ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಅಕ್ಟೋಬರ್‌ ಪು. 6-11
  • ಯೆಹೋವ “ತುಂಬ ಖುಷಿ ಕೊಡೋ” ದೇವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ “ತುಂಬ ಖುಷಿ ಕೊಡೋ” ದೇವರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಜ ಸಂತೋಷ ಯಾರಿಂದ ಸಿಗುತ್ತೆ?
  • ಏನೇ ಆದ್ರೂ ಖುಷಿ ಕಳ್ಕೊಬೇಡಿ!
  • ಆನಂದ—ನಾವು ದೇವರಿಂದ ಪಡೆಯುವ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಸೇವೆಲಿ ಖುಷಿ ಪಡ್ಕೊಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಧಾರಾಳವಾಗಿ ಕೊಡಿ, ದುಪ್ಪಟ್ಟು ಖುಷಿಪಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಅಕ್ಟೋಬರ್‌ ಪು. 6-11

ಅಧ್ಯಯನ ಲೇಖನ 40

ಗೀತೆ 110 ಯೆಹೋವನ ಆನಂದ

ಯೆಹೋವ “ತುಂಬ ಖುಷಿ ಕೊಡೋ” ದೇವರು

‘ ಆಗ ನಾನು, ನನಗೆ ತುಂಬ ಖುಷಿ ಕೊಡೋ ದೇವರ ಹತ್ರ ಬರ್ತಿನಿ.’—ಕೀರ್ತ. 43:4.

ಈ ಲೇಖನದಲ್ಲಿ ಏನಿದೆ?

ನಾವು ಖುಷಿನ ಯಾವೆಲ್ಲ ಕಾರಣಗಳಿಂದ ಕಳ್ಕೊಳ್ತೀವಿ ಮತ್ತು ಅದನ್ನ ವಾಪಸ್‌ ಪಡ್ಕೊಳ್ಳೋಕೆ ಏನೆಲ್ಲ ಮಾಡಬೇಕು ಅಂತ ನೋಡೋಣ.

1-2. (ಎ) ಇವತ್ತು ಜನ್ರ ಪರಿಸ್ಥಿತಿ ಹೇಗಿದೆ? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

ಇವತ್ತು ತುಂಬ ಜನ ಖುಷಿಯಾಗಿರೋಕೆ ಏನು ಬೇಕಾದ್ರೂ ಮಾಡ್ತಾರೆ. ಆದ್ರೆ ಅವರ ಪ್ರಯತ್ನ ನೀರು ಪಾಲಾಗಿದೆ. ಅವರು ಬೇಜಾರಲ್ಲಿ, ನೋವಲ್ಲಿ ಮುಳುಗಿ ಹೋಗಿದ್ದಾರೆ. ಅವ್ರ ಜೀವನ ಖಾಲಿ-ಖಾಲಿ ಅನಿಸ್ತಿದೆ. ಯೆಹೋವನ ಜನ್ರಿಗೂ ಕೆಲವೊಮ್ಮೆ ಖುಷಿಯಾಗಿರೋಕೆ ಕಷ್ಟ ಆಗುತ್ತೆ. ಯಾಕಂದ್ರೆ ನಾವೆಲ್ರೂ “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ. ಹಾಗಾಗಿ ತುಂಬ ಸಮಸ್ಯೆಗಳನ್ನ ಎದುರಿಸಬೇಕಾಗ್ತಿದೆ, ತುಂಬ ‘ಕಷ್ಟ ಪಡಬೇಕಾಗ್ತಿದೆ.’—2 ತಿಮೊ. 3:1.

2 ಈ ಲೇಖನದಲ್ಲಿ ನಾವು ಖುಷಿನ ಯಾವೆಲ್ಲ ಕಾರಣಗಳಿಂದ ಕಳ್ಕೊಳ್ತೀವಿ ಮತ್ತು ಅದನ್ನ ವಾಪಸ್‌ ಪಡ್ಕೊಳ್ಳೋಕೆ ಏನೆಲ್ಲ ಮಾಡಬೇಕು ಅಂತ ನೋಡೋಣ. ಆದ್ರೆ ಮೊದಲು, ನಾವು ನಿಜವಾಗಲೂ ಖುಷಿಯಾಗಿರೋಕೆ ಯಾರು ಸಹಾಯ ಮಾಡ್ತಾರೆ ಅಂತ ಕಂಡುಹಿಡಿಬೇಕು.

ನಿಜ ಸಂತೋಷ ಯಾರಿಂದ ಸಿಗುತ್ತೆ?

3. ನಾವು ಖುಷಿಯಾಗಿ ಇರಬೇಕಂತ ಯೆಹೋವ ಬಯಸ್ತಾನೆ ಅಂತ ಹೇಗೆ ಗೊತ್ತಾಗುತ್ತೆ? (ಚಿತ್ರ ನೋಡಿ.)

3 ಯೆಹೋವ ಯಾವಾಗ್ಲೂ ಖುಷಿಯಾಗಿರೋ ದೇವರು. ಆತನ ಮಕ್ಕಳಾಗಿ ನಾವೂ ಯಾವಾಗ್ಲೂ ಖುಷಿಯಾಗಿರಬೇಕು ಅಂತ ಆತನು ಇಷ್ಟಪಡ್ತಾನೆ. ಅದಕ್ಕೆ ಎಷ್ಟೋ ವಿಷ್ಯಗಳನ್ನ ಕೊಟ್ಟಿದ್ದಾನೆ. ಉದಾಹರಣೆಗೆ, ಬಣ್ಣ ಬಣ್ಣಗಳಿಂದ ಕಂಗೊಳಿಸ್ತಿರೋ ಈ ಸುಂದರವಾದ ಭೂಮಿ, ಖುಷಿಖುಷಿಯಾಗಿ ಆಟಾಡೋ ಪ್ರಾಣಿಗಳು ಮತ್ತು ರುಚಿ ರುಚಿಯಾಗಿರೋ ಊಟವನ್ನೆಲ್ಲ ಉದಾರವಾಗಿ ಕೊಟ್ಟಿದ್ದಾನೆ. ಇದನ್ನೆಲ್ಲ ನೋಡಿದ್ರೆ ನಾವು ಖುಷಿಯಾಗಿರಬೇಕು ಅನ್ನೋದು ಯೆಹೋವನ ಮನದಾಸೆ ಅನ್ನೋದ್ರಲ್ಲಿ ಎರಡು ಮಾತಿಲ್ಲ ಅಂತ ಗೊತ್ತಾಗುತ್ತೆ.

ಚಿತ್ರ: ಬೇರೆ ಬೇರೆ ಪ್ರಾಣಿಗಳ ಆಟ ಆಡೋ ಸ್ವಭಾವ. 1. ಮರಿ ಆನೆ ನೀರಲ್ಲಿ ಆಡ್ತಿದೆ. 2. ಪೆಂಗ್ವಿನ್‌ ಮರಿಗಳು ಪುಟಾಣಿ ಹೆಜ್ಜೆ ಹಾಕ್ತಾ ಮಂಜಲ್ಲಿ ಹೋಗ್ತಿವೆ. 3. ಮೇಕೆ ಮರಿಗಳು ಬಯಲಿನಲ್ಲಿ ಕುಣಿದಾಡ್ತಿವೆ. 4. ಡಾಲ್ಫಿನ್‌ಗಳು ನೀರಿಂದ ಹೊರಗೆ ಜಿಗಿಯುತ್ತಾ ಇವೆ.

