ಅಧ್ಯಯನ ಲೇಖನ 9
ಗೀತೆ 29 ಬಾಳುವೆವು ನಮ್ಮ ನಾಮದಂತೆ
ದೀಕ್ಷಾಸ್ನಾನ ತಗೊಳ್ಳೋಕೆ ಇನ್ನೂ ಯಾಕೆ ಕಾಯ್ತಿದ್ದೀರಾ?
“ನೀನು ಯಾವುದಕ್ಕಾಗಿ ಕಾಯ್ತಾ ಇದ್ದೀಯ? ಹೋಗು, ದೀಕ್ಷಾಸ್ನಾನ ಮಾಡಿಸ್ಕೊ.”—ಅ. ಕಾ. 22:16.
ಈ ಲೇಖನದಲ್ಲಿ ಏನಿದೆ?
ದೀಕ್ಷಾಸ್ನಾನ ತಗೊಂಡಿರೋ ತಾರ್ಸದ ಸೌಲ, ಕೊರ್ನೇಲ್ಯ, ಸಮಾರ್ಯ ಮತ್ತು ಕೊರಿಂಥದವ್ರ ಉದಾಹರಣೆಗಳನ್ನ ನೋಡೋಣ. ಇವ್ರಿಂದ ದೀಕ್ಷಾಸ್ನಾನ ತಗೊಳ್ಳೋಕೆ ಏನು ಪ್ರೋತ್ಸಾಹ ಸಿಗುತ್ತೆ ಅಂತ ತಿಳಿಯೋಣ.
1. ದೀಕ್ಷಾಸ್ನಾನ ತಗೊಳ್ಳೋಕೆ ಯಾವೆಲ್ಲಾ ಕಾರಣಗಳಿವೆ?
ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಎಷ್ಟೋ ವಿಧಗಳಲ್ಲಿ ತೋರಿಸಿದ್ದಾನೆ. ನಮಗೆಲ್ಲ ಜೀವ ಕೊಟ್ಟಿರೋ ಆ ಯೆಹೋವನನ್ನ ನಾವೂ ಪ್ರೀತಿಸಬೇಕಲ್ವಾ? ಆತನನ್ನ ಪ್ರೀತಿಸ್ತೀರ ಅಂತ ನೀವು ಹೇಗೆ ತೋರಿಸ್ತೀರಾ? ಅದನ್ನ ತೋರಿಸೋ ಒಂದು ಅತ್ಯುತ್ತಮ ವಿಧ ನಿಮ್ಮನ್ನ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ಳೋದೇ ಆಗಿದೆ. ಇದನ್ನ ಮಾಡಿದ್ರೆ ನೀವು ಯೆಹೋವನ ಕುಟುಂಬದಲ್ಲಿ ಒಬ್ಬರಾಗ್ತಿರ! ಆಗ ನಿಮ್ಮ ತಂದೆ ಮತ್ತು ನಿಮ್ಮ ಫ್ರೆಂಡಾಗಿರೋ ಯೆಹೋವ ನಿಮ್ಮನ್ನ ಸರಿ ದಾರಿಯಲ್ಲಿ ನಡೆಸ್ತಾನೆ. ನಿಮ್ಮನ್ನ ಕಾದು ಕಾಪಾಡ್ತಾನೆ. (ಕೀರ್ತ. 73:24; ಯೆಶಾ. 43:1, 2) ಅಷ್ಟೇ ಅಲ್ಲ ಶಾಶ್ವತವಾಗಿ ಬದುಕೋ ಅವಕಾಶನೂ ಸಿಗುತ್ತೆ.—1 ಪೇತ್ರ 3:21.
2. ಈ ಲೇಖನದಲ್ಲಿ ನಾವೇನು ಕಲಿತೀವಿ?
2 ದೀಕ್ಷಾಸ್ನಾನ ತಗೊಳ್ಳೋಕೆ ನಿಮ್ಮನ್ನ ಯಾವುದಾದ್ರೂ ತಡೀತಿದ್ಯಾ? ಈಗಾಗ್ಲೇ ದೀಕ್ಷಾಸ್ನಾನ ತಗೊಂಡಿರೋ ಲಕ್ಷಾಂತರ ಜನ್ರಿಗೂ ಅಡ್ಡಿ ತಡೆ ಬಂದಿತ್ತು. ಆದ್ರೂ ಅವ್ರೆಲ್ಲ ತಮ್ಮ ಯೋಚ್ನೆಲಿ, ನಡತೆಲಿ ಬದಲಾವಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡ್ರು. ಈಗ ಅವರು ಯೆಹೋವನನ್ನ ಸಂತೋಷದಿಂದ ಹುರುಪಿಂದ ಆರಾಧಿಸ್ತಿದ್ದಾರೆ. ಒಂದನೇ ಶತಮಾನದಲ್ಲೂ ಎಷ್ಟೊಂದು ಜನ ದೀಕ್ಷಾಸ್ನಾನ ತಗೊಂಡ್ರು. ಅವ್ರಲ್ಲಿ ಕೆಲವ್ರಿಗೆ ಯಾವ ಅಡ್ಡಿತಡೆ ಬಂತು, ಅವರು ಅದನ್ನ ಹೇಗೆ ಜಯಿಸಿದ್ರು ಮತ್ತು ಅವ್ರ ಉದಾಹರಣೆಯಿಂದ ನಾವೇನು ಕಲಿಬಹುದು ಅಂತ ಈ ಲೇಖನದಲ್ಲಿ ನೋಡೋಣ.
ಸಮಾರ್ಯದವರು ದೀಕ್ಷಾಸ್ನಾನ ತಗೊಂಡ್ರು!
3. ದೀಕ್ಷಾಸ್ನಾನ ತಗೊಳ್ಳೋಕೆ ಸಮಾರ್ಯದವ್ರಿಗೆ ಯಾವ ಅಡ್ಡಿತಡೆ ಇತ್ತು?
3 ಸಮಾರ್ಯದವರು ಯೇಸುವಿನ ಸಮಯದಲ್ಲಿದ್ದ ಒಂದು ಧಾರ್ಮಿಕ ಗುಂಪಿಗೆ ಸೇರಿದ್ದ ಜನರಾಗಿದ್ರು. ಇವರು ಶೆಕೆಮ್ ಮತ್ತು ಸಮಾರ್ಯ ಪಟ್ಟಣದ ಸುತ್ತಮುತ್ತ ಜೀವಿಸ್ತಿದ್ರು. ಇವ್ರಿಗೆ ಆದಿಕಾಂಡದಿಂದ ಧರ್ಮೋಪದೇಶಕಾಂಡದ ತನಕ ಇರೋ ಬೈಬಲಿನ ಮೊದಲ ಐದು ಪುಸ್ತಕಗಳ ಮೇಲೆ (ಪೆಂಟಟ್ಯೂಕ್) ಮಾತ್ರ ನಂಬಿಕೆ ಇತ್ತು. ಜೊತೆಗೆ ಯೆಹೋಶುವ ಪುಸ್ತಕನೂ ನಂಬ್ತಿದ್ರು ಅನ್ಸುತ್ತೆ. ಆದ್ರೆ ದೀಕ್ಷಾಸ್ನಾನ ಪಡ್ಕೊಳ್ಳೋಕೆ ಇದು ಸಾಕಾಗ್ತಿರಲಿಲ್ಲ. ಅವರು ಇಡೀ ದೇವರ ವಾಕ್ಯವನ್ನ ಒಪ್ಕೊಬೇಕಿತ್ತು. ಉದಾಹರಣೆಗೆ, ಅವರು ‘ಮೆಸ್ಸೀಯ ಬರ್ತಾನೆ’ ಅಂತ ಧರ್ಮೋಪದೇಶಕಾಂಡ 18:18, 19ರಲ್ಲಿ ದೇವರು ಕೊಟ್ಟ ಮಾತನ್ನ ನಂಬಿದ್ರು. ಅದು ಯಾವಾಗ ನಿಜ ಆಗುತ್ತೆ ಅಂತ ಕಾಯ್ತಿದ್ರು. (ಯೋಹಾ. 4:25) ಆದ್ರೆ ದೀಕ್ಷಾಸ್ನಾನ ತಗೋಬೇಕಂದ್ರೆ ಆ ಮೆಸ್ಸೀಯ ಯೇಸುನೇ ಅಂತ ಮೊದಲು ಅವರು ಒಪ್ಕೊಬೇಕಿತ್ತು. ಆದ್ರಿಂದ ಸಮಾರ್ಯದ ಎಷ್ಟೋ ಜನ ಮುಂದೆ ಯೇಸು ಮೇಲೆ ನಂಬಿಕೆ ಇಟ್ಟರು ಅಂತ ಬೈಬಲ್ ಹೇಳುತ್ತೆ. (ಯೋಹಾ. 4:39) ಇದರ ಜೊತೆಗೆ ಇನ್ನು ಕೆಲವು ಸಮಾರ್ಯದವರು ಯೆಹೂದ್ಯರನ್ನ ಕಂಡ್ರೆ ಆಗ್ತಿರ್ಲಿಲ್ಲ ಅವರು ಆ ಭೇದಭಾವವನ್ನೂ ಬಿಡಬೇಕಿತ್ತು.—ಲೂಕ 9:52-54.
