ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಮಾರ್ಚ್‌ ಪು. 20-25
  • ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇರಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೆಲಸ ಆಯ್ಕೆ ಮಾಡುವಾಗ
  • ಸಂಗಾತಿಯನ್ನ ಹುಡುಕುವಾಗ
  • ಸಂಘಟನೆ ನಿರ್ದೇಶನ ಕೊಟ್ಟಾಗ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
    2025-2026ರ ಸಮ್ಮೇಳನ ಕಾರ್ಯಕ್ರಮ ಸಂಚರಣ ಮೇಲ್ವಿಚಾರಕನೊಂದಿಗೆ.
  • ದೇವರನ್ನೂ ಕೇಳಿ, ನಿರ್ಧಾರ ಮಾಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಮಾರ್ಚ್‌ ಪು. 20-25

ಅಧ್ಯಯನ ಲೇಖನ 12

ಗೀತೆ 118 ಹೆಚ್ಚು ನಂಬಿಕೆಯನ್ನು ಕೊಡು

ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇರಿ!

“ನಾವು ಕಣ್ಣಿಗೆ ಕಾಣೋ ವಿಷ್ಯಗಳಿಗೆ ತಕ್ಕ ಹಾಗೆ ಜೀವಿಸದೆ, ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀವಿ.”—2 ಕೊರಿಂ. 5:7.

ಈ ಲೇಖನದಲ್ಲಿ ಏನಿದೆ?

ನಾವು ಮುಖ್ಯವಾದ ನಿರ್ಧಾರಗಳನ್ನ ಮಾಡುವಾಗ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀವಿ ಅಂತ ಹೇಗೆ ತೋರಿಸಬಹುದು ಅಂತ ನೋಡೋಣ.

1. ಕೊಲ್ತಾರೆ ಅಂತ ಗೊತ್ತಿದ್ರೂ ಪೌಲ ಯಾಕೆ ನೆಮ್ಮದಿಯಿಂದ ಇದ್ದ?

“ನಾನು ನನ್ನ ಓಟವನ್ನ ಓಡಿ ಮುಗಿಸಿದ್ದೀನಿ, ನಾನು ನಂಬಿಕೆಗೆ ತಕ್ಕ ಹಾಗೆ ಜೀವನ ಮಾಡಿದ್ದೀನಿ” ಅಂತ ಪೌಲ ಹೇಳಿದ. (2 ತಿಮೊ. 4:6-8) ಪೌಲನ ಜೀವನದಲ್ಲಿ ಈಗಾಗ್ಲೇ ಸಂತೋಷ, ಸಂತೃಪ್ತಿ ಇದ್ದಿದ್ರಿಂದ ಜನ ಇನ್ನು ಸ್ವಲ್ಪ ಸಮಯದಲ್ಲೇ ತನ್ನನ್ನ ಕೊಲ್ತಾರೆ ಅಂತ ಗೊತ್ತಿದ್ರೂ ನೆಮ್ಮದಿಯಿಂದ ಇದ್ದ. ಪೌಲ ಕ್ರೈಸ್ತನಾದ್ಮೇಲೆ ತನ್ನ ಜೀವನದಲ್ಲಿ ಒಳ್ಳೆ ನಿರ್ಧಾರಗಳನ್ನ ಮಾಡಿದ್ದ. ಯೆಹೋವ ತನ್ನನ್ನ ಮೆಚ್ಕೊಂಡಿದ್ದಾನೆ ಅಂತ ಅವನಿಗೆ ಗೊತ್ತಿತ್ತು. ನಮ್ಮೆಲ್ರಿಗೂ ಜೀವನದಲ್ಲಿ ಒಳ್ಳೆ ನಿರ್ಧಾರಗಳನ್ನ ಮಾಡ್ಬೇಕು, ದೇವರ ಮೆಚ್ಚಿಗೆ ಪಡೀಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ಅದನ್ನೆಲ್ಲ ಹೇಗೆ ಮಾಡೋದು?

2. ನಂಬಿಕೆಗೆ ತಕ್ಕ ಹಾಗೆ ಜೀವಿಸೋದು ಅಂದ್ರೇನು?

2 ಪೌಲ ತನ್ನ ಬಗ್ಗೆ ಮತ್ತೆ ಬೇರೆ ಕ್ರೈಸ್ತರ ಬಗ್ಗೆ ಹೇಳ್ತಾ, “ನಾವು ಕಣ್ಣಿಗೆ ಕಾಣೋ ವಿಷ್ಯಗಳಿಗೆ ತಕ್ಕ ಹಾಗೆ ಜೀವಿಸದೆ, ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀವಿ” ಅಂತ ಹೇಳಿದ. (2 ಕೊರಿಂ. 5:7) ಒಬ್ಬ ವ್ಯಕ್ತಿ ಬರೀ ತನ್ನ ಕಣ್ಣಿಗೆ ಕಾಣೋ ವಿಷ್ಯಗಳಿಗೆ ತಕ್ಕ ಹಾಗೆ ಜೀವಿಸಿದ್ರೆ ಅವನು ಮಾಡೋ ನಿರ್ಧಾರಗಳು ಅವನು ಏನು ನೋಡ್ತಾನೋ, ಏನು ಕೇಳ್ತಾನೋ ಮತ್ತು ಅವನಿಗೆ ಏನು ಅನಿಸುತ್ತೋ ಅದ್ರ ಮೇಲೆ ಆಧಾರವಾಗಿ ಇರುತ್ತೆ. ಆದ್ರೆ ಆ ವ್ಯಕ್ತಿ ನಂಬಿಕೆಗೆ ತಕ್ಕ ಹಾಗೆ ಜೀವಿಸಿದ್ರೆ, ಅವನು ಮಾಡೋ ನಿರ್ಧಾರಗಳಲ್ಲಿ ಯೆಹೋವನ ಮೇಲೆ ಅವನಿಗಿರೋ ನಂಬಿಕೆ ಎದ್ದು ಕಾಣುತ್ತೆ. ಬೈಬಲ್‌ನಲ್ಲಿ ಯೆಹೋವ ಹೇಳಿರೋ ತರ ನಡ್ಕೊಂಡ್ರೆ ಈಗ ಜೀವನ ಚೆನ್ನಾಗಿರುತ್ತೆ ಮತ್ತೆ ಮುಂದೇನೂ ಯೆಹೋವ ತನ್ನನ್ನ ಆಶೀರ್ವದಿಸ್ತಾನೆ ಅನ್ನೋ ನಂಬಿಕೆ ಆ ವ್ಯಕ್ತಿಗಿರುತ್ತೆ.—ಕೀರ್ತ. 119:66; ಇಬ್ರಿ. 11:6.