Baby elephant: Image © Romi Gamit/Shutterstock; penguin chicks: Vladimir Seliverstov/500px via Getty Images; baby goats: Rita Kochmarjova/stock.adobe.com; two dolphins: georgeclerk/E+ via Getty Images

ಪ್ರಾಣಿಗಳು ಆಟ ಆಡೋದನ್ನ ನೋಡುವಾಗ ಯೆಹೋವನು ಖುಷಿಯಾಗಿದ್ದಾನೆ ಅಂತ ಗೊತ್ತಾಗುತ್ತೆ (ಪ್ಯಾರ 3 ನೋಡಿ)


4. (ಎ) ಭೂಮಿಯಲ್ಲಿ ಇಷ್ಟೊಂದು ಕಷ್ಟ ಸಮಸ್ಯೆ ಇದ್ರೂ ಯೆಹೋವ ಯಾಕೆ ಖುಷಿಯಾಗಿದ್ದಾನೆ? (ಬಿ) ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? (ಕೀರ್ತನೆ 16:11)

4 ಯೆಹೋವ ‘ಖುಷಿಯಾಗಿ’ ಇರೋದಾದ್ರೂ ಈ ಲೋಕದಲ್ಲಿರೋ ಕಷ್ಟ-ಸಮಸ್ಯೆಗಳೆಲ್ಲ ಆತನ ಕಣ್ಣಿಗೂ ಬೀಳ್ತಿದೆ. (1 ತಿಮೊ. 1:11) ಇದನ್ನೆಲ್ಲ ನೋಡ್ತಿದ್ರೂ ಯೆಹೋವ ಅದೇಗೆ ಖುಷಿಯಾಗಿದ್ದಾನೆ? ‘ಈ ಎಲ್ಲ ಸಮಸ್ಯೆಗಳು ಇರೋದು ಸ್ವಲ್ಪ ದಿನ ಅಷ್ಟೇ, ಆದಷ್ಟು ಬೇಗ ಒಂದು ದಿನ ಇದನ್ನೆಲ್ಲ ತೆಗೆದುಹಾಕ್ತೀನಿ’ ಅಂತ ಆತನಿಗೆ ಗೊತ್ತಿದೆ. ಹಾಗಾಗಿ ಆ ದಿನ ಬರೋವರೆಗೂ ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ. ಈ ತರ ಕಾಯುವಾಗ, ನಮ್ಮ ನೋವನ್ನ ಅರ್ಥ ಮಾಡಿಕೊಂಡು, ನಮಗೆ ಸಹಾಯ ಮಾಡಬೇಕು ಅಂತ ಆತನು ಬಯಸ್ತಾನೆ. ಆತನು ಸಹಾಯ ಮಾಡೋ ಒಂದು ವಿಧ, ನಮಗೆ ಖುಷಿ ಅನ್ನೋ ಗಿಫ್ಟ್‌ ಅನ್ನ ಕೊಡ್ತಾನೆ. (ಕೀರ್ತನೆ 16:11 ಓದಿ.) ನಮಗಷ್ಟೇ ಅಲ್ಲ, ಯೆಹೋವ ತನ್ನ ಮಗನಾದ ಯೇಸುಗೂ ಖುಷಿಯಾಗಿರೋಕೆ ತುಂಬ ಕಾರಣಗಳನ್ನ ಕೊಟ್ಟನು. ಅವು ಯಾವುವು ಅಂತ ನೋಡೋಣ.

5-6. ಯೇಸು ಖುಷಿಖುಷಿಯಾಗಿ ಇರೋಕೆ ಕಾರಣ ಏನು?

5 ಯೆಹೋವನ ಸೃಷ್ಟಿಯಲ್ಲಿ ಎಲ್ಲಕ್ಕಿಂತ ತುಂಬ ಖುಷಿಯಾಗಿರೋದು ಯೇಸುನೇ! ನಾವು ಯಾಕೆ ಹೀಗೆ ಹೇಳಬಹುದು? ಈ ತರ ಹೇಳೋಕೆ ಎರಡು ಕಾರಣ ಇದೆ. (1) ಯೇಸು “ದೇವರ ಸ್ವರೂಪ ಆಗಿದ್ದಾನೆ.” ಅಂದ್ರೆ ಯೆಹೋವನಲ್ಲಿರೋ ಎಲ್ಲಾ ಗುಣಗಳು ಆತನಲ್ಲಿವೆ. ಅದಕ್ಕೆ ಆತನು ಯಾವಾಗ್ಲೂ ಖುಷಿಯಾಗಿ ಇರ್ತಾನೆ. (ಕೊಲೊ. 1:15; 1 ತಿಮೊತಿ 6:15) (2) ಖುಷಿಯ ಮೂಲನಾದ ಯೆಹೋವನ ಜೊತೆ, ಬೇರೆಲ್ರಿಗಿಂತ ಜಾಸ್ತಿ ಸಮಯ ಕಳೆದಿರೋದು ಯೇಸುನೇ.

6 ಯೆಹೋವ ಹೇಳಿರೋ ಪ್ರತಿಯೊಂದು ಮಾತನ್ನ ಪಾಲಿಸೋದ್ರಿಂದ ಯೇಸು ಯಾವಾಗ್ಲೂ ಖುಷಿನ ಕಂಡ್ಕೊಂಡಿದ್ದಾನೆ. (ಜ್ಞಾನೋ. 8:30, 31; ಯೋಹಾ. 8:29) ಆತನು ಈ ತರ ನಿಯತ್ತಾಗಿರೋದ್ರಿಂದ, ಯೆಹೋವ ಆತನನ್ನ ಮೆಚ್ಕೊಂಡಿದ್ದಾನೆ.—ಮತ್ತಾ. 3:17.

7. ನಾವು ನಿಜವಾಗ್ಲೂ ಖುಷಿಯಾಗಿರೋಕೆ ಏನು ಮಾಡಬೇಕು?