4. ಫಿಲಿಪ್ಪ ಸಿಹಿಸುದ್ದಿ ಸಾರಿದಾಗ ಸಮಾರ್ಯದವರು ಏನು ಮಾಡಿದ್ರು? (ಅಪೊಸ್ತಲರ ಕಾರ್ಯ 8:5, 6, 14)
4 ಸಮಾರ್ಯದವ್ರಿಗೆ ದೀಕ್ಷಾಸ್ನಾನ ತಗೊಳ್ಳೋಕೆ ಯಾವುದು ಸಹಾಯ ಮಾಡ್ತು? ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪ ಸಮಾರ್ಯದವ್ರಿಗೆ “ಕ್ರಿಸ್ತನ ಬಗ್ಗೆ” ಸಾರಿದ. ಆಗ ಅವ್ರಲ್ಲಿ ಕೆಲವರು ದೇವ್ರ ಮಾತನ್ನ “ಮನಸಾರೆ” ನಂಬಿದ್ರು. (ಅಪೊಸ್ತಲರ ಕಾರ್ಯ 8:5, 6, 14 ಓದಿ.) ಫಿಲಿಪ್ಪ ಯೆಹೂದ್ಯನಾಗಿದ್ರೂ ಅವರು ಅವನ ಮಾತನ್ನ ತಳ್ಳಿಬಿಡಲಿಲ್ಲ. ಯಾಕಂದ್ರೆ ‘ದೇವರು ಭೇದಭಾವ ಮಾಡಲ್ಲ’ ಅಂತ ಬೈಬಲಿನ ಮೊದಲ ಐದು ಪುಸ್ತಕಗಳಲ್ಲಿರೋ (ಪೆಂಟಟ್ಯೂಕ್) ಮಾತು ಅವ್ರ ಮನಸ್ಸಲ್ಲಿ ಇದ್ದಿರಬಹುದು. (ಧರ್ಮೋ. 10:17-19) ವಿಷ್ಯ ಏನೇ ಇರಲಿ ಅವರು ಫಿಲಿಪ್ಪನ ಮಾತನ್ನ “ಮನಸಾರೆ ಕೇಳಿದ್ರು” ಮತ್ತು ಅವನಿಗೆ ಸಹಾಯ ಮಾಡ್ತಿರೋದು ಪವಿತ್ರಶಕ್ತಿನೇ ಅಂತಾನೂ ಅರ್ಥ ಮಾಡ್ಕೊಂಡ್ರು. ಅವನು ಕಾಯಿಲೆ ಬಿದ್ದವ್ರನ್ನ, ಕೆಟ್ಟ ದೇವದೂತರು ಹಿಡಿದಿದ್ದವ್ರನ್ನ ಅದ್ಭುತವಾಗಿ ವಾಸಿ ಮಾಡ್ತಿದ್ದನ್ನೂ ಸಮಾರ್ಯದವರು ನೋಡಿದ್ರು.—ಅ. ಕಾ. 8:7.
5. ಸಮಾರ್ಯದವ್ರಿಂದ ನಾವ್ಯಾವ ಪಾಠಗಳನ್ನ ಕಲಿಬಹುದು?
5 ಆ ಸಮಾರ್ಯದವ್ರಿಗೆ ಬೈಬಲ್ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ, ಯೆಹೂದ್ಯರ ಮೇಲೂ ದ್ವೇಷ ಇತ್ತು. ಆದ್ರೆ ಈ ವಿಷ್ಯಗಳು ಅವರನ್ನ ತಡೆಯೋ ತರ ಅವರು ಬಿಡಲಿಲ್ಲ, ಪ್ರಗತಿ ಮಾಡಿದ್ರು. ಅದಕ್ಕೆ ಬೈಬಲ್ ಅವ್ರ ಬಗ್ಗೆ ಹೀಗೆ ಹೇಳುತ್ತೆ, “ಫಿಲಿಪ್ಪ ಅವ್ರಿಗೆ ದೇವ್ರ ಆಳ್ವಿಕೆ ಬಗ್ಗೆ, ಯೇಸು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಹೇಳಿದ ಮೇಲೆ ಅವರು ಅವನನ್ನ ನಂಬಿ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಆರಂಭಿಸಿದ್ರು. ಅವ್ರಲ್ಲಿ ಸ್ತ್ರೀಯರು ಪುರುಷರು ಇದ್ರು.” (ಅ. ಕಾ. 8:12) ನೋಡಿದ್ರಾ? ಫಿಲಿಪ್ಪ ಅವ್ರಿಗೆ ಸತ್ಯ ಕಲಿಸಿದ್ದಾನೆ ಅಂತ ಗೊತ್ತಾದ್ಮೇಲೆ ದೀಕ್ಷಾಸ್ನಾನ ತಗೊಳ್ಳೋಕೆ ಸಮಾರ್ಯದವರು ಹಿಂದೆ ಮುಂದೆ ನೋಡಲಿಲ್ಲ. ಇದ್ರಿಂದ ಏನು ಕಲಿಬಹುದು? ದೇವರ ವಾಕ್ಯನೇ ಸತ್ಯ ಅಂತ ನೀವು ಮನಸಾರೆ ನಂಬಿದ್ದೀರಾ? ತನ್ನ ನಿಜವಾದ ಶಿಷ್ಯರು ನಿಜ ಪ್ರೀತಿ ತೋರಿಸ್ತಾರೆ ಅಂತ ಯೇಸು ಹೇಳಿದ್ದನು. ಯೆಹೋವನ ಸಾಕ್ಷಿಗಳು ದ್ವೇಷನ ಮೆಟ್ಟಿ ನಿಂತು ನಿಜ ಪ್ರೀತಿ ತೋರಿಸೋದನ್ನ ನೀವು ಕಣ್ಣಾರೆ ನೋಡಿದ್ದೀರಾ? (ಯೋಹಾ. 13:35) ಹೌದು ಅನ್ನೋದಾದ್ರೆ ಇನ್ನೂ ಯಾಕೆ ಕಾಯ್ತಾ ಇದ್ದೀರಾ? ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಆಗಿ! ಯೆಹೋವ ನಿಮ್ಮ ಪ್ರಯತ್ನನ ಆಶೀರ್ವದಿಸ್ತಾನೆ ಅಂತ ಯಾವತ್ತೂ ಮರಿಬೇಡಿ.