3. ನಂಬಿಕೆಗೆ ತಕ್ಕ ಹಾಗೆ ಜೀವಿಸೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ? (2 ಕೊರಿಂಥ 4:18)

3 ಸಾಮಾನ್ಯವಾಗಿ ನಾವೆಲ್ರೂ ಏನು ನೋಡ್ತೀವೋ, ಕೇಳಿಸ್ಕೊಳ್ತೀವೋ, ನಮಗೇನು ಅನ್ಸುತ್ತೋ ಅದ್ರ ಆಧಾರದ ಮೇಲೆ ನಿರ್ಧಾರಗಳನ್ನ ಮಾಡ್ತೀವಿ. ಆದ್ರೆ ಮುಖ್ಯವಾದ ನಿರ್ಧಾರಗಳನ್ನ ಮಾಡ್ವಾಗ ಬರೀ ಇವನ್ನೇ ನಂಬ್ಕೊಂಡು ನಿರ್ಧಾರ ಮಾಡ್ಬಿಟ್ರೆ ಕೆಲವು ಸಲ ಸಮಸ್ಯೆಗಳಲ್ಲಿ ಸಿಕ್ಕಿ ಹಾಕೋಬಹುದು. ಯಾಕೆ? ಯಾಕಂದ್ರೆ ನಮ್ಮ ಕಣ್ಣು, ಕಿವಿ ನಮ್ಮನ್ನ ಮೋಸ ಮಾಡಿಬಿಡುತ್ತೆ. ಹಾಗಾಗಿ ಅದನ್ನ ನಂಬಿ ಮೋಸ ಹೋಗಿಬಿಡ್ತೀವಿ. ಮೋಸ ಹೋಗಿಲ್ಲ ಅಂದ್ರೂ ನಮ್ಮ ಕಣ್ಣಿಗೆ ಕಾಣೋ ವಿಷ್ಯಗಳನ್ನ ಮನಸಲ್ಲಿ ಇಟ್ಟು ನಿರ್ಧಾರ ಮಾಡಿದ್ರೆ ಯೆಹೋವನ ಸಲಹೆಗಳನ್ನ ಪಕ್ಕಕ್ಕೆ ಇಟ್ಟುಬಿಡ್ತೀವಿ. (ಪ್ರಸಂ. 11:9; ಮತ್ತಾ. 24:37-39) ಆದ್ರೆ ನಾವು ನಂಬಿಕೆಗೆ ತಕ್ಕ ಹಾಗೆ ಜೀವಿಸಿದ್ರೆ “ದೇವರಿಗೆ ಏನು ಇಷ್ಟ ಅಂತ” ತಿಳ್ಕೊಂಡು ಅದ್ರ ಪ್ರಕಾರ ನಿರ್ಧಾರ ಮಾಡ್ತೀವಿ. (ಎಫೆ. 5:10) ಹೀಗೆ ಯೆಹೋವ ಹೇಳೋದನ್ನ ಪಾಲಿಸಿದ್ರೆ ಮನಸ್ಸಲ್ಲಿ ನೆಮ್ಮದಿ, ಜೀವನದಲ್ಲಿ ಖುಷಿ ಇರುತ್ತೆ. (ಕೀರ್ತ. 16:8, 9; ಯೆಶಾ. 48:17, 18) ಆತನ ಮಾತನ್ನ ಕೊನೇ ತನಕ ಪಾಲಿಸಿದ್ರೆ ಮುಂದೆ ನಮಗೆ ಶಾಶ್ವತ ಜೀವಾನೂ ಸಿಗುತ್ತೆ.—2 ಕೊರಿಂಥ 4:18 ಓದಿ.

4. ಒಬ್ಬ ವ್ಯಕ್ತಿ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಿದ್ದಾನಾ ಇಲ್ವಾ ಅಂತ ಹೇಗೆ ಕಂಡುಹಿಡಿಯೋದು?

4 ನಾನು ಕಣ್ಣಿಗೆ ಕಾಣೋ ವಿಷ್ಯಗಳಿಗೆ ತಕ್ಕ ಹಾಗೆ ಜೀವಿಸ್ತಿದ್ದೀನಾ ಅಥವಾ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಿದ್ದೀನಾ ಅಂತ ಹೇಗೆ ಕಂಡುಹಿಡಿಯೋದು? ಈ ಪ್ರಶ್ನೆಗೆ ಉತ್ರ ಸಿಗಬೇಕಂದ್ರೆ ನಮ್ಮನ್ನೇ ಹೀಗೆ ಕೇಳ್ಕೊಬೇಕು: ನಿರ್ಧಾರಗಳನ್ನ ಮಾಡುವಾಗ ನನಗೇನು ಕಾಣ್ಸುತ್ತೋ ಅದ್ರ ಆಧಾರದ ಮೇಲೆ ನಿರ್ಧಾರ ಮಾಡ್ತಿದ್ದೀನಾ ಅಥವಾ ಯೆಹೋವ ಹೇಳಿರೋ ವಿಷ್ಯಗಳನ್ನ ಮನಸ್ಸಲ್ಲಿ ಇಟ್ಟು ನಿರ್ಧಾರ ಮಾಡ್ತಿದ್ದೀನಾ? ನಾವೆಲ್ರೂ ನಂಬಿಕೆಗೆ ತಕ್ಕ ಹಾಗೆ ನಿರ್ಧಾರ ಮಾಡಬೇಕಾಗಿರೋ ಮೂರು ವಿಷ್ಯಗಳನ್ನ ನೋಡೋಣ. (1) ಕೆಲಸ ಆಯ್ಕೆ ಮಾಡುವಾಗ, (2) ಸಂಗಾತಿಯನ್ನ ಹುಡುಕುವಾಗ, (3) ಸಂಘಟನೆ ನಿರ್ದೇಶನ ಕೊಟ್ಟಾಗ. ಈ ಪ್ರತಿಯೊಂದು ವಿಷ್ಯದಲ್ಲೂ ನಿರ್ಧಾರ ಮಾಡುವಾಗ ನಾವು ಏನೆಲ್ಲಾ ಯೋಚಿಸಬೇಕು ಅಂತ ನೋಡೋಣ.

ಕೆಲಸ ಆಯ್ಕೆ ಮಾಡುವಾಗ

5. ಒಂದು ಕೆಲಸ ಆಯ್ಕೆ ಮಾಡ್ವಾಗ ಏನೆಲ್ಲ ಯೋಚ್ನೆ ಮಾಡಬೇಕಾಗುತ್ತೆ?

5 ನಮ್ಮನ್ನ, ನಮ್ಮ ಕುಟುಂಬನ ಚೆನ್ನಾಗಿ ನೋಡ್ಕೊಳ್ಬೇಕು ಅನ್ನೋ ಆಸೆ ನಮ್ಮೆಲ್ರಿಗೂ ಇರುತ್ತೆ. (ಪ್ರಸಂಗಿ 7:12; 1 ತಿಮೊತಿ 5:8) ಕೆಲವು ಕೆಲಸದಲ್ಲಿ ಕೈ ತುಂಬಾ ಸಂಬಳ ಸಿಗುತ್ತೆ. ಅಂಥವರು ಅವ್ರ ಖರ್ಚೆಲ್ಲ ನೋಡ್ಕೊಂಡು ಮುಂದೆ ಜೀವನಕ್ಕಂತಾನೂ ಸ್ವಲ್ಪ ಎತ್ತಿಡೋಕಾಗುತ್ತೆ. ಇನ್ನು ಕೆಲವು ಕೆಲಸದಲ್ಲಿ ಅಷ್ಟೇನೂ ಸಂಬಳ ಸಿಗಲ್ಲ. ಬರೀ ಆ ತಿಂಗಳಿಗಷ್ಟೇ ಜೀವನ ನಡೆಸೋಕೆ ಆಗುತ್ತೆ. ಹಾಗಾಗಿ ಯಾವ ಕೆಲಸಕ್ಕೆ ಹೋಗ್ಬೇಕು ಅಂತ ಆಯ್ಕೆ ಮಾಡುವಾಗ ಎಷ್ಟು ಸಂಬಳ ಸಿಗುತ್ತೆ ಅಂತ ಯೋಚ್ನೆ ಮಾಡೋದ್ರಲ್ಲಿ ತಪ್ಪೇನಿಲ್ಲ. ಆದ್ರೆ ನಾವು ಬರೀ ಇದನ್ನೇ ಮನಸ್ಸಲ್ಲಿಟ್ಟು ನಿರ್ಧಾರ ಮಾಡಿದ್ರೆ ಕಣ್ಣಿಗೆ ಕಾಣಿಸೋ ವಿಷ್ಯಗಳ ಮೇಲೆ ನಿರ್ಧಾರ ಮಾಡ್ತೀವಿ ಅಂತರ್ಥ.