7 ಖುಷಿಯ ಮೂಲನಾಗಿರೋ ಯೆಹೋವನಿಗೆ ಹತ್ರ ಆದ್ರೆ ನಾವೂ ಖುಷಿಯಾಗಿ ಇರ್ತೀವಿ. ಆತನ ಬಗ್ಗೆ ಜಾಸ್ತಿ ಕಲಿತ್ರೆ, ಆತನಲ್ಲಿರೋ ಗುಣಗಳನ್ನ ಅನುಕರಿಸಿದ್ರೆ ನಾವು ಖಂಡಿತ ಖುಷಿಯಾಗಿ ಇರಬಹುದು. ಅಷ್ಟೇ ಅಲ್ಲ, ನಾವು ಆತನ ಮಾತು ಕೇಳಿದ್ರೆ, ಆತನು ನಮ್ಮನ್ನ ಮೆಚ್ಕೊಳ್ತಿದ್ದಾನೆ ಅಂತ ಅರ್ಥ ಮಾಡ್ಕೊಂಡ್ರೂ ಖುಷಿಯಾಗಿ ಇರಬಹುದು.a (ಕೀರ್ತ. 33:12) ಆದ್ರೆ ಕೆಲವೊಂದು ಸಲ, ಸ್ವಲ್ಪ ಟೈಮ್‌ ಅಥವಾ ತುಂಬ ಟೈಮ್‌ವರೆಗೂ ನಾವು ಖುಷಿನ ಕಳ್ಕೊಂಡು ಬಿಡಬಹುದು. ಇದ್ರ ಅರ್ಥ ಯೆಹೋವ ನಮ್ಮನ್ನ ಮೆಚ್ಕೊಂಡಿಲ್ಲ ಅಂತಾನಾ? ಇಲ್ಲ. ನಾವು ಅಪರಿಪೂರ್ಣರಾಗಿ ಇರೋದ್ರಿಂದ ಆಗಾಗ ನಮಗೆ ಕಷ್ಟಗಳು ಬರುತ್ತೆ. ದುಃಖ, ನೋವು ಆಗುತ್ತೆ ಅಂತ ಯೆಹೋವನಿಗೆ ಗೊತ್ತು. ಯೆಹೋವ ಇದನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತಾನೆ. (ಕೀರ್ತ. 103:14) ನಾವೀಗ, ಯಾವೆಲ್ಲ ಕಾರಣಗಳಿಂದ ಖುಷಿನ ಕಳ್ಕೊಳ್ತೀವಿ, ಅದನ್ನ ಮತ್ತೆ ಪಡ್ಕೊಳ್ಳೋಕೆ ಏನೆಲ್ಲ ಮಾಡಬಹುದು ಅಂತ ನೋಡೋಣ.

ಖುಷಿ ಕೊಡೋ ದೇವರ ಸಹಾಯ ಕೇಳಿ

ಪವಿತ್ರಶಕ್ತಿಗಾಗಿ ಬೇಡ್ಕೊಳ್ಳಿ. ನಾವು ಖುಷಿಯಾಗಿರಬೇಕಂದ್ರೆ ಯೆಹೋವನ ಸಹಾಯ ಕೇಳಬೇಕು, ಯಾಕಂದ್ರೆ ಪವಿತ್ರಶಕ್ತಿಯಿಂದ ಬರೋ ಗುಣಗಳಲ್ಲಿ ಆನಂದ ಅಥವಾ ಖುಷಿನೂ ಒಂದು. (ಗಲಾ. 5:22) ಆಗ ಏನೇ ಕಷ್ಟ ಬಂದ್ರೂ ಪವಿತ್ರ ಶಕ್ತಿಯ ಸಹಾಯದಿಂದ ‘ಎಲ್ಲವನ್ನ ತಾಳ್ಮೆ, ಆನಂದದಿಂದ ಸಹಿಸ್ಕೊಳ್ಳೋಕ್ಕಾಗುತ್ತೆ.’—ಕೊಲೊ. 1:11.

ಯೆಹೋವನ ಸೇವೆ ಮಾಡೋಕೆ ಗಮನಕೊಡಿ. ಪ್ರತಿದಿನ ಬೈಬಲನ್ನ ಮತ್ತೆ ನಮ್ಮ ಪ್ರಕಾಶನಗಳನ್ನ ಓದಿ. ಅಷ್ಟೇ ಅಲ್ಲ, ಸಿಗೋ ಒಂದೊಂದು ಅವಕಾಶವನ್ನೂ ಬಳಸ್ಕೊಂಡು “ಸಿಹಿಸುದ್ದಿ” ಸಾರಿ. ಯಾಕಂದ್ರೆ, ಅದು ಜನ್ರಿಗೆಲ್ಲ ತುಂಬ ಖುಷಿ ತರುತ್ತೆ. (ಲೂಕ 2:10) ಯಾರು ತಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಡ್ತಾರೋ, ಅವರು ತುಂಬ ಖುಷಿಯಾಗಿರ್ತಾರೆ.—ಕೀರ್ತ. 65:4.

ಯಾವಾಗ್ಲೂ ಯೆಹೋವನ ಮಾತು ಕೇಳಿ. ಯೆಹೋವ ಇಟ್ಟಿರೋ ನಿಯಮನ ಪಾಲಿಸಿದ್ರೆ ಜೀವನದಲ್ಲಿ ನೀವೇನೋ ಕಳ್ಕೊತೀರ ಅಂತಲ್ಲ. ಬದ್ಲಿಗೆ ನೀವು ಜೀವನದಲ್ಲಿ ಖುಷಿ ಖುಷಿಯಾಗಿ ಇರ್ತೀರ ಅಂತ ಅರ್ಥ.—ಲೂಕ 11:28.

ಏನೇ ಆದ್ರೂ ಖುಷಿ ಕಳ್ಕೊಬೇಡಿ!

8. ಜೀವನದಲ್ಲಿ ಸಮಸ್ಯೆಗಳು ಬಂದಾಗ ನಮಗೆ ಹೇಗನಿಸುತ್ತೆ?

8 ಖುಷಿ ಕಿತ್ಕೊಳ್ಳೋ 1ನೇ ವಿಷ್ಯ: ಜೀವನದ ಸಮಸ್ಯೆಗಳು. ನಿಮಗೆ ಜೀವನದಲ್ಲಿ ಹಿಂಸೆ, ವಿಪತ್ತು, ಬಡತನ, ಕಾಯಿಲೆ ಅಥವಾ ವೃದ್ಧಾಪ್ಯ ಇದ್ಯಾ? ಈ ಸಮಸ್ಯೆಗಳು ನಮಗಿದ್ರೆ ತುಂಬ ಸುಲಭವಾಗಿ ಖುಷಿನ ಕಳ್ಕೊಂಡು ಬಿಡ್ತೀವಿ. ಯಾಕಂದ್ರೆ ಇದ್ಯಾವುದನ್ನೂ ಬದಲಾಯಿಸೋ ಶಕ್ತಿ ನಮ್ಮ ಕೈಯಲ್ಲಿಲ್ಲ. ಮನಸ್ಸಲ್ಲಿ ತುಂಬ ‘ನೋವಿಟ್ಕೊಂಡ್ರೆ ನಿರುತ್ಸಾಹ’ ಆಗುತ್ತೆ ಅಂತ ಬೈಬಲ್‌ ಕೂಡ ಹೇಳುತ್ತೆ. (ಜ್ಞಾನೋ. 15:13) ಬಾಬೀಸ್‌ ಅನ್ನೋ ಒಬ್ಬ ಹಿರಿಯ, ನಾಲ್ಕು ವರ್ಷದಲ್ಲೇ ಅವನ ಅಣ್ಣ ಮತ್ತು ಅಪ್ಪ-ಅಮ್ಮನ ಸಾವಲ್ಲಿ ಕಳ್ಕೊಂಡು ಬಿಡ್ತಾನೆ. ಅವನು ಹೇಳೋದು, “ನನ್ನವರು ಅಂತ ನಂಗೆ ಯಾರೂ ಇಲ್ಲ. ನಾನು ಒಂಟಿ ಅಂತ ಅನಿಸ್ತಿತ್ತು. ಕೆಲವೊಂದು ಸಲ ಅಂತೂ, ಅವರು ತೀರಿ ಹೋಗೋ ಮುಂಚೆ ನಾನು ಅವ್ರ ಜೊತೆ ಸರಿಯಾಗಿ ಟೈಮ್‌ ಕಳೀಲಿಲ್ವೇ ಅನ್ನೋ ಕೊರಗು ನನ್ನನ್ನ ಕಿತ್ತು ತಿಂತಿತ್ತು.” ಜೀವನದಲ್ಲಿ ಬರೋ ಇಂಥ ಸಮಸ್ಯೆಗಳು ನಿಜವಾಗ್ಲೂ ನಮ್ಮ ಭಾವನೆಗಳನ್ನ ಹಿಂಡಿ ಹಾಕುತ್ತೆ.