6. ರೂಬೆನ್ ಉದಾಹರಣೆಯಿಂದ ನೀವೇನು ಕಲಿತ್ರಿ?
6 ಜರ್ಮನಿಯಲ್ಲಿರೋ ರೂಬೆನ್ ಸಾಕ್ಷಿ ಕುಟುಂಬದಲ್ಲೇ ಬೆಳೆದ. ಆದ್ರೆ ಅವನಿಗೆ ಬೈಬಲ್ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಅವನು ಚಿಕ್ಕವನಾಗಿದ್ದಾಗ ‘ನಿಜವಾಗ್ಲೂ ಯೆಹೋವ ದೇವರು ಇದ್ದಾನಾ’ ಅನ್ನೋ ಡೌಟ್ ಬಂತು. ಆಗ ಅವನು ಏನು ಮಾಡಿದ? ಇದ್ರ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಬೇಕು ಅಂತ ಅರ್ಥ ಮಾಡ್ಕೊಂಡ. ಅವನು ಹೇಳೋದು, “ನನಗಿದ್ದ ಡೌಟ್‌ಗಳ ಬಗ್ಗೆ ರಿಸರ್ಚ್ ಮಾಡ್ದೆ. ವಿಕಾಸವಾದದ ಬಗ್ಗೆ ಒಂದೆರಡು ಸಲ ಓದಿದಾಗ ಏನೂ ಅರ್ಥ ಆಗಲಿಲ್ಲ, ಅದಕ್ಕೆ ನಾನು ಮತ್ತೇ ಮತ್ತೇ ಅದ್ರ ಬಗ್ಗೆ ಓದಿದೆ.” ಅವನು ಇಸ್ ದೇರ್ ಅ ಕ್ರಿಯೇಟರ್ ಹು ಕೇರ್ಸ್ ಅಬೌಟ್ ಯು ಅನ್ನೋ ಪುಸ್ತಕನ ಓದಿದ. ಆಗ ಅವನಿಗಿದ್ದ ಎಲ್ಲಾ ಪ್ರಶ್ನೆಗಳಿಗೆ ಉತ್ರ ಸಿಕ್ತು. ಆಗ ಅವನಿಗೆ ‘ವಾವ್, ಯೆಹೋವ ನಿಜವಾಗ್ಲೂ ಇದ್ದಾನೆ’ ಅಂತ ಅರ್ಥ ಮಾಡ್ಕೊಂಡ. ಆಮೇಲೆ ಒಂದ್ಸಲ ಅವನು ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಹೋದ. ಅಲ್ಲಿ ಬೇರೆಬೇರೆ ದೇಶ ಭಾಷೆಯ ಸಹೋದರ ಸಹೋದರಿಯರಿದ್ರು. ಅವ್ರ ಮಧ್ಯೆ ಇದ್ದ ಪ್ರೀತಿ ಒಗ್ಗಟ್ಟನ್ನ ನೋಡಿ ಅವನಿಗೆ ಆಶ್ಚರ್ಯ ಆಯ್ತು. ಅಲ್ಲಿಂದ ವಾಪಾಸ್ ಬಂದ್ಮೇಲೆ ದೀಕ್ಷಾಸ್ನಾನ ತಗೊಂಡ, ಆಗ ಅವನಿಗಿನ್ನೂ 17 ವರ್ಷ. ನಿಮಗೂ ನೀವು ಕಲ್ತಿರೋ ವಿಷ್ಯದ ಬಗ್ಗೆ ಏನಾದ್ರು ಡೌಟ್ ಇದ್ರೆ ನಮ್ಮ ಪ್ರಕಾಶನಗಳಲ್ಲಿ ಅದ್ರ ಬಗ್ಗೆ ರಿಸರ್ಚ್ ಮಾಡಿ. ಬೆಳಕಿರೋ ಕಡೆ ಹೇಗೆ ಕತ್ತಲೆ ಇರಲ್ವೋ, ಹಾಗೆ “ಸರಿಯಾದ ಜ್ಞಾನ” ಇರೋ ಕಡೆ ಡೌಟ್ಸ್ ಇರಲ್ಲ. (ಎಫೆ. 4:13, 14) ಅಷ್ಟೇ ಅಲ್ಲ, ಪ್ರಪಂಚದ ಬೇರೆಬೇರೆ ಕಡೆ ಯೆಹೋವನ ಜನರ ಮಧ್ಯೆ ಇರೋ ಪ್ರೀತಿ ಮತ್ತು ಒಗಟ್ಟಿನ ಬಗ್ಗೆ ನೀವು ಕೇಳಿಸ್ಕೊಂಡಾಗ ಅಥವಾ ಆ ಪ್ರೀತಿನ ನಿಮ್ಮ ಸಭೆಲಿ ಕಣ್ಣಾರೆ ನೋಡ್ದಾಗ ನಿಮಗೂ ಅವರ ಮೇಲೆ ಪ್ರೀತಿ ಗೌರವ ಜಾಸ್ತಿಯಾಗುತ್ತೆ.
ತಾರ್ಸದ ಸೌಲ ದೀಕ್ಷಾಸ್ನಾನ ತಗೊಂಡ!
7. ದೀಕ್ಷಾಸ್ನಾನ ತಗೊಳ್ಳೋಕೆ ಸೌಲ ತನ್ನ ಯೋಚ್ನೆಲಿ ಏನೆಲ್ಲಾ ಬದಲಾವಣೆ ಮಾಡ್ಬೇಕಿತ್ತು?
7 ತಾರ್ಸದ ಸೌಲ ಯೆಹೂದಿ ಮತದ ಬಗ್ಗೆ ಚೆನ್ನಾಗಿ ಕಲ್ತಿದ್ದ. ಯೆಹೂದಿ ಸಂಪ್ರದಾಯಗಳನ್ನ ಪಾಲಿಸ್ತಿದ್ದ. ಯೆಹೂದ್ಯರಲ್ಲಿ ಇವನಿಗೆ ತುಂಬ ಒಳ್ಳೆ ಹೆಸರಿತ್ತು. (ಗಲಾ. 1:13, 14; ಫಿಲಿ. 3:5) ಕ್ರೈಸ್ತರನ್ನ ಧರ್ಮಭ್ರಷ್ಟರ ತರ ನೋಡ್ತಿದ್ದ ಸಮಯದಲ್ಲಿ ಸೌಲ ಕ್ರೈಸ್ತರಿಗೆ ಹಿಂಸೆ ಕೊಡ್ತಾ ತಾನು ದೇವರ ಇಷ್ಟನ ಪೂರೈಸ್ತಾ ಇದ್ದೀನಿ ಅಂತ ಅಂದ್ಕೊಂಡಿದ್ದ. (ಅ. ಕಾ. 8:3; 9:1, 2; 26:9-11) ಆದ್ರೆ ಅವನು ಯೇಸು ಮೇಲೆ ನಂಬಿಕೆ ಇಡೋಕೆ, ದೀಕ್ಷಾಸ್ನಾನ ತಗೊಳ್ಳೋಕೆ ಎಷ್ಟೋ ಹಿಂಸೆಗಳನ್ನ ಎದುರಿಸೋಕೂ ರೆಡಿ ಇರಬೇಕಿತ್ತು.
8. (ಎ) ಸೌಲ ದೀಕ್ಷಾಸ್ನಾನ ತಗೊಳ್ಳೋಕೆ ಯಾವುದು ಸಹಾಯ ಮಾಡ್ತು? (ಬಿ) ಅನನೀಯ ಸೌಲನಿಗೆ ಹೇಗೆ ಸಹಾಯ ಮಾಡ್ದ? (ಅಪೊಸ್ತಲರ ಕಾರ್ಯ 22:12-16) (ಚಿತ್ರ ನೋಡಿ.)
