಆ ಹಿರಿಯ ಸಹೋದರಿಯ ಪರಿಸ್ಥಿತಿನ ಚೆನ್ನಾಗಿ ಅರ್ಥ ಮಾಡ್ಕೊತಾನೆ ಮತ್ತು ಆಕೆಗೆ ಯಾಕೆ ಹಾಗೆ ಅನಿಸ್ತಿತ್ತು ಅಂತ ತಿಳ್ಕೊತಾನೆ. ಆಮೇಲೆ ಬೈಬಲನ್ನ ಬಳಸಿ ಯೆಹೋವ ಅವಳನ್ನ ಎಷ್ಟು ಪ್ರೀತಿಸ್ತಿದ್ದಾನೆ ಅಂತ ಅರ್ಥ ಮಾಡಿಸ್ತಾನೆ.—ಗಲಾ. 2:20.
ಯೋಬ ಪುಸ್ತಕದಿಂದ ಕಲಿತಾ ಇರಿ
16. ಯೋಬ ಪುಸ್ತಕದಿಂದ ಪ್ರಯೋಜನ ಪಡ್ಕೊಳ್ತಾ ಇರಬೇಕಂದ್ರೆ ನಾವೇನು ಮಾಡಬೇಕು?
16 ಯೋಬ ಪುಸ್ತಕದಿಂದ ನಮಗೆ ಯಾವೆಲ್ಲಾ ಪ್ರಯೋಜನ ಇದೆ? ಹಿಂದಿನ ಲೇಖನದಲ್ಲಿ ಯೆಹೋವ ಕಷ್ಟಗಳನ್ನ ಯಾಕೆ ಅನುಮತಿಸುತ್ತಾನೆ ಮತ್ತು ಕಷ್ಟಗಳಿದ್ರೂ ಯೆಹೋವನಿಗೆ ನಾವು ಹೇಗೆ ನಿಯತ್ತಾಗಿರಬಹುದು ಅಂತ ಕಲಿತ್ವಿ. ಈ ಲೇಖನದಲ್ಲಿ, ಯೋಬನ ಮೂರು ಸ್ನೇಹಿತರ ತರ ಸಲಹೆ ಕೊಡದೇ, ಎಲೀಹು ತರ ಹೇಗೆ ಸಲಹೆ ಕೊಡಬೇಕು ಅಂತ ಕಲಿತ್ವಿ. ಆದ್ರಿಂದ ನೀವು ಬೇರೆಯವ್ರಿಗೆ ಸಲಹೆ ಕೊಡೋ ಮುಂಚೆ ಯೋಬನ ಪುಸ್ತಕ ಓದಿ ಮತ್ತು ಅದ್ರಲ್ಲಿರೋ ಪಾಠಗಳನ್ನ ನೆನಪಿಸಿಕೊಳ್ಳಿ. ನೀವು ಒಂದುವೇಳೆ ಇತ್ತೀಚೆಗೆ ಯೋಬ ಪುಸ್ತಕವನ್ನ ಓದಿಲ್ಲ ಅಂದ್ರೆ, ಆ ಅದ್ಭುತ ಪುಸ್ತಕನ ಓದೋ ಗುರಿ ಇಟ್ಕೊಳ್ಳಿ. ಆ ಪುಸ್ತಕದಿಂದ ಆಗಿನ ಕಾಲದ ಜನ್ರಿಗೆ ಎಷ್ಟು ಪ್ರಯೋಜನ ಆಯ್ತೋ ಅಷ್ಟೇ ಪ್ರಯೋಜನ ಈಗ ನಿಮಗೂ ಆಗುತ್ತೆ.
ಗೀತೆ 130 ಕ್ಷಮಿಸುತ್ತಾ ಇರೋಣ
a ‘ಯೆಹೋವನ ದೃಷ್ಟಿಲಿ ಯಾವ ಮನುಷ್ಯನೂ ನೀತಿವಂತನಲ್ಲ ಮತ್ತು ಮನುಷ್ಯರು ಆತನನ್ನ ಮೆಚ್ಚಿಸೋಕೆ ಆಗಲ್ಲ’ ಅನ್ನೋ ಯೋಚನೆನ ಎಲೀಫಜನ ಮನಸ್ಸಲ್ಲಿ ಸೈತಾನನೇ ಹಾಕಿರಬೇಕು. ಈ ಮಾತನ್ನ ಎಲೀಫಜ ಯೋಬನ ಹತ್ರ ಮಾತಾಡಿದ ಪ್ರತಿ ಸಲಾನೂ ಹೇಳಿದ.—ಯೋಬ 4:17; 15:15, 16; 22:2.