6. ನಾವು ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ರೆ ಕೆಲಸದ ವಿಷ್ಯದಲ್ಲಿ ಹೇಗೆ ನಿರ್ಧಾರ ಮಾಡ್ತೀವಿ? (ಇಬ್ರಿಯ 13:5)

6 ನಾವು ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ರೆ ಹೇಗೆ ನಿರ್ಧಾರ ಮಾಡ್ತೀವಿ? ಒಂದು ಕೆಲಸನ ಒಪ್ಕೊಳ್ಳೋ ಮುಂಚೆ ‘ಅದು ಯೆಹೋವನ ಜೊತೆ ನನಗಿರೋ ಸಂಬಂಧದ ಮೇಲೆ ಯಾವ ಪ್ರಭಾವ ಬೀರುತ್ತೆ’ ಅಂತಾನೂ ಯೋಚ್ನೆ ಮಾಡ್ತೀವಿ. ಅದಕ್ಕೆ ನಾವು ನಮ್ಮನ್ನೇ, ‘ಈ ಕೆಲಸನ ಯೆಹೋವ ಒಪ್ತಾನಾ? ಈ ಕೆಲಸ ಒಪ್ಕೊಂಡ್ರೆ ಯೆಹೋವನಿಗೆ ಇಷ್ಟ ಇಲ್ದೆ ಇರೋದನ್ನ ನಾನು ಮಾಡಬೇಕಾಗಿ ಬರುತ್ತಾ?’ (ಜ್ಞಾನೋ. 6:16-19) ‘ಈ ಕೆಲಸದಿಂದ ಮೀಟಿಂಗ್‌ಗೆ, ಸೇವೆಗೆ ಹೋಗೋದು ಮಿಸ್‌ ಆಗುತ್ತಾ? ನನ್ನ ಕುಟುಂಬದಿಂದ ದೂರ ಇರಬೇಕಾಗುತ್ತಾ?’ ಅನ್ನೋ ಪ್ರಶ್ನೆಗಳನ್ನ ಕೇಳ್ಕೊಬೇಕು. (ಫಿಲಿ. 1:10) ಒಂದುವೇಳೆ ಈ ಪ್ರಶ್ನೆಗಳಿಗೆ ಹೌದು ಅಂತ ಉತ್ರ ಬಂದ್ರೆ ಆ ಕೆಲಸನ ಒಪ್ಕೊಳ್ಳದೆ ಇರೋದೇ ಒಳ್ಳೇದು! ಬೇರೆ ಕೆಲಸ ಸಿಗೋಕೆ ಕಷ್ಟ ಆದ್ರೆ ಏನು ಮಾಡೋದು? ಆ ಕೆಲಸನ ಒಪ್ಕೊಳ್ಳದೆ ಇರೋದೇ ಒಳ್ಳೇದು. ಹೀಗೆ ಯೆಹೋವ ನಮ್ಮನ್ನ ನೋಡ್ಕೊಳ್ತಾನೆ ಅಂತ ನಾವು ನಂಬಿಕೆ ಇಟ್ಟಿದ್ದೀವಿ ಅಂತ ತೋರಿಸ್ಕೊಡ್ತೀವಿ.—ಮತ್ತಾ. 6:33; ಇಬ್ರಿಯ 13:5 ಓದಿ.

7-8. ಹೇವಿಯರ್‌ ನಂಬಿಕೆಯಿಂದ ಹೇಗೆ ನಿರ್ಧಾರ ಮಾಡಿದ್ರು? (ಚಿತ್ರ ನೋಡಿ.)

7 ದಕ್ಷಿಣ ಅಮೇರಿಕಾದಲ್ಲಿರೋ ಹೇವಿಯರ್‌a ಅನ್ನೋ ಸಹೋದರನ ಅನುಭವ ನೋಡಿ. ನಂಬಿಕೆಯಿಂದ ನಿರ್ಧಾರ ಮಾಡೋದು ಎಷ್ಟು ಮುಖ್ಯ ಅಂತ ಅವ್ರಿಗೆ ಗೊತ್ತಿತ್ತು. ಪಯನೀಯರ್‌ ಸೇವೆ ಮಾಡೋಕೆ ಅವ್ರಿಗೆ ತುಂಬಾ ಆಸೆ ಇತ್ತು. ಅವರು ಹೇಳೋದು, “ನಾನು ಒಂದು ದೊಡ್ಡ ಕೆಲಸಕ್ಕೆ ಅರ್ಜಿ ಹಾಕಿದ್ದೆ. ಈ ಕೆಲಸ ನನಗೆ ಸಿಕ್ಕಿದ್ರೆ ಎರಡು ಪಟ್ಟು ಸಂಬಳ ಬರ್ತಿತ್ತು. ನನಗೂ ತುಂಬಾ ಖುಷಿ ಆಗ್ತಿತ್ತು. ಈ ಕೆಲಸಕ್ಕಂತ ನನಗೆ ನ್ಯಾಷೆನಲ್‌ ಮ್ಯಾನೇಜರ್‌ ಜೊತೆ ಇಂಟರ್‌ವ್ಯೂ ಇತ್ತು. ಇಂಟರ್‌ವ್ಯೂಗೆ ಹೋಗೋ ಮುಂಚೆ ನಾನು ಪ್ರಾರ್ಥನೆ ಮಾಡ್ದೆ. ನನಗೇನು ಬೇಕು ಅಂತ ನನಗಿಂತ ಯೆಹೋವನಿಗೆ ತುಂಬಾ ಚೆನ್ನಾಗಿ ಗೊತ್ತು ಅಂತ ನಾನು ಅರ್ಥ ಮಾಡ್ಕೊಂಡೆ. ನಂಗೆ ಒಳ್ಳೆ ಪೋಸ್ಟ್‌ ಬೇಕಿತ್ತು, ಕೈ ತುಂಬಾ ಸಂಬಳ ಬೇಕಿತ್ತು ನಿಜ. ಆದ್ರೆ ಈ ಕೆಲಸ ಯೆಹೋವನ ಸೇವೆಗೆ ಅಡ್ಡ ಬರೋದಾದ್ರೆ ಅದನ್ನ ಒಪ್ಕೊಳ್ಳೋಕೆ ನಂಗಿಷ್ಟ ಇರ್ಲಿಲ್ಲ.”

8 ಆ ಇಂಟರ್‌ವ್ಯೂನಲ್ಲಿ ಏನಾಯ್ತು ಅಂತ ಹೇವಿಯರ್‌ ಹೇಳ್ತಾರೆ. “ಮ್ಯಾನೇಜರ್‌ ನಂಗೆ, ಈ ಕೆಲಸನ ನಿನಗೆ ಕೊಡ್ತೀನಿ. ಆದ್ರೆ ನೀನು ಯಾವಾಗ್ಲೂ ಓವರ್‌ಟೈಮ್‌ ಮಾಡ್ಬೇಕಾಗುತ್ತೆ ಅಂದ್ರು. ಆಗ ನಾನು ಅವ್ರಿಗೆ ನಾನು ಸೇವೆಗೆ, ಮೀಟಿಂಗ್‌ಗೆ ಹೋಗ್ಬೇಕು. ನನಗೆ ಓವರ್‌ಟೈಮ್‌ ಮಾಡೋಕೆ ಕಷ್ಟ ಆಗುತ್ತೆ ಸರ್‌ ಅಂತ ಗೌರವದಿಂದ ಹೇಳ್ದೆ.” ನಿಮಗೆ ಗೊತ್ತಾ? ಕೊನೆಗೂ ಹೇವಿಯರ್‌ ಅಷ್ಟು ದೊಡ್ಡ ಕೆಲಸನ ಬೇಡ ಅಂತ ಹೇಳಿದ್ರು. ಎರಡು ವಾರ ಆದ್ಮೇಲೆ ಅವರು ಪಯನೀಯರ್‌ ಸೇವೆ ಶುರು ಮಾಡಿದ್ರು. ಆಮೇಲೆ ಸ್ವಲ್ಪ ತಿಂಗಳಾದ್ಮೇಲೆ ಅವ್ರಿಗೆ ಪಾರ್ಟ್‌ ಟೈಮ್‌ ಕೆಲಸ ಸಿಕ್ತು. ಆಮೇಲೆ ಅವರು ಹೇಳೋದು, “ಯೆಹೋವ ನನ್ನ ಪ್ರಾರ್ಥನೆಗೆ ಉತ್ರ ಕೊಟ್ರು. ಪಯನೀಯರ್‌ ಸೇವೆ ಮಾಡೋಕೆ ಸಹಾಯ ಮಾಡೋ ಒಂದು ಕೆಲಸ ಸಿಗೋ ತರ ಮಾಡಿದ್ರು. ಈಗ ನಾನು ಸೇವೆನೂ ಜಾಸ್ತಿ ಮಾಡ್ತಿದ್ದೀನಿ, ಸಹೋದರ ಸಹೋದರಿಯರ ಜೊತೆ ಒಳ್ಳೆ ಸಮಯನೂ ಕಳಿತಿದ್ದೀನಿ, ಖುಷಿ ಖುಷಿಯಾಗಿದ್ದೀನಿ.”