8 ಸೌಲ ದೀಕ್ಷಾಸ್ನಾನ ತಗೊಳ್ಳೋಕೆ ಯಾವುದು ಸಹಾಯ ಮಾಡ್ತು? ಯೇಸು ಸ್ವರ್ಗದಿಂದ ಸೌಲನ ಹತ್ರ ಮಾತಾಡ್ದಾಗ ಒಂದು ಪ್ರಕಾಶವಾದ ಬೆಳಕು ಅವನನ್ನ ಕುರುಡನಾಗಿ ಮಾಡ್ತು. (ಅ. ಕಾ. 9:3-9) ಮೂರು ದಿನದ ತನಕ ಸೌಲ ಏನೂ ತಿನ್ನದೆ ಬೆಳಕು ಮತ್ತು ಆ ಧ್ವನಿ ಬಗ್ಗೆನೇ ಯೋಚ್ನೆ ಮಾಡ್ತಿದ್ದ. ಆಗ ಅವನಿಗೆ ಯೇಸುನೇ ನಿಜವಾದ ಮೆಸ್ಸೀಯ, ಆತನ ಶಿಷ್ಯರೇ ಸತ್ಯ ಧರ್ಮದವರು ಅಂತ ಅರ್ಥ ಆಯ್ತು. ಆಗ ‘ಅಯ್ಯೋ ಸ್ತೆಫನನನ್ನ ಕೊಲ್ಲೋಕೆ ನಾನೂ ಸಹಾಯ ಮಾಡಿದ್ನಲ್ಲಾ’ ಅಂತ ಸೌಲ ತುಂಬ ಪಶ್ಚಾತಾಪ ಪಟ್ಟಿರ್ತಾನೆ. (ಅ. ಕಾ. 22:20) ಮೂರು ದಿನಗಳಾದ್ಮೇಲೆ ಯೇಸುವಿನ ಶಿಷ್ಯ ಅನನೀಯ ಸೌಲನಿಗೆ ಮತ್ತೆ ಕಣ್ಣು ಕಾಣೋ ತರ ಮಾಡ್ದ. ಆಮೇಲೆ ಅವನು ಸೌಲನಿಗೆ ‘ನೀನು ಯಾವುದಕ್ಕಾಗಿ ಕಾಯ್ತಾ ಇದ್ದೀಯ? ದೀಕ್ಷಾಸ್ನಾನ ತಗೋ’ ಅಂತ ಹೇಳ್ದ. (ಅಪೊಸ್ತಲರ ಕಾರ್ಯ 22:12-16 ಓದಿ.) ಅದಕ್ಕೆ ಸೌಲ ದೀನತೆಯಿಂದ ಅನನೀಯ ಹೇಳಿದ ಹಾಗೆ ದೀಕ್ಷಾಸ್ನಾನ ಪಡ್ಕೊಂಡ.—ಅ. ಕಾ. 9:17, 18.
ದೀಕ್ಷಾಸ್ನಾನ ತಗೊಳ್ಳೋಕೆ ಸೌಲನಿಗೆ ಪ್ರೋತ್ಸಾಹ ಸಿಕ್ಕಿದ ತರ ನಿಮಗೂ ಸಿಕ್ಕಿದ್ರೆ ನೀವೇನು ಮಾಡ್ತೀರಾ? (ಪ್ಯಾರ 8 ನೋಡಿ)
9. ಸೌಲನಿಂದ ನಾವ್ಯಾವ ಪಾಠಗಳನ್ನ ಕಲಿಬಹುದು?
9 ಸೌಲನಿಂದ ನಾವು ತುಂಬ ಪಾಠಗಳನ್ನ ಕಲಿಬಹುದು. ಅವನು ತನ್ನಲ್ಲಿದ್ದ ಅಹಂಕಾರ ಅಥವಾ ಮನುಷ್ಯರ ಭಯ ದೀಕ್ಷಾಸ್ನಾನ ತಗೊಳ್ಳೋದನ್ನ ತಡೆಯೋ ತರ ಬಿಡಲಿಲ್ಲ. ಕ್ರಿಸ್ತನ ಬಗ್ಗೆ ಸತ್ಯ ಕಲಿತಾಗ ದೀನತೆಯಿಂದ ತನ್ನನ್ನ ಬದಲಾಯಿಸ್ಕೊಂಡ. (ಅ. ಕಾ. 26:14, 19) ಅವನಿಗೆ ಜನ ಚಿತ್ರ ಹಿಂಸೆ ಕೊಡ್ತಾರೆ ಅಂತ ಗೊತ್ತಿದ್ರೂ ಕ್ರೈಸ್ತನಾದ. (ಅ. ಕಾ. 9:15, 16; 20:22, 23) ದೀಕ್ಷಾಸ್ನಾನ ಆದ್ಮೇಲೆ ಬಂದ ಎಲ್ಲ ಕಷ್ಟಗಳನ್ನ ನಿಭಾಯಿಸೋಕೆ ಯೆಹೋವನ ಮೇಲೆ ಆತ್ಕೊಂಡ. (2 ಕೊರಿಂ. 4:7-10) ನೀವು ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ತಗೊಂಡ್ರೆ ನಿಮಗೂ ಕಷ್ಟ ಬರುತ್ತೆ, ನಂಬಿಕೆಯ ಪರೀಕ್ಷೆಗಳೂ ಬರುತ್ತೆ! ಆದ್ರೆ ನೆನಪಿಡಿ, ನೀವು ಒಬ್ಬಂಟಿಯಾಗಿರಲ್ಲ! ಯೆಹೋವ ನಿಮ್ಗೆ ಸಹಾಯ ಮಾಡ್ತಾನೆ. ಯೆಹೋವ ಮತ್ತು ಯೇಸು ನಿಮಗೆ ಬೇಕಾದ ಶಕ್ತಿನ ಕೊಟ್ಟೇ ಕೊಡ್ತಾರೆ.—ಫಿಲಿ. 4:13.
10. ಆ್ಯನಾ ಉದಾಹರಣೆಯಿಂದ ನೀವೇನು ಕಲಿತ್ರಿ?