9. ಕಳ್ಕೊಂಡಿರೋ ಖುಷಿನ ಮತ್ತೆ ಪಡ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ? (ಯೆರೆಮೀಯ 29:4-7, 10)

9 ಖುಷಿನ ಮತ್ತೆ ಪಡ್ಕೊಳ್ಳೋಕೆ ಏನು ಮಾಡಬೇಕು? ನಮಗಿರೋ ಸಮಸ್ಯೆಗಳನ್ನ ಸರಿ ಮಾಡೋ ಶಕ್ತಿ ನಮ್ಮ ಕೈಯಲ್ಲಿಲ್ಲ ಅಂತ ಅರ್ಥ ಮಾಡ್ಕೊಬೇಕು. ಇರೋ ಪರಿಸ್ಥಿತಿಯಲ್ಲೇ ಖುಷಿಯಾಗಿರೋಕೆ ಪ್ರಯತ್ನ ಹಾಕಬೇಕು. ಆದ್ರೆ ಇವತ್ತು ಈ ಲೋಕ, ನಮ್ಮ ಜೀವನ ಹೂವಿನ ಹಾಸಿಗೆ ತರ ಇದ್ರೆ ಮಾತ್ರ ಖುಷಿಯಾಗಿರೋಕೆ ಆಗುತ್ತೆ ಅಂತ ಸುಳ್ಳು ಹೇಳ್ತಿದೆ. ಆದರೆ ಇದು ನಿಜ ಅಲ್ಲ. ನಾವ್ಯಾಕೆ ಹಾಗೆ ಹೇಳಬಹುದು? ಉದಾಹರಣೆಗೆ, ಯೆಹೂದ್ಯರು ಬಾಬೆಲಿಗೆ ಕೈದಿಗಳಾಗಿ ಹೋದಾಗ, ಯೆಹೋವ ಅವ್ರಿಗೆ ಈ ಹೊಸ ಪರಿಸ್ಥಿತಿಗೆ ಹೊಂದ್ಕೊಳ್ಳಿ, ಅಲ್ಲೇ ಖುಷಿಯಾಗಿರೋಕೆ ಪ್ರಯತ್ನ ಮಾಡಿ ಅಂತ ಹೇಳಿದನು. (ಯೆರೆಮೀಯ 29:4-7, 10 ಓದಿ.) ಇದ್ರಿಂದ ನಾವೇನು ಕಲಿಬಹುದು? ನಾವೂ ನಮ್ಮ ಪರಿಸ್ಥಿತಿಗೆ ಹೊಂದ್ಕೊಬೇಕು, ಈಗ ಖುಷಿಯಾಗಿರೋಕೆ ಏನು ಕಾರಣ ಇದ್ಯೋ ಅದನ್ನ ಹುಡುಕಿ ಅದ್ರಲ್ಲಿ ಖುಷಿಯಾಗಿರಬೇಕು. ಆದ್ರೆ ನೆನಪಿಡಿ, ಏನೇ ಆದ್ರೂ ಯೆಹೋವ ಮಾತ್ರ ನಿಮ್ಮ ಕೈ ಬಿಡಲ್ಲ! ಯೆಹೋವ ನಿಮಗೆ ಯಾವಾಗ್ಲೂ ಸಹಾಯ ಮಾಡ್ತಾನೆ. (ಕೀರ್ತ. 63:7; 146:5) ಎಫಿ ಅನ್ನೋ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಅವರಿಗೆ ಆಕ್ಸಿಡೆಂಟ್‌ ಆದಾಗ ತಮ್ಮ ಎರಡೂ ಕಾಲು ಕಳ್ಕೊಂಡ್ರು. ಅವರಿಗೆ ಈಗ ನಡಿಯೋಕೆ ಆಗಲ್ಲ. ಅವರು ಹೇಳೋದು, “ನನಗೆ ಯೆಹೋವನಿಂದ, ನಮ್ಮ ಕುಟುಂಬದಿಂದ ಮತ್ತು ಸಭೆಯಿಂದ ತುಂಬ ಸಹಾಯ ಸಿಕ್ತು. ಅವ್ರೆಲ್ರಿಗೂ ನಾನು ಋಣಿ. ಹಾಗಾಗಿ ನನಗೆ ಕಷ್ಟ ಇದ್ರೂ ಯಾವಾಗ್ಲೂ ಖುಷಿ ಖುಷಿಯಾಗಿರೋಕೆ ನಾನು ಟ್ರೈ ಮಾಡ್ತೀನಿ.”

10. ಕಷ್ಟಗಳಿದ್ರೂ ನಾವು ಯಾಕೆ ಖುಷಿಯಾಗಿರಬಹುದು?

10 ನಮ್ಮ ಜೀವನದಲ್ಲಿ ತುಂಬ ಕಷ್ಟ ಸಮಸ್ಯೆಗಳಿದ್ರೂ ನಮಗೆ ಅಥವಾ ನಮ್ಮ ಕುಟುಂಬದವರಿಗೆ ತೊಂದ್ರೆಗಳು ಬಂದ್ರೂ ನಾವು ಖುಷಿಯಾಗಿ ಇರಬಹುದು.b (ಕೀರ್ತ. 126:5) ಯಾಕೆ? ಯಾಕಂದ್ರೆ, ನಮ್ಮ ಖುಷಿ ನಮ್ಮ ಸನ್ನಿವೇಶದ ಮೇಲೆ ಹೊಂದ್ಕೊಂಡಿಲ್ಲ! ಪಯನೀಯರ್‌ ಸೇವೆ ಮಾಡ್ತಿರೋ ಮರಿಯ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನಿಮಗೆ ಜೀವನದಲ್ಲಿ ತುಂಬ ಸಮಸ್ಯೆ ಇದೆ, ಒಂದುವೇಳೆ ಅಂಥ ಪರಿಸ್ಥಿತಿಯಲ್ಲೂ ನೀವು ಖುಷಿಯಾಗಿದ್ದೀರ ಅಂದ್ರೆ, ನಿಮಗೆ ಭಾವನೆಗಳಿಲ್ಲ ಅಥವಾ ಅದನ್ನ ನೀವು ಅದುಮಿ ಇಟ್ಟಿದ್ದೀರ ಅಂತ ಅರ್ಥ ಅಲ್ಲ. ಬದ್ಲಿಗೆ ನೀವು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದೀರ, ಆತನು ಕೊಟ್ಟಿರೋ ಮಾತನ್ನ ಮರೆತಿಲ್ಲ ಅಂತ ಅರ್ಥ. ಏನೇ ಕಷ್ಟ ಸಮಸ್ಯೆ ಬಂದ್ರೂ ಖುಷಿನ ಕಳ್ಕೊಳ್ಳದೇ ಇರೋಕೆ ಯೆಹೋವ ಸಹಾಯ ಮಾಡ್ತಾನೆ.” ನಮ್ಮ ಕಷ್ಟಗಳನ್ನ ಬೆಳಗಿನ ಜಾವ ಬೀಳೋ ಹಿಮಕ್ಕೆ ಹೋಲಿಸಬಹುದು. ಸೂರ್ಯ ಬಂದ ತಕ್ಷಣ ಅವು ಕರಗಿ ಮಾಯ ಆಗಿ ಹೋಗುತ್ತೆ. ಅದೇ ತರ, ನಾವಿವತ್ತು ಅನುಭವಿಸ್ತಿರೋ ಕಷ್ಟ ಸಮಸ್ಯೆಗಳನ್ನ ಯೆಹೋವನ ಆಳ್ವಿಕೆ ಆದಷ್ಟು ಬೇಗ ತೆಗೆದು ಹಾಕುತ್ತೆ.