ಒಂದು ಕ್ಯಾಪ್‌ ಮತ್ತು ಕೆಲ್ಸದ ಬಟ್ಟೆ ಹಾಕಿಕೊಂಡಿರೋ ಒಬ್ಬ ಸಹೋದರನನ್ನು ಆ ಕಂಪನಿಯ ಸೂಪರ್‌ವೈಸರ್‌ ಖಾಲಿ ಇರೋ ಕ್ಯಾಬಿನ್‌ಗೆ ಕರ್ಕೊಂಡು ಬಂದಿದ್ದಾನೆ. ಆ ಸಹೋದರನಿಗೆ ಪ್ರಮೋಷನ್‌ ಕೊಡ್ತೀನಿ ಅಂತ ಹೇಳ್ತಿದ್ದಾನೆ.

ಕೆಲಸದಲ್ಲಿ ಪ್ರಮೋಷನ್‌ ಸಿಗೋ ಅವಕಾಶ ಬಂದ್ರೆ ನೀವೇನು ಮಾಡ್ತೀರಾ? ಯೆಹೋವನಿಗೆ ಇಷ್ಟ ಆಗೋ ತರ ನಿರ್ಧಾರ ಮಾಡ್ತೀರಾ? (ಪ್ಯಾರ 7-8 ನೋಡಿ)


9. ಟ್ರೆಜರ್‌ ಅವ್ರ ಅನುಭವದಿಂದ ನೀವೇನು ಕಲಿತ್ರಿ?

9 ನಾವೀಗ ಮಾಡ್ತಿರೋ ಕೆಲಸ ಯೆಹೋವನ ಜೊತೆ ನಮಗಿರೋ ಸಂಬಂಧನ ಹಾಳು ಮಾಡ್ತಿದ್ರೆ ಏನ್‌ ಮಾಡೋದು? ಕಾಂಗೋದಲ್ಲಿರೋ ಟ್ರೆಜರ್‌ ಅನ್ನೋ ಸಹೋದರನ ಅನುಭವ ನೋಡಿ. ಅವರು ಹೇಳೋದು, “ನಾನೊಂದು ದೊಡ್ಡ ಕೆಲಸದಲ್ಲಿದ್ದೆ. ಅದು ಎಲ್ರಿಗೂ ಸಿಗೋ ಕೆಲಸ ಅಲ್ಲ. ಇದ್ರಲ್ಲಿ ನನಗೆ ಮೂರು ಪಟ್ಟು ಜಾಸ್ತಿ ಸಂಬಳ ಸಿಗ್ತಿತ್ತು. ಜನ ನನಗೆ ಗೌರವನೂ ಕೊಡ್ತಿದ್ರು.” ಆದ್ರೆ ಟ್ರೆಜರ್‌ಗೆ ಮೀಟಿಂಗ್‌ ಹೋಗೋಕೆ ಆಗ್ತಿರ್ಲಿಲ್ಲ, ಓವರ್‌ಟೈಮ್‌ ಮಾಡಬೇಕಾಗ್ತಿತ್ತು. ಅಷ್ಟೇ ಅಲ್ಲ, ಕೆಲಸದಲ್ಲಿ ಸುಳ್ಳು ಹೇಳೋ ಒತ್ತಡನೂ ಇತ್ತು. ಹಾಗಾಗಿ ಟ್ರೆಜರ್‌ ಈ ಕೆಲಸನ ಬಿಡಬೇಕು ಅಂತ ಅಂದ್ಕೊಂಡ್ರು. ಆದ್ರೆ ಬೇರೆ ಕೆಲಸ ಸಿಕ್ಕಲಿಲ್ಲ ಅಂದ್ರೆ ಏನ್‌ ಮಾಡೋದು ಅನ್ನೋ ಚಿಂತೆನೂ ಅವರಿಗಿತ್ತು. ಅವರಿಗೆ ಏನ್‌ ಸಹಾಯ ಮಾಡ್ತು ಗೊತ್ತಾ? ಅವರು ಹೇಳೋದು, “ಹಬಕ್ಕೂಕ 3:17-19 ನನಗೆ ಸಹಾಯ ಮಾಡ್ತು. ತುಂಬ ಕಮ್ಮಿ ಸಂಬಳ ಸಿಕ್ಕಿದ್ರೂ ಯೆಹೋವ ನನ್ನನ್ನ ನೋಡ್ಕೊಳ್ತಾನೆ ಅನ್ನೋ ನಂಬಿಕೆನ ಆ ವಚನ ಕೊಡ್ತು. ಹಾಗಾಗಿ ಯೆಹೋವನ ಮೇಲೆ ನಂಬಿಕೆ ಇಟ್ಟು ನಾನು ಕೆಲಸನ ಬಿಟ್ಬಿಟ್ಟೆ. ಎಷ್ಟೋ ಕಂಪನಿ ಓನರ್‌ಗಳು ‘ಒಬ್ಬ ವ್ಯಕ್ತಿಗೆ ಒಳ್ಳೆ ಕೆಲಸ ಕೊಟ್ಟು ಕೈ ತುಂಬ ದುಡ್ಡು ಕೊಟ್ಟಬಿಟ್ರೆ ಸಾಕು, ಅವನು ಕುಟುಂಬನ, ದೇವರನ್ನ ಎಲ್ಲಾನೂ ತ್ಯಾಗ ಮಾಡೋಕೆ ರೆಡಿ ಇರ್ತಾನೆ’ ಅಂತ ಅಂದ್ಕೊತಾರೆ. ಆದ್ರೆ ನಾನು ಅದ್ರ ಹಿಂದೆ ಹೋಗದೆ, ಯೆಹೋವನ ಜೊತೆ ನನಗಿರೋ ಸಂಬಂಧನ ಮತ್ತು ನನ್ನ ಕುಟುಂಬನ ಕಾಪಾಡ್ಕೊಂಡೆ. ಒಂದು ವರ್ಷ ಆದ್ಮೇಲೆ ನನಗೊಂದು ಚಿಕ್ಕ ಕೆಲಸ ಸಿಕ್ತು. ಇದ್ರಿಂದ ಕುಟುಂಬನೂ ನೋಡ್ಕೊಳ್ಳೋಕಾಯ್ತು. ಯೆಹೋವನ ಸೇವೆನೂ ಜಾಸ್ತಿ ಮಾಡಕ್ಕಾಯ್ತು. ನಾವು ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಟ್ಟಾಗ ಕೆಲವು ಸಲ ಹಣಕಾಸಿನ ಸಮಸ್ಯೆ ಬರಬಹುದು. ಆದ್ರೆ ಯೆಹೋವ ಅಂತೂ ನಮ್ಮ ಕೈ ಬಿಡಲ್ಲ, ಆತನು ನಮ್ಮನ್ನ ನೋಡ್ಕೊಂಡೇ ನೋಡ್ಕೊಳ್ತಾನೆ.” ನಾವು ಯೆಹೋವನನ್ನ ನಂಬಿ, ಆತನ ಮಾತನ್ನ ಕೇಳಿದಾಗ ನಾವು ನಂಬಿಕೆಯಿಂದ ಜೀವಿಸ್ತಾ ಇರ್ತೀವಿ. ಆಗ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ.