10 ಆ್ಯನಾ ಯುರೋಪಲ್ಲಿ ಬೆಳೆದ್ಳು. ಇವ್ರ ಕುಟುಂಬ ಮತ್ತು ಸಂಬಂಧಿಕರೆಲ್ಲ ಒಟ್ಟಿಗೆ ಒಂದೇ ಮನೇಲಿ ಜೀವನ ಮಾಡ್ತಿದ್ರು. ಆ್ಯನಾ ಅವ್ರ ಅಮ್ಮ ಮಾತ್ರ ದೀಕ್ಷಾಸ್ನಾನ ತಗೊಂಡಿದ್ರು, ಅಪ್ಪ ಸತ್ಯದಲ್ಲಿ ಇರಲಿಲ್ಲ. ಆ್ಯನಾಗೆ 9 ವರ್ಷ ಆದಾಗ ಅಪ್ಪನ ಪರ್ಮಿಷನ್ ತಗೊಂಡು ಬೈಬಲ್ ಕಲಿಯೋಕೆ ಶುರು ಮಾಡಿದ್ಳು. ಆದ್ರೆ ಅವ್ರ ಜೊತೆನೇ ಒಂದೇ ಮನೆಲಿದ್ದ ಸಂಬಂಧಿಕರಿಗೆ ಇದನ್ನ ನೋಡಿ ಕೋಪ ಬಂತು. ಅವಳಿಗೆ ತುಂಬ ತೊಂದ್ರೆ ಕೊಡೋಕೆ ಶುರು ಮಾಡಿದ್ರು. ಅಪ್ಪನ ಧರ್ಮ ಬಿಟ್ಟು ಬೇರೆ ಯಾವುದೋ ಧರ್ಮಕ್ಕೆ ಹೋಗೋದು ದೊಡ್ಡ ಅವಮಾನ ಅಂತ ಸಂಬಂಧಿಕರು ನಂಬಿದ್ರು. ಆ್ಯನಾಗೆ 12 ವರ್ಷ ಆದಾಗ ದೀಕ್ಷಾಸ್ನಾನ ತಗೊಳೋಕೆ ಅಪ್ಪನ ಹತ್ರ ಪರ್ಮಿಷನ್ ಕೇಳಿದ್ಳು. ಆಗ ಅವರು ‘ಇದು ನೀನೇ ತಗೊಂಡಿರೋ ನಿರ್ಧಾರನಾ ಅಥವಾ ಯಾರಾದ್ರೂ ನಿನಗೆ ಒತ್ತಾಯ ಮಾಡ್ತಿದ್ದಾರಾ?’ ಅಂತ ಕೇಳಿದ್ರು. ಅದಕ್ಕೆ ಅವಳು, “ಯಾರೂ ಒತ್ತಾಯ ಮಾಡ್ತಿಲ್ಲ, ನನಗೇ ಯೆಹೋವ ಅಂದ್ರೆ ತುಂಬಾ ಇಷ್ಟ” ಅಂತ ಹೇಳಿದ್ಳು. ಅದಕ್ಕೆ ಅವ್ರ ಅಪ್ಪ ದೀಕ್ಷಾಸ್ನಾನ ತಗೊಳ್ಳೋಕೆ ಪರ್ಮಿಷನ್ ಕೊಟ್ರು. ದೀಕ್ಷಾಸ್ನಾನ ಆದ್ಮೇಲೂ ಆ್ಯನಾಗೆ ಸಂಬಂಧಿಕರು ತುಂಬಾ ಅವಮಾನ ಮಾಡಿ ಕಷ್ಟ ಕೊಟ್ರು. ಒಂದ್ಸಲ ಅವಳ ತಾತ, “ನೀನು ಅನೈತಿಕತೆ ಮಾಡಿದ್ರೂ, ಸಿಗರೇಟ್ ಸೇದಿದ್ರೂ ಪರ್ವಾಗಿರಲಿಲ್ಲ. ಆದ್ರೆ ಹೋಗಿ ಹೋಗಿ ಯೆಹೋವನ ಸಾಕ್ಷಿ ಆಗಿದ್ಯಲ್ಲ” ಅಂತ ಬೈದ್ರು. ಇದನ್ನೆಲ್ಲಾ ಆ್ಯನಾ ಹೇಗೆ ನಿಭಾಯಿಸಿದ್ಳು? “ನಾನು ಧೈರ್ಯ ತೋರಿಸೋಕೆ ಯೆಹೋವ ಸಹಾಯ ಮಾಡಿದನು. ಅಮ್ಮಅಪ್ಪನೂ ತುಂಬಾ ಪ್ರೋತ್ಸಾಹ ಕೊಟ್ರು” ಅಂತ ಆ್ಯನಾ ಹೇಳ್ತಾಳೆ. ಯೆಹೋವ ಹೇಗೆಲ್ಲಾ ಸಹಾಯ ಮಾಡಿದ ಅಂತ ಆ್ಯನಾ ಬರೆದಿಡ್ತಿದ್ಳು. ಆಗಾಗ ಅದನ್ನ ತೆಗೆದು ನೋಡ್ತಾ ಯೆಹೋವನ ಸಹಾಯನ ನೆನಸ್ಕೊಳ್ತಾ ಇದ್ದಿದ್ದು ಅವಳಿಗೆ ಸಹಾಯ ಮಾಡ್ತು. ನಿಮಗೂ ಹಿಂಸೆ ಒತ್ತಡ ಬರುತ್ತೆ ಅಂತ ಭಯಪಡ್ತಿದ್ದೀರಾ? ನೆನಪಿಡಿ, ಯೆಹೋವ ನಿಮಗೆ ಬೇಕಾಗಿರೋ ಸಹಾಯನ ಮಾಡೇ ಮಾಡ್ತಾನೆ.—ಇಬ್ರಿ. 13:6.
ಕೊರ್ನೇಲ್ಯ ದೀಕ್ಷಾಸ್ನಾನ ತಗೊಂಡ!
11. ಕೊರ್ನೇಲ್ಯ ದೀಕ್ಷಾಸ್ನಾನ ತಗೊಳ್ಳೋಕೆ ಯಾವ ಅಡ್ಡಿತಡೆ ಇತ್ತು?
11 ಈಗ ಕೊರ್ನೇಲ್ಯನ ಉದಾಹರಣೆ ನೋಡೋಣ. ಇವನೊಬ್ಬ “ಸೇನಾಧಿಕಾರಿ ಆಗಿದ್ದ.” ಇವನ ಕೈಕೆಳಗೆ ನೂರು ರೋಮನ್ ಸೈನಿಕರಿದ್ರು. (ಅ. ಕಾ. 10:1, ಪಾದಟಿಪ್ಪಣಿ.) ಇವನಿಗೆ ಸಮಾಜದಲ್ಲಿ ಒಳ್ಳೆ ಸ್ಥಾನಮಾನ ಇತ್ತು. ಸೈನ್ಯದಲ್ಲಿ ಒಳ್ಳೆ ಹೆಸರಿತ್ತು. ಇವನು “ಬಡವ್ರಿಗೆ ತುಂಬಾ ಸಹಾಯ ಮಾಡ್ತಾ ಇದ್ದ.” (ಅ. ಕಾ. 10:2) ‘ಹೋಗಿ ಇವನಿಗೆ ಸಿಹಿಸುದ್ದಿ ಸಾರು’ ಅಂತ ಯೆಹೋವ ಅಪೊಸ್ತಲ ಪೇತ್ರನಿಗೆ ಹೇಳಿದನು. ಆದ್ರೆ ಅವನಿಗೆ ದೊಡ್ಡ ಸ್ಥಾನಮಾನ ಇದಿದ್ರಿಂದ ಕೊರ್ನೇಲ್ಯ ದೀಕ್ಷಾಸ್ನಾನ ತಗೊಳ್ಳೋಕೆ ತಡಮಾಡಿದ್ನಾ?
12. ಕೊರ್ನೇಲ್ಯ ದೀಕ್ಷಾಸ್ನಾನ ತಗೊಳ್ಳೋಕೆ ಯಾವುದು ಸಹಾಯ ಮಾಡ್ತು?
12 ಕೊರ್ನೇಲ್ಯ ದೀಕ್ಷಾಸ್ನಾನ ತಗೊಳ್ಳೋಕೆ ಯಾವುದು ಸಹಾಯ ಮಾಡ್ತು? ಕೊರ್ನೇಲ್ಯನಿಗೂ “ಅವನ ಕುಟುಂಬದವ್ರಿಗೂ ದೇವ್ರ ಮೇಲೆ ತುಂಬ ಭಯಭಕ್ತಿ ಇತ್ತು. ಅವನು . . . ತಪ್ಪದೆ ದೇವ್ರಿಗೆ ಪ್ರಾರ್ಥನೆ ಮಾಡ್ತಾ ಇದ್ದ” ಅಂತ ಬೈಬಲ್ ಹೇಳುತ್ತೆ. (ಅ. ಕಾ. 10:2) ಪೇತ್ರ ಬಂದು ಸಿಹಿಸುದ್ದಿ ಸಾರಿದಾಗ ಕೊರ್ನೇಲ್ಯ ಮತ್ತವನ ಕುಟುಂಬ ಕ್ರಿಸ್ತನನ್ನ ಒಪ್ಕೊಂಡು ತಕ್ಷಣ ದೀಕ್ಷಾಸ್ನಾನ ತಗೊಂಡ್ರು. (ಅ. ಕಾ. 10:47, 48) ಇದ್ರಿಂದ ಕೊರ್ನೇಲ್ಯನ ಬಗ್ಗೆ ಏನು ಗೊತ್ತಾಗುತ್ತೆ? ಕೊರ್ನೇಲ್ಯ ತನ್ನ ಕುಟುಂಬದ ಜೊತೆ ಸೇರಿ ಯೆಹೋವನನ್ನ ಆರಾಧನೆ ಮಾಡೋಕ್ಕೋಸ್ಕರ ಏನು ಮಾಡೋಕೂ ರೆಡಿ ಇದ್ದ.—ಯೆಹೋ. 24:15; ಅ. ಕಾ. 10:24, 33.