11. ಪೌಲನ ಅನುಭವದಿಂದ ನೀವೇನು ಕಲಿತ್ರಿ?

11 ಸಮಸ್ಯೆಗಳು ಬಂದ ತಕ್ಷಣ ‘ಯೆಹೋವ ನನ್ನ ಕೈ ಬಿಟ್ಟು ಬಿಟ್ಟಿದ್ದಾನೆ ಅಥವಾ ಆತನು ನನ್ನನ್ನ ಮೆಚ್ಕೊತಿಲ್ಲ’ ಅಂತ ನಿಮಗೆ ಅನಿಸುತ್ತಾ? ಒಂದುವೇಳೆ ಈ ತರ ಅನಿಸ್ತಿದ್ರೆ, ತುಂಬ ಕಷ್ಟ ಸಮಸ್ಯೆಗಳನ್ನ ಅನುಭವಿಸಿದ ಯೆಹೋವನ ನಂಬಿಗಸ್ತ ಸೇವಕರ ಬಗ್ಗೆ ಯೋಚನೆ ಮಾಡಿ. ಉದಾಹರಣೆಗೆ, ಅಪೊಸ್ತಲ ಪೌಲನನ್ನೇ ತಗೊಳ್ಳಿ. ಅವನನ್ನ ‘ಯೆಹೂದ್ಯರಲ್ಲದ ಜನ್ರಿಗೆ, ರಾಜರಿಗೆ, ಇಸ್ರಾಯೇಲ್‌ ಜನ್ರಿಗೆ’ ಸಾರೋಕೆ, ಯೇಸುನೇ ಸ್ವತಃ ಆರಿಸ್ಕೊಂಡಿದ್ದನು. (ಅ. ಕಾ. 9:15) ಎಷ್ಟು ಒಳ್ಳೆ ಸುಯೋಗ ಅಲ್ವಾ? ಹಾಗಾದ್ರೆ ಪೌಲನ ಜೀವನದಲ್ಲಿ ಸಮಸ್ಯೆಗಳೇ ಇರಲಿಲ್ವಾ? ಹಾಗೇನಿಲ್ಲ. (2 ಕೊರಿಂ. 11:23-27) ಅವನ ಜೀವನದಲ್ಲಿ ಸಮಸ್ಯೆಗಳ ಸುರಿಮಳೆನೇ ಬಂತು. ಇದ್ರ ಅರ್ಥ ಯೆಹೋವ ಅವನನ್ನ ಕೈ ಬಿಟ್ಟುಬಿಟ್ಟ ಅಥವಾ ಅವನನ್ನ ಮೆಚ್ಕೊಳ್ಳಲಿಲ್ಲ ಅಂತಾನಾ? ಖಂಡಿತ ಇಲ್ಲ. ಅವನು ತನಗೆ ಬಂದ ಎಲ್ಲಾ ಸಮಸ್ಯೆಗಳನ್ನ ಚೆನ್ನಾಗಿ ತಾಳಿಕೊಂಡ. ಇದನ್ನೆಲ್ಲ ನೋಡಿದ್ರೆ ಯೆಹೋವ ಅವನ ಜೊತೆನೇ ಇದ್ದ ಅಂತ ಗೊತ್ತಾಗುತ್ತೆ. (ರೋಮ. 5:3-5) ಈಗ, ನಿಮ್ಮ ಸನ್ನಿವೇಶದ ಬಗ್ಗೆ ಯೋಚನೆ ಮಾಡಿ. ನಿಮಗೂ ಬೇರೆಬೇರೆ ಕಷ್ಟಗಳಿವೆ. ಆದ್ರೂ ನೀವು ಇವತ್ತಿನವರೆಗೂ ತಾಳ್ಕೊಳ್ತಿದ್ದೀರ, ನಿಯತ್ತಾಗಿ ಸೇವೆ ಮಾಡ್ತಿದ್ದೀರ. ಯೆಹೋವ ನಿಮ್ಮನ್ನ ಕೈ ಬಿಟ್ಟಿಲ್ಲ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಇದ್ರಿಂದನೇ ಗೊತ್ತಾಗುತ್ತೆ ಅಲ್ವಾ?

12. ನಾವು ಅಂದ್ಕೊಂಡಿದ್ದು ಆಗದೇ ಹೋದಾಗ ಹೇಗನಿಸುತ್ತೆ?

12 ಖುಷಿ ಕಿತ್ಕೊಳ್ಳೋ 2ನೇ ವಿಷ್ಯ: ನಾವು ಅಂದ್ಕೊಂಡಿದ್ದು ಆಗದೇ ಹೋದಾಗ. (ಜ್ಞಾನೋ. 13:12) ಯೆಹೋವನ ಮೇಲೆ ನಮಗೆ ತುಂಬ ಪ್ರೀತಿ ಇರೋದ್ರಿಂದ, ಆತನ ಸೇವೆ ಜಾಸ್ತಿ ಮಾಡಬೇಕು ಅಂತ ಕೆಲವು ಗುರಿಗಳನ್ನ ಇಡ್ತೀವಿ. ಆದ್ರೆ, ನಮ್ಮ ಕೈಯಲ್ಲಿ ಮುಟ್ಟೋಕೆ ಆಗದೇ ಇರೋ ಗುರಿಗಳನ್ನ ಇಟ್ರೆ, ಮುಂದೆ ಒಂದಿನ ನಾವು ತುಂಬ ಬೇಜಾರಾಗಿಬಿಡ್ತೀವಿ. (ಜ್ಞಾನೋ. 17:22) ಪಯನೀಯರ್‌ ಸೇವೆ ಮಾಡ್ತಿರೋ ಹೋಲಿ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನಾನು ಬೇರೆ ದೇಶಕ್ಕೆ ಹೋಗಿ ಸೇವೆ ಮಾಡಬೇಕಂತ ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಬೇಕು ಅಥವಾ ರಾಮಾಪೊ ಕಟ್ಟಡ ನಿರ್ಮಾಣ ಕೆಲಸಕ್ಕೆ ಸಹಾಯ ಮಾಡಬೇಕು ಅನ್ನೋ ಗುರಿ ಇಟ್ಟೆ. ಆದ್ರೆ ಒಂದಿನ ನನ್ನ ಸನ್ನಿವೇಶ ಬದಲಾಗಿ ಬಿಡ್ತು, ಹಾಗಾಗಿ ನಾನು ಇಟ್ಟ ಗುರಿನ ಮುಟ್ಟೋಕ್ಕಾಗ್ಲಿಲ್ಲ. ಆಗಂತೂ ನನಗೆ ತುಂಬ ಬೇಜಾರಾಯ್ತು. ನಾನು ಅಂದ್ಕೊಂಡಿದ್ದನ್ನ ಮಾಡೋಕೆ ಆಗ್ಲಿಲ್ವಲ್ಲಾ ಅಂತ ತುಂಬ ಕೋಪ ಬಂತು.” ಎಷ್ಟೋ ಯೆಹೋವನ ಸೇವಕರಿಗೆ ಇದೇ ತರ ಅನಿಸಿದೆ.