ಸಂಗಾತಿಯನ್ನ ಹುಡುಕುವಾಗ

10. (ಎ) ಮದುವೆ ಆಗೋ ಮುಂಚೆ ಯಾವೆಲ್ಲ ವಿಷ್ಯಗಳ ಬಗ್ಗೆ ಯೋಚ್ನೆ ಮಾಡೋದು ಒಳ್ಳೇದು? (ಬಿ) ಹಾಗಂತ ಏನು ಮಾಡೋಕೆ ಹೋಗ್ಬಿಡಬಾರದು?

10 ಮದುವೆ ಅನ್ನೋದು ಯೆಹೋವ ನಮಗೆ ಕೊಟ್ಟಿರೋ ಒಂದು ಗಿಫ್ಟ್‌. ಮದುವೆ ಆಗ್ಬೇಕು ಅನ್ನೋ ಆಸೆ ಬರೋದು ಸಾಮಾನ್ಯ. ಒಬ್ಬ ಸಹೋದರಿ ಯಾರನ್ನ ಮದುವೆ ಆಗ್ಬೇಕು ಅಂತ ಯೋಚ್ನೆ ಮಾಡುವಾಗ, ‘ಹುಡುಗ ನೋಡೋಕೆ ಹೇಗಿದ್ದಾನೆ, ಬೇರೆಯವ್ರ ಜೊತೆ ಹೇಗೆ ನಡ್ಕೊಳ್ತಾನೆ, ಹಣನ ಹೇಗೆ ಖರ್ಚು ಮಾಡ್ತಾನೆ, ಜನ ಅವನಿಗೆ ಗೌರವ ಕೊಡ್ತಾರಾ, ಅವನಿಗೆ ತನ್ನ ಕುಟುಂಬದವ್ರನ್ನ ನೋಡ್ಕೊಳ್ಳೋ ಜವಾಬ್ದಾರಿ ಇದ್ಯಾ, ಜೊತೆಗೆ ನನ್ನನ್ನೂ ಖುಷಿಯಾಗಿ ನೊಡ್ಕೊಳ್ತಾನಾ’ ಅಂತೆಲ್ಲಾ ಯೋಚ್ನೆ ಮಾಡೋದು ಮುಖ್ಯ.b ಆದ್ರೆ ಬರೀ ಇದ್ರ ಬಗ್ಗೆನೇ ಯೋಚ್ನೆ ಮಾಡಿ ನಿರ್ಧಾರ ಮಾಡಿಬಿಟ್ರೆ ಆ ಸಹೋದರಿ ಕಣ್ಣಿಗೆ ಕಾಣೋ ವಿಷಯಗಳ ಮೇಲೆ ನಂಬಿಕೆ ಇಡ್ತಿದ್ದಾಳೆ ಅಂತ ಅರ್ಥ.

11. ಮದುವೆ ವಿಷ್ಯದಲ್ಲಿ ನಿರ್ಧಾರ ಮಾಡ್ವಾಗ್ಲೂ ಯೆಹೋವನನ್ನ ನಂಬ್ತೀವಿ ಅಂತ ಹೇಗೆ ತೋರಿಸಬಹುದು? (1 ಕೊರಿಂಥ 7:39)

11 ಎಷ್ಟೋ ಸಹೋದರ ಸಹೋದರಿಯರು ಮದುವೆ ವಿಷ್ಯದಲ್ಲಿ ಯೆಹೋವನಿಗೆ ಹೆಮ್ಮೆ ಆಗೋ ತರ ನಿರ್ಧಾರ ಮಾಡಿದ್ದಾರೆ. ಉದಾಹರಣೆಗೆ, ಯಾವಾಗ ಮದುವೆ ಆಗಬೇಕು ಅಂತ ನಿರ್ಧಾರ ಮಾಡ್ವಾಗ ಏನು ಮಾಡ್ತಾರೆ? “ಯೌವನದಲ್ಲಿ ಬರೋ ತೀವ್ರ ಲೈಂಗಿಕ ಆಸೆಗಳು ಕಮ್ಮಿ” ಆದ್ಮೇಲೆ ಮದುವೆ ಆಗಿ ಅನ್ನೋ ಸಲಹೆನ ಪಾಲಿಸ್ತಾರೆ. (1 ಕೊರಿಂ. 7:36) ಯಾರನ್ನ ಮದುವೆ ಆಗ್ಬೇಕು ಅಂತ ಯೋಚ್ನೆ ಮಾಡುವಾಗ ಏನು ಮಾಡ್ತಾರೆ? ಒಬ್ಬ ಸಂಗಾತಿಲಿ ಯಾವ ಗುಣಗಳು ಇರಬೇಕು ಅಂತ ಯೆಹೋವ ಹೇಳಿದ್ದಾನೋ ಅದು ಇದ್ಯಾ ಅಂತ ತಿಳ್ಕೊಳ್ತಾರೆ. (ಜ್ಞಾನೋ. 31:10-13, 26-28; ಎಫೆ. 5:33; 1 ತಿಮೊ. 5:8) ಸತ್ಯದಲ್ಲಿ ಇಲ್ದೆ ಇರೋ ಯಾರಾದ್ರೂ ಅವ್ರನ್ನ ಇಷ್ಟಪಟ್ರೆ ಏನು ಮಾಡ್ತಾರೆ? “ಸತ್ಯದಲ್ಲಿ ಇರುವವ್ರನ್ನ ಮಾತ್ರ ಮದುವೆ ಆಗಬೇಕು” ಅನ್ನೋ ಸಲಹೆನ ನೆನಪಿಸ್ಕೊಳ್ತಾರೆ, ಅವ್ರನ್ನ ಪ್ರೀತಿಸೋಕೆ ಹೋಗಲ್ಲ. (1 ಕೊರಿಂಥ 7:39 ಓದಿ.) ಬೇರೆ ಎಲ್ರಿಗಿಂತ ಯೆಹೋವ ತಮ್ಮ ಭಾವನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡು ಬೆಂಬಲ ಕೊಡ್ತಾನೆ ಅನ್ನೋ ಭರವಸೆ ಇರೋದ್ರಿಂದ ಅವರು ಮದುವೆ ವಿಷ್ಯದಲ್ಲೂ ಹೀಗೆ ನಂಬಿಕೆಯಿಂದ ನಿರ್ಧಾರ ಮಾಡ್ತಾರೆ.—ಕೀರ್ತ. 55:22.

12. ರೋಜಾ ಅವ್ರ ಅನುಭವದಿಂದ ನೀವೇನು ಕಲಿತ್ರಿ?