13. ಕೊರ್ನೇಲ್ಯನಿಂದ ನಾವ್ಯಾವ ಪಾಠ ಕಲಿಬಹುದು?
13 ಸೌಲನ ತರ ಕೊರ್ನೇಲ್ಯನಿಗೂ ಸಮಾಜದಲ್ಲಿ ದೊಡ್ಡ ಸ್ಥಾನಮಾನ ಇತ್ತು. ಅದು ಅವನು ದೀಕ್ಷಾಸ್ನಾನ ತಗೊಳ್ಳೋಕೆ ಅಡ್ಡಿ ಆಗಬಹುದಿತ್ತು. ಆದ್ರೆ ಹಾಗಾಗೋಕೆ ಅವನು ಬಿಡಲಿಲ್ಲ. ನೀವು ದೀಕ್ಷಾಸ್ನಾನ ತಗೊಳ್ಳೋಕೆ ಯಾವುದಾದ್ರೂ ದೊಡ್ಡ ಬದಲಾವಣೆ ಮಾಡಬೇಕಾಗಿದ್ಯಾ? ಹಾಗಿದ್ರೆ ಯೆಹೋವ ನಿಮಗೆ ಸಹಾಯ ಮಾಡ್ತಾನೆ ಅಂತ ಮರೀಬೇಡಿ. ಆತನ ಆರಾಧನೆ ಮಾಡೋಕೆ ಮತ್ತು ಬೈಬಲ್ ಹೇಳೋ ತರ ಜೀವನ ಮಾಡೋಕೆ ನಿಮಗಿರೋ ಮನಸ್ಸನ್ನ ಆತನು ಗ್ಯಾರಂಟಿ ಆಶೀರ್ವದಿಸ್ತಾನೆ.
14. ಸುಯೋಶಿ ಅನುಭವದಿಂದ ನೀವೇನು ಕಲಿತ್ರಿ?
14 ಜಪಾನಲ್ಲಿರೋ ಸುಯೋಶಿ ದೀಕ್ಷಾಸ್ನಾನ ತಗೋಳ್ಳೋಕೆ ತನ್ನ ಕೆಲಸದಲ್ಲಿ ಸ್ವಲ್ಪ ಬದಲಾವಣೆ ಮಾಡ್ಕೊಂಡ. ಫ್ಲವರ್ ಡೆಕೋರೇಷನ್ ಮಾಡೋಕೆ ಕಲಿಸೋ ತುಂಬಾ ಫೇಮಸ್ ಆದ ಇಕನೋಬೊ ಅನ್ನೋ ಶಾಲೆಲಿ ಹೆಡ್‌ಮಾಸ್ಟರ್ ಕೆಳಗಡೆ ಇವನು ಕೆಲಸ ಮಾಡ್ತಿದ್ದ. ಇವ್ರ ಹೆಡ್‌ಮಾಸ್ಟರ್ ಸಾಮಾನ್ಯವಾಗಿ ಶವಸಂಸ್ಕಾರಕ್ಕೆ ಹೋಗಿ ಹೂಗಳನ್ನು ಜೋಡಿಸಿ, ಬೌದ್ಧ ಸಂಪ್ರದಾಯದಲ್ಲಿ ಪಾಲ್ಗೊಳ್ತಿದ್ರು. ಆದ್ರೆ ಯಾವಾಗೆಲ್ಲ ಹೆಡ್‌ಮಾಸ್ಟರ್‌ಗೆ ಹೋಗೋಕೆ ಆಗ್ತಿರಲಿಲ್ವೋ ಆಗೆಲ್ಲ ಸುಯೋಶಿ ಅದನ್ನ ಮಾಡ್ತಿದ್ರು. ಆದ್ರೆ ಸತ್ತವರ ಬಗ್ಗೆ ಬೈಬಲಿಂದ ಸತ್ಯ ಕಲಿತಾಗ ‘ನಾನು ಇದನ್ನೆಲ್ಲ ಬಿಡ್ಲಿಲ್ಲ ಅಂದ್ರೆ ದೀಕ್ಷಾಸ್ನಾನ ತಗೊಳ್ಳೋಕೆ ಆಗಲ್ಲ ಅಂತ ಅರ್ಥ ಮಾಡ್ಕೊಂಡ.’ ಹಾಗಾಗಿ ಅವನು ಆ ಬೌದ್ಧ ಸಂಪ್ರದಾಯದಲ್ಲಿ ಪಾಲ್ಗೊಳ್ಳಬಾರದು ಅಂತ ನಿರ್ಧಾರ ಮಾಡಿದ. (2 ಕೊರಿಂ. 6:15, 16) ಇದ್ರ ಬಗ್ಗೆ ಹೆಡ್‌ಮಾಸ್ಟರ್ ಹತ್ರ ಮಾತಾಡಿದ. ಮುಂದೆ ಏನಾಯ್ತು? ‘ಆ ಸಂಪ್ರದಾಯದಲ್ಲಿ ಪಾಲ್ಗೊಳ್ಳದಿದ್ರೂ ಪರ್ವಾಗಿಲ್ಲ, ನೀನು ಈ ಕೆಲಸನ ಮಾಡ್ಕೊಂಡು ಹೋಗಬಹುದು’ ಅಂತ ಅವ್ರ ಹೆಡ್‌ಮಾಸ್ಟರ್ ಹೇಳಿದ್ರು. ಹೀಗೆ ಬೈಬಲ್ ಸ್ಟಡಿ ಶುರು ಮಾಡಿ ಒಂದು ವರ್ಷದಲ್ಲಿ ಸುಯೋಶಿ ದೀಕ್ಷಾಸ್ನಾನ ತಗೊಂಡ.a ಯೆಹೋವ ದೇವ್ರನ್ನ ಮೆಚ್ಚಿಸೋಕೆ ನೀವೂ ನಿಮ್ಮ ಕೆಲಸದಲ್ಲಿ ಹೊಂದಾಣಿಕೆ ಮಾಡಬೇಕಾಗಿ ಬಂದ್ರೆ ಅದನ್ನ ಧೈರ್ಯದಿಂದ ಮಾಡಿ. ಯೆಹೋವ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಏನು ಬೇಕಿದ್ಯೋ ಅದನ್ನ ಖಂಡಿತ ಕೊಡ್ತಾನೆ ಅನ್ನೋ ಭರವಸೆ ನಿಮಗಿರಲಿ.—ಕೀರ್ತ. 127:2; ಮತ್ತಾ. 6:33.
ಕೊರಿಂಥದವರು ದೀಕ್ಷಾಸ್ನಾನ ತಗೊಂಡ್ರು!
15. ಕೊರಿಂಥದವ್ರಿಗೆ ದೀಕ್ಷಾಸ್ನಾನ ತಗೊಳ್ಳೋಕೆ ಯಾಕೆ ಕಷ್ಟ ಆಯ್ತು?