13. (ಎ) ಯೆಹೋವ ನಮ್ಮಿಂದ ಏನನ್ನ ಬಯಸುತ್ತಾನೆ? (ಬಿ) ನಾವು ಎಂಥ ಗುರಿಗಳನ್ನ ಇಡಬಹುದು?

13 ಖುಷಿನ ಮತ್ತೆ ಪಡ್ಕೊಳ್ಳೋಕೆ ಏನು ಮಾಡಬೇಕು? ಯೆಹೋವ ‘ನಿಮ್ಮ ಕೈಯಲ್ಲಿ ಆಗೋದಕ್ಕಿಂತ ಜಾಸ್ತಿ ಸೇವೆ ಮಾಡಿ’ ಅಂತ ಯಾವತ್ತೂ ಒತ್ತಾಯ ಮಾಡಲ್ಲ. ನೀವು ಎಷ್ಟು ಸೇವೆ ಮಾಡ್ತಿದ್ದೀರ ಅಂತ ನೋಡಿ ನಿಮ್ಮನ್ನ ಮೆಚ್ಕೊಳ್ಳಲ್ಲ. ಬದಲಿಗೆ ನೀವು ನಿಯತ್ತಾಗಿರಬೇಕು, ನಿಮ್ಮ ಇತಿಮಿತಿನ ಅರ್ಥ ಮಾಡಿಕೊಳ್ಳಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. (ಮೀಕ 6:8; 1 ಕೊರಿಂ. 4:2) ನೀವು ಎಷ್ಟು ಸೇವೆ ಮಾಡ್ತಿದ್ದೀರ ಅನ್ನೋದಕ್ಕಿಂತ, ನೀವು ತೋರಿಸೋ ಒಳ್ಳೆ ಗುಣಗಳನ್ನ ಯೆಹೋವ ನೋಡ್ತಾನೆ. ಹಾಗಾಗಿ ನಿಮ್ಮ ಕೈಲಾಗದೇ ಇರೋದನ್ನ ಯೆಹೋವ ಕೇಳ್ತಿಲ್ಲ ಅಂದ್ಮೇಲೆ ನೀವ್ಯಾಕೆ ಅದ್ರ ಬಗ್ಗೆ ತುಂಬ ಚಿಂತೆ ಮಾಡ್ತೀರಾ?c ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗುತ್ತೋ ಅಂಥ ಚಿಕ್ಕಪುಟ್ಟ ಗುರಿಗಳನ್ನ ಇಡಿ. ಉದಾಹರಣೆ, ನಿಮ್ಮ ಸಭೆಯಲ್ಲಿರೋ ಯುವಜನರು ಯೆಹೋವನಿಗೆ ಹತ್ರ ಆಗೋಕೆ ನೀವು ಪ್ರೋತ್ಸಾಹ ಮಾಡಬಹುದಾ? ವಯಸ್ಸಾದವ್ರಿಗೆ ಸಹಾಯ ಮಾಡಬಹುದಾ? ಅಥವಾ ನೀವು ಯಾರಿಗಾದ್ರೂ ನೇರವಾಗಿ, ಫೋನಲ್ಲಿ ಅಥವಾ ಮೆಸೇಜಲ್ಲಿ ಪ್ರೋತ್ಸಾಹ ಕೊಡಬಹುದಾ ಅಂತ ಯೋಚಿಸಿ. ಈ ತರ ಚಿಕ್ಕ ಪುಟ್ಟ ಗುರಿಗಳನ್ನ ಇಟ್ಟು ಕೆಲಸ ಮಾಡಿದ್ರೆ, ಯೆಹೋವ ಖಂಡಿತ ನಿಮ್ಮನ್ನ ಆಶೀರ್ವದಿಸ್ತಾನೆ, ನೀವೂ ಖುಷಿಯಾಗಿರ್ತೀರ. ಆದ್ರೆ ನೆನಪಿಡಿ, ಹೊಸ ಲೋಕದಲ್ಲಿ ನಮಗೆ ಯೆಹೋವನಿಗೋಸ್ಕರ ಮಾಡೋಕೆ ತುಂಬ ಕೆಲಸಗಳಿರುತ್ತೆ. ಹಿಂದಿನ ಪ್ಯಾರದಲ್ಲಿದ್ದ ಹೋಲಿ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನನಗೆ ಬೇಜಾರಾದಾಗ ನಾನು ಹೊಸ ಲೋಕದ ಬಗ್ಗೆ ಯೋಚನೆ ಮಾಡ್ತೀನಿ. ಅಲ್ಲಿ ಮಾಡೋಕೆ ನನಗೆ ಸಿಕ್ಕಾಪಟ್ಟೆ ಕೆಲಸ ಇರುತ್ತೆ. ಯೆಹೋವನ ಸಹಾಯದಿಂದ ಅಲ್ಲಿ ನಾನು ತುಂಬ ಕೆಲಸಗಳನ್ನ ಮಾಡಬಹುದು ಅಂತ ನೆನಪಿಸ್ಕೊಳ್ತೀನಿ.”

14. ಯಾವ ವಿಷ್ಯ ನಮ್ಮ ಖುಷಿನ ಕಿತ್ಕೊಬಹುದು?

14 ಖುಷಿನ ಕಿತ್ಕೊಳ್ಳೋ 3ನೇ ವಿಷ್ಯ: ಬರೀ ನಮ್ಮ ಬಗ್ಗೆ, ನಮ್ಮ ಆಸೆ ಬಗ್ಗೆನೇ ಯೋಚನೆ ಮಾಡೋದು. ನಮಗಿಷ್ಟ ಆಗೋದನ್ನ ಮಾಡಿದ್ರೆ ಮಾತ್ರ ನಾವು ಜೀವನದಲ್ಲಿ ಖುಷಿಯಾಗಿ ಇರ್ತೀವಿ ಅಂತ ಜನ ಅಂದ್ಕೊಂಡಿದ್ದಾರೆ. ಅದಕ್ಕೆ ಅಂಥ ಫೋಟೋಗಳನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಾಕ್ತಾರೆ. ಅವ್ರಿಗಿಷ್ಟ ಆಗೋ ವಸ್ತು ತಗೊಂಡ್ರೆ, ಬೇರೆ-ಬೇರೆ ಊರುಗಳಿಗೆ ಸುತ್ತಾಡೋಕೆ ಹೋದ್ರೆ ಮಾತ್ರ ಖುಷಿಯಾಗಿ ಇರ್ತೀವಿ ಅಂದ್ಕೊತಾರೆ. ಇಂಥ ವಿಷ್ಯಗಳಲ್ಲಿ ಖುಷಿ ಪಡೋದು ತಪ್ಪಲ್ಲ. ನಾವು ಖುಷಿ ಪಡಬೇಕು ಅಂತಾನೇ ಯೆಹೋವ ಎಲ್ಲನೂ ನಮಗೋಸ್ಕರ ಸೃಷ್ಟಿ ಮಾಡಿದ್ದಾನೆ. ಆದ್ರೆ ಇವುಗಳಿಂದ ಮಾತ್ರ ಖುಷಿ ಸಿಗುತ್ತೆ ಅಂತ ನಂಬ್ಕೊಂಡು ಇಂಥ ವಿಷ್ಯಗಳ ಹಿಂದೆ ಹೋದ ಎಷ್ಟೋ ಜನ ಈಗ ಖುಷಿ ಕಳ್ಕೊಂಡಿದ್ದಾರೆ. ಈವಾ ಅನ್ನೋ ಪಯನೀಯರ್‌ ಸಹೋದರಿ ಹೇಳೋದು, “ನೀವು ಯಾವಾಗ್ಲೂ ನಿಮ್ಮ ಬಗ್ಗೆ, ನಿಮ್ಮ ಆಸೆ ಬಗ್ಗೆನೇ ಯೋಚನೆ ಮಾಡ್ತಿದ್ರೆ ಮತ್ತು ಅದನ್ನ ಪಡ್ಕೊಳೋಕೆ ಅದ್ರ ಹಿಂದೇನೇ ಹೋದ್ರೆ, ಖುಷಿನ ಕಳ್ಕೊತೀರ. ಯಾಕಂದ್ರೆ ಆಸೆಗೆ ಮಿತಿನೇ ಇಲ್ಲ.” ಈ ತರ ಆದ್ರೆ ಕೊನೆಗೆ ನಮಗೆ ಉಳಿಯೋದು ಬರೀ ದುಃಖನೇ.