12 ಕೊಲಂಬಿಯಾದಲ್ಲಿ ಪಯನೀಯರ್‌ ಸೇವೆ ಮಾಡ್ತಿರೋ ರೋಜಾ ಅನ್ನೋ ಸಹೋದರಿಯ ಅನುಭವ ನೋಡಿ. ಅವರು ಸತ್ಯದಲ್ಲಿ ಇಲ್ದೆ ಇರೋ ಒಬ್ಬ ವ್ಯಕ್ತಿ ಜೊತೆ ಕೆಲಸ ಮಾಡಬೇಕಾಗಿ ಬಂತು. ಅವನು ರೋಜಾನ ಇಷ್ಟ ಪಡೋಕೆ ಶುರು ಮಾಡಿದ. ರೋಜಾಗೂ ಅವನಂದ್ರೆ ಇಷ್ಟ ಆಯ್ತು. ರೋಜಾ ಹೇಳೋದು, “ಇವನು ತುಂಬಾ ಒಳ್ಳೆ ವ್ಯಕ್ತಿ. ಅವನಲ್ಲಿ ಯಾವ ಕೆಟ್ಟ ಅಭ್ಯಾಸನೂ ಇರ್ಲಿಲ್ಲ. ಬೇರೆಯವ್ರಿಗೂ ಸಹಾಯ ಮಾಡ್ತಿದ್ದ. ನನ್ನ ಜೊತೆನೂ ಚೆನ್ನಾಗಿ ನಡ್ಕೊಳ್ತಿದ್ದ. ಒಬ್ಬ ಗಂಡನಲ್ಲಿ ಏನೇನು ಇರಬೇಕು ಅಂತ ನಾನು ಅನ್ಕೊಂಡಿದ್ನೋ ಅದೆಲ್ಲ ಅವನಲ್ಲಿತ್ತು. ಆದ್ರೆ ಅವನು ಸತ್ಯದಲ್ಲಿ ಇರಲಿಲ್ಲ ಅಷ್ಟೇ. ನನಗೂ ಮದುವೆ ಆಗೋ ಆಸೆ ಇತ್ತು. ಸತ್ಯದಲ್ಲಿ ಯಾರೂ ಸಿಗ್ತಾನೆ ಇರ್ಲಿಲ್ಲ. ಹಾಗಾಗಿ ನನಗೂ ಒಬ್ಬಳೇ ಇದ್ದೀನಿ ಅಂತ ಅನಿಸ್ತಾ ಇತ್ತು. ಇಂಥ ಪರಿಸ್ಥಿತಿಯಲ್ಲಿದ್ದ ನನಗೆ ಇವ್ನಿಗೆ ಬೇಡ ಅಂತ ಹೇಳೋದು ಅಷ್ಟು ಸುಲಭ ಆಗಿರಲಿಲ್ಲ.” ಹಾಗಿದ್ರೂ ರೋಜಾ ಕಣ್ಣಿಗೆ ಕಾಣೋ ವಿಷ್ಯಗಳನ್ನ ನೋಡಿ ನಿರ್ಧಾರ ಮಾಡ್ಲಿಲ್ಲ. ‘ಒಂದುವೇಳೆ ನಾನು ಈ ವ್ಯಕ್ತಿನ ಮದುವೆ ಆದ್ರೆ ಯೆಹೋವನ ಜೊತೆ ನನಗಿರೋ ಸಂಬಂಧ ಏನಾಗಬಹುದು’ ಅಂತ ಯೋಚ್ನೆ ಮಾಡಿದಳು. ಹಾಗಾಗಿ ಆ ವ್ಯಕ್ತಿನ ನೋಡೋದನ್ನ, ಮೀಟ್‌ ಮಾಡೋದನ್ನ ನಿಲ್ಸಿ ಜಾಸ್ತಿ ಸೇವೆ ಮಾಡೋಕೆ ಶುರು ಮಾಡಿದಳು. ಹೀಗಾಗಿ ಸ್ವಲ್ಪ ಟೈಮಲ್ಲೇ ಅವಳನ್ನ ರಾಜ್ಯ ಪ್ರಚಾರಕರ ಶಾಲೆಗೆ ಕರೆಯಲಾಯ್ತು. ಈಗ ರೋಜಾ ವಿಶೇಷ ಪಯನೀಯರಾಗಿ ಸೇವೆ ಮಾಡ್ತಿದ್ದಾಳೆ. ರೋಜಾ ಹೇಳೋದು, “ನಾನು ನೆನಸದೆ ಇರೋಷ್ಟು ಆಶೀರ್ವಾದಗಳನ್ನ ಯೆಹೋವ ಕೊಟ್ಟಿದ್ದಾನೆ. ಅದಕ್ಕೆ ನಾನೀಗ ಖುಷಿ ಖುಷಿಯಾಗಿದೀನಿ.” ನಮ್ಮ ಮನಸ್ಸಿಗೆ ಇಷ್ಟ ಆಗಿರೋ ಒಂದು ವಿಷ್ಯನ, ವ್ಯಕ್ತಿನ ಯೆಹೋವ ಬೇಡ ಅಂತ ಹೇಳಿದಾಗ ಅದನ್ನ ಬಿಟ್ಟುಬಿಡೋದು ಅಷ್ಟು ಸುಲಭ ಅಲ್ಲ. ಆದ್ರೆ ನೆನಪಿಡಿ, ನಾವು ಯೆಹೋವನ ಮಾತು ಕೇಳಿ ನಂಬಿಕೆಗೆ ತಕ್ಕ ಹಾಗೆ ಜೀವಿಸಿದ್ರೆ ನಾವು ಅಂದ್ಕೊಳ್ಳೋದಕ್ಕಿಂತ ಜಾಸ್ತಿ ಆಶೀರ್ವಾದ ಕೊಡ್ತಾನೆ.

ಸಂಘಟನೆ ನಿರ್ದೇಶನ ಕೊಟ್ಟಾಗ

13. ಸಂಘಟನೆ ನಿರ್ದೇಶನ ಕೊಟ್ಟಾಗ ನಾವು ಏನು ಮಾಡಿಬಿಡಬಹುದು?

13 ಹಿರಿಯರು, ಸರ್ಕಿಟ್‌ ಮೇಲ್ವಿಚಾರಕರು, ಬ್ರಾಂಚ್‌ ಆಫೀಸ್‌ ಮತ್ತು ಆಡಳಿತ ಮಂಡಲಿ ನಾವು ಯೆಹೋವನ ಸೇವೆಯನ್ನ ಇನ್ನೂ ಚೆನ್ನಾಗಿ ಮಾಡ್ಕೊಂಡು ಹೋಗೋಕೆ ನಿರ್ದೇಶನಗಳನ್ನ ಕೊಡ್ತಾರೆ. ಕೆಲವು ಸಲ ಅವರು ಯಾಕೆ ಒಂದು ನಿರ್ದೇಶನ ಕೊಡ್ತಿದ್ದಾರೆ ಅನ್ನೋ ಕಾರಣ ನಮಗೆ ಅರ್ಥ ಆಗದೇ ಇರಬಹುದು. ಆಗ ಈ ನಿರ್ದೇಶನಗಳನ್ನ ಪಾಲಿಸಿದ್ರೆ ಏನೆಲ್ಲಾ ತೊಂದರೆ ಆಗಬಹುದು ಅನ್ನೋದ್ರ ಬಗ್ಗೆನೇ ನಾವು ಯೋಚ್ನೆ ಮಾಡ್ಬಿಡಬಹುದು ಅಥವಾ ಆ ನಿರ್ದೇಶನಗಳನ್ನ ಕೊಡ್ತಿರೋ ಸಹೋದರರ ಕುಂದುಕೊರತೆಗಳ ಬಗ್ಗೆನೂ ನಾವು ಯೋಚ್ನೆ ಮಾಡಬಹುದು.