15 ಕೊರಿಂಥದಲ್ಲಿದ್ದ ಜನ ಯೆಹೋವನಿಗೆ ಇಷ್ಟ ಆಗದ ಜೀವನ ನಡೆಸ್ತಿದ್ರು. ಅವ್ರಲ್ಲಿ ತುಂಬ ಜನ ಹಣದಾಸೆಗೆ, ಅನೈತಿಕತೆಗೆ ಬಲಿ ಬಿದ್ದಿದ್ರು. ಇಂಥ ಪರಿಸ್ಥಿತಿಲಿದ್ದ ಜನ ಸತ್ಯನ ಒಪ್ಕೊಳ್ಳೋದು ತುಂಬಾನೇ ಕಷ್ಟ ಆಗಿತ್ತು. ಪೌಲ ಈ ಪಟ್ಟಣಕ್ಕೆ ಬಂದು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಸಾರಿದಾಗ ತುಂಬ ಜನ “ಸಿಹಿಸುದ್ದಿ ಕೇಳಿಸ್ಕೊಂಡು ನಂಬಿ ದೀಕ್ಷಾಸ್ನಾನ ತಗೊಂಡ್ರು.” ಅದಾದ್ಮೇಲೆ ಒಂದ್ಸಲ ಯೇಸು ಪೌಲನಿಗೆ ಕಾಣಿಸಿಕೊಂಡು “ನನ್ನ ಮೇಲೆ ನಂಬಿಕೆ ಇಡುವವರು ಈ ಪಟ್ಟಣದಲ್ಲಿ ಇನ್ನೂ ತುಂಬ ಜನ ಇದ್ದಾರೆ” ಅಂದನು. (ಅ. ಕಾ. 18:7-11) ಅದಕ್ಕೆ ಪೌಲ ಅಲ್ಲಿ ಇನ್ನೂ ಒಂದೂವರೆ ವರ್ಷ ಕಾಲ ಸಿಹಿಸುದ್ದಿ ಸಾರುತ್ತಾ ಹೋದ.
16. ದೀಕ್ಷಾಸ್ನಾನ ತಗೊಳ್ಳೋಕೆ ಅಡ್ಡಿಯಾಗಿದ್ದ ವಿಷ್ಯಗಳನ್ನ ಬಿಟ್ಟು ಬಿಡೋಕೆ ಕೊರಿಂಥದವ್ರಿಗೆ ಯಾವುದು ಸಹಾಯ ಮಾಡ್ತು? (1 ಕೊರಿಂ. 6:9-11)
16 ಕೊರಿಂಥದವರು ದೀಕ್ಷಾಸ್ನಾನ ತಗೊಳೋಕೆ ಯಾವುದು ಸಹಾಯ ಮಾಡ್ತು? (2 ಕೊರಿಂ. 10:4, 5 ಓದಿ) ತಮ್ಮ ಜೀವನದಲ್ಲಿ ದೊಡ್ಡದೊಡ್ಡ ಬದಲಾವಣೆ ಮಾಡ್ಕೊಳೋಕೆ ದೇವರ ವಾಕ್ಯ ಮತ್ತು ಪವಿತ್ರಶಕ್ತಿ ಕೊರಿಂಥದವರಿಗೆ ಸಹಾಯ ಮಾಡ್ತು. (ಇಬ್ರಿ. 4:12) ಕೊರಿಂಥದವ್ರಲ್ಲಿ ಕುಡಿಕತನ, ಕಳ್ಳತನ, ಸಲಿಂಗಕಾಮ ಬೇರೂರಿತ್ತು. ಹಾಗಿದ್ರೂ ಸಿಹಿಸುದ್ದಿ ಕೇಳಿಸಿಕೊಂಡಾಗ ಅದನ್ನೆಲ್ಲ ಬಿಟ್ಟು ಅವರು ಬದಲಾದರು.—1 ಕೊರಿಂ. 6:9-11.b
17. ಕೊರಿಂಥದವ್ರಿಂದ ನೀವೇನು ಕಲಿತ್ರಿ?
17 ಕೊರಿಂಥದವರು ದೀಕ್ಷಾಸ್ನಾನ ತಗೊಳ್ಳೋಕೆ ತಮ್ಮಲ್ಲಿ ಬೇರೂರಿದ್ದ ಅಭ್ಯಾಸಗಳನ್ನ ಬಿಡಬೇಕಾಯ್ತು. ‘ಇದನೆಲ್ಲ ಬಿಡೋದು ತುಂಬ ಕಷ್ಟ!’ ಅಂತ ಹೇಳಿ ಅವರು ಸುಮ್ನೆ ಇದ್ಬಿಟ್ರಾ? ಇಲ್ಲ. ಅವರು ಜೀವಕ್ಕೆ ನಡೆಸೋ ಇಕ್ಕಟ್ಟಾದ ಬಾಗಿಲಿಂದ ಹೋಗೋಕೆ ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿದ್ರು. (ಮತ್ತಾ. 7:13, 14) ನೀವು ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಯಾವುದಾದ್ರೂ ಕೆಟ್ಟ ಅಭ್ಯಾಸ ಬಿಡಬೇಕಿದ್ಯಾ? ದೊಡ್ಡ ಬದಲಾವಣೆ ಮಾಡೋಕೆ ಇದ್ಯಾ? ಹಾಗಿದ್ರೆ ನಿಮ್ಮ ಹೋರಾಟನ ನಿಲ್ಲಿಸಬೇಡಿ. ಆ ಕೆಟ್ಟ ಅಭ್ಯಾಸದ ವಿರುದ್ಧ ಹೋರಾಡೋಕೆ ಯೆಹೋವನ ಹತ್ರ ಪವಿತ್ರಶಕ್ತಿ ಕೊಡಪ್ಪಾ ಅಂತ ಅಂಗಲಾಚಿ ಬೇಡ್ಕೊಳ್ಳಿ.
18. ಮೋನಿಕಾ ಉದಾಹರಣೆಯಿಂದ ನೀವೇನು ಕಲಿತ್ರಿ?
18 ಜಾರ್ಜಿಯಾ ದೇಶದಲ್ಲಿರೋ ಮೋನಿಕಾ ಅನ್ನೋ ಸಹೋದರಿ ದೀಕ್ಷಾಸ್ನಾನ ತಗೊಳ್ಳೋಕೆ ಕೆಲವು ಬದಲಾವಣೆ ಮಾಡ್ಕೊಂಡ್ರು. ಅವರು ಕೆಟ್ಟ ಮಾತು ಆಡೋದನ್ನ ನಿಲ್ಲಿಸಿದ್ರು, ತಪ್ಪಾದ ಮನರಂಜನೆ ನೋಡೋದನ್ನ ಬಿಟ್ಟುಬಿಟ್ರು. ಈ ಬದಲಾವಣೆ ಮಾಡ್ಕೊಳೋಕೆ ಅವ್ರಿಗೆ ಯಾವುದು ಸಹಾಯ ಮಾಡ್ತು? ಅವರು ಹೇಳೋದು, “ನಾನು ಚಿಕ್ಕ ವಯಸ್ಸಿಂದಾನೂ ಪ್ರಾರ್ಥನೆ ಮಾಡ್ತಿದ್ದೆ. ಅದೇ ನಂಗೆ ಬೇಕಾದ ಬಲ ಕೊಡ್ತಿತ್ತು. ನಂಗೆ ಸರಿಯಾಗಿರೋದನ್ನೇ ಮಾಡಬೇಕು ಅನ್ನೋ ಆಸೆ ಇದೆ ಅಂತ ಯೆಹೋವನಿಗೆ ಗೊತ್ತಿತ್ತು. ಅದಕ್ಕೆ ಆತನೇ ನನಗೆ ಸಹಾಯ ಮಾಡಿ, ನನ್ನನ್ನ ಸರಿ ದಾರೀಲಿ ನಡೆಸಿದನು.” ಮೋನಿಕಾ 16ನೇ ವಯಸ್ಸಲ್ಲಿ ದೀಕ್ಷಾಸ್ನಾನ ತಗೊಂಡಳು. ಯೆಹೋವ ದೇವರು ನಿಮ್ಮನ್ನ ಮೆಚ್ಕೊಳೋಕೆ ನೀವು ಯಾವುದಾದ್ರೂ ಕೆಟ್ಟ ಅಭ್ಯಾಸನ ಬಿಡಬೇಕಿದ್ಯಾ? ಹಾಗಾದ್ರೆ ‘ಬದಲಾವಣೆ ಮಾಡಿಕೊಳ್ಳೋಕೆ ಬೇಕಾಗಿರೋ ಶಕ್ತಿ ಕೊಡಪ್ಪಾ’ ಅಂತ ಯೆಹೋವನ ಹತ್ರ ಪ್ರಾರ್ಥನೆ ಮಾಡಿ. ಯೆಹೋವ ನಿಮಗೆ ಧಾರಾಳವಾಗಿ ತನ್ನ ಪವಿತ್ರಶಕ್ತಿ ಕೊಡ್ತಾನೆ.—ಯೋಹಾ. 3:34.