15. ರಾಜ ಸೊಲೊಮೋನನಿಂದ ನಾವೇನು ಕಲಿಬಹುದು?

15 ರಾಜ ಸೊಲೊಮೋನ ಖುಷಿನ ಕಂಡ್ಕೊಳ್ಳೋಕೆ, ಅವನ ಆಸೆಗಳನ್ನ ಪೂರೈಸ್ಕೊಂಡ. ಉದಾಹರಣೆಗೆ, ಅವನು ರುಚಿ-ರುಚಿಯಾಗಿರೋ ಊಟ ಮಾಡಿದ, ಒಳ್ಳೊಳ್ಳೆ ಸಂಗೀತನ ಕೇಳಿಸ್ಕೊಂಡ, ಆಗಿನ ಕಾಲದಲ್ಲಿದ್ದ ದುಬಾರಿ ವಸ್ತುಗಳನ್ನ ತಗೊಂಡ. ಇಷ್ಟೆಲ್ಲ ಆದ್ರೂ ಅವನಿಗೆ ಯಾವುದ್ರಲ್ಲೂ ಖುಷಿ ಸಿಗಲಿಲ್ಲ, ತೃಪ್ತಿನೂ ಆಗ್ಲಿಲ್ಲ. ಅದಕ್ಕೆ ಅವನು “ಎಷ್ಟು ನೋಡಿದ್ರೂ ಕಣ್ಣಿಗೆ ತೃಪ್ತಿ ಆಗಲ್ಲ, ಎಷ್ಟು ಕೇಳಿಸ್ಕೊಂಡ್ರೂ ಕಿವಿಗೆ ತೃಪ್ತಿ ಆಗಲ್ಲ” ಅಂತ ಹೇಳಿದ. (ಪ್ರಸಂ. 1:8; 2:1-11) ಇವತ್ತು ಲೋಕದಲ್ಲಿ ದುಡ್ಡಿದ್ರೆ ಏನು ಬೇಕಾದ್ರೂ ಮಾಡಬಹುದು, ಏನು ಬೇಕಾದ್ರೂ ತಗೊಬಹುದು, ಖುಷಿ ಖುಷಿಯಾಗಿ ಇರಬಹುದು ಅಂತ ಜನ ಅಂದ್ಕೊಂಡಿದ್ದಾರೆ. ಆದ್ರೆ ಅದೆಲ್ಲ ಶುದ್ಧ ಸುಳ್ಳು. ಯಾಕಂದ್ರೆ, ಅದ್ಯಾವುದೂ ನಮಗೆ ನಿಜವಾದ ಖುಷಿ ಕೊಡೋಕ್ಕಾಗಲ್ಲ.

16. ಖುಷಿಯಾಗಿರೋಕೆ ನಾವು ಇನ್ನೂ ಏನು ಮಾಡಬಹುದು? ವಿವರಿಸಿ. (ಚಿತ್ರ ನೋಡಿ.)

16 ಖುಷಿನ ಮತ್ತೆ ಪಡ್ಕೊಳ್ಳೋಕೆ ಏನು ಮಾಡಬೇಕು? “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅಂತ ಯೇಸು ಹೇಳಿದ್ದಾನೆ. (ಅ. ಕಾ. 20:35) ಅಲೆಕಾಸ್‌ ಅನ್ನೋ ಒಬ್ಬ ಹಿರಿಯ ಹೀಗೆ ಹೇಳ್ತಾನೆ, “ನನ್ನ ಕೈಲಿ ಬೇರೆಯವ್ರಿಗೋಸ್ಕರ ಚಿಕ್ಕಪುಟ್ಟ ವಿಷ್ಯಗಳನ್ನ ಮಾಡೋಕೆ ಆಗುತ್ತಾ ಅಂತ ಯೋಚನೆ ಮಾಡ್ತೀನಿ. ಆಗ ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ ಜಾಸ್ತಿ ಯೋಚನೆ ಮಾಡ್ತಾ ಖುಷಿಯಾಗಿ ಇರ್ತೀನಿ.” ನೀವೇನು ಮಾಡಬಹುದು? ಯಾರಿಗಾದ್ರೂ ಕಷ್ಟ ಇದೆ ಅಂತ ಗೊತ್ತಾದ್ರೆ, ಅವರ ಜೊತೆ ಮಾತಾಡಿ, ಪ್ರೋತ್ಸಾಹ ಕೊಡಿ. ಅವ್ರಿಗಿರೋ ಎಲ್ಲ ಸಮಸ್ಯೆಗಳನ್ನ ನಿಮ್ಮ ಕೈಯಲ್ಲಿ ಸರಿ ಮಾಡೋಕ್ಕಾಗಲ್ಲ ನಿಜ. ಆದ್ರೆ, ಅವರು ಮಾತಾಡುವಾಗ ನೀವು ಕೇಳಿಸ್ಕೊಳ್ಳಿ, ಅವ್ರ ಜೊತೆ ದಯೆಯಿಂದ ನಡ್ಕೊಳ್ಳಿ, ಅವ್ರಿಗಿರೋ ಭಾರನೆಲ್ಲಾ ಯೆಹೋವನ ಮೇಲೆ ಹಾಕೋಕೆ ಪ್ರೋತ್ಸಾಹಿಸಿ. (ಕೀರ್ತ. 55:22; 68:19) ಹೀಗೆ ನೀವು ಅವ್ರಿಗೆ ಸಾಂತ್ವನ ಕೊಡಿ. ಅಷ್ಟೇ ಅಲ್ಲ, ಯೆಹೋವ ಅವ್ರನ್ನ ಕೈಬಿಟ್ಟಿಲ್ಲ, ಅವ್ರ ಜೊತೆನೇ ಇದ್ದಾನೆ ಅಂತ ಹೇಳಿ ಭರವಸೆ ತುಂಬಿ. (ಕೀರ್ತ. 37:28; ಯೆಶಾ. 59:1) ಒಂದುವೇಳೆ ನಿಮ್ಮ ಕೈಯಲ್ಲಿ ಅವ್ರಿಗೆ ಸಹಾಯ ಮಾಡೋಕ್ಕಾಗುತ್ತೆ ಅಂದ್ರೆ ಅವ್ರಿಗೆ ಅಡುಗೆ ಮಾಡ್ಕೊಡಿ ಅಥವಾ ಅವರ ಜೊತೆ ಎಲ್ಲಾದ್ರೂ ಹೊರಗಡೆ ವಾಕಿಂಗ್‌ ಹೋಗಿ. ಅವ್ರನ್ನ ನಿಮ್ಮ ಜೊತೆ ಸೇವೆಗೆ ಕರ್ಕೊಂಡು ಹೋಗಿ. ಆಗ ಅವ್ರಿಗೆ ಖುಷಿ ಸಿಗುತ್ತೆ. ಯೆಹೋವ ನಿಮ್ಮನ್ನ ಪೂರ್ತಿಯಾಗಿ ಬಳಸ್ಕೊಳ್ಳೋ ತರ ಬಿಟ್ಟು ಕೊಡಿ. ನೀವು ನಿಮ್ಮ ಬಗ್ಗೆನೇ ಜಾಸ್ತಿ ಯೋಚನೆ ಮಾಡೋದಕ್ಕಿಂತ ಬೇರೆಯವ್ರ ಬಗ್ಗೆ ಜಾಸ್ತಿ ಯೋಚನೆ ಮಾಡಿದ್ರೆ ಜೀವನದಲ್ಲಿ ನಿಜವಾಗಲೂ ಖುಷಿಯಾಗಿರ್ತೀರ.—ಜ್ಞಾನೋ. 11:25.