14. ಸಂಘಟನೆಯಿಂದ ಬರೋ ನಿರ್ದೇಶನಗಳನ್ನು ಪಾಲಿಸೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (ಇಬ್ರಿಯ 13:17)

14 ಆದ್ರೆ ಇಂಥ ಸಂದರ್ಭದಲ್ಲೂ ನಾವು ನಂಬಿಕೆಗೆ ತಕ್ಕ ಜೀವಿಸ್ತಾ ಇದ್ದೀವಿ ಅಂತ ಹೇಗೆ ತೋರಿಸಬಹುದು? ಯೆಹೋವನಿಗೆ ನಮ್ಮ ಪರಿಸ್ಥಿತಿ ಏನು ಅಂತ ಚೆನ್ನಾಗಿ ಗೊತ್ತು, ಆತನಿಗೆ ಎಲ್ಲದ್ರ ಮೇಲೆ ಕಂಟ್ರೋಲ್‌ ಇದೆ ಅಂತ ನಂಬ್ತೀವಿ. ಈ ತರ ನಂಬಿದ್ರೆ ನಿರ್ದೇಶನದ ಬಗ್ಗೆ ನಾವು ತಪ್ಪಾಗಿ ಯೋಚ್ನೆ ಮಾಡಲ್ಲ, ಬದಲಿಗೆ ತಕ್ಷಣ ಅದನ್ನ ಮನಸಾರೆ ಪಾಲಿಸ್ತೀವಿ. (ಇಬ್ರಿಯ 13:17 ಓದಿ.) ಹೀಗೆ ನಾವು ಯೆಹೋವನ ಮಾತನ್ನ ಕೇಳಿದ್ರೆ ಸಭೆಲಿ ಒಗಟ್ಟಿರುತ್ತೆ ಅಂತ ಅರ್ಥ ಮಾಡ್ಕೊಳ್ತಿವಿ. (ಎಫೆ. 4:2, 3) ನಮ್ಮನ್ನ ಮುಂದೆ ನಿಂತು ನಡೆಸ್ತಿರೋ ಸಹೋದರರು ಅಪರಿಪೂರ್ಣರಾಗಿದ್ರೂ ನಾವು ಅವ್ರ ಮಾತನ್ನ ಕೇಳಿದ್ರೆ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ ಅಂತ ನಂಬ್ತೀವಿ. (1 ಸಮು. 15:22) ಅಷ್ಟೇ ಅಲ್ಲ ಸರಿಯಾದ ಸಮಯದಲ್ಲಿ ಯೆಹೋವ ಎಲ್ಲ ವಿಷ್ಯಗಳನ್ನೂ ಸರಿ ಮಾಡ್ತಾನೆ ಅಂತಾನೂ ಭರವಸೆ ಇಡ್ತೀವಿ.—ಮೀಕ 7:7.

15-16. ಸಂಘಟನೆ ಕೊಟ್ಟ ನಿರ್ದೇಶನನ ನಂಬಿಕೆಯಿಂದ ಪಾಲಿಸೋಕೆ ಒಬ್ಬ ಸಹೋದರನಿಗೆ ಏನು ಸಹಾಯ ಮಾಡ್ತು? (ಚಿತ್ರ ನೋಡಿ.)

15 ನಂಬಿಕೆಗೆ ತಕ್ಕ ಹಾಗೆ ಜೀವಿಸಿದ್ರೆ ಏನು ಪ್ರಯೋಜನ ಆಗುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ನೋಡಿ. ಪೆರು ಅನ್ನೋ ಊರಲ್ಲಿ ತುಂಬಾ ಜನ ಸ್ಪ್ಯಾನಿಷ್‌ ಮಾತಾಡ್ತಾರೆ. ಆದ್ರೆ ಅಲ್ಲಿ ಬೇರೆ ಬೇರೆ ಭಾಷೆ ಮಾತಾಡೋ ಜನ್ರೂ ಇದ್ದಾರೆ. ಅದ್ರಲ್ಲೊಂದು ಕೆಚುವಾ ಭಾಷೆ. ಆ ಭಾಷೆ ಮಾತಾಡೋ ಸಹೋದರರು ಎಷ್ಟೋ ವರ್ಷಗಳಿಂದ ಕೆಚುವಾ ಭಾಷೆ ಮಾತಾಡೋ ಜನ್ರನ್ನ ಹುಡುಕ್ತಿದ್ರು. ಆದ್ರೆ ಜನ್ರನ್ನ ಹುಡುಕೋ ವಿಷ್ಯದಲ್ಲಿ ಸರ್ಕಾರದ ನಿಯಮಗಳಿಗೆ ಹೊಂದಿಸ್ಕೊಳ್ಳೋಕೆ ಸಂಘಟನೆ ಒಂದು ಬದಲಾವಣೆ ಮಾಡ್ತು. (ರೋಮ. 13:1) ಆಗ ಕೆಲವು ಸಹೋದರರಿಗೆ, ‘ಸಂಘಟನೆ ಹೇಳೋ ತರ ಮಾಡಿದ್ರೆ ಸೇವೆನ ಅಷ್ಟೇನು ಚೆನ್ನಾಗಿ ಮಾಡೋಕಾಗಲ್ಲ, ಏನೂ ಪ್ರಯೋಜನ ಆಗಲ್ಲ’ ಅಂತ ಅನಿಸ್ತು. ಆದ್ರೂ ಅವರು ಸಂಘಟನೆ ಹೇಳಿದ ತರಾನೇ ಮಾಡಿದ್ರಿಂದ ಏನಾಯ್ತು ಗೊತ್ತಾ? ಯೆಹೋವ ಅವ್ರ ಪ್ರಯತ್ನಗಳನ್ನ ಆಶೀರ್ವದಿಸಿದನು. ಕೆಚುವಾ ಭಾಷೆ ಮಾತಾಡೋ ಎಷ್ಟೋ ಜನ್ರು ಅವ್ರಿಗೆ ಸಿಗೋ ತರ ಮಾಡಿದನು.