ಬೆಟ್ಟವನ್ನೂ ಕದಲಿಸುತ್ತೆ ನಿಮ್ಮ ನಂಬಿಕೆ!
19. ಬೆಟ್ಟದಂಥ ಅಡ್ಡಿತಡೆಗಳನ್ನ ನಿಭಾಯಿಸೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? (ಚಿತ್ರ ನೋಡಿ.)
19 ಯೆಹೋವ ನಿಮ್ಮನ್ನ ತುಂಬ ಪ್ರೀತಿಸ್ತಾನೆ. ನೀವು ಆತನ ಕುಟುಂಬದಲ್ಲಿ ಒಬ್ಬರಾಗಬೇಕು ಅಂತ ಇಷ್ಟಪಡ್ತಾನೆ ಅನ್ನೋದನ್ನ ಯಾವಾಗ್ಲೂ ನೆನಪಿಡಿ. ಯೇಸು ಒಂದನೇ ಶತಮಾನದಲ್ಲಿ ಶಿಷ್ಯರಿಗೆ, “ಸಾಸಿವೆ ಕಾಳಷ್ಟು ನಂಬಿಕೆ ಇದ್ರೂ ಸಾಕು, ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿ ಹೋಗು’ ಅಂತ ಹೇಳಿದ್ರೆ ಅದು ಹೋಗುತ್ತೆ. ನಿಮಗೆ ಏನು ಬೇಕಾದ್ರೂ ಮಾಡೋಕಾಗುತ್ತೆ” ಅಂತ ಹೇಳಿದನು. (ಮತ್ತಾ. 17:20) ಯೇಸು ಈ ಮಾತು ಹೇಳಿದಾಗ ಶಿಷ್ಯರು ಹೊಸದಾಗಿ ಸತ್ಯಕ್ಕೆ ಬಂದಿದ್ರು. ಅವರ ನಂಬಿಕೆ ಇನ್ನೂ ಆಗಷ್ಟೇ ಚಿಗುರುತಾ ಇತ್ತಷ್ಟೇ! ಆದ್ರೆ ಅವರು ನಂಬಿಕೆನ ಬೆಳೆಸ್ಕೊಳ್ಳೋದಾದ್ರೆ ಯೆಹೋವ ಅವ್ರಿಗೆ ಬೆಟ್ಟದಂಥ ಸಮಸ್ಯೆಗಳನ್ನ ಕೂಡ ಕದಲಿಸೋಕೆ ಬೇಕಾಗಿರೋ ಸಹಾಯ ಕೊಡ್ತಾನೆ ಅಂತ ಭರವಸೆ ಕೊಟ್ಟನು. ಯೆಹೋವ ನಿಮಗೂ ಆ ತರ ಸಹಾಯ ಮಾಡೇ ಮಾಡ್ತಾನೆ.
ಯೆಹೋವ ನಿಮ್ಮನ್ನ ತುಂಬ ಪ್ರೀತಿಸ್ತಾನೆ, ನೀವು ಆತನ ಕುಟುಂಬದಲ್ಲಿ ಒಬ್ಬರಾಗಬೇಕು ಅಂತ ಇಷ್ಟಪಡ್ತಾನೆ ಅಂತ ಯಾವಾಗ್ಲೂ ನೆನಪಿಡಿ (ಪುಟ 19 ನೋಡಿ)c
20. ಈ ಲೇಖನದಲ್ಲಿರೋ ಒಂದನೇ ಶತಮಾನ ಮತ್ತು ನಮ್ಮ ಕಾಲದ ಕ್ರೈಸ್ತರ ಅನುಭವಗಳಿಂದ ನಿಮಗೆ ಯಾವ ಪ್ರೋತ್ಸಾಹ ಸಿಕ್ತು?
20 ದೀಕ್ಷಾಸ್ನಾನ ತಗೊಳ್ಳೋಕೆ ನಿಮಗೂ ಯಾವುದಾದ್ರೂ ವಿಷ್ಯ ಅಡ್ಡಿಯಾಗ್ತಿದೆ ಅಂತ ಅನಿಸ್ತಿದ್ರೆ ಬದಲಾವಣೆ ಮಾಡ್ಕೊಳೋಕೆ ಹೆಜ್ಜೆ ತಗೊಳ್ಳಿ. ಒಂದನೇ ಶತಮಾನದಲ್ಲಿದ್ದ ಮತ್ತು ನಮ್ಮ ಸಮಯದಲ್ಲಿರೋ ಕ್ರೈಸ್ತರ ಅನುಭವಗಳಿಂದ ಬೇಕಾಗಿರೋ ಬಲ ಮತ್ತು ಪ್ರೋತ್ಸಾಹ ಪಡ್ಕೊಳ್ಳಿ. ಇವ್ರೆಲ್ರ ಅನುಭವಗಳು ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡ್ಕೊಳ್ಳೋಕೆ ನಿಮ್ಮನ್ನು ಪ್ರೋತ್ಸಾಹಿಸಲಿ, ಪ್ರೇರೇಪಿಸಲಿ ಅಂತ ನಾವು ಬಯಸ್ತೀವಿ. ನೆನಪಿಡಿ, ನಿಮ್ಮ ಜೀವನದಲ್ಲಿ ನೀವು ತಗೊಳೋಕೆ ಸಾಧ್ಯ ಇರೋ ಅತ್ಯುತ್ತಮ ನಿರ್ಧಾರ ಅಂದ್ರೆ ದೀಕ್ಷಾಸ್ನಾನನೇ!
ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!
a ಎಚ್ಚರ! (ಇಂಗ್ಲಿಷ್) ಆಗಸ್ಟ್ 8, 2005 ಪುಟ 20-23ರಲ್ಲಿ ಸಹೋದರ ಸುಯೋಶಿ ಪೂಜಿಯವರ ಜೀವನ ಕಥೆ ಇದೆ.
b jw.org ವೆಬ್‌ಸೈಟಲ್ಲಿರೋ ‘ದೀಕ್ಷಾಸ್ನಾನಕ್ಕೆ ತಡೆಯೇಕೆ?’ ಅನ್ನೋ ವಿಡಿಯೋ ನೋಡಿ.
c ಚಿತ್ರ ವಿವರಣೆ : ಈಗಷ್ಟೇ ದೀಕ್ಷಾಸ್ನಾನ ತಗೊಂಡಿರೋರನ್ನ ಸಹೋದರ ಸಹೋದರಿಯರು ಖುಷಿಖುಷಿಯಾಗಿ ಸ್ವಾಗತಿಸ್ತಿದ್ದಾರೆ.