ಚಿತ್ರ: 1. ಒಬ್ಬ ಸಹೋದರಿ ಕಾಫಿ ಶಾಪಲ್ಲಿ ಒಬ್ರೇ ಕೂತು ಫೋನ್‌ ನೋಡ್ತಿದ್ದಾರೆ. ಪಕ್ಕದಲ್ಲೇ ತುಂಬ ಶಾಪಿಂಗ್‌ ಬ್ಯಾಗ್‌ ಇವೆ. 2. ಆಕೆ ಖುಷಿಯಾಗಿ ಒಬ್ಬ ವೃದ್ಧ ಸಹೋದರಿ ಮನೆಗೆ ಹೋಗಿ ಹೂಗಳನ್ನ ಕೊಡ್ತಿದ್ದಾಳೆ.

ನಿಮ್ಮ ಆಸೆಗಳ ಬಗ್ಗೆನೇ ಯೋಚಿಸೋ ಬದ್ಲು ಬೇರೆಯವ್ರಿಗೆ ಏನಾದ್ರೂ ಸಹಾಯ ಬೇಕಿದ್ಯಾ ಅಂತ ಯೋಚಿಸಿ (ಪ್ಯಾರ 16 ನೋಡಿ)d


17. ಖುಷಿಯಾಗಿ ಇರೋಕೆ ನಾವೇನು ಮಾಡಬೇಕು? (ಕೀರ್ತನೆ 43:4)

17 ಯೆಹೋವ ನಮಗೆ “ತುಂಬ ಖುಷಿ ಕೊಡೋ ದೇವರು” ಅಂತ ಬೈಬಲ್‌ ಹೇಳುತ್ತೆ. ಹಾಗಾಗಿ ನಾವು ಯೆಹೋವನಿಗೆ ಹತ್ರ ಆದ್ರೆ ಯಾವಾಗ್ಲೂ ಖುಷಿಯಾಗಿ ಇರಬಹುದು. (ಕೀರ್ತನೆ 43:4 ಓದಿ.) ನಮ್ಮ ಜೀವನದಲ್ಲಿ ಏನೇ ಕಷ್ಟ ಸಮಸ್ಯೆ ಬಂದ್ರೂ ನಾವು ಭಯ ಪಡೋ ಅಗತ್ಯ ಇಲ್ಲ. ನಾವು ಯೆಹೋವನ ಮೇಲೆ ಗಮನ ಇಟ್ರೆ, ಯೆಹೋವನನ್ನ ಬೆಸ್ಟ್‌ ಫ್ರೆಂಡ್‌ ಆಗಿ ಮಾಡ್ಕೊಂಡ್ರೆ, ಶಾಶ್ವತವಾಗಿ ಖುಷಿಯಾಗಿರೋಕೆ ಆತನೇ ನಮಗೆ ಸಹಾಯ ಮಾಡ್ತಾನೆ.—ಕೀರ್ತ. 144:15.

ನೀವೇನು ಹೇಳ್ತೀರಾ?

  • ಯೆಹೋವ ಮತ್ತು ಯೇಸು ಯಾಕೆ ಖುಷಿಯಾಗಿದ್ದಾರೆ?

  • ಯಾವ ಮೂರು ವಿಷ್ಯಗಳು ನಮ್ಮ ಖುಷಿನ ಕಿತ್ಕೊಬಹುದು?

  • ಕಳ್ಕೊಂಡಿರೋ ಖುಷಿನ ಮತ್ತೆ ಪಡ್ಕೊಳ್ಳೋಕೆ ನಾವು ಏನು ಮಾಡಬೇಕು?

ಗೀತೆ 155 “ನಂ ಖುಷಿಗೆ ಕಾರಣ ಯೆಹೋವ”

a “ಖುಷಿ ಕೊಡೋ ದೇವರ ಸಹಾಯ ಕೇಳಿ” ಅನ್ನೋ ಚೌಕ ನೋಡಿ.

b ಉದಾಹರಣೆಗೆ, 2023ರ ಆಡಳಿತ ಮಂಡಲಿಯ ಅಪ್ಡೇಟ್‌ #5ರಲ್ಲಿ ಬಂದ ಡೆನ್ನಿಸ್‌ ಮತ್ತು ಇರಿನಾ ಕ್ರಿಸ್ಟೆಂಸನ್‌ರವರ ಅನುಭವ ನೋಡಿ.

c ಹೆಚ್ಚಿನ ಮಾಹಿತಿಗಾಗಿ ಜುಲೈ 15, 2008ರ ಕಾವಲಿನಬುರುಜುವಿನ “ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಟ್ಟು ಸಂತೋಷದಿಂದಿರ್ರಿ” ಅನ್ನೋ ಲೇಖನವನ್ನ ನೋಡಿ.

d ಚಿತ್ರ ವಿವರಣೆ: ಒಬ್ಬ ಸಿಸ್ಟರ್‌ ಅವಳಿಗೋಸ್ಕರ ತುಂಬ ವಸ್ತುಗಳನ್ನ ತಗೊಂಡಿದ್ದಾಳೆ. ಆದ್ರೆ ಅದೇ ಸಿಸ್ಟರ್‌ ಒಬ್ಬ ವಯಸ್ಸಾದ ಸಹೋದರಿಗೆ ಹೂವುಗಳನ್ನ ತಗೊಂಡು ಹೋಗಿ ಕೊಟ್ಟಾಗ ತುಂಬ ಖುಷಿಯಾಗಿದ್ದಾಳೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