16 ಈ ತರ ಬದಲಾವಣೆ ಆದಾಗ ಕೆಚುವಾ ಸಭೆಲಿರೋ ಕೆವಿನ್‌ ಅನ್ನೋ ಹಿರಿಯನಿಗೂ ಸ್ವಲ್ಪ ಕಷ್ಟ ಅನಿಸ್ತು. ಅವರು ಹೇಳೋದು, “ಇನ್ಮೇಲಿಂದ ಕೆಚುವಾ ಭಾಷೆ ಮಾತಾಡೋರನ್ನ ನಾವು ಹೇಗೆ ತಾನೇ ಹುಡುಕೋಕಾಗುತ್ತೆ ಅಂತ ನಂಗೆ ಅನಿಸ್ತು. ಆದ್ರೆ ನಾನು ಜ್ಞಾನೋಕ್ತಿ 3:5ನ್ನ ನೆನಸ್ಕೊಂಡೆ. ಮೋಶೆ ಬಗ್ಗೆನೂ ಯೋಚ್ನೆ ಮಾಡ್ದೆ. ಇಸ್ರಾಯೇಲ್ಯರನ್ನ ಈಜಿಪ್ಟ್‌ನಿಂದ ಕರ್ಕೊಂಡು ಬರುವಾಗ ಕೆಂಪು ಸಮುದ್ರದ ಹತ್ರ ಹೋಗು ಅಂತ ಯೆಹೋವ ಅವನಿಗೆ ಹೇಳಿದ್ರು. ಅಲ್ಲಿ ಹೋದಾಗ ಮೋಶೆಗೆ ದಾರಿನೇ ಕಾಣಿಸಲಿಲ್ಲ. ಅವನಿಗೆ ಮುಂದೆ ಹೋಗೋದು ಅಸಾಧ್ಯ ಅಂತ ಅನಿಸ್ತು. ಆದ್ರೆ ಯೆಹೋವನ ಮಾತನ್ನ ಮೋಶೆ ಕೇಳಿದ್ರಿಂದ ಅವ್ರನ್ನ ಆತನು ಆಶೀರ್ವದಿಸಿದನು. ಅದ್ಭುತವಾಗಿ ಇಡೀ ಇಸ್ರಾಯೇಲ್ಯರನ್ನ ಕಾಪಾಡಿದನು.” (ವಿಮೋ. 14:1, 2, 9-11, 21, 22) ಇದ್ರ ಬಗ್ಗೆ ಯೋಚಿಸಿದ್ರಿಂದ ಕೆವಿನ್‌ಗೆ ನಿರ್ದೇಶನನ ಪಾಲಿಸೋಕಾಯ್ತು. ಆಮೇಲೆ ಏನಾಯ್ತು ಗೊತ್ತಾ? ಅವ್ರೇ ಹೇಳ್ತಾರೆ ನೋಡಿ, “ಯೆಹೋವ ದೇವರು ಅದ್ಭುತವಾಗಿ ನಮ್ಮನ್ನ ಆಶೀರ್ವದಿಸಿದ್ದಾನೆ. ಮೊದಲೆಲ್ಲ ನಾವು ಎಷ್ಟು ಹುಡುಕಿದ್ರೂ ಕೆಚುವಾ ಭಾಷೆ ಮಾತಾಡೋ ಒಬ್ರೋ ಇಬ್ರೋ ಸಿಗ್ತಿದ್ರು ಅಷ್ಟೇ. ಆದ್ರೆ ಈಗ ಕೆಚುವಾ ಭಾಷೆ ಮಾತಾಡೋರು ಎಲ್ಲಿ ಜಾಸ್ತಿ ಇದ್ದಾರೋ ಅಲ್ಲಿ ಹೋಗಿ ಸಾರ್ತಾ ಇದ್ದೀವಿ. ಇದ್ರಿಂದ ನಾವು ಅವರತ್ರ ಚೆನ್ನಾಗಿ ಮಾತಾಡೋಕಾಗ್ತಿದೆ. ಜಾಸ್ತಿ ಪುನರ್ಭೇಟಿಗಳು ಸಿಗ್ತಿದೆ, ಬೈಬಲ್‌ ಅಧ್ಯಯನಗಳನ್ನೂ ಮಾಡ್ತಿದ್ದೀವಿ. ಸಭೆಗೂ ತುಂಬ ಜನ ಹೊಸಬ್ರು ಬರ್ತಿದ್ದಾರೆ.” ನಾವು ನಂಬಿಕೆಯಿಂದ ನಿರ್ದೇಶನ ಪಾಲಿಸಿದಾಗ ಯೆಹೋವ ಖಂಡಿತ ನಮ್ಮನ್ನ ಆಶೀರ್ವದಿಸ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ ಅಲ್ವಾ?

 ಕೆಚುವಾ ಭಾಷೆ ಮಾತಾಡೋ ಒಬ್ಬ ವ್ಯಕ್ತಿ ಸಿಹಿಸುದ್ದಿ ಸಾರ್ತಿರೋ ಒಂದು ದಂಪತಿಗೆ ಕೆಚುವಾ ಭಾಷೆ ಮಾತಾಡೋ ಜನ್ರು ಎಲ್ಲಿದ್ದಾರೆ ಅಂತ ತೋರಿಸ್ತಿದ್ದಾನೆ.

ಕೆಚುವಾ ಭಾಷೆ ಮಾತಾಡೋರು ಎಲ್ಲಿದ್ದಾರೆ ಅಂತ ಸಹೋದರರು ಜನ್ರ ಹತ್ರ ಕೇಳಿದಾಗ ಅವರು ಆ ಭಾಷೆ ಮಾತಾಡೋರು ಅಕ್ಕಪಕ್ಕದಲ್ಲಿ ಎಲ್ಲೆಲ್ಲಾ ಇದ್ದಾರೆ ಅಂತ ಹೇಳಿದ್ರು (ಪ್ಯಾರ 15-16 ನೋಡಿ)


17. ಈ ಲೇಖನದಿಂದ ನೀವೇನು ಕಲಿತ್ರಿ?

17 ಇಲ್ಲಿವರೆಗೂ ನಾವು ಮೂರು ವಿಷಯಗಳಲ್ಲಿ ನಂಬಿಕೆಗೆ ತಕ್ಕ ಹಾಗೆ ಹೇಗೆ ಜೀವಿಸೋದು ಅಂತ ನೋಡಿದ್ವಿ. ಆದ್ರೆ ನಾವು ಜೀವನದ ಎಲ್ಲ ವಿಷ್ಯಗಳಲ್ಲೂ ಇದನ್ನ ಪಾಲಿಸಬೇಕು. ಉದಾಹರಣೆಗೆ, ಯಾವ ಫಿಲಂ ನೋಡಬೇಕು ಅನ್ನೋದ್ರ ಬಗ್ಗೆ, ನಾವು ಫ್ರೀ ಟೈಮ್‌ನಲ್ಲಿ ಏನು ಮಾಡ್ತೀವಿ ಅನ್ನೋದ್ರ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ, ಮಕ್ಕಳನ್ನ ಬೆಳೆಸೋದ್ರ ಬಗ್ಗೆ ನಿರ್ಧಾರ ಮಾಡುವಾಗ್ಲೂ ಯೆಹೋವನಿಗೆ ಇಷ್ಟ ಆಗೋ ತರನೇ ನಡ್ಕೊಬೇಕು. ನಾವು ಏನೇ ನಿರ್ಧಾರ ಮಾಡಿದ್ರು ಕಣ್ಣಿಗೆ ಕಾಣೋ ವಿಷ್ಯಗಳನ್ನ ಮನಸ್ಸಲ್ಲಿಟ್ಟು ನಿರ್ಧಾರ ಮಾಡದೆ ಯೆಹೋವನ ಜೊತೆ ನಮಗಿರೋ ಸಂಬಂಧನ, ಆತನು ಕೊಡೋ ಸಲಹೆನ ಮತ್ತು ‘ಏನೇ ಆದ್ರೂ ನಿಮ್ಮನ್ನ ನೋಡ್ಕೊಳ್ತೀನಿ’ ಅಂತ ಆತನು ಕೊಟ್ಟಿರೋ ಮಾತನ್ನ ಮನಸ್ಸಲ್ಲಿಟ್ಟು ನಿರ್ಧಾರ ಮಾಡಬೇಕು. ಈ ತರ ಮಾಡಿದ್ರೆ “ನಾವು ನಮ್ಮ ದೇವರಾದ ಯೆಹೋವನ ಹೆಸ್ರಿಗೆ ತಕ್ಕ ಹಾಗೆ ಯಾವಾಗ್ಲೂ ಜೀವಿಸ್ತೀವಿ.”—ಮೀಕ 4:5.

ನಂಬಿಕೆಗೆ ತಕ್ಕ ಹಾಗೆ ಹೇಗೆ ಜೀವಿಸಬಹುದು?

  • ಕೆಲಸ ಆಯ್ಕೆ ಮಾಡುವಾಗ

  • ಸಂಗಾತಿ ಹುಡುಕುವಾಗ

  • ಸಂಘಟನೆ ನಿರ್ದೇಶನ ಕೊಟ್ಟಾಗ

ಗೀತೆ 156 ವಿಶ್ವಾಸವೇ ನನ್ನ ಗುರಾಣಿಯಂತೆ

a ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.

b ಈ ಪ್ಯಾರಗ್ರಾಫ್‌ನಲ್ಲಿ ಒಬ್ಬ ಸಹೋದರಿ ಬಗ್ಗೆ ಹೇಳ್ತಿರೋದಾದ್ರೂ ಇದ್ರಲ್ಲಿರೋ ಸಲಹೆಗಳು ಸಹೋದರನಿಗೂ ಅನ್ವಯಿಸುತ್ತೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